ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ್ ಸೊರಟೂರು ಕಥಾ ಅಂಕಣ – ಸಾವಿನ ಮಡಿಲಲಿ ಪ್ರೀತಿಯ ಜೋಗುಳ..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

19

ಬಂದವರೇ ಇಬ್ಬರೂ ಜಿಗಿದಿದ್ದರೆ ಇಷ್ಟೊತ್ತಿಗಾಗಲೇ ದೇಹಗಳು ಯಾವುದೋ ಬಂಡೆಯ ಮರೆಯಲ್ಲಿ ತೇಲುತ್ತಿರುತ್ತಿದ್ದವು. ಇಬ್ಬರೂ ಮಾತು ಕೊಂದು ಕೂತಿದ್ದರು. ಅವಳ ತಲೆಯನ್ನು ಹೊತ್ತ ಅವನ ಭುಜ ಅವಳನ್ನು ಸಂತೈಸಲು ಆಗದೆ, ಕೈ ಚೆಲ್ಲಲು ಆಗದೆ ಒದ್ದಾಡುತ್ತಿತ್ತು. ಬೆಳಗಿನ ಹೊತ್ತಿಗೆ ಬಂದವರು ಅಲ್ಲೇ ಗೆಸ್ಟ್ ಹೌಸ್ ಮುಂದಿನ ಹಾಸುಗಲ್ಲಿನ ಮೇಲೆ ಕೂತೇ ಇದ್ದರು. ಅವನು ಕಟ್ಟಿಸಿಕೊಂಡು ಬಂದಿದ್ದ ಎರಡು ಇಡ್ಲಿಯ ಪೊಟ್ಟಣ ಇನ್ನು ದಾರವನ್ನು ಕಳಚಿಕೊಳ್ಳದೆ ಕೂತಿತ್ತು. ಮೋಡಗಳು ಅಡ್ಡಗಟ್ಟಿ ಸೂರ್ಯನ ಬೆಳಕಿಗೆ ದಿಕ್ಕಾರ ಕೂಗಿದ್ದವು. ಸಣ್ಣ ಹನಿಗಳು ಗಾಳಿಯೊಂದಿಗೆ ಚೆನ್ನಾಗಿಯೇ ಹೊಂದಿಕೊಂಡು ಕುಲಕುತಿದ್ದವು!

ಅವರ ಮುಖಗಳನ್ನು ನೋಡುತ್ತಿದ್ದರೆ ನಿನ್ನೆ ರಾತ್ರಿ ಬಸ್ ಹತ್ತುವಾಗ ಇದ್ದ ವೇಗ ಕಡಿಮೆಯಾಗಿದೆ ಅನಿಸುತ್ತಿತ್ತು. ಬಸ್ಸಿಳಿದ ಹತ್ತು ನಿಮಿಷಕ್ಕೆ ಕೊನೆಯ ಮಾತು ಮುಗಿಸಿದ್ದರೆ ಕಥೆ ಈಗಲೇ ಪೂರ್ಣ ವಿರಾಮ ಸಿಗುತ್ತಿತ್ತು. ಮಾತುಗಳಾದರೂ ಚಲಾವಣೆಯಲ್ಲಿದ್ದಿದ್ದರೆ ಕನಿಷ್ಠ ಒಂದು ತೆಳು ತೆಳುವಾದ ನಿರ್ಧಾರವಾದರೂ ಸಾಧ್ಯವಾಗುತ್ತಿತ್ತೇನೋ? ಆದರೆ ಈವರೆಗೂ ಯಾವುದು, ಏನು ಕೂಡ ಆಗದೆ ಮುಕ್ಕಾಲು ಪಾಲು ದಿನ ಮುಗಿದಿತ್ತು. ಅವಳ ಕೈ ಹಿಡಿದು ಜೋರಾಗಿ ನಡೆಸಿಕೊಂಡು ಬಂದವನ ತೇಗು ಇಳಿದಿತ್ತು. ಊರಿನಲ್ಲಿ ಈಗಾಗಲೇ ವಿಚಿತ್ರ ಸುದ್ದಿ ಹಬ್ಬುತ್ತಿರುತ್ತವೆ. “ಅವನು ಓಡ್ಸಿಕೊಂಡು ಹೋದ್ನಂತೆ” “ಅಯ್ಯೋ ಓಡಿ ಹೋದ್ಲಂತೆ” “ನೋಡೋಕೆ ಮಳ್ಳಿಹಂಗೆ ಇದ್ರು ನೋಡು ಎಂತಹ ಕೆಲಸ ಮಾಡಿದ್ದಾಳೆ” “ಅವನೇನು ಹುಡುಗ ಇವಳಿಗಾದರೂ ಗೊತ್ತಾಗಬಾರ್ದ?” “ತಪ್ಪೇನಿದೆ ಇಷ್ಟ ಪಟ್ಟಿದ್ದಾರೆ ನಿಮ್ ಕಾಟ ತಡೆಯೋಕಾಗದೆ ಎಲ್ಲೋ ಒಂದು ಕಡೆ ಬದುಕಿಕೊಳ್ಳೋಕೆ ಹೋಗಿದ್ದಾರೆ ಬಿಡಿ”.. ಹೀಗೆ ಒಬ್ಬೊಬ್ಬರು ಒಂದೊಂದು ಷರಾ ಬರೆಯುತ್ತಿರುತ್ತಾರೆ. ಹುಡುಗಿ ತಾಯಿ ‘ಅವಳು ನನ್ನ ಮಗಳೆ ಅಲ್ಲ” ಅಂತ ಕೂಗಾಡುತ್ತಿದ್ದಾರೆ, ಹುಡುಗನ ತಂದೆ “ನನ್ನ ಮಗನ ತಲೆ ಕೆಡಿಸಿ ಬುಟ್ಟಿಗೆ ಹಾಕೊಂಡ್ಳು” ಅಂತ ಕೂಗಿ ಕೂಗಿ ಬೈಯುತ್ತಿರುತ್ತಾನೆ. ಊರಿಗೆ ಊರೇ ಮನರಂಜನೆ ಸ್ವೀಕರಿಸಿ ತೇಲುತ್ತಿರುತ್ತದೆ.

ಭುಜವನ್ನು ಅಲುಗಿಸಿ ಅವಳ ತಲೆ ಎಬ್ಬಿಸಿ ಮುಖವನ್ನೊಮ್ಮೆ ನೋಡಿದ. ಕಣ್ಣುಗಳು ಕೆಂಪಾಗಿದ್ದವು. ಕಣ್ಣೀರು ಖಾಲಿಯಾದ ಲಕ್ಷಣವಿತ್ತು. ಯಾವ ಕಾರಣಕ್ಕೆ? ಮನೆಯ ನೆನಪಿಗೊ, ಅಂಗೈಯಲ್ಲಿರುವ ಸಾವಿಗಾ? ಅಥವಾ ಪ್ರೀತಿಸಿ ಕೊಂಡು ಮನೆ ಬಿಟ್ಟೆ ಎಂಬ ತಪ್ಪಿಗಾ? ಆತ ತುಂಬಾ ಗೊಂದಲದಲ್ಲಿ ಬಿದ್ದ. ಅವಳ ಕೆಂಪು ಕಣ್ಣುಗಳು ಅವನನ್ನು ನೋಡುತ್ತಲೇ ಇದ್ದವು. ಅವನು ಶಾಲೆಗೆ ಹೊರಟ ಮಗುವಿನ ಮುಖವನ್ನು ನೋಡುವ ಅಮ್ಮನ ತರಹ ನೋಡಿದ. ಕಿರಾಣಿ ಅಂಗಡಿಯಲ್ಲಿ ಕೂತ ನನ್ನನ್ನು ಕದ್ದು ಕದ್ದು ನೋಡುತ್ತಿದ್ದ ಕಣ್ಣುಗಳು ಇವೆನಾ? ಅನ್ನುವ ಅನುಮಾನದಿಂದ ನೋಡಿದ. “ಅಂಗಡಿಯಲ್ಲಿ ಕೂತು ಕೂತು ಎದುರು ಮನೆ ಹುಡುಗಿಯನ್ನು ಪಟಾಯಿಸಿ ಬಿಟ್ಟಲ್ಲೊ” ಅನ್ನುವ ಗೆಳೆಯರ ಮಾತುಗಳು ಅವನಿಗೆ ಖುಷಿ ಕೊಟ್ಟಿದ್ದು, ಕೆಲವೊಮ್ಮೆ ಕಿರಿಕಿರಿ ಅನಿಸಿದ್ದುಂಟು. “ಆಯ್ತು” ಅನ್ನೋಕೆ ಮುನ್ನೂರು ಅರವತ್ತೈದು ದಿನಗಳಿಗಿಂತ ಹೆಚ್ಚಿನ ದಿನಗಳನ್ನು ತೆಗೆದುಕೊಂಡ ಪುಣ್ಯಾತ್ಗಿತ್ತಿ ಇವಳು. ಇವಳ ಚೆಂದ, ಬೆಳಗಿನ ಹೊತ್ತಿಗೆ ಹಾಕುತ್ತಿದ್ದ ಹದಿನಾರು ಚುಕ್ಕಿಗಳ ರಂಗೋಲಿ, ಮುಡಿ ಸ್ನಾನ, ಹಸಿ ಹೆರಳು, ಅದನ್ನು ತಬ್ಬಿ ಹಿಡಿದ ಟವಲು, ಅವಳ ಕೈ ತಗುಲಿಸಿಕೊಂಡು ಹೊತ್ತಿ ಕೊಳ್ಳುತ್ತಿದ್ದ ತುಳಸಿ ಗಿಡದ ಹಣತೆ ಇವೆಲ್ಲವನ್ನು ಬಗೆಬಗೆದು ತುಂಬಿಕೊಂಡು, ಕಡೆದು ಕಡೆದು ಪ್ರೀತಿಯ ಬೆಣ್ಣೆಯ ತೇಲಿಸಿಕೊಂಡಿದ್ದ.

ಅವನು ನೆಟ್ಟಿದ್ದ ದೃಷ್ಟಿಗೆ ಸೋತು ಮುಖ ಕಲಿಸಿದಳು. ಮುಖ ಈಗ ನೆಲ ನೋಡುತ್ತಿತ್ತು. ನಾನೇಕೆ ಇವನನ್ನು ಇಷ್ಟು ಇಷ್ಟಪಟ್ಟೆ ಎಂಬ ಅವಳ ಪ್ರಶ್ನೆಗೆ ಇದುವರೆಗೂ ಉತ್ತರವೇ ಸಿಕ್ಕಿಲ್ಲ. ನನಗೂ ಒಬ್ಬ ಗೆಳೆಯ ಬೇಕು ಎಂಬ ಒಂದೇ ಒಂದು ಒಳ ತುಳಿತಕ್ಕಾ? ಅವನ ಕುರುಚಲು ಗಡ್ಡದ ಚಂದಕ್ಕಾ? ವರ್ಷವಿಡಿ ತನಗಾಗಿ ತಪಸ್ಸಿಗೆ ಕೂತ ಪರಿಗಾ? ಇವುಗಳಲ್ಲಿ ಯಾವುದಕ್ಕೆ ಎಂಬುದು ಅವಳಿಗೆ ಗೊತ್ತಿಲ್ಲ. ತಂದೆ ಇಲ್ಲದ ಹುಡುಗಿಯೊಬ್ಬಳು ಹೀಗೆ ಪ್ರೀತಿಗೆ ಬಲು ಬೇಗ ಬಿದ್ದು ಹೋಗುತ್ತಾಳೆ, ಪ್ರೀತಿಯನ್ನು ಹುಡುಕಿಕೊಂಡು ಹೊರಡುತ್ತಾಳೆ ಅಂತ ಎಲ್ಲೋ ಓದಿಕೊಂಡಿದ್ದ ಸಾಲುಗಳಲ್ಲಿ ಅವಳಿಗೆ ಸಮ್ಮತವಿರಲಿಲ್ಲ.

ಅವನು ಸುಮ್ಮನೆ ಎದ್ದು ನಡೆದ. ಬೆಳಗ್ಗೆಯಿಂದ ಕೂತೇ ಇದ್ದ ಅವರಿಬ್ಬರಲ್ಲಿ ಈ ಕದಲಿಕೆ ಬೆವರು ಕಿತ್ತು ಬರುವ ಬರುವ ಸಮಯದಲ್ಲಿ ಸಣ್ಣಗೊಂದು ಗಾಳಿ ಬೀಸಿದಂತಾಯ್ತು. ಅವಳು ಅವನ ಕಡೆ ತಿರುಗಿ ನೋಡಿದಳು. ಎರಡು ಗ್ಲಾಸುಗಳಲ್ಲಿ ಚಹಾ ಹಿಡಿದು ಬರುತ್ತಿದ್ದ. ಅವಳ ಮುಂದೆ ನಿಂತು ಅವಳ ಕೈಗೊಂದು ಗ್ಲಾಸ್ ಇಟ್ಟು ತಾನು ಕೂಡ ಒಂದನ್ನು ಹಿಡಿದುಕೊಂಡ. ಕಾಕತಾಳಿಯವೆಂಬಂತೆ ಇಬ್ಬರು ಒಂದೇ ಬಾರಿಗೆ ಗುಟುಕೇರಿಸಿದರು. ಮಾತುಗಳು ಹುಟ್ಟಲಿಲ್ಲ. ಧುಮ್ಮಿಕ್ಕುವ ಜಲಪಾತದ ಎದುರಿಗೆ ನಿಂತಿದ್ದವೆಲ್ಲವೂ ಒಂದೊಂದು ಸಂಸಾರ! ‘ಅವನು ಮತ್ತು ಅವಳು’ದು. ಮದುವೆ ಮುಂದಿಟ್ಟುಕೊಂಡು ತೋಳು ಬೆಸೆಯಲು ಬಂದ ಅವನು ಅವಳು, ಮದುವೆಯಾದ ಮೊದಲ ವಾರವೇ ಬಂದು ನಿಂತು ಚಳಿಗೆ ಒತ್ತಿಕೊಂಡು ಕೂತ ಅವನು ಅವಳು, ತಮ್ಮ ಮೊದಲ ವರ್ಷದ ಪಾಪುವಿಗೆ ಮೈ ತುಂಬಾ ಸ್ವೆಟರ್ ತೋಡಿಸಿಕೊಂಡು ಬಂದು ಕೂತ ಅವನು ಮತ್ತು ಅವಳು. ಅಲ್ಲಿಂದಿಲ್ಲಿಗೆ ಕುಣಿಯುತ್ತ ಸಾಗುವ ಏಳೆಂಟು ವರ್ಷದ ಮಕ್ಕಳೊಂದಿಗೆ ಬಂದ ಅವನು ಮತ್ತು ಅವಳು. ಮಗ ಸೊಸೆ ಮೊಮ್ಮಕ್ಕಳೊಂದಿಗೆ ಬಂದ ಅವನು ಮತ್ತು ಅವಳು. ಈ ಎಲ್ಲವೂ ‘ಅವನು ಮತ್ತು ಅವಳು’ ಬೆರಳುಗಳ ಖಾಲಿ ಜಾಗಗಳನ್ನು ಪರಸ್ಪರ ತುಂಬಿಕೊಂಡ ಕಾರಣಕ್ಕಷ್ಟೇ ಸಾಧ್ಯವಾಗಿದೆ ಏನೋ ಅನಿಸಿತು. ಇಬ್ಬರಿಗೂ ಅದೇ ವಿಚಾರಗಳು ಮನಸ್ಸಿನಲ್ಲಿ ಎದ್ದಿದ್ದವಾ? ಗೊತ್ತಿಲ್ಲ! ಆದರೆ ಇಬ್ಬರೂ ಚಹಾ ಮುಗಿಸಿ ಮೊದಲೇ ಮಾತನಾಡಿಕೊಂಡವರಂತೆ ಮುಖ ಮುಖ ನೋಡಿಕೊಂಡರು.

ಇನ್ನೆರಡು ಗಂಟೆಯಲ್ಲಿ ನಾವು ಶವಗಳಾಗಬೇಕು ಎಂಬುದನ್ನು ಕಣ್ಣಿನಲ್ಲಿ ಮಾತನಾಡಿಕೊಂಡಂತಿತ್ತು. ಮನೆಯಲ್ಲಿ ಒಪ್ಪುವ, ಪ್ರೀತಿ ಬದುಕಿಸುವ, ತಮ್ಮ ಪಾಡಿಗೆ ಬಿಡುವ ಸಾಧ್ಯತೆಗಳಿಲ್ಲ ಎಂಬುದನ್ನು ಅವರು ಅಂದೆಂದೋ ಮಾತಾಡಿಕೊಂಡು ನಿನ್ನೆ ರಾತ್ರಿಯ ವೇಳೆಗೆ ಬ್ಯಾಗು ಕೂಡ ಇಲ್ಲದೆ ಮರೆಯಲ್ಲಿ ನಿಂತು ಬಸ್ ಹತ್ತಿ ಜೋಗದ ಹಸಿರ ಮಧ್ಯೆ ಬಂದು ನಿಂತಿದ್ದರು. ಗುಂಡಿಗೆ ಧುಮುಕಿಕೊಂಡು ಸತ್ತು ಪ್ರೀತಿಯನ್ನು ಉಳಿಸಿಕೊಳ್ಳಬೇಕು ಅಂದುಕೊಂಡಿದ್ದರು. ಜೋಗ ತಲುಪುವ ವೇಳೆಗೆ ಆಗಲೇ ಬೆಳಕಾದ ಕಾರಣಕ್ಕೆ ಪ್ರೀತಿ ಉಳಿಸುವ ಕಾರ್ಯವನ್ನು ರಾತ್ರಿಗೆ ಮುಂದೂಡಿದ್ದರು. ಮಾತುಗಳನ್ನು ಕೊಂದುಕೊಂಡ ಆ ದಿನ ಬರಿ ಸ್ವಗತದಲ್ಲಿ ಕಳೆದು ಹೋಯಿತು. ಹಾರುವ ಜಾಗವೊಂದು ನಿಶ್ಚಯವಾಗಬೇಕಿತ್ತು. ಅವನು ಎದ್ದು ನಿಂತು ಸುತ್ತಲೂ ಕಣ್ಣು ಹಾಯಿಸಿದ. ಅವಳು ಕೂಡ ಅಲ್ಲಲ್ಲಿ ಕಣ್ಣು ಹಾಯಿಸಿ ಸಾಥ್ ಕೊಟ್ಟಳು. ಬೀಳುವುದೇ ನಿಜವಾಗಿರುವಾಗ ಯಾವುದಾದರೇನು ಅಂದುಕೊಂಡು ಮತ್ತೆ ಸುಮ್ಮನೆ ಕೂತರು.

ಇಂದು ಸೂರ್ಯ ನೆಲವನ್ನು ಇಣುಕದಿದ್ದರು ಸಂಜೆ ಬಂದು ನಿಂತಿತ್ತು. ಮತ್ತಷ್ಟು ಮೋಡಗಳು ಬಂದು ಸೇರಿದವು. ದೂರದಲ್ಲಿ ಜೀರುಂಡೆಗಳು ತಮ್ಮ ಡ್ಯೂಟಿ ಆರಂಭಿಸಿದವು. ಗಾಳಿಗೊಂದು ಎಕ್ಸ್ಟ್ರಾ ತಂಪು ವಕ್ಕರಿಸಿ ಮತ್ತಷ್ಟು ಚಳಿ ಆಯಿತು. ಸಂಜೆಗೆ ಅವಸರ ಹೆಚ್ಚು. ನೋಡುನೋಡುತ್ತಲೇ ಕತ್ತಲು ಎಗರಿಬಿಟ್ಟಿತು.

“ಅನುಪ್, ಗುಂಡಿಗೆ ಇಳಿಯುವ ಆಸೆ. ನೀರು ಬೀಳುವ ಜಾಗದಲ್ಲಿ ನಿನ್ನ ತಬ್ಬಿಕೊಂಡು ಕಣ್ಮುಚ್ಚಿಕೊಳ್ತೀನಿ” ಅಂದಳು ಕನ್ನಿಕಾ. ಈ ದಿನಕ್ಕೆ ಉದುರಿದ ಮೊದಲ ಮಾತವಳದು.
“ಇಷ್ಟೊತ್ತಲ್ಲಾ…” ಅನ್ನುವ ಮಾತು ಬಾಯಲ್ಲಿ ಬಂದರು ನುಂಗಿಕೊಂಡ. ಸಾವು ಜೇಬಿನಲ್ಲಿಟ್ಟುಕೊಂಡು ಬಂದಿರುವ ನಮಗೆ ಯಾವ ಹೊತ್ತಾದರೂ ಏನು!? ಅಂದುಕೊಂಡು ಸುಮ್ಮನೆ ಎದ್ದು ಅವಳ ಕೈ ಹಿಡಿದುಕೊಂಡ. “ಯಾವತ್ತು ಕೂಡ ನಿನ್ನ ಆಸೆಯೇ ನನ್ನ ಆಸೆ” ಅಂದವನು ಅವಳ ಹೆಜ್ಜೆ ಕದಲುವಿಕೆಗೆ ಕಾದ. ಅವಳು ಅವನನ್ನು ಬಿಗಿಯಾಗಿ ತಬ್ಬಿಕೊಂಡಳು. ಬಿಕ್ಕಿ ಬಿಕ್ಕಿ ಅತ್ತು ಬಿಟ್ಟಳು. ಅವನ ಕಣ್ಣಲ್ಲಿ ನೀರಿತ್ತು. ಅವಳನ್ನು ಅಳಲು ಬಿಟ್ಟು ಸುಮ್ಮನೆ ನಿಂತ. ಎಷ್ಟೊ ಹೊತ್ತಿನ ಬಳಿಕ ಗುಂಡಿ ಇಳಿಯುವ ಜಾಗಕ್ಕೆ ಬಂದು ನಿಂತರು.

ಜಗತ್ತು ಉಂಡು ಮೈಮೇಲೆ ರಗ್ಗು ಎಳೆದುಕೊಳ್ಳುತ್ತಿರುವಾಗ ಇವರು ಜೋಗದ ಗುಂಡಿ ಇಳಿಯಲು ಅದರ ದಾರಿ ಬಳಿ ಬಂದು ನಿಂತರು. ಜಗತ್ತಿನಿಂದ ಸದ್ದಿಲ್ಲದೆ ಎದ್ದು ಹೋಗುವ ಹುನ್ನಾರು ಹೂಡಿದ್ದರು. ಗವ್ವೆನ್ನುವ ಕತ್ತಲು. ಇಬ್ಬರ ಚರ್ಮವನ್ನು ನೆಕ್ಕುತ್ತಿದ್ದ ಚಳಿ. ಮಿಣುಕು ಹುಳಗಳ ಸಹಾಯ ಸಹ ಇರಲಿಲ್ಲ. ದೂರದಲ್ಲಿ ನೀರು ಧುಮ್ಮಿಕ್ಕುವ ಸದ್ದು ಮಾತ್ರ ಇವರ ಎದೆಯ ಬಡಿತಕ್ಕೆ ಜೊತೆಯಾಗಿತ್ತು. ಕತ್ತಲೆಯನ್ನು ಸೀಳಿ ಹೊರಡಲು ಅನುವಾದರು. ಬೆಳಕಿನ ಕಣ್ಣಲ್ಲೂ ಇಳಿಯಲು ತಡಕಾಡುವ ದಾರಿಯಲ್ಲಿ ರಾತ್ರಿ ಇಳಿಯಲು ಹೊರಟಿದ್ದರು. ಅವರ ಬಳಿ ಇದ್ದಿದ್ದು ಪ್ರೀತಿ ಮತ್ತು ಸಾವು. ಅಲ್ಲೇನು ಮೆಟ್ಟಿಲುಗಳಿಲ್ಲ. ಗುಡ್ಡದಲ್ಲಿ ಕೆದರಿ ಕೆದರಿ ಗೆಬರಿದಂತೆ ಮಾಡಿದ ಹಾದಿ ಸುಲಭವೇನೂ ಇಲ್ಲ. ನೂರಾರು ಮೀಟರ್ ಆಳವನ್ನು ದಾರಿಯಿಲ್ಲದ ಹಾದಿಯ ಇಳಿಜಾರಿನಲ್ಲಿ ಸಾಗಬೇಕು. ಅವನು ಮೊದಲ ಹೆಜ್ಜೆ ಇಟ್ಟ. ಹೆಜ್ಜೆಗಳನ್ನು ಇಟ್ಟು ಇಟ್ಟು ಪರೀಕ್ಷಿಸಿ ನಂತರ ಅವಳ ಹೆಜ್ಜೆ ಇಡಿಸುತ್ತಿದ್ದ. ನಂತರ ಮುಂದಿನ ಹೆಜ್ಜೆಗಳು. ಕತ್ತಲ ರಾತ್ರಿಯಲ್ಲಿ ವಿಚಿತ್ರ ನಡೆವೊಂದಕ್ಕೆ ತೆರೆದುಕೊಂಡಿದ್ದರು. ಮಾತಿಲ್ಲದೆ ಹೀಗೆ ಸಾಗುತ್ತಿರುವಾಗ ಆಕೆ ಮೆಲ್ಲನೆ ನಕ್ಕ ಸದ್ದು ಕೇಳಿಸಿತು. ಅವನ ಕಿವಿಗಳು ಅರಳಿದವು.

“ನಾವು ಹೀಗೆ ಸಾಗಿದರೆ ನಾಳೆ ಸಂಜೆಗೇ ಗುಂಡಿ ಮುಟ್ಟಬಹುದು…” ಅಂದಳು. ಅವನ ಮುಖದಲ್ಲಿ ನಗುವಿತ್ತು. ಇನ್ನೂ ಮತ್ಯಾವ ಭಾವವಿತ್ತೊ ಹೇಳಲು ಕತ್ತಲು ಅಡ್ಡವಿತ್ತು.

“ನಾನು ಎತ್ತಿಕೊಂಡು ಬಂದ ಹೂವು ನೀನು. ನಿರ್ದಯಿ ಕಾಡಿನ ತುಣುಕುಗಳು ನಿನ್ನ ಪಕಳೆಗಳನ್ನು ಹಿಂಜಿದರೆ ನನ್ನನ್ನು ಹೇಡಿ ಎಂಬಂತೆ ಈ ರಾತ್ರಿ ನೋಡುತ್ತದೆ. ನನಗೆ ಜಗತ್ತು, ಬದುಕು ಅಂದ್ರೆ ಅದು ನೀನು ಮಾತ್ರ. ನನಗೆ ನನ್ನ ಬದುಕನ್ನು ನಾನೇ ಕೈಯಿಡಿದು ನಡೆಸುತ್ತಿರುವುದು ಖುಷಿ. ನಿನ್ನ ಸೇವೆಗೆ ಸಿಕ್ಕ ಕೊನೆಯ ದಿನ, ಕೊನೆಯ ಕ್ಷಣವಿದು” ಅನ್ನುತ್ತ ಮೌನಿಯಾದ. ಕತ್ತಲೆಯಲ್ಲಿ ತಡಕಾಡಿ ಅವನ ಕೈ ಹಿಡಿದು ಅದುಮಿದಳು ಕನ್ನಿಕಾ. ಬಹುಶಃ ಅವಳ ಕಣ್ಣಲ್ಲಿ ನೀರು ಇರಬೇಕು.

ಮತ್ತೆ ಎದ್ದು ಹೊರಟರು. ಒಂದೇ ಒಂದು ಮಾತು ಕೂಡ ಆಡದೆ ನಡೆಯ ಹತ್ತಿದಳು. ದಾರಿಯ ಕಡೆ ನಡೆದು ಬರಲು ಹೊರಟಿದ್ದ ಹಾವೊಂದು ಅವನು ಅವಳ ಕೈ ಹಿಡಿದುಕೊಂಡಿದ್ದ ಹಿಡಿತವನ್ನು ಕಂಡೆ ಪಾಪ ಅನ್ನುವಂತೆ ದಾರಿ ಬದಲಿಸಿಕೊಂಡು ಹೊರಟುಹೋಯಿತು. ತಳ ತಲುಪಿಯಾದಾಗ ಗಡಿಯಾರ ನಾಲ್ಕು ಗಂಟೆ ತೋರಿಸುತ್ತಿತ್ತೇನೊ! ಕನ್ನಿಕಾಗೆ ಸುಸ್ತು. ಅವನಿಗೆ ಬೆವರಿರಲಿಲ್ಲ! ಕತ್ತಲಿಗೆ ಏನೊಂದು ಕಾಣದೆ ನೀರಿನ ಬುಡ ಹುಡುಕಿ ಕೂತರು.

“ಅನುಪ್, ಯಾವ ಪ್ರೇಮಿಗೆ ಇಂಥದೊಂದು ದಿನ ಸಿಗಲ್ಲ, ಇಂಥದೊಂದು ರಾತ್ರಿಯೂ ಸಿಗಲ್ಲ, ಇಂಥದೊಂದು ಸಾವು ಕೂಡ!. ಅವನ ಹೆಗಲ ಮೇಲೆ ಒರಗಿದಳು ಕನ್ನಿಕಾ. ಕೊನೆಯದಾಗಿ ಅನ್ನುವಂತೆ ಅವಳ ಹಣೆಗೆ ಮುತ್ತಿಟ್ಟ ಅನುಪ್. ಒಂದಿಷ್ಟು ಹೊತ್ತು ನೀರಿನೊಂದಿಗೆ ಜಾರಿ ಹೋಯಿತು ಸಮಯ.

“ಅನುಪ್, ನೀನು ಇಷ್ಟೊಂದು ಪ್ರೀತಿಸುವಾಗ ನಾವೇಕೆ ಹೇಡಿಗಳಂತೆ, ಅನಾಥರಂತೆ ಸಾಯಬೇಕು!? ಕನ್ನಿಕಾಗಳ ಬಾಯಿಂದ ಮಾತೊಂದು ಹೊರಬಿತ್ತು. ಅನುಪ್ ನ ಮನಸ್ಸಿನಲ್ಲಿ ಮಧ್ಯಾಹ್ನದಿಂದ ಮೊಗ್ಗಾಗಿದ್ದು ಭಾವವೊಂದು ಕನ್ನಿಕಾಗಳ ಬಾಯಿಂದ ಹೂವಾಗಿ ಅರಳಿತು.

“ನನ್ನ ಪ್ರತಿ ಹೆಜ್ಜೆಗೂ ಇಷ್ಟೊಂದು ಕಾಳಜಿ ವಹಿಸುವ ನೀನು, ನಿನ್ನ ಪ್ರೀತಿ ಇರುವಾಗ ಯಾಕೋ ಸಾವು ಬೇಡವೆನಿಸುತ್ತದೆ. ಸತ್ತು ನಾಳೆ ಇನ್ನೆಲ್ಲೋ ಹುಟ್ಟಿದಾಗ ಮತ್ಯಾರೊ ನನಗೆ ಜೊತೆ ಆಗಬಹುದು. ನೀನೆ ಸಿಗುತ್ತಿ ಅನ್ನುವುದಕ್ಕೆ ಗ್ಯಾರೆಂಟಿ ಏನು? ಈ ಜಗತ್ತಿಗೆ ನೀವು ಬೇಡ ಸಾಕು ಹೋಗಿ ಅನ್ನುವವರೆಗೂ ಬದುಕೋಣ. ಊರು, ಜನ, ಮಾತು, ಅವರ ನೋಟಗಳಿಂದ ತಪ್ಪಿಸಿಕೊಂಡು ಬಂದಾಗಿದೆ. ನೋಡಿ ನಾವು ಬರೀ ಪ್ರೀತಿ ಒಂದನ್ನೇ ಉಂಡು ಎಷ್ಟು ಚೆನ್ನಾಗಿದ್ದೀವಿ ಅಂತ ತೋರಿಸುವ ದಿನ ಬಂದೇ ಬರುತ್ತೆ ಅವತ್ತು ಊರ ಕಡೆ ಹೋಗೋಣ” ಕನ್ನಿಕಾಳ ನಿರ್ಧಾರ ಸ್ಪಷ್ಟವಾಗಿತ್ತು.

ಗಂಡಸಿನ ಪಾಲಿಗೆ ಒಂದಿಡಿಯಷ್ಟು ಸ್ವಚ್ಛ ಪ್ರೀತಿ ಸಿಕ್ಕರೆ ಸಾಕು ಜಗತ್ತಿನ ಎದುರು ಬೇಕಾದರೆ ಹೋರಾಡಲು ನಿಲ್ಲುತ್ತಾನೆ. ಅವಳ ಮಾತು ಭರವಸೆ ಮೂಡಿಸಿತು ಅವನಿಗೆ. ನಾಲ್ಕರ ಚಳಿಯಲ್ಲಿ ಅವನಿಗೆ ಬೆಚ್ಚಗಿನ ವಾತಾವರಣ. ಗಂಟಲು ತುಂಬಿತ್ತು. ಸುಮ್ಮನೆ ಅವಳನ್ನು ತಬ್ಬಿಕೊಂಡು ಕೂತ. ಅದೆಷ್ಟು ಹೊತ್ತು ಹಾಗೆ ಕೂತನೊ ಗೊತ್ತಿಲ್ಲ.

“ಇನ್ನು ನೀನು ಕನಸುಗಳನ್ನು ಕಟ್ಟು, ನಾನು ನೀರೆರೆಯುತ್ತೇನೆ. ನಾವು ಇಲ್ಲಿಗೆ ಮತ್ತೆ ನಮ್ಮ ಮಕ್ಕಳೊಂದಿಗೆ ಬರೋಣ” ಅಂದ ಅನುಪ್.

ಅವಳು ಅಪ್ಪುಗೆ ಬಿಗಿಯಾಯ್ತು.

ಅತ್ತ ಬೆಳಕು ಮೂಡಿತು; ಇತ್ತ ಇವರ ಪ್ರೀತಿಯಲ್ಲೂ…

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

3 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading