
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.
ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
75
ಕ್ರೋಧನ ನಾಮ ಸಂವತ್ಸರದ ಆಷಾಢ ಬಹುಳ ನವಮಿ ಗುರುವಾರ ಬೆಳಿಗ್ಗೆ 10.25 ರಿಂದ 12.20 ರ ಒಳಗೆ ಸಲ್ಲುವ ಶುಭ ಕನ್ಯಾಲಗ್ನದಲ್ಲಿ, ಪಂಪ ಮಹಾಕವಿ ರಸ್ತೆಯಲ್ಲಿರುವ ಚಂದ್ರಶೇಖರ ಭಾರತಿ ಕಲ್ಯಾಣ ಮಂಟಪದಲ್ಲಿ ನಾನು ಗೃಹಸ್ಥಾಶ್ರಮಕ್ಕೆ ಪದಾರ್ಪಣೆ ಮಾಡಿ, ರಂಜನಿಯೊಂದಿಗೆ ಸಪ್ತಪದಿ ನಡೆದು ಅವಳನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದೆ. ನಮ್ಮದು ಸಂಪ್ರದಾಯಸ್ಥ ವೈದಿಕ ಕುಟುಂಬವಾದ್ದರಿಂದ ಎಲ್ಲಾ ವಿಧಿ ವಿಧಾನಗಳೂ ಶಾಸ್ತ್ರೋಕ್ತವಾಗಿ ಬಂಧುಮಿತ್ರರ ಸಮಕ್ಷಮದಲ್ಲಿ ನೆರವೇರಿದವು. ವಾಸ್ತವವಾಗಿ ನನಗೂ ರಂಜನಿಗೂ ಸರಳ ವಿವಾಹದತ್ತಲೇ ಒಲವಿದ್ದರೂ ಕುಟುಂಬದವರ ಪ್ರೀತಿಯ ಒತ್ತಾಯಕ್ಕೆ ಮಣಿಯಲೇಬೇಕಾಯಿತು. ಪ್ರೀತಿ—ಆತ್ಮೀಯತೆಗಳೇ ಪ್ರವಹಿಸುತ್ತಿದ್ದ ಸುಂದರ ವಾತಾವರಣದಲ್ಲಿ ಯಾವುದೇ ತೊಡಕು—ಮುಜುಗರ—ಗೊಂದಲಗಳಿಲ್ಲದೆ ಸುಸೂತ್ರವಾಗಿ ಹಬ್ಬದ ಹಾಗೆ ಮದುವೆ ನೆರವೇರಿದ್ದು ನನ್ನ ಹಾಗೂ ರಂಜನಿಯ ಮನಸ್ಸಿಗೆ ತುಂಬಾ ಹಿತವನ್ನು ತಂದ ಸಂಗತಿ.
ಮಾಂಗಲ್ಯಧಾರಣೆಗೆ ತುಸುವೇ ಮೊದಲು ನಡೆದ ಒಂದು ಲಘು ಪ್ರಸಂಗವನ್ನು ನಮ್ಮ ಮನೆಯವರೆಲ್ಲರೂ ಈಗಲೂ ನೆನೆಸಿಕೊಳ್ಳುತ್ತೇವೆ! ಅದು ಆದದ್ದು ಹೀಗೆ:
ಹಿಂದೆಯೇ ಹೇಳಿದಂತೆ ನಮ್ಮ ಮದುವೆ ಮಾಡಿಸಿದವರು ನಮ್ಮ ಕುಲ ಪುರೋಹಿತರೂ ಆಗಿದ್ದ ನಮ್ಮ ದೊಡ್ಡಪ್ಪನವರು. ಅವರಿಗೆ ಕೊಂಚ ದೃಷ್ಟಿದೋಷವಿದ್ದು ನಮಗೆ ಮಾರು ದೂರದಲ್ಲಿರುವವರನ್ನು ಅವರು ನೋಡುತ್ತಿದ್ದರೂ ನಮಗೆ ಅವರು ನಮ್ಮನ್ನೇ ನೋಡುತ್ತಿದ್ದಾರೆಂಬಂತೆ ಭಾಸವಾಗುತ್ತಿತ್ತು. ಹಾಗೆಯೇ ಅವರು ನಮ್ಮನ್ನು ನೋಡುತ್ತಿದ್ದಾರೆಂದು ಭಾವಿಸಿ ನಾವು ಪ್ರತಿಕ್ರಿಯಿಸುತ್ತಿದ್ದರೆ ಅವರ ದೃಷ್ಟಿ ಇರುತ್ತಿದ್ದುದು ಮಾರು ದೂರದಲ್ಲಿರುತ್ತಿದ್ದ ಮತ್ತೊಬ್ಬರ ಮೇಲೆ.

ಚಿಕ್ಕಂದಿನಲ್ಲಿ ನಮಗೆ ಇದರಿಂದ ಸಾಕಷ್ಟು ಗೊಂದಲಗಳಾಗುತ್ತಿದ್ದರೂ ನಂತರ ಒಗ್ಗಿಕೊಂಡಿದ್ದೆವು. ನಮ್ಮ ಕುಟುಂಬವೆಂದರಂತೂ ಆ ದೊಡ್ಡಪ್ಪನಿಗೆ ವಿಶೇಷ ಪ್ರೀತಿ. ನಮಗೂ ಅಷ್ಟೇ: ಅತ್ಯಂತ ಕಟ್ಟುನಿಟ್ಟಾಗಿ ಶಾಸ್ತ್ರೋಕ್ತವಾಗಿ ಸಾಂಗವಾಗಿ ಎಲ್ಲಾ ಕಲಾಪಗಳನ್ನೂ ನೆರವೇರಿಸಿಕೊಟ್ಟರೂ ಎಂದೂ ದುರಾಸೆಗೆ ಬಿದ್ದವರಲ್ಲ.. ಹೆಚ್ಚಿನ ಸಂಭಾವನೆಗೆ ಕೈ ಒಡ್ಡಿದವರಲ್ಲ. ಪ್ರೀತಿ ಗೌರವದಿಂದ ಕೊಟ್ಟದ್ದನ್ನು ಪರಮ ಪ್ರಸಾದವೆಂದು ಸ್ವೀಕರಿಸಿ ತೃಪ್ತರಾಗಿ ಹರಸುತ್ತಿದ್ದರು. ಇಂಥಾ ನಮ್ಮ ಪ್ರೀತಿಯ ದೊಡ್ಡಪ್ಪ ಮಾಂಗಲ್ಯಧಾರಣೆ ಮಾಡಿಸಲು ಅಣಿಮಾಡಿಕೊಳ್ಳುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ನನ್ನ ಆತ್ಮೀಯ ಗೆಳೆಯ ಅಶೋಕ ಬಾದರದಿನ್ನಿ ಹಸೆಮಣೆಯ ಬಳಿ ಬಂದು ಕುಳಿತು ನನ್ನನ್ನು ಮಾತಾಡಿಸತೊಡಗಿದ! ಕೆಲ ನಿಮಿಷಗಳು ಕಾದು ನೋಡಿದ ದೊಡ್ಡಪ್ಪ, ಅಶೋಕ ಅಲ್ಲಿಂದ ಕದಲದಿದ್ದಾಗ, ಅಶೋಕನನ್ನೇ ನೋಡುತ್ತಾ, “ದಯವಿಟ್ಟು ಸ್ವಲ್ಪ ಈ ಕಡೆ ಬರ್ತೀರಾ? ಮುಂದಿನ ಕಲಾಪಕ್ಕೆ ತಡವಾಗುತ್ತೆ” ಎಂದರು. ಅವರು ಮಾತು ತನ್ನನ್ನು ಉದ್ದೇಶಿಸಿ ಹೇಳಿದ್ದೆಂದು ಅಶೋಕನಿಗೇನೂ ಅರ್ಥವಾಗದೇ ಅವನು ಅಲ್ಲೇ ಕುಳಿತು ಮಾತು ಮುಂದುವರಿಸಿದ.
ಮತ್ತೊಂದು ನಿಮಿಷ ನೋಡಿದ ದೊಡ್ಡಪ್ಪ ಕೊಂಚ ಕಟುವಾಗಿ, “ಈ ಕಡೆ ಬನ್ನಿ ಯಜಮಾನರೇ..ತಡವಾಗ್ತಿದೆ!” ಎಂದರು. ಅವರನ್ನು ಒಮ್ಮೆ ಗಮನಿಸಿದ ಅಶೋಕ ಅವರ ದೃಷ್ಟಿಯನ್ನು ಹಿಂಬಾಲಿಸಿ ನೋಡಿ ಮತ್ತೆ ಅದು ತನಗೆ ಹೇಳಿದ್ದಲ್ಲವೆಂದು ಭಾವಿಸಿ ಕುಳಿತೇ ಇದ್ದ!ದೊಡ್ಡಪ್ಪನಿಗೆ ಕೋಪ ಮೀರಿಯೇ ಬಿಟ್ಟಿತು! “ಅಯ್ಯೋ ನಿಮ್ಮ! ಎಷ್ಟು ಸಲ ಹೇಳಿದ್ರೂ ಅರ್ಥವೇ ಆಗೋಲ್ಲವೇನ್ರೀ ನಿಮಗೆ? ಈ ಕಡೆ ಬನ್ರೀ..ಆಮೇಲೆ ಎಷ್ಟು ಬೇಕಾದರೂ ಕತೆ ಹೇಳುವಿರಂತೆ..ಬನ್ನಿ” ಎಂದು ಗದರಿಯೇ ಬಿಟ್ಟರು! ನನಗೂ ರಂಜನಿಗೂ ಅಶೋಕನ ಹಾವಭಾವಗಳನ್ನು ನೋಡಿಯೇ ನಗು ಉಕ್ಕಿಬರುತ್ತಿತ್ತು..ಈಗ ಈ ದೃಷ್ಟಿ ಗೊಂದಲ ನೋಡಿ ಮತ್ತೂ ತಡೆಯದಾಯಿತು. “ಅಯ್ಯ! ಸ್ವಾಮಿ ನಂಗೇ ಹೇಳಾಕ ಹತ್ತಾನೇನೋ?” ಎಂದು ಅಶೋಕ ನನ್ನನ್ನು ಕೇಳಿದ..ನಾನು ನಗುತ್ತಲೇ ಹೌದೆಂದು ತಲೆ ಆಡಿಸಿದೆ. “ಹೋಗಾ ಇವನ! ಎತ್ತೆತ್ಲಾಗೋ ನೋಡಿಕೋತ ನನಗ ಅಂದ್ರ ಹ್ಯಾಂಗೋ ತಿಳೀಬೇಕು? ಬೈತಾನಲ್ಲಲೇ ನಿಮ್ಮ ಸ್ವಾಮೀ..!” ಎಂದು ಅಶೋಕ ಅಪ್ಪಟ ಬಿಜಾಪುರೀ ಶೈಲಿಯಲ್ಲಿ ನುಡಿದಾಗಲಂತೂ ನಮಗೆ ನಗು ಉಕ್ಕಿ ಬಂದುಬಿಟ್ಟಿತು.ರಂಜನಿಯಂತೂ ಬಾಯಿಗೆ ಸೆರಗು ಮುಚ್ಚಿಕೊಂಡು ನಗುತ್ತಿದ್ದಳು. ನಾನು ಆಮೇಲೆ ಮಾತಾಡೋಣ ನಡಿ ಎಂದು ಅಶೋಕನಿಗೆ ಹೊರಡಲು ಸೂಚಿಸಿದೆ. “ಭಾರೀ ಅದಾನಪ್ಪಾ ನಿಮ್ಮ ಸ್ವಾಮೀ..”ಎಂದು ನಗುತ್ತಾ ದೊಡ್ಡಪ್ಪನಿಗೊಮ್ಮೆ ನಮಸ್ಕರಿಸಿ ಅಲ್ಲಿಂದ ಹೊರಟ ಅಶೋಕ. ಇನ್ನೂ ನಗುತ್ತಲೇ ಇದ್ದ ನಮ್ಮತ್ತ ತಿರುಗಿದ ದೊಡ್ಡಪ್ಪ, “ಸಾಕು ಸಾಕು.. ಮಂಗಳಕಾರ್ಯಗಳು ಶಾಸ್ತ್ರೋಕ್ತವಾಗಿ ನಡೆಯೋ ಸಂದರ್ಭದಲ್ಲಿ ಹುಡುಗಾಟ ಮಾಡಬಾರದು.. ಗಂಭೀರವಾಗಿರಬೇಕು” ಎಂದು ನಮಗೂ ಚಾಟಿ ಬೀಸಿದರು! ಇಂದಿಗೂ ನಮ್ಮ ಕುಟುಂಬದವರೆಲ್ಲ ನೆನೆಸಿಕೊಂಡು ನಗುವ ಅಶೋಕನ ಮಾತೆಂದರೆ:” ಸ್ವಾಮಿ ಬೈತಾನಲ್ಲಲೇ”!!

ಸಪ್ತಪದಿ ತುಳಿಯುತ್ತಿದ್ದ ವೇಳೆ ಸನಿಹದಲ್ಲೇ ಕುಳಿತಿದ್ದ ಬಂಧುವೊಬ್ಬರು “ಗಟ್ಟಿಯಾಗಿ ಕೈ ಹಿಡಕೋಪ್ಪಾ..ಹಿಡಿತ ಸಡಿಲಾಗಿ ಜಾರಿಬಿಡಬಾರದು” ಎಂದು ತಮಾಷೆಯಾಗಿ ನುಡಿದರು. “ಕೈಹಿಡಿದಿರೋದು ಕೊನೇತನಕ ಜೊತೇಲಿ ನಡೆಯೋದಕ್ಕೆ ಮಾವಯ್ಯ! ಈ ಬಂಧ ಸಡಿಲಾಗಿ ಜಾರೋ ಪ್ರಶ್ನೆಯೇ ಇಲ್ಲ” ಎಂದು ನಾನು ಮರುನುಡಿದಾಗ ರಂಜನಿಯ ಕಣ್ಣಲ್ಲಿ ಮಿಂಚಿನ ಹೊಳಪು!
ಮದುವೆಯ ದಿನದಂದೇ ಸಂಜೆ ಆರತಕ್ಷತೆಯ ಕಾರ್ಯಕ್ರಮವನ್ನೂ ನಿಯೋಜಿಸಲಾಗಿತ್ತು. ಅನೇಕ ರಂಗಭೂಮಿಯ—ಚಿತ್ರರಂಗದ ಗೆಳೆಯರು, ದೂರದರ್ಶನದ ಬಳಗ, ಅಧ್ಯಾಪಕ ವೃಂದ, ಸಾಹಿತ್ಯ ಕ್ಷೇತ್ರದ ಗೆಳೆಯರು…ಎಲ್ಲರೂ ಸಂಜೆಯ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು. ನಮಗೇಕೋ ತೀರಾ ಔಪಚಾರಿಕವಾಗಿ ವೇದಿಕೆಯ ಮೇಲೆ ಪೀಠಗಳಲ್ಲಿ ಆಸೀನರಾಗಿ ಆಗಮಿಸಿದ ಬಂಧು ಮಿತ್ರರ ಶುಭ ಹಾರೈಕೆಗಳನ್ನು ಸ್ವೀಕರಿಸುವುದು ಅಷ್ಟಾಗಿ ಮನಸ್ಸಿಗೆ ಬರಲಿಲ್ಲ. ಬದಲಿಗೆ ನಾವೇ ಕಲ್ಯಾಣ ಮಂಟಪದ ಪ್ರವೇಶ ದ್ವಾರದಲ್ಲಿಯೇ ನಿಂತು ಅತಿಥಿಗಳನ್ನು ಪ್ರೀತಿಯಿಂದ ಬರಮಾಡಿಕೊಳ್ಳುವುದು ಹೆಚ್ಚು ಆತ್ಮೀಯವಾಗಿಯೂ ಅನೌಪಚಾರಿಕವಾಗಿಯೂ ಇರುತ್ತದೆ ಎನ್ನಿಸಿತು! ನಮ್ಮ ಉಡುಗೆ ತೊಡಗೆಗಳೂ ಅಷ್ಟೇ: ವಧೂವರರ ದೃಷ್ಟಿಯಿಂದ ನೋಡಿದರೆ ತೀರಾ ಸರಳ! ಬೆಳಗಿನ ಕಲಾಪಗಳ ಹೊತ್ತಿನಲ್ಲಿ ಸಾಲಂಕೃತ ವಧುವಾಗಿದ್ದ ನನ್ನವಳು ಆರತಕ್ಷತೆಗೆ ಟೊಮ್ಯಾಟೋ ಬಣ್ಣದ ಸೀರೆಯ ಒಡಲಿಗೆ ನೀಲಿ ಬಣ್ಣದ ಸೆರಗಿದ್ದ ಸೀರೆಯನ್ನುಟ್ಟು ಒಂದೆರಡೇ ಒಡವೆಗಳನ್ನು ಧರಿಸಿ, ತನ್ನ ನೀಳ ಕೂದಲಿಗೆ ತುರುಬು ಹಾಕಿಕೊಂಡು ಸಿಂಗರಗೊಂಡಿದ್ದಳು. ಹಾಗೆ ಸರಳವಾಗಿ ಸಿಂಗರಿಸಿಕೊಂಡಿದ್ದು ನನಗಂತೂ ತುಂಬು ಸಂತಸವನ್ನು ತಂದಿತ್ತು. ನಾನೂ ಸಹಾ ಸರಳವಾಗಿ ಪ್ಯಾಂಟ್—ಷರ್ಟ್ ಗಳನ್ನು ತೊಟ್ಟಿದ್ದೆ. ಇದೂ ಸಹಾ ಅನೇಕ ಬಂಧು ಮಿತ್ರರಿಗೆ ಇಷ್ಟವಾಗಿ, ‘ಇದೊಂದು ಹೊಸ ಬಗೆಯ ಸ್ವಾಗತದ ಮಾದರಿ’ ಎಂದೊಬ್ಬರು ಉದ್ಗರಿಸಿದರೆ ಮತ್ತೊಬ್ಬ ಗೆಳೆಯರು, ‘ನಮ್ಮದೇ ಸರಳ ವಿವಾಹವೆಂದು ನಾವು ಎಣಿಸಿದ್ದೆವು..ನೀವು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದೀರಿ!’ ಎಂದು ಮೆಚ್ಚಿ ನುಡಿದರು! ಅಂದು ಆರತಕ್ಷತೆಗೆ ಆಗಮಿಸಿದವರಲ್ಲಿ ಚಿದಾನಂದ ಮೂರ್ತಿಗಳು, ಬಿ.ಸಿ.ರಾಮಚಂದ್ರಶರ್ಮರು, ಲಕ್ಷ್ಮೀನಾರಾಯಣ ಭಟ್ಟರು,ಎ.ಎಸ್.ಮೂರ್ತಿಗಳು, ಶಂಕರನಾಗ್, ಅರುಂಧತಿ ನಾಗ್, ಲೋಕೇಶ್ —ಗಿರಿಜಾ ಲೋಕೇಶ್, ರಮೇಶ್ ಭಟ್, ಸುಂದರ ರಾಜ್, ಜೈಜಗದೀಶ್, ಲೋಕನಾಥ್, ಎನ್.ಕೆ.ಮೋಹನ ರಾಮ್ …ಇವು ನಮ್ಮ ಮದುವೆಯ ಆಲ್ಬಂ ನೆನಪಿಸುವ ಕೆಲ ಮುಖ್ಯ ಹೆಸರುಗಳು.
ಒಟ್ಟಿನಲ್ಲಿ ಊಟ ಉಪಚಾರಗಳಲ್ಲಾಗಲೀ ಸಾಂಪ್ರದಾಯಿಕ ಆಚರಣೆಗಳಲ್ಲಾಗಲೀ ಯಾವುದೇ ಕೊರತೆಯಾಗದಂತೆ ಮದುವೆ ನಿರ್ವಿಘ್ನವಾಗಿ ನೆರವೇರಿ ರಂಜನಿ ಬಾಳಸಂಗಾತಿಯಾಗಿ ನನ್ನ ಬದುಕಿಗೆ ಪ್ರವೇಶಿಸಿದಳು.

ಆಗಿನ ಹಲವಾರು ಇತಿ ಮಿತಿಗಳ ಕಾರಣಕ್ಕೆ ವಿಶೇಷ ಮಧುಚಂದ್ರವನ್ನೇನೂ ನಮಗೆ ಆಚರಿಸಿಕೊಳ್ಳಲು ಅವಕಾಶವಾಗಿರಲಿಲ್ಲ. ನಾವು ಮಧುಚಂದ್ರಕ್ಕೆಂದು ಮೂರು ನಾಲ್ಕು ದಿನಗಳ ಮಟ್ಟಿಗೆ ಹೋಗಿದ್ದು ಮೈಸೂರಿಗೆ! ಆಗ ರಂಜನಿಯ ಅಕ್ಕ ಭಾವ ನೆಲಸಿದ್ದುದು ಮೈಸೂರಿನಲ್ಲಿ. ಮದುವೆಗಾಗಿ ಅವರೆಲ್ಲರೂ ಬೆಂಗಳೂರಿಗೆ ಬಂದದ್ದರಿಂದ ಮೈಸೂರಿನ ಮನೆಯ ಬೀಗದೆಸಳನ್ನು ನಮ್ಮ ಕೈಗಿತ್ತು ಕಳಿಸಿಕೊಟ್ಟರು. ಮೊದಲೇ ಮೈಸೂರು ಹೆಚ್ಚು ಸದ್ದು ಗದ್ದಲಗಳಿಲ್ಲದ ಪ್ರಶಾಂತ ಊರು. ಅದರಲ್ಲಿಯೂ ಸೀತಾರಾಂ—ರಾಜಲಕ್ಷ್ಮಿಯವರ ಮನೆ ಇದ್ದುದು ಊರ ಹೊರವಲಯಕ್ಕೇ ಸೇರಿದಂತಿದ್ದ ಗೋಕುಲವೆಂಬ ಅತಿ ಪ್ರಶಾಂತ ಬಡಾವಣೆಯಲ್ಲಿ.ಕಾಲ್ನಡಿಗೆಯಲ್ಲಿ ಬೆಟ್ಟವನ್ನು ಹತ್ತಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದು ಮರಳಿ ಬರುವಾಗ ಪುಟ್ಟದೊಂದು ಪಂಜಾಬಿ ಹೋಟಲ್ ನಲ್ಲಿ ರೋಟಿ—ಕರಿ ತಿಂದು ಬಂದದ್ದು ಇನ್ನೂ ನೆನಪಿನಲ್ಲಿ ಹಸಿರಾಗಿ ಉಳಿದಿದೆ. ರಂಜನಿ ತನ್ನ ಸಂಕೋಚದ ಕೋಶದಿಂದ ಹೊರಬಂದು ನನ್ನೊಂದಿಗೆ ಸರಿಯಾಗಿ ಮಾತಾಡಿದ್ದು ಮೈಸೂರಿನಲ್ಲಿಯೇ! ಅಂದಿನಿಂದ ಇಂದಿನವರೆಗೂ ನಮಗೆ ಮೈಸೂರೆಂದರೆ ವಿಶೇಷ ಪ್ರೀತಿ! ಅಲ್ಲಿಗೆ ಹೋಗಿಬರುವ ಯಾವ ಸಣ್ಣ ಅವಕಾಶವನ್ನೂ ನಾವು ತಪ್ಪಿಸಿಕೊಂಡಿದ್ದೇ ಇಲ್ಲ!
ಒಂದು ವಿಷಯವನ್ನು ಈಗಲೇ ಸ್ಪಷ್ಟ ಪಡಿಸಿಬಿಡುತ್ತೇನೆ: ಬಹುತೇಕ ಎಲ್ಲ ಮಧ್ಯಮವರ್ಗದ ಕುಟುಂಬಗಳ ಕಥೆಗಿಂತ ನಮ್ಮ ಸಂಸಾರದ ಕಥೆ ತೀರಾ ಭಿನ್ನವೇನಲ್ಲ! ಹೊಸದೊಂದು ವಾತಾವರಣಕ್ಕೆ,ಹೊಸ—ಅಪರಿಚಿತ ಸೂರಿನಡಿಯಲ್ಲಿ, ಬಹುತೇಕ ‘ಅಪರಿಚಿತ’ರೇ ಆದ ವ್ಯಕ್ತಿಗಳೊಂದಿಗೆ ಬದುಕು ಕಟ್ಟಿಕೊಳ್ಳಲು ಬಂದಾಗ ಎದುರಾಗುವ ಎಲ್ಲ ಸಣ್ಣಪುಟ್ಟ ಸಮಸ್ಯೆಗಳು ರಂಜನಿಗೂ ಎದುರಾದದ್ದು ಸುಳ್ಳೇನಲ್ಲ.ಆದರೆ ಅದಾವುದನ್ನೂ ವಿಸ್ತಾರವಾಗಿ ವಿವರಿಸುವ ಗೊಡವೆಗೆ ನಾನು ಹೋಗುವುದಿಲ್ಲ. ಸುಲಭದ ವಿವರಣೆಗೆ ದಕ್ಕದ ಸಂಕೀರ್ಣ ಸಂದರ್ಭಗಳನ್ನು ಪರಿಭಾವಿಸಲು ಹೊರಟರೆ ವೈಯಕ್ತಿಕ ದೃಷ್ಟಿಕೋನದ ‘ಕನ್ನಡಕ’ದಿಂದ ಸಂಬಂಧಗಳನ್ನು ಅಳೆಯುವ ಅಪಾಯ ಇಣುಕುವ ಭಯವೂ ನನಗಿದೆ! ಹಾಗಾಗಿ ಅಗತ್ಯವಿರುವಷ್ಟನ್ನು, ನನ್ನೊಳಗನ್ನು ನಾನೇ ಬಗೆದು ನೋಡಿಕೊಳ್ಳಲು ಸಾಧ್ಯವಾಗುವುದನ್ನು ಮಾತ್ರ ಪ್ರಾಮಾಣಿಕವಾಗಿ ದಾಖಲಿಸುತ್ತಾ ಹೋಗುತ್ತೇನೆ.
ನಮ್ಮ ಮದುವೆಯ ಸಂದರ್ಭದಲ್ಲಿ ಪ್ರೀತಿಯ ಅಕ್ಕಂದಿರು ನಮಗೊಂದು ಟೇಪ್ ರಿಕಾರ್ಡರ್ ಅನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಬಾಲ್ಯದಿಂದಲೂ ಸಂಗೀತ—ಹಾಡುಗಳು ನನಗೆ ಅತ್ಯಂತ ಪ್ರಿಯವಾದ ಸಂಗತಿಗಳೇ ಆಗಿದ್ದು ಮನೆಯಲ್ಲಿದ್ದ ಪುಟ್ಟ ಫಿಲಿಪ್ಸ್ ಟ್ರ್ಯಾನ್ಸಿಸ್ಟರ್ ಅನ್ನು ಕಿವಿಗಾನಿಸಿಕೊಂಡು ‘ಮನೋರಂಜನ್’, ‘ಮೆಚ್ಚಿನ ಚಿತ್ರಗೀತೆಗಳು’, ‘ಮನ್ ಚಾಹೇ ಗೀತ್ ‘…ಮೊದಲಾದ ಕಾರ್ಯಕ್ರಮಗಳನ್ನು ಕೇಳುತ್ತಿದ್ದುದುಂಟು.ಈಗ ನಮಗಿಷ್ಟ ಬಂದ ಸಂಗೀತದ ಹಾಡುಗಳನ್ನು ಕ್ಯಾಸೆಟ್ ಗಳ ಮೂಲಕ ಕೇಳುವ ಸುವರ್ಣಾವಕಾಶ! ರಂಜನಿಗೂ ಸಂಗೀತದಲ್ಲಿ ತುಂಬಾ ಒಲವು. ಮದುವೆಯಾದ ಹೊಸದರಲ್ಲಿ ನಮ್ಮ ಬಳಿ ಇದ್ದುದು ಮೂರೋ ನಾಲ್ಕೋ ಕ್ಯಾಸೆಟ್ ಗಳು ಮಾತ್ರ:ಬಾಲಮುರಳಿಯವರು ಹಾಡಿರುವ ಜಯದೇವನ ಅಷ್ಟಪದಿ,ಮೈಸೂರು ಮಲ್ಲಿಗೆ, ನಾಕುತಂತಿ ಹಾಗೂ ಗುಲಾಂ ಅಲಿ ಅವರ ಗಜ಼ಲ್ ಗಳು! ತಿರುಗಿಸಿ ತಿರುಗಿಸಿ ಅವನ್ನೇ ಅದೆಷ್ಟು ಬಾರಿ ಕೇಳಿದ್ದೇವೋ ಲೆಕ್ಕವೇ ಇಲ್ಲ! ಬರಬರುತ್ತಾ ನಮ್ಮ ಕ್ಯಾಸೆಟ್ ಗಳ ಭಂಡಾರ ವೃದ್ಧಿಯಾಗುತ್ತಾ ಬಂದು ನೂರಾರು ಕ್ಯಾಸೆಟ್ ಗಳು..ನಂತರದ ದಿನಗಳಲ್ಲಿ ಸಿ ಡಿ ಗಳು ಸೇರ್ಪಡೆಯಾಗುತ್ತಾ ಹೋದವು! ಇಂದಿಗೂ ಅನೇಕ ಬಗೆಯ ಸಂಗೀತ ಪ್ರಕಾರಗಳ ಸಾವಿರಾರು ಸಿ ಡಿ ಗಳು ನಮ್ಮ ಸಂಗ್ರಹದಲ್ಲಿರುವುದೊಂದು ಹೆಮ್ಮೆಯ ಸಂಗತಿ ನನಗೆ.ಇರಲಿ.
ನಮ್ಮ ಮದುವೆ ಎಂದಾಕ್ಷಣ ನೆನಪಾಗುವುದೆಂದರೆ ಗೋವಾ. ಆತ್ಮೀಯ ಮಿತ್ರ ಶಂಕರ್ ನಾಗ್ ನಮಗೆ ಉಡುಗೊರೆಯಾಗಿ ಗೋವೆಗೆ ಹೋಗಲು ವಿಮಾನದ ಟಿಕೆಟ್ ಗಳನ್ನು ನೀಡಿದ್ದ. ಮದುವೆಯ ಸಂದರ್ಭದಲ್ಲಿ ಸಾಕಷ್ಟು ರಜೆಯನ್ನು ಹಾಕಿದ್ದರಿಂದ ಆ ತಕ್ಷಣವೇ ಮತ್ತೆ ರಜೆ ಹಾಕಿ ಗೋವಾಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ ಎನ್ನುವುದು ಒಂದು ಸಣ್ಣ ಕಾರಣವಾದರೆ ಜೇಬು ಪೂರ್ತಿ ಖಾಲಿಯಾಗಿದ್ದು ಪ್ರಮುಖ ಕಾರಣವಾಗಿ ಕಾಡಿ ಆಗ ನಾವು ಗೋವೆಗೆ ಹೋಗಲಾಗಲಿಲ್ಲ. ಮುಂದೆ ನಾನು ಸಂಕೇತ್ ಕಾಶಿಯ ಮೂಲಕ ಶಂಕರನಿಗೆ ಟಿಕೆಟ್ ಅನ್ನು ಮರಳಿಸಿ ಮನೆಗೆ ಒಂದು ಕಪ್ಪು ಬಿಳುಪಿನ ಟಿ.ವಿ.ತರಲು ನೆರವು ಪಡೆದುಕೊಂಡೆ! ಆದರೆ ರಂಜನಿಗೆ ಮಾತ್ರ ನನ್ನ ಈ ನಡೆ ಇಷ್ಟವಾಗಲಿಲ್ಲ. ಅನಾಯಾಸವಾಗಿ ಒದಗಿದ್ದ ಚಂದದ ಅವಕಾಶವನ್ನು ನಾನು ಕೈಚೆಲ್ಲಿದ್ದರ ಬಗ್ಗೆ ಅವಳಿಗೆ ಕೊಂಚ ಅಸಮಾಧಾನ..ಸಣ್ಣ ಮುನಿಸು! ಅದರ ಫಲಶ್ರುತಿಯೇನೆಂದರೆ ನಾವು ಇದುವರೆಗೆ ಅನೇಕ ದೇಶ ವಿದೇಶಗಳ ಪ್ರವಾಸವನ್ನು ಮಾಡಿಕೊಂಡು ಬಂದರೂ ಗೋವೆಗೆ ಮಾತ್ರ ಹೋಗಲಾಗಿಲ್ಲ!
ಮದುವೆಯಾದ ಹೊಸತರಲ್ಲೇ ನಾನು ಗುರುತಿಸಿದ್ದು ರಂಜನಿಯ ‘ಅತಿ ಭಾವುಕ’ ಸ್ವಭಾವ.ಅದೇ ಅವಳ ದೊಡ್ಡ ಶಕ್ತಿ ಕೂಡಾ.ತನ್ನ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು, ತನ್ನ ಕನಸು—ನಿರೀಕ್ಷೆಗಳನ್ನು ನಾಲ್ಕಾರು ಸಾಲುಗಳ ಪದ್ಯರೂಪದಲ್ಲಿ ಬರೆದಿಡುತ್ತಿದ್ದಳು.ನನಗೆ ನೇರವಾಗಿ ಹೇಳಲು ಸಂಕೋಚವೆನಿಸಿದಾಗ ಹೀಗೆ ಪದ್ಯರೂಪದಲ್ಲಿ ನನಗೆ ‘ಚೀಟಿ ಸಂದೇಶ’ಗಳನ್ನು ರವಾನಿಸಿದ್ದೂ ಸಾಕಷ್ಟು ಬಾರಿ ಆಗಿದೆ! ಆಗ ಅವಳು ಇಂದಿರಾನಗರದ ಕೈರಾಳಿ ಕಾಲೇಜ್ ಹಾಗೂ ಮಿಲ್ಲರ್ ರಸ್ತೆಯ ಸೇಂಟ್ ಆನ್ಸ್ ಕಾಲೇಜ್ —ಈ ಎರಡು ಕಡೆಗಳಲ್ಲಿ ಅರೆಕಾಲಿಕ ಅಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು. ನಮ್ಮಿಬ್ಬರ ಸ್ವಭಾವಗಳಲ್ಲಿ ಕೊಂಚ ಅಂತರವೇ ಇದ್ದರೂ ಅಭಿರುಚಿ—ಹವ್ಯಾಸಗಳಲ್ಲಿದ್ದ ಸಂಪೂರ್ಣ ಸಾಮರಸ್ಯದಿಂದಾಗಿ ಪರಸ್ಪರ ಹೊಂದಾಣಿಕೆ ಇಬ್ಬರಿಗೂ ಕಷ್ಟವಾಗಲಿಲ್ಲ. ಆದರೂ ನಮ್ಮ ವೈವಾಹಿಕ ಜೀವನದ ಪ್ರಾರಂಭದ ದಿನಗಳಲ್ಲಿ ಸಲ್ಲದ ‘ಅಪಶ್ರುತಿ’ಯಾಗಿ ಕಾಡಿದ್ದು ನನ್ನ ಇಸ್ಪೀಟ್ ಚಟ. ಈಗ ನೆನೆದರೆ ನನಗೇ ಆಶ್ಚರ್ಯವಾಗುತ್ತದೆ—ಅದು ಹೇಗೆ ಈ ದೌರ್ಬಲ್ಯ ನನ್ನನ್ನು ಆ ಪರಿಯ ಮಾಯೆಯಾಗಿ ಕಾಡಿತ್ತು ಎಂದು.ಮೊದಲೇ ಆಫೀಸ್ ನಲ್ಲಿ ಕೆಲಸದ ಹೊರೆ..ಇದರ ಜತೆಗೆ ವಾರಾಂತ್ಯಗಳಲ್ಲಿ ಗೆಳೆಯರೊಂದಿಗೆ ಇಸ್ಪೀಟ್ ಆಟ! ತನ್ನ ಕುಟುಂಬವನ್ನು ಬಿಟ್ಟು ನಮ್ಮ ಮನೆಯ ಹೊಸ ವಾತಾವರಣಕ್ಕೆ ನನ್ನ ಮಡದಿ ಬಂದಿದ್ದಾಳೆ;ಸಹಜವಾಗಿಯೇ ನನ್ನೊಂದಿಗೆ ಹೆಚ್ಚು ಸಮಯವನ್ನು ಕಳೆಯಬಯಸುತ್ತಾಳೆ;ನೂರು ಕನಸು—ನಿರೀಕ್ಷೆಗಳೊಂದಿಗೆ ಬಂದಿರುವ ಆಕೆಗೆ ನಾನು ಹೆಚ್ಚಿನ ಸಮಯವನ್ನು ನೀಡಬೇಕು..ಎಂಬೆಲ್ಲಾ ತಿಳುವಳಿಕೆ ನನ್ನಲ್ಲಿರಲಿಲ್ಲವೆಂದಲ್ಲ. ಆ ತಿಳುವಳಿಕೆಯೂ ಇತ್ತು..ಜೊತೆಗೆ ಅವಳೊಟ್ಟಿಗೆ ಕೂತು ಅವಳೆಲ್ಲ ಕನಸುಗಳನ್ನು ಹಂಚಿಕೊಳ್ಳುವ ಹಂಬಲವೂ ಇತ್ತು..ಬಿಡುವಿನ ಸಮಯವನ್ನು ಸಾಧ್ಯವಾದಷ್ಟೂ ಜೊತೆಯಲ್ಲಿ ಕಳೆಯುವ—ಸಾಹಿತ್ಯ ಸಂಗೀತಾದಿ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಳ್ಳುವ ಮನಸ್ಸೂ ಇತ್ತು..ಅವಳಿಗೆ ಅತ್ಯಂತ ಪ್ರಿಯವಾದ ಪ್ರವಾಸಗಳಿಗೆ ಹೋಗುವ ಅಭಿಲಾಷೆಯೂ ಇತ್ತು.ಆದರೆ ಈ ಎಲ್ಲ ಬಯಕೆಗಳ ಗೋಣು ಮುರಿದು ತನ್ನ ಬಲೆಯಲ್ಲಿ ಕೆಡವಿಕೊಂಡ ಆಟದ ಚಟ ನನ್ನನ್ನು ಮಾಯೆಯ ಹಾಗೆ ಆವರಿಸಿಕೊಂಡುಬಿಟ್ಟಿತ್ತು!ಗೆಳೆಯರೊಂದಿಗೆ ಆಡುವುದು ತಪ್ಪಲ್ಲವಾದರೂ ಒಂದು ಜೀವ ನನಗಾಗಿ ಕಾಯುತ್ತಿರುವಾಗ ಅವಳಿಗೆ ನೋವು ಕೊಟ್ಟು ಕಣ್ಣಲ್ಲಿ ನೀರು ಹಾಕಿಸುವುದು ಸರಿಯಲ್ಲವೆಂಬ ಅರಿವಿದ್ದರೂ ಆಗ ಆ ದೌರ್ಬಲ್ಯವನ್ನು ನನಗೆ ಮೆಟ್ಟಲಾಗಲಿಲ್ಲ ಎನ್ನುವುದು ಈಗಲೂ ನನಗೆ ಅಚ್ಚರಿ—ಆತಂಕ—ಭಯಗಳನ್ನು ಹುಟ್ಟಿಸುವ ಸಂಗತಿ. ಅರಿವಿರುವವನದೇ ಈ ಪಾಡು…ಇಲ್ಲದವರ ಗತಿ?!!

ಎಷ್ಟೋ ಸಲ ಆಟಕ್ಕೆ ಹೋದಾಗ ‘ಆಫೀಸ್ ಕೆಲಸದ ಗುರಾಣಿ’ಯನ್ನು ಬಳಸಿದ್ದುಂಟು. ಕೆಲವೊಮ್ಮೆ ನಿಜವಾಗಿಯೂ ಶೂಟಿಂಗ್ ಇತ್ಯಾದಿಗಳಲ್ಲಿ ತೊಡಗಿ ತಡವಾಗಿ ಹೋದಾಗಲೂ ‘ಆಟದ ಚಟ’ದ ಅಪಖ್ಯಾತಿ ಅಂಟಿದ್ದೂ ಉಂಟು!
ಹೀಗೆ ನಾನು ಆಟದಲ್ಲಿ ಮುಳುಗಿ ತಡವಾಗಿ ಮನೆಗೆ ಬಂದಾಗಲೆಲ್ಲಾ ರಂಜನಿಯ ಬಾಡಿದ—ನೋವು ತುಂಬಿದ ಮುಖ ನನ್ನನ್ನು ಎದುರುಗೊಳ್ಳುತ್ತಿತ್ತು. ಎಷ್ಟೋ ಸಲ ಗಮನಿಸದವನಂತೆ ಸುಮ್ಮನಾಗಿಬಿಡುತ್ತಿದ್ದೆ.. ಇಲ್ಲವೇ ಏನಾದರೊಂದು ಸುಳ್ಳು ಹೇಳಿಬಿಡುತ್ತಿದ್ದೆ. ಸುಳ್ಳೆಂದು ಗೊತ್ತಿದ್ದರೂ ಅವಳು ಹೆಚ್ಚು ಮಾತಾಡುತ್ತಿರಲಿಲ್ಲ. ಆದರೆ ಮರುದಿನ ಅವಳದೊಂದು ಚೀಟಿ ಸಂದೇಶ ನನಗಾಗಿ ಕಾದಿರುತ್ತಿತ್ತು. ಅವಳ ನೋವು—ಅಳಲನ್ನು ದಾಖಲಿಸುವ ಒಂದೆರಡು ಅಂತಹ ಸಂದೇಶಗಳು ನನ್ನ ನೆನಪಿನಲ್ಲಿನ್ನೂ ಹಸಿರಾಗಿವೆ: “ಸಖಾ..ನಾನು ಮೆಚ್ಚಿದ್ದು ಅರ್ಜುನನ ರೂಪವಷ್ಟೇ ಅಲ್ಲ..ಭೀಮನ ಕಡು ಪ್ರೀತಿಯ ಆಸರೆಯೂ ಬೇಕೆನಗೆ”/ “ಒಂಟಿ ಸಂಜೆಗಳನ್ನು ಕಳೆಯುತ್ತೇನೆ ನಾನು..ಮನೆಯ ಪಕ್ಕದಲ್ಲಿರುವ ಮರದಲ್ಲಿರುವ ಹಕ್ಕಿಗಳ ಚಿಲಿಪಿಲಿಯ ಕೇಳುತ್ತಾ”…
ಇಂತಹ ಹತ್ತಾರು ಸಂದೇಶಗಳು ನನ್ನ ಕೈಸೇರಿದಾಗ ಒಂದೆಡೆ ತಪ್ಪಿತಸ್ಥ ಭಾವನೆ ನನ್ನನ್ನು ಕಾಡಿದರೆ ಮತ್ತೊಂದೆಡೆ ‘ಅರೆ! ಎಷ್ಟು ಚಂದ ಪದ್ಯ ಬರೆಯುತ್ತಾಳೆ! ನಾನಷ್ಟೇ ಕೇಂದ್ರವಾಗದೇ ಹೋದರೆ ಮತ್ತಷ್ಟು ಚಂದವಿರಬಹುದು ಅಲ್ಲವೇ” ಎಂಬ ಬೆರಗೂ ಮೂಡಿತು!
ಹೇಗಾದರೂ ಮಾಡಿ ನನ್ನ ಆಟದ ಚಟಕ್ಕೆ ಎಳ್ಳುನೀರು ಬಿಡಲೇಬೇಕೆಂಬ ನಿರ್ಧಾರ ಆಗಾಗ್ಗೆ ಮನದಂಗಳದಲ್ಲಿ ಪುಟಿದೇಳುತ್ತಿದ್ದರೂ ಯಾಕೋ ಆ ಮಾಯೆಯ ಬಿಗಿ ಹಿಡಿತದಿಂದ ಬಿಡಿಸಿಕೊಳ್ಳುವುದು ಸಾಧ್ಯವಾಗಿರಲಿಲ್ಲ.ಆ ಸಂದರ್ಭದಲ್ಲೇ ಘಟಿಸಿದ ಒಂದು ಯಡವಟ್ಟಿನ ಪ್ರಸಂಗ ಚಟಮುಕ್ತನಾಗುವ ನನ್ನ ನಿರ್ಧಾರವನ್ನು ಮತ್ತಷ್ಟು ಹರಳುಗಟ್ಟಿಸಿತು.
| ಇನ್ನು ಮುಂದಿನ ವಾರಕ್ಕೆ |






0 Comments