ಸಣ್ಣಕಥೆ ’ಶ್ರೀ ಮುಖ್ಯಪ್ರಾಣ ಜನರಲ್ ಸ್ಟೋರ್ಸ’

೧೧೧೧

ಉಮೇಶ ದೇಸಾಯಿ

111
ಕೂತ ರಿಕ್ಷಾ ಪರಿಚಿತ ಓಣಿಯೊಳಗ ಹೊರಳುವ ಮುಂದ ಬಲಗಡೆ ಕಾಣಸೂದು ಆ ಅಂಗಡಿ. ಈಗಾಗಲೇ ಪರಿಮಳಾಚಾರು ಗಲ್ಲೆದ ಮೇಲೆ ಕೂತಾರ ಅಂದಕೊಂಡಿದ್ದೆ. ಆದರ ಅಂಗಡಿ ಬಾಗಿಲ ಮುಚ್ಚಿತ್ತು. ಅಂಗಡಿಗೆ ಹೊಂದಿಕೊಂಡ ಇರೂ ಮನಿಯ ಬಾಗಲಾನೂ ಅಧರ್ಾ ತಗದಿತ್ತು. ರಿಕ್ಷಾದಿಂದ ಇಳದು ತಮ್ಮ, ಅವನ ಹೆಂಡತಿ ಮತ್ತು ಅವ್ವ ನ ಜೋಡಿ ಮಾತಾಡುವ ಸಡಗರದಾಗ ಮುಚ್ಚಿದ ಅಂಗಡಿ ನೆನಪಿಗೆ ಬರಲಿಲ್ಲ. ಅವಲಕ್ಕಿ ಬಾಯಾಡಿಸುವಾಗೂ ನೆನಪಿಗೆ ಬರಲಿಲ್ಲದ್ದು ಮಧ್ಯಾಹ್ನ ಊಟಕ್ಕ ಬಂದ ಜೋಶಿಅವರು ಮಾತು ತಗದಾಗ ನೆನಪಾತು. ನನ್ನ ಅಪ್ಪನ ತಿಥಿ ಇವತ್ತು ಊರಿಂದ ಮುದ್ದಾಮ ಬಂದಿದ್ದು ಇದಕ್ಕ. ಹೋದವರ್ಷ ಜರ್ಮನಿಯೊಳಗ ಇದ್ದೆ ಹಿಂಗಾಗಿ ಬಂದಿರಲಿಲ್ಲ. ಹೆಂಡತಿ ಮಗಳು ಜೋಡಿ ಬರದ ಇದ್ದದ್ದು ಅವ್ವಗ ಅಸಮಾಧಾನ ತಂದಿತ್ತು ಖರೆ. ಜೋಶಿ ಅವರು ಪರಿಮಳಾಚಾರರು ಪಡೋ ಬವಣಿ ಬಗ್ಗೆ ಹೇಳತಿದ್ದರು. ಹೆಂಗ ಇದ್ದ ಆಚಾರರು ಹೆಂಗ ಆಗ್ಯಾರ ಅನ್ನುವ ಸಂಗತಿ ಜೋಶಿಯವರು ಹೇಳತಿದ್ರು. ಓಣಿಯೊಳಗ ವಜನ ಇದ್ದ ಮನಿಶಾ ಉರೋಣಗಿನೂ ಹಂಗ ಉರೀತಿದ್ದ ತಮ್ಮ ಮಾತು ನಡೀಬೇಕು ಅನ್ನುವ ಖಯಾಲಿ ಹಿಂಗ ಸಂಗತಿ ಅವು ಇವು ಮಾತಿನ್ಯಾಗ ಬಂದುಹೋದವು. ಅವ್ವನ ಮುಂದ ನನ್ನ ಮತ್ತು ತಮ್ಮನ ಗುಣಗಾನ ಮಾಡಿದರು ಇದ್ರ ಇಂಥಾ ಮಕ್ಕಳಿರಬೇಕು ಅನ್ನೋ ಶರಾನೂ ಹೇಳಿದರು. ಅವ್ವನೂ ಕಣ್ಣಾಗ ಬಂದ ನೀರು ಒರಸಿಕೊಂಡಳು..’ಎಲ್ಲಾನೂ ಹೋದ ಜನ್ಮದ ಕರ್ಮ’ ಅನ್ನುವ ಜನರಲ್ ಸಿದ್ದಾಂತ ಹೇಳಿದಳು. ನನ್ನ ತಮ್ಮ ನಾರಾಯಣ ಅವಾಗಿವಾಗ ಫೋನಿನೊಳಗ ಮಾತಾಡುವಾಗ ಪರಿಮಳಾಚಾರ ಸುದ್ದಿ ಹೇಳತಿದ್ದ.

ಹೆಂಗ ಆಚಾರರ ಮಗ ಬಂಡೆದ್ದ ಹೆಂಗ ಆಚಾರರಿಗೆ ಓಣಿಯೊಳಗ ಅದರೊಳಗ ದಾಯಾದಿ ಗುಂಡಪ್ಪನ ಮುಂದ ತಲಿ ತಗ್ಗಿಸುವಹಂಗಾತು ಅನ್ನೋ ಸುದ್ದಿ ಅಲ್ಲಿ ಇಲ್ಲಿ
ಉಪ್ಪುಕಾರಹಾಕಿ ಹೇಳತಿದ್ದ. ಆಚಾರ್ರಿಗೆ ಒಬ್ಬನ ಮಗ ಯಲಗುರೇಶ ಅಂತ ಹೆಸರು ಇಡಲಾಗಿತ್ತು ಅವಗ. ಅದೆಷ್ಟೋ ದಿನದ ಮ್ಯಾಲೆ ಹುಟ್ಟಿದ ಮಗ. ಆಚಾರ್ರು ಮತ್ತು ಅವ ಹೆಂಡತಿ ಸುಧಾತಾಯಿ ಒದ್ದಿ ಅರವಿಲೆ ನಡಗಿಕೋತ ಯಲಗೂರಪ್ಪಗ ಬೇಡಿಕಿ ಇಟ್ಟು ಬಲಗಡೆ ಪ್ರಸಾದ ಬಿದ್ದಾದ ಮ್ಯಾಲೆ ಹುಟ್ಟಿದವಗ ಯಲಗೂರೇಶನ ಹೆಸರು ಇಟ್ಟಿದ್ದರು. ಮುಂದ ಅವ ಸಾಲಿಗೆ ಹೊಂಟಾಗ ಎಲ್ಲಾರೂ ಅವಗ “ಯಲಿಗ್ಯಾ” ಅಂತ ಕರದು ಇವಗ ಅಪಮಾನ ಆಗಿ ಅದನ “ಯಶವಂತ” ಅಂತ ಬದಲಾಯಿಸಿಕೊಂಡಿದ್ದ.ಬಹಳ ಮಾಡಿ ಮುಂದಾಗೋ ವಿಪ್ಲವದ ಸೂಚನಾ ಅವಾಗ ಮಗ ಆಚಾರ್ರಿಗೆ ತೋರಿಸಿಕೊಟ್ಟಿದ್ದ. ಎಲಿ ಅಡಕಿ ಎರಡೆರಡು ಸಲ ಹಾಕ್ಕೋತ ಜೋಶಿ ಅವರು ಈ ಮಾತು ಹೇಳಿದಾಗ ಹೌದು ಅನಿಸಿತ್ತು ನಾವೆಲ್ಲ ಓಣಿ ಹುಡುಗರು ಪರಂಪರಾ ಪಾಲಿಸಿಕೊಂಡು ಹಿಂದಿನ ಬಾಜೂ ಇರುವ ಕನ್ನಡ 5 ನಂಬರ ಸಾಲಿಗೆ ಹೋಗತಿದ್ವಿ. ಸಾಲಿಗೆ ಹತ್ತೆ ಸೆಟಲಮೆಂಟ ಪ್ರದೇಶ ಅಲ್ಲಿ ತಯಾರಗುವ ಭಟ್ಟಿಶೆರೆ ವಾಸನಿ ಗಾಳಿ ಜೋಡಿ ಕ್ಲಾಸರೂಮಿನ್ಯಾಗೂ ತೇಲಿ ಬಂದು ಕಲಸುವ ಅಕ್ಕೋರಿಗೂ ಮಾಸ್ತರರಿಗೂ ಅಮಲ ಏರಸತಿತ್ತೋ ಏನೋ..! ತಮ್ಮ ಒಬ್ಬನೇ ಮಗ ಇಂಥಾ ಸಾಲಿಯೊಳಗ ಕಲಿಯೂದು ಪರಿಮಳಾಚಾರ್ರಿಗೆ ಬ್ಯಾಡಾಗಿತ್ತು.
ಮ್ಯಾಲಾಗಿ ಓಣಿಯೊಳಗ ತಮ್ಮ ವಜನು ಏನದ ಅನ್ನೋದು ಅವರಿಗೆ ತೋರಸಬೇಕಾಗಿತ್ತು.ದೇಶಪಾಂಡೆ ನಗರದಾಗ ಇರುವ ರೋಟರಿಸಾಲಿಗೆ ಯಶವಂತಗ ಹಾಕಿದ್ರು.ದಿನಾನೂ ರಿಕ್ಷಾದಾಗ ಅವ ಹೋಗತಿದ್ದ. ನಾವೆಲ್ಲ ಕಾಲು ಎಳಕೋತ ಹಿಂದಿನ ಓಣಿ ದಾಟತಿದ್ವಿ.ಸೂಟಿಆತು ಅಂದರ ನಾವೆಲ್ಲ ಸಾಲಿ ಮೈದಾನದಾಗ ಕ್ರಿಕೆಟ ಆಡಾವರು. ಯಶವಂತ ಜೋಡಿ ಆಗಾವ ಛಲೋನು ಆಡತಿದ್ದ.ಅಲ್ಲಿ ಬರೂ ಸೆಟಲಮೆಂಟ ಹುಡುಗುರ ಜೋಡಿ ಅವನ ಗೆಳೆತನ ಬೆಳೀತು.ಮುಂದಿನವರ್ಷ ಅವ ಹಟ ತೆಗೆದ ಪರಿಮಳಾಚಾರರ ಸಾಮ,ಭೇದ,ದಂಡ ಎಲ್ಲಾ ಮೀರಿ ನಿಂತ ಮಣದ ಆಚಾರರು ಐದನೇ ನಂಬರ ಸಾಲಿಗೆ ಅವನ ಹೆಸರು ಹಚ್ಚಬೇಕಾತು. ಯಶವಂತನ ಬದುಕಿನ್ಯಾಗ ಇದು ಹೊಸಾ ಅಧ್ಯಾಯ ಬರೀತು.ಬಹಳ ಸುಲಭವಾಗಿ ಅವ ಹೊಸಗೆಳೆಯರ ಜೋಡಿ ಹೊಂದಿಕೊಂಡ..ಅವರ ಜೋಡಿ ಸಿನೇಮ,ಉಣಕಲ ಕೆರಿ ಹಿಂಗೆಲ್ಲಾ ಅಡ್ಡಾಡಿದ. ಯಾರೋ ಅಂದರು ಮುಂಜಿವಿ ಮಾಡಿದರ ಒಳಿತು ಅಂತ ಆಚಾರರು ಅದನೂ ಮಾಡಿದರು. ಸಂಧ್ಯಾವಂದನಿ ನಿಯಮಿತವಾಗಿ ಅವ ಮಾಡತಿದ್ದ ಖರೆ ಹಂಗ ತನ್ನ ಗೆಳೆಯರು ಕೊಟ್ಟ ಸಿಗರೇಟು ಬೀಡಿನೂ ಸೇದತಿದ್ದ. ಮೆಟ್ರಿಕ ಪರೀಕ್ಷಾದಾಗ ಛಲೋ ನಂಬರಿಲೆ ಪಾಸಾಗಿದ್ದ ಅವ ಆಚಾರರ ಅಪೇಕ್ಷೆ ಮೀರಿ.
ಓಣಿಗೆ ಭೂಷಣ ಆಗಿ ರಾಯರಮಠ ಇತ್ತು.ಹೊಸಾ ಕಟ್ಟಡ ಆಗಿತ್ತು ಬ್ಯಾರೆ. 25000 ದಾನಮಾಡಿದವರ ಹೆಸರು ಕೆತ್ತಿದ ಪಟ್ಟಿಯೊಳಗ ಪರಿಮಳಾಚಾರರ ಹೆಸರು ಇತ್ತು.ಆಚಾರರ ದೂರದ ಸಂಬಂಧ ಆಗುವ ಗುಂಡಪ್ಪಗ ಹಿಂದ ಹಾಕುವ ಮೂಲ ಉದ್ದೇಶ ಪರಿಮಳಾಚಾರರಿಗೆ ಇತ್ತು. ಮೇಲಾಗಿ ಮಠಕ್ಕ ಕೊಟ್ಟ ಪುಣ್ಯಬ್ಯಾರೆ. ಪ್ರತಿಷ್ಠಾಪನಾಕ ಬಂದ ಸ್ವಾಮಿಗೋಳು ಇವರಿಗೆ ಶಾಲಹೊದಿಸಿ ಫಲತಾಂಬೂಲ ಕೊಡುವಾಗ ಆಚಾರರ ಮುಖದಾಗ ಧನ್ಯತೆಯ ಭಾವ ಇತ್ತು. ಮಠದ ಕಮೀಟಿಯೊಳಗ ಆಚಾರರ ಮಾತು ನಡೀತಿತ್ತು. ನಾವು ಓಣಿಹುಡುಗರಿಗೆ ಗುರುವಾರ ಅಂದರ ಗಡಿಬಿಡಿ. ರಾಯರ ದರ್ಶನಕ್ಕ ಬ್ಯಾರೆಬ್ಯಾರೆ ಮಂದಿ ಬರತಿದ್ದರು. ತೀರ್ಥ, ಮಂತ್ರಾಕ್ಷತಿ ಕೊಡೂದು ಅದು ಇದು ಹಿಂಗ ಸಂಭ್ರಮ ಇರತಿತ್ತು.ಆಚಾರರ “ಶ್ರೀಮುಖ್ಯಪ್ರಾಣ ಜನರಲ್ ಸ್ಟೋರ್ಸ” ಅಂತೂ ಕಳಿಗಟ್ಟತಿತ್ತು.
ಸುಧಾತಾಯಿ ಮನೆಯಲ್ಲಿ ಹೊಸೆದ ಬತ್ತಿ ಹಿಡಕೊಂಡು ಕಾಯಿ, ರಾಯರ ಫೋಟೋಇರುವ ಲಾಕೆಟು, ಕಾಶಿದಾರ,ಗೋಪಿಚಂದನದ ಉಂಡೆಗಳು ಹಿಂಗ ಅವರ ಅಂಗಡಿಯೊಳಗ ಸಿಗುವ ಸಾಮಾನುಗಳಿಗೆ ಜನ ಮರಳಾಗತಿದ್ದರು. ಸಂಜಿನ್ಯಾಗ ಐದುಗಂಟೆಯಿಂದ ಎಂಟುವರೆವರೆಗೂ ಗದ್ದಲ ಇರತಿತ್ತು.ಮೂರು ಮಂದಿಗೂ ಕೈತುಂಬ ಕೆಲಸ ಗಿರಾಕಿಗಳನ್ನು ಸಂಭಾಳಿಸೋ ಜವಾಬದಾರಿ. ಆರಾಧನಿ ವ್ಯಾಳ್ಯಾದಾಗ ಇದು ಇನ್ನೂ ಜೋರಾಗತಿತ್ತು. ಸುಧಾತಾಯಿ ತಮ್ಮ ತಮ್ಮಗ ಕರಿಸಿಕೋತಿದ್ದರು ಸಹಾಯಕ್ಕ ಅಂತ. ಓಣಿಮಂದಿ ಎಲ್ಲಾರೂ ತಮ್ಮ ಉತ್ಕರ್ಷದ ಬಗ್ಗೆ ಅಸೂಯೆ ಪಡತಾರ ಇದು ಆಚಾರರ ಅನಿಸಿಕೆ ಹಂಗ ನೋಡಿದರ ಅದು ಖರೇನೂ ಇತ್ತು. ಗುಂಡಪ್ಪ ಹೊತ್ತಿ ಉರೀತಿದ್ದ. ಓಣಿಯೊಳಗ ಬ್ಯಾರೆ ಯಾವ ಅಂಗಡಿನೂ ಇಲ್ಲ. ಬರೇ ಅಂಥಾ ಸಾಮಾನಲ್ಲ ಅವರ ಅಂಗಡಿಯೊಳಗ ಲಿಂಬಿಹುಳಿ, ಅಲಿಪಾಕು,ಚಿಕ್ಕಿ ಹಿಂಗ ನಮಗ ಬೇಕಾಗಿದ್ದು ಹಂಗ ಮನಿಗೆ ತಾಬಡತೋಬ ಬೇಕಾದ ಚಹಾಪುಡಿ, ಬೆಲ್ಲ ಸಕ್ಕರಿ ಇಂತಹವೂ ಸಿಗತಿದ್ದವು. ನಾ ಪಿಯುಸಿ ಮುಗಸಿದ್ದೆ ಅಪ್ಪ ಅವರಿವರ ಕಾಲುಹಿಡದು ಕಬ್ಬೂರಸಂಸ್ಥಾದಾಗ ಡಿಪ್ಲೊಮಾ ಸೀಟು ಕೊಡಿಸಿದ್ದ. ದಿನಾ ಧಾರವಾಡಕ ಹೋಗಿ ಬರೋದು, ಅಭ್ಯಾಸ ಅದು ಇದು ಅಂತ ನಾ ಮುಳಗಿಹೋದೆ. ಓಣಿಯೊಳಗ ಆಚಾರರ ಏಳ್ಗೆಯಬಗ್ಗೆ ಅಸೂಯೆ ಬಹಳ ಇದ್ದಿದ್ದು ಗುಂಡಪ್ಪಗ. ಅವನ ಮನಿ ಮುಂದಿನ ಜಾಗದಾಗ ಅವನೂ ಒಂದು ಅಂಗಡಿ ಇಟ್ಟವ ಅಗದಿ ಅಚಾರ ಅಂಗಡಿಯೊಳಗ ಸಿಗುವ ವಸ್ತುಗಳನ ಹುಬೇಹುಬ ಮಾರಾಟಕ್ಕಿಟ್ಟ. ಇಷ್ಟ ಅಲ್ಲದ ಎಂಟಣಿ, ರೂಪಾಯಿ ಸೋವಿನೂ ಮಾರಲಿಕ್ಕೆ ಸುರು ಮಾಡಿದ. ಗಿರಾಕಿಗಳು ಒಡದರು ಹಂಗ ಎಂಟಣಿ ಸೋವಿ ಅಂತ ಗುಂಡಪ್ಪನ ಕಡೆ ಹೊರಳಿದರು. ಪಿಯುಸಿ ಫೇಲಾಗಿದ್ದ ಯಶವಂತಗ ಅಂಗಡಿ ಆದಾಯದಾಗ ಖೋತಾ ಆಗಿದ್ದು ಅರಿವಿಗೆ ಬಂದಿತ್ತು.ಅಪ್ಪನ ಜೋಡಿ ಹಾಕ್ಯಾಡಿದ ಹೊಸಾ ಪ್ರಯೋಗಕ್ಕ ಸುರು ಮಾಡಿದ.
ಆಚಾರ ಅಂಗಡಿಯೊಳಗ ಈಗೀಗ ಹೆಂಗಸೂರ ಗರದಿ ಆಗೂದು ಓಣಿಜನರ ಗಮನಕ್ಕ ಬಂತು. ಬಳಿ, ಟಿಕಳಿ, ಸರಾ, ಕ್ಲಿಪ್ಪು, ಹ್ಯಾಂಡಬ್ಯಾಗು ಹಿಂಗ ಅವರ ಅವಡಿಸಾಮನು ಇರತಿದ್ದವು. ಗುರುವಾರ ದರ್ಶನಾ ಮಾಡಿಹೋಗುವಾಗ ಅಂಗಡಿಗೆ ಭೇಟಿಕೊಡುವದು ತಮ್ಮ ಹಕ್ಕು ಅಂತ ತಿಳದಿದ್ದರು ಅವರು. ಬರಬರತ ಆಚಾರರ ಅಂಗಡಿಯೊಳಗಿಂದ ಗೋಪಿಚಂದನ, ಕಾಶಿದಾರ ಎಲ್ಲಾ ಮಾಯ ಆಗಿ ಬಳಿ, ಟೇಪು,ರಿಬ್ಬನ್ನು ಇವ ಕಾಣಸತಿದ್ದವು. ಅವಾಗ ಗಲ್ಲೆದಾಗ ಕೂಡತಿದ್ದಾವ ಯಶವಂತ.ಅದ ಇನ್ನೂ ಹರೆಯ ಹೊಸ ಹೊಸ ಕನಸು ಬಿತ್ತತಿತ್ತು ಅವನೊಳಗ. ಆ ಅಂಗಡಿಯೊಳಗ ಆದ ಶೋಭಾ ದಲಬಂಜನಳ ಪರಿಚಯ ಅವನ ಹಾಗೂ ಆಚಾರರ ಜೀವನದಾಗೂ ಹೊಸಾ ಬದಲಾವಣಿ ತಂದಿತ್ತು.

***

222

ಒಳಗ ಬರೇ ಮಿಣಕದೀಪ ಇತ್ತು. ಬಾಗಿಲ ಬಾರಿಸಿದೆ ಯಾವ ಜವಾಬೂ ಬರಲಿಲ್ಲ. ದೂಡಿ ಒಳಗ ಹೋದೆ. ಮೂಲಿಯೊಳಗಿನ ಕಾಟ್ ಮೇಲೆ ಸುಧಾತಾಯಿ
ಮಲಗಿದ್ದರು. ನರಳತಿದ್ದರು. ನನ್ನ ಗುರುತು ಹಿಡದರು. ಹತ್ತರ ಕರದರು. ಆಚಾರರು ಅಡಿಗಿಮನಿಯೊಳಗ ಕುಕ್ಕರ ಇಡುವ ಬೇತಿನಲ್ಲಿ ಇದ್ದರು. ಸುಧಾತಾಯಿ ಹಾಸಿಗಿ ಹಿಡದ ಮ್ಯಾಲೆ ಅವರ ಅಡಿಗಿಮನಿ ಜವಾಬ್ದಾರಿ ಹೊತ್ತಿದ್ದರು. ನನ್ನ ಕುಶಲ ಎಲ್ಲಾ ವಿಚಾರಿಸಿ ಎದುರು ಬಂದುಕೂತರು. ಮೊದಲಿಂದಲೂ ಅವರಿಗೆ ನೋಡುತ್ತ ಬಂದಿದ್ದೆ. ದೇಹ ಬಳಲಿತ್ತು.

ಹಣಿಮ್ಯಾಲೆ ಢಾಳಾಗಿ ಮಿಂಚುವ ಅಕ್ಷಂತಿ..ಕೂದಲೆಲ್ಲ ಉದುರಿ ಹೊಳಿಯುವ ನೆತ್ತಿ. ಮುಖ್ಯವಾಗಿ ಗಮನ ಸೆಳೆದಿದ್ದು ಹೆಂಡತಿಯ ಬಗೆಗಿನ ಅವರ ಅಕರಾಸ್ತೆ.ಹಿಂದೆಂದೂ ಅವರು ಹಿಂಗ ಇದ್ದಿದ್ದು ನೆನಪಿಲ್ಲ ಅದೆಷ್ಟೋಸಲ ಸುಧಾತಾಯಿ ನಮ್ಮನಿಗೆ ಬಂದು ಆಚಾರರ ತಿರಸಟ್ಟತನದ ಬಗ್ಗೆ ಹೇಳಿಕೊಂಡು ಅಳತಿದ್ದರು. ಅಂತಹಾ ಗಡಸು ಆಚಾರರು ಹಿಂಗ ಮೆದುವಾಗಿದ್ದುದು ಸೋಜಿಗ.

“ಏನು ಬಂದಿದ್ದು ಅದೂ ಬಹಳ ದಿನದ ಮ್ಯಾಲೆ ಬಂದಂಗದ..” ಅವರ ಪ್ರಶ್ನೆ ಸಹಜ ಇತ್ತು. ನಾನು ತಂದೆಯ ವೈದಿಕ ಇದ್ದ ಬಗ್ಗೆ ಹೇಳಿದೆ.ಹಂಗ ಯಶವಂತನ ವಿಪ್ಲವದ ಬಗ್ಗೆ ತಮ್ಮ ನಾರಾಯಣ ಹೇಳಿದ್ದನ್ನು ಹೇಳಿದೆ.
“ಸ್ವಲ್ಪ ನಾನ ಅವಗ ಸಲಿಗಿ ಕೊಟ್ಟೆ ಅಂತ ಅನಸತದ. ಒಬ್ಬನ ಮಗ ವಿದ್ಯಾವಂತ ಆಗಲಿ ಅಂತ ಆಶಾಇತ್ತು. ಅವಗ ವ್ಯಾಪಾರದ ಹುಚ್ಚು. ಆ ಬಳಿ,ಟೇಪು,ಟಿಕಳಿ ಮಾರಲಿಕ್ಕೆ ತಗದ. ನನಗ ಹಿಂಜರಿತ ಇತ್ತು. ಆದರ ಅದರ ವ್ಯಾಪಾರದಾಗ ಆದ ಫಾಯದಾ ನನ್ನ ಬಾಯಿ ಕಟ್ಟಿಹಾಕತು. ಓಣಿಜನಾ ಉರೋಣಿಗಿ ಉರದರು.ಹೊಟ್ಟಿಕಿಚ್ಚು ಪಟ್ಟರು. ಒಳಗೊಳಗ ಖುಶಿ ಆಗತಿತ್ತು. ಮಗಾ ಹಾದಿಗೆ ಹತ್ತಿದ ಅಂದಕೊಂಡೆ. ಪೂತರ್ಿ ಜವಾಬ್ದಾರಿ ಹೊರಿಸಿದೆ ಅವಗ..ಆದರ ಅವಾ ಹಿಂಗ ಮಾಡಬಾರದಾಗಿತ್ತು. ಅಲ್ಲೋ ನಮ್ಮಂದಿಯೊಳಗ ಯಾರನರ ಮಾಡಕೊಂಡಿದ್ದರ ನಂಗ ಬೇಜಾರಾಗತಿರಲಿಲ್ಲ…” ಪರಿಮಳಾಚಾರರು ನಿಟ್ಟುಸಿರು ಹಾಕಿದರು. ಅವರ ಮಾತಿನಿಂದ ಯಶವಂತ ಸಾವಜಿ ಹುಡುಗಿಗೆ ಲಗ್ನ ಮಾಡಿಕೊಂಡ ಬಗ್ಗೆ ಅಸಮಾಧಾನ ಇತ್ತು ನಾ ನಾಜೂಕಿನಿಂದ ಮಾತಾಡಿದೆ. ಎಲ್ಲೂ ಯಶವಂತ ಮಾಡಿದ್ದು ಸರಿ ಅಂತ ಹೇಳದನ ಅವನ ತರಫೆ ವಾದ ಮಂಡಿಸಿದೆ.
“ನೋಡಪಾ ನೀ ಹೊರಗಿನಾವ ಓಣಿಯೊಳಗಿನ ಭಾನಗಡಿ ಗೊತ್ತಿಲ್ಲದಾವ. ಆ ಗುಂಡಪ್ಪ ನನ್ನ ಮಗನ ತಲಿ ಕೆಡಸಿದ.ಅಥವಾ ಅವ ಏನಾದರೂ ಮಾಟಮಂತ್ರ ಮಾಡಿಸಿದರೂ ಮಾಡಿಸಿರಬಹುದು..ಯಾಕಂದ್ರ ಇದ್ದಕ್ಕಿದ್ದಂಗ ಇವಗ ಅಂಗಡಿಯೊಳಗ ಕೋಳಿತತ್ತಿ ಇಟ್ಟು ಮಾರುವ ಬುದ್ದಿ ಬಂತಹೆಂಗ..? ಗೋಪಿಚಂದನ ಮಾರತಿದ್ದ ಅಂಗಡಿಯೊಳಗ ಕಪ್ಪಕಡಿ ಮರುವುದು ಅಂದರೇನೋ..” ಅವರ ದನಿಯಲ್ಲಿ ವ್ಯಗ್ರತೆಯಿತ್ತು. ಅದು ಸಹಜವೂ ಇತ್ತು. ಆದರ ಅವರ ಮಗನ ಲೀಲೆಗಳ ಬಗ್ಗೆ ಅವರಿಗೆ ಪೂತರ್ಿಗೊತ್ತಿರಲಿಲ್ಲ ಅವ ಕೋಳಿಮಾಂಸ ತಿನ್ನುವ ವಿಚಾರ ಆಚಾರರಿಗೆ ಗೊತ್ತಿರಲಿಕ್ಕಿಲ್ಲ.ಅಮಾಯಕ ಅಂತ ಆಚಾರ್ರು ತಿಳದಾರ ಹಂಗ ನೋಡಿದರ ಯಾವುದೇ ತಂದೆ ತಳೆಯುವ ಸಾಮನ್ಯ ಧೋರಣೆಯೇ ಇದು.

“ಆದರ ಕಾಕಾ ಅದು ವ್ಯಾಪಾರದ ಸಂಗತಿ.ಅದು ಒಂದು ಜಿನಸು ಅಷ್ಟ..ಅದರಿಂದ ಅಂಗಡಿ ಛಲೋ ನಡೀತಿತ್ತಲ್ಲ…”

“ಇದ ನೋಡು ನಾ ಬ್ಯಾಡ ಅಂದಿದ್ದು. ಬರೇ ವ್ಯಾಪಾರ ನೋಡಿದರ ಹೆಂಗೋ ರೀತಿ ರಿವಾಜ ಅವನೋ ಅವನ್ನು ಪಾಲಸಬೇಕಾಗತದ..ಓಣಿಯೊಳಗ ನಂದು ಹೆಸರಿತ್ತು..ಮಂತ್ರಾಲಯದಾಗೂ ಪರಿಮಳಾಚಾರ ಅಂದರ ಗುರುತು ಹಿಡದು ಖೋಲಿ ಕೊಡತಿದ್ದರು. ಇವನ ಸಲುವಾಗಿ ಕಮೀಟಿಯಿಂದ ನನ್ನ ತಗದರು. ಇನ್ನೇನು ಮಠದ ತೀರ್ಥಒಂದು ಬಂದ ಆಗೂದು ಉಳದದ..ಇವಾ ಎಲ್ಲಾ ಹಾಳಮಾಡಿದ..” ಅವರು ವ್ಯಗ್ರರಾಗಿದ್ದರು. ನಾ ಏನ ಸಮಾಧಾನ ಹೇಳಿದರೂ ಉಪಯೋಗವಿಲ್ಲ ಅನಸತು. ಅಷ್ಟರವರೆಗೆ ಸುಮ್ಮನಿದ್ದ ಸುಧಾತಾಯಿ ಮಾತಾಡಿದರು.

” ಆ ಹುಡುಗಿ ಎಲ್ಲಾ ಹಾಳು ಮಾಡಿದಳು. ಜಾತಿನಕೋತಿನ ಗಂಟುಬಿತ್ತು. ಸಂಭಾವಿತ ಇವ ಮೋಸಾಹೋದ. ಕೆಂಪುಬಣ್ಣ ನೋಡಿ ಮರುಳಾದ.ನೀ ಒಮ್ಮೆ ಅವಗ ಭೇಟಿಯಾಗು ಏನರೆ ವಿಚಾರ ಅದ ಅವನೊಳಗ ತಿಳಕೋ ಒಂದುವ್ಯಾಳ್ಯಾ ಅವಗ ಪಶ್ಚಾತ್ತಾಪ ಆಗಿ ಅಕಿನ್ನ ಬಿಡತೇನಿ ಅಂದರ ಅವಗ ತಪ್ತಮುದ್ರ ಹಾಕಿಸಿ ಶುದ್ಧ ಮಾಡಬಹುದು..” ಅವರಿಗೆ ಮಾತಾಡುತ್ತಿದ್ದಂತೆ ತೇಕು ಹತ್ತಿತು.

ಆಚಾರರು ಔಷಧ ಕುಡಿಸಿ ಬೆನ್ನಮೇಲೆ ನೀವತೊಡಗಿದರು. ಮುಪ್ಪಿನಕಾಲದಾಗ ಹಿಂಗ ಹಡದ ಅಪ್ಪ ಅಮ್ಮನ ದೂರಮಾಡಿಕೊಂಡ ಯಶವಂತನ ಮ್ಯಾಲೆ ಬೇಸರಾತು. ಇವರು ಹೇಳುವ ಹಾಗೆ ನಾ ಅವನ ಜೊತೆ ಮಾತಾಡುವುದೇ ತಿಳಿಹೇಳಿದರೆ ಏನಾದರೂ ಉಪಯೋಗ ಆಗಬಹುದೇ ಇವೇ ಪ್ರಶ್ನೆ ನಾ ತಮ್ಮನ ಮುಂದೆಯೂ ಇಟ್ಟೆ. ಅಚ ಅಂದ ಮಾತು ನೇರವಾಗಿತ್ತು.
“ಹೌದಪಾ ನೀ ಹೋಗಿ ಹೇಳಿದಿ ಅವಗ ಒಂದೆರಡು ಬೈದಿಅಂತನ ಇಟಕೋ ಆದರ ಅದರಿಂದ ಆಗೂ ಫಾಯದಾ ಏನು ಅವಾ ಏನು ಅಕಿನ ಬಿಟ್ಟು ಮುದುಕರ ಸೇವಾ ಮಾಡಲಿಕ್ಕೆ ಬರತಾನೇನು.ಅವಗ ಸಲಿಗಿ ಕೊಟ್ಟುಹಾಳುಮಾಡಿದವರ ಈ ಆಚಾರರು. ಅಚ್ಚಾಮಾಡಬೇಕು ನಿಜ ಆದರ ಅತಿಆದರ ಹಿಂಗ ಆಗೂದು..” ಯಾಕೋ ಅವನಿಂದ ಹೊಟ್ಟಿಕಿಚ್ಚಿನ ಹೊಗಿ ಬಂದಂಗ ಅನಿಸ್ತು. ಅವ ಮತ್ತು ಯಶವಂತ ವಾರಿಗಿಯವರು. ಸಣ್ಣಾವಿದ್ದಾಗ ಯಶವಂತ ಇವತ್ತು ಹಿಂಗ ಮಾಡದ..ಆ ಹುಡಿಗಿಗೆ ಕಣ್ಣಹೊಡದ..ಅಂತೆಲ್ಲ ಮನಿಯೊಳಗ ಸುದ್ದಿ ಹಬ್ಬಸತಿದ್ದ. ಇವ ಹೇಳುವುದರೊಳಗ ಅತಿ ಏನ ಇರಲಿಲ್ಲ. ಆಚಾರರಿಗೆ ಮೊದಲಿಂದಲೂ ಹ್ಯಾಂವ ಇತ್ತು..ಮಗ ಚಮಕಾಸತಾನ ಅನಕೊಂಡಿದ್ರು ಆಡಿನೂ ತೋರಸಿದ್ರು ನಾಕು ಮಂದಿಮುಂದ. ಆದರ ಈಗ ಎಲ್ಲಾ ಉಲಟಾ ಆಗೇದ. ನಾರಾಯಣ ಯಶವಂತ ಈಗಿರುವ ಕಮರಿಪೇಟಿ ಓಣಿ ಹೆಸರು ಹೇಳಿದ.

***

ಕಮರಿಪೇಟದ ವಾಸನಿ ಬಡಿಯೂಆಂಗಡಿಗಳ ದಾಟುತ್ತ ನಾರಾಯಣ ಹೇಳಿದ ಓಣಿಗೆ ಬಂದೆ. ಅವ ಹೇಳಿದ್ದ ಸಣ್ಣ ಕಿರಾಣಿ ಅಂಗಡಿಮುಂದ ನಿಂತೆ ಯಾರೋ ಹೆಂಗಸರು ಇದ್ದರು ನಾ ಯಶವಂತನ ಬಗ್ಗೆ ಕೇಳಿದೆ.ಅವ ಹೊರಗ ಹೋಗಿದ್ದು ಇನ್ನೇನು ಬರಬಹುದು ಅನ್ನೋ ಉತ್ತರ ಸಿಕ್ತು. ನೋಡುತ್ತಿದ್ದಂತೆಯೇ ಒಂದು ಆಟೋ ನಿಂತು ಅದರಿಂದ ಕಿರಾಣಿಸಾಮಾನು ಇಳಸಿಕೊಳ್ಳುತ್ತಿರುವ ಯಶವಂತ ಕಂಡ. ನನ್ನ ನೋಡಿಗುರುತು ಹಿಡದು ಅಪಿಕೊಂಡ. ಸಾಮಾನು ಎಲ್ಲಾ ಇಟ್ಟು ಬಂದ. ಮನಿಒಳಗ ಕರದ. ನಾ ಹೋದೆ.

ಹೆಂಡತಿಯ ಕರದು ಪರಿಚಯ ಮಾಡಿಸಿದ. ನೋಡಲಿಕ್ಕೆ ಛಂದನೂ ಇದ್ದಳು. ಸೊಗಸಾಗಿ ಕನ್ನಡ ಮಾತಾಡತಿದ್ದಳು. ಚಹಾ ಚೂಡ ತಂದಿಟ್ಟು ಉಪಚಾರ ಹೇಳಿದಳು. ಸ್ವಲ್ಪಹೊತ್ತಿನ ಮ್ಯಾಲೆ ಯಶವಂತ ಹೊರಗಡೆ ಹೋಗೋಣ ಎಂದು ಸೂಚಿಸಿದ. ನಾ ಎದ್ದು ನಿಂತೆ.

ಅವ ಸ್ವಲ್ಲವೂ ಬದಲಾಗಿರಲಿಲ್ಲ.ಮೊದಲಿಂದಲೂ ಮೈಕೈ ತುಂಬಿಕೊಂಡು ಇದ್ದಾವ.ಈಗೂ ಹಂಗ ಇದ್ದ. ಸಾವಜಿ ಅಳಿಯಾ ಬ್ಯಾರೆ ಈಗ.ಕೇಳಬೇಕೇನು ಬಣ್ಣನೂ ತಿಳಿಯಾಗಿತ್ತು.
” ಮನಿಗೆ ಹೋಗಿದ್ದಿ ಏನು ಅವ್ವಂದ ಕಾಳಜಿ ನನಗ..” ಆ ಹೊಟೆಲಿನ್ಯಾಗ ಗರದಿ ಇರಲಿಲ್ಲ. ಮೂಲಿಯೊಳಗ ಕೂತು ಎರಡು ಚಹಾ ತರಲಿಕ್ಕೆ ಹೇಳಿ ಕೂತಾಗ ಅವ ನೇರವಾಗಿ ವಿಷಯ ತಗದಿದ್ದ.
” ಹುಂ ಕಾಕು ಬಹಳ ಇಳದಾರ ಕಾಕಾ ಒಳಗಿಂದೊಳಗ ಕುಗ್ಗಿಹೋಗ್ಯಾರ.ನೀ ಅವರಿಗೆ ಈ ವಯಸ್ಸಿನ್ಯಾಗ ಹಿಂಗ ಮಾಡಬಾರದಿತ್ತು..” ನೇರವಾಗಿ ಹೇಳಿದೆ. ಮಾಣಿ ಚಹಾ ತಂದ.
ಎರಡು ಸಿಗರೇಟು ತಗದು ನಂಗೊಂದುಕೊಟ್ಟು ತಾನೊಂದು ಹೊತ್ತಿಸಿದ. ನಾ ಅವರ ಮನಿಗೆ ಹೋಗಿದ್ದು ಅಲ್ಲಿ ಆದ ಮಾತುಕತಿ ಎಲ್ಲಾ ಹೇಳಿದೆ. ಸಿಗರೇಟಿಂದ ಗುಂಗುರಾಗಿ ಹೊಗಿ ಬಿಟಕೋತ ಅವ ಕೇಳಿಸಿಕೊಳತಿದ್ದ. ನಂದು ಹೇಳೂದು ಮುಗದಿತ್ತು..ನಾನೂ ಸಿಗರೇಟ ಹೊತ್ತಿಸಿದೆ.
” ಈಗ ನೀನ ಹೇಳು ನಾ ಏನ ಮಾಡಬೇಕು ಮತ್ತು ಯಾಕ ಹಂಗ ಮಾಡಬೇಕು..” ಅವ ಪಕ್ಕಾ ವಕೀಲಿಪಾಯಿಂಟ್ ಹಾಕಿದ್ದ. ನನಗ ಖರೆನ ಏನು ಹೇಳಬೇಕು ತಿಳೀಲಿಲ್ಲ. ಸುಮ್ಮನಾದೆ.
333
” ಹಿಂಗನೋ ಸ್ವತಃ ಅನುಭವಿಸಿದವ ನಾನು ನಂಗ ಆದ ಲುಕ್ಸಾನು ನನಗ ಗೊತ್ತದ..” ಅವನ ಸಿಗರೇಟು ಮಗದಿತ್ತು. ಎದ್ದು ಇನ್ನೊಂದೆರಡು ತಂದ.
” ನಮ್ಮಪ್ಪ ಹ್ಯಾವಕ ಬಿದ್ದ ಆ ಗುಂಡಪ್ಪನ ಜೋಡಿ. ಅವ ಗುಂಡಪ್ಪ ಪಕ್ಕಾ ಹಲಕಟ್ ಮನಿಶಾ. ನಾ ಶೋಭಾಜೋಡಿ ಲಗ್ನ ಆಗೂದನ್ನ ದೊಡ್ಡದು ಮಾಡಿಬಿಟ್ಟ. ಏನು ಬ್ರಾಹ್ಮಣರು ಜಾತಿಹೊರಗ ಮದವೀನ ಆಗೂದಿಲ್ಲೇನು? ಜನಿವಾರ ಹಾಕೊಂಡು ಎಷ್ಟು ಹೊಲಸುಕೆಕಲಸ ಮಾಡೂದಿಲ್ಲ?ಈಗಿನ ಸ್ವಾಮಿಗೋಳಿಗೆ ಇಲ್ಲದ್ದನ್ನ ಹೇಳಿದ. ಅವರು ಹುಬ್ಬಳ್ಳಿಗೆ ಬಂದಾಗ ಅಪ್ಪಗ ಎದುರು ಮಾಡಿ ತಾ ಮರಿಯೊಳಗ ನಿಂತ.ಸ್ವಾಮಿಆದಾವರು ಧಮಕಿ ಹಾಕಿದರು ನಿಮ್ಮ ಮಗ ಹಿಂಗ ಮಾಡಿದರ ನಿಮಗ ಮಠದ ತೀರ್ಥ ಸಿಗೂದ ತ್ರಾಸು ಆಗತದ ಅಂತ. ಅಪ್ಪಗ ಬಿಪಿ ಏರತು ಅಂದು ರಾತ್ರಿ ನಂದು ಅವಂದು ಜೋರು ಮಾತಾದವು. ಅವ ಬ್ಯಾಡ ಅಂತ ಚಾಲವರದ. ನೀನ ಹೇಳು ಈಗ ಒಬ್ಬಾಕಿ ಮ್ಯಾಲ ಮನಸ ಬಂದದ..ಅಕಿನ್ನ ಬಿಟ್ಟುಇರಲಾದಷ್ಟು ಹಾಲತ್ ಅದ ಅಂತ ತಿಳಿ. ಹಿಂಗಿರುವಾಗ ಈ ಮಠ,ಜಾತಿ,ಸ್ವಾಮಿಗೋಳು ಕೊಢುವ ತೀರ್ಥ ಎಲ್ಲಾ ಎಲ್ಲಿ ನಿಲ್ಲತಾವ ನೀನ ಹೇಳು..” ನಾ ಸುಮ್ಮನಿದ್ದೆ. ಯಾಕಂದರ ನಾ ಸ್ವತಃ ಎಂದೂ ಯಾವ ಹುಡುಗಿಗೂ ಕಣ್ಣೆತ್ತಿ ನೋಡದಾವ ಅಲ್ಲ ಮದಿವಿ ಮೊದಲು.
“ನಾ ಶೋಭಾಗ ಹೇಳಿದೆ ಮುಂದ ಏನಾಗಬಹುದು ಅನ್ನುವ ಕಲ್ಪನಾ ಅಕಿಗೂ ಇತ್ತು ಅವರ ಮನಿಯವರಿಗೆ ಉಡುಪಿಸ್ವಾಮಿಗೋಳು ಪರಿಚಯ..ಅವರ ಕಡೆನೂ ಅಪ್ಪಗ  ಹೇಳಿಸಿದಾತು..ಅಪ್ಪ ಒಪ್ಪಲಿಲ್ಲ. ಮದಿವಿ ಮಾಡಿಕೊಂಡು ಆಶೀವರ್ಾದ ಕೇಳಲಿಕ್ಕೆ ಮನಿಬಾಗಲವರೆಗೆ ಹೋದಾವಗ ಒಳಗ ಕರೀಲಿಲ್ಲ..ಅವ್ವ ಒಳಗಿನಿಂದನ ಮುಸುಮುಸು ಅಳೂದು ಕೇಳಸತಿತ್ತು. ಅಪ್ಪ ಅವನ ಹ್ಯಾಂವ, ಮಾನ ಮಯರ್ಾದಿ ಎಲ್ಲಾನೂ ಅಡ್ಡ ನಿಂತಿದ್ದವು. ಅಸಹಾಯಕನಾಗಿ ಅಲ್ಲಿಂದ ತಿರುಗಿಬಂದೆ. ನಾ ವಾಪಸ ಹೋಗಬೇಕಂತೀನಿ ಅಕಿಗೆ ಅಸ್ತಮಾ ಅದ ನಾ ಹಿಂದ ರಾತ್ರಿಯಿಡೀ ಕೂತು ಬೆನ್ನಮ್ಯಾಲೆ ಕೈ ಆಡಸತಿದ್ದೆ..ಮತ್ತ ಹಂಗ ಮಾಡಬೇಕನ್ನೋ ಆಶಾ ಅದ..” ಅವ ಭಾವುಕನಾಗಿದ್ದ. ಕಣ್ಣಾಗ ನೀರಾಡತಿತ್ತು.
” ಒಪ್ಪೋಣ ಆದರ ನೀ ತತ್ತಿಗಿತ್ತಿ ಯಾಕ ಮಾರಲಿಕ್ಕೆ ಹೋದಿ ನೀ ಸ್ವತಃ ಏನ ಇದ್ದರೂ ಮಠ ಇರೋ ಓಣಿ, ಅಲ್ಲಿಯ ಸಂಪ್ರದಾಯ ನೀ ಪಾಲಸಬೇಕಾಗಿತ್ತು..” ನನ್ನ ದನಿ ಗಡುಸಾಗಿತ್ತು.
” ನೋಡು ಅದು ವ್ಯಾಪಾರ ಅಷ್ಟ ಯಾಕಂದರ ಓಣಿ ಸುತ್ತಲ ಏನೇನು ಬದಲಾವಣಿ ಆಗ್ಯಾವ ನಿಂಗೂ ಗೊತ್ತದಲ.. ಬ್ರಾಹ್ಮಣರು ತಲಾಂತರದಿಂದ ಬಂದ ಜಗಾ ಮಾರಿಕೊಂಡು ಅಪಾರ್ಟಮೆಂಟ ಸೇರಿಕೊಂಡಾರ..ನಾ ಗೋಪಿಚಂದನ, ಕಾಶೀದಾರ ಯಾರಿಗೆ ಮಾರಲಿ..ಓಣಿ ಸುತ್ತಲ ಗುಡಾನು ಆಗ್ಯಾವ ಅಲ್ಲಿ ಬರೋ ಕೂಲಿಕೆಲಸದವರು ಕೇಳಿದರು ನಾ ಇಟ್ಟೆನಾ ಏನು ಅದನ ಮನಿಯೊಳಗ ತಂದಿರಲಿಲ್ಲ..ಅದರಿಂದ ಫಾಯದಾನೂ ಆತಲ್ಲ ಅಂಗಡಿಗೆ.ಎಷ್ಟು ಅಂತ ಹಿಂದ ಹಿಂದ ಇರೋದು ಮನಿತನ ಸುಧಾರಿಸಲಿ ಅಂತ ಮಾಡಿದ್ದು ಅದು. ಮಸಲತ್ತು ನಡೀತು ಓಣಿಯೊಳಗ ಮಠದ ಓಣಿಯೊಳಗ ದೊಡ್ಡ ಅಪಚಾರ ಅಂತ ಹಬ್ಬಿಸಿದರು ಸುದ್ದಿ ಆದರ ಮಜಾ ಅಂದರ ಮಠದ ಆಡಳಿತ ಹಿಡದವರ ಯಾರದೂ ಕೈ ಕಚ್ಚಿ ಶುದ್ಧ ಇಲ್ಲ..” ಅವನ ಮಾತಿನಲ್ಲಿ ಖಾರ ಇಣುಕಿತ್ತು. ಹಂಗಂತ ಹೇಳಿ ಅವ ಏನು ಸುಳ್ಳು ಹೇಳತಿರಲಿಲ್ಲ. ಗುಂಡಪ್ಪನ ಮ್ಯಾಲೆ ವಿಧವೆಯರ ಆಸ್ತಿ ಕಬಳಿಸಿದ ಆರೋಪಿತ್ತು. ಹಂಗ ಆಸ್ತಿ ಕಳಕೊಂಡಾಕಿ ಅವನ ಮನಿಮುಂದ ನಿಂತು ಮಣ್ಣುತೂರಿ ಹೋಗುವುದು ನೋಡಿದ್ದಿತ್ತು ಸಣ್ಣವರಿದ್ದಾಗ. ನಾ ಏನು ವಾದಮಾಡಿ ಯಶವಂತನ ಮನಸ್ಸು ಬದಲಾಯಿಸಲಿಕ್ಕೆ ಬಂದವ ಅಲ್ಲ ಅವನ ಜೋಡಿ ಚಚರ್ಾ ಮಾಡುದರಾಗ ನನಗ ಏನೂ ಲಾಭ ಅನಿಸಲಿಲ್ಲ. ಅವನ ನಿಲುವು ಗುರಿಗಳು ಸ್ಪಷ್ಟ ಇದ್ದವು. ಅವ ಈಗೀನ ಪೀಳಿಗಿ ಹುಡುಗ ಕಪ್ಪನ್ನ ಕಪ್ಪ ಅಂತ ಕರಿಯೂದರೊಳಗ ಅವಗೇನು ಭಿಡೆಇರಲಿಲ್ಲ.
ಮನಿಗೆ ಬಂದೆ. ತಮ್ಮ ಕೇಳಲು ಉತ್ಸುಕನಾಗಿದ್ದ. ಎಲ್ಲಾ ಕೇಳಿ ಮುಗಸಿದವ ವ್ಯಂಗ್ಯವಾಗಿ ನಕ್ಕ. ನಾ ಮೊದಲೇ ಹೇಳಿದ್ದೆ ನಿನಗ ಎಂಬ ಧಾಟಿಯಲ್ಲಿ. ನಾ ಸುಮ್ಮನಿದ್ದೆ. ನಾನೇನೂ ನನ್ನದು ಸೋಲು ಅಂದುಕೊಳ್ಳಲಿಲ್ಲ ಆದರೆ ಯಶವಂತ ಮತ್ತು ಪರಿಮಳಾಚಾರರ ನಿಲುವು ಬೇರೆಯೇ ಅವು ಎಂದೂ ಒಂದಕ್ಕೊಂದು ಹೊಂದುವುದಿಲ್ಲ.
ಯಶವಂತ ಈಗಿನ ಹುಡುಗ. ಜಾತಿ,ಸಂಪ್ರದಾಯಗಳ ಹೊರಗೂ ಒಂದು ಲೋಕವಿದೆ ಎಂದು ಅರಿತವ. ಆಚಾರರೋ ಅದೇ ಹಟ ಮಠದ ತೀರ್ಥ, ತಪ್ತಮುದ್ರೆ ಇವೇ ಮುಖ್ಯ ಅನ್ನುವವರು.ಮಗನ ಪ್ರೀತಿ ರೀತಿ ಅವರಿಗೆ ಎಂದೂ ಸರಿಯಾಗಲಾರದು.ಈ ಸಂಘರ್ಷ ನಿರಂತರ.ಇವರ ಹೋರಾಟದಾಗ “ಮುಖ್ಯಪ್ರಾಣ ಜನರಲ್ ಸ್ಟೋರ್ಸ” ಅನಾಥವಾಗಿತ್ತು.
 

‍ಲೇಖಕರು G

September 29, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Jayashree

    ಮತಿತಾಥ೯ಗಳ ಬಗ್ಗೆ ಚಿಂತನೆಗೆ ಹಚ್ಚುವ ಕಥೆ. ಚನ್ನಾಗಿ ಬಂದಿದೆ.

    ಪ್ರತಿಕ್ರಿಯೆ
  2. Sudhindra Deshpande

    ಕಣ್ಣ ಎದುರಿಗೆ ನಡೀಲಿಕ್ಕೆ ಹತ್ತೇದೊ ಏನೋ ಅಂತ ಅನಸ್ತದ. ಆ ರೀತಿ ಬರದೀರಿ. ಆದರ ಈ ಕಥಿ ನಿಮ್ಮ ಬ್ಲಾ^ಗಿನೊಳಗ ಯಾಕ ಬಂದಿಲ್ಲ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: