ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಧ್ಯ ಸಾಂಗ್ಲೀಕರ್..

(ಒಂದು ತಮಾಷೆ ಪ್ರಸಂಗ)

-ಪಾಲಹಳ್ಳಿ ವಿಶ್ವನಾಥ್ 

ಆಪರಂಜಿಯಲ್ಲಿ ನೀವು ಇದನ್ನು ಓದುತ್ತಿರುವುದರಿಂದ ತಮಾಷೆ ಎಂದರೆ ಹಾಸ್ಯ ಎಂದು ಭಾವಿಸುವುದು ಸ್ವಾಬಾವಿಕವೇ. ಆದರೆ ಈ ತಮಾಷೆಯೇ ಬೇರೆ. ಇದು ನಮ್ಮ ನೆರೆ ರಾಜ್ಯ ಮಹಾರಾಷ್ಟ್ರದ ಖ್ಯಾತ ಜನಪ್ರಿಯ ನೃತ್ಯ ಪರಂಪರೆ, ಜಾನಪದ  ಶೈಲಿಯ ಸಂಗೀತ ನೃತ್ಯ ನಾಟಕಗಳು. ಇನ್ನೂ ಆಧುನಿಕತೆಗೆ ಮಾರುಹೋಗದ ಸಣ್ಣ ಪಟ್ಟ ಊರುಗಳಲ್ಲಿ ಹೆಚ್ಚು ಜನಪ್ರಿಯ. ಇದೆಲ್ಲಾ ನನಗೆ ಹೇಗೆ ಗೊತ್ತು ಎಂದು ನೀವು ಕೇಳಬಹುದು. ಓದುಗರಾಗಿ ನಿಮಗೆ ಆ ಅಧಿಕಾರವಿದೆ. ಇದೆಲ್ಲಾ ನನಗೆ ಜೀವ್ಸ್ ಹೇಳಿದ್ದು. ಜೀವ್ಸ್ ಎಂದ ಮೇಲೆ ನಾನು ಬರ್ಟಿ /ಭರತ್ ಎಂದು ಹೇಳಬೇಕಿಲ್ಲ, ಅಲ್ಲವೇ !. 

ಒಂದು ದಿನ್ ಬೆಳಿಗ್ಗೆ ಯಾರೋ ಮನೆಯ ಬಾಗಿಲನ್ನು ಜೋರಾಗಿ ಬಡಿಯುತಿದ್ದರು. ಬೆಲ್ ಇರುವಾಗ ಈ ಹಳೆಯ ಅಭ್ಯಾಸ ಏತಕ್ಕೆ ಎಂದು ಬಯ್ದುಕೊಂಡೆ. ಏನಾಗಿದೆ ಜೀವ್ಸ್ ಎಂದು ಕೂಗಿದೆ. ಹೋಗ್ತಾ ಇದ್ದೀನೀ ಸಾರ್ ಎಂದು ಹೋಗಿ ಬಾಗಿಲ ತೆಗೆದು “ಓ ! ಬನ್ನೀ ಮೇಡಂ !.. ಸಾರ್ ! ದುರ್ಗಾ ದೇವಿಯವರು“. ಅವನು ಮುಗಿಸುವ ಮೊದಲೇ ದೂರದಿಂದಲೇ “ ಹನ್ನೊಂದಾಯಿತು ! ಇನ್ನೂ ಮಲಗಿದ್ದೀಯ ಬರ್ಟಿ ! ಎದ್ದು ಮುಖ ತೊಳೆದುಕೊಂಡು ಬಾ” ಎಂದರು ನಮ್ಮ ಚಿಕ್ಕಮ್ಮ ಆಗಾಥ . ಹೌದು, ಅವರೇ ದುರ್ಗಾದೇವಿ. ಚಿಕ್ಕಂದಿನಲ್ಲಿ ಅಗಾಥ ಕ್ರಿಸ್ಟಿ ಪತ್ತೇದಾರಿ ಕಥೆಗಳನ್ನು ಓದಿ ಓದಿ ಎಲ್ಲರೂ ಅವರನ್ನು ಅಗಾಥ ಎಂದೇ ಕರೆಯುತ್ತಿದ್ದರು. ಮಹಾಲಕ್ಷ್ಮಿ ಪಾಟೀಲ್ ಹಿಂದೆ ಹೋಗಿದ್ದ ಲವಕುಶರ ತಾಯಿ ! ದುರ್ಗ ಎಂದರೆ ಕಠಿಣ ಅಂತಾನೂ ಅರ್ಥ ಇದೆಯಂತೆ ! ಆಕೆ ನಿಜವಾಗಿಯೂ ಖಠಿಣ ! 

“ಬರ್ಟಿ, ನಿನ್ನೆ ಸಂಜೆ, ರಾತ್ರಿ ಎಲ್ಲ ಎಷ್ಟು ಫೋನ್ ಮಾಡಿದೆ. ಎಲ್ಲಿ ಹಾಳಾಗಿ ಹೋಗಿದ್ದೆ? ಗೊತ್ತು ಬಿಡು ಯಾವುದೋ ಕ್ಲಬ್ಬು”

“ಇಷ್ಟು ಗಡಿಬಿಡಿ ಏಕೆ ? ಏನೂಂತ ಕೇಳಬಹುದೇ? “

“ನಮ್ಮ ಅಗಸ್ತ್ಯ ಮುಂಬಯಿನಲ್ಲಿದ್ದಾನಲ್ಲವೇ 

“ಹೌದು ಮೇಡಂ ! ಇನ್ನೂ ವಿಂಧ್ಯ ದಾಟಿಲ್ಲ  ..

“ಜೀವ್ಸ್ ! ಹಾಸ್ಯ ಬಿಡು !”

“ಗಸ್ಸಿ ಲಾಯರ್ ಓದತೀನಿ ಅಂತ ಹೋದನಲ್ಲ’

“ ಏನು ಲಾಯರೋ ಏನೋ ! ನಿಮ್ಮ ಅತ್ತೆ ಜಯಶ್ರೀ ಕಣ್ಣೀರು ಇಡತಾ ಇದಾಳೆ. ಗಜ್ಜೂ ಮಂಬಯಿಯಲ್ಲಿ ಯಾವುದೋ ಕುಣಿಯೋ ಹುಡುಗಿ ಸುತ್ತ ತಿರುಗುತ್ತಿದ್ದಾನಂತೆ ! 

“ ಕುಣಿಯೋ ಹುಡುಗಿ?”

“ಬರ್ಟಿ, ಸುಮ್ಮನೆ ನಾನು ಹೇಳಿದ್ದೇ ವಾಪಸ್ಸು ಹೇಳಬೇಡ. . ಡ್ಯಾನ್ಸಿಂಗ್ ಗರ್ಲ್ ! ನಮ್ಮ ರಾವ್ ಬಹದ್ದೂರ್ ಜಗನ್ನಾಥ ಶರ್ಮರ ಮನೆತನದ ಮರ್ಯಾದೆ ಹೋಗ್ತಾ ಇದೆ “ 

(ನಮ್ಮ ಮನೇಲಿ ಮೊದಲಿಂದಲೂ ಈ ಮರ್ಯಾದೆ ಎನ್ನುವ ವಸ್ತು ಬಹಳ ಮುಖ್ಯ. ಈ ಕೆಲಸ ಮಾಡಬೇಡ, ಆ ಕೆಲಸ ಮಾಡಬೇಡ. ನಮ್ಮ ಮರ್ಯಾದೆ ಹೋಗತ್ತೆ . ಆದರೆ ಅದು ಏನು ಅಂತ ನನಗೆ ಇನ್ನೂ ಗೊತ್ತಾಗಿಲ್ಲ) 

“ನಿಮ್ಮ ಭುಜಂಗ ಮಾಮ ಹಿಂದೆ ಏನು ಮಾಡಿದ್ದನೋ ಅದನ್ನೇ ಮಗ ಗಸ್ಸಿ ಈಗ ಮಾಡ್ತಾ ಇದಾನೆ.. ಸರಿ, ಕೇಳಿಸಿಕೊ. ಈವತ್ತೆಲ್ಲಾ ನಾಳೆ ನಿನಗೆ ಗೊತ್ತೇ ಆಗುತ್ತೆ. ಇದು ನಮ್ಮ ಕುಟುಂಬದ ಒಂದು ಗುಟ್ಟು ! ಹಿರಿಯರಿಗೆಲ್ಲಾ ಗೊತ್ತಿರುವ ಗುಟ್ಟು. ಒಂದು ಕಾಲದಲ್ಲಿ, ಅಂದರೆ ಸುಮಾರು 30 ವರ್ಷಗಳ ಹಿಂದೆ, ಕೊಲ್ಹಾಪುರದಲ್ಲಿ (ಅಲ್ಲೇ ನಿಂತಿದ್ದ ಜೀವ್ಸ್‘ ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಸಾರ್’’ ಎಂದು’ ಕಿವಿಯಲ್ಲಿ ಪಿಸುಗುಟ್ಟಿದ)  ಸಂಧ್ಯಾ ಸಾಂಗ್ಲೀಕರ್ ಎಂಬ ಖ್ಯಾತ ತಮಾಷೆ ಕಲಾವಿದೆ ಇದ್ದಳು. ಅವಳ ಹಾಡನ್ನು ಕೇಳಲು ಮತ್ತು ನರ್ತಿಸುವುದನ್ನು ನೋಡೋಕೆ ಮಹಾರಾಷ್ಟ್ರದ ಎಲ್ಲ ಕಡೆಯಿಂದಲೂ ಜನ ಕೊಲ್ಹಾಪುರಕೆ ಹೋಗುತ್ತಿದ್ದರಂತೆ, ಅದೇ ಸಮಯದಲ್ಲಿ ನಮ್ಮ ಕುಟುಂಬದ ಯುವಕನೊಬ್ಬ ಕೆಲಸದ ಮೇಲೆ ಊರೂರು ಸುತ್ತುತ್ತಿದ್ದ. ಹಾಗೇ ಒಂದು ಬಾರಿ ಕೊಲ್ಹಾಪುರಕ್ಕೂ ಹೋದನಂತೆ. ಅಲ್ಲಿ ಒಂದು ಸಂಜೆ ತಮಾಷೆ ಕಾರ್ಯಕ್ರಮ ನೋಡಲು ಹೋದಾಗ ಆ ಸಂಧ್ಯ ಸಾಂಗ್ಲೀಕರ್ ಕಾಣಿಸಿ ಮೊದಲನೇ ನೋಟದಲ್ಲೇ ಪ್ರೇಮ ಹುಟ್ಟಿತಂತೆ. ಹಾಗಾಗಿ ಅವನು ಕೊಲ್ಹಾಪುರಕ್ಕೆ ಬಹಳ ಹೋಗಿ ಬರುತ್ತಿದ್ದು ಕಡೆಗೆ ಇಬ್ಬರೂ ಗುಟ್ಟಾಗಿ ಮದುವೆಯಾದರಂತೆ. ನಮ್ಮಮನೆತನದ ಮರ್ಯಾದೆ ಉಳಿಸಿಕೊಳ್ಳಲು ನಮ್ಮ ಕುಟುಂಬದವರು ಅವಳಿಗೆ ಮತ್ತು ನಿಮ್ಮ ಮಾವ ಭುಜಂಗರಾವ್ ರಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿ ಅವಳಿಗೆ ಜಯಶ್ರೀ ಎಂದು ಹೊಸ ಹೆಸರಿಟ್ಟರು. ಇದು ನಿಮ್ಮ ಜಯಶ್ರೀ ಅತ್ತೆಯ ಪೂರ್ವಾಶ್ರಮದ ಚರಿತ್ರೆ”

“ಜಯಶ್ರೀ ಅತ್ತೆ ಆಶ್ರಮದಲ್ಲಿ ಇದ್ದರಾ ಚಿಕ್ಕಮ್ಮ?’

“ಅಯ್ಯೋ ಜೀವ್ಸ್ , ನೀನು ಇವನಿಗೆ ಬಿಡಿಸಿ ಹೇಳಪ್ಪ ! ಆಗಿನಿಂದ ನಾನು ದಿನ ಅವಳ ಜೊತೆ ಕುಳಿತುಕೊಂಡು ಈ ಕುಟುಂಬದ ಭವ್ಯ ಚರಿತ್ರೆ, ಹಿರಿಮೆ, ರೀತಿ ರಿವಾಜುಗಳ ಬಗ್ಗೆ ಭಾಷಣ ಕೊಡುತ್ತಿದ್ದು ಅವಳನ್ನು ಬಹಳ ತಿದ್ದಿದೆ. ಎರಡು ತಿಂಗಳಲ್ಲೇ ಅವಳು ಪೂರ್ತಿ ಬದಲಾದಳು ಈಗ ಅವಳಲ್ಲಿ ಹಿಂದಿನ ಸಂಧ್ಯ ಸಾಂಗ್ಲೀಕರ್ ಸ್ವಲ್ಪವೂ ಉಳಿದಿಲ್ಲ. ನಿಮ್ಮ ಸೋದರಮಾವ ಭುಜಂಗ ಇದ್ದಿದ್ದರೆ ಗಸ್ಸಿಗೆ ಬುದ್ಧಿ ಹೇಳ್ತಾ ಇದ್ದನೋ ಏನೋ ! ಅವನೂ ಹೊರಟುಹೋದ. ಈಗ ನಾನೊಬ್ಬಳೇ !  ಜೀವ್ಸ್ ! ನೀನೇ ಹೇಳು ಏನು ಮಾಡಬೇಕು ಅಂತ” 

“ ನಿಮ್ಮ ಮನೆತನದಿಂದ ಯಾರಾದರೂ ಈಗಲೇ ಮುಂಬಯಿಗೆ ಹೋಗಿ ಅಗಸ್ತ್ಯ ಅವರನ್ನು  ವಾಪಸ್ಸುಕರೆದುಕೊಂಡು ಬರಬೇಕು “

“ನನಗೆ ಆಗೋಲ್ಲ ಜೀವ್ಸ್. ಗಸ್ಸಿ  ತಾಯಿ ಜಯಶ್ರೀಗೂ ಇದೆಲ್ಲಾ ಆಗೋಲ್ಲ,”

“ಇಲ್ಲ ಮೇಡಂ. ಅವರು ಬೇಡ. ಭರತ್ ಅವರು ಹೋಗಬಹುದಲ್ಲವೆ ?

ನಾನೂ ಜೀವ್ಸ್ ಅನ್ನು ದುರುಗುಟ್ಟಿಕೊಂಡು ನೋಡಿದೆ “ನನಗೆ ಟೈಮ್ ಇಲ್ಲ..”

“ನಿನ್ನ ಹತ್ತಿರದ ಕಸಿನ್ ಗೆ ಅಷ್ಟೂ ಮಾಡೋಕೆ ಆಗೋಲ್ವ. ಅದಲ್ಲದೆ ನಿನಗ್ಯಾಕೆ ಟೈಮ್ ಇಲ್ಲ ? ಕೆಲಸ ಇಲ್ಲ.ಕಾರ್ಯ ಇಲ್ಲ. ಈಗಲೇ ಹೋಗು. ಜೀವ್ಸ್ ನೀನೂ ಬರ್ಟಿ ಜೊತೆ ಹೋಗಬೇಕು ನಿಮಗಿಬ್ಬರಿಗೂ ಟಿಕೆಟ್ ತೆಗೆದುಕೊಂಡು ಬಾ“

“ಆಗಲಿ ಮೇಡಂ“ ಎಂದ ಜೀವ್ಸ್. “ಮೇಡಮ್ ! ಆ ಹುಡುಗಿಯ ಹೆಸರು ಗೊತ್ತೇ“

“ಹೌದು ! ಶಾಲಿನಿ ! ಶಾಲಿನಿ ಪಾಟಂಕರ್ ! .. ಜೀವ್ಸ್ ! ಬೇಗ ಮುಂಬಯಿಗೆ ಹೋಗಿ ಇಬ್ಬರೂ ! 

ಮುಂಬಯಿಗೆ ಹೋಗಿ ಒಂದು ಹೊಟೇಲಿನಲ್ಲಿ ಇಳಿದುಕೊಂಡು ಅಗಸ್ತ್ಯನ ಕಾಲೇಜಿಗೆ ಹೋಗಿ ವಿಚಾರಿಸಿದೆವು. ಬಹಳ ದಿನಗಳಿಂದ ಬಂದಿಲ್ಲ ಅಂದರು. ವಿಳಾಸ ಕೇಳಿಕೊಂಡು ಅವನ ಅಪಾರ್ಟ್ಮೇಂಟಿಗೆ ಹೋದೆವು. ಇಲ್ಲಿ ಅಗಸ್ತ್ಯ ಅಂತ ಯಾರೂ ಇಲ್ಲ, ಇರೋದು ಮಿಲಿಂದ ಎನ್ನುವ ಯುವಕ ಅಂದರು. ಏನು ಮಾಡೋದು ಅಂತ ಯೋಚಿಸುತ್ತಿದ್ದಾಗ ಅವನೇ ಬಂದ. “ಏನಾಯಿತೋ ಗಸ್ಸಿ ! ನಿನ್ನ ಹುಡುಕಿ ಹುಡುಕಿ ಸುಸ್ತಾಯಿತು. ಹೆಸರು ಬದಲಾಯಿಸಿ ಕೊಂಡಿದ್ದೀಯಾ?“

“ಮಿಲಿಂದ ಪಹಾರೆ! ಹೆಸರು ಚೆನ್ನಾಗಿದೆ ಅಲ್ವ.“

“ಅದಿರಲಿ, ನಿನ್ನ ಕತೆ ಏನು? “

“ಹೇಳ್ತೀನಿ ಕೇಳು. ಹೇಗಾಯಿತು ಅಂತ, ನನಗೆ ಸಂಗೀತ, ನಾಟಕ ಅಂದರೆ ಇಷ್ಟ ಅಂತ ನಿನಗೆ ಗೊತ್ತಲ್ಲವಾ! ಆರು ತಿಂಗಳ ಹಿಂದೆ ಒಂದು ದಿನ ದಾದರ್ ಕಡೆ ಹೋಗಿದ್ದೆ. ಅಲ್ಲಿಂದ  ಪರೇಲಿಗೆ ಹೋಗುವಾಗ ಒಂದು ಓಣೀಲಿ ಒಂದು ಹಳೆಯ ಮರಾಠಿ ನಾಟ್ಯ ಮಂದಿರ ಇದೆ. ಒಳಗಿಂದ ಹಾಡುಗಳು ಕೇಳುತ್ತಿದ್ದವು. ಇಷ್ಟವಾಯಿತು, ಒಳಗೆ ಹೋದೆ. ಒಂದು ತಮಾಷೆ ಕಾರ್ಯಕ್ರಮ (ತಮಾಷೆ ಎಂದರೆ ಏನು ಅಂತ ಜೀವ್ಸ್ ಅನ್ನು ಕೇಳು, ಹೇಳ್ತಾನೆ) ನಡೀತಾ ಇತ್ತು. ಒಬ್ಬ ಸುಂದರ ಯುವತಿ ಹಾಡುತ್ತಿದ್ದಳು. ಅಷ್ಟೇ ಸಾಕಾಯಿತು ಬರ್ಟಿ. ಏನು ಹೇಳಲಿ ? ಐ ಯಾಮ ಇನ್ ಲವ್ ಕಣೋ ! 

“ಗಸ್ಸಿ ! ನೀನು ನನಗಿಂತ ಚಿಕ್ಕವನು ಕಣೋ ! “ 

“ಆದರೆ ಏನಂತೆ ! ನೀನು ಸೋಮಾರಿ ! ಪ್ರೀತಿಗೂ ಟೈಮ್ ಕೊಡಬೇಕು. ನೀನೋ ಆ ಕ್ಲಬ್ಬು, ಈಕ್ಲಬ್ಬು ಅಂತ ಓಡಾಡ್ತಾ ಇರತೀಯ“ 

“ನನಗೇ ಹೇಳೋಕೆ ಬಂದುಬಿಟ್ಯಾ? ಅಲ್ಲಿ ಮೈಸೂರಲ್ಲಿ ಒದ್ದಾಡತಾ ಇದ್ದಾರೆ. ನಿಮ್ಮ ಅಮ್ಮ, ಅಗಾಥಾ ಚಿಕ್ಕಮ್ಮ, ಎಲ್ಲಾ ನಮ್ಮ ಗಸ್ಸಿಗೆ ಏನಾಗಿದೆ ಅಂತ ಅಳತಾ ಇದ್ದಾರೆ. ಇಲ್ಲಿ ನೋಡಿದರೆ ನೀನು ಲವ್ ಲವ್ ಅಂತೆ “ 

“ಐ ಲವ್ ಶಾಲಿನಿ ! ಹೌದು, ಶಾಲಿನಿ ಅವಳ ಹೆಸರು! ಶಾಲಿನಿ ಪಾಟಂಕರ್  ಎಷ್ಟು ಚೆನ್ನಾಗಿದಾಳೆ ಗೊತ್ತ! ಎಷ್ಟು ಚೆನ್ನಾಗಿ ಹಾಡತಾಳೆ ! ಎಲ್ಲದ್ದಕ್ಕಿಂತ ಅವಳ ಹೃದಯ ! ನೀನೆ ನೋಡ್ತೀಯ ! ಈಗ ನಾನೂ ಅವರ ಸಂಗೀತ ನೃತ್ಯ ಎಲ್ಲಾ ಕಲೀತಾ ಇದೀನಿ. ಶಾಲಿನಿಗೆ ಗೊತ್ತಿರುವ ಒಂದು ತರಬೇತಿ ಶಾಲೆಗೆ ಸೇರಿದ್ದೀನಿ. ಅಗಸ್ತ್ಯ ಶರ್ಮ ಹೆಸರು ಇದಕ್ಕೆಲ್ಲಾ ಸರಿ ಹೋಗೋಲ್ಲ ಅಂತ ಅವಳೇ ಹೊಸ ಹೆಸರೂ ಆಯ್ಕೆ ಮಾಡಿದಳು. ಮಿಲಿಂದ ಪಹಾರೆ ಆಗಿ ಮೂರು ತಿಂಗಳೂ ಆಯಿತು. “ 

“ ನಿನ್ನ ಲಾಯರು ಓದು?

“ಮುಂದೆ ನೋಡಿಕೊಳ್ಳೋಣ . ನಾಳೆ ನಿನಗೆ ಶಾಲಿನಿನ ಗುರುತು ಮಾಡಿಸತೀನಿ. ಜೀವ್ಸ್, ನೀನೂ ಬರಬೇಕು“ 

ಮಾರನೆಯ ದಿನ ಅವಳನ್ನು ನಮ್ಮ ಹೋಟೆಲಿಗೆ ಕರೆದುಕೊಂಡುಬಂದು. ಗುರುತು ಮಾಡಿಸಿಕೊಟ್ಟ. ಹೌದು, agastyaಹೇಳಿದ ಹಾಗೆಯೇ ಇದ್ದಳು. ಸ್ನೇಹಮಯಿ ಕೂಡ. ಅವರಿಬ್ಬರ ಜೋಡಿ ಏನೋ ಚೆನ್ನಾಗಿತ್ತು. ಜೀವ್ಸ್ ಕೂಡ ತನ್ನ ಮೆಚ್ಚುಗೆ ಸೂಸಿದ ‘ agastyaರಾಯರು ಬಹಳ ಒಳ್ಳೆ ಆಯ್ಕೆ ಮಾಡಿದ್ದಾರೆ ಸಾರ್’. ಇವರನು ಬಿಡಿಸಬೇಕಾ ಅಂತ ಬೇಜಾರಾಯಿತು.. ಈಗ ಏನು ಮಾಡೋಣ ಜೀವ್ಸ್ ಎಂದು ಕೇಳಿದೆ . ಇನ್ನೂ ಹುಡುಗಿಯ ತಂದೆ ಒಪ್ಪಿಲ್ಲ ಸಾರ್. ಏನೇ ಆಗಲಿ ’ ಜಯಶ್ರೀ ಮೇಡಂ ಬರಬೇಕಾಗುತ್ತೆ ಸಾರ್‘ ಎಂದ. ನಾನ ಜಯಶ್ರೀ ಅತ್ತೆ ಗೆ ಫೋನ್ ಮಾಡಿ ಮುಂಬಯಿಗೆ ಬರಲು ಹೇಳಿ ಅವರು ಬಂದಾಗ ಅವರ ಮುಂದೆ ಅಗಸ್ತ್ಯ ತನ್ನ ಕತೆಯೆಲ್ಲಾ ಹೇಳಿಕೊಂಡ. ಶಾಲಿನಿಯ ನೃತ್ಯವನ್ನೂ ಅಮ್ಮನಿಗೆ ತೋರಿಸಿದ. ಮೊದಲ ಮೊದಲು ಬಹಳ ಬೇಸರದಿಂದ ಇದ್ದ ಜಯಶ್ರೀ ಅತ್ತೆ ನಿಧಾನವಾಗಿ ಕರಗಲಾರಂಭಿಸಿದರು. ಈ ಸಂಬಂಧವನ್ನು ಇಷ್ಟ ಪಟ್ಟರು ಕೂಡ. ಆದರೆ ಶಾಲಿನಿ ತಂದೆ ಇನ್ನೂ ಒಪ್ಪಿಲ್ಲ ಎಂದು ಜೀವ್ಸ್ ಎಹಚ್ಚರಿಸಿದ. 

ಕೇಶವರಾವ್ ಪಾಟಂಕರ ದಾದರಿನ ಹಿಂದು ಕಾಲೋನಿಯ ಹಳೆಯ ಆದರೆ ಭವ್ಯತೆಯನ್ನು ಉಳಿಸಿಕೊಂಡಿದ್ದ ಕಟ್ಟಡವೊಂ ದರಲ್ಲಿ  ವಾಸವಾಗಿದ್ದರು. ಮನೆಯ ಮುಂದೆ ಮರಾಠಿಯಲ್ಲಿ ‘ತಮಷಾ ಶಿಕ್ಷಣ ಶಾಲೆ‘ ಎಂದು ಬರೆದಿತ್ತು. ಆ ಪರಂಪರೆಯ ಒಬ್ಬ ಮೂಲವ್ಯಕ್ತಿ ಎಂದು ಅವರಿಗೆ ಬಹಳ ಗೌರವ ಸಿಗುತ್ತಿತ್ತು. ಶಿಷ್ಯರೂ ಬಹಳ ಬರುತ್ತಿದ್ದರು. ಕಟ್ಟಡದ ಕೆಳಗಿನ ಎರಡು ಅಂತಸ್ತುಗಳಲ್ಲಿ ನಾಟಕಗಳ ತಾಲೀಮು ಮತ್ತು  ಸಂಗೀತ ನೃತ್ಯಗಳ ರಿಯಾಜಿಗೆ, ಹಲವಾರು ಕೋಣೆಗಳು ಇದ್ದವು. ವಿವಿಧ ವಾದ್ಯಗಳ ಶಬ್ದಗಳು ಕೇಳಿಬರುತ್ತಿದ್ದವು. ಮೂರನೆಯ ಅಂತಸ್ತು ಯುವಕ ಯುವತಿಯರ ವಸತಿಗೆ ಕೋಣೆಗಳು. ನಾಲ್ಕನೆಯ ಅಂತಸ್ತು ಕೇಶವ ಪಾಟಂಕರರ ವಾಸ. ನಾಲ್ಕು ಮಹಡಿಗಳಿದ್ದರೂ ಲಿಫ್ಟ್ ಇರಲಿಲ್ಲ; ಜಯಶ್ರೀ ಅತ್ತೆಯನ್ನು ಕರೆದುಕೊಂಡು ಜೀವ್ಸ್ ಮತ್ತು ನಾನು ನಾಲ್ಕು ಮಹಡಿ ಹತ್ತಿದೆವು. ಯುವಕನೊಬ್ಬ ಒಳಗೆ ಕರೆದುಕೊಂಡು ಹೋಗಿ ಕೂರಲು ಹೇಳಿ ಹೋದ.

ಕೆಲವೇ ನಿಮಿಷಗಳಲ್ಲಿ ಕೇಶವರಾವ್ ಪಾಟಂಕರ ಬಂದರು . ವಯಸ್ಸು ಆಗಿದ್ದರೂ ಅದನ್ನು ತೋರಿಸದ ಉತ್ಸಾಹದ ಮುಖ. ದೊಡ್ಡ ಬಿಳಿಯ ಗಡ್ಡ! ಜಯಶ್ರೀಯನ್ನು ನೋಡುತ್ತಿದ್ದಂತೆಯೇ ‘ಸಂಧ್ಯ ! ಸಂಧ್ಯ ಸಾಂಗ್ಲೀಕರ್!’

ಕೇಶವ! ಕೇಶವ ರಾವ್ ಕೊಲ್ಹಾಪುರೆ !”

ಇಬ್ಬರೂ ಕೈ ಕುಲುಕುತ್ತ ಹೋದರು, ನಂತರ ಅಪ್ಪಿಕೊಂಡರು. 

‘ಎಷ್ಟು ವರ್ಷಗಳು ಆಗಿ ಹೋದವು ಸಂಧ್ಯಾ ! ಆದರೂ ಹಾಗೇ ಇದ್ದೀಯಾ !

“ಕೇಶವ! ನೀನು ಹಿಂದಿನ ಹಾಗೆಯೇ ಹೊಗಳತಾನೇ ಇರತೀಯ ! ಈಗ ನನಗೆ 60 ವರ್ಷ ! ನೋಡು ಎಷ್ಟು ಬಿಳಿಕೂದಲು !  

 ಅದಿರಲಿ ಈ ಕೇಶವರಾವ್ ಪಾಟಂಕರ್ ಯಾರು?

“ಸಂಧ್ಯ ! ಅದು ನಾನೇ ! ನೀನು ಬಿಟ್ಟ ನಂತರ ನಿನ್ನ ತರಹ ಹಾಡುವ ಹೆಣ್ಣು ಸಿಗಲೇ ನಮಗೆ. ಮೊದಲಿದ್ದ ಉತ್ಸಾಹ ಇರಲಿಲ್ಲ ನೀನು ಬಿಟ್ಟಮೇಲೆ ಕೊಲ್ಹಾಪುರದಿಂದ ಪುಣೆಗೆ ಹೋದೆವು. ನಂತರ ಮುಂಬಯಿಗೆ ಬಂದೆವು. ಅದೃಷ್ಟ ಬದಲಾಗಲಿ ಅಂತ ನಾನೂ* ಹೆಸರು ಬದಲಾಯಿಸಿಕೊಂಡೆ. ಆಗಿನ ಕೇಶವರಾವ್ ಕೊಲ್ಹಾಪುರೆ  ಈಗ ಕೇಶವರಾವ್ ಪಾಟಂಕರ್. ಅಂತೂ ಪರಂಪರೆ ಉಳಿಸಲು ಒಂದು ಶಿಕ್ಷಣಾ ಶಾಲೆ ನಡೆಸುತ್ತಿದ್ದೇನೆ. ಆಗ ಈಗ ಒಳ್ಳೆಯವರು ಸಿಗ್ತಾರೆ. ಈಗೀಗ ನನ್ನ ಮಗಳು ಶಾಲಿನಿ ಚೆನ್ನಾಗಿ ಹಾಡುತ್ತಿದ್ದಾಳೆ. ಅಭಿನಯವೂ ಪರವಾಯಿಲ್ಲ“ 

“ಕೇಶವ, ನಮ್ಮ ಕಂಪನಿ ಬಿಟ್ಟು  ಹೋದ ಮೇಲೆ ನನ್ನ ಜೀವನವೇ ಬೇರಯಾಯಿತು. ಗಂಡ, ಮಗ ,ಅವರ ಮನೆಯವರು. ಅಲ್ಲಿಯ ಸಂದರ್ಭಕ್ಕೆ ನಾನೂ ಬದಲಾಗಬೇಕಾಯಿತು. ಕಷ್ಟವಾಯಿತು. ಶ್ರೀಮಂತ ಜನ. ಹೇಗೋ ಆಯಿತು ಅನ್ನು . ಹತ್ತು ವರ್ಷಗಳ ಹಿಂದೆ ಇವರೂ ಹೋದರು. ಈಗ ನನ್ನ ಮಗ ಮಾತ್ರ. ಇಲ್ಲೇ ಮುಂಬಯಿಯಲ್ಲಿ ಲಾಯರ್ ಓದುತ್ತಿದ್ದ. ನಿನ್ನ ಶಾಲೆ ಯಲ್ಲಿ ಮಿಲಿಂದ ಪಹಾರೆ ಎನ್ನುವ ಹುಡುಗ ಇದ್ದಾನಲ್ಲವೇ ?”

“ಮಿಲಿಂದ ಪಹಾರೆ? ಮಿಲಿಂದ ಪಹಾರೆ ! ಹೌದು, ಗಮನಿಸಿದ್ದೇನೆ ಉತ್ಸಾಹ ಇದೆ ಆದರೆ ಇನ್ನೂ ಅವನು ಶ್ರಮ ಪಡಬೇಕು ಸಂಧ್ಯ, ನಿನಗೆ ಹೇಗೆ ಗೊತ್ತು ಅವನು ?”

ಅವನು ನನ್ನ ಮಗ ಅಗಸ್ತ್ಯ !  ತಮಾಷೆಯ ಹುಚ್ಚು ಹಿಡೀತು. ಜೊತೆಗೆ  ನಿನ್ನ ಮಗಳ ಹುಚ್ಚು. ಅವಳಿಗೂ ಅವನು ಇಷ್ಟವಾಗಿದ್ದಾನೆ  

“ನನಗೂ ಏನೇನೋ ಅನುಮಾನ ಬರುತ್ತಿತ್ತು . ಆದರೆ ಹುಡುಗ ಇನ್ನೂ.. ”

“ನೆನೆಪು ಮಾಡಿಕೊ ಕೇಶವರಾವ್ . ನಾವೂ ಹಾಗೆಯೇ ಇದ್ದೆವಲ್ಲ”

“ಲಾಯರು ಓದು ಮುಗಿಸಲಿ. ಆಯಿತು, ಈ ಸಂಬಂಧಕ್ಕೆ ನನಗೇನು ಆಕ್ಷೇಪಣೆ ಇಲ್ಲ“

ಅಂತೂ ಈ ಮದುವೆಗೆ, ಚಿಕ್ಕಮ್ಮ  ಅಗಾಥ ಬಿಟ್ಟು , ಎಲ್ಲರೂ ಒಪ್ಪಿಗೆ ಕೊಟ್ಟರು. ಸಾಂಗಲಿಯಲ್ಲಿ ಮದುವೆಯೂ ನಡೆಯಿತು.   . ಮಕ್ಕಳ ಮದುವೆ ಮಾಡಿ ನಂತರ ಸಂಧ್ಯ ಸಾಂಗ್ಲೀಕರ್ ಮತ್ತು ಕೇಶವರಾವ್ ಕೊಲ್ಹಾಪುರೆ ( ಹೌದು, ಅವರು ಮತ್ತೆ ಹಳೆಯ ಹೆಸರಿಗೇ ಹೋದರು)  ಇಬ್ಬರೂ ತಮಾಷಾ ಪರಂಪರೆ ಉಳಿಸಲು ಊರೂರು ತಿರುಗುತ್ತಿರುತ್ತಾರೆ. ಭಾಷಣಗಳನ್ನು ಕೊಡುತ್ತಿರುತ್ತಾರೆ. ಮೊನೆ ಮೊನ್ನೆ ಅವರಿಬ್ಬರಿಗೂ ಯಾವುದೋ ರಾಷ್ಟ್ರ ಪ್ರಶಸ್ತಿಯೂ ಸಿಕ್ಕಿತು ಕೆಲವು ಬಾರಿ ಅವರ ಜೊತೆ ಶಾಲಿನಿ ಮತ್ತು  ಅಗಸ್ತ್ಯ ಸೇರಿಕೊಂಡು ನಾಟಕಗಳನ್ನೂ ಆಡುತ್ತಾರೆ. ಎಲ್ಲರೂ ಸಂತೋಷವಾಗಿದ್ದಾರೆ . ಜೀವ್ಸ್ ಹೇಳೋ ತರಹ ಇನ್ನೇನು ಬೇಕು ಸಾರ್?  (ಸ್ಫೂರ್ತಿ – ‘ಎಕ್ಸ್ಟ್ರೆಕೇಟಿಂಗ್ ಗಸ್ಸಿ ‘ ಎಂಬ ವುಡ್ ಹೌಸ್ ಕಥೆ – ಮೂಲದ ನ್ಯೂ ಯಾರ್ಕಿನ ‘ವಾಡವಿಲ್’ ಇಲ್ಲಿ ಮುಂಬಯಿಯ ‘ತಮಾಷೆ‘ಯಾಗಿದೆ)

‍ಲೇಖಕರು Admin

3 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading