
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.
ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
65
ಪುಣೆಯ ಫಿಲ್ಮ್ ಇನ್ಸ್ ಟಿಟ್ಯೂಟ್ ನಲ್ಲಿ ತರಬೇತಿಗೆಂದು ಕಳೆದ ನಾಲ್ಕು ತಿಂಗಳು ನನ್ನ ವೃತ್ತಿ ಬದುಕಿನ ಒಂದು ಬಹು ಮುಖ್ಯ ಅಧ್ಯಾಯ. ಒಂದೆರಡು ಚಲನಚಿತ್ರಗಳಲ್ಲಿ ನಟನಾಗಿ—ಸಹ ನಿರ್ದೇಶಕನಾಗಿ ಆ ವೇಳೆಗಾಗಲೇ ಕೆಲಸ ಮಾಡಿದ್ದರೂ ಚಿತ್ರಮಾಧ್ಯಮ ಹಾಗೂ ಟೆಲಿವಿಷನ್ ಮಾಧ್ಯಮಗಳ ಅಪರಿಮಿತ ಸಾಧ್ಯತೆಗಳನ್ನು ಅರ್ಥಮಾಡಿಕೊಳ್ಳುವ ಸುವರ್ಣಾವಕಾಶ ನನಗೆ ದೊರೆತದ್ದು ಫಿಲ್ಮ್ ಇನ್ಸ್ ಟಿಟ್ಯೂಟ್ ನಲ್ಲಿ. ಅಲ್ಲಿ
ನನ್ನ ಜೊತೆಗೇ ಬೇರೆ ಬೇರೆ ಹುದ್ದೆಗಳಿಗೆ ಆಯ್ಕೆಯಾಗಿದ್ದ ಕನ್ನಡಿಗರು ಸಾಕಷ್ಟು ಸಂಖ್ಯೆಯಲ್ಲಿದ್ದರು.
ಆ ನಾಲ್ಕು ತಿಂಗಳ ಅವಧಿಯಲ್ಲಿ ನಾನು ನೋಡಿದ ಚಲನಚಿತ್ರಗಳಿಗೆ—ನಾಟಕಗಳಿಗೆ ಲೆಕ್ಕವೇ ಇಲ್ಲ! ಜಗತ್ತಿನ ಶ್ರೇಷ್ಠ ನಿರ್ದೇಶಕರ ಶ್ರೇಷ್ಠ ಚಿತ್ರಗಳನ್ನು ನೋಡಲು ದೊರೆತ ಆ ಸದವಕಾಶವನ್ನು ನಾನು ಅತ್ಯಂತ ಸಾರ್ಥಕವಾಗಿ ಬಳಸಿಕೊಂಡೆ. ಅಲ್ಲಿದ್ದ ಥಿಯೇಟರ್ ಒಂದರಲ್ಲಿ ಬೆಳಗಿನಿಂದ ರಾತ್ರಿಯವರೆಗೆ ಒಂದಲ್ಲ ಒಂದು ಚಿತ್ರದ ಪ್ರದರ್ಶನ ಇದ್ದೆ ಇರುತ್ತಿತ್ತು. ಎಷ್ಟೋ ಬಾರಿ ನಾನು ತರಗತಿಗಳನ್ನು ತಪ್ಪಿಸಿಕೊಂಡು ಸಿನೆಮಾ ನೋಡಲು ಹೋಗಿದ್ದುಂಟು. ಸತೀಶ್ ಬಹಾದುರ್, ಸಿ.ಗುರುನಾಥ್, ಅಶೋಕ್ ಓಗ್ರಾ ಹಾಗೂ ಸಮರ್ ನಖಾತೆ ಅಲ್ಲಿನ ನನ್ನ ಮೆಚ್ಚಿನ ಅಧ್ಯಾಪಕರು.ಸತ್ಯಜಿತ್ ರೇ, ಮೃಣಾಲ್ ಸೇನ್, ಮಣಿಕೌಲ್, ಋತ್ವಿಕ್ ಘಟಕ್, ಹೃಷಿಕೇಶ್ ಮುಖರ್ಜಿ, ಅಕಿರೋ ಕುರೋಸಾವಾ, ಗೊಡಾರ್ಡ್, ಫೆಲಿನಿ, ಇಂಗ್ ಮರ್ ಬರ್ಗ್ ಮನ್, ಚಾರ್ಲಿ ಚಾಪ್ಲಿನ್… ಮುಂತಾದ ಶ್ರೇಷ್ಠರ ಚಿತ್ರಗಳನ್ನೆಲ್ಲಾ ನೋಡಿ ಒಂದಷ್ಟು ಟಿಪ್ಪಣಿಗಳನ್ನೂ ಮಾಡಿಕೊಂಡೆ. ಪುಣೆಯಲ್ಲಿ ನನಗೆ ವಿಶೇಷವಾಗಿ ಗಮನಕ್ಕೆ ಬಂದ ಸಂಗತಿಯೆಂದರೆ ಮರಾಠಿ ರಂಗ ಸಂಸ್ಕೃತಿ. ಅಲ್ಲಿಯ ರಂಗತಂಡಗಳ ಸಂಪೂರ್ಣ ವೃತ್ತಿಪರತೆ—ಬದ್ಧತೆ.. ದಿನಕ್ಕೆ ಮೂರು ನಾಲ್ಕು ಪ್ರದರ್ಶನಗಳಾದರೂ ಕಿಕ್ಕಿರಿದು ನೆರೆಯುತ್ತಿದ್ದ ಪ್ರೇಕ್ಷಕ ವೃಂದ…ಬೆಳಿಗ್ಗೆ ಒಂದು ನಾಟಕದಲ್ಲಿ ಅಭಿನಯಿಸಿ ಸಂಜೆ ಮತ್ತೊಂದು ಪಾತ್ರಕ್ಕೆ ಬಣ್ಣ ಹಚ್ಚಿಕೊಳ್ಳುತ್ತಿದ್ದ ಬಹು ಬೇಡಿಕೆಯ ಕಲಾವಿದರು…ದೊರೆಯುತ್ತಿದ್ದ ನಾಲ್ಕು ತಾಸುಗಳ ಅವಧಿಯಲ್ಲೇ ಅದ್ಭುತವಾದ ರಂಗಸಜ್ಜಿಕೆಯನ್ನು ಸಿದ್ಧಪಡಿಸಿ ಪ್ರದರ್ಶನವನ್ನೂ ಮುಗಿಸಿ ರಂಗಮಂದಿರವನ್ನು ತೆರವು ಮಾಡುತ್ತಿದ್ದ ಚುರುಕು—ಚಾಣಾಕ್ಷತನ…ಒಂದೇ ನಾಟಕದ ನೂರಾರು ಪ್ರದರ್ಶನಗಳಾದರೂ ಒಂದಿಷ್ಟೂ ಮುಕ್ಕಾಗದ ನಾಟಕದ ಗುಣಮಟ್ಟ..ಎಲ್ಲಕ್ಕಿಂತ ಮುಖ್ಯವಾಗಿ ಮಧ್ಯಮ—ಕೆಳ ಮಧ್ಯಮ ವರ್ಗದ ಜನರ ಸಮಸ್ಯೆ—ಕನಸು—ಆಶೋತ್ತರಗಳ ಸರಳ ಕಥಾನಕಗಳನ್ನು ರಂಗಕ್ಕೆ ಅಳವಡಿಸಿಕೊಂಡು ಬಹು ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ರಂಗಭೂಮಿಗೆ ಸೆಳೆಯುತ್ತಿದ್ದ ಕೌಶಲ….ಇದೆಲ್ಲವೂ ನನ್ನನ್ನು ವಿಶೇಷವಾಗಿ ಸೆಳೆದದ್ದಲ್ಲದೆ ನಾವು ನಮ್ಮ ಪ್ರಯೋಗಗಳಲ್ಲಿ ಎಡವುತ್ತಿರುವ ಹಲವು ಹತ್ತು ಸಂಗತಿಗಳ ಸಾಕ್ಷಾತ್ಕಾರವನ್ನೂ ಮಾಡಿಕೊಟ್ಟವು.
ಅಲ್ಲಿ ನಾನು ನೋಡಿದ, ಈಗಲೂ—ಹೆಚ್ಚುಕಡಿಮೆ 40 ವರ್ಷಗಳ ನಂತರವೂ ನನಗೆ ನೆನಪಿರುವ—ನನ್ನ ಕಣ್ಣ ಮುಂದೆ ಕಟ್ಟಿದಂತಿರುವ ಕೆಲ ನಾಟಕಗಳೆಂದರೆ ಜಬ್ಬಾರ್ ಪಟೇಲ್ ಅವರ ನಿರ್ದೇಶನದ ವಿಜಯ್ ತೆಂಡುಲ್ಕರ್ ಅವರ ಘಾಸೀರಾಂ ಕೊತ್ವಾಲ್, ವಿಜಯಾ ಮೆಹ್ತಾ ಅವರ ನಿರ್ದೇಶನದ ಹಯವದನ (ಗಿರೀಶ್ ಕಾರ್ನಾಡ್), ಹಾಗೂ ಜಯವಂತ ದಳ್ವಿಯವರ ‘ಪುರುಷ್’.
‘ಘಾಸೀರಾಂ ಕೊತ್ವಾಲ್’ ನಾಟಕವನ್ನಂತೂ ನಾನು ಬೇರೆ ಬೇರೆ ಕಾಲಘಟ್ಟಗಳಲ್ಲಿ ನಾಲ್ಕಾರು ಬಾರಿ ನೋಡಿಬಿಟ್ಟಿದ್ದೇನೆ. ಆದರೆ ಒಂದೇ ಒಂದು ಪ್ರದರ್ಶನದಲ್ಲೂ ನಾಟಕ ನಮ್ಮನ್ನು ತಲುಪುವ ತೀವ್ರತೆಯಲ್ಲಿ ಒಂದಿಷ್ಟೂ ಕೊರತೆ ಕಾಣಿಸಲಿಲ್ಲ. ನಾನಾ ಪಾತ್ರದಲ್ಲಂತೂ ಮೋಹನ್ ಅಗಾಶೆಯವರದು ಅತ್ಯಪೂರ್ವ ಅಭಿನಯ. ‘ತಲೆಯಿಂದ ಉಂಗುಷ್ಟದವರೆಗೆ ನಟಿಸುವುದು’ ಎನ್ನುತ್ತಾರಲ್ಲಾ, ಆ ಮಾತು ಸರಿಯಾಗಿ ನನಗೆ ಅರ್ಥವಾದದ್ದು ಮೋಹನ್ ಅಗಾಶೆಯವರ ಅಭಿನಯವನ್ನು ನೋಡಿದ ಮೇಲೆ!
ವಿಜಯಾ ಮೆಹ್ತಾ ಅವರು ಸಂವೇದನಾಶೀಲ ನಿರ್ದೇಶಕರು; ರಂಗದ ಮೇಲೆ ನಾಟಕವನ್ನು ಕಟ್ಟಿಕೊಡುವ ಅವರ ರೀತಿಯೇ ಅನನ್ಯವಾದುದು. ಸುಂದರ ವರ್ಣಚಿತ್ರಗಳನ್ನು ರಂಗದ ಮೇಲೆ ಬಿಡಿಸಿದಂತೆ ಭಾಸವಾಗುವ ಅವರ ದೃಶ್ಯವಿನ್ಯಾಸಗಳು ಅಪೂರ್ವವಾದುವು.’ಹಯವದನ’ ನಾಟಕವನ್ನು ಕಾರಂತ ಮೇಷ್ಟ್ರು ರಂಗಕ್ಕೆ ಅಳವಡಿಸಿದ್ದ ರೀತಿಗಿಂತ ವಿಭಿನ್ನವಾಗಿದ್ದ ವಿಜಯಾ ಮೆಹ್ತಾ ಅವರ ಪ್ರಸ್ತುತಿ ಹೆಚ್ಚು ಗಂಭೀರ ದನಿಯನ್ನು ಹೊಂದಿತ್ತು; ಮನರಂಜನೆಗಿಂತ ಹೆಚ್ಚಾಗಿ ನಾಟಕದ ದುರಂತ ಧ್ವನಿಯನ್ನು, ಪಾತ್ರಗಳ ಸಂದಿಗ್ಧ ಒಳತೋಟಿಗಳನ್ನು ಕೇಂದ್ರವಾಗಿರಿಸಿಕೊಂಡಿತ್ತು. ನನಗಂತೂ ಬಹಳವೇ ಮೆಚ್ಚುಗೆಯಾದ ಪ್ರಯೋಗವಿದು.

ಇನ್ನು ಜಯವಂತ ದಳ್ವಿಯವರ ‘ಪುರುಷ್’ ನಾಟಕ ಸಾವಿರಾರು ಪ್ರದರ್ಶನಗಳನ್ನು ಕಂಡಿರುವ ಅತ್ಯಂತ ಯಶಸ್ವೀ ನಾಟಕ. ನನಗೆ ನಾನಾ ಪಾಟೇಕರ್ ಎಂಬ ದೈತ್ಯ ಪ್ರತಿಭೆಯ ರಂಗ ಪರಿಚಯವಾದದ್ದು ಈ ನಾಟಕದ ಮೂಲಕವೇ! ಒಂದು ವಾಸ್ತವವಾದಿ ನಾಟಕದ ಪ್ರಸ್ತುತಿ ರಂಗದ ಮೇಲೆ ಹೇಗೆ ರೂಪು ಪಡೆಯಬೇಕೆನ್ನುವುದನ್ನು ಅತ್ಯಂತ ಸಮರ್ಥವಾಗಿ ಮನದಟ್ಟು ಮಾಡಿಕೊಟ್ಟ ಪ್ರಯೋಗ ‘ಪುರುಷ್’. ಅದರಲ್ಲಿ ನಾನಾಅವರದು ಒಬ್ಬ ಕೆಟ್ಟ ರಾಜಕಾರಣಿಯ ಪಾತ್ರ. ರಂಗದ ಮೇಲೆ ನಾನಾ ಪಾಟೇಕರ್ ಪದೇ ಪದೇ ಕೆಮ್ಮುತ್ತಿರುತ್ತಾರೆ. ಆ ಕೆಮ್ಮನ್ನೇ ಒಂದು ಪಾತ್ರವನ್ನಾಗಿಸಿಬಿಟ್ಟಂತಹ ಅಪರೂಪದ ಪ್ರತಿಭೆ ಅವರದು! ಭಕ್ತಿ ಬಾರ್ವೆ, ಚಂದ್ರಕಾಂತ ಗೋಖಲೆ ಮುಂತಾದವರದೂ ಸಹಾ ಈ ನಾಟಕದಲ್ಲಿ ಅತ್ಯಂತ ಮನೋಜ್ಞ ಅಭಿನಯ.
ನಮ್ಮ ಇನ್ಸ್ ಟಿಟ್ಯೂಟ್ ನ ಚಟುವಟಿಕೆಗಳಿಗೆ ಮರಳುವುದಾದರೆ:
ನಮಗೆ ಅಲ್ಲಿ ಸ್ಟುಡಿಯೋ ಕಾರ್ಯಕ್ರಮಗಳನ್ನು ಹೇಗೆ ರೂಪಿಸಬೇಕೆನ್ನುವುದರ ಬಗ್ಗೆ,ವಾರ್ತಾಪ್ರಸಾರವನ್ನು ನಿರ್ವಹಿಸುವುದರ ಬಗ್ಗೆ,ಟೆಲಿಚಿತ್ರಗಳನ್ನು ನಿರ್ಮಿಸುವುದರ ಬಗ್ಗೆ ವಿಶೇಷ ತರಬೇತಿಯನ್ನು ನೀಡಲಾಗುತ್ತಿತ್ತು. ಸ್ಟುಡಿಯೋದಲ್ಲಿ ಒಂದು ಕಿರುನಾಟಕವನ್ನು ಮೂರು ಕ್ಯಾಮರಾಗಳನ್ನು ಬಳಸಿ ಹೇಗೆ ಚಿತ್ರೀಕರಿಸುವುದು ಎಂಬುದರ ತರಬೇತಿಯ ನಂತರ ನಾನೇ ಒಂದು ನಾಟಕವನ್ನು ನಿರ್ದೇಶಿಸಿ ನಿರ್ಮಿಸಿ ತೋರಿಸುವುದು ಪರೀಕ್ಷೆಯ ಒಂದು ಅಂಗವಾಗಿತ್ತು. ಆ ವೇಳೆಗಾಗಲೇ ವುಡ್ ಹೌಸ್ ನ ಕಾದಂಬರಿ ಆಧಾರಿತ ‘ಪರಮೇಶಿ ಪ್ರೇಮ ಪ್ರಸಂಗ’ ನಾಟಕವನ್ನು ಸಿದ್ಧಪಡಿಸಿದ್ದೆನಲ್ಲಾ,ಅದರದ್ದೇ ಒಂದು ದೃಶ್ಯವನ್ನು ತೆಗೆದುಕೊಂಡು, ಹಿಂದಿ ಭಾಷೆಗೆ ತರ್ಜುಮೆ ಮಾಡಿಕೊಂಡು,ಇಬ್ಬರು ಸ್ಥಳೀಯ ಕಲಾವಿದರನ್ನು ಆರಿಸಿಕೊಂಡು ಅಭ್ಯಾಸ ಮಾಡಿಸಿ ನಾಟಕ ಸಿದ್ಧ ಪಡಿಸಿದೆ. ನಂತರ ಸ್ಟುಡಿಯೋದಲ್ಲಿ ಮೂರು ಕ್ಯಾಮರಾಗಳ ನೆರವಿನಿಂದ ಚಿತ್ರೀಕರಣವನ್ನೂ ಮಾಡಿ ಮುಗಿಸಿದೆ. ಸಹಪಾಠಿಗಳಿಂದ ಹಾಗೂ ಅಧ್ಯಾಪಕ ವರ್ಗದವರಿಂದ ಈ ಕಿರು ನಾಟಕಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಯಿತು. ನನಗೆ ನಿಜವಾದ ಸವಾಲನ್ನೊಡ್ಡಿದ್ದು ಕಿರುಚಿತ್ರದ ನಿರ್ದೇಶನ—ನಿರ್ಮಾಣ.
ಕಿರುಚಿತ್ರ ಮಾಡಲು ನಾನು ಆರಿಸಿಕೊಂಡಿದ್ದು ಕುಂ ವೀರಭದ್ರಪ್ಪ ಅವರ ‘ಕಿವುಡ ನಾಯಿಯಾದ ಪ್ರಸಂಗ’ ಕಥೆಯನ್ನು. ಸಮಾಜದ ದಮನಿತ ವರ್ಗಕ್ಕೆ ಸೇರಿದ ಕಿವುಡನೆಂದೇ ನಾಮಾಂಕಿತನಾದ, ರುದ್ರಭೂಮಿಯಲ್ಲಿ ಗುದ್ದು ತೋಡುವ ವ್ಯಕ್ತಿಯೊಬ್ಬನ ಬದುಕಿನ ಒಂದು ಪುಟವನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ತೆರೆದಿಡುವ ಒಂದು ಅತ್ಯುತ್ತಮ ಕಥೆ ಇದು. ಕುಂ ವೀ ಅವರು ಭಾವೋದ್ವೇಗ ರಹಿತ ಶೈಲಿಯಲ್ಲಿಯೇ ಬರೆದಿದ್ದರೂ ಕಥೆಯ ಅಂತ್ಯ ಓದುಗನನ್ನು ತಲ್ಲಣಗೊಳಿಸಿ ಬಿಡುತ್ತದೆ.. ಮನಸ್ಸನ್ನು ಗಾಢವಾಗಿ ಕಲಕಿಬಿಡುತ್ತದೆ.
ಗುದ್ದುತೋಡುವ ಕಾಯಕದ ಕಿವುಡನಿಗೆ ಹಳ್ಳಿಯಲ್ಲಿ ಯಾರಾದರೂ ಸತ್ತರಷ್ಟೇ ಕೆಲಸ—ಸಂಪಾದನೆ! ಮನೆಯಲ್ಲಿ ಹೆಂಡತಿ..ನಾಲ್ಕು ಪಿಳ್ಳೆಗಳು.. ಕಿತ್ತು ತಿನ್ನುವ ಬಡತನ. ಕೊನೆಗೂ ಹಳ್ಳಿಯಲ್ಲಿ ಒಂದು ಸಾವಾಗಿ ಕಿವುಡನಿಗೆ ಕೆಲಸ ಸಿಕ್ಕಿತಲ್ಲಾ ಎಂದು ಸಂತಸ! ಆದರೆ ಅವನ ದುರಾದೃಷ್ಟ..ಗುದ್ದು ತೋಡಿ ಬಂದ ಕೂಲಿ ಹಣವನ್ನು ಅವನಿಗೆ ಹಿಂದೆ ಸಾಲಕೊಟ್ಟಿದ್ದ ಹುಸೇನ ಕಿತ್ತುಕೊಂಡು ಬಿಡುತ್ತಾನೆ. ಹೆಂಡತಿ ಮಕ್ಕಳಿಗೆ ಒಂದೆರಡು ದಿನ ಹೊಟ್ಟೆ ತುಂಬಿಸುವ ಕಿವುಡನ ಕನಸು ಭಗ್ನವಾಗಿ ಬಿಡುತ್ತದೆ. ಅತೀವ ನಿರಾಸೆಯಿಂದ ಕುಸಿದುಹೋದ ಕಿವುಡನಿಗೆ ಇದ್ದಕ್ಕಿದ್ದಂತೆ ಏನೋ ಹೊಳೆದಂತಾಗುತ್ತದೆ..ಬಿರಬಿರನೆ ಮತ್ತೆ ರುದ್ರಭೂಮಿಗೆ ಹೋಗಿ ಹೆಣವನ್ನು ಹೂಳಿ ಮುಚ್ಚಿದ್ದ ಗುದ್ದನ್ನು ಮತ್ತೆ ತೆಗೆಯತೊಡಗುತ್ತಾನೆ. ಪೂರ್ತಿ ಅಗೆದು ಮಣ್ಣೆಲ್ಲವನ್ನೂ ತೆಗೆದವನಿಗೆ ಹೆಣದ ಮೇಲೆ ಹಾಕಿದ್ದ ಹಣ್ಣು ಕಾಯಿಗಳು ಕಾಣುತ್ತವೆ. ಜತನದಿಂದ ಅವನ್ನೆತ್ತಿಕೊಂಡು ತನ್ನ ತುಂಡು ಬಟ್ಟೆಯಲ್ಲಿ ಸುತ್ತಿಕೊಳ್ಳತೊಡಗುತ್ತಾನೆಂಬಲ್ಲಿಗೆ ಕಥೆ ಮುಗಿಯುತ್ತದೆ.ಬಡತನ ಹಸಿವಿನ ಕ್ರೂರ ಕರಾಳ ಮುಖವನ್ನು ಕುಂ ವೀ ಚಿತ್ರಿಸಿರುವ ಪರಿ ನಿಜಕ್ಕೂ ಮನಸ್ಸನ್ನು ಮುದುಡಿಸಿ ಬಿಡುವಂಥದ್ದು.
ಈ ಕಿರುಚಿತ್ರವನ್ನು ಚಿತ್ರೀಕರಿಸಲು ನಾನು ಸಿದ್ಧ ಮಾಡಿಕೊಳ್ಳುತ್ತಿದ್ದ ವೇಳೆಯಲ್ಲೇ ನನ್ನನ್ನು ನೋಡಿಕೊಂಡು ಹೋಗಲೆಂದು ಮಂಗಳೂರಿನಿಂದ ಎಸ್ ಕೆ ಶ್ರೀಧರ ಬಂದ! ಅವನಿಂದಲೇ ಕಿವುಡನ ಪಾತ್ರವನ್ನು ಮಾಡಿಸಿಬಿಡುವುದೆಂದು ನಾನು ತೀರ್ಮಾನಿಸಿಬಿಟ್ಟೆ. ಕಿವುಡನ ಪತ್ನಿಯ ಪಾತ್ರವನ್ನು ನಿರ್ವಹಿಸಲು ನನ್ನ ಸಹಪಾಠಿಯೇ ಆಗಿದ್ದ ಕನ್ನಡದವರೊಬ್ಬರು ಮುಂದೆ ಬಂದರು. ಉಳಿದ ಪಾತ್ರಗಳಿಗೂ ಹೇಗೋ ಜನರನ್ನು ಹೊಂದಿಸಿಕೊಂಡು ಚಿತ್ರೀಕರಣ ಪ್ರಾರಂಭಿಸಿದೆ. ಬೆಳಿಗ್ಗೆ ಒಂದಷ್ಟು ಭಾಗಗಳನ್ನು ಬಯಲಿನಲ್ಲಿ ಚಿತ್ರೀಕರಿಸಿ ಸಂಜೆ ಕಿವುಡನ ಗುಡಿಸಲಿನ ಭಾಗದ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಳ್ಳತೊಡಗುತ್ತಿದ್ದಂತೆಯೇ ಮೊದಲ ಸಮಸ್ಯೆ ಶುರುವಾಯಿತು.

ಕಿವುಡನ ಪತ್ನಿಯ ಪಾತ್ರ ನಿರ್ವಹಿಸಬೇಕಿದ್ದ ನನ್ನ ಸಹಪಾಠಿ ವಿಪರೀತ ಬೆಳ್ಳಗಿದ್ದರು!ನಮ್ಮ ಮೇಕಪ್ ಕಲಾವಿದರು ಪಾತ್ರಕ್ಕೆ ಹೊಂದುವ ರೀತಿಯಲ್ಲಿ ಕೊಂಚ ಮುಖದ ಕಾಂತಿಯನ್ನು ತಗ್ಗಿಸೋಣವೆಂದು ಸಲಹೆ ನೀಡಿದರೆ ತಮ್ಮ ಬಣ್ಣದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ನನ್ನ ಸಹಪಾಠಿ ಖಡಾಖಂಡಿತವಾಗಿ ‘ಆಗುವುದಿಲ್ಲ’ ಎಂದು ಬಿಡುವುದೇ! ಎಷ್ಟೇ ಅವರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರೂ ಆಕೆ ಮುಖದ ಬಣ್ಣವನ್ನು ತಗ್ಗಿಸುವಂತೆ ಮೇಕಪ್ ಮಾಡಿಕೊಳ್ಳಲು ಒಪ್ಪಲೇ ಇಲ್ಲ! ವಿಧಿಯಿಲ್ಲದೆ ಅಂದಿನ ಚಿತ್ರೀಕರಣ ನಿಲ್ಲಿಸಿ ಮರುದಿನ ಗೆಳೆಯರ ನೆರವಿನಿಂದ ಸ್ಥಳೀಯ ಕಲಾವಿದೆ ಒಬ್ಬರನ್ನು ಆ ಪಾತ್ರ ನಿರ್ವಹಿಸಲು ಕರೆಸಿದೆ. ನನಗೆ ಛಾಯಾಗ್ರಾಹಕರಾಗಿದ್ದವರು ನಮ್ಮ ಸಹಪಾಠಿಯೇ ಆಗಿದ್ದ ವಿಜಯ್ ಅನ್ನುವವರು. ಮರುದಿನ ಹಾಗೂ ಹೀಗೂ ಶೂಟಿಂಗ್ ಮಾಡಿ ಮುಗಿಸಿ ಸಮಾಧಾನದ ನಿಟ್ಟುಸಿರಿಟ್ಟೆ.
ಆಗೆಲ್ಲಾ ಈಗಿನ ಹಾಗೆ ಡಿಜಿಟಲ್ ಯುಗವಲ್ಲ.ಕಚ್ಚಾ ಫಿಲ್ಮ್ ಬಳಸಿ ಶೂಟಿಂಗ್ ಮಾಡಿ ಸಂಸ್ಕರಣ ಗೊಳಿಸಿದ ನಂತರವೇ ಚಿತ್ರೀಕರಣದ ಫಲಿತಾಂಶ ತಿಳಿಯುತ್ತಿತ್ತು.
ಚಿತ್ರೀಕರಣ ಮುಗಿದ ನಂತರ ಶ್ರೀಧರ ಮಂಗಳೂರಿಗೆ ಮರಳಿದ.
ಮರುದಿನ ನನಗೆ ಮತ್ತೊಂದು ಆಘಾತ ಕಾದಿತ್ತು: ಸಂಸ್ಕರಣಗೊಂಡ ಚಿತ್ರಿಕೆಗಳ ಫಲಿತಾಂಶ ಬಂದಿತ್ತು…90 ಭಾಗದ ಚಿತ್ರೀಕರಣದ ಚಿತ್ರಿಕೆಗಳು ಸರಿಯಾಗಿ ಮೂಡದೇ ಮಸಕುಮಸಕಾಗಿಹೋಗಿದ್ದವು!
ಮತ್ತೊಮ್ಮೆ ಚಿತ್ರೀಕರಣವನ್ನು ಮಾಡಬೇಕೆಂದರೆ ಅಲ್ಲಿ ಇನ್ನೊಂದು ಸಮಸ್ಯೆ:ಕಿರುಚಿತ್ರ ನಿರ್ಮಾಣಕ್ಕೆ ನಮಗೆ ಮಂಜೂರಾಗಿದ್ದ ಕಚ್ಚಾ ಫಿಲ್ಮ್—raw stock—ಪೂರ್ತಿ ಮುಗಿದುಹೋಗಿತ್ತು.ಕಾಡಿ ಬೇಡಿ ಗೋಗರೆದು ಮತ್ತಷ್ಟು ರಾ ಸ್ಟಾಕ್ ಮಂಜೂರು ಮಾಡಿಸಿಕೊಂಡದ್ದಾಯಿತು.ಇನ್ನು ಮುಖ್ಯ ಪಾತ್ರಗಳಿಗೆ ಬೇರೆ ಕಲಾವಿದರನ್ನು ಹೊಂದಿಸಿಕೊಳ್ಳಬೇಕಲ್ಲಾ.. ಆಗ ನನಗೆ ನೆನಪಾದದ್ದು ಬಾಂಬೆ ಮೈಸೂರು ಅಸೋಸಿಯೇಷನ್ ನ ಕಲಾವಿದ ಮಿತ್ರರು! ಸರಿ..ಅಂದು ಸಂಜೆಯೇ ಬಾಂಬೆಗೆ ಬಸ್ ಹತ್ತಿದೆ. ಮೂರು ತಾಸಿನ ಹಾದಿ.ಬಾಂಬೆಯಲ್ಲಿ ಇಳಿದವನೇ ಸೀದಾ ಚೆಂಬೂರಿನಲ್ಲಿದ್ದ ಶ್ರೀಕಾಂತ್ ಅಲಿಯಾಸ್ ಚಿಕ್ಕಣ್ಣನ ಮನೆಗೆ ಹೋಗಿ, ಬೇಲಿ ಮತ್ತು ಹೊಲ ನಾಟಕದಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದ ರಂಗನಾಥರಾವ್ ಹಾಗೂ ಗುರುದತ್ತ ರಾವ್ ಅವರನ್ನು ಅಲ್ಲಿಗೇ ಕರೆಸಿಕೊಂಡೆ.ಅವರಿಗೆ ನಡೆದದ್ದೆಲ್ಲವನ್ನೂ ವಿವರಿಸಿ ಒಂದೆರಡು ದಿನಗಳ ಮಟ್ಟಿಗೆ ಪುಣೆಗೆ ಬಂದು ನನ್ನ ಕಿರುಚಿತ್ರದಲ್ಲಿ ಅಭಿನಯಿಸಲು ಕೇಳಿಕೊಂಡೆ. ಇಬ್ಬರೂ ಆತ್ಮೀಯ ಮಿತ್ರರು ಸಂತೋಷವಾಗಿ ಬರಲು ಒಪ್ಪಿಕೊಂಡಾಗ ಒಂದು ಹೊರೆ ಇಳಿದಂತಾಯಿತು. ರಂಗನಾಥ ರಾವ್ ಅವರಿಗೆ ಕಿವುಡನ ಪಾತ್ರವೆಂದೂ ಗುರುದತ್ತನಿಗೆ ಹುಸೇನನ ಪಾತ್ರವೆಂದೂ ನಿರ್ಧರಿಸಿ ಅವರಿಗೆ ಕಥೆಯನ್ನು ವಿವರಿಸಿ ಒಂದು ದಿನ ಬಿಟ್ಟು ಪುಣೆಗೆ ಬರಲು ವಿನಂತಿಸಿಕೊಂಡು ಮರುದಿನ ಮುಂಜಾನೆ ಪುಣೆಗೆ ಮರಳಿದೆ. ಮರು ಚಿತ್ರೀಕರಣಕ್ಕೆ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡೆ. ಕಿವುಡನ ಹೆಂಡತಿಯ ಪಾತ್ರಕ್ಕೆ ಸ್ಥಳೀಯ ಕಲಾವಿದೆಯೊಬ್ಬರನ್ನು ಅದಾಗಲೇ ಆರಿಸಿಕೊಂಡಾಗಿತ್ತು.ಉಳಿದ ಚಿಕ್ಕ ಪುಟ್ಟ ಪಾತ್ರಗಳಿಗೆ ನಮ್ಮ ಸಹಪಾಠಿಗಳನ್ನೇ ಆರಿಸಿಕೊಂಡೆ.ಛಾಯಾಗ್ರಾಹಕ ವಿಜಯ್ ನನ್ನು ಕರೆದು,’ಕಚ್ಚಾ ಫಿಲ್ಮ್ ನ ಕೊರತೆ ಇರುವುದರಿಂದ ಅತಿ ಎಚ್ಚರಿಕೆಯಿಂದ ಏನೂ ತಪ್ಪುಗಳಾಗದಂತೆ ಚಿತ್ರೀಕರಣ ಮಾಡಬೇಕು’ಎಂದು ವಿನಂತಿಸಿಕೊಂಡೆ. ಅಂದು ರಾತ್ರಿಯ ವೇಳೆಗೇ ಬಾಂಬೆಯ ಕಲಾವಿದರು ಬಂದಿಳಿದರು.ಮರುದಿನ ಮುಂಜಾನೆ ಮರು ಚಿತ್ರೀಕರಣ ಆರಂಭವಾಯಿತು.ಎಲ್ಲವೂ ಸುಸೂತ್ರವಾಗಿ ನಡೆಯುತ್ತಿರುವಾಗಲೇ ಮತ್ತೊಂದು ಸಮಸ್ಯೆ ಎದುರಾಯಿತು!
| ಇನ್ನು ಮುಂದಿನ ವಾರಕ್ಕೆ ।






0 Comments