ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸತೀಶ ಕುಲಕರ್ಣಿ ಓದಿದ ‘ನಾನು ನನ್ನ ಕೇರಿ’

ಕೇರಿಯಿಂದ ಕಂಡ ಜಗತ್ತು..

ಸತೀಶ ಕುಲಕರ್ಣಿ

ಬೆಳದಿಂಗಳ ಕನ್ನಡಿಯಲ್ಲಿ
ನೆನಪಾಗಿ ಕಾಣಿಸಿಕೊಂಡಳು
ನನ್ನ ಬಾಲ್ಯದ
ನೆನಪುಗಳೊಂದಿಗೆ ಅಮ್ಮಾ

‘ನಾನು ನನ್ನ ಕೇರಿ’ ಕವನ ಸಂಕಲನದ ಕಟ್ಟಕಡೆಯ ಅಮ್ಮಾ ಎಂಬ ಕವಿತೆಯ ಸಾಲುಗಳಿವು. ಬೆಳದಿಂಗಳನ್ನು ಕನ್ನಡಿಯಾಗಿಸಿದವರು ಎನ್. ಕೆ. ಇಬ್ಬನಿ, ನಡಂಪಲ್ಲಿ ಎಂಬ ಕವಿ. ಇಷ್ಟು ಹೇಳಿದರೆ ಕವಿಯ ಬಗ್ಗೆ ಗೊತ್ತಾಗಲು ಸಾಧ್ಯವಿಲ್ಲ. ಕೋಲಾರ ಜಿಲ್ಲೆಯು ಬಂಗಾರಪೇಟ ತಾಲ್ಲೂಕಿನ ಕಾಮಸಮುದ್ರಂ ಹೋಬಳಿಯಲ್ಲಿರುವ ಸಣ್ಣ ಹಳ್ಳಿ ನಡಂಪಳ್ಳಿ. ಇನ್ನೂ ಹೇಳಬೇಕೆಂದರೆ ಆ ಸಣ್ಣ ಹಳ್ಳಿಯಿಂದಲೇ ಚಂದ್ರಮ ಎಂಬ ಸಾಮಾಜಿಕ ಜಾಲ ತಾಣಗಳ ಮೂಲಕ ನೂರಾರು ಕನ್ನಡದ ಸಾಹಿತ್ಯ ದಿಗ್ಗಜರನ್ನು ಪರಿಚಯಿಸಿದ ಕೀರ್ತಿ ಕವಿ ಇಬ್ಬನಿಯವರದು.

ಈ ಮೊದಲು ಇಬ್ಬನಿ ಅವರು ಕಾವ್ಯಾಮೃತ (ಸಂಪಾದಿತ) ಆ ದಿನಗಳು ಎಂಬೆರಡು ಕೃತಿಗಳನ್ನು ಪ್ರಕಟಿಸಿದ್ದಾರೆ. ಹಾಗೆ ನೋಡಿದರೆ ನಾನು ನನ್ನ ಕೇರಿ ಸಂಕಲನ ಇಬ್ಬನಿ ಊರ್ಫ ಮಂಜುನಾಥರ ಕಾವ್ಯ ಶಕ್ತಿಯನ್ನು ಗುರುತಿಸ ಬಹುದಾದ ಸಂಕಲನವಿದು. ಒಂದು ಆಲೋಚನಾ ಕ್ರಮ, ಸಾಮಾಜಿಕ ಬದ್ಧತೆ ಇದೆಲ್ಲಕ್ಕಿಂತ ಹೆಚ್ಚಾಗಿ ಇಬ್ಬನಿ ಅವರ ಸಾಹಿತ್ಯ ಪ್ರೀತಿ ಸಾರಸ್ವತ ಲೋಕಕ್ಕೆ ಚಿರಪರಿಚಿತ. ಇವರ ಜೊತೆಗಾರ ಕವಿ ನ. ಗುರುಮೂರ್ತಿ ಜಯಮಂಗಲರ ಹೆಸರನ್ನು ಪ್ರಸ್ತಾಪಿಸದಿದ್ದರೆ ಇಬ್ಬನಿ ಅವರ ಪರಿಚಯ ಅಪೂರ್ಣವಾಗಬಹುದು.

ನಾನು ನನ್ನ ಕೇರಿ – ಹೆಸರು ಓದಿದಾಕ್ಷಣ ಊರು ಕೇರಿ ಎಂಬ ಕೃತಿ ನೆನಪಾಗುವುದ ಸಹಜ. ಕವಿ ಸಿದ್ಧಲಿಂಗಯ್ಯನವರು ಬೆಳೆದಂತ ಅಂತಹದ್ದೆ ಒಂದು ಕೇರಿಯಿಂದ ಸಣ್ಣದೊಂದು ದನಿ ಇಲ್ಲಿ ಕೇಳಬಹುದು. ಸಂಶಯದಿಂದಲೆ ಇಡೀ ವ್ಯವಸ್ಥೆಯನ್ನು ಕವಿ ಕಂಡಿದ್ದಾರೆ. ಪೂರ್ಣ ಬೇಯದ, ಹದಗೊಳ್ಳದ ಕಾವ್ಯವಿದು. ಆದರೆ ಸಾತ್ವಿಕ ಸಿಟ್ಟಿನ ಕಾವ್ಯವೊಂದು ಜೀವ ಪಡೆಯುತ್ತಿದೆ.

ನಮ್ಮೆದೆಗಳು ತಮಟೆಗಳಾಗಿ
ನಿಮ್ಮ ಬೆಂಕಿಗೆ ಮೈಯೊಡ್ಡಿ ಬಿಸಿಯಾಗುತ್ತಿದ್ದೇವೆ

ತುಸು ವಾಚ್ಯದಲ್ಲಯೆ ಸಮಾಜ ದಂಡನೆಯನ್ನು ಮಾಡುವ ಹತ್ತಾರು ಕವಿತೆಗಳಿಲ್ಲಿವೆ. ಬಿಡಿ ಬಿಡಿ ಭಾಗಗಳಲ್ಲಿ ಉಲ್ಲೇಖಿಸಲು ಸಾಧ್ಯವಾಗದೆ, ಇಡಿಯಾಗಿ ಕವಿತೆ ಓದಿದಾಗ ಶೃತಿಗೆ ಸಿದ್ಧವಾದ ವಾದ್ಯದಂತೆ ಇಲ್ಲಿನ ಕವಿತೆಗಳು.

ಈ ಶತನಾನದಲ್ಲೂ ನರಳುವ ತಳಾದಿ ಜನಾಂಗವೊಂದರ ಹುರಿಗೊಳಿಸುತ್ತ, ಅದಕ್ಕೊಂದು ತಾತ್ವಿಕ ಸಾಂತ್ವನ ಪಡೆಯಲಿಚ್ಚುಸುತ್ತವೆ. ಬುದ್ಧ, ಬಾಬಾಸಾಹೇಬ ಹಾಗೂ ಬಸವ ಕವಿಯ ಕಾವ್ಯದ ಹಿಂದೆ ಬೆಳಕಾಗಿ ನಿಂತಿದ್ದಾರೆ. ದಮನಿತ ಲೋಕದ ಅಭರವಸೆ ಮತ್ತು ಅನುಮಾನಗಳೇ ಇಲ್ಲಿ ಕಾವ್ಯವಾಗುವಾಗ ಮಾತು ಕೂಡಿಕೊಳ್ಳುತ್ತದೆ. ಕಾವ್ಯ ಮತ್ತು ಮಾತಿನ ಅಂತರ ತುಂಬ ತೆಳುವಾಗಿ ಕವಿ ಅಲ್ಲಲ್ಲಿ ಮಾತಿಗಿಳಿಯುತ್ತಾರೆ.

ಯಾಕೆಂದರೆ ನಾನು ಕೂಡ
ಅಪ್ಪನಾಗಿ ನನ್ನಪ್ಪನ ಭಾರ ಹೊತ್ತಿದ್ದೇನೆ
ಹಬ್ಬಗಳು ಬಂದರೆ ಬದುಕಿನ ಬಯಲಲ್ಲಿ
ಕಾದಾಡಿ ಬರಿಗೈಲಿ ಮನೆಗೆ ಮರಳಿದಾಗ

ಮತ್ತೆ ಉಗಾದಿ ನೆನಪಾಗಿ
ಉಸಿರುಕಟ್ಟಿ ನಿಂತು ನನ್ನಪ್ಪ ಅಮ್ಮನ ಹಾಗೆ
ಗೋಡೆಗೊರಗಿದಾಗ
ನಾನು ಜೀವಂತ ಶವವಾಗುತ್ತೇನೆ

ಉಗಾದಿ ಎಂಬ ಕವಿತೆಯ ಈ ಸಾಲುಗಳೆ ಸಾಕು, ತನ್ನೆಲ್ಲ ನೋವು ಹೇಳುತ್ತ ಮಾತಿಗಿಳಿಯುವ ಪರಿಗೆ. ಅಳಲು, ಅಹವಾಲು, ನಿವೇದನೆ ಇವೆಲ್ಲವುಗಳ ಸಂಗಡ ಸಂಕಟ ಹೇಳಿಕೊಳ್ಳುವ ನಾನು ನನ್ನ ಕೇರಿ ಸಂಕಲನದ ಕವಿತೆಗಳು ಮಾಗಿದ ಮನಸ್ಸಿನ ಕಾವ್ಯದತ್ತ ವಾಲುತ್ತಿವೆ.

ತಾನು, ತನ್ನ ಬದುಕು, ಸುತ್ತಲಿನ ಪರಿಸ್ಥಿಯ ಅರಿವು ಕಾವ್ಯ ಮುಖೇನ ಮುಟ್ಟಿಸಲೇ ಬೇಕೆಂಬ ಹಂಬಲ ಕವಿ ಎನ್. ಕೆ. ಇಬ್ಬನಿಯವರದು. ಇಷ್ಟು ಸಾಲದು, ಇನ್ನಿಷ್ಟು ಅರಗಿಸಿಕೊಂಡು ಬರೆಯುವ ಪ್ರಯತ್ನ ಅವರು ಮಾಡಬೇಕು. ಇಂಥ ನಿರೀಕ್ಷಯ ಬರೆಯುವಿಕೆಗೆ ನಾನು ನನ್ನ ಕೇರಿಯಲ್ಲಿ ಭರವಸೆಯ ಪುರಾವೆಗಳಿವೆ :

ಕಾವ್ಯ ಅರಮನೆಯ ಅಂಗಳ ಹೂವಲ್ಲ (ಹೆಸರು ನೀಡಬೇಕು), ನಿಂತ ನೆಲಕ್ಕೂ ಜಾತಿಯ ನೆರಳು / ಬೀಳಬಾರದೇನೊ (ಪಾರ್ಥೇನಿಯಂ ಗಿಡಗಳು), ನಾನು ಮೌನಕ್ರಾಂತಿಧಾರಿ (ಎಚ್ಚರ), ಕಾಗೆಯನ್ನು ನಿಮ್ಮ ಕುಲದ / ಕುಲುಮೆಗೆ ತಳ್ಳಿರುವವರು / ಇದ್ಯಾವದೇಶವಿದು (ಇದ್ಯಾವದೇಶವಿದು), ಮುಗಿಲ ತಳಹದಿಯ / ಹಗಲಿನಲ್ಲಿ ನಾವು / ತಿಳಿ ನೀರ ತೇರಲ್ಲಿ / ಹೆಣವಾಗಿ ತೇಲುತ್ತ ಹೊರಟಿಹ ಮೆರವಣಿಗೆ ನೋಡಾ (ತಾರೆಯ ಕಣ್ಣೀರು)

ಮೇಲೆ ಉಲ್ಲೇಖಿಸಿದ ಕವಿತೆ ಸಾಲುಗಳು ಕವಿ ಎನ್. ಕೆ ಇಬ್ಬನಿ ಅವರ ಕಾವ್ಯ ಮರೆಯಲ್ಲಿ ಅರಳಿದ ವಿಚಾರ ಪುಷ್ಪಗಳಂತೆ ಸೆಳೆದು ಬಿಡುತ್ತವೆ. ವಿಚಾರಶೀಲ ಒತ್ತೊತ್ತಾಗಿ ಇರುವ ಈ ಸಾಲುಗಳ ಸುತ್ತ ಇಡೀ ಕವಿತೆ ಕಣ್ಣಿಗೆ ಕಟ್ಟುವ ಹಾಗೆ ಬರೆಯುವಂತಾಗಬೇಕು. ವಿಚಾರ ಭಾವಗಳ ಒಟ್ಟು ಮೊತ್ತ ಒಂದು ಸ್ಪುಟವಾದ ಕವಿತೆಯಾಗಬೇಕು. ಇದಕ್ಕೊಂದು ಅತ್ಯುತ್ತಮ ಮಾದರಿ ಜಿ.ಎಸ್.ಎಸ್. ರ ಕಾವ್ಯ. ಅಂದವಾದ ಮುದ್ರಣ, ಸುಂದರ ಮುಖ ಪುಟ್ ನಾನು ನನ್ನ ಕೇರಿಯಲ್ಲಿ ೪೪ ಕವಿತೆಗಳಿವೆ.

‍ಲೇಖಕರು Admin

23 September, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading