ರಾಘವೇಂದ್ರ ಎಲ್
“ಇಂದು ಏಕೋ ಎಷ್ಟು ನಡೆದರೂ ದಾರಿಯೇ ಸಾಗುತ್ತಿಲ್ಲವಲ್ಲ” ? ಶ್ರೀಹರಿ ಮಾಸ್ತರು ತಮ್ಮ ಎಂದಿನ ಶೈಲಿಯಲ್ಲಿ ಶಾಲೆ ಮುಗಿಸಿ ಮನೆಗೆ ಹೊರಟಾಗ ಮನಸ್ಸಿನಲ್ಲೇ ಹೇಳಿಕೊಂಡ ಮಾತುಗಳಿವು. ಮಾಸ್ತರ ತಲೆಯಲ್ಲಿ ನೂರಾರು ವಿಷಯ ಒಟ್ಟಿಗೇ ಓಡಾಡ ತೊಡಗುತ್ತವೆ. ಆಗ ಮಾಸ್ತರರು ಮಾತಾಡುವ ಶೈಲಿಯೇ ಬೇರೆ. ಇಂದು ಅದೇ ರೀತಿಯ ಪರಿಸ್ಥಿತಿ. ಮುಂದಿನ ಆರು ತಿ೦ಗಳಲ್ಲಿ ಮಾಸ್ತರು ಸೇವೆಯಿಂದ ನಿವೃತ್ತರಾಗಲಿದ್ದಾರೆ. ಮೂವತ್ತೈದು ವರ್ಷ ನಿಷ್ಟೆಯಿಂದ ನಿಸ್ವಾರ್ಥವಾಗಿ ಮಕ್ಕಳಿಗೆ ವಿದ್ಯೆ ಹೇಳಿದ್ದಾರೆ. ಬಹಳಷ್ಟು ಬಾರಿ ತಮ್ಮ ದುಡ್ಡಿನಿಂದ ಅನೇಕರಿಗೆ ಫ಼ೀಸ್ ಕಟ್ಟಿದ್ದಾರೆ. ಅನೇಕ ಬಡ ಮಕ್ಕಳಿಗೆ ಪುಸ್ತಕಗಳನ್ನು ಕೊಡಿಸಿದ್ದಾರೆ.ಅವರ ಒಳ್ಳೆಯತನ ಅವರಿಗೆ ಗೌರವ ತಂದುಕೊಟ್ಟಿದೆ. ಆದರೂ ಏನೋ ಅಪೂರ್ಣತೆ, ಸಂಕಟ..ಏಲ್ಲೋ ಸಾಧಿಸಬೇಕಾದ್ದು ಇನ್ನೂ ಇತ್ತೆ? ಆದಕ್ಕೆ ಮೊದಲೇ ನಿವೃತ್ತನಾಗುತ್ತಿದ್ದೇನೆಯೆ? ಎಂದುಕೊಳ್ಳುತ್ತಾರೆ.. ತನ್ನನ್ನು ಅಗಾಧವಾಗಿ ಪ್ರೀತಿಸುವ ಮಕ್ಕಳಿಂದ ಮತ್ತು ತಾನು ಪ್ರೀತಿಸುವ ವೃತ್ತಿಯಿಂದ ದೂರವಾಗುತ್ತಿದ್ದರಿಂದ ಈ ಭಾವನೆ ಬಂದಿದೆ..ಇದು ಎಲ್ಲರಿಗು ಸಹಜ..ದೇವರು ಮಹಾ ಚತುರ..ಅವನು ಆಡಿಸಿದಂತೆ ಎಲ್ಲವೂ ನಡೆಯಲೇಬೇಕು..ಎಂದುಕೊಳ್ಳುತ್ತಿರುವಾಗಲೇ ನರಸಿಂಹಸ್ವಾಮಿ ದೇಗುಲದ ಎದುರಿಗೆ ಬಂದು ನಿಂತರು..

ನಂದಾದೀಪದ ಬೆಳಕಿನಲ್ಲಿ ತೇಜಸ್ಸಿನಿಂದ ಕುಳಿತಿರುವ ನರಸಿಂಹಸ್ವಾಮಿಯನ್ನು ನೋಡಿದ ಮಾಸ್ತರು,”ದೇವರೇ, ಎಲ್ಲವನ್ನು ನಿಭಾಯಿಸುವ ಶಕ್ತಿ ಕೊಡು ಪರಮಾತ್ಮ” ಎಂದುಕೊಳಲು, ಅದೇ ಸಮಯಕ್ಕೆ ಅರ್ಚಕರಾದ ನಾಗೇಶನು “ ಒಳ್ಳೆಯ ಸಮಯಕ್ಕೆ ಬಂದ್ರಿ ಮೇಷ್ಟ್ರೆ, ಇಂದು ನರಸೇಗೌಡರ ಮನೆಯವರಿಂದ ಬೆಳ್ಳಿರಥೋತ್ಸವವಿತ್ತು. ಪ್ರಸಾದ ತೆಗೆದುಕೊಳ್ಳಿ, ಎಂದು ಸಿಹಿ ಪೊಂಗಲ್ ದೊನ್ನೆಯನ್ನು ಮಾಸ್ತರಿಗೆ ಕೊಡಲು, ಸುಧಾರಿಸಿಕೊಳ್ಳಲು ಅಲ್ಲಿಯೇ ಕುಳಿತರು.
ತಿನ್ನುವ ಮೊದಲು ದೇವರಿಗೆ ನಮಸ್ಕಾರ ಮಾಡಿದ ಮಾಸ್ತರು “ದೇವರೇ, ನಿನ್ನ ವಿಸ್ಮಯ ಯಾರೂ ಅರಿಯರು !! ಪರಮ ನಾಸ್ತಿಕನಾಗಿದ್ದ ನಾಗೇಶನು ಇಂದು ದೇವರ ಪರಮ ಆರಾಧಕ !! ಅಪಾರ ವಾಗ್ಮಿ,ಅಪ್ರತಿಮ ಸಾಧಕ… ಇದೆಲ್ಲ ನಿನ್ನಿಂದ ಬಿಟ್ಟು ಇನ್ಯಾರು ಮಾಡಲು ಸಾಧ್ಯವಿಲ್ಲ ಎಂದುಕೊಳ್ಳುತ್ತಿರುವಂತೆ ನೆನಪಿನ ಚಕ್ರ ಬಿಚ್ಚುಕೊಳ್ಳತೊಡಗಿತ್ತು.
ಆಗಷ್ಟೇ ಕುಂತಿಕಲ್ಲೆಂಬ ಊರಿಗೆ ವರ್ಗವಾಗಿ ಬಂದಿದ್ದ ದಿನ. ಇದೇ ಯೋಗನರಸಿಂಹಸ್ವಾಮಿಯ ಗುಡಿಯ ಮುಂದೆಯೇ ಹಾದು ಹೋಗಿದ್ದೆ. ಹೊಸ ರಾಜಗೋಪುರ ಮತ್ತು ರಸ್ತೆ ಕೊಂಚ ಅಗಲವಾಗಿರುವುದನ್ನು ಬಿಟ್ಟರೆ ಮಿಕ್ಕಿದ್ದೆಲ್ಲಾ ಮೂವತ್ತು ವರುಷದ ಹಿಂದೆ ಇದ್ದ ಹಾಗೆಯೇ ಇದೆ. ಕೇವಲ ಹದಿನೈದು ರೂಪಾಯಿಯ ಸಂಬಳ. ಆಗಷ್ಟೆ ಮದುವೆಯಾಗಿದ್ದ ನಾನು ಈ ಊರಿಗೆ ಬಂದಾಗ ಶಾರದೆ ಮೂರು ತಿಂಗಳ ಬಸುರಿ. ಬಹಳ ಬೇಗ ಈ ಊರಿಗೆ ಒಗ್ಗಿ ಹೋದೆವು. ಏಳು ವರ್ಷಗಳಲ್ಲಿ ಮೂರು ಮಕ್ಕಳು, ಹರ್ಷವರ್ದನ, ಅಶೋಕ ಮತ್ತು ಗಾಯತ್ರಿ. ಸಮಾಜಶಾಸ್ತ್ರದ ಬಗ್ಗೆ ಹೆಚ್ಚಿನ ಆಸಕ್ತಿ ಆದುದರಿಂದಲೇ ಏನೋ ಮಕ್ಕಳ ಹೆಸರೆಲ್ಲಾ ರಾಜರು ಮತ್ತು ಚಕ್ರವರ್ತಿಗಳನ್ನು ಹೋಲುತ್ತಿತ್ತು. ಮಕ್ಕಳಲ್ಲಿ ತನ್ನನ್ನು ತುಂಬ ಹಚ್ಚಿಕೊಂಡವಳು ಗಾಯತ್ರಿ. ಬಹಳ ಚೂಟಿ ಹುಡುಗಿ. ಮನೆಯ ಕಷ್ಟಗಳನ್ನು ಅರ್ಥಮಾಡಿಕೊಂಡು ಅದಕ್ಕೆ ಅನುಗುಣವಾಗಿ ಬೆಳೆದ ಹುಡುಗಿ. ಚಿಕ್ಕ ವಯಸ್ಸಿನಲ್ಲಿಯೇ ಅತ್ಯಂತ ಪ್ರೌಢಿಮೆ. ಆಟಪಾಠಗಳಲ್ಲಿ ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದು. ಎಲ್ಲರೂ ಅಸೂಯೆ ಪಡುವಂಥಹ ಸೌಂದರ್ಯ. ತಾನು ಅವಳಿಗೆ ಹೆಚ್ಚು ಬುದ್ಧಿ ಹೇಳಿದ ನೆನಪಿಲ್ಲ. ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ವಂತ ಪರಿಶ್ರಮದಿಂದ ಸೀಟು ಪಡೆದವಳು. ಅವಳ ಬಗ್ಗೆ ಏನೋ ಹೆಮ್ಮೆ, ಗೌರವ, ಪ್ರೀತಿ. ಅವಳಲ್ಲೇ ನನ್ನ ತಾಯಿಯನ್ನು ಕೆಲವು ಬಾರಿ ಕಾಣುತ್ತಿದ್ದೆ.
ಕೊನೆಯ ವರ್ಷದ ಪದವಿಯಲ್ಲಿ ಒಂದು ಬಹುದೊಡ್ಡ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸಕ್ಕೆ ಆಯ್ದೆಯಾಗಿದ್ದಳು. ತಿಂಗಳಿಗೆ ನಲವತ್ತೈದು ಸಾವಿರ ಸಂಬಳ ಎಂದಾಗ ತನ್ನ ಮತ್ತು ಶಾರದೆಯ ಕಣ್ಣಿನಲ್ಲಿ ಸಾರ್ಥಕತೆಯ ಕಣ್ಣೀರು. ಮನೆಯಲ್ಲಿ ಎಲ್ಲರಿಗೂ ಸಂತಸ. ಒಂದೆರಡು ವರ್ಷಗಳಲ್ಲಿ ಈಕೆಯ ಮದುವೆ ಮಾಡಿ ಬಿಡಬೇಕೆಂಬ ವಿಷಯ ಪ್ರಸ್ತಾಪಿಸುವುದನ್ನು ಕೇಳಿಕೊಂಡ ಗಾಯತ್ರಿ, ಆಕೆಯ ಅಮ್ಮನಿಗೆ ತಾನು ನಾಗೇಶನನ್ನು ಇಷ್ಟ ಪಡುತ್ತಿರುವುದಾಗಿ ಹೇಳಿದ್ದಳು. ಶಾರದೆ ಇದರ ಬಗ್ಗೆ ಹೇಳಿದಾಗ ತನಗೆ ಏನೋ ಸಂಕಟ, ಬೇಸರ. ನಾಗೇಶ ಅರ್ಚಕರಾದ ವಾಸುದೇವಾಚರ್ಯರ ಒಬ್ಬನೇ ಮಗ. ಓದಿನಲ್ಲಿ ಜಾಣ. ಚಾರ್ಟರ್ಡ್ ಅಕೌಂಟೆಂಟ್ ಆಗಲು ಕಲಿಯುತ್ತಿದ್ದ ನಾಗೇಶ ಪರಮ ನಾಸ್ತಿಕ. ನನ್ನ ಪ್ರಕಾರ ದೇವರನ್ನು ನಂಬದಿದ್ದರೂ, ಬಹಿರಂಗವಾಗಿ ದೇವರ ಅಸ್ತಿತ್ವವನ್ನೇ ಪ್ರಶ್ನೆ ಮಾಡುವುದು ಉದ್ಧಟತನ. ಇದೇ ಕಾರಣಕ್ಕೆ ತನಗೆ ಅವನ ಬಗ್ಗೆ ಗೌರವವಿರಲಿಲ್ಲ. ಹಾಗೆಯೇ ಅನೇಕರು ನಾಗೇಶ ನಕ್ಸಲ್ ಸಿದ್ಧಾಂತದ ಪುಸ್ತಕಗಳನ್ನು ಹೆಚ್ಚು ಓದುತ್ತಾನೆ ಎಂದು ಹೇಳಿದ ನೆನಪು. ಹತ್ತು ಹಲವು ಕಾರಣಗಳಂತೆ ನಾಗೇಶ ನನಗೆ ಯೋಗ್ಯನಾದ ಅಳಿಯನಲ್ಲ ಎಂಬ ಭಾವನೆ ನನ್ನಲ್ಲಿ ಆಳವಾಗಿ ಬೇರೂರಿತ್ತು. ಬೆಳಿಗ್ಗೆ ರಂಗೋಲಿ ಬಿಡಿಸುತ್ತಿದ್ದ ಗಾಯತ್ರಿಯನ್ನು ಕರೆದು “ಮಗಳೇ, ನಾನು ಇದುವರೆಗೂ ನಿನಗೆ ಯಾವತ್ತೂ ಬುದ್ಧಿ ಹೇಳಿಲ್ಲ, ಅದರ ಅವಶ್ಯಕತೆ ಕೂಡ ಇತ್ತು ಎಂದು ನನಗನ್ನಿಸಿಲ್ಲ. ಇನ್ನು ನಿನ್ನಿಂದ ಕೆಲವು ಒಳ್ಳೆಯ ಗುಣಗಳನ್ನು ನಾನು ಅಳವಡಿಸಿಕೊಂಡಿದ್ದೇನೆ. ಈ ಪರಿಸ್ಥಿತಿಯಲ್ಲಿ ನಾನು ಹೇಳುವುದನ್ನು ನೀನು ಯಾವ ರೀತಿ ಅರ್ಥೈಸಿಕೊಳ್ಳುತ್ತೀಯೋ ಗೊತ್ತಿಲ್ಲ. ಆದರೂ ಇದು ನನ್ನ ಕರ್ತವ್ಯ. ನಾಗೇಶನೊಂದಿಗಿನ ನಿನ್ನ ಪ್ರೀತಿ ನನಗೆ ಏಕೋ ಸಹ್ಯವಾಗುತ್ತಿಲ್ಲ. ಇದನ್ನು ಇಲ್ಲಿಗೇ ಬಿಟ್ಟು ಬಿಡಲಾಗದೇ ಮಗಳೇ ?” ಎಂದು ಕೇಳಿದಾಗ ಗಾಯತ್ರಿಯು ಯಾವುದೇ ಪ್ರತಿಕ್ರಿಯೆ ಇಲ್ಲದೆ ತಲೆ ಬಗ್ಗಿಸಿ ಸುಮ್ಮನೆ ನನ್ನ ಮುಂಗೈ ಹಿಡಿದುಕೊಂಡು ಸಣ್ಣಗೆ ಅತ್ತಹಾಗೆ, ಮುಂಗೈ ಮೇಲೆ ಅವಳ ಎರಡು ಕಣ್ಣ ಹನಿಗಳು !! ಕೂಡಲೇ ಅಡಿಗೆ ಮನೆಗೆ ಓಡಿ ಹೋದಳು ಗಾಯತ್ರಿ. ನನಗೆ ಖಾತ್ರಿಯಾಯಿತು. ಇನ್ನು ಇದನ್ನು ನಿಲ್ಲಿಸಬಾರದು. ನಾಳೆಯೇ ವಾಸುದೇವಚಾರ್ಯರ ಬಳಿ ಮಾತಾಡಬೇಕೆಂದು ಆಕೆಯ ಜಾತಕ ಸಿದ್ಧ ಮಾಡಿಕೊಂಡೆ.

ಮರುದಿನ ಮುಂಜಾವಿಗೆ ಹೊರಟು ದೇವಸ್ಥಾನ ತಲುಪಿದಾಗ ಇನ್ನೂ ದೇವರ ಅಲಂಕಾರದಲ್ಲಿ ತೊಡಗಿದ್ದ ಆಚಾರ್ಯರು “ಬನ್ನಿ ಮೇಷ್ಟ್ರೇ, ಬಹಳ ದಿನಗಳಾಗಿ ಹೋದವು, ನಾನು ನೀವು ಭೇಟಿ ಮಾಡಿ.. ಇನ್ನೇನು ಮಂಗಳಾರತಿ ಆಗುತ್ತದೆ ಮುಗಿಸಿಕೊಂಡು ಹೋಗಿ ಎಂದರು. ಮಹಾಮಂಗಳಾರತಿ ಮುಗಿದು ಪ್ರಸಾದ ಸ್ವೀಕರಿಸಿ “ ವಾಸುದೇವಚಾರ್ಯರೇ!, ನಿಮ್ಮೊಂದಿಗೆ ಕೊಂಚ ಮಾತಾಡಬೇಕು ಎಂದೆ. ಖಂಡಿತ ಆಗಬಹುದು ಎಂದು ಆಚಾರ್ಯರು, ಹೊದಿಕೆ ಸರಿಮಾಡಿಕೊಳ್ಳುತ್ತಾ ದೇವಸ್ಥಾನದ ಜಗುಲಿಯ ಮೇಲೆ ಕುಳಿತರು. ನಾನು ಪ್ರಸ್ತಾಪಿಸಿದ ವಿಷಯವನ್ನು ಕೇಳಿ ಮಂದಹಾಸ ಬೀರುತ್ತಾ “ಮೇಷ್ಟ್ರೇ, ಈ ಲಕ್ಷ್ಮೀನರಸಿಂಹನ ಚಿತ್ತ ಅದೇ ಆಗಿದ್ದರೆ ನಾನು, ನೀವು ಯಾರೂ ತಡೆಯಕ್ಕಾಗುವುದಿಲ್ಲ ಆದರೂ ನಾನು ನಿಮ್ಮ ಬಳಿ ಕೆಲವು ವಿಷಯಗಳನ್ನು ಹೇಳಲೇಬೇಕು. ನಾಗೇಶ ನಿಮಗೆ ಗೊತ್ತಿರುವ ಹಾಗೆ ಪರಮ ನಾಸ್ತಿಕ. ಅದೊಂದೇ ಆಗಿದ್ದರೆ ನನ್ನ ಅಭ್ಯಂತರ ಏನೂ ಇಲ್ಲ. ದೇವರನ್ನು ಆರಾಧಿಸುವುದು, ಬಿಡುವುದು ಅವರವರ ಭಾವ. ಅದಕ್ಕೂ ಕೇಳಿಕೊಂಡು ಬಂದಿರಬೇಕು. ಆದರೆ ದೇವರ ಆರಾಧನೆ ಬಗ್ಗೆ ಶುರುವಾದ ಭಿನ್ನಾಭಿಪ್ರಾಯದಿಂದ ಸುಮಾರು ವರ್ಷಗಳಿಂದ ಅವನೊಂದಿಗೆ ಮಾತನಾಡುತ್ತಿಲ್ಲ. ಅವನ ತಾಯಿಯೊಂದಿಗೆ ಮಾತ್ರ ಅವಶ್ಯವಿದ್ದಷ್ಟು ಮಾತನಾಡುತ್ತಾನೆ. ಮಂಗಳೆಗೆ ಮಾತನಾಡಿ ಹೇಳುತ್ತೇನೆ ಎಂದರು.
ಕಾಕತಾಳೀಯವೆಂಬಂತೆ ಕಿರಿಯ ಮಗ ಅಶೋಕ ಅಂದೇ ರಾತ್ರಿ ಬಂದು “ಅಪ್ಪ, ನಾಗೇಶನನ್ನು ಪೋಲೀಸರು ಕರೆದುಕೊಂಡು ಹೋಗುತ್ತಿದ್ದಾರೆ, ಭೈರಸಂದ್ರ ಪೋಲಿಸರಿಬ್ಬರನ್ನು ಕೊಂದಿದ್ದು ನಕ್ಸಲರಂತೆ, ಅದರಲ್ಲಿ ನಾಗೇಶನೂ ಪಾಲುದಾರನಂತೆ”. ಯಾಕೋ ಭೂಮಿಯೇ ಕಂಪಿಸಿ, ಎಲ್ಲೋ ಎಸೆದಂತಾಯಿತು. ಯಾಕೋ ಏನೋ ಬಯಸಿ ಹೋದರೂ ದಕ್ಕದೇ ಹೋಗುತ್ತದಲ್ಲವೇ, ದೇವರೇ, ಏಕೆ ಈ ರೀತಿ ದುಃಖವನ್ನೇ ಕೊಡುತ್ತೀಯ? ಆ ಹೆಣ್ಣು ಮಗು ಏನೂ ಬಯಸಲಿಲ್ಲ.
ಆದರೇ, ಬಯಸಿದ ಒಂದು ಸಂಗತಿ ಕೂಡ ಈ ರೀತಿ ನೆರವೇರುತ್ತಿಲ್ಲವಲ್ಲ ಎಂದುಕೊಂಡೆ. ಗಾಯತ್ರಿಯೂ ಇದರಿಂದ ತುಂಬ ಘಾಸಿಗೊಂಡಿರಬಹುದೆಂಬ ಅಳುಕಿನಿಂದ ಬೆಳಗೆ ಎದ್ದು ನೋಡಿದೆ. ಮುಖದಲ್ಲಿ ಏನೂ ದುಃಖವಿಲ್ಲ. ಅವಳಾಗಿಯೇ ಹತ್ತಿರ ಬಂದು “ಅಪ್ಪಾ, ನಿನ್ನ ಪ್ರಯತ್ನ ನೀನು ಮಾಡಿದೆ. ಇದು ನಿನ್ನನ್ನು ಮತ್ತು ನನ್ನನ್ನು ಮೀರಿದ ವಿಷಯ. ಇದಕ್ಕೆ ದುಃಖ ಪಡುವ ಅವಶ್ಯಕತೆಯಿಲ್ಲ. ಧೈರ್ಯವಾಗಿರು, ಹಾಗೆಯೇ, “ನಾನು ನಿನ್ನ ಬಳಿ ಒಂದು ವಿಷಯ ಹೇಳಬೇಕು. ಮುಂದಿನ ವಾರ ನಾನು ನನ್ನ ಹೊಸ ಕಂಪನಿಯನ್ನು ಸೇರಬೇಕು. ಎರಡು ತಿಂಗಳ ನಂತರ ನನಗೆ ಯೂರೋಪ್‌ನಲ್ಲಿ ಶೂಬರ್ಡಿಂಗೆನ್ ಎಂಬ ಊರಿನಲ್ಲಿ ತರಬೇತಿ ಇದೆ. ನಾನು ಮತ್ತೆ ಭಾರತಕ್ಕೆ ಬರುವುದು ಸುಮಾರು ಒಂದು ವರ್ಷ ಆಗಬಹುದು” ಎಂದಾಗ ನನಗೆ ದುಃಖಕ್ಕಿಂತಲೂ ಸಂತೋಷವೇ ಹೆಚ್ಚು. ಈ ಕಾರಣದಿಂದಲಾದರೂ ಗಾಯತ್ರಿ ಈ ಪರಿಸರದಿಂದ ದೂರವಾಗಿ ಈ ನೋವು ಮರೆಯಬಹುದೇನೊ ಎಂಬ ನಂಬಿಕೆ. ಹಾಗೆಯೇ “ ನಾಗೇಶನ ಪ್ರಸ್ತಾಪ ಇನ್ನು ಬಿಟ್ಟುಬಿಡಿ. ನಿನ್ನೆ ರಾತ್ರಿ ಆತನನ್ನು ನಕ್ಸಲ್ ಸಿದ್ಧಾಂತವನ್ನು ಪ್ರಚಾರ ಪಡಿಸುತ್ತಿದ್ದಾನೆಂಬ ಗುಮಾನಿಯಿಂದ ಪೋಲೀಸರು ಕರೆದೊಯ್ದಿದ್ದಾರೆ. ಈ ರೀತಿಯ ಸಂಗತಿಗಳಿಂದ ದೂರವಿರುವಂತೆ ಹಲವಾರು ಬಾರಿ ಅವನಲ್ಲಿ ವಿನಂತಿಸಿದ್ದೇನೆ. ಆದರು ಏನೂ ಪ್ರಯೋಜನವಾಗಿಲ್ಲ. ಆದ್ದರಿಂದ ಇದನ್ನು ಇಲ್ಲಿಗೇ ಬಿಟ್ಟು ಬಿಡುವುದು ಸೂಕ್ತ” ಎಂಬ ಖಚಿತ ದನಿಯಲ್ಲಿ ಗಾಯತ್ರಿ ಹೇಳಿದಾಗ, ನನಗೆ ಒಳಗೇ ಒಂದು ವೇದನೆ.
ಇದೆಲ್ಲಾ ನಡೆದು ಸುಮಾರು ಹತ್ತು ವರುಷ ಕಳೆದುಹೋಗಿವೆ. ಹಿರಿಯ ಮಗನ ಮದುವೆ ಸೋದರಮಾವನ ಮಗಳ ಜೊತೆ ಮಾಡಿದ್ದೇನೆ. ಗಂಡ ಹೆಂಡತಿ ನಡುವೆ ಸಾಮರಸ್ಯವಿಲ್ಲ. ಹೀಗೆಯೇ ಸರಿಹೋಗಬಹುದೆಂಬ ನಂಬಿಕೆಯಲ್ಲಿದ್ದೇನೆ. ಕಿರಿಯ ಮಗ ಡಿಪ್ಲೊಮಾ ಮಾಡಿ ಕೆಲಸವಿಲ್ಲದೆ ಇದ್ದಾನೆ. ಊರಿನ ಕಂಟ್ರಾಕ್ಟರ್ ಕರಿಗಿರಿ ಎನ್ನುವವರ ಬಳಿ ಸೇರಿಕೊಂಡು ಸಣ್ಣ ಪುಟ್ಟ ಕಾಮಗಾರಿ ಮಾಡಿಸುತ್ತಾನೆ. ಯೂರೋಪಿನಲ್ಲಿ ತರಬೇತಿಗೆಂದು ಹೋದ ಗಾಯತ್ರಿ, ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿ ಅವಳ ಪರಿಶ್ರಮದಿಂದ ಬಹಳ ಎತ್ತರಕ್ಕೆ ಬೆಳೆದು ಬಿಟ್ಟಿದ್ದಾಳೆ. ಕೇವಲ ಒಂದೇ ವರ್ಷಕ್ಕೆಂದು ಹೋದ ಅವಳು ಇಂದು ಮರಳಿ ಬರುವ ಮಾತಾಡುತ್ತಿಲ್ಲ. ಮಧ್ಯೆ ಮೂರು ಬಾರಿ ಬಂದಿರಬಹುದು ಬಂದಾಗ ಮದುವೆಯ ಪ್ರಸ್ತಾಪ ಮಾಡಿದಾಗಲೆಲ್ಲಾ “ಅಪ್ಪಾ, ನಾನು ಮದುವೆ ಆಗುವುದಿಲ್ಲವೆಂದು ಎಂದೋ ತೀರ್ಮಾನಿಸಿದ್ದೇನೆ. ನನ್ನನ್ನು ಈ ವಿಷಯದಲ್ಲಿ ಬಲವಂತ ಮಾಡಬೇಡಿ. ದಯವಿಟ್ಟು ಕ್ಷಮಿಸಿ”ಎಂದು ಈ ವಿಷಯ ಪ್ರಸ್ತಾಪಿಸದಂತೆ ತಾಖೀತು ಮಾಡಿದ್ದಾಳೆ.
ಈ ನಡುವೆ ಎರಡು ವರ್ಷದ ಹಿಂದೆ ಒಂದು ವಿಚಿತ್ರವಾದ ಸಂಗತಿ ನಡೆದಿದೆ. ನಕ್ಸಲ್ ಸಿದ್ಧಾಂತ ಎಂದು ಬಂಧಿತನಾದ ನಾಗೇಶನನ್ನು ಪೋಲೀಸರು ಚೆನ್ನಾಗಿ ಥಳಿಸಿ, ಇನ್ನು ಈ ಊರಲ್ಲೇ ನೀನು ಕಾಣಿಸಿಕೊಳ್ಳಬೇಡ; ಹಾಗೇನಾದರೂ ಕಂಡರೆ ನೀನು ಜೀವಂತ ಉಳಿಯುವುದಿಲ್ಲ ಎಂದು ಬೆದರಿಸಿ ಬಿಟ್ಟು ಬಿಟ್ಟಿದ್ದರು. ಅದಾದ ನಂತರ ನಾಗೇಶ ಊರಿಗೆ ಬಂದಿರಲಿಲ್ಲ. ಯಾರೋ, ಅವನನ್ನು ಜಮ್ಮುವಿನಲ್ಲಿ ನೋಡಿದ ಸುದ್ದಿ ಕೆಲವರು ಅವನ್ನು ಪೋಲೀಸರೇ ಕೊಂದು, ಸುಟ್ಟು ಹಾಕಿದ್ದಾರೆ ಎಂಬಂತಹ ಸುದ್ದಿ ಹಬ್ಬಿಸಿದ್ದರು. ಜಮ್ಮುವಿನಲ್ಲಿ ನೋಡಿದ ಸುದ್ದಿಗೆ ಪುಷ್ಟಿ ಕೊಡುವಂತೆ ಕೆಲವರು ಆತ ಉಗ್ರಗಾಮಿಯಾಗಿ ಬಿಟ್ಟಿದ್ದಾನೆ ಅಂತಲೂ ನಂಬಿದರು.
ಒಂದು ಮಧ್ಯರಾತ್ರಿ ಅರ್ಚಕರಾದ ವಾಸುದೇವಾಚಾರ್ಯರು ಅಸ್ವಸ್ಥರಾಗಿದರಿಂದ ವೈದ್ಯರನ್ನು ಪೇಟೆಯಿಂದ ಕರೆದುಕೊಂಡು ಬರಲು ನನ್ನ ಕಿರಿಮಗ ಅಶೋಕನ ಜೀಪಿನಲ್ಲಿ ನಾನು ಹೋಗಿದ್ದೆ. ವೈದ್ಯರನ್ನು ಕರೆತರುವಾಗ ಮಾರ್ಗ ಮಧ್ಯೆ ಯಾರೋ ಜೀಪಿಗೆ ಕೈ ಅಡ್ಡ ಹಾಕಿ ಲಿಫ್ಟ್ ಕೊಡುವಂತೆ ಕೇಳಿದರು. ಈ ಹೊತ್ತಿನಲ್ಲಿ ಯಾರಿರಬಹುದು ಎಂಬ ಅನುಮಾನದಲ್ಲಿ ಪಕ್ಕಕ್ಕೆ ಕೂರಿಸಿಕೊಂಡೆ. ನೀಳವಾದ ಗಡ್ಡ ಬಿಟ್ಟಿರುವ, ತೇಜಸ್ಸಿನಿಂದ ಕೂಡಿರುವ ಮುಖದಲ್ಲಿ ಎಂಥದೋ ದುಗುಡ!! ಈ ಹೊತ್ತಿನಲ್ಲಿ ಕುಂತಿಕಲ್ಲಿನಲ್ಲಿ ಯಾರ ಮನೆಗೆ ಹೊರಟಿರುವಿರಿ? ಎಂದು ಕೇಳಿದೆ. ಸ್ಪಲ್ಪ ಹೊತ್ತಿನ ನಂತರ “ಕುಂತಿಕಲ್ಲಿನಲ್ಲಿ ಒಂದು ಸಾವಾಗಿದೆ. ಅದಕ್ಕೆ ಹೊರಟ್ಟಿದ್ದೇನೆ ಎಂದು ಉತ್ತರಿಸಿದ. ಕುಂತಿಕಲ್ಲಿನಲ್ಲಿ ಸಾವೇ? ನಮಗೇ ಗೊತ್ತಿಲ್ಲ? ಎಂದೆ. ಹೌದು ಎಂಬಂತೆ ತಲೆಯಾಡಿಸಿದ ಯುವಕ “ವಾಸುದೇವಾಚಾರ್ಯರು….” ಎಂದಷ್ಟು ಮಾತ್ರ ಉತ್ತರಿಸಿದ, ನನಗೆ ತಲೆ ತಿರುಗಿದ ಭಾವನೆ. ಈಗಷ್ಟೇ ಅರ್ಧ ತಾಸಿನ ಹಿಂದೆಯಷ್ಟೇ ವಾಸುದೇವಾಚಾರ್ಯರನ್ನು ಮಾತನಾಡಿಸಿ ಧೈರ್ಯ ತುಂಬಿ ವೈದ್ಯರನ್ನು ಕರೆತರಲು ಬಂದ ನನಗೆ ಎಲ್ಲಿಂದಲೋ ಬರುತ್ತಿರುವ ಈತ ಅವರ ಸಾವಿನ ಸುದ್ದಿ ಹೇಳುತ್ತಾನೆ, ನಂಬಲಾಗಲಿಲ್ಲ.
ಮತ್ತೆ ಮಾತಾಡದೆ ಅಶೋಕನನ್ನು ಗಾಡಿ ಕೊಂಚ ವೇಗವಾಗಿ ಓಡಿಸುವಂತೆ ಸನ್ನೆ ಮಾಡಿದೆ. ಐದು ನಿಮಿಷದ ನಂತರ ಆಚಾರ್ಯ ಮನೆ ತಲುಪಿದಾಗ ನೀರವ ಮೌನ. ಆಚಾರ್ಯರ ಶಿಷ್ಯ ಮಧು “ಈಗ ಎರಡು ನಿಮಿಷದ ಹಿಂದೆ ಜೀವ ಹೋಯಿತು ಎಂದು ಹೇಳಿದ.” ಅಂದರೆ ನಮ್ಮ ಜೊತೆಯಲ್ಲಿ ಬಂದ ಯುವಕ ಆಚಾರ್ಯರ ಸಾವನ್ನು ಊಹಿಸದನೇ? ಎಂದು ಆತನನ್ನು ಹುಡುಕಿದೆ. ದೂರದಲ್ಲಿ ಯುವಕ ಮನೆಯ ಮುಂದೆ ಹಾಕಲೆಂದು ಸೌದೆ ಹೊಂದಿಸುತ್ತಿರುವುದನ್ನು ನೋಡಿದೆ. ಆತನ ಬಳಿಗೆ ಹೋಗಿ “ ನಿನ್ನನ್ನು ಎಲ್ಲೋ ನೋಡಿದ್ದೇನೆ. ಯಾರು ನೀನು? ಎಂದು ಕೇಳಿದೆ. “ಮೇಷ್ಟ್ರೆ, ನಾನು ನಾಗೇಶ, ಆಚಾರ್ಯರ ಮಗ” ಆ ಕ್ಷಣವೇ ಎಲ್ಲವೂ ಸ್ತಬ್ಧ… !! ಸಣ್ಣಗೆ ಅಳು ತುಂಬಿದ್ದ ಆ ಕೋಣೆಯಲ್ಲಿ ಎಲ್ಲರೂ ಆಶ್ಚರ್ಯಚಕಿತರಾಗಿ ನೋಡುತ್ತಿದ್ದಾರೆ. ಯಾರಿಗೂ ನಂಬಲಾಗುತ್ತಿಲ್ಲ. ಆದರೆ ಈ ಸಮಯದಲ್ಲಿ ಏನೂ ಪ್ರಶ್ನೆ ಮಾಡುವುದು ಸೂಕ್ತವಲ್ಲ ಎಂದು ಎಲ್ಲರೂ ಮೌನವಾದರು. ಯಾರ ಬಳಿಯೂ ಏನೂ ಮಾತನಾಡದೆ ನಾಗೇಶ ತನ್ನ ತಂದೆಯ ಕ್ರಿಯಾಕರ್ಮಗಳನ್ನು ಶಾಸ್ತ್ರಬದ್ಧವಾಗಿ ಮಾಡಿ ಮುಗಿಸಿದ. ತರುವಾಯ ತನ್ನ ತಂದೆಯ ಪೂಜೆ ನಿರ್ವಹಿಸುತ್ತಿದ್ದ ಶ್ರೀ ಲಕ್ಷ್ಮೀನರಸಿಂಹನ ದೇವಸ್ಥಾನದಲ್ಲಿ ಪೂಜೆ ಸಹಾಯ ಮಾಡಲು ನಿಂತ. ಆತನ ಪೂಜಾ ವಿಧಾನಗಳು, ಆತನಿಂದ ಹೊರಡುತ್ತಿದ್ದ ಸ್ಪಷ್ಟವಾದ ಮಂತ್ರೋಕ್ತಿಗಳು, ಆತನ ಧ್ವನಿಯ ಗಡುಸು ಎಲ್ಲವೂ ದೇವಾಲಯದಲ್ಲಿ ನಾಗೇಶನ ಪೂಜೆಗೆ ಒಂದು ವೈಶಿಷ್ಟ್ಯವಾಗಿತ್ತು. ನಾಗೇಶನ ಪೂಜೆ ಮತ್ತು ಮಂತ್ರಘೋಷ ಸಲುವಾಗಿಯೇ ಜನ ದೇವಾಲಯಕ್ಕೆ ಬರಲಾರಂಭಿಸಿದರು.
ಕಾಲಕ್ರಮೇಣ ಬಣಗುಡುತ್ತಿದ್ದ ದೇವಾಲಯ ಸದಾ ಜನರಿಂದ ತುಂಬಿ ಹೋಯಿತು. ತಮ್ಮ ನಡುವೆಯೇ ಇದ್ದ ಒಂದು ಸುಂದರ ದೇವಾಲಯವನ್ನು ಜನ ಈಗ ಗುರುತಿಸಲಾರಂಭಿಸಿದರು. ಇಷ್ಟಾಗಿಯೂ ನಾಗೇಶನು ಊರಿನಿಂದ ದೂರವಾಗಿದ್ದ ಹತ್ತನ್ನೆರಡು ವರುಷದ ಇತಿಹಾಸದ ಬಗ್ಗೆ ಯಾರಿಗೂ ಏನೂ ತಿಳಿಯಲಿಲ್ಲ. ಇದರ ಬಗ್ಗೆ ನಾಗೇಶನು ಯಾರ ಬಳಿಯು ಚರ್ಚೆ ಕೂಡ ಮಾಡುತ್ತಿರಲಿಲ್ಲ. ಪರಮ ನಾಸ್ತಿಕನಾಗಿದ್ದ ನಾಗೇಶ ಇಂದು ದೈವ, ನಂಬಿಕೆ ಮತ್ತು ಸಿದ್ಧಾಂತದ ಬಗ್ಗೆ ನಿರರ್ಗಳವಾಗಿ ಮಾತಾಡುತ್ತಿದ್ದು, “ಆತ್ಮ ಮತ್ತು ಪರಮಾತ್ಮನ ನಡುವೆ” ಎಂಬ ಸುಂದರವಾದ ಮತ್ತು ಅದ್ಭುತವಾದ ಪುಸ್ತಕವೊಂದನ್ನು ಬರೆದ. ಪಂಡಿತರೂ ಕೂಡ ಈ ಪುಸ್ತಕದ ಬಗ್ಗೆ ಅತೀವವಾದ ಮೆಚ್ಚುಗೆ ವ್ಯಕ್ತಪಡಿಸಿದರು. ಎರಡು ವರ್ಷದಲ್ಲಿ ನಾಗೇಶ ಆಧ್ಯಾತ್ಮಿಕರ ಮನೆ ಮಾತಾಗಿ ಹೋದ. ಇದಲ್ಲದೆ ನಾನು ನಾಗೇಶನಲ್ಲಿ ಕಂಡುಕೊಂಡ ಇನ್ನೂ ಒಂದು ಅದ್ಭುತ ಶಕ್ತಿ ಎಂದರೆ ಅವನ ಯೋಗ ಧ್ಯಾನ. ಗಂಟೆಗಟ್ಟಲೆ ಉಸಿರು ಬಿಗಿ ಹಿಡಿದು ತಪಸ್ಸಿಗೆ ಕೂತಂತೆ ಕೂರು ಬಿಡುತ್ತಿದ್ದ. ಅದು ದೇಹ ದಂಡನೆ ಅಲ್ಲ. ದೇವರನ್ನು ಆತ ಆರಾಧಿಸುತ್ತಿದ್ದ ರೀತಿ. ಇದು ಅವನು ಕಲಿತಿರುವ ಬಹು ದೊಡ್ಡ ವಿದ್ಯೆ ಎಂದು ನನಗನಿಸುತ್ತದೆ.
ಇದೆಲ್ಲವೂ ಅಲ್ಲದೆ ನನಗೆ ನಾಗೇಶನಿಗೆ ವಿಚಿತ್ರವಾದ ನಂಬಲಸಾಧ್ಯವಾದ ಶಕ್ತಿಯೊಂದಿದೆಯಂದು ನನಗೆ ಅನಿಸುತ್ತಿತ್ತು. ಅದು ಆತ ಭವಿಷ್ಯದಲ್ಲಿ ಘಟಿಸುವ ಸಂಗತಿಗಳನ್ನೆಲ್ಲಾ ನೋಡಬಹುದಾಗಿತ್ತು. ಇದನ್ನು ಪುಷ್ಟೀಕರಿಸುವಂತೆ ಕೆಲವು ಘಟನೆಗಳಾಗಿದ್ದವು. ಮೊದಲನೆಯದು ಒ೦ದು ಹುಣ್ಣಿಮೆಯಲ್ಲಿ ಆಂಜನೇಯಸ್ವಾಮಿಯ ಗುಡಿಯಲ್ಲಿ ಒಂದು ಹೋಮ ನಡೆಯುವುದಿತ್ತು. ಇದಕ್ಕೆ ಮೂರು ದಿನ ಮುಂಚೆ ಶಂಕ್ರ ಜೋಯಿಸರೊಂದಿಗೆ ನಾಗೇಶ ಮಾತನಾಡುವುದನ್ನು ಕೇಳಿದ್ದೆ.“ ಆಚಾರ‍್ಯರೇ, ಹನುಮನ ಗುಡಿ ಹೋಮವನ್ನು ನಮ್ಮ ಗುಡಿಯ ಹಿಂದೆ ಇರುವ ಸಂಜೀವರಾಯ ದೇವರಗುಡಿಯಲ್ಲಿ ಮಾಡಿಬಿಡಿ. ಎಲ್ಲವನ್ನೂ ಸಿದ್ದಪಡಿಸಿದ್ಧೇನೆ. ದಯವಿಟ್ಟು ಏನೂ ಪ್ರಶ್ನೆ ಕೇಳದೆ ಮುಂದುವರಿಸಿ” ಎಂದು ಹೇಳಿದ್ದನು.
ಕಾಕತಾಳೀಯವೆಂಬಂತೆ ಹುಣ್ಣಿಮೆಯ ಒಂದು ದಿನ ಮೊದಲು ಹೋಮ ನಡೆಯಬೇಕಾಗಿದ್ದ ಹನುಮಗುಡಿಯಲ್ಲಿ ದಿನ ಒಂದು ಅನಾಹುತವಾಗಿಹೋಯಿತು. ನೂರಾರು ವರ್ಷ ಗುಡಿಯ ಎಡಭಾಗಕ್ಕೆ ಆತುಕೊಂಡಿದ್ದ ಒಂದು ದೊಡ್ಡ ಬಂಡೆ ಸರಿಯಾಗಿ ಯಾಗ ನಡೆಯಬೇಕಾಗಿದ್ದ ಜಾಗದಲ್ಲಿ ಉರುಳಿಬಿದ್ದು ದೊಡ್ಡ ಹಾನಿಯಾಗಿತ್ತು. ಗರ್ಭಗುಡಿಗೆ ಏನೂ ಅಪಾಯವಾಗಿಲ್ಲದಿದ್ದರೂ ಮಿಕ್ಕ ಕಟ್ಟಡಗಳೆಲ್ಲಾ ಜಖಂಗೊಂಡಿತ್ತು. ಅಂದು ನನಗೆ ನಾಗೇಶನ ಭವಿಷ್ಯ ನೋಡುವ ಶಕ್ತಿಯ ಬಗೆಗಿನ ಅನುಮಾನ ಇನ್ನೂ ಗಟ್ಟಿಯಾಗುತ್ತಾ ಹೋಯಿತು. ಮತ್ತೊಂದು ಘಟನೆಯೆಂದರೆ ದುರ್ಗಮಹಳ್ಳಿಯ ಮಿನಿ ಡ್ಯಾಂನ ಒಂದು ದಂಡೆ ಬಿರುಕು ಬಿಟ್ಟಿದೆಯೆಂದು ನೀರಾವರಿ ಇಲಾಖೆಗೆ ಆದಷ್ಟು ಬೇಗ ಇದನ್ನು ಸರಿಪಡಿಸಬೇಕೆಂದು ನನ್ನ ಕೈಲಿ ಒಂದು ಪತ್ರ ಬರೆಸಿದ. “ನೀನು ಡ್ಯಾಂ ಬಳಿ ಹೋಗಿದ್ದೆಯಾ?” ಎಂಬ ನನ್ನ ಪ್ರಶ್ನೆಗೆ ಅವನಿಂದ ಸರಿಯಾದ ಉತ್ತರ ಸಿಗಲಿಲ್ಲ. ನನಗೆ ಇವನ ಈ ಶಕ್ತಿಯ ಬಗ್ಗೆ ಸ್ವಲ್ಪ ಮಟ್ಟಿಗೆ ಅರಿವಿದ್ದರಿಂದ ನಾನು ತಡ ಮಾಡಲಿಲ್ಲ. ಅದಕ್ಕೆ ಸರಿಯಾಗಿ ಎರಡು ದಿನಕ್ಕೆ ನೀರಾವರಿ ಇಲಾಖೆಯವರು ಡ್ಯಾಂ ಕೆಳಭಾಗದಲ್ಲಿರುವ ನಿಲುವನಹಳ್ಳಿ ಮತ್ತು ಊಲೂರಿನ ಜನರನ್ನು ಬೇರೆ ಸ್ಥಳಕ್ಕೆ ತೆರಳುವಂತೆ ಸೂಚಿಸಿ ಎಲ್ಲರನ್ನು ಖಾಲಿ ಮಾಡಿಸಿದ್ದರು. ಡ್ಯಾಂ ರಿಪೇರಿ ಇನ್ನೇನು ಶುರು ಮಾಡಬೇಕೆಂದು ತಯಾರಿ ಮಾಡಿಕೊಳ್ಳುತ್ತಿರುವಂತೆ ಅನಾಹುತವಾಗಿತ್ತು. ಡ್ಯಾಂ ಬಲದಂಡೆಯು ಹಿಂದಿನ ದಿನದ ಬಾರಿ ಮಳೆಗೆ ಕೊಚ್ಚಿಹೋಗಿತ್ತು. ನಿಲುವನಹಳ್ಳಿ ಮತ್ತು ಊಲೂರು ಸಂಪೂರ್ಣ ಮಳುಗಿತ್ತು.
ನೀರಾವರಿ ಇಂಜಿನಿಯರ್ ತನ್ನ ಸಮಯ ಪ್ರಜ್ಞೆಯಿಂದ ಎಷ್ಟೋ ಜನರ ಜೀವ ಉಳಿಸಿದೆ ಎಂದು ಪತ್ರಕರ್ತರ ಮುಂದೆ ಕೊಚ್ಚಿಕೊಳ್ಳುತ್ತಿದ್ದ. ನಾನು ಸಣ್ಣಗೆ ನಕ್ಕು ಮುಂದೆ ನಡೆದೆ…ಇದೆಲ್ಲದ ನಂತರ ನನಗೆ ಅರ್ಥವಾಗಿ ಹೋಗಿತ್ತು. ಬರಿ ಪುರಾಣಗಳಲ್ಲಿ ಕೇಳಿದ್ದೆ. ಎಲ್ಲೋ ಓದಿದ್ದ ಭವಿಷ್ಯಕ್ಕೆ ಹೋಗಿ ಬರುವ ಕೆಲವರ ಅಸಾಮಾನ್ಯ ಶಕ್ತಿಯಿರುವ ವ್ಯಕ್ತಿ ನನ್ನ ಎದುರೇ ಇದ್ದಾನೆ. ಓ ದೇವರೇ.., ಇದು ನಿಜವೇ? ಎಂದೂ ದೇವರನ್ನೇ ನಂಬದಿದ್ದವ ಇಂದು ನಿನ್ನ ಪರಮ ಆರಾಧಕನಾಗಿ ತನಗಿರುವ ಶಕ್ತಿಯಿಂದ ಜೀವಗಳನ್ನು ಉಳಿಸುತ್ತಿದ್ದಾನೆ. ಸಮಾಜಮುಖಿಯಾಗಿ ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದಾನೆ. ಆದರೆ ಯಾರಿಗೂ ತನ್ನ ಈ ಅಪ್ರತಿಮ ಶಕ್ತಿಯ ಬಗ್ಗೆ ಸುಳಿವೂ ಕೊಡುತ್ತಿಲ್ಲ. ಈ ಶಕ್ತಿ ಸಮಾಜದ ಉದ್ಧಾರಕ್ಕಾಗಿ ವಿನಿಯೋಗವಾಗುತ್ತಿದ್ದರೆ, ಇದನ್ನು ತಿಳಿದಿರುವ ನಾನು ಇದನ್ನು ಯಾರತ್ತಿರವೂ ಪ್ರಸ್ತಾಪವನ್ನೂ ಮಾಡಬಾರದೆಂದು ತೀರ್ಮಾನಿಸಿದ್ದೆ. ನಾಗೇಶನ ಮನಸ್ಸಿನ ಆಶಯ ಕೂಡ ಇದೇ ಆಗಿರಬಹುದು ಎಂಬ ಬಲವಾದ ನಂಬಿಕೆ. ನಾಗೇಶನ ಬಗ್ಗೆ ಕ್ರಮೇಣ ಭಕ್ತಿ ಭಾವ ತುಂಬಿಹೋಗಿತ್ತು. ಅನೇಕರಂತೆ ನಾನು ಕೂಡ ಆತನನ್ನು ಆರಾಧಿಸತೊಡಗಿದೆ. ಹಿಂದೆ ನಾನು ಹೆಚ್ಚಾಗಿ ದ್ವೇಷಿಸುತ್ತಿದ್ದ ಒಬ್ಬ ವ್ಯಕ್ತಿಯನ್ನು ಇಂದು ಅತಿ ಹೆಚ್ಚು ಆರಾಧಿಸುತ್ತೇನೆ. ಎಂಥಾ ವಿಪರ‍್ಯಾಸ!! ಹತ್ತು ವರ್ಷದಲ್ಲಿ ಏನೇನಾಗಿರಬಹುದು? ನಾಗೇಶನನ್ನು ಕೇಳಲೆ? ಸುಮ್ಮನೆ ಇದ್ದು ಬಿಡಲೆ? ಎಂದು ಯೊಚಿಸುತ್ತಿರುವಾಗಲೇ…
“ಮೇಷ್ಟ್ರೇ”, ಎಂದು ದೇವಾಲಯದ ಆಳು ಕುಂಬಯ್ಯ ಕೂಗಿದಾಗ ಬೆಚ್ಚಿದತಾದರು. ಅಯ್ಯೋ, ಬಹಳ ಹೊತ್ತು ಕುಳಿತು ಬಿಟ್ಟಿದ್ದೇನೆ. ಪೂರ್ತಿ ಕತ್ತಲಾವರಿಸಿದೆ. ಶಾರದೆ ಆತಂಕ ಪಡುತ್ತಿರಬಹುದೆಂದು ನಾನು ಆತುರದಲ್ಲಿ ಎದ್ದು ನಡೆದರು. ಮಾರ್ಗ ಮಧ್ಯೆ ಮನೆಗೆ ಹೊರಡುತ್ತಿದ್ದ ನಾಗೇಶ “ಮೇಷ್ಟ್ರು ಏನೋ ಬಹಳ ಯೋಚನೆ ಮಾಡುತ್ತಿದ್ದ ಹಾಗಿತ್ತು. ಬಹಳ ಯೋಚಿಸಬೇಡಿ. ಈ ಶ್ರಾವಣ ಮುಗಿಯುವ ಮುನ್ನ ನಿಮಗೆ ಕೆಲವು ಒಳ್ಳೆಯ ಸುದ್ದಿ ಸಿಗಲಿದೆ” ಎಂದನು. ಹಾಗೆಯೇ “ನಿಮ್ಮ ಪತ್ನಿಯವರಿಗೆ, ಭಗವಂತನಿಗೆ ಕೆಲವು ಸೇವೆ ಮಾಡಿಸಬೇಕೆಂತಿದೆ. ಅದನ್ನು ಇನ್ನೆರಡು ತಿಂಗಳಲ್ಲಿ ಮಾಡಿ ಮುಗಿಸಿ ಎಂದಾಗ ಮಾತ್ರ ಕೊಂಚ ಆತಂಕ.
ಮುಂದೆ ನಡೆದಿದ್ದರಲ್ಲಿ ಏನೂ ಆಶ್ಚರ್ಯವಿಲ್ಲ. ಒಂದು ವಾರದ ನಂತರ ಕಿತ್ತಾಡಿಕೊಂಡು ಬೇರೆಯಾಗಿದ್ದ ಹಿರಿಮಗ ಮತ್ತು ಸೊಸೆ ಒಂದಾದ ಸುದ್ದಿ. ಎಷ್ಟೇ ಪ್ರಯತ್ನಪಟ್ಟರೂ, ಯಾರ‍್ಯಾರ ಮಧ್ಯಸ್ಥಿಕೆಯಲ್ಲೂ ಬಗೆಹರಿಯದಿದ್ದ ಸಮಸ್ಯೆ ಬಗೆಹರಿದಿತ್ತು. ಮಗ, ಸೊಸೆ ಇಬ್ಬರೂ ಫೋನ್ ಮಾಡಿ ಇನ್ನೆಂದೂ ಈ ರೀತಿ ಪ್ರಸಂಗ ಬರದಂತೆ ನಡೆದುಕೊಳ್ಳುತ್ತೇವೆ. ಎಂದಾಗ ನನಗೆ ಯಾವುದೋ ಭಾರ ಇಳಿದ ಅನುಭವ. ಇದಾದ ಕೆಲವೇ ದಿನಗಳಲ್ಲಿ ಕೆಲಸವಿಲ್ಲದೆ ಹಾದಿ ತಪ್ಪುತ್ತಿದ್ದ ಕಿರಿಮಗನಿಗೆ ಪಿಡಬ್ಲ್ಯೂಡಿಯಲ್ಲಿ ಕೆಲಸದೊರಕಿತ್ತು. ನ್ಯಾಯಾಲಯದ ತಗಾದೆಯಲ್ಲಿ ಸಿಲುಕಿದ ನೇಮಕಾತಿಗೆ ಈಗ ಪರಿಹಾರ ದೊರಕಿತ್ತು. ನಂತರ ಗೊತ್ತಾದ ವಿಷಯವೇನೆಂದರೆ ಈ ಎರಡೂ ಸಮಸ್ಯೆಯನ್ನು ಪರಿಹರಿಸಲು ನಾಗೇಶನ ಪಾತ್ರವಿದೆ ಎಂದು. ಬೆಂಗಳೂರಿನಲ್ಲಿ ಒಂದು ವಿಚಾರ ಸಂಕಿರಣಕ್ಕೆ ಹೋದಾಗ ಅಲ್ಲೇ ಕೆಲಸ ಮಾಡುವ ನನ್ನ ಮಗನ ಜೊತೆ ಬಹಳ ಹೊತ್ತು ಮಾತಾಡಿ, ನಂತರ ಸೊಸೆಯ ಮನೆಗೆ ಹೋಗಿ ಆಕೆಯೊಂದಿಗೂ ಮಾತನಾಡಿ ಒಂದು ಮನಸ್ತಾಪಕ್ಕೆ ಮಂಗಳ ಹಾಡಿದ್ದಾನೆ. ಚಿಕ್ಕ ಮಗನ ಕೆಲಸದ ವಿಷಯದಲ್ಲಿ ನಿರುಪದ್ರವಿ ಆಗಿದ್ದ ವಕೀಲರನ್ನು ಬದಲಾಯಿಸಿ, ಉತ್ತಮವಾದವರಿಗೆ ಇದನ್ನ ವಹಿಸಿ ವಿಚಾರಣೆಯನ್ನು ಚುರುಕುಗೊಳಿಸಿ ತನ್ನ ಕೈಲಾದ ಸಹಾಯ ಮಾಡಿದ್ದಾನೆ.

ಈ ಬಗ್ಗೆ ಇಂದಿಗೂ ನಾಗೇಶನ ನನ್ನೊಡನೆ ಪ್ರಸ್ತಾಪಿಸಿಲ್ಲ. ನನಗೆ ಆಶ್ಚರ್ಯವಾಗುತ್ತದೆ !! ನಾಗೇಶನಿಗೆ ನನಗೆ ಒಳ್ಳೆಯದು ಮಾಡಬೇಕೆಂಬ ಹಂಬಲ ಏಕೆ? ಗಾಯತ್ರಿಯ ಘಟನೆಗೆ ಪ್ರಶ್ಚಾತ್ತಾಪಕ್ಕಾಗಿಯೇ? ಏನೋ ತಿಳಿಯದು!!!
ಎಲ್ಲವೂ ಒಳ್ಳೆಯದೆ ಆದರೆ ನಮಗೆ ಅಂಕುಶವೆಲ್ಲಿದೆ? ತುತ್ತು ನುಂಗಲು ಸ್ವಲ್ಪ ಕಷ್ಟವಾಗುತ್ತೆಂದು ಹೇಳಿದ ಹೆಂಡತಿ ಶಾರದೆಯನ್ನು ಡಾಕ್ಟರ್ ಬಳಿ ಕರೆದೊಯ್ದಿದ್ದರು. ಡಾಕ್ಟರ್ ಅಪ್ಪಾಜಿಗೌಡರು ಕೆಲವು ತಪಾಸಣೆಗಳನ್ನೆಲ್ಲಾ ಮಾಡಿ “ ಸ್ವಲ್ಪ ನಿಧಾನ ಮಾಡಿದ್ದೀರಿ ಮಾಸ್ತ್ರೆ” ಎಂದಾಗ ಮೈಯೆಲ್ಲಾ ಬೆವೆತಂತೆ. ಕ್ಯಾನ್ಸರ್ ಅಂತ ಧೃಡೀಕರಿಸಲು ಇನ್ನೂ ಕೆಲವು ಪರೀಕ್ಷೆಯ ಅಗತ್ಯವಿದೆ. ಮುಂದೆ ನೋಡೋಣ ಎಂದಾಗ ಆಕಾಶವೇ ಕಳಚಿ ಬಿದ್ದ ಭಾವ!! ಶಾರದೆಗೆ ಇದು ಯಾವುದೂ ಗೊತ್ತಿಲ್ಲ. ಶಾರದೆ ಮಾಡಿಸುತ್ತೇನೆಂದು ಹರಸಿಕೊಂಡಿದ್ದ ಸೇವೆಗಳನ್ನೆಲ್ಲಾ ದೇವಾಲಯದಲ್ಲಿ ನಡೆಯುತ್ತಿದೆ. ನಾಗೇಶನೇ ದೇವರ ಕಲ್ಯಾಣೋತ್ಸವ ನಡೆಸಿಕೊಟ್ಟಿದ್ದಾನೆ. ಶಾರದೆಗೆ ಎಂಥದೋ ತೃಪ್ತಿಯ ಭಾವನೆ. ಆಕೆಯ ಭಾವುಕತೆ ಕಂಡು ಮಾಸ್ತರ ಕಣ್ಣಂಚಿನಲ್ಲಿ ನೀರು..
ದೇವಾಲಯದ ಪುನರುಜ್ಜೀವಕ್ಕಾಗಿ ಅಪಾರ ಹಣ ಹರಿದು ಬಂದಿದೆ. ದೇವಾಲಯದ ಒಂದು ದತ್ತಿ ಮಾಡಿ ನಾಗೇಶ ಅದರ ಉಸ್ತುವಾರಿಗೆ ಮಾಸ್ತರನ್ನು ನೇಮಿಸಿದ್ದಾನೆ. ಈ ನಡುವೆ ” ಮೇಷ್ಟ್ರೆ, ನಿಮ್ಮ ಬಳಿ ಸ್ವಲ್ಪ ಮಾತಾಡಬೇಕು,ದಯವಿಟ್ಟು ಕುಳಿತುಕೊಳ್ಳಿ” ಎಂದು ಮೂರು ದೊಡ್ಡ ಲಕೋಟೆಗಳನ್ನು ಮಾಸ್ತರಿಗೆ ಕೂಟ್ಟನು. ಇದೇನು ಎಂದು ಅವರು ಪ್ರಶ್ನಾರ್ಥಕವಾಗಿ ನೋಡಲು
” ನಿಮಗೆ ಒಂದು ಮಹತ್ವವಾದ ಜವಾಬ್ದಾರಿ ವಹಿಸುತ್ತಿದ್ದೇನೆ..ನರಸಿಂಹ ಸ್ವಾಮಿ ದೇವಾಲಯದ ಪುನರುಜ್ಜೀವದ ಕಾರ್ಯ ಮುಂದಿನ ವಾರದಿಂದ ಶುರುವಾಗಲಿದೆ. ಎರಡು ವರ್ಷದವರೆಗು ನಡೆಯುವ ಈ ಕಾರ್ಯಕ್ಕೆ ನಿಮ್ಮನ್ನ ನೀವು ಪೂರ್ಣವಾಗಿ ತೊಡಗಿಸಿಕೊಳ್ಳಬೇಕು.ಇದರಲ್ಲಿ ದೇವಲಯದ ರೂಪ ರೇಷೆಗಳು,ಮುಂದೆ ದೇವಾಲಯ ಸಮಾಜಮುಖಿಯಾಗಿ ಸಾಗಬೇಕಾದ ದಾರಿ..ಇದರ ಬಗ್ಗೆ ನನ್ನ ಮುಂದಿನ ಆಶಯ ಎಲ್ಲವೂ ಬರೆದಿದ್ದೇನೆ. ಇದರಂತೆ ಮುಂದುವರಿಯಿರಿ” ಎಂದು ಹೇಳಿದನು. ಅವರಿಗೆ ಸೋಜಿಗವಾಯಿತು..”ಮುಂದಿನದೆಲ್ಲ ನಡೆಸುವುದಕ್ಕೆ ನೀನಿರುವಾಗ ವಯಸ್ಸಾದ ನನಗೆ ಇದೆಲ್ಲ ಏಕೆ ಹೇಳುತ್ತಿರುವೆ? ಎಂದು ಕೇಳಲು ” ಮೇಷ್ಟ್ರೆ, ಬಹಳ ಮುಖ್ಯವಾದ ವಿಷಯಕ್ಕೆ ಈಗ ಬರುತ್ತೇನೆ..ಮುಂದಿನ ದೀಪಾವಳಿಗೆ ಅಂದರೆ ಸುಮಾರು ಇವತ್ತಿಗೆ ಒಂದೂವರೆ ವರ್ಷಕ್ಕೆ ಸರಿಯಾಗಿ ನಾನು ಇಲ್ಲಿಂದ ಹೊರಡುತ್ತೇನೆ..ಎಲ್ಲಿಗೆ ಎಂದು ಕೇಳಬೇಡಿ..ನಂತರ ಮಿಕ್ಕ ಕೆಲಸಗಳನ್ನು ಪೂರ್ಣಗೊಳಿಸಿ ನನ್ನ ಆಶಯದಂತೆ ಮುಂದುವರಿಸಿ..ಎಲ್ಲವನ್ನು ವಿವರವಾಗಿ ಬರೆದಿದ್ದೇನೆ..ದೇವರ ಇಚ್ಛೆಯಂತೆ ಮುಂದಿನ
ಹದಿನಾರು ವರ್ಷ ನಿಮ್ಮ ಆಡಳಿತ ನಡೆಯಲಿದೆ ಎಂದು ಅವರ ಆಯುಷ್ಯವನ್ನು ಕೂಡ ಪರೋಕ್ಷವಾಗಿ ತಿಳಿಸಿದ. ಇದರ ಬಗ್ಗೆ ಯಾರೊಡನೆಯು ಚರ್ಚಿಸಬೇಡಿ..ಗೌಪ್ಯವಾಗಿರಲಿ..
ಮತ್ತೆ ಇನ್ನೊಂದು ಲಕೋಟೆಯ ವಿಷಯಕ್ಕೆ ಬರುವುದಾರೆ,ನನ್ನ ಬಗೆಗಿನ ನಿಮ್ಮ ಎಲ್ಲ ಕೌತುಕಗಳಿಗೆ ಇದರಲ್ಲಿ ಕೆಲವು ಉತ್ತರವಿದೆ..ಇದರ ಜೊತೆಗೆ ಗಾಯತ್ರಿಗೆಂದು ಬರೆದಿರುವ ಒಂದು ಪತ್ರವಿದೆ..ಇದನ್ನು ನಾನು ಹೊರಟ ನಂತರ ತೆರೆಯಿರಿ..ಪತ್ರವನ್ನ ಗಾಯತ್ರಿಗೆ ತಲುಪಿಸಿ..ಮುಂದೆ ಆಕೆಯಿಂದಲೂ ಈ ನಮ್ಮ ನರಸಿಂಹ ಸ್ವಾಮಿಯು ಅಪಾರವಾದ ಸೇವೆ ಪಡೆಯುತ್ತಾನೆ..ಮತ್ತು ಕಡೆಯದಾಗಿ ಸಾಧ್ಯವಾದರೆ ನನ್ನ ತಪ್ಪಿಗೆ ಕ್ಷಮೆಯಿರಲಿ..” ಎಂದು ಎರಡು ಕೈ ಮುಗಿದು ನಮಸ್ಕಾರ ಮಾಡಿದನು.. ಮಾಸ್ತರಿಗೆ ಭಾವ ತುಂಬಿ ಬಂದು ಮಾತಾಡಲು ದನಿಯೆ ಹೊರಡಲಿಲ್ಲ..ಸುಮ್ಮನೆ ಪ್ರತಿಯಾಗಿ ನಮಸ್ಕರಿಸಿ ಹೊರಟು ಲಕೋಟೆಗಳನ್ನು ಜೋಪಾನವಾಗಿ ಇಟ್ಟಿದ್ದೇನೆ..ಮನಸ್ಸಿನಲ್ಲೇ ತೀರ್ಮಾನವಾಗಿದೆ “ನಾಗೇಶನ ಬಗೆಗಿನ ನನ್ನ ಕೌತುಕ ಹಾಗೆಯೇ ಉಳಿದು ಹೋಗಲಿ..ಆ ಲಕೋಟೆ ನಾನು ಒಡೆಯುವುದಿಲ್ಲ..”
ದೇವಾಲಯದ ಕೆಲಸ ಶುರುವಾಗಿದೆ..ನಾಗೇಶ ಎಂದಿಗಿಂತಲು ಹೆಚ್ಚು ಮಾಸ್ತರನ್ನು ಎಲ್ಲ ವಿಷಯದಲ್ಲೂ ತೊಡಗಿಸುತ್ತಿದ್ದಾನೆ..ಅವರು ಕೂಡ ಈ ಕಾರ್ಯದಲ್ಲಿ ಮಗ್ನನಾಗುತ್ತಿದ್ದಾರೆ..ಚಿಂತೆಗಳು ಅವರನ್ನು ಕಾಡುತ್ತಿಲ್ಲ..
ಮನಸ್ಸಿನಲ್ಲೇ ಯೋಚಿಸುತ್ತೇನೆ..” ಈ ಜೀವನ ನಡೆಯುವ ದಾರಿ ಮತ್ತು ತೆಗೆದುಕೊಳ್ಳುವ ಕವಲುಗಳಿಗೆ ಯಾವುದೇ ತರ್ಕವಿಲ್ಲ. ತನ್ನಂತೆ ತಾನೇ ಎಲ್ಲರನ್ನೂ ಎಳೆದುಕೊಳ್ಳುವ ವಿಧಿ, ಈ ಪಯಣದಲ್ಲಿ ಸುಖ, ದುಃಖಗಳನ್ನು ತನ್ನಿಚ್ಛೆಯಂತೆ ಹಂಚುತ್ತಾ ಹೋಗುತ್ತದೆ. ತೆಗೆದುಕೊಳ್ಳುವವನಿಗೆ ಯಾವುದೇ ಆಯ್ಕೆಯಿಲ್ಲ. ನಮ್ಮ ಪ್ರಯತ್ನ ಕೇವಲ ನಿಮಿತ್ತ ಮಾತ್ರ. ದೈನ್ಯತೆಯಿಂದ ನರಸಿಂಹಸ್ವಾಮಿಯ ಕಡೆ ನೋಡುತ್ತೇನೆ. ನಂದಾದೀಪದ ಬೆಳಕಿನಲ್ಲಿ ಎಂದಿಗಿಂತಲೂ ಹೆಚ್ಚಿನ ತೇಜಸ್ಸಿನಲ್ಲಿ ಸ್ವಾಮಿ ಕುಳಿತಿದ್ದಾನೆ. ಸಾಮನ್ಯರ ಅಂಕೆಗೆ ಸಿಗದ ಭೂತ, ಭವಿಷ್ಯತ್‌ಗಳಿಗೆಲ್ಲಾ ನೀನೇ ಕಾರಣನು ಎಂದುಕೊಳ್ಳುತ್ತಾ ಮನೆಯ ಕಡೆಗೆ ಹೆಜ್ಜೆ ಹಾಕುತ್ತಾ,ಹೊಸ ಸವಾಲುಗಳಿಗೆ ಅಣಿಯಾಗುತಿದ್ದೇನೆ…






Chennagide 🙂