ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಣ್ಣ ಕಥೆ ’ಅಪೂರ್ವ’

ಕ್ರೌಂಚ

1

ಸಾತತ್ಯದ ನಿರೀಕ್ಷೆಗೊಳಗೊಂಡಂತೆ ನಮ್ಮ ಜೀವನದಲ್ಲಿ ಕಳೆದುಹೋಗುವ ಆರ್ತತೆ ಮತ್ತು ಉತ್ಕಟತನ. ಇದ್ದೂ ಇಲ್ಲದಂತೆ ಎನ್ನಿಸುವ ಕ್ಷಣಗಳು ತರ್ಕಕ್ಕೆ ಒಗ್ಗಲಾರದ ಬದುಕು. ಅಪೂರ್ವವೆನಿಸಿ ದಿಗ್ಗನೆಂದು ಸಿಡಿದು ಮನಸ್ಸಿನಲ್ಲಿ ಮೂಡುವ ಆತ್ಮಸಂತೃಪ್ತಿ. ಇದು ಹೀಗೇಕೆ ಎಂದುಕೊಳ್ಳುವುದು ಫ್ರೇಮ್ನ ಒಳಗಿನಿಂದ ಮಾತನಾಡಿದಂತೆ. ಯದು ಎಂಬ ಈ ನನ್ನ ಹೆಸರು ಅಪೂರ್ವ ಎಂಬ ಹೆಸರಿಗೆ ಜೋಡಣೆಯಾಗಿ ಸದಾಕಾಲ ಉಳಿಯಬೇಕು ಎಂದುಕೊಂಡದ್ದು ಆ ಕಾಲಕ್ಕೆ ನಿಜ. ಹೇಗೆ ಸತ್ಯಗಳು ಜೀವನದಲ್ಲಿ ಬದಲಾಗುತ್ತಾ ಹೋಗುತ್ತವೆ.

ನೆಸ್ ಕೆಫೆ – ಅಂತ ದೊಡ್ಡ ದೊಡ್ಡ ಅಕ್ಷರಗಳಲ್ಲಿದ್ದ ಕೆಂಪು ಕರಿ ಬಣ್ಣದ ಬೋಡರ್ು. ಉದರುವ ಹಳದಿಯಾಗಿರುವ ಎಲೆಗಳು. ಹಸಿರು ಬಣ್ಣದ ಡಸ್ಬಿನ್. ಕಾಲೇಜಿನಲ್ಲಿ ಹಲವಾರು ಹುಡುಗರ ಹುಡುಗಿಯರ ನೆನಪಿನಾಳದಲ್ಲಿ ನೆಲೆನಿಂತ ಈ ನೆಸ್ ಕೆಫೆಯ ಹತ್ತಿರವೆ ತನ್ನ ಅಪೂರ್ವಳೂ ನನ್ನ ಭವಿಷ್ಯದ ಕನಸಿನ ಅರಮನೆಯನ್ನ ಕಟ್ಟಿದ್ದು. ಅಪೂರ್ವವೆನಿಸಿದ ನನ್ನ ಪ್ರೀತಿಯಲ್ಲಿ ಇವಳು ಕೊನೆಯ ಉಸಿರಿರುವರೆಗೂ ಇರುತ್ತಾಳೆ ಎಂದುಕೊಂಡಿದು.್ದ
ಅಪೂರ್ವಳೊಡನೆ ಮಾತನಾಡುವಾಗಲೆಲ್ಲ ಗೆಲುವೆನಿಸುತ್ತದೆ. ನೆಕ್ಸೆಫೆಯ ಮುಂದೆ ಕೆಂಪುಮಾಸಿದ ಚೇರ್ಗಳಲ್ಲಿ ಕುಳಿತು ಕೈಯಲ್ಲಿ ಕೈಯಿಟ್ಟು ಆಕೆಯ ನಗುವಿನಲ್ಲಿ ಕಳೆದುಹೋಗಿದ್ದೆನೆ. ಈಕೆಯ ನನ್ನ ಸಾತತ್ಯ. ಈಕೆಯಲ್ಲಿ ಅನುರಕ್ತನಾಗಿ ತುಟಿಗೆ ತುಟಿ ಸೋಕಿಸಿದ್ದೆನೆ. ಆಕೆಯ ತುಂಟ ನೋಟದಲ್ಲಿ ಒಂದಾಗಿದ್ದೆನೆ. ಆದರೆ ಭೂತದ ಮೇಲೆ ನಾವು ಎದ್ದು ನಿಲ್ಲುವುದು ಸಾಧ್ಯವೇ ? ಪ್ರೀತಿ, ಕಾಮ, ಆಸೆ ಮತ್ತೆ ಆದರ್ಶ. ಅಬ್ಬೆಪಾರಿಯಂತೆ. . . ನನ್ನಲ್ಲಿದ್ದ ಇವೆಲ್ಲ ಹೇಗೆ ಸಾಚುರೆಟ್ ಆಗುತ್ತ ಹೋಗುತ್ತವೆ. ವಿಷಣ್ಣನಾಗಿ ನಾನು ಕುಳಿತುಕೊಂಡಾಗ ಅವಳಿಲ್ಲದೆ ಜೀವನವೇ ಬೇಡವಾಗಿ ವ್ಯಕ್ತಿತ್ವವನ್ನು ಬದಲಾಯಿಸಿಕೊಂಡು ನಡೆಯಬೇಕಾಗುತ್ತೆ. ಹೌದು ನನ್ನನ್ನ ಹಲವಾರು ರೀತಿಯಲ್ಲಿ ಬೆಳೆಸಿದ ಈಕೆಯ ಪ್ರೀತಿಯ ಉತ್ಕಟತನ ಹೇಗೆ ಹಲವಾರು ನಿಲುವುಗಳಲ್ಲಿ ಕಡಿಮೆಯಾಗುತ್ತ ಹೋಗುತ್ತೆ ? ಕಾಫಿಯನ್ನ ಕುಡಿಯುತ್ತ ಕೂತಾಗ ಆಕೆ ನೆನಪಾಗುತ್ತಾಳೆ – ತನ್ನ ತುಂಟತನದಲ್ಲಿ ಬಂದು ನನ್ನ ಕೈಲಿದ್ದ ಕಾಫಿಯನ್ನ ಕಸಿದು ಕುಡಿಯುತ್ತ ಕಣ್ಣು ಮಿಟುಕಿಸಿ ನನ್ನಡೆಗೆ ನೋಡಿ ನಗುತ್ತ ಹೊರಟುಬಿಡುತ್ತಾಳೆ. ಮತ್ತೇ ಸಿಕ್ಕು ಏಯ್ ಏನಾದರು ಬರೆದೆಯೇನೋ ನನಗೊಸ್ಕರ ಅಂತ ಕೇಳುತ್ತಾಳೆ. ಕ್ಲಾಸಿನಲ್ಲಿ ಕುಳಿತಾಗ, ತನಗೆ ಕ್ಲಾಸಿಲ್ಲವೆಂದು ನನ್ನ ಕ್ಲಾಸಿಗೆ ಬಂದು ನನ್ನ ಪಕ್ಕದ ಹುಡುಗಿಯರ ಬೆಂಚಿನಲ್ಲಿ ಕೂರತ್ತಾಳೆ. ಈಕೆ ನನ್ನೊಳಗೆ ಸಿಡಿಯುವ ಜ್ವಾಲಾಮುಖಿ. ಏಕೆ ನನ್ನೆಡೆಗೆ ಇಂತಹ ತೀವ್ರತೆ ?
ಇದೆಲ್ಲವೂ ಈಗ ನೆನಪು. ಈ ನೆನಪುಗಳಿಂದ ತಪ್ಪಿಸಿಕೊಳ್ಳಲು ನಾನೊಬ್ಬನೆ ಹೊರಟೆ.

***

ಆಗುಂಬೆಯ ಹತ್ತಿರದ ಗೆಸ್ಟಹೌಸಿನಲ್ಲಿ ಉಳಿದುಕೊಂಡಿದ್ದೆ. ಅಲ್ಲಿಯ ರಮ್ಯತೆಯಲ್ಲಿ ಕಳೆದುಹೋಗಬೇಕು. ಸೂಯರ್ಾಸ್ತಮಾನದ ಗುಡ್ಡದ ಮೇಲೆ ನಿಂತು ಮುಳುಗುವ ಸೂರ್ಯನಲ್ಲಿ ಲೀನವಾಗಬೇಕು, ಪ್ರಕೃತಿಯ ರಮ್ಯವಾದ ಭಾಷೆಯನ್ನ ನಾನು ಅರ್ಥಮಾಡಿಕೊಳ್ಳಬೇಕು ಎಂದುಕೊಂಡು ಬಸ್ಸಿನಲ್ಲಿ ಆ ಜಾಗವನ್ನ ಸೇರಿಕೊಂಡೆ. ರಸಿಕ ಭಾವನೆಯಲ್ಲಿ ರಮ್ಯತೆಯನ್ನ ಸವಿಯುತ್ತ ಕೂತಾಗ ಯಾರೋ ಹುಡುಗಿ ಪಕ್ಕದಲ್ಲಿ ಬಂದು ಕೂತಳು. ನಾನು ಗಮನಿಸದೇ ಇದ್ದುದನ್ನ ನೋಡಿ, ನನ್ನದೆ ಕವಿತೆಯ ಸಾಲೊಂದನ್ನ ಆಕೆ ಹೇಳಿದಳು,

ನೀಲಿ ಬಾನ ಗುಲ್ಮದೊಳಗೆ
ಓಡುತಿರುವ ಚಿರತೆ ನೋಡು .

ನಾನು ಆಶ್ಚರ್ಯಚಕಿತನಾಗಿ ಆಕೆಯೆಡೆಗೆ ನೋಡಿದೆ. ಅವಳು ನಗುತ್ತಾ ಮಾತನಾಡಿದಳು :
ನೀವು ಎಷ್ಟೊಂದು ಈಸಿಯಾಗಿ ಕಳೆದುಹೋಗುತ್ತಿರಲ್ಲವೇ ? ಅಪೂರ್ವವೆನಿಸುವ ಈ ರೀತಿಯ ಅನುಭವಗಳನ್ನ ಪಡೆಯಲು ಇಲ್ಲಿಗೆ ಬರುತ್ತೀರ.
ನಿಮ್ಮ ಹತ್ತಿರದಲ್ಲೆ ಇರುವ ದಿವ್ಯವೆನಿಸುವ ಪ್ರೀತಿಯನ್ನ ಮತ್ತು ಸೌಂದರ್ಯವನ್ನು ನೀವು ಕಾಣಲಾರರಿ.
ನಾನು ದಿಗ್ಭ್ರಾಂತನಾಗಿ ಆಕೆಯನ್ನೇ ನೋಡಿದೆ,

ಮನುಷ್ಯನಿಗೆ ಹತ್ತಿರ ದೂರ ಎಂಬ ಗಡಿಗಳೆಲ್ಲಿವೇ ? ಎಲ್ಲ ಪ್ರಕೃತಿಯು ಅವನದೇ ಆಗಿರುವಾಗ, ಅವನು ಪ್ರಕೃತಿಯ ಭಾಗವೇ ಆಗಿರುವುದರಿಂದ ನಿಮ್ಮ ಆಪಾದನೆ ಕೇವಲ ಮೀತಿಗಳಲ್ಲೆ ಅಡಗಿರುವ ಸಂಕುಚಿತ ಭಾವನೆ.

ಆಕೆ ಮತ್ತೇ ಜೋರಾಗಿ ನಗುತ್ತ,

ನನ್ನ ಹೆಸರು ಪ್ರತೀಕ್ಷಾ ಎಂದಳು. ಅವಳಿಗೆ ನನ್ನ ಪರಿಚಯ ಮೊದಲೇ ಇದೆ ಎಂದುಕೊಂಡು ಸುಮ್ಮನಾದೆ. ಅವಳ ಮಾತುಗಳಲ್ಲಿ ಇರುವ ತೀಕ್ಣತೆಯು ಹೇಗೆ ನನ್ನನ್ನ ದಿಗ್ಭ್ರಾಂತನನ್ನಾಗಿ ಮಾಡಿದ್ದು ? ಎಲ್ಲದರಲ್ಲೂ ನನ್ನನ್ನ ನಾನು ನೊಬೆಲ್ ಎಂದುಕೊಂಡಾಗ ಪ್ರತೀಕ್ಷಾಳ ಈ ಮಾತುಗಳು ಎಷ್ಟು ನಿಜವಲ್ಲವೇ ? ಆಕೆ ಮುಂದುವರೆದು ಮಾತಿಗಿಳಿದಳು, ಏನು ನೀವು ಹೊಸಕಥೆಗಾಗಿ ಹುಡುಕಾಡುತಿದ್ದಿರೇನು ?

ಹೌದು, ನಿಮಗೆ ಹೇಗೆ ಗೊತ್ತಾಯಿತು?

ಸುಮ್ಮನೆ ಊಹಿಸಿದೆ. ನೀವು ಕಥೆಗಳನ್ನ ಸೃಷ್ಟಿಸಿ ಬರೆಯುತ್ತೀರಲ್ಲವೆ?

ಹೌದು ನಿಜ ಈಗ ನಾನು ಕಥೆಗಾಗಿ ತಡಕಾಡುತ್ತಿದ್ದೇನೆ ಆದರೆ ನಾನು ಎಲ್ಲವನ್ನೂ ಸೃಷ್ಟಿಸಿಯೇ ಬರೆಯುವುದಿಲ್ಲ. ಅನುಭವವನ್ನೂ ಸೇರಿಸಿ ಬರೆಯುತ್ತೇನೆ.
ನೀವು ಅನುಭವವನ್ನ ಸೃಷ್ಟಿಸುತ್ತೀರಿ ಅಲ್ಲವೇ ? ಕ್ಯಾನವಾಸ್ ಎಂಬ ಕಥೆಯಲ್ಲಿ ಬರುವ ಕಥಾನಾಯಕನಿಗೆ ನಿಜಜೀವನದಲ್ಲಿ ಅವರ ಅಪ್ಪನಿಗೆ ನಿಜವನ್ನ ಹೇಳುವಂತೆ ಮಾಡಿದ್ದು ನೀವೆ ಅಲ್ಲವೇ ? ‘ಕ್ಕೊಕ್ಕೊಕ್ಕೊ’ ಕಥೆಯಲ್ಲಿರುವ ಪ್ರೀತಿಯನ್ನೂ ನೀನೆ ಒಂದು ಮಾಡಿದ್ದಲ್ಲವೇ ?

ಅಯ್ಯೋ… ಹೌದಲ್ಲವೇ ? ಯಾಕೆ ನನಗಿದು ಹೊಳೆಯಲೇ ಇಲ್ಲ ? ನಾನು ಸಹಾಯ ಮಾಡಿದ್ದು ನಿಜ. ನಿಜಕ್ಕೂ ಅದು ಸಹಾಯವೇ ? ವಸ್ತುವಿನ ಆಯ್ಕೆಯಲ್ಲಿ ನಾನು ಕರಪ್ಟ್ ಆದೆನೆ ? ಆದರೆ ನಾನು ಸಹಾಯ ಮಾಡಿದ್ದು ಅವರು ಕೇಳಿದಾಗಲೇ ಅಲ್ಲವೇ ? ಇದು ಯಾರಿಗೂ ಹೊಳೆಯಲಾರದ ಅಸಾಧ್ಯತೆ. ಎಷ್ಟೊಂದು ನಿಷ್ಠುರವಾಗಿ ಈಕೆ ನನ್ನನ್ನೆದುರಿಸುತ್ತಾಳೆ. ನಾನೇಕೆಯನ್ನೀಗ ಎದುರಿಸಲೇಬೇಕು ಸಂದರ್ಭಗಳ ಕಟುಸತ್ಯಗಳಲ್ಲಿ ನನ್ನ ವ್ಯಕ್ತಿತ್ವವೇ ಉರುಳಿಹೋಗಬಾರದು.
ಇಲ್ಲ ಪ್ರತೀಕ್ಷಾ ಸಲಹೆಗಳನ್ನ ಕೇಳಿದಾಗ ನಾನು ಹೇಳಿದ್ದು. ಅವರ ಒಳ್ಳೆಯದಕ್ಕಾಗಿಯೇ ಹೊರತು ಕಥೆಯ ವಸ್ತುವನ್ನು ಸೃಷ್ಟಿಸುವ ಕುಟಿಲತೆಯಿಂದಲ್ಲ. ಆದರೆ ಅನಂತರದ ಘಟನೆಗಳೆಲ್ಲ ನನ್ನ ಕಥಾವಸ್ತುವಾಗಿದ್ದು ನಿಜವೇ ಸರಿ .

ಪ್ರತೀಕ್ಷಾ ನನ್ನೆಡೆಗೆ ದುರದುರನೆ ನೋಡಿ ಏನನ್ನೂ ಮಾತನಾಡದೇ ಹೊರಟುಹೋದಳು. ಅಪರೋಕ್ಷವಾಗಿ ನನ್ನ ಕಥೆಗಳಲ್ಲಿ ಅಡಕವಾಗುವ ಜೀವಂತಿಕೆ ಎಂತಹ ನಿಲುವನ್ನು ಇನ್ನೊಬ್ಬರಲ್ಲಿ ಬಿತ್ತಬಹುದು, ಎಂಬುದು ಈಗ ಮನವರಿಕೆಯಾಗಿತ್ತು. ಸೂಪ್ತವಾಗಿ ಹರಿದು ನನ್ನೊಳಗೆ ಸಿಡಿಲನ್ನೇ ಸೃಷ್ಟಿಸಿದ ಈ ಪ್ರತೀಕ್ಷಾ ಅನಿರಿಕ್ಷಿತವಾಗಿ ನನ್ನ ಜೀವನದಲ್ಲಿ ಸೇರಿಕೊಂಡಳು.

ನಾನು ಆಕೆ ಎದ್ದು ಹೋದ ಮೇಲೆ ಕೆಳಗಿಳಿದು ಚುರುಮರಿಯವನ ಹತ್ತಿರ ಹೋಗಿ ಚುರುಮರಿ ಕೊಡಿ ಎಂದು ದುಡ್ಡು ನೀಡಿದೆ. ಎಲ್ಲಿಯವರು ಸಾರ್ ನೀವು ಎಂದು ಆತ ಕೇಳಿದ. ನನ್ನ ಪರಿಚಯವನ್ನು ಹೇಳಿಕೊಂಡ ಮೇಲೆ ಆತ,

ಯಾಕೋ ಸಾರ್, ನೀವು ಆ ಹುಡುಗಿಯ ಜೊತೆ ಜಗಳವಾಡಿದಿರ ? ಪ್ರೀತಿ ಮಾಡಿದವರನ್ನು ಹಾಗೆ ನೋಯಿಸಬಾರದು ಸಾರ್, ರಮ್ಯತೆಯ ಆಹ್ಲಾದದಲ್ಲಿ ಪ್ರೀತಿಯಲ್ಲಿ ಮುಳುಗಿದವರನ್ನ ನೋಡಿದ್ದೇನೆ. ಆ ಹುಡುಗಿಯ ಕಂಗಳಲ್ಲಿ ನೀರು ತುಂಬುವಷ್ಟು ನೋಯಿಸಿದ್ದೇನು ನನಗೆ ಸರಿ ಅನ್ನಿಸಲಿಲ್ಲ ಸಾರ್. ಎಂದ
ನಾನು ಆತನೆಡೆಗೆ ಸಿಟ್ಟು ಮತ್ತು ಆಶ್ಚರ್ಯ ತುಂಬಿದ ನೋಟದಲ್ಲಿ ನೋಡಿದೆ. ಆತ ಸುಮ್ಮನಾಗಿ ಚುರುಮರಿಯನ್ನು ಕೈಗಿತ್ತ. ಚುರುಮರಿಯನ್ನು ಬಾಯಿಗೆ ಹಾಕಿಕೊಂಡೆ ತುಂಬ ಸಿಹಿಯಾಗಿತ್ತು. ಏನೋ ಇವ್ನು ಇಷ್ಟೊಂದು ಸಿಹಿ ಮಾಡಿದ್ದಾನೆ, ತಥ್ ಎಂದುಕೊಂಡು ಕೆಳಗಿಳಿದು ರೋಡಿನುದ್ದಕ್ಕೂ ತಿನ್ನುತ್ತ ಹೋದೆ. ರೋಡು ಹಾವಿನಂತೆ ಸುತ್ತುತ್ತ ಹೋಗಿತ್ತು ನಾನ್ಯಾವುದೋ ಆನಕೊಂಡದ ಹೊಟ್ಟೆಯಲ್ಲಿರುವಂತೆ ಎನ್ನಿಸುತ್ತಿತ್ತು. ಕಿವಿಯಲ್ಲಿ ಗುನಗಾಟಗಳು.

‘ನೀನು ಅನುಭವವನ್ನು ಸೃಷ್ಟಿಸುತ್ತಿ’
‘ನೀವು ಕಂಗಳಲ್ಲಿ ನೀರು ತುಂಬುವಷ್ಟು…’
‘ಅಪೂರ್ವ ಅನುಭವಗಳಿಗೆ ನೀವಿಲ್ಲಿಗೆ ಬರುತ್ತಿರಾ’

ತಲೆ ಸಿಡಿಯುವಂತೆ ನನ್ನಲ್ಲಿ ಅಪರಾಧಿ ಭಾವನೆ ಬಿತ್ತುವ ಕ್ಷಣಗಳು ಯಾರೀ ಪ್ರತೀಕ್ಷಾ ? ಏಕೆ ನನ್ನ ಸಾಹಿತ್ಯದ ಅಲೆಗಳಲ್ಲಿ ಹುಯಿಲನ್ನೆಬ್ಬಿಸಿದಳು ? ನಾನು ನಿಜವಾಗಿಯೂ ಭ್ರಷ್ಟನೇ ? ಕೈಲಿದ್ದ ಚುರುಮರಿಯನ್ನು ಚೆಲ್ಲಿ ಓಡಿದೆ… ಓಡಿದೆ… ಓಡಿದೆ… ಮತ್ತದೇ ನಾವು ಕುಳಿತಿದ್ದ ಜಾಗಕ್ಕೆ. ಅಲ್ಲಿ ಪ್ರತೀಕ್ಷಾ ನನ್ನನ್ನೇ ಕಾಯುತ್ತಿರುವಂತೆ ಕೂತು ಗೆಲುವಿನ ನಗೆ ಬೀರುತ್ತಿದ್ದಳು.
ಯಾರು ನೀನು? ಎಂದೆ.

ಆಕೆ ಎದ್ದು ನನ್ನ ಹತ್ತಿರ ಬಂದು ನನ್ನ ಕೈ ಹಿಡಿದು ವಿವ್ಹ್ ಪಾಯಿಂಟ್ನ ಹಿಂದಿದ್ದ ಕಾಡಿನ ಜಾಡಿನ ಒಂದು ಜಾಗಕ್ಕೆ ಕರೆದೊಯ್ದು ನಿಲ್ಲಿಸಿ ಬಾನಿನೆಡೆಗೆ ಕೈ ಮಾಡಿ ತೋರಿದಳು ಸೂರ್ಯ ಮುಳುಗುತ್ತಿದ್ದ. ಅದ್ಭುತ ದೃಷ್ಟಿ-ತೀಕ್ಷ್ಣ. ಆಕೆ ನನ್ನ ಕೈ ಹಿಡಿದುಕೊಂಡೆ ಕೂತಿದ್ದಳು.

ಯದು, ನೀನೊಬ್ಬ ಇನ್ನೊಸೆಂಟ್ ನೀನ್ಯಾವ ತಪ್ಪನ್ನೂ ಬೇಕಂತಲೇ ಮಾಡಿಲ್ಲ. ಆದರೆ ನೀನು ನಿನ್ನನ್ನ ನೊಬೆಲ್ ಎಂದುಕೊಂಡಿದ್ದು ಮಾತ್ರ ನೀ ಮಾಡಿದ ದೊಡ್ಡ ತಪ್ಪು.

ಆಕೆಯ ಕಳಕಳಿಯಲ್ಲಿ ನಾನು ಕಂಡಿರದಿದ್ದ ನನ್ನನ್ನು ಕಾಣುವುದು ಅವಶ್ಯವೆನಿಸಿತು. ವೀವೇಕ ಈಕೆಯ ಕಳಕಳಯಲ್ಲಿ ನಿರರ್ಥಕ ಎನ್ನಿಸಿತು. ನಾನೇನ್ನನ್ನೂ ಮಾತನಾಡಲೂ ಹೋಗಲಿಲ್ಲ. ನನ್ನ ಮೇಲಿನ ಆಪಾದನೆಗಳನ್ನ ನಾ ಎದುರಿಸಲಾರೆ ನಿಜವಾಗಿಯೂ ‘ನಾನು ನೊಬೆಲ್’ ಎಂಬ ಪ್ರಜ್ಞೆಯಲ್ಲಿ ಜೀವನದ ಸತ್ಯಗಳ ಮೇಲೆ ನಡೆದುಬಿಟ್ಟೆನೇ ? ಆಕೆಯ ಕಣ್ಣುಗಳನ್ನ ನೋಡಿದೆ. ಈ ಬೇಟದ ವ್ಯೂಹದಿಂದ ಬಿಡುಗಡೆಯ ದಾರಿಗಾಗಿ ತಡಕಾಡಿದೆ. ಪ್ರಜ್ಞೆಯ ಅನುಭವವನ್ನ ಭೂತದ ಹೆಜ್ಜೆಗಳಲ್ಲಿ ಪಡೆಯುವುದು ಉಡಾಫೆಯೆನಿಸುತ್ತದೆ. ಅಪೂರ್ವಳ ಪ್ರಿತಿಯನ್ನು ಕೂಡ ನಾನು ನನ್ನ ಬೆಳವಣಿಗೆಗೆ ಬಳಸಿಕೊಂಡೆನಲ್ಲವೇ ? ಆದರೆ ಇದನ್ನ ಹೀಗೆ ಚಿಂತಿಸುವುದು ಅನಿವಾರ್ಯತೆಯೇ ?

ಪ್ರತೀಕ್ಷಾ, ನನ್ನ ತಪ್ಪುಗಳನ್ನ ‘ನಾನು ನೋಬಲ್’ ಎಂದುಕೊಂಡು ತುಳಿದುಬಿಟ್ಟೆನೆ ? ಯಾರು ನೀನು ? ನಿನ್ನನ್ನ ತಿಳಿದುಕೊಳ್ಳದೇ ನಾನು ಪೂರ್ಣವಾಗಿ ತೆರೆದುಕೊಳ್ಳಲಾರೆ.

ಯದು, ನನ್ನ ತಿಳಿದರೂ ನಿನಗೇನೂ ಲಾಭವಾಗಲಾರದು. ಆದರೆ ನಿನಗೆ ಬರೆಯಬಹುದಾದಂತಹ ಒಂದು ಕಥೆಯನ್ನ ಮಾತ್ರ ನಾ ಹೇಳಬಲ್ಲೆ
ಅವಳ ಕಂಗಳಲ್ಲಿ ತುಂಬಿದ್ದ ನೀರನ್ನು ನೋಡಿದೆ. ಕಾಡಿಗೆಯನ್ನ ತೀಡಿದ್ದ ಐ ಲಾಶಸ್, ಅಪೂರ್ವಳ ನೆನಪು. ನನ್ನ ಹಿಂದೆ ಸ್ವಾತಿ ಬಿದ್ದಳೆಂದು, ನಾನಾಕೆಯೊಡನೆ ಓಡಾಡಿದೆನೆಂದೂ ಅದೇ ನೆಸ್ ಕೆಫೆ ಯ ಅದೇ ಅಂಗಳದಲ್ಲಿ ನನ್ನ ಕೆನ್ನೆಗೆರಡು ಬಿಟ್ಟು ಅತ್ತಿದ್ದಳು. ನೀನು ನನ್ನವನು ಕಣೋ- ಎಂದಾಗಲೇ ನಾನು ಆಕೆಯ ತುಂಬಿದ ಕಂಗಳನ್ನ ನೋಡಿದ್ದೆ. ಇದೇ ತೀಕ್ಷ್ಣತೆಯಿಂದಿದ್ದ ಕಣ್ಣುಗಳು. ಪ್ರತೀಕ್ಷಾಳಲ್ಲೂ ಎಲ್ಲೋ ಉತ್ಕಟತೆಯಿಂದ ಕೂಡಿದ ಒಂದು ಕಥೆಯಿದೆ. ಥೂ… ನಾನು ಕಥೆ ಹುಡುಕುವ ಉದ್ದೇಶದಲ್ಲೇ ಮಾನವೀಯತೆಯನ್ನ ಕಳೆದುಕೊಂಡಿದ್ದೇನೆಯೇ ? ನಾನು ಕಥೆಗಾರನಾಗಿಯೇ ಈ ಕಥೆಯನ್ನ ಕೇಳಿದರೆ ಪೂರ್ಣನಾಗಲಾರೆ, ಮಾನವನಾಗಲಾರೆ. ಭ್ರಷ್ಟನಾಗದೆ ಉಳಿಯಲಾರೆ. ಪ್ರತೀಕ್ಷಾಳನ್ನ ನೋಡಿದೆ. ಅರ್ಧ ಮುಳುಗಿದ ಸೂರ್ಯನನ್ನ ನೋಡುತ್ತ ಕೂತಿದ್ದಳು. ದೂರದಲ್ಲೆಲ್ಲೊ ಒಂಟಿ ಹಕ್ಕಿಯೊಂದು ಹಾರಾಡುತ್ತಿತ್ತು. ನನ್ನ ಕೈ ಅದುಮಿ ಪ್ರತೀಕ್ಷಾ ನಿಲರ್ಿಪ್ತ ಭಾವದಲ್ಲಿ ಕಥೆ ಹೇಳಲು ಶುರುಮಾಡಿದಳು –

ಯದು , ಸುಮಾರು ವರ್ಷಗಳ ಹಿಂದೆ ನಾನು ಸ್ಕೂಲಿನಲ್ಲಿದ್ದಾಗ ಒಬ್ಬ ನನ್ನನ್ನ ತುಂಬ ಪ್ರೀತಿಸಿದ. ಆತನನ್ನ ನಾನೊಪ್ಪಿಕೊಂಡಿರಲಿಲ್ಲ. ಪ್ರೀತಿಸಿದ್ದನ್ನ ನನಗೇನೆ ಹೇಳಲು ಹಿಂಜರಿದಿದ್ದ ಆತನನ್ನ ನಾನು ಹೇಗೆ ಒಪ್ಪಿಕೊಳ್ಳಲಿ ? ನಾನು ಆತನನ್ನ ದೂರ ಮಾಡಿದೆ. ನನ್ನನ್ನ ಕದ್ದು ಕದ್ದು ನೋಡಿದ. ಹಿಂಬಾಲಿಸಿದ. ನಾನು ಹೋಗುವವರೆಗೂ ನಿಂತು ಉತ್ಕಟತೆಯಲ್ಲಿ ಓಡಾಡುತ್ತಿದ್ದ. ಆದರೆ ನನಗೆ ಆತನಲ್ಲಿರುವ ಧೈರ್ಯದ ಮೇಲೆ ನಂಬಿಕೆಯಿರಲಿಲ್ಲ. ಯಾವಾಗಲೂ ಇನ್ನೊಬ್ಬನ ಮೇಲೆಯೇ ಡಿಪೆಂಡ್ ಆದವನನ್ನ ನಾನು ಹೇಗೆ ಪ್ರೀತಿಸಲಿ ? ನಾನೇನನ್ನೂ ಹೇಳಲು ಕೇಳಲು ಹೋಗಲಿಲ್ಲ. ಅವನಿಗೊಬ್ಬ ನಿನ್ನಂತೆ ಬರಹಗಾರ ಗೆಳೆಯನಿದ್ದ. ಅವನಲ್ಲಿ ಈ ಗೆಳೆಯನ ಪ್ರಭಾವ ತುಂಬಾ ಗಾಢವಾಗಿತ್ತು. ಅವನಂತೆಯೇ ಮಾತನಾಡುತ್ತಿದ್ದ. ತನ್ನ ಸ್ವಂತಿಕೆಯೇ ಇಲ್ಲದ ವ್ಯಕ್ತಿತ್ವವನ್ನ ಹೇಗೆ ಒಪ್ಪಿಕೊಳ್ಳಲಿ ? ಸುಮಾರು ದಿನಗಳಾದ ಮೇಲೆ ಈತ ನನಗೊಂದು ಪ್ರೇಮಪತ್ರವನ್ನ ಕೊಟ್ಟ. ನಾನು ಕರಗಿಹೋಗಿ ಕಣ್ಣು ತುಂಬಿ ಹೋಗುವಷ್ಟು ತೀವ್ರತೆಯಲ್ಲಿ ಅದು ವ್ಯಾಪಿಸಿತ್ತು. ನನ್ನ ಭಾವನೆಗಳಲ್ಲಿ ಈ ಪತ್ರವೊಂದು ಅಚ್ಚಾಗಿ ಉಳಿದುಬಿಟ್ಟಿತು. ಅದೇ ಕೊನೆಗೆ ನನ್ನ ಜೀವನದಲ್ಲಿ ಪ್ರೀತಿಯೇ ಇಲ್ಲದ ರೋಧನೆ ಮತ್ತು ನೋವಿಗೆ ಕಾರಣವಾಯಿತು…

ಪ್ರತೀಕ್ಷಾಳಲ್ಲಿ ಹೀಗೊಂದು ಇರಬಾರದ ತಿರುವು ಇದೇ ಎನ್ನುವುದೇ ನನಗೆ ನಂಬಲಾಗಲಿಲ್ಲ. ನಾನು ಆಕೆಯನ್ನ ನೋಡಿದೆ. ಆಕೆಯ ಕಂಗಳಲ್ಲಿ ನೀರಿತ್ತು. ನಾನಾಕೆಯ ಕೈ ಹಿಡಿದುಕೊಂಡೆ. ನನ್ನಲ್ಲಿ ಸಂಕಟ ಶುರುವಾಯಿತು. ಕಥೆಯನ್ನ ಕಥಿಸುವ ನಮ್ಮಂತಹ ಬರಹಗಾರರು ಭಾವತೀವ್ರತೆಯ ವ್ಯಾಪಕತೆಯನ್ನ ಹೇಗೆ ನಿರ್ಲಕ್ಷಿಸಿಬಿಡುತ್ತೇವೆ? ನಾನೂ ಒಂದಿಬ್ಬರಿಗೆ ಪ್ರೇಮಪತ್ರವನ್ನ ಬರೆದುಕೊಟ್ಟಿದ್ದೇನೆ. ಏನೋ ಅವರೀಗ ತುಂಬ ಪ್ರೀತಿಯಲ್ಲಿ ಓಡಾಡಿಕೊಂಡಿದ್ದಾರೆ. ನಮ್ಮ ಕಥನ ಜಗತ್ತಿನ ಹೊರಗೂ ವ್ಯಾಪಕವಾಗಿರುವ ನೋವುಗಳಿವೆಯಲ್ಲವೇ ? ಮೊದಲ ಬಾರಿಗೆ ಮನಸ್ಸಿನಲ್ಲಿ ಕಸಿವಿಯಾಯಿತು. ತುಂಬ ಹೊತ್ತು ಸುಮ್ಮನೆ ಕೂತಿದ್ದ ಆಕೆಗೆ ನಾನು ಕೇಳಿದೆ ಯಾಕೇ ನಿಮ್ಮ ಪ್ರೀತಿಗೇನಾಯಿತು ? ಅಷ್ಟೊಂದು ಉತ್ಕಟನಾಗಿ ಪ್ರೀತಿಸಿದ ಹುಡುಗ ಎಲ್ಲಿರುವ ?

ಪ್ರತೀಕ್ಷಾ ಕಣ್ಣೊರೆಸಿಕೊಂಡು ನಗುತ್ತಾ ನನಗೆ ಗೊತ್ತು, ನೀವು ಕಥೆಗಾಗಿ ಎಷ್ಟೊಂದು ಚಡಪಡಿಸುತ್ತಿದ್ದೀರೆಂದು. ಇನ್ನು ಮುಂದಿನದನ್ನ ನಾನು ನಾಳೆ ಹೇಳುತ್ತೇನೆ ಈ ಪ್ರತೀಕ್ಷಾಳ ಕಥೆಗಾಗಿ ಪ್ರತೀಕ್ಷಿಸುತ್ತಿರಿ ! – ಎಂದು ಓರೆಯಾಗಿ ನೋಡಿ ನಕ್ಕಳು ನಾನವಳನ್ನ ಆದ್ರ್ರನಾಗಿ ನೋಡಿದೆ. ಸಂಕಟವಾಯಿತು. ಆಕೆಯ ಕೈ ಅಮುಕಿ ‘ಪ್ರತೀಕ್ಷಾ ಇಷ್ಟೊಂದು ನೋವನ್ನ ಹೇಗೆ ಸಹಿಸುತ್ತಿದ್ದೀಯಾ’ ಎಂದು ಕೇಳಿದೆ. ಆಕೆ ಅದನ್ನ ಲೆಕ್ಕಿಸದೇ ಎದ್ದು ‘ಸಿ ಯು ಟುಮಾರೋ ಆಟ್ ದಿ ಲೇಕ್’ ಎಂದು ಹೊರಟುಹೋದಳು.

ಅಪೂರ್ವಳೊಡನೆ ಜಗಳವಾಡಿಕೊಂಡ ಮೇಲೆ ತುಂಬ ದಿನವಾಗಿದೆ. ಅವತ್ತು ನೆಸ್ ಕೆಫೆ ಯಲ್ಲಿ ಕೊಲ್ಡ್ ಕಾಫಿಯನ್ನ ಕುಡಿಯುತ್ತ ಕೂತಾಗ ಜೋರಾಗಿ ಗಾಳಿ ಬೀಸುತ್ತಿತ್ತು. ತುಂಬ ಡಲ್ಲಾಗಿ ಬಂದ ಆಕೆ ನಿನ್ನನ್ನೆಂದೂ ನಾನು ಪೂರ್ಣವಾಗಿ ಪ್ರೀತಿಸಲಾರೆ. ಯಾಕೋ ನನ್ನಲ್ಲಿ ನಿನಗಾಗಿ ಇರುವ ಉತ್ಕಟತನ ನಿಜರ್ೀವವಾಗಿದೆ ನೀನು ಇದನ್ನು ಸಹಿಸಲಾರೆ, ನನಗೆ ಗೊತ್ತು. ಆದರೆ ಪ್ರೀತಿಯನ್ನ ನಾನಿನ್ನೆಂದೂ ನೀಡಲಾರೆ ಎಂದು ಗೊತ್ತಿದ್ದೂ ನಿನಗೆ ನಾನು ಮೋಸ ಮಾಡಲಾರೆ. ಎಂದ ನನ್ನ ಕೈಲಿದ್ದ ಕೊಲ್ಡ್ ಕಾಫಿಯನ್ನ ಕಸಿದು ಗ್ಲಾಸನ್ನೊಮ್ಮೆ ನನ್ನನ್ನೊಮ್ಮೆ ನೋಡಿ, ‘ಮತ್ತೆಂದೂ ಇಲ್ಲಿ ಏನನ್ನೂ ಕುಡಿಯಬೇಡ’ ಅಂತಾ ಡಸ್ಟ್ ಬಿನ್ನಿಗೆ ಹಾಕಿ ಕಾಫಿಗೆ ಪೇ ಮಾಡಿ ಹೊರಟುಹೋದಳು ಉಸಿರಿಗೇ ಉಸಿರಾದವಳು ಹೇಗೆ ಎರಡೇ ಮಾತಿನಲ್ಲಿ ನನ್ನ ಜೀವನದಿಂದ ಎದ್ದುಬಿಟ್ಟಳು ? ನಾನೇನಾದರೂ ಮಾತನಾಡಿದರೆ ಅದು ಅವಳಿಗೆ ತಟ್ಟಲಾರದು ಎಂದುಕೊಂಡ ಸುಮ್ಮನಾದೆ. ಇವೆಲ್ಲ ಕ್ಷುಲ್ಲಕವೆನಿಸಿಬಿಡುವ ಕ್ಷಣಗಳು ನನ್ನಲ್ಲಿಯೇ ನಾನು ಪರನಾಗುವುದು ಕೂಡ ಆತ್ಮವಂಚನೆಯೇ ಅಲ್ಲವೇ ? ಪ್ರೀತಿಯನ್ನ ನೀಡಲಾರಳು ಎಂಬ ಪ್ರಜ್ಞೆ ಆಕೆಯಲ್ಲಿ ಉದಯಿಸಿದ ಮೇಲೂ ಆಕೆ ಸುಮ್ಮನಿದ್ದಿದ್ದರೆ, ಹೌದು ನಿಜ ಅದು ವಂಚನೆಯೇ ಸರಿ. ಆದರೆ ನಾನೇನು ಮಾಡಿದೆ ? ನನ್ನಲ್ಲಿ ಉದಯಿಸಿದ ಸಿಟ್ಟು ಹಾಗೂ ದುಃಖಗಳನ್ನ ತಡೆದು ನನಗೇನೇ ಪರನಾದೆ. ಆದರ್ಶಗಳ ಹಂಗಿನಲ್ಲಿ ಸೋತುಬಿಟ್ಟೆ. ಅಪೂರ್ವಳ ಪ್ರೀತಿ ತುಂಬಿದ ಮಾತುಗಳ ನೆನಪು, ಅವತ್ತು ಕಾಫಿಯ ಲಾಸ್ಟ್ ಸಿಪ್ ಅನ್ನ ಅವಳು ಬಂದ ತಕ್ಷಣ ಕುಡಿದಾಗ,
ಯದು ಯಾವತ್ತೂ ನೀನು ಕಾಫೀಯನ್ನ ಪೂತರ್ಿ ಕುಡಿಯಬೇಡ. ನೀನು ತುಂಬ ಕೆಟ್ಟವನು ಕಣೋ. ನನ್ನನ್ನ ಪ್ರೀತಿಸುವುದೇ ಇಲ್ಲ. ಪ್ರೀತಿಸುವುದಿರಲಿ ನನ್ನನ್ನ ನೆನೆಸಿಕೊಳ್ಳೋದೆ ಇಲ್ಲ ಅಲ್ಲವಾ ?. ಎಂದು ನನ್ನ ಕೈಯನ್ನ ಗಟ್ಟಿಯಾಗಿ ಹಿಡಿದುಕೊಂಡು ಕೂತಿದ್ದಳು. ನಾನು ಆಕೆಯನ್ನ ತುಂಬ ಪ್ರೀತಿಸಿದೆ. ಆದರೆ ನಾನು ಅವಳನ್ನ ನನ್ನ ಬೆಳವಣಿಗೆಗೆ ಬಳಸಿಕೊಂಡೆನೆ ? ಹಾಗಾಗಿದ್ದರೆ ಈಗ ನನಗಾಗುತ್ತಿರುವ ಸಂಕಟ ? ಅಪೂರ್ವ ಇಲ್ಲದಾಗಿನಿಂದ ಯಾವುದೇ ಕಥೆಯನ್ನ ಬರೆದಿಲ್ಲ. ಮನಸ್ಸಿಗೆ ನೆಮ್ಮದಿಯೇ ಇಲ್ಲ. ಮನಸ್ಸಿನೊಳಗೆ ಏನೋ ಸಿಕ್ಕಿಕೊಂಡಿದೆ ಹೇಳಲಾಗದ್ದು. ಪ್ರತೀಕ್ಷಾಳಲ್ಲೂ ಇರಬೇಕು. ಅಪೂರ್ವಳ ತೀವ್ರವಾದ ಪ್ರೀತಿ, ಪ್ರತೀಕ್ಷಾಳ ನೇರ ನುಡಿ, ನನ್ನಲ್ಲಿರುವ ಸಂಕಟ, ಚುರುಮುರಿಯವನ ಅಸಡ್ಡೆಯ ಮಾತುಗಳು ಇವೆಲ್ಲ ಏನು ?

3

ಸೂರ್ಯ ಮುಳುಗಿದ್ದ ವೀವ್ಹ್ ಪಾಯಿಂಟ್ ಬಿಕೋ ಎನ್ನುತ್ತಿತ್ತು. ಸುತ್ತಲೂ ಚೆಲ್ಲಿದ್ದ ನೀರವ ರಾತ್ರಿಯನ್ನ ಸೀಳಿ ಎರಡು ದೀಪಗಳು ನನ್ನೆಡೆಗೆ ಬರುತ್ತಿದ್ದವು. ಬಸ್ಸೋ ಅಥವಾ ಲಾರಿಯ ಸದ್ದು ಕೇಳುತ್ತಿತ್ತು.

*****

ಗಾಳಿಯ ಹೊಡೆತಕ್ಕೆ ಅಲೆಅಲೆಯಾಗಿ ದಂಡೆಯನ್ನ ತಟ್ಟುತ್ತಿದ್ದ ಸರೋವರದ ನೀರು. ಹಿಂಡು ಹಿಂಡಾಗಿ ಈಜುತ್ತಿದ್ದ ಬಾತುಕೋಳಿಗಳು, ಅಲ್ಲಲ್ಲಿ ಕಾಣುತ್ತಿದ್ದ ಕಮಲದ ಹಾಗೂ ತಾವರೆಯ ಗಿಡಗಳು. ಅಪೂರ್ವ ನನ್ನ ಪಕ್ಕದಲ್ಲಿ ಕೂತು ನೀರಿನಲ್ಲಿ ಕಾಲುಗಳನ್ನ ಬಡಿಯುತ್ತಿದ್ದಳು. ಅಪೂರ್ವ ನನ್ನ ಪ್ರೀತಿಯ ಹುಡುಗಿ. ನೀನಿಲ್ಲ ಅಂದ್ರೆ ನಂಗೆ ಏನೂ ಇಲ್ಲ ಕಣೋ ಎನ್ನುತ್ತ ನನ್ನ ತಬ್ಬಿದಾಕೆ. ನಾನು ಕಾಲೇಜಿಗೆ ತಡವಾಗಿ ಬಂದರೆ ಹತ್ತು ಸಾರಿ ಕಾಲ್ ಮಾಡಿದಾಕೆ. ಪ್ರೀತಿಯ ತತ್ಪರತೆಯಲ್ಲಿ ನನಗಾಗಿ ಕಾದು ಕೂತಾಕೆ. ಇವಳಿಲ್ಲದಿದ್ದರೆ ನನ್ನ ಜೀವನ ಎಷ್ಟೊಂದು ನಿಜರ್ೀವವಾಗಿಬಿಡುತ್ತಿತ್ತು. ಜೀವನ ಚಲನಶೀಲವಾಗುವುದು ಆನಂದ ಸ್ಪಂದದಲ್ಲಿ ಅರಳುವುದು ಈ ಸಾಧ್ಯತೆಯಲ್ಲಿ. ಈಕೆಯ ನಗುವಿನಲ್ಲಿ ಕಾಣುವ ಹುಡುಗುತನ ಎಷ್ಟೊಂದು ಸಹಜವಾಗಿದೆ. ಅವತ್ತು ನಾನು ಕಾಲೇಜಿಗೆ ಬರದಿದ್ದಾಗ ಉತ್ಕಟತೆಯಲ್ಲಿ ನನ್ನ ಮನೆಗೆ ಬಂದು ‘ಏನಾಯಿತು ಕಣೋ’ ಎಂದು ಕೇಳಿದ್ದಳು. ಇವೆಲ್ಲ ಈಗ ಬರೀ ನೆನಪುಗಳು. ‘ಅವಳನ್ನ ತುಂಬ ಹಚ್ಚಿಕೊಳ್ಳಬೇಡ ಕಣೋ’ ಎಂದ ಅಮ್ಮ ನನ್ನಲ್ಲಿ ಕೇವಲವಾಗಿಬಿಟ್ಟವಳು ಈಗ ಮುಖ್ಯವಾಗಿದ್ದಾಳೆ. ಪ್ರೀತಿ ಎಂಬುದು ಕೂಡ ಹೇಗೆ ಹೊರೆಯಾಗಿಬಿಡುತ್ತದಲ್ಲವೇ ? ಇದರಲ್ಲಿ ಯಾವುದು ತಪ್ಪು ಯಾವುದು ಸರಿ ಎಂಬುದನ್ನ ನಿಷ್ಠುರವಾಗಿ ನೋಡುವುದು ಹೇಗೆ ?

ಪ್ರತೀಕ್ಷಾ ಅವತ್ತು ಬರಲಿಲ್ಲ. ಆದರೆ ಆಕೆ ನನ್ನಲ್ಲಿ ಅಚ್ಚಾಗಿ ಉಳಿದಳು. ಆಕೆಯ ನೋವನ್ನ ನಾನು ಹಂಚಿಕೊಳ್ಳಲೇಬೇಕೆಂಬ ಭಾವನೆಯೊಂದು ನನ್ನಲ್ಲಿ ಮೂಡಿತು. ನನ್ನ ಜೀವನದಲ್ಲಿ ನನ್ನನ್ನೆಂದೂ ಪ್ರಶ್ನಿಸಿಕೊಳ್ಳದ ನಾನು ಆಕೆಯ ದಿಟ್ಟ ಪ್ರಶ್ನೆಗಳಲ್ಲಿ ಚದುರಿಹೋದೆ. ಅವತ್ತು ಇದನ್ನ ನನ್ನ ಡೈರಿಯಲ್ಲಿ ನಮೂದಿಸಹೋಗಿ ಸೋತೆ. ಹಾಗೆ ತಿರುವಿದ ಡೈರಿಯ ಪುಟಗಳಲ್ಲಿ ಕಂಡಿದ್ದು ನನ್ನ ಬಾಲ್ಯ. ನನ್ನ ಹೈಸ್ಕೂಲಿನ ದಿನಗಳಲ್ಲಿ ವಿಸ್ಮಯದಲ್ಲಿ ಎದುರುಗೊಂಡ ಕ್ಷಣಗಳಲ್ಲಿ ಹರಿಣಿಯ ಜೋತೆ ಕಳೆದ ಕ್ಷಣಗಳು – ಹರಿಣಿ ನನಗೆ ಗಣಿತದ ಪ್ರಮೇಯಗಳನ್ನ ಹೇಳಿಕೊಡುತ್ತಿದ್ದಳು ನಾನು ದಿನವೂ ತಪ್ಪದೆ ಹೋಗುತ್ತಿದ್ದೆ. ಆಕೆಯೂ ನನಗೆ ತಪ್ಪದೆ ದಿನವೂ ಗಣಿತವನ್ನು ಕಲಿಸುತ್ತಿದ್ದಳು. ಅವತ್ತೊಂದು ದಿನ ಆಕೆಯ ಮನೆಯಲ್ಲಿ ಯಾರೂ ಇರಲಿಲ್ಲ. ಎಲ್ಲ ಊರಿಗೆ ಹೋಗಿದ್ದರು. ಈಕೆ ಅವತ್ತು ಪಾಠ ಮಾಡುತ್ತ ಮಾಡುತ್ತ ತನ್ನ ಕುತರ್ಾವನ್ನು ಸರಿ ಮಾಡಿಕೊಂಡು ನನ್ನೆಡೆಗೆ ನೋಡಿ-

ಯದು, ನೀನು ಯಾರನ್ನಾದರೂ ಪ್ರೀತಿಸುತ್ತಿದ್ದೀಯಾ ? ಎಂದು ಕೇಳಿದಳು.

ಆಗೆಲ್ಲ ಪ್ರೀತಿ ಎಂಬುದು ಉತ್ಸುಕತೆಯಲ್ಲಿ ಬಾಯಿಂದ ಬಾಯಿಗೆ ಹೋಗುವ ಮಾತು. ಆಗಷ್ಟೇ ತಲೆಗೆ ತಿಳಿಯಲು ಶುರುವಾಗಿದ್ದ ಭಾವನೆ. ಅಮ್ಮನ ಎಚ್ಚರಿಕೆಯ ಮಾತುಗಳಲ್ಲಿ, ಗೆಳತಿಯರೆನಿಸಿದ್ದ ಹುಡುಗಿಯರೆಲ್ಲ ದೂರವನ್ನ ಕಾಯ್ದುಕೊಳ್ಳುವಲ್ಲಿ, ಹರಿಣಿಯ ನೋಟದಲ್ಲಿಯೇ ನನಗೆ ಕಂಡದ್ದು ಕ್ಲಾಸಿನಲ್ಲಿ ಕೆಲ ಹುಡುಗ-ಹುಡುಗಿಯರು ಮಾತನಾಡಿದ್ದ, ಪತ್ರಗಳಲ್ಲಿ ಹಂಚಿಹೋಗಿದ್ದ ಈ ಪ್ರೀತಿ; ಹರಿಣಿ ಕೇಳಿದಾಗ ನನ್ನಲ್ಲಿ ಮೊದಲು ಮೊಳಕೆಯೊಡೆದಿದ್ದು. ಅಪೂವರ್ಾಳಿಗೆ ಇದನ್ನೆಲ್ಲ ಹೇಳಿದಾಗ ‘ಹೋಗು ಅವಳ ಹಿಂದೆಯೇ’ಎಂದು ಮುನಿಸಿಕೊಂಡಿದ್ದಳು. ಹರಿಣಿ ಕೇಳಿದಾಗ ನಾನು ವಿಸ್ಮಯದಲ್ಲಿ ಆಕೆಯನ್ನ ನೋಡಿದ್ದೆ. ಆಕೆ ಮುಂದುವರಿದು, ನೀನಂದ್ರೆ ನನಗೆ ಇಷ್ಟಾ ಕಣೋ. ಆದರೆ ನನ್ನ ಎಂಗೆಜ್ಮೆಂಟ್ ಮಾವನೊಂದಿಗೆ ಆಗಿ ಹೋಗಿದೆ’ ಎಂದು ಕಣ್ಣಿರಿಟ್ಟಳು. ನನಗೆ ಏನು ಹೇಳಬೇಕೆಂದೇ ಗೊತ್ತಾಗಲಿಲ್ಲ. ಆಕೆ ನನ್ನ ಕೈ ಹಿಡಿದುಕೊಂಡಳು. ತಬ್ಬಿಕೊಂಡಳು. ತುಂಬ ನೋವಿನಲ್ಲಿ ನನ್ನನ್ನ ತಡಕಾಡಿದಳು.

ಹೇಗೆ ಜೀವನದ ಆಗುಹೋಗುಗಳು ನಮ್ಮ ಭಾವನೆಗಳನ್ನ ಉಪೇಕ್ಷಿಸುತ್ತವೆ ? ಹರಿಣಿಯ ಒತ್ತಡಗಳೂ ಸಹ ಹೇಗೆ ಆಕೆ ನನ್ನೆಡೆಗೆ ತಿರುಗುವುದನ್ನ ಅನಿವಾರ್ಯವಾಗಿಸಿದವು. ಪ್ರಮೇಯಗಳನ್ನ ಹೇಳುತ್ತ ನನಗೆ ಮೈಯೊರಗಿ ಕೂತಳು. ಕೋನಗಳಲ್ಲಿ ತನ್ನ ಜೀವನದ ನೋವುಗಳನ್ನ ನನಗೆ ದಾಟಿಸಿಬಿಡುತ್ತಿದ್ದಳು. ಆಕೆಯ ಕಂಗಳಲ್ಲಿ ತುಂಬಿದ್ದ ನೀರನ್ನ ನೋಡಿ ‘ಅಳಬೇಡಾ ಹರಿಣಿ’ ಎಂದಾಗ ನನ್ನ ತಬ್ಬಿ ಏನು ಮಾಡ್ಲೋ ನಾನು ? ಪ್ರೀತಿ ಪ್ರೀತಿ ಅನ್ನುತ್ತ ಪತ್ರಗಳಲ್ಲಿ ಪದಪುಂಜದಿಂದ ನನ್ನ ಪಡೆದಕೊಂಡ ನನ್ನ ಮಾವ. ಅವನಿಗೆ ನನಗಿಂತ 8 ವರ್ಷ ಹೆಚ್ಚು ವಯಸ್ಸು’ ಎನ್ನುತ್ತಾ ಬಿಕ್ಕಿ ಬಿಕ್ಕಿ ಮತ್ತೆ ಮುಂದುವರಿದಳು –
‘ಅವನಿಗೆ ತುಂಬಿದ ನನ್ನ ಮೈಯ ಮೇಲೇನೆ ಕಣ್ಣು. ನಾನು ಇದೆಲ್ಲ ಈಗ ಬೇಕೇನು, ಮದುವೆಯಾದ ಮೇಲೆ ಇದ್ದೆ ಇದೆಯಲ್ಲ ಎಂದರೆ ‘ ಬಿಡು ಚಿನ್ನಾ ನಮ್ಮ ಪ್ರೀತಿ ಮದುವೆ ಎಂಬ ಬಂಧನವನ್ನೂ ಮೀರಿದ್ದು’ ಅಂತಾ ಹೇಳಿ ತುಟಿಗೆ ತುಟಿಯೊತ್ತಿ ಬಿಡುತ್ತಿದ್ದ. ನಾನವನನ್ನ ಎಲ್ಲವನ್ನ ಮೀರಿ ಪ್ರೀತಿಸಿದೆ ಆಮೇಲೆ ನನಗೆ ಗೊತ್ತಾಯ್ತು ಆ ಪತ್ರಗಳನ್ನೆಲ್ಲ ನನ್ನ ಕ್ಲಾಸ್ಮೇಟ್ ಗೆಳೆಯನೊಬ್ಬ ನನಗಾಗಿ ಬರದದ್ದು ಹಾಗೂ ನನ್ನ ಮಾವ ಎನ್ನಿಸಿಕೊಂಡುವನಿಗೆ ಇನ್ನೊಬ್ಬ ಪ್ರೇಯಸಿ ಇದ್ದಾಳೆಂದು. ನನ್ನ ಹೃದಯ ಒಡೆದುಹೋಯಿತು. ನನ್ನ ತನ್ನ ತೀಟೆಗೆ ಉಪಯೋಗಿಸಿದ ಈತ ಅದೆಷ್ಟು ಹೃದಯಹೀನನಾಗಿದ್ದ ? ನನ್ನ ನಿಜವಾಗಿ ಪ್ರೀತಿಸಿದ ಹುಡುಗನನ್ನೂ ವಂಚಿಸಿದ. ನಾನು ನನ್ನ ಕ್ಲಾಸಮೇಟಗೆ ಹತ್ತಿರವಾಗಲು ಪ್ರಯತ್ನಿಸಿದೆ. ಪ್ರತಿ ಸಾರಿ ಆತನನ್ನ ನೋಡಿದಾಗ ನನ್ನ ಮಾವನ ನೆನಪಾಗುತ್ತಿತ್ತು ನನಗೆ ಬದುಕೇ ಇಲ್ಲವೋ ಯದು ಎಂದು ಅತ್ತಳು. ನನ್ನ ತಬ್ಬಿ ಹಾಗೆಯೇ ನನ್ನ ತೊಡೆಯ ಮೇಲೆ ಮಲಗಿದಳು. ನಾನು ಆಕೆಯ ತಲೆ ಸವರಿದೆ. ಆಕೆ ನಿದ್ದೆ ಹೋದಳು. ಮತ್ತೆ ಅದೇ ಹರಿಣಿ ಕೆಲ ದಿನಗಳುರುಳಿದ ಮೇಲೆ ಆತ್ಮಹತ್ಯೆ ಮಾಡಿಕೊಂಡಳು.

ಇಷ್ಟೆ ನನ್ನ ಡೈರಿಯಲ್ಲಿದ್ದುದು. ನನಗೆ ಹರಿಣಿಯ ನೋವಿನ ಆಳವನ್ನ ಕ್ರಮಿಸಲಾಗಲಿಲ.್ಲ ಆಕೆಯಲ್ಲಿ ಚೇತರಿಸಿಕೊಳ್ಳಲಾಗದ ಈ ನೋವಿಗೆ ಮತ್ಯಾವುದೇ ಪರಿಹಾರವಿರಲಿಲ್ಲವೇ ? ನನಗೆ ಒಮ್ಮೆಲೆ ಪ್ರತೀಕ್ಷಾ ನೆನಪಾದಳು. ರಾತ್ರಿ ಆಕೆಯನ್ನ ಹುಡುಕುತ್ತ ಗೆಸ್ಟ್ ಹೌಸಿಗೆ ಹೋಗುತ್ತಿದ್ದೆ. ಎದುರಿನಿಂದ ಬಂದ ಕಾರೊಂದು ನನ್ನ ಮುಂದೆ ನಿಂತಿತು. ಪ್ರತೀಕ್ಷಾ ನನ್ನ ಬುಕ್ಕವಾಗಿದ್ದ ಮುಖವನ್ನು ನೋಡಿ ನಕ್ಕಳು. ‘ಗೆಟ್ ಇನ್ಟು ದ ಕಾರ್ ಮೈ ಡಿಯರ್ ರೈಟರ್’ ಎಂದಳು. ನಾನು ಆಕೆಯ ಕಾರಿನೊಳಗೆ ಕೂತೆ.

ಬಿಡುಗಡೆಯಾಗಬೇಕು ಎನ್ನಿಸುವ ಅನಿವಾರ್ಯತೆಯೇ ಎಲ್ಲಕ್ಕಿಂತ ಮುಖ್ಯವಾಗಿಬಿಡುತ್ತದೆಯಲ್ಲ. ಪ್ರತೀಕ್ಷಾಳಲ್ಲಿ ನನ್ನಲ್ಲಿ ಇರುವುದೆಲ್ಲ ಸೃಜಿಸಬಹುದೆಂಬ ಭಾವವಿರಬಹುದು. ಆದರೆ ತಳಮಳಗೊಂಡಿರುವ ನನ್ನ ಯೋಚನೆಗಳಿಗೆ ಯಾವ ಸಾಧ್ಯತೆಯಿರಬಹುದು ? ಹೀಗೊಂದು ಸಾಧ್ಯತೆಯ ಹುಡುಕಾಟ ಎಲ್ಲಿ ಮಾಡಬೇಕು ? ಪ್ರತೀಕ್ಷಾಳನ್ನ ನೋಡಿದೆ – ನಿಲರ್ಿಪ್ತವಾಗಿ ಧೋ ಎಂದು ಸುರಿಯುತ್ತಿದ್ದ ಮಳೆಯಲ್ಲಿ ಏಕತಾನತೆಯಲ್ಲಿ ಕಾರು ಓಡಿಸುತ್ತಿದ್ದಳು. ಹರಿಣಿಗೆ ಕಾಣದ ಬೇರೆ ಆಯ್ಕೆಗಳಿದ್ದವೆ ? ಆಕೆಯ ಸಾವು ಕೇವಲ ನನ್ನ ಭಾವವಾಗಿತ್ತೆ ? ಅಪೂರ್ವಳಿಗೆ ಧಿಕ್ಕರಿಸುವುದು ಸಾಧ್ಯವಾದಂತೆ ಹರಿಣಿಗೆ ಸಾಧ್ಯವಾಗಲಿಲ್ಲವೇ ? ನಾನು ಪ್ರತೀಕ್ಷಾಳಿಗೆ ಕಾರು ನಿಲ್ಲಿಸಲು ಹೇಳಿದೆ. ಆಮೇಲೆ ಆಕೆಯ ಕೈಹಿಡಿದು ಕೇಳಿದೆ, ಏನಾಯಿತು ಪ್ರತೀಕ್ಷಾ ನಿನ್ನ ಜೀವನದಲ್ಲಿ ?

ಅವಳು ನೀಳದನಿಯಲ್ಲಿ ಯಾವುದೂ ತನಗಾಗಿಯೇ ಇಲ್ಲವೆಂಬಂತೆ ಹೇಳಿದಳು –

ಆ ಪ್ರೇಮಪತ್ರವನ್ನ ನಾನು ತುಂಬ ಪ್ರೀತಿಯಿಂದ ಇಟ್ಟುಕೊಂಡೆ. ಆತನೂ ತುಂಬ ಪ್ರೀತಿಯಲ್ಲೇ ಇದ್ದ. ನಾನು ಪ್ರತಿ ಸಾರಿ ಅವನ ಪತ್ರವನ್ನೇ ನೆನೆಸುತ್ತಿದ್ದೆ. ಆತ ಆಲಂಗಿಸುವಾಗ, ನನ್ನ ಮುದ್ದಾಡುವಾಗ, ಯಾವಾಗಲೂ ನಮ್ಮ ಜೀವನದ ತುಂಬೆಲ್ಲ ಪ್ರೀತಿಯೇ ಪ್ರೀತಿ.

ಆಮೇಲೇ!

ಒಂದು ದಿನ ನಮ್ಮ ತೋಟದ ಮನೆಯಲ್ಲಿ ಯಾರೂ ಇಲ್ಲದ್ದರಿಂದ ಆತನನ್ನ ಕರೆಸಿದೆ. ಅವತ್ತು ನಾವಿಬ್ಬರೂ ಜೊತೆಯಲ್ಲೇ ಮಲಗಿದೆವು. ಆತ ನನ್ನ ಬೆಡ್ ಮೇಲೆ ಕೂರಿಸಿ ನನ್ನ ತುಟಿಗೆ ತುಟಿಯೊತ್ತಿದ. ನಾನು ನಾಚಿಕೆಯಲ್ಲಿ ಕಣ್ಣು ಮುಚ್ಚಿಕೊಂಡೆ. ಆಮೇಲೆ ಅಲ್ಲಿ ಪೇಪರಿನ ಸಪ್ಪಳವಾಯ್ತು, ಅದು ಅವನ ಪ್ರೇಮಪತ್ರ. ನಾನವನೆಡೆಗೆ ಐ ಲವ್ ಯೂ ಎಂದು ನಸುನಕ್ಕೆ. ಅದನ್ನ ಆತ ತೆರೆದ, ನೋಡಿದ. ಅವನ ದೃಷ್ಟಿ ಅಲ್ಲಿಂದ ನನ್ನೆಡೆಗೆ ಉಗ್ರವಾಗಿತ್ತು. ನನಗೆ ಕಪಾಳಕ್ಕೆರೆಡು ಬಾರಿಸಿದ. ‘ನೀನು ನನ್ನ ಪ್ರೀತಿಸೋದಿಲ್ವೇನು ?’ ಎಂದು ಕೇಳಿದ. ನಾನು ಅವಾಕ್ಕಾಗಿ ಅವನನ್ನೇ ನೋಡುತ್ತ ನಿಂತೆ ‘ ಏ ರಂಡೆ, ನಿನಗೇನೆ ಕೇಳಿದ್ದು ಕಣೇ’ ಅಂತಾ ಗದರಿದ ‘ನಿನಗೆ ನನಗಿಂತ ಈ ಪತ್ರವೇ ಮುಖ್ಯ ಅಲ್ವೇನೆ ? ಹೋಗು ಅವನ ಹಿಂದೇನೇ ? ನೀನು ಯಾಕೆ ಇಷ್ಟು ಇದನ್ನ ಪ್ರೀತಿಸ್ತೀಯಾ ಅಂತಾ ಈಗ ಗೊತ್ತಾಯ್ತು’ ಅಂತಾ ಕಿರುಚಾಡಿ ನನ್ನ ಕೆನ್ನೆಗೆರಡು ಬಾರಿಸಿ ಗೋಡೆಗೆ ಅಪ್ಪಳಿಸಿದ. ನಾನೂ ಕ್ರೋಧದಲ್ಲಿ ‘ಬಾಸ್ಟರ್ಡ್, ನೀನು ನನ್ನ ಬಗ್ಗೆ ಇಷ್ಟು ಚೀಪಾಗಿ ಯೋಚಿಸುತ್ತೀ ಅಂತಾ ತಿಳಿದಿರಲಿಲ್ಲ. ಗೆಟ್ ಔಟ್ ನೌ ಎಂದು ಅವನನ್ನ ನೂಕಿದೆ. ಆತ ‘ಸೂಳೆ ನಿನೆಗೆಷ್ಟೇ ಕೊಬ್ಬು’ ಎನ್ನುತ್ತಾ, ನನ್ನನ್ನ ಕಟ್ಟಿ ಹಾಕಿದ. ನಾನೆಷ್ಟೇ ಕೂಗಾಡಿದರೂ, ಬೇಡಿದರೂ ಬಿಡದೇ ನನ್ನ ಬೆತ್ತಲೆ ಮಾಡಿ ಬೆಲ್ಟಿನಿಂದ ಹೊಡೆದ. ಅತ್ಯಾಚಾರ ಮಾಡಿದ.

ಎಂದು ಕಣ್ಣು ಮುಚ್ಚಿ ಕಾರಿನ ಡೋರ್ ತೆರೆದು ಹೊರೆಗೆ ಸುರಿಯುತ್ತಿದ್ದ ಬಿರುಸು ಮಳೆಯಲ್ಲಿ ನಿಂತಳು. ನಾನು ದಿಗ್ಭ್ರಾಂತನಾದೆ. ಕಾರಿನಿಂದ ಇಳಿದು ನಾನೂ ಆಕೆಯ ಪಕ್ಕ ನಿಂತೆ. ಇಷ್ಟೆಲ್ಲ ಆದರೂ ಈಕೆ ಉಳಿದಿರುವುದೇ ದೊಡ್ಡ ಮಾತು ಎಂದೆನಿಸಿತು. ಆಕೆಯ ಜೊತೆ ಮಾತಿನಲ್ಲಿ ನಿಲ್ಲುವುದು ತುಂಬ ವಿನಾಶಕಾರಿ ಎನ್ನಿಸಿ, ಪ್ರತೀಕ್ಷಾಳನ್ನ ಕೈಹಿಡಿದು ಅಲ್ಲಿಯೇ ರೋಡಿನಲ್ಲೇ ಕೂರಿಸಿದೆ ನಾನೂ ಕೂತೆ ಸ್ವಲ್ಪ ಹೊತ್ತಾದ ಮೇಲೆ ಆಕೆ ಎದ್ದು,

ಕಳೆದುಹೋಗಿದ್ದರಲ್ಲೂ ಧನ್ಯತೆಯ ಭಾವ ಮೂಡುವುದು ಸಾಧ್ಯವಿದೆ. ನನಗೆ ಜೀವನವೇ ಇಲ್ಲ ಎಂದುಕೊಂಡದ್ದರಲ್ಲೂ ತತ್ಪರತೆಯಲ್ಲಿರುವ ‘ಇಷ್ಟೇ ಅಲ್ಲ, ಇನ್ನೂ ಇದೆ’ ಎಂಬ ಆಶಾವಾದವಿದೆ. ಈ ಆಶಾವಾದವೇ ನನ್ನನ್ನ ಜೀವಂತವಾಗಿಟ್ಟಿದೆ ಎಂದುಕೊಂಡಿದ್ದೇನೆ. ಇದೆಲ್ಲ ನಡೆದಿದ್ದು ಈಗ ಕನಸಿನಂತೆ ಭಾಸವಾದರೂ ಆ ನೋವು ನಿನ್ನೆಯದೇನೋ ಎನ್ನುವಷ್ಟು ಕ್ರೂರವಾಗಿದೆ. ಈ ಪ್ರತೀಕ್ಷಾ ಅಂದರೆ ನಿನಗೆ ಕೇವಲ ಕಥಾವಸ್ತುವಾಗಿರುವುದರಿಂದ ನೀನಿದರ ತೀವ್ರತೆಯನ್ನ ಅನುಭವಿಸಲಾರೆ. ಆದರೂ ನಿನ್ನಲ್ಲಿ ಸೂಕ್ಷ್ಮತೆಯತೆಯನ್ನ ಗುರುತಿಸುವ ಶಕ್ತಿ ಇದೆ. ಎಲ್ಲದರಲ್ಲೂ ಭ್ರಾಂತಿಯ ಪ್ರೀತಿಯನ್ನ ತೊರೆದು ವಾಸ್ತವಕ್ಕೆ ಬಂದು ನಿಲ್ಲುವ ಪ್ರೀತಿ ನಿನ್ನ ಬರಹದ ಗುಟ್ಟಾದರೂ ಇಟ್ ಇಸ್ ಆಲ್ಸೊ ಯುವರ್ ವೀಕನೆಸ್. ಜೀವನ ನನಗೆ ಕೊಟ್ಟಷ್ಟನ್ನು ನಿನಗೆ ಹೇಳಿದ್ದೇನೆ. ಪತ್ರವೇ ಶುರುವಿಗೂ ಅಂತ್ಯಕ್ಕೂ ಕಾರಣವಾಗಿರುವುದು ನಾಟಕೀಯವಾದರೂ ನನ್ನ ಪ್ರೀತಿಯ ಮನಸನ್ನ ಛಿದ್ರ ಮಾಡಿದೆ. ಇನ್ನೇನನ್ನೂ ನಾನು ಹೇಳಲಾರೆ. ‘ಬನ್ನಿ ನಿಮ್ಮನ್ನ ಡ್ರಾಪ ಮಾಡುತ್ತೇನೆ’ ಎಂದು, ನನ್ನನ್ನ ರೂಮಿಗೆ ಬಿಟ್ಟು ಹೋದಳು. ಆಗುಂಬೆಯ ಮಳೆಯ ರಮ್ಯತೆಯಲ್ಲೂ ಇಂತಹ ನೋವಿನ ಸಂಗತಿಗಳು -ವಿಚಿತ್ರವೆನ್ನಿಸುತ್ತದೆ. ಪ್ರೀತಿ ಎಂಬುದು ಕೇವಲ ಪತ್ರದಲ್ಲಿ ಮುಗಿಯುವಂತದ್ದೆ ? ಪ್ರತೀಕ್ಷಾಳನ್ನ ಆತ ನಿಜವಾಗಿಯೂ ಪ್ರೀತಿಸಿಯೇ ಇಲ್ಲ. ಕೇವಲ ತೀಟೆಯಾಗಿರುವುದು, ನನ್ನದು ನಿನ್ನದು ಎಂಬ ಹಕ್ಕಿನ ಸೊಕ್ಕಿನಲ್ಲಿರುವುದು ಪ್ರೀತಿಯಲ್ಲ. ಯಾವುದರಲ್ಲೂ ಕಾಣದ ಆಶಾವಾದಿತನದ ಗುರುತಿಸುವುದು ಕೂಡ ಪ್ರತೀಕ್ಷಾಳನ್ನ ಮ್ಯಾಚುರ್ ಮಾಡಿದೆ.

ಆಕೆ ತನ್ನ ಅಸ್ತಿತ್ವವನ್ನ ಗುರುತಿಸಿದ್ದಾಳೆ. ಆದರೆ ಆಕೆ ನನ್ನ ಕೆಲವು ಸಾರಿ ಏಕವಚನದಲ್ಲೂ ಕೆಲವು ಸಾರಿ ಬಹುವಚನದಲ್ಲೂ ಸಂಭೋದಿಸುವುದರಲ್ಲಿ ಏನೋ ಹುದುಗಿದೆ ಎಂದುಕೊಳ್ಳೋದು ನನಗೀಗ ಅನಿವಾರ್ಯವೇ ? ಹರಿಣಿಯಲ್ಲಿ ಸಾಧ್ಯವಾಗದ್ದು ಈಕೆಯಲ್ಲಿ ಮೂರ್ತವಾಗಿದೆ. ನಾನಂದುಕೊಂಡಂತೆಯೇ ನಡೆಯಬೇಕೆನ್ನುವುದು ಜೀವನ ಸಾಂಗತ್ಯಕ್ಕೆ ವಿರುದ್ದವಾಗಿರುದಂತೂ ನಿಜ. ಅಪೂರ್ವಳ ತತ್ಪರತೆಯ ಪ್ರೀತಿ ತುಂಬಿದ ನೋಟದಲ್ಲಿ ಅಡಗಿದ್ದು, ನಾನಾಕೆಯಲ್ಲಿ ಏನೋ ಅತೀತವಾಗಿದ್ದನ್ನ ಕಂಡುಕೊಂಡಿದ್ದು, ಹೀಗೇನೆ ನನ್ನಲ್ಲಿಯೇ ಉಳಿದು ಕುತೂಹಲಕಾರಿಯಾಗಿ ಬೆಳೆದದ್ದು ಎಲ್ಲವೂ ಒಟ್ಟೊಟ್ಟಿಗೆ ಉರಿದುಹೋಗುತ್ತೆ. ಅಪೂರ್ವ ಕೊನೆಗೆ ನನ್ನವಳೆನ್ನಿಸಿಕೊಂಡವಳು ನನ್ನಲ್ಲಿ ಹಾಗೆಯೇ ಉಳಿದರೂ ತನ್ನಲ್ಲಿ ಪರಳಾಗಿಬಿಡುತ್ತಾಳೆ. ಕೇವಲವಾದ ಕೆಲವೊಂದು ತಾವೇ ಮುಖ್ಯವಾಗಿಬಿಡುತ್ತವೆ.
ಲೋಕಪ್ರಿಯತೆಯ ಗಳಿಕೆಗೋಸ್ಕರ ನಾವು ಈ ರೀತಿ ಕಥೆ ಬರೆಯುತ್ತೇವೆಯೇ ? ನಮ್ಮಲ್ಲಿರುವ ಸೂಪ್ತ ಹಂಬಲಗಳೂ ನಮ್ಮ ಸೃಷ್ಟಿಯಲ್ಲಿ ಹೇಗೆ ಖಳನಾಯಕನಾಗಿಬಿಡುತ್ತವೆ ? ಹೇಗೆ ಒಂದು ಹೆಣ್ಣಿನ ಜೀವನವನ್ನ ನಾವು ಖಳವೆಂಬಂತೆ ತೋರಿಬಿಡುತ್ತೇವೆ ? ನಾನು ಅಪೂರ್ವಳನ್ನ ಈ ದೃಷ್ಟಿಯಿಂದ ನೋಡಿದೆನಲ್ಲವೇ ? ಯಾರ ಜೀವನದಲ್ಲಿ ಯಾವ ತಿರುವುಗಳಿರುತ್ತವೆಯೋ ? ಹರಿಣಿಯ ನೋವು, ಪ್ರತೀಕ್ಷಾಳಲ್ಲಿ ಹುದುಗಿರುವ ನೋವು… ಯಾರ ನೋವು ಕೂಡ ಯಾರ ದೃಷ್ಟಿಗೂ ನಿಲುಕುವುದೇ ಇಲ್ಲ ಅಲ್ಲವೇ ? ನಾವು ಸತ್ಯವನ್ನ ಎದುರುಗೊಳ್ಳುವುದು ಸಾಧ್ಯವಿಲ್ಲವೇ ? ಹೌದು ಅಪೂರ್ವ ನನ್ನ ತೊರೆದ ಮೇಲೆ ಯಾವುದೇ ಕಥೆಯನ್ನ ಬರೆಯಲಾಗದ್ದು ಇದೇ ಕಾರಣದಿಂದಲೇ ಇರಬಹುದೇ ? ನಮ್ಮೆಲ್ಲರ ಸುತ್ತ ಸುತ್ತುವ ಈ ಪರಿಧಿಯಲ್ಲಿ ನಮಗೇನೆ ತಿಳಿಯದಂತೆ ಜೀವನ ವ್ಯಾಪಿಸಿದೆ. ಸೂಪ್ತವಾಗಿ ಚಲಿಸುತ್ತಲೇ ಇರುತ್ತದೆ. ನಮ್ಮ ನೆಲೆಗಳೂ ಕಾಲದ ಆರ್ಭಟದಲ್ಲಿ ಬದಲಾಗಿ ಹೋಗುತ್ತವೆ. ಆಂತರ್ಯದಲ್ಲಿ ಹುದುಗಿರುವ ಬೇಗುದಿಗಳಿಗೆ ಪ್ರತೀಕ್ಷಾಳಿಗೆ ಸಿಕ್ಕಂತೆ ನನಗೆ ಉತ್ತರ ಸಿಗಬಹುದೇ ? ಅಪೂರ್ವಳನ್ನ ಸಂಧಿಸಬೇಕೆಂಬ ನನ್ನ ಕಾತರ ಈಗ ದ್ವಿಗುಣವಾಗಿದೆ.

ಅಪೂರ್ವಳ ನೋವುಗಳಿಗೆ ನಾನು ಸ್ಪಂದಿಸದೇ ಹೋದೆನೆ ? ಯಾವ ಕಾರಣಗಳಿಗೆ ನಮ್ಮಿಬ್ಬರಲ್ಲಿ ಈ ದೂರ ಉದ್ಭವವಾಯಿತು ? ಪ್ರೀತಿ ಎಂಬುದು ತಾತ್ವಿಕವಾಗಿ ಸಭ್ಯವೇ ಆಗಿರಬೇಕೆಂದುಕೊಳ್ಳೋದು ಹೇಗೆ ? ಭಾವನೆಗಳಲ್ಲಿ ಮೂಡದ ಸಂವೇದನೆಗಳನ್ನ ಆಶಿಸೋದು ಹೇಗೆ ? ಇದು ತಪ್ಪೆ ? ಅಪೂರ್ವಳ ಮನಸ್ಸಿನಲ್ಲಿ ನನಗಿರುವ ಜಾಗದ ಪರಿಕಲ್ಪನೆ ನಾನು ಭಾವಿಸಿದಂತೆಯೇ ಇರಬೇಕೆನ್ನುವುದು ? ಏನನ್ನೂ ಆಶಿಸದೇ ಪ್ರೀತಿಸೋದು ಸಾಧ್ಯವಿದೆಯೇ ? ಹೇಗೆ ನನಗಾಗಿ ಆಕೆಯಲ್ಲಿ ಏನೂ ಇಲ್ಲದ ಸ್ಥಿತಿ ರೂಪಿತಗೊಂಡಿದೆ ? ಅಪೂರ್ವಗಳನ್ನ ನಾನು ಹುಚ್ಚನಂತೆ ಪ್ರೀತಿಸಿದೆ. ಆಕೆಯನ್ನ ಆರಾಧಿಸಿದೆ. ಯಾಕೆ ನಾನು ಆಕೆಗೆ ಮತ್ತೂ ಪರನಾಗಿಬಿಟ್ಟೆ ?

ಅಪೂರ್ವ ಈಗ ಕಾಲೇಜಿನಲ್ಲಿ ನಾನು ಮುಂದೆ ಬಂದರೂ ಅಪರಿಚಿತಳಂತೆ ದಾಟಿಬಿಡುತ್ತಾಳೆ. ಆಕೆಗೆ ಟೆಕ್ಸ್ ಅಥವಾ ಕಾಲ್ ಮಾಡಹೋದರೆ ನನ್ನನ್ನ ಬ್ಲಾಕ್ ಮಾಡಿದ್ದಾಳೆ. ನಾನು ಹೇಗೆ ಅವಳಿಲ್ಲದೆ ಮುರುಟಿಹೋಗಿದ್ದೇನೆ. ಆಕೆಗೆ ಇಷ್ಟವಾಗಲೆಂದು ಮಾಡಿದ್ದೆಲ್ಲವೂ ಈಗ ನನಗೆ ಚುಚ್ಚುತ್ತಿವೆ. ಆಕೆಯನ್ನ ಉತ್ಸುಕತೆಯಲ್ಲಿ ನಿಂತು ಕಾಯುವಾಗ ಆಕೆ ನೋಡದೆ ಹೋಗಿಬಿಟ್ಟಾಗ ಏನೋ ವಿಚಿತ್ರ ವೇದನೆ ಅಂತರಾಳದಲ್ಲಿ ಇಳಿದು ಹೀಗೆ ದಿಗ್ಗನೆಂದು ಹೊರಗೆದ್ದುಬಿಟ್ಟ ಈಕೆಯಲ್ಲಿ ನನಗಾಗಿ ಸ್ವಲ್ಪ ಜಾಗವೂ ಇಲ್ಲವೇ ? ಕೆಲತಿಂಗಳ ಹಿಂದೆ ಪಾಕರ್ಿನಲ್ಲಿ ಸಂಧಿಸಿದಾಗ ಪ್ರೀತಿಯಲ್ಲಿ ಈಕೆಗೆ ಮುತ್ತಿಕ್ಕಿದ್ದು ? ಮಳೆಯಲ್ಲಿ ನೆನದೆ ಬೆಚ್ಚಗೆ ತಬ್ಬಿಕೊಂಡದ್ದು ? ಆಕೆಗಾಗಿ ಕಾದು, ಆಕೆಗಿಷ್ಟವಾದ ಐಸಕ್ರೀಮ್ನ್ನ ಆಕೆಗೆ ಕೊಟ್ಟದ್ದು ? ಇವೆಲ್ಲ ಹಂಬಲಿಕೆಗಳ ಜೊತೆ ಆಕೆಯೂ ಈಗ ಸುಳ್ಳು. ನಡೆದಿದ್ದೆಲ್ಲವ ಮರೆಯಲೂ ಸಾಧ್ಯವಾಗುತ್ತಿಲ್ಲ. ಇದರಿಂದ ಬಿಡುಗಡೆಯಾಗಲು ‘ಕ್ಯಾನ್ ಲವ್ ಹ್ಯಾಪನ್ ಟ್ವೈಸ್ ?’ ಎಂಬಂತಹ ಕಾದಂಬರಿಗಳನ್ನ ತಿರುವಿದೆ. ಕವನಗಳನ್ನ ಮೆಲುಕಿದೆ. ಸಾಧ್ಯವಾಗಲಿಲ್ಲ. ಬರೀ ನೆಸ್ ಕೆಫೆಯ ಹತ್ತಿರ ನಿಲ್ಲುವುದೇ ಒಂದು ದಿನಚರಿಯಾಯಿತು. ಚದುರಿದ ಎಲೆಗಳು, ಕೆಂಪು ಮಾಸಿದ ಕುಚರ್ಿಗಳು, ಈ ನೆಸ್ ಕೆಫೆ… ನಮ್ಮ ಪ್ರೀತಿಯ ಸಂಬಂಧಕ್ಕೆ ಸಾಕ್ಷಿಯಾಗಿದ್ದ ಇವು ಈಗೆಲ್ಲ ಮೌನಕ್ಕೆ ಶರಣಾಗಿವೆ. ದುಃಖ ಉಮ್ಮಳಿಸಿ ಬರುತ್ತದೆ. ಅಪೂರ್ವ ಈಗ ಅದ್ಯಾವುದೋ ಅಮೇರಿಕದಲ್ಲಿ ಇರುವ ಸಂಬಂಧಿ ಹುಡುಗನನ್ನ ಇಷ್ಟಪಡುತ್ತಾಳಂತೆ. ಸಂಕಟವಾಗುತ್ತೆ. ಅವನಿಗೆ ಕೈತುಂಬ ಸಂಬಳ ಹಾಗೂ ಬೇಕಾದಷ್ಟು ಆಸ್ತಿಯಿದೆಯಂತೆ. ನನಗೂ ಅವಳಿಗೂ ಗೆಳತಿಯಾಗಿರುವ ಹುಡುಗಿಯಿಂದ ಕೇಳಿಸಿ ನೋಡಿದೆ – ನನ್ನ ಬಗ್ಗೆ. ‘ಅವನ ಹತ್ತಿರ ಏನಿದೆ ? ಕೈತುಂಬ ಸಂಬಳವೇ ಅಥವಾ ಆಸ್ತಿಯೇ ? ಎಂದಳಂತೆ. ಇದು ನಿಜವಿರಲಾರದು ಎಂದುಕೊಂಡರೂ ಆಕೆ ನನ್ನಡೆಗೆ ಪ್ರತಿಕ್ರಿಯಿಸುವುದನ್ನ ನಿಲ್ಲಿಸಿರುವುದಂತೂ ನಿಜವಲ್ಲವೇ ?

****

ಹಲವು ದಿನಗಳಾದ ಮೇಲೆ ನಾನು – ನನ್ನ ಒಂದು ಕಥೆಯನ್ನ ದಿನಪತ್ರಿಕೆಗೆ ಪ್ರಕಟಣೆಗಾಗಿ ಕೊಡಲು ಹೋದಾಗ ಗೆಳೆಯನೊಬ್ಬ ಸಿಕ್ಕ. ಈತ ನನ್ನ ಜೊತೆ ಹೈಸ್ಕೂಲು ಓದಿದವ. ತುಂಬ ಸಲುಗೆಯಲ್ಲಿ ಮಾತನಾಡಿದ. ಯಾವುದೋ ಎಮ್ ಎನ್ ಸಿಯಲ್ಲಿ ಕೆಲಸ ಗಿಟ್ಟಿಸಿದ್ದಾನಂತೆ. ಓಡಾಡಲು ಆಫೀಸಿನವರು ಕಾರು ಕೊಟ್ಟಿದ್ದಾರಂತೆ. ಮತ್ತೆ ಸಂಕಟ ಯಾರ್ಯಾರೋ ಕೈತುಂಬ ಸಂಬಳ ಗಿಟ್ಟಿಸುತ್ತಾರಲ್ಲ; ಇದು ನನ್ನಿಂದೇಕೆ ಸಾಧ್ಯವಾಗುತ್ತಿಲ್ಲ ? ಆದರ್ಶಗಳಲ್ಲಿ ನಾನು ಅಸಂಗತವಾಗಿಬಿಟ್ಟಿದ್ದೇನೆಯೇ ? ನನ್ನ ಸಂಕಟವನ್ನ ತೋರದೆ ಅವನೊಡನೆ ಮಾತನಾಡಿದೆ. ನಮ್ಮ ಹೈಸ್ಕೂಲಿನ ದಿನಗಳನ್ನ ನೆನೆಸಿದೆ. ಈತ ತನ್ನ ಹಳೆಯ ಗೆಳತಿಯ ಬಗ್ಗೆ ಮಾತನಾಡಿದ. ನಾನು ಕೇಳುತ್ತ ನಿಂತೆ,

ನಾನು ಪ್ರೀತಿಸಿದ ಹುಡುಗಿ ಅನ್ನುವುದಕ್ಕಿಂತ ಆಕೆ ನನ್ನನ್ನ ಪ್ರೀತಿಸಿಯೇ ಇರಲಿಲ್ಲವೋ ಯದು. ಹಂಬಲಕ್ಕಾಗಿ ತತ್ಪರತೆಗಾಗಿ ನನ್ನ ಸೇರಿಕೊಂಡ ಆಕೆಗೆ ಕೇವಲ ಸಮಯ ಕಳೆಯುವ ಸಾಧನವಾಗಿಬಿಟ್ಟೆ. ಇದೆಲ್ಲ ನಡೆದು ಹೋದ ವಿಷಯ. ಎನಿ ವೇ ನಾನೀಗ ತುಂಬ ಸಂತೋಷದಿಂದಿದ್ದೇನೆ. ಮೊನ್ನೆ ತಾನೆ ನಿನ್ನ ಒಂದು ಕಥೆಯನ್ನ ಓದಿದೆ. ಅದೆಂತಹಾ ಅದ್ಭುತ ಕಥೆ. ಪ್ರೀತಿಸದ ಹುಡುಗಿಯನ್ನ ಎಷ್ಟು ಪ್ರೀತಿಯಿಂದ ಸುರೇಶ ನೋಡಿಕೊಳ್ಳುತ್ತಾನೆ. ಆತ ತನ್ನಲ್ಲಿಯ ಎಷ್ಟೋ ಬೇಗುದಿಗಳನ್ನ ಹೇಗೆ ನಿರ್ಲಕ್ಷಿಸಿಬಿಡುತ್ತಾನೆ? ಹೆಣ್ಣಿನ ದುರಾಸೆಗಳನ್ನ ಸ್ವಾರ್ಥವನ್ನ ನಿನಗಿಂತ ಹೆಚ್ಚಾಗಿ ಯಾರೂ ವಿಶ್ಲೇಷಿಸಲಾರರು. ಆದರೆ ನೀನು ಅನನ್ಯಳ ಪ್ರೀತಿಯನ್ನ ಕ್ಷಮಿಸಿ ಕಥೆಯನ್ನ ನಿಜರ್ೀವಾಗಿಸಿಬಿಟ್ಟಿದ್ದೀಯಾ. ಅದನ್ನ ಪರಿಷ್ಕರಿಸು. ಆಕೆ ತುಂಬಾ ಕ್ರೂರಿಯಾಗಿದ್ದಾಳೆ. ಎಂದು ಗಹಗಹಿಸಿ ನಕ್ಕ. ನಾನು ತುಂಬ ನಿಶ್ಶೇಷನಾಗಿ ನಿಂತಿದ್ದೆ. ಕೇವಲವಾಗುವ ನಮ್ಮ ವಿಚಾರಗಳಲ್ಲಿ ಹೆಣ್ಣನ್ನ ನಮ್ಮಂತೆಯೇ ಜೀವವೆಂದು ನೋಡಲು ಸಾಧ್ಯವೇ ಇಲ್ಲವೇ ? ಇವನು ಯಾರೆಂದು ನನಗಿನ್ನೂ ಚೆನ್ನಾಗಿ ನೆನಪಿಗೆ ಬಂದಿರಲಿಲ್ಲ. ಆದರೂ ಕ್ರೂರವಾಗಿರುವ ಈ ಮನಸ್ಸನ್ನ ನಾನು ನಿರ್ಲಕ್ಷಿಸೋದು ಸಾಧ್ಯವೇ ? ಕೊನೆಗೆ ಹೋಗುವಾಗ ಕೇಳಿದ,

ನಿನ್ನ ಮದುವೆ ಆಯಿತೇನೋ ?

ಇಲ್ಲ, ಯಾಕೆ ? ನಾನಿನ್ನೂ ಆ ವಿಚಾರ ಮಾಡಿಲ್ಲ. ನೀನು ? ನಿನ್ನ ಹುಡುಗಿಯನ್ನ ಮತ್ತೆ ಸೇರುವುದಿಲ್ಲವೇನೋ ?

ಅವನು ವ್ಯಂಗ್ಯವಾಗಿ ನಗುತ್ತಾ ಕಣ್ಣು ಮಿಟುಕಿಸಿ ಹೇಳಿದ,

ಇಲ್ಲವೋ ಯದು ನಿನಗೇನು ಕಡಿಮೆಯೋ ? ತುಂಬ ಅಭಿಮಾನಿಗಳಿರುತ್ತಾರೆ. ಅವರಲ್ಲಿ ಹುಡುಗಿಯರೂ ಇರುತ್ತಾರೆ ಅಲ್ಲವೇನೋ ?

ನಾನೇನನ್ನೂ ಉತ್ತರಿಸಲಿಲ್ಲ. ‘ಮತ್ತೆ ಸಿಗೋಣ’ ಅಂತಾ ಹೇಳಿ ಆತನಿಂದ ತಪ್ಪಿಸಿಕೊಂಡೆ. ಕ್ರೌರ್ಯದ ಸಾಧ್ಯತೆಗಳು. ನಮ್ಮ ಸಮಾಜದ ಅಭಿವ್ಯಕ್ತಿಯೂ ಹೆಣ್ಣನ್ನ ವಸ್ತುವಿನಂತೆ ತೋರಿ ನಮ್ಮನ್ನ ಪೂವರ್ಾಗ್ರಹಪೀಡಿತರನ್ನಾಗಿಸಿದೆಯಲ್ಲವೇ? ನನ್ನ ಕಥೆಯಲ್ಲಿ ಹುದುಗಿದ ಕ್ರೌರ್ಯವನ್ನ ಆತ ಹೇಗೆ ಎಂಜಾಯ್ ಮಾಡುತ್ತಾನೆ ? ಅವಿರತವಾಗಿರುವ ಈ ರೀತಿಯ ಅಸಂಬದ್ಧತೆಗಳು. ಕಥೆಯ ವಸ್ತುವಿನ ಶೋಧನೆಯನ್ನ ಅದರ ಜೀವನ ಪ್ರೀತಿಯಲ್ಲಿ ಹುಡುಕಬೇಕಾದಲ್ಲಿ ಹೇಗೆ ಶೋಷಣೆಯು ಮುಖ್ಯವಾಯಿತು ?

ಕೆಲದಿನಗಳಾದ ಮೇಲೆ ಕಾಲ್ ಮಾಡಿದ ಈತ ನನ್ನ ಭೆಟಿಯಾಗಬಯಸಿದ. ನಾವಿಬ್ಬರೂ ಒಂದು ಪಾಕರ್ಿನಲ್ಲಿ ಭೇಟಿಯಾದೆವು. ನಾನು ಹೋಗಬಾರದೆಂದುಕೊಂಡರೂ ಹೋದೆ. ಅವನಿಗೆ ಹೇಳಿಬಿಡಬೇಕು – ನಾನು ಶೋಷಣೆಗಾಗಿ ಕಥಿಸುವುದಿಲ್ಲ, ಪ್ರೀತಿಯ ಸಾಧ್ಯತೆಗಳಿಗಾಗಿ ಬರೆಯುತ್ತೇನೆಂದು; ಎಂದುಕೊಂಡರೂ ನುಂಗಿ ಹಾಕಿದೆ. ಆತನ ಹಂಗಿನಲ್ಲಿ ನನ್ನ ತತ್ಪರತೆಯನ್ನ ನಾನು ಕಳೆದುಕೊಂಡೆ. ಭಾವನೆಗಳು ಕಥಿಸುವ ನಮ್ಮ ಜೀವನದಲ್ಲಿ ನಾಟಕೀಯವಾಗಿ ನಡೆಯಬಹುದಾದ್ದು ಕೇವಲ ಅಸಂಬದ್ಧತೆಗಳ ಅನ್ಯಾಯದ ಅತ್ಯಾಚಾರದ ಸಾಧ್ಯತೆ. ಗೌಣವಾಗುವುದೆಲ್ಲವನ್ನ ಮತ್ತೆ ಮತ್ತೆ ಓರೆಗೆ ಹಚ್ಚುವುದು. ಮತ್ತೆ ಮತ್ತೆ ಅಲ್ಲಲ್ಲಿ ಹಮ್ಮುಬಿಮ್ಮಿನ ಸ್ವಗತದ ನಿರೀಕ್ಷೆ. ಅಪ್ಯಾಯಮಾನ ಎನ್ನಿಸುವ ಪ್ರೀತಿಯ ಸಾಧ್ಯತೆಗಳನ್ನ ನಾವೆಲ್ಲ ಹೇಗೆ ಶೋಷಣೆಯ ಕೆಳಗಡೆ ಹುಗಿದುಬಿಟ್ಟಿದ್ದೇವೆ ?

ಯದು ನಿನಗೆ ನೆನಪಿದೆಯೇನೋ ನನ್ನ ಪ್ರೀತಿಗಾಗಿ ನಿನ್ನಿಂದ ಪ್ರೇಮ ಪತ್ರವನ್ನ ಬರೆಸಿದ್ದೆ. ಆಕೆಯನ್ನ ಪ್ರೀತಿಸಿದ್ದು ಕೂಡ ನಿಜ…

ಈಗ ತಕ್ಷಣ ನನಗೆ ನೆನಪಾಯಿತು ನಾನು ಮೊದಲಿಗೆ ಪ್ರೇಮ ಪತ್ರವನ್ನ ಬರೆದುಕೊಟ್ಟಿದ್ದು ಆಗಲೇ.

…ಆದರೆ ಪ್ರೀತಿಯನ್ನ ಅಪೇಕ್ಷಿಸುತ್ತಲೇ ಕ್ಷೀಣಿಸಿದವ ನಾನು. ಆಕೆಯ ಪ್ರೀತಿ ಕೇವಲ ಕಪಟ ನಾಟಕ ಎಂದು ತಿಳಿಯಿತು. ಅವತ್ತು ಆಕೆಯನ್ನ ಆ ಊರನ್ನ ಎಲ್ಲವನ್ನ ಬಿಟ್ಟೆ. ಹೀಗೆ ದೂರದಲ್ಲಿದ್ದು ಬೆಳೆದು ಈ ಬಿರುಕಿನ ಸಂಕಟವನ್ನ ನುಂಗಿದೆ. ಬಿರುಕಿನ ಕಪಟತೆಯ ಕಿಚ್ಚನ್ನ ಬಳಸಿಯೇ ನನ್ನ ಜೀವನದ ದೀಪವನ್ನ ಬೆಳಗಿದೆ. ಈಗ ಎಮ್ ಎನ್ ಸಿಯಲ್ಲಿ ಲಕ್ಷ ಸಂಬಳದ ಕೆಲಸ, ಅಮೇರಿಕೆಯಲ್ಲಿ. ನಿನಗೆ ಆ ಕಿಚ್ಚಿನಲ್ಲಿ ಹುದುಗಿರೋ ಸಂಕಟ ಗೊತ್ತಿಲ್ಲವೋ. ನಿನಗೆ ನಾನು ಮತ್ತೆಂದೂ ಸಿಗುವುದಿಲ್ಲವೋ ಎಂದು ಹೊರಟುಹೋದ. ನಾನು ಇಂತದ್ದೊಂದು ಬಿರುಕಿಗೆ ಕಾರಣನಾದೆನೆ ಸಂಗತಿಳೆಷ್ಟು ಕ್ಲಿಷ್ಟ. ಎಲ್ಲವೂ ಈಗ ನೆನಪಾಗುತ್ತವೆ. ಮೌನದಲ್ಲಿ ಚುಚ್ಚುತ್ತವೆ.

‘ನಿನ್ನಿಂದ ಬರೆಸಿದ ಪತ್ರ…’ ನಿನ್ನಿಂದ-ಎನ್ನೋದು ಈ ಹೊಸ ಸಂಕಟಕ್ಕೆ ನಾಂದಿ ಹಾಡಿದೆ. ಯಾವುದು ಕ್ರೂರತೆ ? ಇವನ ಜೀವನದಲ್ಲಿ ಆ ಕಪಟದ ಹೆಣ್ಣು ಕ್ರೂರಿ. ಯಾರು ಯಾರನ್ನ ಶೋಷಿಸಿದರೂ ಶೋಷಣೆಯೇ ಮೇಲಾಗಿ ಪ್ರೀತಿ ಕಮರುವ ಸಾಧ್ಯತೆ. ಈ ಪರಿಧಿಯಲ್ಲಿ ಒಳಸೇರುತ್ತಾ ಹೋಗುವ ಸೌಮ್ಯದ ಸೂಕ್ಷ್ಮ ವಿಚಾರಗಳು. ಕಾರಣಗಳನ್ನ ಕೇಳಿ ತಿಳಿಯಬೇಕು ಎಂಬ ತತ್ಪರತೆ ಪ್ರತೀಕ್ಷಾಳಿಂದ ದೂರವಾಗಿದೆ. ವಾಸ್ತವವನ್ನ ನೋಡೋದು ಯಾಕೋ ಕಠಿಣವಾಗಿದೆ. ನೋವಿನ ಮೂಲವನ್ನ ಹುಡುಕುವುದು ಕೂಡ ನೋವಿನ ಸಂಗತಿಯೇ ಸರಿ. ಹೇಗೆ ಎಲ್ಲವೂ ನನ್ನನ್ನೇ ಗುರಿಯಾಗಿಸಿಕೊಂಡಂತಿದೆ ? ಸ್ವವಿಮಶರ್ೆಯನ್ನ ಅನಿವಾರ್ಯ ಎಂದು ತೆಗೆದುಕೊಳ್ಳಬೇಕೆ ? ಅದು ನನ್ನ ಕೊನೆಯ ಸಾಧ್ಯತೆಯೇ ? ಅಪೂರ್ವಳೂ ಸಹ ನನ್ನನ್ನ ಈ ದೃಷ್ಟಿಯಿಂದಲೇ ತಿರಸ್ಕರಿದಳೇ? ನಾನು ಸೂಕ್ಷ್ಮದ ಪರಿಧಿಯನ್ನ ನಾಟಕೀಯವಾಗಿ ಚಿತ್ರಿಸುತ್ತೇನೆಯೇ ? ಈ ನನ್ನ ಗೆಳೆಯ ಕೊಂಕು ನುಡಿದನೇ ? ಎಚ್ಚರಿಸಿದನೇ ?…

ಕಳೆದುಹೋಗಿದ್ದರಲ್ಲೂ ಧನ್ಯತೆಯ ಭಾವ ಬರುವ ಸಾಧ್ಯತೆ ? ಇದು ಸಾಧ್ಯವಿದೆ. ನಿಜ. ನನ್ನಲ್ಲಿ ಮತ್ತೆ ಮತ್ತೆ ಇದು ಪ್ರತಿಧ್ವನಿಸಿದೆ. ನನ್ನ ಗೆಳೆಯನಲ್ಲಿ, ಪ್ರತೀಕ್ಷಾಳಲ್ಲಿ, ನನ್ನಲ್ಲಿ. ಹಾಗೆ ಅಪೂರ್ವಳಲ್ಲೂ ?! ಇರಬಹುದೇ ? ನಾನೆಂದೂ ಯಾರ ಭಾವನೆಗಳ ಆಳವನ್ನೂ ಮುಟ್ಟುವುದು ಸಾಧ್ಯವಿಲ್ಲ.

****

ಮತ್ತೆ ನಾನು ನೆಸ್ ಕೆಫೆಯ ಅಂಗಳದಲ್ಲಿ ನಿಂತಿದ್ದೇನೆ. ಈಗ ಹಸಿರು ಬಣ್ಣದ ಬೋರ್ಡ. ಸ್ಟೀಲ್ ಕುಚರ್ಿಗಳು. ಎಲ್ಲ ಬದಲಾಗಿದೆ ನಿಜ. ಧನ್ಯತೆಯ ಭಾವ. ಆದರೆ ಅವಳ ನೆನಪು ?! ತಂಪಾಗಿ ಗಾಳಿ ಬೀಸುತ್ತಿದೆ. ನಿರೀಕ್ಷಿಸೋದು ಸಹ ಒಂದು ಸೋಗು ಆಗಿರಬಹುದು. ಇಷ್ಟಾದರೂ ಪ್ರತಿಧ್ವನಿಸುವ ನಾನು ಬರೆದುಕೊಟ್ಟ ಪ್ರೇಮಪತ್ರದ ಸಾಲುಗಳು. ಅವುಗಳನ್ನ ಬಳಸಿ ಒಂದಾದ ಎಷ್ಟೋ ಜೋಡಿಗಳು.

ಎಲ್ಲರಲ್ಲೂ ನಾನು ಸ್ಖಲಿಸಿದ ರಮ್ಯ ಭಾವನೆಗಳು. ಇನ್ನೇನೊ ಉಳಿದಿಲ್ಲ ಎನ್ನಿಸುತ್ತಿರುವ ಈ ಕ್ಷಣ. ಏಕೆ ಇಂತಹ ಶೂನ್ಯತೆ ? ಅಪೂರ್ವ… ಸಾತತ್ಯ?! ತನ್ನೊಳಗೆ ಅಡಗಿರುವ ತನ್ನದನ್ನ ಹುಡುಕುವುದು ? ತನ್ನನ್ನೇ ಹುಡುಕುವುದು ? ಸಾತತ್ಯ ಎನ್ನುವುದು ಕೇವಲ ಒಂದು ಬೇಟ. ಇಲ್ಲಿರುವುದೊಂದು ಸಂತೃಪ್ತಿ ಇಲ್ಲದೇ ಮತ್ತೊಂದಕ್ಕೆ ತತ್ಪರವಾಗೋದು. ‘ಸಂತೃಪ್ತಿ ಇಲ್ಲದೇ’ ಅನ್ನೋದು ನಿಜವೇ ?

ಅಪೂರ್ವಳನ್ನ ಅರ್ಥಮಾಡಿಕೊಳ್ಳೋದು ಹೇಗೆ ? ಆಕೆಯ ತಿರಸ್ಕಾರವನ್ನ ಅರಗಿಸಿಕೊಳ್ಳೋದು ಹೇಗೆ ? ನನ್ನೊಳಗೆ ನಿಜವಾಗಿ ಇರುವುದಾದರೂ ಏನು ? ಮತ್ತೆ ಆಕೆಯಿಂದ ಯಾವುದೇ ಉತ್ತರ ಬಂದಿರಲಿಲ್ಲ. ಮೇಸೇಜುಗಳನ್ನ ಕಳಿಸುವುದೂ ಸಂಕಟವೆನಿಸಿತ್ತು. ಇದ್ದುದರಲ್ಲಿ ಕೊಂಚ ಸಮಾಧಾನ ಪ್ರತೀಕ್ಷಾಳಲ್ಲಿರುವಂತೆ ತೋರಿತು. ಆಕೆಗೆ ಟೆಕ್ಸ್ಟ್ ಮಾಡಿದೆ.

ಪ್ರತೀಕ್ಷಾ ನಾನು ತುಂಬ ಪ್ರೀತಿಸೋ ನನ್ನ ಅಪೂರ್ವ ಬೇರೆಯೊಬ್ಬವನನ್ನ ಮದುವೆಯಾಗುತ್ತಿದ್ದಾಳೆ.

ಸಂಕಟವಾಗುತ್ತಿರುವುದು ನಿಜ. ತತ್ಪರವೆನಿಸೋದು ಕೂಡ ಬಿಸಿಲ್ಗುದುರೆ. ಅಪೂರ್ವಳನ್ನ ಕಳೆದುಕೊಂಡು ನಾನು ಬದುಕಲಾರೆ ಎನ್ನಿಸುತ್ತಿದೆ. ತಡೆದುಕೊಳ್ಳಲಾಗದೇ ಅವಳ ಮನೆಗೆ ಓಡಿದೆ. ಅವಳ ಕೈ ಹಿಡಿದು ಬಿಕ್ಕಿದೆ. ಆಕೆ ಏನನೂ ಮಾತನಾಡಲಿಲ್ಲ. ನಾನು ಅಲ್ಲಿಂದ ಹಿಂದಿರುಗಿದೆ. ಮೊಬೈಲ್ ನೋಡಿದೆ, ಪ್ರತೀಕ್ಷಾಳ ಮೇಸೇಜು.

‘ಯದು, ಆತ ನನ್ನ ಮತ್ತೆ ಕರೆದ. ನಾನು ಹೋಗುತ್ತಿದ್ದೇನೆ. ನಾನು ಇನ್ನೆಂದೂ ಕಾಣಿಸಲಾರೆ. ನಿನಗೊಂದು ಪತ್ರವನ್ನ ಬರೆದಿದ್ದೇನೆ. ಓದಿಕೊ’
ನಾನು ಸ್ತಬ್ಧನಾದೆ. ಎಷ್ಟೊಂದು ನೋವಿನಲ್ಲಿದ್ದ ಪ್ರತೀಕ್ಷಾ ಸಹ ಆತ ಕರೆದಾಕ್ಷಣ ಆತನ ಅಪರಾಧವನ್ನೆಲ್ಲ ನುಂಗಿ ಸಹಜವಾಗಿಬಿಟ್ಟಳು ? ಇಷ್ಟು ದಿನ ಬೆಂದುಹೋಗಿದ್ದ ಆಕೆ ಹೇಗೆ ಈಗ ಹೊರಟುಬಿಟ್ಟಿದ್ದಾಳೆ ? ಆಕೆಯೇ ಹೇಳಿದೆ ಆಶಾವಾದಿತನ ? ಕಳೆದು ಹೋಗಿದ್ದರಲ್ಲಿದ್ದುದು ? ಎಲ್ಲವೂ ಉಢಾಫೇಯೆನಿಸುವ ಕ್ಷಣಗಳು. ಪ್ರತೀಕ್ಷಾಳಲ್ಲಿ ಹೊಸತನ ಸಾಧ್ಯವಾಗಿದೆ ಎಂದುಕೊಂಡದ್ದು ? ಜೀವನದಲ್ಲಿ ಬದಲಾಗುತ್ತಲೇ ಹೋಗುವ ಸತ್ಯಗಳು. ಆಕೆ ನನಗೆ ಪತ್ರವನ್ನ ಬರೆದಿದ್ದಾಳಂತಲ್ಲ, ಓದಬೇಕು…

***

ಪ್ರತೀಕ್ಷಾಳ ಪತ್ರಕ್ಕಾಗಿ ನಾನು ದಿನವೂ ಅಂಚೆಕಛೇರಿಗೆ ಹೋಗಿ ಬರುತ್ತಿದ್ದೆ, ಹದಿನೈದು ದಿನಗಳಾಯಿತು. ಪತ್ರದ ಸುದ್ದಿಯಿಲ್ಲ. ಆಕೆಗೆ ಕಾಲ್ ಮಾಡಿದರೆ ಸ್ವಿಚ್ಡ್ ಆಫ್. ನನ್ನ ಬದುಕಿನ ಈ ಸಂದರ್ಭದಲ್ಲಿ ನನ್ನೆಲ್ಲ ಸಂಕಟಗಳಿಗೆ ಆಕೆಯ ಪತ್ರದಲ್ಲಿ ಉತ್ತರವಿದೆ ಎನ್ನಿಸುತ್ತಿತ್ತು. ಸಾತತ್ಯದ ನಿರೀಕ್ಷೆ. ನನ್ನೊಳಗೆ ಆಗಿರುವ ಕಂದಕಗಳನ್ನ ತುಂಬುವ ನಿರೀಕ್ಷೆ. ಅಪೂರ್ವಳನ್ನ ಕಾಣದೇ ತುಂಬ ದಿನಗಳಾಗಿ ಹೋಗಿದೆ. ಕೇವಲ ಟಿಜಛಿಚಿಜಿಜಯಲ್ಲಿ ಕೂರುವುದು. ಪತ್ರಕ್ಕಾಗಿ ಅಂಚೆಕಛೇರಿಗೆ ಅಲೆಯುವುದು ಎರಡೇ ನನ್ನಿಂದ ಸಾಧ್ಯವಿದ್ದುದು. ನಾನು ಅಧೀರನಾಗಿದ್ದೆ. ನನ್ನ ಬರವಣಿಗೆ ಎಷ್ಟೇ ಆಶಾವಾದಿಯಾದರೂ ಮಾನವೀಯವಾದರೂ ನಾನು ಅಮಾನುಷನಾದೆ. ಕನ್ಸ್ಪೈರಸಿ. ಕಥೆ ಎಷ್ಟಾದರೂ ಕಥೆಯೇ. ನಾನಿನ್ನೆಂದೂ ಕಥಿಸಬಾರದು – ಎಂದುಕೊಂಡೆ.

ಅದಾದ ಎರಡು ದಿನಗಳ ನಂತರ ನ್ಯೂಸ್ ಪೇಪರಿನಲ್ಲಿ ಪ್ರೇಮಿಗಳ ಆತ್ಮಹತ್ಯೆ ಎಂಬ ತಲೆಬರಹದ ಅಡಿಯಲ್ಲಿ ಪ್ರತೀಕ್ಷಾ ಮತ್ತು ಆತ ?! ನಂಬಲಾಗಲಿಲ್ಲ. ಮತ್ತೆ ಮತ್ತೆ ಓದಿದೆ. ಎಲ್ಲ ಪೇಪರುಗಳನ್ನ ತಿರುವಿಹಾಕಿದೆ. ಏನಿದು ?! ನನಗೊಂದು ಅರ್ಥವಾಗಲಿಲ್ಲ. ಸಂಕಟವಾಯಿತು. ಅವಳಿಗೆ ಮೋಸ ಮಾಡಿದ್ದು ಆ ಗೆಳೆಯನೇ ಏನು ? ಮತ್ತೆ ಆತ ನನ್ನ ಮುಂದೆ ಹೇಳಿದ್ದು ? ಯಾವುದು ಸತ್ಯ ? ತಪ್ಪು ? ಇದು ಹೀಗೇಕೆ ? ನಾನು ನನ್ನೆಲ್ಲ ತತ್ಪರತೆಯನ್ನ ಕಳೆದುಕೊಂಡು ಶೂನ್ಯನಾದೆ. ತರ್ಕಕ್ಕೆ ಒಗ್ಗಲಾರದ ಬದುಕು. ನನಗೆ ಅಪೂರ್ವ ಬೇಕೆನಿಸಿದಳು. – ಮೇಸೇಜ್ ಮಾಡಿದೆ,

ಅಪೂರ್ವ ಐ ಲವ್ ಯು ವೆರಿ ಮಚ್, ನನ್ನನ್ನ ತೊರೆಯಬೇಡ. ನೀನೆ ನನ್ನ ಜಗತ್ತು.

ಆತ್ಮಹತ್ಯೆಯ ಮಾರನೇ ದಿನ ನನಗೆ ಪ್ರತೀಕ್ಷಾಳ ಪತ್ರ ತಲುಪಿತು. ಓದುವ ಮನಸ್ಸಾಗಲ್ಲಿಲ್ಲ. ತಳಮಳವಾಯಿತು. ಆರ್ತತೆ ಮತ್ತು ಉತ್ಕಟತನ. ಇದ್ದೂ ಇಲ್ಲದಂತೆ ಎನ್ನಿಸುವ ಕ್ಷಣಗಳು. ಸಾತತ್ಯದ ನಿರೀಕ್ಷೆಗೊಳಗೊಳ್ಳುವುದು, ಅದರಲ್ಲಿ ಎಲ್ಲವನ್ನೂ ಕಳೆದುಕೊಳ್ಳುವುದು. ಕಳೆದುಹೋದದ್ದರಲ್ಲಿ ಆಶಾವಾದವನ್ನ ಹುಡುಕುವುದು. ಬಿಡುಗಡೆಯಾಗಬೇಕು. ಸಿಕ್ಕಿಹಾಕಿಕೊಂಡದ್ದನ್ನ ಕಕ್ಕಬೇಕು. ಹೌದು ನಾನು ಇದೆಲ್ಲವನ್ನೂ ಮೀರಿ ನಿಲ್ಲಬೇಕು. ಕಥಿಸುವುದನ್ನೇ ನಿಲ್ಲಿಸಿಬಿಡಬೇಕು.
ಅವತ್ತು ಸಂಜೆ ನಾನು ನೆಸ್ ಕೆಫೆಯ ಹತ್ತಿರ ಕಾಫಿಯನ್ನ ಕುಡಿಯುತ್ತ ಕೂತಿದ್ದಾಗ,

ಏಯ್ ಸ್ಟುಪಿಡ್, ನಿನಗೆ ಈ ಕಾಫಿಯನ್ನ ಬಿಡೋದು ನನ್ನನ್ನು ಪ್ರೀತಿಸದೇ ಇರೋದು ಸಾಧ್ಯವೇ ಇಲ್ಲವೇನೋ ?

ಎನ್ನುತ್ತಾ ಕಾಫಿಯನ್ನ ಕಸಿದು ಕುಡಿದು ನನ್ನೆಡೆಗೆ ಕಣ್ಣು ಮಿಟುಕಿಸಿದಳು. ಅಪೂರ್ವ. ನನ್ನ ಅಪೂರ್ವ. ನನ್ನ ಭೂತ, ವರ್ತಮಾನ, ಭವಿಷ್ಯ. ನನ್ನ ಹತ್ತಿರದಲ್ಲೇ ಇರುವ ಪ್ರೀತಿ. ನಾನಾಕೆಯನ್ನ ತಬ್ಬಿದೆ ಕಂಗಳಲ್ಲಿ ನೀರು ತುಂಬಿಕೊಂಡು. ನನ್ನ ಕೈಲಿದ್ದ ಪ್ರತೀಕ್ಷಾಳ ಪತ್ರವನ್ನ ತೆರೆದು ನೋಡಿದೆ.
‘ಯದು, ನೀನೊಬ್ಬ ಉತ್ತಮ ಕಥೆಗಾರ. ನಿನ್ನ ಕಥೆಗಳಿಗಿಂತಲೂ ಉತ್ತಮ ವ್ಯಕ್ತಿ.’

ದಿಗ್ಗನೆಂದು ಸಿಡಿದು ಮನಸ್ಸಿನಲ್ಲಿ ಮೂಡುವ ಆತ್ಮ ಸಂತೃಪ್ತಿ. ಇದು ಹೀಗೇಕೆ ಎಂದುಕೊಳ್ಳುವುದು ಫ್ರೇಮ್ನ ಒಳಗಿನಿಂದ ಮಾತನಾಡಿದಂತೆ.

#####

‍ಲೇಖಕರು G

17 September, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading