ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿವಾಸ ಪ್ರಭು ಅಂಕಣ- ಹೊಸ ಭಾವಲೋಕದ ಹೊಸ್ತಿಲಲ್ಲಿ ನಿಂತಿದ್ದೇನೆ!…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

40

1977—1980.. ನಾನು ದೆಹಲಿಯ ನಾಟಕಶಾಲೆಯಲ್ಲಿ ನಾಟಕಕಲೆಯನ್ನು ಅಭ್ಯಸಿಸಿದ ಸಮಯ. ಈ ಮೂರು ವರ್ಷಗಳ ಅವಧಿಯಲ್ಲಿ ರಜೆಯ ಸಮಯದಲ್ಲಿ ಬೆಂಗಳೂರಿಗೆ ಬಂದಾಗಲೆಲ್ಲಾ ಒಂದೊಂದು ನಾಟಕವನ್ನು ಮಾಡಿಸಿ ಹೋಗುತ್ತಿದ್ದೆ.

ಬೆಳ್ಳಿಗುಂಡು,ಅಂತಿಮಯಾತ್ರೆ,ಸಿಕ್ಕು,ತಲೆಗೊಂದು ಕೋಗಿಲೆ ಹಾಗೂ ನೆರಳಿಲ್ಲದ ಜೀವಗಳು—ಇವು ನಾನು ಹಾಗೆ ಮಾಡಿಸಿದ ನಾಟಕಗಳು.ರಜೆಗೆಂದು ಬೆಂಗಳೂರಿಗೆ ಬಂದಾಗಲೆಲ್ಲಾ ಪ್ರಜಾವಾಣಿ ಕಛೇರಿಗೆ ಹೋಗಿ YNK ಅವರನ್ನು ಭೇಟಿಯಾಗುತ್ತಿದ್ದೆ. ಆಗ ಪ್ರಜಾವಾಣಿಯ ಅತ್ಯಂತ ಜನಪ್ರಿಯ ಸಾಪ್ತಾಹಿಕ ಪುರವಣಿ ವಿಭಾಗದ ಚುಕ್ಕಾಣಿ ಹಿಡಿದಿದ್ದ ಬಿ.ವಿ.ವೈಕುಂಠರಾಜು,ಜಿ.ಎನ್.ರಂಗನಾಥರಾವ್ ಹಾಗೂ ಜಿ.ಎಸ್.ಸದಾಶಿವ—ಈ ಪ್ರಸಿದ್ಧ ತ್ರಿಮೂರ್ತಿಗಳೊಟ್ಟಿಗೂ ಸಾಕಷ್ಟು ಸಮಯ ಕಳೆದು ನಾಟಕ ಸಾಹಿತ್ಯ—ಪ್ರಯೋಗಗಳ ಬಗ್ಗೆ ಒಂದಷ್ಟು ಚರ್ಚಿಸಿ ಮಾರ್ಗದರ್ಶನವನ್ನೂ ಪಡೆಯುತ್ತಿದ್ದೆ.

ಸದಾಶಿವರಿಗಂತೂ ಅವರ ‘ಸಿಕ್ಕು’ ಕತೆಯನ್ನು ನಾನುನಾಟಕವಾಗಿ ರೂಪಾಂತರಿಸಿ ಯಶಸ್ವಿಯಾಗಿ ಪ್ರದರ್ಶಿಸಿದ್ದು ಖುಷಿ ತಂದಿತ್ತು. ಒಮ್ಮೆ ಹೀಗೇ ಪ್ರಜಾವಾಣಿಗೆ ಹೋಗಿದ್ದಾಗ ಬಿ.ವಿ.ವೈಕುಂಠರಾಜು ಅವರು ಅವರ ಎರಡು—ಮೂರು ಕಾದಂಬರಿಗಳನ್ನು ನನ್ನ ಕೈಗೆ ಕೊಟ್ಟು,’ಇದರಲ್ಲಿ ಯಾವುದಾದರೂ ಕಾದಂಬರಿಯನ್ನು ನಾಟಕ ಮಾಡಬಹುದೇ ನೋಡು..ನನಗನ್ನಿಸುವ ಮಟ್ಟಿಗೆ ಪರ್ಯಟನ ಕಾದಂಬರಿಯನ್ನು ನಾಟಕವಾಗಿ ರೂಪಾಂತರಿಸುವುದು ಸುಲಭವಾಗಬಹುದೇನೋ..”ಎಂದರು.”ಆಗಲಿ ಸರ್, ಓದಿ ಹೇಳುತ್ತೇನೆ” ಎಂದು ಪುಸ್ತಕಗಳನ್ನು ತೆಗೆದುಕೊಂಡು ಅಲ್ಲಿಂದ ಹೊರಟೆ. ರಜೆ ಮುಗಿಸಿಕೊಂಡು ಕೊನೆಯ ನಾಲ್ಕಾರು ತಿಂಗಳ ವ್ಯಾಸಂಗಕ್ಕೆಂದು ದೆಹಲಿಗೆ ಹೊರಟಾಗ ರಾಜು ಅವರ ಕಾದಂಬರಿಗಳೂ ನನ್ನೊಟ್ಟಿಗೆ ಪ್ರಯಾಣ ಬೆಳೆಸಿದವು.

ದೆಹಲಿಗೆ ಬರುತ್ತಿದ್ದಂತೆ ರಾಜು ಅವರ ಕಾದಂಬರಿಗಳನ್ನು ಕೈಗೆತ್ತಿಕೊಂಡೆ. ಅವರೇ ಸೂಚಿಸಿದ್ದ ‘ಪರ್ಯಟನ’ ನನಗೇಕೋ ಅಷ್ಟಾಗಿ ಹಿಡಿಸಲಿಲ್ಲ. ಅದಕ್ಕಿಂತಲೂ ‘ಉದ್ಭವ’ ಕಾದಂಬರಿಯನ್ನು ವಿಡಂಬನಾತ್ಮಕ ನಾಟಕವಾಗಿ ರೂಪಾಂತರಿಸಿದರೆ ಯಶಸ್ವಿಯಾಗಬಹುದೆನಿಸಿತು. ‘ಉದ್ಭವ’ ಕಾದಂಬರಿಯ ಕೇಂದ್ರದಲ್ಲಿರುವುದು ಒಂದು ರಸ್ತೆ. ರಾಘಣ್ಣ ಅವರಿವರಿಗೆ ಬೇಕಾದ ಕೆಲಸಗಳನ್ನು ಮಾಡಿಕೊಟ್ಟು ಹೊಟ್ಟೆ ಹೊರೆದುಕೊಳ್ಳುತ್ತಿರುವ ಒಬ್ಬ ಮಧ್ಯವರ್ತಿಯಂತಹ ವ್ಯಕ್ತಿ.

ಆ ಊರಿನ ಆ ಕಿರಿದಾದ ರಸ್ತೆಯಲ್ಲಿ ನಡೆಯುವ ಒಂದು ಅಪಘಾತ ರಾಘಣ್ಣನಿಗೆ ಹೊಸ ಹೊಸ ಹುನ್ನಾರದ ಸುಳಿವು ನೀಡುತ್ತದೆ. “ರಸ್ತೆ ಅಗಲ ಮಾಡ್ತಾರಂತೆ” ಎಂದು ತನ್ನ ಚಮಚಾಗಳ ಮೂಲಕ ತಾನೇ ಸುದ್ದಿಹಬ್ಬಿಸಿ ಆ ರಸ್ತೆಯ ಅಕ್ಕಪಕ್ಕಗಳಲ್ಲಿರುವ ಅಂಗಡಿ ಮುಂಗಟ್ಟುಗಳ ಮಾಲೀಕರು ತನ್ನ ಬಳಿ ಮಾರ್ಗದರ್ಶನಕ್ಕೆ ಬರುವಂತೆ ಮಾಡುತ್ತಾನೆ. ಆ ಮಾಲೀಕರಿಗೆ ರಸ್ತೆ ಅಗಲವಾಗುವುದರಿಂದ ಅನುಕೂಲವೇ ಆಗುವಂತಿದ್ದರೂ ಮತ್ತೊಂದು ಬದಿಯ ವ್ಯಾಪಾರಿಗಳಿಗೆ ಅದರಿಂದ ತೊಂದರೆ ಆಗುತ್ತಿದ್ದುದರಿಂದ ಅವರು ರಸ್ತೆ ಅಗಲೀಕರಣ ಮಾಡಿಸದಂತೆ ಒತ್ತಡ ಹೇರುತ್ತಾರೆ.

ಕೊನೆಗೆ ರಸ್ತೆ ಅಗಲವಾಗದಂತೆ ತಡೆಯಲು ನಿರ್ಧರಿಸುವ ರಾಘಣ್ಣ, ತನಗೆ ಬೇಕಾದ ವ್ಯಾಪಾರಿಗಳ ಅಂಗಡಿಗಳಿಗೆ ನೇರವಾಗಿ ಅಲ್ಲಿದ್ದ ಪಾರ್ಕ್ ನಲ್ಲಿ ಗಣಪತಿಯ ಕಲ್ಲಿನ ಮೂರ್ತಿಯೊಂದನ್ನು ಮಣ್ಣಿನಲ್ಲಿ ಹೂತು,”ಅದು ಉದ್ಭವಮೂರ್ತಿ” ಎಂದು ಕಥೆ ಕಟ್ಟಿಬಿಡುತ್ತಾನೆ! ಕೆಲವೇ ದಿನಗಳಲ್ಲಿ ಅದೊಂದು ಯಾತ್ರಾಸ್ಥಳವೇ ಆಗಿಬಿಡುತ್ತದೆ. ಹೀಗೆ ಜನರ ಸ್ವಾರ್ಥ—ಮೌಢ್ಯಗಳನ್ನೇ ಬಂಡವಾಳವಾಗಿ ಮಾಡಿಕೊಂಡು ತನ್ನ ಬೇಳೆ ಬೇಯಿಸಿಕೊಳ್ಳುತ್ತಾ ಹೋಗುತ್ತಾನೆ ರಾಘಣ್ಣ. ಒಟ್ಟಾರೆ ಕಾದಂಬರಿಯಲ್ಲಿ ರಾಘಣ್ಣ ಚಾಣಾಕ್ಷತನದಿಂದ ರೂಪಿಸುವ ತಂತ್ರಗಳು,ತನ್ನ ವಿರೋಧಿಗಳನ್ನು ಸದೆಬಡಿಯಲು ರೂಪಿಸುವ ಪ್ರತಿತಂತ್ರಗಳು, ಯಾವುದನ್ನೂ ಪ್ರಶ್ನಿಸದೇ ಒಪ್ಪಿಕೊಂಡು ಅಪ್ಪಿಕೊಳ್ಳುವ ಜನಸಾಮಾನ್ಯರ ಭೋಳೆತನ—ಪೆದ್ದುತನಗಳು ಕಾದಂಬರಿಯ ಮುಖ್ಯ ಹೂರಣ.

ನಾಟಕಕ್ಕೆ ಒಗ್ಗಿಸಬಹುದಾದ ಕಾದಂಬರಿ ಇದು— ಎಂದು ನನಗೆ ಖಾತ್ರಿಯಾಗಿ ಅನ್ನಿಸಿದರೂ ಎಲ್ಲೋ ಏನೋ ಒಂದು ಕೊರತೆ ಕಾಡುತ್ತಿದೆ ಎಂದು ಅನ್ನಿಸತೊಡಗಿತು. ಮತ್ತಷ್ಟು ಚಿಂತನ-ಮಂಥನದ ನಂತರ ನನ್ನನ್ನು ಕಾಡುತ್ತಿದ್ದ ಸಂಗತಿ ಸ್ಪಷ್ಟ ಆಕಾರ ಪಡೆದುಕೊಂಡಿತು: ಕಾದಂಬರಿಯಲ್ಲಿ ಇರುವ ಪಾತ್ರಗಳೆಲ್ಲವೂ ಒಂದು ರೀತಿಯಲ್ಲಿ ಋಣಾತ್ಮಕ ಪಾತ್ರಗಳೇ. ಯಾವೊಂದು ಪಾತ್ರವೂ ಏನನ್ನೂ ಪ್ರಶ್ನಿಸುವುದಿಲ್ಲ..ಯಾವ ಹೋರಾಟವನ್ನೂ ನಡೆಸುವುದಿಲ್ಲ..ಹೋರಾಟದ ಮಾತಿರಲಿ, ಒಂದು ಸಣ್ಣ ಪ್ರತಿರೋಧವನ್ನೂ ಒಡ್ಡುವುದಿಲ್ಲ! ಎಲ್ಲರೂ ಒಬ್ಬ ಚಾಣಾಕ್ಷ ಚತುರಮತಿಯ ಒಡ್ಡೋಲಗದಲ್ಲಿ ವಿರಾಜಮಾನರಾದ ‘ಹೌದಪ್ಪ’ಗಳಂತೆಯೇ ಗೋಚರಿಸುತ್ತಾರೆ! ಹೀಗೆ ಘರ್ಷಣೆಯೇ ಇಲ್ಲದೇ ಹೋದ ಮೇಲೆ, ಎದುರಿಸುವ ವಿರೋಧದ ದನಿಯ ಸೊಲ್ಲೇ ಇಲ್ಲದ ಮೇಲೆ ಅಷ್ಟರಮಟ್ಟಿಗೆ ನಾಟಕೀಯತೆಯೂ ಮುಕ್ಕಾಗಿಬಿಡುತ್ತದಲ್ಲವೇ ಎಂದು ನನಗನ್ನಿಸತೊಡಗಿತು.

ಹಾಗೆ ಒಂದು ಪ್ರತಿರೋಧದ ದನಿಯೆತ್ತಬಹುದಾದ ಪಾತ್ರವೆಂದರೆ ಶಿಲ್ಪಿ ರಾಮಾಚಾರಿಯ ಪಾತ್ರ ಎನ್ನಿಸಿತು. ಮೂಲ ಕಾದಂಬರಿಯಲ್ಲಿ ಶಿಲ್ಪಿ ರಾಮಾಚಾರಿ ಕೂಡಾ ರಾಘಣ್ಣನ ಸೂತ್ರಕ್ಕೆ ಕಟ್ಟುಬಿದ್ದ ಬೊಂಬೆಯೇ ಆಗಿರುತ್ತಾರೆ.ನಾನು ಈ ಪಾತ್ರದ ಚಹರೆಯನ್ನೇ ಬದಲಾಯಿಸಿದೆ.ರಾಘಣ್ಣನ ಸಂಚಿನ ಹೊಲಬೇ ಇಲ್ಲದ ಶಿಲ್ಪಿ ರಾಮಾಚಾರಿಗಳು ಅವನಿಗೊಂದು ಗಣಪತಿಯ ವಿಗ್ರಹವನ್ನು ಕೊಟ್ಟು ಕಳಿಸುತ್ತಾರೆ.

ಮುಂದೆ ತಾನು ಕೆತ್ತಿಕೊಟ್ಟಿದ್ದ ಶಿಲ್ಪವನ್ನೇ ರಾಘಣ್ಣ ಉದ್ಭವಮೂರ್ತಿಯಾಗಿಸಿ ಜನರನ್ನು ವಂಚಿಸುತ್ತಿರುವುದನ್ನು ಅರಿತ ರಾಮಾಚಾರಿಗಳು ಅದು ಉದ್ಭವ ಮೂರ್ತಿಯಲ್ಲವೆಂದೂ, ತಾನು ಕೆತ್ತಿದ ಶಿಲ್ಪವೆಂದೂ, ಸ್ವಾರ್ಥಿಗಳು ಹೆಣೆಯುತ್ತಿರುವ ಮೋಸದ ಬಲೆಗೆ ಬೀಳಬಾರದೆಂದೂ ಎಷ್ಟೇ ಅಂಗಲಾಚಿದರೂ ಯಾರೂ ಅವರ ಮಾತನ್ನು ನಂಬುವುದಿಲ್ಲ! ಭಕ್ತ ವೃಂದದ ‘ಜೈಗಣೇಶ ಜೈಗಣೇಶ ಜೈಗಣೇಶ ಪಾಹಿಮಾಂ’ ಭಜನೆಯ ತಾರಸ್ಥಾಯಿಯ ಉದ್ಘೋಷಗಳ ಅಬ್ಬರದಲ್ಲಿ ಶಿಲ್ಪಿಗಳ ಆರ್ತ ಒಂಟಿದನಿ ಸದ್ದಿಲ್ಲದಂತೆ ಉಡುಗಿ ಹೋಗುತ್ತದೆ. ತೆಳುಹಾಸ್ಯ ಮಿಶ್ರಿತ ವಿಡಂಬನಾತ್ಮಕ ನಾಟಕದಲ್ಲಿ ಶಿಲ್ಪಿಗಳ ಈ ದೃಶ್ಯ ಶಿಖರಪ್ರಾಯವಾಗಿ ಮೂಡಿಬಂದು ವಿಡಂಬನೆಯ ಮತ್ತೊಂದು ಎತ್ತರದ ಮಜಲನ್ನೇ ಮುಟ್ಟಿದಂತಾಗುತ್ತದೆ ಅನ್ನಿಸಿತು.

ಈ ಕೆಲ ಬದಲಾವಣೆಗಳೊಂದಿಗೆ ‘ಉದ್ಭವ’ ನಾಟಕ ರೂಪವನ್ನು ಸಿದ್ಧಪಡಿಸಿದೆ.ಅಲ್ಲಲ್ಲಿ ನಿರೂಪಣೆಗಳ ಮೂಲಕ ಕಥೆಯ ಬೆಳವಣಿಗೆಯನ್ನು ದಾಖಲಿಸುತ್ತಾ ಕೆಲ ಹಾಡುಗಳ ಮೂಲಕ ವಿಡಂಬನೆಯನ್ನು ಮತ್ತಷ್ಟು ಹರಿತಗೊಳಿಸುತ್ತಾ ಬ್ರೆಖ್ಟ್ ನ ಎಪಿಕ್ ರಂಗಭೂಮಿಯ ವಿನ್ಯಾಸವನ್ನು ಮೇಲ್ಪದರದಲ್ಲಿ ಅಳವಡಿಸಿಕೊಂಡು ನಾಟಕ ರೂಪ ಸಿದ್ಧಪಡಿಸಿದ್ದೆ. ನಾಟಕಕ್ಕೆ ಒಗ್ಗುವ ಹಾಡುಗಳನ್ನು ಪ್ರಸಿದ್ಧ ಕವಿ ಎಂ ಎನ್ ವ್ಯಾಸರಾವ್ ಅವರು ರಚಿಸಿ ದೆಹಲಿಗೇ ಕಳಿಸಿಕೊಟ್ಟರು. ಕಾರಂತ ಮೇಷ್ಟ್ರೇ ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿದರೆ ಚೆನ್ನಾಗಿರುತ್ತದೆ ಎನ್ನಿಸಿತು.

ಮೇಷ್ಟ್ರ ಬಳಿ ಹೋಗಿ ಉದ್ಭವ ನಾಟಕದ ಬಗ್ಗೆ ವಿವರಿಸಿ, “ವ್ಯಾಸರಾವ್ ಬರೆದುಕೊಟ್ಟಿರುವ ಹಾಡುಗಳಿಗೆ ರಾಗ ಸಂಯೋಜನೆ ಮಾಡಿಕೊಡಬಹುದೇ” ಎಂದು ಕೇಳಿಕೊಂಡೆ.”ಕೊಂಚ ಸಮಯಾವಕಾಶ ಕೊಟ್ಟರೆ ಮಾಡಿಕೊಡುತ್ತೇನೆ” ಎಂದರು ಮೇಷ್ಟ್ರು.ತುಂಬಾ ಖುಷಿಯಾಗಿ ಹೋಯಿತು! ‘ನೀವು ಹಾಡುಗಳಿಗೆ tune ಮಾಡಿಕೊಟ್ಟ ಮೇಲೇ rehearsals ಆರಂಭಿಸ್ತೇನೆ ಮೇಷ್ಟ್ರೇ’ ಎಂದು ನುಡಿದು ಹೊರಬಂದೆ.

‘ಬೆಳ್ಳಿಗುಂಡು’ ನಾಟಕದಲ್ಲಿ ಅಭಿನಯಿಸಿದ್ದ ಸತ್ಯನಾರಾಯಣ ಭಟ್ ಅವರು ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದು ದೆಹಲಿಗೆ ವರ್ಗವಾಗಿ ಬಂದಿದ್ದರು. ನಮ್ಮ ಶಾಲೆಯ ನಾಟಕಗಳಿಗೆ ತಪ್ಪದೇ ಬರುತ್ತಿದ್ದ ಭಟ್ಟರು ಆಗಾಗ್ಗೆ ರಜೆಯ ದಿನಗಳಲ್ಲಿ ನಮ್ಮ ಹಾಸ್ಟೆಲ್ ಗೆ ಬಂದು ಒಂದಷ್ಟು ಸಮಯ ಕಳೆದುಹೋಗುತ್ತಿದ್ದರು. ಅವರು ಅವರ ಗೆಳೆಯರೊಂದಿಗೆ ದೆಹಲಿಯಲ್ಲಿ ‘ಗೋಕರ್ಣ ಬಳಗ’ ಎಂಬೊಂದು ಸಂಸ್ಥೆಯನ್ನು ಕಟ್ಟಿಕೊಂಡು ಆಗಾಗ್ಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದರು.

ಒಮ್ಮೆ ಭಟ್ಟರು ನನ್ನನ್ನು,”ನಮ್ಮ ಗೋಕರ್ಣ ಬಳಗಕ್ಕೆ ಒಂದು ನಾಟಕ ಮಾಡಿಸಬಹುದೇ?” ಎಂದು ಕೇಳಿದರು. ಆಗಲೇ ಮಾಡಿಸಲು ನಾನು ಸಿದ್ಧನಾಗಿದ್ದರೂ ಆಗ ನಾಟಕ ಮಾಡಲು ಸಂಸ್ಥೆಯವರಿಗೆ ಕೆಲ ಅಡಚಣೆಗಳಿದ್ದವು. ಹಾಗಾಗಿ ಬರುವ ಜನವರಿ ತಿಂಗಳಿನಲ್ಲಿ ನಾಟಕ ಮಾಡುವುದೆಂದೂ ಅಗತ್ಯ ಸಿದ್ಧತೆಗಳನ್ನೆಲ್ಲಾ ಅದರೊಳಗೆ ಮಾಡಿಟ್ಟುಕೊಳ್ಳುವುದೆಂದೂ ಮಾತಾಡಿಕೊಂಡು ನಿರ್ಧರಿಸಿದೆವು. ನಾನು ಅದೇ ವರ್ಷ ನನ್ನ ಕೊನೆಯ ವರ್ಷದ ಓದನ್ನು ಮುಗಿಸಿಕೊಂಡು ಬೆಂಗಳೂರಿಗೆ ಮರಳುವವನಿದ್ದರಿಂದ ಜನವರಿಯ ವೇಳೆಗೆ ಸಂಸ್ಥೆಯ ವತಿಯಿಂದಲೇ ಮತ್ತೆ ದೆಹಲಿಗೆ ಕರೆಸಿಕೊಳ್ಳುವುದಾಗಿ ಭಟ್ಟರು ಭರವಸೆ ನೀಡಿದರು.

‘ಸಿಕ್ಕು’ ನಾಟಕವನ್ನೇ ಅಲ್ಲಿಯ ಕಲಾವಿದರಿಗೆ ಮಾಡಿಸುವುದೆಂದೂ, ಭಟ್ಟರು ಹೋಟಲ್ ಮಾಲೀಕನ ಪಾತ್ರವನ್ನು ನಿರ್ವಹಿಸುವುದೆಂದೂ, ನಾಟಕಶಾಲೆಯಲ್ಲಿ ಮೊದಲ ಹಾಗೂ ಎರಡನೆಯ ವರ್ಷದಲ್ಲಿ ಓದುತ್ತಿದ್ದ ಕನ್ನಡ ವಿದ್ಯಾರ್ಥಿ ಮಿತ್ರರನ್ನೂ ಸಹಾ ಪಾತ್ರ ನಿರ್ವಹಿಸಲು ಆಹ್ವಾನಿಸುವುದೆಂದೂ ನಿರ್ಧರಿಸಿದೆವು. ಆಗ ದೆಹಲಿಯಲ್ಲಿ air force ನಲ್ಲಿ ಹಿರಿಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಚ್ ಜಿ ದತ್ತಾತ್ರೇಯ ಅಲಿಯಾಸ್ ದತ್ತಣ್ಣ ಅವರನ್ನೂ ಸಹಾ ಒಂದು ಮುಖ್ಯ ಪಾತ್ರ ನಿರ್ವಹಿಸಲು ಒಪ್ಪಿಸಿದ್ದೆವು.

ಈ ದತ್ತಣ್ಣನ ಸಿಬ್ಬಂದಿ ವಸತಿ ಗೃಹ ಇದ್ದದ್ದು ನಮ್ಮ ಶಾಲೆಯ ಸಮೀಪದಲ್ಲಿಯೇ.ಆಗಾಗ್ಗೆ ದತ್ತಣ್ಣ ನಮ್ಮನ್ನು ಅಲ್ಲಿಗೆ ಆಹ್ವಾನಿಸುತ್ತಿದ್ದರು.ದತ್ತಣ್ಣನ ಜತೆ ಒಂದಿಷ್ಟು ಗುಂಡು ಹಾಕುತ್ತಾ ನಾಟಕಗಳ ಬಗ್ಗೆ ಚರ್ಚಿಸುತ್ತಾ ಕುಳಿತರೆ ಹೊತ್ತು ಹೋಗುವುದೇ ತಿಳಿಯುತ್ತಿರಲಿಲ್ಲ.ಎಷ್ಟೋ ಬಾರಿ ಬೆಳಗಿನ ಜಾವದ ತನಕ ಹರಟಿ, ತುಸು ಹೊತ್ತು ಹಾಗೇ ಅಡ್ಡಾಗಿ,ಇನ್ನೇನು ನಿದ್ರಾದೇವಿಯ ತೆಕ್ಕೆಗೆ ಸರಿಯಬೇಕು,ಅಷ್ಟರಲ್ಲಿ ದತ್ತಣ್ಣ ತಟಕ್ಕನೆ ಮೇಲೆದ್ದು ಶಿಸ್ತಿನ ಸಿಪಾಯಿಯಂತೆ ಯೂನಿಫಾರ್ಮ್ ಧರಿಸಿ ಸಿದ್ಧರಾಗಿ,’ನೀವು ನಿಧಾನವಾಗಿ ಎದ್ದುಹೋಗ್ರೋ’ ಎಂದು ಹೇಳಿ ಹೊರಟುಬಿಡುತ್ತಿದ್ದರು! ರಂಗಭೂಮಿಯ ಬಗ್ಗೆ ಅಪಾರ ಒಲವಿದ್ದ ದತ್ತಣ್ಣ ಬಿಡುವಿನ ವೇಳೆಯಲ್ಲೆಲ್ಲಾ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಅವರ ಮೂಲಕವೇ ದೆಹಲಿಯ ‘ಕನ್ನಡ ಭಾರತಿ’ಸಾಂಸ್ಕೃತಿಕ ಸಂಸ್ಥೆಯ ಎಂ ವಿ ನಾರಾಯಣರಾವ್,ಪ್ರಭಾಕರ ರಾವ್ ಮೊದಲಾದ ಶ್ರೇಷ್ಠ ಕಲಾವಿದ—ರಂಗಕರ್ಮಿಗಳ ಪರಿಚಯವೂ ಆಯಿತು. ‘ಕನ್ನಡ ಭಾರತಿ’ ಸಂಸ್ಥೆಗೆ ಆ ವೇಳೆಯಲ್ಲೇ ಕಾರಂತರು ನಾ.ಕೃ.ಸತ್ಯನಾರಾಯಣ ಅವರ ‘ನಹಿ ನಹಿ ರಕ್ಷತಿ’ ನಾಟಕವನ್ನು ಮಾಡಿಸಿದ್ದರು.ಪ್ರತಿನಿತ್ಯ ಸಂಜೆ ನಾನು,ಅಶೋಕ,ಸೂರಿ ರಿಹರ್ಸಲ್ ಗೆ ಹೋಗಿ ಮೇಷ್ಟ್ರ ನಿರ್ದೇಶನ ಕ್ರಮವನ್ನು ಗಮನಿಸುತ್ತಿದ್ದೆವು.ಸಾಕಷ್ಟು ದೊಡ್ಡ ದೊಡ್ಡ ಸೆಟ್ ಗಳನ್ನೇ ವಿನ್ಯಾಸಗೊಳಿಸಿದ್ದರಿಂದ ನೇಪಥ್ಯದಲ್ಲಿಯೂ ನೆರವಾದೆವು. ನಾರಾಯಣರಾವ್,ದತ್ತಣ್ಣ,ಬಾಲು,ಗಾಯತ್ರಿ ಬಾಲು ಮೊದಲಾದ ಕಲಾವಿದರ ಚೇತೋಹಾರಿ ಅಭಿನಯ,ಕಾರಂತರ ಮಾಂತ್ರಿಕ ಸ್ಪರ್ಶದ ಹಾಡುಗಳು,ಹಾಗೂ ವೈಭವೋಪೇತ ರಂಗಸಜ್ಜಿಕೆ ನಾಟಕದ ಪ್ರಚಂಡ ಯಶಸ್ಸಿಗೆ ಪ್ರಮುಖ ಕಾರಣಗಳಾದುವು.

ಶಾಲೆಯ ಕಡೆಯ ಎರಡು ಮೂರು ತಿಂಗಳುಗಳು ಪರೀಕ್ಷೆ ಹಾಗೂ ಅದರ ಸಿದ್ಧತೆಗಳಲ್ಲೇ ಕಳೆದುಹೋದವು ಎನ್ನಬೇಕು.

ಪರೀಕ್ಷೆಗಳನ್ನೂ ಮೂರು ವರ್ಷಗಳ ಅಧ್ಯಯನ—ಅಭ್ಯಾಸಗಳನ್ನೂ ಮುಗಿಸಿಕೊಂಡು ಹೊರಟಾಗ ಮಿಶ್ರ ಭಾವನೆಗಳು ಮುತ್ತಿ ಕಾಡಿದವು.ಏನೆಲ್ಲಾ ತರಲೆ ತಾಪತ್ರಯಗಳ ನಡುವೆಯೂ ಮೂರು ವರ್ಷಗಳು ಸರಿದು ಹೋದದ್ದು ಗೊತ್ತಾಗಲೇ ಇಲ್ಲ ಅನ್ನುವುದಂತೂ ಸತ್ಯ.ನನ್ನನ್ನೇ ನಾನು ಅರಿಯುವ,ಆತ್ಮ ಶೋಧನೆಯ ಒಂದು ಮಹತ್ವದ ಘಟ್ಟವನ್ನು ದಾಟಿ ಮುಂದಡಿಯಿಡುತ್ತಿದ್ದೆ. ‘ರೆಪರ್ಟರಿಯಲ್ಲಿ ಒಂದೆರಡು ವರ್ಷ ಕೆಲಸ ಮಾಡುವ ವಿಚಾರವೇನಾದರೂ ಇದೆಯೇ?’ ಎಂದು ಮೇಷ್ಟ್ರು ಕೇಳಿದರು. ‘ಇಲ್ಲ ಮೇಷ್ಟ್ರೇ..ಊರಿಗೆ ಮರಳಿ ನಾಟಕದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೇನೆ’ ಎಂದು ನುಡಿದು ಅವರ ಆಶೀರ್ವಾದವನ್ನು ಪಡೆದುಕೊಂಡೆ.

ದೇಶದ ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದ ನನ್ನ ಸಹಪಾಠಿಗಳು ಸಂಭ್ರಮದಿಂದ ಅವರವರ ಊರುಗಳಿಗೆ ಹೊರಟು ನಿಂತಿದ್ದರು. ಮೂರು ವರ್ಷಗಳ ಕಾಲ ಕಷ್ಟ ಸುಖಗಳನ್ನು ಹಂಚಿಕೊಂಡು ಸ್ನೇಹಬಂಧದಲ್ಲಿ ಬೆಸೆದಿದ್ದ ಕೊಂಡಿಗಳು ಕಳಚಿಕೊಳ್ಳುತ್ತಿರುವಂತೆ ಭಾಸವಾಗಿ ಕಣ್ಣು ತುಂಬಿಬಂತು; ಮತ್ತೆ ಅವರನ್ನು ಜೀವನದಲ್ಲಿ ಭೇಟಿಯಾಗುವ ಅವಕಾಶ ಒದಗುತ್ತದೋ ಇಲ್ಲವೋ ಅನ್ನಿಸಿ ಎದೆ ಭಾರವಾಯಿತು. ಅಂತೂ ಎಲ್ಲರಿಂದ ಬೀಳ್ಕೊಂಡು ಬೆಂಗಳೂರು ರೈಲು ಹತ್ತಿ ಹೊರಟು ಎರಡು ದಿನಗಳ ಹಾದಿಯುದ್ದಕ್ಕೂ ಅಶೋಕ—ಸೂರಿಯರೊಟ್ಟಿಗೆ ಕಳೆದ ದಿನಗಳನ್ನೆಲ್ಲಾ ಮೆಲುಕು ಹಾಕುತ್ತಾ ಬೆಂಗಳೂರಿಗೆ ಬಂದಿಳಿದಾಗ ಹೊಸ ಕನಸುಗಳು ಕಣ್ಣಲ್ಲಿ ಕುಣಿಯತೊಡಗಿದ್ದವು…ಮಹತ್ವಾಕಾಂಕ್ಷೆಯ ಹೊಸ ಹೊಸ ಪ್ರಯೋಗಗಳ ಯೋಜನೆಗಳು ನಿಧಾನವಾಗಿ ಹರಳುಗಟ್ಟಿಕೊಳ್ಳುತ್ತಿದ್ದವು.

ನಮ್ಮ ನಾಟ್ಯದರ್ಪಣ ತಂಡದ ಕಲಾವಿದರು ನಾನು ಬೆಂಗಳೂರಿಗೆ ಮರಳುವುದನ್ನೇ ಕಾಯುತ್ತಿದ್ದರು—ಹೊಸ ನಾಟಕದ ಪ್ರಯೋಗಕ್ಕೆ! ದೆಹಲಿಯಿಂದಲೇ ‘ಉದ್ಭವ’ ನಾಟಕವನ್ನು ಸಿದ್ಧ ಪಡಿಸಿಕೊಂಡೇ ಬಂದಿದ್ದೆನಲ್ಲಾ,ಹಾಗಾಗಿ ಹೆಚ್ಚು ಸಮಯ ವ್ಯರ್ಥ ಮಾಡದೇ ನಾಟಕದ ತಾಲೀಮು ಆರಂಭಿಸಿಯೇ ಬಿಟ್ಟೆ. ಮುಖ್ಯ ಪಾತ್ರಗಳ ನಿರ್ವಹಣೆಗಾಗಿ ಶ್ರೀನಿವಾಸ ಮೇಷ್ಟ್ರು, ರಿಚರ್ಡ್ ಜಿ ಲೂಯಿಸ್, ಸುಧೀಂದ್ರ, ಲಲಿತ ಪ್ರಸಾದ್, ಕೃಷ್ಣೇಗೌಡ, ಮೋಹನರಾವ್, ನಳಿನಿ ಅಕ್ಕ, ಶಿವಶಂಕರ್ ಮುಂತಾದವರನ್ನು ಆರಿಸಿಕೊಂಡೆ. ಕಾರಂತಮೇಷ್ಟ್ರು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ ಬಳಿಕ ಒಂದು ಕ್ಯಾಸೆಟ್ ನಲ್ಲಿ ರೆಕಾರ್ಡ್ ಮಾಡಿ ಕಳಿಸಿಕೊಡುವುದಾಗಿ ಭರವಸೆ ನೀಡಿದ್ದರು.

ರಿಹರ್ಸಲ್ಸ್ ಭರದಿಂದ ಸಾಗುತ್ತಿದ್ದಂತೆಯೇ ಹೊಸ ಸುದ್ದಿಯೊಂದು ಬಂತು:ಅಶೋಕ ಬೆನಕ ತಂಡಕ್ಕೆ ಶೇಕ್ಸ್ ಪಿಯರ್ ಮಹಾಕವಿಯ ಹ್ಯಾಮ್ಲೆಟ್ ನಾಟಕವನ್ನು ಮಾಡಿಸುತ್ತಿದ್ದಾನೆ! ವಾಸ್ತವವಾಗಿ ದೆಹಲಿ ಬಿಟ್ಟು ಬರುವ ವೇಳೆಗೆ ನನಗೂ ಅಶೋಕನಿಗೂ ಸ್ವಲ್ಪ ಇರುಸು ಮುರುಸುಗಳಾಗಿ—ಅದೂ ಬೇರೆಯವರ ಕಾರಣಕ್ಕೆ—ನಮ್ಮ ಸ್ನೇಹ ಸಂಬಂಧದಲ್ಲಿ ಕೊಂಚ ಬಿರುಕುಂಟಾಗಿತ್ತು.ಏನೇ ಆದರೂ ಹಸಿವು ಹಂಚಿಕೊಂಡು ಕಳೆದ ದೆಹಲಿಯ ಆ ಆತ್ಮೀಯತೆಯ ದಿನಗಳನ್ನು ಮರೆಯಲಾದರೂ ಆದೀತೇ! ಅವನಾಗಿ ಹೇಳದಿದ್ದರೂ ಬೆನಕದಂತಹ ಒಂದು ಪ್ರತಿಷ್ಠಿತ ತಂಡಕ್ಕೆ ಒಂದು ಮಹತ್ವಾಕಾಂಕ್ಷೆಯ ನಾಟಕವನ್ನು ಅವನು ಮಾಡಿಸುತ್ತಿರುವುದು ನನಗೆ ಸಂತೋಷವನ್ನೇ ತಂದಿತ್ತು. ನಾಟಕ ಪ್ರಚಂಡ ಯಶಸ್ಸನ್ನು ಗಳಿಸಲಿ,ನಿರ್ದೇಶಕನಾಗಿ ಅಶೋಕನಿಗೆ ಒಳ್ಳೆಯ ಹೆಸರು ಬರಲಿ ಎಂದು ಮನದಲ್ಲೇ ಪ್ರಾರ್ಥಿಸಿದೆ.

ಉದ್ಭವ ನಾಟಕದ ರಿಹರ್ಸಲ್ ಪ್ರಾರಂಭಿಸಿ 8—10 ದಿನಗಳೇ ಕಳೆದಿದ್ದವು ಎಂದು ತೋರುತ್ತದೆ. ನಾವು ರಿಹರ್ಸಲ್ ಮಾಡುತ್ತಿದ್ದುದು ಕಲಾಕ್ಷೇತ್ರದ ಆವರಣದಲ್ಲಿಯೇ. ಒಂದು ಸಂಜೆ ರಿಹರ್ಸಲ್ ಮಾಡುತ್ತಿರುವಾಗಲೇ ಅಲ್ಲಿಗೆ ಶ್ರೀನಿವಾಸ ತಾವರಗೇರಿ ಅಲಿಯಾಸ್ ಶೀನಣ್ಣ ಆಗಮಿಸಿದರು. ಶೀನಣ್ಣ ಬಿಜಾಪುರದ ಒಬ್ಬ ಪ್ರಸಿದ್ಧ ರಂಗಕರ್ಮಿ. ಬಿಜಾಪುರ ಹಾಗೂ ಸುತ್ತಮುತ್ತಲ ಕ್ಷೇತ್ರಗಳಲ್ಲಿ ರಂಗಭೂಮಿಯ ಚಟುವಟಿಕೆಗಳನ್ನು ಜೀವಂತವಾಗಿಡಲು ಅಹರ್ನಿಶಿ ಶ್ರಮಿಸಿದವರು.

ನಾಡಿನಲ್ಲಿ ಎಲ್ಲೇ ಒಳ್ಳೆಯ ನಾಟಕದ ಪ್ರದರ್ಶನವಾದರೂ ಅದನ್ನು ತಮ್ಮ ಊರಿನ ಜನರಿಗೆ ತೋರಿಸಲೇಬೇಕು;ಅದಕ್ಕಾಗಿ ಎಷ್ಟೇ ಹಣ ಖರ್ಚಾದರೂ ಚಿಂತೆಯಿಲ್ಲ— ಅನ್ನುವುದು ಶೀನಣ್ಣನ ಶಪಥವೇ ಆಗಿತ್ತು! ಅಶೋಕ ಬಾದರದಿನ್ನಿ ರಂಗಭೂಮಿಯಲ್ಲಿ ದೃಢವಾದ ಹೆಜ್ಜೆಯೂರಲು ಪ್ರೇರಕ ಶಕ್ತಿಯಾಗಿ ನಿಂತವರೂ ಇದೇ ಶೀನಣ್ಣನೇ. ಇಂಥ ಶೀನಣ್ಣ ಅಂದು ಬಂದವರು ರಿಹರ್ಸಲ್ ಮುಗಿಯುತ್ತಿದ್ದಂತೆ ,”ಏ..ನಿನ್ನ ಕೂಡೆ ಒಂದೀಟು ಮಾತಾಡಬೇಕು ಬಾ” ಎಂದವರೇ ನಮ್ಮ ಅಡ್ಡಾ ಆಗಿದ್ದ ಕೆಫೆ ಡಿ ಪ್ಯಾರಡೈಸ್ ಎಂಬ ಪುರಾತನ ಪಳೆಯುಳಿಕೆಯಂತಹ ಹೋಟಲಿಗೆ ಕರೆದುಕೊಂಡು ಹೋದರು. ಎಂದಿನಂತೆ ನಮ್ಮ ಯಾವುದೇ ಚರ್ಚೆ—ಮಾತುಕತೆಯ ಅವಿಭಾಜ್ಯ ಅಂಗವೇ ಆಗಿದ್ದ ರಿಚಿಯೂ ಜತೆಗಿದ್ದ.

ಒಂದಿಷ್ಟು ಲೋಕಾಭಿರಾಮ ಮಾತುಕತೆಯ ನಂತರ ಶೀನಣ್ಣ ವಿಷಯ ಪ್ರವೇಶ ಮಾಡಿದರು: “ಇಲ್ನೋಡs…ನಿನ್ನ ಗೆಳೆಯ ಹ್ಯಾಮ್ಲೆಟ್ ನಾಟಕ ಮಾಡಿಸಾಕ್ಹತ್ಯಾನ..ನಿಂಗೂ ತಿಳದದ..ಅಂವ ಹ್ಯಾಮ್ಲೆಟ್ ಪಾತ್ರಕ್ಕ ಟಿ ಎಸ್ ರಂಗಾನ್ನ ಆರಿಸಿಕೊಂಡಾನ…ನಂಗ್ಯಾಕೋ ಸಮಾಧಾನ ಆಗವೊಲ್ದು…ರಂಗಾ ಹೇಳಿ ಕೇಳಿ ಈಗ ಸಿನೆಮಾದಾಗ busy ಅದಾನ.. ಹೊಸಾ ಸಿನೆಮಾ ಶೂಟಿಂಗ್ ಇನ್ನೇನು ಸುರು ಮಾಡಬೇಕಂತಿದ್ದ.. ಅಂಥಾದ್ರಾಗ ಅಂವ ಏನು ರಿಹರ್ಸಲ್ ಮಾಡ್ಯಾನು ಏನು ನಾಟಕ ಮಾಡ್ಯಾನು ಹೇಳು. ಅದಕ ನಾ ಅಶೋಕಂಗಂದೀನಿ ಪ್ರಭೂನ ಕಡೀಂದ ಹ್ಯಾಮ್ಲೆಟ್ ಪಾತ್ರ ಮಾಡಿಸು ಅಂತ. ನೀ ಏನಂತೀಯಪಾ?”. ಶೀನಣ್ಣ ಮಾತು ಮುಗಿಸಿ ನನ್ನ ಮುಖವನ್ನೇ ನೋಡುತ್ತಾ ನನ್ನ ಉತ್ತರದ ನಿರೀಕ್ಷೆಯಲ್ಲಿದ್ದರು.

ನಾನು ಬಾಯಿ ತೆರೆಯುವ ಮೊದಲೇ ರಿಚಿ ತನ್ನ ಪ್ರತಿಕ್ರಿಯೆ ನೀಡಿದ: “ಅದು ಹ್ಯಾಗೆ ಆಗುತ್ತೆ ಶೀನಣ್ಣ? ನಾವು ಉದ್ಭವ ನಾಟಕದ ರಿಹರ್ಸಲ್ ಶುರು ಮಾಡಿಬಿಟ್ಟಿದೀವಲ್ಲಾ! Show date ಬೇರೆ announce ಮಾಡಿಬಿಟ್ಟಿದೀವಿ. ಈಗ ಬದಲಾಯಿಸೋಕೆ ಆಗಲ್ಲ ಬಿಡಿ.” ಶೀನಣ್ಣ ಅಷ್ಟಕ್ಕೇ ಸುಮ್ಮನಾಗಲಿಲ್ಲ. “ಅಶೋಕನ ಮಹತ್ವಾಕಾಂಕ್ಷೆಯ ನಾಟಕ; ಅವನ ಭವಿಷ್ಯವನ್ನು ನಿರ್ಧರಿಸುವಂತಹ ದೊಡ್ಡ ಸಾಹಸದ ಹೆಜ್ಜೆ; ಏನೇ ಅಡಚಣೆಯಾಗಿ ನಾಟಕ ಯಶಸ್ವಿಯಾಗದಿದ್ದರೆ ಅವನು ಕುಸಿದು ಹೋಗುವುದು ಖಚಿತ; ದೊಡ್ಡ ಮನಸ್ಸು ಮಾಡಿ ಒಪ್ಪಿಕೋ; ಎಷ್ಟಾದ್ರೂ ನಿನ್ನಜೀವದ ಗೆಳೆಯ ಅಲ್ಲೇನು?… “ಎಂದು ಒತ್ತಾಯ ಮಾಡತೊಡಗಿದರು.

ಸರಿಯೇ! ಜೀವದ ಗೆಳೆಯನೇ ಹೌದು… ಆದರೆ ರಾಯಭಾರಕ್ಕೆ ಶೀನಣ್ಣನನ್ನು ಕಳಿಸುವ ಅಗತ್ಯವೇನಿತ್ತು? ತಾನೇ ಖುದ್ದಾಗಿ ಬಂದು ಕೇಳಬಹುದಿತ್ತಲ್ಲಾ! ಅವನಿಗಷ್ಟು ಸ್ವಾಭಿಮಾನ ಕಾಡುತ್ತಿದ್ದರೆ ನಾನೇಕೆ ಸೋಲಲಿ? ಅದಕ್ಕೂ ಶೀನಣ್ಣನ ಉತ್ತರ ಸಿದ್ಧವಿತ್ತು:” ನೀ ಒಲ್ಲೆ ಅಂತಂತಂತಂತಂದ್ರ (ಅದು ಶೀನಣ್ಣನ ಮಾತಿನ ವೈಖರಿ!) ಭಾಳ ಗಾಸಿ ಆಗ್ತದಂತ ಮುದ್ಲು ನನ್ನ ಕಳಿಸ್ಯಾನ..ನೀ ಹೂಂ ಅಂದ್ರ ನಾಳಿ ಅವನs ಬಂದು ಮಾತಾಡ್ತಾನ” ಅಂದರು ಶೀನಣ್ಣ. ಅವರ ಮಾತನ್ನು ತಳ್ಳಿಹಾಕಲಾಗದೆ ಕೊನೆಗೆ ನಾನು—ರಿಚಿ ನಮ್ಮ ನಾಟಕವನ್ನೇ ಎರಡು ತಿಂಗಳು ಮುಂದೂಡಿ ನಾನು ಹ್ಯಾಮ್ಲೆಟ್ ಪಾತ್ರ ಮಾಡುವುದೆಂಬ ನಿರ್ಧಾರಕ್ಕೆ ಬಂದೆವು. ಶೀನಣ್ಣನ ಖುಷಿಗೆ ಪಾರವೇ ಇಲ್ಲ! ಮರುದಿನವೇ ಅಶೋಕನೂ ಶೀನಣ್ಣನೊಟ್ಟಿಗೆ ಮಾತುಕತೆಗೆ ಬಂದ.

ಪ್ರಾರಂಭದಲ್ಲಿ ಒಂದಿಷ್ಟು ಬಿಗುವಿನಿಂದಲೇ ಮಾತು ಆರಂಭಿಸಿದರೂ ಹತ್ತು ನಿಮಿಷದಲ್ಲಿ ಅದೆಲ್ಲಾ ಮಂಜಿನಂತೆ ಕರಗಿ ಅಶೋಕ ತನ್ನ ಸಹಜ ಧಾಟಿಗೆ ಮರಳಿದ! “ಏ ಮಬ್ಬಿಡಿಸಿಗಂಡ..ನನ್ನ ಮ್ಯಾಲ ಹಠ ಸಾಧಿಸ್ತೀ ಏನು? ಒಂದು ಮಾತು ಬರ್ತತಿ ಹೋಕ್ಕತ್ತಿ..ನರ ಮನ್ಶಾರಲ್ಲೇನು? ತಪ್ಪಾಕ್ಕತ್ತಿ..ಅದೆಲ್ಲಾ ಒತ್ತಟ್ಟಿಗಿಟ್ಟು ಬಾ..ಛಲೋತ್ನಾಗ ನಾಟಕ ಮಾಡಾಣು” ಎಂದು ನನಗೇ ಸಮಾಧಾನ ಮಾಡುವಂತೆ ಮಾತಾಡಿದ! ಕೊನೆಗೆ ಎರಡು ತಂಡಗಳಿಗೆ ಹ್ಯಾಮ್ಲೆಟ್ ನಾಟಕವನ್ನು ಮಾಡಿಸುವುದೆಂದೂ (double casting) ಒಂದು ತಂಡದಲ್ಲಿ ಹ್ಯಾಮ್ಲೆಟ್ ಪಾತ್ರವನ್ನು ರಂಗಾ ಅವರೂ ಮತ್ತೊಂದು ತಂಡದಲ್ಲಿ ನಾನೂ ನಿರ್ವಹಿಸುವುದೆಂದು ಶೀನಣ್ಣನ ಘನ ಅಧ್ಯಕ್ಷತೆಯಲ್ಲಿ ತೀರ್ಮಾನವಾಗಿ ಹೋಯಿತು.

ಮರುದಿನ ನಮ್ಮ ತಂಡದ ಕಲಾವಿದರಿಗೆ ನಾಟಕ ಮುಂದೂಡುತ್ತಿರುವ ಸುದ್ದಿ ತಿಳಿಸಿದಾಗ ಅವರಿಗಾದ ನಿರಾಸೆ ಅಷ್ಟಿಷ್ಟಲ್ಲ. ಹ್ಯಾಮ್ಲೆಟ್ ಪ್ರದರ್ಶನ ಮುಗಿದ ಮರುದಿನವೇ ಉದ್ಭವ ನಾಟಕದ ತಾಲೀಮು ಆರಂಭಿಸುತ್ತೇನೆಂದು ಅವರಿಗೆ ಆಶ್ವಾಸನೆ ಕೊಟ್ಟು ಹ್ಯಾಮ್ಲೆಟ್ ನಾಟಕದ ತಾಲೀಮಿಗೆ ಮಿನರ್ವ ಸರ್ಕಲ್ ನಲ್ಲಿದ್ದ ಬೆನಕ ತಂಡದ ಕಛೇರಿಯತ್ತ ಹೆಜ್ಜೆ ಹಾಕಿದೆ.

“HAMLET THE PRINCE OF DENMARK”

ವಿಲಿಯಂ ಶೇಕ್ಸ್ ಪಿಯರ್ ನ ಅತ್ಯಂತ ಪ್ರಸಿದ್ಧ ರುದ್ರನಾಟಕ…ಜಗತ್ತಿನ ಅನೇಕ ಶ್ರೇಷ್ಠ ನಟರು ಅನೇಕ ಭಾಷೆಗಳಲ್ಲಿ ಅಭಿನಯಿಸಿದ ಅದ್ಭುತ ಪಾತ್ರವೊಂದನ್ನು ಅಭಿನಯಿಸಲು ಸಿದ್ಧನಾಗಹೊರಟಿದ್ದೇನೆ! ಹೊಸ ಜಗತ್ತಿನ.. ಹೊಸ ಪಾತ್ರದ.. ಹೊಸ ಭಾವಲೋಕದ ಹೊಸ್ತಿಲಲ್ಲಿ ನಿಂತಿದ್ದೇನೆ! ಶೇಕ್ಸ್ ಪಿಯರ್ ಮಹಾಕವಿಯ ‘as you like it’ ನಾಟಕದ ಪ್ರಸಿದ್ಧ ಮಾತುಗಳು ಮನದಲ್ಲಿ ಅನುರಣಿಸುತ್ತಿದ್ದವು:

“All the world’s a stage, and all the men and women merely players; They have their exits and their entrances, and one man in his time plays many parts…”!

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

10 March, 2022

1 Comment

  1. T S SHRAVANA KUMARI

    ಉತ್ತಮ ನಿರೂಪಣೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading