ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂದೀಪ್ ಈಶಾನ್ಯ ಕಥೆ: ವಿಶ್ವನಾಥ ಸಿಕ್ಕಿದ್ದ

ಸಂದೀಪ್ ಈಶಾನ್ಯ

“ವಿಶ್ವನಾಥ ಸಿಕ್ಕಿದ್ದನಂತಲ್ಲೇ, ನನ್ನ ಹೆಂಡತಿ ಹೇಗಿದ್ದಾಳೆ? ಈಗ ಯಾವ ಓಣಿಯಲ್ಲಿದ್ದಾಳೆ? ವಿಳಾಸ ಕೊಟ್ಟರೆ ನಾಳೆಯೇ ಮನೆಗೆ ಬರುತ್ತೇನೆ, ನಡೆದುಹೋಗಿರುವ ಎಲ್ಲವನ್ನೂ ಕ್ಷಮಿಸು ಎಂದು ಅವಳನ್ನು ಕೇಳಿಕೊಳ್ಳುತ್ತೇನೆ ಎನ್ನುತ್ತ ಬೀದಿಯಲ್ಲಿ ಮಗುವಿನಂತೆ ಬೇಡಿಕೊಳ್ಳುತ್ತಿದ್ದನಂತೆ ಪಾಪಾ” ಎಂದು ಶಾಂತಕ್ಕ ಹೇಳುತ್ತಿದ್ದಂತೆ ಅಂಜಲಿಯ ಲೋಕವೆ ನಿಧಾನವಾಗಿ ಬದಲಾಗತೊಡಗಿತು. ಹಿಂದೊಮ್ಮೆ ವಿಶ್ವನಾಥನನ್ನು ನೆನೆದು ಗಾಂಧಿಚೌಕದಲ್ಲಿ ಎಲ್ಲರೂ ನೋಡುತ್ತಿರುವಾಗಲೇ ಬೋರೆಂದು ಕಣ್ಣೀರಾಗಿದ್ದು ನೆನಪಾಗಿ ಅಂಜಲಿ ಮಾತಿಲ್ಲದವಳಾದಳು. ಅದುವರೆಗೂ ಕಳಚಿಕೊಳ್ಳಲು ಮಾತ್ರವೇ ಯತ್ನಿಸುತ್ತಿದ್ದ ತಂತುವೊಂದು ಕ್ರಮೇಣವಾಗಿ ಬೆಸೆದುಕೊಳ್ಳಲು ಪ್ರಯತ್ನಿಸುತ್ತಿರುವಂತೆ ಭಾಸವಾಯಿತು.

ಶಾಂತಕ್ಕನ ಮಾತುಗಳಿಂದ ಅವಕ್ಕಾದರೂ ತೋರಿಸಿಕೊಳ್ಳಲು ಸಾಧ್ಯವಾಗದೆ ಒಳಗಿನ ಕೋಲಾಹಲವನ್ನು ಅದುಮಿಟ್ಟುಕೊಂಡ ಅಂಜಲಿ ಸಹಜವಾಗಿರಲು ಯತ್ನಿಸಿದಳು. ಸಾಧ್ಯವಾಗಲಿಲ್ಲ. ಹತ್ತು ವರ್ಷಗಳ ಹಿಂದಿನ ಅದೊಂದು ರಾತ್ರಿ ಯಾರಿಗೂ ಹೇಳದೆ ಮನೆಯಿಂದ ಎದ್ದುಹೋಗಿದ್ದ ವಿಶ್ವನಾಥ ಇದೀಗ ಇದ್ದಕ್ಕಿದ್ದಂತೆ ಬೀದಿಯ ನಡುವಿನಲ್ಲಿ ಅಲವತ್ತುಕೊಳ್ಳುತ್ತ ಪತ್ತೆಯಾಗಿದ್ದನ್ನು ಕೇಳಿ ದಿಗ್ಬ್ರಾಂತಿಗೊಂಡಳು. ವಿಶ್ವನಾಥ ಎದುರಾಗಿದ್ದು, ಬೇಡಿಕೊಂಡಿದ್ದು, ಬೀದಿಯ ಜನರು ನೋಡುತ್ತಿರುವಾಗಲೇ ಜೋರಾಗಿ ಗೋಳಾಡಿದ್ದು ಎಲ್ಲವನ್ನು ಶಾಂತಕ್ಕ ಒಂದೊಂದೇ ಸಾಲುಗಳಲ್ಲಿ ವಿವರಿಸುತ್ತಿದ್ದಂತೆ ಸಂಕಟ ಉಲ್ಬಣಿಸಿ ಊರಿನ ಸಮೀಪದ ನದಿಯೊಂದು ಮೊದಲ ಮಳೆಗೆ ತುಂಬಿಕೊಳ್ಳುವಂತೆ ಅಂಜಲಿಯ ಕಣ್ಣುಗಳು ಎಷ್ಟೋ ದಿನಗಳ ನಂತರ ನೋವಿನಿಂದ ತುಂಬಿಕೊಳ್ಳತೊಡಗಿದವು.

ಶಾಂತಕ್ಕ ಮಾತಿನ ನಡುವಿನಲ್ಲಿ “ಪಾಪಾ” ಎನ್ನುವ ಅದೊಂದು ವಿಶೇಷಣ ಬಳಸಿದ್ದು ಅಂಜಲಿಗೆ ಉದ್ದೇಶಪೂರ್ವಕ ಎನಿಸಲಿಲ್ಲ. ಆದರೆ ಅದೊಂದು ಮಾತಿನಲ್ಲೇ ಶಾಂತಕ್ಕ ಹಾಗೂ ವಿಶ್ವನಾಥನ ನಡುವೆ ಸಹಾನೂಭೂತಿಯ ತಂತಿಯೊಂದು ನಿರ್ವಾಣ ಸ್ಥಿತಿಯಲ್ಲಿ ಬಿಗಿದುಕೊಂಡಿದೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಶಾಂತಕ್ಕನ ಕೀರಲು ದನಿಯಲ್ಲಿ “ವಿಶ್ವನಾಥನನ್ನು ನಾನು ಅದಾಗಲೇ ಕ್ಷಮಿಸಿ ಆಗಿದೆ, ಇನ್ನು ಕ್ಷಮಿಸಬೇಕಾದವಳು ನೀನು ಮಾತ್ರ” ಎನ್ನುವ ಮೊಹರು ನೇರವಾಗಿ ಕಾಣದಿದ್ದರೂ ಮಂಪರಿನಲ್ಲಿ ಪ್ರಕಟವಾಗುತ್ತಿತ್ತು.

ಅಂಜಲಿ ಪ್ರತಿಕ್ರಿಯಿಸಲಿಲ್ಲ. ತುಟಿಗಳನ್ನು ಅದುರಿಸದೆ ಯಾವುದೋ ಅಜ್ಞಾತ ಗುಂಗಿಗೆ ಮೊರೆ ಹೋದವಳಂತೆ ನಿಂತುಬಿಟ್ಟಳು. ಸುತ್ತಲೂ ಶೂನ್ಯತೆ ಆವರಿಸಿ ಮಾತುಗಳಿಗೆ ಹುಡುಕಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಶಾಂತಕ್ಕ, ಹೆಜ್ಜೆಗಳನ್ನು ತಿರುಗಿಸಿ ಮನೆಯ ಕಡೆಗೆ ಹೊರಡಬೇಕು ಎನ್ನುವಷ್ಟರಲ್ಲಿ, ಅವರಿಗೆ ನಮ್ಮ ಓಣಿಯ ವಿಳಾಸ ಸಿಕ್ಕಿತಾ? ಎಂದಳು ಅಂಜಲಿ ಮಂದ್ರದಲ್ಲಿ. ಜೋರುಮಳೆಯ ನಂತರ ತಿಳಿಯಾಗುತ್ತಿರುವ ಆಕಾಶದಂತ ಅಂಜಲಿಯ ಅದೊಂದು ದನಿಯಿಂದ ಶಾಂತಕ್ಕನಿಗೂ ಶಾಂತವಾಯಿತು. ವಿಶ್ವನಾಥ ನಾಳೆ ಬರಬಹುದು. ತುಂಬಾ ಬದಲಾಗಿದ್ದಾನಂತೆ, ಹಳೆಯದನ್ನ ಕೆದಕಬೇಡ ಎಂದು ಸಲಹೆಯೊಂದನ್ನ ಅಂಜಲಿಯ ಹೆಗಲಿಗಿಟ್ಟು ಶಾಂತಕ್ಕ ಮೆಟ್ಟಿಲುಗಳನ್ನು ಇಳಿದುಹೋದಳು.

ವಿಶ್ವನಾಥ ಸಿಕ್ಕಿದ್ದ ಎನ್ನುವ ಮಾತನ್ನು ಜೀರ್ಣಿಸಿಕೊಳ್ಳಲಾಗದೆ ಕಂಪಿಸುತ್ತಿದ್ದ ಅಂಜಲಿಗೆ, ನಾಳೆ ವಿಶ್ವನಾಥ ಬರಬಹುದು ಎನ್ನುವ ಒಕ್ಕಣಿಕೆ ಮತ್ತಷ್ಟು ಜರ್ಜರಿತಗೊಳಿಸಿತು. ಅವ್ಯಕ್ತವಾದ ಭಯ ಆವರಿಸಿ ವಿಚಲಿತಗೊಂಡಳು. ಹತ್ತು ವರ್ಷಗಳು! ವಿಶ್ವನಾಥ ಇಷ್ಟು ವರ್ಷಗಳು ಎಲ್ಲಿದ್ದ? ಮೊಲೆಕಚ್ಚಿಕೊಂಡಿದ್ದ ಐದುತಿಂಗಳ ಮಗು, ಎಲ್ಲಾ ಲೋಪಗಳನ್ನು ಕ್ಷಮಿಸಿ ಅಷ್ಟು ಪ್ರೀತಿಸಿದ ಹೆಂಡತಿ, ಕಿರಾಣಿಯಂಗಡಿ ವಿಸ್ತಿರ್ಣದ ಬಾಡಿಗೆಮನೆ, ಮಾಡಿಕೊಂಡಿದ್ದ ಸಣ್ಣಸಾಲಗಳು, ಎಲ್ಲವನ್ನು ತೊರೆದು ಹೋಗಲೆಬೇಕು ಎನ್ನುವ ಯಾವ ತುರ್ತು ಆ ರಾತ್ರಿ ಅವನನ್ನು ಹಿಂಬಾಲಿಸಿತ್ತು. ಅಂಜಲಿಗೆ ಮೇಲಿಂದ ಮೇಲೆ ಪ್ರಶ್ನೆಯ ಮೊನೆಗಳು ತಿವಿಯತೊಡಗಿದವು.

ಹತ್ತು ವರ್ಷಗಳ ನಂತರ ವಿಶ್ವನಾಥನ ಎದುರು ನಿಲ್ಲುವುದು ಅಂಜಲಿಗೆ ಒಲ್ಲದ ಸಾಹಸವಾಗಿತ್ತು. ರಾತ್ರೋ ರಾತ್ರಿ ಎದ್ದುಹೋಗಿದ್ದವನು ಕ್ರಮಿಸಿದಷ್ಟು ದೂರವೇ ಇರಲಿ ಎಂದು ನಿರ್ಧರಿಸಿಕೊಂಡಳು. ಮರುಕ್ಷಣವೇ,
ಬೀದಿಯಲ್ಲಿ ಎಲ್ಲರೂ ನೋಡುತ್ತಿರುವಾಗಲೇ ಗೋಳಾಡುತ್ತಿದ್ದನಂತೆ, ಪಾಪಾ ಎನ್ನುವ ಶಾಂತಕ್ಕ ಹೇಳಿದ ಅದೊಂದು ಮಾತು ನೆನಪಾಗಿ ನಿರ್ಧಾರದ ಸಡಿಲವಾಗಿತ್ತು.

ಹಳೆಯ ದಿನಗಳ ನೆನಪುಗಳು ಉಮ್ಮಳಿಸಿಬಂದು ನದಿಯ ದಡದ ಪಚ್ಚೆಕಲ್ಲಿನಂತ ನುಣುಪಾದ ಅವಳ ಎರಡೂ ಕೆನ್ನೆಗಳು ಉಪ್ಪು ನೀರಿನಿಂದ ಒದ್ದೆಗೊಳಿಸಿದವು. ಸವೆದುಹೋಗಿದ್ದ ತನ್ನ ಸೆರಗಿನಿಂದ ಕಣ್ಣುಗಳನ್ನು ಒರೆಸಿಕೊಳ್ಳುತ್ತ ಬಚ್ಚಲಿಗೆ ಬಂದ ಅಂಜಲಿ, ಪಾತ್ರೆಗಳಿಗೆ ನೀರು ಚಿಮುಕಿಸಿ ತೊಳೆಯಲು ಕೂತಳು. ತೋಳುಗಳಿಗೆ ಸೋತ ಅನುಭವವಾಯಿತು. ಈಜಲು ಬಾರದವನ ಕೈಗಳು ನದಿಯಲ್ಲಿ ಮುಳುಗಿ ಸಾಯುವ ಕಡೆಕ್ಷಣದಲ್ಲಿ ಬತ್ತಿಹೋದ ಭಾವವೇ ತುಂಬಿಕೊಂಡಿತ್ತು.

ಓರೆಕೋರೆಯಾಗಿ ಚೆಲ್ಲಿಕೊಂಡಿದ್ದ ಕೂದಲುಗಳನ್ನು ಹಿಂದಕ್ಕೆ ಸರಿಸಿ ಓರಣಿಸಿಕೊಳ್ಳುವಾಗ ಬೆರಳಿಗಂಟಿದ ಪಾತ್ರೆಯ ಮಸಿಯ ಮಸುಪು ಮುಖಕ್ಕೆ ಮೆತ್ತಿಕೊಂಡಿತು. ದೂರದಿಂದ ನೋಡಿದರೆ ಅಂಜಲಿಯ ಮುಖಕ್ಕೆ ಮೆತ್ತಿಕೊಂಡಿದ್ದ ಮಸಿಯ ಮುಸುಪಿನ ಚುಕ್ಕೆಗಳು ಕಡಲಿನ ನಡುವೆ ಸಾಗುತ್ತಿರುವ ಎಳೆಯ ದೋಣಿಯಂತೆ ಹೊಳೆಯುತ್ತಿತ್ತು.

ಅಮ್ಮ. . .

ಅದರುವ ಎಳೆಯ ಸದ್ದು ಕೇಳಿಬಂತು. ಅಂಜಲಿ ಪಾತ್ರೆ ತೊಳೆಯುವುದನ್ನು ಅರ್ಧಕ್ಕೆ ನಿಲ್ಲಿಸಿ ಮನೆಯ ಹಜಾರಕ್ಕೆ ಬಂದಳು. ಒಂದು ನಿದ್ರೆಯ ನಂತರ ಅಂಜಲಿಯ ಹನ್ನೊಂದು ವರ್ಷದ ಮಗ ಸಂಜಯ ಕಣ್ಣುಜ್ಜಿಕೊಳ್ಳುತ್ತ ಹಾಸಿಗೆಯಿಂದ ಎದ್ದುಕೂತಿದ್ದ. ಯಾವುದೋ ಆವೇಶ ಅಂಜಲಿಯನ್ನು ನಿಯಂತ್ರಿಸಿದಂತಾಗಿ, ಸಂಜಯ ಅಪ್ಪ ಸಿಕ್ಕಿದ್ದರಂತೆ. ನಿನ್ನ ಅಪ್ಪ, ನಾಳೆ ಮನೆಗೆ ಅಪ್ಪ ಬರುತ್ತಾರಂತೆ ಕಣೋ ಎನ್ನುತ್ತ ಅಂಜಲಿ ಉತ್ಸಾಹದಿಂದ ಮಗುವನ್ನು ಮುದ್ದುಗರೆದಳು.

ಇನ್ನು ನಿದ್ರೆಯ ಮಂಪರಿನಲ್ಲಿದ್ದ ಸಂಜಯನಿಗೆ ಅಂಜಲಿಯ ಉತ್ಸಾಹದ ತುದಿ ಎಟುಕಲಿಲ್ಲ. ಅವಳನ್ನೇ ಕಣ್ಣುಮಿಟುಕಿಸದೆ ಬಯಲಿನಂತೆ ನೋಡುತ್ತಿದ್ದ. ಸಂಜಯ ಅಪ್ಪ ಕಣೋ, ನಿನ್ನಪ್ಪ ಬಂಗಾರಿ ಎಂದು ಹೇಳುತ್ತ ಅಂಜಲಿ ಮತ್ತೂ ಮುದ್ದುಗರೆಯಲು ಮುಂದಾದಳು. ಅದೃಶ್ಯ ಕೈಗಳು ಹೆಗಲಿಗೆ ಕೈ ಜೋಡಿಸಿ ತಡೆದ ಅನುಭವ. ಅಂಜಲಿ ಸ್ಥಬ್ದವಾದಳು. ಹತ್ತು ವರ್ಷಗಳ ಹಿಂದೆ ಒಡಲು ತುಂಬಿ ಬಸಿರಾಗಿದ್ದಾಗ ವಿಶ್ವನಾಥನನ್ನು ಎದುರು ಕೂರಿಸಿಕೊಂಡು ಹೇಳಿದ ಇಂತವೇ ಮಾತುಗಳು ಒಂದರ ಹಿಂದೆ ಮತ್ತೊಂದು ಎನ್ನುವಂತೆ ಸಾಲುಗಟ್ಟಿ ನೆನಪಾದವು.

ವಿಶ್ವ, ಇನ್ನು ಐದು ತಿಂಗಳಿಗೆ ನೀನು ಅಪ್ಪ ಕಣೋ, ನಮ್ಮ ಮನೆಗೆ ಒಂದು ಎಳೆಯ ದೇವರು ಬರುತ್ತದೆ. ನಿನ್ನ ಅಂಜಲಿ ಅಮ್ಮ ಆಗುತ್ತಾಳೆ. ಇನ್ನು ನಾನು ನೈಟ್‍ಶಿಫ್ಟ್ ಮಾಡುವಾಗಿಲ್ಲ ಗೊತ್ತಾ? ಎಂದು ಕಿರುನಗೆಯನ್ನು ಉದುರಿಸಿ ಎಲ್ಲವನ್ನೂ ಅದೊಮ್ಮೆ ಹೇಳಿಕೊಳ್ಳುವಾಗ ವಿಶ್ವನಾಥ ಥೇಟು ಮಗುವಿನಂತೆ ಮಿಕಿಮಿಕಿ ನೋಡಿದ್ದ. ಯಾವ ಮಾತುಗಳ ಭಾವರ್ಥಗಳು ಸ್ಪಷ್ಟವಾಗಿ ಒಳಗಿಳಿಯದೆ ಖಾಲಿಯಾಗಿ ಮಿಕಿಮಿಕಿ ನೋಡುತ್ತಿದ್ದ ಖಾಲಿ ಬಿಂಬಗಳೇ, ವಿಶ್ವನಾಥನ ಕುರಿತು ಹೇಳುವಾಗ ಸಂಜಯನ ಕಣ್ಣುಗಳಲ್ಲಿ ಪ್ರತಿಬಿಂಬವಾಗಿ ತೋರಿ ಅಂಜಲಿಗೆ ಅಳು ಒತ್ತರಿಸಿ ಬಂದಿತ್ತು.

ವಿಶ್ವನಾಥ ನೆನಪಾದ. ಅನಿರೀಕ್ಷಿತ ಜಾಮೀನು ಪಡೆದ ಖೈದಿಯೊಬ್ಬ ದೂರದಲ್ಲಿ ನಿಂತು ಅಣುಕಿಸುತ್ತಿರುವಂತೆ ಅವನ ನೂತನ ವೇಷದ ಚಿತ್ರಣಗಳು ಅಂಜಲಿಯ ಎದೆಯಲ್ಲಿ ಹಾದುಹೋಗಲು ಆರಂಭಿಸಿದವು. ಸಿಟ್ಟಾದಳು. ವಿಶ್ವನಾಥನನ್ನು ಎದುರುಗೊಳ್ಳುವ ಉತ್ಸಾಸ ಸ್ವಾಭಾವಿಕವಾಗಿ ಚಿಗುರೊಡೆದ ಟಿಸಿಲಿನ ಮೂಲದ ಯಾವುದು ಎನ್ನುವ ಪ್ರಶ್ನೆಗೆ ಉತ್ತರ ದೊರೆಯದೆ ಅಂಜಲಿ ವಿಷಣ್ಣಳಾದಳು.

ಅಂಜಲಿಯ ಗಂಡ ವಿಶ್ವನಾಥ ಎಂದರೆ ಅಪಹಾಸ್ಯದ ಸರಕು. ದೊಗಳೆ ಅಂಗಿ, ಕೈಗೆ ಒಂದೇ ಮುಳ್ಳಿನ ವಾಚು, ನಡಿಗೆ ಓರೆಯಾಗಿ ಒಂದೇ ಪಾಶ್ರ್ವಕ್ಕೆ ಸವೆದಿದ್ದ ಹವಾಯಿ ಚಪ್ಪಲಿ, ಮೂಲೆಗೊರಗಿದ ಮುದುಕಿಯಂತೆ ಅಲುಗಾಡದ ದಟ್ಟವಾದ ಗುಂಗುರು ಕೂದಲು. ವಿಶ್ವನಾಥನ ನಿತ್ಯದ ಈ ವೇಷವನ್ನ ಅಂಜಲಿಯ ಹೊರತಾಗಿ ಬೀದಿಯ ಮತ್ತೊಬ್ಬರು ಮೆಚ್ಚಿಕೊಳ್ಳುವುದು ಅಸಾಧ್ಯವಾಗಿತ್ತು. ಐದೂವರೆ ಸಾವಿರ ರೂಪಾಯಿ ಸಂಬಳ ನೀಡುತ್ತಿದ್ದ ನೃಪತುಂಗ ಪ್ರಿಂಟಿಂಗ್‍ಪ್ರಸ್, ಮಾಲೀಕ ಶೀನಣ್ಣ, ಪ್ರಸ್‍ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ವಿಕಾಸ ಹಾಗೂ ಹೆಂಡತಿ ಅಂಜಲಿಯ ಹೊರತಾಗಿ ವಿಶ್ವನಾಥನಿಗೆ ಅನ್ಯಲೋಕದ ಪರಿಚಯವಿರಲಿಲ್ಲ.

ಅಂಜಲಿ ಎಂದರೆ ಮಳೆಗಾಲದಲ್ಲೂ ಒದ್ದೆಯಾಗದ ಕೊಡೆ. ತಿಂಗಳ ಕಂತಿನಲ್ಲಿ ಖರೀದಿಸಿದ ಹೊಸ ಮೂರು ಲೀಟರ್ ಕುಕ್ಕರ್, ಹೊಸ ಮಿಕ್ಸರ್‍ಗೆ ಹಣ ಹೊಂದಿಸಲು ಬರುವ ಸಣ್ಣ ಸಂಬಳದಲ್ಲಿ ವಿಚಿತ್ರ ಲೆಕ್ಕಾಚಾರ ಮಾಡುತ್ತಾಳೆ. ನೈಟ್‍ಶಿಫ್ಟ್ ಕ್ಯಾಬ್‍ಡ್ರೈವರ್ ತನ್ನ ತುಂಬಿದ ಎದೆಯನ್ನು ನೋಡುತ್ತಾ ಕಾಮದ ಎಳೆಯನ್ನು ಕಣ್ಣಿನಲ್ಲಿ ನೂಲುವಾಗ ಸಂಕಟವಾಗಿ ಒಳಗೆ ಕರಗಿಸಿಕೊಳ್ಳುತ್ತಾಳೆ. ಆದರೆ ಬದುಕಿಗೆ ಜಗ್ಗುವುದಿಲ್ಲ. ಕಾಣದ ಕಲ್ಪನೆಯ ಬದುಕಿಗಿಂತ ಎದುರಿರುವ ದಿನಗಳು ಭೀಕರವಲ್ಲ ಎಂದು ಬೆನ್ನುತಟ್ಟಿಕೊಳ್ಳುತ್ತಾಳೆ.

ವಿಶ್ವನಾಥ ಮಗುವಿನಂತವನು. ಬಾಗಿಲಿನ ಎದುರು ಒಬ್ಬಳೇ ಕೂತು ಯೋಚಿಸುತ್ತಿರುವಾಗ ಆಕ್ರಮಿಸಿಕೊಳ್ಳುವ ಮಗುವಿನಂತೆ ಅವನು ಅಂಜಲಿಯ ತೊಡೆಗಳಿಗೆ ತಲೆಯನ್ನಿಟ್ಟು ಮಲಗಿಬಿಡುತ್ತಾನೆ. ಆ ಕ್ಷಣಗಳು ಅಂಜಲಿಗೆ ನೆಮ್ಮದಿ ಎನಿಸುತ್ತದೆ. ವಿಶ್ವಾನಾಥನ ಗುಂಗುರು ಕೂದಲಿನ ನಡುವೆ ಸರಾಗವಾಗಿ ಬೆರಳಾಡಿಸುತ್ತಾ ಮುದ್ದಿನಲ್ಲಿ ಮುಳುಗಿಬಿಡುತ್ತಾಳೆ. ವಿಶ್ವನಾಥ ಹೂವಿನಂತೆ ಅರಳಿಕೊಳ್ಳುತ್ತಾನೆ. ಆ ಕ್ಷಣದಲ್ಲಿ ಅಂಜಲಿಯೇ ರಸಹೀರುವ ಜೇನಾಗುತ್ತಾಳೆ.

****

ಆವತ್ತು ನೃಪತುಂಗ ಪ್ರಸ್ಸಿನಲ್ಲಿ ರಂಪವಾಗಿತ್ತು. ಪ್ರಸ್ಸಿನಲ್ಲಿ ಅಚ್ಚುಮೊಳೆ ಜೋಡಿಸುವ ಕೆಲಸ ಮಾಡುತ್ತಿದ್ದ ಹುಡುಗ ವಿಕಾಸ ಭಯದಿಂದ ನಡುಗುತ್ತಿದ್ದ. ಗಲಭೆಯ ನಂತರದ ಬೀದಿಯಲ್ಲಿ ಉಳಿಯುವ ಅಶಾಂತ ಮೌನ ಎದುರು ನಿಂತಿತ್ತು. ಪ್ರಸ್‍ನ ಕೆಲಸಗಳು ಸಂಪೂರ್ಣವಾಗಿ ಸ್ಥಗಿತವಾಗಿದ್ದರೂ ವಿಶ್ವನಾಥ ಮಾತ್ರ ತನ್ನದೆ ಲೋಕದಲ್ಲಿ ಮುಳುಗಿದ್ದ. ಇತ್ಯರ್ಥಗೊಳಿಸಬೇಕು ಎನಿಸಿತು. ಹೋಗಿ ಅಂಜಲಿಯನ್ನು ಕರೆದುಕೊಂಡು ಬಾರೋ ವಿಕಾಸ ಎಂದು ಹೇಳಿದ ಶೀನಣ್ಣ ನಿರ್ಧಾರವನ್ನ ಹೊರಹಾಕುವುದಕ್ಕೆ ಅಂಗಡಿ ಎದುರಿದ್ದ ಮುರುಕಲು ಬೆಂಚಿನ ಮೇಲೆ ಕಾಯುತ್ತ ಕುಳಿತುಕೊಂಡರು.

ಅಂಜಲಿ ಓಡಿ ಬಂದಳು. ಶೀನಣ್ಣ ಬೀಗಮುದ್ರೆಯಲ್ಲಿ ಬೆಂಚಿನ ಮೇಲೆ ಕೂತಿರುವುದಕ್ಕೂ, ವಿಶ್ವನಾಥ ದೊಗಳೆಯಂಗಿಯ ತೋಳುಗಳನ್ನು ಪದೇ ಪದೇ ಮಡಚಿಕೊಳ್ಳುತ್ತಾ ಕೆಲಸದಲ್ಲಿ ಮುಳುಗಿಹೋಗಲು ಯತ್ನಿಸುತ್ತಿರುವುದಕ್ಕೂ ನಡುವಿದ್ದ ಸಂಬಂಧ ಅಕ್ರಮವೆನಿಸಿ ಬೆಚ್ಚಿದಳು. ಶೀನಣ್ಣ ಎದ್ದು ನಿಂತರು. ಅಂಜಲಿ ಮಾತಿಗಿಳಿಯುವ ಮೊದಲೇ, ಇಂತಹ ಮುಠ್ಠಾಳನ ಜತೆ ನೀನು ಸಂಸಾರ ಮಾಡುವ ತಾಳ್ಮೆ ತೋರಬಹುದು ಅಂಜಲಿ, ಆದರೆ ಪ್ರಸ್ಸಿನಲ್ಲಿಟ್ಟುಕೊಂಡು ಕೆಲಸ ಸಾಹಸವನ್ನು ನಾನು ಮುಂದುವರೆವುದು ಸಾಧ್ಯವಿಲ್ಲ ಎಂದು ಶೀನಣ್ಣ ಕೈ ಮುಗಿದುಬಿಟ್ಟರು.

ಅಚ್ಚಿನ ಕೆಲಸದ ಸಮಯದಲ್ಲಿ ಮಿಷನ್‍ಗೆ ಬಳಸುತ್ತಿದ್ದ ಗ್ರೀಸು, ಲೆಕ್ಕ ಬರೆಯುವಾಗಿನ ಇಂಕಿನ ಗುರುತು, ಬಣ್ಣದ ಕಾಗದದ ಕಲೆಗಳಂತಹ ಅಸಂಖ್ಯಾತ ಕೊಳೆಗಳಿಂದ ತುಂಬಿಹೋಗಿದ್ದ ಅಂಗಿಯ ಜೇಬಿನಿಂದ ಐದು ಸಾವಿರದಷ್ಟು ಹಣವನ್ನು ತೆಗೆದು ಅಂಜಲಿಯ ಎದುರಿಟ್ಟರು. ತಿಂಗಳು ತುಂಬುವ ಮೊದಲೇ ನೀಡಿದ್ದ ವಿಶ್ವನಾಥನ ಸಂಬಳವದು.

ಅಂಜಲಿಗೆ ಅರ್ಥವಾಗಿತ್ತು. ರಂಪದ ತದ್ರೂಪವನ್ನು ಅಚ್ಚಿನ ಕೆಲಸದ ಹುಡುಗ ವಿಕಾಸ ಅದಾಗಲೇ ಅಂಜಲಿಗೆ ದಾರಿಯಲ್ಲಿ ವಿವವರಿಸಿದ್ದ. ಹಿನಕಲ್‍ನ ಬಾವಿಮನೆಯ ದಾಸಪ್ಪ ಮಗಳ ಮದುವೆಗೆಂದು ಶೀನಣ್ಣನ ನೃಪತುಂಗಾ ಪ್ರಸ್ಸಿನಲ್ಲಿ ಲಗ್ನಪತ್ರಿಕೆ ಪ್ರಿಂಟಿಗೆ ಕೊಟ್ಟಿದ್ದರು. ಲಗ್ನಪತ್ರಿಕೆಯಲ್ಲಿ ನಮೂದಾಗಬೇಕಾದ ಕುಲದೇವರು, ಹಿರಿಯರು, ವಧುವರನÀ ಹೆಸರು, ಕಲ್ಯಾಣ ಮಂಟಪ, ಮೂಹೂರ್ತ ಎಲ್ಲವನ್ನೂ ಬಿಳಿಯ ಹಾಳೆಯೊಂದರಲ್ಲಿ ಬರೆದು ಡ್ರಾಫ್ಟ್ ಕೊಟ್ಟಿದ್ದರು. ಅದಕ್ಕಾಗಿ ಸೀಮಿತ ಹೂವಿನಪಕಳೆಗಳ ಚಿತ್ತಾರದೊಂದಿಗೆ ಮೂಲೆಯಲ್ಲಿ ವಿರಮಿಸಿದ್ದ ಗಣೇಶನ ಚಿತ್ರವಿದ್ದ ಲಗ್ನಪತ್ರಿಕೆಯ ಸ್ಯಾಂಪಲ್‍ವೊಂದನ್ನು ಆಯ್ಕೆಮಾಡಿದ್ದರು. ಸಂಜೆಯ ಹೊತ್ತಿಗೆ ಹೆಂಡತಿಯೊಂದಿಗೆ ಮಾತನಾಡಿ ಆಯ್ಕೆಮಾಡಿದ್ದ ಲಗ್ನಪತ್ರಿಕೆಯ ನಮೂನೆಯನ್ನೇ ಒಪ್ಪಿಕೊಂಡಿದ್ದರು.

ಅದೇ ದಿನ ಪ್ರೆಸ್‍ಗೆ ನರಸಿಂಹ ಬಂದಿದ್ದ. ಮಳೆಬಿದ್ದ ಮಾರನೇ ದಿನವೂ ನೆಲ ಹಸಿಯಾಗಿರುವಂತೆ ಶೀನಣ್ಣನ ಎದುರು ಹಸಿಕಣ್ಣುಗಳಿಂದ ಗೋಳಾಡಿದ್ದ. ಒಂದೇ ವಾರದ ಹಿಂದೆ ನರಸಿಂಹನ ಮಗ ರಾವು ಬಡಿದು ತೀರಿಹೋಗಿದ್ದ. ಈಗ ಮಗನ ಶ್ರಾದ್ಧದ ದಿನದ ಉತ್ತರಕ್ರಿಯಾಧಿ ಕಾಗದವನ್ನು ಪ್ರಿಂಟಿಗೆ ಕೊಡಬೇಕಿತ್ತು. ಕಾರ್ಡುಗಳನ್ನು ಪ್ರಿಂಟು ಮಾಡಿಸಲು ಶಕ್ತನಾಗಿರದ ನರಸಿಂಹ, ಶೀನಣ್ಣನ ಎದುರು ಸಾಲದ ರೂಪದಲ್ಲಿ ಕಾರ್ಡುಗಳನ್ನು ಅಚ್ಚುಮಾಡುವಂತೆ ಬೇಡಿಕೊಂಡಿದ್ದ.

ನರಸಿಂಹ ಮತ್ತು ಶೀನಣ್ಣ ಒಟ್ಟಿಗೆ ಓದಿದವರು. ಬಹುಕಾಲದ ಗೆಳೆಯನಾಗಿದ್ದ ಕಾರಣ ನರಸಿಂಹನ ಬದುಕು ಶೀನಣ್ಣನ ಪ್ರಜ್ಞೆಗೆ ಹತ್ತಿರವಾಗಿತ್ತು. ಸಣ್ಣಕಾಗದದ ಚೂರಿನಲ್ಲಿ ವಿವವರಗಳನ್ನು ಬರೆದು ಶೀನಣ್ಣ ಡ್ರಾಫ್ಟ್ ಮಾಡಿದ್ದರು. ಹಣ ಬೇಡವೆಂದು, ಕಾರ್ಡುಗಳನ್ನು ಪ್ರಿಂಟ್ ಮಾಡಿಕೊಡುವುದಾಗಿ ನರಸಿಂಹನ ಬೆನ್ನನ್ನು ಮೃದುವಾಗಿ ತಟ್ಟಿಕಳಿಸಿದ್ದರು. ಶೀನಣ್ಣನ ಆ ಸ್ಪರ್ಶದಲ್ಲಿ ಆತ್ಮೀಯತೆಯ ಗೆರೆಯೊಂದು ಮೂಡಿತ್ತು.
ಪ್ರಿಂಟಿಗೆ ಮೊದಲು ಅಚ್ಚುಮೊಳೆಗಳನ್ನು ಆವತ್ತು ಶೀನಣ್ಣನೇ ಜೋಡಿಸಿದರು. ಬಾವಿಮನೆಯ ದಾಸಪ್ಪನ ಮಗಳ ಲಗ್ನಪತ್ರಿಕೆಯನ್ನು ಮುದ್ರಿಸಿದ ನಂತರ ನರಸಿಂಹನ ಮಗನ ಉತ್ತರಕ್ರಿಯಾಧಿ ಕಾರ್ಡುಗಳ ಕೆಲಸವನ್ನ ಕೈಗೆತ್ತಿಕೊಳ್ಳುವಂತೆ ವಿಶ್ವನಾಥ ಮತ್ತು ವಿಕಾಸನಿಗೆ ಹೇಳಿ, ಕೆಲಸವಿದೆಯಂದು ಮೈಸೂರಿಗೆ ಹೊರಟ್ಟಿದ್ದರು.

ಬೆಳಕು ಹರಿಯುವುದರೊಳಗೆ ವಿಶ್ವಾನಾಥನ ದೆಸೆಯಿಂದ ಸಂಪೂರ್ಣವಾಗಿ ಚಿತ್ರಣವೇ ಬದಲಾಗಿಹೋಗಿತ್ತು. ಅಚ್ಚಿನಮೊಳೆಗಳು ಮುದ್ರಿಸಬೇಕಾಗಿದ್ದ ಕಾರ್ಡುಗಳ ನಮೂನೆಗಳು ಅದಲುಬದಲಾಗಿದ್ದವು. ನರಸಿಂಹನ ಮಗನ ಉತ್ತರಕ್ರಿಯಾಧಿಯ ಕಾರ್ಡಿನ ವಿವರÀಗಳು ಬಾವಿಮನೆ ದಾಸಪ್ಪನವರ ಮಗಳ ಲಗ್ನಪತ್ರಿಕೆಯಲ್ಲಿ ಮುದ್ರಣವಾಗಿ, ಲಗ್ನಪತ್ರಿಕೆಯ ವಿವರಗಳನ್ನು ಯಾರದೋ ಗೃಹಪ್ರವೇಶ ಆಹ್ವಾನಪತ್ರಿಕೆಯಲ್ಲಿ ಕಾಣಿಸಿಕೊಳ್ಳುವಂತೆ, ನರಸಿಂಹನ ಮಗನ ಉತ್ತರಕ್ರಿಯಾಧಿ ಆಹ್ವಾನ ಪತ್ರಿಕೆಯಲ್ಲಿ ಉಳಿದ ವಿವವರಗಳು
ಹಂಚಿಹೋಗಿ ಅಪಾರ್ಥದ ಹಗರಣವೇ ನಡೆದುಹೋಗಿತ್ತು. ವಿಶ್ವನಾಥ ಕಾರ್ಡುಗಳ ಮುದ್ರಿಸುವಾಗ ಅಸ್ತವ್ಯಸ್ತಗೊಳಿಸಿ ಶೀನಣ್ಣನನ್ನು ಪಿಕಲಾಟಕ್ಕೆ ತಗುಲಿಹಾಕಿದ್ದ.

ಈ ಅಚಾತುರ್ಯವನ್ನ ಕೇಳಿದ ಬಾವಿಮನೆ ದಾಸಪ್ಪ ಕೆಂಡವಾಗಿ ಅಂಗಡಿಯ ಎದುರು ಕುಣಿದುಬಿಟ್ಟರು. ಹಲ್ಕಟ್ ಕೆಲಸ ಮಾಡುವುದಕ್ಕೆ ನೀವೇ ಲಾಯಕ್ಕು ಬಿಡೋ ಎಂದು ಶೀನಣ್ಣನನ್ನು ಶಿವರಾಮಪೇಟೆಯ ಅಂಗಡಿಯ ಎದುರು ಜರಿದುಬಿಟ್ಟಿದ್ದರು. ಲಗ್ನಪತ್ರಿಕೆ ಪ್ರಿಂಟಿಂಗ್ ಪ್ರಸ್ಸು, ಶೀನಣ್ಣನ ಮನೆಯ ಅವಿಭಾಜ್ಯ ಅಂಗವಾಗಿತ್ತು.  ಅರವತ್ತು ವರ್ಷಗಳಿಂದ ಮೈಸೂರಿನ ಶಿವರಾಮಪೇಟೆಯಲ್ಲಿರುವ ಶೀನಣ್ಣನ ಮನೆತನದ ಪ್ರಿಂಟಿಗ್ ಪ್ರಸ್ಸು ಒಮ್ಮೆಯೂ ಈ ಬಗೆಯ ಪ್ರಮಾದಕ್ಕೆ ಗುರಿಯಾಗಿರಲಿಲ್ಲ.

ಶೀನಣ್ಣ ಅವಮಾನದಿಂದ ತತ್ತರಿಸುತ್ತಿರುವಾಗ ನರಸಿಂಹ ಅಂಗಡಿಯ ಎದುರು ನಿಶ್ಚಲನಾಗಿ ಏನನ್ನೋ ಧ್ಯಾನಿಸುತ್ತಿದ್ದ. ಮದುವೆಗೂ ಮೊದಲೇ ತೀರಿಹೋಗಿದ್ದ ಮಗನ ಭೂತವೇ ತನ್ನ ಮದುವೆಯ ಆಸೆಯನ್ನು ಈ ರೀತಿಯಲ್ಲಿ ಈಡೇರಿಸಿಕೊಂಡಿದೆ ಎಂದುಕೊಂಡ. ತನಗೆ ಹೊಳೆಯುತ್ತಿರುವುದೇ ಸರಿಯಾಗಿ ತೋರಿತ್ತು ನರಸಿಂಹನಿಗೆ. ಅದನ್ನೇ ಹೆಂಡತಿಯೊಂದಿಗೆ ಹಂಚಿಕೊಳ್ಳಲು ಕೇರಿಗೆ ಓಡಿದ.

ಶೀನಣ್ಣ ಎಲ್ಲವನ್ನು ಹೇಳಿ ಮುಗಿಸಿದ್ದರು. ಅಂಜಲಿ ಪ್ರಸ್ಸಿನೊಳಗೆ ಮುಳುಗಿದ್ದ ವಿಶ್ವನಾಥನ ಮುಂಗೈ ಹಿಡಿದು ಎಳೆದು ಹೊರಗೆ ತಂದಳು. ಅಂಜಲಿಯ ಕ್ರಿಯೆಗೆ ತಬ್ಬಲಿಯಂತ ವಿಶ್ವನಾಥನಲ್ಲಿ ಪ್ರತಿರೋಧವಿರಲಿಲ್ಲ. ವಿಶ್ವನಾಥ ಅಂಗಡಿಯಿಂದ ಕಡೆಯ ಬಾರಿ ಎನ್ನುವಂತೆ ಹೊರಗೆ ಬಂದಿದ್ದನ್ನು ನೋಡಿದ ಶೀನಣ್ಣನಿಗೆ ಬಳ್ಳಿಯೊಂದು ತುಂಡಾದ ಅನುಭವವಾಗಿ ಸಂಕಟವಾದರೂ ತೋರಿಸಿಕೊಳ್ಳಲಿಲ್ಲ. ವಿಶ್ವನಾಥ ರೂಪಿಸುತ್ತಿದ್ದ ಅಕ್ಷರರಂಪಗಳು ತಂದೊಡ್ಡುತ್ತಿದ್ದ ಅಪಾಯಗಳು ನೆನಪಾಗಿ ನಿರ್ಧಾರ ಸಡಿಲವಾಗದಂತೆ ಬಿಗಿಯಾಗಿಯಾದರು.

ಇಬ್ಬರು ಓಣಿಗೆ ಬಂದರು. ವಿಶ್ವನಾಥನನ್ನು ದೂರುವುದಕ್ಕೆ ಅಂಜಲಿಗೆ ಕಾರಣಗಳಿರಿಲಿಲ್ಲ. ಶೀನಣ್ಣ ಇವನ ದಡ್ಡತನವನ್ನು ಇಷ್ಟು ವರ್ಷಗಳು ಸಹಿಸಿಕೊಂಡಿದ್ದೇ ಅಪೂರ್ವ ಎನ್ನುವುದು ಅಂಜಲಿಗೂ ಗೊತ್ತಿತ್ತು.  ಏನೊಂದು ಅರ್ಥವಾಗದೆ, ಎಳೆಯ ಮಗುವಿನಂತೆ ಎವೆಯನ್ನೂ ಅಲುಗಾಡಿಸದೆ ವಿಶ್ವನಾಥನ ಅಸಹಾಯಕತೆಯ ಎದುರು ಅಂಜಲಿ ಬೋರೆಂದು ಅತ್ತುಬಿಟ್ಟಳು. ವಿಶ್ವನಾಥನಿಗೆ ಅವಳನ್ನು ಸಂತೈಸುವ ಮಾರ್ಗ ತೋರದೆ ಅಸಹಾಯಕವಾಗಿ ಅಂಗೈ ಜೋಡಿಸಿ ಅಂಜಲಿಯನ್ನು ಮೊದಲ ಬಾರಿಗೆ ತೊಡೆಯ ಮೇಲೆ ಮಲಗಿಸಿಕೊಂಡ. ಅಂಜಲಿ ಹಟತೊರೆದ ಪಟುವಿನಂತೆ ನಿದ್ರಿಸಿದಳು.

ಮರುದಿನದಿಂದ ಅಂಜಲಿ ಓವರ್‍ಟೈಮ್ ಹಣಕ್ಕಾಗಿ ಕೆಲಸ ಮಾಡುತ್ತಿದ್ದ ಗಾರ್ಮೆಂಟ್ಸ್‍ನಲ್ಲಿ ತಿಂಗಳಿಗೆ ಒಂದುವಾರ ನೈಟ್‍ಶಿಫ್ಟ್ ಹೊಂದಿಸಿಕೊಂಡಳು. ಅದೊಂದು ಕಪಟವಿಲ್ಲದ ಆತ್ಮ ಎನ್ನುವ ಪ್ರೀತಿಪೂರ್ವಕ ದನಿಯಿಂದ ಅಂಜಲಿಯ ಮದುವೆ ಮಾಡಿಸಿದ್ದ ಶಾಂತಕ್ಕನ ಕುಮ್ಮಕ್ಕಿನಿಂದಲೇ, ವಿಶ್ವನಾಥನಿಗೆ ಹಿನಕಲ್ಲಿನ ಕಾವೇರಿ ಗ್ರಾಮೀಣ ಬ್ಯಾಂಕ್‍ನ ಎಟಿಎಂನಲ್ಲಿ ಬೆಳಗಿನ ಪಾಳಿಯ ಸೆಕ್ಯೂರಿಟಿಗಾರ್ಡ್ ಕೆಲಸ ಹಿಡಿದಳು.

ರಾತ್ರಿಪಾಳಿಯಾದರೆ ವಿಶ್ವನಾಥ ನಿದ್ರೆಹೋಗಿ ಮತ್ತೊಂದು ರಾದ್ದಾಂತಕ್ಕೆ ಕಾರಣವಾಗಬಹುದು ಎನ್ನುವುದು ಅಂಜಲಿಯ ಕಾಳಜಿ. ಶಾಂತಕ್ಕನಿಗೂ ಅಂಜಲಿಯ ಮಾತುಗಳು ಒಪ್ಪಿಗೆಯಾಗಿದ್ದವು. ಶಾಂತಕ್ಕ, ದೂರದ ಸಂಬಂಧಿಯೊಬ್ಬರ ಸಹಾಯದಿಂದ ವಿಶ್ವನಾಥನ ಎಲ್ಲಾ ದೌರ್ಭಲ್ಯಗಳನ್ನು ವಿವವರಿಸಿ ಸೆಕ್ಯೂರಿಟಿಗಾರ್ಡ್ ಕೆಲಸಕ್ಕೆ ನೇಮಿಸಿದ್ದರು.

ಪರಿಸ್ಥಿತಿ ತಿಳಿಯಾಯಿತು ಎನ್ನುವಷ್ಟರಲ್ಲಿ ನಿಧಾನವಾಗಿ ಎಲ್ಲವೂ ಹದಗೆಡತೊಡಗಿತ್ತು. ಅಂಜಲಿ ನೈಟ್‍ಶಿಫ್ಟ್ ಹೊಂದಿಸಿಕೊಂಡಿದ್ದು ಸಾಕಷ್ಟು ಅವಾಂತರಗಳಿಗೆ ದಾರಿಯಾಗಿತ್ತು. ನೈಟ್‍ಶಿಫ್ಟ್ ಮುಗಿಸಿ ಬರುವಾಗ ತುಂಬಿದ ಎದೆಗಳನ್ನೇ ನೋಡುವ ಕ್ಯಾಬ್‍ಡ್ರೈವರ್‍ಗಳ ಕಣ್ಣುಗಳಿಂದ ತಪ್ಪಿಸಿಕೊಂಡು ಅಂಜಲಿ ಮನೆಗೆ ಬರುವಷ್ಟರಲ್ಲಿ ದಣಿದುಹೋಗಿರುತ್ತಿದ್ದಳು. ವಿಶ್ವನಾಥ ನೈಟ್‍ಶಿಫ್ಟ್‍ನಲ್ಲಿದ್ದ ಅಂಜಲಿಗಾಗಿ ಕಾಯುತ್ತ ಊಟ ಮಾಡದೆ ಎಚ್ಚರವಾಗಿದ್ದು, ಬೆಳಗಿನ ಜಾವದಲ್ಲಿ ಸಹಜವಾಗಿ ಕೂತಲ್ಲೆ ನಿದ್ರೆಗೆ ಜಾರಿಬಿಟ್ಟಿರುತ್ತಿದ್ದ.

ದಣಿದು ಬರುತ್ತಿದ್ದ ಅಂಜಲಿ, ನಿದ್ರೆಯ ಮಂಪರಿನಲ್ಲಿರುತ್ತಿದ್ದ ವಿಶ್ವನಾಥನಿಗೆ ಮುಖತೊಳೆಸಿ ನೀಲಿ ಶಾಹಿಯಂತಹ ಯೂನಿಫಾರಂ ತೊಡಿಸಿ ಕೆಲಸಕ್ಕೆ ಕಳುಹಿಸಬೇಕಾಗಿತ್ತು. ಎಟಿಎಂವರೆಗೂ ಠೀವಿಯಿಂದ ನಡೆದುಹೋಗುತ್ತಿದ್ದ ವಿಶ್ವನಾಥ ಬಿಸಿಲಿನಕೋಲುಗಳು ಮೈಚುಚ್ಚುತ್ತಿದ್ದಂತೆ ಎಟಿಎಂ ಎದುರಿನ ಕುರ್ಚಿಯಲ್ಲಿ ಕೂತು ತೊಟ್ಟಿಲೊಳಗಿನ ಮಗುವಿನಂತೆ ಬಾಕಿ ನಿದ್ರೆಯ ವಶವಾಗಿಬಿಡುತ್ತಿದ್ದ.

ವಿಶ್ವನಾಥ ಹಗಲಿನಲ್ಲೇ ನಿದ್ರೆ ಮಾಡುತ್ತಾನೆ ಎನ್ನುವ ದೂರುಗಳು ಹೆಚ್ಚಾದವು. ಸಲಹೆಗಳು ಪ್ರತಿಫಲಿಸಲಿಲ್ಲ. ಒಂದೇ ತಿಂಗಳಿನಲ್ಲಿ ವಿಶ್ವನಾಥನಿಗೆ ಸೆಕ್ಯೂರಿಟಿ ಕೆಲಸ ಕೈ ಬಿಟ್ಟಿತು. ನೈಟ್‍ಶಿಫ್ಟ್‍ನಲ್ಲಿದ್ದ ಅಂಜಲಿಗೆ ಯಾಕೋ ಅನನ್ಯ ಕೊರತೆಗಳು ಒಮ್ಮೆಲೆ ಪಲ್ಲವಿಸಿ ಕ್ಷುದ್ರವಾದಳು. ಸಕ್ಕರೆಯ ದೋಣಿಯೊಂದು ಉಪ್ಪುನೀರಿನಲ್ಲಿ ಮುಳುಗುತ್ತಿದೆ ಎಂದುಕೊಳ್ಳುತ್ತಿರುವಾಗಲೇ, ಅಂಜಲಿಯ ಒಡಲಿನಲ್ಲಿ ವಿಶ್ವನಾಥ ಸೃಜಿಸಿದ ಹೊಸ ಜೀವದ ಬರುವಿನ ಸೂಚನೆ ಸಮಾಧಾನಗೊಳಿಸಿತ್ತು.

ಅಂಜಲಿ ನೈಟ್‍ಶಿಫ್ಟ್‍ನಿಂದ ಮನೆಗೆ ಬಂದಳು. ವಿಶ್ವನಾಥ ಖಾಲಿಯಾಗಿ ಏನನ್ನೋ ಧ್ಯಾನಿಸುತ್ತಿದ್ದ. ವಿಶ್ವನಾಥನನ್ನು ಎದುರು ಕೂರಿಸಿಕೊಂಡಳು. ವಿಶ್ವ, ಇನ್ನು ಐದು ತಿಂಗಳಿಗೆ ನೀನು ಅಪ್ಪ ಕಣೋ, ನಮ್ಮ ಮನೆಗೆ ಎಳೆಯ ದೇವರೊಂದು ಬರುತ್ತದೆ. ನಾನು ಅಮ್ಮ ಕಣೋ, ನಾನು ನೈಟ್‍ಶಿಫ್ಟ್ ಮಾಡುವಾಗಿಲ್ಲ ಗೊತ್ತಾ? ಎಂದಳು ಕಿರುನಗೆಯನ್ನು ಬೆನ್ನಿಗೆ ನಿಲ್ಲಿಸಿಕೊಂಡು ಹೇಳುವಾಗ ವಿಶ್ವನಾಥನಿಗೆ ಏನೊಂದು ಅರ್ಥವಾಗದೆ ಥೇಟು ಎಳೆಯ ಮಗುವಿನಂತೆ ಅವಳನ್ನೇ ಮಿಕಿಮಿಕಿ ನೋಡಿದ. ಅಂಜಲಿ ಮತ್ತೂ ಮುದ್ದುಗರೆದಳು.

ನೈಟ್‍ಶಿಫ್ಟ್ ಕೆಲಸವನ್ನು ಬಿಟ್ಟು ಮನೆಯಲ್ಲಿ ಉಳಿದಳು ಎನ್ನುವ ಸುದ್ದಿಯಿಂದ ಗಾರ್ಮೆಂಟ್ಸ್‍ನ ಕ್ಯಾಬ್‍ಡ್ರೈವರ್ ಕೈ ಹಿಸುಕಿಕೊಂಡಿದ್ದು ಅಂಜಲಿಯ ಕಿವಿಗೆ ಬಿತ್ತು. ಧೃತಿಗೆಡಲಿಲ್ಲ. ವಿಶ್ವನಾಥ ಸಣ್ಣಪುಟ್ಟ ಕೆಲಸಗಳಿಂದ ಮನೆಯನ್ನು ನಡೆಸಿದ. ಅಂಜಲಿ ಭವಿಷ್ಯದ ಲೆಕ್ಕಚಾರಗಳಲ್ಲಿ ಮುಳುಗಿಹೋಗಿದ್ದಳು. ಶಾಂತಕ್ಕ ದಿನಕ್ಕೆ ಮೂರು ಬಾರಿ ಮನೆಗೆ ಬಂದು ಅಂಜಲಿಯ ಹಾರೈಕೆ ಮಾಡಿದಳು. ಐದು ತಿಂಗಳು ಸರಾಗವಾಗಿ ಸರಿದು ಅದೊಂದು ನಡುಮಧ್ಯಾಹ್ನ ಎಳೆಯ ಜೀವವೊಂದು ಅವರಿಬ್ಬರ ಕತ್ತಲಿನ ಮನೆಯೊಳಗೆ ದೀಪದ ಮೊನೆಯಂತೆ ಬೆಳಕು ಚೆಲ್ಲಿತ್ತು.

ಅಂಜಲಿಗೆ ಸಮಾಧಾನವಾಗಿತ್ತು. ವಿಶ್ವನಾಥ ಆಶ್ಚರ್ಯದಿಂದ ಮಗುವನ್ನು ಅದೇ ಮೊದಲು ಮನೆಗೆ ಬಂದ ಅಥಿತಿಯಂತೆ ಆಶ್ಚರ್ಯದಿಂದ ನೋಡಿದ್ದ. ಅಂಜಲಿಯೇ ಪರಿಚಯಸಿಸುವವಳಂತೆ ವಿಶ್ವನಾಥನ ಅಂಗೈ ಹಿಡಿದು ಮಗುವಿನ ಬೆರಳುಗಳನ್ನು ಮುಟ್ಟಿಸಿದಳು. ವಿಶ್ವನಾಥನಿಗೆ ಹಿತವೆನಿಸಿ ಮತ್ತೆ ಮತ್ತೆ ಮಗುವನ್ನು ಮುಟ್ಟುತ್ತ ಸಂಭ್ರಮಿಸಿದ. ಅವನು ಮಗುವಿನೊಂದಿಗೆ ಆಡುವುದನ್ನು ನೋಡುವಾಗೆಲ್ಲ, ವಿಶ್ವನಾಥನನ್ನು ಮದುವೆಯಾದ ಮರುಕ್ಷಣವೇ ನಾನು ತಾಯಿಯಾಗಿದ್ದೆ ಎನ್ನುವ ಧನ್ಯತೆಯ ಭಾವವೊಂದು ಅಂಜಲಿಗೆ ಜತೆಯಾಗುತ್ತಿತ್ತು.

ಮೋಡದ ಟೊಂಗೆಗಳಿಂದ ನಕ್ಷತ್ರದ ಹಳದಿ ಎಲೆಗಳು ಉದುರುತಿದ್ದವು. ಗಾರ್ಮೆಂಟ್ಸ್‍ನ ಸೆಲೆಕ್ಷನ್ ಸೆಕ್ಷನ್‍ಗೆ ವರ್ಗವಾಗಿದ್ದ ಅಂಜಲಿ ತಿಂಗಳುಗಳ ನಂತರ ಕೆಲಸಕ್ಕೆ ಹೊರಡಲು ಸಾವರಿಸಿಕೊಂಡಳು. ವಿಶ್ವನಾಥ, ಮಗು ಇಬ್ಬರು ಶಾಂತಕ್ಕನ ಜವಾಬ್ದಾರಿಯಾಗಿತ್ತು. ಅಂಜಲಿ ಹೊರಟ ಮೇಲೆ ವಿಶ್ವನಾಥ ಸುಮ್ಮನೇ ಕೂತಿರುತ್ತಿದ್ದ. ಅಳುಕಾದ ಶಾಂತಕ್ಕ, ಇನ್ನಾದರೂ ಒಂದು ಸಣ್ಣ ಕೆಲಸವನ್ನಾದರೂ ಹುಡುಕು ಮಾರಾಯ. ನೀನು ಈಗ ಅಪ್ಪ ಕಣೋ ಅದಾದರೂ ಗೊತ್ತಿದೆಯಾ? ಎಂದು ಕಕ್ಕುಲಾತಿಯ ದನಿಯಲ್ಲಿ ವಿಶ್ವನಾಥನಿಗೆ ರೇಗಿದಳು. ಎಲ್ಲಾ ಮಾತುಗಳನ್ನು ವಿಶ್ವನಾಥ ಗಂಭೀರವಾಗಿ ಕೇಳಿಸಿಕೊಂಡರೂ ಶಾಂತಕ್ಕನಿಗೆ ಅವನ ನೂತನ ಚರ್ಯೆಯ ಹಿಂದಿನ ಅರ್ಥಗಳು ಗೋಚರಿಸಿದೆ ಒಳಗೆಹೋದಳು.

ಆ ರಾತ್ರಿ ವಿಶ್ವನಾಥ ತುಟಿ ತೆರೆಯಲಿಲ್ಲ. ಅಂಜಲಿ ಮೊದಲಿನಂತೆ ಮುದ್ದುಗರೆದರೂ ಹಟಮಾರಿಯಂತೆ ನುಣುಚಿಕೊಂಡು ಮಲಗಿದ. ದಣಿವಾಗಿದ್ದರಿಂದ ಅಂಜಲಿ ಮುಂದುವರೆಯದೆ ಮಗುವಿಗೆ ಹಾಲುಣಿಸಿ ಮಲಗಿಬಿಟ್ಟಳು. ಬೆಳಗೆದ್ದು ನೋಡುವಷ್ಟರಲ್ಲಿ ಅವನಿದ್ದ ಚಾಪೆ ಬರಿದಾಗಿತ್ತು. ನಡುರಾತ್ರಿಯಲ್ಲಿ ವಿಶ್ವನಾಥ ಎದ್ದು ಹೊರಟುಹೋಗಿದ್ದ. ಶಾಂತಕ್ಕ, ಅಂಜಲಿ ಇಡೀ ದಿನ ಹುಡುಕಿದರು. ಸಂಜೆಯ ಹೊತ್ತಿಗೆ ತಡೆಯಲಾರದ ನೋವಿನಿಂದ ಅಂಜಲಿ ಗಾಂಧಿಚೌಕದಲ್ಲಿ ಎಲ್ಲರೂ ನೋಡುವಾಗಲೇ ಅತ್ತುಬಿಟ್ಟಳು. ರಾತ್ರಿಯಾದರೂ ವಿಶ್ವನಾಥನನ ಯಾವ ಸುಳಿವು ದೊರೆಯಲಿಲ್ಲ. ತೋಳಿನಲ್ಲಿದ್ದ ಮಗು ನಿದ್ರಿಸಿತ್ತು. ವಿಶ್ವನಾಥನನ್ನು ಎದುರು ಕೂರಿಸಿಕೊಂಡು ಹೇಳಿದ ಮಾತುಗಳು ನೆನಪಾಗಿ ಶಾಂತಕ್ಕ ಅಪ್ರತಿಭಳಾದಳು.

ಅಂಜಲಿ ಪೊಲೀಸ್ ದೂರು ನೀಡಿದರೆ ಹುಡುಕುತ್ತಾರೆ, ನೀನು ದಣಿದಿರುವುದು ಸಾಕು ಎಂದಳು ಶಾಂತಕ್ಕ ನಿರ್ಲಿಪ್ತವಾಗಿ. ಶಾಂತಕ್ಕನ ಮಾತುಗಳಿಗೆ ಅಂಜಲಿಯ ಮನಸ್ಸು ಅಂಗೀಕರಿಸಲಿಲ್ಲ. ಹುಡುಕುವುದು ಬೇಡ ಶಾಂತಕ್ಕ, ಮಗು ನೋಡುವುದಕ್ಕಾದರೂ ಅವನು ಬರಬಹುದು ಎಂದವಳು ಒಬ್ಬಳೇ ಬರಿಗಾಲಿನಲ್ಲಿ ಮನೆಗೆ ಬಂದಳು. ಶಾಂತಕ್ಕ ಪ್ರಾಯಶ್ಚಿತದ ಹಾದಿ ಎನ್ನುವಂತೆ ಪ್ರಿಂಟಿಂಗ್ ಪ್ರಸ್‍ಗೆ ಬಂದವಳು ವಿಶ್ವನಾಥನ ಕುರಿತು ಶೀನಣ್ಣನಿಗೆ ಎಲ್ಲವನ್ನೂ ಹೇಳಿದಳು.

ವಿಶ್ವನಾಥನ ಚಹರೆಗಳ ವಿವವರಗಳನ್ನು ಡ್ರಾಫ್ಟ್ ಮಾಡಿಸಿದವಳು, ಕಾಣೆಯಾಗಿದ್ದಾರೆ ಎನ್ನುವ ಕರಪತ್ರಗಳನ್ನು ಮುದ್ರಿಸಿಕೊಡುವಂತೆ ಕೇಳಿಕೊಂಡಳು. ಗಾಂಧಿಚೌಕ, ಮೈಸೂರಿನ ಮುಖ್ಯ ರಸ್ತೆಗಳು, ಬಸ್‍ಸ್ಟಾಪ್, ಬಡಾವಣೆಗಳ ಗೋಡೆಗಳ ಮೇಲೆ ಅಂಟಿಸಲು ಮುಂಗಡ ಕೊಟ್ಟಳು. ವಿಶ್ವನಾಥನ ಕೆಲಸದ ದಿನಗಳು ನೆನಪಾಗಿ ಶೀನಣ್ಣ ಬಾಕಿಹಣ ಬೇಡವೆಂದು ಶಾಂತಕ್ಕನಿಗೆ ಕೈ ಮುಗಿದ. ಹೊರಡುವಷ್ಟರಲ್ಲಿ, ವಿಶ್ವನಾಥ ಎಲ್ಲಿಹೋದ ಶಾಂತಕ್ಕ ಎಂದು ಪ್ರಸ್ಸಿನ ಹುಡುಗ ವಿಕಾಸ ಕೈ ಹಿಡಿದು ಬೇಸರದಿಂದ ಕೇಳಿದ.

****

ಈ ಎಲ್ಲವೂ ಕನಸಿನಂತೆ ನಡೆದು ಅದಾಗಲೇ ಹತ್ತು ವರ್ಷಗಳು ನಡೆದುಹೋಗಿವೆ. ಅಂಜಲಿ ತೋರವಾದ ಹೆಂಗಸಿನಂತೆ ರೂಪುಗೊಂಡಿದ್ದರೆ, ಶಾಂತಕ್ಕ ಸಕ್ಕರೆ ಖಾಯಿಲೆಗೆ ಒಳಗಾಗಿ ಬಿಳಿಚಿಕೊಂಡಿದ್ದಳು. ಐದೇ ತಿಂಗಳ ಹೆಸರಿಲ್ಲದ ಮಗು ಇದೀಗ ಹೆಸರಿನೊಂದಿಗೆ ಗುರುತಿಸಿಕೊಂಡಿತ್ತು.

ಕಳೆದ ರಾತ್ರಿ ಅಂಜಲಿಯನ್ನು ನಿದ್ರೆ ಎನ್ನುವುದು ಸೋಕಿರಲಿಲ್ಲ. ಹಾಸಿಗೆಯಲ್ಲಿರುವಾಗಲೇ ವಿಶ್ವನಾಥನನ್ನು ನೆನೆದು ಸದ್ದಾಗದಂತೆ ಒಳಗೇ ಬಿಕ್ಕುತ್ತಿದ್ದಳು. ವಿಶ್ವನಾಥ ಎದುರಾದರೆ ಮಾತು ಆರಂಭಿಸುವುದು ಹೇಗೆ ಎನ್ನುವುದನ್ನು ಮೇಲಿಂದ ಮೇಲೆ ಕೇಳಿಕೊಳ್ಳುತ್ತಿದ್ದಳು. ಉತ್ತರ ಹೊಳೆದಿರಲಿಲ್ಲ. ಹತ್ತು ವರ್ಷಗಳಲ್ಲಿ ರೆಕ್ಕೆ ಬಳಸಲಾರದ ಹಕ್ಕಿಯಂತೆ ವಿಶ್ವನಾಥ ಒಂಟಿಯಾಗಿ ಅದೆಷ್ಟು ಚಡಪಡಿಸಿರಬಹುದು ಎನ್ನುವುದನ್ನು ಊಹಿಸಿ ಮೌನವಾದಳು. ಒಂದೇ ರಾತ್ರಿಯೊಳಗೆ ಎಲ್ಲವನ್ನೂ ನಿರ್ಧರಿಸಿ ಸಾಮ್ರಾಜ್ಯ, ಹೆಂಡತಿ, ಮಗುವನ್ನು ತೊರೆದುಹೋದ ಕಪಿಲವಸ್ತುವಿನ ಸಿದ್ದಾರ್ಥನನ್ನು ವಿಶ್ವನಾಥ ಹೋಲುತ್ತಿದ್ದಾನೆ ಎಂದು ಗೋಚರಿಸಿ ಗಾಭರಿಯಾದಳು.

ವಿಶ್ವನಾಥ ಎದ್ದು ಹೋಗಿದ್ದು ಏಕೆ ಎನ್ನುವುದನ್ನು ಕೇಳದಿದ್ದರು, ತಿರುಗಿ ಬಂದಿದ್ದು ಏಕೆ ಎನ್ನುವುದನ್ನು ಕೇಳಬೇಕು ಎಂದುಕೊಳ್ಳುತ್ತಿರುವಾಗಲೇ ಬಾಗಿಲು ಬಡಿದ ಸದ್ದಾಯಿತು. ಅದೊಂದು ಅಪರಿಚತ ಸದ್ದು. ಅಂಜಲಿ ಒಂದಿಷ್ಟು ಕದಲಿಲ್ಲ. ಅಂಜಲಿಯ ಹತ್ತು ವರ್ಷದ ಮಗ ಸಂಜಯ ನಡೆದುಹೋಗಿ ಬಾಗಿಲು ತೆರೆದು ನೋಡಿದಾಗ ಚಚ್ಚೌಕ ಮುಖದ ಆಕೃತಿಯೊಂದು ಶಿಸ್ತಿನ ಉಡುಗೆಯಲ್ಲಿ ಹೊಸ್ತಿಲಿನ ಹೊರಗೆ ನಿಂತಿತ್ತು. ಅಂಜಲಿ ಒಳಗಿನಿಂದಲೇ ಇಣುಕಿ ನೋಡಿದಳು.

ವಿಶ್ವನಾಥ ಬಂದಿದ್ದ. ಬಾಗಿಲು ತೆರೆದ ಸಂಜಯ, ಅಂಜಲಿಯನ್ನು ಮಾತಿಗೆ ಅಣಿಗೊಳಿಸಿದವನಂತೆ ಸುಮ್ಮನೆ ಏನನ್ನೂ ಮಾತನಾಡದೆ ಪ್ರಬುದ್ಧನಂತೆ ಒಳಗೆ ನಡೆದುಹೋದ. ಅಂಜಲಿ ನಿಧಾನವಾಗಿ ಪರದೆ ಸರಿಸಿ ಹೊರಗೆ ಬಂದಳು. ನುಣುಪು ಗಡ್ಡ, ಹೊಳೆಯುತ್ತಿದ್ದ ಕಣ್ಣುಗಳು, ಎರಡು ಮುಳ್ಳುಗಳ ಸಹಾಯದಿಂದ ಟಿಕ್ ಟಿಕ್ ಸದ್ದು ಮಾಡುವ ವಾಚು, ಇಸ್ತ್ರಿಯಾಗಿದ್ದ ತುಂಬು ತೋಳಿನ ಅಂಗಿ, ಸಣ್ಣಗಾಳಿಗೂ ಹೊಯ್ದಾಡುವ ಸಾಫು ಕೂದಲುಗಳ ಸಹಾಯದಿಂದ ರೂಪಾಂತರಗೊಂಡಿದ್ದ ವಿಶ್ವನಾಥ ಬಂದಿದ್ದ. ವಿಶ್ವನಾಥನ ನಾವೀನ್ಯತೆ ಪದ್ಯದೊಳಗಿನ ರೂಪಕದಂತೆ ನೂರಾರು ಭಾವಾರ್ಥಗಳನ್ನು ಹೊಮ್ಮಿಸಿ ಅಂಜಲಿಯನ್ನು ಗೊಂದಲಗೊಳಿಸಿದವು.

ಇಬ್ಬರೂ ಮೌನವಾಗಿದ್ದರು. ಸಂತೆಯ ಭರಾಟೆಯಲ್ಲಿ ಚಪ್ಪಲಿಯೊಂದನ್ನು ಕಳೆದುಕೊಂಡ ಮಗು ಮನೆಯಲ್ಲಿ ಪರಿತಪಿಸುತ್ತಿರುವಾಗ, ಉಳಿದುಹೋಗಿದ್ದ ಚಪ್ಪಲಿ ಸ್ಮಶಾನಸದೃಶ ಮೌನದಲ್ಲಿ ಚೀರುತ್ತಿರುವಂತೆ ಇಬ್ಬರು ಸದ್ದಿಲ್ಲದೆ ಒಳಗೇ ಕೂಗಿಕೊಳ್ಳುತ್ತಿದ್ದರು. ಒಂದಿಷ್ಟು ನೆನಪುಗಳು ಇಬ್ಬರನ್ನು ಬಗಿಯಾಗಿಸಿಕೊಂಡವು. ವಿಶ್ವನಾಥನ ನೂತನ ಅವತಾರವನ್ನು ನೋಡುವುದಕ್ಕೂ ಸಾಧ್ಯವಾಗದೆ ಅಂಜಲಿ ನಿಸ್ತೇಜಳಾದಳು. ವಿಶ್ವನಾಥ ಹತ್ತುವರ್ಷಗಳಿಂದ ಅಂತರ್ಮುಖಿಯಾಗಿದ್ದ ಅಂಜಲಿಗೆ ಅಯೋಮಾಯವಾಗಿ ತೋರಿದ.

ಕಾಲ ಎನ್ನುವುದು ಬದುಕಿನ ಎಲ್ಲಾ ನೆನಪುಗಳನ್ನು ಅಳಿಸಿಹಾಕುವುದಕ್ಕೆ ಶಕ್ತವಾಗಿಲ್ಲ. ಕೆಲವು ನೆನಪುಗಳು ನಿರಂತರವಾಗಿ ಗೂಡಿನಿಂದ ಹೊರಬರುವ ಇರುವೆಗಳಂತೆ ಸಾಲಾಗಿ ಬರುತ್ತಲೇ ಇರುತ್ತವೆ. ವಯಸ್ಸು ಸಮೀಪಿಸುತ್ತಿದೆ ಎನ್ನುವ ಕಾರಣಕ್ಕೆ ಮದುವೆಯಾಗುವುದು, ಸಮಾಜದ ಅದೃಶ್ಯ ಕಾನೂನುಗಳು ಕುತ್ತಿಗೆ ಹಿಂಡುತ್ತವೆ ಎನ್ನುವ ಭಯದಿಂದ ಬಸಿರಾಗಿ ಮಗುವನ್ನು ಹೆತ್ತು ಜವಾಬ್ದಾರಿ ಎನ್ನುವಂತೆ ಬೆಳೆಸುವುದು, ಮದುವೆಯಾಗಿದ್ದೇನೆ ಎನ್ನುವ ಕಾರಣದಿಂದಲೇ ಗಂಡನನ್ನು ಪ್ರೀತಿಸುವುದು, ದೃಢವಾಗಿ ಬದುಕದೆ ನೆಪಗಳಲ್ಲಿ ಬದುಕು ಸವೆಸುವ ಕ್ರಿಯೆಗಳು ಎಂದರೆ ಅಂಜಲಿಗೆ ರೇಜಿಗೆ.

ಬದುಕು ಲೆಕ್ಕಾಚಾರಗಳಲ್ಲ. ನಾವು ಆಯ್ದುಕೊಳ್ಳುವ ಬದುಕಿಗಿಂತ ನಮ್ಮನ್ನು ಆಯ್ದುಕೊಳ್ಳುವ ಬದುಕಿನ ಗಮ್ಯತೆ ನಿರ್ವಾಣದ ಸ್ಥಿತಿಯಂತೆ ಸತ್ಯವಾಗಿರುತ್ತದೆ ಎನ್ನುವುದನ್ನು ಅಂಜಲಿ ಪದೇ ಪದೇ ಹೇಳಿಕೊಳ್ಳುತ್ತಿದ್ದಳು. ಪ್ರೀತಿ ಎನ್ನುವುದು ಹಿತ್ತಲಿನಲ್ಲಿ ಅರಳಿದ ಹೂವಿನಂತೆ ಎಂದುಕೊಂಡಿದ್ದ ಅಂಜಲಿ ಹತ್ತುವರ್ಷಗಳ ಹಿಂದೆ ತೊರೆದುಹೋಗಿದ್ದ ವಿಶ್ವನಾಥನ ಹೊಸರೂಪ ನಿರಾಸೆಗೊಳಿಸಿತ್ತು. ಅವನ ಮುಗ್ದತೆಯ ಫಲಕು ಕಾಣೆಯಾಗಿ ಚಾತುರ್ಯತೆಯಿಂದ ಬಂದಿದ್ದನ್ನು ಒಪ್ಪಿಕೊಳ್ಳಲಾಗದೆ ಕಂಪಿಸಿದಳು.

ಓಣಿಯ ಹೆಂಗಸರು ವಿಶ್ವನಾಥ ತಲೆಮಾಸಿದವನು ಎನ್ನುತ್ತ ಕಿಚಾಯಿಸುತ್ತಿದ್ದಾಗಲೂ ಅಂಜಲಿ ಮಾತ್ರ ಅವನೊಳಗಿನ ಶ್ವಾಸದೊಳಗಿನ ಸ್ವಚ್ಛಗಾಳಿಯನ್ನು ಉಸಿರಾಡುವುದಕ್ಕೆ ಸಿದ್ದವಾಗಿದ್ದು, ವಿಶ್ವನಾಥನನ್ನು  ಮದುವೆಯಾಗಿದ್ದು, ತನ್ನ ದಿನಗಳನ್ನು ಸಂಪೂರ್ಣವಾಗಿ ಅವನಿಗೆ ಅರ್ಪಿಸಿಕೊಂಡಿದ್ದು ಎಲ್ಲವೂ ನೆನಪಾಗಿ ಇನ್ನಷ್ಟು ಮೌನವಾದಳು.

ವಿಶ್ವನಾಥನನ್ನು ದಿಟ್ಟಿಸಿ ನೋಡಿದಳು. ಅವನು ತೆಳ್ಳನೆಯ ನಗುವಿನ ತೊರೆಯನ್ನು ಹರಿಸುತ್ತಲೇ ಇದ್ದ. ಅಂಜಲಿಗೆ ಇದ್ದಕ್ಕಿದ್ದಂತೆ ಅದೊಂದು ರಾತ್ರಿ ಅರಮನೆಯನ್ನು ತೊರೆದುಹೋಗಿದ್ದ ಸಿದ್ದಾರ್ಥ ಮತ್ತೊಮ್ಮೆ ನೆನಪಾದ. ಪ್ರಶ್ನೆಯೊಂದು ಆವರಿಸಿಕೊಂಡಿತು. ಅರಮನೆಯಲ್ಲಿ ಒಂಟಿಯಾಗಿ ಬದುಕಿದ್ದ ಹೆಂಡತಿ ಯಶೋಧೆಯ ಸಾಮಾನ್ಯ ಪ್ರಶ್ನೆಗಳಿಗಳಿಗೆ ಉತ್ತರಿಸುವಷ್ಟು ಲೋಕವಿವೇಕ ಸಾರಿದ ಬುದ್ದ ಶಕ್ತನಾಗಿದ್ದನೇ ಎಂದು ಅನುಮಾನವಾಯಿತು.

ಅಂಜಲಿ, ಎಂದು ವಿಶ್ವನಾಥ ನಡುಗುವ ದನಿಯಲ್ಲಿ ಕೂಗಿದ. ಅವನ ದನಿಯಲ್ಲಿ ಬದಲಾವಣೆಯ ಗೆರೆಗಳು ನಿಚ್ಚಳವಾಗಿತ್ತು. ಏನನ್ನೋ ಹೇಳುವ ತವಕದ ಎಳೆಗಳು ತೂಗುತ್ತಿದ್ದವು. ವಿಶ್ವನಾಥನ ಕೂಗು ಅಜ್ಞಾತ ಅಶರೀರವಾಣಿ ಸಾವಿನ ಸಮೀಪ ಕರೆದಂತೆ ಭಾಸವಾಗಿ ಹಿಂದಕ್ಕೆ ಸರಿದಳು. ಅಂಜಲಿಗೆ ವಿಶ್ವನಾಥನನ್ನು ನೂತನ ಅವತಾರದಲ್ಲಿ ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಅಂಜಲಿಯ ಉತ್ತರವನ್ನ ಎದುರು ನೋಡುತ್ತಾ ನಿಂತಿದ್ದ ವಿಶ್ವನಾಥನ ಅವಳ ಕೈ ಹಿಡಿದುಕೊಂಡ. ಅಂಜಲಿಗೆ ವಿಶ್ವನಾಥನ ಸ್ಪರ್ಶವೂ ಅಪರಿಚತವೆನಿಸಿ ಪ್ರಕ್ಷುಬ್ಧವಾದಳು.

ಬಾಗಿಲು ತೆರೆದು ಏನನ್ನೂ ಕೇಳದೆ ಒಳಗೆಹೋಗಿದ್ದ ಹತ್ತು ವರ್ಷದ ಸಂಜಯ ಸ್ಕೂಲಿನ ಯೂನಿಫಾರಂ ಧರಿಸಿ ಹೊರಗೆ ಬಂದುವನು ವಿಶ್ವನಾಥನ ಹಿಡಿತದಿಂದ ಬಿಡುವಾಗಿದ್ದ ಅಂಜಲಿಯ ಬಲಗೈಯನ್ನು ಹಿಡಿದು ಸವರಿದ. ವಿಶ್ವನಾಥನೂ ಧೃತಿಗೆಡುವಂತೆ ತಿರುಗಿಯೂ ನೋಡದೆ ಕಡೆಗಣಿಸಿದ. ಬಂದವರು ಯಾರೂ ಎನ್ನುವುದನು ಅವನು ಕೇಳಲಿಲ್ಲ. ಮನೆಯ ಗೇಟಿನವರೆಗೂ ನಡೆದುಹೋದ ಸಂಜಯ ಹಿಂದಿರುಗಿ ಅಂಜಲಿಯ ಕಡೆಗೆ ನೋಡಿದ. ಯೂನಿಫಾರಂ ತೊಟ್ಟಿದ್ದ ಹತ್ತುವರ್ಷದ ಸಂಜಯನನ್ನು ನೋಡುವಾಗ ವಿಶ್ವನಾಥನಿಗೆ ಹತ್ತುವರ್ಷಗಳ ಹಿಂದೆ ಅಂಜಲಿಯೇ ಮುಖತೊಳೆಸಿ ತೊಡಿಸುತ್ತಿದ್ದ ಹಿನಕಲ್ಲಿನ ಕಾವೇರಿ ಗ್ರಾಮೀಣ ಬ್ಯಾಂಕ್‍ನ ಸೆಕ್ಯೂರಿಟಿ ಯೂನಿಫಾರಂನ ನೀಲಿಬಣ್ಣ ಮಸುಕುಮಸುಕಾಗಿ ನೆನಪಾಯಿತು.

ಗೇಟಿನ ಮುಂಭಾಗ ನಿಂತಿದ್ದ ಸಂಜಯ, ಅಮ್ಮ ಸಂಜೆ ಬೇಗ ಬರ್ತೀನಿ ಎಂದು ಸಣ್ಣದನಿಯಲ್ಲಿ ಉಸುರಿದವನು ಕೈ ಬೀಸಿದ. ಸಂಜಯನ ಎಳೆಯ ಮುಖ ಶೂನ್ಯವಾಗಿತ್ತು. ವಿಶ್ವನಾಥನ ಹಿಡಿತದಿಂದ ಕೈ  ಕೊಡವಿಕೊಂಡ ಅಂಜಲಿ ಕೃತಕವಾದ ನಗುವನ್ನು ಹೊರಗೆ ಜಾರಿಸಿ ಮಗನ ಕಡೆಗೆ ಕೈ ಬೀಸಿದಳು. ಹೊರಟುನಿಂತಿದ್ದ ಪುಟಾಣಿ ದೇವರಿನ ತೇರಿನಂತೆ ತೋರುತ್ತಿದ್ದ ಸಂಜಯನಿಗೆ ತಂದೆಯಾಗಿ ಕೈ ಬೀಸುವುದು ಹಕ್ಕು ಎನ್ನುವಂತೆ ಕೈ ಎತ್ತಿದ ವಿಶ್ವನಾಥನಿಗೆ ಯಾವುದೋ ಪ್ರಜ್ಞೆಯೊಂದು ಹಿಂದಿನಿಂದ ಎಚ್ಚರಿಸಿದಂತೆ ಭಾಸವಾಗಿ ಬೀಸುವುದಕ್ಕೆ ಎತ್ತಿದ ಕೈಯನ್ನು ಅರ್ಧದಲ್ಲಿ ಇಳಿಸಿಬಿಟ್ಟ.

ಅಂಜಲಿ ಮತ್ತೊಮ್ಮೆ ಸಂಜಯನಿಗೆ ಪೂರ್ತಿಯಾಗಿ ಕೈ ಬೀಸಿದಳು. ವಿಶ್ವನಾಥ ಯಾವುದೋ ಸುಳಿಯಲ್ಲಿ ಮುಳುಗುತ್ತಿರುವಂತೆ ತೋರಿದ. ಪುಟಾಣಿ ಹೆಜ್ಜೆಗಳ ಸಹಾಯದಿಂದ ಸಂಜಯ ಬೀದಿಯ ತಿರುವಿನಲ್ಲಿ ಮರೆಯಾಗುವಷ್ಟರಲ್ಲಿ ವಿಶ್ವನಾಥ ಖಾಲಿಯಾಗಿದ್ದ. ಗಂಟೆಗಳಿಂದಲೂ ಮಾತುಗಳೆಲ್ಲ ಬರಿದು ಮಾಡಿಕೊಂಡವರಂತೆ ತೊಳಲಾಡುತ್ತಿದ್ದ ಅವರಿಬ್ಬರು ಸಂಜೆಯ ಮೌನದಲ್ಲಿ ಪ್ರತ್ಯೇಕವಾಗಿ ಕರಗತೊಡಗಿದರು.

‍ಲೇಖಕರು avadhi

18 June, 2019

2 Comments

  1. T S SHRAVANA KUMARI

    ಒಳಗುದಿಗಳ ಸಮರ್ಥ ನಿರೂಪಣೆ

  2. hema

    Thumba chennagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading