
ಪಲ್ಲವಿ ಇಡೂರು
ಪ್ರಪಂಚದಲ್ಲೇ ಅತ್ಯಂತ ವೈವಿಧ್ಯತೆ ವೈರುಧ್ಯಗಳನ್ನು ಹೊಂದಿದ ದೇಶ ನನ್ನ ಈ ಭಾರತ.
ಇಷ್ಟೊಂದು ವಿವಿಧತೆಯ ನಡುವೆಯೂ ನಾವೆಲ್ಲರೂ ಇಲ್ಲಿಯವರೆಗೂ ಸಹಮತದಿಂದ ಬದುಕಿದ್ದು ಮಂದೆಯೂ ಬದುಕುತ್ತೇವೆಂದರೆ ಅದಕ್ಕೆ ಮುಖ್ಯ ಕಾರಣವೇ ಈ ದೇಶ ‘ಸಮಾಜವಾದಿ ಜಾತ್ಯಾತೀತ ಪ್ರಜಾಪ್ರಭುತ್ವ’ವನ್ನು ಒಪ್ಪಿಕೊಂಡಿರುವುದು ಮತ್ತು ಅದರ ಸಾರದಂತೆಯೇ ಬದುಕುತ್ತಿರುವುದರಿಂದ.
ಇತ್ತೀಚೆಗೆ ಹೆಚ್ಚಾಗುತ್ತಿರುವ ಸಾಮಾಜಿಕ ಅಸಹಕಾರದ ವಿರುದ್ಧ ನನ್ನ ದನಿ ಎತ್ತುವಾಗಲೆಲ್ಲ ನನ್ನ ಜೀವದ ಬಗೆಗಿನ ನನ್ನವರು ತೋರುವ ಕಾಳಜಿ ಒಂದು ರೀತಿಯಲ್ಲಿ ಈಗಿನ ಸಾಮಾಜಿಕ ಏರುಪೇರುಗಳಿಗೆ ಹಿಡಿದ ಕನ್ನಡಿಯಂತಿದೆ.
ಪ್ರತಿಭಟಿಸುವುದೇ ಪಾತಕವೆನ್ನುವಂತಾಗಿರುವ ಇಂತಹ ಸಂದರ್ಭದಲ್ಲೂ ನಾನು ನಾನಾಗಿರಲು, ನನಗನ್ನಿಸಿದ ಹಾಗೆ ನಾ ಬದುಕಿ, ಇತರರಿಗೂ ಬದುಕಗೊಟ್ಟು ಸಮರಸ ಸಾಮರಸ್ಯದ ಸಹಬಾಳ್ವೆಗೆ ಅವಕಾಶ ಮಾಡಿಕೊಟ್ಟ, ನನಗೊಪ್ಪಿಗೆ ಇಲ್ಲದ್ದನ್ನು ವಿರೋಧಿಸುವ ಹಕ್ಕನ್ನೂ ಕೊಟ್ಟ ನನ್ನ ದೇಶದ ಸಂವಿಧಾನವನ್ನು ಪ್ರೀತಿಸಲು ಪ್ರತಿಪಾದಿಸಲು ಇದಕ್ಕಿಂತ ಒಳ್ಳೆಯ ಕಾರಣಗಳು ನನಗೆ ಬೇಕಿಲ್ಲ

ಪ್ರಜಾಪ್ರಭುತ್ವ ದಿನಾಚರಣೆಗೂ ಲಿಖಿತ ಸಂವಿಧಾನಕ್ಕೂ ನಾನು ಸಂಬಂಧ ಕಲ್ಪಿಸೋದಿಲ್ಲ..
– ಶ್ರೀನಿವಾಸ ಜೋಕಟ್ಟೆ
ಆ ದಿನದ ಮಹತ್ವ ಇರೋದು ನನಗೆ ದೆಹಲಿಯ ಇಂಡಿಯಾ ಗೇಟ್ ಎದುರಿಗೆ ನಡೆಯುವ ಪರೇಡ್ ನಲ್ಲಿ..ಅಲ್ಲಿನ ವಿವಿಧ ರಾಜ್ಯಗಳ ಸಂಸ್ಕ್ಕ್ರತಿ ಬಿಂಬಿಸುವ ಟ್ಯಾಬ್ಲೋಗಳಲ್ಲಿ ನಾನು ನಮ್ಮ ದೇಶದ ಸಂವಿಧಾನವನ್ನು ಕಾಣುತ್ತೇನೆ. ಆಗ ನನ್ನ ಜವಾಬ್ದಾರಿಗಳನ್ನು ನೆನಪಿಸಿಕೊಳ್ಳುತ್ತೇನೆ.
ಏಕತೆಯನ್ನು ಕಂಡು ಖುಷಿಗೊಳ್ಳುತ್ತೇನೆ.ಸಂವಿಧಾನದ ಬಗ್ಗೆ ವರ್ಷವಿಡೀ ನಡೆಯುತ್ತಿರುವ ಚರ್ಚೆಗೆ ಆ ದಿನ ವಿರಾಮ ಹಾಕುತ್ತೇನೆ.
ಅದಕ್ಕಾಗಿ ಬೆಳಿಗ್ಗೆ ಟಿ.ವಿ ಚ್ಯಾನಲ್ ಮುಂದೆ ಕೂತು ನಾನು ಸಂಸ್ಕ್ರತಿ ಬಿಂಬಿಸುವ ಟ್ಯಾಬ್ಲೋಗಳನ್ನು ವೀಕ್ಷಿಸುತ್ತಾ ಪ್ರತೀ ವರ್ಷ ನಾನು ಭಾರತೀಯನೆಂದು ನೆನಪುಮಾಡಿಕೊಳ್ಳುತ್ತೇನೆ.


ನನ್ನ ಸಂವಿಧಾನವೇ ನನ್ನ ಸ್ವಾಭಿಮಾನ
– ರೂಪಾ ಮತ್ತಿಕೆರೆ
ಸಂವಿಧಾನ ಎಂದರೆ ದೇಶದ ಪ್ರತಿ ಪ್ರಜೆಯ ಸ್ವಾಭಿಮಾನ….ಮನುಷ್ಯ ದೇಹಕ್ಕೆ ಹೃದಯವೆಂತೋ ಅಂತೆಯೇ ದೇಶದ, ಪ್ರಜಾಪ್ರಭುತ್ವ ವ್ಯವಸ್ಥೆಯ ಹೃದಯವೇ ಸಂವಿಧಾನ.
ದೇಶದ ಎಲ್ಲ ಜನ ವರ್ಗದ ಸಮತೋಲನ ನ್ಯಾಯ ವಿವೇಚನೆ ಸಂವಿಧಾನ.
ಸಂವಿಧಾನ ಮೂಗಿನ ನೇರಕ್ಕಲ್ಲ.ಸಮಸ್ತ ಜನರ ಹಿತ ಕಾಯುವ ಮುಂಗಾಣ್ಕೆ.
ನನ್ನ ಸಂವಿಧಾನವೇ ನನ್ನ ಸ್ವಾಭಿಮಾನ.

ನನಗೆ ಬದುಕುವ ಹಕ್ಕನ್ನು ಕೊಟ್ಟಿರುವುದು ಸಂವಿಧಾನ
– ಮುದ್ದು ತೀರ್ಥಹಳ್ಳಿ
ನನಗದು ಸ್ವತಂತ್ರವಾಗಿ ಅಭಿವ್ಯಕ್ತಿಸುವುದಕ್ಕೆ, ನನ್ನದೇ ಆದಂತಹ ಚಿಂತನೆಗಳನ್ನು ನಾನು ಹೊಂದುವುದಕ್ಕೆ ಅವಕಾಶ ನೀಡಿದೆ.
ಧಾರ್ಮಿಕ ಆಚರಣೆ, ವಿದ್ಯಾಭ್ಯಾಸ, ಉದ್ಯೋಗ ಹೊಂದುವುದಕ್ಕೆ ಸ್ವಾತಂತ್ರ್ಯ ಕೊಟ್ಟಿದೆ. ನನಗಾಗುವ ಹಾಗೂ ಸಮಾಜಕ್ಕೆ ಆಗುವ ಅನ್ಯಾಯಗಳನ್ನು ಕಾನೂನಿನ ಮೂಲಕ ಪ್ರಶ್ನಿಸುವುದಕ್ಕೆ ಮತ್ತು ಹೋರಾಟ ಮಾಡುವುದಕ್ಕೆ ಹೀಗೆ ಎಲ್ಲದಕ್ಕೂ ಸ್ವಾತಂತ್ರ್ಯವನ್ನು ಸಂವಿಧಾನ ನನಗೆ ಕೊಟ್ಟಿದೆ.

ಹೀಗೆ ಸಂವಿಧಾನ ನನ್ನನ್ನು ಆಡಿಗಡಿಗೂ ರಕ್ಷಿಸಿದೆ.
ಇದು ಕೇವಲ ನನಗಷ್ಟೇ ಅಲ್ಲ ಸಮಾಜದಲ್ಲಿ ನನ್ನೊಂದಿಗೆ ನನ್ನಂತೆ ಬದುಕುತ್ತಿರುವ ಇತರ ಮನುಷ್ಯರಿಗೂ ಪ್ರಾಣಿ ಪಕ್ಷಿಗಳಿಗೂ ಕೂಡಾ ಬದುಕಲು ಸಮಾನವಾದ ಹಕ್ಕನ್ನು ಕೊಟ್ಟಿದೆ. ಪ್ರತಿಯೊಬ್ಬರಿಗೂ ಸಮಾನವಾಗಿ, ಸ್ವತಂತ್ರವಾಗಿ ಬದುಕುವ ಹಕ್ಕು ಇದೆ ಅನ್ನುವುದನ್ನು ಪ್ರತಿಪಾದಿಸುವುದಕ್ಕೆ, ಸಮಾಜದಲ್ಲಾಗುವ ಅನ್ಯಾಯವನ್ನು ಪ್ರಶ್ನಿಸುವ ಪ್ರತಿಭಟಿಸುವ ಹಾಗೂ ಅದಕ್ಕೆ ಪರಿಹಾರ ಕೇಳುವುದಕ್ಕೆ ಎಲ್ಲಾ ಹಕ್ಕನ್ನೂ ಅಧಿಕಾರವನ್ನೂ ಎಲ್ಲರಿಗೂ ಕೊಟ್ಟಿದೆ.
ಆ ಕಾರಣಕ್ಕಾಗಿ ನಾನು ಸಂವಿಧಾನವನ್ನು ಗೌರವಿಸುತ್ತೇನೆ. ಹೀಗಿರುವ ಈ ಸಂವಿಧಾನದ ಜಾಗವನ್ನು ಬೇರೆ ಯಾವುದೂ ತುಂಬಲಾರದು ಎನ್ನುತ್ತೇನೆ ಹಾಗೂ ಸಂವಿಧಾನಕ್ಕೆ ದಕ್ಕೆಯುಂಟಾಗುವ ಸಂದರ್ಭ ಬಂದಲ್ಲಿ ನಾನದನ್ನು ಖಡಾಖಂಡಿತವಾಗಿ ಖಂಡಿಸುತ್ತೇನೆ, ಪ್ರತಿಭಟಿಸುತ್ತೇನೆ ಹಾಗೂ ಹೋರಾಟಕ್ಕಿಳಿಯುತ್ತೇನೆ.

ಎಲ್ಲರಂತಾಗದೆ ನಾನೇ ನಾನಾಗಿ ಅರಳಲು ಅಡಿಗಲ್ಲು ನನ್ನ ಸಂವಿಧಾನ.
-ಬೆಂ ಶ್ರೀ ರವೀಂದ್ರ.
ಜಗದ ಸತ್ಸತ್ವವನು ಹೀರಿ, ಭೇದಭಾವಗಳ ಎಲ್ಲೆಯನು ಕಟ್ಟಿ ಹಡೆಮುರಿ, ಸರ್ವಸಮಾನತೆಯ ನನ್ನ ಸಂವಿಧಾನವು ಸಾರಿ, ಐಕ್ಯ ಭಾರತವ ಕಾಪಿಟ್ಟಿದೆ ಎಲ್ಲರನು ಸೇರಿ.
ಎಲ್ಲರಂತಾಗದೆ ನಾನೇ ನಾನಾಗಿ ಅರಳಲು ಅಡಿಗಲ್ಲು ನನ್ನ ಸಂವಿಧಾನ.
ಇರದಿರೆ ಈ ಸಂವಿಧಾನ ತುಣುಕು ತುಂಡಾಗಿ ಅಶಾಂತಿಯ ಗೂಡಾಗುತ್ತಿತ್ತು ನನ್ನ ಭಾರತ.

ಸಂವಿಧಾನ – ನನ್ನತನವನ್ನು ಉಳಿಸಿಕೊಳ್ಳುವ ಸ್ವಾತಂತ್ರ‍್ಯವನ್ನು ಕೊಟ್ಟಿರುವ ಮಹತ್ವದ ವ್ಯವಸ್ಥೆಯ ಬುನಾದಿ
-ಕೆ.ವಿ.ರಾಧಾಕೃಷ್ಣ

ಸಂವಿಧಾನ ನಾನು ಇಚ್ಚಿಸಿದಂತೆ ಬದುಕುವ ಮತ್ತು ನಾನು ನಾವಾಗುವ ಹೊತ್ತಿನಲ್ಲಿ ನನ್ನತನವನ್ನು ಉಳಿಸಿಕೊಳ್ಳುವ ಸ್ವಾತಂತ್ರ‍್ಯವನ್ನು ಕೊಟ್ಟಿರುವ ಮಹತ್ವದ ವ್ಯವಸ್ಥೆಯ ಬುನಾದಿ.
ಇಂದು ಗ್ರಾಮ ಪಂಚಾಯಿತಿಗಳಿಂದ ಹಿಡಿದು ರಾಷ್ಟ್ರಪತಿ ಹುದ್ದೆಯವರೆಗೆ ಕಟ್ಟ ಕಡೆಯ ನಾಗರಿಕ ಕೂಡ ಉನ್ನತ ಸ್ಥಾನ ಪಡೆಯಬಹುದಾದ ಸಾಧ್ಯತೆ ನಮ್ಮನ್ನು ಒಂದೇ ದೇಶವಾಗಿ ಉಳಿಸಿಕೊಟ್ಟಿದೆ

ಸಂವಿಧಾನದ ಇರುವಿಕೆಯಿಂದಾಗಿಯೇ ನಾವಿಂದು ಇಷ್ಟು ಸ್ವಚ್ಛಂದವಾಗಿ ಬದುಕಲು ಸಾಧ್ಯವಾಗಿದೆ
-ಮೆಹಬೂಬ ಮುಲ್ತಾನಿ

ಸಂವಿಧಾನದ ಇರುವಿಕೆಯಿಂದಾಗಿಯೇ ನಾವಿಂದು ಇಷ್ಟು ಸ್ವಚ್ಛಂದವಾಗಿ ಬದುಕಲು ಸಾಧ್ಯವಾಗಿದೆ…
ಸಂವಿಧಾನದ ಪೀಠಿಕಾ ಭಾಗವೇ ನಮ್ಮ ಜೀವನಾಧಾರವಾಗಬೇಕಾದ ಅನಿವಾರ್ಯದ ಕಾಲಗಟ್ಟದಲ್ಲಿ ನಾವಿದ್ದೇವೆ..
ಕೆಲವರು ಸಂವಿಧಾನವನ್ನೆ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳುತ್ತಿರುವುದು ಭಾರತದ ಗಣತಂತ್ರ ವ್ಯವಸ್ಥೆಗೆ ದಕ್ಕೆ ತರುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿವೆ…





0 Comments