ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂತೋಷ ಹಾನಗಲ್ಲರ ಕೃತಿಯಲ್ಲಿ ‘ನೆನಪುಗಳ ಮೆರವಣಿಗೆ’

ಡಾ.ಎಚ್.ಎಸ್.ಗೋಪಾಲ ರಾವ್


ಹಿತವಾದ ನೆನಪುಗಳ ಮೆರವಣಿಗೆ ಎಂದರೇ ಸಂಭ್ರಮ. ಭಾರತೀಯ ಇತಿಹಾಸದಲ್ಲಿ ಸ್ವಾತಂತ್ರ‍್ಯ ಸಂಗ್ರಾಮದ ಒಂದೊಂದು ಪುಟವೂ ಒಂದೊಂದು ದಾಖಲೆ. ಅವುಗಳಲ್ಲಿ ಯಾವುದನ್ನೂ ಕಡೆಗಣಿಸಲಾಗದು.

ಸಾಮಾನ್ಯವಾಗಿ ಸಿಪಾಯಿದಂಗೆ ಎಂದೇ ಹೆಸರಾಗಿರುವ ಘಟನೆಯನ್ನು ಮೊದಲ ಭಾರತ ಸ್ವಾತಂತ್ರ‍್ಯ ಸಂಗ್ರಾಮವೆಂದು ಒಪ್ಪಿಕೊಂಡಿರುವುದು ಸಾಮಾನ್ವಿಕರಣದ ಒಂದು ಭಾಗ. ಆದರೆ, ಅದಕ್ಕೂ ಮೊದಲು ಬ್ರಿಟಿಷರ ವಿರುದ್ಧ ಭಾರತದಲ್ಲಿ ಸಣ್ಣ ಪ್ರಮಾಣದಲ್ಲಾದರೂ ಪ್ರತಿಭಟನೆಗಳು ನಡೆದಿವೆ. ಅವು ಅತ್ಯಂತ ಮಹತ್ವದ ಪ್ರಸಂಗಗಳು ಎಂದು ಆ ಕಾಲಕ್ಕೆ ಮತ್ತು ಸ್ವಾತಂತ್ರ‍್ಯ ಸಂಗ್ರಾಮದ ರಾಷ್ಟ್ರೀಯ ಪ್ರಸಂಗಗಳಲ್ಲಿ ಪ್ರಮುಖವೆಂದು ಸ್ವೀಕರಿಸಿಲ್ಲವಾದರೂ, ಸ್ಥಳೀಯ ಇತಿಹಾಸಕ್ಕೆ ಟಿಪ್ಪು ಸುಲ್ತಾನ್, ಸುರಪುರದ ವೆಂಕಟಪ್ಪನಾಯಕ, ಕಿತ್ತೂರಿನ ರಾಣಿ ಚೆನ್ನಮ್ಮ ಇತ್ಯಾದಿ ಗಣ್ಯರು ಬಹು ಮುಖ್ಯರೇ ಆಗಿದ್ದಾರೆ. ಇವರುಗಳು ಭಾರತೀಯ ಸ್ವಾತಂತ್ರ‍್ಯಕ್ಕಿಂತ ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಹೋರಾಡಿದವರು ಎಂದು ಸೀಮಿತ ವಿದ್ವತ್ ವಲಯದಲ್ಲಿ ಹೆಸರಾಗಿದ್ದಾರೆ. ಆದರೆ, ಅವರ ಹೋರಾಟವನ್ನು ಮರೆತು ಮುಂದೆ ಏನನ್ನು ಮಾತನಾಡಲೂ ಸಾಧ್ಯವಿಲ್ಲ.

ಟಿಪ್ಪು ಸುಲ್ತಾನನನ್ನು ಮುಸಲ್ಮಾನ್ ಎಂಬ ಕಾರಣದಿಂದ ಮತ್ತು ಕಿತ್ತೂರು ಚೆನ್ನಮ್ಮನನ್ನಾಗಲೀ, ಸುರಪುರದ ವೆಂಕಟಪ್ಪನಾಯಕನನ್ನಾಗಲೀ, ಬ್ರಿಟಿಷರು ಆಯುಧಗಳ ಮೇಲೆ ಹೇರಲಾದ ನಿಷೇಧವನ್ನು ಹಲಗಲಿಯ ಬೇಡರು ಪ್ರತಿಭಟಿಸಿ ಮಾಡಿದ ಹೋರಾಟವನ್ನಾಗಲೀ ಗೌಣವೆಂದು ಉಪೇಕ್ಷಿಸಲಾಗುವುದಿಲ್ಲ. ಪ್ರತಿಯೊಂದು ಘಟನೆಗೂ ಒಂದೊಂದು ಮಹತ್ವವಿರುತ್ತದೆ ಎಂಬುದನ್ನು ಕಾರ್ಯ-ಕಾರಣ ಸಂಬಂಧದ ಅರಿವಿದ್ದವರು ನಿರಾಕರಿಸುವುದಿಲ್ಲ. ಕಿತ್ತೂರು, ಸುರಪುರ, ಶ್ರೀರಂಗಪಟ್ಟಣ ಮುಂತಾದ ಸ್ಥಳಗಳಲ್ಲಿ ಆಯಾಯಾ ಕಾಲಘಟ್ಟದ ಹೋರಾಟಗಾರರು ಪ್ರತಿಭಟಿಸಿದ ಮತ್ತು ಜಯ ಅಥವಾ ಅಪಜಯಗಳನ್ನು ಅರಗಿಸಿಕೊಂಡ ರೀತಿ ಅಂತಹ ಹೋರಾಟಗಳನ್ನು ಕೇಳಿ ಅಥವಾ ಹೆಚ್ಚೆಂದರೆ ಓದಿ ತಿಳಿದಿರುವವರಿಗೆ ಅರ್ಥವಾಗುವುದು ಕಷ್ಟ. ಏನೇ ಆದರೂ ಅವು ಪ್ರಾಥಮಿಕ ಮಾಹಿತಿ ಎನಿಸಿಕೊಳ್ಳದೆ, ಪೂರಕ ಮಾಹಿತಿಗಳಷ್ಟೇ ಆಗಿ ಉಳಿಯುತ್ತವೆ.

ಇತ್ತೀಚಿನ ದಿನಗಳಲ್ಲಿ ಆಯಾ ಕಾಲಘಟ್ಟಗಳ ಕೆಲವು ಲಿಖಿತ ದಾಖಲಾತಿಗಳಾದರೂ ಲಭ್ಯವಾಗಿರುವದರಿಂದ ವಾಸ್ತವಕ್ಕೆ ಹತ್ತಿರವೆನಿಸುವ ಇತಿಹಾಸವನ್ನು ರಚಿಸುವುದು ಪ್ರಾಮಾಣಿಕ ಇತಿಹಾಸಕಾರರಿಗೆ ಕಷ್ಟವಾಗಿಲ್ಲ. ಕಿತ್ತೂರು ದೇಸಗತಿಯ ಆಡಳಿತವನ್ನು ಕುರಿತು ಪುಣೆಯ ಪತ್ರಾಗಾರ ಇಲಾಖೆಯಲ್ಲಿ ದಾಖಲಾತಿಗಳು ಲಭ್ಯವಿವೆ. ಸಮಕಾಲೀನ ಬ್ರಿಟಿಷ್ ಅಧಿಕಾರಿಗಳು ತಮ್ಮ ಆಡಳಿತ ವರದಿಗಳಲ್ಲಿ ಕೆಲವು ವಿಷಯಗಳನ್ನಾದರೂ ಪ್ರಾಮಾಣಿಕವಾಗಿ ದಾಖಲಿಸಿರುವುದರಿಂದ ಇತಿಹಾಸವು ಪೂರ್ಣ ಆಂಧಕಾರದಲ್ಲಿಲ್ಲ. ಬೆಳಕು ಕಂಡಿರುವ ಕೆಲವು ದಾಖಲಾತಿಗಳ ವಿಶ್ಲೇಷಣೆಯು ಹೇಳಿಕೆಗಳನ್ನು ಆಧರಿಸಿದ ಇತಿಹಾಸದಿಂದ ಭಿನ್ನವಾದ ಇತಿಹಾಸವನ್ನು ಪರಿಚಯಿಸುತ್ತವೆ.

ಇಂತಹ ದಾಖಲಾತಿಗಳನ್ನು ರಕ್ಷಿಸಿರುವ ಬ್ರಿಟಿಷ್ ಅಧಿಕಾರಿಗಳೂ ಮಾನ್ಯರೇ ಆಗುತ್ತಾರೆ. ಸರ್ ಥಾಮಸ್ ಮುನ್ರಿ ಮತ್ತು ಸರ್ ವಾಲ್ಟರ್ ಎಲಿಯಟ್ ಎಂಬ ಬ್ರಿಟಿಷ್ ಅಧಿಕಾರಿಯ ಕಾರ್ಯಚಟುವಟಿಕೆಗಳ ದಾಖಲೆಗಳು ಇಂತಹ ಹೇಳಿಕೆಗಳಿಗೆ ಸಾಕ್ಷಿಯಾಗುತ್ತವೆ. ಹಾಗೆಯೇ ಮೆಡೋಸ್ ಟೇಲರ್, ಬ್ರಿಟಿಷ್ ಅಧಿಕಾರಿ ಲಾರ್ಡ್ ಕಾರನ್ ವಾಲೀಸ್ ಮುಂತಾದವರ ಆಡಳಿತದ ವರದಿಗಳು ಸಮಕಾಲೀನ ಇತಿಹಾಸದ ಒಡೆಯದ ಕೈಗನ್ನಡಿಗಳಾಗಿವೆ. ಹಾಗೆಯೇ ಜೆ.ಎಫ್.ಪ್ಲೇಟ್ ಅವು ಸಂಗ್ರಹಿಸಿದ ಹಲಗಲಿಯ ಬೇಡರು ಲಾವಣಿ ಇತ್ಯಾದಿಗಳು ಮಹತ್ವದ ದಾಖಲೆಗಳು.

ಸರ್ ವಾಲ್ಟರ್ ಎಲಿಯಟ್ ಹುಬ್ಬಳ್ಳಿಯಲ್ಲಿ ಮೊದಲ ಕನ್ನಡ ಶಾಲೆಯನ್ನು ಆರಂಭಿಸಿ, ಸರ್ಕಾರ ಅದರ ಜವಾಬ್ದಾರಿಯನ್ನು ಒಪ್ಪಿಕೊಳ್ಳುವವರೆಗೆ ತನ್ನ ಖರ್ಚಿನಲ್ಲೇ ಅದನ್ನು ನಡೆಸಿಕೊಂಡು ಬಂದವನು. ಅವನ ಸಂಗ್ರಹದ ಕೆಲವು ಶಾಸನಗಳು ಹಿಂದೂ ಇನ್ಸ್ಕ್ರಿಪ್ಪನ್ಸ್ ಎಂಬ ಕೃತಿಯಲ್ಲಿ ಸೇರಿವೆ. ಥ್ಯಾಕರೆ ಕಿತ್ತೂರನ್ನು ಮುತ್ತಿದಾಗ, ಕಿತ್ತೂರಿನವರಿಗೆ ಸೆರೆ ಸಿಕ್ಕ ಬ್ರಿಟಿಷರ ಪೈಕಿ ಸರ್ ವಾಲ್ಟರ್ ಎಲಿಯಟ್ ಒಬ್ಬನಾಗಿದ್ದ. ಅವನನ್ನು ಬಂಧಿಸಿದ್ದ ಕೊಠಡಿಯು ಕಿತ್ತೂರಿನ ಅರಮನೆಗೆ ಹೊಂದಿಕೊಂಡಂತೆಯೇ ಇತ್ತು ಮತ್ತು ಅಲ್ಲಿನ ಬಿರುಸಿನ ಮಾತುಗಳು ತನಗೂ ಕೇಳುತ್ತಿದ್ದವು ಎಂದು ಅವನೇ ತಿಳಿಸಿದ್ದಾನೆ. ಕಿತ್ತೂರಿನ ಅರಸರು ಬಂಧಿಗಳನ್ನೂ ಪ್ರೀತಿಯಿಂದ ಗಮನಿಸುತ್ತಿದ್ದರು ಎಂದೂ ತಿಳಿಸಿದ್ದಾನೆ.

ಈಚೆಗೆ ಪತ್ರಾಗಾರಗಳಲ್ಲಿನ ಸಂಗ್ರಹಗಳಿಂದ ಕಳೆದ ಒಂದೆರಡು ಶತಮಾನಗಳ ಇತಿಹಾಸ ಸ್ಪಷ್ಟವಾಗುತ್ತಿದೆ. ಕಿತ್ತೂರಿನ ಕೋಟೆ ಮತ್ತು ಅರಮನೆಗಳ ವಾಸ್ತು ಸ್ವರೂಪದ ವಿವರಗಳು ಅಧ್ಯಯನಕ್ಕೊಳಪಟ್ಟಿವೆ. ವಿನಾಶದ ಅಂಚಿನಲ್ಲಿದ್ದ ಈ ವಾಸ್ತುಗಳನ್ನು ಸಂರಕ್ಷಿಸುವ ಮತ್ತು ಕಿತ್ತೂರಿನ ಇತಿಹಾಸವನ್ನು ಖಚಿತವಾಗಿ ಅನಾವರಣಗೊಳಿಸುವ ಸಾರ್ಥಕ ಪ್ರಯತ್ನ ಈಗ ಆಗುತ್ತಿದೆ. ಇದರಲ್ಲಿ ಡಾ.ಸಂತೋಷ ಹಾನಗಲ್ಲ ಅವರ ಪಾತ್ರ ಪ್ರಮುಖವಾಗಿದೆ, ಜೊತೆಗೆ ಕಲ್ಮಠದ ಸ್ವಾಮೀಜಿಯವರ ಸಹಕಾರವೂ ಸ್ತುತ್ಯವಾದುದಾಗಿದೆ.

ಡಾ.ಸಂತೋಷ ಹಾನಗಲ್ಲ ಅವರು ‘ವೀರ ಸೌದಾಮಿನಿ’ ಎಂಬ ಶೀರ್ಷಿಕೆಯಡಿ ಕಿತ್ತೂರ ರಾಣಿ ಚೆನ್ನಮ್ಮನನ್ನು ಕುರಿತಾದ ವಿಚಾರಗಳನ್ನು ಸಂಗ್ರಹಿಸಿ ಕೃತಿ ರಚನೆ ಮಾಡಿರುವುದಷ್ಟೇ ಅಲ್ಲದೆ, ಕಲ್ಮಠದ ಸ್ವಾಮೀಜಿಯವರ ನೆರವಿನಿಂದ ಒಂದು ಸಂಗ್ರಹಯೋಗ್ಯ ಚಿತ್ರಸಂಪುಟವನ್ನೂ ಓದುಗರ ಕೈಗಳಿಗೆ ದಾಟಿಸಿದ್ದಾರೆ. ‘ಸೌದಾಮಿನಿ’ ಎಂದರೆ ಒಂದು ಬಗೆಯ ಮಿಂಚು ಎಂಬ ಅರ್ಥವಿದೆ. ಮಿಂಚಿನ ಜೊತೆಗೆ ಸಿಡಿಲೂ ಇರುತ್ತದೆ. ಈ ಸೂಕ್ಷ್ಮವನ್ನು ತಿಳಿದವರಿಗೆ ವೀರಸೌದಾಮಿನಿಯು ಬೇರಾರೂ ಅಲ್ಲದೆ, ಬ್ರಿಟಿಷರ ಪಾಲಿಗೆ ಮಿಂಚಿನ ಜೊತೆಗೂಡಿದ ಸಿಡಿಲು ಎಂದು ಸ್ಪಷ್ಟವಾಗುತ್ತದೆ.

ಇದು ಬೃಹತ್ ಹೊತ್ತಗೆಯಲ್ಲ. ಕಿತ್ತೂರು ಮತ್ತು ರಾಣಿ ಚನ್ನಮ್ಮನನ್ನು ಕುರಿತು ತಾವು ತಿಳಿದ ಮತ್ತು ಸಂಗ್ರಹಿಸಿದ ಮಾಹಿತಿಯನ್ನು ಪರಿಶೀಲಿಸಿ, ಒರೆಗೆ ಹಚ್ಚಿ ತಿಳಿಸಲೇಬೇಕಾದ ವಿಷಯಗಳನ್ನಷ್ಟೆ ತಿಳಿಸುವ ಸಾಹಸಕ್ಕೆ ಕೈಹಾಕಿರುವುದು ಅವರ ಧೈರ್ಯವನ್ನು ಸೂಚಿಸುತ್ತದೆ. ಈವರೆಗೆ ಮೊದಲ ಭಾರತೀಯ ಸ್ವಾತಂತ್ರ‍್ಯ ಸಂಗ್ರಾಮ ಎಂದು ಗುರುತಿಸಲಾಗಿರುವ ೧೮೫೭ರ ಸಿಪಾಯಿ ದಂಗೆಗಿಂತಲೂ ಮೊದಲು, ಬ್ರಿಟಿಷ್ ಆಡಳಿತವಿದ್ದ ಹಲವೆಡೆ, ಸ್ಥಳೀಯ ದೇಶೀ ಸಂಸ್ಥಾನಗಳಲ್ಲೂ ಬ್ರಿಟಿಷರ ಅನರ್ಥಕ ಕಟ್ಟುಪಾಡುಗಳು, ಎಲ್ಲವೂ ಅವರ ಒಡೆದು ಆಳುವ ನೀತಿಯ ಕಾರಣದಿಂದ ರೂಪುಗೊಂಡಿದ್ದಂತಹವು; ಇದನ್ನು ಮೈಸೂರಿನ ಟಿಪ್ಪುಸುಲ್ತಾನ್ ವಿರೋಧಿಸಿದ್ದ. ಸುರಪುರದ ವೆಂಕಟಪ್ಪನಾಯಕನೂ ಪ್ರತಿಭಟನೆ ಮಾಡಿ, ಹೋರಾಡಿದವರಲ್ಲಿ ಒಬ್ಬನಾಗಿದ್ದ. ಈ ಪಟ್ಟಿಗೆ ಒಂದು ಬಹುಮುಖ್ಯ ಸೇರ್ಪಡೆ ಎಂದರೆ ಕಿತ್ತೂರು ಸಂಸ್ಥಾನದ ಚನ್ನಮ್ಮ. ಕೃತಿಕಾರರು ಕಿತ್ತೂರು ಸಂಸ್ಥಾನದ ಇತಿಹಾಸವನ್ನು ೧೫೮೫ರಿಂದ ೧೮೨೪ರ ವರೆಗೆ ಸಂಕ್ಷಿಪ್ತವಾಗಿ, ಸಾರಾಂಶರೂಪದಲ್ಲಿ ನಿರೂಪಿಸಿದ್ದಾರೆ.

ಆರಂಭ ಕಾಲದಲ್ಲಿ ಆಳಿದ ವ್ಯಕ್ತಿಗಳು, ಅವರ ಶೌರ್ಯ, ಪರಾಕ್ರಮ ಇತ್ಯಾದಿಗಳ ಸಂಕ್ಷಿಪ್ತ ಮಾಹಿತಿ ನೀಡುತ್ತಿರುವಾಗಲೇ, ಆ ಕಾಲಕ್ಕೇ ಅಲ್ಲಿ ಬೇರೂರಿದ್ದ ಮಹಾರಾಷ್ಟ್ರೀಯರ ಮತ್ತು ಆದಿಲ್ ಷಾಹಿಗಳ ಸಂಸ್ಕೃತಿಯ ವಿಚಾರಗಳ ಅನಾವರಣವಾಗಿದೆ. ಇವರ ಜೊತೆಗೆ ಹೈದರಾಬಾದ್‌ನ ನವಾಬ, ಬ್ರಿಟಿಷ್ ಅಧಿಕಾರಿಗಳ ಪ್ರಭಾವದಿಂದ ಕಿತ್ತೂರು ಸಂಸ್ಥಾನವೂ ಬೆಳೆದು ಬಂದಿತ್ತು. ಕಿತ್ತೂರ ದೇಸಗತಿಯ ದೇಸಾಯಿಯು ಪೇಳ್ವೆಯರಿಗೆ ವಾರ್ಷಿಕ ಕಪ್ಪವನ್ನು ಸಲ್ಲಿಸುತ್ತಿದ್ದ. ಕೊನೆಯ ಘಟ್ಟದಲ್ಲಿ ಕಿತ್ತೂರಿನ ದೇಸಾಯಿ ಆಗಿದ್ದ ಮಲ್ಲಸರ್ಜ ಹಲವು ವರ್ಷಗಳು ಪೇಶ್ವಗಳ ಬಂಧನದಲ್ಲೇ ಇದ್ದು, ಬಿಡುಗಡೆಯಾಗುತ್ತಿದ್ದಂತೆ ಕೊನೆಯುಸಿರೆಳೆದ.

ಮಲ್ಲಸರ್ಜನ ನಂತರ ಅಧಿಕಾರಕ್ಕೆ ಬಂದ ಶಿವಲಿಂಗರುದ್ರಸರ್ಜ ದುರ್ಬಲನಾಗಿದ್ದ. ಮಲ್ಲಸರ್ಜನ ಹಿರಿಯ ಹೆಂಡತಿ ರುದ್ರಮ್ಮ ಅವನ ಆಡಳಿತದಲ್ಲಿ ನೆರವಾಗಿದ್ದಳು. ಎರಡನೆಯ ಹೆಂಡತಿ ಚನ್ನಮ್ಮ ಶೌರ್ಯ ಮತ್ತು ಸಾಹಸಗಳಿಗೆ ಹೆಸರಾಗಿದ್ದವಳು. ರುದ್ರಮ್ಮ ಮತ್ತು ಚನ್ನಮ್ಮಳ ಮಕ್ಕಳು ಅಕಾಲ ಮರಣಕ್ಕೆ ತುತ್ತಾದಾಗ, ಮಾಸ್ತಮರಡಿಯ ಶಿವಲಿಂಗಪ್ಪನನ್ನು ಚನ್ನಮ್ಮ ದತ್ತಕ ತೆಗೆದುಕೊಂಡಾಗ, ಬ್ರಿಟಿಷ್ ಅಧಿಕಾರಿಗಳು ಆ ದತ್ತಕ ಸ್ವೀಕಾರವು ಕಾನೂನುಬದ್ಧವಲ್ಲವೆಂದು ಆಕ್ಷೇಪಿಸಿ, ಅದನ್ನು ರದ್ದು ಮಾಡಿ, ಅಧಿಕಾರವನ್ನು ತಮ್ಮಲ್ಲೇ ಉಳಿಸಿಕೊಳ್ಳಲು ನಡೆಸಿದ ಪ್ರಯತ್ನವನ್ನು ಚನ್ನಮ್ಮ ವಿರೋಧಿಸುವುದಷ್ಟೇ ಅಲ್ಲದೆ ಕೋಟೆಯ ರಕ್ಷಣೆಗೆ ಸಿದ್ಧಳಾಗುತ್ತಾಳೆ. ಅವಳಿಗೆ ಕಿತ್ತೂರಿನ ಹಲವು ಗಣ್ಯರ ನೆರವೂ ಇರುತ್ತದೆ. ಬ್ರಿಟಿಷ್ ಸೈನ್ಯದ ಅಧಿಕಾರಿ ಥ್ಯಾಕರೆಯ ಯೋಜನೆಗಳೆಲ್ಲ ವಿಫಲಗೊಂಡು, ಸೋಲೊಪ್ಪಿಕೊಳ್ಳುತ್ತಾನೆ. ಆ ಸಂದರ್ಭದಲ್ಲಿ ಸೆರೆಯಲ್ಲಿದ್ದ ಬ್ರಿಟಿಷ್ ಸ್ತ್ರೀಯರು ಮತ್ತು ಮಕ್ಕಳನ್ನು ಚನ್ನಮ್ಮ ಮತ್ತು ಅವಳ ಸಿಬ್ಬಂದಿ ಆದರಿಸಿದ ಪರಿ ಮಹತ್ವ ಪಡೆದಿದೆ.

ಮೋಸದಿಂದ ಚನ್ನಮ್ಮ ಮತ್ತು ಅವಳ ತಂಡದ ವೀರರನ್ನು ಸೆರೆ ಹಿಡಿದ ಚಾಪ್ಲಿನ್ ಮತ್ತು ಇತರ ಅಧಿಕಾರಿಗಳು ಚನ್ನಮ್ಮ ಮತ್ತು ಇತರ ರಾಜಕುಟುಂಬದವರನ್ನು ಬೈಲಹೊಂಗಲದ ಕೋಟೆಗೆ ಸ್ಥಳಾಂತರಿಸಿ, ಕೊನೆಗೆ ಅನಾರೋಗ್ಯದಿಂದ ನಿಧನಳಾದ ಚನ್ನಮ್ಮ ಆರಂಭದಲ್ಲಿ ಕೃತಿಕಾರರು ಕೊಟ್ಟಿರುವ ‘ವೀರ ಸೌದಾಮಿನಿ’ ಎಂಬ ಹೆಸರಿನ ಅರ್ಥವನ್ನು ಸಾರ್ಥಕಗೊಳಿಸುತ್ತಾಳೆ. ಬಂಧನದಲ್ಲಿದ್ದ ರಾಜಕುಟುಂಬದವರಿಗೆ, ಸಾಂತ್ವನ ನೀಡಿ, ಅವರ ಕೊನೆಯ ದಿನಗಳು ಶಿವಧ್ಯಾನಲ್ಲಿರಲು ಕಾರಣರಾದ ಕಲ್ಮಠದ ಗುರುಗಳೂ ಈ ಪ್ರಸಂಗಗಳಲ್ಲಿ ಮುಖ್ಯರಾಗುತ್ತಾರೆ.

ಕಿತ್ತೂರು ಹೋರಾಟಕ್ಕೆ ಸಂಬಂಧಿಸಿದ ಎಲ್ಲ ಘಟನೆಗಳ ಮತ್ತು ಅವೆಲ್ಲವನ್ನು ಸಾಕ್ಷೀಕರಿಸಿಕೊಂಡ ಎಲ್ಲಾ ಪಾತ್ರಗಳೂ ಅತ್ಯಂತ ಮಹತ್ವ ಪಡೆದಿವೆ. ಈ ಎಲ್ಲಾ ಘಟನೆಗಳು ಮತ್ತು ಪಾತ್ರಗಳಿಗೆ ಜೀವತುಂಬುವಲ್ಲಿ ಡಾ.ಸಂತೋಷ ಹಾನಗಲ್ಲ ಅವರ ಶ್ರಮ ಮತ್ತು ತಾದಾತ್ಮತೆ ಸಫಲವಾಗಿವೆ. ಕಿತ್ತೂರಿನ ಇತಿಹಾಸದ ಮೂಕಸಾಕ್ಷಿಗಳಾದ ಕೋಟೆ, ಕಲ್ಮಠ, ಇತ್ಯಾದಿಗಳ ಚಿತ್ರಸಂಪುಟವೂ ಕೃತಿಯ ಜೊತೆಗೆ ಸೇರಿರುವುದು ಕೃತಿಯ ವೈಶಿಷ್ಟ್ಯವಾಗಿದೆ. ಕಿತ್ತೂರಿಗೆ ಮತ್ತೆ ಜೀವ ತುಂಬಿದ ಡಾ.ಸಂತೋಷ ಹಾನಗಲ್ಲ ಅವರಿಗೆ ಸದಾ ಮೆಚ್ಚುಗೆ ಇರುತ್ತದೆ.

‍ಲೇಖಕರು avadhi

23 January, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading