ಸಂತೆಬೆನ್ನೂರು ಫೈಜ್ನಟ್ರಾಜ್
*
ಹಳೆಯ ಸೈಕಲ್ಲಿನ ಕ್ಯಾರಿಯರ್
ಮೇಲೆ ಮರದ ಪೆಟ್ಟಿಗೆ
ಮಂಜುಗಡ್ಡೆ ಕೋಟೆಯಲ್ಲಿ ಬೆಚ್ಚಗೆ? ಕೂತ ಕ್ಯಾಂಡಿ ಐಸ್ ಗಳು
ನಾಭಿಯಿಂದ ಉಸಿರು ಹೊರ ಹಾಕಿ
ತು..ತು ..ತೂ…ಅಂತ ಊದುವವನ ಬದುಕು
ತಣ್ಣಗಿದೆ
ಒಂದು ಕ್ಯಾಂಡಿ ಒಂದು ರುಪಾಯಿ
ಶಾಲೆ, ಜಾತ್ರೆ, ದೇವಸ್ಥಾನದ ಸುತ್ತ ಗಿರಕಿ
ಪೆಟ್ಟಿಗೆ ತಳದಿಂದ ತೊಟ್ಟಿಕ್ಕುವ ಐಸಿನ ಬಣ್ಣದ ಹನಿಗಳ
ಹಿಡಿಯುವ ಹುಡುಗರ ದಂಡು
ಸೈಕಲ್ ಹಿಂದೆ ಹಿಂದೆ; ಒಂದೊಂದು ಹನಿ ನಾಲಗೆಗೆ ಬಿದ್ದಂತೆ
ಅಡಕೆ ಹೊಂಬಾಳೆಯ ಹೂ ಹೊತ್ತ ಖುಷಿ
ಮಂಜುಗಡ್ಡೆಯ ಜೊತೆಗೆ ಕ್ಯಾಂಡಿ
ಕ್ಯಾಂಡಿಯ ಜೊತೆಗೆ ಮಂಜು ಕರಗಿದಂತೆ
ಸೈಕಲ್ಲ ಹಿಂದೆ ಓಡುವ ಹುಡುಗರ ಪಾಳಿ ಹೆಚ್ಚು
ಕುರಿ ಮುಂದೆ ಹುಲ್ಲ ಗಂಟು ಹೊತ್ತು ನಡೆದಂತೆ…ಬದುಕು
ಇಳಿ ಸಂಜೆ
ಬಿಸಿಲು ಸಮಾಧಿಯಾಗುವ ಸಮಯ
ಪೆಟ್ಟಿಗೆ ಖಾಲಿ
ಬಣ್ಣದ ನೀರು ಉಳಿದಿದೆ ನಾಳಿನ ಭರವಸೆ ಅದೇ
ಅಂಗೈ ಚಾಚಿ
ನಾಳಿನ ನಾಲಗೆಗೆ ಸೋಕಿಸಿ ತಣಿವ ‘ ಮನದ’ ಮನುಜರ ನಡುವೆ
ಸೈಕಲ್ಲಿನವ ಒಂಟಿ
ಕರಗಿದ್ದು ಐಸೋ
ಸೂರ್ಯನೋ
ಬದುಕೋ
ಹಿಂದೆ ಅಲೆವ ಹುಡುಗರಿಗೂ ಗೊತ್ತಿಲ್ಲ
ಮತ್ತೆ ನಾಳೆ ಅದೇ ಪೆಟ್ಟಿಗೆ
ಹೊಸ ಐಸು
ಮತ್ತು ಅದೇ ಕೈ ಚಾಚಿ ಬದುಕ ಹಿಡಿಯ ಹೊರಟ
ಹುಡುಗರು
ನಾಳೆಗಳು ನಮ್ಮದಾಗಲಿ






0 Comments