ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.ಹೊನ್ನಾಳಿಯಲ್ಲಿ ವಾಸ.
ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.
ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ.
ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.
ಹಿಂದೆ ಅವಧಿಯ ಕತೆ ಕಿಟಕಿ ಅಂಕಣದಿಂದ ಇದೀಗ ಮತ್ತೊಂದು ಹೊಸ ಅಂಕಣದೊಂದಿಗೆ ಬರುತ್ತಿದ್ದಾರೆ.
ಅಂಕಣ 7
ಅವನು ಜೋಕ್ ಹೇಳುತ್ತಾನೆ ಅವಳು ಝರಿಯಂತೆ ನಗುತ್ತಾಳೆ. ಅವಳು ಗಂಟಲು ತುಂಬಿದ ನೋವು ಹೇಳಿಕೊಳ್ಳುತ್ತಾಳೆ. ಅವನು ಅವಳ ಕಣ್ಣೀರನ ಜೊತೆ ತಾನೂ ಒಂದಾಗಿ ಹರಿಯುತ್ತಾನೆ. ಅವಳು ಅವನ ಕೈಮೇಲೆ ಕೈ ಇಡುತ್ತಾಳೆ. ಅವನು ಸಮಾಧಾನಿಸುತ್ತಾನೆ. ಆ ಸ್ಪರ್ಶ ಮತ್ತು ಸಮಾಧಾನ ಒಂದು ಬಿಡುಗಡೆ. ಅವನೇನು ಪಡೆಯುವುದಿಲ್ಲ. ಅವಳೂ ಕೂಡ ಪಡೆಯುವುದಿಲ್ಲ. ಮನಸು ಏನ್ನನ್ನೊ ಕಳೆದುಕೊಂಡು ಹಗುರಾಗುತ್ತದೆ. ಅವಳಿಗೆ ಗಂಡನಿದ್ದಾನೆ. ಅವನಿಗೂ ಹೆಂಡತಿಯಿದ್ದಾಳೆ. ಅವಳು ಗಂಡನ ಗೆರೆ ದಾಟುವುದಿಲ್ಲ. ಅವನ ಕಣ್ಣ ಅಣತಿ ಮೀರುವುದಿಲ್ಲ. ರಾತ್ರಿ ಅವನು ಮನೆಗೆ ಬರದೆ ಊಟವನ್ನೂ ಮಾಡುವುದಿಲ್ಲ. ಅವನಿಗೂ ಅಷ್ಟೇ ತನ್ನ ಹೆಂಡತಿಯ ಸೆರಗಿನಲ್ಲಿ ಜಗತ್ತಿನಲ್ಲಿ ಎಲ್ಲೂ ಸಿಗದ ನೆಮ್ಮದಿಯಿದೆ..
ಹಾಗಾದರೆ ಅದೇನದು? ಝರಿಯ ನಗು, ಹೊಳೆಯ ಅಳು, ಸ್ಪರ್ಶ, ಸಮಾಧಾನ… ಕಣ್ಣಗಲಿಸಿ ನೋಡುವ ಲೋಕ ‘ಅದು ಆ ತರಹನಾ?’ ಅಂತ ಕೇಳಬಹುದು. ಆ ತರಹ ಅಂದರೆ? ಪತಿ, ಪತ್ನಿ, ಔರ್… ಅಂತ ಅಲ್ಲವಾ? ಕ್ಷಮಿಸಿ ಇದು ನೀವು ಅಂದುಕೊಂಡ ಆ ತರಹ ಅಲ್ಲ. ಕರಿಮಣಿ ಮಾಲಿಕತ್ವದ ಆಚೆಯೂ ಒಂದು ಗೆಳೆತನದ ಇರುತ್ತದೆ ಮತ್ತು ಇರಬೇಕು. ಆ ಗೆಳೆತನ ಆ ತರಹದ್ದಾಗಿರುವುದಿಲ್ಲ, ಅದು ಒಲವಲ್ಲ, ಒಂದು ಎಕ್ಸಟ್ರಾ ಸಂಬಂಧ ಅಲ್ಲ, ತೀರಾ ಕೆಟ್ಟದ್ದು ಅನ್ನೋದು ಅಲ್ಲೇನು ಇರುವುದಿಲ್ಲ.
ದಾಂಪತ್ಯ ಇನ್ನಷ್ಟು ಲವಲವಿಕೆಯದ್ದಾಗಲು ಇದು ತನ್ನ ಕಾಣಿಕೆ ಸಲ್ಲಿಸುತ್ತದೆ. ಯವ್ವನ, ಅದು ಧುಮ್ಮಿಕ್ಕುವಾಗಲೇ ಅದಕ್ಕೊಂದು ಮದುವೆ, ದೈಹಿಕ ವಾಂಚೆಗಳ ಈಡೇರಿಕೆ, ಮಕ್ಕಳು, ಅವರ ಪೋಷಣೆ, ಅವರ ಬದುಕು ಕಟ್ಟಿಕೊಡುವುದು, ಇಳಿ ವಯಸ್ಸು, ಅವನು ಇವಳಿಗೆ ಆಸರೆ ಇವನು ಅವಳಿಗೆ ಆಸರೆ.. ಇಷ್ಟಕ್ಕೆ ಬದುಕು ಮುಗಿದು ಹೋಗುತ್ತಾದಾ? ಅಥವಾ ಮುಗಿದು ಹೋಗಬೇಕಾ? ಕಟ್ಟಿದ ಕರಿಮಣೆಗೆ ಅವನು ಬದ್ಧ, ಕಟ್ಟಿಕೊಂಡ ಕರಿಮಣಿಗೆ ಅವಳು ನಿಷ್ಟಳು. ಇಷ್ಟಕ್ಕೆ ಬದುಕು ಮುಗಿಯುವುದಿಲ್ಲ. ಕರಿಮಣಿ ನೆರಳಲ್ಲಿ ಎಲ್ಲವೂ ದಕ್ಕಿಬಿಡುವುದಿಲ್ಲ. ಕಟ್ಟಿಸಿಕೊಂಡ ಕರಿಮಣಿಯೇ ಕಣ್ಣೀರು ತರಿಸುವಾಗ ನೋವು ಅದನ್ನು ತೊಡೆಯುವ ಒಂದು ಬೆರಳಿಗಾಗಿ ಹುಡುಕುತ್ತದೆ; ಇನ್ನೊಂದು ದೇಹಕ್ಕಲ್ಲ. ಕರಿಮಣಿ ಕಟ್ಟಿದವನಿಗೆ ಎಲ್ಲಾ ಸಮಾಧಾನಗಳು ಅದರ ನೆರಳಲ್ಲಿ ಸಿಕ್ಕಿಬಿಡುತ್ತವೆ ಅಂತಲ್ಲ. ಅವನಿಗೊಂದು ಮನಸು ಬೇಕು, ಯಾರದೊ ತೋಳಲ್ಲ.
ಒಂದು ಬಂಧವನ್ನು ‘ಮಾಲಿಕತ್ವ’ ಹೊಂದಿ ಪೊರೆಯುವುದು ಬೇರೆ. ಮಾಲಿಕತ್ವದ ಇಲ್ಲದೆ ಅವರಿಗಾಗಿ ತುಡಿಯುವುದು ಬೇರೆ. ‘ಕರಿಮಣಿ ಮಾಲಿಕ’ ಅನ್ನುವ ಪದದಲ್ಲೇ ಒಂದು ದೋಷವಿದೆ. ನಾನು ಅವಳಿಗೆ ಬದುಕು ಕೊಟ್ಟೆ ಅಥವಾ ನಾನು ಅವನು ಕೊಟ್ಟ ಬದುಕಿನಲ್ಲಿ ಜೀವಿಸುತ್ತಿದ್ದೇನೆ ಎಂಬ ಭಾವ ಬಂದು ಬಿಡುತ್ತದೆ. ಮದುವೆಗಳಲ್ಲಿ ಅಂತ ಭಾವವೇ ಹೆಚ್ಚು. ಆದರೆ ಮದುವೆ ಒಂದು ಭದ್ರತೆ. ಮಕ್ಕಳಿಗೆ ಭವಿಷ್ಯ. ಇಳಿಗಾಲಕ್ಕೆ ಆಸರೆ. ಆರೋಗ್ಯದ ಕಾಳಜಿ, ಲೈಂಗಿಕತೆಯ ಪೂರೈಕೆ, ಸುಲಲಿತ ಕೌಟುಂಟಿಕ ವ್ಯವಸ್ಥೆಗೆ ಆಧಾರ. ಅದನ್ನು ಒಂದು ಕರಿಮಣಿ ದಾರ ಉಳಿಸುತ್ತದೆ ಅನ್ನೋದು ಸೋಜಿಗ. ಅದು ಈ ಸಂಸ್ಕೃತಿ ಕೊಡಮಾಡಿದ ದೊಡ್ಡ ಉಡುಗೊರೆ.
ಆದರೆ ಕರಿಮಣಿ ಹಂಗಿಲ್ಲದ ಒಂದು ಶುದ್ಧ ಗೆಳೆತನ ಅವನಿಗೂ ಅವಳಿಗೂ ಅವಶ್ಯಕ. ಅದನ್ನು ಕರಿಮಣಿ ಮಾಲಿಕನಿಗೆ ಹೇಳಿಕೊಳ್ಳಬೇಕಾ? ಕರಿಮಣಿ ಕಟ್ಟಿದವಳಿಗೆ ಹೇಳಿಕೊಳ್ಳಬೇಕಾ? ಅದು ನಿಮಗೆ ಬಿಟ್ಟದ್ದು. ಆದರೆ ಹೇಳಿಕೊಳ್ಳುವ ಅವಶ್ಯಕತೆ ಇಲ್ಲ. ಸುಮ್ಮನೆ ಮನಸು ಅನುಮಾನ ಹೂಡುತ್ತದೆ. ಅದು ಯಾರಿಗಾದರೂ ಸಹಜವೇ!. ದಾಂಪತ್ಯದಲ್ಲಿ ಆಗುವ, ಅಲ್ಲಿ ಹೇಳಿಕೊಳ್ಳಲಾಗದ ಅನೇಕ ಭಾವಗಳಿಗೆ ಅದು ಹೆಗಲಾಗಬೇಕು. ಗೆಲುವಾಗಬೇಕು.
ಗಂಡ ಹೆಂಡತಿಯ ನಡುವೆ ಒಂದು ಸಣ್ಣ ಖಾಸಗಿತನವಿರಬೇಕು. ತೀರಾ ಸಣ್ಣದು. ಪುಟ್ಟ ಅಡ್ಡಗೋಡೆ ಇರಬೇಕು. ಅಲ್ಲಿ ನೀವು ಮಾತ್ರ ಇರಬೇಕು. ನಿಮ್ಮ ಸಣ್ಣ ಪುಟ್ಟ ಖುಷಿಗಳು, ನೋವು-ನಲಿವುಗಳು, ಗೆಳೆತನ- ಆತ್ಮೀಯತೆ ಇಂತವೆಲ್ಲಾ ಇರಬೇಕು. ಆಗ ನೀವು ಸುಖಿ. ಇದು ದಾಂಪತ್ಯವನ್ನು ಇನ್ನಷ್ಟು ಬಿಗಿಗೊಳಿಸುತ್ತದೆ. ಸದಾ ಅಂಟಿಕೊಂಡೆ ಇರುವ ದಾಂಪತ್ಯ ಸುಸ್ತು ಹೊಡೆಸುತ್ತದೆ. ಸಾಕು ಅನಿಸುತ್ತದೆ. ಬಿಡುಗಡೆ ಬೇಡುತ್ತದೆ. ಬದುಕೆಂದರೆ ಬರೀ ದಾಂಪತ್ಯವಷ್ಟೇ ಅಲ್ಲ.’ಅವನು’ ಅಥವಾ ‘ಅವಳ’ ಆ ಬಂಧ ಒಂದು ಎಲ್ಲೆಯಲ್ಲೇ ಇರಲಿ. ನೀವು ಹುಡುಕಲು ಹೋಗಬೇಡಿ; ಮನಸು ಹುಡುಕಿಕೊಳ್ಳುತ್ತದೆ. ಅದಕ್ಕೆ ಸಲುಗೆ ಕೊಡಿ. ಇದು ಎಂದೂ ನಿಮ್ಮ ‘ಕರಿಮಣಿ’ ಬಂಧಕ್ಕೆ ತೊಡಕಾಗಬಾರದು. ಪೂರಕವಾಗಿರಬೇಕು.
ಅನೈತಿಕತೆಯ ಗಡಿದಾಟದಂತೆ ಎಚ್ಚರವಿರಲಿ. ನೀವೂ ನಿಮ್ಮ ಮನಸು ಎರಡೂ ದುರ್ಬಲವಾಗದಂತೆ ನೋಡಿಕೊಳ್ಳಿ. ಇಲ್ಲಿ ಯಾರೂ ಮಾಲಿಕರಲ್ಲ. ಯಾರೂ ಯಾರ ಅಡಿಯಾಳು ಕೂಡ ಇಲ್ಲ. ನಮ್ಮ ನಮ್ಮ ಬದುಕು ಸುಂದರವಾಗಲು ನಾವೇ ಹಾಕಿಕೊಂಡ ಒಂದು ಚೆಂದದ ಹೂವಿನ ಬೇಲಿ. ಅದು ಸದಾ ಹಸಿರಾಗಲಿ. ಅವನು ಇರಲಿ, ಅವಳೂ ಇರಲಿ. ಮತ್ತು ಕರಿಮಣಿ ಸದಾ ಕಾಯುತ್ತಿರಲಿ.






0 Comments