ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು.
ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
ಅಂಕಣ 162
“ಆದ್ಯ” ನೃತ್ಯ ಪ್ರಸ್ತುತಿಗಾಗಿ ರಾಧಿಕಾಳ ತಾಲೀಮು ಶುರುವಾಗಿಯೇ ಬಿಟ್ಟಿತು! ನಮಗೋ ಖುಷಿಯೋ ಖುಷಿ—ಮಗಳು ನೃತ್ಯದಲ್ಲಿ ತೊಡಗಿಕೊಂಡ ಸಂತಸ ಒಂದೆಡೆಯಾದರೆ ಮತ್ತೊಂದೆಡೆ ಅವಳು ತನ್ನ ಖಿನ್ನತೆ—ಬೇಸರದ ಕೋಶದಿಂದ ಹೊರಬರುವಂತಾಯಿತಲ್ಲಾ ಎಂಬ ನೆಮ್ಮದಿ—ಸಮಾಧಾನ.
2016 ಆಗಸ್ಟ್ 19 ನೆಯ ತಾರೀಖು ಎ ಡಿ ಎ ರಂಗಮಂದಿರದಲ್ಲಿ ಆದ್ಯ ನೃತ್ಯ ಪ್ರಸ್ತುತಿ ಎಂದು ನಿರ್ಧಾರವಾಯಿತು. ಪ್ರಸಿದ್ಧ ವಿದ್ವಾಂಸರಾದ ಬಾಲಸುಬ್ರಹ್ಮಣ್ಯ ಶರ್ಮಾ ಅವರ ಹಾಡುಗಾರಿಕೆ; ಪ್ರೀತಿ ಭಾರದ್ವಾಜ್ ಅವರ ನಟ್ಟುವಾಂಗ; ವಿದ್ವಾನ್ ವಿ.ಆರ್. ಚಂದ್ರಶೇಖರ್ ಅವರ ಮೃದಂಗ, ನಿತೀಶ್ ಅಮ್ಮಣ್ಣಯ್ಯ ಅವರ ಕೊಳಲು ಹಾಗೂ ಆರ್.ದಯಾಕರ್ ಅವರ ಪಿಟೀಲು ಪಕ್ಕವಾದ್ಯ..ಒಟ್ಟಿನಲ್ಲಿ ವಿದ್ವನ್ಮಣಿಗಳ ಮೇಳವೇ ನೃತ್ಯಕ್ಕೆ ಮೆರುಗು ನೀಡಲು ಆಯೋಜನೆಗೊಂಡಿತು. ಪ್ರೀತಿ ಭಾರದ್ವಾಜ್ ಅವರು ಪ್ರಸಿದ್ಧ ಲಯವಾದ್ಯ ಪ್ರವೀಣರಾದ ಬಾಲಿ ಅವರ ಸುಪುತ್ರಿ. ಆದ್ಯ ಪ್ರಸ್ತುತಿಯಲ್ಲಿ ಒಂದು ವಿಶೇಷ ಕಾರ್ಯಕ್ರಮವನ್ನು ರಾಧಿಕಾ ಪರಿಭಾವಿಸಿದ್ದಳು: ತನ್ನದೇ ಒಂದು ಇಂಗ್ಲೀಷ್ ಕವಿತೆಯ ಭಾವಪೂರ್ಣ ವಾಚನಕ್ಕೆ ಭರತನಾಟ್ಯ ಹಾಗೂ ಬ್ಯಾಲೆ ನೃತ್ಯ ಪ್ರಕಾರಗಳ ಸಮನ್ವಯದ ಮಾದರಿಯ ನೃತ್ಯ ಸಂಯೋಜನೆ! ಶಾಸ್ತ್ರೀಯ ಮಾರ್ಗ ಪದ್ಧತಿಯ ಪ್ರಸ್ತುತಿಗಳ ಜೊತೆಗೆ ರಂಜನಿಯ ಒಂದು ಭಾವಗೀತೆಗೆ ನೃತ್ಯ ಸಂಯೋಜನೆ ಹಾಗೂ ಇಂಗ್ಲೀಷ್ ಕವಿತೆಗೆ ನೃತ್ಯದ ಅಳವಡಿಕೆಯ ಸೃಜನಾತ್ಮಕ ಪ್ರಾಯೋಗಿಕ ಪ್ರಸ್ತುತಿಗಳೂ ಸೇರಿ ರಸಿಕರಿಗೆ ಒಂದು ವಿಶಿಷ್ಟ ಅನುಭವವನ್ನು ನೀಡುವ ರೀತಿಯಲ್ಲಿ ಇಡಿಯ ಕಾರ್ಯಕ್ರಮದ ಪ್ರಸ್ತುತಿ ರೂಪುಗೊಂಡಿತ್ತು.
ಇದೇ ಸಮಯದಲ್ಲಿ ಕೆನರಾ ಬ್ಯಾಂಕ್ ಸಂಸ್ಥೆಯವರು ಈ ಬಗೆಯ ಕಾರ್ಯಕ್ರಮಗಳನ್ನು ಪ್ರಾಯೋಜಿಸುತ್ತಾರೆಂಬ ಸುದ್ದಿ ಕಿವಿಗೆ ಬಿತ್ತು. ಅದುವರೆಗೆ ನಾವು ನಮ್ಮ ಯಾವ ಕಾರ್ಯಕ್ರಮಗಳಿಗೂ ಪ್ರಾಯೋಜಕರ ನೆರವು ಪಡೆದಿರಲಿಲ್ಲ ಹಾಗೂ ಆ ಕುರಿತಾದ ಹೆಚ್ಚಿನ ತಿಳುವಳಿಕೆಯೂ ನಮಗಿರಲಿಲ್ಲವೆನ್ನಿ! ಹಲವಾರು ತಿಂಗಳುಗಳು ದುಡಿದು ಒಂದಿಷ್ಟು ಹಣ ಶೇಖರಿಸಿಕೊಂಡು ಒಂದು ಸಿ ಡಿ ಬಿಡುಗಡೆ ಅಥವಾ ಒಂದು ನೃತ್ಯ ಪ್ರಸ್ತುತಿಯನ್ನು ಆಯೋಜಿಸುವುದು ನಮ್ಮ ವಾಡಿಕೆಯಾಗಿತ್ತು. ಈ ಬಾರಿ ಒಂದು ಸಂಸ್ಥೆಯ ಪ್ರಾಯೋಜನೆಯಿಂದ ಅಲ್ಪ ಸ್ವಲ್ಪ ನೆರವಾಗುವುದಾದರೆ ಆಗಲಿ ಎಂದುಕೊಂಡು ಕೆನರಾ ಬ್ಯಾಂಕ್ ನ ಸಂಬಂಧಪಟ್ಟ ಅಧಿಕಾರಿಗಳಾದ ಶ್ರೀ ಶೇಷಾದ್ರಿ ಅವರನ್ನು ಸಂಪರ್ಕಿಸಿದೆವು. ಸಹೃದಯರೂ ಸಜ್ಜನರೂ ಆದ ಶೇಷಾದ್ರಿ ಅವರು ರಾಧಿಕಾಳ ನೃತ್ಯ ಪ್ರದರ್ಶನವನ್ನು ಪ್ರಾಯೋಜಿಸಲು ಸಂತೋಷದಿಂದ ಒಪ್ಪಿಕೊಂಡರು. ಆ ಸಮಯದಲ್ಲಿ ಕೆನರಾ ಬ್ಯಾಂಕ್ ನ ಜನರಲ್ ಮ್ಯಾನೇಜರ್ ಆಗಿದ್ದ ಶ್ರೀ ರವೀಂದ್ರ ಭಂಡಾರಿ ಅವರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅಪಾರ ಆಸಕ್ತಿ ಉಳ್ಳವರಾದ್ದರಿಂದ ಅವರನ್ನೇ ಓರ್ವ ಮುಖ್ಯ ಅತಿಥಿಯಾಗಿ ಆಹ್ವಾನಿಸಲು ಆಲೋಚಿಸಿ ಅವರನ್ನು ಸಂಪರ್ಕಿಸಿದಾಗ ಅವರೂ ತುಂಬು ಸಂತಸದಿಂದ ಒಪ್ಪಿಕೊಂಡರು. ಅವರ ಜತೆಗೆ ಇನ್ನೂ ಇಬ್ಬರು ಮುಖ್ಯ ಅತಿಥಿಗಳನ್ನು ಆಹ್ವಾನಿಸುವುದು ನಮ್ಮ ಇಚ್ಫೆಯಾಗಿತ್ತು. ಪ್ರಸಿದ್ಧ ನೃತ್ಯ—ಕಲಾ ವಿಮರ್ಶಕರಾದ ಡಾ॥ಎಂ. ಸೂರ್ಯಪ್ರಸಾದ್ ಅವರು ಒಬ್ಬ ಮುಖ್ಯ ಅತಿಥಿಯಾಗಿ ಬರಲು ಸಮ್ಮತಿ ನೀಡಿದರು. ಮತ್ತೊಬ್ಬರಿಗಾಗಿ ನಮ್ಮ ಹುಡುಕಾಟ ನಡೆದಿತ್ತು.
ರಾಧಿಕಾ ಹಿಂದೊಮ್ಮೆ alliance francaise ಸಭಾಂಗಣದಲ್ಲಿ ಯಾವುದೋ ವಿಶೇಷ ಸಂದರ್ಭಕ್ಕೆಂದು ಎರಡು ನೃತ್ಯಭಾಗಗಳನ್ನು ಪ್ರದರ್ಶಿಸಿದ್ದಳು. ಆ ನೃತ್ಯ ಪ್ರದರ್ಶನವನ್ನು ವೀಕ್ಷಿಸಿದ್ದ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧರಾಗಿದ್ದ ವಿಮರ್ಶಕರೊಬ್ಬರು ರಾಧಿಕಾಳನ್ನು ಬಹಳವಾಗಿ ಶ್ಲಾಘಿಸಿದ್ದರು.”ನಿನ್ನ ನೃತ್ಯ ಪ್ರಸ್ತುತಿ ಕಳೆದ ದಿನಗಳ ಖ್ಯಾತ ಕಲಾವಿದೆಯರ ನೃತ್ಯವನ್ನು ನೆನಪಿಸುವಂತಿತ್ತು. ಅಭಿನಂದನೆಗಳು” ಎಂದೆಲ್ಲಾ ಮೆಚ್ಚಿ ನುಡಿದು ರಾಧಿಕಾಳ ಬೆನ್ನು ತಟ್ಟಿದ್ದರು. ಅವರನ್ನೇ ಯಾಕೆ ಮತ್ತೊಬ್ಬ ಮುಖ್ಯ ಅತಿಥಿಯನ್ನಾಗಿ ಕರೆಯಬಾರದು? ಹೇಗೂ ರಾಧಿಕಾಳ ನೃತ್ಯವನ್ನು ಒಮ್ಮೆ ನೋಡಿ ಮೆಚ್ಚಿದ್ದಾರೆ; ಅಂಥವರ ಒಂದು ಮೆಚ್ಚುನುಡಿ— ಪ್ರಶಂಸೆ ರಾಧಿಕಾಳ ಭವಿಷ್ಯಕ್ಕೆ ನೆರವಾಗಬಹುದು — ಎಂದು ನಾವು ಆಲೋಚಿಸಿದೆವು. ನಾನು ಮತ್ತೊಬ್ಬ ಗೆಳೆಯರಿಂದ ಆ ವಿಮರ್ಶಕರ ನಂಬರ್ ಪಡೆದುಕೊಂಡು ಅವರಿಗೆ ಕರೆ ಮಾಡಿ ನನ್ನ ಪರಿಚಯ ಹೇಳಿಕೊಂಡೆ.
ವಾಸ್ತವವಾಗಿ ಅವರು ರಾಧಿಕಾಳ ನೃತ್ಯ ಪ್ರದರ್ಶನ ನೋಡಿದಂದು ನಾನೂ ಅವರೊಟ್ಟಿಗೆ ಸುಮಾರು ಹೊತ್ತು ಮಾತಾಡಿದ್ದೆ! ಕನ್ನಡ ಸಿನೆಮಾಗಳ ಬಗ್ಗೆ ಕೂಡಾ ನನ್ನೊಟ್ಟಿಗೆ ಚರ್ಚಿಸಿದ್ದರು! ಇಂದೇಕೋ ಅವರ ಧಾಟಿ ಕೊಂಚ ವ್ಯತ್ಯಸ್ತವಾದಂತೆ ಭಾಸವಾಗತೊಡಗಿತು ನನಗೆ! ಒಂದು ಕೃತಕ ಗತ್ತು, ಅನಗತ್ಯ ಗಾಂಭೀರ್ಯ—ಔಪಚಾರಿಕತೆಗಳು ಅವರ ಮಾತು—ಧ್ವನಿಗಳಲ್ಲಿ ಮನೆ ಮಾಡಿದ್ದವು. “ಹೆಚ್ಚು ಸಮಯವಿಲ್ಲ ನನಗೆ..ಬೇಗ ಹೇಳಿ” ಎನ್ನುವಂತಹ ಧಾವಂತ ಬೇರೆ! ಇಂಥವನ್ನೆಲ್ಲಾ ಎಂದೂ ಸಹಿಸಿದವನೇ ಅಲ್ಲ ನಾನು. ಆದರೆ ನನ್ನ ಕೆಲಸಕ್ಕಾಗಿ ನಾನೇ ಕರೆ ಮಾಡಿರುವುದರಿಂದ ಸಂಯಮದಿಂದಲೇ ಚುಟುಕಾಗಿ ಪ್ರಸಂಗವನ್ನು ವಿವರಿಸಿದೆ. ಮುಖ್ಯ ಅತಿಥಿಗಳಾಗಿ ಬರಲು ಸಾಧ್ಯವೇ ಎಂದು ವಿನಂತಿಸಿಕೊಂಡೆ. ಇದ್ದಕ್ಕಿದ್ದಂತೆ ಆತ ಬಡಬಡಿಸತೊಡಗಿದರು! “ಎ ಡಿ ಎ ರಂಗಮಂದಿರದಲ್ಲಿ ನೃತ್ಯವೇ!! ಛೆ! ಕೊನೆಯ ಪಕ್ಷ ಚೌಡಯ್ಯ ರಂಗಮಂದಿರದಲ್ಲಾದರೂ ಆದರೆ ಬರಲ ಯೋಚಿಸಬಹುದು” ಎಂದು ಆರಂಭಿಸಿದ ಆತ ನೃತ್ಯ ಪ್ರದರ್ಶನವನ್ನು ಆಯೋಜಿಸಬೇಕಾದ ಕ್ರಮದ ಬಗ್ಗೆ ನನಗೆ ಉಪದೇಶವನ್ನೇ ಮಾಡಿಬಿಟ್ಟರು. ಅವರ ಪ್ರಕಾರ ನಾವು ಮಾಡುತ್ತಿರುವುದೆಲ್ಲಾ ಅರ್ಥಹೀನ ಕಸರತ್ತು! “ಏಪ್ರಿಲ್ ಹತ್ತೊಂಬತ್ತರ ವೇಳೆಗೆ ನಾನು ಮುಂಬೈನಲ್ಲಿರುತ್ತೇನೆ..ರಂಗಮಂದಿರ ಬದಲಿಸಿ ನನ್ನನ್ನು ವಿಮಾನದಲ್ಲಿ ಕರೆಸಿಕೊಳ್ಳುವುದು ಸಾಧ್ಯವಾಗುವುದಾದರೆ ಯೋಚಿಸಿ ಹೇಳುತ್ತೇನೆ” ಎಂಬರ್ಥದಲ್ಲಿ ಅವರ ಮುಂದಿನ ಮಾತುಗಳಿದ್ದವು.
ಈ ‘ಶ್ವೇತಗಜರಾಜ’ನನ್ನು ಕರೆಸಿ ಸಲಹುವುದು ನಮ್ಮ ಕ್ಷಮತೆಗೆ ಮೀರಿದ್ದು ಎಂದೆನ್ನಿಸಿ,”ಎರಡು ಮೂರು ದಿನದಲ್ಲಿ ಫೋನ್ ಮಾಡುತ್ತೇನೆ” ಎಂದು ಹೇಳಿ ಫೋನ್ ಇಟ್ಟುಬಿಟ್ಟೆ. ಇಬ್ಬರೇ ಮುಖ್ಯ ಅತಿಥಿಗಳೊಂದಿಗೆ ಕಾರ್ಯಕ್ರಮ ನಡೆಸುವುದೆಂದು ನಾವು ತೀರ್ಮಾನಿಸಿಬಿಟ್ಟೆವು. ಆ ವಿಮರ್ಶಕರ ಮಾತು ನಮ್ಮನ್ನು ಒಂದಷ್ಟು ಚಿಂತನೆಗೆ ದೂಡಿದ್ದಂತೂ ಸತ್ಯ: ಬಡಕುಟುಂಬದಿಂದ ಬಂದ ಎಷ್ಟೋ ಪ್ರತಿಭಾವಂತ ಮಕ್ಕಳು ಹೀಗೆ ವಿಜೃಂಭಣೆಯಿಂದ ನೃತ್ಯ ಪ್ರದರ್ಶನ ನೀಡಲು ಸಾಧ್ಯವೇ? ಅಥವಾ ಪ್ರತಿಭಾ ಪ್ರದರ್ಶನಕ್ಕೆ ಈ ರೀತಿಯ ಅಳತೆಗೋಲುಗಳನ್ನು ವಿಧಿಸಿಬಿಟ್ಟರೆ ಸಾಮಾನ್ಯರ ಪಾಡೇನು? ಹಾಗೆ ನೋಡಿದರೆ ಒಂದು ನೃತ್ಯ ಕಾರ್ಯಕ್ರಮ ಏರ್ಪಡಿಸುವುದೇ ಭಾರೀ ಸಾಹಸದ ಕೆಲಸ! ಯಾವ ಖಚಿತ ಆದಾಯವೂ ಇಲ್ಲದಿರುವಾಗ ಬರೀ ಬಂಡವಾಳ ಹೂಡಿ ಕಲಾಸೇವೆ ಮಾಡಿದ ಮಹಾನ್ ಆತ್ಮತೃಪ್ತಿಯೊಂದಿಗೆ ಸಮಾಧಾನ ಪಟ್ಟುಕೊಳ್ಳಬಹುದಷ್ಟೇ. ಕೆಲ ಖಾಸಗಿ ಆಯೋಜಕ ಸಂಸ್ಥೆಗಳು ನೃತ್ಯ ಪ್ರದರ್ಶನಕ್ಕೆ ನೀಡುವ ಗೌರವಧನದಲ್ಲಿ ಖರ್ಚಿನ ಒಂದು ಭಾಗ ಮಾತ್ರ ಮರಳಿ ಬಂದಂತಾಗಬಹುದಷ್ಟೇ! ಇನ್ನು ವಶೀಲಿ—ಕಮೀಷನ್ ಗಳ ಸರ್ಕಾರೀ ಪ್ರಾಯೋಜಿತ ಉತ್ಸವ ಕಾರ್ಯಕ್ರಮಗಳ ಬಗ್ಗೆ ಏನೂ ಹೇಳದಿರುವುದೇ ಲೇಸು! ಕಲಾ ಶ್ರೀಮಂತಿಕೆಯ ಜೊತೆಗೆ ಆರ್ಥಿಕವಾಗಿಯೂ ನೀವು ಬಲಿಷ್ಠರಾಗಿದ್ದರೆ ಮಾತ್ರ ಚಿಂತೆಯಿಲ್ಲ! ಪಕ್ಕವಾದ್ಯದವರ ಸಂಭಾವನೆಗಳನ್ನು ನೀಡಿ ರಂಗಮಂದಿರವನ್ನು ಬಾಡಿಗೆಗೆ ಹಿಡಿದು ತಾಂತ್ರಿಕ ವರ್ಗದವರ ಭತ್ಯೆಗಳನ್ನು ನೀಡಿ ಪ್ರಚಾರ ವ್ಯವಸ್ಥೆಯನ್ನು ಮಾಡಿ ಉಚಿತ ಪ್ರವೇಶದ ಪ್ರದರ್ಶನಗಳನ್ನೇರ್ಪಡಿಸಿ ನಿಭಾಯಿಸುವ ವೇಳೆಗೆ ಎಂಥವರೂ ಹೈರಾಣಾಗಿಬಿಡುವುದೇ ಸರಿ! ಇದಾವುದೂ ಕಲ್ಪಿತ ಮಾತುಗಳಲ್ಲ, ಮಧ್ಯಮವರ್ಗದ ಕಲಾಭಿಮಾನಿಯ ಅನುಭವ ಜನ್ಯ ಅಳಲು!!! ಎಂದಾದರೂ ಇಂಥ ಸಮಸ್ಯೆಗಳನ್ನು ನಿವಾರಿಸುವಂಥ ಕಮೀಷನ್ ರಹಿತ ಪಾರದರ್ಶಕ ವ್ಯವಸ್ಥೆಯೂ, ಶ್ರೀಮಂತ ಕಲಾಭಿಮಾನಿ ಪೋಷಕರ ಪ್ರೋತ್ಸಾಹ—ಆಶ್ರಯವೂ ಕಲಾವಿದರಿಗೆ ದೊರೆತು ಪರಿಸ್ಥಿತಿ ಸುಧಾರಿಸಲೆಂಬ ಹಂಬಲ!!
ಅಷ್ಟೇ!! ಇರಲಿ.
“ಆದ್ಯ” ನೃತ್ಯ ಪ್ರಸ್ತುತಿ ಕಿಕ್ಕಿರಿದು ನೆರೆದಿದ್ದ ಆತ್ಮೀಯ ಸಹೃದಯರ ಸಮಕ್ಷಮದಲ್ಲಿ ಅದ್ಭುತವಾಗಿ ನೆರವೇರಿತು. ರಾಧಿಕಾಳನ್ನು ವಿದ್ವತ್ ಪರೀಕ್ಷೆಗೆ ಅಣಿಗೊಳಿಸಿದ್ದ ಗುರು ಕಿರಣ್ ಸುಬ್ರಹ್ಮಣ್ಯಂ ಹಾಗೂ ಗುರು ಸಂಧ್ಯಾ ಕಿರಣ್ ಅವರಿಗೆ ಅಂದು ಗುರುವಂದನೆಯ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು. ರಾಧಿಕಾಳ ನೃತ್ಯ ಪ್ರಾವೀಣ್ಯತೆಯನ್ನೂ ಅವಳ ಸೃಜನಾತ್ಮಕ ಪ್ರಯೋಗಶೀಲತೆಯನ್ನೂ ಸಹೃದಯರು ಅಪಾರವಾಗಿ ಮೆಚ್ಚಿಕೊಂಡರು.ವಿಶೇಷವಾಗಿ ಎಲ್ಲರ ಗಮನ ಸೆಳೆದು ಮೆಚ್ಚುಗೆಗೆ ಪಾತ್ರವಾಗಿದ್ದು ಇಂಗ್ಲೀಷ್ ಕವಿತೆಯ ಪ್ರಸ್ತುತಿ. ನಟ್ಟುವಾಂಗವನ್ನು ನಿರ್ವಹಿಸುತ್ತಿದ್ದ ಪ್ರೀತಿ ಭಾರದ್ವಾಜ್ ಅವರೇ ರಾಧಿಕಾಳ ಕವಿತೆಯನ್ನು ಅತ್ಯಂತ ಭಾವಪೂರ್ಣವಾಗಿ ವಾಚಿಸಿದ್ದರು. ಆ ವಾಚನದಲ್ಲೊಂದು ನಾದದ ಝೇಂಕಾರ ಅನುರಣಿಸುತ್ತಿತ್ತು. ರಾಧಿಕಾಳ ನೃತ್ಯ ಸಂಯೋಜನೆಯಂತೂ ಅತ್ಯಂತ ಉನ್ನತ ಮಟ್ಟದ್ದಾಗಿತ್ತು. ಭರತನಾಟ್ಯದ ವೃತ್ತೀಯ ಗತಿ—ಚಲನಗಳೊಂದಿಗೆ ಬ್ಯಾಲೆ ನೃತ್ಯಪ್ರಕಾರದ ಲಂಬೀಯ ಹಾಗೂ ಕೋನೀಯ ಚಲನ ಮಾದರಿಗಳನ್ನು ಸಮನ್ವಯಗೊಳಿಸಿ ಅವಳು ಸಂಯೋಜಿಸಿದ್ದ ನೃತ್ಯ ಭಾಗ ಅವಳ ಸೃಜನಶೀಲತೆಗೆ ಹಿಡಿದ ಕನ್ನಡಿಯಾಗಿತ್ತು. ಈ ಸಂದರ್ಭದಲ್ಲಿ ನನಗೆ ನೆನಪಾದದ್ದು ಬಿ ಎಂ ಶ್ರೀ ಅವರ ಸಾಲುಗಳು:
“ಅವಳ ತೊಡುಗೆ ಇವಳಿಗಿಟ್ಟು ನೋಡಬಯಸಿದೆ; ಇವಳ ತೊಡುಗೆ ಅವಳಿಗಿಟ್ಟು ಹಾಡಬಯಸಿದೆ”! .
ಇಂಗ್ಲೀಷ್ ಗೀತೆಗಳನ್ನು ಕನ್ನಡಕ್ಕೆ ರೂಪಾಂತರಿಸಿ ತಂದ ನವೋದಯದ ಸಂದರ್ಭದಲ್ಲಿ, “ಒಂದು ಭಾಷೆಯ ಕಾವ್ಯವನ್ನು ಮತ್ತೊಂದು ಭಾಷೆಗೆ ಕರೆತರುವಾಗ ಕವಿಯ ಸೃಜನಶೀಲತೆ ಕಾವ್ಯಸೌಂದರ್ಯವನ್ನು ಉದ್ದೀಪಿಸುವಂತಿರಬೇಕು” ಎಂಬುದು ಶ್ರೀ ಅವರ ಮನದಿಂಗಿತವಾಗಿತ್ತು. “ಭಾಷಾಂತರ ಆತ್ಮದಿಂದ, ಮನಸ್ಸಿನಿಂದ ಹುಟ್ಟಿದ ಭಾವನೆಗಳ ಅಭಿವ್ಯಕ್ತಿಯಾಗಿದೆ” ಎಂದು ರಾಷ್ಟ್ರಕವಿ ಕುವೆಂಪು ಅವರು ಹೇಳಿಲ್ಲವೇ? ಅಂಥದೇ ಕ್ರಿಯಾಶೀಲ ಬೆಸುಗೆಯ ಭಾವಾಭಿವ್ಯಕ್ತಿಗೆ ರಾಧಿಕಾಳ ನೃತ್ಯ ಪ್ರದರ್ಶನ ಸಾಕ್ಷಿಯಾಯಿತೆಂದು ರಸಿಕರು—ವಿಮರ್ಶಕರು ಅಭಿಪ್ರಾಯಿಸಿ ಶಭಾಷ್ ಗಿರಿಯನ್ನು ನೀಡಿದರು.
ಸಂತಸದಿಂದ ಮೆರೆದಾಡಲು ಮಕ್ಕಳ ಗೆಲುವಿಗಿಂತ ಹೆಚ್ಚಿನ ಸಂಗತಿ ತಂದೆ ತಾಯಿಯರಿಗೆ ಬೇರೇನು ತಾನೇ ಇದ್ದೀತು???!!






0 Comments