
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.
ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.
ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ.
ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.
3
ಅವನು ಬೋಟಿ ಕಲೀಜ ಮಾಂಸವನ್ನು ಕಚಕಚ ಎಂದು ತುಂಡು ತುಂಡಾಗಿ ಕತ್ತರಿಸಿ ಹಾಕುತ್ತಿದ್ದ. ಕತ್ತರಿಸಿದ ಮಾಂಸವನ್ನು ಗುಡ್ಡೆ ಹಾಕುತ್ತಿದ್ದ. ಹಣೆ ತುಂಬಾ ಬೆವರು, ಕೈ ತುಂಬಾ ರಕ್ತ. ಕೈ, ಮನಸುಗಳಿಗೆ ಒಂಚೂರು ಬಿಡುವು ಮಾಡಿಕೊಂಡು ಒಮ್ಮೆ ತನ್ನ ಮಾಂಸಗಡಿಯಿಂದ ಹೊರಗೆ ಕಣ್ಣು ಹಾಯಿಸಿದ. ಜೋತು ಬಿದ್ದ ಎರಡೆರಡೆ ಮುಂಗುರುಳ ಮಧ್ಯೆ ಅವಳ ಮುಗಿನ ನತ್ತು ಬಿಸಿಲಿಗೆ ಫಳ್ ಎಂದು ಹೊಳೆಯಿತು. ಆ ಎರಡು ಮುಂಗುರುಳು ಅವಳೇ ಸಾಕಿಕೊಂಡ ಒಂದು ಹಿತವಾದ ಬಂಧುವಿನಂತಿದ್ದವು. ಎರಡು ಕ್ಷಣ ಹಾಗೆ ನೋಡಿದ. ಕತ್ತು ಎತ್ತಿ ಒಮ್ಮೆಯಾದರೂ ಅವಳು ತನ್ನ ನೋಡಬಹುದಾ ಅಂತ ಕಾದ. ಇವತ್ತು ಒಮ್ಮೆಯೂ ಕಣ್ಣು ತಾಕಿಲ್ಲವಲ್ಲ ಅಂತ ಚಡಪಡಿಸಿದ. ಮತ್ತೆ ತನ್ನ ಕೆಲಸದಲ್ಲಿ ಮುಳುಗಿ ಹೋದ. ಮತ್ತೆ ಬೆವರು ಮತ್ತು ಕೈತುಂಬಾ ರಕ್ತ.
ಎದುರಿಗೆ ಹೂವುಗಳನ್ನು ಹರಡಿಕೊಂಡು ಕಟ್ಟುತ್ತಾ ಕೂತಿದ್ದಳು ಅವಳು. ಎಷ್ಟೊಂದು ಬಣ್ಣದವು, ಎಷ್ಟೊಂದು ಚೆಂದದವು! ಜೋಡಿ ಜೇನುಗಳು ಹೂವುಗಳ ಮೇಲೆ ಗಸ್ತು ತಿರುಗುತ್ತಾ ಕಿತ್ತು ತಂದ ಹೂವಿನಲ್ಲಿ ಗಂಧಕ್ಕೆ ಮಾರು ಹೋಗುತ್ತಿದ್ದವು. ಅವಳು ಒಂಚೂರು ಬಿಡುವು ಮಾಡಿಕೊಂಡು ಅವನ ಅಂಗಡಿ ಕಡೆ ನೋಡಿದಳು. ಅವನು ಮಾಂಸ ತುಂಡು ಮಾಡುವುದರಲ್ಲೇ ಮುಳುಗಿ ಹೋಗಿದ್ದ. ಬೆವರು ಅವನ ತೋಳಗಳ ಮೇಲೆ ಜಾರುತ್ತಿತ್ತು. ಇವತ್ತು ನನ್ನ ನೋಡಿಯೇ ಇಲ್ಲವಲ್ಲ ಎಂತಹ ಕೊಬ್ಬು ಇವನದು ಅಂದುಕೊಂಡು ಮತ್ತೆ ಹೂವುಗಳ ಮಧ್ಯೆ ಮುಳುಗಿ ಹೋದಳು.
ಅವನ ಕೈಯಲ್ಲಿ ಹಸಿ ರಕ್ತ, ಇವಳ ಕೈಯಲ್ಲಿ ಬಿಸಿ ಹೂಗಳ ಘಮ.
ರಕ್ತ ಮತ್ತು ಹೂ ಸೇರಬಲ್ಲದೆ ಅಂತ ಒಮ್ಮೊಮ್ಮೆ ಇಬ್ಬರೂ ತಮ್ಮ ತಮ್ಮಲ್ಲೆ ಅಂದುಕೊಂಡು ಸುಮ್ಮನಾಗಿದ್ದರು ಕಣ್ಣುಗಳಿಗೆ ಮಾತ್ರ ಯಾವ ವಿರಾಮವನ್ನು ಕೊಟ್ಟಿರಲಿಲ್ಲ. ಅವನಿಗೆ ಅವಳ ಮೇಲೆ ಒಲವು; ಅವಳಿಗೆ ಅವನ ಮೇಲೆ ಪ್ರಾಣ.

ಹೂ ಕೊಂಡವರು ಯಾರೂ ಮಾಂಸದಂಗಡಿಗೆ ಹೋಗುತ್ತಿರಲಿಲ್ಲ. ಮಾಂಸ ಕೊಂಡವರು ಹೂವಿನ ಅಂಗಡಿಗೆ ಬರುತ್ತಿರಲಿಲ್ಲ. ಎರಡು ದಡಗಳೇ ಆದ ಇವರಿಬ್ಬರೂ ಸೇರುವುದ್ಹೇಗೆ..? ನಡುವೆ ಆಯಸ್ಸಿನ ದಿನಬೆಳಗು ಹರಿಯುತ್ತಲೆ ಇತ್ತು.
ಯಾರಾದರೂ ಮಾಂಸಕೊಂಡವನು ಹೂ ಖರೀದಿಸಿದ ದಿನ ನಾನು ನನ್ನ ಪ್ರೀತಿ ಹೇಳಿಕೊಂಡು ಬಿಡುವೆ ಅಂದುಕೊಂಡಳು ಆಕೆ.
ಹೂ ಖರೀದಿಸಿದವನು ಮಾಂಸವನ್ನೂ ಖರೀದಿಸಿದ ದಿನ ನನ್ನ ಪ್ರೀತಿಯನು ಅವಳು ಒಪ್ಪಿಕೊಂಡಂತೆ ಅಂದುಕೊಂಡ ಅವನು.
ಒಂದು ದಿನ ಒಬ್ಬ ಮಾಂಸ ಖರೀದಿಸಿ ಅಂಗಡಿಯವನ ಬಳಿ ಹೂ ಸಿಗುತ್ತಾ ಇಲ್ಲಿ ಎಲ್ಲಾದರೂ ಅಂತ ಕೇಳಿದ. ಆ ಪ್ರಶ್ನೆ ಕೇಳಿ ಅವನ ರೋಮಗಳು ಎದ್ದು ನಿಂತವು. ಅರೇ ಆ ದಿನ ಬಂದೆ ಬಿಡ್ತಲ್ಲ ಅಂತ ರೋಮಾಂಚಿತನಾದ. ಅವನು ಅವಳ ಅಂಗಡಿ ತೋರಿಸಬೇಕು ಬೇಡವೊ ಅಂತ ಯೋಚಿಸುತ್ತಾ ದ್ವಂದ್ವದಲ್ಲಿ ಬಿದ್ದ. ಸುಮ್ಮನೆ ಅವಳ ಅಂಗಡಿ ಕಡೆ ಒಮ್ಮೆ ನೋಡಿದ. ಅವಳು ಕೈಯಲ್ಲಿ ಹೂ ಹಿಡಿದ ಗ್ರಾಹಕನಿಗೆ ಮಾಂಸದಂಗಡಿ ತೋರಿಸುತ್ತಿದ್ದಳು.
ಇಬ್ಬರ ಕಣ್ಣು ಒಮ್ಮೆಲೆ ತಾಕಿದವು.
ಮೊದಲು ನಕ್ಕಿದ್ದು ಯಾರು?
| ಇನ್ನು ಮುಂದಿನ ವಾರಕ್ಕೆ |






Sooperr…. ಕವನದ ಥರ ಇದೆ