ಸಂಕ್ರಾಂತಮ್ಮನೂ.. ಎಳ್ಳು ಬೆಲ್ಲವೂ..

ಪ್ರಕಾಶ್ ಅಬ್ಬೂರು ವಾರ್ತಾ ಮತ್ತು ಪ್ರಸಾರ ನಿರ್ದೇಶನಾಲಯದಲ್ಲಿ ಉಪ ನಿರ್ದೇಶಕರು.

ಅಬ್ಬೂರು ಎಂಬ ಹಳ್ಳಿಯಿಂದ ಹೊರಟ ಪಯಣದ ನೆನಪು ಇವರಲ್ಲಿ ದಟ್ಟವಾಗಿದೆ. ತಮ್ಮ ಊರು ದಿಡ್ಹೀರನೆ ಬದಲಾಗುತ್ತಿರುವ ಪರಿ ಅವರನ್ನು ಕಾಡಿದೆ.

ಸಂಕ್ರಾಂತಿಯ ಹಿನ್ನೆಲೆಯಲ್ಲಿ ಒಂದು ಹಳ್ಳಿಯ ಸಂಕ್ರಾಂತಿ ಕಾಲದ ಅನಾವರಣ ಇಲ್ಲಿದೆ

ಪ್ರಕಾಶ್ ಅಬ್ಬೂರು

 

ಕಾಲ ಬದಲಾಗಿದೆ..

ಅದೊಂದು ಸಣ್ಣ ತೋಪು ಅಲ್ಲಿ ಹಲವಾರು ವಿಶಿಷ್ಟ ಬಗೆಯ ಮರಗಳಿದ್ದವು, ಕಲಗಚ್ಚಿನ ಮಾವಿನ ಮರ, ಸಂಪಿಗೆ ಮರ, ಸುರಿಗಿ ಮರ, ನೆಲ್ಲಿ ಮರ ಇತ್ಯಾದಿ.
ತೋಪಿನ ಪಕ್ಕದಲ್ಲಿಯೇ ಇದ್ದುದೊಂದು ಕುಡಿ ನೀರಿನ ಬಾವಿ. ಅಂದರೆ ಕುಡಿಯಲು ಬಳಸುತ್ತಿದ್ದ ನೀರಿನ ಬಾವಿ. ಬಾವಿ ಅಂದರೆ ಅಂತಹ ದೊಡ್ಡ ಬಾವಿಯೇನಲ್ಲ, ಅಬ್ಬಬ್ಬಾ ಎಂದರೆ ಹತ್ತು ಅಡಿ ಆಳ ಇದ್ದಿರಬಹುದು. ಚೌಕಕಾರದ ಬಾವಿ, ಕಲ್ಲುಗಳಿಂದ ಕಟ್ಟಿದ್ದರು. ನೆಲಮಟ್ಟದಲ್ಲಿ ಚಪ್ಪಡಿಗಳು, ಮದ್ಯೆ ಕಾಲು ಇಟ್ಟುಕೊಳ್ಳಲು ಒಂದು ಚಪ್ಪಡಿ. ಎರಡು ಚಪ್ಪಡಿಗಳ ನಡುವೆ ಕಾಲುಗಳನ್ನು ಇಟ್ಟು ಬಾಗಿ ನೀರನ್ನು ಸೇದಿಕೊಳ್ಳಬೇಕಾಗಿತ್ತು.

 

ಅಂದರೆ ಅದು ರಾಟೆ ಬಾವಿಯಾಗಿರಲಿಲ್ಲ. ಬಾಗಿ ನೀರು ಸೇದಲು ಅಂತಹ ಶ್ರಮವೂ ಆಗುತ್ತಿರಲಿಲ್ಲ, ಏಕೆಂದರೆ ಮಳೆಗಾಲದಲ್ಲಿ ನೆಲಮಟ್ಟದಿಂದ ಒಂದೆರಡು ಅಡಿ ಆಳದಲ್ಲೇ ನೀರು ಸಿಗುತ್ತಿತ್ತು. ಅಂತಹ ಸಮಯದಲ್ಲಿ ಹಗ್ಗವೂ ಬೇಕಾಗಿರಲಿಲ್ಲ. ಬಿಂದಿಗೆಯನ್ನು ನೇರವಾಗಿಯೇ ಬಾಗಿ ನೀರಲ್ಲಿ ಮುಳುಗಿಸಬಹುದಾಗಿತ್ತು. ಬೇಸಿಗೆ ಸಮಯದಲ್ಲಿ ಏಳೆಂಟು ಅಡಿ ಆಳಕ್ಕೆ ಹೋಗುತ್ತಿತ್ತು. ಈಗಾಗಲೇ ಹೇಳಿದ ಹಾಗೆ ಬಾವಿ ಇದ್ದುದೇ ಹತ್ತು ಅಡಿಗಳಷ್ಟು. ಅಷ್ಟೊಂದು ಸಮೃದ್ದ ಅಂತರ್ಜಲ. ಎಂತಹ ಬೇಸಿಗೆಯಲ್ಲಿಯೂ ಅಲ್ಲಿ ನೀರು ಬತ್ತುತ್ತಿರಲಿಲ್ಲ, ಇಡೀ ಊರಿನ ಜನರೇ ಅಲ್ಲಿಂದ ನೀರು ತೆಗೆದುಕೊಂಡು ಹೋಗುತ್ತಿದ್ದರು.

ಆಗ ಇದ್ದ ಪದ್ದತಿಯಂತೆ ಪರಿಶಿಷ್ಟ ಜಾತಿ ಜನರಿಗೆ ಅಲ್ಲಿ ನೀರು ಸೇದಲು ಅವಕಾಶ ಇರಲಿಲ್ಲ. ಬ್ರಾಹ್ಮಣರು ಬರುತ್ತಿರಲಿಲ್ಲ. ಉಳಿದಂತೆ ಒಕ್ಕಲಿಗರು, ಆಚಾರರು ಇನ್ನಿತರೇ ಮಂದಿ ಅಲ್ಲಿನ ನೀರನ್ನು ಬಳಸುತ್ತಿದ್ದರು. ಗೌರಿ ಹಬ್ಬದ ದಿನಗಳಂದು ಪಕ್ಕದಲ್ಲಿಯೇ ಇದ್ದ ಹುತ್ತಕ್ಕೆ ತನಿ ಎರೆಯುವ ಸಂದರ್ಭದಲ್ಲಿಯೂ ಅಲ್ಲಿಂದ ನೀರು ತೆಗೆದುಕೊಂಡು ಹೋಗುವುದು ರೂಢಿಯಲ್ಲಿತ್ತು

ಮತ್ತೊಂದು ಮುಖ್ಯ ಸಂಗತಿ, ಊರಲ್ಲಿ ಯಾವುದೇ ಮದುವೆ ಆದರೂ ಇಲ್ಲಿಂದ ದೇವರ ನೀರನ್ನು ನಡೆಮುಡಿ ಹಾಸಿಕೊಂಡು ತೆಗೆದುಕೊಂಡು ಹೋಗುವ ಪದ್ದತಿ ಇತ್ತು. ಹೊಟ್ಟೆಬೋರನ ಪೀಪಿ, ವಾಲಗದ ಸದ್ದಿನೊಂದಿಗೆ ಶಾಸ್ತ್ರದ ನೀರನ್ನು ಹೊತ್ತುಕೊಂಡು ಹೋಗುತ್ತಿದ್ದರು. ಬಹಳ ವರ್ಷಗಳವರೆಗೆ ಈ ದೃಶ್ಯಗಳನ್ನು ನೋಡಿದ್ದೇನೆ. ಅಂದು ಬೇಸಾಯಕ್ಕೆ ಯಾವುದೇ ಬಾವಿಗಳು ಇರಲಿಲ್ಲ. ಕಣ್ವ ಕರೆಯಿಂದ ನಾಲೆಯಲ್ಲಿ ನೀರು ಬಿಟ್ಟರೆ, ಬೇಸಾಯ. ಇಲ್ಲದಿದ್ದರೆ ಮಳೆರಾಯನೇ ಗತಿ, ಈ ಬಾವಿ ಇದ್ದುದು ರಾಮಣ್ಣನ ಕರಿಗೌಡ ಎಂಬುವರ ಜಮೀನಿನಲ್ಲಿ. ಭಾರಿ ನಿಷ್ಠೆಯಿಂದ ಬೇಸಾಯ ಮಾಡುತ್ತಿದ್ದ ಅವರಿಗೆ ಅವರ ಜಮೀನಿನಲ್ಲಿ ಬಾವಿ ತೋಡಬೇಕೆಂದು, ಅನ್ನಿಸಿ ಬಾವಿ ತೋಡಿಸಿದರು.

ತುಂಬಾ ಮರಳು ಜಮೀನು ಆದ್ದರಿಂದ ಬಾವಿಗೆ ಕಲ್ಲು ಕಟ್ಟಿಸುವುದು ಕಷ್ಟವಾಗಿ ಬಳೆ ಬಾವಿ ಅಂದರೆ ಸಿಮೆಂಟ್ ಬಳೆಗಳ ಬಾವಿ ತೋಡಿಸಿದರು. ಸುಮಾರು 25 ಅಡಿಯಷ್ಟು. ಅಲ್ಲಿಗೆ ನಾನು ಚಿಕ್ಕಂದಿನಿಂದಲೂ ನೋಡಿಕೊಂಡು ಬಂದಿದ್ದ ಕುಡಿನೀರಿನ ಬಾವಿ ಇತಿಹಾಸ ಸೇರಿಹೋಯಿತು. ಕೇವಲ 10 ಅಡಿಗಳಷ್ಟು ಇದ್ದ ಬಾವಿ ಪಕ್ಕದಲ್ಲಿ 25 ಅಡಿ ಬಾವಿ ಬಂದು. ನೀರಾವರಿಗೆಂದು ಪಂಪು ಓಡತೊಡಗಿದ ಮೇಲೆ ಕುಡಿನೀರಿನ ಬಾವಿಯ ಜಲ ಸಂಪೂರ್ಣ ಬತ್ತಿಹೋಯಿತು. ಅದರ ಜತೆ ಆ ಬಾವಿಯಿಂದ ಶಾಸ್ತ್ರದ ನೀರು ತೆಗೆದುಕೊಂಡು ಹೋಗುವುದು ಬಂದ್ ಆಯಿತು.

ಸರಿ ಬಾವಿ ಇಲ್ಲದಿದ್ದರೂ ಶಾಸ್ತ್ರ ನಿಲ್ಲುವಂತಿಲವಲ್ಲ, ಪಕ್ಕದಲ್ಲೇ ಇದ್ದ ಕಣ್ವ ಹೊಳೆಯಿಂದ ಶಾಸ್ತ್ರದ ನೀರು ನಡೆಮುಡಿಯ ಜತೆ ಮದುವೆ ಮನೆ ಸೇರುತ್ತಿತು. ಈ ತೊರೆಯ ನೀರೋ, ಊರ ಪಕ್ಕದಲ್ಲೇ ಇದ್ದ ತೊರೆ ಬೆಳಿಗ್ಗೆ-ರಾತ್ರಿ ಊರಿನ ಸರ್ವಜನರ ಶೌಚಾಕಾಂಕ್ಷೆಯನ್ನು ನೆರವೇರಿಸಬೇಕಿತ್ತು. ಅದೇ ನೀರು ಶಾಸ್ತ್ರದ ನೀರು ಹೊರುವವರ ತಲೆಮೇಲೆ, ದೇವರ ತಲೆಮೇಲೆ … ಇರಲಿ ಬೇಸಿಗೆ ದಿನಗಳಲ್ಲಿ ಕೆಲವೊಮ್ಮೆ ಈ ನೀರು ಸಂಪೂರ್ಣ ಬತ್ತಿ ಹೋಗಲು ಆರಂಭವಾಯಿತು. ಅಷ್ಟರಲ್ಲಾಗಲೇ ಬೋರ್‍ವೆಲ್‍ಗಳು ಆರಂಭವಾಗಿದ್ದ ಕಾಲ. ಊರಿಗೆ ಇನ್ನೂ ಓವರ್ ಹೆಡ್ ಟ್ಯಾಂಕ್ ಬಂದಿರಲಿಲ್ಲ ಹೊಳೆ ಸಮೀಪ ಬೋರ್‍ವೆಲ್ ಕೊರೆಯಲಾಗಿತ್ತು. ಅದಕ್ಕೆ ಕೈಪಂಪು ಅಳವಡಿಸಲಾಗಿತ್ತು. ಸಮೃದ್ಧ ನೀರು ಬಂದಿತ್ತು. ಕುಡಿಯಲು ತೊಂದರೆ ಇಲ್ಲ ಸರಿ, ಆದರೆ ಶಾಸ್ತ್ರಕ್ಕೆ ?

ಶಾಸ್ತ್ರಕ್ಕೆ ನೀರು ಬೇಕು ಸರಿ. ಆದರೆ ತೆರೆದ ಬಾವಿಯ ನೀರೇ ಆಗಬೇಕು ಅಂತಿಲ್ಲವಲ.್ಲ ಜನ ಹೊಳೆ ನೀರಿಗೆ ಬದಲಾಗಿ ಕೊಳವೆ ಬಾವಿಯ ಹ್ಯಾಂಡ್ ಪಂಪ್‍ಗೆ ಪೂಜೆ ಸಲ್ಲಿಸಿ ನೀರನ್ನು ತುಂಬಿಕೊಂಡು ನಡೆಮುಡಿಯ ಮೇಲೆ ನಡೆಯುವುದು ಆರಂಭವಾಯಿತು. ಆಗ ಸಾಕಷ್ಟು ಮದುವೆಗಳು ಇನ್ನು ಊರಿನಲ್ಲೇ ನಡೆಯುತ್ತಿದ್ದವು. ಈಗ ಊರಿನಲ್ಲಿ ಮನೆಯ ಮುಂದೆ ಮದುವೆ ನಡೆಯುವುದು ಅಪರೂಪ. ಹೀಗಾಗಿ ಶಾಸ್ತ್ರದ ನೀರಿಗೆ ತಿಲಾಂಜಲಿ. ಎಲ್ಲವೂ ಚನ್ನಪಟ್ಟಣದ ಛತ್ರಗಳಲ್ಲಿ ನಡೆಯುತ್ತಿವೆ ಶಾಸ್ತ್ರವು ಛತ್ರಕ್ಕೆ ಶಿಪ್ಟ್ ಆಗಿದೆ.
ಕಾಲ ಬದಲಾಗಿದೆ.

 

ಕಣ್ಮರೆಯಾದ ತೋಪು..

ಬ್ಯಾಸಗಿ ದಿವಸಾಕ ಬೇವಿನ ಮರ ತಂಪ
ಭೀಮರಥಿಯೆಂಬ ಹೊಳಿ ತಂಪ|| ಹಡೆದವ್ವ
ನೀ ತಂಪ ನನ್ನ ತವರಿಗೆ

tree in artಈ ಜಾನಪದ ತ್ರಿಪದಿಯಲ್ಲಿ ಹೆಣ್ಣು ಮಗಳೊಬ್ಬಳು ತಾಯಿಯನ್ನು
ಮರವನ್ನು ಹೊಳೆಯನ್ನು ಒಂದೇ ಸ್ಥಾನದಲ್ಲಿ ಇಟ್ಟು ನೋಡಿದ್ದಾಳೆ. ಇದು
ಜನಪದರ ವಿವೇಕ.

ಇಂತಹ ಗೀತೆಗಳನ್ನು ಕೇಳಿದಾಗಲೆಲ್ಲಾ ನನಗೆ ನೆನಪಾಗುವುದು
ನಮ್ಮೂರಿನ ತೋಪು.

ಸುರಗಿ ಮರ, ಕಲಗಚ್ಚಿನ ಮಾವಿನ ಮರ
ಜೀರಿಗೆ ಮಾವಿನ ಮರ, ಚಿಟ್ರು ಮಾವಿನ ಮರ
ಆಲದ ಮರ, ಹಿಪ್ಪೆಮರ, ಸಂಪಿಗೆ ಮರ
ನೆಲ್ಲಿ ಮರ ಹೀಗೆ ಹಲವು ಬಗೆಯ ಮರಗಳಿದ್ದವು. ತೋಪಿನ ನಡುವೆ
ಗೋಪಾಲಕೃಷ್ಣ ದೇವಸ್ಥಾನ. ಕುಂದಾಪುರ
ಶ್ರೀ ವ್ಯಾಸರಾಯ ಸಂಸ್ಥಾನದ ಮುಖ್ಯ ಆಡಳಿತಕ್ಕೆ
ಒಳಪಟ್ಟಿರಬಹುದು. ಈ ರೀತಿಯ ಬೋರ್ಡು
ಹೊತ್ತ ವಾಹನವೊಂದು ದೇವಸ್ಥಾನದ ಮಠದ
ಸುಪರ್ದಿಯಲ್ಲಿದೆ. ಇಲ್ಲಿ ಹಲವಾರು ಯತಿಗಳ ಬೃಂದಾವನಗಳಿವೆ.

ಬ್ರಾಹ್ಮಣರಿಗೆ ಇದೊಂದು ಪುಣ್ಯ ಕ್ಷೇತ್ರ. ವಿವಿಧ ಭಾಗಗಳಿಂದ ಇಲ್ಲಿಗೆ ಪ್ರವಾಸಿಗರು ಬರುವುದುಂಟು. ಅಂದಿಗೆ ಈ ಮಠ ಅಷ್ಟೇನೂ ಸುಸ್ಥಿತಿಯಲ್ಲಿರಲಿಲ್ಲ ಸುತ್ತಲೂ ಒಂದು ಪ್ರಾಕಾರದ ಗೋಡೆ, ಒಳಭಾಗದಲ್ಲಿ ಹಲವು ಬೃಂದಾನವನಗಳು, ಒಂದು ಪಕ್ಕದಲ್ಲಿ ಅಡುಗೆ ಮನೆ ಅದಕ್ಕೆ ಮಂಗಳೂರು ಹೆಂಚು ನಾಡಗಾರೆಯ ಮಾಡು ಹೊಂದಿದ ಕಟ್ಟಡದ ಒಂದು ಭಾಗ, ಇದಕ್ಕೆ ಹೊಂದಿಕೊಂಡಂತೆಯೇ ಒಂದು ಕಾಡುನೆಲ್ಲಿ ಮರ ಇತ್ತು. ಇದರ ಕಾಯಿಗಳು ಉದುರಿ ಮಾಡಿನ ಮೇಲೆ ಬಿದ್ದಿರುತ್ತಿದ್ದವು. ದೇವಸ್ಥಾನ ಹಿಂದಿನಿಂದಿನ ಹುಡುಗರು ಗೋಡೆ ಪಕ್ಕ ಕಲ್ಲು ಇಟ್ಟು ಕಷ್ಟಪಟ್ಟು ಮೇಲೇರಿ ಮಾಡಿನ ಮೇಲೆ ಬಿದ್ದಿರುತ್ತಿದ್ದ ನೆಲ್ಲಿ ಕಾಯಿ ಕದಿಯುತ್ತಿದ್ದರು. ಬಹುಶ: ಊರಿನ ಎಲ್ಲ ಹುಡುಗರ ಸಾಹಸವಾಗಿ ಇದು ನೆನಪಿನಲ್ಲಿ ಇರಬೇಕು.

ತೋಪಿನ ಆಲದ ಮರದ ಕೆಳಗೆ ಒಂದು ಮಸೆಗಲ್ಲು ಇತ್ತು. ಊರಿನಿಂದ ಜಮೀನಿನ ಕಡೆ ಹೋಗುವ ಜನರೆಲ್ಲಾ ಈ ಕಲ್ಲಿನ ಮೇಲೆ ತಮ್ಮ ಕುಡ್ಲುಗಳನ್ನು ಮಸೆದುಕೊಂಡು ಹೋಗುತ್ತಿದ್ದರು. ಸ್ವಲ್ಪ ಮರಳು ಹಾಕಿ ಕುಡುಗೋಲುಗಳನ್ನು ತಿಕ್ಕಿದರಂತೂ ಹರಿತವಾಯಿತೇ ಎಂದು ನೋಡುವಾಗಲೇ ಬೆರಳನ್ನು ಕುಯ್ದುಕೊಳ್ಳಬೇಕು ಆ ರೀತಿ ಹರಿತ ಇರುತಿತ್ತು.

ಈ ಆಲದ ಮರದ ಪಕ್ಕಕ್ಕೆ ಸಂಕ್ರಾಂತಿ ವೇಳೆ ಗೋಪುರಕಾರದ ಸಂಕ್ರಾಂತಮ್ಮನನ್ನು ನಿರ್ಮಿಸುತ್ತಿದ್ದರು ಊರ ರಾಸುಗಳೆಲ್ಲಾ ತೋಪಿನಲ್ಲಿ ಜಮಾಯಿಸುತ್ತಿದ್ದವು.
ತೋಪಿನಿಂದ ಊರಿಗೆ ಅಭಿಮುಖವಾಗಿ ಕಿಚ್ಚು ರೆಡಿ ಮಾಡಿ ಬೆಂಕಿ ಜ್ವಾಲೆಗಳು ಧಗಧಗ ಅನ್ನುತ್ತಿದ್ದಾಗಲೇ ಉತ್ಸಾಹಿಗಳು ಕಿಚ್ಚು ಹಾಯಿಸುತ್ತಿದ್ದರು. ಉಳಿದವರು ನಿಧಾನವಾಗಿ ಬೂದಿಯ ಮೇಲೆ ಹಾಯ್ದು ಬರುತ್ತಿದ್ದರು.

ತೋಪಿನಲ್ಲೇ ಇದ್ದ ಹಿಪ್ಪೆ ಮರಕ್ಕೆ ಯುಗಾದಿಯ ದಿನದಂದು ಏಣಿಯನ್ನು ಜೋಕಾಲಿಯಾಗಿ ಕಟ್ಟಿ ಜೀಕುತ್ತಿದ್ದರು. ಹೀಗೆ ಈ ತೋಪು ಹಲವು ಚಟುವಟಿಕೆಗಳ ತಾಣವಾಗಿತ್ತು. ತೋಪಿಗೂ ದೇವಸ್ಥಾನಕ್ಕೂ ಅವಿನಾಭಾವ ಸಂಬಂಧ. ತೋಪು ಎಂದರೆ ದೇವಸ್ಥಾನ, ದೇವಸ್ಥಾನ ಎಂದರೆ ತೋಪು ಎನ್ನುವಂತಿತ್ತು.
ಮಠದಲ್ಲಿ ವರ್ಷಕ್ಕೆರಡು ಆರಾಧನೆಗಳು ನಡೆಯುತ್ತವೆ. ಒಂದನ್ನು ಚಿಕ್ಕಸಮಾರಾಧನೆ ಅಂತಲೂ ಮತ್ತೊಂದನ್ನು ದೊಡ್ಡ ಸಮಾರಾಧನೆ ಎಂತಲೂ ಕರೆಯುತ್ತಿದ್ದರು. ಇವು ಯಾವುದೋ ಹಿರಿಯ ಕಿರಿಯ ಯತಿಗಳ ಆರಾಧನೆಗಳು. ನಮ್ಮೂರವರ ಬಾಯಲ್ಲಿ ಸಮಾರಾಧನೆ.

ಇಂತಹ ಆರಾಧನೆ ವೇಳೆ ಎಲ್ಲೆಲಿಂದಿದಲೂ ಬ್ರಾಹ್ಮಣ ಪ್ರವಾಸಿಗರು ಬರುತ್ತಿದ್ದರು. ನಾವು ದೊಡ್ಡ ಟೂರಿಸ್ಟ್ ಬಸ್‍ಗಳನ್ನು ಮೊದಲಿಗೆ ನೋಡಿದ್ದೆ ಈ ಆರಾಧನೆಯ ವೇಳೆ. ಅಂದಾಜು 500-600 ಜನ ಸೇರುತ್ತಿದ್ದರೂ ಏನೋ. ಆ ಕಾಲಕ್ಕೆ ನಮಗದು ಬೃಹದಾಕಾರವಾಗಿ ಕಾಣುತ್ತಿತ್ತು. ಪ್ರವಾಸಿಗರಿಗೆ 2-3 ದಿನ ವಾಸ್ತವ್ಯ, ಊಟದ ವ್ಯವಸ್ಥೆ ಎಲ್ಲವೂ ಇರುತ್ತಿತ್ತು.

ಹಿಂದೆಲ್ಲಾ ಈ ಸಮಾರಾಧನೆಗೆ ಎಲ್ಲಿಂದ ಸೌದೆ ಹೊಂದಿಸುತ್ತಿದ್ದರೂ ಗೊತ್ತಿಲ್ಲ, ನಾನು ನೋಡುತ್ತಾ ಬಂದ ಹಾಗೆ ಈ ಸಮಾರಾಧನೆಯ ಅಡುಗೆಗೆ ನಮ್ಮೂರಿನ ಸುಂದರ ತೋಪು ಕರಗಲು ಆರಂಭವಾಯಿತು. ಒಂದೆರಡು ವರ್ಷ ಕೊಂಬೆಗಳನ್ನು ಕಡಿದರು. ನಂತರ ಬುಡಕ್ಕೆ ಕೊಡಲಿ ಬಿತ್ತು ಸಾಮಾನ್ಯವಾಗಿ ಹಳ್ಳಿಗಳ ಕಡೆ ಅಡುಗೆಗೆ ಅರಳಿಸೌದೆ ಬಳಸುವುದಿಲ್ಲ.

ಆದರೆ ಸಮಾರಾಧನೆಯ ಅಡುಗೆಗೆ ಮಾತ್ರ ಇದರಿಂದ ಸ್ವಯಂ ವಿನಾಯಿತಿ ಪಡೆದುಕೊಳ್ಳಲಾಗಿತ್ತು. ಅರಳಿಯೋ, ಆಲವೋ, ಒಟ್ಟು ಸಮಾರಾಧನೆ ಆಗಬೇಕು ಅಷ್ಟೆ. ತೋಪಿನ ಮರಗಳೆಲ್ಲ ಒಂದೊಂದಾಗಿ ಕಾಣೆಯಾಗ ತೊಡಗಿದವು. ಒಮ್ಮೆ ಮಳೆಗಾಲದಲ್ಲಿ ಜೋರು ಗಾಳಿಗೆ ಬೃಹದಾಕರಾರದ ಮಾವಿನ ಮರವೂ ಉರುಳಿಬಿತ್ತು. ತೋಪು ಕರಗತೊಡಗಿತ್ತು.

ಇದರ ಜತೆಗೆ ಮಠದ ಆದಾಯ ಹೆಚ್ಚಾಗಿ ದೇವಸ್ಥಾನದ ಕಟ್ಟಡ ಮೇಲ್ದರ್ಜೆಗೇರ ತೊಡಗಿತು. ಮಂಗಳೂರು ಹೆಂಚು ಇದ್ದ ಭಾಗದಲ್ಲಿ ಆರ್.ಸಿ.ಸಿ. ಬಂತು. ಮುಂದೆ ಸ್ವಾಗತ ಕಮಾನು, ಬಳಿಯಲ್ಲಿಯೇ ಭಕ್ತರಿಗೆ ಸೂಚನಾ ಫಲಕ, ವಸ್ತ್ರ ಸಂಹಿತೆ ಫಲಕವೂ ಬಂತೂ.
ತೋಪು ಕಣ್ಮರೆಯಾಯಿತು. ಮಠ ಮಾತ್ರ ಹೆಚ್ಚಿನ ಸೌಕರ್ಯಗಳಿಂದ ಭಕ್ತರನ್ನು ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ವೀಕ್ ಎಂಡ್ ಭಕ್ತರನ್ನು ಆಕರ್ಷಿಸುತ್ತಾ ನಡೆದಿದೆ.

 

ಕೆರೆಯೇ ಹಾರವಾದ ಕಥೆ..

ನಮ್ಮೂರಿನ ತೋಪು ಕಣ್ಮರೆಯಾದ ಕಥೆ ಒಂದು ರೀತಿಯದಾದರೆ ಕುಂಬಾರಗುಂಡಿ ಎಂಬ ಚಲುವೆ ಮಾಯವಾದ ಪರಿ ಮತ್ತೊಂದು ರೀತಿಯದು !
ಕುಂಬಾರಗುಂಡಿ-ಗುಂಡಿಯಂತೂ ಅಲ್ಲ. ದೊಡ್ಡ ಕೆರೆಯೂ ಅಲ್ಲ. 25-30 ಎಕರೆ ಪ್ರದೇಶದಲ್ಲಿದ್ದ ಪುಟ್ಟ ಕೆರೆ. ಇದರಿಂದ ನೀರಾವರಿ ಆಗುತ್ತಿದ್ದುದ್ದು ಅಷ್ಟೆ, ನೂರೋ ನೂರೈವತ್ತೂ ಎಕರೆಯಷ್ಟು ಪ್ರದೇಶಕ್ಕೆ ನೀರುಣುಸುತ್ತಿತ್ತು. ಇದರಿಂದ ಎಷ್ಟು ಎಕರೆಗೆ ನೀರಾವರಿ ಆಗುತ್ತಿತ್ತು ಅನ್ನುವುದಕ್ಕಿಂತಲೂ, ಅದು ನಮ್ಮೂರಿನ ಸೊಬಗನ್ನು ಹೆಚ್ಚಿಸಿದ್ದ ಪರಿ ಮಾತ್ರ ಮರೆಯಲಾಗದಂಥದ್ದು.

ನಮ್ಮೂರಿಗೆ ಹೊಂದಿಕೊಂಡೇ ಕಣ್ವ ಹೊಳೆ ಹರಿಯುತ್ತದೆ. ಈ ಹೊಳೆಗೆ ಸ್ವಾತಂತ್ರ್ಯ ಪೂರ್ವದಲ್ಲಿಯೇ ನಿರ್ಮಾಣಗೊಂಡಿರುವ ಅಣೆಕಟ್ಟೆಯೊಂದಿದೆ. ಅಲ್ಲಿ ನಮೂದಿಸಿರುವ ಇಸವಿಯ ಪ್ರಕಾರವೇ 100 ವರ್ಷಗಳನ್ನು ದಾಟ್ಟಿದ್ದು, ಪರಂಪರೆಯ ಪಟ್ಟಿಗೆ ಸೇರಬೇಕಾದ ಎಲ್ಲ ಅರ್ಹತೆಗಳನ್ನು ಪಡೆದಿದೆ. ಈ ಅಣೆಕಟ್ಟೆಯನ್ನು ದಾಟಿ ಮುನ್ನಡೆದರೆ ಕುಂಬಾರಗುಂಡಿಯ ಏರಿ ಆರಂಭವಾಗುತ್ತದೆ. ಒಂದು ಫರ್ಲಾಂಗು ದೂರ ಇರಬಹುದಾದ ಕೆರೆಯ ಏರಿ ಮಧ್ಯದಲ್ಲಿ ಒಂದು ತೂಬು. ಈ ತೂಬಿನಿಂದ ಹೊರಬರುವ ನೀರಿನಿಂದ ಕೆಳಗಿನ ಗದ್ಡೆಗಳಲ್ಲಿ ಬೇಸಾಯ. ಈ ಕೆರೆ, ಕೆರೆ ವ್ಯಾಪ್ತಿಯ ಜಮೀನು ಎಲ್ಲವೂ ಪ್ರಾಯಶ: ಮಠಕ್ಕೆ ಸೇರಿದ್ದು. ಮಠದ ವಾರಸುದಾರರು ಜಮೀನನ್ನು ಊರಿನ ರೈತರಿಗೆ ಗುತ್ತಿಗೆಗೆ ಕೊಟ್ಟಿದ್ದರು ವರ್ಷಕ್ಕೆ ಎರಡು ಬೆಳೆ ಬೆಳೆಯುತ್ತಿದ್ದ ಕಾಲ. ಬೆಳೆದದ್ದರಲ್ಲಿ ಒಂದು ಪಾಲು ಮಠಕ್ಕೆ ನೀಡಬೇಕಿತ್ತು. ಸ್ವಲ್ಪ ಭಾಗ ಜಮೀನನ್ನು ಮಠದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಬ್ರಾಹ್ಮಣ ಕುಟುಂಬಗಳೇ ನಿರ್ವಹಿಸುತ್ತಿದ್ದವು. ಉಳಿದಂತೆ ಬಾಕಿ ಉಳಿದ ಜಮೀನನ್ನು ಇತರೆ ಜನಾಂಗದವರು ಗುತ್ತಿಗೆಗೆ ಪಡೆದುಕೊಂಡು ವ್ಯವಸಾಯ ಮಾಡುತ್ತಿದ್ದರು.

ದೇವರಾಜ ಅರಸರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಉಳುವವನೇ ಹೊಲದೊಡೆಯ ಕಾಯಿದೆ ಜಾರಿಗೆ ಬಂದ ನಂತರ ಬಹುತೇಕ ರೈತರು ಡಿಕ್ಲರೇಷನ್ ಸಲ್ಲಿಸಿ, ತಾವು ಅನುಭವಿಸುತ್ತಿದ್ದ ಜಮೀನಿಗೆ ತಾವೇ ಮಾಲಿಕರಾದರು. ಬಹುತೇಕ ಜಮೀನು ಮಠದ ಕೈತಪ್ಪಿಹೋಯಿತು.

ಈ ಕುಂಬಾರಗುಂಡಿಯಲ್ಲಿ ನೀರು ಸಂಗ್ರಹವಾಗುತ್ತಿದ್ದ ಕಾಲದಲ್ಲಿ ಅಂತರ್ಜಲ ಎಷ್ಟೊಂದು ಸಮೃದ್ಧಿಯಾಗಿತ್ತೆಂದರೆ ಕೆಳಗಿನ ಗದ್ದೆಗಳಲ್ಲಿ ಎತ್ತುಗಳನ್ನು ಕಟ್ಟಿಕೊಂಡು ಉಳುಮೆ ಮಾಡುವುದು ಅಸಾಧ್ಯವಾಗಿತ್ತು. ಇಂತಹ ಗದ್ದೆಗಳಿಗೆ ನಮ್ಮೂರ ಕಡೆ ಹಡ್ಲುಗದ್ದೆ ಎಂದು ಕರೆಯುತ್ತಿದ್ದರು ಉಳುವುದಕ್ಕೆ ಬದಲಾಗಿ ಎಲಗುದ್ದಲಿಯಲ್ಲೇ ಕಪ್ಪಡಿಸಿ ನಾಟಿಗೆ ಭೂಮಿಯನ್ನು ಸಿದ್ದಗೊಳಿಸಬೇಕಾಗಿತ್ತು.

ಈ ಕೆರೆಯು ನಮ್ಮೂರಿನ ಸೊಬಗನ್ನು ಹೆಚ್ಚಿಸಿದ್ದುದು ಅದರಲ್ಲಿದ್ದ ತಾವರೆ ಹೂಗಳಿಂದ. ಕೆರೆಯ ತುಂಬೆಲ್ಲಾ ತಾವರೆ ಹೂ. ತಾವರೆ ಎಲೆಯ ಮೇಲೆ ಎರಚಿದ ನೀರ ಹನಿಗಳು ಫಳ ಫಳ ಹೊಳೆಯುವುದನ್ನೇ ಅಚ್ಚರಿಯಿಂದ ನೋಡುತ್ತಾ ನಾವು ಕೆರೆ ಏರಿಯ ಮಾರ್ಗವಾಗಿ ನಾಗವಾರದ ಹೈಸ್ಕೂಲಿಗೆ ನಡೆದು ಹೋಗುತ್ತಿದ್ದೆವು. ಒಂದಿಬ್ಬರು ತಾವರೆ ಹೂ ಹಾಗೂ ಎಲೆಗಳನ್ನು ಕಿತ್ತು ಚನ್ನಪಟ್ಟಣಕ್ಕೆ ಮಾರಾಟಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಹೂ ಕಟ್ಟಿಕೊಡಲು ಹಾಗೂ ಮಾಂಸ ಕಟ್ಟಿಕೊಡಲು ಆಗ ಬಳಕೆಯಾಗುತ್ತಿದ್ದುದೇ ಈ ತಾವರೆ ಎಲೆಗಳು.

ಅಪರೂಪಕ್ಕೊಮ್ಮೆ ಬೇಸಿಗೆಯಲ್ಲಿ ಕುಂಬಾರಗುಂಡಿ ಪೂರ್ಣ ಬತ್ತಿದಾಗ, ಇಲ್ಲಿಂದ ರೈತಾಪಿ ಜನ ಗೋಡುಮಣ್ಣನ್ನು ತಮ್ಮ ಜಮೀನಿಗೆ ಸಾಗಿಸುತ್ತಿದ್ದರು. ಸಾಗಿಸುವ ಮೊದಲು ಮಣ್ಣನ್ನು ತೆಗೆದು ಏರಿಯ ಮೇಲೆ ಹಾಕಿರುತ್ತಿದ್ದರು ಇದರಲ್ಲಿ ತಾವರೆ ಬೀಜಗಳನ್ನು ಆಯುವ ಕೆಲಸ ನಮ್ಮದಾಗಿರುತ್ತಿತ್ತು. ಕಡಲೇಕಾಯಿ ಬೀಜದ ರೀತಿ ತುಂಬಾ ರುಚಿಯಾಗಿರುತ್ತಿದ್ದವು.

ನಮ್ಮೂರಿನ ಕುಂಬಾರರು ಇಲ್ಲಿಂದಲೇ ಮಡಿಕೆ ಮಾಡಲು ಮಣ್ಣು ತೆಗೆದುಕೊಂಡು ಹೋಗುತ್ತಿದ್ದರು ಅದರಿಂದಲೇ ಈ ಕೆರೆಗೆ ಕುಂಬಾರಗುಂಡಿ ಎಂಬ ಹೆಸರು ಬಂದಿತ್ತು. ಇಲ್ಲಿಯವರೆಗೆ ಬಹಳಷ್ಟು ವರ್ಷಗಳ ಕಾಲ ಈ ಕೆರೆಯಿಂದ ನೀರನ್ನು ಮತ್ತು ಗೋಡುಮಣ್ಣನ್ನು ಮಾತ್ರ ಜನ ಪಡೆದುಕೊಳ್ಳುತ್ತಿದ್ದರು. ಇಲ್ಲಿ ಬೆಳೆಯುತ್ತಿದ್ದ ಒಡಕೆಯನ್ನು ಕುಯ್ದು ಚಾಪೆ ಮಾಡಲು ಬಳಸುತ್ತಿದ್ದರು. ಆಗಿಂದಾಗ್ಗೆ ನೀರು ಕಡಿಮೆಯಾದ ಸಂದರ್ಭದಲ್ಲಿ ಮೀನು ಹಿಡಿಯುತ್ತಿದ್ದರು. ಇಲ್ಲಿಯವರೆಗೆ ಎಲ್ಲವೂ ಕ್ಷೇಮವಾಗಿತ್ತು.

ಬದಲಾವಣೆಯ ಗಾಳಿ ಬೀಸತೊಡಗಿತ್ತು. ಜನರ ಆಸೆ ಹೆಚ್ಚಾಗಿ ಇದ್ದ ಭೂಮಿ ಕಡಿಮೆ ಅನ್ನಸಿದಂತೆಲ್ಲಾ ಮೇಲಿನಿಂದ ಕೆರೆಯ ಒತ್ತುವರಿ ಆರಂಭವಾಯಿತು. ಪ್ರತಿ ಸಾರಿ ಬೇಸಾಯ ಮಾಡುವಾಗಲೋ ಒಂದಡಿ ಎರಡಡಿ ಕೆರೆ ಅಂಗಳ ಜಮೀನಾಗಿ ಪರಿವರ್ತನೆಯಾಗ ತೊಡಗಿತ್ತು.

ಈ ಮದ್ಯ ಯಾವುದೋ ಮಾಯದಲ್ಲಿ ಕೆರೆ ಅಂಗಳ ಪೂರ್ಣವಾಗಿ ಬೇಸಾಯದ ಜಮೀನಾಗಿ ಪರಿವರ್ತನೆಗೊಂಡಿತ್ತು. ದಾಖಲೆಗಳು ಸೃಷ್ಟಿಯಾಗಿದ್ದವು. ಕೆರೆಯ ಅಂಗಳ ಮಠದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಹಲವರ ಹೆಸರಿನಲ್ಲಿ ಖಾತೆಯಾಗಿತ್ತು. ಅವರ್ಯಾರಿಗೂ ಇಲ್ಲಿ ಬೇಸಾಯ ಮಾಡುವುದು ಬೇಕಿರಲಿಲ್ಲ ಅವರೆಲ್ಲಾ ಆ ವೇಳೆಗಾಗಲೇ ಹಳ್ಳಿಯಲ್ಲಿ ಬದುಕುವುದು ಕಷ್ಟವೆಂದು ಭಾವಿಸಿ ನಗರಗಳತ್ತ ಮುಖ ಮಾಡಿದ್ದರು. ಅವರಿಗೆ ಬೇಕಾಗಿದ್ದುದ್ದು ನಗರದಲ್ಲಿ ನೆಲಸಲು ಅಗತ್ಯವಿದ್ದ ಹಣ ಮಾತ್ರ. ಊರಿನ ರೈತರಿಗೆ ಕೆರೆ ಅಂಗಳವನ್ನು ಮಾರಿಕೊಂಡರು, ಪಟ್ಟಣ ಸೇರಿದರು. ಜಮೀನು ಖರೀದಿ ಮಾಡಿದ ರೈತರು ಕೆರೆ ಏರಿಯನ್ನು ಒಡೆದು ನೀರು ನಿಲ್ಲದಂತೆ ಮಾಡಿದರು. ಒಂದು ಕಾಲಕ್ಕೆ ಉಳುಮೆ ಮಾಡಲೂ ಸಾಧ್ಯವಾಗದೇ ಇದ್ದ ಜಮೀನಿನಲ್ಲಿ ಇಂದು ಬೋರ್‍ವೆಲ್‍ಗಳ ನೀರಿನ ಮೂಲಕ ರೇಷ್ಮೆ ಮತ್ತಿತರ ಬೆಳೆ ಬೆಳೆಯುತ್ತಿದ್ದಾರೆ. ಇನ್ನು ಕೆರೆ ದಂಡೆಯ ಮೇಲಿನ ನಡಿಗೆ, ದಂಡೆಯೇ ಇಲ್ಲದ ಮೇಲೆ ನಡಿಗೆ ಎಲ್ಲಿಂದ ಬಂತು. ಈಗಿನ ಮಕ್ಕಳಿಗೆ ಬಹುಶ: ಅಲ್ಲೊಂದು ರಸ್ತೆ ಇತ್ತು ಎನ್ನೂವುದೂ ಕೂಡ ಗೊತ್ತಿರಲಿಕ್ಕಿಲ್ಲ.

ಮಾನವನ ದುರಾಸೆಗೆ ಕೆರೆಯೇ ಹಾರವಾದ ಕಥೆ ಇದು.

 

ಸಂಕ್ರಾಂತಮ್ಮನೂ … ಎಳ್ಳುಬೆಲ್ಲವೂ
ಮತ್ತೊಂದು ಸಂಕ್ರಾಂತಿ ಬರುತ್ತಿದೆ. ಜನರೆಲ್ಲಾ ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತನಾಡುವ ಸಂಭ್ರಮಕ್ಕೆ ಸಿದ್ದತೆಯಲ್ಲಿದ್ದಾರೆ. ಅಂಗಡಿಗಳು ಥರಾವರಿ ಡಿಸೈನ್‍ಗಳ ಸಕ್ಕರೆ ಅಚ್ಚುಗಳನ್ನು ಸಂಗ್ರಹಿಸತೊಡಗಿವೆ. ಹಾಗೆಯೇ ರೆಡಿಮೇಡ್ ಎಳ್ಳು-ಬೆಲ್ಲದ ಪ್ಯಾಕೆಟ್‍ಗಳು ಸಹ ಸಜ್ಜಾಗತೊಡಗಿವೆ.
ಅಂಗಡಿಯಿಂದ ಎಳ್ಳು ಬೆಲ್ಲ ಪ್ಯಾಕೆಟ್ ಖರೀದಿಸಲು ಇಚ್ಚಿಸದ ಗೃಹಣಿಯರು ಕೊಬ್ಬರಿಯನ್ನು ಒಣಗಿಸಿ ನೀಟಾಗಿ ಕಟ್ ಮಾಡಿ ಇಟ್ಟುಕೊಂಡು, ಬೆಲ್ಲದ ಚೂರುಗಳನ್ನು ತಯಾರಿಸ ತೊಡಗಿದ್ದಾರೆ. ಮಕ್ಕಳು ಎಳ್ಳು ಬೀರುವ ಸಂಭ್ರಮಕ್ಕೆ ತಯಾರಾಗುತ್ತಿದ್ದಾರೆ.

ಸಂಕ್ರಾಂತಿ ಬಂತೆಂದರೆ ನಗರ ಪ್ರದೇಶಗಳಲ್ಲೆಲ್ಲಾ ಎಳ್ಳು ಬೀರುವ ಸಂಭ್ರಮ. ಇದು ಈಗ ಕೇವಲ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾದ ಆಚರಣೆಯಲ್ಲ. ಗ್ರಾಮಾಂತರ ಹಳ್ಳಿಗಳಿಗೂ ಎಳ್ಳು ಬೆಲ್ಲ ಬೀರುವ ಆಚರಣೆ ವ್ಯಾಪಿಸುತ್ತಿದೆ. ಆದರೆ ಸಂಕ್ರಾಂತಿ ಎಂದರೆ ದನಗಳ ಹಬ್ಬ ಎನ್ನುವ ಭಾವನೆಯನ್ನು ಹಳ್ಳಿಗರು ಇನ್ನು ಪೂರ್ಣವಾಗಿ ತೊರೆದಿಲ್ಲ. ಹಿಂದಿನ ಸಂಭ್ರಮ ಇಲ್ಲವಾದರೂ, ಈಗಿನ ಕಾಲಕ್ಕೆ ಅಗತ್ಯವಾದಷ್ಟು ಸಂಭ್ರಮ ಉಳಿದುಕೊಂಡು ಬಂದಿದೆ. ಬದಲಾವಣೆ ಜಗದ ನಿಯಮ.

ನಾನು ಬಹಳಷ್ಟು ವರ್ಷಗಳ ಕಾಲ ನೋಡಿಕೊಂಡು ಬಂದಿದ್ದ ಸಂಕ್ರಾಂತಿ ಎಂದರೆ, ಅಂದು ಮನೆಯ ರಾಸುಗಳಿಗೆ ನಿಜವಾದ ಹಬ್ಬ. ಹಿಂದಿನ ದಿನವೇ ಕೊಟ್ಟಿಗೆಗೆ ಹೊಸ ಮಣ್ಣು ತುಂಬಿಸಿ, ಹಳ್ಳಕೊಳ್ಳಗಳನ್ನು ಮುಚ್ಚಿ ಮರುದಿನ ಬೆಳಿಗ್ಗೆಯೇ ಕೊಟ್ಟಿಗೆಯನ್ನು ಸಾರಿಸಿ ರಂಗೋಲಿ ಹಾಕುವುದು. ದನಕರುಗಳ ಮೈ ತೊಳೆಯುವುದು. ಸಂಕ್ರಾಂತಿ ಹಬ್ಬಕ್ಕೆಂದೇ ಉಳಿಸಿಕೊಂಡು ಬಂದಿದ್ದ ಅವರೆಗಿಡದ ಮೇವು ತಂದು ತಿನ್ನಿಸುವುದು, ಹೀಗೆ ಅಂದಿನ ದಿನಚರಿ ಆರಂಭವಾಗುತ್ತಿತ್ತು.
ಎತ್ತು ಹಸುಗಳ ಕೊಂಬುಗಳನ್ನು ಸವರಿ ಕೊಂಬಿಗೆ ಎಣ್ಣೆ ಹಚ್ಚಿ ಫಳ ಫಳ ಹೊಳೆಯುವಂತೆ ಮಾಡುವುದು, ಇಲ್ಲವೇ.. ಕೊಂಬುಳಿಗೆ ನೀಲಿ ಅಥವಾ ಬೇರೆ ಇನ್ನಾವುದಾದರೂ ಬಣ್ಣ ಬಳಿಯುವುದು. ಎಮ್ಮೆಗಳಿಗೂ ಕೊಂಬಿಗೆ ನೀಲಿ ಹಚ್ಚುವುದು, ಹೀಗೆ ಸಂಜೆ ಯ ಕಿಚ್ಚು ಹಾಯಿಸುವ ಸಂಭ್ರಮಕ್ಕೆ ಅಣಿಯಾಗುವುದು ನಡೆಯುತ್ತಿತ್ತು.

ಅಟ್ಟ ಸೇರಿದ್ದ ಮೊಕರಂಬೆ, ಗೆಜ್ಜೆ, ಕೊಂಬಿನ ಕಳಸ, ಗವುಸು ಹೀಗೆ ಹಸು ಎತ್ತುಗಳನ್ನು ಅಲಂಕಾರ ಮಾಡಲು ಬಳಸುತ್ತಿದ್ದ ವಸ್ತುಗಳೆಲ್ಲಾ ಅಟ್ಟದಿಂದ ಇಳಿಯುತ್ತಿದ್ದವು. ಊರಿನ ರಾಸುಗಳೆಲ್ಲಾ ತೋಪಿನಲ್ಲಿ ಜಮಾಯಿಸುತ್ತಿದ್ದವು. ನಮ್ಮೂರಿನ ರಾಸುಗಳ ಸಿರಿಯನ್ನು ಅಂದು ನೋಡಬಹುದಾಗಿತ್ತು. ಎಷ್ಟೆಲ್ಲಾ ಎತ್ತುಗಳು, ಹಸುಗಳು, ಎಮ್ಮೆಗಳು, ಕುರಿಗಳು, ಆಡುಗಳು, ಇಡೀ ತೋಪಿನ ತುಂಬಾ ತುಂಬಿ ಹೋಗಿರುತ್ತಿದ್ದವು.

ತೋಪಿನ ಒಂದು ಭಾಗದಲ್ಲಿ ತಾತ್ಕಾಲಿಕವಾದ ಸಂಕ್ರಾಂತಮ್ಮನನ್ನು ನಿರ್ಮಿಸುತ್ತಿದ್ದರು. ಸಂಕ್ರಾಂತಮ್ಮ ಎಂದರೆ ಸಣ್ಣ ಗೋಪುರಾಕಾರದ ಒಂದು ರಚನೆ. ಇದರ ಸಮೀಪವೇ ಪೊಂಗ್ಲು ಬೇಯಿಸುತ್ತಿದ್ದರು. ನಮ್ಮ ಊರಿನ ಯಜಮಾನ್ ಕಾಡಪ್ಪ ಅವರು ನಾನು ನೋಡಿದಂತೆ ಬಹಳಷ್ಟು ವರ್ಷ ಈ ಕೆಲಸ ನಿರ್ವಹಿಸುತ್ತಿದ್ದರು. ನಂತರ ಊರಿಗೆ ಅಭಿಮುಖವಾಗಿ ಊರಿನಿಂದ ಸಂಗ್ರಹಿಸಿದ ತೆಂಗಿನ ಗರಿಗಳಿಂದ ಕಿಚ್ಚು ರೆಡಿಮಾಡಿ ಬೆಂಕಿ ಹೊತ್ತಿಸಿದರೆ ಉತ್ಸಾಹಿ ತರುಣರು ಆಳುದ್ದದ ಬೆಂಕಿಯ ಜ್ವಾಲೆಗಳಲ್ಲಿ ರಾಸುಗಳನ್ನು ನೆಗೆಸಿಕೊಂಡು ಊರು ಸೇರುತ್ತಿದ್ದರು ಉಳಿದವರು ನಿಧಾನವಾಗಿ ಕೆಂಡ ಬೂದಿಯ ಮೇಲೆ ಕಿಚ್ಚು ಹಾಯಿಸಿಕೊಂಡು ಬರುತ್ತಿದ್ದರು. ಹರಕೆ ಕಟ್ಟಿಕೊಂಡವರು ಸಂಕ್ರಾಂತಮ್ಮನಿಗೆ ಕೋಳಿಗಳನ್ನು ಬಲಿ ಕೊಡುತ್ತಿದ್ದರು. ರಾಸುಗಳ ಸಂಖ್ಯೆ ಹೆಚ್ಚಲಿ ಎಂದು ಹಾರೈಸಿ ಅವುಗಳ ಮೇಲೆ ಪೊಂಗ್ಲು ಅನ್ನವನ್ನು ಪ್ರಸಾದದಂತೆ ಎರಚುತ್ತಿದ್ದರು.

ಕಿಚ್ಚು ಹಾಯಿಸಿದ ನಂತರ ಎತ್ತುಗಳೆಲ್ಲಾ ಊರ ತುಂಬಾ ಮೆರವಣಿಗೆ ಹೊರಟರೆ ಪಾಪ ಎಮ್ಮೆ, ಕುರಿ, ಆಡುಗಳು ನೇರವಾಗಿ ಮನೆ ಸೇರಿಕೊಳ್ಳುತ್ತಿದ್ದವು. ಮೆರವಣಿಗೆಯಲ್ಲಿ ಹೋಗುವ ಎತ್ತುಗಳಿಗೆ ಚನ್ನಪಟ್ಟಣದಿಂದ ತರುತ್ತಿದ್ದ ವಿಧ ವಿಧ ಆಕಾರದ ಕನ್ನಡಿಗಳನ್ನು ಅಂಟಿಸಿದ ಬತ್ತಾಸಿನಿಂದ ಅಲಂಕರಿಸುತ್ತಿದ್ದರು. ಇಂತಹ ಅಲಂಕಾರಕ್ಕೆ ಅನುಕೂಲ ಅಗುವಂತೆ ಮೊಕರಂಬೆಗಳನ್ನು ತೊಡಿಸಿ ಹೂ, ಬತ್ತಾಸುಗಳನ್ನು ಕೊಂಬುಗಳಿಗೆ ಟೇಪು, ಬಲೂನುಗಳನ್ನು ಕಟ್ಟಿ ಸಂಭ್ರಮಿಸುತ್ತಿದ್ದರು. ಊರ ಮುಂದಿನಿಂದ ಹೊರಟ ಮೆರವಣಿಗೆ ಊರೆಲ್ಲಾ ಸುತ್ತಿದ ನಂತರ ಎತ್ತುಗಳು ಸ್ವಸ್ಥಾನ ಸೇರುತ್ತಿದ್ದರು. ಮೆರವಣಿಗೆಯಲ್ಲಿ ಮೊದಲು ಹೋಗಬೇಕಾದರೆ ಎತ್ತಿನ ಮಾಲಿಕರು ಹರಾಜಿನಲ್ಲಿ ಕೂಗಿ ಅ ಅವಕಾಶ ಪಡೆದುಕೊಳ್ಳಬೇಕಾಗಿತ್ತು. ಹರಾಜಿನಲ್ಲಿ ಬಂದ ಹಣ ಊರೊಟ್ಟಿನ ಕೆಲಸಗಳಿಗೆ ಬಳಕೆಯಾಗುತ್ತಿತ್ತು. ಎತ್ತಿನ ಮೈಮೇಲೆ ಹಾಕಲು ಡಮಾಸ್ ಬಟ್ಟೆಯಿಂದ ಹೊಲಿದ ಕನ್ನಡಿಗಳನ್ನು ಅಳವಡಿಸಿದ ಗೌಸ್‍ಗಳನ್ನುಹಾಕುತ್ತಿದ್ದರು. ಕೆಲವರು ಮಾತ್ರ ಇಂತಹ ಗೌಸ್‍ಗಳನ್ನು ಇಟ್ಟುಕೊಂಡಿರುತ್ತಿದ್ದರು.

ಕೊಟ್ಟಿಗೆ ಸೇರಿದ ನಂತರ ಎತ್ತುಗಳಿಗೆ ಹೋಳಿಗೆ ಊಟ ನಂತರ ಮನೆಯವರ ಊಟ. ಒಟ್ಟಾರೆ ಬೇರೆ ದಿನ ಎತ್ತು, ಎಮ್ಮೆಗಳ ಮೈ ತೊಳೆಯದಿದ್ದರೂ ಸಂಕ್ರಾಂತಿಯ ದಿನ ಮಾತ್ರ ಅವುಗಳಿಗೆ ರಾಜಭೋಗ ಕಾದಿರುತ್ತಿತ್ತು.

ಹೀಗೆ ಇಡೀ ಸಂಕ್ರಾಂತಿ ಹಬ್ಬ ದನಗಳಿಗೆ ಮೀಸಲಾದ ಹಬ್ಬವಾಗಿತ್ತು. ಬೇಸಾಯವೇ ಕಷ್ಟದ ಕೆಲಸವಾಗಿ, ದನಗಳನ್ನು ಸಾಕುವುದೇ ದುಸ್ತರ ಅನಿಸುತ್ತಿರುವ ಈ ಸಂದರ್ಭದಲ್ಲಿಯೂ, ಇರುವ ದನಗಳಿಗಂತೂ ಈ ಸಂಭ್ರಮವನ್ನು ತಪ್ಪಿಸಿಲ್ಲ. ಈಗ ಕಿಚ್ಚು ಹಾಯಿಸಿದ ನಂತರ ಎಮ್ಮೆ, ಕುರಿ, ಆಡುಗಳ ಜತೆ ಎತ್ತುಗಳೂ ನೇರವಾಗಿ ಮನೆ ಸೇರುತ್ತಿವೆ. ಮೆರವಣಿಗೆ ನಿಂತು ಎಷ್ಟು ಕಾಲವಾಗಿದೆ. ಆಗ ಅಪರೂಪಕ್ಕೆ ಕಾಣುತ್ತಿದ್ದ ಅಥವಾ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಇದ್ದ ಸೀಮೆ ಹಸುಗಳೇ ಇಂದು ಸಂಕ್ರಾಂತಿಯಂದು ತೋಪಿನ ತುಂಬೆಲ್ಲ ಕಾಣುತ್ತಿವೆ. ಊರಿನ ಪ್ರಮುಖ ಆರ್ಥಿಕ ಚಟುವಟಿಕೆ ಈಗ ಈ ಸೀಮೆ ಹಸುಗಳನ್ನೇ ಅವಲಂಬಿಸಿದೆ. ಎತ್ತುಗಳಿಗೆ ಬದಲು ಉಳುಮೆಗೆ ಟಾಕ್ಟರ್ ಬಂದಿದೆ. ಗಾಡಿಗೆ ಬದಲು ಆಪೆ ಆಟೋಗಳು, ಮಿನಿ ಟ್ರಕ್‍ಗಳು ಬಂದಿವೆ.

ಸಂಕ್ರಾಂತಿಯಂದು ತೋಪಿನಲ್ಲಿ ಸೇರುತ್ತಿದ್ದ ರಾಸುಗಳ ಸಂಖ್ಯೆ ಬಹುಶ: ಕಡಿಮೆ ಆಗಿಲ್ಲ ಆದರೆ ದೇಸಿ ತಳಿ ಹಸು, ಎತ್ತುಗಳ ಜಾಗದಲ್ಲಿ ಸೀಮೆಹಸುಗಳು ಬಂದು ನಿಂತಿವೆ. ಅಷ್ಟೆ. ಜನ ಅಷ್ಟಾದರೂ ಬದಲಾಗಬೇಕಲ್ಲ, ಬದುಕಿಗಾಗಿ.

‍ಲೇಖಕರು Admin

January 15, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. SANTHOSH KUMAR BT

    Yes it is true

    The simplicity, beauty and antiquity of the village has disappeared

    From
    -Bangalore rural boys

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: