
ರಾಜಾರಾಂ ತಲ್ಲೂರು
ಒಂದು ಕಲ್ಲಿನಿಂದ ಹಲವು ಹಕ್ಕಿಗಳನ್ನು ಹೊಡೆಯುವ ಪ್ರಯತ್ನದಲ್ಲಿ ಎಲ್ಲ ಹಕ್ಕಿಗಳಿಗೂ ಒರೆಸುಗಾಯ ಮಾಡುತ್ತಿರುವ ಕಲ್ಲು ತಾನು ಸ್ವತಃ ಪುಡಿ ಆಗದಿದ್ದರೆ ಸಾಕು ಎಂಬಂತಹ ಸ್ಥಿತಿ ಎದುರಾಗುತ್ತಿದೆ.
ಪಾಸಿಟಿವ್ ವಾತಾವರಣದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕಿದ್ದ ಕೆಲಸವನ್ನು “ ಕಾಳಧನಿಕರ ವಿರುದ್ಧ ಹೋರಾಟ” ಆರಂಭ ಎಂದು ವೀರಾವೇಶದಿಂದ ರಣಕಹಳೆ ಊದಿ ಆರಂಭಿಸಿದ್ದು, ಕೇಂದ್ರ ಸರ್ಕಾರಕ್ಕೆ ಈಗ ಎದೆಗುದಿಗೆ ಕಾರಣ ಆಗಿದೆ. ಭಾರತವನ್ನು ಡಿಜಿಟಲ್ ಮಾಡುವ, ರಾತ್ರೋರಾತ್ರಿ ಕ್ಯಾಶ್ ಲೆಸ್ ಆರ್ಥಿಕತೆ ಮಾಡುವ ಮಹತ್ವಾಕಾಂಕ್ಷೆ, ಈಗ ತಯಾರಿಗಳಿಲ್ಲದೇ ಕಟ್ಟಿರುವ ಗಾಳಿಗೋಪುರ ಎಂಬುದು ಪ್ರತೀ ಹಂತದಲ್ಲೂ ಸಾಬೀತಾಗತೊಡಗಿದೆ.
ಕ್ಯಾಶ್ ಲೆಸ್ ಆರ್ಥಿಕತೆ ಬಂದೇ ಬಿಟ್ಟಿದೆಯೆಂಬ ವಾದ ಎಷ್ಟು ಟೊಳ್ಳು ಎಂಬುದಕ್ಕೆ ಉದಾಹರಣೆಗಳು ಪುಂಖಾನುಪುಂಖವಾಗಿ ಸಿಗುತ್ತಿವೆ.
ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಕ್ಯಾಶ್ ಲೆಸ್ ವ್ಯವಹಾರಗಳ ಒಂದು ಝಲಕ್ ಇಲ್ಲಿದೆ ನೋಡಿ:
ಸ್ಟಾಟಿಸ್ಟಿಕ್ಸ್: (Aug 2016 ರ ಲೆಕ್ಕ)
ದೇಶದಲ್ಲಿರುವ ಒಟ್ಟು ATM ಗಳು: 2,02,801
ದೇಶದಲ್ಲಿರುವ ಒಟ್ಟು ಸ್ವೈಪ್ ಕಾರ್ಡ್ ಯಂತ್ರಗಳು (POS): 14,61,972
ದೇಶದಲ್ಲಿರುವ ಒಟ್ಟು ಕ್ರೆಡಿಟ್ ಕಾರ್ಡ್ ಗಳು: 2,63,78,940
ದೇಶದಲ್ಲಿರುವ ಒಟ್ಟು ಡೆಬಿಟ್ ಕಾರ್ಡ್ ಗಳು: 71,24,65,787
RuPay ಕಾರ್ಡ್ ಬಳಕೆ (POS): ಒಟ್ಟು ವ್ಯವಹಾರಗಳು:2.54 ಕೋಟಿ. ವ್ಯವಹಾರದ ಒಟ್ಟು ಮೊತ್ತ: 4.47 ಕೋಟಿ ರೂ.
RuPay ಕಾರ್ಡ್ ಬಳಕೆ (eCom): ಒಟ್ಟು ವ್ಯವಹಾರಗಳು:1.02 ಕೋಟಿ. ವ್ಯವಹಾರದ ಒಟ್ಟು ಮೊತ್ತ: 57 ಲಕ್ಷ ರೂ
ಇ ವಾಲೆಟ್ ಗಳ ಪೂರ್ವತಯಾರಿ?
15-20 ವರ್ಷಗಳಿಂದ ವಿದೇಶಗಳಲ್ಲಿ ಚಾಲ್ತಿ ಇರುವ PAYPAL ನಂತಹ ಇ ವಾಲೆಟ್ ವ್ಯವಸ್ಥೆಯನ್ನು ಭಾರತದಲ್ಲಿ ತರುವ ಕನಸು 2013ರ ಹೊತ್ತಿಗೇ ಆರಂಭ ಆಗಿತ್ತು. ಮುಂದೆ, 2015, ಆಗಸ್ಟ್ ತಿಂಗಳಲ್ಲಿ ರಿಸರ್ವ್ ಬ್ಯಾಂಕು, 11 ಕಂಪನಿಗಳಿಗೆ ಪಾವತಿ ಬ್ಯಾಂಕಿಂಗ್ ಸೌಲಭ್ಯವನ್ನು ನೀಡಲು “ ತಾತ್ವಿಕ ಒಪ್ಪಿಗೆ” ಕೊಟ್ಟಿತು. ಆ ಕಂಪನಿಗಳೆಂದರೆ, ರಿಲಯನ್ಸ್ ಇಂಡಸ್ಟ್ರೀಸ್, ಆದಿತ್ಯ ಬಿರ್ಲಾ ನುವೋ, ಪೇ ಟಿಎಂ, ವೊಡಾಫೋನ್, ಏರ್ಟೆಲ್, ಅಂಚೆ ಇಲಾಖೆ, ಚೋಳಮಂಡಲಂ ಡಿಸ್ಟ್ರಿಬ್ಯೂಷನ್ ಸರ್ವೀಸಸ್, ಟೆಕ್ ಮಹೀಂದ್ರಾ, NSDL, ಫಿನೋ ಪೇಟೆಕ್, ದಿಲೀಪ್ ಶಾಂತಿಲಾಲ್ ಸಾಂಘ್ವಿ (ಸನ್ ಫಾರ್ಮಾ). ಒಟ್ಟು ಬಂದಿದ್ದ 41 ಅರ್ಜಿಗಳಲ್ಲಿ ಈ 11ನ್ನು ಮಾತ್ರ ಪರಿಗಣಿಸಲಾಗಿತ್ತು.
ಮುಂದೆ ಮೊದಲ ಹಂತದಲ್ಲಿ ಅನುಮತಿ ನಿರಾಕರಿಸಲಾಗಿದ್ದ ಹಲವು ಸಂಸ್ಥೆಗಳಿಗೂ ರಿಸರ್ವ್ ಬ್ಯಾಂಕ್ ಅನುಮತಿ ನೀಡಿತು. ದೇಶದಲ್ಲಿ ಇಂದು ಅಂದಾಜು 40 ಅಂತಹ ಪಾವತಿ ಬ್ಯಾಂಕಿಂಗ್ ಸಂಸ್ಥೆಗಳಿವೆ. ಈ ಸಂಸ್ಥೆಗಳು ಬ್ಯಾಂಕುಗಳಿಗಿಂತ ಭಿನ್ನವಾಗಿದ್ದು, ಕೋರಿಕೆ ಠೇವಣಿಗಳ ಸ್ವೀಕಾರ, ಪಾವತಿ ಸೇವೆಗಳು, ಇಂಟರ್ನೆಟ್ ಬ್ಯಾಂಕಿಂಗ್ ಮತ್ತಿತರ ನಿರ್ದಿಷ್ಟ ಸೇವೆಗಳಿಗೆ ಮಾತ್ರ ಈ ಸಂಸ್ಥೆಗಳು ಸೀಮಿತವಾಗಿರುತ್ತವೆ. ಇವಕ್ಕೆ ಮಾರುಕಟ್ಟೆ ಸಿದ್ಧಪಡಿಸಿಕೊಡುವುದು ಸರ್ಕಾರ ಮತ್ತು ರಿಸರ್ವ್ ಬ್ಯಾಂಕುಗಳ ಕರ್ತವ್ಯ ಆಗಿತ್ತು.
ಇದೇ ವೇಳೆಗೆ, ಮೊಬೈಲ್ ಮೂಲಕ ಪಾವತಿ ಮಾರುಕಟ್ಟೆಯ ಬಗ್ಗೆ ಆ ವ್ಯವಹಾರಸ್ಥರು ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂಬ ಬಗ್ಗೆ Earnst & Young ಆರ್ಥಿಕ ವಿಶ್ಲೇಷಣಾ ಸಂಸ್ಥೆ 2016ರ ಆರಂಭದಲ್ಲಿ ಸಿದ್ಧಪಡಿಸಿದ ವರದಿಯು: ಸರ್ಕಾರ, RBI, ಮೊಬೈಲ್ ಪಾವತಿ ಕಂಪನಿಗಳು ಹಂತ ಹಂತವಾಗಿ ತೆಗೆದುಕೊಳ್ಳುತ್ತಿರುವ ಕ್ರಮಗಳು ಫಲ ನೀಡಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿತ್ತು. ಹಂತ ಹಂತವಾಗಿಯೇ ನಡೆದಿದ್ದರೆ, ಇದು ಒಂದು ಆರ್ಥಿಕ ಕ್ರಾಂತಿಗೆ ಕಾರಣ ಆಗಬಹುದಾದ ಕೆಲಸ ಆಗಬಹುದಿತ್ತು. ದುರದ್ರಷ್ಟವಶಾತ್ ಹಾಗಾಗಲಿಲ್ಲ.
ಈವತ್ತು, ಎಲ್ಲಿಂದಲೋ ಧುತ್ತೆಂದು ಬಂದು ತಲೆಹತ್ತಿ ಕುಳಿತಂತಿರುವ ‘ಕಾಸು ರಹಿತ ಆರ್ಥಿಕತೆ’ ಎಂಬ ಪೆಡಂಭೂತ, ಒಳಗೊಳ್ಳುವಿಕೆಯ ಕೊರತೆಯಿಂದಾಗಿ ದೇಶದ ಮನೆಮನೆಗಳಲ್ಲಿ “ಆರ್ಥಿಕ ಎಮರ್ಜನ್ಸಿ” ಗೆ ಕಾರಣ ಆಗಿದೆ. ಕೇಂದ್ರ ಸರ್ಕಾರ, NITI ಆಯೋಗಗಳು ಸಮರೋಪಾದಿಯಲ್ಲಿ ಜನರಿಗೆ ನಗದು ರಹಿತ ವ್ಯವಹಾರದ ಪಾಠ ಮಾಡಲಾರಂಭಿಸಿವೆ. ಕೇಂದ್ರದಲ್ಲಿ ಪ್ರಧಾನಮಂತ್ರಿಗಳ ಕಚೇರಿಯಿಂದಲೇ ಇದು ಆರಂಭಗೊಂಡಿದ್ದು, ಅಲ್ಲಿನ ಕೆಳದರ್ಜೆಯ ನೌಕರರಿಗೆ ಮೊಬೈಲ್ ಪಾವತಿಯ ಪಾಠ ಮಾಡುತ್ತಿರುವ ಚಿತ್ರ ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ. ಅದು ಇನ್ನು, ಸಂಪರ್ಕ – ಸಂವಹನಗಳಿಲ್ಲದ ಹಳ್ಳಿಗಳ ಕೊಟ್ಟಕೊನೆಯ ವ್ಯಕ್ತಿಗೆ ಮುಟ್ಟುವ ಹೊತ್ತಿಗೆ, ದೇಶದ ಸ್ಥಿತಿ ಎಲ್ಲಿಗೆ ತಲುಪಲಿದೆ ಎಂಬುದು ಎಲ್ಲರ ಚಿಂತೆಗೆ ಕಾರಣ ಆಗಿದೆ.
ಹೆಚ್ಚಿನ ಓದಿಗಾಗಿ:
ಆಗಸ್ಟ್ 2016ರ ಅಂತ್ಯಕ್ಕೆ ದೇಶದಲ್ಲಿರುವ ಒಟ್ಟು ಬ್ಯಾಂಕುವಾರು ಎಟಿ ಎಂ ಗಳು, POS ಗಳು, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳು ಮತ್ತು ಅವುಗಳಿಂದ ಆಗಿರುವ್ ವ್ಯವಹಾರಗಳ ಲೆಕ್ಕ ಇಲ್ಲಿದೆ: https://rbidocs.rbi.org.in/ rdocs/ATM/PDFs/ ATMPC17112016311BE3CCA94143DAA B5462E4C9733E28.PDF
ಅರ್ನ್ಸ್ಟ್ ಅಂಡ್ ಯಂಗ್ (EY) ಲೆಕ್ಕಾಚಾರ ಸಲಹಾ ಸಂಸ್ಥೆ ಭಾರತದಲ್ಲಿ ಮೊಬೈಲ್ ಪಾವತಿಗಳ ಮಾರುಕಟ್ಟೆಯ ಬಗ್ಗೆ ಮಾಡಿದ ವಿಶ್ಲೇಷಣಾ ವರದಿ ಇಲ್ಲಿದೆ:








There is a saying about statistics. That is, there liars, damn liars and statisticians. Those depend much on the statistics to substantiate their argument better remember this.
ಇವು ಸರಳ ಸ್ಟಾಟಿಸ್ಟಿಕ್ಸ್ ಗಳೇ ಹೊರತು ಅಂಕಿಸಂಖ್ಯೆಗಳ ಮೇಲೆ ತಲುಪಲಾದ ತೀರ್ಮಾನಗಳಲ್ಲ, ಅದೂ ಸ್ವತಃ ರಿಸರ್ವ್ ಬ್ಯಾಂಕೇ ಕೊಟ್ಟಂತಹ ಅಂಕಿಸಂಖ್ಯೆಗಳಿವು. ಲಿಂಕ್ ನೋಡಿ. Rajaram Tallur
ರಾಜಾರಾಂ ತಲ್ಲೂರ್ ಅವರಿಗೆ–(1) ಪ್ರಜಾಪ್ರಭುತ್ವದಲ್ಲಿ ‘ಪಾಸಿಟಿವ್ ಆದ ವಾತಾವರಣ’ ಎಂಬುದು ಒಂದು ಆದರ್ಶವಾಗಬಹುದಷ್ಟೇ ಹೊರತು ವಾಸ್ತವ ಆಗಲಾರದು. ಕೇವಲ ಕೆಲವೊಂದು ಕಮ್ಯುನಿಸ್ಟ್ ಆಡಳಿತದಲ್ಲಿ ಅದು ಆಗಬಹುದೇನೋ? ಹೀಗಾಗಿ ಪ್ರಜಾಪ್ರಭುತ್ವದಲ್ಲಿ ಕೆಲವೊಂದು ಸುಧಾರಣೆಗಳನ್ನು ಮುಂದಿನ ದಿನಗಳ ಒಳಿತಿಗಾಗಿ, ಕೆಲವರಿಗೆ ಸದ್ಯಕ್ಕೆ ಅನಾನುಕೂಲವೆನಿಸಿದರೂ ತರಲೇಬೇಕಾಗುತ್ತದೆ. ಹಿಂದೆ ಭಾರತದಲ್ಲಿ ಭೂಸುಧಾರಣಾ ಕಾನೂನು, ಬ್ಯಾಂಕುಗಳ ರಾಷ್ಟ್ರೀಕರಣ, ರಾಜಧನ ರದ್ದತಿ ಇವುಗಳನ್ನು ಜಾರಿಗೆ ತಂದಾಗಲೂ ‘ಎಲ್ಲೂ, ಎಲ್ಲರಲ್ಲೂ ಪಾಸಿಟಿವ್ ಆದ ವಾತಾವರಣ’ ಇರಲಿಲ್ಲ. ತಾವು ಈ ಲೇಖನವೂ ಸೇರಿದಂತೆ ತಮ್ಮ ಇತರ ಲೇಖನಗಳಲ್ಲಿ ಸಹ ಕೊಡುವ ಅಂಕಿ-ಅಂಶಗಳ ಬಗ್ಗೆ ನನ್ನ ತಕರಾರೇನೂ ಇಲ್ಲ. ಅವುಗಳ ಮೂಲಗಳನ್ನು ತಾವು ಪರಿಶೀಲಿಸಿಯೇ ಕೊಟ್ಟಿರುತ್ತೀರಿ. ಆದರೆ ಅಂಕಿ-ಅಂಶಗಳು ‘ಬಿಚ್ಚಿಡುವುದಕ್ಕಿಂತ ಮುಚ್ಚಿಡುವುದೇ ಜಾಸ್ತಿ’. ಬ್ಯಾಂಕು, ಎಟಿಎಂ ಗಳಲ್ಲಿ ತಲೆದೋರಿರುವ ನೋಟುಗಳ ಸಮಸ್ಯೆಯನ್ನು ಎದುರಿಸುವುದು ಸರ್ಕಾರಕ್ಕೆ ಒಂದು ಸವಾಲೇ ಸರಿ. ಆದರೆ ಆ ನಿಟ್ಟಿನಲ್ಲಿ ಅದು ಕಾರ್ಯಪ್ರವೃತ್ತ ಆಗೇ ಇಲ್ಲ ಎನ್ನುವುದು ಸರಿಯಲ್ಲ. ಬೇರೆ ಬೇರೆ ಮಾರ್ಗಗಳಿಂದ ಈ ತಳಮಳವನ್ನು ನಿವಾರಿಸುತ್ತಿದೆ. ಇಂದಿನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ಕೆಲವು ವರದಿಗಳ ಮುಖ್ಯ ಅಂಶಗಳು ಹೀಗಿವೆ. ೧. ಮೈಸೂರಿನಲ್ಲಿರುವ ಆರ್ ಬಿ ಐ ನ ನೋಟು ಮುದ್ರಣ ಘಟಕದಲ್ಲಿ ನಿತ್ಯ ಮೂರು ಕೋಟಿ ನೋಟುಗಳನ್ನು ದಿನದ ಇಪ್ಪತ್ತನಾಲ್ಕು ಗಂಟೆಗಳೂ ಮುದ್ರಿಸಲಾಗುತ್ತಿದೆ. ಚಿಲ್ಲರೆ ಸಮಸ್ಯೆ ನೀಗಿಸಲು ಐನೂರು ಮುಖಬೆಲೆಯ ನೋಟುಗಳಿಗೆ ಆದ್ಯತೆ ನೀಡಲಾಗುತ್ತಿದೆ. ೨. ಅಲ್ಲಿಯ ಸಿಬ್ಬಂದಿಗೆ ನೆರವಾಗಲು (ಯಂತ್ರಗಳಿಗೆ ಕಾಗದ ಭರ್ತಿ ಮಾಡುವುದು, ಟ್ರಾಲಿ ಎಳೆದು ತರುವುದು ನೋಟು ಪ್ಯಾಕಿಂಗ್ ಇತ್ಯಾದಿ) ಅರೆಸೇನಾ ಪಡೆಯ ಅಸ್ಸಾಮ್ ರೆಜಿಮೆಂಟಿನ ೧೨೦ ಯೋಧರನ್ನು ನೇಮಿಸಿಕೊಳ್ಳಲಾಗಿದೆ. ೩. ಹಿಂದೆ ಆರು ತಿಂಗಳಿಗೋ, ಜಾತ್ರೆಯ ಸಮಯದಲ್ಲೋ ಒಡೆಯುತ್ತಿದ್ದ ದೇವಸ್ಥಾನಗಳ ಹುಂಡಿಗಳನ್ನು ದಿನವೂ ಒಡೆಸಿ ಅಲ್ಲಿರುವ ಹಣವನ್ನು ಬ್ಯಾಂಕ್ ಗೆ ಜಮಾ ಮಾಡುವಂತೆ ಬ್ಯಾಂಕ್ ಮ್ಯಾನೇಜರ್ ಗಳು ಮನವೊಲಿಸುತ್ತಿದ್ದಾರೆ. ಇದರ ಜತೆಗೆ ಮದ್ಯದಂಗಡಿಗಳಿಂದ ಬರುವ ಹಣವನ್ನು ಉಪಯೋಗಿಸಿಕೊಂಡು ಪರಿಸ್ಥಿತಿಯನ್ನು ಬ್ಯಾಂಕುಗಳು ಸ್ವಲ್ಪವಾದರೂ ಸುಧಾರಿಸುತ್ತಿವೆ. (ಸಂಪೂರ್ಣ ಪಾನ ನಿಷೇಧ ಇಡೀ ದೇಶದಲ್ಲಿ ಜಾರಿಗೆ ಬರುವ ತನಕ ಮದ್ಯದಂಗಡಿಗಳ ಹಣವನ್ನು ಪಾಪ-ಪುಣ್ಯಗಳ ತಕ್ಕಡಿಯಲ್ಲಿಟ್ಟು ತೂಗುವುದು ಪುನಃ ವಾಸ್ತವಕ್ಕೆ ದೂರವಾದ ಅಂಶ. ಹೀಗಾಗಿ ‘ಕುಡಿತದಿಂದ ಬ್ಯಾಂಕುಗಳ ಮಾನ ಉಳಿಯಿತು’ ಎಂಬ ಕುಹಕಕ್ಕೆ ಅರ್ಥವಿಲ್ಲ).
(2) ತಮಗೆ ಡಿಜಿಟಲೈಸೇಶನ್ ಬಗ್ಗೆ ಕೆಲವೊಂದು ಪೂರ್ವಗ್ರಹಗಳಿರಬಹುದು. ತಮ್ಮ ಅಭಿಪ್ರಾಯಗಳ ತಪ್ಪು-ಸರಿಗಳ ಬಗ್ಗೆ ನಾನು ಟೀಕೆ ಮಾಡುವುದು ಸರಿಯಲ್ಲ. ಆದರೆ ದೇಶ ನಿಧಾನವಾಗಿಯಾದರೂ ಸದ್ಯದ ಸನ್ನಿವೇಶಕ್ಕೆ ಅನುಗುಣವಾಗಿ ಅದರತ್ತ ಸಾಗುತ್ತಿದೆ. ಪ್ರಜಾವಾಣಿಯಲ್ಲೇ ಈ ದಿನ ಈ ಬಗ್ಗೆ ಮೂರ್ನಾಲಕ್ಕು ಸುದ್ದಿಯಿದೆ. ಮುಂಬೈನ ಪೋರ್ಟ್ ನಾರಿಮನ್ ಪಾಯಿಂಟ್ ಪ್ರದೇಶದಿಂದ ಎಪ್ಪತ್ತು ಕಿ ಮೀ ದೂರದಲ್ಲಿರುವ ಧಾಸಾಯ್ ಗ್ರಾಮದ ಜನರು ವಡಾಪಾವ್ ಖರೀದಿಸಲಿ ಅಥವಾ ಟ್ರ್ಯಾಕ್ಟರ್ ಕೊಳ್ಳಲಿ ಅದಕ್ಕೆ ಉಪಯೋಗಿಸುವುದು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು. ಈ ಗ್ರಾಮ ನಿಧಾನವಾಗಿ ನಗದು ವಹಿವಾಟು ರಹಿತ ಹಳ್ಳಿಯಾಗಿ ಪರಿವರ್ತನೆಯಾಗುತ್ತಿದೆಯಂತೆ. ಗುಜರಾತ್ ರಾಜ್ಯದ ಹಳ್ಳಿಯೊಂದು ದೇಶದ ಪ್ರಥಮ ಸಂಪೂರ್ಣ ಡಿಜಿಟಲೈಸ್ಡ್ ಹಳ್ಳಿಯಾಗಿದೆ ಎಂದು ಈಗಾಗಲೇ ವರದಿಯಾಗಿದೆ. ಮುಂಬೈನ ರಸ್ತೆಬದಿಯ ತರಕಾರಿಅಂಗಡಿಗಳಲ್ಲಿ Paytm ಮೂಲಕ ವ್ಯವಹಾರ ನಡೆಯುತ್ತಿದೆ. ಇದು ನಾಳೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಹೀಗೆ ಕರ್ನಾಟಕದಲ್ಲೂ ಪ್ರಾರಂಭವಾಗುವ ಬಗ್ಗೆ ಅನುಮಾನವಿಲ್ಲ ಅಲ್ಲವೇ? ಪ್ರತಿ ಹೊಸದು ಬಂದಾಗಲೂ ಜನ ಅಷ್ಟು ಸುಲಭವಾಗಿ ಸ್ವೀಕರಿಸುವುದಿಲ್ಲ. ವಿರೋಧ ಇದ್ದೇ ಇರುತ್ತದೆ. ೧೯೪೭ರಲ್ಲಿ ಸ್ವಾತಂತ್ರ್ಯ ಬಂದಾಗಲೂ ಸಹ ‘ಬ್ರಿಟಿಷರೇ ನಮ್ಮ ದೇಶದಲ್ಲಿ ಇರಬೇಕಾಗಿತ್ತು ಎಂದು ಅನ್ನುವವರು ಇದ್ದರು. ಕೊನೆಯದಾಗಿ ಸದ್ಯಕ್ಕೆ ಹೊಂದುವ ಕೆ ಎಸ್ ನರಸಿಂಹಸ್ವಾಮಿಯವರ ಕವಿತೆಯ ಮೂರ್ನಾಲಕ್ಕು ಸಾಲುಗಳನ್ನು ಪ್ರಸ್ತಾಪಿಸಿ ತುಂಬಾ ದೀರ್ಘವಾದ ಈ ಪ್ರತಿಕ್ರಿಯೆಯನ್ನು ಮುಗಿಸುತ್ತೇನೆ. ಕವಿತೆಯ ಹೆಸರು ಮರೆತಿದೆ.ಕವಿತೆಯ ಭಾವ ಹೀಗಿದೆ.
ಚಳಿಗಾಲ ಬಂದಾಗ ಅಯ್ಯೋ ಚಳಿಯೆಂದರು
ಬೇಸಿಗೆ ಬಂದಾಗ ಕೆಟ್ಟ ಬಿಸಿಲೆಂದೆರು
ಮಳೆ ಬಂದಾಗ ಬಿಡದಲ್ಲ ಈ ಶನಿಯೆಂದರು
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ
1. ಪ್ರಧಾನಮಂತ್ರಿಗಳು ಸ್ವಚ್ಛ ಭಾರತ ಅಂದಾಗ, ಅದರ ಬಗ್ಗೆ ಕೆಲವು ನೌಟಂಕಿಗಳ ಕುರಿತು ಟೀಕೆ ಇತ್ತಾದರೂ ಪಾಸಿಟಿವ್ ವಾತಾವರಣ ಇತ್ತು. ಅಂತಹದೇ ಒಂದು ಪಾಸಿಟಿವ್ ವಾತಾವರಣ ಇದ್ದಿದ್ದರೆ, ಕ್ಯಾಷ್ ಲೆಸ್ ಆರ್ಥಿಕತೆಯನ್ನು ಯಾರೂ ಬೇಡ ಎನ್ನುತ್ತಿರಲಿಲ್ಲ. ಈಗ ನೋಡಿ ದುರವಸ್ಥೆ.
2. ನಾನು ಟ್ರಾಕ್ಟರ್-ಕಾರು ಖರೀದಿಯ ಡಿಜಿಟಲೈಸೇಷನ್ ಬಗ್ಗೆ ಹೇಳುತ್ತಿಲ್ಲ. ಹಾಲು, ತರಕಾರಿ, ಕಿರಾಣಿಗಳ ಬಗ್ಗೆ ಚಿಂತಿತನಾಗಿದ್ದೇನೆ.
Rajaram Tallur
ಒಂದೇ ಮಾತಿನಲ್ಲಿ ಹೇಳುವುದಾದರೆ, ‘ಕೇಂದ್ರದಲ್ಲಿ ಬಿಜೆ ಪಿ ಸರಕಾರ ಇದೆ ಹಾಗಾಗಿ ಅವರು ಏನು ಮಾಡಿದರೂ ಅದನ್ನು ಖಂಡಿಸಬೇಕು. ವೈಚಾರಿಕತೆ ಅಂದರೆ ಅದು!’ ಅಷ್ಟೇ ತಾನೇ? ಮಿದುಳಿನಲ್ಲೂ ಕೂಡಾ ‘ಬಲ’ ಭಾಗದ ಮಿದುಳು ಹೇಳಿದ್ದನ್ನು , ಅದು ಬಲ ಎನ್ನುವ ಕಾರಣಕ್ಕೆ ತಿರಸ್ಕರಿಸಿದರೆ, ಅದು ವೈಚಾರಿಕತೆ ಎಂದು ನಂಬುವ ಪರಿಸ್ಥಿತಿ ಎದುರಾದ ಹಾಗಿದೆ. ‘ ‘ರಾತ್ರೋ ರಾತ್ರಿ’ (?) ಭಾರತವನ್ನು ಕ್ಯಾಶ್ ಲೆಸ್ ಆರ್ಥಿಕತೆ ಮಾಡುವ ಮಹತ್ವಾಕಾಂಕ್ಷೆ … ‘ ಎಂದು ಯಾರಾದರೂ ಘೋಷಿಸಿದ್ದಾರೆಯೇ? ಯಾವುದೇ ಅಪರಾಧ ಪ್ರಕರಣದಲ್ಲಿ, ನ್ಯಾಯಾಲಯವು, ದುಷ್ಕೃತ್ಯದ ಹಿಂದೆ ಇರಬಹುದಾದ ‘ಪ್ರೇರಣೆ’ ಎಂಬುದನ್ನು ಗಮನದಲ್ಲಿ ಇರಿಸಿ ತೀರ್ಪು ನೀಡುತ್ತದೆ! ಅಂದ ಹಾಗೆ, ಭಾರತದ ಬಡವರು, ಮ ಧ್ಯಮ ವರ್ಗದವರನ್ನು ಸಂಕಷ್ಟಕ್ಕೆ ಸಿಲುಕಿಸುವುದರ ಹಿಂದೆ ನರೇಂದ್ರ ಮೋದಿಯವರಿಗೆ ಯಾವ ಪ್ರೇರಣೆ ಇದೆ? ಹಾಗೆ ಮಾಡಿದರೆ ವೋಟ್ ಬ್ಯಾಂಕ್ ಅಂತೂ ಖಂಡಿತಾ ನಿರ್ಮಾಣವಾಗುವುದಿಲ್ಲವಲ್ಲ? ಅದು ನಿರ್ನಾಮವಾಗುತ್ತದೆ ಅಷ್ಟೇ! ಹೀಗಿರುವಾಗ ಪ್ರತಿಪಕ್ಷಗಳು ‘ಜನಸಾಮಾನ್ಯರಿಗೆ ತೊಂದರೆಯಾಗಿದೆ’ ಎಂದು ಗುಲ್ಲೆಬ್ಬಿಸುವುದರ ಹಿಂದಿನ ರಹಸ್ಯವೇನು? ಕಪ್ಪು ಹಣ, ಖೋಟಾ ನೋಟು ಇದಾವುದರ ವಿರುದ್ಧ ಹೋರಾಡದೆ ಇರುವುದಕ್ಕಿಂತ, ಅಲ್ಪ ಸ್ವಲ್ಪ ತಪ್ಪು ತಪ್ಪಾಗಿ ಹೋರಾಟದ ಪಟ್ಟುಗಳನ್ನು ಹಾಕುತ್ತಾ ಸೆಣಸಾಡುವುದು ಮೇಲು ಅಲ್ಲವೇ? ರೋಗಿಗೆ ಔಷಧವನ್ನೇ ನೀಡದವರು, ಅವಳಿಗೆ ಇಂಜೆಕ್ಷನ್ ನೀಡಿದಾಗ ‘ಅಯ್ಯೋ! ಪಾಪ! ಅವಳಿಗೆ ನೋವಾಗುತ್ತದೆ’ ಎಂದು ಕಿರುಚುವ ಹಾಗಿದೆ ಈ ಪ್ರತಿಪಕ್ಷಗಳ, ಕೆಲವು ಆರ್ಥಿಕ ತಜ್ಞ ರ ಕೂಗು!
ನನ್ನ ವಾದ ಇರುವುದು ಹೋರಾಟ ಕಾಳಧನದ ವಿರುದ್ಧ ನಡೆಯಬೇಕೇ ಹೊರತು ಬಡಜನರ ವಿರುದ್ಧ ಅಲ್ಲ ಎಂದು. Rajaram Tallur
we need to ponder on why in last 8 years denomination of 500 and 1000 become 86% of Currency in circulation , and moreover any new technique of implementation takes time ,
ಸೂಕ್ತ ಪೂರ್ವತಯಾರಿ ಇಲ್ಲದೆ ತರಾತುರಿಯಲ್ಲಿ ೫೦೦ ಮತ್ತು ೧೦೦೦ ನೋಟುಗಳನ್ನು ನಿಷೇಧ ಮಾಡಿರುವುದು ತಳಮಟ್ಟದ ಜನರನ್ನು ಇನ್ನಿಲ್ಲದ ಸಂಕಷ್ಟಕ್ಕೆ ದೂಡಿದೆ. ಮೋದಿಯವರ ಕುರುಡು ಅಭಿಮಾನದಿಂದ ಇದು ಕೆಲವರಿಗೆ ಅರ್ಥವೇ ಆಗುತ್ತಿಲ್ಲ. ಜನ ೨೦೦೦ ರೂಪಾಯಿ ನೋಟು ಹಿಡಿದುಕೊಂಡು ಪರದಾಡುತ್ತಿದ್ದಾರೆ ಆದರೆ ಎಲ್ಲಿಯೂ ಎರಡು ಸಾವಿರಡಾ ನೋಟಿಗೆ ಚಿಲ್ಲರೆ ಸಿಗುತ್ತಿಲ್ಲ. ಬ್ಯಾಂಕುಗಳಿಗೆ ಬಡಜನರು ಎರಡು ಸಾವಿರದ ನೋಟು ಹಿಡಿದುಕೊಂಡು ಚಿಲ್ಲರೆ ಬೇಕೆಂದು ಹೋದರೆ ನೋಟು ನಿಷೇಧ ಆಗಿ ೨೪ ದಿನ ಕಳೆದರೂ ಚಿಲ್ಲರೆ ಇಲ್ಲ ಎಂದು ಬ್ಯಾಂಕುಗಳು ಕೈಯೆತ್ತಿ ಬಡವರ ಮುಖಕ್ಕೆ ಹೊಡೆದಂತೆ ಹೇಳುತ್ತಿವೆ. ಬಡವರು ನಿರಾಶೆಯಿಂದ ಬ್ಯಾಂಕುಗಳಿಗೆ ಬಂದು ಚಿಲ್ಲರೆ ಸಿಗದೇ ಹತಾಶರಾಗಿ ಸಪ್ಪೆ ಮೋರೆ ಮಾಡಿಕೊಂಡು ಹೋಗುತ್ತಿದ್ದಾರೆ. ಸ್ವಾತಂತ್ರ್ಯಾನಂತರ ಪ್ರಥಮ ಬಾರಿಗೆ ಜನ ಇಂಥ ಕಷ್ಟವನ್ನನುಭವಿಸುತ್ತಿದ್ದಾರೆ. ಇದರಿಂದ ಮುಂದೆ ಒಳಿತಾಗಲಿದೆ ಎಂದು ಜನಸಾಮಾನ್ಯರ ಮೂಗಿಗೆ ತುಪ್ಪ ಸವರುವ ಕೆಲಸ ನಡೆಯುತ್ತಿದೆ. ಹಳೆ ನೋಟು ನಿಷೇಧ ಆಗಿ ೨೪ ದಿನ ಆದರೂ ಇನ್ನೂ ಹೊಸ ೫೦೦ ರೂಪಾಯಿ ನೋಟುಗಳು ಬರದೇ ಹೋಗಿರುವುದು ಸರ್ಕಾರದ ತಯಾರಿ ಸಮರ್ಪಕವಾಗಿರಲಿಲ್ಲ ಎಂಬುದನ್ನು ಎತ್ತಿ ತೋರಿಸುತ್ತಿದೆ. ಕೃಷಿಕರು ನೋಟು ನಿಷೇಧದ ದೊಡ್ಡ ಪೆಟ್ಟನ್ನು ಅನುಭವಿಸಬೇಕಾಗಿದೆ. ಸಹಕಾರಿ ಸೊಸೈಟಿಗಳಲ್ಲಿ ಕೃಷಿಕರು ಇಟ್ಟ ಹಣ ತೆಗೆಯಲಾರದ ದುರವಸ್ಥೆ ತಲೆದೋರಿದೆ. ಶೀತ ಆದರೆ ಮೂಗನ್ನೇ ಕೊಯ್ಯುವ ಮೋದಿಯವರ ಚಿಕಿತ್ಸೆಯಿಂದ ಜನಸಾಮಾನ್ಯ ಕಂಗಾಲಾಗಿದ್ದಾನೆ. ಬಾಯಿ ಬಿಟ್ಟು ಹೇಳುವಂತೆಯೂ ಇಲ್ಲ, ಹೇಳಿದರೆ ದೇಶದ್ರೋಹಿ ಎಂಬ ಪಟ್ಟವನ್ನು ಸಂಘ ಪರಿವಾರದ ಅಂಧ ಭಕ್ತರಿಂದ ಪಡೆಯಬೇಕಾಗುತ್ತದೆ.
ರಾಜಾರಾಂ ತಲ್ಲೂರ್ ಅವರಿಗೆ–‘ಪಾಸಿಟಿವ್ ಆದ ವಾತಾವರಣ’ ಮತ್ತು ‘ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು’ಎಂದು ತಾವು ಹೇಳಿರುವುದು ನನಗೆ ಅರ್ಥವಾಗಿರುವ ಮಟ್ಟಿಗೆ (೧) ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಎಂ ಪಿ ಗಳು, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಸಾಧ್ಯವಾದರೆ ಆಯಾ ರಾಜ್ಯದ ವಿರೋಧಪಕ್ಷದ ನಾಯಕರನ್ನು ಹಾಗೂ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳ ಮುಖ್ಯಸ್ಥರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಪ್ರಧಾನಮಂತ್ರಿಗಳು ‘ಇಷ್ಟನೇ ತಾರೀಖಿನಿಂದ ೫೦೦ ಮತ್ತು ೧೦೦೦ ರೂಪಾಯಿನ ನೋಟುಗಳನ್ನು ನಿಷೇಧ ಮಾಡಲು ನಮ್ಮ ಸರ್ಕಾರ ನಿರ್ಧರಿಸಿದೆ; ತಮ್ಮೆಲ್ಲರ ಸಹಕಾರ ಬೇಕು’ ಎಂದು ಹೇಳುವುದು. ಹೀಗೆ ಮಾಡಿದರೆ ನೋಟು ನಿಷೇಧದ ಹಿಂದಿರುವ ಉದ್ದೇಶವೇ ವಿಫಲವಾಗುವುದಿಲ್ಲವೇ? ಇಂತಹ ವಿಷಯಗಳಲ್ಲಿ ಗೌಪ್ಯತೆ ಬೇಕಾಗಿಲ್ಲ ಎಂಬುದು ತಮ್ಮ ಅಭಿಪ್ರಾಯವೇ? (೨) ಇಡೀ ದೇಶದ ಪ್ರತಿ ಪ್ರಜೆಯ ಬಳಿಯೂ ಬ್ಯಾಂಕ್ ಖಾತೆ,ಡೆಬಿಟ್ ಕಾರ್ಡ್ ಮತ್ತು ಅವುಗಳನ್ನು ಉಪಯೋಗಿಸಲು ಬೇಕಾದ infrastructure(ಇಂಟರ್ನೆಟ್, swiping machine ಇತ್ಯಾದಿ) ಸಿದ್ಧವಾಗಿರಬೇಕಾಗಿತ್ತು ಎಂಬುದೇ? ರಾತ್ರಿ ಕಳೆದು ಬೆಳಗು ಬರುವಷ್ಟರಲ್ಲಿ ಇವೆಲ್ಲಾ ಸಾಧ್ಯವಿಲ್ಲ ಅಲ್ಲವೇ? ಈಗ ಪ್ರಯತ್ನ ಶುರು ಮಾಡಿದರೆ ಇನ್ನಾರು ತಿಂಗಳೊಳಗಾಗಿಯಾದರೂ ಒಂದಷ್ಟನ್ನು ಸಾಧಿಸಬಹುದಲ್ಲವೇ? ಒಂದು ಮೈಲಿ ನಡೆಯಲು ಪ್ರಾರಂಭಿಸುವುದಕ್ಕೆ ಮುನ್ನ ಕೂತಿರುವ ಕಡೆಯಿಂದ ಎದ್ದು ಮೊದಲ ಹೆಜ್ಜೆಯನ್ನು ಎತ್ತಿಡಲೇ ಬೇಕುತಾನೇ? ಆ ಮೊದಲ ಹೆಜ್ಜೆಯನ್ನು ಈಗ ಇಡಲಾಗಿದೆ. ಕೂತಿದ್ದಾಗ ಇದ್ದ ‘ಆರಾಮ’ದ ಮನಸ್ಥಿತಿ ಎದ್ದು ನಿಂತಾಗ ಇರುವುದಿಲ್ಲ ಸ್ವಲ್ಪ ಕಸಿವಿಸಿಯನ್ನು ಉಂಟುಮಾಡುವುದು ಸಹಜ.
ತಾವು ‘ನಾನು ಕಾರು ಟ್ರಾಕ್ಟರ್ ಗಳ ಖರೀದಿಯ ಡಿಜಿಟಲೈಸಷನ್ ಬಗ್ಗೆ ಹೇಳಿಲ್ಲ ಹಾಲು,ತರಕಾರಿ,ಕಿರಾಣಿಗಳ ಬಗ್ಗೆ ಚಿಂತಿತನಾಗಿದ್ದೀನಿ ಎಂದಿದ್ದೀರಿ’ .’……. ವಡಾಪಾವ್ ಖರೀದಿಸಲಿ ಅಥವಾ ಟ್ರಾಕ್ಟರ್ ಕೊಳ್ಳಲಿ ……… ‘ ಎಂದು ನಾನು ಉಲ್ಲೇಖಿಸಿದ ವರದಿಯ ಒಳ ಅರ್ಥದಲ್ಲಿ ಜೀವನಾವಶ್ಯಕ ವಸ್ತುಗಳಾದ ದಿನಸಿ, ಹಾಲು,ತರಕಾರಿ ಇತ್ಯಾದಿಗಳೆಲ್ಲವೂ ಸೇರಿವೆ; ಕೇವಲ ಕಾರು ಮತ್ತು ಟ್ರ್ಯಾಕ್ಟರ್ ಅಲ್ಲ ಎಂದು ನಮ್ರನಾಗಿ ತಿಳಿಸಬಯಸುತ್ತೇನೆ.