ಸಂಧ್ಯಾರಾಣಿಯವರ ಈ ರಾಗ…?

ನನಗೆ ವೆಂಕಟ್ರಮಣ ಗೌಡರ ಗದ್ಯ ಬರಹಗಳೆಂದರೆ ಪ್ರೀತಿ, ಅವರ ಕವನಗಳೆಂದರೆ ಬೆರಗು. ಅವರ ಅನೇಕ ಬರಹಗಳನ್ನು, ಕವನಗಳನ್ನು ಮತ್ತೆ ಮತ್ತೆ ಓದಿದ್ದೇನೆ. ನಾನು ಅಷ್ಟು ಇಷ್ಟ ಪಟ್ಟು ಓದುವ ಗೌಡರು ನನ್ನ ಪುಸ್ತಕದ ಬಗ್ಗೆ ಪ್ರೀತಿಯಿಂದ ಬರೆದಿದ್ದಾರೆ. ನಿಮಗೆ ನಾನು ಋಣಿಯಾಗಿದ್ದೇನೆ ಗೌಡ್ರೆ. ಪುಸ್ತಕವನ್ನು ಕುರಿತ ಅವರ ಬರಹ ಇಲ್ಲಿದೆ

ಸಂಧ್ಯಾರಾಣಿ

yake kaadutide1

ಒಂದು ಪುಸ್ತಕದ ಓದು, ಕೇಳಿಸಿಕೊಳ್ಳುವ ಒಂದು ಹಾಡು, ನೋಡುವ ಒಂದು ಸಿನಿಮಾ ಇಲ್ಲವೆ ರಂಗಪ್ರಯೋಗ, ನೆನಪಿನಲ್ಲಿ ಉಳಿದುಕೊಂಡುಬಿಡುವ ಯಾವುದೋ ಒಂದು ಘಟನೆ, ಯಾರದೋ ಒಂದು ಮಾತು… ಓಹ್, ಅಂತರಂಗಕ್ಕೆ ಇಳಿಸಿಕೊಳ್ಳುವವರ ಪಾಲಿಗೆ ಯಾವುದೂ ಈ ಕ್ಷಣದ್ದು ಮಾತ್ರವಾಗದೆ ನಿರಂತರತೆಯನ್ನು ಧರಿಸಿ ಜೊತೆ ಬರುವ ಜಂಗಮವೇ. ಅಂಥದೊಂದು ಅವಿರತ ಲೋಕವನ್ನು ಕಟ್ಟಿಕೊಂಡು ಧ್ಯಾನಿಯಂತೆ ತಮ್ಮ ಗ್ರಹಿಕೆಯ ನವಿಲುಗರಿಯ ಮೂಲಕ ಖುಷಿಯನ್ನು, ಲವಲವಿಕೆಯನ್ನು, ಅಗಾಧ ಕಡಲಂಚಿನ ತೇವದ ಆಪ್ತತೆಯನ್ನು ಹಂಚುತ್ತಿರುವವರು ಎನ್ ಸಂಧ್ಯಾರಾಣಿ. “ಯಾಕೆ ಕಾಡುತಿದೆ ಸುಮ್ಮನೆ ನನ್ನನು…” ಕೃತಿಯ ನೆಪದಲ್ಲಿ ಅವರ ಬರಹಗಳನ್ನು ಒಟ್ಟಿಗೆ ಓದಿಕೊಳ್ಳುವಾಗ ನನಗೆ ಒದಗಿದ್ದು ಇಂಥ ಹಲವು ಬೆರಗುಗಳ ಗೊಂಚಲು.

ಓದಿ ಮರೆತುಬಿಡಬಹುದಾದ ಒಂದು ಸಾಲು, ಸಂಧ್ಯಾರಾಣಿಯವರ ಗ್ರಹಿಕೆಯ ಮೂಲಕ ಹಾದುಬರುವಾಗ ‘ಯಾವುದು ಈ ರಾಗ’ ಎಂಬ ಹುಡುಕಾಟವನ್ನು ಪ್ರೇರೇಪಿಸುತ್ತ ಆಳದಲ್ಲಿ ಉಳಿದುಕೊಂಡುಬಿಡುತ್ತದೆ. ಅಲ್ಲಿ ಮಾರ್ದನಿಸುವ ಎಲ್ಲದರಲ್ಲೂ ಒಂದು ಜೀವಪರ ನೋಟವನ್ನು, ಸಾಧ್ಯತೆಗಳ ಮಿಂಚನ್ನು, ಆತ್ಮಸಾಕ್ಷಿಯ ನಿಖರತೆಯನ್ನು ಕಾಣುತ್ತೇವೆ. ಅಪರೂಪಕ್ಕೆ ಸಿಕ್ಕ ಸ್ನೇಹಿತನೊಡನೆ ರಾಶಿ ರಾಶಿ ಹಂಚಿಕೊಳ್ಳುವುದಿದೆ ಎಂದು ಮೊಗೆಮೊಗೆದು ಮಾತಿಗೆ ಕೂತ ಮನಸ್ಸು ದಂಡಿದಂಡಿಯಾಗಿ ಭಾವನೆಗಳನ್ನು ಸುರಿಯುತ್ತಿರುವ ಥರದ ಭಾಸವನ್ನು ಕೊಡುತ್ತದೆ “ಯಾಕೆ ಕಾಡುತಿದೆ ಸುಮ್ಮನೆ ನನ್ನನು”.

ಈ ಪುಸ್ತಕವನ್ನು ಓದಿ ಮುಗಿಸಿದ ಬಳಿಕ ನನ್ನೊಳಗೆ ಉಳಿದದ್ದು ಒಂದು ನೀರವ; ಗಾಢವಾಗಿ ನಡೆಸಿಕೊಂಡು ಹೋದ ಕಥೆಯೊಂದರ ಕೊನೆಯಲ್ಲಿ ಕೈಹಿಡಿಯುವ ಒಂದು ವಿಶಿಷ್ಟ ಅನುಭೂತಿ; ಹೀಗೇ ಎಂದು ಹೇಳಲು ನಿಲುಕದ ಒಂದು ಪರಿಶುದ್ಧಿ.

“ಮಾತಿನ ಮಹಾದೇವಿಯಾಗಿದ್ದ ನಾನು ನಂತರ ಹೆಜ್ಜೆಯಿಟ್ಟಿದ್ದು ಒಂದು ಮೌನ ಪರ್ವಕ್ಕೆ. ಮಾತು ಆಡದ, ಮಾತು ಕೇಳದ ಒಂದು ನಿಶ್ಶಬ್ದ ಸಾಗರಕ್ಕೆ. ಮಾತುಗಳೆಲ್ಲ ಆಗ ನನ್ನೊಳಗೇ ಹರಳುಗಟ್ಟತೊಡಗಿದವು. ಆಮೇಲಾಮೇಲೆ ಮಾತು ಆಡುವುದಕ್ಕಿಂತ ಸುಮ್ಮನೆ ಕೇಳುವುದೇ ಹಿತ ಅನ್ನಿಸತೊಡಗಿತು. ಮಾತು ಶಬ್ದವಾಗುವ ಬದಲು ನನ್ನೊಳಗಿನ ಅನುರಣನವಾಯಿತು, ಮಥನವಾಯಿತು” ಎಂದು ತಮ್ಮ ಬರವಣಿಗೆಯ ಹಿಂದಿನ ಚರಿತ್ರೆಯನ್ನು ವಿವರಿಸುತ್ತಾರೆ ಸಂಧ್ಯಾರಾಣಿಯವರು. ಅಂಥ ಚರಿತ್ರೆಯೇ ಅವರಿಂದ ಎಂದೋ ಕೆಳಬೇಕೆಂದಿದ್ದ ಕವಿತೆಗಳ ಬಗ್ಗೆ, ಆಡಬೇಕು ಎಂದುಕೊಂಡಿದ್ದರೂ ಆಡದೇ ಉಳಿದ ಮಾತುಗಳ ಬಗ್ಗೆ, ಯಾವುದೋ ನೋವಿಗೆ ಉಳಿದ ನಿಟ್ಟುಸಿರಿನ ಬಗ್ಗೆ, ಯಾವುದೋ ಅವಮಾನ, ಎಂದೋ ಮುಚ್ಚಿಟ್ಟುಕೊಂಡಿದ್ದ ಕಂಬನಿ, ಬೆನ್ನು ಬಿಡದೆ ಕಾಡಿದ ಹಾಡು… ಈ ಎಲ್ಲದರ ಬಗ್ಗೆ ಬರೆಸಿದೆ.

v gowda with kidಈ ಪುಸ್ತಕದಲ್ಲಿ ಬೆರಗು ಹಚ್ಚುವ ಮೊದಲ ಸಂಗತಿಯೇ ಭಾವಗಳ ಮೇಳ. ಓದುವ ಕೋಣೆಯಿಂದ ಶುರುವಾಗುವ ಅವರ ಬರಹವೊಂದು ಚಂದವಲ್ಲದ ಹುಡುಗಿಯರ ಇನ್ಫೀರಿಯಾರಿಟಿಯನ್ನು ನಿವಾರಿಸಿದ ಯಂಡಮೂರಿಯ ಬೆಳದಿಂಗಳ ಬಾಲೆ, ಎಷ್ಟೆಲ್ಲ ಲೇಖಕರ ಬಳಗವನ್ನು ಕೂಡಿಸಿದ ಲಂಕೇಶ್ ಪತ್ರಿಕೆ ಮುಂತಾಗಿ ವಿಭಿನ್ನ ಕಾಲಘಟ್ಟ, ಮನೋಭೂಮಿಕೆಗಳಲ್ಲಿ ಹಾದು, ಬಳಿಕ ಸಾಹಿತ್ಯ ಲೋಕದ ರಾಜಕಾರಣಕ್ಕಾಗಿ ಕಳವಳಿಸುತ್ತ ಕೊನೆಯಾಗುತ್ತದೆ. ಮಾತಿಲ್ಲದ ಮಂಗಳೂರು ಮನೆಯಲ್ಲಿ ಶುರುವಾಗುವ ಮಾತು, ಹಾಡುಗಳೊಂದಿಗೆ ಬೆಳೆವ ಸಂಬಂಧದ ಬಗ್ಗೆ ಪರಿಚಯಿಸುತ್ತ, ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ದೂರವನ್ನು ಕೂಡ ಹಾಡುಗಳ ಮೂಲಕವೇ ಅಳೆಯುವಷ್ಟು ಅವಿನಾಭಾವವನ್ನು ಹಾಡುಗಳೊಂದಿಗೆ ಹೊಂದಿರುವ ಬಗೆಗಿನ ಅಭಿಮಾನವಾಗಿ ತಟ್ಟುತ್ತದೆ. ಅದಾವುದೋ ಪ್ರಯಾಣದಲ್ಲಿ ಹೆಣ್ಣುಮಗಳೊಬ್ಬಳ ಮನಸ್ಸಿನಲ್ಲಿ ಉಳಿದುಕೊಂಡುಬಿಟ್ಟ ಯಾವುದೋ ಪುಟ್ಟ ಹುಡುಗನ ಪ್ರಸ್ತಾಪದಿಂದ ಶುರುವಾಗುವ ರಾಗ, ಲಂಚ್ ಬಾಕ್ಸ್ ಸಿನಿಮಾದ ಕಥೆಯನ್ನು ಎಳೆಎಳೆಯಾಗಿ ನುಡಿಸುವ ಮೂಲಕ ಸಂಬಂಧಗಳ ಅಗಾಧತೆ, ಅನೂಹ್ಯದ ಕಡೆ ಬೆರಳು ತೋರಿಸುತ್ತ ಗಾಢವಾಗುತ್ತದೆ.

ಹೀಗೆ ಸಂಧ್ಯಾರಾಣಿಯವರ ನೋಟ ನಿಕ್ಕಿಯಾಗುವುದೇ ನಾನು ಈಗಾಗಲೇ ಹೇಳಿದ ಅವಿರತತೆಯಲ್ಲಿ. ಕಂಡ ಒಂದು ಹೊಳಹನ್ನು ಭಾವದ ಮತ್ತು ಚಿಂತನೆಯ ವಿವಿಧ ಕಿನಾರೆಗಳಲ್ಲಿ ಮತ್ತೆ ಮತ್ತೆ ಕಾಣಲು ತವಕಿಸುತ್ತಾರೆ ಅವರು. ಈ ಸಾತತ್ಯವನ್ನು ಕಾಪಿಡುವುದು ಕಾಣುವುದರ ಕುರಿತ ಅವರ ಉಮೇದು. ಬಾಲ್ಯಕಾಲದ ನೆನಪು ಅವರ ಕಣ್ಣಿನಲ್ಲಿ ಬರೀ ಒಂದು ನೆನಪಲ್ಲ; ಬದಲಾಗಿ ಇವತ್ತಿನ ನೋಟವನ್ನು ರೂಪಿಸುವ ಚೌಕಿ. ಮನೆಯೊಳಗಿನ ಕಪಾಟನ್ನು ತಾವಿಟ್ಟಿದ್ದ ಸ್ಥಳದಿಂದ ಮಗ ಜರುಗಿಸಿದಾಗ ಅದನ್ನು ಆಕ್ಷೇಪಿಸಿ ದನಿಯೇರಿಸಿ ಮಾತನಾಡಿದ್ದರಲ್ಲಿ ಚಿಕ್ಕಂದಿನಲ್ಲಿ ತನಗೆ ಅಮ್ಮ ಹೇಳಿದ್ದ ಮಾತೇ ಮಾರ್ದನಿಸುತ್ತದೆ. ಮನೆಯ ವಿಚಾರದಲ್ಲಿ ಅಮ್ಮನ ತೀರ್ಮಾನವನ್ನು ತಾನು ಅತಿಕ್ರಮಿಸಿದ್ದೆ ಎಂಬುದು ಮನವರಿಕೆಯಾದ ಕ್ಷಣ ಅದು. ‘ಯಾಕೊ ಆ ಘಳಿಗೆಯಲ್ಲಿ ಅಮ್ಮ ನನಗೆ ಜಾಸ್ತಿ ಅರ್ಥವಾದಳು’ ಎಂಬುದು ಬದುಕನ್ನು ಮತ್ತೊಮ್ಮೆ ನೋಡಿಕೊಳ್ಳುತ್ತಿರುವುದರ ಧ್ವನಿಯಂತೆ ಹೊಮ್ಮುವ ಮಾತಾಗುತ್ತದೆ. ಒಮ್ಮೆ ಅಪ್ಪನ ಮೇಲಿನ ಸಿಟ್ಟಿನಿಂದ, ಅವರು ಕಟ್ಟಿಸಿಕೊಂಡು ಬಂದಿದ್ದ ಇಡ್ಲಿಯನ್ನು ಎಷ್ಟು ಪ್ರೀತಿಯಿಂದ ಒತ್ತಾಯಿಸಿದರೂ ತಿನ್ನದೆ, ಕಡೆಗೆ ಅಪ್ಪ ಅವತ್ತು ಇಡ್ಲಿ ತಿಂದರಾ, ತಿನ್ನದೆ ಮಲಗಿದರಾ ಎಂಬುದು ಇವತ್ತಿನವರೆಗೂ ತಿಳಿಯದೆ ಉಳಿದ ಪ್ರಶ್ನೆಯಾಗುವುದು, ಅಪ್ಪನಿಗೆ ‘ಸಾರಿ’ ಕೇಳಲಾಗಲೇ ಇಲ್ಲ ಎಂಬ ಒಳಗುದಿ ನೋವಿನಾಚೆಗೂ ಬದುಕನ್ನು ನಿರ್ದೇಶಿಸುವ ನೆನಪಾಗಿ ದೊಡ್ಡದು. ಹುಡುಗ ಹುಡುಗಿ ಪ್ರೀತಿ ಮಾಡುತ್ತಾ ಇರುವ ವೇಳೆಯಲ್ಲೇ ಮತ್ತೊಂದೆಡೆ ಒಂದು ಶವದ ಮೆರವಣಿಗೆ ಸಾಗುತ್ತಿರುವ ಚಿತ್ರವೊಂದರ ಸನ್ನಿವೇಶ ಎದೆಯಲ್ಲಿ ಉಳಿದುಕೊಂಡುಬಿಡುವ ಗ್ರಹಿಕೆ ಅವರದು. ಅದರಲ್ಲಿ ಅವರಿಗೆ ಕಾಣಿಸುವುದು ಬದುಕು ಆ ಕ್ಷಣದ ಸತ್ಯ ಎಂಬ ಬದುಕಿನೆಡೆಗಿನ ತೀವ್ರ ಪ್ರೇರಣೆಯೇ.

ಸಂಬಂಧಗಳ ಬಗ್ಗೆ ಬರೆಯುವಾಗಲೂ ಅಷ್ಟೆ, ಪ್ರೇಮದ ಇವತ್ತಿನ ವ್ಯಾಖ್ಯಾನಗಳ ಬಗ್ಗೆ ಬರೆಯುವಾಗಲೂ ಅಷ್ಟೆ; ಸಂಧ್ಯಾರಾಣಿಯವರು ತಲೆಮಾರುಗಳ ತವಕ, ತಲ್ಲಣ, ತಳಮಳಗಳನ್ನು ದಾಖಲಿಸುವಂತೆ ಬರೆಯುತ್ತಾರೆ. ಕಾರಂತರ ‘ಮೈಮನಗಳ ಸುಳಿಯಲ್ಲಿ’ ಕಾದಂಬರಿಯಲ್ಲಿನ ವಯಸ್ಸಾಗಿ ನಡೆಯಲಾರದ ಹೆಂಡತಿ ದುಗ್ಗಿಯನ್ನು ಅವಳ ಗಂಡ ಪೊಮ್ಮ ಮಗುವಿನಂತೆ ಕಾಯುವ ಚಿತ್ರ ಅವರ ಎದುರಿಗಿದೆ. ‘ಮಿಥುನಂ’ ಚಿತ್ರದಲ್ಲಿನ ಮಾಗಿದ ದಾಂಪತ್ಯದಲ್ಲಿ ಕಾಣುವ ಜೀವನಪ್ರೀತಿ ಬೆರಗುಗೊಳಿಸುತ್ತದೆ. ಗಂಡನಿಗಿಂತ ಮೊದಲು ತಾನು ಸತ್ತರೆ ಗಂಡನನ್ನು ನೋಡಿಕೊಳ್ಳುವವರು, ಅರ್ಥ ಮಾಡಿಕೊಂಡು ಕಾಳಜಿ ತೋರಿಸುವವರು ಯಾರೂ ಇರುವುದಿಲ್ಲವೆಂದು ತನಗಿಂತ ಮೊದಲು ದೇವರು ತನ್ನ ಗಂಡನನ್ನು ಕರೆದುಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದ ಹೆಂಡತಿಯೊಳಗಿನ ಒಬ್ಬ ಅಮ್ಮ, ಹೆಂಡತಿಯನ್ನು ಸೌಭಾಗ್ಯವತಿಯಾಗು ಎಂದು ಆಶೀರ್ವದಿಸಲು ಹಿಂಜರಿದು, ಆಯುಷ್ಯವಂತಳಾಗೆಂದು ಹರಸುವ ಗಂಡನೊಳಗಿನ ಒಬ್ಬ ಮಗುವಿನ ಬಗ್ಗೆ ಗಮನ ಸೆಳೆಯುತ್ತಾರೆ ಲೇಖಕಿ.

sandhyarani2ಮದುವೆಯೇ ಬೇಡ, ಮದುವೆಯಾದರೂ ಮಕ್ಕಳು ಬೇಡ, ದೇಹ ಮತ್ತು ಮನಸ್ಸಿನ ಸಾಂಗತ್ಯಕ್ಕಾಗಿ ಒಟ್ಟಿಗೇ ಇದ್ದರೂ ಯಾವುದೇ ಬೈಂಡಿಂಗ್ ಬೇಡ ಈ ಥರದ ಮಟ್ಟಕ್ಕೆ ಗಂಡು ಹೆಣ್ಣಿನ ಸಂಬಂಧಗಳು ತಲುಪಿರುವ ಬಗೆಗಿನ ಚರ್ಚೆಯಲ್ಲೂ ಸಂಧ್ಯಾರಾಣಿಯವರು ಆಪ್ತತೆಯ ಎಳೆಯೊಂದು ಕಳಚಿಕೊಂಡದ್ದೆಲ್ಲಿ ಮತ್ತು ಅದನ್ನು ಕಾಯ್ದುಕೊಳ್ಳುವ ದಾರಿ ಯಾವುದು ಎಂಬುದರತ್ತ ಚಿಂತಿಸುತ್ತಾರೆ. ‘ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯದ ಜೊತೆಜೊತೆಯಲ್ಲೇ ಅದರ ಪರಿಣಾಮಗಳನ್ನು ಹೊರಬೇಕಾದ ಹೊಣೆಗಾರಿಕೆಯೂ ಇರುತ್ತದೆ’ ಎಂದು ಎಚ್ಚರಿಸಬಯಸುತ್ತಾರೆ.

ಮಕ್ಕಳನ್ನು ಓದಿನಲ್ಲಿ ಮೊದಲ ಸ್ಥಾನಕ್ಕಾಗಿ ಗೋಳುಹೊಯ್ದುಕೊಳ್ಳುವ, ಮಕ್ಕಳನ್ನು ಮನುಷ್ಯತ್ವದಂಥ ಮಾರ್ದವತೆಯ ಪರಿಚಯವೂ ಆಗದಂತೆ ಬೆಳೆಸುವ – ಇಂದಿನ ಜೀವನಶೈಲಿಯ ಭಾಗವೇ ಎಂಬಂತಾಗಿರುವ – ನಡೆಯ ಬಗ್ಗೆ ಬರೆಯುವಾಗಲೂ ಸಂಧ್ಯಾರಾಣಿಯವರನ್ನು ಕಾಡುತ್ತಿರುವುದು ಇಂಥದೇ ತಲ್ಲಣ. ಮೊದಲ ಸ್ಥಾನ ಬರದೇ ಹೋದರೆ ಆ ಮಗುವಿಗೆ ಅಪ್ಪ ಅಮ್ಮ ಹೊಡೆಯುತ್ತಾರೆ ಎಂಬ ಕಾರಣಕ್ಕೆ ತಾನು ಎರಡನೇ ಸ್ಥಾನ ಬರಲು ಮನಸ್ಸು ಮಾಡುವ ಮತ್ತೊಂದು ಮಗುವಿನೊಳಗಿನ ತುಡಿತದಲ್ಲಿ ಮನುಷ್ಯ ಸಂಬಂಧದ ಆರ್ದ್ರತೆಯನ್ನು ಕಾಣಿಸುವ ಬಗೆ ಬೆರಗಿನಂತೆ ಉಳಿದುಬಿಡುತ್ತದೆ.

“ಬದುಕನ್ನು ಪ್ರೀತಿಸುವ, ಜೀವಿಸುವ ಒಂದು ಧೈರ್ಯ, ಒಂದು ಬಯಕೆ, ಒಂದು ಸಣ್ಣ ಹುಚ್ಚು ಬೇಕು ಬಾಳಿಗೆ! ಅದೇನು ದೊಡ್ಡ ದೊಡ್ಡ ಘಟನೆಗಳೇ ಆಗಬೇಕಿಲ್ಲ. ಬದುಕು ಇರುವುದು ಸಣ್ಣ ಸಣ್ಣ ಖುಷಿಗಳಲ್ಲಿ, ಆ ಖುಷಿಗೆ ಜೊತೆಯಾಗುವುದರಲ್ಲಿ, ಕೆಲವು ಸಲ ನೋವಿಗೆ ಹೆಗಲಾಗುವುದರಲ್ಲಿ, ಮೌನವಾಗಿ ಮಡಿಲಾಗುವುದರಲ್ಲಿ, ಸಣ್ಣ ಸಣ್ಣ ಸಾರ್ಥಕತೆಗಳಲ್ಲಿ” ಎಂದು ಇಲ್ಲಿನ ಬರಹವೊಂದರಲ್ಲಿ ಬರೆಯುತ್ತಾರೆ ಸಂಧ್ಯಾರಾಣಿ. ಇದನ್ನು ಏಕೆ ಉಲ್ಲೇಖಿಸುತ್ತಿದ್ದೇನೆಂದರೆ, ಈ ಖುಷಿಗೆ ಜೊತೆಯಾಗುವ, ನೋವಿಗೆ ಹೆಗಲಾಗುವ, ಮೌನವಾಗಿ ಮಡಿಲಾಗುವ ಹಂಬಲ ಮತ್ತು ಆ ತುಡಿತವೇ ಬದುಕನ್ನು ಕಾಯುವುದೆಂಬ ನಂಬಿಕೆ ಅವರ ಈ ಎಲ್ಲ ಬರಹಗಳ ಹಿಂದೆ ಸೆಲೆಯಂತೆ ಇದೆ. ಈ ಮಾತಿನ ಮುಂದುವರಿಕೆಯಾಗಿ ನಾನು ಉಲ್ಲೇಖಿಸಬಯಸುವ ಬರಹವೊಂದರಲ್ಲಿ ಅವರು, ಪುರುಷನ ಗುಣವಾಗುವ ಮಹತ್ವಾಕಾಂಕ್ಷೆ ಹೆಣ್ಣಿನಲ್ಲಿ ಅವಗುಣವಾಗುವುದರ ಹಿಂದಿನ ಕಾರಣಗಳನ್ನು ಶೋಧಿಸಹೊರಡುತ್ತಾರೆ. ಮೂಲಭೂತವಾಗಿ ಗಂಡು ಒಬ್ಬ ‘ಪ್ರೊವೈಡರ್’ ಹಾಗೂ book on sapnaಹೆಣ್ಣೊಬ್ಬಳು ‘ಕನ್ಸರ್ವೇಟರ್’ ಎನ್ನುವುದು ನಿಜವಾ ಎಂದು ಕೇಳಿಕೊಳ್ಳುತ್ತಾರೆ. ‘ಭಾವನೆ’ಗಳಿಗಾಗಿ ಹಂಬಲಿಸುವ ಹೆಣ್ಣು ಮತ್ತು ‘ಅಭಿಪ್ರಾಯ’ಗಳನ್ನು ಕೊಡುವ ಗಂಡು ಇವರಿಬ್ಬರಿಗೂ ಇವು ಅರಿವಿಲ್ಲದಂತೆ ಮಿತಿಗಳಾಗಿಬಿಡುತ್ತವೆಯೇನೊ ಎಂಬ ಅವಲೋಕನಕ್ಕೆ ತೊಡಗುತ್ತಾರೆ. ಸುಮ್ಮನೆ ದೂಷಿಸುವುದಕ್ಕಿಂತ ಆಚೆಗಿನ ನೋಟದಲ್ಲಿ ದಕ್ಕಿದ ತೀವ್ರತೆ ಇದು.

ಸಂಧ್ಯಾರಾಣಿಯವರು ಅನಂತ್ನಾಗ್ ಬಗ್ಗೆ ಬರೆದರೆ, ಬಾಲಿವುಡ್ ನಟಿ ರೇಖಾ ಬಗ್ಗೆ ಬರೆದರೆ ಅದು ಅವರ ಜೀವನದ ಕೆಲವು ವಿವರಗಳ ಕಾವ್ಯಾತ್ಮಕ ಪ್ರಸ್ತುತಿ ಮಾತ್ರ ಆಗದೆ, ಮತ್ತೊಬ್ಬರು ತಮ್ಮ ಬದುಕನ್ನು ನೋಡಿಕೊಳ್ಳುವುದಕ್ಕೆ ಒದಗುವ ಕನ್ನಡಿಯಂತೆ ಬೆಳೆಯುತ್ತದೆ ಮತ್ತು ಬೆಳಗುತ್ತದೆ. ಕೆಲವು ರಂಗಪ್ರಯೋಗಗಳ ಮೇಲಿನ ಇಲ್ಲಿನ ಬರಹಗಳೂ ಕೂಡ ವಿಮರ್ಶೆಯಾಗದೆ, ನಮ್ಮ ಕಾಲದ ಜರೂರುಗಳನ್ನು, ಜೀವನದ ಕತ್ತಲೆ ಬೆಳಕುಗಳ ನಡುವೆಯೆಲ್ಲೋ ಎಡವುತ್ತಿರುವ ಸತ್ಯವನ್ನು ನೋಡಲು ಕಾತರಿಸುವ ಮಾರ್ಗವಾಗಿ ತೆರೆದುಕೊಳ್ಳುತ್ತವೆ.

ಭಾವನೆಗಳನ್ನು, ಭಾವಲೋಕವನ್ನು ಅದರ ಸಹಜ ಪ್ರಖರತೆಯಲ್ಲೇ ತಂದಿಳಿಸುವ ಗುಣ ಸಂಧ್ಯಾರಾಣಿಯವರ ಬರವಣಿಗೆಯಲ್ಲಿ ತಾನೇ ತಾನಾಗಿದೆ. ಒಂದು ಬೆಚ್ಚನೆಯ ಸ್ಷರ್ಶದ ಕನವರಿಕೆಯಲ್ಲಿ, ಕಂಬನಿ ಮುಖೇನವಾದ ಬಿಡುಗಡೆಯಲ್ಲಿ, ಬೆಳದಿಂಗಳಿಳಿದ ಕಣ್ಣುಗಳಲ್ಲಿ, ಅಲ್ಲೆಲ್ಲ ಅಲೆಯಂತೆ ವಿಜೃಂಭಿಸುವ ಹಾಡುಗಳಲ್ಲಿ, ಕೇಳಿಸಿಯೂ ಕೇಳಿಸದಂತಿರುವ ವಿಷಾದಗಳಲ್ಲಿ ಅವರ ಬರವಣಿಗೆ ನಡೆಯುತ್ತದೆ. ಅಲ್ಲಿ ಈ ಜಗತ್ತಿನ ಎಲ್ಲರೂ ಎಲ್ಲವೂ ಪಾತ್ರವೊ ಸಾಕ್ಷಿಯೊ ಆಗಿ ಜೊತೆಯಾಗುವುದಿದೆಯಲ್ಲ, ಕಥನದ ವಿಸ್ತಾರವೊಂದು ಹಾಜರಾಗಿಬಿಡುತ್ತದೆ. “ಯಾಕೆ ಕಾಡುತಿದೆ ಸುಮ್ಮನೆ ನನ್ನನು, ಯಾವುದು ಈ ರಾಗ? ಒಂದೇ ಸಮನೆ ಹಾಯುತಲಿದೆ ಅರಿವಿಗೆ ಗುರುತೇ ತಪ್ಪಿದಾಗ…”

‍ಲೇಖಕರು admin

November 5, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. guru

    ಚೆನ್ನಾಗಿ ಬರ್ದಿದ್ದೀರ.. ನಿಮ್ಮ ಬರಹ ಓದಿದಾಗ ನನಗಾದ ಅನುಭವಗಳೇ…ಭಾವಪಯಣ

    ಪ್ರತಿಕ್ರಿಯೆ
  2. Kumar Vantamure

    ಯಾಕೆ ಕಾಡುತಿದೆ ಸುಮ್ಮನೆ ನನ್ನನು, ಎರಡೆರಡು ಸಲ ಓದಿದರೂ ಮತ್ತೆ ಮತ್ತೆ ಓದುವ ಆಕರ್ಷಣೆ ನಿಮ್ಮ ಬರವಣಿಗೆಯಲ್ಲಿದೆ. ಬಾಲ್ಯ, ಯೌವ್ವನದಿಂದ ವ್ರದ್ದಾಪ್ಯ ದ ವರೆಗಿನ ಪ್ರಸಂಗ ಗೋಳನ್ನು ಜೀವನಕ್ಕೆ ತುಂಬಾ ಹತ್ತಿರವಾಗಿ ಅದರಲ್ಲೆ ಕಳೆದುಹೋಗುವ ಹಾಗೆ ವರ್ಣಿಸಿದ್ದಿರಾ.ಅನಂತ ಧನ್ಯವಾದಗಳು ಮೆಡಮ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: