ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ್ ಸೊರಟೂರು ಕಥಾ ಅಂಕಣ – ಮೂರು ಡೈರಿ; ಒಂದು ಪುಟ…

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

30

ಅರ್ಧ ಮುಚ್ಚಿದ ಮೋಡದೊಳಗೆ ಸಿಕ್ಕಿ ಹಾಕಿಕೊಂಡಿದ್ದ ಚಂದ್ರ ಆಚೆ ಬರಲು ಹೆಣಗಾಡುತ್ತಿದ್ದ. ಭೂಮಿಗೆ ಮಂಪರು ಬೆಳಕು.‌ ರಾತ್ರಿ ಹನ್ನೆರಡು ಕಳೆದಿದೆ. ಅವಳ ರೂಮಿನಲ್ಲಿ ಮಿಣ ಮಿಣ ಬೆಳಕು. ಅದರ ಪಕ್ಕದ ರೂಮಿನಲ್ಲೂ ಅಂತದ್ದೆ ಬೆಳಕು. ಎರಡೂ ರೂಮಿಗೂ ಗೋಡೆ ಅಡ್ಡ ಇದೆ. ಆ ರೂಮಿನದು ಆ ರೂಮಿಗಷ್ಟೆ ಬೆಳಕು. ಕದ್ದು ಕಿಟಕಿ ಮೂಲಕ ಆಚೆ ಹೋದ ಬೆಳಕನ್ನು ಆ ಮಧ್ಯ ರಾತ್ರಿಯಲ್ಲಿ ಕದ್ದು ನೋಡುವವರು ಯಾರು..‌?

ಇತ್ತ ಇವಳು..

ಡೈರಿ ಆಚೆ ತೆಗೆದಳು. ಅರಾಮು ಕುರ್ಚಿಯಲ್ಲಿ ಕೂತು ಅದರ ಪುಟ ತೆರೆದಳು. ಬಹುಶಃ ಇಂದು ಅವಳಿಗೇನೊ ಬರೆಯುವುದಕ್ಕಿದೆ. ಬರೆದು ಮುಗಿಸುವುದಕ್ಕೆ ಕಾದಂತೆ ಚಡಪಡಿಸುತ್ತಿದ್ದಾಳೆ. ಒಮ್ಮೊಮ್ಮೆ ಅವಳು ಹೀಗೆಯೇ ಅವಳಿಗೆ ಅವಳೇ ಅರ್ಥವಾಗದಂತೆ; ಒಂದು ನಿಗೂಢದಂತೆ. ಡೈರಿ ತೆಗೆದಳು. ಬರೆಯಲು ಶುರುವಿಟ್ಟಳು.‌

ದಿನಾಂಕ : 16-02-2023, ಗುರುವಾರ. 12:05 AM
“ಇಂದು ಅಲಮಾರು ತೆಗೆದಾಗ ಇಷ್ಟು ದಿನ ಅನಿಸದೇ ಇದದ್ದು ಇಂದು ಅನಿಸಿಬಿಟ್ಟಿತು. ಒಂದು ಜೋಡಿ ಚಪ್ಪಲಿಗಳು ಮತ್ತು‌ ಒಂದು ಜೊತೆ ಪ್ಯಾಟು, ಅಂಗಿ. ಇವು ಅವರು ತೊಟ್ಟ ಕೊನೆಯ ಉಡುಗೆಗಳು. ನನ್ನ ಬಟ್ಟೆಯ ಜಾಗದಲ್ಲಿ ಅವುಗಳಿದ್ದವು. ನಾನು ದಿನಕ್ಕೊಮ್ಮೆಯಾದರೂ ಅವುಗಳನ್ನು ಮುಟ್ಟುತ್ತಿದ್ದೆ. ಅವರೆಷ್ಟು ಪ್ರೀತಿಸಿದರು. ಪ್ರೀತಿಸಿ ಆ ಉಸಿರನ್ನು ನನಗೆ ಕೊಟ್ಟುವರಂತೆ ಕೊಟ್ಟು ಎದ್ದು ಹೋದರು. ತಿಂಗಳು ಗಟ್ಟಲೆ ಆಸ್ಪತ್ರೆಯಲ್ಲಿ ನರಳಿ ಸತ್ತರು. ಇಂದೇಕೆ ಅವುಗಳಿಗೆ ಇಲ್ಲಿ ಜಾಗವಾಗುತ್ತಿಲ್ಲ ಅನಿಸುತಿದೆ? ಮೊದಲು ಇವುಗಳನ್ನು ಇಟ್ಟಾಗ ಅಲಮಾರಿನ ತುಂಬಾ ಇವೆ ಕಾಣುತ್ತಿದ್ದವು. ಇಷ್ಟು ದಿನಗಳಲ್ಲಿ ಈಗ ಏನೆಲ್ಲಾ ತುಂಬಿಕೊಂಡು ಬಿಟ್ಟಿದೆ; ನನ್ನ ಮನಸಿನಂತೆ. ಯಾವುದು ತೆಗೆಯಲಿ; ಯಾವುದನ್ನು ತ್ಯಜಿಸಲಿ?

‘ಯೆಸ್, ಬಂದು ಬಿಡು. ಯಾರೂ ಇಲ್ಲ..’ ಟೈಪ್ ಮಾಡಿಟ್ಟ ಮೆಸೇಜ್ ಅನ್ನು ಯಾಕೆ ನಾನು ಕಳುಹಿಸಲು ಚೂರು ತಡೆದೆ? ಈಗಲೂ ಕಳುಹಿಸಬೇಕು ಎನಿಸುತಿದೆ. ಯಾಕೆ ಹಾಗೆ ಅನಿಸುತಿದೆ ಎಂಬುದು ನಿಜಕ್ಕೂ ಗೊತ್ತಿಲ್ಲ.

‘ಈ ಜನರ ನಡುವೆ ಒಂದು ಕಲೆಯೂ ಹತ್ತದೆ ಬದುಕೋದು ಅಂದ್ರೆ ಸುಮ್ನೇನಾ? ಅದೂ ಒಂಟಿ ಹೆಣ್ಣು..’ ಈ ಜನ ಹೀಗೆ ಯಾಕೆ ಮಾತಾಡಿಕೊಳ್ಳಬೇಕು.

ಈ ದರಿದ್ರ ಜನಕ್ಕೆ ಏನಾಗಿದೆ? ನನಗೊಂದು ಕಲೆಯನ್ನು ಯಾಕೆ ಅಂಟಿಸಲಿಲ್ಲ? ಯಾಕೆ ಹಿಂದೆ ಮುಂದೆ ಮಾತಾಡಿಕೊಳ್ಳಲಿಲ್ಲ ಇವರು? ದಾರಿಯಲ್ಲಿ ನಿಂತಾಗ ಯಾರಿಗೆ ಕಾಯ್ತಾ ಇದೀಯ ಅನ್ನಲಿಲ್ಲ? ಮೊಬೈಲ್ ತುಂಬಾ ಹೊತ್ತು ಹಿಡಿದಾಗ ಯಾರೊಂದಿಗೆ ಅಷ್ಟು ಮಾತು ಅನ್ನಲಿಲ್ಲ, ಸಾಧ್ಯನೇ ಇಲ್ಲ ಒಂದು ಹೆಣ್ಣು ಯಾರ ಸಂಗವೂ ಇಲ್ಲದೆ ಇಷ್ಟು ವರ್ಷ ಒಂಟಿಯಾಗಿರಲು ಹೇಗೆ ಸಾಧ್ಯ? ಅನ್ನಲಿಲ್ಲ. ಈ ನನ್ನ ಮಗಳು ಯಾಕಮ್ಮ ನೈಟ್ ಯಾವಾಗಲೂ ಇಷ್ಟು ಲೇಟಾಗಿ ಮಲಗ್ತಿ ಅಂತ ಸಣ್ಣ ಅನುಮಾನವನ್ನೂ ತೋರಿಸಲಿಲ್ಲ..

ಛೇ ಇವರಿಗೆಲ್ಲಾ ಏನಾಗಿದೆ?

ಆದರೆ ನಾನು?

ನಾನು ನಂಬಿಸಲಿಲ್ಲ; ಜಗತ್ತು ನಂಬಿತು..
ನನ್ನ ಗಂಡ ಒಳ್ಳೆಯವನು, ಅವರ ಹೆಂಡತಿಯಾದ ನಾನು ಒಳ್ಳೆಯವಳು ಅನ್ನುತ್ತಾರೆ ಜನ.‌ ಈ ಒಳ್ಳೆಯತನದೊಂದಿಗೆ ಬದುಕು ಸಾಗಿಸುವುದು ಎಷ್ಟೊಂದು ಕಷ್ಟ ಎಂಬುದು ಇವರಿಗೆ ಯಾಕೆ ಅರ್ಥವಾಗುತ್ತಿಲ್ಲ.

ನಾನು ಜನರಿಗೆ ತಾನು ಒಳ್ಳೆಯವಳು ಎಂದು ನಂಬಿಸಿದೆನಾ?
ಇದು ನಿಜನಾ? ನನಗೆ ನಾನೇ ಸುಳ್ಳು ಹೇಳಿಕೊಳ್ಳುತ್ತಿದ್ದೇನಾ?

ಸಾಮಾನ್ಯ ಜನರಿಗೆ ಸಾಮಾನ್ಯತೆಯೇ ಸಾಕು. ಅಸಾಮಾನ್ಯತೆಯನ್ನು ಹೊರುವ ಶಕ್ತಿ ಇರಲ್ಲ.‌ ಇವರೆಲ್ಲರೂ ಮೊದಲೇ ನನ್ನ ಬಗ್ಗೆ ಏನಾದ್ರೂ ಆಡಿಕೊಂಡಿದ್ದರೆ ನಾನು ಎಲ್ಲರಂತೆ ಯಾರದೊ ಜೊತೆ ಓಡಾಡಿಕೊಂಡು ಇರಬಹುದಿತ್ತು. ಜನ ನನ್ನನ್ನು ಕೇಳದೆ ನನ್ನನ್ನು ಒಳ್ಳೆಯವಳನ್ನಾಗಿ ಮಾಡಿದರು. ಆದರೆ ಒಳ್ಳೆಯದರಲ್ಲಿ ಬದುಕುವುದು ಕಷ್ಟ.

ಅವನು ಇಷ್ಟ ಆದ. ಯಾಕೆ ಆಗಬಾರದಾ? ಅವನಿಗೆ ನನ್ನನ್ನು ಮುಕ್ಕುವ ಉದ್ದೇಶವಾ? ಇರಬಹುದು. ಹೌದು ಇರಬಾರದು ಯಾಕೆ? ಎಲ್ಲರದೂ ಒಂದು ಉದ್ದೇಶವೇ ಇರುತ್ತದೆ. ನನ್ನಲ್ಲೂ ಇದೆ. ನನ್ನಲ್ಲಿ ಇರದಿದ್ದರೆ ಯಾಕಾದರೂ ನಾನು ಅವನನ್ನು ಹತ್ತಿರಬಿಟ್ಟುಕೊಳ್ಳುತ್ತಿದ್ದೆ. ಈ ಜನರ ಎಲ್ಲಾ ಸಂಬಂಧಗಳು ಒಂದು ಉದ್ದೇಶದವು. ಉದ್ದೇಶ ಸತ್ತ ದಿನ, ಸಂಬಂಧವೂ ಸಾಯುತ್ತದೆ. ಜನ ಅದನ್ನು ಮೋಸ ಅಂತ ವ್ಯಾಖ್ಯಾನಿಸುತ್ತಾರೆ.

ಇಷ್ಟು ದಿನ ಅವರ ನೆನಪು ತಡೆದವು. ಈಗ ಯಾಕೆ ತಡೆಯುತ್ತಿಲ್ಲ. ಮನುಷ್ಯರಾದರೂ, ನೆನಪುಗಳಾದರೂ ನಮ್ಮ ಜೊತೆ ಎಷ್ಟು ದಿನ ಉಳಿದಾವು? ಅವನು ಮನಸಿಗೆ ಬಂದು ಎಷ್ಟು ದಿನವಾಗಿದೆ. ಕೆನ್ನೆಯ ಮೇಲೆ ಅವನ ತುಟಿಗಳು ಮೂಡಿ ಎಷ್ಟೊ ದಿನವಾಗಿದೆ. ಈಗ ಅವನು ದೇಹದ ಮೇಲೆ ಮೂಡಿ ಬರಬೇಕು. ಅವನ ಬಲವಂತವಿಲ್ಲ. ನನ್ನದೂ ಇಲ್ಲ. ಎಂದಾದರೂ ಹೀಗೆ ಅಕಸ್ಮಾತ್ ನಡೆಯಬಹುದು ಅನಿಸುತ್ತೆ. ಅದು ನಡೆಯಲೇ? ನಡೆಯಬಾರದ? ಎರಡಕ್ಕೂ ಕಾರಣವಿದೆ.‌ ಈ ಕ್ಷಣಕ್ಕೆ ಎರಡೂ ಸರಿ. ಅದರಿಂದಲೇ ಮೆಸೇಜ್ ಸೆಂಡ್ ಆಗೋದು ತಡೆದುಕೊಂಡಿತಾ?

ಮಗಳಿಗಾಗಿ ತಡೆದೆನಾ? ಅವಳು ಅದೆಷ್ಟು ಬಾರಿ ಹೇಳಿದಳು. ಪ್ಲೀಸ್ ಮಮ್ಮಿ ಇನ್ನೊಂದು ಮದುವೆ ಆಗು ಅಂತ. ಆಗಬಹುದಿತ್ತು.. ಆದರೆ ಆಗಲಿಲ್ಲ. ನೋಡಿ ಅದಕ್ಕೂ ಕಾರಣ ಇದೆ. ಸಮಾಜ ಹೊರಿಸಿದ ಒಳ್ಳೆತನದ ಆರೋಪ. ಒಳ್ಳೆಯವರು ಇನ್ನೊಂದು ಮದುವೆ ಆಗುವುದಿಲ್ಲ.

ಟೈಪ್ ಮಾಡಿ ಉಳಿಸಿಕೊಂಡ ಅದೇ ಮಸೇಜ್ ನಾಳೆ ಅವನಿಗೆ ಕಳುಹಿಸಿ ಬಿಡಬೇಕು..

‘ಮನೆಯಲ್ಲಿ ಯಾರೂ ಇರುವುದಿಲ್ಲ.. ಈಗೀಗ ಮನಸಿನಲ್ಲೂ ಯಾರೂ ಇಲ್ಲ..‌ನುಸುಳುವೆಯೊ ನುಗ್ಗುವೆಯೊ ಆಯ್ಕೆ ನಿನ್ನದು..’ ಎನ್ನುವ ಈ ಸಾಲುಗಳನ್ನು ಅವನಿಗೆ ಕಳುಹಿಸಿ ಬಿಡಬೇಕು..

ಆದರೆ ಇದೇ ಲಹರಿ, ಇದೇ ಮನಸು ನಾಳೆ ಇರುತ್ತದಾ? ಅದನ್ನು ನಾಳೆ ಎಂಬುದು ನಿರ್ಧರಿಸಬಹುದು..‌.‌

ಆದರೂ ಅಮ್ಮ ಒಳ್ಳೆಯವಳಲ್ಲ ಎಂಬುದು ಮಗಳಿಗೆ ತಿಳಿಯಬೇಕು..
ಮಗಳ ಕಣ್ಣಿನಾಳದ ‘ನಮ್ಮ ಅಮ್ಮ ತುಂಬಾ ಒಳ್ಳೆಯವರು’ ಅನ್ನುವ ತೀರ್ಪನ್ನು ನಾನು ಹೇಗೆ ಓದಲಿ..

ಒಳ್ಳೆಯದು ಎಂಬುದು ತುಂಬಾ ಅಪಾಯಕಾರಿ..

ನಾಳೆ ಖಂಡಿತ ಮಗಳೆದುರಿಗೆ ನಿಲ್ಲುತ್ತೇನೆ… “

ಡೈರಿ ಮುಗಿಯುತ್ತದೆ.

ಅವಳ ಪಕ್ಕದ ರೂಮಿನಲ್ಲಿ ಉರಿಯುತ್ತಿರುವ ಮಿಣ ಮಿಣ ಬೆಳಕಿನಲ್ಲಿ ಮತ್ತೊಂದು ಏನೊ ನಡೆಯುತಿದೆ..‌

ಅಲ್ಲಿದ್ದಾಳೆ ಮಗಳು; ಒಂದು ಚಡಪಡಿಕೆಯೊಳಗೆ ಬಿದ್ದು ಈಜುತ್ತಾ..

ಅತ್ತ ರೂಮಿನಲಿ ಮಗಳು…

ನಿದ್ದೆ ಬರಲಿಲ್ಲ ಅವಳಿಗೆ.. ಮೂರಾಲ್ಕು ಬಾರಿ ಒರಳಾಡಿದಳು.‌ ಮತ್ತೆ ಮೊಬೈಲ್ ನೋಡಿದಳು. ಅವನು ಆಫ್‍ಲೈನ್. ನಿದ್ದೆ ಸುಳಿಯುತ್ತಿಲ್ಲ.‌

ಎದ್ದು ಕೂತಳು. ಹೀಗೆ ಅವಳಿಗೆ ಅವಳೇ ಎದುರಾದಾಗ ಕೂತು, ತನ್ನೊಂದಿಗೆ ತಾನೇ ಮಾತಾಗುತ್ತಾ ಡೈರಿ ತುಂಬಾ ಏನಾದ್ರೂ ಬರೆಯುತ್ತಾಳೆ.‌ ನಿದ್ದೆಯಿಲ್ಲ. ಯಾಕೊ ಯಾವುದೂ ಸರಿಯಿಲ್ಲ ಅನಿಸುತ್ತಿದೆ. ಎದ್ದು ಹೋಗಿ ತನ್ನ ಖಾಸಗಿ ಡೈರಿ ಎತ್ತಿಕೊಂಡು ಬಂದು ಕೂತಳು. ಮನಸು ಬಿಚ್ಚಿಕೊಂಡಿತು.

ದಿನಾಂಕ : 16:02:2023 ಗುರುವಾರ. 12:10 AM

“ಕಾಲೇಜಿನಲ್ಲಿ ಒಬ್ಬ ಹುಡುಗಿಗೆ ಒಬ್ಬ ಹುಡುಗ ಜೊತೆಗಾರ. ಸುತ್ತಾಟ, ಜೀಕಾಟ ಎಲ್ಲವೂ ಇದೆ. ಕೆಲವು ಹುಡುಗಿಯರಿಗೆ ಇಬ್ಬರು, ಮೂವರು ಹುಡುಗರು; ಹುಡುಗರಿಗೂ ಅಷ್ಟೆ ಮೂರಾಲ್ಕು ಹುಡುಗಿಯರು. ನನಗೂ ಇದ್ದಾನೆ ಒಬ್ಬ. ಅದರ ನಡುವೆ ಅಪ್ಪ ಬಿಟ್ಟುಹೋದ ಹೆಸರು, ಅಮ್ಮನ ಒಳ್ಳೆಯತನ ಇದೆ; ಅದು ಅಡ್ಡವಾಗಿ.

ನೀನು ಅಪ್ಪ ಇಲ್ಲದ ಮಗಳು. ನೀನು ಹೀಗೆಲ್ಲಾ ಮಾಡಬಹುದಾ? ನಿಮ್ಮಮ್ಮ ಎಷ್ಟು ಒಳ್ಳೆಯವರು ಅಂತವರ ಹೊಟ್ಟೆಯಲ್ಲಿ ಇಂತವರು ಹುಟ್ಟುತ್ತಾರಾ? ‘ಹೀಗೆಲ್ಲಾ’ ಅಂದ್ರೆ ಹೇಗೆಲ್ಲಾ? ಒಳ್ಳೆಯವರಾಗಿದ್ದರೆ ಏನು ಸಿಗುತ್ತದೆ? ಈಗ ಅಮ್ಮನಿಗೆ ಏನು ಸಿಕ್ಕಿದೆ. ಜನ ಒಳ್ಳೆಯನದ ಬಗ್ಗೆ ಮಾತಾಡಿಕೊಳ್ಳಬಹುದು. ಆದರೆ ಆ ಮಾತಿನಿಂದ ಅಮ್ಮನ ಕನಸಿನಲ್ಲಿ ಚಂದ್ರ ಮೂಡುತ್ತಾನಾ?

ನಾನು ಮದುವೆ ಮಾಡಿಕೊಳ್ಳಿ ಮಮ್ಮಿ ಅಂದ್ರೂ ಅಮ್ಮ ಮಾಡಿಕೊಳ್ಳಲಿಲ್ಲ. ನಾನು ಅಡ್ಡವಾದೆನಾ? ಇಲ್ಲದ ಅಪ್ಪ ಅಡ್ಡವಾದರಾ? ಇಲ್ಲವರು ಹೀಗೆ ಅಡ್ಡವಾಗುವುದು ಯಾವ ನ್ಯಾಯ?

ಆ ನನ್ನ ಹುಡುಗ ಎಷ್ಟು ಆತ್ಮೀಯನಾಗಿದ್ದಾನೆ. ಎಷ್ಟೊಂದು ಕಾಳಜಿ ಮಾಡುತ್ತಾನೆ. ಆದರೆ ಅದು ಒಳ್ಳೆಯದಾಗಲಾರದೆ? ಅವತ್ತು ಕ್ಲಾಸು ರೂಮಿನಲ್ಲಿ ಯಾರೂ ಇಲ್ಲದನ್ನು ನೋಡಿ ಬಂದು ತಬ್ಬಿಯೆ ಬಿಟ್ಟಾ. ಅಪ್ಪನ ಒಳ್ಳೆಯದು, ಅಮ್ಮನ ಒಳ್ಳೆಯದಕ್ಕೆ ಕಲೆ ಮೆತ್ತಿಬಿಟ್ಟೆನಾ?

ಗೊತ್ತಾಗದೆ ಉಳಿದದ್ದು ಎಲ್ಲವೂ ಒಳ್ಳೆಯದೆ ಆಗುತ್ತದಾ? ಅವನು ‘ಬಾರೇ ಎಲ್ಲಾದರೂ ಹೋಗಿ ಬರೋಣ’ ಅಂತಾನೆ. ನನಗೂ ಆಸೆ ಇದೆ. ಈಗಷ್ಟೇ ಕರೆದ, ನನ್ನ ಉತ್ತರವಿಲ್ಲದಿದ್ದಕ್ಕೆ ಕೋಪ ಮಾಡಿಕೊಂಡು ಆಫ್‍ಲೈನ್ ಆದ. ಅವನು ಕರೆಯುವುದು ಸರಿ, ನಾನು ಹೋಗಬೇಕಾದದ್ದು ಸರಿ. ಆದರೆ ಅಡ್ಡವಾಗಿರುವ ಈ ಒಳ್ಳೆಯದು ಯಾಕೆ ಸರಿಯಾಗುವುದಿಲ್ಲ.

‘ಆಯ್ತು ಕಣೋ ಡಿಯರ್ ಬರ್ತೀನಿ..’ ಅಂತ ಟೈಪ್ ಮಾಡಿ ಉಳಿಸಿಕೊಂಡಿದ್ದನ್ನು ನಾನೇಕೆ ಕಳುಹಿಸಲಿಲ್ಲ? ನನಗೆ ಉತ್ತರವೇ ಹೊಳೆಯುತ್ತಿಲ್ಲ.

ಮಗಳು ತುಂಬಾ ಒಳ್ಳೆಯವಳು ಎಂದು ಅಮ್ಮ ಯಾವತ್ತೂ ಹೇಳುತ್ತಾಳೆ. ಅದೇ ನನ್ನನ್ನು ತಡೆಯುತ್ತಿರಬಹುದಾ? ಅಪ್ಪ ಇಲ್ಲ ಅನ್ನುವುದು ತಡೆಯುತ್ತಿರಬಹುದು. ಅಮ್ಮನಿಗೆ ಖಂಡಿತ ತಿಳಿಯಬೇಕು ಮಗಳು ಒಳ್ಳೆಯವಳಲ್ಲ ಅನ್ನುವುದು. ಒಳ್ಳೆಯವರಂತೆ ನಟಿಸುವುದು ತುಂಬಾ ಕಷ್ಟ. ಬೇಗ ಸುಸ್ತಾಗಿ ಬಿಡುತ್ತದೆ.

ಸಾಕಾಗಿ ಬಿಟ್ಟಿದೆ. ನಾಳೆ ಅಮ್ಮನ ಎದುರಿಗೆ ನಿಲ್ಲಬೇಕು. ಕೇಳಬೇಕು ‘ನೀನು ಒಳ್ಳೆಯವಳು ಸರಿ ಆದರೆ ನಾನು ಒಳ್ಳೆಯವಳಲ್ಲ.‌ ಒಳ್ಳೆಯವರೆಗೆ ಏನೂ ಸಿಗುವುದಿಲ್ಲವಂತೆ.‌ ನನಗೆ ಅವನು ಬೇಕು. ಅದರಿಂದ ನಾನು ಒಳ್ಳೆಯವಳಾಗಿರಲು ಸಾಧ್ಯವಿಲ್ಲ.

ಹೌದು ಖಂಡಿತ.. ಅಮ್ಮನ ಎದುರಿಗೆ ಖಂಡಿತ ಈ ವಿಚಾರ ಮಾತಾಡಬೇಕು…”

ಅವಳ ಬರಹ ಮುಗಿಯುತ್ತದೆ; ಜೊತೆಗೆ ರೂಮಿನ ಮಿಣಮಿಣ ಬೆಳಕೂ ಆರುತ್ತದೆ.

ಡೈರಿ ಪುಟ ತುಂಬಲೊ ಎಂಬಂತೆ ಕಾದಿದ್ದ ಆ ಎರಡು ರೂಮಿನ ಮಿಣ ಮಿಣ ದೀಪಗಳು ಕಣ್ಮುಚ್ಚಿಕೊಳ್ಳುತ್ತವೆ. ಚೂರೇ ಚೂರು ಚಂದ್ರನ ಅರೆಬೆಳಕು ಚೆಲ್ಲುತ್ತದೆ..‌

ಇದಕ್ಕಾಗಿ ಕಾದು‌ ಕೂತಂತೆ ಇದ್ದ.. ಆಗಾಗ ಡೈರಿಯೊಳಗೆ ಏನೇನೊ ಬರೆದಿಡುತ್ತಿದ್ದ
ಅವಳ ಗಂಡನ
ಇವಳ ಅಪ್ಪನ
ಡೈರಿಯ ಪುಟವೊಂದು ಹೆಂಡತಿಯ ಅಲಮಾರಿನ ಲಾಕರಿನಲ್ಲಿ ಮೆಲ್ಲಗೆ ಕಂಪಿಸುತ್ತದೆ; ಈಗಷ್ಟೇ ಬರೆದ ಹೆಂಡತಿ, ಮಗಳ ಡೈರಿಯ ಪುಟಗಳಿಂದ ಜೀವ ಪಡೆದಂತೆ!

ಯಾರೂ ಓದದ ಆ ಸಾಲುಗಳು ಫಡಫಡಿಸುತ್ತವೆ..

ದಿನಾಂಕ : 07:03:2005 ಸೋಮವಾರ 11:50 PM

ನಿನ್ನೆ ರಾತ್ರಿ ಲೇಟಾಗಿ ಮನೆಗೆ ಬಂದೆ.‌ ಸಮಯ ರಾತ್ರಿ‌ ಒಂದರ ಮೇಲಾಗಿತ್ತು.‌ ಪಾಪ ಮಡದಿ ಅಷ್ಟರವರೆಗೂ ಕಾದಿದ್ದಳು. ಮಗು ಆಗಷ್ಟೇ ಮಲಗಿದಂತಿತ್ತು. ಇವರೆಲ್ಲರೂ ಎಷ್ಟು ಒಳ್ಳೆಯವರು.

ನನಗೂ ಅಂತದೊಂದು ಬಿರುದು ಇದೆ. ನನ್ನ ಆಫೀಸ್ ನಲ್ಲಿ ಎಲ್ರೂ ನೀವು ಎಷ್ಟು ಒಳ್ಳೆಯವರು ಅಂತಾರೆ.‌ ಗೌರವ ಕಾಳಜಿ ಎಲ್ಲವೂ ಇದೆ.

ಮಡದಿಯಂತೂ ಎಷ್ಟು ಪ್ರೀತಿಸುತ್ತಾಳೆ. ಮಗಳೂ‌ ಕೂಡ ಅಪ್ಪ.. ಎನ್ನುತ್ತಾ ಎಷ್ಟೊಂದು ಹಚ್ಚಿಕೊಂಡಿದ್ದಾಳೆ.‌

ನಾನು ನಿಜಕ್ಕೂ ಒಳ್ಳೆಯವನಾ?

ನನಗೊಂದು ಪ್ರೀತಿ ಇತ್ತು. ಈಗಲೂ ಇದೆ. ಯಾರಿಗೂ ಗೊತ್ತಿಲ್ಲದೆ ಉಳಿದುಕೊಂಡಿದೆ.‌ ಬಹುಶಃ ಇದು ತಪ್ಪು ಇರಬಹುದು. ಯಾರ ಕಡೆಯಿಂದನೊ ಅಥವಾ ಯಾವುದೊ ಕಡೆಯಿಂದ ಇದು ಸರಿ ಕೂಡ ಇರಬಹುದು.‌ ನನ್ನ ಪ್ರೀತಿಯ ಕಣ್ಣಿಂದ ನೋಡಿದರೆ ನಾನು ಆದ ಮದುವೆಯೇ ತಪ್ಪು. ಮದುವೆ ಕಣ್ಣಿಂದ ನೋಡಿದರೆ ಉಳಿದು ಹೋದ ಪ್ರೀತಿಯೇ ತಪ್ಪು. ಪ್ರೀತಿ, ಬಾ ಎಂದಾಗ ಬಂದು, ಬೇಡ ಎಂದು ಹೇಳಿದಾಗ ಹೋಗಲು ಅದೇನು ದೂರದ ನೆಂಟನೇ?

ಕೆಲವೊಂದು ಬದುಕಿಗೆ ಅನಿವಾರ್ಯಗಳಿರುತ್ತವೆ. ಅದನ್ನು ‘ಒಳ್ಳೆಯದು’ ಎಂಬ ತಕ್ಕಡಿಯಲ್ಲಿಟ್ಟು ತೂಗಬೇಕೊ, ಬೇಡವೊ ಎಂಬುದು ಎಲ್ಲಾ ಕಾಲಕ್ಕೂ, ಎಲ್ಲರಿಗೂ ಪ್ರಶ್ನೆಯಾಗಿಯೇ ಉಳಿದಿದೆ.

ಹೆಂಡತಿ ನನ್ನನ್ನು ಇವ್ನು ಒಳ್ಳೆಯವನ್ನಲ್ಲ ಅಂದುಕೊಳ್ಳಬೇಕು. ಮಗಳು ಇವ್ರು ಕೂಡ ಎಲ್ಲರ ಅಪ್ಪನಂತೆ ಬಿಡು ಅಂದುಕೊಳ್ಳಬೇಕು. ಆಫೀಸಿನ ಜನ ಇವ್ರು ಅಷ್ಟೇನು ಒಳ್ಳೆಯವರಲ್ಲ ಬಿಡು ಮಾರಾಯ ಅನ್ನಬೇಕು. ನನಗೆ ನಟಿಸುವುದು ತಪ್ಪುತ್ತದೆ. ನಾನು ನನಗಾಗಿ ಬದುಕಬಹುದು. ಎಷ್ಟೊಂದು ಶ್ರಮದ ಉಳಿತಾಯ.

ಆ ದಿನಗಳು ಬರುತ್ತವೆಯೊ ಏನೊ

ಎಲ್ಲವೂ ಕಾಲದ ಕೈಯಲ್ಲಿದೆ.
ಸರಿ, ತಪ್ಪು
ಕೆಟ್ಟದ್ದು, ಒಳ್ಳೆಯದು ಮನುಷ್ಯನ ಕೈಯಲ್ಲಿಲ್ಲ; ಕಾಲದ ಕೈಯಲ್ಲಿದೆ. ಮನುಷ್ಯ ಕಾಲದ ಶಿಶು..”

ಎಲ್ಲಾ ಪದಗಳನ್ನು ಫಡಫಡಿಸಿ ಡೈರಿಯ ಆ ಪುಟ ಸುಮ್ಮನಾಯಿತು; ನಟ್ಟಿರಳ ಮೌನದಂತೆ.

ಈ ಇರುಳಲ್ಲಿ ಯಾರ ಕನಸಿನಲ್ಲಿ ಯಾರು ಇಣುಕುತ್ತಿದ್ದಾರೊ ಏನೊ..
ಚಂದಿರ ಮೆಲ್ಲಗೆ ಇನ್ನಷ್ಟು ಬೆಳಕಾಗುತ್ತಿದ್ದ ಮೋಡದಿಂದ ತಪ್ಪಿಸಿಕೊಂಡು.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

18 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading