
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.
ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.
ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ.
ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.
14
ಶರಣಪ್ಪನು ನಾಟಕದಲ್ಲಿ ಹೀರೋ ಪಾರ್ಟು ಹಾಕುತ್ತಾನೆ ಅನ್ನುವ ಸುದ್ದಿ ಊರಿನ ಜಾತ್ರೆಯಷ್ಟೇ ರಂಗಾಗಿತ್ತು. ಅವನು ಒಮ್ಮೆ ಕಪ್ಪು ಕನ್ನಡಕ ಹಾಕಿ ನಾಯಕಿ ಕೈಹಿಡಿದು ಅವಳನ್ನು ತಿರುಗಿಸಿದ ಅಂದ್ರೆ ಮೂಲೆ ಮೂಲೆಯಲ್ಲೂ ಕೂತ ಹುಡುಗ್ರು ಬಲಗೈ ಬೆರಳು ನಾಲಿಗೆ ಕೆಳಗೆ ಸಿಕ್ಕಿಸಿಕೊಂಡು ಸಿಳ್ಳೆ ಹೊಡೆದುಬಿಡೋರು. ಮೂರು ದಿನದ ಕಲ್ಲಪ್ಪ ದೇವರ ಜಾತ್ರೆಯು ನಾಟಕಕ್ಕಾಗಿ ಕಾದು ಕಾದು ಇನ್ನು ಮುಗಿಯಿತೊ ಎಂಬಂತೆ ಮೂರನೇ ದಿನದ ಸೂರ್ಯ ಕೆಂಪಾಗಿ ಪಡುವಣಕ್ಕೆ ವಾಲಿದ. ಮಧ್ಯಾಹ್ನಕ್ಕೇ ಬಂದು ರಂಗಮಂಟಪ ಜೋಡಿಸಲು ತೊಡಗಿದ್ದ ಬೊಮ್ಮನಹಳ್ಳಿಯ ಸ್ಟೇಜ್ ಮಾಲಿಕರು ಮತ್ತು ಅವನ ಹುಡುಗರ ಸರಭರ ಓಡಾಡುತ್ತಾ ಜಾತ್ರೆಗೊಂದು ಅಸಲಿ ಕಳೆ ತುಂಬುತ್ತಿದ್ದರು.
ಹಳ್ಳಿ ಹೊರಗಿನ ವಿಸ್ತಾರದ ಬಯಲಲ್ಲಿ ನಾಟಕ ಸೇರಿತ್ತು. ಅದೆಲ್ಲವೂ ಊರಿನವರೇ ಸೇರಿ ಆಡುವ ನಾಟಕ. ಕೋಡಿಕೊಪ್ಪದ ನಾಟಕದ ಮೇಷ್ಟ್ರು ಶ್ರೀನಿವಾಸಲು ಮುತುವರ್ಜಿಯಿಂದ ಕಲಿಸಿದ ಸಂಭಾಷಣೆ, ಹಾಡುಗಳು ಎಲ್ಲರನ್ನೂ ಸೆಳೆದಿತ್ತು. ಅದರಲ್ಲಿ ಶರಣಪ್ಪನಿಗೆ ನಾಯಕನ ಪಾತ್ರ. ಅವನು ಬಲು ತಯಾರಿ ನಡೆಸಿದ್ದ. ಮೀಸೆಯನ್ನು ಚೂರೆ ಚೂರು ಚೂಪುಗೊಳಿಸಿ ಅದನ್ನು ಕೆಳಕ್ಕೆ ಬಾಗಿಸಿಕೊಂಡಿದ್ದ. ತಾನೊಂದು ಹೊಸ ಲೋಕದೊಳಗೆ ಪ್ರವೇಶಿಸಲು ಸಿದ್ದನಾಗಿರುವ ಯಕ್ಷನೆಂಬ ಭಾವದಲ್ಲಿ ತೇಲುತ್ತಿದ್ದ.
ನಾಟಕಕ್ಕೆ ನಾಯಕಿಯನ್ನು ಹೊರಗಡೆಯಿಂದ ಕರೆಸಲಾಗಿತ್ತು. ದಾವಣಗೆರೆಯ ಮಲ್ಲಿಕಾ ನಾಟಕದ ಕರಪತ್ರದಲ್ಲೇ ಮೋಡಿ ಮಾಡಿದ್ದಳು. ಅವಳ ಬಣ್ಣ ಹಚ್ಚಿಕೊಂಡ ಕೆಂಪು ತುಟಿಯ ಪೋಟೊ ಮತ್ತಷ್ಟು ಜನರನ್ನು ಅಲ್ಲಿಗೆ ತಂದು ಕೂಡಿ ಹಾಕುವಲ್ಲಿ ಯಶಸ್ವಿಯಾಗಿತ್ತು. ಶರಣಪ್ಪನ ಹೆಂಡತಿ ಲಲಿತಗೆ ನಾಟಕ ನೋಡುವ ಹುರುಪು. ಅವಳು ಎಂದಿಗಿಂತ ಈ ಬಾರಿ ತುಸು ಹೆಚ್ಚೆ ಆಸಕ್ತಿಯಿಂದ ಇದ್ದಳು. ನಾಟಕ ಶುರುವಾಗುವ ಎಷ್ಟೊ ಹೊತ್ತಿಗೂ ಮುನ್ನವೇ ಚಾಪೆ ಹಾಕಿ ಕೂತು ಬಿಟ್ಟಿದ್ದಳು.
ತಾನು ಅಲ್ಲಿಗೆ ಶರಣಪ್ಪನ ಹೆಂಡತಿಯಾಗಿ ಹೋಗಬಾರದು. ಬರೀ ಒಂದು ಹೆಣ್ಣಾಗಿ ನಾಟಕ ನೋಡೋಕೆ ಹೋಗಬೇಕು ಎಂಬುದನ್ನು ಅವಳು ಮೊದಲೇ ನಿರ್ಧರಿಸಿದ್ದಳು. ಗಂಡ ಶರಣಪ್ಪನು ತಿಂಗಳಿನಿಂದ ಸರಿಯಾಗಿ ಮನೆ ಸೇರಿರಲಿಲ್ಲ. ನಾಟಕದ ನೆವ ಇಟ್ಟುಕೊಂಡು ಮನೆಯ ಆಚೆಯೇ ಉಳಿದಿದ್ದ. ಅದಕ್ಕೂ ಮೊದಲು ಅವನೇನು ಹೆಚ್ಚು ಮನೆಯಲ್ಲಿರುತ್ತಿರಲಿಲ್ಲ. ಏನಾದ್ರೂ ಕೇಳಿದರೆ ಏನೊ ಒಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ಗಂಡ ಪದೇ ಪದೇ ಹೇಳುತ್ತಿದ್ದ ಸುಳ್ಳು, ತೋರದ ಪ್ರೀತಿ, ಎಳ್ಳಷ್ಟು ಕಾಳಜಿ ಮಾಡದ ಅವನ ಮನಸ್ಸು, ಸದಾ ಸಿಡುಕಲ್ಲೇ ಮನೆಯಲ್ಲಿರುತ್ತಿದ್ದ ಅವನ ಸ್ಥಿತಿ ಅವಳನ್ನು ಇನ್ನಿಲ್ಲದಂತೆ ಚಿಂತಿಗೀಡು ಮಾಡಿತ್ತು. ಆದರೆ ಇಂದು ಆ ಎಲ್ಲವನ್ನೂ ಮರೆತು ಬರೀ ಒಂದು ಹೆಣ್ಣಾಗಿ ನಾಟಕ ನೋಡಲು ಅವಳು ಬಂದಿದ್ದಳು. ತಾನು ಈಗ ಶರಣಪ್ಪನ ಹೆಂಡತಿ ಲಲಿತ ಅಲ್ಲ. ಈ ಊರಿನ ಒಬ್ಬ ಅನಾಮಿಕ ಮಹಿಳೆ ಅಂತ ತನ್ನ ಮನಸಿಗೆ ಹೇಳಿಕೊಂಡೆ ಅಲ್ಲಿ ಕೂತಿದ್ದಳು.
ಗ್ರಾಮಪಂಚಾಯ್ತಿ ಅಧ್ಯಕ್ಷರಿಗೆ ಹೂವಿನ ಹಾರ, ನಾಟಕದ ಮೇಷ್ಟಿಗೆ ಒಂದು ಹೂವಿನ ಹಾರ-ನಿಂಬೆ ಹಣ್ಣು, ದಾನಿಗಳಿಗೆ ವಿಶೇಷ ಸ್ವಾಗತಗಳು ಮುಗಿದು ನಾಂದಿ ಹಾಡಿ, ಪಾತ್ರ ಪರಿಚಯಗಳು ಮುಗಿದವು.

ನಾಟಕ ಶುರುವಾಯಿತು. ಶರಣಪ್ಪನು ನಟಿಸತೊಡಗಿದ. ಅವನಿಗೆ ಎಂದಿಗಿಂತ ಇಂದು ನಾಯಕನ ಪಾತ್ರ ಹೆಚ್ಚು ಒಪ್ಪಿತ್ತು. ದಾವಣಗೆರೆಯಿಂದ ಕರೆಸಿದ್ದ ಮಲ್ಲಿಕಾಳೇ ನಾಯಕಿ. ಆ ನಾಯಕಿಯೇ ಅವನ ಹೆಂಡತಿ. ಹೆಂಡತಿಯನ್ನು ತುಂಬಾ ಪ್ರೀತಿಸುವ ಪಾತ್ರ ಅವನದು. ನಾಟಕದ ತುಂಬಾ ಅವನು ತನ್ನ ಹೆಂಡತಿಯನ್ನು ತುಂಬಾ ಪ್ರೀತಿಸುತ್ತಿದ್ದ. ಅವನಾಡುವ ಒಂದೊಂದು ಮಾತಿಗೂ ಚಪ್ಪಾಳೆ ಸಿಗುತ್ತಿದ್ದವು. ಅವಳೊಂದಿಗೆ ಎರಡು ಡ್ಯಾನ್ಸ್ ಕೂಡ ಆದವು. ಅವಳ ಸೊಂಟ ಹಿಡಿದು ಮೈಮರೆತು ಕುಣಿದ. ಅದನ್ನು ನೋಡುತ್ತಿದ್ದ ಅವನ ಹೆಂಡತಿ ಲಲಿತ ತನಗೆ ತಾನೇ ಈ ಕ್ಷಣಕ್ಕೆ ನಾನು ಅವರ ಹೆಂಡತಿಯಲ್ಲ ಅನ್ನುವುದನ್ನು ಪದೇ ಪದೇ ನೆನಪು ಮಾಡಿಕೊಳ್ಳುತ್ತಿದ್ದಳು.
ನಾಟಕದ ಒಂದು ಹಂತದಲ್ಲಿ ಶರಣಪ್ಪನ ಹೆಂಡತಿ ಮಲ್ಲಿಕಾಗೆ ತುಂಬಾ ಅನಾರೋಗ್ಯ ಕಾಡುತ್ತದೆ. ಕೂರಲಾಗಷ್ಟು ಕಷ್ಟ ಅವಳಿಗೆ. ಅವಳನ್ನು ಎತ್ತಿಕೊಂಡು ಸ್ನಾನದ ಮನೆಗೆ ಒಯ್ದು ಅವಳಿಗೆ ಸ್ನಾನ ಮಾಡಿಸುತ್ತಾನೆ. ಆಗ ಅವಳು ತುಂಬಿದ ಕಣ್ಣಿನಿಂದ ಅವನನ್ನು ನೋಡುತ್ತಾಳೆ. ಆಗ ಅವನು ‘ನೀನು ನನ್ನ ಮಡದಿಯಷ್ಟೇ ಅಲ್ಲ. ನನ್ನ ಅಮ್ಮ ಮತ್ತು ಮಗಳು ಕೂಡ..’ ಅಂತ ಭಾವುಕನಾಗಿ ನುಡಿಯುತ್ತಾನೆ. ನೋಡುತ್ತಿದ್ದ ಜನ ಜೋರು ಚಪ್ಪಾಳೆ ತಟ್ಟುತ್ತಾರೆ. ಇತ್ತ ಶರಣಪ್ಪನ ಹೆಂಡತಿ ಲಲಿತಗೆ ಕಣ್ಣಲ್ಲಿ ನಿಲ್ಲದ ನೀರಿನ ಕೋಡಿ.
ಮುಂಜಾನೆ ಹೊತ್ತಿಗೆ ನಾಟಕ ಮುಗಿಯುತ್ತದೆ. ಶರಣಪ್ಪ ತಾನು ಹಚ್ಚಿಕೊಂಡ ಬಣ್ಣದಲ್ಲೇ ಮನೆಯ ಹಾದಿ ಹಿಡಿಯುತ್ತಾನೆ. ಅಷ್ಟೊತ್ತಿಗಾಗಲೇ ಲಲಿತ ಮನೆ ಸೇರಿದ್ದಳು. ಮನೆಗೆ ಬಂದವನೇ ಶರಣಪ್ಪ ಮುಖಕ್ಕೆ ಹಚ್ಚಿದ ಬಣ್ಣ ತೊಳೆಯಲು ನೀರು ಹಾಕಿಕೊಳ್ಳತೊಡಗಿದ. ಅಲ್ಲೇ ಇದ್ದ ಅವನ ಹೆಂಡತಿ ‘ರೀ ಬಣ್ಣ ತೊಳೆದುಕೊಳ್ಳಬೇಡಿ. ನಾನೂ ಬಣ್ಣ ಹಚ್ಚಿಕೊಳ್ತೀನಿ.. ಈ ಬದುಕು ಬೇಡ. ಆ ನಾಟಕ ಸಾಕು. ನಾಟಕದಂತೆ ಬದುಕಬೇಕು ಅನಿಸಿದೆ. ಬದುಕು ನಾಟಕವೊ; ನಾಟಕವೇ ಬದುಕೊ ಗೊತ್ತಿಲ್ಲ. ಅಲ್ಲಿರುವಂತೆ ಇಲ್ಲಿಯೂ ಆಗುವುದಾದರೆ ನಾನು ನಟಿಸುವೆ, ನೀವು ನಟಿಸಿ..’ ಅಂದು ಕಣ್ಣು ತುಂಬಿಕೊಂಡಳು. ಶರಣಪ್ಪ ನಾಟಕದ ಸಂಭಾಷಣೆ ಮರೆತವನಂತೆ ಸುಮ್ಮನೆ ನಿಂತ. ಮುಖದಲ್ಲಿ ಇನ್ನೂ ಬಣ್ಣವಿತ್ತು.
| ಇನ್ನು ಮುಂದಿನ ವಾರಕ್ಕೆ ।






0 Comments