ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಕೇತ್ ಡಿ ಹೆಗಡೆ ಓದಿದ ‘ಉತ್ತರ’

ಸಂಕೇತ್ ಡಿ ಹೆಗಡೆ

ಸುಪ್ರೀತ್ ನನಗೆ ಪರಿಚಯವಾಗಿದ್ದು ಇತ್ತೆಚಿಗಷ್ಟೇ. ‘ಉತ್ತರ’ ನಾನು ಓದಿದ ಅವರ ಮೊದಲ ಕಾದಂಬರಿ.

ಆದರೆ ‘ಉತ್ತರ’ ನಾನು ಓದಿದ ಕಾದಂಬರಿಗಳಲ್ಲಿ ಅತ್ಯಂತ ವಿಭಿನ್ನವಾದ ಕಾದಂಬರಿ. ಅಧ್ಯಾತ್ಮವನ್ನೇ ಮುಖ್ಯವಸ್ತುವನ್ನಾಗಿಟ್ಟುಕೊಂಡು ಬಂದಿರುವ ಕಾದಂಬರಿಗಳು ಬಹುಶಃ ವಿರಳವೇ. ಆದ್ದರಿಂದ ಇದು ಆ ಗುಣದಿಂದಲೂ ವಿಶಿಷ್ಟವಾಗಿ ನಿಲ್ಲುತ್ತದೆ.

ಸುಪ್ರೀತ್ ಸ್ವತಃ ಒಬ್ಬ ಅಧ್ಯಾತ್ಮ ಹಾದಿಯಲ್ಲಿರುವ ಸಾಧಕ. ನಾನು ಅವರಿಂದಲೇ ತಿಳಿದುಕೊಂಡಿರುವಂತೆ ಅವರ ದಿನ ಶುರುವಾಗುವುದುದು ಬೆಳಿಗ್ಗೆ ಸುಮಾರು 4 ಘಂಟೆಯಿಂದಲೇ. ಮುಂಜಾನೆ ಸುಮಾರು 3-4 ಘಂಟೆಯಷ್ಟು ಪೂಜೆ, ಜಪ, ಯೋಗ, ಧ್ಯಾನಗಳನ್ನು ಅವರು ಮಾಡುತ್ತಾರೆ. ಸದ್ಗುರು ಜಗ್ಗಿ ವಾಸುದೇವ್ ಅವರ ಈಶಾ ಸಂಸ್ಥೆಯಿಂದ ಕೆಲವು ಸಾಧನೆಗಳನ್ನು ಕಲಿತಿದ್ದಾರೆ ಕೂಡ. ಇವೆಲ್ಲವೂ ಅವರ ಕಾದಂಬರಿಯಲ್ಲಿ ಮಿಳಿತವಾಗಿದೆ.

ಸ್ಕಂದ ನಮ್ಮಂತಹ ಅನೇಕರಂತೆ ಒಬ್ಬ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಹುಡುಗ. ಅವನ ತಂದೆ ಸಂಸಾರದ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳುವವರಲ್ಲ. ತಾಯಿಗೆ ಮಗ ಓದಬೇಕು, ದುಡಿಯಬೇಕು, ಮದುವೆಯಾಗಬೇಕು, ಮೊಮ್ಮಕ್ಕಳ ಆಡಿಸಬೇಕೆಂಬ ಬಯಕೆಗಳು. ಆದರೆ ಸ್ಕಂದ ಎಲ್ಲ ಹುಡುಗರಂತೆ ಸಾಮಾನ್ಯ ಮನಸ್ಥಿತಿಯ ಹುಡುಗನಲ್ಲ. ಆತನಿಗೆ ಚಿಕ್ಕಂದಿನಿಂದಲೇ ಅನೇಕ ಚಿಕ್ಕ ಚಿಕ್ಕ ವಿಷಯಗಳೂ ಕೂಡ ಬಾಧಿಸುತ್ತವೆ. ನೋವುಂಟುಮಾಡುತ್ತವೆ.

ಕೆಲವೊಮ್ಮೆ ವಿಷಯಗಳೇ ಇಲ್ಲದಿದ್ದರೂ ಅಂತರಾಳದಿಂದ ನೋವೊಂದು ಉದ್ಭವಿಸಿ, ದೇಹವನ್ನೆಲ್ಲ ಆವರಿಸಿ ಅಸಾಧ್ಯ ವ್ಯಥೆಯನ್ನುಂಟುಮಾಡುತ್ತಿರುತ್ತದೆ. ಅವನಿಗೆ ಇದಕ್ಕೆ ‘ಉತ್ತರ’ ಹುಡುಕುವ ಹಠ. ಈ ಹಠ ಅವನನ್ನು ಎಲ್ಲೆಲ್ಲಿಗೆ ಕರೆದೊಯ್ಯುತ್ತದೆ? ಏನೇನನ್ನು ಮಾಡಿಸುತ್ತದೆ? ಕೊನೆಗೆ ಅವನಿಗೆ ಉತ್ತರ ಸಿಕ್ಕಿತೇ? ಅವನ ಮೂಲಕ ನಾವೂ ನಮ್ಮ ಬದುಕನ್ನು ಪ್ರತಿಫಲಿಸಿಕೊಳ್ಳಬಹುದೇ? ಅವನಿಗೆ ಆದ ಅನುಭವಗಳು ನಮಗೂ ಆಗಿವೆಯೇ? ಹಾಗಿದ್ದರೆ ನಾವು ಅವುಗಳಿಗೆ ಉತ್ತರ ಕಂಡುಕೊಳ್ಳಬಹುದೇ? ಇವನ್ನೆಲ್ಲ ತಿಳಿಯಲು ನೀವು ಕಾದಂಬರಿಯನ್ನು ಓದಲೇಬೇಕು.

ಸಹನಾ ಹೊಸನಗರದ ಪುಟ್ಟ ಗ್ರಾಮವೊಂದರಲ್ಲಿ ಬೆಳೆಯುವ ಹುಡುಗಿ. ಹದಿವಯಸ್ಸಿನವರೆಗೂ ಚೆನ್ನಾಗಿಯೇ ಇದ್ದ ಹುಡುಗಿಗೆ ಇದ್ದಕ್ಕಿದ್ದಂತೆ ಕ್ಯಾನ್ಸರ್ ಆವರಿಸುತ್ತದೆ. ಇನ್ನೇನು ಜೀವನವೇ ಮುಗಿದುಹೋಯಿತು ಎಂದಾದಾಗ ಕೊನೆಗೂ ಆಕೆ ಅದರಿಂದ ಚೇತರಿಸಿಕೊಂಡು ಜೀವಭಿಕ್ಷೆ ಪಡೆಯುತ್ತಾಳೆ. ನಂತರ ಬಂದೆರೆಗಿದ್ದು ರಸ್ತೆ ಅಪಘಾತ! ಅದರಲ್ಲೂ ಪವಾಡಸದೃಶವಾಗಿ ಬದುಕುಳಿಯುತ್ತಾಳೆ.

ಇಷ್ಟೆಲ್ಲ ಆದಮೇಲೂ ತಾನು ಬದುಕಿದ್ದು ಏಕೆ? ಎಂಬ ಪ್ರಶ್ನೆ ಆಕೆಯನ್ನು ಕಾಡುತ್ತದೆ. ನಂತರ ಆಕೆಗೆ ಸ್ಫುರಿಸಿದ್ದು ಏನು? ಅಷ್ಟಾಗಿಯೂ ಆಕೆ ಬದುಕಿದ್ದು ಏಕೆ? ನಮ್ಮ ಜೀವನದಲ್ಲೂ ಅನಿರೀಕ್ಷಿತ ಘಟನೆಗಳು ನಡೆದಾಗ ನಾವು ಅದಕ್ಕೆ ಸ್ಪಂದಿಸುವ ರೀತಿಯಲ್ಲಿ, ಸಹನಾಳಿಂದ ಕಲಿಯುವಂತದ್ದು ಏನಾದರೂ ಇದೆಯೆ? ಖಂಡಿತ ನೀವು ಇದನ್ನು ಓದಿಯೇ ತಿಳಿಯಬೇಕು.

ಸುಪ್ರೀತ್ ರವರು ಉತ್ತರಭಾರತದ ತೀರ್ಥಕ್ಷೇತ್ರಗಳಾದ ಹರಿದ್ವಾರ, ಉತ್ತರಕಾಶಿ, ಗುಪ್ತಕಾಶಿ, ಬದರಿ ಮುಂತಾದ ಸ್ಥಳಗಳ ಜೀವಶೈಲಿಯನ್ನು, ಸ್ವರೂಪವನ್ನು, ಭೂಗೋಳವನ್ನು ವರ್ಣಿಸಿರುವ ರೀತಿ ಬಹಳ ಖುಷಿಕೊಟ್ಟಿತು. ಹಾಗೆಯೇ ಕ್ಯಾನ್ಸರ್ ರೋಗಿಯೊಬ್ಬ ಒಳಹೋಗಬೇಕಾದ ನೋವು, ಜಂಜಾಟ, ಸಂಕಟಗಳ ವಿವರಣೆ ಬಹಳ ಆಪ್ತ ಎನಿಸಿ ಕೆಲವೊಮ್ಮೆ ಕಣ್ಣಲ್ಲಿ ನೀರು ಜಿನುಗಿತು. ಅವನ್ನೆಲ್ಲ ಈಜಿ ಗೆದ್ದ ಸಹನಾಳಂತ ನೂರಾರು ಜನರಿಗೆ ನನ್ನ ಹೃತ್ಪೂರ್ವಕ ನಮನಗಳು.

ಕಾದಂಬರಿಯ ಹೆಸರೇ ‘ಉತ್ತರ’. ಆದ್ದರಿಂದ ಇದು ಉತ್ತರ ಹುಡುಕುವ ಕಾದಂಬರಿ. ಕೆಲವೊಮ್ಮೆ ಲೇಖಕರು ಕೆಲವು ಪ್ರಶ್ನೆಗಳನ್ನು ಉತ್ತರಿಸಲು ಪ್ರಯತ್ನಿಸಿದ್ದು, ನನಗೆ ಅಷ್ಟು ಹಿತವೆನಿಸಲಿಲ್ಲ. ಹಾಗೆ ಉತ್ತರಿಸಿದರೆ, ಆ ಪ್ರಶ್ನೆಗಳ ಆಳವನ್ನು ಕೊಂದಂತೆ. ಅಧ್ಯಾತ್ಮದಲ್ಲಿ ಉತ್ತರ ಕಂಡುಕೊಳ್ಳುವ ಏಕೈಕ ಮಾರ್ಗವೆಂದರೆ ಪ್ರಶ್ನೆಗಳನ್ನು ಮತ್ತಷ್ಟು ಇನ್ನಷ್ಟು ಆಳಗೊಳಿಸುವುದು. ನಿಜ ಹೇಳಬೇಕೆಂದರೆ ಅಧ್ಯಾತ್ಮದಲ್ಲಿ ಉತ್ತರಗಳೇ ಇಲ್ಲ.

ನಿಮಗೆ ಉತ್ತರ ಸಿಕ್ಕಿತು ಎಂದರೆ ನಿಮ್ಮ ಅನ್ವೇಷಣೆ ಅಲ್ಲಿಗೆ ಮುಗಿಯಿತು ಎಂದರ್ಥ. ಆದರೆ ಕೊಂಚವೂ ಉತ್ತರಗಳ ಘಮ ತೋರಿಸದಂತೆ ಜನ ಓದುವಂತಹ ಕೃತಿಯನ್ನು ರಚಿಸುವುದು ಕಷ್ಟಸಾಧ್ಯವೇ. ಆದ್ದರಿಂದ, ಅಧ್ಯಾತ್ಮದ ಹಾದಿಯನ್ನು ಪರಿಚಯಿಸುವ, ಆ ಕಡೆಗೆ ಜನರನ್ನು ಪ್ರೇರೇಪಿಸುವ, ಅಧ್ಯಾತ್ಮ ಎಂದರೆ ನೀವು ಸಂಸಾರ ತ್ಯಜಿಸಿ ಬೆಟ್ಟದ ಮೇಲೆ ಹೋಗಿ ಕೂರಬೇಕು ಅಂತಲೇ ಇಲ್ಲ – ನಿಮ್ಮ ವ್ಯಾವಹಾರಿಕ ದೈನಂದಿನ ಜೀವನದಲ್ಲೂ ಅಧ್ಯಾತ್ಮವನ್ನು ಅವಿಭಾಜ್ಯ ಅಂಗವಾಗಿಸಿಕೊಂಡು ಆನಂದಮಯ ಜೀವನವನ್ನು ನಡೆಸಬಹುದು ಎಂದು ತೋರಿಸಿಕೊಡುವ ಈ ಕೃತಿಯನ್ನು ನಾವು ಮುಕ್ತಕಂಠದಿಂದ ಶ್ಲಾಘಿಸಬೇಕು.

ಇನ್ನು ಕೆಲವರಿಗೆ ನಿಜವಾದ ಯೋಗಿಗಳು, ಅಧ್ಯಾತ್ಮ ಪ್ರಕ್ರಿಯೆಗಳು ಸಂಭವಿಸಲು ಸಾಧ್ಯವಿರುವುದು ಹಳೆಯಕಾಲದಲ್ಲಿ ಮಾತ್ರ ಎಂಬ ಭ್ರಮೆಯಿರುತ್ತದೆ. ಅಧ್ಯಾತ್ಮ ಸಾಧಕರು ಈಗಲೂ ಇದ್ದಾರೆ, ಸಾಧ್ಯತೆಗಳು ಈಗಲೂ ಲಭ್ಯವಿದೆ ಎಂದು ಸಾರುವಲ್ಲಿ ಕಾದಂಬರಿ ಯಶಸ್ವಿಯಾಗುತ್ತದೆ. 

ಕೆಲವು ಅಧ್ಯಾತ್ಮ ಸಾಧನೆಗಳು, ‘ಕರ್ಮ’ ನಮ್ಮ ಜೀವನ ಹಾಗೂ ಜನ್ಮದ ಮೇಲೆ ಹೊಂದಿರುವ ಪರಿಣಾಮಗಳು ಮತ್ತು ಪರಿಹಾರ – ಇವುಗಳ ಕುರಿತು ಇಷ್ಟು ಆಳವಾಗಿ ಪರಿಚಯಿಸಿರುವ ಕನ್ನಡದ ಕಾದಂಬರಿಗಳು ಅತ್ಯಪರೂಪವೇ ಸರಿ. ಈ ಎಲ್ಲಾ ಕಾರಣಕ್ಕಾಗಿ ಇದು ನೀವು ಓದಲೇಬೇಕಾದ ಪುಸ್ತಕ.

ಸುಪ್ರೀತ್ ರಿಗೆ ಹೃತ್ಪೂರ್ವಕ ಅಭಿನಂದನೆಗಳು.

‍ಲೇಖಕರು Admin

15 February, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading