ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂವಿಧಾನದ ದನಿ ಉಳಿಸಿಕೊಳ್ಳಬೇಕಾಗಿದೆ..

ಪುರುಷೋತ್ತಮ ಬಿಳಿಮಲೆ

ಭಾರತೀಯ ಸಂವಿಧಾನ ರೂಪುಗೊಳ್ಳುವ ಹೊತ್ತಿಗೆ ಜಗತ್ತಿನ ಅನೇಕ ರಾಷ್ಟ್ರಗಳು ತಮ್ಮದೇ ಸಂವಿಧಾನವನ್ನು ಹೊಂದಿದ್ದುವು. ಇವುಗಳ ಪೂರ್ಣ ಪ್ರಯೋಜನವನ್ನು ಸಂವಿಧಾನ ಸಮಿತಿಯು ಪಡೆದುಕೊಳ್ಳುವಲ್ಲಿ ಯಶಸ್ವಿಯಾದ್ದರಿಂದಲೇ ಭಾರತೀಯ ಸಂವಿಧಾನವು ಜಗತ್ತಿನ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದಾಯಿತು.

ಜೊತೆಗೆ ಸಂವಿಧಾನ ಸಮಿತಿಯಲ್ಲಿ ಭಾರತದ ಪಾರಂಪರಿಕ ನೆಲೆಗಳ ಬಗ್ಗೆ ಗಾಢ ತಿಳುವಳಿಕೆ ಹೊಂದಿದ್ದ ಪಂಡಿತರೂ, ಆಧುನಿಕ ಚಿಂತನೆಗೆ ತಮ್ಮನ್ನು ತೆರೆದುಕೊಂಡಿದ್ದ ಚಿಂತಕರೂ ಇದ್ದುದರಿಂದ ಸಂವಿಧಾನವು ಪರಂಪರೆ ಮತ್ತು ಆಧುನಿಕತೆಯ ನಡುವೆ ಸಂಘರ್ಷವನ್ನು ಉಂಟು ಮಾಡದೆ ಸಮನ್ವಯವನ್ನು ಸಾಧಿಸುವಲ್ಲಿ ಯಶಸ್ವಿಯಾಯಿತು.

ಸಂವಿಧಾನ ಸಮಿತಿಯ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ಅವರಿಗೆ ಭಾರತೀಯ ಸಮಾಜದ ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ಅದರ ಅಧಾರ್ಮಿಕ ನೆಲಗಳ ಬಗ್ಗೆ ಅನುಭವ ಆಧಾರಿತ ತಿಳುವಳಿಕೆಯೂ ಇದ್ದುದರಿಂದ ಸಂವಿಧಾನವು ಭಾರತದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ಒದಗಿಸುವ ಹಾಗೆ ರಚನೆಗೊಂಡಿತು.

ಹಾಗೆ ನೋಡಿದರೆ ಭಾರತದ ಸುದೀರ್ಘ ಇತಿಹಾಸದಲ್ಲಿ ಮೊದಲ ಬಾರಿಗೆ ಸಂವಿಧಾನವು ಎಲ್ಲ ಭಾರತೀಯರೂ ಸಮಾನರು ಮತ್ತು ಘನತೆಯಿಂದ ಬದುಕಲು ಎಲ್ಲರಿಗೂ ಹಕ್ಕಿದೆ ಎಂಬುದನ್ನು ಸಾರಿ ಹೇಳಿತು.

ಈಗ ಈ ಧ್ವನಿಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾದ ಸಂದರ್ಭವೊಂದು ಸೃಷ್ಟಿಯಾಗಿದೆ.

 

 

 

ಸಂವಿಧಾನ ನನ್ನ ಹೆಮ್ಮೆಯಾಗಿದೆ..

-ಸನತ್ ಕುಮಾರ ಬೆಳಗಲಿ

ವಿಭಿನ್ನ ಭಾಷೆ, ಧರ್ಮ, ಜನಾಂಗ, ರಾಷ್ಟ್ರೀಯತೆ, ಸಂಸ್ಕೃತಿ ಹೀಗೆ ಒಂದು ಒಕ್ಕೂಟವಾದ ಭಾರತಕ್ಕೆ ಪ್ರಜಾಪ್ರಭುತ್ವ ಜೀವದ ಜೀವವಾಗಿದೆ

ಈ ಪ್ರಜಾಪ್ರಭುತ್ವದ ಆಧಾರ ಸ್ತಂಭವಾದ ಸಂವಿಧಾನ ನನ್ನ ಹೆಮ್ಮೆಯಾಗಿದೆ

ಇದು ಸುರಕ್ಷಿತವಾಗಿರುವವರೆಗೆ ಭಾರತ ಸುರಕ್ಷಿತವಾಗಿರುತ್ತದೆ

ಇದಿಲ್ಲದ ಮಾರನೇ ದಿನ ಇದು ಒಡೆದು ಛಿದ್ರ, ಛಿದ್ರವಾಗಿ ಹೋಗುತ್ತದೆ

 

ಅಂಬೇಡ್ಕರ್ ಅವರಿಗೆ ಮಾಡುತ್ತಿರುವ ಅವಮಾನ..

ಜಗದೀಶ್ ಕೊಪ್ಪ

ಸಂವಿಧಾನವನ್ನು ಬದಲಾಯಿಸದಿರಲು ಅದೇನು ಪ್ರವಾದಿಗಳು ಬರೆದ ಧರ್ಮ ಗ್ರಂಥವೆ? ಎಂದು ಅವಿವೇಕಿಗಳು ಪ್ರಶ್ನೆ ಎತ್ತುತ್ತಿರುವ ಈ ಸಂದರ್ಭದಲ್ಲಿ ಇಂತಹ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಮಗೆ ದಯಪಾಲಿಸಿರುವುದು ಭಾರತದ ಸಂವಿಧಾನ ಎಂಬುದನ್ನು ನಾವು ಮರೆಯಬಾರದು.

ಈ ಕ್ಷಣದ ದುರಂತವೆಂದರೆ, ನಾವು ಸಂವಿಧಾನ ಬದ್ಧ ಹಕ್ಕುಗಳ ಕುರಿತು ಮಾತನಾಡುತ್ತೇವೆ. ಆದರೆ, ಸಂವಿಧಾನ ಬದ್ಧ ಕರ್ತವ್ಯಗಳನ್ನು ಮರೆಯುತ್ತೇವೆ. ಈ ಕಾರಣದಿಂದಾಗಿ ಧರ್ಮದ ಹೆಸರಿನಲ್ಲಿ, ಜಾತಿಯ ನೆಪದಲ್ಲಿ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಳ್ಳುತ್ತಿದ್ದೇವೆ.

ಪ್ರಜೆಗಳು ಮತ್ತು ಪ್ರಭುಗಳು ಎಂಬ ತಾರತಮ್ಯವಿಲ್ಲದೆ ಎಲ್ಲರೂ ಸಂವಿಧಾನಬದ್ಧ ಹಕ್ಕುಗಳನ್ನು ದುರುಪಯೋಗಪಡಿಸಿಕೊಂಡು ಕರ್ತವ್ಯಗಳನ್ನು ಮರೆ ಮಾಚಿದ್ದೇವೆ. ಇದು ಪ್ರಜಾಪ್ರಭುತ್ವಕ್ಕೆ ಮಾತ್ರವಲ್ಲ, ಅಂಬೇಡ್ಕರ್ ಅವರಿಗೆ ಮಾಡುತ್ತಿರುವ ಅವಮಾನ.

 

 

‍ಲೇಖಕರು Avadhi GK

26 January, 2018

1 Comment

  1. Wilfred Dsouza

    “ನಮ್ಮ ಸಂವಿಧಾನ- ನಮ್ಮ ಹೆಮ್ಮೆ” ನಿಜ. ಈ ದೇಶದ ವಿಭಿನ್ನ ಸಂಸ್ಕೃತಿಗಳು, ಆಚಾರ, ವಿಚಾರ, ನಂಬುಗೆಗಳು, ತಾರತಮ್ಯ, ಶೋಷಣೆಗಳ ವಾಸ್ತವವನ್ನು ಗಮನದಲ್ಲಿಟ್ಟುಕೊಂಡು ಸಿದ್ಧ ಪಡಿಸಿದ ಮಾರ್ಗದರ್ಶಕ ಗ್ರಂಥ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಪ್ರಧಾನ ಶಿಲ್ಪಿ. ಒಪ್ಪಬೇಕು.., ಗೌರವಿಸಬೇಕು. ಜೊತೆಗೆ ಸಂವಿಧಾನ ರಚನಾ ಸಭೆ, ಅದರ ಚರ್ಚೆಗಳು, ನೆಹರೂ ಅವರು ಮಂಡಿಸಿದ ಸಂವಿದಾನದ ಚೌಕಟ್ಟು, ಬೆನಗಲ್ ನರಸಿಂಗರಾವ್ ಅವರು ಶ್ರಮವಹಿಸಿ ಸಿದ್ಧಪಡಿಸಿದ ಸಂವಿಧಾನದ ಕರಡಿನ ಕರಡು, ಸೂಚಿಸಲ್ಪಟ್ಟ 10 ಸಾವಿರಕ್ಕಿಂತಲೂ ಹೆಚ್ಚು ತಿದ್ದುಪಡಿಗಳು, ಚರ್ಚೆಗೆ ಆಯ್ಕೆ ಮಾಡಲಾದ 2 ಸಾವಿರಕ್ಕೂ ಹೆಚ್ಚು ಸಲಹೆಗಳು ಮತ್ತು ಅದಕ್ಕೆ ಬಾಬಾ ಸಾಹೇಬರು ನೀಡಿದ ಸ್ಪಷ್ಟೀಕರಣಗಳು…, ಹೀಗೆ ಸಂವಿಧಾನ ರಚನೆಯ ಹಿಂದಿನ ಪ್ರಕ್ರಿಯೆ ಮತ್ತು ಶ್ರಮಗಳ ಕುರಿತು ಸಾರ್ವಜನಿಕ ಚರ್ಚೆ ಆಗ ಬೇಡವೇ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading