ಗೋಪಾಲ ವಾಜಪೇಯಿ
ಬಸವರಾಜ ಕಟ್ಟೀಮನಿ : ಮರೆಯಲಾಗದ ಮಹಾ ಕಾದಂಬರಿಕಾರ ಪತ್ರಕರ್ತ
ಇಂದು ಈ ಸಾಹಿತಿಯ ಜನ್ಮದಿನ. (ಹುಟ್ಟಿದ್ದು : 1919 ಅಕ್ಟೋಬರ್ 5) ಈ ಸಂದರ್ಭದಲ್ಲಿ ಒಂದೆರಡು ನೆನಪುಗಳು…
ಈ ‘ಸಂಚಾರೀ ಸಂಪಾದಕ’ ಆಗಾಗ ಹುಬ್ಬಳ್ಳಿಯ ನಮ್ಮ ಕಚೇರಿಗೆ (ಕರ್ಮವೀರ) ಬಂದು ತಾಸುಗಟ್ಟಲೆ ಹರಟುತ್ತಿದ್ದರು. ಆದರೆ ಅದು ‘ಕಾಡು ಹರಟೆ’ಯಲ್ಲ… ಮಾತು ಮಾತು ಮಥಿಸಿ ಬರುತ್ತಿತ್ತು ಹೊಸದೊಂದು ವಿಚಾರ… ಹೊಸದೊಂದು ಹೊಳಹು. ತುಂಬ ಆತ್ಮೀಯ. ಆದರೆ ಆಗದವರ ಮೇಲೆ ಅವರು ಯಾವಾಗ ಯಾವ ರೀತಿ ವ್ಯಂಗ್ಯ ಬಾಣ ಎಸೆಯುತ್ತಾರೆ ಎಂಬುದನ್ನು ಊಹಿಸಲು ಆಗುತ್ತಿರಲಿಲ್ಲ. ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರಿಗೆ ಹುಬ್ಬಳ್ಳಿಯಲ್ಲೊಂದು ಸನ್ಮಾನ. ಅಭಿನಂದನಾ ಭಾಷಣ ಮಾಡಲೆಂದು ಬಂದ ಇತರರ ಜೊತೆ ಕಟ್ಟೀಮನಿಯವರೂ ವೇದಿಕೆಯ ಮೇಲಿದ್ದರು. ಇನ್ನೊಂದು ಬದಿಗೆ ಕಾದಂಬರಿಗಾತಿ ಶ್ರೀಮತಿ ಗೀತಾ ಕುಲಕರ್ಣಿ. ಇಬ್ಬರಿಗೂ ಆಗಿಬರುತ್ತಿರಲಿಲ್ಲ. ಕಟ್ಟೀಮನಿಯವರು ಎದ್ದು ನಿಂತವರೇ, ಭಾಷಣ ಶುರು ಮಾಡಿ ವೇದಿಕೆಯ ಮೇಲಿರುವ ಎಲ್ಲರ ಹೆಸರನ್ನೂ ‘ಶ್ರೀಮಾನ್ —ಯವರೇ…’ ಎಂದು ಹೇಳುತ್ತಾ ಹೇಳುತ್ತಾ ”…ಶ್ರೀಮಾನ್ ಗೀತಾ ಕುಲಕರ್ಣಿಯವರೇ…” ಎಂದುಬಿಟ್ಟರು. ಹೊತ್ತಿತು ನೋಡಿ ‘ಬೆಂಕಿ’… ಉರಿಯತೊಡಗಿದ ಅದನ್ನು ಆರಿಸಲು ಸಂಘಟಕರು ಹರಸಾಹಸಪಡಬೇಕಾಯಿತು.
ಬೆಳಗಾವಿಯ ಸಾಹಿತ್ಯ ಸಮ್ಮೇಳನದ ಕೊನೆಯ ದಿನ. ಕಟ್ಟೀಮನಿಯವರೇ ಸಮ್ಮೇಳನಾಧ್ಯಕ್ಷರು. ಸಮಾರೋಪಕ್ಕೆ ಬಂದಿದ್ದವರು ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರು. ಅದೇನಾಯಿತೋ ಗೊತ್ತಿಲ್ಲ, ಅವರನ್ನು ಪದೇ ಪದೇ ”ಕೇಳಿಸ್ಸ್ಕೊಂಡ್ರಾ ಬುದ್ದೀ…” ”ತಿಳೀತ್ರಾ ಬುದ್ದೀ…” ಎಂದು ಜಾಡಿಸುತ್ತಲೇ ಇದ್ದರು ಕಟ್ಟೀಮನಿ.
ಗೋಕಾಕ್ ಚಳುವಳಿಯ ಸಂದರ್ಭ. ಮಿತ್ರ ಜಿ. ಎಚ್. ರಾಘವೇಂದ್ರರೊಂದಿಗೆ ನಾವು ಹುಬ್ಬಳ್ಳಿ-ಧಾರವಾಡಗಳಲ್ಲಿ ಬೀದಿ ನಾಟಕ ಪ್ರದರ್ಶಿಸುತ್ತಲಿದ್ದಾಗ ಕಟ್ಟೀಮನಿಯವರು ಜೊತೆ ಇರುತ್ತಿದ್ದರು. ನಾಟಕ ಮುಗಿದ ಮೇಲೆ ಬಂದು ಬೆನ್ನು ತಟ್ಟುತ್ತಿದ್ದರು.
ಅವರ ‘ಜರತಾರಿ ಜಗದ್ಗುರು’ ಮುಂತಾದ ಕಾದಂಬರಿಗಳು ಒಂದು ಕಾಲದಲ್ಲಿ ಜನರನ್ನು ರೋಚ್ಚಿಗೆಳುವಂತೆ ಮಾಡಿದ್ದೂ ಉಂಟು. ಆದರೆ ಅದೇನೇ ಇರಲಿ, ನಾನು ಅವರ ‘ಮಾಡಿ ಮಾಡಿದವರು’ ವಿದ್ಯಾರ್ಥಿ ದೆಸೆಯಲ್ಲೇ ಓದಿ, ಅವರ ಅಭಿಮಾನಿಯಾದವ.







ಒಳ್ಳೆ ಪ್ರಸಂಗವನ್ನು ತೆರೆದಿತ್ತಿದ್ದೀರಿ:)
chennagide