
ನಾಟಕ ದೃಶ್ಯ ಮಾಧ್ಯಮ, ಹಾಗಾಗಿ ನಾಟಕ ರಂಗದ ಮೇಲೆಯೇ ನೋಡಬೇಕು … ಅಲ್ಲ ಅದು ಕೇವಲ ಅಷ್ಟೇ ಅಲ್ಲ … ಅಕಾಶವಾಣಿಯಲ್ಲಿ ನಾಟಕಗಳು ಧ್ವನಿ ಮುದ್ರಣ ಪ್ರಸಾರವಾಗುತ್ತಿದ್ದರೆ ಕೇಳುತ್ತಿದ್ದ ಪ್ರತಿಯೊಬ್ಬ ಕೇಳುಗನ ಮನದಲ್ಲಿಯೂ ಒಂದೊಂದು ರಂಗಭೂಮಿ, ಪ್ರತಿಯೊಬ್ಬರೂ ನಿರ್ದೇಶಕರೇ. ಕಲ್ಪನಾಶಕ್ತಿಗೆ ಸಾಣೆ ಹಿಡಿಯುವ ಕೆಲಸ ಅದು.
ಇಂತಹ ಪ್ರಯತ್ನ ಮೊನ್ನೆ ನಡೆಯಿತು. ಒಂದು ಕೇಳು ನಾಟಕದ ಪ್ರಯತ್ನ.
ಗೋಪಾಲ್ ವಾಜಪೇಯಿಯವರು ಕನ್ನಡಕ್ಕೆ ಅನುವಾದಿಸಿದ (ಮೂಲ: ಭೀಷ್ಮ ಸಹಾನಿ), ‘ಸಂತ್ಯಾಗ ನಿಂತಾನ ಕಬೀರ’ ನಾಟಕ ವಾಚನ.
ಜೊತೆಗೆ ರಾಮಚಂದ್ರ ಪಿ.ಎನ್ ಅವರು ನಿರ್ದೇಶಿಸಿದ, ‘ಬಿ ವಿ ಕಾರಂತ (ಬಾಬಾ)’ ಸಾಕ್ಷ್ಯಚಿತ್ರ ಪ್ರದರ್ಶನ.

ದಿಲಾವರ್ ರಾಮದುರ್ಗ ಹೀಗಂತಾರೆ..
ಗೋಪಾಲ ವಾಜಪೇಯಿ ಅವರ ಸಂತ್ಯಾಗ ನಿಂತಾನ ಕಬೀರ… ಈಗ ನಮ್ಮ ಮನದೊಳಗ ನಿಂತ ಬಿಟ್ಟಾನ!
ಗೋಪಾಲ ವಾಜಪೇಯಿ ಅವರ ಅನುವಾದಿತ ರಂಗಕೃತಿ “ಸಂತ್ಯಾಗ ನಿಂತಾನ ಕಬೀರ” ನಾಟಕದ ವಾಚನವನ್ನು “ಕೇಳು ನಾಟಕ” ಎನ್ನುವ ಪ್ರಾಯೋಗಿಕ ರಂಗ ಕಾರ್ಯಕ್ರಮವೊಂದರಲ್ಲಿ ಕಲಾವಿದೆ ಜಯಲಕ್ಷ್ಮಿ ಪಾಟೀಲ್ ಅವರ ಮನೆಯಲ್ಲಿ ಭಾನುವಾರ ಆಯೋಜಿಸಲಾಗಿತ್ತು
ಬಹುದಿನಗಳ ನಂತರ ರಂಗಗೆಳೆಯ ಧನಂಜಯ್ ಕುಲಕರ್ಣಿ, ಪ್ರಮೋದ್ ಶಿಗ್ಗಾಂವ್, ಶ್ರೀಪತಿ, ವಾಜಪೇಯಿ ಮತ್ತಿತರರ ಜತೆ ರಂಗಪಠ್ಯವನ್ನು ಹೀಗೆ ಓದಿದ್ದು ಖುಷಿ ಕೊಟ್ಟಿತು. ಓದಿನ ಮೂಲಕವೇ ನಾಟಕವನ್ನು ಕಟ್ಟಿಕೊಡುವ ಮತ್ತು ಅದರ ಆಶಯಗಳನ್ನು ಒಂದಷ್ಟು ಕಾಲ ಹೀಗಾದರೂ ಬದುಕುವ ಒಂದು ಪುಟ್ಟ ಯತ್ನದಂತೆ ನನಗಿದು ತಾಕಿತು.
ಅದ್ಭುತ ಅನುಭಾವಿಗಳ ಭಾಷೆಯಲ್ಲೇ ವಾಜಪೇಯಿ ಕಬೀರನನ್ನು ತುಂಬ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ. (ಭೀಷ್ಮ ಸಹಾನಿ ಅವರ ಮೂಲ ಹಿಂದಿ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದವರು ಗೋಪಾಲ ವಾಜಪೇಯಿ).
ಇಷ್ಟು ಗದ್ದಲದ ಸಂತೆಯಂಥ ಈ ಜಗದಲ್ಲಿ ನಾವು ಕಬೀರರಾಗುವುದು ಸಾಧ್ಯವಿದೆಯೇ! ಸತ್ಯ, ಜೀವಪ್ರೀತಿ ಬದುಕುವುದಕ್ಕೂ ತಾಕತ್ತು ಬೇಕು ಎನ್ನುವುದನ್ನು ಕೃತಿಯ ಓದು ಮನದಟ್ಟು ಮಾಡಿಕೊಟ್ಟಿತು. ಕಬೀರ ನಮ್ಮೊಳಗೆ ಆ ತಾಕತ್ತು ತುಂಬಬಲ್ಲ ಅನ್ನಿಸ್ತ್ಯು. ಗೋಪಾಲ ವಾಜಪೇಯಿ ಅವರಿಗೆ ಹ್ಯಾಟ್ಸಾಫ್. ಜಯಲಕ್ಷ್ಮಿ ಪಾಟೀಲ ಅವರಿಗೊಂದು ಥ್ಯಾಂಕ್ಸ್.
ಗೋಪಾಲ ಕಾಕ ಹೀಗಂತಾರ:
ತುಂಬು ಮನದ ಥ್ಯಾಂಕ್ಸ್…
ಇಂಥದೊಂದು ಪರಿಕಲ್ಪನೆಗೆ ಕಾರಣವಾದವರೇ ಜಯಲಕ್ಷ್ಮೀ ಪಾಟೀಲರು. ನನ್ನ ಈ ಅನುವಾದವನ್ನು ಓದಿ ಕೂಡಲೇ, ”ಇದನ್ನು ರಂಗಕ್ಕೆ ತಂದರೆ ನಾನು ಖಂಡಿತ ಪಾತ್ರ ಮಾಡುತ್ತೇನೆ,” ಅಂತ ಅವರು ಪ್ರತಿಕ್ರಿಯಿಸಿದರು. ರಂಗಕ್ಕೆ ತರುವ ಮೊದಲು ಅದನ್ನು ಒಂದಿಷ್ಟು ಜನ ಸಮಾನಾಸಕ್ತರ ಮುಂದೆ ಓದಬೇಕು ಅಂತ ನಾನು ಅಂದುಕೊಂಡದ್ದು; ಆಮೇಲೆ ಒಬ್ಬ ಕೂತು ಓದುವುದು, ಒಂದಷ್ಟು ಜನ ಕೂತು ಕೇಳುವುದು ಸಾಮಾನ್ಯ… ಅದರ ಬದಲು ಕೆಲವು ಜನ ಸೇರಿ ಆಯಾ ಪಾತ್ರಗಳನ್ನು ಓದಿದರೆ, ಅದರ ಪರಿಣಾಮ ಬೇರೆಯಾಗಿರಬಹುದೇನೋ ಎಂಬ ವಿಚಾರ ಮೊಳೆತದ್ದು; ಕೂಡಲೇ ಧನಂಜಯ ಕುಲಕರ್ಣಿ ಮುಂತಾದ ಮಿತ್ರರೆದುರು ಪ್ರಸ್ತಾಪಿಸಿದ್ದು… ಈ ರಂಗಕೃತಿಯನ್ನು ‘ಬಾನುಲಿ ನಾಟಕ’ದಂತೆ ಪ್ರಸ್ತುತಪಡಿಸುವುದು ಸೂಕ್ತ ಎನಿಸಿತು. ಆ ಅನಿಸಿಕೆ ನಿನ್ನೆ ‘ಕೇಳು ನಾಟಕ’ದ ರೂಪದಲ್ಲಿ ನಿಮ್ಮೆಲ್ಲರಿಗೂ ತಲಪಿದ್ದು ನನಗೆ ಅತ್ಯಂತ ತೃಪ್ತಿ ತಂದುಕೊಟ್ಟ ಸಂಗತಿ. ಈ ಕಾರ್ಯಕ್ರಮ ಸಾಕಾರಗೊಳ್ಳಲು ವೇದಿಕೆಯೊದಗಿಸಿದ ಜಯಲಕ್ಷ್ಮಿ ಪಾಟೀಲ, ಹೀಗೆ ಅಂತ ಹೇಳಿದ ಕೂಡಲೇ ಬಂದು ಭಾಗವಹಿಸಿದ ದಿಲಾವರ ರಾಮದುರ್ಗ, ಮಂಜುಳಾ ಬಬಲಾದಿ, ಉಮೇಶ ದೇಸಾಯಿ, ಪ್ರಮೋದ ಶಿಗ್ಗಾಂವ್, ಶ್ರೀಪತಿ ಮಂಜನಬೈಲು, ಗುರುಪ್ರಸಾದ ಕುರ್ತಕೋಟಿ, ಕ್ರಿಶ್ ಜೋಶಿ ಅವರೆಲ್ಲರಿಗೆ ನಾನು ಋಣಿ. ಹೊಸಪೇಟೆಯಿಂದ ಬಂದವರು ಈ ಕಾರ್ಯಕ್ರಮದ ಜುರಿತು ಗೊತ್ತಾದೊಡನೆ ಬೇರೆ ಕೆಲಸವನ್ನು ಬದಿಗೊತ್ತಿ ಬಂದು ನಮ್ಮೊಡನೆ ಕಾಲ ಕಳೆದು ಕಾರ್ಯಕ್ರಮಕ್ಕೆ ರಂಗು ತಂದುಕೊಟ್ಟ ರಾಜು ಕುಲಕರ್ಣಿ ಅವರಿಗೆ ವಿಶೇಷ ಕೃತಜ್ಞತೆಗಳು.
ಅಭಿಮಾನದಿಂದ ಬಂದು ಆಲಿಸಿದ ಶ್ರೀಕಾಂತ ಪ್ರಭು, ಪದ್ಮಪಾಣಿ ಜೋಡಿದಾರ ಎಮ್. ಎಸ್. ಪ್ರಸಾದ್, ಸಂಧ್ಯಾ ರಾಣಿ, ಭಾರತಿ ಬಿ.ವಿ. ಹಾಗೂ ಬಂದವರು ಕೇಳುಗರ ಗುಂಪಿನಲ್ಲಿ ಕೂಡದೇ, ಕಲಾವಿದರ ಗುಂಪಿನಲ್ಲಿ ಕೂತು, ಖಂಜಿರ ನುಡಿಸಿ, ತಾವೂ ಒಂದು ಪಾತ್ರವನ್ನು ‘ಆವಾಹಿಸಿ’ಕೊಂಡ ರಮೇಶ್ ಗುರುರಾಜಾರಾವ್ ಅವರಿಗೆಲ್ಲ ತುಂಬು ಮನದ ಥ್ಯಾಂಕ್ಸ್.
ನಿನ್ನೆಯದು ಮೊದಲ ಹೆಜ್ಜೆ. ಮುಂದಿನ ಹೆಜ್ಜೆ ಇಡುವಾಗ ಇನ್ನಷ್ಟು ಸಿದ್ಧತೆ ಮಾಡಿಕೊಳ್ಳಬೇಕು. ನೀವೆಲ್ಲ ಇರುವಾಗ ನನಗೇತರ ಚಿಂತೆ?
ಕಾರ್ಯಕ್ರಮದ ಕೆಲವು ದೃಶ್ಯಗಳು ನಿಮಗಾಗಿ :







ಧನ್ಯವಾದಗಳು ‘ಅವಧಿ.’ ನಮ್ಮ ಪುಟ್ಟ ಪ್ರಯತ್ನವನ್ನು ದಾಖಲಿಸಿದ್ದಕ್ಕೆ… ಇದು ದೊಡ್ಡ ಪ್ರೋತ್ಸಾಹ ನಮಗೆ…
ಬಿ ವಿ ಕಾರಂತ್, ಯೋಗನರಸಿಂಹ, ವಾಸುದೇವ ಮೂರ್ತಿ, ಗಂಗಾಧರ ಸ್ವಾಮಿ, ಬಿ.ಜಯಶ್ರೀ ಇವರೆಲ್ಲಾ ನಮ್ಮ ಬಳಿ ನಾಟಕ ಮಾಡಿಸೋ ಮೊದಲು,ಪಾತ್ರವನ್ನು ನೀಡುವ ಮುನ್ನವೇ, ವಾರಗಟ್ಟಳೆ ಹೀಗೆ ‘ಕೇಳು ನಾಟಕ ‘ ಮಾಡಿಸುತ್ತಿದ್ದರು. ಅದೊಂದು ಅಪೂರ್ವ ವಿಭಿನ್ನ ಅನುಭವ. I am so lucky ! ಈಗಿನ ಹವ್ಯಾಸಿ ಕಲಾವಿದರಿಗೆ ಇಂಥ ಅನುಭವ ಇದೆಯೋ ಇಲ್ಲವೋ ತಿಳಿದಿಲ್ಲ್. ಇಲ್ಲದಿದ್ದರೆ ಇಂಥ ಪ್ರಯೋಗಗಳನ್ನು ನೋಡಿ ಯತಾವೂ ಮಾಡಿ ಖುಷಿ ಪಡಬಹುದು. Keep it up Jayalakshmi Patil ! 🙂
ಗುರುಪ್ರಸಾದನನ್ನು “ರೈದಾಸ” ನಾಗಲು ಅವಕಾಶ ಕೊಟ್ಟಿದ್ದಕ್ಕೆ ನಿಮಗೆ ಚಿರ ಋಣಿ! 🙂 …. ಈ ನಾಟಕದಲ್ಲಿ ನನಗೆ ತುಂಬಾ ಇಷ್ಟವಾದ ಸನ್ನಿವೇಶವೇಂದರೆ ಕಬೀರ ಹಾಗು ಅವನ ಹೆಂಡತಿ (ಲೂಯಿ?) ನಡೆಸುವ ಸಂಭಾಷಣೆ. ಅದರಲ್ಲಿ ಪ್ರೀತಿ, ಹಾಸ್ಯ, ಹುಸಿ ಕೋಪ ಎಲ್ಲವೂ ಇದೆ. ಧನಂಜಯ ಕುಲಕರ್ಣಿ ಹಾಗು ಜಯಲಕ್ಷ್ಮಿ ಪಾಟಿಲ ಅದ್ಭುತವಾಗಿ ಅಭಿನಯಿಸಿದರು. ಕಾಯಸ್ಥ, ಸ್ವಾಮಿ ಗಳ ಗತ್ತು, ಸಿಕಂದರ್, ಕೊತವಾಲರ ರ ದರ್ಪದ ಮಾತುಗಳನ್ನು ಹಿರಿಯ ಕಲಾವಿದರ ಕಂಠದಲ್ಲಿ ಕೇಳುವುದೇ ಒಂದು ಸಂಭ್ರಮ. ಕೇಳುವದನ್ನೇ ಮರೆತುಬಿಟ್ಟಿರುವ ಈಗಿನ ಕಾಲದಲ್ಲಿ, ಇಂಥ ಚೆಂದದ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತಿರುವ ನಿಮಗೆ ಧನ್ಯವಾದಗಳು!!
If this program is video recorded, then it will be great to watch in youtube….
Thanks,
Raghu
ಹೌದು, ಇಂತಹ ಕಾರ್ಯಕ್ರಮಗಳ ವಿಡಿಯೋ ಹಂಚಿಕೊಂಡರೆ ಚೆನ್ನಾಗಿರತ್ತೆ
yes i also agree with swarna & raghu comment
’ಸಂತ್ಯಾಗ ನಿಂತಾನ ಕಬೀರ’ ನ ಸಂಜಿ ಹಿಂಗ್ ಇರ್ತದ ಅಂತ ಅನ್ಕೊಂಡಿರಲಿಲ್ಲ… ಸಣ್ಣವರಿದ್ದಾಗ ರೇಡಿಯೋನಲ್ಲಿ ನಾಟಕ ಕೇಳಿದ ಸಿಹಿ-ಸಿಹಿ ನೆನಪುಗಳಷ್ಟೇ.. ಇಂದಿಗೂ ಆ ನಾಟಕಗಳನ್ನ ನಾನು ಮಿಸ್ ಮಾಡ್ಕೋತೀನಿ.. ಇಂದಿನ ಎಫ಼್ ಎಮ್ ರೇಡಿಯೋಗಳಲ್ಲಿ ಆಕಾಶವಾಣಿ ಕಾಲದ ಜಾದೂ ಇಲ್ಲ!
ಕೇಳು ನಾಟಕದಲ್ಲಿ ನನಗೊಂದು ಪಾತ್ರ ಓದಲಿಕ್ಕೆ ಅನುಮತಿ ಕೊಟ್ಟ ವಾಜಪೇಯಿ ಮಾಮಾಗೆ ಹೃದಯಪೂರ್ವಕ ಕೃತಜ್ಞತೆಗಳು.. ನನಗಂತೂ ಇದು ತೀರ ಹೊಸ ಅನುಭವ, ಮುದ ತಂದ ಅನುಭವ..
ಧ್ವನಿಯ ಏರಿಳಿತಗಳಿಗೆ ಅದೆಂಥ ಶಕ್ತಿಯಿದೆ ಅಂತ ಕಣ್ಮುಚ್ಚಿ ನಾಟಕ ಕೇಳುತ್ತಿದ್ದಾಗ ಗೊತ್ತಾಗ್ತಾ ಇತ್ತು ಆವತ್ತು ಸಂಜೆ. ಎಲ್ಲರೂ ತಮ್ಮ-ತಮ್ಮ ಪಾತ್ರಗಳಿಗೆ ಜೀವ ಕೊಟ್ಟುಬಿಟ್ಟಿದ್ರು.. ಇದರ video recording ಅಲ್ಲ audio recording ಮಾಡಿ share ಮಾಡಬೇಕು.. ಆಕಾಶವಾಣಿ ಕಾಲದ ನಾಟಕಗಳು ಮತ್ತೆ ಜೀವಂತವಾಗಬೇಕು ಅಂತ ನನ್ನಾಸೆ 🙂