ನಾಗರಾಜ್ ಕಾಂಬಳೆ
ಕೃಷ್ಣಾ ತೀರದ ನಮ್ಮೂರು ತುಂಬಾ ಚಿಕ್ಕ ಹಳ್ಳಿ. ಗಾತ್ರದಲ್ಲಾಗಲಿ, ಜನಸಂಖ್ಯೆಯಲ್ಲಾಗಲಿ, ವಿಸ್ತಾರದಲ್ಲಾಗಲಿ ಅಷ್ಟೇನು ದೊಡ್ಡದಲ್ಲದ, ಪುಟ್ಟದಾದ, ಅಷ್ಟೇ ಸುಂದರವಾದ ಊರು ನಮ್ಮದು. ಊರಿನಲ್ಲಿ ಏನೇ ಘಟನೆ ನಡೆದರೂ, ಯಾವುದೇ ಹೊಸ ಸಂಗತಿ ಹರಿದಾಡಿದರೂ ಕ್ಷಣಾರ್ಧದಲ್ಲೇ ಎಲ್ಲರ ಮನೆ ಬಾಗಿಲನ್ನು ಸ್ಪಶರ್ಿಸಿ, ಎಲ್ಲರ ನಾಲಿಗೆಯ ಮೇಲೆಲ್ಲ ಸುತ್ತಾಡಿ ಬಿಡುತ್ತದೆ. ಜನಗಣತಿ ಮಾಡಲು ಬಂದ ಶಿಕ್ಷಕರೋ ಒಂದೇ ಮನೆಯಲ್ಲಿ ವಿಶ್ರಮಿಸಿ ಆಯಾ ಓಣಿಯ ಇತಿಹಾಸವನ್ನು ದಾಖಲಿಸಿಕೊಂಡು ಹೋಗಿಬಿಟ್ಟಿರುತ್ತಾರೆ. ಮೊದಮೊದಲು ಕೋಳಿ ಕೂಗಿಗೆ ಜನ ಏಳುತ್ತಿದ್ದರೂ, ಇತ್ತೀಚಿಗೆ ಸುಮಾರು ಹತ್ತು ವರ್ಷಗಳಿಂದಲೂ ನಡುವಿನ ಮನೆಯ ತಾರಕ್ಕನ ರೊಟ್ಟಿ ಬಡಿತದ ಜೋರು ಶಬ್ದ ಎಲ್ಲರನ್ನು ಬಡಿದು ಎಬ್ಬಿಸುತ್ತದೆ. ಬೆಳಿಗ್ಗೆ ಎದ್ದೊಡನೆ ಸ್ನಾನಾದಿಗಳನ್ನೆಲ್ಲಾ ಮುಗಿಸಿ, ಮನೆದೇವರಿಗೆ ಊದುಬತ್ತಿ ಹಚ್ಚಿ ರೊಟ್ಟಿ ಬಡಿಯಲು ಕುಳಿತ ತಾರಕ್ಕ ತನ್ನ ಅತ್ತೆ-ಮಾವ, ಗಂಡ-ಮಕ್ಕಳಿಗೂ ಬೆಳಿಗ್ಗೆಯಿಂದ ಮದ್ಯಾಹ್ನಕ್ಕಾಗುವಷ್ಟು ರೊಟ್ಟಿ ಬಡಿಯುತ್ತಾಳೆ. ನಿಜಕ್ಕೂ ಆ ರೊಟ್ಟಿ ಬಡಿತದಲ್ಲಿ ಒಂದು ವಿಶೇಷ ತರಹದ ಆಹ್ಲಾದತೆಯಿದೆ. ಹೀಗೆ ತಾರಕ್ಕ ಎಲ್ಲರ ಮನೆಯ ಅಲಾರಾಮ ಗಡಿಯಾರವಾಗಿದ್ದಳು.
ತಾರಕ್ಕನಿಗೆ ಎರಡು ಹೆಣ್ಣು ಮಕ್ಕಳು ಮತ್ತು ಒಂದು ಗಂಡು ಮಗು ಇದೆ. ಹಿರಿಯವಳಾದ ಸಾವಿತ್ರಿ ಎಲ್ಲರ ಮೆಚ್ಚುಗೆಯ ಮುದ್ದು ಹುಡುಗಿ. ಅವಳ ಹೆಸರು ಸಾವಿತ್ರಿ ಇದ್ದರೂ ಯಾರೂ ಅವಳನ್ನು ಮೂಲ ಹೆಸರಿನಿಂದ ಸಂಭೋದಿಸುತ್ತಿರಲಿಲ್ಲ. ಎಲ್ಲರೂ ಆಕೆಯನ್ನು ಕೆಂಪಿ ಕೆಂಪಿ ಎಂದೇ ಕೂಗುತ್ತಿದ್ದರು. ಇದಕ್ಕೆ ಕಾರಣವೇ ಅವಳ ಮೈಬಣ್ಣ. ವಿದೇಶಿ ಜನರಂತೆ ಆಕೆ ಬಲು ಕೆಂಪಗಿದ್ದಳು. ಬ್ರಿಟನ್ನಿನ ರಾಣಿಯಂತೆ ಅವಳ ಮುಖ ಕಂಗೊಳಿಸುತ್ತಿತ್ತು. ದುಂಡನೆಯ ಮುಖ, ಆಕರ್ಷಕ ಮೈಕಟ್ಟು, ಮಿನುಗುವ ಕಂಗಳು, ಪಡ್ಡೆ ಹುಡುಗರನ್ನು ನಿದ್ದೆಗೆಡಿಸುವ ಮುಂಗುರುಳು, ಎಲ್ಲರನ್ನು ತಡೆದು ನಿಲ್ಲಿಸುವ ಮುಗುಳುನಗೆ, ಹಕ್ಕಿಗಳ ಇನಿದನಿಗಿಂತಲೂ ಸೊಗಸು ಅವಳ ಮಾತುಗಳು; ನಿಜಕ್ಕೂ ಆಕೆ ಸೌಂದರ್ಯದ ಖಣಿ. ಆಕೆಯನ್ನು ನೋಡಿದ ಜನರೆಲ್ಲ, ಎನ್ ನಿನ್ನ ಮಗಳ, ತಾರಕ್ಕ ಕಡ್ಡೀಲೆ ಬರದ್ಹಾಂಗ ಅದಾಳ್ ನೋಡವಾ ಎಂದು ತಮಗೆ ತಿಳಿದ ರೀತಿಯಲ್ಲಿ ಹೊಗಳುವರು. ಅವಳ ತಂದೆ ಕಲ್ಲಪ್ಪನೋ ಅವಳ ಮೈಗೆ ಹೊಂದಿಕೆಯಾಗುವಂತಹ ಬಣ್ಣ-ಬಣ್ಣದ ಬಟ್ಟೆ ತಂದು ಕೊಡುತ್ತಿದ್ದ. ಯಾರಾದರು ಅವನ ಮುಂದೆ ಕೆಂಪಿನ ಬಣ್ಣಿಸಿ ಮಾತನಾಡಿದರೆ, ಎದೆ ಮುಂದೆ ಮಾಡಿ ಇದ್ದ ನಾಲ್ಕಾರು ತನ್ನ ಮೀಸೆ ಚಿಗುರನ್ನು ಹುರಿಗೊಳಿಸುತ್ತಿದ್ದ. ತನ್ನ ಮಗಳ ಅಪಾರ ಸೌಂದರ್ಯಕ್ಕೆ ಹೆಮ್ಮೆ ಪಡುತ್ತ, ಈ ಸೌಂದದರ್ಯದ ಖಣಿಯ ಸೃಷ್ಟಿಕರ್ತ ತಾನೇ ಎಂದು ಹುಬ್ಬೇರಿಸುತ್ತದ್ದ.
4-5 ವರ್ಷದ ಈ ಎಳೆಕೂಸನ್ನು ನೋಡಿದವರೆಲ್ಲ ಆಕೆಯನ್ನು ಎತ್ತಿಕೊಂಡು ಮುದ್ದಾಡುತ್ತಿದ್ದರು. ಹಾಗೆಯೇ ಅಂಗಡಿಯತ್ತ ಕರೆದೊಯ್ದು ಆಕೆಗೆ ಬಲು ಇಷ್ಟವಾಗುವ ‘ಮೈಸೂರ್ ಪಾಕ್’ ನ್ನು ಕೊಡಿಸುತ್ತಿದ್ದರು. ಕೆಲವೋರ್ವ ಹುಡುಗಿಯರು ಅವಳ ಕೆಂಪಾದ ಗಲ್ಲವನ್ನು ಚೂಟಿ ಆಕೆಯ ಸೌಂದರ್ಯದ ಬಗ್ಗೆ ತಮ್ಮೊಳಗಿರುವ ಜಿಗುಪ್ಸೆಯನ್ನು ಹೊರಹಾಕುತ್ತಿದ್ದರು. ಪಾಪ ಆ ಸಣ್ಣ ಕೂಸಿಗೇನು ಗೊತ್ತು ಅವರ ಸೋಗಲಾಡಿತನ. ಅವರು ಚೂಟಿದಾಗ ಆಗುವ ನೋವಿನ ಬಾಧೆ ತಾಳಲಾರದೇ ಅಳುತ್ತ, ಚೀರುತ್ತ, ಮನೆಯ ಹಾದಿ ಹಿಡಿಯುತ್ತಿದ್ದಳು. ಕೆಂಪಿಯ ಮಾವ ಸಿದ್ಧಪ್ಪನೋ ಆಕೆಯನ್ನು ಕಂಡರೆ ಸಾಕು ಕಾಲು ಕೆದರಿ ಓಡಿ ಬರುತ್ತಾನೆ. ಬಂದವನೇ ಆಕೆ ತಿರಸ್ಕರಿಸಿದರೂ, ಗಲ್ಲ ಚೂಟಿ, ಹಲ್ಲಿನ ಗುರುತು ಉಳಿಯುವ ಹಾಗೆ, ಬೆಣ್ಣೆಯಂತಿರುವ ಆಕೆಯ ಕೆನ್ನೆಯನ್ನು ಕಚ್ಚುತ್ತಿದ್ದ. ಹೀಗೆ ಆಕೆಯ ಗಲ್ಲದ ಮೇಲೆ ಆಗಾಗ ಹಲ್ಲೆ ಮಾಡಿತ್ತಿದ್ದ. ಎಲ್ಲರದು ಪ್ರೀತಿಯ ಹಲ್ಲೆಯಾದರೆ ಇವನದು ಪ್ರಯತ್ನಪೂರ್ವಕ ಹಲ್ಲೆಯಾಗಿತ್ತು. ಅವಳು ಅಳುವ ಶಬ್ದ ಜೋರಾಗುತ್ತಿದ್ದಂತೇ ಅಲ್ಲಿಂದ ಓಟ ಕೀಳುತ್ತಿದ್ದ.
ಅಳುತ್ತ ಮನೆಗೆ ಬಂದ ಕೆಂಪಿ, ಅವರ ಅವ್ವನ ಹತ್ತಿರ ಬಂದು, ‘ಯವ್ವಾ….. ಯ ವ್ವಾ….. ಆ.. ಆ.. ಸಿ..ಸಿ..ಸಿದ್ದು ಮಾಮ.. ನನ್ನ ಗಲ್ಲ ಕ..ಕ..ಕಡದ..’ ಅಂದಳು ಬಿಕ್ಕುತ್ತ. ಬಿಕ್ಕುವ ಮಗಳ ವೈಖರಿಯನ್ನು ಗಮನಿಸಿದ ತಾರಕ್ಕ ಅವಳನ್ನು ಮೆಲ್ಲಗೆ ಮಡಿಲಿಗೆ ಹಾಕಿಕೊಂಡು ಸಂತೈಸಿದಳು. ‘ಅಳಬ್ಯಾಡ ಕೆಂಪಿ, ಎಲ್ಲಿ ನೋಡೂಣು’ ಎಂದು ನಿಧಾನವಾಗಿ ಕೆಂಪಿಯ ಗಲ್ಲದ ಮೇಲೆ ಕೈಯಾಡಿಸಿದಳು. ಕೆಂಪಿ ಮತ್ತೇ ಅಳುತ್ತ, ಚೀರುತ್ತ, ದೊಡ್ಡ ದನಿತೆಗೆದು ತನ್ನ ನೋವಿನ ಆಳಗಲನ್ನು ಪ್ರದರ್ಶಿಸಿದಳು. ಕೆಂಪಿಯ ಗಲ್ಲದ ಮೇಲಿನ ನಾಲ್ಕು ಹಳದಿ ಹಲ್ಲಿನ ಗುರುತು ನೋಡಿದ ತಾರಕ್ಕ ಕೆಂಡದುಂಡೆಯಾದಳು. ‘ ಎಲ್ಲಿ ಹ್ವಾದ ಆಂವ, ಭಾವಾ ಹಾಂಟ್ಯಾ, ಅಳಬ್ಯಾಡ ಗಪ್, ನಿಮ್ಮಪ್ಪ ಬಂದಮ್ಯಾಲ ಹೇಳಿ ಅವನ ಹೊಡಸ್ತನ್.’ಎಂದು ತಾರಕ್ಕ ವಿವಿಧ ಭಂಗಿಗಳ ಮೂಲಕ ಮಗಳನ್ನು ಸಂತೈಸುವ ಸಾಹಸ ಮಾಡುತ್ತಿದ್ದಳು. ಮಕ್ಕಳ ಸ್ವಭಾವವೋ ಏನೋ, ಸಮಾದಾನ ಪಡಿಸಿದಷ್ಟು, ಅವು ತಮ್ಮ ಅಳಲನ್ನು ಜೋರು ಮಾಡುತ್ತವೆ. ಕೆಂಪಿ ಇದಕ್ಕೇನು ಹೊರತಾಗಿರಲಿಲ್ಲ. ತಾರಕ್ಕ ಈಗ ಸಿದ್ದಪ್ಪನ ಮೇಲೆ ವಿಪರೀತ ಕೋಪ ಹೊರಹಾಕಿ, ಅವನನ್ನು ಹುಡುಕಿಕೊಂಡು ಅವರ ಮನೆಯತ್ತ ಬಿರುಸಿನ ಹೆಜ್ಜೆಹಾಕಿದಳು.
‘ಏನ್, ತಾರಕ್ಕ ಯಾಕ ಕೆಂಪಿ ಅಳಾಕ ಹತ್ತ್ಯಾಳು, ಯಾನಾತು? ಎಲ್ಲಿ ಬಿದ್ಳ್ ಏನ್?’ ಎಂದು, ಅಳುತ್ತಿರುವ ಕೆಂಪಿಯನ್ನು ಸೊಂಟದ ಮೇಲೆ ಹಾಕಿಕೊಂಡು ಬರುತ್ತಿದ್ದ ತಾರಕ್ಕನನ್ನು ಕಂಡ, ಸಿದ್ದಪ್ಪನ ಅವ್ವ ಸುಜಕ್ಕ ಕೇಳಿದಳು. ‘ನೋಡ್, ಸುಜಕ್ಕ, ನಿಮ್ಮ ಸಿದ್ದ್ಯಾ ಈಕಿ ಗಲ್ಲ ಹ್ಯಾಂಗ ಕಚ್ಚ್ಯಾನು, ಎಟ್ ಬಿಕ್ಕಲಾತೈತಿ ಕೂಸಾ..’ಎಂದು ತಾರಕ್ಕ ಸಿದ್ದಪ್ಪನ ಮೇಲಿನ ಕೋಪವನ್ನು ಹೊರಹಾಕಿದಳು. ‘ಹೌದೇನ ಕೆಂಪಿ, ಇಲ್ಲಿ ಬಾರ.. ಅಳಬ್ಯಾಡ. ಸಿದ್ದ್ಯಾ ಬಂದಮ್ಯಾಲ್ ಅವಂಗ್ ಚಪ್ಪಲಿಲೆ ಹೊಡಿತಿನ, ಎಂದು ಸುಜಕ್ಕ ಕೆಂಪಿಯನ್ನು ಎತ್ತಿಕೊಂಡು, ಅವಳಿಗೆ ಹಾಲು ಬ್ರೆಡ್ ಕೊಟ್ಟು ಸಮಾಧಾನ ಪಡಿಸಿದಳು. ಹಾಲು ಬ್ರೆಡ್ ಸಿಕ್ಕಮೇಲೆ ಕೆಂಪಿ ತನ್ನ ಅಳುವನ್ನು ಮರೆತು ಹಾಲು ಬ್ರೆಡ್ ಮುಕ್ಕುವ ಕಾರ್ಯದಲ್ಲಿ ತೊಡಗಿದಳು. ನಂತರ ತಾರಕ್ಕನಿಗೊಂದು ಕಪ್ ಚಹ ಮಾಡಿಕೊಟ್ಟಳು.
‘ಅಟ್ಯಾಕ ಸಿಟ್ಟಿಗಿ ಬರ್ತಿ ತಾರಕ್ಕ, ಆಂವ ಆಕಿ ಮಾವ ಅದಾನು, ಅದಕ್ಕ ಸಲಿಗೀಲೆ ಗಲ್ಲ ಚೂಟ್ಯಾನು. ಅಷ್ಟ ಅಲ್ಲದ ಇವರಪ್ಪ ಈಕಿನ ಸಿದ್ಧ್ಯಾಗ ಕೊಟ್ಟ ಮದ್ವಿ ಮಾಡ್ತನಂತ ಹೇಳ್ಯಾನ’ ಎಂದು ಹೇಳುತ್ತ ಕೆಂಪಿಯತ್ತ ಹೊರಳಿ, ‘ಏನ್ ಕೆಂಪಿ ನೀ ಸಿದ್ದು ಮಾಮಾನ ಮದ್ವಿ ಆಗ್ತಿ ಇಲ್ಲೋ..? ಎಂದು ಚೇಷ್ಟೆ ಮಾಡಿ ನಕ್ಕರು. ಆದರೂ ಒಳಮನಸು ಕೇಳದ ತಾರಕ್ಕ, ‘ಮಾವ ಆದ್ರ ಏನಾತು, ಹಿಂಗ್ ಗಲ್ಲ ಕಚ್ಚುದೇನವ್ವ..? ಆಂವ ಬಂದಮ್ಯಾಲ್ ಜರಾ ತಾಕಿತ್ ಮಾಡ್ವಾ. ನಾ ನಡಿತೀನ್ ಸುಜಕ್ಕ, ಸಂಜಿ ಕೆಲ್ಸ ಹಾಂಗ ಉಳದೈತಿ. ನಮ್ಮ ಗಂಡಸ್ ಬಂದ್ರ ಬೈತೈತಿ, ಇನ್ನು ನಿನ್ನ ಕೆಲ್ಸ ಆಗಿಲ್ಲ ಏನ್? ಅಂತ’ ಎಂದು ಹಾಲು ಬ್ರೆಡ್ ತಿಂದು ತನ್ನ ಮುಖವನ್ನೆಲ್ಲ ಮುಸುರಿ ಮಾಡಿಕೊಂಡ ಕೆಂಪಿಯ ಮುಖ ಒರೆಸುತ್ತ ಮನೆಯತ್ತ ಹೆಜ್ಜೆ ಹಾಕಿದಳು.
ಕೆಂಪಿಯ ದಿನಚರಿ ಕೇಳಿ, ಊರೊಳಗಿನ ಕೆಲ ಹಿರಿಯರು ತಮ್ಮ ತಮ್ಮೊಳಗೆ ಮಾತುಕತೆ ನಡೆಸುತ್ತಿದ್ದರು; ‘ನೋಡ್ರಿ, ಮನಸ್ಯಾನ ಮನಸ್ ಎಸ್ಟ್ ಚಂಚಲ ಐತಿ. ಯಾವಾಗ್ಲೂ ಚೆಂದ ಇದದ್ದನ್ನ ಬಾಳ ಇಸ್ಟಾ ಪಡತೈತಿ. ಸಾಲಿ ಕಲಿ ಹುಡ್ಗೂರಂತೂ ಹುಡ್ಗಿ ಚೆಂದ ಇದ್ರ ಸಾಕ್, ಆಕಿ ಗುಣ ನೋಡದ; ಆಕಿ ಹಿಂದ್ ಬಿದ್ದ ಅವರ ಮನ್ಯಾನವ್ರ ಕೈಲಿ ಬಡತಾ ತಿಂತಾರು. ಆ ಸಿದ್ಧ್ಯಾನ ನೋಡ್ರಿ, ಕೆಂಪಿ ಗಲ್ಲ ಚೂಟಿದ್ಹಾಂಗ ಅವರಕ್ಕನ ಮಗಳು ಮಂಜಿ ಗಲ್ಲ ಯಾಕ್ ಚೂಟಾಂಗಿಲ್ಲ ಹೇಳ್ರಿ. ಯಾಕಂದ್ರ ಆಕಿ ಜರಾ ಕಪ್ಪ ಅದಾಳು. ಕಪ್ಪ ಇದ್ರ ಏನಾತು, ಆಕಿ ಇಸ್ಟ್ ಸಣ್ಣ ವಯಾದಾಗ ಇಲ್ಲರ ಕೂಡ ಎಸ್ಟ್ ಚೆಂದ ಮಾತಾಡ್ತಾಳು. ಮನ್ಯಾಗ ಖಾಲಿ ಕೂಂಡಾಂಗಿಲ್ಲ. ಏನರೇ ಕೆಲಸಾ ಮಾಡಿ ಅವರವ್ವನ ಭಾರ ತುಸು ಕಡಿಮೆ ಮಾಡ್ತಾಳು. ಆಕಿ, ‘ಮಾಮಾ ನಾ ಅಂಗಡೀಗಿ ಬತರ್ಿನಂದ್ರ, ಬ್ಯಾಡಾ ಹೋಗ ಮನೀಗಿ ಅಂತಾನು. ಆ ಕೆಂಪಿ, ‘ನಾ ವಲ್ಲಿ ಮಾಮಾ, ನಾ ವಲ್ಲಿ ಅಂದ್ರೂ ಬಿಡದ ಆಕಿನ ಎತ್ತಕೊಂಡ್ ಅಂಗಡಿಗಿ ಬಂದ ಆಕಿ ಕೇಳಿದ್ ಕೊಡಸ್ತಾನು. ಇನ್ನ ನೀವ್ ಹೇಳ್ರಿ, ‘ಆಕಳ್ ಕಪ್ಪಾದ್ರ ಹಾಲ ಕಪ್ಪ್ ಇರ್ತಾವೇನಪಾ? ಹೀಗೆ ಇವರ ಮಾತುಗಳು ಚೆಲುವಿಕೆ ಮಾಡುವ ಚಂಚಲತೆ ಹಾಗೂ ಆಕರ್ಷಣೆಯ ಕುರಿತಾಗಿ ಚರ್ಚೆ ಒಳಗಾಗುತ್ತಿದ್ದವು.

ಅಂತೂ ಇಂತೂ ಕೆಂಪಿ ದೊಡ್ಡವಳಾದ ಮೇಲೆ, ಅವಳ ಸೌಂದರ್ಯ ಮೊದಲಿಗಿಂತಲೂ ಇಮ್ಮಡಿಯಾಗಿತ್ತು. ಯೌವ್ವನದ ಸೊಬಗು ಅವಳ ಸೌಂದರ್ಯಕ್ಕೆ ಹಬ್ಬದ ವಾತಾವರಣವನ್ನೇ ಬೆಳಗಿತ್ತು. ಓಣಿಯೊಳಗಿನ ಹುಡುಗರೆಲ್ಲರ ಕನಸಿನ ರಾಣಿಯಾಗಿ ಎಲ್ಲರ ನಿದ್ದೆಗೆ ಭಂಗ ತರುವ ಸಾಹಸ ಮಾಡಿದ್ದಳು. ಹುಡುಗರೆಲ್ಲರೂ ಗಂಪು ಗುಂಪಾಗಿ ಅವಳ ವೈಖರಿ ಮತ್ತು ದಿನಚರಿಯ ಬಗ್ಗೆ ಖಾಸಗಿಯಾಗಿ ಮಾತನಾಡಲಾರಂಭಿಸಿದರು. ‘ ಆಕಿ ಹಿಂಗ್, ಆಕಿ ಹಾಂಗ್’ ಎಂದು ಅವಳ ಬಗ್ಗೆ ತಮಗೆ ತಿಳಿದ ರೀತಿಯಲ್ಲಿ ಕತೆಕಟ್ಟಿ ಹೊಗಳುತ್ತಿದ್ದರು. ಅವಳ ಬಗ್ಗೆ ತಮ್ಮೊಳಗಿನ ತುಡಿತ ಮಿಡಿತಗಳ ವಿನಿಮಯ ಮಾಡಿಕೊಳ್ಳುತ್ತಿದ್ದರು. ಕೆಲವರಂತೂ ಏಕಾಂಗಿಯಾಗಿಯೇ ಸುತ್ತಾಡಿ ಅವಳ ನೋಟ ಕದಿಯಲು ಪ್ರಯತ್ನಿಸುತ್ತಿದ್ದರು. ಅವಳ ಮುಂದೆ ತಮ್ಮ ಸಾಚಾತನವನ್ನು ಪ್ರದರ್ಶಿಸಿ, ಅವಳ ಹಸಿ ಮನಸಿಗೆ ಹೊಸ ಆಸೆ ಚಿಗುರಿಸಲು ತವಕಿಸುತ್ತಿದ್ದರು. ಕೆಲವು ಕಿಟಲೆ ಹುಡುಗರು ಮಾತು ತಡೆಯಲಾರದೇ ಅವಳಿಗೆ ಏನಾದರೂ ಹೇಳಿ ಅವಳಿಂದ ಬೈಗುಳದ ಕಹಿ ಅನುಭವವನ್ನು ಮನಸೋಯಿಚ್ಛೆ ಸವಿಯುತ್ತಿದ್ದರು.
ವರ್ಷದಲ್ಲಿ ಒಂದು ದಿನ ಮಾತ್ರ ತುಂಬಾ ಸೊಗಸಾಗಿ ನಡೆಯೋ ಊರಿನ ಜಾತ್ರೆಯೊಳಗೆ ಕೆಂಪಿಯ ಪಿತಾಮಹ ಕಲ್ಲಪ್ಪ ಅವಳಿಗೆ ಹೊಸ ಮಿಂಚಿನ ಸೀರೆ ತಂದುಕೊಟ್ಟಿದ್ದ. ಆಕಾಶನೀಲಿ ಬಣ್ಣದ ಸೀರೆಯನ್ನು ಕೆಂಪಿ ತುಂಬಾ ಇಷ್ಟಪಡುತ್ತಿದ್ದಳು. ಅದಕ್ಕೆ ಸರಿಯಾಗಿ ಹೊಂದಿಕೆಯಾಗುವ ರವಿಕೆ ಹೊಲಿಸಿಕೊಂಡಳು. ಆಕೆ ಅವುಗಳನ್ನೆಲ್ಲ ತೊಟ್ಟುಕೊಂಡು, ತನ್ನ ಮುಖಾರವಿಂದಕ್ಕೆ ಘಮಘಮಿಸುವ ಪಾವುಡರ್ ಬಳಿದುಕೊಂಡು, ತುಟಿಗಿಷ್ಟು ಮಾದಕ ಬಣ್ಣ ಲೇಪಿಸಿ, ಇದ್ದ ನಾಲ್ಕಾರು ಚಿನ್ನದ ಹಾಗೆ ಮಿನುಗುವ ಆಭರಣ ಧರಿಸಿ ಗೆಳತಿಯರೊಟ್ಟಿಗೆ ಜಾತ್ರೆಯೊಳಗೆ ಸುತ್ತಾಡಲು ಹೋದಳು. ಆಕೆಯನ್ನು ನೋಡಿದ ಗೆಳತಿಯರೆಲ್ಲ ಹುಬ್ಬು ಹಾರಿಸಿ ಅವಳ ಅಂದಕ್ಕೆ ತಮ್ಮ ಹೊಗಳಿಕೆಯ ಬಾಣ ಬಿಟ್ಟರು. ನಿಜಕ್ಕೂ ಕೆಂಪಿ ಶೃಂಗಾರಗೊಂಡ ನವವಧುವಿನಂತೆ ನಿಸರ್ಗದ ಸೌಂದರ್ಯವನ್ನೆಲ್ಲ ಮೈಯಲ್ಲಿ ಧರಿಸಿಕೊಂಡು ಕಂಗೊಳಿಸುತ್ತಿದ್ದಳು. ಕೆಂಪಿ ಜಾತ್ರೆಯೊಳಗೆ ಪ್ರವೇಶಿಸುತ್ತಿದ್ದಂತೆಯೇ, ಊರೊಳಗಿನ ಜನ, ಜಾತ್ರೆಗೆ ಬಂದ ಬೇರೆ ಬೇರೆ ಊರಿನ ನೆಂಟರು, ಬೆಂಡ್ ಭಾರಿಸುವವರು, ಪುಗ್ಗ ಮಾರುವ ಹುಡುಗ, ಆಟಿಕೆ ಸಾಮಾನು ಮಾರುವವರು, ಬಳೆ ಮಾರುವ ಗಿಡ್ಡ ಹುಡುಗ, ಪಾತ್ರೆ ಮಾರುವ ಹೆಂಗಸರು, ಅಲ್ಲಲ್ಲಿ ಹುಡುಗಿಯರ ಸುತ್ತ ತಿರುಗುವ ಪಡ್ಡೆ ಹುಡುಗರು ಅಬ್ಬಾ! ಒಂದೇ ಎರಡೇ ಸಾವಿರ ಕಣ್ಣುಗಳು ಅವಳ ಮೇಲೆ ಮುಗಿಬಿದ್ದಿದ್ದವು. ಒಂದು ಕ್ಷಣ ಎಲ್ಲರಿಗೂ ಜಾತ್ರೆಯೊಳಗೆ ಭೂಕಂಪವಾದ ಅನುಭವವಾಯಿತು.
ಕೆಂಪಿ ತನ್ನ ಗೆಳತಿಯರೊಟ್ಟಿಗೆ ಜಾತ್ರೆಯ ಗುರುತಿಗಾಗಿ ಗಾಜಿನ ಬಳೆ ಖರೀದಿಸಲು ಬಳೆ ಮಾರುವ ಗಿಡ್ಡ ಹುಡುಗನ ಹತ್ತಿರ ಬಂದಳು. ‘ ಆ ಗುಲಾಬಿ ಬಣ್ಣದ ಗಾಜಿನ ಬಳಿ ಹ್ಯಾಂಗ್ ಡಜನ್ರಿ’ ಎಂದು ಮೆಲುದನಿಯ ಮಾತು ಉದುರಿಸಿದಳು. ಆಗ ಬಳೆ ಮಾರುವ ಬಳೆಗಾರ ಆಕೆಯ ಸೌಂದರ್ಯದ ಆಯಸ್ಕಾಂತಕ್ಕೆ ಮಾರು ಹೋಗಿ, ಒಂದು ಕ್ಷಣ ಮೈಮರೆತು ಅವಳನ್ನೇ ದಿಟ್ಟಿಸಿದ. ಸುತ್ತಲಿದ್ದ ಗೆಳತಿಯರೆಲ್ಲ, ‘ನೋಡ ಕೆಂಪಿ, ನಿನ್ನ ನೋಡಿ ಆಂವ ಹೆಂಗ ಗಾಬರಿಯಾಗ್ಯಾನು’ ಎಂದು ಆಕೆಯ ಸೊಂಟವನ್ನು ಚಿವುಟಿ ನಗೆಯಾಡಿದರು. ಇಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಕೆಂಪಿಯ ಗೆಳತಿ ಮಾಯಾ ಒಂದು ಬಳೆ ಪ್ಯಾಕೆಟನ್ನೇ ಮಾಯ ಮಾಡಿಬಿಟ್ಟಿದ್ದಳು. ಜಾತ್ರೆ ಮುಗಿದ ಮೇಲೆ ಮಾಯಾ ತನ್ನ ಕಳುವುತನದ ಚಾಣಾಕ್ಷತನವನ್ನು ಹೇಳಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿಬಿಟ್ಟಳು.
ಇತ್ತ ಕೆಂಪಿಯ ಮಾವ ಸಿದ್ಧಪ್ಪ, ಆಕೆ ದೊಡ್ಡವಳಾದ ಮೇಲೆ ಕೆಂಪಿಯನ್ನು ಮುಟ್ಟೋದಿರಲಿ, ಆಕೆಯ ಎದುರು ನಿಂತು ಮಾತನಾಡುವ ಸಣ್ಣ ಧೈರ್ಯವನ್ನೂ ಮಾಡಿರಲಿಲ್ಲ. ಆದರೆ ತನ್ನ ಅಮ್ಮನ ಹತ್ತಿರ ಮಾತ್ರ, ‘ನಾ ಕೆಂಪಿನ ಮದ್ವಿ ಆಗಾಂವ’ ಎಂದು ಹಟ ಹಿಡಿದು ಕುಳಿತಿದ್ದ. ಇದನ್ನರಿತ ಸಿದ್ಧಪ್ಪನ ಗೆಳೆಯರೆಲ್ಲ, ‘ ಲೇ ಸಿದ್ಧ್ಯಾ ಬ್ಯಾಡೋ. ಆಕಿನ ಮದ್ವಿ ಆಗಬ್ಯಾಡೋ. ದೊಡ್ಡವರ ಮಾತ ಕೇಳಿ ಇಲ್ಲೋ. ಚೆಂದಾನ ಹೆಂಡತಿ ಗಂಡನ ವೈರಿ ಅಂತ. ಮದ್ವಿ ಆದಮ್ಯಾಲ ಆಕೀ ಸೆರಗ ಹಿಡಿದ ತಿರುಗುದ ಆಗತೈತಿ. ಅಮ್ಮೊವ್ರ ಗಂಡ ಸಿನಿಮಾ ತರ ಆಕೀ ಹೇಳಿದಾಂಗ ಕುಣಿಬೇಕಾಗತೈತಿ. ಲಗೂನ ಕಾಲ ಜಾರಿ ಬೀಳಬ್ಯಾಡ’ ಎಂದು ಬುದ್ಧಿ ಮಾತು ಹೇಳಿ ತಮ್ಮ ಅರೆಬರೆ ಜಾಣತನ ತೋರ್ಪಡಿಸಿದರು. ಇವರ ಯಾವ ಮಾತಿಗೂ ಕಿವಿಗೊಡದೇ ದಿನದಿಂದ ದಿನಕ್ಕೆ ತಮ್ಮ ಮನೆಯಳಗೆ ರಂಪಾಟ ಶುರುಮಾಡುತ್ತಿದ್ದ. ಕೆಂಪಿಯನ್ನು ಮದುವೆಯಾಗಿ ಆಕೆಯ ಜೊತೆ ಊರೂರು ಸುತ್ತಿ ಸುಖಿಸಬೇಕೆಂದಿದ್ದ.
ಒಂದು ದಿನ ತಾರಕ್ಕ ಸಿದ್ಧಪ್ಪನ ಮನೆಗೆ ಹೋದಾಗ, ಅವನ ತಾಯಿ ಸುಜಕ್ಕ ಮದುವೆಯ ವಿಷಯವಾಗಿ ಮಾತು ತೆಗೆದಳು. ಕೆಂಪಿಯನ್ನು ತನ್ನ ಮಗನಿಗೆ ಮದುವೆ ಮಾಡಿಕೊಡಲು ಕೇಳಿದಳು. ಆಗ ತಾರಕ್ಕ, ‘ ಎನ್ ಮಾತಾಡ್ತಿ ಸುಜಕ್ಕ? ಕೆಂಪಿ ಸಣ್ಣವ್ಳಿದ್ದಾಗ ಏನೋ ಚಾಷ್ಟಿ ಮಾಡ್ತಿ ಅಂದ್ರ ಈಗೂ ಹಾಂಗ ಹೇಳ್ತಿಯೆನ್ವಾ. ಅಲ್ಲಾ ಸಿದ್ಧ್ಯಾಗ್ಯಾನ ನೌಕರಿ ಐತಿ. ಹೋಲಮನಿ ಐತಿ. ಮೂರು ತಿಂಗಳ ಸಕ್ಕರಿ ಪ್ಯಾಕ್ಟರಿ ಚಾಲು ಆದಾಗಷ್ಟ ದುಡಿತಾನು. ಮುಂದ ಬರೀ ಆ ಉಡಾಳ ಹುಡುಗರ ಜೋಡಿ ತಿರಗ್ತಾನ. ದಿನಗೂಲಿ ಹೋದ್ರ ಪಗಾರರೇ ಎಷ್ಟ ಬರತೈತಿ. ಅದು ಅಂವ ತಿನ್ನೋ ತಂಬಾಕಿಗೇ ಸಾಕಾಗೋದಿಲ್ಲ. ಇನ್ ಈಕಿನ್ಯಾಂಗ ಸಾಕತಾನ ಹೇಳವಾ ನೀ..ನ. ಬಂಗಾರದಂತ ಗೊಂಬಿನ ಮಂಗ್ಯಾನ ಕೈಯಾಗ ಕೊಟ್ಟಾಂಹ ಆಗತೈತಿ. ನಮ್ಮ ಮಗಳ ಚೆಲ್ವಿ ಅದಳು. ದೊಡ್ಡ ದೊಡ್ಡ ಮನಿ ಬರ್ತಾವು. ಈಗ ಎರಡ ದಿನದ ಹಿಂದ ಒಂದ ಸಂಬಂಧ ಬಂದಿತ್ತು. ಹುಡುಗನಿಗೆ ಪೋಲಿಸ್ ನೌಕರಿ ಐತಿ. ಮನೆತಾನೂ ಚೆಲು ಐತಿ. ನಮಗೂ ಬಾಳ ಪಸಂಧ ಆಗೈತಿ. ಅವ್ರಿಗೂ ನಮ್ಮ ಹುಡುಗಿ ಪಸಂಧ ಆಗ್ಯಾಳ. ಒಳ್ಳೆ ದಿನ ಗೊತ್ತ ಮಾಡಿ ಲಗ್ನ ಮಾಡಿ ಮುಗಿಸಬೇಕಂತ ತಯಾರಿ ಮಾಡೇವಿ. ತಪ್ಪ ತಿಳಿಬ್ಯಾಡ ಸುಜಕ್ಕ. ನಾ ಹೋಗಿ ಬತರ್ೆನಿ’ ಎಂದು ತನ್ನೊಳಗಿದ್ದ ಎಲ್ಲ ಅಸಮಾಧನ ಹಾಗೂ ಕೆಂಪಿಯ ಮದುವೆ ಬಗ್ಗೆ ತನಗಿದ್ದ ವಿಚಾರವನ್ನೆಲ್ಲ ತಿಳಿಸಿ ಮನೆಯತ್ತ ನಡೆದಳು.
ಕೆಲವು ದಿನಗಳಾದ ಮೇಲೆ ತಾರಕ್ಕ ಸುಜಕ್ಕನ ಮನೆಗೆ ಬಂದು ಕೆಂಪಿಯ ವಿವಾಹ ನಿಶ್ಚಯದ ಸುದ್ದಿ ತಿಳಿಸಿ, ಆಕೆಯ ಕೈಗೊಂದು ಲಗ್ನಪತ್ರಿಕೆ ನೀಡಿ ಹೆಚ್ಚು ಮಾತನಾಡದೇ, ‘ಎಲ್ಲಾರ್ನೂ ಮದುವಿಗಿ ಕರಕೊಂಡ ಬಾ ಸುಜಕ್ಕ’ ಎಂದು ಹೇಳಿ ಮರಳಿದಳು. ಸುಜಕ್ಕನಿಗೆ ಈ ಸುದ್ಧಿ ತಿಳಿದು ಖುಷಿಯಾದರೂ ತನ್ನ ಮಗನನ್ನು ನೆನೆದು ನೊಂದುಕೊಂಡಳು. ‘ಯಾರ್ಯಾರ ನಸೀಬ ಎಲ್ಲೆಲ್ಲಿ ಐತಿ ದೇವ್ರ ಬಲ್ಲ’ ಎಂದು ತನ್ನನ್ನು ತಾನು ಹೇಗೋ ಸಮಾಧಾನಪಡಿಸಿಕೊಂಡಳು. ಆದರೆ ಸಿದ್ಧಪ್ಪನ ಬಗ್ಗೆ ಅವಳ ತಲೆಯಲ್ಲೊಂದು ಕೊರಗು ಮತ್ತು ಭಯ ಶುರುವಾಯಿತು. ಆತ ಏನು ಮಾಡುತ್ತಾನೋ ಎಂಬ ಆತಂಕಕ್ಕೆ ಒಳಗಾದಳು. ಸಿದ್ಧಪ್ಪನಿಗೆ ಈ ವಿಚಾರ ತಿಳಿದು ಆತ ಮದತುಂಬಿದ ಹೋರಿಯ ಹಾಗೆ ಮನೆಯವರ ಮೇಲೆ ಹ್ಞೂಂಕರಿಸಲಾರಂಬಿಸಿದ. ಆದರೂ ಸಿದ್ಧಪ್ಪನ ಮದ ಬಹಳ ಕಾಲ ಇರದೇ ಮೌನವಾಯಿತು.
ಕೆಂಪಿ ಮದುವೆಯಲ್ಲಿ ಮೈತುಂಬ ಆಭರಣ ಧರಿಸಿಕೊಂಡು ಚಂದ್ರಚಕೋರಿಯ ಹಾಗೆ ಹೊಳೆಯುತ್ತಿದ್ದಳು. ಪೋಲಿಸನೊಂದಿಗೆ ಕೆಂಪಿಯ ಮದುವೆ ಅದ್ಧೂರಿಯಾಗಿಯೇ ನಡೆಯಿತು. ಮದುವೆಯಲ್ಲಿ ಕೆಂಪಿಯನ್ನು ನೋಡಿದ ಜನರೆಲ್ಲ ಬಾಯಿತುಂಬ ಅವಳ ಸೊಬಗು ಲಾವಣ್ಯವನ್ನು ಬಣ್ಣಿಸುತ್ತಿದ್ದರು.
ಇತ್ತ ಆಕೆಯ ಬಗ್ಗೆ ತಲೆಬಿಸಿ ಮಾಡಿಕೊಂಡ ಹುಡುಗರೆಲ್ಲ ಆಕೆಯನ್ನು ಮರೆತು ತಮ್ಮ ತಮ್ಮ ಕೆಲಸಕ್ಕೆ ಅಂಟಿಕೊಂಡರು. ಆದರೆ ಸಿದ್ಧಪ್ಪ ಮಾತ್ರ ತನ್ನ ತಲೆಬಿಸಿಯನ್ನು ಹಾಗೆ ಉಳಿಸಿಕೊಂಡು ಪೋಷಿಸುತ್ತಿದ್ದ. ‘ಆಕೀನ್ ಎತ್ತಕೊಂಡ ಬರ್ತಿನಿ’ ಎಂದು ತನ್ನ ಗೆಳೆಯರ ಹತ್ತಿರ ತನ್ನ ಹುಚ್ಚು ಸಾಹಸದ ಮಾತುಗಳನ್ನು ಹೇಳುತ್ತಿದ್ದ. ಆಗ ಗೆಳೆಯರೆಲ್ಲ ‘ಲೋ ಸಿದ್ಧ್ಯಾ, ಕೆಂಪಿ ಮದ್ವಿ ಆಗಿದ್ದು ಒಬ್ಬ ಪೋಲಿಸ್ನ. ನೀ ಏನಾರ ಆಕಡೆ ಹೋಗಿ ಆವಾಜ ಹಾಕಿದ್ದಿ ಅಂದ್ರ, ಪೋಲಿಸ್ ಮಾವಾ ನಿನ್ನ ಒಳಗ ಹಾಕಿ ಏರೋಪ್ಲೇನ್ ಹತ್ತಿಸಿ ಬಿಡ್ತಾನ್, ಹೂಷಾರ್! ಎಂದು ಎಚ್ಚರಿಕೆಯ ಜೊತೆಗೆ ಭಯವನ್ನು ತುಂಬಿದರು. ಕೆಲವು ದಿನಗಳಾದ ನಂತರ ‘ನಮ್ಮ ಹುಡುಗ ಆಕಿ ಚಿಂತ್ಯಾಗ ಹಾಳಾಗತಾನ್’ ಎಂದು ಅರಿತ ಮನೆಯವರೆಲ್ಲ ಅವನಿಗೂ ಒಂದು ಕನ್ಯೆ ನೋಡಿ ಒತ್ತಾಯಪೂರ್ವಕವಾಗಿ ಮದುವೆ ಮಾಡಿ ಅವನ ತಲೆಬಿಸಿಯನ್ನು ಶಾಂತಗೊಳಿಸಿದರು.






ಸೂಪರ್ ಗೆಳೆಯಾ, ಅಲ್ಲಲ್ಲಿ ಗ್ರಾಮ್ಯ ಭಾಷೆಯ ಬಳಕೆಯಲ್ಲಿ ಸ್ವಲ್ಪ ಲಕ್ಷಕೊಡು ಕಥಾ ಲಹರಿ ತುಂಬಾ ಸೊಗಸಾಗಿರುತ್ತೆ.. ಕೆಂಪಿ ತಂಪಾಗಿಹೋದಳು ಸಿದ್ದ್ಯಾ ಮುದ್ದ್ಯಾಗಿ ಹೋದಾ.. ಕಥಿ ಚಲೋ ಐತಿ ದೋಸ್ತ ಊರಾಗಿನ ತಾರಕ್ಕನ ಕೈಯಾಗಿನ ರೊಟ್ಟಿ ತಿಂದು ಮತ್ತಷ್ಟ ಕಥಿ ಬರಿ ಚಲೋ ಆಗತೈತಿ…
Thanku dosth I will try….
good story written, the way you used words are very awesome.