ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.
ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
6
ಬಾಲ್ಯದಿಂದಲೂ ಹಾಡು ಹಾಗೂ ಸಿನೆಮಾ ನನ್ನನ್ನು ತೀವ್ರವಾಗಿ ಆಕರ್ಷಿಸಿದ ಸಂಗತಿಗಳು. ಅಮ್ಮ ಹೇಳಿದ ಒಂದು ಸ್ವಾರಸ್ಯಕರ ಘಟನೆ: ಬಸವಾಪಟ್ಟಣದ ಬಸ್ ಸ್ಟ್ಯಾಂಡ್ ನಲ್ಲಿ ಪ್ರಯಾಣಿಕರ ಅನುಕೂಲಕ್ಕೆಂದು ಒಂದು ತಂಗುದಾಣವನ್ನು ನಿರ್ಮಿಸಿದ್ದರು. ಸಂಜೆಯ ವೇಳೆ ಬಸ್ ಸ್ಟ್ಯಾಂಡ್ ಆವರಣದಲ್ಲಿ ಯಾರೋ ಸಿನೆಮಾ ಹಾಡುಗಳ ರಿಕಾರ್ಡ್ ಗಳನ್ನು ಹಾಕುತ್ತಿದ್ದರು.
ಬಸ್ ಸ್ಟ್ಯಾಂಡ್ ನಿಂದ ತುಸು ಒಳಕ್ಕೆ ಕೋಟೆ ಬೀದಿಯಲ್ಲಿ ಹೊರಟರೆ ಅಲ್ಲೇ ಪ್ರಾರಂಭದಲ್ಲೇ ನಮ್ಮ ಮನೆ. ಆಗ ನನ್ನ ವಯಸ್ಸು 4 ಅಥವಾ 5 ಇದ್ದಿರಬಹುದು. ಒಂದು ಸಂಜೆ ಮನೆಯಲ್ಲಿ ಎಲ್ಲರೂ ‘ಅಯ್ಯೋ..ಪ್ರಭು ಎಲ್ಲೋ ಕಾಣ್ತಿಲ್ಲ.. ಎಲ್ಲಿ ಹೋಗ್ಬಿಟ್ಟ?’ ಎಂದು ಗಾಬರಿಯಿಂದ ಹುಡುಕುತ್ತಿದ್ದರೆ ನಾನು ಬಸ್ ಸ್ಟ್ಯಾಂಡಿನ ತಂಗುದಾಣದಲ್ಲಿದ್ದ ಬೆಂಚ್ ಮೇಲೆ ಚಕ್ಕಳಮಕ್ಕಳ ಹಾಕಿ ಕುಳಿತುಕೊಂಡು ಸ್ಪೀಕರ್ ಮೂಲಕ ಹೊಮ್ಮುತ್ತಿದ್ದ ಹಾಡನ್ನು ಕೇಳುತ್ತಾ ತೊಡೆ ತಟ್ಟಿಕೊಂಡು ತಾಳ ಹಾಕಿಕೊಂಡು ಆನಂದ ಪಡುತ್ತಿದ್ದೆನಂತೆ.
ಕೊಣನೂರಿಗೆ ಬರುವ ವೇಳೆಗೆ ಅನೇಕ ಸಿನೆಮಾ ಹಾಡುಗಳು ನನಗೆ ಕಂಠಸ್ಥವಾಗಿ ಹೋಗಿದ್ದವು. ಚೆನ್ನಾಗಿಯೇ ಹಾಡುತ್ತಿದ್ದೆ ಎಂದು ನಾಗೇಶ ನೆನಪಿಸಿ ಕೊಳ್ಳುತ್ತಾನೆ. ರಾಮನ ಅವತಾರ, ಸ್ವಾಭಿಮಾನದ ನಲ್ಲೆ, ಕನ್ನಡದ ತಾಯಿ ಶ್ರೀ ಭುವನೇಶ್ವರಿ, ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು… ಮೊದಲಾದುವು ನನ್ನ ಅಚ್ಚುಮೆಚ್ಚಿನ ಹಾಡುಗಳು.
ಚಿಕ್ಕಜ್ಜನ ಮನೆಯ ಹಜಾರದಲ್ಲಿ ಕಟ್ಟಿದ್ದ ಉಯ್ಯಾಲೆಯ ಮೇಲೆ ಮಲಗಿಕೊಂಡು ಕೈಯಿಂದ ಆಗಾಗ್ಗೆ ಜೀಕಿಕೊಳ್ಳುತ್ತಾ ಜೋರಾಗಿ ಹಾಡು ಹೇಳುವುದು ನನ್ನ ಅತ್ಯಂತ ಮೆಚ್ಚಿನ ಹವ್ಯಾಸವಾಗಿತ್ತು. ವಿಜಯಕ್ಕ ಕೊಣನೂರಿಗೆ ಬಂದಾಗ ಅವಳ ಗೆಳತಿಯರು ನಮ್ಮ ಮನೆಗೆ ಬಂದು ಅವರೆಲ್ಲರೂ ಮನೆಯ ಹಿತ್ತಲಭಾಗದಲ್ಲಿ ಕೂತು ಒಂದಷ್ಟು ಹೊತ್ತು ಹರಟೆ ಹೊಡೆಯುತ್ತಿದ್ದರು. ಅಕ್ಕ ಅವರ ಮುಂದೆ, ‘ನನ್ನ ತಮ್ಮ ತುಂಬಾ ಚೆನ್ನಾಗಿ ಹಾಡು ಹೇಳ್ತಾನೆ ಕಣ್ರೇ… ಪ್ರಭೂ, ಹೇಳೋ..ಒಂದು ಹಾಡು ಹೇಳೋ’ ಎಂದು ಪ್ರೋತ್ಸಾಹ ನೀಡುತ್ತಿದ್ದಳು.

ನಾನು ಅಂಥ ಸಂದರ್ಭಗಳಲ್ಲೆಲ್ಲಾ ನನಗೆ ಚೆನ್ನಾಗಿ ಬರುತ್ತಿದ್ದ ‘ಸ್ವಾಭಿಮಾನದ ನಲ್ಲೆ’ ಹಾಡನ್ನು ಹಾಡುತ್ತಿದ್ದೆ. ಆ ಹಾಡಿನ ಕೊನೆಯ ಚರಣದ ಕೊನೆಯ ಸಾಲು ‘ನಿನ್ನ ಪತಿ ನಾನೇ’ ಎಂಬುದು. ನಾನು ಆ ಸಾಲನ್ನು ಹಾಡಿದ ತಕ್ಷಣ ಅಕ್ಕ ಹಾಗೂ ಅವಳ ಗೆಳತಿಯರು ‘ಓಹೋ! ಹಾಗಾ? ಯಾರ ಪತೀನಪ್ಪಾ ನೀನು?’ ಎಂದು ತಮಾಷೆ ಮಾಡುತ್ತಿದ್ದರು. ಏನೇ ಆದರೂ ನಾಲ್ಕು ಜನರ ಮುಂದೆ ಹಾಡುವ ಪ್ರಸಂಗ ಬಂದಾಗ ಮಾತ್ರ ನಾನು ಸಂಕೋಚದ ಮುದ್ದೆಯಾಗಿಬಿಡುತ್ತಿದ್ದೆ.
ವಿಪರೀತ ನಾಚಿಕೆ ಆವರಿಸಿಕೊಂಡು, ಮುಖ ಕೆಂಪಗಾಗಿ, ಧ್ವನಿ ತುಸು ನಡುಗಿ, ‘ನಾನು ಒಬ್ಬನೇ ಹಾಡಿಕೊಳ್ಳುವಷ್ಟು ಚೆನ್ನಾಗಿ ಎಲ್ಲರ ಮುಂದೆ ಹಾಡುತ್ತಿಲ್ಲ’ ಎಂದು ನನಗೇ ಭಾಸವಾಗಿಬಿಡುತ್ತಿತ್ತು. ಈ ಸಂಕೋಚ -ನಾಚಿಕೆಯ ಸ್ವಭಾವ ಮುಂದೆಯೂ ಅನೇಕ ವರ್ಷಗಳು ನನ್ನನ್ನೊಂದು ಚಿಪ್ಪಿನಲ್ಲಿ ಬಂದಿಯಾಗಿಸಿಟ್ಟಿದ್ದು, ಆ ಚಿಪ್ಪೊಡೆದುಕೊಂಡು ಹೊರಬರಲು ನಾನು ಹರಸಾಹಸವನ್ನೇ ಮಾಡಬೇಕಾಯಿತು.
ಸಿನೆಮಾ ನೋಡುವುದೂ ಸಹಾ ಒಂದು ಗೀಳಿನ ಹಾಗೇ ನನಗೆ ಆಗಲೇ ಅಂಟಿಕೊಂಡುಬಿಟ್ಟಿತ್ತು. ಒಂದೇ ಚಿತ್ರವನ್ನು ಚೂರೂ ಬೇಸರವಿಲ್ಲದೆ ಎಷ್ಟು ಸಲ ಬೇಕಾದರೂ ನೋಡುತ್ತಿದ್ದೆ. ಟೆಂಟ್ ಸಿನೆಮಾಗಳ ಕಾಲ ಅದು. ಒಂದೊಂದು ಊರಿನಲ್ಲಿ ನಾಲ್ಕಾರು ತಿಂಗಳ ಕಾಲ ಟೆಂಟ್ ಹಾಕಿ ಮೂರು ಮೂರು ದಿನಕ್ಕೊಮ್ಮೆ ಚಿತ್ರಗಳನ್ನು ಬದಲಿಸಿ ಪ್ರದರ್ಶಿಸುತ್ತಿದ್ದರು. ಹಾಗೆ ಪ್ರದರ್ಶನಗೊಂಡ ಯಾವ ಚಿತ್ರವನ್ನೂ ನಾನು ಬಿಟ್ಟವನಲ್ಲ. ಕೆಲವೊಮ್ಮೆ ಚಿಕ್ಕಜ್ಜನೇ ಕರೆದುಕೊಂಡು ಹೋಗುತ್ತಿದ್ದರು. ಇಲ್ಲದಿದ್ದರೆ ಚಿಕ್ಕಜ್ಜನ ಜೇಬಿನಿಂದ ಚಿಲ್ಲರೆ ದುಡ್ಡು ಎಗರಿಸಿ, ಸಂಜೆಯ ಟ್ಯೂಷನ್ ಗೆ ಚಕ್ಕರ್ ಹಾಕಿ ಸಿನೆಮಾ ನೋಡಲು ಟೆಂಟ್ ಕಡೆಗೆ ಧಾವಿಸಿಬಿಡುತ್ತಿದ್ದೆ.
ನಂತರದ ‘ಪರಿಣಾಮ’ಗಳು ಏನೆಂದು ಗೊತ್ತಿದ್ದರೂ ಒಂದು ನಮೂನೆಯ ಭಂಡ ಧೈರ್ಯ! ನನ್ನನ್ನು ಅತಿಯಾಗಿ ಪ್ರೀತಿಸಿ ಮುದ್ದಿಸುತ್ತಿದ್ದ ಚಿಕ್ಕಜ್ಜ ಏನು ತಾನೇ ಮಾಡಬಹುದು? ಅಬ್ಬಬ್ಬಾ ಎಂದರೆ ಒಂದಿಷ್ಟು ಬುದ್ದಿ ಹೇಳಬಹುದು; ಹರಿಶ್ಚಂದ್ರನದೋ ಮತ್ತಾರದೋ ಕಥೆ ಹೇಳಬಹುದು; ಮೀರಿದರೆ ಮೆಲ್ಲಗೆ ಒಂದೆರಡು ಏಟು ಕೊಡಬಹುದು.. ಇನ್ನು ಟ್ಯೂಷನ್ ಮೇಷ್ಟ್ರು… ಜೋರಾಗಿ ಕಿವಿಹಿಂಡಿ, ‘ಪೆದ್ದು ಮುಂಡೇದೇ’, ‘ದಡ್ಡ ಶಿಖಾಮಣಿ’ ಮುಂತಾದ ಅವರ ಪರಮಪ್ರಿಯ ಬೈಗುಳಪ್ರಯೋಗ ಮಾಡಬಹುದು… ಅಷ್ಟೇ ತಾನೇ? ಅಷ್ಟಕ್ಕೋಸ್ಕರ ಮೂರು ತಾಸು ಟೆಂಟ್ ನ ಕತ್ತಲ ಆವರಣದಲ್ಲಿ ತೆರೆದುಕೊಳ್ಳುವ ಅದ್ಭುತ ಸಿನೆಮಾ ಮಾಯಾಲೋಕವನ್ನು ಕಳೆದುಕೊಳ್ಳುವುದು ಕನಸಿನ ಮಾತು..! ವಾತ್ಸಲ್ಯ, ಕರುಣೆಯೇ ಕುಟುಂಬದ ಕಣ್ಣು, ವೀರಕೇಸರಿ, ವನದೇವತೆ, ಮಾಡಿವೀಟ್ಟು ಮಾಪಿಳ್ಳೈ, ನಾಡೋಡಿ ಮನ್ನನ್… ಇವೆಲ್ಲಾ ನಾನು ಟೆಂಟ್ ನಲ್ಲಿ ನೋಡಿ ಸಂಭ್ರಮಿಸಿದ, ತುಣುಕುಗಳಲ್ಲಿ ಇನ್ನೂ ನೆನಪಿರುವ ಚಿತ್ರಗಳು.
ಎಷ್ಟೋದಿನ ಟ್ಯೂಷನ್ ಮುಗಿಸಿಕೊಂಡು ಮನೆಗೆ ಹೋಗುವಾಗ ಪರದೆಯಿದ್ದ ಟೆಂಟ್ ನ ಹಿಂಬದಿಯಲ್ಲಿ ನಿಂತು ಒಂದಷ್ಟು ಹೊತ್ತು ಸಂಭಾಷಣೆಗಳನ್ನು ಕೇಳಿಸಿಕೊಂಡು ಖುಷಿ ಪಟ್ಟಿರುವುದುಂಟು. ಅನೇಕ ಚಿತ್ರಗಳ ಅನೇಕ ಸಂಭಾಷಣೆಗಳು ನನಗೆ ಬಾಯಿ ಪಾಠವಾಗಿ ಹೋಗಿದ್ದವು. ತೋಚಿದ ಹಾವಭಾವಗಳೊಂದಿಗೆ ನನ್ನ ಏಕೈಕ ಪ್ರೇಕ್ಷಕ-ಸಹ ಪಾತ್ರಧಾರಿ ನಾಗೇಶನ ಎದುರು ತೋಚಿದಂತೆ ಅಭಿನಯಿಸಲೂ ಯತ್ನಿಸುತ್ತಿದ್ದೆ.

ಕೊಣನೂರಿನ ಸಂತೆಮಾಳದ ಒಂದು ಬದಿಗೆ ಇದ್ದದ್ದೇ ಕೊಳಲ ಗೋಪಾಲಸ್ವಾಮಿ ದೇವಸ್ಥಾನ. ಅಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಯಾರೂ ಇರುತ್ತಿರಲಿಲ್ಲ. ಹಾಗಾಗಿ ಗುಡಿಯ ಹೊರ ಆವರಣದ ಜಗಲಿಯಲ್ಲೇ ನನ್ನ ಅಮೋಘ ಪ್ರದರ್ಶನ ನಡೆಯುತ್ತಿತ್ತು. ಗುಡಿಯ ಹಜಾರದ ಜಗಲಿಯೇ ನನ್ನ ಪ್ರಪ್ರಥಮ ರಂಗಸ್ಥಳ! ಕಲ್ಲುಕಂಬಗಳ ಆವರಣದ ರಂಗ ಸಜ್ಜಿಕೆಯಲ್ಲಿ, ಸಿಕ್ಕ ಮರದ ದಿಮ್ಮಿಯನ್ನೇ ರತ್ನ ಖಚಿತ ಸಿಂಹಾಸನವಾಗಿಸಿಕೊಂಡು, ಹಾದಿಬದಿಯಲ್ಲಿ ಸಿಕ್ಕ ಕೋಲನ್ನೇ ಖಡ್ಗವಾಗಿ ಝಳಪಿಸುತ್ತಾ, ತೆಂಗಿನ ಗರಿಗಳನ್ನು ಪೋಣಿಸಿ ಕಡ್ಡಿಚುಚ್ಚಿ ಮಾಡಿಕೊಂಡ ಕಿರೀಟವನ್ನು ಧರಿಸಿ ಕಂಠಸ್ಥವಾಗಿದ್ದ ಸಂಭಾಷಣೆಗಳನ್ನು ಭಾವಪೂರ್ಣವಾಗಿ ಹೇಳಲು ಯತ್ನಿಸುತ್ತಿದ್ದೆ.
ಪ್ರಾಣಮಿತ್ರ ನಾಗೇಶ ಇತರ ಪಾತ್ರಗಳನ್ನು ನಿರ್ವಹಿಸುತ್ತಿದ್ದ. ಆದರೆ ಅವನಿಗೆ ಆ ಪಾತ್ರಗಳ ಸಂಭಾಷಣೆಗಳು ಬರುತ್ತಿರಲಿಲ್ಲವಾದ್ದರಿಂದ ಅವನು ಸುಮ್ಮನೆ ಕೈಕಾಲು ಆಡಿಸುತ್ತಾ ಸಂಭಾಷಣೆ ಹೇಳುತ್ತಿರುವವನಂತೆ ತುಟಿಚಲನೆ ಮಾಡುತ್ತಿದ್ದ. ಅವನ ಪಾತ್ರದ ಸಂಭಾಷಣೆಗಳನ್ನೂ ಸಹಾ ನಾನೇ ಹೇಳುತ್ತಿದ್ದೆ. ಮತ್ತೊಬ್ಬ ಕಲಾವಿದ ನಿರ್ವಹಿಸುವ ಪಾತ್ರಕ್ಕೆ ಧ್ವನಿ ನೀಡುವ ಡಬ್ಬಿಂಗ್ ಕೆಲಸವನ್ನು ಬಹುಶಃ ನಾನು ಇಲ್ಲೇ ಪ್ರಾರಂಭ ಮಾಡಿದೆನೆಂದು ತೋರುತ್ತದೆ!
ಚಿಕ್ಕಜ್ಜ ಶಾಮರಾಯರಿಗೆ ತಮ್ಮ ಮೊಮ್ಮಗ ಚೆನ್ನಾಗಿ ಓದಿ ವಿದ್ಯಾವಂತನಾಗಬೇಕು, ಒಳ್ಳೆಯ ಅಂಕಗಳನ್ನು ತೆಗೆದುಕೊಂಡು ಸಾಕಿದ ತಮಗೂ ಒಳ್ಳೆಯ ಹೆಸರು ತರಬೇಕು ಅನ್ನುವ ಹಂಬಲ. ಆ ಕಾರಣಕ್ಕೇ ಪೇಟೆಯಲ್ಲಿ ರೂಂ ಮಾಡಿಕೊಂಡಿದ್ದ ಎಂ. ಆರ್. ಮೇಷ್ಟ್ರ ಬಳಿ ಟ್ಯೂಷನ್ ಗೆ ಸೇರಿಸಿದ್ದರು. ಏನೇ ಆದರೂ ನನ್ನ ತಲೆಗೆ ಮಾತ್ರ ಏನೂ ಹತ್ತುತ್ತಿರಲಿಲ್ಲ. ಅಸಲಿಗೆ ಓದಿನಲ್ಲಿ ನನಗೆ ಆಸಕ್ತಿಯೇ ಇರಲಿಲ್ಲವಲ್ಲ! ಸುಮ್ಮನೆ ಕಾಟಾಚಾರಕ್ಕೆ ಟ್ಯೂಷನ್ ಗೆ ಹೋಗಿ ಬರುತ್ತಿದ್ದೆ. ನಾಗೇಶನೂ ನನ್ನ ಜತೆ ಪಾಠ ಹೇಳಿಸಿಕೊಳ್ಳಲು ಬರುತ್ತಿದ್ದ.
ಪೇಟೆಯ ಮುಖ್ಯ ಬೀದಿಯಲ್ಲಿ ನಮ್ಮ ಪಾಠದ ಮನೆಯ ಸಾಲಿನಲ್ಲೇ ಮಿಲ್ ವೆಂಕಟರಾಮಯ್ಯ ಅವರ ಮನೆ. ಅವರ ಸೋದರ- ಕರ್ನಲ್ ಸೂರ್ಯನಾರಾಯಣಪ್ಪನವರು. ಇಂದು ಕನ್ನಡ ರಂಗಭೂಮಿ-ಕಿರುತೆರೆ—ಹಿರಿತೆರೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಶ್ರೇಷ್ಠ ನಟ ಕೆ.ಎಸ್. ಶ್ರೀಧರ್ (ಚಿದು) ಹಾಗೂ ಸುಪ್ರಸಿಧ್ಧ ಮ್ಯಾಜಿಶಿಯನ್ ಕೆ.ಎಸ್. ರಮೇಶ್, ಸೂರ್ಯನಾರಾಯಣಪ್ಪ ಅವರ ಮಕ್ಕಳು. ಇವರಿಬ್ಬರೂ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲೇ ಆದರೂ ದಸರಾ ರಜೆ ಹಾಗೂ ಬೇಸಗೆಯ ರಜೆಗೆ ಕೊಣನೂರಿನ ದೊಡ್ಡಪ್ಪನ ಮನೆಗೆ ಬರುತ್ತಿದ್ದರು.
ಹೆಚ್ಚುಕಡಿಮೆ ನನ್ನ ಓರಗೆಯವರೇ ಆದ್ದರಿಂದ ಅವರು ಬಂದಾಗಲೆಲ್ಲಾ ಒಟ್ಟಿಗೆ ಸೇರಿ ಗೋಲಿ-ಲಗೋರಿ ಆಟಗಳನ್ನಾಡುತ್ತಿದ್ದೆವು. ಮುಂದೆ ನಾನೂ ಬೆಂಗಳೂರಿಗೆ ಬಂದ ಮೇಲೆ ಎಷ್ಟೋ ವರ್ಷಗಳ ನಂತರ ಮತ್ತೆ ಈ ಅಪೂರ್ವ ಸೋದರರ ಭೇಟಿಯಾಗಿ ಅನೇಕ ಕಾರ್ಯಕ್ರಮಗಳನ್ನು ಒಟ್ಟಿಗೆ ರೂಪಿಸುವ ಅವಕಾಶ ದೊರೆಯಿತು. ಇದರ ಬಗ್ಗೆ ಮುಂದಿನ ಅಧ್ಯಾಯಗಳಲ್ಲಿ ವಿವರವಾಗಿ ಬರೆಯುತ್ತೇನೆ.ಪಾಠದ ಮನೆಗೆ ಮರಳುವುದಾದರೆ:
ಎಂ.ಆರ್.ಮೇಷ್ಟ್ರು ಪಾಠವನ್ನೇನೋ ಚೆನ್ನಾಗಿ ಹೇಳಿಕೊಡುತ್ತಿದ್ದರೂ ಮಾತುಮಾತಿಗೂ ಬೈಯುವ ಚಟ ಅವರಿಗೆ. ಅಲ್ಲೇ ಆಜುಬಾಜಿನಲ್ಲೇ ಹೈಸ್ಕೂಲ್ ಮೇಷ್ಟ್ರಾಗಿದ್ದ ಬಾಲಚಂದ್ರಯ್ಯನವರ ಮನೆ ಇತ್ತು. ಅವರ ಮಗಳು ಕಾತ್ಯಾಯಿನಿಗೂ ನಮ್ಮ ಮೇಷ್ಟ್ರಿಗೂ ಯಾವುದೋ ಮಾಯಕದಲ್ಲಿ ಪ್ರೇಮ ಚಿಗುರಿಬಿಟ್ಟಿತ್ತು. ನಮ್ಮ ಮೇಷ್ಟ್ರು ಆಗಾಗ್ಗೆ ನಮ್ಮ ಕೈಗೆ ಹತ್ತಾರು ಮಡಿಕೆ ಹಾಕಿದ ಚೀಟಿ ಕೊಟ್ಟು, ‘ಯಾರಿಗೂ ಕಾಣದ ಹಾಗೆ, ಗೊತ್ತಾಗದ ಹಾಗೆ ಕಾತ್ಯಾಯಿನಿ ಕೈಗೇ ಈ ಚೀಟಿ ಕೊಟ್ಟು ಬರಬೇಕು. ಕದ್ದುಮುಚ್ಚಿ ನೀವೇನಾದ್ರೂ ಚೀಟಿ ತೆಗೆದು ನೋಡಿದ್ರೋ, ಗಣಿತದಲ್ಲಿ ಸೊನ್ನೆ ಸುತ್ತಿಬಿಡ್ತೀನಿ ಹುಷಾರ್’ ಎಂದು ಹೆದರಿಸಿ ಚೀಟಿ ಕೊಟ್ಟು ಕಳಿಸುತ್ತಿದ್ದರು. ಕಾತ್ಯಾಯಿನಿ ಮೇಡಂ ಕೂಡಾ ಆಗಾಗ್ಗೆ ಚೀಟಿ ಕಳಿಸುತ್ತಿದ್ದುದುಂಟು. ಗಣಪತಿ ಹಬ್ಬ ಕಳೆದ ಮಾರನೇ ದಿನ ನಾನು ಮತ್ತು ನಾಗೇಶ ಎಂದಿನಂತೆ ಪಾಠಕ್ಕೆ ಹೋದೆವು. ಮೇಷ್ಟ್ರು ಯಾಕೋ ಸ್ವಲ್ಪ ಸಿಟ್ಟಿನಲ್ಲಿದ್ದಂತಿತ್ತು. ‘ಏ ಕತ್ತೆಭಡವರಾ, ನಾನು ಕೊಟ್ಟ ಚೀಟಿ ತೆರೆದು ನೋಡಬಾರದು ಅಂತ ಹೇಳಿದ್ದೆ ತಾನೇ? ಯಾಕೆ ನೋಡಿದ್ರಿ? ನೆನ್ನೆ ಅಲ್ಲಾ ಮೊನ್ನೆ ನೀವು ಆ ರಸ್ತೆ ತಿರುವಿನಲ್ಲಿ ಮರದ ಕೆಳಗೆ ನಿಂತು ಚೀಟಿ ಬಿಚ್ಚಿ ಓದ್ತಾ ಇದ್ದದ್ದು ನಾನು ಕಿಟಕೀಂದ ನೋಡಿದೆ.. ಅಯೋಗ್ಯರನ್ನ ತಂದು’ ಎಂದು ಬೈಯುತ್ತಾ ಇಬ್ಬರಿಗೂ ಮುಂಗೈ ಗಿಣ್ಣಿನ ಮೇಲೆ ಸ್ಕೇಲ್ ನಿಂದ ಬಾರಿಸಿದರು. ಹಸೀಸುಳ್ಳು… ಅವರು ಹೇಳಿದ ದಿನ ಖಂಡಿತ ನಾವು ಚೀಟಿ ತೆರೆದು ನೋಡಿರಲಿಲ್ಲ.
ನಾವು ನೋಡಿದ್ದು ಸುಮಾರು 15-20 ದಿನಗಳ ಹಿಂದೆ… ಅದೇನೇನೋ ಇಂಗ್ಲೀಷಿನಲ್ಲಿ ಗೀಚಿದ್ದರಿಂದ ಓದೋದಕ್ಕಾಗದೆ ನಿರಾಶರಾಗಿ ಅವತ್ತಿನಿಂದಲೇ ಆ ವ್ಯರ್ಥ ಪ್ರಯತ್ನವನ್ನು ನಿಲ್ಲಿಸಿಬಿಟ್ಟಿದ್ದೆವು. ಬಹುಶಃ ಮೇಷ್ಟ್ರು ನಮ್ಮನ್ನು ಪರೀಕ್ಷಿಸಲು, ಅಥವಾ ನಮ್ಮ ಬಾಯಿಬಿಡಿಸಲು ಕತ್ತಲಲ್ಲಿ ಬಾಣ ಬಿಡುತ್ತಿದ್ದಾರೆ. ಮೇಷ್ಟ್ರಾಗಿ ಹೀಗೆ ಸುಳ್ಳು ಹೇಳುತ್ತಿದ್ದಾರಲ್ಲಾ ಎಂದು ತುಂಬಾ ದುಃಖವಾಯಿತು. ಪಾಠ ಮುಗಿಸಿ ಮನೆಗೆ ಹೋಗುವಾಗ ಇದ್ದಕ್ಕಿದ್ದಂತೆ ನಾಗೇಶನಿಗೆ ಜ್ಞಾನೋದಯವಾಗಿಬಿಟ್ಟಿತು! ‘ಪ್ರಭೂ,ನಾವೆಲ್ಲೋ ನಿನ್ನೆ ಚೌತಿ ಚಂದ್ರನ್ನ ನೋಡಿಬಿಟ್ಟಿದೀವಿ ಅಂತ ಕಾಣುತ್ತೆ ಕಣೋ… ಅದಕ್ಕೇ ನಮ್ಮ ಮೇಲೆ ಈ ಥರಾ ಸುಳ್ಳು ಆರೋಪ ಹೊರಿಸ್ತಿದಾರೆ’ ಅಂದ ನಾಗೇಶ. ನನಗೂ ಇರಬಹುದು ಅನ್ನಿಸಿ ಆಮೇಲೆ ಎಷ್ಟೋ ಸಮಾಧಾನವಾಯಿತು. ತಪ್ಪು ನಮ್ಮದಲ್ಲ, ಚೌತಿ ಚಂದ್ರನದು!
ಇದಾದ ಕೆಲವು ದಿನಗಳಿಗೇ ಇವರಿಬ್ಬರ ಪ್ರೇಮ ವ್ಯವಹಾರ ಕಾತ್ಯಾಯಿನಿಯವರ ತಂದೆ ಬಾಲಚಂದ್ರಯ್ಯನವರಿಗೆ ಅದು ಹೇಗೋ ಗೊತ್ತಾಗಿ ಹೋಯಿತು. ಒಂದು ಸಂಜೆ ನಾವು ಪಾಠಕ್ಕೆಂದು ಹೋದರೆ ಬಾಲಚಂದ್ರಯ್ಯನವರು ಮೇಷ್ಟ್ರ ರೂಮಿನ ಜಗಲಿಯ ಮೇಲೆ ನಿಂತು ಮೇಷ್ಟ್ರಿಗೆ ಬಾಯಿಗೆ ಬಂದ ಹಾಗೆ ಬೈಯುತ್ತಿದ್ದಾರೆ… ಮೇಷ್ಟ್ರು ತುಟಿಪಿಟಿಕ್ ಅನ್ನದೆ ನತಮಸ್ತಕರಾಗಿ ನಿಂತುಬಿಟ್ಟಿದ್ದಾರೆ! ನಮ್ಮನ್ನು ನೋಡಿದ ಬಾಲಚಂದ್ರಯ್ಯನವರು, ‘ಓಹೋ! ಈ ಪೀಡೆಗಳ ಕೈಲೇನೋ ನೀನು ಚೀಟಿ ಕೊಟ್ಟು ಕಳಿಸ್ತಾ ಇದ್ದದ್ದು’ ಅಂದವರೇ ಮತ್ತೆ ಮೇಷ್ಟ್ರನ್ನು ವಾಚಾಮಗೋಚರ ಬೈಯಲು ಶುರು ಮಾಡಿದರು. ‘ನಮ್ಮ ಮೇಲೆ ಸುಳ್ಳು ಆರೋಪ ಹೊರಿಸಿ ಮುಂಗೈಗಿಣ್ಣಿಗೆ ಬಾರಿಸಿದ್ದಕ್ಕೆ ತಕ್ಕ ಶಾಸ್ತಿಯಾಯಿತು’ ಎಂದು ಒಳಗೊಳಗೇ ಹಿಗ್ಗಿದರೂ ಕಪ್ಪಿಟ್ಟುಹೋಗಿದ್ದ ಮೇಷ್ಟ್ರ ಮುಖ ನೋಡಿ ಅಯ್ಯೋ ಪಾಪ ಅನ್ನಿಸಿತು. ಮೇಷ್ಟ್ರಿಗೆ ನಾಲ್ಕು ಹೊಡೆತಗಳೂ ಬಿದ್ದವು ಎಂದು ನಾಗೇಶ ಹೇಳಿದರೂ ನನ್ನ ನೆನಪಿನಿಂದ ಅದು ಜಾರಿಹೋಗಿದೆ.
ಒಂದು ಸಂಜೆ ಶಾಲೆಯಿಂದ ಮನೆಗೆ ಮರಳಿ ಬರುತ್ತಿರುವಾಗ ಯಾರೋ ಏನೋ ಕೂಗಿಕೊಂಡು ಬರುತ್ತಿರುವ ಸದ್ದು ಪಕ್ಕದ ಬೀದಿಯಿಂದ ಕೇಳಿಸಿತು. ಕುತೂಹಲದಿಂದ ಅತ್ತ ಹೋಗಿ ನೋಡಿದರೆ ಒಬ್ಬ ಸೈಕಲ್ ಮೇಲೆ ಒಂದೆರಡು ಸಿನೆಮಾ ಪೋಸ್ಟರ್ ಗಳನ್ನು ಕಟ್ಟಿಕೊಂಡು ಕೂಗುತ್ತಾ ಬರುತ್ತಿದ್ದಾನೆ! ‘ಮಹನೀಯರೇ ಮತ್ತು ಮಹಿಳೆಯರೇˌ ನಿಮ್ಮ ಕೊಣನೂರಿನಲ್ಲಿ ನಾಳೆಯಿಂದ ಅಮೋಘ ಪ್ರಾರಂಭ.. ನಂಜುಂಡೇಶ್ವರ ಟೂರಿಂಗ್ ಟಾಕೀಸ್’ !!! ನನ್ನ ಆನಂದಕ್ಕೆ ಪಾರವೇ ಇಲ್ಲದಂತಾಯಿತು. ಟೆಂಟ್ ಇಲ್ಲದ ಕಾರಣಕ್ಕೆ ಸಿನೆಮಾ ನೋಡಿ ನಾಲ್ಕು ತಿಂಗಳುಗಳೇ ಕಳೆದುಹೋಗಿದ್ದವು. ನಿಧಿ ಸಿಕ್ಕಂತಾಗಿ ಹೋಯಿತು ನನಗೆ.

ಅಂದು ಮನೆಯಲ್ಲಿ ಏನೋ ವಿಶೇಷವೆಂದು ಚಿಕ್ಕಜ್ಜಿ ಕಡಲೇಹಿಟ್ಟು (ಚಿಕ್ಕಜ್ಜಿ ಮಾಡುತ್ತಿದ್ದ ಒಂದು ವಿಶೇಷ ಸಿಹಿ ತಿನಿಸು) ಮಾಡಿದ್ದರು. ಒಂದು ದೊಡ್ಡ ಪೊಟ್ಟಣದ ತುಂಬಾ ಕಡಲೇಹಿಟ್ಟು ಕಟ್ಟಿಕೊಟ್ಟು, ‘ಇದನ್ನು ಪಾಠದ ಮೇಷ್ಟ್ರಿಗೆ ಕೊಟ್ಟು ಬಾ’ ಎಂದರು. ಮನೆಯಲ್ಲಿ ಏನೇ ವಿಶೇಷ ತಿಂಡಿ ಮಾಡಿದಾಗಲೂ ಮೇಷ್ಟ್ರಿಗೆ ಕೊಟ್ಟುಬರುವುದು ವಾಡಿಕೆಯಾಗಿತ್ತು. ಸರಿ, ಪೊಟ್ಟಣವನ್ನೂ ಚೀಲಕ್ಕೆ ಸೇರಿಸಿಕೊಂಡು ಟೆಂಟ್ ಶುರುವಾಗುತ್ತಿರುವ ಸಂಭ್ರಮದಲ್ಲಿ ಖುಷಿಯಿಂದಲೇ ಪಾಠಕ್ಕೆ ಹೊರಟೆ.
ದಾರಿಯಲ್ಲೇ ನಾಗೇಶನ ಮನೆ ಇದ್ದುದರಿಂದ ನಾನು ಅಲ್ಲಿಗೆ ಹೋಗಿ ಅಲ್ಲಿಂದ ಇಬ್ಬರೂ ಒಟ್ಟಿಗೆ ಪಾಠಕ್ಕೆ ಹೋಗುವುದು ಮಾಮೂಲಿ ದಿನಚರಿಯಾಗಿತ್ತು. ನಾಗೇಶನ ಮನೆಗೆ ಹೋದರೆ ಅಲ್ಲಿ ಮತ್ತೊಂದು ಸಿಹಿ ಸುದ್ದಿ ಕಾಯುತ್ತಿತ್ತು: ಇವತ್ತು ಎಲ್ಲರಿಗೂ ಬಿಟ್ಟಿ ಸಿನೆಮಾ ತೋರಿಸ್ತಿದಾರೆ ಟೆಂಟ್ ನಲ್ಲಿ! ಖುಷಿಯಿಂದ ಕುಣಿಯುತ್ತಾ ಹಿಂದೆ ಮುಂದೆ ನೋಡದೆ ಇಬ್ಬರೂ ಟೆಂಟ್ ನತ್ತ ಧಾವಿಸಿದೆವು. ನಾವು ತಲುಪುವ ವೇಳೆಗಾಗಲೇ ಸುಮಾರು ಜನ ಬಂದು ಜಮಾಯಿಸಿದ್ದರು.
ಒಂದಷ್ಟು ಹೊತ್ತು ಕಾಯಿಸಿದ ಮೇಲೆ ಎಲ್ಲರನ್ನೂ ಒಳಬಿಟ್ಟರು. ‘ಯಾವ ಪಿಚ್ಚರ್ ತೋರಿಸ್ತೀರ್ರೀ’ ಎಂದು ನಾನು ಗೇಟ್ ಕೀಪರ್ ನನ್ನು ಕೇಳಿದೆ. ‘ಯಾವುದೋ ಒಂದು ತೋರಿಸ್ತಾರೆ ಸುಮ್ನೆ ಹೋಗಿ ಕುಂತ್ಕಳಲೇ’ ಎಂದು ಅವನು ಸುಮ್ಮಸುಮ್ಮನೇ ಗದರಿದ. ಟೆಂಟ್ ನ ವ್ಯವಸ್ಥೆ ಹೇಗೆಂದರೆ, ಪರದೆಗೆ ಸಮೀಪವಾಗಿ ನೆಲ-ಅಲ್ಲಿ ಕೂತು ಸಿನೆಮಾ ನೋಡಲು 25 ಪೈಸೆ; ಸ್ವಲ್ಪ ಹಿಂದೆ ಒಂದು ಬದಿಗೆ ಬೆಂಚ್ ಗಳು-ಅಲ್ಲಿಗೆ 50 ಪೈಸೆ; ಪಕ್ಕದಲ್ಲಿ ಕಬ್ಬಿಣದ ಕುರ್ಚಿಗಳು-ಶ್ರೀಮಂತರಿಗೆ ಹಾಗೂ ದೊಡ್ಡ ಮನುಷ್ಯರಿಗೆ-ಅಲ್ಲಿಗೆ 80 ಪೈಸೆ. ನಾನು, ನಾಗೇಶ ಸಂಭ್ರಮದಿಂದ ನೆಲದ ಮೇಲೆ ಆಸೀನರಾದೆವು.
‘ಯಾವ ಪಿಚ್ಚರ್ ತೋರಿಸುತ್ತಾರೋ’ ಎಂಬ ಕುತೂಹಲದಿಂದ ನಾನು ರೋಮಾಂಚಿತನಾಗುತ್ತಿದ್ದೆ. ಅಷ್ಟರಲ್ಲೇ ಮತ್ತೂ ಒಂದು ಅದ್ಭುತ ವಿಚಾರ ಹೊಳೆಯಿತು: ಪಿಕ್ಚರ್ ಮುಗಿಯುವುದು ತಡವಾಗುವುದರಿಂದ ಪಾಠಕ್ಕೆ ಹೋಗೋ ಅಗತ್ಯವಿಲ್ಲ! ಪಾಠಕ್ಕೆ ಹೋಗದಿದ್ದ ಮೇಲೆ ಮೇಷ್ಟ್ರಿಗೆ ಕಡಲೇಹಿಟ್ಟೂ ಕೊಡುವ ಪ್ರಮೇಯವಿಲ್ಲ! ಸಿನೆಮಾ ನೋಡುತ್ತಾ ನೋಡುತ್ತಾ ನಾವೇ ತಿಂದು ಮುಗಿಸಿದರಾಯಿತು! ಅಷ್ಟರಲ್ಲೇ ದೀಪಗಳನ್ನೆಲ್ಲಾ ಆರಿಸಿದರು. ಓ! ಪಿಚ್ಚರ್ ಶುರು! ನಾವು ಸಂಭ್ರಮದಿಂದ ಪೊಟ್ಟಣ ಬಿಚ್ಚಿ ಕಡಲೇಹಿಟ್ಟು ಮುಕ್ಕತೊಡಗಿದೆವು.
ನ್ಯೂಸ್ ರೀಲ್ ಮುಗಿಯುತ್ತಿದ್ದಂತೆ ಯಾವ ಪಿಕ್ಚರ್ ತೋರಿಸುವರೋ ಎಂಬ ಕುತೂಹಲ ಹೆಚ್ಚಾಯಿತು. ಇದ್ದಕ್ಕಿದ್ದಂತೆ ಒಂದು ಹಾಡಿನ ದೃಶ್ಯ ಶುರುವಾಯಿತು. ಅದಾದ ಮೇಲೆ ಯಾವುದೋ ತಮಿಳು ಸಿನೆಮಾದ ಒಂದು ಪುಟ್ಟ ದೃಶ್ಯ.. ಆಮೇಲೆ ಮತ್ತೊಂದು ಹಾಡಿನ ದೃಶ್ಯ.. ಅದಾಗುತ್ತಿದ್ದಂತೆ ಟೆಂಟ್ ನ ದೀಪಗಳು ಹತ್ತಿಕೊಂಡವು! ಶೋ ಮುಗೀತು.. ಎಲ್ರೂ ಹೊರಡಿ ಎಂದು ಯಾರೋ ಕೂಗಿದರು! ನಮಗಾದ ನಿರಾಸೆ ಅಷ್ಟಿಷ್ಟಲ್ಲ.

ಹದಿನೈದೇ ನಿಮಿಷಕ್ಕೆ ಸಿನೆಮಾ ನೋಡುವ ಕಾರ್ಯಕ್ರಮ ಮುಗಿದೇ ಹೋಯಿತು! ಪ್ರೊಜೆಕ್ಷನ್ ಸರಿಯಾಗಿ ಆಗುತ್ತದೋ ಇಲ್ಲವೋ ಎಂದು ನೋಡಲು ಒಂದು ಚಿಕ್ಕ ಪ್ರಯೋಗ ಮಾಡಿದರೆಂದು ತೋರುತ್ತದೆ ಟೆಂಟ್ ನವರು. ಇನ್ನೇನು ಮಾಡುವುದು? ತುಂಬಾ ಸಮಯವಿರುವುದರಿಂದ ಪಾಠಕ್ಕೂ ಹೋಗಲೇಬೇಕು! ಸರಿ, ಪೆಚ್ಚುಮೋರೆ ಹಾಕಿಕೊಂಡು ಚೀಲಗಳನ್ನು ಬಗಲಿಗೇರಿಸಿಕೊಂಡು ಅರ್ಧ ಖಾಲಿಯಾಗಿದ್ದ ಕಡಲೇಹಿಟ್ಟಿನ ಪೊಟ್ಟಣವನ್ನು ಕೈಲಿ ಹಿಡಿದು ಟೆಂಟ್ ನಿಂದ ಹೊರಬಂದೆವು.
ನಾಗೇಶನಿಗೆ ಒಂದು ಜಿಜ್ಞಾಸೆ ಶುರುವಾಯಿತು: ಕೈಯಿಂದ ತೆಗೆತೆಗೆದು ಮುಕ್ಕಿರುವುದರಿಂದ ಕಡಲೇಹಿಟ್ಟು ಎಂಜಲಾಗಿ ಹೋಗಿದೆ, ನಮ್ಮ ಎಂಜಲನ್ನು ಗುರುಗಳಿಗೆ ತಿನ್ನಿಸುವುದು ಪಾಪವಲ್ಲವೇ? ಎಂದು ಬಹಳ ಗಂಭೀರವಾಗಿ ಕೇಳಿದ ಶಿಷ್ಯೋತ್ತಮ. ‘ಹಾಗಾದ್ರೆ ಏನು ಮಾಡೋಣ? ನಾವೇ ತಿಂದು ಮುಗಿಸಿಬಿಡೋಣವಾ’ ಎಂದೆ ನಾನು. ಹುಂ ಎಂದ ನಾಗೇಶ ಪೊಟ್ಟಣವನ್ನೇ ನೋಡುತ್ತಾ. ಅವನ ಕಣ್ಣಲ್ಲಿ ಆಸೆ ಮಿನುಗುತ್ತಿತ್ತು. ಆದರೆ ಅಕಸ್ಮಾತ್ ಚಿಕ್ಕಜ್ಜ ನಾಳೆ ಪೇಟೆಯಲ್ಲಿ ಮೇಷ್ಟ್ರಿಗೆ ಸಿಕ್ಕಿ, ‘ಕಡಲೇಹಿಟ್ಟು ತಿಂದರಾ? ಹ್ಯಾಗಿತ್ತು?’ ಅಂತ ಕೇಳಿ ಮೇಷ್ಟ್ರು ‘ಯಾವ ಕಡಲೇಹಿಟ್ಟು?’ ಅಂದುಬಿಟ್ಟರೆ? ಅಯ್ಯಯ್ಯೋ! ಬೇಡಪ್ಪಾ! ನಾವು ಏಟು ತಿನ್ನೋದಕ್ಕಿಂತ ಮೇಷ್ಟ್ರಿಗೆ ಎಂಜಲು ತಿನ್ನಿಸೋದೇ ವಾಸಿ ಎಂದು ತೀರ್ಮಾನ ಮಾಡಿ ಪಾಠಕ್ಕೆ ಹೋದೆವು. ನಾನು, ‘ತೊಗೊಳಿ ಸಾರ್, ಅಜ್ಜಿ ಕೊಟ್ರು’ ಎಂದು ಪೊಟ್ಟಣವನ್ನು ಮೇಷ್ಟ್ರಿಗೆ ಕೊಟ್ಟೆ.
ಮನಸ್ಸಿನಲ್ಲಿ ಒಂದು ಥರಾ ಅಳುಕು.. ಅಕಸ್ಮಾತ್ ಮೇಷ್ಟ್ರಿಗೆ ಗೊತ್ತಾಗಿಬಿಟ್ಟರೆ! ಅಷ್ಟಾವಕ್ರವಾಗಿ ಸುತ್ತಿದ್ದ ಪೊಟ್ಟಣವನ್ನೇ ನೋಡುತ್ತಾ ಮೇಷ್ಟ್ರು ನಿಧಾನವಾಗಿ ಪೊಟ್ಟಣ ಬಿಚ್ಚಿದರು. ‘ಯಾಕೋ ಪ್ರಭೂ,ಈ ಸಲ ಅಜ್ಜಿ ತುಂಬಾ ಕಮ್ಮಿ ಕಳಿಸಿದಾರೆ ಕಡಲೇ ಹಿಟ್ಟು’ ಎಂದು ನನ್ನನ್ನೇ ನೋಡುತ್ತಾ ಕೇಳಿದರು ಮೇಷ್ಟ್ರು. ನಾನು ಪೆಚ್ಚುಪೆಚ್ಚಾಗಿ ನಕ್ಕು ಹೂಂ ಸರ್ ಅಂದೆ. ಸಧ್ಯ! ದೇವರು ಮೇಷ್ಟ್ರಿಗೆ ಒಳ್ಳೇ ಬುದ್ಧಿ ಕೊಟ್ಟ. ಅವರು ಮತ್ತೇನೂ ಪ್ರಶ್ನೆ ಕೇಳಲಿಲ್ಲ. ನಾನೂ ನಾಗೇಶನೂ ಮುಖ ಮುಖ ನೋಡಿಕೊಂಡು ಸಮಾಧಾನದ ನಿಟ್ಟುಸಿರು ಬಿಟ್ಟೆವು.
। ಇನ್ನು ಮುಂದಿನ ವಾರಕ್ಕೆ ।






0 Comments