ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಸಂಪಟೂರು’ ಎನ್ನುವ ಅಚ್ಚರಿ..!

ಮೂರು ದಶಕಗಳ ಕೆಳಗೆ ಆಗ ತಾನೆ ‘ಮಲ್ಲಿಗೆ ಮಾಸಪತ್ರಿಕೆ’ಯ ಜವಾಬ್ದಾರಿ ತೆಗೆದು ಕೊಂಡಿದ್ದೆ. ಈಗಿನಂತೆ ಸಾಮಾಜಿಕ ಮಾಧ್ಯಮಗಳಿಲ್ಲದ ಆ ಕಾಲದಲ್ಲಿ ಬಹುತೇಕ ಲೇಖಕರು ಕಚೇರಿಗೇ ಬಂದು ತಮ್ಮ ಬರಹಗಳನ್ನು ಕೊಡುತ್ತಿದ್ದರು. ಇದೊಂದು ರೀತಿಯಲ್ಲಿ ಆತ್ಮೀಯತೆ ಬೆಳೆಯಲೂ ಕೂಡ ಕಾರಣವಾಗಿತ್ತು. ಒಂದು ದಿನ ಕಚೇರಿಯಲ್ಲಿ ನಾನು ಬರುವ ಮೊದಲೇ ಹಿರಿಯರೊಬ್ಬರು ಕಾಯುತ್ತಿದ್ದರು. ‘ಯಾರು’ ಎಂದು ವಿಚಾರಿಸಿದಾಗ ‘ನಾನು ಸಂಪಟೂರು ವಿಶ್ವನಾಥ್.. ಕಳೆದ ವಾರ ಒಂದು ಬರಹ ಕಳುಹಿಸಿದ್ದೆ’ ಎಂದು ಪರಿಚಯಿಸಿ ಕೊಂಡರು. ನನಗೆ ಆ ಕ್ಷಣ ರೋಮಾಂಚನ.. ಏಕೆಂದರೆ ಸಂಪಟೂರು ವಿಶ್ವನಾಥ್ ಎನ್ನುವುದು ನಾನು ಬಾಲ್ಯದಿಂದ ಓದುತ್ತಾ ಬಂದ ಹೆಸರು. ಅವರ ಅನೇಕ ಬರಹಗಳು ನನ್ನ ಅರವಿನ ಪರಿಧಿಯನ್ನು ವಿಸ್ತರಿಸಿದ್ದವು. ಹೀಗೆ ನನ್ನ ಸಂಪರ್ಕಕ್ಕೆ ಬಂದ ಸಂಪಟೂರು ವಿಶ್ವನಾಥ್ ಒಂದು ಕಾಲಕ್ಕೆ ಕನ್ನಡ ಪತ್ರಿಕೆಗಳ ಮಟ್ಟಿಗೆ ಅಲ್ಲಾವುದ್ದೀನನ ಅದ್ಭುತ ದೀಪವಾದವರು.

ಅಂದಿನಿಂದ ಇಂದಿನ 87ನೆಯ ವಯಸ್ಸಿನವರೆಗೂ ಸಂಪಟೂರರು ನೋಡಲು ಮಾತ್ರವಲ್ಲ ಸ್ವಭಾವದಲ್ಲಿಯೂ ನಾನು ಕಂಡಂತೆ ಹಾಗೆಯೇ ಇದ್ದಾರೆ. ಕಾಲ ಅವರನ್ನು ಮರೆತೇ ಬಿಟ್ಟಿರ ಬೇಕು ಎನ್ನುವಷ್ಟರ ಮಟ್ಟಿಗೆ ‘ಚಿರಯೌವನಿಗರಾಗಿ’ ಸಂಪಟೂರು ವಿಶ್ವನಾಥರ ಬರಹಗಳು ಪ್ರಕಟವಾಗದ ಪತ್ರಿಕೆಗಳೇ ಇಲ್ಲವೆನ್ನ ಬಹುದು. 1965ರಲ್ಲಿ ತಮ್ಮ ಬರವಣಿಗೆ ಆರಂಭಿಸಿದ ಅವರು ಕಳೆದ ಆರು ದಶಕಗಳಿಂದ ನಿರಂತರವಾಗಿ ಬರೆಯುತ್ತಾ ಬಂದಿದ್ದಾರೆ. ಐದು ಸಾವಿರಕ್ಕೂ ಹೆಚ್ಚು ಅವರ ಬರಹಗಳು ಅಚ್ಚಾಗಿದ್ದರೆ. ಇದುವರೆಗೂ ಅವರ 140 ಕೃತಿಗಳು ಹೊರ ಬಂದಿವೆ. ಈ ವರ್ಷವೇ ಅವರ ನಾಲ್ಕು ಕೃತಿಗಳು ಹೊರ ಬಂದಿದ್ದು ಇನ್ನೂ ಎರಡು ಕೃತಿಗಳು ಅಚ್ಚಿನಲ್ಲಿವೆ. ಸಾಹಿತ್ಯಲೋಕದ ವಾದ-ವಿವಾದಗಳಿಂದ ಸದಾ ದೂರವಿರುವ ಸಂಪಟೂರರು ತಮ್ಮಷ್ಟಕ್ಕೇ ತಾವು ಬರೆಯುತ್ತಾ ಬಂದ ಸಾಧಕರು. ಇದಕ್ಕಾಗಿ ಎಲ್ಲಾ ಪ್ರಮುಖ ಪುರಸ್ಕಾರಗಳೂ ಅವರಿಂದ ದೂರವಿವೆ. ಆದರೆ ಅದರ ಅಳತೆಗೋಲನ್ನು ಅವರು ಯಾವತ್ತೋ ಮೀರಿದ್ದಾರೆ.

1938ರ ಫೆಬ್ರವರಿ 28ರ ಮಹಾಶಿರಾತ್ರಿಯಂದು ಎಸ್.ಹನುಮಂತ ರಾವ್ ಮತ್ತು ನಾಗಮ್ಮ ಅವರ ಮಗನಾಗಿ ಜನಿಸಿದ ಸಂಪಟೂರು ವಿಶ್ವನಾಥ್ ಅವರ ಸಂಪೂರ್ಣ ಜೀವನ ಮಲ್ಲೇಶ್ವರಂ 15ನೇ ಕ್ರಾಸಿನಲ್ಲಿಯೇ ಸಾಗಿ ಬಂದಿದೆ. ಮಲ್ಲೇಶ್ವರಂನಲ್ಲಿ ಪ್ರಾಥಮಿಕ ಮಾಧ್ಯಮಿಕ ಶಿಕ್ಷಣ ಮುಗಿಸಿ ಸರ್ಕಾರಿ ಕಾಲೇಜಿನಲ್ಲಿ ಬಿ.ಎಸ್.ಸಿ ಮತ್ತು ಸಸ್ಯಶಾಸ್ತ್ರದಲ್ಲಿ ಎಂ.ಎಸ್.ಸಿ ಪದವಿಯನ್ನು ಪಡೆದ ನಂತರ ಮಲ್ಲೇಶ್ವರಂನ ಕುಮಾರ ಪಾರ್ಕ ಬಳಿಯ ಗಾಂಧಿನಗರ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇರಿಕೊಂಡು ಮುಖ್ಯಪಾಧ್ಯಾಯರಾಗಿ ನಿವೃತ್ತರಾದರು. ಬೇರೆ ಕಾರಣಗಳಿಗೆ ಒಂದು ಕಾಲದಲ್ಲಿ ಹೆಸರಾಗಿದ್ದ ಶಾಲೆಯನ್ನು ಸಾಂಸ್ಕೃತಿಕ ಕೇಂದ್ರವಾಗಿಸಿದ ವಿಶ್ವನಾಥ್ ಸಾಹಿತ್ಯ ಲೋಕದ ದಿಗ್ಗಜರನ್ನೆಲ್ಲಾ ಶಾಲೆಗೆ ಕರೆತಂದರು.

ಖಾಸಗಿ ಶಾಲೆಗಳಿಂದ ಟಿ.ಸಿ ಪಡೆದು ಸರ್ಕಾರಿ ಶಾಲೆಗೆ ಪೋಷಕರು ತಮ್ಮ ಮಕ್ಕಳನ್ನು ಸೇರಿಸುವ ಮಟ್ಟಿಗೆ ಬದಲಾವಣೆಯನ್ನು ತಂದರು. ಅವರು ಪಠ್ಯವನ್ನಷ್ಟೇ ಬೋಧಿಸದೆ ಮಕ್ಕಳ ಸರ್ವಾಂಗೀಣ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದರು. ಇದಕ್ಕೆ ಉದಾಹರಣೆ ಡಾ.ನಾ.ಸೋಮೇಶ್ವರರ.. ಒಂಬತ್ತನೇ ತರಗತಿಯಲ್ಲಿದ್ದಾಗ ಅವರ ಪ್ರತಿಭೆ ಗುರುತಿಸಿ ರಸಪ್ರಶ್ನೆ ಕಡೆಗೆ ವಿಶ್ವನಾಥ್ ಕರೆ ತಂದರು. ಅದು ‘ಥಟ್ ಅಂತ ಹೇಳಿ’ ಎನ್ನುವ ದಾಖಲೆ ಕಾರ್ಯಕ್ರಮಕ್ಕೆ ನಾಂದಿ ಹಾಡಿತು. ವಿಧಾನಸಭಾಧ್ಯಕ್ಷರಾಗಿದ್ದ ಎಸ್.ರಮೇಶ್ ಕುಮಾರ್ ಅವರನ್ನು ಭಾಷಣಕಾರರನ್ನಾಗಿ ರೂಪಿಸಿದ್ದು ಸಂಪಟೂರರೇ, ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಪಿ.ಬಿ.ಮಹಿಷಿ, ಸಚಿವರಾಗಿದ್ದ ಸೋಮಶೇಖರ್ ಹೀಗೆ ಸಂಪಟೂರರ ಶಿಷ್ಯ ಬಳಗ ದೇಶ-ವಿದೇಶದಲ್ಲಿ ಹರಡಿ ಸಮಾಜವನ್ನು ಸಂಪನ್ನಗೊಳಿಸಿದೆ. ಆರ್ಥಿಕ ದುರ್ಬಲರಾದ ಅನೇಕ ವಿದ್ಯಾರ್ಥಿಗಳ ಫೀಸ್ ಅನ್ನು ತಾವೇ ಕಟ್ಟಿ ಅವರ ಬದುಕನ್ನು ಹಸನಾಗಿಸಿದ್ದೂ ವಿಶ್ವನಾಥ್ ಅವರ ಸಾಧನೆಯೇ.

‘ದೊಡ್ಡೋರಿಗೆ ಬರೆಯೋಕೆ ಬಹಳ ಜನ ಇದ್ದಾರೆ.. ಮಕ್ಕಳಿಗೆ ನೀನು ಬರೆ.. ಅದರಲ್ಲಿಯೂ ವಿಜ್ಞಾನವನ್ನು ಬರೆ’ ಎಂಬ ತಮ್ಮ ಗುರುಗಳಾದ ಜಿ.ಪಿ.ರಾಜರತ್ನಂ ಅವರ ಮಾತನ್ನು ಅಕ್ಷರಶ: ಪಾಲಿಸಿದ ಸಂಪಟೂರರು ಮಕ್ಕಳ ಸಾಹಿತ್ಯಕ್ಕೆ ಹೊಸ ರೂಪ ನೀಡಿದರು. ಜಗತ್ತಿನ ಜ್ಞಾನವನ್ನೆಲ್ಲಾ ಹೀರಿ ಅದನ್ನು ಸರಳವಾಗಿ ಮಕ್ಕಳಿಗೆ ಬರೆದರು. ಅದರಂತೆ ವಿಜ್ಞಾನ ಸಾಹಿತ್ಯಕ್ಕೂ ಕೂಡ ಅವರ ಕೊಡುಗೆ ಅಪಾರವಾದ್ದು. ರಂಗಭೂಮಿ, ಚಲನಚಿತ್ರದ ಬಗ್ಗೆ ಕೂಡ ಬರೆದಿರುವ ಸಂಪಟೂರರು. ಸಾಮಾನ್ಯ ಜ್ಞಾನದ ಕುರಿತ ಕೃತಿಗಳನ್ನು ಸಮರ್ಥವಾಗಿ ರಚಿಸಿದರು. ಅವರ ಅನೇಕ ಕೃತಿಗಳು ಐ.ಎ.ಎಸ್ ಮಾಡುವವರಿಗೆ ಉಪಯುಕ್ತ ಎನ್ನಿಸಿ ಕೊಂಡಿದ್ದವು. ನಾನು ಮಲ್ಲಿಗೆಯಲ್ಲಿದ್ದಾಗ ಅವರು ಮಕ್ಕಳಿಗಾಗಿಯೇ ‘ಕಿಶೋರ ದರ್ಶನಿ’ ಎಂಬ ವಿಶಿಷ್ಟವಾದ ದಿನ ದರ್ಶಿಕೆಯನ್ನು ರೂಪಿಸಿ ಕೊಂಡಿದ್ದರು.

ಸಂಪಟೂರರ ಜೊತೆಗೆ ನನಗೆ ಬಹಳ ನಿಕಟವಾದ ಒಡನಾಟ ದೊರಕಿದೆ. ಹೊತ್ತು ಗೊತ್ತಿಲ್ಲದೆ ಈಗಲೂ ನಾನು ನುಗ್ಗ ಬಲ್ಲ ಕೆಲವೇ ಮನೆಗಳಲ್ಲಿ ಅವರದೂ ಕೂಡ ಒಂದು. ಅವರ ಶ್ರೀಮತಿ ರಾಜಲಕ್ಷ್ಮಿಯವರು ಸಾಕ್ಷತ್ ಅನ್ನಪೂರ್ಣೆ… ಅವರ ಮನೆಯ ಕಾರ್ಯಕ್ರಮಗಳಲ್ಲೆಲ್ಲಾ ನಾನು ಭಾಗಿಯಾಗಿದ್ದೇನೆ, ನಮ್ಮ ಮನೆ ಕಾರ್ಯಕ್ರಮಗಳಿಗೂ ಅವರು ಕುಟುಂಬ ಸಮೇತ ಬಂದಿದ್ದಾರೆ. ಮುಖ್ಯವಾಗಿ ಅವರು ಪ್ರತಿ ವರ್ಷವೂ ಮಕರ ಸಂಕ್ರಾಂತಿಯಂದು ತಪ್ಪದೇ ನನಗೆ ಎಳ್ಳು-ಬೆಲ್ಲ ಕೊಡುವ ಪದ್ದತಿ ಇಟ್ಟು ಕೊಂಡಿದ್ದಾರೆ. ಎಲ್ಲಿಯೇ ಇದ್ದರೂ ಹುಡುಕಿಕೊಂಡು ಬಂದು ಕೊಡುವ ಮೂಲಕ ಒಂದು ರೀತಿಯ ಸಂಕೋಚವನ್ನೂ ತಂದಿದ್ದಾರೆ.

ಸಂಪಟೂರರಿಗೆ ಮಹತ್ವದ ಪುರಸ್ಕಾರಗಳು ಬರಬೇಕಿತ್ತು. ಆದರೆ ಇಂದಿನ ಸಾಂಸ್ಕೃತಿಕ ಸನ್ನಿವೇಶದಲ್ಲಿ ಅದು ಕಷ್ಟವೇ! ಅವರ ‘ಸುವರ್ಣ ಕೀಟ’ ಎಂಬ ವೈಜ್ಞಾನಿಕ ಕಾದಂಬರಿ ‘ಕನ್ನಡ ಪ್ರಭ’ ದಿನಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು. ಅದಕ್ಕೆ ಪ್ರಕಾಶಕರು ಸಿಕ್ಕದಾಗ ನಾನು ಪರಿಚಿತರಾದ ಮ.ಸು.ಶ್ರೀನಿವಾಸ ರಾವ್ ಅವರ ‘ಉದಯ ಪ್ರಕಾಶನ’ದ ಮೂಲಕ ಪ್ರಕಟವಾಗುವಂತೆ ಮಾಡಿದೆ. ಅದಕ್ಕೆ ರಾಜ್ಯ ಸಾಹಿತ್ಯ ಅಕಾಡಮಿ ಪುಸ್ತಕ ಬಹುಮಾನ ಬಂದಿತು. ಸಾಹಿತ್ಯದ ಅಳೆತೆಗೋಲಿನಲ್ಲಿ ಅದು ಮುಖ್ಯ ಪುರಸ್ಕಾರವಲ್ಲ. ಅವರ ಶಿಷ್ಯರೆಲ್ಲರೂ ಸೇರಿ ಆತ್ಮೀಯ ಸನ್ಮಾನ ಮಾಡಿದರು. ಸಚಿವರು, ಜಿಲ್ಲಾಧಿಕಾರಿಗಳು, ವೈದ್ಯರು, ಅಧ್ಯಾಪಕರು, ವಕೀಲರು ಎಲ್ಲರೂ ಅದರಲ್ಲಿ ಸೇರಿದ್ದರು. ಅಲ್ಲಿ ಅಕ್ಷರಶ: ಪ್ರೀತಿಯ ಹೊನಲೇ ಹರಿದಿತ್ತು… ವಶೀಲಿಯಿಂದ ಪಡೆದ ಯಾವ ಪುರಸ್ಕಾರ ಇಂತಹ ಪ್ರೀತಿ ತಂದು ಕೊಡುವುದು ಸಾಧ್ಯ!?

ಸಂಪಟೂರರ ಮಾರ್ಗದರ್ಶನ, ಬರಹಗಳು ಹೀಗೆ ನಿರಂತರವಾಗಿ ನಮಗೆ ದೊರಕುತ್ತಿರಲಿ..

‍ಲೇಖಕರು Admin

17 September, 2025

2 Comments

  1. Shravanakumari TS

    ತುಂಬಾ ಚಂದದ ಲೇಖನ, ಇಷ್ಟವಾಯಿತು.

  2. Shravanakumari TS

    ಚಂದದ ಲೇಖನ. ತುಂಬಾ ಇಷ್ಟವಾಯಿತು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading