ಉಮೇಶ್ ದೇಸಾಯಿ
“ನೀವಿಬ್ಬರೂ ಭೇಟಿಯಾದಾಗ ಒಂದು ಬ್ರೇಕಿಂಗ್ ನ್ಯೂಸ್ ಕೊಡತೇನಿ..” ಮಹಾದೇವಿಯ ಮಾತು ಇವು. ನಾವಿಬ್ಬರೂ ಅಂದರ ನಾನು ಮತ್ತು ಜ್ಯೋತಿ. ನಾವು ಮೂರು ಜನ ಒಟ್ಟಿಗೆ ಕಾಕಲೇಜು ಕಲತವರು. ಅದು ಮುಗದು ನಮ್ಮ ಮದಿವಿ ಆಗಿ ಮಕ್ಕಳಾಗಿ ಆ ಮಕ್ಕಳು ದೊಡ್ಡವರಾಗಿ ಕೆಲಸ ಸಹ ಮಾಡಲಿಕ್ಕೆ ಸುರು ಮಾಡ್ಯಾರ. ಮೇಲಾಗಿ ನಾ ಇರೋದು ಧಾರವಾಡದಾಗ ಅವರಿಬ್ಬರೂ ಬೆಂಗಳೂರು ವಾಸಿಗಳು. ಜ್ಯೋತಿ ಜೋಡಿ ಫೋನು, ಫೇಸಬುಕ್ಕು ಅಂತ ಸಹವಾಸ ಇತ್ತು. ಮಹಾದೇವಿಗೆ ನೋಡದನ ಎಷ್ಟೋ ದಿನ ಆಗಿದ್ದವು. ಜ್ಯೋತಿ ನಾನು ಫೇಸಬುಕನ್ಯಾಗ ಅವಾಗಿವಾಗ ಮಾತಾಡತಿದ್ದವಿ. ನಮ್ಮಿಬ್ಬರ ಮಾತುಗಳ ಕೇಂದ್ರಬಿಂದು ಮಹಾದೇವಿ ಆಗಿರತಿದ್ಲು. ಅಕಿ ಎಲ್ಲಿದ್ದಾಳ ಈಗ ಏನು ಮಾಡತಾಳ ಅನ್ನೋ ಊಹಾದಾಗ ನಮ್ಮ ಹರಟೆ ಮುಳುಗಿರತಿತ್ತು. ಅಂಥಾದ್ದು ಈಗ ಅಕಿ ಹಿಂಗ ಘೋಷಣಾಮಾಡ್ಯಾಳ..ಮತ್ತು ಬಹಳ ದಿನದ ಮೇಲೆ ಭೇಟಿಯಾಗಾಕಿದ್ದಾಳ ಇದು ಖುಶಿಯ ಸಂಗತಿನ ಆಗಿತ್ತು.ನಾ ಬಳಗದವರ ಮದುವಿಗೆ ಬೆಂಗಳೂರಿಗೆ ಹೋಗಿದ್ದೆ. ಮಗಳು ಅಲ್ಲಿಯ ಕಂಪನಿಯಲ್ಲಿ ಇಂಜಿನೀಯರು..ಅವಳೂ ಜುಲಮಿ ಮಾಡಿದಳು ಎರಡು ದಿನ ಇದ್ದು ಹೋಗು ಅಂತ. ಇವರು ವಾಪಸ ಧಾರವಾಡಕ್ಕ ಹೋದರು. ಮಗಳು ಆಫೀಸಿಗೆ ರಜಾಹಾಕಿ ಅಲ್ಲಿ ಇಲ್ಲಿ ಸುತ್ತಾಡಿಸಿದಳು. ಮಜಾನೂ ಬಂತು.ಹಂಗ ಜ್ಯೋತಿಗೆ ಫೋನಮಾಡಿ ಹೇಳಿದ್ದೆ. ಅಕಿಗೆ ಮಹಾದೇವಿಯ ನಂಬರ ಸಿಕ್ಕಿದ ವಿಶಯ ಹಂಗ ನಾ ಬೆಂಗಳೂರಿಗೆ ಬಂದ ವಿಷಯನೂ ಅಕಿ ಮಹಾದೇವಿಗೆ ತಿಳಿಸಿದ್ದಾಗಿ ಜ್ಯೋತಿ ಹೇಳಿದಳು. ಮಧ್ಯಾಹ್ನ ಊಟಮುಗಿಸಿ ಕೂತಾಕಿಗೆ ಮಹಾದೇವಿ ಫೋನು ಬಂತು ಅದು ಇದು ಮಾತಾಡಿ ಮೇಲಿನಂಗ ಅನೌನ್ಸ ಮಾಡಿದಳು. ಸೇರುವ ಜಾಗಾದ ಪತ್ತೆ ಹೇಳಿದಳು. ನಾ ತಯಾರಾಗಿ ಮಗಳಿಗೆ ಹೇಳಿ ಹೊರಟುನಿಂತೆ. ಗೆಳತಿಯರ ಪುನರ್ಮಿಲನದ ಬಗ್ಗೆ ಅನೇಕ ಆತಂಕ ಹಂಗ ಸಂತೋಷನೂ ಇತ್ತು.
***
ಮಹಾದೇವಿ, ಜ್ಯೋತಿ ಮತ್ತು ನಾನು ಕೆಸಿಡಿ ಹುಡುಗಿಯರು. ಎಲ್ಲಾರೂ ಸಾಯನ್ಸ, ಕಾಮರ್ಸ ತಗೊಂಡಿದ್ರ ನಾವು ಕಲಾ ವಿದ್ಯಾರ್ಥಿನಿಯರು. ಏನು ಮಾಡಿದ್ರೂ ನಾವು ಮೂರು
ಮಂದಿ ಜೋಡಿನ ಇರಾವರು. ನಾ ಹೆದರಬುರಕಿ ಯಾರರೆ ಹುಡುಗ ಸೀಟಿಹೊಡದಾ ಅಂದರ ದಳದಳ ಆಳಾಕಿ. ಜ್ಯೋತಿದು ವಿಚಿತ್ರ ಸ್ವಭಾವ. ಅವಾಗಾವಾಗ ಜಗಳಾಡಾಕಿ..
ಮರುದಿನ “ಸಾರೀ ಲೇ ಇನ್ನೊಮ್ಮೆ ಹಿಂಗ ಆಗೂದಿಲ್ಲ..” ಅಂತ ಬಂದು ಅಂಟಿಕೊಳ್ಳುವಾಕಿ. ಅಕಿಗೆ ಮಹಾದೇವಿನ ಕಂಡರ ಮತ್ಸರ ಇತ್ತು. ಅವಾಗಾವಾಗ ಅವರಿಬ್ಬರ ನಡುವೆ ಜಟಾಪಟಿ ಆಗತಿದ್ದವು. ನಾ ಇಬ್ಬರನ್ನೂ ಸಂಭಾಳಿಸಿಕೋತಿದ್ದೆ. ಮಹಾದೇವಿಯ ತಂದಿದು ದಾವಣಗೆರಿಯೊಳಗ ದೊಡ್ಡ ವ್ಯವಹಾರ ಇತ್ತು. ಅಕ್ಕಿಮಿಲ್ಲು, ಜವಳಿ ಅಂಗಡಿ ಹಿಂಗ ರೊಕ್ಕ ಕಾಲುಮುರದು ಬಿದ್ದಿತ್ತು. ಒಬ್ಬಾಕಿನ ಮಗಳು ಆಶಾ ಮಾಡಿದಳು ಅಂತ ಧಾರವಾಡದಾಗ ಹಾಸ್ಟೆಲಿನ್ಯಾಗ ಇರಸಿ ಓದಸತಿದ್ರು. ಮಹಾದೇವಿ ನಮ್ಮಿಬ್ಬರಿಗಿಂತನೂ ತಿಳಿಬಣ್ಣದಾಕಿ ಹಂಗ ಶಾಣ್ಯಾನೂ ಇದ್ದಳು. ಕೆಸಿಡಿಂಯ ವಾತಾವರಣ ಅಕಿಗೆ ಹೊಸಾ ಹುರಪು ಕೊಟ್ಟಿತ್ತು. ಅಲ್ಲಿನ ಡಿಬೇಟನ್ಯಾಗ ಅಕಿ ಮೇಜುಕುಟ್ಟಿ ಮಾತಾಡುವುದು ಜನಜನಿತ ವಿಶಯ ಆಗಿತ್ತು.
ನಮ್ಮಪ್ಪ ಯುನಿವಸರ್ಿಟಿಯೊಳಗ ಪ್ರೊಫೆಸರ ಆಗಿದ್ದರು. ಹಗಲೆಲ್ಲ ನಮ್ಮನಿಗೆ ಬರತಿದ್ದಳು. ಅಪ್ಪನ ಜೋಡಿ ಚರ್ಚಾ ಮಾಡತಿದ್ಲು. ಡಿಬೇಟಿಗೆ ಪಾಯಿಂಟ್ಸ ಹಾಕೊತಿದ್ದಳು. ಅಕಿ ಕಡೆ
ದುಡ್ಡು ಇರತಿತ್ತು. ಹಿಂಗಾಗಿ ಅವಾಗಿವಾಗ ಸಂಗಂ ಟಾಕೀಸಿನ್ಯಾಗ ಸಿನೆಮಾ, ಬಾಂಬೆ ಹೊಟೆಲಿನ ತುಪ್ಪದ ದ್ವಾಸಿ ಮೇಜವಾನಿ ಆಗತಿದ್ದವು. ಅಕಿ ಯಾರ ಜೋಡಿನು ಜಗಳಾಡೂದು,
ವಾದ ಹಾಕೂದು ಮಾಡಿದಾಕಿ ಅಲ್ಲ.ಎಲ್ಲಾರೂ ಅಕಿಗೆ ಬೇಕು..ಅದರಾಗ ನಾವಿಬ್ರಂತೂ ಅಕಿ ಡಿಬೇಟಿನಲ್ಲಿ ವಾದ ಮಾಡಬೇಕಾದರ ಚಪ್ಪಾಳಿ ಹೊಡದು ಹುರಿದುಂಬಿಸಬೇಕು.
ಅಕಿ ಬಹಳ ಓದತಿದ್ದಳು..ನಾವು ಸುಧಾ, ಕರ್ಮವೀರನ ಪೂರತಿ ಓದತಿರಲಿಲ್ಲ ಅಕಿ ಮಾತ್ರ ವೀಣಾ ಶಾಂತೇಶ್ವರ, ಅಮೃತಾ ಪ್ರೀತಂ, ಮಹಾಶ್ವೇತಾ ದೇವಿ,ಕಮಲಾದಾಸರ ಕತಿ,ಕವಿತಾ ಓದುವಾಕಿ..ಅವುಗಳ ಬಗ್ಗೆ ನಮ್ಮೊಡನೆ ಚರ್ಚಾ ಮಾಡಾಕಿ. ಅಕಿ ಮಾತಾಡಿದ್ರಾಗ ಭಾಳ ವಿಷಯ ನಮ್ಮ ತಲಿಮ್ಯಾಲಿಂದ ಹಾರಿ ಹೋಗತಿದ್ದವು. ಮಾತಾಡುವಾಗ ಅಕಿ ದನಿ ಉದ್ವೇಗದಿಂದ ಕಂಪಸತಿತ್ತು..ಹೊಸಾ ಜೋಶ್ ಇರತಿತ್ತು ಅಕಿ ಮಾತಿನ್ಯಾಗ. ನಾ ಒಂದೊಂದಸಲಾ ವಿಚಾರ ಮಾಡತಿದ್ದೆ..ಮಹಾದೇವಿ ನಾಳೆ ಏನಾಗಬಹುದು..ಈಗಿನ ಅಕಿ ಜೋಶ್ ನೋಡಿದರ ಲೀಡರ್ ಆಗುವ ಎಲ್ಲಾ ಗುಣಗಳು ಇದ್ದವು. ನನ್ನಪ್ಪ ಮಾತ್ರ ಇದಕ ವಿರುಧ್ದವಾದ ವಾದ ಇಟ್ಟ. ಅವ ಹೇಳುವ ಪ್ರಕಾರ ಮಹಾದೇವಿ ಅಕಿ ತಂದಿ ತೋರಸೋ ಹುಡುಗನ ಜೋಡಿ ಮದಿವಿ ಆಗತಾಳ ಮತ್ತ ಈ ಡಿಬೇಟು, ಕ್ರಾಂತಿ ಎಲ್ಲಾ ಮರೀತಾಳ ಅಂತ. ವಿಚಿತ್ರ ಅಂದ್ರ ಅಪ್ಪ ಹೇಳಿದಂಗ ಆಗಿತ್ತು. ಕಾಲೇಜಿನ ಕೊನೆ ಸೆಮಿಸ್ಟರು ಪರೀಕ್ಷಾತಯಾರಿಯೊಳಗ ಇದ್ದವಿ. ಅಂದು ಬೀಳ್ಕೊಡುವ ಸಮಾರಂಭ..ಎಲ್ಲಾರ ಜುಲಮಿಗೆ ಮಹಾದೇವಿ ಮಾತಾಡಿದಳು. ಹೆಂಗ ಈ ಕಾಲೇಜು ಜೀವನ ಇತ್ತು, ಇಲ್ಲಿ ಕಲತ ವಿಷಯ, ಇಲ್ಲಿನ ವಾತಾವರಣ ಹೆಂಗ ಉಪಯೋಗಕಾರಿ ಅದ..ಅಕಿ ಭಾಷಣ ಮುಗದಾಗ ಜಂತಿ ಕಳಚಿಬೀಳುವಷ್ಟು ಜೋರಾಗಿ ಚಪ್ಪಾಳಿ ಬಿದ್ದವು. ಅವತ್ತು ಅಕಿ ತಂದಿನೂ ಬಂದಿದ್ರು. ನಮಗೆಲ್ಲ ಪರಿಚಯ ಮಾಡಿಸಿಕೊಟ್ಟಳು. ಅವರ ಜೋಡಿ ಕಾರಿನ್ಯಾಗ ಕೂತ ಹೋದಾಕಿ ತನ್ನ ಮದವಿ ಕಾಡರ್ು ಹಿಡದು ಬಂದ ಭೆಟ್ಟಿಯಾಗಿದ್ದಳು.
ಅಕಿ ಜೀವನದಾಗ ಹೊಸ ಗಾಳಿ ಬೀಸಿತ್ತು. ಅಕಿ ತಂದೆಯ ಗೆಳೆಯ ದಾವಣಗೆರೆಯ ಎಂಪಿ ಆಗಿದ್ದರು. ಅವರ ಮಗ ಅಮೇರಿಕದಲ್ಲಿ ಎಂಬಿಎ ಓದಿ ವಾಪಸ್ ಬಂದಿದ್ದ.ಅವರೇ ಮುಂದು ಬಂದು ಮಹಾದೇವಿಯನ್ನು ಕೇಳಿದ್ದರು.ಇವರೂ ಒಪ್ಪಿದರು. ಮಹಾದೇವಿ ಹುಡುಗನ ಜೊತೆ ಮಾತಾಡಿ ಒಪ್ಪಿದ್ದಳು. ಮದುವೆ ಕರೆಯೋಲೆ ಹಿಡಿದವಳ ಮೊಗದಲ್ಲಿ ನೂರಾರು ನಕ್ಷತ್ರ ಹೊಳೆಯುತ್ತಿದ್ದವು. ಕೊಂಕು ನುಡಿದಾಕಿ ಜ್ಯೋತಿ..”ನಾ ತಿಳಕೊಂಡಿದ್ದೆ ಗಡ್ಡ ಬಿಟ್ಟ ಯವುದೋ ಕ್ರಾಂತಿಕಾರಿನ ಇಕೀಗೆ ಸಿಗೋದು ಅಂತ..ಛಲೋ ಮಿಕಾನ್ನ ಬುಟ್ಟಿಗೆ ಹಾಕೊಂಡಾಳ…” . ಅಕಿ ಲಗ್ನನೂ ಜೋರಾಗಿತ್ತು.ನಾವಿಬ್ಬರೂ ಗೆಳತ್ಯಾರು ಮೂರುದಿನ ಮೊದಲ ಹೋಗಿದ್ವಿ. ಹುಡುಗ ಅಂದರ ಸುಂದರೇಶ ಅವನ ಹೆಸರು ನೋಡಲಿಕ್ಕೂ ಸುಂದರ ಇದ್ದ. ಅಕಿ ಪರಿಚಯ ಮಾಡಿಕೊಟ್ಟಳು ಆತ್ಮೀಯವಾಗಿ ಮಾತಾಡಿದ. ಮುಂದ ಅನೇಕ ರೀತಿಯ ಘಟನಾ ಒಮ್ಮೆಲೆ ಆದಂಗಾದವು. ಜ್ಯೋತಿಗೆ ಕೆಲಸ ಸಿಕತು ಅಕಿ ಧಾರವಾಡ ಬಿಟ್ಟಳು. ನಾ ಒಂದು ಸಾಲಿಯೊಳಗ ಟೀಚರ್ ಅಂತ ಕೆಲಸಕ್ಕೆ ಸೇರಿದೆ.ನಂಗ ಮದುವಿ ಮಾಡಬೇಕು ಎಂಬ ಮನಿಯೊಳಗಿನ ಖಟಿಪಿಟಿ ಜೋರಾಗಿತ್ತು. ಬ್ಯಾಂಕಿನ ಕೆಲಸದ ಹುಡುಗ ನನ್ನ ಮೆಚ್ಚಿದ. ನಂದೂ ಮದುವಿ ಆತು. ಮಹಾದೇವಿ ಅವಾಗ ಇಂಗ್ಲೆಂಡಿಗೆ ಹೋಗಿದ್ದಳು..ಜ್ಯೋತಿ ಬಂದಿದ್ದಳು. ಇವರಿಗೆ ಹಗಲೆಲ್ಲ ವರ್ಗ ಆಗತಿತ್ತು.ಸಂಸಾರದ ಗಡಿಬಿಡಿ,ಸುನಂದಾಳ ಜನನ ತಂದಿಸಾವು..ಘಟನಾಕ್ರಮಕ್ಕ ಆದಿ ಅಂತ್ಯ ಇರಲಿಲ್ಲ. ಹಂಗ ಜ್ಯೋತಿದೂ ಮದುವಿ ಆಗಿತ್ತು..ಅಕಿಗೂ ಗಂಡು ಮಗು ಆಗಿತ್ತು. ಮಹಾದೇವಿಯ ಮಾವ ಅಚಾನಕ್ಕಾಗಿ ತೀರಿಕೊಂಡರು. ಅವರ ಎಂಪಿ ಸೀಟು ಖಾಲಿಇತ್ತು.ಅದ ತುಂಬಲು ಆ ಪಾರ್ಟಿ ಮಂದಿ ಸುಂದರೇಶ್ ಗ ಜುಲುಮಿ ಮಾಡಿದರು.ಅವನೂ ಒಪ್ಪಿಕೊಂಡ. ಮಹಾದೇವಿ ಜೀವನದಾಗ ಮುಂದ ಏಳೂ ಬಿರುಗಾಳಿಗೆ ಇದು ನಾಂದಿಯಾತು. ಟಿವಿಯವರು ನಡೆಸಿದ ಖ್ಯಾತನಾಮರ ಪತ್ನಿಯರು ಮಾಲಿಕೆಯಲ್ಲಿ ಅಕಿ ಬಂದಿದ್ದಳು. ಅಕಿಗೂ ಮಗ ಹುಟ್ಟಿದ್ದ. ಸ್ವಲ್ಪ ದಪ್ಪ ಆದಂಗ ಅನಿಸಿದಳು. ಜೀವದ ಗೆಳತಿಬಗ್ಗೆ ಬಂದ ಟಿವಿಕಾರ್ಯಕ್ರಮ ಅದು..ನಾ ಅದರ ಮುಂದಿಂದ ಅದು ಮುಗಿಯುವತನ ಎದ್ದಿರಲಿಲ್ಲ. ಮತ್ತೊಂದು ದಿನ ಟಿವಿಯಿಂದನ ಅಕಿ ದರ್ಶನ ಆಗಿತ್ತು
ಆದರ ಬ್ಯಾರೆ ರೂಪದಾಗ.ನಾ ಅವಾಗ ಪುಣೆದಾಗ ಇದ್ದೆ..ನಾದಿನಿಯಿಂದ ಫೋನು ಬಂತು ಲಗೂನ ಕನ್ನಡ ನ್ಯೂಸ ಚಾವೆಲ ಹಚ್ಚಲಿಕ್ಕೆ ಹೇಳಿದಳು. ಮಹಾದೇವಿ ಟಿವಿಯೊಳಗ ಬಂದಾಳ ಅಂತ ಹೇಳಿದಳು.ಮಹಾದೇವಿ ಇದ್ದಳು..ಅಳತಿದ್ದಳು.ಕೆಳಗಡೆ ಸುಂದರೇಶನ ಜೊತೆಯ ಮದುವೆ ಮುರದು ಬಿದ್ದ ಸುದ್ದಿ ಬರತಿತ್ತು. ಕತೆ ಅಂದರ ಸುಂದರೇಶಗ ನಟಿಯೊಬ್ಬಳ ಜೋಡಿ ಅಫೇರಇತ್ತು. ಅವ ಅದನ ಒಪ್ಪಿಕೊಂಡಿದ್ದ ಕೂಡ. ಅದು ಮಹಾದೇವಿಗೆ ಗೊತ್ತಾಗಿ ಅಕಿ ಸಿಡದು ನಿಂತಿದ್ದಳು. ಅವ ಸಿಟಿಂಗ್ ಎಂಪಿ ಮುಂದ ಮಂತ್ರಿಯಾಗಾವ. ಇಂಥಾಬಿಸಿ ಸುದ್ದಿ ಮೀಡಿಯಾದವರಿಗೆ ಸಿಕ್ಕು ಅದನ ಹೆಂಗ ಬೇಕಾದಂಗ ಎಳದಾಡತಿದ್ದರು. ಮಹಾದೇವಿ ನಿರೂಪಕ ಕೇಳುವ ತರತರಹದ ಪ್ರಶ್ನೆಗಳಿಗೆ ಶಾಂತವಾಗಿ ಅಷ್ಟ ಖಂಡಿತವಾಗಿ ಮಾತಾಡಿದಳು. ಇಂಥಾ ನಂಬಿಕೆದ್ರೋಹ ಮಾಡುವವನ ಜೊತೆ ಇರಲು ನನಗೆ ಸೇರೂದಿಲ್ಲ ಅವ ಏನೇ ಇರಬಹುದು ಅವನ ಅಧಿಕಾರದ ವ್ಯಾಪ್ತಿಗೆ ನಾ ಬಗ್ಗುವುದಿಲ್ಲ ಅಂತ ಹೇಳುತ್ತಿದ್ದಳು. ನನಗೆ ಕಾಲೇಜಿನ ದಿನಗಳ ಆ ಮಹಾದೇವಿ ನೆನಪಾದಳು. ಎಲ್ಲ ಗದ್ದಲದ ನಡುವೆ ಅವಳೆಲ್ಲೋ ಕಳೆದುಹೋಗಿದ್ದಳು..ಮತ್ತೆ ಅವಳು ಕಂಡುಬಂದಿದ್ದಳು. ನಿರೂಪಕ ಮುಂದಿನ ದಾರಿಯಬಗ್ಗೆ ಕೇಳಿದ ಆಗಲೂ ಅವಳದು ಸ್ಪಸ್ಟ ಉತ್ತರ. ತಾ ನಡೆಸುತ್ತಿರುವ ಎನ್ಜಿಓ ಕೆಲಸ ಇದೆ ಅದರಿಂದ ನಾಕು ಜನಕ್ಕೆ ಉಪಯೋಗಆಗುತ್ತದೆ ಅಂತೆಲ್ಲ ಹೇಳಿದಳು.ಸುಂದರೇಶಗೂ ಆ ಚಾನೆಲನವರು ಫೋನ ಮಾಡಿದ್ದರು ಪ್ರತಿಕ್ರಿಯೆನೀಡದೆ ಅವ ಸಂಪರ್ಕ ಕಡಿದಿದ್ದ.

.ಜ್ಯೋತಿದು ಫೋನ ಬಂದಿತ್ತು. ನಮ್ಮಿಬ್ಬರ ನಡುವೆ ಮಹಾದೇವಿ ವಿಶಯದಾಗ ವಾದಾನೂ ಆದವು.ಅಕಿಗೆ ಮಹಾದೇವಿ ಅನುಸರಿಸಿಕೊಂಡು ಹೋಗಬೇಕು ಅನಿಸಿತ್ತು. ನಾ ವಿಶ್ವಾಸ ಇಲ್ಲದವನ ಜೊತೆ ಅಕಿ ಹೆಂಗ ಬಾಳುವೆ ಮಾಡಬೇಕು ಅಂತ ವಾದಿಸಿದ್ದೆ. ಯಾರೂ ಗೆಲ್ಲಲಿಲ್ಲ ಸೋಲಲಿಲ್ಲ..ಈ ಎಲ್ಲ ಹಗರಣದ ನಡುವೆಯೂ ಸುಂದರೇಶನ ಪಕ್ಷ ಅವನಿಗೆ ಅಧಿಕಾರ ಕೊಟ್ಟು ದೆಹಲಿಗೆ ಕರೆಸಿಕೊಂಡಿತ್ತು. ಅವರಿಬ್ಬರ ವಿಚ್ಛೇದನದ ಔಪಚಾರಿಕತೆ ಮುಗದು ಮಗ ಅಪ್ಪನ ಜೋಡಿ ಹೋಗಿದ್ದ. ಜ್ಯೋತಿನೂ ಅಕಿಗೆ ಭೇಟಿಯಾಗಲು ಬಹಳ ಪ್ರಯತ್ನ ಪಟ್ಟಿದ್ದಳು ಅಕಿಗೂ ಯಶಸ್ಸು ಸಿಗಲಿಲ್ಲ. ಗೆಳತಿಯ ಬಾಳು ಹಿಂಗಾಗಿದ್ದು ಕೆಡುಕೆನಿಸಿತ್ತು. ನಾರಿ ಸಮಾನತೆ, ಹಕ್ಕು ಎಲ್ಲಾ ಓದಲಿಕ್ಕೆ ಕೇಳಲಿಕ್ಕೆ ಸರಿ.ಸ್ವತಃ ಆ ನೋವು ಅನುಭವಿಸೋದು ಅಷ್ಟುಸುಲಭದ್ದಲ್ಲ.ವಿಪಯರ್ಾಸ ಅಂದರ ಏನೂ ಆಗೇ ಇಲ್ಲ ಅಂತ ಅಕಿಗಂಡ ಆರಾಮಿದ್ದಾನ.ಇಕಿನೂ ಎಲ್ಲಾರ ಸಂಪರ್ಕ ಕಡಕೊಂಡಾಳ ಮೀಡಿಯಾದವರು ರಾಡಿ ಎಬ್ಬಿಸಿ ಮಜಾ ನೋಡಿ ಸುಮ್ಮನಾದರು. ಪರಿಹಾರ ಏನು ಯಾರಿಗೂ ಬೇಕಾಗಿರಲಿಲ್ಲ. ಬರಬರತ ಆ ಹಗರಣ ಮರಿಆತು ನೆನಪಿನ ಪಟಲದಿಂದ. ಜೀವದ ಗೆಳತಿ ಎಲ್ಲಿದ್ದಾಳ ಏನ ಮಾಡತಾಳ ಅನ್ನುದು ಮರೆಯುವಂಗ ಮಾಡುವ ಕಲಾ ಈ ಜೀವನದ ಓಟಕ್ಕೆ ಇತ್ತು. ಅದರ ಪ್ರವಾಹದಾಗ ನಾನೂ ಓಡಿದೆ. ಕೆಲಸ ಅಂತೂ ಇಂತೂ ಧಾರವಾಡದೊಳಗ ಜಾಗಾ ತಗೊಂಡು ತಲಿಮ್ಯಾಲ ಸ್ವಂತದ್ದು ಸೂರು ಕಟಗೊಳ್ಳುವುದರಾಗ ಉಳಿದ ವಿಶಯಗಳ ಬಗ್ಗೆ ತಲಿಕೆಡಿಸಿಕೊಳ್ಳುವ ವೇಳೆ ಇರಲಿಲ್ಲ.ಸುನಂದಾ ಕಾಲೇಜುಮುಗಸಿದಳು. ಇಂಜಿನೀಯರಿಂಗ್ ಮುಗಿಸಿದವಳಿಗೆ ಕ್ಯಾಂಪಸ ಸಂದರ್ಶನದಲ್ಲಿ ಕೆಲಸ ಸಿಕ್ಕಿತ್ತು. ಬೆಂಗಳೂರಿನಲ್ಲಿ ಅವಳ ಕೆಲಸ..ಪಿಜಿಯೊಳಗ ಇದ್ದಳು. ನಾನು ಆಗಾಗ ಹೋಗಿಬರತಿದ್ದೆ. ಮನಿಯೊಳಗ ಇಂಟರನೆಟ ಇತ್ತು.ಫೇಸಬುಕ್ಕಿನಲ್ಲಿ ಜ್ಯೋತಿ ಸಿಕ್ಕಿದಳು. ಹಂಗ ನೋಡಿದರ ಮಹಾದೇವಿನ ಅಪರೂಪ ಆಗಿದ್ದಳು. ಜ್ಯೋತಿಗೆ ಅಕಿನ ಕಂಡರ ಆಗತಿರಲಿಲ್ಲ ತಾನ ಏನರೆ ಸುದ್ದಿ ಹುಟ್ಟಸಿ ಹೇಳತಿದ್ದಳು. ಮಹಾದೇವಿಯ ಸಂಸಾರ ಹಿಂಗ ಆಗಿದ್ದು ಸ್ವಲ್ಪ ಕೆಟ್ಟನಿಸಿತ್ತು. ಇದರಾಗ ಪೂರಾ ಅಕಿದ ದೋಷ ಅನ್ನುವ ಜ್ಯೋತಿಯ ವಾದ ಮಹಾದೇವಿ ಅನುಸರಿಸಿಕೊಂಡು ಹೋಗಬೇಕಾಗಿತ್ತು ಅಂತ. ಮಹಾದೇವಿಯ ಸ್ವಭಾವಕ್ಕ ತದ್ವಿರುದ್ಧ ಅದು. ನಾ ಅಕಿ ಜೋಡಿ ವಾದಹಾಕೂದು ಬಿಟ್ಟೆ.
***
ಹೊಟೆಲಿಗೆ ಹೋದಾಗ ಜ್ಯೋತಿ ಆಗಲೇ ಬಂದಿದ್ದಳು. ಅಕಿಗೆ ಮಹಾದೇವಿ ನನಗ ವಿಶಯ ಹೇಳ್ಯಾಳ ಅನ್ನುವ ಅನುಮಾನ ಇತ್ತು. ಏನ ಹೇಳಾಕಿದ್ದಾಳ ಅನ್ನುವ ಕುತೂಹಲ ಇಬ್ಬರಲ್ಲೂ ಇತ್ತು.ಮಹಾದೇವಿ ಬಂದಾಕಿ ಒಂದ ಸಲ ಜೋರಾಗಿ ನಕ್ಕು ಇಬ್ಬರಿಗೂ ಅಪ್ಪಿಕೊಂಡಳು. ಬೆನ್ನಿನ ಮ್ಯಾಲೆ ಗುದ್ದಿ ಮಜಾ ತಗೊಂಡಳು. ಮೂಲಿಯೊಳಗಿನ ಸೀಟು ಅದರೊಳಗ ಕೂತ ಅಕಿ ಏನೂ ಬದಲಾಗೇ ಇಲ್ಲ ಅನಸತು. ಮಕ್ಕಳ ಬಗ್ಗೆ, ಸಂಸಾರದ ಬಗ್ಗೆ ಮಾತು ಆದವು. ನಡುವ ವೇಟರ ತಂದಿಟ್ಟ ಸಮೋಸಾ, ಕೆಫೆಚಿನೋನು ಖಾಲಿ ಆದವು. ನಂಗ ಅಕಿ ಏನ ಹೇಳತಾಳ ಅನ್ನುವ ಕುತೂಹಲ ಇತ್ತು. ಆದರ ಅಕಿಯೊಳಗ ಯಾವ ಅವಸರವೂ ಕಾಣಸಲಿಲ್ಲ. ಜ್ಯೋತಿ ನನ್ನ ಕಡೆ ಕನಿಕರದಿಂದ ನೋಡತಿದ್ದಳು.
” ಲೇ ಹೇಳಲೇ ನೀ ಏನೋ ಹೇಳತಿ ಅಂತ ಬಂದಿವಿ..ನೀ ಇನ್ನೂ ಸುಮ್ಮನಿದ್ರ ಇಕಿ ಅತ್ತ ಬಿಡತಾಳ ನೋಡು..” ನನಗ ಚೂಟಿದಳು.
” ಅಂದರ ಹೆಂಗಲೇ ಈ ಜೀವನ ನಿಂಗ ಕಡಿಕೂ ಧೈರ್ಯ ಕೊಡಲ ಇಲ್ಲೋ ಹೆಂಗ..ಒಂದ ವ್ಯಾಳ್ಯಾ ನನ ಜೀವನದಾಗ ಏನಾತು ಅದು ನಿನ ಜೀವನದಾಗೇನಾದರ ಆಗಿದ್ರ
ಹೆಂಗ ಅನ್ನುವ ವಿಚಾರ ಬಂತು..” ಮಹಾದೇವಿಯ ದನಿ ಸಹಜವಾಗೇ ಇತ್ತು ಆದರೂ ಅದರಲ್ಲಿ ಅಹಮಿಕೆಯ ವಾಸನೆ ಬಡಿತಿತ್ತು.
” ಅಲ್ಲಲೇ ಅದರಾಗ ನಿಂದೇನೂ ತಪ್ಪಿಲ್ಲ ಅನ್ನಾವರಂಗ ಮಾತಾಡತಿ ಅಲ್ಲ ಅನುಸರಿಸಿಕೊಂಡು ಹೋಗಬೇಕಾಗಿತ್ತು. ಅವನ ರೊಕ್ಕ,ಅಧಿಕಾರ ಎಲ್ಲಾ ಬೇಕು ಆದರ ಅವನ ಒಂದು
ತಪ್ಪು ಅರಗಿಸಿಕೊಳ್ಳಲಿಕ್ಕೆ ಆಗೂದಿಲ್ಲ ಅಂದರ ಹೆಂಗ..” ಜ್ಯೋತಿ ತನ್ನ ಒಳಗಿನ ಕಿಚ್ಚು ಉಗಳಿದಳು. ನಂಗ ಇದು ಬೇಡಾಗಿತ್ತು. ಎಷ್ಟೋದಿನದ ಮೇಲೆ ಭೆಟ್ಟಿ ಆಗೇವಿ ವಾದ ಮಾಡೂದರಾಗ ಯಾವ ಅರ್ಥನೂ ಇಲ್ಲ ಅನಿಸತು.
” ಹೋಗಲಿ ನೀ ಏನ ಹೇಳಾಕಿದ್ದಿ ಹೇಳು ಹಳೇದೆಲ್ಲ ಯಾಕೀಗ..” ನನ್ನ ದನಿಯಲ್ಲಿ ಕಳಕಳಿ ತಂದುಕೊಂಡೆ.
” ಅವನ ಜೋಡಿ ಅಂದರ ಗಂಡನ ಜೋಡಿ ಪ್ಯಾಚಅಪ ಆಗೇದ. ನಾವು ಮತ್ತ ಒಂದಾಗತೇವಿ..” ಅಕಿ ಹೇಳಿ ನಮ್ಮ ಮುಖ ನೋಡಿದಳು.
” ಅಂದರ ಖರೇನ? ಗುಡ್ ಛಲೋ ನಿರ್ಧಾರ ತಗೊಂಡಿ..ಒಬ್ಬಾಕಿನ ಏನ ಮಾಡಾಕಿ.” ಜ್ಯೋತಿ ಹಾಗೆಯೇ ಪಟಪಟನೆ ಮಾತಾಡಿದಳು.
” ಅಲ್ಲ ಇಷ್ಟೆಲ್ಲ ಆಗಿ ಈಗ ಮತ್ತ ಯಾಕ ಹಿಂಗ..ನಿನಗ ನೆನಪದನೋ ಇಲ್ಲೋ ಆ ಟಿವಿಯ ಸಂದರ್ಶನದಾಗ ನೀ ಏನೇನ ಮಾತಾಡಿದ್ದಿ. ಎಲ್ಲಾ ಮರತು ಬಿಟ್ಟಿಯೋ ಹೆಂಗ..?” ನಾ ಸಾವಧಾನದಿಂದ ಕೇಳಿದೆ.
” ಎಲ್ಲಾ ನೆನಪದ ನಂಗ. ಅವ ಆ ನಟಿಜೋಡಿ ಮಲಗ್ಯಾನ ಅನ್ನುವ ಸುದ್ದಿಕೇಳಿ ನಾ ರೇಜಿಗಿ ಪಟ್ಟಿದ್ದೆ. ನಮ್ಮ ಅತ್ತಿಮನಿಯವರೂ ನಂಗ ಸಪೋರ್ಟ ಮಾಡಿದ್ದರು. ನಮ್ಮ ಮಾವ ಸುರುಮಾಡಿದ್ದರು ಈ ಎನ್ಜಿಓ..ಅದರಾಗ ನಾ ಕೆಲಸ ಮಾಡತಿದ್ದೆ..ಒಂದು ಬ್ಯಾರೆನ ಲೋಕ ನೋಡಿದೆ. ಬೇರೆ ಹೆಂಗಸರು ಹೆಂಗ ಗಂಡಸಿನ ಆಧಾರ ಇಲ್ಲದನ ಜೀವನಾ ಮಾಡತಾರ ಅನ್ನೂದು ನೋಡಿದೆ.ಅಂಥವರಿಗೆ ಬೆಂಬಲಾಗಿ ನಿಂತೆ ಜೀವನ ಹಿಂಗೂ ಬಾಳಬಹುದು ಅಂತ ಕಂಡಕೊಂಡೆ ನಂಗ ಅದರಾಗ ಖುಶಿನೂ ಇತ್ತು ಅನ್ನು…” ಅಕಿದನಿಯೊಳಗ ಅಭಿಮಾನ ಇಣಕಿತ್ತು.
” ಅಲ್ಲ ಈಗ ಮತ್ಯಾಕ ಹಿಂಗ ಬದಲಾವಣಿ ಆತು ತಿಳೀಲಿಲ್ಲ..” ಕುತೂಹಲದ ಜೊತೆಗೆ ವ್ಯಂಗ್ಯವೂ ಇತ್ತು ನನ್ನ ಮಾತಿನಲ್ಲಿ.
” ನಾ ಅವನಿಂದ ದೂರಾದಾಗ ಮಗಾನೂ ಅವನ ಹಿಂದ ಹೋದ. ದೆಹ್ರಾಡೂನಿನ ಬೋಡರ್ಿಂಗದೊಳಗ ದೊಡ್ಡಾವ ಆದ. ನನ್ನ ಫೋಟೋ ಇಟಗೊಂಡು ಅದರ ಎದುರು ಕೂತು ಮಾತಾಡತಿದ್ದನಂತ.ಈಗ ಅವ ಎಂಬಿಏ ಮುಗಿಸ್ಯಾನ ಒಂದು ದೊಡ್ಡ ಕಂಪನಿ ಅಧಿಕಾರಿ. ಅವರ ಅಪ್ಪ ತಪ್ಪು ಮಾಡಿದ ಅನ್ನುವದು ಅವನ ನಂಬಿಕಿ. ಆ ನಟಿನೂ ಕೈಕೊಟ್ಟು ಹೋದಳು. ರಾಜಕಾರಣದ ಗದ್ದಲದಾಗ ಮುಳಗಿದರೂ ಅವರ ಅಪ್ಪ ದಿನಾನೂ ಕೊರಗತಾನ ಅನ್ನೂದು ಮಗನಿಗೆ ಗೊತ್ತು. ನಾ ಬಂದರ ಎಲ್ಲಾ ಸರಿಆಗತದ ಅನ್ನೂದು ಅವನ ಅನಿಸಿಕೆ. ಅವರ ಅಪ್ಪನ ಪರವಾನಿಗಿ ತಗೊಂಡು ನನ್ನ ಮನಿ ಬಾಗಿಲಿಗೆ ಬಂದ..ಬೇಡಿಕೊಂಡ. ನಾ ಕರಗಿದೆ.ಅವ ಅಂದ ಮಾತು ‘ಒಂದು ಚಾನ್ಸು ಮತ್ತ ಕೊಟ್ಟು ನೋಡು..’ ನನಗೂ ಖರೆ ಅನಿಸಿತು. ಸೋ ನಾ ಮುಂದಿನವಾರ ಹೋಗಾಕಿದ್ದೀನಿ..” ಅಕಿ ದನಿಯೊಳಗ ನಿರ್ಧಾರ ಮನಿಮಾಡಿತ್ತು.
“ನಾವಿಬ್ಬರೂ ನಮ್ಮ ಜೀವನದ ಹಟಗಳ ನಡುವೆ ಅವನ ಬಗ್ಗೆ ಏನೂ ವಿಚಾರ ಮಾಡೇಇಲ್ಲ ಎಂಬ ಸತ್ಯ ಗೊತ್ತಾತು. ನಮಗ ನಮ್ಮ ಜೀವನ ಮುಖ್ಯ ಖರೆ ಆದರ ಫೋಟೋ
ಜೋಡಿ ಮಾತಾಡಕೋತ ದೊಡ್ಡವನಾದ ಮಗನ ಕಣ್ಣೀರಿನ ಮುಂದೆ ನಾ ಕರಗಿ ಹೋದೆ.ಅವನ ಸಲುವಾಗಿ ಎಲ್ಲ ಮರೀಬೇಕು ಅನಕೊಂಡೆ.”
ಅಕಿ ದನಿ ಗದ್ಗದಿತವಾಗಿತ್ತು. ನಂಗ ಏನೂ ತಿಳಿಯವಲ್ಲದಾಗುತ್ತು. ತಲಿಯೊಳಗ ದ್ವಂದ್ವ ಸುರುಆಗಿತ್ತು. ಹಿಂಗ ಮಾಡೂದು ಇಕಿ ಸೋತಂಗಲ್ಲೇನು ಈ ಪ್ರಶ್ನಿ. ಕೇಳಿಯೂ ಬಿಟ್ಟೆ.
ಅಕಿ ಉತ್ತರ ಅಷ್ಟ ಸ್ಪಷ್ಟ ಇತ್ತು.
“ನೋಡು ನಾವು ಕನ್ನಡಿಯೊಳಗ ಮುಖ ನೋಡಕೋತಿರತೇವಿ. ಕನ್ನಡಿ ಹಂಗ ಇರತದ ಆದ್ರ ನಮ್ಮ ಚೆಹರಾ ಬದಲಾಗತಿರತದ. ಮತ್ತ ಹಂಗ ಆಗಲೂ ಬೇಕು.ಅದ ಜೀವನ
ಮಗನ ಮನವಿಗೆ ಕರಗಿದೆ ಅಂತರೆ ತಿಳಕೋ ಅಥವಾ ಒಬ್ಬಾಕಿನ ಹೋರಾಡಿ ಹೋರಾಡಿ ಸೋತಿದ್ದೆ ಅಂತರೆ ತಿಳಕೋ. ಜೀವನ ಕಲಿಸಿದ ಪಾಠ ಇದು…”
ಮುಂದಿನ ನಮ್ಮ ಮಾತುಕತೆಗಳಲ್ಲಿ ಅನೇಕ ವಿಷಯ ಬಂದು ಹೋದವು. ಬೆಂಗಳೂರು ಬಿಟ್ಟು ಧಾರವಾಡಕ ಬಂದೆ. ಮಹಾದೇವಿಯ ಮಾತು ಇನ್ನೂ ಗುಂಯಗುಡತಿದ್ದವು.
ಅಕಿ ಹೇಳಿದಂಗ ಕನ್ನಡಿಯೊಳಗಿನ ಚೆಹರೆ ಬದಲಾಗತಿರತದ..ನಮ್ಮ ದಿನಮಾನನೂ ಅದರಂಗ ಬದಲಾಗತಿರತದ.






ದೇಸಾಯಿಯವರೆ, ಚೆನ್ನಾಗಿದೆ ಕಥೆ. ಕನ್ನಡಿ ಹಾಗೂ ಚಹರೆಯ ರೂಪಕ ಇಷ್ಟಾ ಆಯ್ತು
ಕಥೆ ಚೆನ್ನಾಗಿದೆ ..
ದೇಸಾಯರ ಛಲೋ ಕತಿ ಬರ್ದಿರಿ… ಬಹಳ ಇಷ್ಟ ಆಯಿತು… ಧಾರವಾಡದ ಭಾಷೆ ಚಂದ ಬಳ್ಸಿರಿ…