ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಸತ್ತಮೇಲೆ ನಿದ್ರಿಸೋದು ಇದ್ದಿದ್ದೇ, ಬದುಕಿರೋವಾಗ ಕೆಲಸ ಮಾಡೋಣ' ಅಂದವನು ಅವನು

ಅರುಣ್ ಕುಮಾರ್

ಸಾಧಿಸುವ ಹಂಬಲ ಹೊಂದಿರುವವರಿಗೆಲ್ಲ ಟಾನಿಕ್ಕಿನಂತಿರುವ ಈ ಮಾತು ಹೇಳಿ, ಕಡೇ ಘಳಿಗೆಯವರೆಗೂ ಅದಕ್ಕೆ ತಕ್ಕುದಾಗಿ ಬದುಕಿದವರು ಶಂಕರ್ ನಾಗ್. ಅವರು ದೈಹಿಕವಾಗಿ ಮರೆಯಾಗಿ ಇಪ್ಪತ್ನಾಲಕ್ಕು ವರ್ಷಗಳೇ ಕಳೆದು ಹೋಗಿದ್ದರೂ ಅವರು ಜೀವಂತವಾಗಿರುವ ಥರಹೇವಾರಿ ರೀತಿಯನ್ನು ನೋಡಿದರೆ ಅಚ್ಚರಿಯಾಗುತ್ತದೆ. ಅಭಿಮಾನ ಇಮ್ಮಡಿಸುತ್ತದೆ. ಅಷ್ಟಕ್ಕೂ ಅವರ ನೆನಪಿಗೊಂದು ನೆಪವೇ ಬೇಕಿಲ್ಲ. ಆ ರೀತಿ ಕ್ರಿಯಾಶೀಲರಾಗಿ ಎಲ್ಲದರತ್ತಲೂ ಮಿಡಿಯುತ್ತಾ ಜೀವಿಸಿದ ಶಂಕರ್ ನಾಗ್ರ ಕಾರ್ಯಕ್ಷೇತ್ರ ಚಿತ್ರರಂಗ. ಆತ ಕನ್ನಡ ಚಿತ್ರರಂಗದ ಅಜರಾಮರ ನಕ್ಷತ್ರ. ಆದರೆ ಅವರ ಆಲೋಚನೆ, ವೃತ್ತಿ ಮತ್ತು ಕನಸುಗಾರಿಕೆಗೆ ಯಾವುದೇ ಪರಿಧಿರಲಿಲ್ಲ. ಹತ್ತಿರತ್ತಿರ ಅಗಲಿ ಎರಡೂವರೆ ದಶಕಗಳಾದರೂ ಅವರನ್ನು ಇಂದಿಗೂ ಪ್ರಸ್ತುತವಾಗಿರಿಸಿರುವುದು ಅದೇ ಗುಣ!
ಇದೀಗ ಕನ್ನಡದ ಪ್ರತೀ ಮನಸುಗಳ ಮೇಲೆಯೂ ಸಾರ್ವತ್ರಿಕವಾಗಿ ಶಂಕರ್ ನಾಗ್ ಅವರ ನೆನಪಿನ ಮೊಹರು ಪಡಿಮೂಡಿದೆ. `ಛೇ ಅವರು ಬದುಕಿರಬೇಕಿತ್ತು’ ಅಂತ ಅದೆಷ್ಟು ಮನಸುಗಳು ಏಕಕಾಲದಲ್ಲಿಯೇ ಲೊಚಗುಟ್ಟುತ್ತಿವೆಯೋ. ಅವರೀಗ ಬದುಕಿದ್ದಿದ್ದರೆ ಹೇಗಿರುತ್ತಿದ್ದರು ಎಂಬುದೂ ಸಹ ಮಧುರ ಕಲ್ಪನೆಯೇ. ಅಕಸ್ಮಾತು ಶಂಕರ್ ಬದುಕಿದ್ದಿದ್ದರೆ ಈ ತಿಂಗಳ ಒಂಭತ್ತನೇ ತಾರೀಕಿಗೆ ಅವರಿಗೆ ಭರ್ತಿ ಅರವತ್ತು ವರ್ಷ ತುಂಬುತ್ತಿತ್ತು. ಬಹುಶಃ ಅವರ ಖಾತೆಗೆ ಮತ್ತಷ್ಟು ದೊಡ್ಡದಾದ ಸಾಧನೆಗಳೇ ಜಮಾವಣೆಯಾಗಿರುತ್ತಿದ್ದವು. ಈ ಅರವತ್ತರ ವಯಸ್ಸಿಗೆ ಯುವಕರೇ ನಾಚುವಂಥಾದ್ದೊಂದು ಯೋಜನೆ ಹಾಕಿಕೊಂಡು ಒರಟು ಮೀಸೆಯ ಮೊನೆಯಲ್ಲೇ ತುಂಟ ನಗೆ ಚಿಮ್ಮಿಸುತ್ತಿದ್ದರೋ ಏನೋ…
ಇಂಥಾ ಸಾವಿರ ಕಲ್ಪನೆಗಳಿಗೆ ಕಾರಣವಾಗಿರುವುದು ಶಂಕರ್ ನಾಗ್ ಬದುಕಿದ ರೀತಿ. ಇರುವಾಗಲೇ ಸತ್ತಂತೆ ಬದುಕುವವರ ನಡುವೆ ಸತ್ತೂ ಬದುಕಿರುವ ಶಂಕರ್ ನಾಗ್ ಜೀವಿಸಿದ ಜೀವನ್ಮುಖಿ ಶೈಲಿಯೇ ಅವರ ಪ್ರಭಾವವನ್ನು ದಶಕಗಳಾಚೆಗೂ ದಾಟಿಸಿಕೊಂಡು ಬಂದಿದೆ. ಶಂಕರ್ ನಾಗ್ ಬದುಕಿದ್ದು ಕೇವಲ ಮೂವತ್ತೂಚಿಲ್ಲರೆ ವರ್ಷ ಮಾತ್ರ. ಆದರೆ ಆ ಅಲ್ಪ ಅವಧಿಯಲ್ಲಿಯೇ ಅವರು ಮಾಡಿದ ಸಾಧನೆ ಮಾತ್ರ್ರ ಅಗಾಧ. ಶಂಕರ್ ತನ್ನ ಹನ್ನೆರಡು ವರ್ಷಗಳ ವೃತ್ತಿ ಜೀವನದಲ್ಲಿ ೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ೧೯೮೪ರ ಸುಮಾರಿನಲ್ಲಿ ಒಂದೇ ವರ್ಷದಲ್ಲಿ ಬರೋಬ್ಬರಿ ಹದಿನಾಲ್ಕು ಚಿತ್ರಗಳಲ್ಲಿ ಮತ್ತು ನಂತರದ ಎರಡು ವರ್ಷಗಳಲ್ಲಿ ಇಪ್ಪತ್ನಾಲ್ಕು ಸಿನಿಮಾಗಳಲ್ಲಿ ಶಂಕರ್ ನಟಿಸಿದ್ದರು ಎಂದರೆ ಅವರು ಅದೆಷ್ಟು ಪಾಳಿಗಳಲ್ಲಿ ದುಡಿದಿರಬಹುದು, ಯಾವ ಮಟ್ಟಕ್ಕೆ ನಿದ್ರೆಯನ್ನು ಸುಟ್ಟಿರಬಹುದು ಲೆಕ್ಕಹಾಕಿ. ಶಂಕರ್ ನಾಗ್ ನಿರ್ದೇಶಕನಾಗಿ ಗುರುತಿಸಿಕೊಂಡು, ರಂಗಭೂಮಿಯಲ್ಲಿಯೂ ಹೊಸಾ ಅಲೆ ಎಬ್ಬಿಸಿ, ಕಿರುತೆರೆಯನ್ನೂ ಆವರಿಸಿಕೊಂಡ ಪರಿ ಅದ್ಭುತವಾದದ್ದು.
ಶಂಕರ್ನಾಗ್ ಅವರಿಗೆ ಸಿನಿಮಾ ಮುಂತಾದ ಯಾವ ಹಿನ್ನೆಲೆಯೂ ಇರಲಿಲ್ಲ. ಆರ್ಥಿಕವಾಗಿಯೂ ಅಂಥಾ ಶಕ್ತಿ ಇರಲೂ ಇಲ್ಲ. ಆದರೆ ಆರಂಭದಿಂದಲೂ ಏನಾದರೊಂದು ಸಾಧಿಸಿಯೇ ತೀರಬೇಕೆಂಬ ಆಳವಾದ ಹಂಬಲವಿತ್ತು. ಉತ್ತರ ಕನ್ನಡ ಜಿಲ್ಲೆಯ ಚೆಂದದ ಊರು ಹೊನ್ನಾವರದಲ್ಲಿ ೯ನೇ ನವಂಬರ್ ೧೯೫೪ರಂದು ಜನಿಸಿದ ಶಂಕರ್ ಮನೆಯ ಭಾಷೆ ಕೊಂಕಣಿ. ಶಾಲಾ ದಿನಗಳಲ್ಲಿಯೇ ಬಣ್ಣದ ಜಗತ್ತಿನ ಕನಸು ಕಂಡಿದ್ದ ಅವರು ಅನ್ನ ಅರಸಿ ಕುಟುಂಬ ಸಮೇತರಾಗಿ ಹೊರಟದ್ದು ಹೊನ್ನಾವರದಿಂದ ಮುಂಬೈಗೆ. ಮುಂಬೈನ ಇಂಗ್ಲೀಷ್ ನಾಟಕವೊಂದರಲ್ಲಿ ಅಮೋಘವಾಗಿ ಅಭಿನುಸಿದ ಶಂಕರ್ ನಾಗ್ ಖ್ಯಾತ ನಾಟಕಕಾರ ಗಿರೀಶ್ ಕಾರ್ನಾಡ್ ವರ ಗಮನ ಸೆಳೆದರು. ನಂತರ ಕಾರ್ನಾಡ್ ತಮ್ಮ `ಒಂದಾನೊಂದು ಕಾಲದಲ್ಲಿ’ ಚಿತ್ರಕ್ಕೆ ನಾಯಕನನ್ನಾಗಿ ಮಾಡಲು ಬೆಂಗಳೂರಿಗೆ ಶಂಕರನ್ನು ಕರೆತಂದರು. ನಂತರ ಶಂಕರ್ ಮತ್ತೆ ನಮ್ಮವರಾಗಿ ಹೋದರು. ಬಹುಬೇಗ ಕನ್ನಡ ಕಲಿತರು. ಹಿಂದಿ ಚಿತ್ರರಂಗ, ಕನ್ನಡ ಚಿತ್ರರಂಗ, ಮರಾಠಿ ಹಾಗೂ ಕನ್ನಡ ರಂಗಭೂಮಿ ಸೇರಿದಂತೆ ಕನ್ನಡ ಚಿತ್ರರಂಗದ ಎಲ್ಲ ವಿಭಾಗಗಳಲ್ಲೂ ಕೈಯಾಡಿಸಿದರು. ನಿರ್ಮಾಪಕ ಅಬ್ಬಾಯಿ ನಾಯ್ಡು ಅವರ ಸಾಥ್ನಿಂದ ಕರ್ಮಯಲ್ ಹೀರೋ ಆಗಿ ಭರ್ಜರಿಯಾಗಿ ಮಿಂಚಿದರು.

ಅವರು ಚಿತ್ರ ಬದುಕು ನಡೆಸಿದ್ದು ಕೇವಲ ಹತ್ತನ್ನೆರಡು ವರ್ಷ ಮಾತ್ರ. ಆದರೆ ಈ ಪುಟ್ಟ ಅವಧಿಯಲ್ಲಿ ಮಾಡಿದ ಸಾಧನೆ ಅಪೂರ್ವವಾದದ್ದು. ಹಾಗಂತ ಅವರೇನು ಹೂವಿನ ಹಾಸಿಗೆಯ ಮೇಲೆ ನಡೆಯಲಿಲ್ಲ. ಹೊಸಾ ಆಲೋಚನೆ, ಪ್ರಯತ್ನಗಳು ಸೋಲಿನ ಕಪ್ಪ ಕೇಳಿದವು. ಸಾಲದ ಸಂಕೋಲೆ ತಂತಾನೇ ಸುತ್ತಿಕೊಂಡಿತ್ತು. ಆದರೆ ಶಂಕರ್ರ ಗಟ್ಟಿತನ ಅದ್ಯಾವುದಕ್ಕೂ ಜಗ್ಗುವಂಥಾದ್ದಾಗಿರಲಿಲ್ಲ. ಇಂಥಾ ಹಿನ್ನಡೆ ಮತ್ತು ಸಂಕಟಗಳನ್ನೇ ಸೃಜನಾತ್ಮಕವಾಗಿ ಬಳಸಿಕೊಳ್ಳುವ ಕಲೆ ಅವರಿಗೆ ಸಿದ್ಧಿಸಿತ್ತು. ಅಂಥಾ ಕನಸುಗಾರಿಕೆ ಮತ್ತು ಪ್ರಯೋಗಾತ್ಮಕ ಮನಸ್ಥಿತಿಯ ಫಲವೇ ಭಾರತೀಯ ಧಾರಾವಾಹಿ ಕ್ಷೇತ್ರದಲ್ಲೊಂದು ಕ್ರಾಂತಿಯ ಅಲೆ ಎಬ್ಬಿಸಿದ ಮಾಲ್ಗುಡಿ ಡೇಸ್ ಧಾರಾವಾಹಿ. ನಾರಾಯಣ್ ಅವರ ಮಾಲ್ಗುಡಿ ಡೇಸ್ ಕೃತಿಯನ್ನು ಅದೇ ಹೆಸರಿನಲ್ಲಿ ಧಾರಾವಾಹಿಯಾಗಿ ಮಾಡಿ ಡಿಡಿ೧ರ ಮೂಲಕ ಭಾರತದಾದ್ಯಂತ ಪ್ರಸಾರ ಮಾಡಿ ಜನಮೆಚ್ಚುಗೆ ಗಳಿಸಿದ ಶಂಕರ್ನಾಗ್ ಕನ್ನಡ, ಮರಾಠಿ, ಹಿಂದಿ ಭಾಷೆ ಸೇರಿದಂತೆ ಪ್ರತಿ ಭಾರತೀಯರ ಹೃದಯದಲ್ಲೂ ವಿರಾಜಮಾನರಾದರು. ಈಗಲೂ ಈ ಮಾಲ್ಗುಡಿಯ ಮೋಡಿ ಹಾಗೆಯೇ ಇರುವುದು ಶಂಕರ್ ಅವರ ಕೆಲಸದ ಚಾತುರ್ಯಕ್ಕಿರುವ ಜೀವಂತ ಸಾಕ್ಷಿ.
ಶಂಕರ್ ಅಂದರೇನೇ ಚೈತನ್ಯದ ಚಿಲುಮೆ. ಇದು ಇಷ್ಟೇ ಎಂಬಂತೆ ಗೆರೆ ಹಾಕಿಕೊಂಡು ಯಾವುದೇ ಸವಾಲುಗಳಿಲ್ಲದೇ ಬದುಕುವುದು ಶಂಕರ್ ಜಾಯಮಾನವಾಗಿರಲಿಲ್ಲ. ಸರಿಯಾದ ದಿಕ್ಕಿನಲ್ಲಿ ಕನಸು ಕಂಡು ಅದನ್ನು ಸಾಕಾರಗೊಳಿಸಲು ಎಂಥಾ ಸವಾಲಿಗಾದರೂ ಎದೆಗೊಡುವ ಛಲ ಅವರಲ್ಲಿತ್ತು. ಆ ಕಾಲದಲ್ಲಿಯೇ ಒಂದು ಸುಸಜ್ಜಿತ ಸ್ಟುಡಿಯೋ ಕಟ್ಟಬೇಕೆಂದು ಕನಸು ಕಂಡ ಅವರು ತನ್ನಣ್ಣ ಅನಂತ್ ನಾಗ್ ಜೊತೆ ಸೇರಿಕೊಂಡು ಸಂಕೇತ್ ಎಂಬ ಸ್ಟುಡಿಯೋವನ್ನು ಬೆಂಗಳೂರಲ್ಲೇ ಸ್ಥಾಪಿಸಿದರು. ಆ ದಿನಗಳಲ್ಲಿ ಶಂಕರ್ ಅವರಿಗೆ ಆರ್ಥಿಕವಾಗಿ ಸಂಕಷ್ಟಗಳಿದ್ದವು. ಆದರೆ ತನ್ನ ಕನಸು ಗಟ್ಟಿಯಾಗಿದೆ ಎಂಬ ಭರವಸೆಯಿಂದಲೇ ಈ ಸ್ಟುಡಿಯೋ ಸ್ಥಾಪಿಸಿದ್ದರು. ಅದೂ ಅವರಿವರ ಬಳಿ ಸಾಲ ಮಾಡಿ! ಆ ಕಾಲಕ್ಕಿದು ಮಹಾ ದುಸ್ಸಾಹಸ. ಅದನ್ನು ಲೀಲಾಜಾಲವಾಗಿ ಮಾಡಿದ ಶಂಕರ್ ಅವರನ್ನು ಬಹಳಷ್ಟು ಮಂದಿ ಕುಹಕವಾಡಿದ್ದೂ ಇದೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳದ ಅವರು ಸಂಕೇತ್ ಎಂಬ ತಳಹದಿಯ ಮೇಲೆ ಮತ್ತಷ್ಟು ಕನಸುಗಳನ್ನು ಪೇರಿಸುತ್ತಾ ಮುನ್ನಡೆದರು. ಮುಂದೆ ಸಂಕೇತ್ ಎಂಬ ನಾಟಕ ತಂಡವನ್ನೂ ಕಟ್ಟಿದರು. ಆ ಮೂಲಕ ಹಲವಾರು ನಾಟಕಗಳನ್ನೂ ನೀಡಿ ಕನ್ನಡ ರಂಗಭೂಮಿಯಲ್ಲೂ ಕ್ರಿಯಾಶೀಲರಾದರು.
ಹಾಗೆಂದು ಶಂಕರ್ ಕ್ರಿಯಾಶೀಲತೆ ಕೇವಲ ಸಿನಿಮಾ, ನಟನೆಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಒಂದು ಕ್ಷಣವನ್ನೂ ವ್ಯರ್ಥವಾಗಿಸಲು ಬಿಡದ ಅವರು ಈ ಸಮಾಜಕ್ಕೆ ಉಪಯೋಗವಾಗುವ ನಿಟ್ಟಿನಲ್ಲಿಯೂ ಆಲೋಚಿಸುತ್ತಿದ್ದರು. ಎರಡ್ಮೂರು ದಶಕಗಳಾಚೆ ನಿಂತು ಯೋಚಿಸುವ ಅಭೂತಪೂರ್ವ ದೂರದೃಷ್ಟಿ ಹೊಂದಿದ್ದ ಶಂಕರ್, ಆಗಿನ ಕಾಲಕ್ಕೇ ಭವಿಷ್ಯದ ಬೆಂಗಳೂರಿಗೆ ಕನಸಿನ ಭಾಷ್ಯ ಬರೆದಿದ್ದರು. ಬೆಂಗಳೂರಿಗೊಂದು ಮೆಟ್ರೋ, ನಂದಿ ಬೆಟ್ಟಕ್ಕೆ ರೋಪ್ ವೇ, ಜನಸಾಮಾನ್ಯನ ಅಗ್ಗದ ಮನೆ ಕನಸಿಗೆ ಹೊಸ ತಂತ್ರಜ್ಞಾನ, ಸಿನಿಮಾಕ್ಕಾಗಿ ಮಲ್ಟಿಪ್ಲೆಕ್ಸ್ ಹೀಗೆ ಅವರ ಕನಸುಗಳು ರೋಚಕ. ಕಡಿಮೆ ವೆಚ್ಚದಲ್ಲಿ ನಾಟಕಗಳ ಪ್ರದರ್ಶನ ನಡೆಸಲು ರಂಗಭೂಮಿ ಕಲಾವಿದರಿಗೆ ನೆರವಾಗುವಂತೆ ನಾಟಕಮಂದಿರವೊಂದನ್ನು ನಿರ್ಮಿಸುವ ಕನಸು ಹೊತ್ತಿದ್ದರು. ಬರೀ ಕನಸು ಕಾಣದೆ ಆ ಯೋಜನೆಗಳಿಗೆ ತಾವೇ ನೀಲ ನಕ್ಷೆಯನ್ನೂ ಸಿದ್ಧಪಡಿಸಿದ್ದ ಶಂಕರ್ ನಾಗ್ರ ಕ್ರಿಯಾಶೀಲತೆಗೆ ಸಾಟಿಲ್ಲ.
ಶಂಕರ್ ನಾಗ್ರ ಬದುಕು ಸಾಧಿಸುವ ಹಂಬಲವಿರುವ ಅನೇಕರಂತೆಯೇ ಡೋಲಾಯಮಾನವಾಗಿತ್ತು. ಪ್ರಯಾಸಪಟ್ಟು ವಿದ್ಯಾಭ್ಯಾಸ ಮುಗಿಸಿದ ಅವರಿಗೆ ಮುಂಬೈ ನಗರದಲ್ಲಿ ಬ್ಯಾಂಕ್ ಒಂದರ ಗುಮಾಸ್ತರಾಗಿ ಕೆಲಸ ಸಿಕ್ಕಿತ್ತು. ಆದರೆ ಅವರ ಕ್ರಿಯಾಶೀಲ ಮನಸು ಕಡತಗಳ ಕಮಟು ವಾಸನೆಯ ನಡುವೆ ಉಸಿರುಗಟ್ಟಲಾರಂಭಿಸಿತ್ತು. ಆ ಸಮಯದಲ್ಲೇ ಅವರಿಗೆ ಮರಾಠಿ ರಂಗಭೂಮಿಯ ಗೀಳು ಅಂಟಿಕೊಂಡದ್ದು. ಹೀಗಾಗಿ ಶಂಕರ್ ಅವರ ರಂಗಭೂಮಿ ಪ್ರವೇಶವಾದದ್ದು ಮರಾಠಿ ಭಾಷೆಯ ಮೂಲಕ. ಇದೇ ಸಮಯದಲ್ಲಿ ಅಲ್ಲಿನ ಗೆಳೆಯರೊಡನೆ ಸೇರಿ ಶಂಕರ್ ಅವರು ಚಿತ್ರಕತೆ ರಚಿಸಿದ ಮರಾಠಿ ಚಲನಚಿತ್ರ `೨೨ ಜೂನ್ ೧9೯೭’ಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರಕಿತು.
ಸದಾ ಪ್ರಯೋಗಗಳಿಗೆ ಹಾತೊರೆಯುತ್ತಿದ್ದ ಶಂಕರ್ ನಾಗ್ ೮೦ಕ್ಕೂ ಹೆಚ್ಚಿನ ಕನ್ನಡ ಮತ್ತು ೨ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ, ನಿರ್ದೇಶಿಸಿದ್ದು ಸುಮಾರು ೧೦ ಕನ್ನಡ ಚಲನಚಿತ್ರ ಹಾಗೂ ೨ ಕಿರುತೆರೆ ಧಾರವಾಹಿಗಳನ್ನು. `ಇದು ಸಾಧ್ಯ’ ಎಂಬ ಕನ್ನಡ ಚಲನಚಿತ್ರದ ಸಂಪೂರ್ಣ ಚಿತ್ರೀಕರಣವನ್ನು ಕೇವಲ ೪೮ ಗಂಟೆಗಳಲ್ಲಿ ಮುಗಿಸಿದ ದಾಖಲೆಯಲ್ಲಿ ಶಂಕರ್ ಅವರ ಕೊಡುಗೆ ಇಲ್ಲದಿಲ್ಲ. ‘ಆಟೋ ರಾಜ’ ಚಿತ್ರದ ಅವರ ಅಭಿನಯವು ಇಂದಿಗೂ ಶಂಕರ್ ನಾಗ್ ಅವರಿಗೆ ಆಟೋ ಚಾಲಕರ ನೆಚ್ಚಿನ ನಾಯಕನ ಸ್ಥಾನ ಒದಗಿಸಿಕೊಟ್ಟಿದೆ. ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಶಂಕರ್ ಇನ್ನೂ ಜೀವಂತವಾಗಿದ್ದಾರೆ. ಸಣ್ಣದೊಂದು ಗೆಲುವಿಗೂ ಇಡೀ ದೇಹವನ್ನೇ ಉಬ್ಬರಿಸಿಕೊಂಡು ಓಡಾಡುವ ಈಗಿನ ಪೀಳಿಗೆಯ ಕೆಲ ಮಂದಿಯ ಅಬ್ಬರಾಟದ ನಡುವೆ ಶಂಕರ್ ಸದಾ ಪ್ರಸ್ತುತವೆನಿಸುತ್ತಾರೆ. ಸಾಧಿಸುವ ಛಲಕ್ಕೆ ಎಲ್ಲಾ ಕ್ಷೇತ್ರದವರಿಗೂ ಸ್ಫೂರ್ತಿಯಾಗಿದ್ದಾರೆ. ಇದು ಅವರ ಬದುಕಿನ ನಿಜವಾದ ಸಾರ್ಥಕ್ಯ.
 

‍ಲೇಖಕರು G

9 November, 2014

5 Comments

  1. anupama

    personality development ge shankar ondu model. nice write up.

  2. Param

    shankar nag andre nange panchaprana. satthameleu badikiruva shankar nag avarige huttuhabbada shubhashayagalu

  3. hema

    bahala chennagi shankarana bagge tilisiddeeri …ಸಣ್ಣದೊಂದು ಗೆಲುವಿಗೂ ಇಡೀ ದೇಹವನ್ನೇ ಉಬ್ಬರಿಸಿಕೊಂಡು ಓಡಾಡುವ ಈಗಿನ ಪೀಳಿಗೆಯ ಕೆಲ ಮಂದಿಯ ಅಬ್ಬರಾಟದ ನಡುವೆ ಶಂಕರ್ ಸದಾ ಪ್ರಸ್ತುತವೆನಿಸುತ್ತಾರೆ.ಸಾಧಿಸುವ ಛಲಕ್ಕೆ ಎಲ್ಲಾ ಕ್ಷೇತ್ರದವರಿಗೂ ಸ್ಫೂರ್ತಿಯಾಗಿದ್ದಾರೆ. ಇದು ಅವರ ಬದುಕಿನ ನಿಜವಾದ ಸಾರ್ಥಕ್ಯ. nija

  4. ashadeepa

    Avra bage thilididaru enta spurtidayaka lekkanagalan vodhidaga hosa usthaha mudutade
    Chgi baredidira sir

  5. bharathi b v

    Shankarana nenapu kushi kodthu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading