ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ್ ಸೊರಟೂರು ಕಥಾ ಅಂಕಣ-ಬ್ರಷ್‍ಗೆ ಅಂಟಿಕೊಳ್ಳದ ಬಣ್ಣ..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

38

ದೇಹವು ಕೊಳಕು ಕೊಳಕಾದ, ಯಾವುದೊ ಜನ್ಮದಲಿ ಸ್ನಾನ ಮಾಡಿದಂತಿರುವ, ತೊಟ್ಟ ತುಣುಕು ಬಟ್ಟೆಗಳು ಅಲ್ಲಲ್ಲಿ ಹರಿದು ಹೋಗಿರುವ, ಚಲನೆಯಿಂದ ಮಾತ್ರ ಮನುಷ್ಯನೆಂದು ಗುರುತಿಸಬಹುದಾದ ಅವನನ್ನು ಎಳೆದು ತಂದು ಆ ಕಲಾವಿದನ ಮುಂದೆ ನಿಲ್ಲಿಸಿದರು. ಇದು ಆ ಕಲಾವಿದನನ್ನು ಪರೀಕ್ಷಿಸಲೆಂದೆ ಹೂಡಿದ ಹುನ್ನಾರವೆಂದು ಯಾರಾದರೂ ಹೇಳಬಹುದಿತ್ತು. ಇದೆಲ್ಲಾ ಆ ಕಲಾವಿದನಿಗೂ ಗೊತ್ತಾಗಿತ್ತು. ಆತ ತನ್ನೊಳಗೆ ತಾನೆ ತಣ್ಣಗೆ ನಕ್ಕ. ಇದೆಲ್ಲಾ ಅದೇ ಬೀದಿಯ ಒಂದ್ಹಿಂಡು ಜನರ ಯೋಜನೆ.

ಈ ಕಲಾವಿದನು ಊರವರು ಹುಚ್ಚನೆಂದು ಕರೆ ತಂದವನ ಮುಂದೆ ತಾನು ಜೋಡಿಸಿಟ್ಟುಕೊಂಡಿದ್ದ ಚಿತ್ರ ಬರೆಯುವ ಹತ್ತಾರು ಬ್ರಷ್‍ಗಳಲ್ಲಿ ಒಂದನ್ನು ಆಯ್ದು ಕೊಡಲು ಹೇಳಿದ. ಆದರೆ ಹುಚ್ಚನೆನಿಸಿಕೊಂಡಿದ್ದ ಆ ವ್ಯಕ್ತಿ ಏನೆಂದೂ ಪ್ರತಿಕ್ರಿಯಿಸದ ಸುಮ್ಮನೆ ತನ್ನ ಪಾಡಿಗೆ ತಾನಿದ್ದ. ಅಲ್ಲಿದ್ದ ಜನ ಮತ್ತು ಕಲಾವಿದನ ಪ್ರಯತ್ನಗಳ ಫಲವಾಗಿ ಅವನು ಕೊನೆಗೂ ಒಂದು ಬ್ರಷ್ ಎತ್ತಿಕೊಟ್ಟ.

ತನ್ನ ಮುಂದೆ ಜೋಡಿಸಿಟ್ಟುಕೊಂಡಿದ್ದ ಕ್ಯಾನ್ವಾಸ್ ಮೇಲೆ ಬಣ್ಣ ಅದ್ದಿಕೊಂಡು ಬ್ರಷ್ ಆಡಿಸಲು ತೊಡಗಿದ ಕಲಾವಿದ. ಅಲ್ಲಿ ನೇರೆದಿದ್ದ ಜನ ಬಹಳ ಕುತೂಹಲದಿಂದ ಮೂಡುವ ಚಿತ್ರಕ್ಕಾಗಿ ಕಾಯತೊಡಗಿದರು. ಅವರ ಜೊತೆ ರಸ್ತೆಯಲ್ಲಿ ಓಡಾಡುತ್ತಿದ್ದವರೂ ನಿಂತು ನೋಡ ತೊಡಗಿದರು. ಈ ಕಲಾವಿದನ ಬಗ್ಗೆ ತಿಳಿದಿದ್ದ ಊರಿನ ಜನರೂ ಸುದ್ದಿ ತಿಳಿದು ಅಲ್ಲಿಗೆ ಬಂದರು. ಇದ್ಯಾವುದರ ಪರಿವೆ ಇಲ್ಲದ ಕಲಾವಿದ ಆ ಹುಚ್ಚನ ಕಣ್ಣುಗಳನ್ನೇ ನೋಡುತ್ತಾ ಕ್ಯಾನ್ವಾಸ್ ಮೇಲೆ ತನ್ನ ಬ್ರಷ್ ಓಡಿಸತೊಡಗಿದ.

ಅವನ ಬ್ರಷ್ ಓಡುತ್ತಾ ಓಡುತ್ತಾ ಚಿತ್ರ ಒಂದು ಎಳೆಯ ಮಗುವಿನ ರೂಪು ಪಡೆಯಲು ಆರಂಭಿಸಿತು. ಜನರಿಗೆ ಆಶ್ಚರ್ಯವೊ ಆಶ್ಚರ್ಯ. ಕಲಾವಿದ ತನ್ನ ರಚನೆ ಮುಂದುವರೆಸಿದ. ಸುಮಾರು ಒಂದು ಗಂಟೆಯ ಬಳಿಕ ಕ್ಯಾನ್ವಾಸ್ ಮೇಲೆ ಮುಗ್ದವಾಗಿ ನಗುತ್ತಿದ್ದ ಮಗುವಿನ ಚಿತ್ರ. ಕಲಾವಿದ ನೋಡುತ್ತಿದ್ದದ್ದು ಹುಚ್ಚನನ್ನು ಮಾತ್ರ. ಆದರೆ ಅವನ ಕಣ್ಣುಗಳನ್ನೇ ನೋಡುತ್ತಾ ಬರೆದ ಚಿತ್ರ ಹುಚ್ಚನದಾಗಿರದೆ ಒಂದು ಮಗುವಿನದ್ದಾಗಿತ್ತು..

ಹುಚ್ಚನೊಳಗೆ ಒಂದು ಎಳೆಯ ಮಗುವಿದೆಯಾ? ಯಾವ ಮಗುವಿಗಾಗಿ ಹೀಗೆ ಅಲೆಯುತ್ತಿದ್ದಾನೆ? ಅವನೇ ಅವನೊಳಗೆ ಮಗುವಾಗಿ ಉಳಿದಿರುವನಾ? ಇವು ಅಲ್ಲಿ ನಿಂತಿದ್ದವರ ಎದೆಯೊಳಗಿನ ಪ್ರಶ್ನೆಗಳು. ಉತ್ತರ ನಿಗೂಢವಾಗಿ ಕ್ಯಾನ್ವಾಸ್ ಮೇಲಿತ್ತು.

ಅಲ್ಲಿರುವ ಎಲ್ಲರಿಗೂ ಬೆರಗು. ಕೆಲವರು ಕಲಾವಿದನ ಈ ವಿಚಿತ್ರ ಮೋಡಿಯನ್ನು ಒಪ್ಪಿಕೊಂಡರು. ಕೆಲವರು ನಂಬುವುದೊ ಬೇಡವೊ ಎಂಬ ದ್ವಂದ್ವದಲ್ಲಿದ್ದರು. ಇನ್ನೂ ಕೆಲವರು ಇದು ಸಾಧ್ಯವೇ ಇಲ್ಲ, ಕಲಾವಿದ ದೊಡ್ಡ ಸುಳ್ಳ, ಅದೆಲ್ಲಾ ಆಗಲು ಹೇಗೆ ಸಾಧ್ಯ? ಎಂದರು.

‘ಒಬ್ಬ ವ್ಯಕ್ತಿಯ ನಮ್ಮೊಳಗೆ ಇರುವ ಇನ್ನೊಬ್ಬ ವ್ಯಕ್ತಿಯನ್ನು ಬರೆಯೋದು ಹೇಗೆ ಸಾಧ್ಯ? ಮನಸನ್ನು ಓದಲು ಸಾಧ್ಯನಾ? ಮನಸಿನೊಳಗೆ ಅಡಗಿ ಕೂತ ಇನ್ನೊಂದು ಜೀವದ ಮುಖ ಹೇಗೆ ಕಂಡೀತು? ಇದನ್ನು ನಂಬಬೇಕಾ?..’ ಇಂತಹವೇ ಮಾತುಗಳು. ಆದರೆ ಆ ಕಲಾವಿದ ಏನ್ನನ್ನು ಮಾತಾಡದೆ, ಯಾವುದಕ್ಕೂ ಉತ್ತರ ಕೊಡದೆ ಮೌನವಾಗಿ ಉಳಿದುಹೋಗುತ್ತಿದ್ದ. ಆತ ಎಂದೂ ಕೂಡ ತನ್ನನ್ನು ತಾನು ಯಾವ ರೀತಿಯಿಂದನೂ ಸಮರ್ಥಿಸಿಕೊಳ್ಳುವುದಕ್ಕೆ, ನಂಬಿಸುವುದಕ್ಕೆ ಹೋಗುತ್ತಿರಲಿಲ್ಲ ತನ್ನ ಪಾಡಿಗೆ ತಾನಿರುತ್ತಿದ್ದ.

ಅಂದು ಹುನ್ನಾರ ಹೂಡಿದವರ ಮಾತು ನಿಂತಿತು. ಜನ ಚದುರಿತು. ನಂತರ ಆ ಹುಚ್ಚನು ತನ್ನ ಪಾಡಿಗೆ ಎಲ್ಲೊ ನಡೆದು ಹೋದ. ಅವನೊಂದಿಗೆ ಅವನೊಳಿಗಿನ ಮಗುವೂ!

ಯಾವುದೊ ಒಂದು ದೊಡ್ಡ ನಗರಕ್ಕೆ ಹೊರಟು ಹೋಗುವ ನುಣುಪಾದ ದೊಡ್ಡ ರಸ್ತೆಯ ಪಕ್ಕದಲ್ಲೊಂದು ಪುಟ್ಟ ಪಾರ್ಕು. ಹತ್ತು ಹಲವು ಗಿಡಗಳು, ಮರಗಳು, ಲಾನ್, ಮಕ್ಕಳಿಗೆ ಆಡಲು ಅವಕಾಶಗಳು, ಕೂರಲು ಕಲ್ಲುಬೆಂಚುಗಳು ಇದಷ್ಟನ್ನೆ ಹೊಂದಿರುವ ಪುಟ್ಟ ಪಾರ್ಕು. ಪಶ್ಚಿಮಕ್ಕೆ ಮುಖ ಮಾಡಿರುವ ಅದರ ಗೇಟಿನ ಬಳಿಯಲ್ಲೇ ಈ ಕಲಾವಿದ ಸದಾ ಕೂತಿರುತ್ತಾನೆ. ಇನ್ನೇನು ಎರಡ್ಮೂರು ತಿಂಗಳು ಕಳೆದರೆ ಐವತ್ತು ತುಂಬುವ ಅವನ ವಯಸ್ಸು, ಅಲ್ಲಲ್ಲಿ ಬಿಳಿಯಾದ ಉದ್ದನೆಯ ಗಡ್ಡ, ಬಣ್ಣ ಮೆತ್ತಿಕೊಂಡ ಬಟ್ಟೆಯೇ ಧರ್ಮ ಎನ್ನುವಂತೆ ತೊಟ್ಟ ಉಡುಗೆ, ತನ್ನ ಮುಂದೆ ಹರಡಿಕೊಂಡಿರುವ ಬಗೆ ಬಗೆಯ ಚಿತ್ರಪಟಗಳು, ಚಿತ್ರ ಬರೆಯಲು ಜೋಡಿಸಿಟ್ಟ ಹತ್ತಾರು ಬಗೆಯ ಬ್ರಷ್‍ಗಳು, ಬದುಕಿನಂತಹ ನೂರೆಂಟು ಬಣ್ಣ.. ಇವಿಷ್ಟು ನೀವು ಪಾರ್ಕಿನ ಬಳಿ ಹಾಯ್ದು ಹೋದರೆ ಕಾಣ ಸಿಗುವ ಚಿತ್ರಣ.‌.

ಇದಷ್ಟೇ ಆಗಿದ್ದರೆ ಹಿಂಡು ಜನ ಹುಚ್ಚನನ್ನು ಕರೆದುಕೊಂಡು ಬಂದು ಅವನನ್ನು ಪರೀಕ್ಷೆಗೆ ಒಡ್ಡುತ್ತಿರಲಿಲ್ಲ. ಕಲಾವಿದ ತುಂಬಾ ವಿಶೇಷ ಎನಿಸಿದ್ದು ಬೇರೆಯದೆ ಕಾರಣಕ್ಕೆ.. ‌

ಅವನಿಂದ ಎಷ್ಟೊ ಜನರ ನೆಮ್ಮದಿ ಹೊರಟು ಹೋಗಿತ್ತು. ಎಷ್ಟೊ ಜನರಿಗೆ ನೆಮ್ಮದಿಯೂ ಸಿಕ್ಕಿತ್ತು. ಮತ್ತೆ ಕೆಲವರಿಗೆ ತಾನೇನು ಎಂಬುದು ಅರ್ಥವೂ ಆಗಿತ್ತು. ಈ ಎಲ್ಲದರ ಮರ್ಮ ಅವನು ಹಿಡಿಯುತ್ತಿದ್ದ ಬ್ರಷ್‍ನಲ್ಲಿತ್ತು.

ಬಂದವರಿಗೆ ಆ ಕಲಾವಿದ ತನ್ನ ಮುಂದಿರುವ ಹತ್ತಾರು ಬ್ರಷ್ ಗಳಲ್ಲಿ ಒಂದನ್ನು ಆಯ್ದು ಕೊಡಲು ಹೇಳುತ್ತಿದ್ದ. ಬರೆಸಿಕೊಳ್ಳಲು ಬಂದವನೇ ಬ್ರಷ್ ಗಳನ್ನು ತಮ್ಮ ಕೈಯಾರೆ ಎತ್ತಿಕೊಡಬೇಕು. ಎತ್ತಿಕೊಟ್ಟ ಆ ಬ್ರಷ್‌ನಿಂದಲೇ ಆ ಕಲಾವಿದ ಚಿತ್ರ ಬರೆಯುತ್ತಿದ್ದ. ಬರೆಯುವಾಗ ಮಾತ್ರ ಅವರು ಅವನ ಎದುರಿಗೆ ಕೂತಿರಬೇಕು. ಕಣ್ಣು ತೆರೆದಿರಬೇಕು. ತೆರೆದ ಕಣ್ಣಲ್ಲಿ ಬರೆಯುವ ಕಲಾವಿದನನ್ನೇ ನೋಡಬೇಕು. ಆದರೆ ಆ ಕಲಾವಿದ ಕೂತವರ ಕಣ್ಣುಗಳನ್ನು ಮಾತ್ರ ನೋಡುತ್ತಾನೆ. ಅವರ ಮುಖ, ಮೂಗು, ಕೆನ್ನೆ, ಕೈ ಕಾಲುಗಳ ಬಗ್ಗೆ ಅವನಿಗೆ ಗಮನವಿಲ್ಲ. ಅದು ಅವನಿಗೆ ಬೇಕಾಗಿಯೂ ಇಲ್ಲ. ಬರೀ ಕಣ್ಣುಗಳನ್ನು ನೋಡುತ್ತಾ ಚಿತ್ರ ಬರೆಯುತ್ತಾ ಹೋಗುತ್ತಾನೆ. ಆದರೆ ಆ ಕ್ಯಾನ್ವಾಸಿನ ಮೇಲೆ ಅಲ್ಲಿ ಕೂತವರ ಚಿತ್ರ ಮೂಡುವುದಿಲ್ಲ. ಬದಲಿಗೆ ಕೂತವರ ಮನಸಿನಲ್ಲಿ ಯಾರಿದ್ದಾರೊ ಅವರ ಚಿತ್ರ ಮೂಡುತ್ತದೆ. ಅವರ ಮನಸಿನಲ್ಲಿ ಏನಿದೆಯೊ ಅದು ಮೂಡುತ್ತದೆ. ನೋಡುವವರಿಗೆ ಇದೊಂದು ಅಚ್ಚರಿ; ಅಷ್ಟೆ ಅಲ್ಲ ಬರೆಸಿಕೊಂಡವನಿಗೂ ಇದು ಅದಕ್ಕಿಂತ ಅಚ್ಚರಿ. ಸ್ವತಃ ಚಿತ್ರ ಬರೆಸಿಕೊಂಡವರ್‍ಯಾರು ಇದು ಸುಳ್ಳು ಎಂದು ಹೇಳಿಲ್ಲ.‌ ಇದು ಸರಿಯಿಲ್ಲ, ತಪ್ಪು ಬೇರೆ ಚಿತ್ರ ಬಂದಿದೆ ಎಂದು ವಾದಿಸಿಲ್ಲ. ಎಲ್ಲರೂ ಒಂದು ಒಪ್ಪಿತ ಮೌನದೊಂದಿಗೆ ಎದ್ದು ಹೋಗುತ್ತಿದ್ದರು. ಕೆಲವರಿಗೆ ಸಂಭ್ರಮ, ಅವರ ಜೊತೆಗೆ ಬಂದವರಿಗೆ ಒಮ್ಮೊಮ್ಮೆ ದುಗುಡ.

ಇದ್ಯಾಕೆ ಹೀಗೆ ಎಂದು ಸ್ವತಃ ಈ ಕಲಾವಿದನಿಗೂ ಗೊತ್ತಿರಲಿಲ್ಲ. ಮೊದಲ ಬಾರಿ ಹೀಗೆ ಯಾರದೊ ಚಿತ್ರ ಬರೆಯುವಾಗ ಅವರ ಮನಸಿನೊಳಗಿರುವವರ ಚಿತ್ರ ಮೂಡಿದಾಗ ಖುಷಿ ಆಗಿತ್ತು. ತನ್ನ ಬಗ್ಗೆಯೇ ತನಗೆ ಹೆಮ್ಮೆ ಆಗಿತ್ತು. ಅದೇ ಹುರುಪಿನಲ್ಲಿ ಒಂದು ದಿನ ತನ್ನ ಹೆಂಡತಿಯನ್ನು ಕೂರಿಸಿಕೊಂಡು ಚಿತ್ರ ಬರಿತೀನಿ ಅಂದ. ಎಂದೂ ತನ್ನ ಚಿತ್ರ ಬರೆಯದ ಗಂಡ ಇಂದು ತನ್ನ ಚಿತ್ರ ಬರೆಯುತ್ತಾನೆ ಅಂದಾಗ ಅವಳಿಗೆ ಸ್ವಾಭಾವಿಕವಾಗಿಯೇ ಖುಷಿಯಾಗಿತ್ತು. ಸಂಭ್ರಮಗೊಂಡಿದ್ದಳು. ಹೆಂಡತಿಯ ಕಣ್ಣು ನೋಡುತ್ತಾ.. ಅವಳೊಳಗೆ ಇರುವ ತನ್ನ ಚಿತ್ರವನ್ನು ಬರೆಯುವ ಹುರುಪು ಕೂಡ ಅವನನ್ನು ಕಾಡಿತ್ತು.

ಹೆಂಡತಿಯ ಕಣ್ಣುಗಳನ್ನು ನೋಡುತ್ತಾ, ಅದರ ಆಳದಲ್ಲಿ ಇಳಿಯುತ್ತಾ ಬ್ರಷ್ ಗೆ ಬಣ್ಣ ಮೆತ್ತಿಕೊಂಡು ಕ್ಯಾನ್ವಾಸ್ ಮೇಲೆ ಅಡಿಸತೊಡಗಿದೆ. ತನ್ನ ಚಿತ್ರ ತಾನೇ ಬರೆದುಕೊಳ್ಳುವ ವಿಚಿತ್ರ ಕಲಾವಿದನಾದೇನೆ ನಾನು? ಕೇಳಿಕೊಂಡ. ಆದರೂ ಇದು ವಿಶೇಷವೆನಿಸಿತು. ಬ್ರಷ್ ಆಡುತ್ತಾ ಎರಡೇ ಸೆಕೆಂಡ್ ಗೆ ಗೊತ್ತಾಯ್ತು.. ಇದು ನನ್ನ ಚಿತ್ರವಲ್ಲ. ಹೌದು ಇದು ನಿಜಕ್ಕೂ ನನ್ನ ಚಿತ್ರವಲ್ಲ. ಹಾಗಾದರೆ ಹೆಂಡತಿಯ ಮನಸಿನೊಳಗೆ ಯಾರಿದ್ದಾರೆ? ಇಷ್ಟ ಇದ್ದದ್ದು ನಾನಲ್ಲವೇ? ಅವಳು ಅಷ್ಟೊಂದು ಪ್ರೀತಿ ಮಾಡುತ್ತಿದ್ದದ್ದು ನಟನೆಯೇ? ಒಳ್ಳೆಯ ಪ್ರೀತಿಯನ್ನು ಕೂಡ ನಟಿಸಬಹುದೇ? ಬ್ರಷ್ ಹಿಡಿದ ಅವನ ಅಂಗೈ ತುಂಬಾ ಬೆವರು. ಕಾಲುಗಳಲ್ಲಿ ನಡುಕ. ಹಣೆಯ ಮೇಲೆ ಶಿಸ್ತಿನ ಬೆವರ ಸಾಲು..

ನಾನಿಲ್ಲ.. ಬೇರೆಯವರು ಯಾರಿದ್ದಾರೆ? ನಾನಿಲ್ಲದೆ ಬೇರೆ ಯಾರಿದ್ದರೆ ತಾನೆ ನನಗೇನು? ಇಷ್ಟು ದಿನ ಬಾಳಿದ ಜೋಡಿ ಸಂಸಾರಕ್ಕೆ ಯಾವ ಅರ್ಥವಿದೆ? ಮನೆಯಲ್ಲಿ ಒಬ್ಬ, ಮನಸಿನಲ್ಲಿ ಒಬ್ಬ.. ಹೇಗೆ ಸಾಧ್ಯ? ಕಾಣದ ಈ‌ ಮನಸಿನೊಳಗಿನ ಏನೆನಿರುತ್ತೊ?

ಪ್ರಶ್ನೆಗಳನ್ನು ಮಾತ್ರ ಹಾಕಿಕೊಂಡ. ಉತ್ತರ ಹುಡುಕಿಕೊಳ್ಳುವ ಅವಶ್ಯಕತೆ ಅವನಿಗೆ ಕಾಣಲಿಲ್ಲ. ಹುಡುಕಿಕೊಂಡು ಅವನು ಯಾವ ಪರೀಕ್ಷೆಯಲ್ಲಿ ತಾನೇ ಪಾಸಾಗಬೇಕು? ಅಂಥವ ಪಾಸಾದರೂ ತನಗೇಕೆ? ಅವನು ನಪಾಸಾಗಿದ್ದ. ಯೋಚನೆಗಳ ಮಧ್ಯೆ ಮುಳುಗಿದ್ದ ಅವನನ್ನು ಹೆಂಡತಿ ಎಚ್ಚರಿಸಿದಳು..

ಅವಳಿಗೆ ಕ್ಯಾನ್ವಾಸ್ ಮೇಲೆ ಮೂಡುತ್ತಿದ್ದ ಬದಲಿ ಚಿತ್ರದ ಜಾಡು ಸಿಕ್ಕಿತ್ತು.. ಏನು ಹೇಳಬೇಕು..ಎಂಬುದರ ಹುಡುಕಾಟದಲ್ಲಿದ್ದಳು.. ‘ನಿನ್ನ ಚಿತ್ರವೇ ತಪ್ಪು.. ನಾನು ಹಾಗೆ ಇಲ್ಲ.. ಅಥವಾ ಹೌದು ನಾನು ನಟಿಸಿದ್ದು ನಿಜ.. ಮನಸಿನೊಳಗೆ ಅವನಿದ್ದಾನೆ ಅನ್ನಲೇ?’ ಯೋಚಿಸತೊಡಗಿದಳು..

ಅವಳ ಉತ್ತರಕ್ಕೆ ಕಲಾವಿದ ಕಾಯಲಿಲ್ಲ. ‘ನೋಡು ದಾರಿ ಎರಡಾದವು.. ಊರು ಗೊತ್ತಿರದ ದಾರಿಯಲ್ಲೆ ನಾನು ನಡೆಯುವೆ.. ಈಗ ನಿನಗೊಂದು ಊರು ಸಿಕ್ಕಿದೆ ಹೊರಡು.. ದಾರಿಯಲ್ಲಿ ಮುಳ್ಳುಗಳಿರಬಹುದು ಹುಷಾರು’ ಅಂದ. ಮೊದಲ ಬಾರಿ ಗಂಡನನ್ನು ನೆನೆದು ಅವಳ ಮನಸು ಕಲಕಿತು. ಅವಳೊಳಗಿದ್ದು ಕ್ಯಾನ್ವಾಸ್ ಮೇಲೆ ಮೂಡಿದ್ದ ಮೂರ್ತಿಯೊಂದು ಕನಲಿತು.‌

ಅವನು ಒಂಟಿಯಾದ. ಬಣ್ಣ ಜೊತೆಯಾಯಿತು. ಬದುಕಲ್ಲಿ ಬಣ್ಣವಿಲ್ಲದವನು ಬರೆದದ್ದೆಲ್ಲಾ ಬಣ್ಣವೇ ಆಯ್ತು. ಬ್ರಷ್ ಆತ್ಮೀಯ ಗೆಳೆಯನಾಯಿತು. ಪಾರ್ಕಿನ ಬದಿಯ ಜಾಗ ಕಾಯಂ ಆಯ್ತು..

ಕಲಾವಿದನ ಈ ವಿಚಿತ್ರ ಮೋಡಿ ಹಲವು ಜನರನ್ನು ಸೆಳೆಯಿತು. ಈ ವಿಷಯ ಊರಲ್ಲೆಲ್ಲಾ ಹರಡಿತು. ಸುತ್ತಲಿನ ಊರಿಗೂ ಹಬ್ಬಿತು. ಜನ‌ ನೋಡಲು ಬರುತ್ತಿದ್ದರು. ಹಾಗೆ ಬಂದವರು ನಮ್ಮ ಚಿತ್ರ ಬರೆಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಮನಸಿನೊಳಗಿನ ಗುಪ್ತ ಮುಖವೊಂದನ್ನು ಜಗಜ್ಜಾಯಿರು ಗೊಳಿಸಿಕೊಳ್ಳುವುದು ಅವರಿಗೆ ಬೇಕಿರಲಿಲ್ಲ. ತದನಂತರ ಆಗುವ ಅವಾಂತರಗಳನ್ನು ಹೋರುವ ಧೈರ್ಯವೂ ಇರಲಿಲ್ಲ.

ಆದರೆ ಕೆಲವರು ಪ್ರಯತ್ನಿಸುತ್ತಿದ್ದರು. ಸ್ವಲ್ಪ ಧೈರ್ಯ ಮಾಡುತ್ತಿದ್ದವರು ಪ್ರೇಮಿಗಳು ಮಾತ್ರ. ಅದರಲ್ಲೂ ಅರ್ಧದಷ್ಟು ಜನ ತಮ್ಮ ಮನಸಿನಲ್ಲಿರುವ ಬೇರೆಯವರ ಮುಖದ ಗುಟ್ಟನ್ನು ಬಿಟ್ಟುಕೊಟ್ಟು ಜೊತೆಗೆ ಪ್ರೀತಿಯನ್ನು ಬಿಟ್ಟು ಹೊರಡಬೇಕಾದ ಅನಿವಾರ್ಯತೆಯೂ ಎದುರಾಗುತ್ತಿತ್ತು..

ಮುದುಕಿಯ ಮನಸಿನೊಳಗೆ ಎಲ್ಲೋ ದೂರದಲ್ಲಿರುವ ಮಗನ ಮುಖ, ದಂಪತಿಗಳ ಎದೆಯೊಳಗೆ ಬೇರೆ ಯಾರದೊ ಮುಖಗಳು, ಕೆಲವರ ಮನಸಿನಲ್ಲಿ ಮುಳ್ಳು ಹಂದಿಗಳು, ಹಾವುಗಳು, ಚೇಳು, ಹಂದಿ, ನರಿ ಇಂಥವೇ ಕಾಣುತ್ತಿದ್ದವು. ಕಲಾವಿದನಿಗೆ ಈ ಬದುಕೇ ಸರಿಯಲ್ಲ.. ಇಲ್ಲಿ ಯಾರೂ ಸರಿಯಿಲ್ಲ.. ಅನಿಸತೊಡಗಿತು. ಎಲ್ಲರ ಬದುಕು ಒಂದು ನಾಟಕದೊಳಗೆ ತೂರಿಸಿಕೊಂಡ ಬಣ್ಣ ವಿಲ್ಲದ ನಟನೆ ಅನಿಸುತ್ತಿತ್ತು..

ಇತ್ತಿತ್ತಲಾಗಿ ಚಿತ್ರ ಬರೆಯುವುದನ್ನು ಬಿಡಬೇಕು ಅನಿಸುತ್ತಿತ್ತು ಅವನಿಗೆ..

ಅದೊಂದು ದಿನ ಅವಳು ಬಂದಳು. ಆಗಾಗ ಬಂದು ಹೋಗುತ್ತಿದ್ದ ಹುಡುಗಿ. ಚೂಪು ಮೂಗಿನ, ತುಂಬು ಗಲ್ಲದ, ಸೆಳೆವ ಮೂಗುತಿಯ ಚೆಲುವೆ ಆಕೆ. ಚಿತ್ರಗಳೆಂದರೆ ಅವಳಿಗೆ ಮೋಹ. ಆಗಾಗ ಬಂದು ಕೆಲವು ಚಿತ್ರಪಟಗಳನ್ನು ಕೊಂಡು ಒಯ್ಯುತ್ತಿದ್ದಳು. ಮತ್ತೆ ಬರುತ್ತಿದ್ದಳು ಹೊಸದನ್ನು ಹುಡುಕಿ ತೆಗೆದುಕೊಂಡು ಹೋಗುತ್ತಿದ್ದಳು. ಕಲಾವಿದನಿಗೆ ಅವಳೊಂದು ಅಚ್ಚರಿ. ಈ ಊರಲ್ಲಿ ಕಲೆಯ ಬಗ್ಗೆ ಇಷ್ಟೊಂದು ಒಲವಿರುವ ಈ ಹುಡುಗಿ ಯಾರೊ ಎಂದು ಖುಷಿ ಪಡುತ್ತಿದ್ದ.

ಮನಸಿನಾಳದಲ್ಲಿನ ಮುಖ ಬರೆಯುವ ಕಲಾವಿದನ ಮೋಡಿಯ ಬಗ್ಗೆ ಅವಳಿಗೂ ಗೊತ್ತಿತ್ತು. ಅವಳೆಂದೂ ಅದರ ಬಗ್ಗೆ ಕುತೂಹಲ ವ್ಯಕ್ತಪಡಿಸಿರಲಿಲ್ಲ. ಆ ಬಗ್ಗೆ ಕಲಾವಿದನ ಬಳಿ ಏನನ್ನೂ ಕೇಳಿರಲಿಲ್ಲ. ಇಷ್ಟದ ಚಿತ್ರ ನೋಡುತ್ತಿದ್ದಳು. ಕೊಳ್ಳುತ್ತಿದ್ದಳು. ಹೋಗುತ್ತಿದ್ದಳು.

ಆದರೆ ಒಂದು ದಿನ ಕಲಾವಿದನೇ ಅವಳನ್ನು ಮಾತಿಗೆಳೆದ ‘ಬಹುತೇಕರಿಗೆ ತನ್ನ ಮನಸಿನಲ್ಲಿರುವ ಮುಖ ಯಾವುದೆಂದು ತಿಳಿಯುವ ಕುತೂಹಲ ಇರುತ್ತೆ.‌ ಜೋಡಿಯಾಗಿ ಬರುವವರಿಗಿಂತ ಒಂಟಿಯಾಗಿಯೇ ಬಂದು ಬರೆಸಿಕೊಂಡು ಹೋದವರೇ ಜಾಸ್ತಿ. ನೀವು ಆರಂಭದಲ್ಲಿ ಒಂಟಿಯಾಗಿ ಬಂದಾಗ ಅದೇ ಕಾರಣಕ್ಕೆ ಬಂದಿದ್ದೀರಿ ಅಂದ್ಕೊಂಡೆ. ಆದರೆ ನಂತರ ಗೊತ್ತಾಯ್ತು ನೀವು ಆ ತರಹ ಅಲ್ಲ ಅಂತ..‌’

‘ಓಹ್.. ಏನೀಗ? ನಿಮಗೆ ನನ್ನ ಮನಸಿನೊಳಗಿನ ಮುಖ ಬರೆಯುವ ಆಸೆಯಾ?’

ತುಸು ಸಿಡುಕು, ತುಸು ವ್ಯಂಗ್ಯದಲ್ಲಿ ಕೇಳಿದಳು.

‘ಇಲ್ಲ ಇಲ್ಲ ಹಾಗೇನು ಇಲ್ಲ. ಸುಮ್ಮನೆ ಕುತೂಹಲಕ್ಕೆ ಕೇಳಿದೆ ಅಷ್ಟೆ..’ ಅಂದ

‘ಓಹೋ.. ನಿಮ್ಮ ಕುತೂಹಲ ನಾನೇಕೆ ಕೊಲ್ಲಲಿ? ಕೂರುತ್ತೇನೆ ಬರೆಯಿರಿ..’ ಎನ್ನುತ್ತಲೆ ಅವನಿಗೆ ಒಂದು ಬ್ರಷ್ ಎತ್ತಿಕೊಟ್ಟು ಅವನ ಮುಂದೆ ಕೂತಳು. ತನ್ನ ಬೊಟ್ಟಲು ಕಣ್ಣು ಅಗಲಿಸಿದಳು..‌

ಅಯ್ಯೊ ಮಾತಾಡಿಸಿದ ಅರೆ ಕ್ಷಣಕ್ಕೆ ಇವಳು.. ಹೀಗೆ ಕೂತು ಬಿಟ್ಟಳಲ್ಲ ಅನಿಸಿತಾದರೂ ಅವಳ ಕೋರಿಕೆ ಅಲ್ಲಗೆಳೆಯಲಾಗದೆ.. ಕೈಗೆ, ಬಣ್ಣ ಮೆತ್ತಿಕೊಂಡ ಬ್ರಷ್ ಎತ್ತಿಕೊಂಡ.

ಅವಳ ಕಣ್ಣೊಳಗೆ ಕಣ್ಣಿಟ್ಟ. ಯಾವುದೊ ಶಾಂತವಾಗಿರುವ ಕಡಲೊಳಗೆ ನುಗ್ಗಿದಂತಾಯ್ತು ಅವನಿಗೆ. ಕಣ್ಣಿನಲ್ಲೆ ಎಷ್ಟೊಂದು ನಾಜೂಕಿನ ಅಲೆಗಳು ತೇಲುತ್ತಿವೆ ಅನಿಸಿತು.

ಕ್ಯಾನ್ವಾಸ್ ಮೇಲೆ ಬ್ರಷ್ ಓಡಿಸತೊಡಗಿದ. ಕಣ್ಣು ನೋಡತೊಡಗಿದ. ಒಂದೇ ನಿಮಿಷ. ಬ್ರಷ್ ಓಡಿಸುವುದನ್ನು ನಿಲ್ಲಿಸಿ ಬಿಟ್ಟ..‌

ತನ್ನ ಚಿತ್ರ ತಾನೇ ಬರೆದುಕೊಳ್ಳುತ್ತಿರುವ ಕ್ಷಣ ಅದು. ಹೀಗೆ ಹಿಂದೊಮ್ಮೆ ತನ್ನ ಚಿತ್ರ ಬರೆದುಕೊಳ್ಳಬೇಕು ಅಂತ ಹೊರಟಾಗ ಬೇರೆಯವರ ಚಿತ್ರ ಬರೆಯಬೇಕಾಯಿತು. ಈಗ ಬೇರೆಯವರ ಚಿತ್ರ ಬರೆಯಲು ಹೊರಟಾಗ ತನ್ನ ಚಿತ್ರ ಬರುತ್ತಿದೆ ಈ ವಿಚಿತ್ರ ಬದುಕಿನಂತೆ..

ಚಿತ್ರ ಮುಗಿಸಬೇಕೊ.. ನಿಲ್ಲಿಸಬೇಕೊ ಅವನಿಗೆ ಗೊತ್ತಾಗಲಿಲ್ಲ.

ಅವಳ ಕಡೆ ನೋಡಿದ. ಅವಳು ತುಂಬಾ ಮೋಹಕವಾಗಿ ನಕ್ಕಳು.. ಅವಳಿಗೆಲ್ಲಾ ಅರ್ಥವಾಗಿದೆ.‌

‘ಊರಿನವರೆಲ್ಲರ ಚಿತ್ರ ಬರೆಯುವ ಕಲಾವಿದರಿಗೆ ತಮ್ಮ ಚಿತ್ರ ಬರೆದುಕೊಳ್ಳಲು ಭಯವೊ..?’ ನೇರವಾಗಿ ಕೆಣಕಿದಳು. ಅವನಿಗೇನು ಹೇಳಬೇಕೆಂದು ತಿಳಿಯಲಿಲ್ಲ.

ಆದರೂ ಹೇಳಿದ..

‘ಈ ಬದುಕೇ ಹೀಗೆ.. ಯಾರಲ್ಲಿ ಯಾರೊ ಇದ್ದಾರೆ. ನಾವು ನಮ್ಮವರು ನಮ್ಮೊಳಗೆ ಇದ್ದಾರೆಂದು ಬದುಕುತ್ತಿದ್ದೇವೆ. ಅಷ್ಟು ಸುಳ್ಳು ಸಾಕು ಬದುಕಲು. ಸತ್ಯದೊಂದಿಗೆ ಬದುಕಲು ಸಾಧ್ಯವಿಲ್ಲ. ಸುಳ್ಳು ಇಲ್ಲದೆ ಯಾರೂ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಹೆಂಡತಿ ನನ್ನನ್ನೆ ಪ್ರೀತಿಸುತ್ತಿದ್ದಾಳೆ ಅನ್ಕೊಂಡು ಬದುಕಬೇಕು.. ಪರೀಕ್ಷೆ ಒಳ್ಳೆಯದಲ್ಲ.. ಜಗತ್ತಿನ ಪರೀಕ್ಷೆಗಳು ಅಷ್ಟೊಂದು ಒಳ್ಳೆಯ ಫಲಿತಾಂಶ ನೀಡಿದ ಉದಾಹರಣೆಗಳಿಲ್ಲ..’

‘ಅಯ್ಯೊ ರೀ ಬಿಡ್ರಿ.. ಎಷ್ಟು ಬೋರು ರೀ ನೀವು. ನನ್ನೊಳಗೆ ನೀವು ಇದೀರಿ. ಖುಷಿಯಾಗಿಲ್ವ ನಿಮಗೆ. ನೀತಿ ಹೇಳ್ತಾ ಇದ್ದೀರಲ್ಲ.. ಸಾಕು ಸುಮ್ನಿರಿ’ ಅಂದಳು.

‘ಹೌದು ನಾನು ನಿಮ್ಮೊಳಗೆ ಇರಬಹುದು… ಆದರೆ ನನ್ನೊಳಗೆ ನೀವು ಇದೀರಾ..?’

‘ಇರದೇ ಏನು.. ಇರ್ತೀನಿ. ಬೇಕಾದರೆ ನೀವು ಪರೀಕ್ಷಿಸಿಕೊಂಡು ನೋಡಿ..’

ಅವನು ನಕ್ಕು ಹೇಳಿದ

‘ನನ್ನ ಬ್ರಷ್ ನಾನೇ ಎತ್ತಿಕೊಳ್ಳಬಲ್ಲೆ.. ಆದರೆ ನನ್ನ ಕಣ್ಣುಗಳನ್ನು ನಾನೇ ಹೇಗೆ ನೋಡಿಕೊಳ್ಳಲಿ.. ಕಣ್ಣಗಳನ್ನು ನೋಡದೆ ಹೇಗೆ ಬರೆಯಲಿ? ಮನುಷ್ಯ ತನ್ನ ಕಣ್ಣೊಳಗೆ ತಾನು ನೋಡಿಕೊಂಡ ದಿನ ಗೆಲ್ತಾನೆ. ಒಳಗೆ ಯಾವ ಮುಖವಿದೆ ನನಗೆ ಗೊತ್ತಿಲ್ಲ. ನಾನು ಕಣ್ಣಿದ್ದು ಕುರುಡ..’ ಅಂದ.

ಅವಳಿಗೇನು ಉತ್ತರಿಸಬೇಕೆಂದು ತಿಳಿಯಲಿಲ್ಲ..

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು avadhi

15 April, 2023

1 Comment

  1. ಶೀಲಾ.ಗೌಡರ

    ಎಂಥಾ ಅದ್ಭುತ ಕಲ್ಪನೆ! ಎಷ್ಟು ಒಳ್ಳೆಯ ನೀತಿ! ಪರಸ್ಪರ ನಂಬಿಕೆಯಿಂದ ಬದುಕಬೇಕು. ಎಲ್ಲವನ್ನೂ ಒರೆಗೆ ಹಚ್ಚಬಾರದು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading