ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ್ ಸೊರಟೂರು ಓದಿದ ‘ಬೋಳಾಯಣ’

ನಗಿಸುತ್ತಲೆ ತಾಕುವ ಚುಟುಕುಗಳು.  

ಸದಾಶಿವ್ ಸೊರಟೂರು

ಕೇಳಿ ಬರೆಯುವುದು ಸುದ್ದಿ. ನೋಡಿ ಬರೆಯುವುದು ವರದಿ. ಅನುಭವಿಸಿದನ್ನು ತಡೆಯಲಾರದೆ ಅಕ್ಷರಗಳ ಮೂಲಕ ದಾಟಿಸಿ ಬಿಡುಗಡೆ ಪಡೆಯುವುದು ಕವಿತೆ. 

ಕವಿತೆಗೆ ಹಲವು ಹೊಳವುಗಳಿವೆ. ಅದರಲ್ಲಿ ಭಾವಗಳಿವೆ. ಪಾತ್ರಗಳು ಬಂದು ಹೋಗುತ್ತವೆ. ಕವಿತೆ ಬರೆಯುವುದು ಧ್ಯಾನ. ಓದುವುದೂ ಧ್ಯಾನವೇ! ಬರೆದ ಭಾವ ಓದುಗನಿಗೆ ಎಷ್ಟರ ಮಟ್ಟಿಗೆ ತಟ್ಟುತ್ತದೆ, ಹೇಗೆ ತಟ್ಟುತ್ತದೆ ಅದು ಓದುವವನನ್ನು ಅವಲಂಬಿಸಿದೆ. ಬರೆದವನಷ್ಟೇ ತೀವ್ರತೆ ಓದುವವನಿಗೂ ಇರಬೇಕಾ? ಅದನ್ನು ನಾನು‌ ಅಷ್ಟು‌ ನಿಖರವಾಗಿ ಹೇಳಲಾರೆ. 

ಕವನಕ್ಕಿದು ಕಾಲವಲ್ಲ ಅನ್ನೋದು ಹಳೆಯ ಮಾತು. ಒಲ್ಲದ ಕಾಲದಲ್ಲಿ ಕವಿತೆ ಉಳಿಯಲು ಹೋರಾಟ ಮಾಡಲೇಬೇಕಾದ ದರ್ದು ಕವಿತೆಗಿಲ್ಲ. ಆದರೆ ಬರೆಯುವವರು ತಾವು ಅನುಭವಿಸಿದ್ದನ್ನು ದಾಟಿಸಲು‌‌ ಕಂಡುಕೊಂಡ ದಾರಿಗಳು ಹಲವಿವೆ. ಅವಸರದ ಈ ಕಾಲದಲ್ಲಿ ಎಲ್ಲವೊ ಚಿಕ್ಕದಾಗುತ್ತಿವೆ. ಹಾಕುವ ಬಟ್ಟೆಯಿಂದ ಹಿಡಿದು ಬದುಕುವ ಬಾಳು ಕೂಡ ಚಿಕ್ಕದೇ. ಇನ್ನೂ ಕವಿತೆಯದು ಯಾವ ಲೆಕ್ಕ? 
ಈ ಅವಸರದ ಕಾಲದಲ್ಲಿ ಕವಿತೆ ಕಂಡುಕೊಂಡ ಅತೀ ಸಣ್ಣ ದಾರಿಯೆಂದರೆ ಚುಟುಕುಗಳು. ನಾಲ್ಕೈದು ಸಾಲಿನ ಮೋಡಿಗಾರ ಅದು. ಧ್ಯಾನದಂತಹ ಓದಿನ ಹಂಗಿಲ್ಲದೆ ದಕ್ಕುವ ಮತ್ತು ಈ ಕಾಲಕ್ಕೆ ಹೇಳಿ‌ ಮಾಡಿಸಿದ ಪ್ರಕಾರವದು. 

ಚುಟುಕು ಎಂದರೆ ಪ್ರಾಸ ಪದವನ್ನು ಜೋಡಿಸುವುದು ಅಂದುಕೊಂಡವರ ಮಧ್ಯೆ ಬುಲೆಟ್ ಹೊಡೆದಂತೆ ಬರೆಯುವವರು ಬಾಳ ಕಡಿಮೆ ಮಂದಿ.‌ ಎಂದೊ ನೂರಾರು ಚುಟುಕು ಬರೆದು ಮಿಂಚಿದವರು ನಮ್ಮಲ್ಲಿರಬಹುದು. ಅದರ ಹೆಸರಲ್ಲಿ‌ ಇಂದಿಗೂ ಚಲಾವಣೆಯಲ್ಲಿರುವವರು ಇದ್ದಾರೆ.‌ ದಿನಕ್ಕೊಂದರಂತೆ ಹೋಮ್ ವರ್ಕ್ ಬರೆದವರಂತೆ ಬರೆಯುವ ಇದ್ದಾರೆ.

ಇವೆಲ್ಲದರ ಮಧ್ಯೆ ಹಲವು ವರ್ಷಗಳಿಂದ ಧೇನಿಸಿ ಒಂದೇ ವಿಷಯದ ಬಗ್ಗೆ  ಬರೆದ ಚುಟುಕುಗಳನ್ನು ಓದಿ ತಲ್ಲಣಿಸಿದೆ. ನಕ್ಕು, ಖುಷಿಪಟ್ಟು, ವ್ಹಾವ್ ಎಂದು, ಛೇಛೇ ಅಂತ ಲೊಚಗುಟ್ಟಿದೆ. ಇಡೀ ಪುಸ್ತಕದ ತುಂಬಾ ಬೋಳುತಲೆಯ ಬಗ್ಗೆಯೇ ಇದೆ. ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಬಂದ ಮೊದಲ ಯಶಸ್ವಿ ಚುಟುಕು ಸಂಕಲನ ಇದೇ ಇರಬೇಕು.  ಅದು ಬಸವಗೌಡ ಹೆಬ್ಬಳಗೆರೆಯವರ ‘ಬೋಳಾಯಣ’. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿರುವ ಇವರು ತಮ್ಮ ಓದಾಯ್ತು, ಬರಹವಾಯ್ತು ಅಂತ ಸದ್ದಿಲ್ಲದೆ ಉಳಿದು‌ ಹೋಗಿದ್ದಾರೆ. 

ಬೋಳುತಲೆಯ ಬಗ್ಗೆ ಸ್ವತಃ ಬೋಳುತಲೆಯವರಿಗೆ ಮಾತ್ರೆ ಬೇಸರ, ಹತಾಶೆಗಳಿರುತ್ತಿದ್ದವು. ಅದನ್ನು ಸಾಮಾಜೀಕರಣಗೊಳಿಸಿದ್ದು ಒಂದು ಮೊಟ್ಟೆಯ ಕಥೆ ಸಿನೆಮಾ. ಅವರ ತಲ್ಲಣಗಳು ಎಲ್ಲರಿಗೂ ಅರ್ಥವಾದದ್ದು ಆ ಸಿನೆಮಾದಿಂದ. ಅಂತದ್ದೆ ವಿಚಾರ ಇಟ್ಟುಕೊಂಡು ಬರೆದ ಚುಟುಕಗಳ ಪುಸ್ತಕ ಬೋಳಾಯಣ. 

ಇಲ್ಲಿನ ಚುಟುಕಗಳನ್ನು ಮತ್ತು ಅವರನ್ನು ಖುದ್ದಾಗಿ ಕಂಡ ನನಗೆ ಇವು ಬರೀ ಪೋಸ್ಬಿಕಿನ ಲೈಕ್ ಕಮೆಂಟುಗಳಿಗೆ ಬರೆದ ಚುಟುಕುಗಳು ಅನಿಸಲಿಲ್ಲ. ಮೊದಲೇ ಹೇಳಿದಂತೆ ಪ್ರತಿಯೊಂದು ಚುಟುಕನ್ನು ಅವರು ಅನುಭವಿಸಿದ್ದಾರೆ.‌ ತಮ್ಮ ಅನುಭವಗಳೇ ಇಲ್ಲಿ ಚುಟುಕಗಳಾಗಿ ರೂಪುಗೊಂಡಿವೆ. ತಮ್ಮನ್ನು ಜನ ಹೇಗೆ ನಡೆಸಿಕೊಂಡರೆಂಬುದು ಚುಟುಕಗಳ ಮೂಲಕ ಹೇಳುತ್ತಾ ಹೋಗುತ್ತಾರೆ.. 

ಅವರು ಈ ವಿಚಾರವನ್ನು ತಲುಪಿಸಲು ಅವರಿಗೆ ಚುಟುಕುಗಳಲ್ಲದೆ ಬೇರೆ ಯಾವ ಮಾಧ್ಯಮವು ಸೂಕ್ತವಾಗುತ್ತಿರಲಿಲ್ಲ ಎಂದು ನನಗನಿಸುತ್ತದೆ. ಹಾಸ್ಯ, ವ್ಯಂಗ್ಯ, ಗಂಭೀರತೆ, ಹತಾಶೆ, ಅವಮಾನ ಇತ್ಯಾದಿಗಳನ್ನು ಬಂಧಿಸಲು ಚುಟುಕು ಪ್ರಭಾವಿ ಮಾಧ್ಯಮ. ಟೈಮೇ ಇಲ್ಲ ಓದಲು ಅನ್ನುವವರಿಗೆ ಅವರಿಗೆ ಸಿಗುವ ಚಿಕ್ಕ ಸಮಯದಲ್ಲೇ ತಲುಪಿಸುವ ಇವರ ಪ್ರಯತ್ನ ಯಶಸ್ವಿಯಾಗಿದೆ. 

ಒಂದೇ ವಿಷಯದ ಬಗ್ಗೆ  ಚುಟುಕು ಬರೆಯುವುದು ಖಂಡಿತ ಸುಲಭವಲ್ಲ. ಅದೇ ಅದೇ ಪದಗಳು, ಅದೇ ಅದೇ ವಾಕ್ಯಗಳು, ವಿಷಯ, ಸಂದರ್ಭಗಳು ಮತ್ತೆ ಮತ್ತೆ ಬರಬಹುದು. ಅದನ್ನು ತುಂಬಾ ಜಾಣ್ಮೆಯಿಂದ ನಿಭಾಯಿಸಿದ್ದಾರೆ. ಎಲ್ಲೂ ಬೋರಾಗದಂತೆ ಕಾಳಜಿವಹಿಸಿದ್ದಾರೆ. ಯಾವ ಪದವನ್ನು ಸುಮ್ಮನೆ ವ್ಯರ್ಥವಾಗಿ ಬಳಸುವ ಪ್ರಯತ್ನಕ್ಕೆ ಹೋಗಿಲ್ಲ. ಪ್ರಾಸವು ತ್ರಾಸವಾಗಿ ಬರದೇ ಹಸನಾಗಿ ಬಂದಿದೆ.‌ ಚುಟುಕಗಳ ಗತ್ತಾದ ಕೊನೆಯ ಸಾಲಿನ ಅಥವಾ ಕೊನೆಯ ‌ಪದದ ಪಂಚ್ ತುಂಬಾ ಯಶಸ್ವಿಯಾಗಿ ಗೆದ್ದಿದೆ. 
ಒಂದೆರೆಡು ಚುಟುಕುಗಳನ್ನು ನೋಡೋಣ.. 

ನನ್ನ ಮನೆ ಓಣಿಯಲ್ಲಿಹಕ್ಷೌರಿಕನು ದುರುಗುಟ್ಟಿನೋಡುವವನು ನನ್ನತ್ತ ತುಸು ಕೋಪ ಬೀರಿ..ತಲೆ ಬೋಳಾದ ಕಾರಣನಾನು ಅವನ ಬಳಿ ಹೋಗುವುದು ವರ್ಷಕೊಂದು ಬಾರಿ. ಪ್ರಾಸ ಮತ್ತು ಕೊನೆಯ ಸಾಲಿನ ಮ್ಯಾಜಿಕು ನಗು ತರಿಸುವುದಲ್ಲದೆ ಅವನ ಹತಾಶೆಯು ತಮಾಷೆಯಾಗುವ ಬಗೆ ಮಾರ್ಮಿಕವಾಗಿದೆ.. ನಾ ಸತ್ತಾಗ ವಿಗ್ಗನೂ ಇಡಿರಿಇಡುವುದಾದರೆ ಎನಗೆ ಪಿಂಡಇಲ್ಲದಿರೆ ಎನ್ನ ಆತ್ಮವುಕಡುಕೋಪದಿ ಆಗಬಹುದು ಕೆಂಡ.. 

ಅಂದು ನಾನುಸಭೆ ಸಮಾರಂಭಗಳಿಗೆ ಹಾಜರಾಗುತ್ತಿದೆ ಎಗ್ಗಿಲ್ಲದೇಇಂದು ಸಾಧ್ಯವಾಗುತ್ತಿಲ್ಲವಿಗ್ಗಿಲ್ಲದೆ.. ಹೀಗೆ ಎಲ್ಲಾ ಚುಟುಗಳು ಕೂಡ ಕಚಗುಳಿ‌ ಇಡುತ್ತಲೇ ತಟ್ಟುತ್ತಾ ಹೋಗುತ್ತವೆ.‌ ಖಂಡಿತ ನೀವು ಪುಸ್ತಕವನ್ನು ಪೂರ್ತಿ ‌ಓದಿದ ಮೇಲೆ ಸುಮ್ಮನೆ ಹಾಗೆ ಎದ್ದು ಕನ್ನಡಿಯ‌ ಮುಂದೆ ಹೋಗಿ ನಿಂತು ನಿಮ್ಮ ತಲೆಗೂದಲು ಯಾವ ಹಂತದಲ್ಲಿದೆ ಇನ್ನೆಷ್ಟು ದಿನ ನಾನು ಎಗ್ಗಿಲ್ಲದೆ ಬದುಕಬಹುದೆಂದು ನೋಡಿಕೊಳ್ಳುತ್ತೀರಿ. 

ಎಷ್ಟೊ ಬಾರಿ ಹೊಸಬರ ಒಳ್ಳೆಯ ಬರಹಗಳು ಓದುಗರನ್ನು ತಲುಪದೇ ಹೋಗುತ್ತವೆ.‌ ಹೊಸಬರು ಮಹಾ ಏನ್ ಬರೆದಾರು ಎಂಬ ಉಡಾಫೆಯನ್ನು ನಾನು‌ ಗುರುತಿಸಿದ್ದೀನಿ.‌ ಚುಟುಗಳನ್ನೇ ಉಸಿರಾಡಿ ಬರೆದ ಇವರ ಈ ಪುಸ್ತಕ ಹೆಚ್ಚು ಜನರನ್ನು ತಲುಪಬೇಕಾದದ್ದು ಅವಶ್ಯ. ನಮ್ಮಲ್ಲಿ ಹೊಸಬರನ್ನು ಪ್ರೋತ್ಸಾಹಿಸುವ ಕೊರತೆ ಇರುವುದರಿಂದ ಎಷ್ಟೊ ಒಳ್ಳೆ ಸಾಹಿತ್ಯ ತೆರೆಮರೆಯಲ್ಲೇ ಉಳಿದು ಹೋಗಿದೆ. 
ಪುಸ್ತಕದ ಪ್ರತಿಪುಟವು ಸೊಗಸಾಗಿ ಬಂದಿದೆ. ಏಕನಾಥ್ ಬೋಂಗಾಳೆಯವರ ಕಾರ್ಟೂನ್ ಗಳು ನಿಮ್ಮ ನಗುವನ್ನು ಮತ್ತಷ್ಟು ಹುರುಪುಗೊಳಿಸುತ್ತವೆ.‌ ತುಂಬಾ ತಮಾಷೆಯಾಗಿ ಓದಿ ಗಂಭೀರವಾಗಿ ಯೋಚಿಸುವಂತೆ ಮಾಡುವ ಈ ಪುಸ್ತಕ ಎಲ್ಲರೂ ಓದಲೇಬೇಕಾದದ್ದು. ಕಾವ್ಯಸ್ಪಂದನ ಪಬ್ಲಿಕೇಷನ್ ಇದನ್ನು ಪ್ರಕಟಿಸಿದೆ. 

‍ಲೇಖಕರು Admin

26 April, 2022

1 Comment

  1. ಸುತ(ಸುರೇಶ ತಂಗೋಡ

    ಉತ್ತಮವಾದ ಬರಹ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading