ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.
ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.
ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ.
ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.
ಹಿಂದೆ ಅವಧಿಯ ಕತೆ ಕಿಟಕಿ ಅಂಕಣದಿಂದ ಇದೀಗ ಮತ್ತೊಂದು ಹೊಸ ಅಂಕಣದೊಂದಿಗೆ ಬರುತ್ತಿದ್ದಾರೆ.
ಅಂಕಣ 3
ಹೊಟ್ಟೆಯ ಎಡಭಾಗದ ನೋವು ಅಷ್ಟೇನು ತಹಬದಿಗೆ ಬಂದಿಲ್ಲ. ಮನಸು ಬಾಗಿಲಕಡೆಯೇ ನೆಟ್ಟಿದೆ. ಡಾಕ್ಟರ್ ಬರುವ ಹೊತ್ತು. ನಿನ್ನೆ ಇಷ್ಟೊತ್ತಿಗಾಗಲೇ ಬಂದು ಹೋಗಿದ್ದರು. ಇಂದು ತಡವಾಗಿದೆ. ಪಾಪ ಯಾರನ್ನು ಆಪರೇಷನ್ ಥಿಯೇಟರಿನ ಟೇಬಲ್ ಮೇಲೆ ಅಡ್ಡ ಮಲಗಿಸಿಕೊಂಡು ವಿಧಿಯೊಂದಿಗೆ ಶರಂಪರ ಜಗಳಕ್ಕೆ ಇಳಿದಿದ್ದಾರೊ ಏನೊ. ಅವರು ಈ ಬೆಳಗೆಗೆ ಇಲ್ಲಿಗೆ ಬಂದಾರೊ, ಬಾರರೊ. ನರ್ಸ್ ಏನನ್ನೂ ಸರಿಯಾಗಿ ಹೇಳುತ್ತಿಲ್ಲ. ಮಾತ್ರೆ ಕೊಡುವುದು, ಹೋಗುವುದು ಮಾಡುತ್ತಾಳೆ. ಅವಳ ಕಣ್ಣಲ್ಲಿ ನಿದ್ದೆಗೆಟ್ಟು ಗೆಟ್ಟು ಸತ್ತು ಹೋದ ಕನಸುಗಳು ಕಾಣಿಸುತ್ತಿವೆ. ಮನೆ ನೆನಪಾಗುತ್ತದೆ. ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಎಲ್ಲರಿಗೂ ಮನೆ ಹೀಗೆಯೇ ಕಾಡುತ್ತದೆ. ಮತ್ತೆ ಮನೆಗೆ ಹೋಗುತ್ತೇನೆಯೇ ಹೋಗಲಾರೆನೇ? ಪಕ್ಕದ ವಾರ್ಡಿನಲ್ಲಿ ನಿನ್ನೆ ಯಾರೊ ಸತ್ತರಂತೆ, ಪಕ್ಕದ ಬೆಡ್‍ನವರದು ಇಂದು ಡಿಸ್‍ಚಾರ್ಜ್ ಅಂತೆ. ಏನೇನೊ ಯೋಚನೆಗಳು. ಒಂದು ಕ್ಷಣ ಎದೆ ಸಣ್ಣಗೆ ಕಂಪಿಸುತ್ತದೆ. ಕಂಪನದ ಸದ್ದು ರಸ್ತೆಗೂ ಕೇಳಿಸುತ್ತದಾ? ಆಸ್ಪತ್ರೆಯ ಮುಂದಿನ ರಸ್ತೆಯಲ್ಲಿ ಸುಮ್ಮನೆ ನಡೆದು ಹೋಗುವ ಜನರ ಎದೆಯೊಳಗೆ ಏನೊ ಒಂದು ಕನಲುತ್ತಲ್ಲ ಅದು ಒಳಗೆ ಮಲಗಿರುವ ರೋಗಿಗಳ ಕಂಪನದ ಪರಿಣಾಮವೇ ಇರಬೇಕು.
ಅಲ್ಲೊಬ್ಬ ಕಾಲು ಮುರಿದುಕೊಂಡ ವ್ಯಕ್ತಿ ಬ್ಯಾಂಡೇಜ್ ಸುತ್ತಿಕೊಂಡು ನಡೆಯಲಾಗದೆ ತೊಳಲಾಡುತ್ತಾನೆ. ಅರಾಮಾಗಿ ಓಡಾಡುವವರನ್ನು ಕಂಡು, ಅಯ್ಯೋ ಇವರೆಲ್ಲಾ ಅದೆಷ್ಟು ಅದೃಷ್ಟವಂತರು ಎಂದು ಹಲುಬುತ್ತಾನೆ. ನನಗೇ ಆಗಬೇಕಿತ್ತಾ ಅಂದುಕೊಳ್ಳುತ್ತಾನೆ. ಕಾಲೇ ಇಲ್ಲದವನೊಬ್ಬ ಮುಂದೆ ಹಾದು ಹೋದಾಗ ನನ್ನದು ನಾಳೆಯೊ, ನಾಡಿದ್ದು ಕಾಲು ಸರಿಯಾಗಬಹುದು ಇವನದೊ ಕಾಲೇ ಇಲ್ಲವೆಂದು ಸಮಾಧಾನಪಟ್ಟುಕೊಳ್ಳುತ್ತಾನೆ. ಖಿನ್ನತೆ ಕರುಣಿಸುವ ಆಸ್ಪತ್ರೆ ತಕ್ಷಣವೇ ಮದ್ದು ಕೂಡ ಸವರುತ್ತಲ್ಲಾ..!
ಇಲ್ಲಿನ ಗಾಳಿಗೆ ಸ್ಪಿರಿಟ್ ನೊಂದಿಗೆ ಗೆಳೆತನವಿದೆ. ಔಷಧಿಯೊಂದಿಗೆ ಪ್ರೇಮವಿದೆ. ಇಲ್ಲೊಂದು ತಣ್ಣನೆಯ ಮೌನವಿದೆ. ಮೌನವು ಏನೇನೊ ಗೊಣಗಿದಂತೆ, ಕರೆದಂತೆ, ಇರಿದಂತೆ ಭಾಸವಾಗುತ್ತದೆ. ಇಲ್ಲಿನ ಮೌನಕ್ಕೆ ವಿಲಕ್ಷಣತೆ ಇದೆ. ಅದು ರೋಗಿಯ ಮೌನವೂ ಹೌದು, ರೋಗದ ಮೌನವೂ ಹೌದು, ವೈದ್ಯರ ಮೌನವೂ ಹೌದು ಮತ್ತು ಇಡೀ ಆಸ್ಪತ್ರೆಯ ಮೌನವೂ ಹೌದು.
ಅಲ್ಲೊಂದು ನಗುವ ಹೂವಿನ ಚಿತ್ರಪಟ ಇದೆ. ಆದರೆ ಆ ಹೂವುಗಳು ನಗುತ್ತಿಲ್ಲ. ಈ ಆಸ್ಪತ್ರೆಯ ಯಾವ ಹೂವುಗಳೂ ನಗುವುದಿಲ್ಲ. ಆಚೆ ಕಾಂಪೌಂಡಿನ ಪಕ್ಕ ಆರಳಿದ ಕೆಂಪು ಹೂವಿಗೆ ಓಟಿ ರೂಮಿನ ರಕ್ತದ ಕಲೆಯಿದೆ. ಅದೇ ಚಿತ್ರಪಟದ ಪಕ್ಕ ನೇತುಹಾಕಿದ ಇನ್ನೊಂದು ಚಿತ್ರಪಟದಲ್ಲಿ ನಗುವ ಮಗುವಿನ ಚಿತ್ರವಿದೆ. ಜೋರಾಗಿ ಬಂದ ಅಂಬ್ಯುಲೆನ್ಸ್ ನ ಕೂಗಿನ ಸದ್ದಿಗೆ ಮಗು ಬೆಚ್ಚಿಬೀಳುತ್ತದೆ. ಅದನ್ನು ಸಮಾಧಾನಿಸುವವರು ಯಾರು? ಇದೇನು ಅಂಬ್ಯಲೆನ್ಸ್ ಸದ್ದೊ, ಒಳಗೆ ಹಾಸಿಗೆ ಮೇಲೆ ಮಲಗಿರುವವರ ಎದೆ ಬಡಿತದ ಒಟ್ಟು ಮೊತ್ತವೊ? ಇನ್ನೂ ಆರೋಗ್ಯವಂತ (?) ಎಂದುಕೊಂಡವರಿಗೆ ನೀಡುವ ಎಚ್ಚರಿಕೆಯ ಕರೆಗಂಟೆಯೊ? ಏನೆಂದೂ ಅಂದಾಜಾಗುವುದಿಲ್ಲ.
ಆಸ್ಪತ್ರೆಯ ಗೋಡೆಗಳು ಅತ್ಯಂತ ಪ್ರಾಮಾಣಿಕ ಪ್ರಾರ್ಥನೆಯನ್ನು ಕೇಳಿಸಿಕೊಂಡಿವೆ. ಒಂದೊಂದು ಪ್ರಾರ್ಥನೆಗೂ ಒಂದೊಂದು ನಿಟ್ಟುಸಿರನ ಲೇಪನವಿದೆ. ಗುಡಿಯಲ್ಲಿ ಹೂವು ಗಂಧದಲ್ಲಿ ಪುಳಕಿತನಾಗಿ ಆನಂದದಿಂದ ಪ್ರಾರ್ಥನೆ ಸ್ವೀಕರಿಸುವ ದೇವರು ಇಲ್ಲಿನ ಪ್ರಾರ್ಥನೆ ಕೇಳಿ ಕಂಗಾಲಾಗುತ್ತಾನೆ. ರೋಗಿಗಳನ್ನು ನೋಡಲು ಬರುವವರ ಬುತ್ತಿ, ಹಣ್ಣಿನೊಳಗೆ ಯಾರ ಕಣ್ಣಿಗೂ ಕಾಣಿಸದ ಸಾಂತ್ವನವಿದೆ. ನೋಡಲು ಬಂದವರ ಮಾತಿನಲ್ಲಿ ವೈದ್ಯರು ಕೊಡಲಾಗದ ಒಂದು ಔಷಧಿ ಇದೆ. ಅವರ ಮುಂದೆ ರೋಗಿಯು ಹಾಕುವ ಎರಡು ಹನಿ ಕಣ್ಣೀರಿಗೆ ಅವನನ್ನು ಒತ್ತಡದಿಂದ ಪಾರು ಮಾಡುವ ಶಕ್ತಿ ಇದೆ.
ಆಸ್ಪತ್ರೆಯ ಹೊಸ್ತಿಲು ತುಳಿಯುವವರ ಮುಖದಲ್ಲಿ ತರಹೇವಾರಿ ಆತಂಕಗಳು ಬದುಕಿನ ಅಷ್ಟೂ ತಲ್ಲಣಗಳು ಇಲ್ಲಿ ಮಾತ್ರ ನೆರೆದಂತೆ ಕಾಣಿಸುತ್ತವೆ. ಮತ್ತೊಮ್ಮೆ ಇತ್ತ ಬರಬಾರದೆಂದು ಗುಣವಾದ ವ್ಯಕ್ತಿ ಆಚೆ ಕಾಲಿಡುತ್ತಾನೆ. ‘ಹೋಗಿ ಬನ್ನಿ’ ಎನ್ನುವ ಶಬ್ದವನ್ನು ಆಸ್ಪತ್ರೆಯ ಶಬ್ದಕೋಶದಿಂದ ಡಿಲೀಟ್ ಮಾಡಲಾಗಿದೆ.
ರಕ್ತ ಮೂತ್ರ ಮೂಳೆ ಮಾಂಸಗಳ ಪರೀಕ್ಷೆಗೆ ನೀಡಿ ಕೂತವರ ಕ್ಷಣಗಳನ್ನು ಯುಗಗಳಲ್ಲಿ ಅಳೆಯಲಾಗುತ್ತದೆ. ಅವರ ಎದೆಯ ಸದ್ದು ಹೊರಗೆ ಗುಡುಗಿನಂತೆ ಕೇಳಿಸುತ್ತದೆ. ಪರೀಕ್ಷೆ ಫಲಿತಾಂಶ ಒಳ್ಳೆಯದೇ ಬರಲಿ ದೇವರೇ ಎಂದು ಅವರ ಕಣಕಣವೂ ಬೇಡುತ್ತದೆ.
ಆಸ್ಪತ್ರೆಯ ಮುಂಭಾಗದ ಹೋಟೆಲ್‍ನಲ್ಲಿ ಗಂಜಿ ಸಿಗುತ್ತದೆ. ಬಿಸಿ ನೀರು ಕೇಳಿ ಪಡೆಯಿರಿ ಎಂಬ ಫಲಕವೂ ಇದೆ. ಪಾಪ ಅಜ್ಜಿಯೊಬ್ಬಳು ಮೊಮ್ಮಗುವಿಗೆ ಒಂದು ಲೋಟ ಹಾಲು ಕಾಸಿ ಕೊಡುತ್ತೀರಾ ಎಂದು ಬರುತ್ತಾಳೆ. ಆ ಕ್ಷಣಕ್ಕೆ ಇಡೀ ಹೋಟೆಲ್ ಮೌನವಾಗುತ್ತದೆ. ಪ್ರತಿ ದಿನ ಇಡ್ಲಿಯೇ ಹೆಚ್ಚು ಖರ್ಚಾಗೋದು ಸರ್ ಅಂತಾನೆ ಹೋಟೆಲ್ ನವ. ಔಷಧಿ ಕೊಂಡ ಮಿಕ್ಕಿದ್ದರಲ್ಲಿ ಎರಡು ತುತ್ತು ತಿನ್ನುತ್ತದೆ ಜೀವ. ಆಸ್ಪತ್ರೆ ಮುಂಭಾಗದ ಹೋಟೆಲ್‌ನಲ್ಲಿ ಬರೀ ವ್ಯಾಪಾರವಷ್ಟೇ ನಡೆಯುವುದಿಲ್ಲ.
ಸಾವಿನೊಂದಿಗೆ ಹೋರಾಡಿ ಗೆದ್ದ ದೊಡ್ಡಮೊತ್ತವು ನಾಳೆಗಳನ್ನು ಮಂಕಾಗಿಸುತ್ತದೆ. ದುಬಾರಿ ಬಿಲ್ಲುಗಳೂ ಒಂದು ರೋಗವೇ! ಆ ರೋಗದ ವಾಸಿಗೆ ಜೀವನ ಪೂರ್ತಿ ದುಡಿಯಬೇಕು. ಕೆಲವರ ಸಾವು ಸುಖ. ಬದುಕಿ ಉಳಿದ ಕೆಲವರಿಗೆ ಈ ಬದುಕೂ ನರಕ. ಬದುಕಿ ಬಂದವರ ಕೆಲವರ ಆನಂದದ ಕಣ್ಣೀರು, ವಾಸಿಯಾಗದೆ ಬಂದವರ ನಿಟ್ಟುಸಿರು. ಸತ್ತವರ ಆತ್ಮಗಳ ಪಿಸುಗಾಟ..ಇಲ್ಲಿ ಏನುಂಟು, ಏನಿಲ್ಲ! ಸಾವು ಗೆಲ್ಲುವ ಹೊಡೆದಾಟದಲಿ ಎಷ್ಟೊಂದು ತರಚುಗಾಯಗಳು. ಬದುಕು ಬಂದವರಿಂದ ಸಿಗುವ ಬದುಕಿನ ನಶ್ವರತೆ ಬೋಧನೆಯ ಪಾಠಗಳು ಅದೆಷ್ಟೊ. ಮತ್ತೆ ಮತ್ತೆ ಮೂಡಿದ ಭರವಸೆಗಳು ಲೆಕ್ಕಕ್ಕಿಲ್ಲ.
ಜನರಲ್ ವಾರ್ಡಿನಲ್ಲಿ ಆಗ ತಾನೇ ಸತ್ತವನ ಹೆಣವೊಂದನ್ನು ಸಾಗಿಸುವ ಹೊತ್ತಿನಲ್ಲೇ ಅದೇ ದಾರಿಯಲ್ಲಿ ಸಿಗುವ ಹೆರಿಗೆಯ ಮನೆಯಿಂದ ಮಗುವೊಂದು ಕಿಟಾರನೆ ಕಿರುಚಿ ಜಗತ್ತಿಗೆ ಬಂದಿದ್ದನ್ನು ಸಂಭ್ರಮಿಸುತ್ತದೆ. ಇಡೀ ಆಸ್ಪತ್ರೆಯ ಒಡನಾಟದಲ್ಲಿ ಬದುಕು ಸಾಕು ಎನಿಸಿ ಹೊರಟು ನಿಲ್ಲುವವನಿಗೆ.. ಈ ಹಸುಗೂಸಿನ ಅಳುವಿನ ಸದ್ದು ಇದೆಯಲ್ಲಾ ಅದು ಮತ್ತೆ ನಾನು ಬದುಕ ಬೇಕು ಎನ್ನುವಂತೆ ಮಾಡುತ್ತದೆ. ಹುಟ್ಟು ಸಾವುಗಳು ಒಂದೇ ದಾರಿಯಲ್ಲಿ ತಾನೇ ಬರಬೇಕು!?






0 Comments