ಶ್ರೀ ವಿದ್ಯಾ
ಹೀಗೆ ಓದುತ್ತಾ ಫೇಸ್ ಬುಕ್ ನೊಳಗೆ ಮುಳುಗಿ ಹೋಗಿದ್ದಾಗ ಒಂದು ಮೆಸೇಜ್ ಬಂತು. ಏನು ಇರಬಹುದು ನೋಡಿದ್ರೆ ..’ಮೇಡಮ್ ನಿಮ್ಮಎಜುಕೇಶನ್ ಕ್ವಾಲಿಫಿಕೇಶನ್ ಏನು ಹೇಳಿ ಎಂದು ಬರೆದಿತ್ತು. ಎಷ್ಟೂ ಓದಿದ್ರೂ ಅನುಭವ ಮುಖ್ಯ ಅಂದುಕೊಂಡು, ನನ್ನ ಮಾಧ್ಯಮದಲ್ಲಿನ ಕೆಲಸದ ವಿವರ ಹಂಚಿಕೊಂಡೆ. ಇದಲ್ಲ ಮೇಡಮ್ ಎಷ್ಟು ಓದಿದ್ದೀರಿ ಅಂದ್ರು ಅತ್ತ ಕಡೆಯಿಂದ. ೧೦ನೇ ತರಗತಿ ಪಾಸ್ ಅಂದುಬಿಟ್ಟೆ. ಮತ್ತೆ ವಿವರಿಸಿದ್ರು.. ‘ಪುತ್ತೂರಿನ ಕಾಲೇಜೊಂದರ ಪತ್ರಿಕೋದ್ಯಮ ವಿಭಾಗದಲ್ಲಿ ಉಪನ್ಯಾಸಕ ಹುದ್ದೆ ಖಾಲಿ ಇದೆ ಅದಕ್ಕೆ ಕೇಳಿದೆ ಅಂದ್ರು’.
ಈ ‘೧೦ ನೇ ತರಗತಿ ಪಾಸ್’ ಅಂದಾಗ ಯಾಕೋ ನಾನು ಓದಿದ ಎಸ್ಡಿಎಮ್ ಹೈಸ್ಚೂಲ್ ಉಜಿರೆ ನೆನಪಾಯಿತು. ಈಗಿನ ಮಕ್ಕಳ ಹಾಗೆ ಶಾಲೆ. ಪರೀಕ್ಷೆ, ಅಂಕಗಳ ಬಗ್ಗೆ ತಲೆಕೆಡಿಸಿಕೊಳ್ಳದ ಆ ದಿನಗಳು. ನನ್ನೊಳಗೆ ನಾನು ಕೂಡ ಸ್ಪರ್ಧೆ ಯೊಡ್ಡದ ಸೋಂಬೇರಿ ಮನಸ್ಸು. ಅಲ್ಲಿಂದ ಅಲ್ಲಿಗೆ ಎಲ್ಲವೂ ಶಾಂತವಾಗಿ ನಡೆಯುತಿತ್ತು . ಯಾವುದೇ ಯಾರಾ ಒತ್ತಡಗಳಿಲ್ಲದೆ.. ಮುಂದೆ ಉತ್ತಮ ಮನುಷ್ಯರಾಗಿ ಬಾಳಿ ಅನ್ನುತ್ತಿದ್ದ ಅಮ್ಮನ ಮಾತುಗಳು ತಲೆಗೆ ಹೊಕ್ಕಂತೆಯೂ ಇರಲಿಲ್ಲ. ಪರಿಣಾಮ, ಕಡಿಮೆ ಬಂತು ಅಂಕಗಳು. ಅಷ್ಟೇ ಅಲ್ಲಿಂದ ಶುರುವಾಗಿದ್ದೆ ಈ ಟೆಂತ್ ಪಾಸ್ ರಾಮಾಯಣ. ಎಲ್ಲೇ ಹೋಗು.. ಏನೇ ಹೊಸದನ್ನು ಮಾಡು ೧೦ ನೇ ತರಗತಿ ಅಂಕಗಳ ಪ್ರಮಾಣಪತ್ರ ಬೇಕೇ ಬೇಕು. ಅಯ್ಯೋ
ಈ ವಿಚಾರ ಆಗಲೇ ಗೊತ್ತಿರ್ತಿದ್ರೆ.. ಹೆಚ್ಚು ಅಂಕಗಳನ್ನು ಪಡೆಯುವ ಬಗ್ಗೆ ಮನಸ್ಸಾದ್ರೂ ಮಾಡಬಹುದಿತ್ತು. ಕಡೆಯದಾಗಿ ಸಿಂಗಾಪುರ ಸರ್ಕಾರಕ್ಕೂ ನನ್ನ ಅಂಕಗಳು ಗೊತ್ತಾಗಿಬಿಟ್ಟಿವೆ. ಇಮ್ಮಿಗ್ರೇಶನ್ & ಚೆಕ್ಪಾಯಂಟ್ಸ್ ಅತಾರಿಟೀ ಏನು ತಿಳಿದುಕೊಂಡಿತ್ತೋ ಏನೋ. ಅಂದ ಹಾಗೆ ೧೦ನೇ ತರಗತಿ ಪಾಸ್ ಅನ್ನೋದೇ ದೊಡ್ಡ ವಿಚಾರ.

‘ವಾಟ್ ನೆಕ್ಸ್ಟ್ ಆಫ್ಟರ್ ಟೆಂತ್’ ಎನ್ನುವ ಈ ಪದಗಳು ಈಗಂತೂ ದೊಡ್ಡ ವ್ಯಾಪಾರದ ಸೊತ್ತು. ಅರ್ಧಕರ್ಧ ಮಾಹಿತಿಗಳು ಕೇವಲ ಹಣ ಮಾಡುವ ಜೊತೆಗೆ ಹೆತ್ತವರ ಹಾಗೂ ಮಕ್ಕಳನ್ನು ಗೊಂದಲಕ್ಕೀಡು ಗೊಳಿಸುವ ವಿಚಾರ. ನಾಯಿಕೊಡೆಗಳಂತೆ ಬೆಳೆದ ಕಾಲೇಜುಗಳು, ಕೋರ್ಸುಗಳೇ ಇದಕ್ಕೆ ಮುಖ್ಯ ಕಾರಣ.
ನಮ್ಮ ಕಾಲದಲ್ಲಿ ಅದೆಲ್ಲಾ ಇರಲಿಲ್ಲಪ್ಪಾ. ೧೦ ನೇ ತರಗತಿ ಪಾಸಾಯಿತೋ ನಂತರ ಕಣ್ಣುಮುಚ್ಚಿಕೊಂಡು ಪಿಯುಸಿ ಯ ಆಯ್ಕೆ. ದುಡ್ಡಿದ್ದವ ಸೈನ್ಸ್ ಕೋರ್ಸ್.. ಪಾಪದವ ಆರ್ಟ್ಸ್. ಆಗ ನಮ್ಮದು ಕಷ್ಟದ ಜೀವನ. ಸೈನ್ಸ್ ಗೆ ಶುಲ್ಕ ಹೆಚ್ಚು. ಇನ್ನೂ ಪ್ರಾಕ್ಟಿಕಲ್.. ಲ್ಯಾಬ್ ಅದು ಇದು ಹೇಳುತ್ತಾ ಹೆಚ್ಚುವರಿ ದುಡ್ಡು ತೆರಬೇಕಾಗಿ ಬಂದರೆ ಪಾಪ ಅಪ್ಪನಿಗೆ ಕಷ್ಟ ಆದೀತು ಅನ್ನುತ್ತಾ ಆರ್ಟ್ಸ್ ಗೆ ಸೇರಿದ್ದು ಆಯಿತು.
ಇದೀಗ ವಿದೇಶಿದಲ್ಲಿ ನೆಲೆಸಿರುವ ನನಗೆ ಅದೇನೋ ಕುತೂಹಲ. ಇಲ್ಲಿನ ಶಿಕ್ಷಣದ ಶೈಲಿಯೇ ಬೇರೆ. ೩ನೇ ಕ್ಲಾಸ್ ತನಕ ಸಣ್ಣ ಮಕ್ಕಳು ಅನ್ನುವ ಪರಿಗಣನೆ. ೪ನೇ ತರಗತಿ ಶುರುವಾಯಿತೋ ಮತ್ತೆ ಹಿಂದೆ ನೋಡುವ ಪ್ರಶ್ನೆಯೇ ಇಲ್ಲ. ಪಠ್ಯಪುಸ್ತಕಗಳು , ನೋಟುಬುಕ್ ಗಳು , ಪ್ರಾಜೆಕ್ಟ್ ವರ್ಕ್ ಗಳು ಎಲ್ಲವೂ ಕ್ರಮ ಪ್ರಕಾರ ಸಾಗುತ್ತವೆ. ಆದರೆ ಪರೀಕ್ಷೆಯಲ್ಲಿ ಯಥಾಪ್ರಕಾರ ಪುಸ್ತಕದ ಪ್ರಶೆಗಳು ಬರುವುದಿಲ್ಲ. ಪಠ್ಯಗಳು ಕೇವಲ ಒಂದು ಮಾದರಿಗಷ್ಟೇ. ಪುಸ್ತಕದ ಬದನೆಕಾಯಿ ಸಹಾಯಕ್ಕೆ ಬರುವುದೇ ಇಲ್ಲ. ಹೀಗೆ ಮುಂದುವರಿಯುವ ಇಲ್ಲಿನ ಮಕ್ಕಳ ಶಿಕ್ಷಣ, ೧೦ ನೇ ತರಗತಿಯ ಬಳಿಕ ಹೊಸ ಆಯಾಮಕ್ಕೆ ತಿರುಗಿ ಬಿಡುತ್ತವೆ.
ನಾವೆಲ್ಲಾ ಸೈನ್ಸ್ ಆರ್ಟ್ಸ್ ಕಾಮರ್ಸ್ ಕೋರ್ಸ್ ಗಳ ಲೆಕ್ಕಾಚಾರದಲ್ಲಿ ಇದ್ದರೆ, ಇಲ್ಲಿನವರು ವಿಜ್ಞಾನ ಮತ್ತು ಆರ್ಟ್ಸ್ ಇವರೆಡರಲ್ಲಿ ಆಯ್ಕೆ ಮಾಡಿಕೊಳ್ಳಬೇಕು.
ಅಷ್ಟೇ ಅಲ್ಲಾ ಇಲ್ಲೊಂದು ಅಚ್ಚರಿ ಇದೆ. ವಿಜ್ಞಾನ ಆಯ್ಕೆ ಮಾಡುವ ವಿದ್ಯಾರ್ಥಿಗಳಿಗೆ ಮೂರು ಪ್ರಮುಖ ವಿಷಯಗಳು. ನಾಲ್ಕನೇ ವಿಷಯ ಅರ್ಟ್ಸ್ ಕೋರ್ಸ್ನ ಒಂದು ಸಬ್ಜೆಕ್ಟ್ ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯ. ಹಾಗೆಯೇ ಆರ್ಟ್ಸ್ ಕೋರ್ಸ್ ನ ವಿದ್ಯಾರ್ಥಿಗಳಿಗೆ ಸೈನ್ಸ್ ನ ಒಂದು ವಿಷಯ ಕಡ್ಡಾಯ. ಹೀಗೆ ಆಯ್ಕೆ ಮಾಡುವ ವಿಷಯಕ್ಕೆ ಕಾನ್ಟ್ರಾಸ್ಟಿಂಗ್ ಸಬ್ಜೆಕ್ಟ್ (Contrasting Subject) ಎಂದು ಕರೆಯಲಾಗುತ್ತದೆ.
ಉದಾಹರಣೆಗೆ ಒಬ್ಬ ವಿಜ್ಞಾನದ ವಿದ್ಯಾರ್ಥಿಗೆ Chemestry, Maths ಕಡ್ಡಾಯದ ವಿಷಯಗಳು. Physics ಮತ್ತು Biology ನಲ್ಲಿ ಮಕ್ಕಳ ಆಯ್ಕೆ. ಅಲ್ಲಿಗೆ ಮೂರು ಸಬ್ಜೆಕ್ಟ್ಸ್. ಇನ್ನೊಂದು ಕಾನ್ಟ್ರಾಸ್ಟಿಂಗ್ ಸಬ್ಜೆಕ್ಟ್ ಆರ್ಟ್ಸ್ ಕೋರ್ಸ್ ನಿಂದ. ಆಯಾ ಕಾಲೇಜುಗಳಲ್ಲಿ ವಿಭಿನ್ನ ಕಾಂಬಿನೇಶನ್ ಗಳನ್ನು ಕಾಣಬಹುದು. ಇವುಗಳಲ್ಲಿEconomics, Historty, Art, Music, Geography , Forsighn languages, English Literature ಇತ್ಯಾದಿಗಳಲ್ಲಿ ಆಯ್ಕೆ ಮಾಡಬಹುದು. ಹಾಗೆಯೇ ಆರ್ಟ್ಸ್ ನ ವಿದ್ಯಾರ್ಥಿಗಳಿಗೆ Maths ಹಾಗೂ Knwoledge and Inquiry ಎನ್ನುವ ವಿಷಗಳಲ್ಲಿ ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯ.
೧೦ನೇ ತರಗತಿ ನಂತರ ಆಯ್ಕೆ ಮಾಡುವ ವಿಷಯಗಳಲ್ಲೂ H 1 ಹಾಗೂ H2 ಎಂಬ ಆಯ್ಕೆಗಳಿವೆ. { ವಿಷಯಗಳ ಉನ್ನತ ಮಟ್ಟವನ್ನು ಸೂಚಿಸುವ ವಿಭಾಗ ಗಳಾಗಿವೆ } ಪಿಯುಸಿ ಮುಗಿಸಲು ಇಲ್ಲಿನ ವಿದ್ಯಾರ್ಥಿಗಳು ಒಟ್ಟೂ ೪ ವಿಷಯಗಳಲ್ಲಿ ಮೂರು ಸಬ್ಜೆಕ್ಟ್ ಹೈಯರ್ ೨ ಮತ್ತು ಒಂದು ಹೈಯರ್ ೧ ವಿಷಯಗಳನ್ನು ಓದುತ್ತಿರಬೇಕು. ನಾಲ್ಕು ವಿಷಯಗಳನ್ನು H2 ಮಟ್ಟದಲ್ಲಿ ಓದುವ ಅವಕಾಶವಿದ್ದು, ಆದರೆ ವಾರ್ಷಿಕ ಪರೀಕ್ಷೆಯ ವೇಳೆಗೆ ಅಂಕಗಳನ್ನು ಮೂರು ಸಬ್ಜೆಕ್ಟ್ ಹೈಯರ್ ೨ ಮತ್ತು ಒಂದು ಹೈಯರ್ ೧ ಗೆ ಅನುಗುಣವಾಗಿ ವಿಭಜಿಸಲಾಗುತ್ತದೆ.

ಇಷ್ಟಾಗಿ ಕೊನೆಯ ಎರಡು ವಿಷಯಗಳು Project Paper ಮತ್ತು General paper. ಇವೆರಡೂ ವಿಷಯಗಳು ಸಿಂಗಾಪುರದಲ್ಲಿ ಪಿಯುಸಿ ಓದುವ ಎಲ್ಲಾ ಮಕ್ಕಳಿಗೆ ಕಡ್ಡಾಯ. ಕಾಲೇಜು ನೀಡುವ ಕೆಲವೊಂದು ಪ್ರಮುಖ ಟಾಪಿಕ್ ಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳ ತಂಡವನ್ನು ರಚಿಸಲಾಗುತ್ತದೆ. ವಿವಿಧ ಆಯಾಮಗಳಲ್ಲಿ ಅಧ್ಯಯನ ನಡೆಸಿ ಮಾಹಿತಿ ಸಂಗ್ರಹಿಸಲಾಗುತ್ತದೆ.
ಇನ್ನೊಂದು ವಿಷಯ ಜನಲರ್ ಪೇಪರ್ ಇದರಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ. ಇವು ಎರಡು ವಿಷಯಗಳು ಪ್ರಥಮ ಪಿಯುಸಿ ಯಲ್ಲಿ ಮಾತ್ರ ಇದ್ದು ಅದೇ ವರ್ಷ ವಾರ್ಷಿಕ ಪರೀಕ್ಷೆಯು ನಡೆಯುತ್ತದೆ. ಪಿಯುಸಿ ಹೋಗಲು ಬಯಸದ ವಿದ್ಯಾರ್ಥಿಗಳಿಗೆ ಮೂರು ವರ್ಷದ ಪಾಲಿಟೆಕ್ನಿಕ್ ಕೋರ್ಸ್ ಗಳ ಅವಕಾಶವಿದೆ. ಇದಲ್ಲದೆ ಅಂತಾರಾಷ್ಟ್ರ್ರೀಯ ಶಾಲೆಗಳು ಅವರ ಶೈಕ್ಷಣಿಕ ಕ್ರಮಕ್ಕೆ ಅನುಗುಣವಾಗಿ ಅಧ್ಯಯನದಲ್ಲಿ ನಿರತವಾಗಿವೆ.
ಇವಿಷ್ಟು What next after 10th ಗೆ ಸಣ್ಣ ಮಾರ್ಗ. ಇನ್ನೂ ಇದರ ಆಳಕ್ಕೆ ಹೋದಂತೆ ಮತ್ತಷ್ಟು ವಿಚಾರಗಳು ನಮಗೆ ಲಭಿಸುತ್ತವೆ. ಹೊರಗಿನವರಿಗೆ ತುಂಬಾ ದುಬಾರಿ ವಿದೇಶದಲ್ಲಿ ವಿದ್ಯಾಭ್ಯಾಸ. ಆದರೆ ಇಲ್ಲಿನ ನಾಗರೀಕರಿಗೆ ಶುಲ್ಕದಲ್ಲಿ ಶ್ರೀಮಂತ ಬಡವ ಎನ್ನುವ ಪಕ್ಷಪಾತ ಧೋರಣೆ ಇಲ್ಲ. ಆದರೆ ಮಕ್ಕಳಲ್ಲಿ ಕಲಿಯುವ ಮನಸ್ಸು ಇರಬೇಕಷ್ಟೆ.






0 Comments