
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.
ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.
ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ.
ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.
13
‘ತುರ್ತು ನಿಗಾ ಘಟಕ’ ಕಡು ಕೆಂಪಿನ ಸಾಲೊಂದನ್ನು ದೊಡ್ಡ ಬಾಗಿಲ ಮೇಲೆ ಬರೆಯಲಾಗಿದೆ. ಆ ಬಾಗಿಲುಗಳು ಮುಚ್ಚಿವೆ. ಅವಸರದಲ್ಲಿ ಇಬ್ಬರು ಹರೆಯದ ದಾದಿಯರು ಎರಡ್ಮೂರು ಬಾರಿ ಓಡಾಡಿದರು. ಅಲ್ಲಿ ಮುಂದೆ ಕೂರಲು ಉದ್ದದ ಕುರ್ಚಿ ಸಾಲುಗಳಿವೆ. ಮಗ ಮೊಬೈಲ್ ನಲ್ಲಿ ಮುಳುಗಿ ಯಾರೊಂದಿಗೆ ಮಸೇಜ್ ನಲ್ಲಿ ಹರಟುತ್ತಿದ್ದಾನೆ. ಮಗಳು ಇನ್ಸಟಾ ದಲ್ಲಿ ಮುಳುಗಿದ್ದಾಳೆ. ಅವರು ಈ ಲೋಕಕ್ಕೆ ಸೇರಿದವರಲ್ಲ ಎಂಬಂತೆ ಕಾಣಿಸುತ್ತಿದ್ದಾರೆ. ಗೆಳೆಯರಿನ್ನೂ ಬಂದಿಲ್ಲ. ಬರಬೇಕಾದ ನೆಂಟರು ಯಾವ ಲೆಕ್ಕಾಚಾರದಲ್ಲಿ ಮುಳುಗಿದ್ದಾರೊ ಅವರ ಸುಳವಿಲ್ಲ. ಹೆಂಡತಿ ಆಂತಕದಲ್ಲಿದ್ದಾಳೆ. ಅವಳ ಆತಂಕದ ಕಾರಣಗಳನ್ನು ನಾನು ಇನ್ನಷ್ಟೆ ಹುಡುಕಬೇಕಿದೆ. ಒಳಗೆ ಹೊತ್ತುಕೊಂಡು ಹೋದ ದೇಹದ ಪಕ್ಕವೇ ನಾನು ಓಡೋಡೆ ಬಂದೆ. ಜೋರಾಗಿ ಅರಚುತ್ತಿದ್ದೆ. ಇದು ಯಾರು? ಅಂತ ಕೂಗಿ ಕೇಳುತ್ತಿದ್ದೆ. ಆದರೆ ನನ್ನ ಮಾತು ಅವರ್ಯಾರಿಗೂ ಕೇಳಿಸುತ್ತಿರಲಿಲ್ಲ. ದೇಹ ಒಳಕ್ಕೆ ಹೋದದ್ದೆ ಬಾಗಿಲುಗಳು ಮುಚ್ಚಿಕೊಂಡವು. ತುಸು ಹೊತ್ತು ಕಾದು ಒಳಗೆ ನುಗ್ಗಿದೆ. ಮುಚ್ಚಿದ ಬಾಗಿಲುಗಳು ನನಗೇನು ಅಡ್ಡಿ ಪಡಿಸಲಿಲ್ಲ.
ಉದ್ದದ ಹಾಸಿಗೆ ಮೇಲೆ ಯಾರನ್ನೊ ಮಲಗಿಸಿದ್ದಾರೆ. ಮೂಗಿಗೆ, ಬಾಯಿಗೆ, ಎದೆಗೆ ಏನೇನೊ ಪೈಪುಗಳನ್ನು ಜೋಡಿಸುತ್ತಿದ್ದಾರೆ. ಅಲ್ಲೊಂದು ಮಾನಿಟರ್ ಇದೆ. ಅದರಲ್ಲಿ ಒಂದು ನೇರ ಗೆರೆ ಶಿಸ್ತಿನಿಂದ ಹೊರಟಿದೆ. ವೈದ್ಯರಿಗೆ ಭರವಸೆ ಇಲ್ಲ ‘ಪ್ರಯತ್ನಿಸೋಣ ಉಳಿಯಬಹುದು’ ಅನ್ನುವ ಒಬ್ಬನ ಮಾತಿಗೆ ಉಳಿದವರು ಏನನ್ನು ಪ್ರತಿಕ್ರಿಯಿಸಲಿಲ್ಲ. ‘ದೇಹ ತಣ್ಣಗಾಗುತ್ತಿದೆ ಜೀವ ಹೋಗಿರಬಹುದು’ ಅಂದರು ಇನ್ನೊಬ್ಬರು.
ಅಲ್ಲಿ ಹಾಗೆ ಮಲಗಿರುವವರು ಯಾರಿರಬಹುದೆಂದು ಕುತೂಹಲದಲ್ಲಿ ಬಾಗಿ ನೋಡಿದೆ. ನನಗೆ ಒಂದು ಕ್ಷಣ ಮೂರ್ಛೆ ಹೋಗುವಂತಾಯ್ತು. ಅರೇ ಅದು ನಾನೇ. ನನ್ನ ಹೆಣ ನಾನೆ ನೋಡುತ್ತಿದ್ದೇನೆ. ನಾನಾಗಲೇ ಈ ದೇಹದಿಂದ ಹೊರನಡೆದು ಅರ್ಧ ಗಂಟೆಗೂ ಹೆಚ್ಚಾಯಿತ್ತಲ್ಲ. ಇನ್ನೂ ಈ ದೇಹಕ್ಕೇನು ಮಾಡುತ್ತಿದ್ದಾರೆ? ನನಗೇನೂ ಅರ್ಥವಾಗಲಿಲ್ಲ.
ನನ್ನ ಸಾವನ್ನು ಅವರು ಘೋಷಿಸಲಿಲ್ಲ. ಎಲ್ಲವೂ ಸರಿಯಾದೀತು ಎಂದು ಹೊರಗೆ ಕೂತವರು ಕಾದಿದ್ದರು. ನಾನು ಹೊರಡುವ ಸೂಚನೆ ಸಿಕ್ಕದೆ ಇದ್ದರೂ ನನ್ನ ಹೆಂಡತಿಗೆ ನಾನು ಹೊರಟು ಹೋದರೆ ಬದುಕಲ್ಲಿ ಏನೆಲ್ಲಾ ಮಾಡಬೇಕಾಗಿ ಬರಬಹುದೆಂದು ಯೋಚಿಸುತ್ತಿದ್ದಳು. ಮಕ್ಕಳು ನಾನು ಅಲ್ಲಿ ಒಳಗೆ ಮಲಗಿರೋದು ಗೊತ್ತೆ ಇಲ್ಲ ಎಂಬಂತೆ ಕೂತಿದ್ದರು. ಸಂಜೆಯೊತ್ತಿಗೆ ಆಸ್ಪತ್ರೆಯವರು ನನ್ನ ಸಾವನ್ನು ಘೋಷಿಸಿದರು. ದೇಹವನ್ನು ಪೋಸ್ಟ್ ಮಾರ್ಟಮ್ ಕಳುಹಿಸಲಾಯಿತು. ನಾನು ಅವರ ಹಿಂದೆಯೇ ಓಡಿ ಹೋದೆ.

ನನ್ನ ದೇಹವನ್ನು ಕತ್ತರಿಸಿದರು. ಜೀವಂತ ದೇಹವನ್ನು, ಸತ್ತ ಶರೀರವನ್ನು ಕತ್ತರಿಸುವುದಕ್ಕೆ ಎಷ್ಟೊಂದು ವ್ಯತ್ಯಾಸಗಳು. ನನ್ನ ಹೃದಯವನ್ನು ಕಿತ್ತು ಆಚೆ ತೆಗೆದರು. ನಾನು ಅದರಲ್ಲಿ ಬಚ್ಚಿಟ್ಟುಕೊಂಡಿದ್ದ ಎಷ್ಟೊಂದು ಭಾವಗಳು ಚೆಲ್ಲಾಡತೊಡಗಿದವು. ಬಿಕ್ಕಳಿಸದೆ ಉಳಿಸಿಟ್ಟ ಕಣ್ಣೀರು, ಎದ್ದು ಹೋದ ಪ್ರೀತಿಸಿದ ಹುಡುಗಿಯ ಹೆಜ್ಜೆ ಗುರುತುಗಳು, ಇನ್ನೂ ಒಣಗದ ನೋವಿನ ಹಸಿ ಗಾಯ, ಬದುಕು ತರಚಿ ಮಾಡಿದ ಗೀರುಗಳು ಎಲ್ಲವೂ ಆಚೆ ತೆಗೆದ ಹೃದಯದಿಂದ ಹನಿಹನಿಯಾಗಿ ಸೋರುತ್ತಿದ್ದವು. ನಾನು ಕಣ್ಣುಮುಚ್ವಿಕೊಂಡೆ. ಕಣ್ಣು ತೆರೆಯುವುದರೊಳಗೆ ಇಡೀ ದೇಹವನ್ನು ಕತ್ತರಿಸಿ ಮತ್ತೆ ಹೊಲೆದು ಹಾಕಿದ್ದರು. ನನ್ನ ರೂಪವಂತೂ ಪೂರ್ತಿ ಕೆಟ್ಟು ಹೋಗಿತ್ತು. ಇದೇ ದೇಹಕ್ಕೆ ನಾನು ವಾಕ್, ಜಿಮ್ಮು, ಸತ್ವದ ಊಟ, ಧ್ಯಾನ ಏನೆಲ್ಲಾ ಮಾಡಿದೆ ಎಂದು ನೆನೆದು ಬೇಸರವಾಯಿತು.
ದೇಹವನ್ನು ಮಸಣಕ್ಕೆ ಸಾಗಿಸಿದರು. ಹೆಂಡತಿಯ ಕಣ್ಣೀರು ಈಗ ನಿಂತಿತ್ತು. ಮಕ್ಕಳು ನನ್ನ ಪೋಟೊವನ್ನು ಸಾಮಾಜಿಕ ಜಾಲತಾಣದ ಸ್ಟೇಟಸ್ ಗೆ ಹಾಕಿ ರೆಸ್ಟ್ ಇನ್ ಪೀಸ್ ಎಂದು ಬರೆದುಕೊಂಡು ತಮ್ಮ ಜವಾಬ್ದಾರಿ ಮುಗಿಸಿದ್ದರು. ನನಗೆ ಇದ್ದರು ಎನ್ನಲಾದ ಕೆಲವು ಶತ್ರುಗಳು ಕೂಡ ಬಂದ ಮರುಗಿದ್ದರು. ಅವರ ಬಗ್ಗೆ ಅಭಿಮಾನವಾಯಿತು. ಬದುಕಿನಲ್ಲಿ ಕನಿಷ್ಠ ಒಬ್ಬನಾದರೂ ಶತ್ರುವಿರಬೇಕು ಎನಿಸಿತು. ನನ್ನ ಮಿತ್ರರರೇ ಒಳಗೊಳಗೆ ಸಣ್ಣ ಆನಂದದಲ್ಲಿ ತುಳುಕುವುದು ನೋಡಿ ನನಗೆ ಸಹಿಸಿಕೊಳ್ಳಲಾಗಲಿಲ್ಲ.
ನಾನು ಜೀವನವಿಡೀ ಅರ್ಥವಿಲ್ಲದ ಆಚರಣೆಗಳನ್ನು ಖಂಡಿಸುತ್ತೆ ಬಂದೆ. ಪೂಜೆ ಪುನಸ್ಕಾರ ದೇವರು ದಿಂಡಿರುಗಳಲ್ಲಿ ನನಗೆ ನಂಬಿಕೆ ಇರಲಿಲ್ಲ. ಇಲ್ಲಿ ನನ್ನ ಹೆಣಕ್ಕೆ ಸಿಂಗಾರ, ಪೂಜೆಗಳು ಜೋರಾಗಿವೆ. ಇಲ್ಲೂ ಅದ್ದೂರಿ ಪೂಜೆ ಒಂದು ಘನತೆಯ ದ್ಯೋತಕವಾಗಿ ಸಾಗುತ್ತಿದೆ. ನನಗೆ ಸುಡುವುದು ಸೇರುವುದಿಲ್ಲ. ಮಣ್ಣಿನಲ್ಲಿ ಊಳುವುದು ಇಷ್ಟ.ಆದರೆ ಇವರು ನನಗೆ ಬೆಂಕಿ ಇಡಲು ಸಿದ್ದವಾಗಿದ್ದಾರೆ. ಮನುಷ್ಯ ಸತ್ತಮೇಲೂ ಅವನನ್ನು ಮತ್ತೆ ಮತ್ತೆ ಕೊಲ್ಲಲು ಇಂತಹ ಕಾರ್ಯಗಳನ್ನು ಮಾಡಿದರೆ ಸಾಕು. ನನಗೆ ಅಲ್ಲಿಯ ಗಂಧದ ಕಡ್ಡಿಯ ವಾಸನೆ ಉಸಿರುಗಟ್ಟಿಸುತ್ತಿತ್ತು.
ನನ್ನ ಸಂಸ್ಕಾರಕ್ಕೆ ಬಂದವರ ಬಳಿ ನನ್ನ ಬಗ್ಗೆ ಮಾತುಗಳೇ ಇಲ್ಲ. ಅವರವರ ಕಷ್ಟ ಸುಖ ಮಾತಾಡಿಕೊಳ್ಳುತ್ತಿದ್ದಾರೆ. ಇಟ್ಟುಕೊಂಡ ಸಂಬಂಧ, ಹಣಕಾಸಿನ ಸ್ಥಿತಿ, ಮಕ್ಕಳ ಗೋಳು ಇಂತವೆ ನೂರೆಂಟು. ಅವರ ಮುಖದಲ್ಲಿ ಶುಭಕಾರ್ಯಕ್ಕೆ ಬಂದ ಕಳೆ ಇತ್ತು. ಅಲ್ಲಿ ಇರಲಾಗದೆ ಮನೆಯ ಕಡೆ ಬಂದೆ.
ಅಲ್ಲೂ ನನ್ನದೆ ಹೆಣ. ಹೆಂಡತಿ ಅತ್ತು ಮುಗಿಸಿದ್ದಾಳೆ. ಅವಳಿಗೆ ಇನ್ನೂ ಅಳಲು ಆಸೆ ಇಲ್ಲ. ಅತ್ತರೂ ಯಾವ ಸುಖವಿಲ್ಲ ಅನ್ನುವುದು ಅವಳಿಗೆ ಅರಿವಾಗಿದೆ. ನನ್ನ ಸಾವು ನನ್ನಿಂದ ನನಗೆ ಬಿಡುಗಡೆ ಮಾತ್ರವಲ್ಲ ನನ್ನಿಂದಲೂ ಅವಳಿಗೆ ಬಿಡುಗಡೆ. ನನ್ನ ದೇಹದ ಮೇಲೆ ನೊಣ ಮುತ್ತಿವೆ. ಅದನ್ನು ಓಡಿಸಲು ಕೂಡ ಯಾರೂ ಸಿದ್ದರಿಲ್ಲ. ಮಕ್ಕಳು ಎಡಗೈಲಿ ಮೊಬೈಲ್ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಸಂಸ್ಕಾರಕ್ಕೆ ವ್ಯವಸ್ಥಿತವಾದ ಯೋಜನೆ ರೂಪಿಸುತ್ತಿದ್ದಾರೆ. ಅವರಿಗೆ ಉಚಿತ ಸಮಾಧಾನಗಳು ಸಿಗುತ್ತಿವೆ. ಆದರೆ ಅವರು ಅವುಗಳನ್ನು ಕೇಳುವಂತೆ ನಟಿಸುತ್ತಿದ್ದಾರೆ. ಅಷ್ಟೆ ಅಲ್ಲ ಈ ಮನೆ ಮುಂದೆ ಸೇರಿರುವ ಬಹುತೇಕರು ನಟಿಸುತ್ತಿದ್ದಾರೆ ಎಂಬುಂದು ನನಗೆ ಗೊತ್ತಾಗುತ್ತಿದೆ. ನನಗೆ ಅಲ್ಲಿಯೂ ಇರಲಾಗಲಿಲ್ಲ ಎದ್ದು ಬಂದೆ.
ಎರಡು ದಿನ ಸಾವರಿಸಿಕೊಂಡೆ. ಮತ್ತೆ ಮನೆ ಹತ್ತಿರ ಹೋದೆ. ಮನೆಯಲ್ಲಿ ಹಬ್ಬದ ವಾತಾವರಣ. ನನ್ನ ಪೋಟೊವನ್ನು ಹೂವಿನ ಅರಮನೆಯಲ್ಲಿ ಕೂರಿಸಿದ್ದಾರೆ. ನನ್ನ ಹೆಂಡತಿಗೆ ನನಗಿರುವ ಹೂವಿನ ಅಲರ್ಜಿ ಮರೆತು ಹೊಯಿತೊ ಏನೊ? ಎಲ್ಲರೂ ಹೊಸ ಹೊಸ ಬಟ್ಟೆ ತೊಟ್ಟಿದ್ದರು. ಅತ್ತರ ವಾಸನೆ ಹೆಚ್ಚಿತ್ತು. ಕೆಲವು ಹುಡುಗಿಯರಂತೂ ಕಿಲಕಿಲ ನಗುತ್ತಾ ಸಂಭ್ರಮಿಸುತ್ತಿದ್ದರು. ಒಳ್ಳೆಯ ಸಿಹಿ ಊಟದ ವ್ಯವಸ್ಥೆ ಇತ್ತು. ಮನೆಯಲ್ಲಿ ಹೆಂಡತಿ ಮಾಂಸ ತಿನ್ನುವುದಕ್ಕೆ ಬಿಡುತ್ತಿರಲಿಲ್ಲ. ನನಗೆ ಮಾಂಸವೆಂದರೆ ಭಲೇ ಪ್ರಾಣ. ಆದರೆ ನಮ್ಮ ಜಾತಿಯವರು ಮಾಂಸ ತಿನ್ನವಂತಿಲ್ಲವಂತೆ ಅನ್ನುತಿದ್ದಳು ಆಕೆ. ಆದರೆ ನಾನು ತಿನ್ನುತ್ತಿದ್ದೆನಲ್ಲ ನನಗೇನಿದೆ? ಅಂತ ಕೇಳಿದಾಗ ಅವಳ ಬಳಿ ಉತ್ತರವಿರಲಿಲ್ಲ. ಅವರು ನನ್ನ ತಿಥಿಯ ದಿನ ನನಗೆ ಇಷ್ಟವಿರುವ ಅಡುಗೆಯ ಬದಲು ಅವರಿಗೆ ಇಷ್ಟವಾದ ಅಡುಗೆ ಮಾಡಿಕೊಂಡಿದ್ದಾರೆ. ಅವರಿಷ್ಟದ ಅಡುಗೆ ತಿನ್ನಲು ನಾನೊಂದು ನೆವವಾದೇನೆ? ನನಗೆ ಬೇಸರವಾಯಿತು.
ನಾನೊಬ್ಬ ಸಣ್ಣ ಮಟ್ಟದ ಲೇಖಕನಾಗಿದ್ದೆ. ಶ್ರದ್ಧಾಂಜಲಿ ಸಭೆಯೊಂದು ಏರ್ಪಾಡಾಗಿತ್ತು. ಅಲ್ಲಿಗೆ ಹೋದೆ. ವೇದಿಕೆಯ ಮೇಲೆ ಆಡುತ್ತಿದ್ದ ಮಾತು ಕೇಳಿ ಖುಷಿಯಾಯಿತು. ಇವರು ಆಗಲೇ ಈ ಮಾತು ಹೇಳಿದ್ದರೆ ನಾಲ್ಕು ಸಾಲು ಬರೆದ ನನಗೆ ಖುಷಿಯಾದರೂ ಸಿಗುತ್ತಿತ್ತು. ಲೇಖಕ ತಾನು ಒಳ್ಳೆಯ ಬರಹಗಾರ ಅನಿಸಿಕೊಳ್ಳಲು ಸಾಯಲೇ ಬೇಕಾ? ಅಥವಾ ಸಾಯುವವರೆಗೂ ಕಾಯಬೇಕಾ? ನನಗೆ ದ್ವಂದ್ವ ಶುರುವಾಯಿತು. ನನ್ನೊಂದಿಗೆ ನಾ ಬರೆದ ಪುಸ್ತಕಗಳನ್ನು ಹೂತು ಬಿಡಿ ಎಂದು ಎಂದೊ ಒಮ್ಮೆ ಹೇಳಿದ್ದೆ. ಅದನ್ನು ಒಂದು ಜೋಕಿನಂತೆ ಕೇಳಿಸಿಕೊಂಡು ನಕ್ಕಿದ್ದರು. ನನ್ನೊಂದಿಗೆ ನಾ ಬರೆದ ಪುಸ್ತಕಗಳು ಬೂದಿಯಾಗಬೇಕಿತ್ತು. ಅದೂ ಆಗಲಿಲ್ಲ..

ನಿರಂತರ ಬೇಸರದಿಂದ ಕಂಗೆಟ್ಟು ಅಲ್ಲಿಂದನೂ ಎದ್ದು ಇನ್ನು ಇವರ ಸಹವಾಸ ಸಾಕು ಅಂತ ನಡೆಯ ತೊಡಗಿದೆ. ತುಸು ಹೊತ್ತಿನ ನಂತರ ಯಾರೊ ಕೂಗಿದ ಸದ್ದು. ಸತ್ತ ಮೇಲೆ ಮನುಷ್ಯರ ಮಾತೇ ಕೇಳಿಸುತ್ತಿರಲಿಲ್ಲ. ಇದೇನು ಕೂಗಿನ ಸದ್ದು? ಒಮ್ಮೆಲೆ ಆಶ್ಚರ್ಯವಾಗಿ ತಿರುಗಿ ನೋಡಿದೆ. ಒಬ್ಬ ಕಪ್ಪನೆಯ ಆಳು ನಡೆದು ಬರುತ್ತಿದ್ದ. ಯಾವುದೊ ನಾಟಕದ ಕಂಪನಿಯಿಂದ ತಪ್ಪಿಸಿಕೊಂಡು ಬಂದವನಂತೆ ಕಾಣಿಸುತ್ತಿದ್ದ.
‘ಎಲ್ಲೆಲ್ಲೊ ಮಾರಾಯ ನಿನ್ನ ಹುಡುಕೋದು? ಬಾ ಬಾ ಇಲ್ಲಿ. ಒಂದು ಎಡವಟ್ಟಾಗಿದೆ’ ಅಂದ.
‘ನೀ ಯಾರು? ಪರಿಚಯನೇ ಇಲ್ವಲ್ಲ ನಿಂದು?’ ತುಸು ಗಡುಸಾಗಿ ಕೇಳಿದೆ.
‘ಬಾ ಇಲ್ಲಿ ಹೇಳ್ತೀನಿ. ನೀನು ಮಿಸ್ಟರ್ ಕೆ ಎಸ್ ಗೋಪಾಲಸ್ವಾಮಿ ಅಲ್ವ?’ ಅಂದಿತ್ತು ದನಿ.
ನಾನು ‘ಹೌದು..’ ಅಂದೆ.
‘ಯೆಸ್ ಅದೇ ಎಡವಟ್ಟಾಗಿರೊದು. ಮೊನ್ನೆ ಇಲ್ಲಿಂದ ಎತ್ತಾಕೊಂಡು ಹೋಗೋಕೆ ಬುಕ್ ಆದದ್ದು ಕೆ ಸಿ ಗೋಪಾಲಸ್ವಾಮಿ ಅವರದು. ನಿಮ್ಮ ಪಕ್ಕದ ಬೀದಿಯಲ್ಲಿ ಇದಾರಲ್ಲ ಅವರದು. ನಮ್ಮ ಹುಡುಗರು ಮಿಸ್ಸಾಗಿ ನಿನ್ನ ಪ್ರಾಣ ಎತ್ತಾಕಿಕೊಂಡು ಬಂದಿದ್ದಾರೆ.
ನಿನಗೆ ನಮ್ಮಲ್ಲಿ ಜಾಗ ಇಲ್ಲ. ನೋಡು ನೀನು ವಾಪಸು ಹೋಗ್ಬೇಕು. ನಿನ್ನ ಜೀವ ನಿನಗೆ ವಾಪಸು ಕೊಡ್ತೀನಿ. ನಮಗೆ ಬೇಕಾಗಿರೋದು ಕೆ ಸಿ ಗೋಪಾಲಸ್ವಾಮಿ ಅವರದು… ಈ ಕ್ಷಣವೇ ನಿನಗೆ ಬಿಡುಗಡೆ ಹೋಗು ಹೋಗು..’ ಅಂದ.
ನನ್ನ ಕಣ್ಣುಗಳು ಕತ್ತಲಾದವು. ತಲೆ ತಿರುಗಿತು. ಜೋಲಿ ಬಂದು ಅವನ ಕಾಲ ಕೆಳಗೆ ಬಿದ್ದೆ. ಎಚ್ಚರವಾದಾಗ ಅವನ ಕಾಲ ಬಳಿಯೆ ಇದ್ದೆ. ವಾಪಸು ಹೋಗ್ಬೇಕೊ, ಬೇಡವೊ ಎಂಬ ವಿಚಿತ್ರ ತೊಳಲಾಟದಲ್ಲಿ ಸಿಕ್ಕಿಕೊಂಡೆ.
‘ನಿಮ್ಮ ತಪ್ಪುಗೆ ನಮಗ್ಯಾಕೆ ಈ ಶಿಕ್ಷೆ. ನೀನು ಸಾಯಿಸಿದೆ. ನಂತರ ನನ್ನವರೇ ನನ್ನನ್ನು ಕೊಂದರು. ಈಗ ನೀನು ಸಾಯಿಸಿದ ತಪ್ಪು ಸರಿಪಡಿಸಲು ನೀನು ನನಗೆ ಮತ್ತೆ ಪ್ರಾಣ ಕೊಡಬಹುದು ಆದರೆ ಅವರು ಕೊಂದ ಹಾಕಿದ್ದಕ್ಕೆ ಹೋದ ಮಹತ್ವದ ನನ್ನ ಇನ್ನೊಂದು ಪ್ರಾಣ ಹೇಗೆ ಬರುತ್ತದೆ?’ ನನ್ನ ಪ್ರಶ್ನೆಗೆ ಅವನು ತಬ್ಬಿಬ್ಬಾದ.
ಅವನು ಏನೊ ಹೇಳುವುದಕ್ಕೆ ಬಾಯಿ ತೆರೆದ ಮತ್ತು ಏನೇನೊ ಹೇಳುತ್ತಲೆ ಇದ್ದ. ಅವನ ತುಟಿಗಳ ಚಲನೆ ಕಾಣಿಸುತ್ತಿತ್ತು. ಆದರೆ ಮಾತು ಕೇಳಿಸುತ್ತಿರಲಿಲ್ಲ. ನಾನು ಕೂಡ ಕೂಗಿ ಕೂಗಿ ನನಗೇನು ಕೇಳಿಸುತ್ತಿಲ್ಲ ಎಂದು ಹೇಳುತ್ತಿದ್ದೆ. ಅವನೂ ಕೂಡ ನನಗೆ ಕೇಳಿಸುತ್ತಲ್ಲ ಅಂತ ಸನ್ನೆ ಮಾಡುತ್ತಿದ್ದ. ನಾನು ಎಲ್ಲಿಗೊ ಜಾರ ತೊಡಗಿದ್ದೆ ಅದು ಭೂಮಿಗೊ ಅಥವಾ ಮತ್ತೆಲ್ಲಿಗೊ ನನಗೆ ಯಾವುದೂ ಸ್ಪಷ್ಟವಾಗುತ್ತಿರಲಿಲ್ಲ..
| ಇನ್ನು ಮುಂದಿನ ವಾರಕ್ಕೆ ।






0 Comments