ಸಣ್ಣ ಕಾಕಾ ಕಿ ಕಹಾನಿ

ಅಮರ್ ದೀಪ್ ಪಿ ಎಸ್

ಕಾಕಾ ನಾಮ್ ತೋ ಕಹೀ ಭಿ ಸುನಾ ಹೋಗಾ…ಮಗರ್ ಸಣ್ಣ ಕಾಕಾ ? ಇಲ್ಲ ಅಂದುಕೊಳ್ಳಿ. ಶಾಲಾ ದಿನಗಳ ನಗುವಿಗೆ, ಗೇಲಿಗೆ, ಕಾಲೆಳೆಯಲು ಯಾರಾದರೂ ಒಬ್ಬರು ಇರುತ್ತಾರೆ. ಕಾಲು ಉಳುಕಿ ಬೀಳುವವರು ಸಹ . ಆಗ ನಮ್ಮ ಊರಿನಲ್ಲಿ ಇದ್ದದ್ದೇ ನಾಲ್ಕೈದು ಸರ್ಕಾರಿ ಶಾಲೆಗಳು. ಮತ್ತು ಖಾಸಗಿ ಶಾಲೆಯೆಂದರೆ ರಾಷ್ಟ್ರೋತ್ಥಾನ ಶಿಕ್ಷಣ ಸಂಸ್ಥೆ , ಶಿಸ್ತಿಗೆ ಹೆಸರಾಗಿದ್ದ ಶಾಲೆ. ಆ ಶಾಲೆಯಲ್ಲಿ ಸೇರಿದ ಮಕ್ಕಳಿಗೆ ಬಹಳ ಶಿಸ್ತುಬದ್ಧ ಕಲಿಕೆಗೆ, ನಡವಳಿಕೆಗೆ ಹಾಗೂ ಜೀವನ ರೂಪಿಸಿಕೊಳ್ಳಬಲ್ಲಂಥ ಶಿಕ್ಷಣ ಕೊಡುತ್ತಿದ್ದ ಸಂಸ್ಥೆ. ಉಳಿದಂತೆ ಸರ್ಕಾರೀ ಶಾಲೆಗಳಲ್ಲೂ ಉತ್ತಮ ಶಿಕ್ಷಕ ವರ್ಗ ಇದ್ದು ಮಕ್ಕಳನ್ನು ರೂಪಿಸುವವರಾಗಿದ್ದರು. ನಾನು ಸೇರಿದ್ದು ಸರ್ಕಾರಿ ಶಾಲೆಗೇ … ಮನೆ ಹಿಂದೆ ಇದ್ದ ಶಾಲೆಗೆ ಹೊರಟರೆ ನಮ್ಮ ಮನೆಯ ಹಿತ್ತಲಲ್ಲೇ ಸಣ್ಣ ಗೂಡಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ “ಕಾಕಾ “.
ಆ ಅಂಗಡಿಯ ಮಾಲೀಕನ ಹೆಸರು ಇವತ್ತಿಗೂ ನನಗೆ ಗೊತ್ತಿಲ್ಲ .. ಇವತ್ತಿಗೂ ಆತನನ್ನು “ಕಾಕಾ ” ಅಂತಲೇ ಕರೆಯುತ್ತೇವೆ .. ಆ ಕಾಕಾನ ಹಿರಿಯ ಮಗ ಈರಣ್ಣ ಅಲಿಯಾಸ್ ಈರ, ಸಣ್ಣ ಕಾಕಾ .ಅಲಿಯಾಸ್ ಸಲ್ಮಾನ್ ಖಾನ್, ಸಾಂಗ್ಲಿಯಾನ ಇನ್ನು ಹೆಚ್ಚಿನ ನಾಮಧೇಯಗಳನ್ನೊಳಗೊಂಡ ಈರ ಬಾಲ್ಯವಿವಾಹಕ್ಕೊಳಗಾದವ. ಅವನು ಬರುತ್ತಿದ್ದರೆ ದೂರದಿಂದ ಹುಡುಗರು ಸಾಂಗ್ಲಿಯಾನ ಸಿನಿಮಾದಲ್ಲಿ ಶಂಕರ್ ನಾಗ್ ಬರುವಾಗಿನ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಪ್ಲೇ ಮಾಡೋದು ರೂಢಿಯಾಗಿತ್ತು. ಮೂಲತಃ ಆ ಕುಟುಂಬ ಉತ್ತರ ಕರ್ನಾಟಕದಿಂದ ಈ ಭಾಗಕ್ಕೆ ವಲಸೆ ಬಂದು ಇದ್ದಿರಬಹುದು. ಭಾಷೆ ಮಾತ್ರ ಉತ್ತರ ಕರ್ನಾಟಕದ್ದೇ ಅವರಾಡುವುದು.. ಈ ಸಣ್ಣ ಕಾಕಾ ರಾಷ್ಟ್ರೋತ್ಥಾನ ಶಾಲೆಗೆ ಹೋಗುತ್ತಿದ್ದ. ಆದರೆ ಶಾಲೆಯಲ್ಲಿರುತ್ತಿರಲಿಲ್ಲ .
ಕಾಕಾನ ಬಾಯಿ ಮಾತ್ರ ಭಲೇ ಹರಿತ. ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಅಷ್ಟೊಂದು ಮುಚ್ಚುಮರೆ ಇಲ್ಲದೇ ಓಪನ್ ಅಪ್ ಆಗಿ ಮಾತಾಡುವುದು, ಜಗಳಾಡುವುದು, ಕಿರಿಚಾಡುವುದು ಮಾಮೂಲು. ಮೊದಲಿಂದಲೂ ಈರನಿಗೆ ಓದು ಹತ್ತಲೇ ಇಲ್ಲ.ಮಾತಿಗೊಮ್ಮೆ “ಲೇ ಮಗನಾ ಈರ ಸಾಲಿ ಕಲೀಲಿಲ್ಲಾಂದ್ರ ಸುಮ್ನಾ ಅಂಗಡ್ಯಾಗ್ ಕುಂತು ಬೀಡಿ, ಪೆಪ್ಪರ್ಮೆಂಟ್ ಮಾರಲೇ ಮನಿಗಾರ ಹತ್ತತೈತಿ… ಕೂಳಿಗೇ ಮೂಲಾಗಿ ಇರಬ್ಯಾಡ” ಅಂತಿದ್ದ ರಸ್ತೆಯಲ್ಲಿ ನಿಂತು. ಕೈ ತಿರುವ್ಯಾಡಿಕೊಂತ ಮುಂಜೋಲಿ ಮಾಡಿ ಹೊರಟರೆ ಸಣ್ಣ ಕಾಕಾನಿಗೆ ಹೇಳಿದ್ದು ಕಿವ್ಯಾಗೇ ಇರುತ್ತಿದ್ದಿಲ್ಲ. ಹಾಗಾಗಿ ಕಟ್ಟಿ ಮೇಳಕ್ಕೆ ಬೇಗ ಸದಸ್ಯನಾಗಿಬಿಟ್ಟ . ಈರನ ಬಗ್ಗೆ ಒಂದಿಷ್ಟು ಮಾಹಿತಿ ಹೇಳಿಬಿಡಬೇಕು. ನೋಡಲು ಕಾಕಾ ಥೇಟ್ ಗಾಳಿಪಟಕ್ಕೆ ಜೋಡಿಸಿದ ಬಿದಿರಿನ ಹೋಲಿಕೆ, ಮಾತು ಮೂಗಿಂದ ಮಾತಾಡುವ ಅವನ ಮಾತುಗಳನ್ನು ಎರಡೆರಡು ಬಾರಿ ಕೇಳಿಸಿಕೊಂಡ ಮೇಲೆ ಅರ್ಥ ಮಾಡಿಕೊಳ್ಳಬೇಕು. ಈಗೀಗ ಸ್ವಲ್ಪ ಸುಧಾರಿಸಿಕೊಂಡಿರಬಹುದು.

ಹರಟೆ ಕಟ್ಟೆಗೆ ಸದಸ್ಯನಾದ ಮೇಲೆ ಜೋಕು, ಕೇಕೆ ಇರುವ ವೇಳೆ ದೂರದಿಂದಲೇ ಮಧ್ಯೆ ಬಾಯಿ ಹಾಕಿ “ನಾನೊಂದ್ ನಗೆಣ್ಣಿ ಹೇಳ್ತೀನ್ ” ಅಂತ ತೂರಾಡೋನು. ಹುಡುಗರು “ಲೇ ಸಣ್ಣ ಕಾಕಾ ಮೊದ್ಲು ಲೈಟ್ ಕಂಬಕ್ಕೆ ಆತು ನಿಂತ್ಕಳ್ಳಲೇ ಉದುರ್ಕೊಂಡು ಗಾಳಿಗೆ ಹಾರ್ ಹೋಕಿ ಜ್ವಾಕಿ, ಆಮೇಲೆ ನೀನ್ ನಿನ್ ನಗಣ್ಣಿ ಹೇಳಂತಿ” ಅನ್ನುತ್ತಿದ್ದರು. ಸಣ್ಣ ಕಾಕಾ ಮುಂದಾಗುತ್ತಿದ್ದುದು ಅವನ ನಿಲುಕಿಗೆ ಹೊಳೆವಂಥ ” ನಗೆ ಹನಿ ” ಹೇಳಲು. ಅವನು ಹೇಳುವ ನಗೆಣ್ಣಿ ಗಿಂತ ಹೇಳೋ ಸ್ಟೈಲೇ ನಗೆಣ್ಣಿಯಾಗುತ್ತಿತ್ತು. ಸಣ್ಣ ಕಾಕಾ ಅಂದ್ರೆನೇ ನಮಗೆಲ್ಲಾ ನಗೆಣ್ಣಿ (ನಗೆ ಹನಿ ) ಇದ್ದಹಾಗೆ. ಹಂಗೂ ಹಿಂಗೂ ಹೈಸ್ಕೂಲ್ ಗೆ ಬಂದ ಈರ ಈಗೀಗ ದೊಡ್ಡ ಕಾಕಾನಿಗೆ, ತನ್ನ ಕುಟುಂಬಕ್ಕೆ ದುಡಿಮೆಯಾದ ಬೀಡಿ ಅಂಗಡಿಯಲ್ಲಿ ಕೂತು ಯಾಪಾರ ಮಾಡೋನು . ಹೈಸ್ಕೂಲ್ಗೆ ಬಂದ ಮೇಲೆ ಯಾರಾದ್ರೂ ಹುಡುಗೀರು ಏನಾದ್ರೂ ಮಾತಾಡಿಸಿದರೆ ಅವತ್ತು ಅವನ ನಡಿಗೆಯಲ್ಲಿನ ಬಿರುಸು ಕಂಡೇ ಹುಡುಗರು ಶಾಲೆ ಮುಂದಿನ ಕುರುಕಿ ದಿನಸಿ ಅಂಗಡಿಗೆ ಎಳೆದುಕೊಂಡು ಹೋಗಿ ಅವನಿಂದ ಕೊಡಿಸಿಕೊಂಡು ತಿನ್ನೋರು.
ಇಂಥ ಸಣ್ಣ ಕಾಕಾ ಒಂದಿಡೀ ಓಣಿಯ ಹುಡುಗರ ಶಾಲೆ ಹುಡುಗರ ಮಧ್ಯೆ ಹುಡುಗಿ ವಿಷಯದಲ್ಲಿ ದೊಡ್ಡ ಜಗಳಕ್ಕೆ ನಾಂದಿಯಾಗಿಬಿಟ್ಟ. ಹುಡುಗಿಯ ಬಗ್ಗೆ ಗೋಡೆ ಮೇಲೆ ಬರೆದ ಗುಮಾನಿಗೆ ಒಳಗಾಗಿದ್ದ ಈರ. “ಇವನಿಗೆ ಕನ್ನಡ ಅಕ್ಷರನೇ ನೆಟ್ಟಗೆ ಬರೆಯಾಕ್ ಬರಾದಿಲ್ಲ ಇವನ್ ಹೆಂಗೆ ಬರೆಯೋಕೆ ಸಾಧ್ಯ” ಅನ್ನುವುದೇ ಜನರ ವಾದ. ಅಂತೂ ಗೋಡೆ ಬರಹದ ಕಿರಿಕಿರಿಯಿಂದ ಹೊರಬಂದ ಈರ, ಕ್ರಮೇಣ ಮನೆ, ಬಜಾರದಲ್ಲಿನ ಬೀಡಿ ಅಂಗಡಿಗೆ ಸೀಮಿತನಾದರೂ ಹುಡುಗರ ಗುಂಪು ಹಗರಿಬೊಮ್ಮನಹಳ್ಳಿ ಯಿಂದ ಟಿ. ಬಿ.ಡ್ಯಾಮ್ ಗೋ , ಗೋವಾಕ್ಕೋ ಇನ್ನೆಲ್ಲಿಗೋ ಹೊರಡಲು ಅಣಿಯಾದರೆ ಸಣ್ಣ ದುಡಿಮೆಯಲ್ಲೇ ಇದ್ದರೂ ಎಲ್ಲಿಂದಾದರೂ ರೊಕ್ಕ, ಒಂದು ಕೂಲಿಂಗ್ ಗ್ಲಾಸ್ ಜೋಡಿಸಿಕೊಂಡು ರಂಗೀಲಾ ಆಮೀರ್ ಖಾನ್ ತರಹ ಹಳದಿ ಪ್ಯಾಂಟ್ ಹಸಿರು ಅಂಗಿಯೊಳಗೆ ತೂರಿಕೊಂಡು ನೇತಾಡುತ್ತಾ “ಹೋಗಾಣ ? ಎಂದು ಬಂದು ಬಿಡುತ್ತಿದ್ದ. ಓಣಿಯಲ್ಲಿ ಯಾವುದಾದರೂ ಮದುವೆ ಸಮಾರಂಭ, ಅದೂ ಬೇರೆ ಊರಿನಲ್ಲಿ ಹೋಗಿ ಬರುವುದಿದ್ದರಂತೂ ಹುಡುಗರು ಹಾಜರ್. ಯಾಕಂದ್ರೆ ಬೇರೆ ಊರಲ್ಲಿ ಮದುವೆ ನೆಪದಲ್ಲಿ ಜಂಗುಳಿಯ ಛತ್ರದ ಯಾವುದಾದರೊಂದು ರೂಂ ಹುಡುಕಿ ಎಲೆ ಹರಡಲು ಶುರು ಹಚ್ಚಿದರೆ ಹೇಳೋರಿಲ್ಲ ಹಿಡಿದು ಜಡಿಯೋರಿಲ್ಲ . “ಇವನೌನ… ಮದುವೆಗೆ ಬಂದ ಮಂದಿ ತಾಳಿ ಆಗಿ ಉಂಡು ತಿರುಗಾ ಲಾರಿ ಹತ್ತಾಕ್ ರೆಡಿಯಾದ್ರು ಇನ್ನೊಂದ್ ಕೈ ಹಾಕ್ರಲೇ” .. ಎಂದು ಕೂಡುವ ಚಾಳಿಗೆ ಹಳಿಯಲಾರೆ, ಹಳಿಯದಿರಲಾರೆ ಎಂಬಂತೆ ಮಂದಿ . ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ..ಆಟ . ನಿನುವು ಎಷ್ಟೋದವಲೇ …. ನಂದೀಟ್ ಹರಿತಲೇ ಬೊಕ್ಕಣ. ಎಂದು ಸಣ್ಣ ಕಾಕಾ ಮತ್ತಿತರರು ಗುಸು ಗುಸು ಮಾಡಿ, ಊರಿಗೆನಾದ್ರೂ ಡೈರೆಕ್ಟ್ ಬಸ್ ಸಿಗೋ ಚಾನ್ಸ್ ಇದ್ದರೆ ಮದುವೆಗೆ ಬಂದ ಮಂದೀನ ಲಾರಿ ಹತ್ತಿಸಿ, ಅವತ್ತು ಸಂಜಿಗೆ ಹಳದಿ ದ್ರವ, ಸಾವಜಿ ಖಾನಾವಳಿ ಶೇರ್ವಾ ಎರಡರ ದರ್ಶನ ಮಾಡ್ಕೊಂಡು ಕಡೆ ಬಸ್ಸೋ ಇರೋ ಬಸ್ಸೋ ಹತ್ಕೊಂಡು ಊರ ಸೇರಿ ಬೆಳಕು ಹರಿಯುತ್ತಲೇ ರಾತ್ರಿ ಸೇರಿದ ಬೂದುಗುಂಬಳಕಾಯಿ ಮುಖಗಳು ಒಂದನ್ನೊಂದು ನೋಡಿ ” ಹೆಂಗಿತ್ತಲೇ ಕತ್ತಲು” ಎಂದು ಕೇಳಿ ಕುಲುಕಾಡುತ್ತಿದ್ದರು.
ಒಮ್ಮೆ ಗೆಳೆಯನೊಬ್ಬನ ಮದುವೆಗೆ ಹೋದಾಗ ಈರನಿಗೆ ಇಂಗ್ಲೀಷ್ ನಲ್ಲಿ ವಿಶ್ ಮಾಡಲು ಆಸೆಯಾಗಿದೆ. ಏನ್ ಹೇಳಬೇಕೆನ್ನುವುದನ್ನು ಜೊತೆಗಿದ್ದವನನ್ನು ಕೇಳಿದ್ದಾನೆ. ” ವಿಶ್ ಯು ಹ್ಯಾಪಿ ಮ್ಯಾರೀಡ್ ಲೈಫ್ ” ಅಂತ ಹೇಳಲು ತಿಳಿಸಿದ್ದಾರೆ. ಅದೇನಾತೋ ಏನೋ ಸ್ಟೇಜ್ ಮೇಲೆ ಕೈ ಕುಲುಕಿ ಹೇಳುವಾಗಲೇ ಹೇಳೋದನ್ನು ಮರೆತು “ವಿಶ್ ಯು ಹ್ಯಾಪಿ ನ್ಯೂ ಇಯರ್ ” ಹೇಳಿದ್ದಾನೆ. ಸ್ಟೇಜ್ ಕೆಳಗಿಳಿದು ಊಟಕ್ಕೆ ಕುಂತಾಗ “ವಿಶ್ ಮಾಡ್ದೇನಲೇ ಕಾಕಾ ” ಹುಡುಗರು ಕೇಳಿದ್ದಾರೆ. ಹೇಳ್ ಬಂದ್ನ್ಯಪ್ಪ “ವಿಶ್ ಯು ಹ್ಯಾಪಿ ನ್ಯೂ ಇಯರ್ ” ಅಂದಿದ್ದಾನೆ. ಹುಡುಗರು, “ಅಷ್ಟು ದೊಡ್ಡ ಸೆಂಟ್ಟೆನ್ಸ್ ಒಮ್ಮೆಲೇ ಹೆಂಗಲೇ ಹೇಳ್ಬೇಕು? ಸಿಂಪಲ್ ಆಗಿ ಕಾಂಗ್ರ್ಯಜುಲೆಶನ್ ಅಂತೇಳಿಕೊಟ್ಟಿದ್ದರೆ ಬೇಷಿತ್ತು ನೋಡು” ಅಂದರಂತೆ. ಇನ್ನೊಬ್ಬ ಕಾಲೆಳೆಯುತ್ತಾ, ” ವಿಶ್ ಯು ಹ್ಯಾಪಿ ಮ್ಯಾರೀಡ್ ಲೈಫ್ ” ಹೇಳಂದ್ರ, ಕಾಕಾ “ವಿಶ್ ಯು ಹ್ಯಾಪಿ ನ್ಯೂ ಇಯರ್ ” ಹೇಳಿ ಬಂದಾನ… ಇನ್ನೇನಾರಾ ಕಾಂಗ್ರ್ಯಜುಲೆಶನ್ ಹೇಳಂದ್ರ “ಕಂಡಕ್ಟರ್ ಲೈಸೆನ್ಸ್” ಅಂತ ಹೇಳಿರೋನು ಅಂದು ಗೊಳ್ ಎಂದಿದ್ದಾರೆ . ಓಣಿ ಹುಡುಗರು ಎಷ್ಟೇ ಕಾಡಿಸಿದರೂ, ಈರ ಮಾತ್ರ ಅಲ್ಲೇದಲ್ಲಿಗೆ ಬಿಟ್ಟು ಗಾಳಿಗುಂಟ ತೇಲುತ್ತಾ ಹೊರಡುತ್ತಾನೆ.
ಅವತ್ತಿಗೂ ಇವತ್ತಿಗೂ ಅವನಿಗೆ ಫೋಟೋ ಹುಚ್ಚು, ಐಡೆಂಟಿಟಿ ಕ್ರೈಸಿಸ್ ಬಹಳ ಇದೆ. ಮೊನ್ನೆ ಎಲೆಕ್ಷನ್ ಟೈಮ್ನಾಗ ಮೊದಲೇ ಹೇಳಿದಂತೆ ಉತ್ತರ ಕರ್ನಾಟಕದ ಮಂದಿ ಆದ್ದರಿಂದ ಸೀದಾ ಬಾಗಲಕೋಟೆಗೆ ಹೋಗಿ ಎಮ್ಮೆಲ್ಲೆ ಸೀಟಿಗೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾಧಿಕಾರಿ ಮುಂದೆ ನಿಂತು ನಾಮಪತ್ರ ಪಡೆದಿದ್ದಾನೆ. ಅಧಿಕಾರಿ ಇವನಿರೋ ಅವತಾರ ನೋಡಿ “ತಮ್ಮಾ, ಯಾರ್ದಾರ ರೆಫರೆನ್ಸ್ ಇದ್ರಾ ಕೊಡಪ್ಪಾ ನಿಮ್ಮೊರಿನವರದು” ಅಂದಿದ್ದಾರೆ. ಸಣ್ಣ ಕಾಕಾ ನಮ್ಮೂರಿನ ಆಡಿಟರ್ ಆಫೀಸ್ ನ ಸೂರಿ ನಂಬರ್ ಕೊಟ್ಟಿದ್ದಾನೆ. ಹಿಂದೆಲೇ ಸೂರಿಗೆ ಫೋನಾಯಿಸಿದ ಅಧಿಕಾರಿಯು ಖಚಿತಪಡಿಸಿಕೊಂಡಿದ್ದಾರೆ. ಸೀದಾ ಊರಿಗೆ ಬಂದವನೇ ” ಸೂರಿ, ಒಂದೆರಡು ಟಾಟಾ ಸುಮೋ ಮಾಡ್ತಿನಲೇ ಒಂದಿಪ್ಪತ್ ಮಂದಿ ಹೋಗಿ ನಾಮಪತ್ರ ತುಂಬಿ ಕೊಟ್ಟು ಬರಾನ ” ಅಂದಿದ್ದಾನೆ. ಅದೆಲ್ಲಿತ್ತೋ ಸೂರಿಗೆ ಪಿತ್ತ “ದುಡ್ಕಂಡು ತಿನ್ನಾಕ ಒಂದ್ ಬೀಡಿ ಅಂಗಡಿ ಡಬ್ಬಿ, ಛಲೋತ್ನಾಗಿ ಇರಾಕ್ ತಟಗು ಸೂರು ಐತಲೇ ಕಾಕಾ. ಸುಮ್ಕಿದ್ದೀ ಸರಿಹೋತು ಇಲ್ಲಾಂದ್ರ …. ಅಂದಿದ್ದಾನೆ. ಅದಕ್ಕೂ ಮುಂಚೆ ಗ್ರಾಮ ಪಂಚಾಯತಿ ಎಲೆಕ್ಷನ್ಗೂ ನಿಂತಿದ್ದನಂತೆ.. “ನಾವ್ಯಾಕ್ ನಿಂದ್ರಬಾರ್ದಲೇ… ಅನ್ನುವುದು ಸಣ್ಣ ಕಾಕಾನ ವಾದ. ಮೊನ್ನೆ ಮೊನ್ನೆ ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದನ್ನ ನೋಡಿ ಅವಾಕ್ಕಾದೆ. ಹೌದ್ದಲೇ, ಕಾಕಾ ಅಂದ್ಕೊಂಡು ಒಪ್ಪಿಕೊಂಡೆ. ಆವಾಗ ಇದೆಲ್ಲಾ ನೆನಪಾಯಿತು …..

‍ಲೇಖಕರು G

April 12, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: