ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿವಾಸ ಪ್ರಭು ಅಂಕಣ: ಬಸಿರಲ್ಲೇ ಕೂಸಿನ ಕಾಲಿಗೆ ಗೆಜ್ಜೆಯನ್ನು ಕಟ್ಟಿಯೂ ಆಗಿತ್ತು!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. 

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು. 

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. 

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ. 

137 

ಮಗಳು ರಾಧಿಕಾಳ ಭರತನಾಟ್ಯ ನೃತ್ಯಾಭ್ಯಾಸ ವಿದುಷಿ ಶುಭಾ ಧನಂಜಯ ಅವರಲ್ಲಿ ಸಾಂಗವಾಗಿ ನಡೆಯುತ್ತಿತ್ತು. ಮಗಳಿಗಂತೂ ಭರತನಾಟ್ಯವೆಂದರೆ ಉಸಿರು! ಮಗಳು ಹೊಟ್ಟೆಯಲ್ಲಿದ್ದಾಗಲೇ ರಂಜನಿ ಅವಳನ್ನು ನೃತ್ಯಗಾತಿಯಾಗಿಸುವ ಕನಸು ಕಂಡಾಗಿತ್ತು; ಬಸಿರಲ್ಲೇ ಕೂಸಿನ ಕಾಲಿಗೆ ಗೆಜ್ಜೆಯನ್ನು ಕಟ್ಟಿಯೂ ಆಗಿತ್ತು! ಅಮ್ಮನಿಗೆ ಒಂದಿಷ್ಟೂ ನಿರಾಸೆಯಾಗದಂತೆ ಮಗಳು ರಾಧಿಕೆ ನಾಟ್ಯದೀಕ್ಷೆಯನ್ನು ಸ್ವೀಕರಿಸಿ ತನ್ಮಯತೆಯಿಂದ ನೃತ್ಯ ಸರಸ್ವತಿಯನ್ನು ಆವಾಹಿಸಿಕೊಂಡುಬಿಟ್ಟಿದ್ದಳು. ಹತ್ತಾರು ನೃತ್ಯಕಾರ್ಯಕ್ರಮಗಳನ್ನು ನೀಡಿ ಸಾಕಷ್ಟು ಆತ್ಮವಿಶ್ವಾಸವನ್ನೂ ರಂಗ ಪರಿಣತಿಯನ್ನೂ ಗಳಿಸಿಕೊಂಡಿದ್ದಳು ರಾಧಿಕೆ. ಹೀಗಿರುವಾಗಲೇ ಗುರು ಶುಭಾ ಧನಂಜಯ ಅವರಿಂದ ಸಂದೇಶ ಬಂತು: “ಮಗಳು ರಂಗಪ್ರವೇಶಕ್ಕೆ ಸಿದ್ಧಳಾಗಿದ್ದಾಳೆ. ನಿಮ್ಮ ಸಮ್ಮತಿಯೂ ಇದ್ದರೆ ಆ ನಿಟ್ಟಿನಲ್ಲಿ ನಮ್ಮ ಕೆಲಸ ಕಾರ್ಯಗಳನ್ನು ಪ್ರಾರಂಭಿಸಬಹುದು.” ನಾವೂ ಆ ಒಂದು ಕ್ಷಣಕ್ಕಾಗಿಯೇ ಕಾತರದಿಂದ ಕಾಯುತ್ತಿದ್ದೆವಾದ್ದರಿಂದ ಬಹಳ ಸಂಭ್ರಮದಿಂದ ರಂಗಪ್ರವೇಶದ ಪೂರ್ವಸಿದ್ಧತೆಗಳನ್ನು ಪ್ರಾರಂಭಿಸಿಬಿಟ್ಟೆವು.

ಗುರು ಶುಭಾ ಅವರೊಂದಿಗೆ ಮೊದಲ ಸುತ್ತಿನ ಮಾತುಕತೆಯಾಯಿತು. ಅಕ್ಟೋಬರ್ 30ನೇ ತಾರೀಖು 2008ನೇ ಇಸವಿ ರವೀಂದ್ರ ಕಲಾಕ್ಷೇತ್ರದಲ್ಲಿ ರಂಗಪ್ರವೇಶ ಕಾರ್ಯಕ್ರಮವನ್ನು ನಡೆಸುವುದೆಂದು ತೀರ್ಮಾನವಾಯಿತು. ಗಾಯನ ಹಾಗೂ ಪಕ್ಕವಾದ್ಯ ಕಲಾವಿದರ ಆಯ್ಕೆ ಮುಂದಿನ ಮಹತ್ವದ ಹೆಜ್ಜೆಯಾಗಿತ್ತು. ನಾಡಿನ ಶ್ರೇಷ್ಠ ಕಲಾವಿದರನ್ನೇ ಸಂಪರ್ಕಿಸಿ ರಾಧಿಕೆಯ ರಂಗಪ್ರವೇಶಕ್ಕೆ ಸಹಕಾರ ನೀಡಬೇಕೆಂದು ಕೇಳಿಕೊಂಡೆವು. ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮರ ಹಾಡುಗಾರಿಕೆ, ವಿದ್ವಾನ್ ಶ್ರೀಹರಿ ಅವರ ಮೃದಂಗ, ವಿದ್ವಾನ್ ನರಸಿಂಹ ಮೂರ್ತಿಯವರ ಕೊಳಲು, ವಿದ್ವಾನ್ ನಟರಾಜ ಮೂರ್ತಿಯವರ ಪಿಟೀಲು, ವಿದ್ವಾನ್ ಪ್ರಸನ್ನಕುಮಾರ್ ಅವರ ರಿದಂ ಪ್ಯಾಡ್ ಹಾಗೂ ಗುರು ಶುಭಾ ಅವರ ನಟ್ಟುವಾಂಗ! ಹೀಗೆ ಯುವ ಕಲಾವಿದೆ ರಾಧಿಕಾಳಿಗೆ ಸ್ಫೂರ್ತಿ, ಸಹಕಾರಗಳನ್ನು ನೀಡಿ ಅವಳ ರಂಗಪ್ರವೇಶ ಪ್ರಸ್ತುತಿಯನ್ನು ಸ್ಮರಣೀಯ ಅನುಭವವಾಗಿಸಲು ವಿದ್ವನ್ಮಣಿಗಳ ತಂಡವೇ ಸಿದ್ಧವಾಗಿಬಿಟ್ಟಿತ್ತು!

ಧನಂಜಯ ಅವರ ಮಾರ್ಗದರ್ಶನದಲ್ಲಿ ಎಲ್ಲಾ ಅಗತ್ಯ ಏರ್ಪಾಡುಗಳೂ ನೆರವೇರುತ್ತಿದ್ದವು. ಕಾರ್ಯಕ್ರಮದಲ್ಲಿ ಯಾವ ಯಾವ ಪ್ರಸ್ತುತಿಗಳಿರಬೇಕೆಂಬುದನ್ನು ಶುಭಾ ಅವರು ನಿರ್ಧರಿಸಿ ರಾಧಿಕಾಳಿಗೆ ತರಬೇತಿಯನ್ನೂ ನೀಡಲಾರಂಭಿಸಿದ್ದರು. ಆಗಲೇ ನಮಗೆ ಥಟ್ಟನೆ ಹೊಳೆದದ್ದು: ರಂಜನಿಯ ಒಂದು ಭಾವಗೀತೆಯನ್ನು ಭರತನಾಟ್ಯಕ್ಕೆ ಅಳವಡಿಸಿಕೊಂಡು ಏಕೆ ಪ್ರಸ್ತುತಿ ಪಡಿಸಬಾರದು? ಎಂದು! ಶಾಸ್ತ್ರೀಯ ನೃತ್ಯದ ಚೌಕಟ್ಟಿಗೆ ಸುಗಮ ಸಂಗೀತವನ್ನು ಹೊಂದಿಸಿಕೊಂಡು ಕಸಿ ಮಾಡಿ ಒಂದು ರೂಪವನ್ನು ಕೊಟ್ಟು ‘ಭಾವನೃತ್ಯ’ವೆಂದು ವೇದಿಕೆಯ ಮೇಲೆ ಪ್ರಸ್ತುತ ಪಡಿಸಿದರೆ ಒಂದು ಹೊಸ ಮಾರ್ಗದ ಆವಿಷ್ಕಾರವಾಗುವುದಿಲ್ಲವೇ ಎಂಬುದು ನಮ್ಮ ಆಲೋಚನೆಯಾಗಿತ್ತು! ಇಂಥ ಪ್ರಯತ್ನಗಳು ಹಿಂದೆ ನಡೆದಿವೆಯೋ ಇಲ್ಲವೋ ಎಂಬುದರ ಬಗ್ಗೆ ನಮಗೆ ಅಷ್ಟೇನೂ ತಿಳುವಳಿಕೆ ಇರಲಿಲ್ಲ. ಆದರೆ ಕನ್ನಡ ಭಾವಗೀತೆಗಳು ಹೀಗೆ ಹೊಸ ಶಾಸ್ತ್ರೀಯ ಸಾಂಪ್ರದಾಯಿಕ ಉಡುಗೆ ತೊಟ್ಟು ರಂಗದ ಮೇಲೆ ಬೆಳಗಿದರೆ ಮತ್ತೊಂದು ಸ್ತರದ ಪ್ರೇಕ್ಷಕರನ್ನೂ ತಲುಪಿದಂತಾಗುತ್ತದೆ. ಭಾವನೃತ್ಯವನ್ನೇ ಒಂದು ಖಚಿತ ಸ್ವತಂತ್ರ ಪ್ರಕಾರವಾಗಿಯೂ ಬೆಳೆಸುವ ಸಾಧ್ಯತೆ ವಿಪುಲವಾಗಿದೆ ಎಂಬುದು ನಮ್ಮ ಆಶಯವಾಗಿತ್ತು. ಗುರು ಶುಭಾ ಅವರಿಗೂ ನಮ್ಮ ಈ ಸಲಹೆ ಇಷ್ಟವಾಯಿತು.

ರಂಜನಿಯ ‘ಚಿಗುರು ಮಾವಿನ ಕೆಳಗೆ’ ಎಂಬೊಂದು ಸುಂದರ ಭಾವಗೀತೆಗೆ ಉಪಾಸನಾ ಮೋಹನ್ ಅವರು ಅತ್ಯಂತ ಸೊಗಸಾಗಿ ಸ್ವರ ಸಂಯೋಜನೆ ಮಾಡಿದ್ದರು. ಇನಿದನಿಯ ಗಾಯಕಿ ಅರ್ಚನಾ ಉಡುಪ ಅವರು ಅತ್ಯಂತ ಮಧುರವಾಗಿ ಹಾಡಿದ್ದರು. ರಂಜನಿಯ ಎರಡನೆಯ ಸಿಡಿ ‘ಅಗೋಚರ’ದಲ್ಲಿ ಈ ಹಾಡು ಸೇರ್ಪಡೆಯಾಗಿತ್ತು. ಹಾಡಿನ ಹಿನ್ನೆಲೆ ಸಂಗೀತದ ಟ್ರ್ಯಾಕ್ ಅನ್ನು ಬಳಸಿಕೊಂಡು ಗಾಯಕಿ ರಂಗದ ಮೇಲೆಯೇ ಗೀತೆಯನ್ನು ಹಾಡಿದರೆ ಸೊಗಸಾಗಿರುತ್ತದೆ ಅನ್ನಿಸಿತು. ರಂಗ ಪ್ರವೇಶದ ದಿನದಂದು ಅರ್ಚನಾ ಉಡುಪ ಅವರಿಗೆ ಬೇರೆ ಕಾರ್ಯಕ್ರಮ ನಿಗದಿಯಾಗಿ ಹೋಗಿದ್ದರಿಂದ ಮತ್ತೋರ್ವ ಶ್ರೇಷ್ಠ ಗಾಯಕಿ ನಾಗಚಂದ್ರಿಕಾ ಭಟ್ ಅವರನ್ನು ನಾವು ವಿನಂತಿಸಿಕೊಂಡಾಗ ಅವರು ಸಂತೋಷವಾಗಿ ಒಪ್ಪಿಕೊಂಡರು. ತೀರಾ ಸಂಪ್ರದಾಯಬದ್ಧರಾದ ವಿದ್ವನ್ಮಣಿಗಳು, ಭರತನಾಟ್ಯ ಕ್ಷೇತ್ರದ ಹಿರಿಯರು ಈ ರೀತಿಯ ಕಸಿ ಪ್ರಯೋಗಗಳಿಗೆ ಹೇಗೆ ಸ್ಪಂದಿಸುತ್ತಾರೋ ಎಂಬೊಂದು ಸಣ್ಣ ಅನುಮಾನವೂ ನಮ್ಮನ್ನು ಕಾಡುತ್ತಿತ್ತೆನ್ನಿ! ಇರಲಿ.

ಸಮಾರಂಭಕ್ಕೆ ಮುಖ್ಯ ಅತಿಥಿಗಳನ್ನಾಗಿ ಯಾರನ್ನು ಆಹ್ವಾನಿಸಬೇಕೆಂದು ಯೋಚಿಸತೊಡಗಿದಾಗ ಮೊದಲು ಹೊಳೆದ ಹೆಸರು ಡಾ॥ ಎಂ ಚಿದಾನಂದಮೂರ್ತಿ! ಕನ್ನಡ ಅಧ್ಯಯನ ಕೇಂದ್ರದಲ್ಲಿ ಎಂ ಎ ಪದವಿಗೆ ಓದುವಾಗ ನನಗೂ ರಂಜಿನಿಗೂ ಗುರುಗಳಾಗಿದ್ದವರು, ಚಿ.ಮೂ.ಮೇಷ್ಟ್ರು. ಅವರನ್ನು ಆಹ್ವಾನಿಸಿ ಗೌರವಿಸಿ ಅವರ ಹಾರೈಕೆಗಳನ್ನು ಪಡೆದುಕೊಳ್ಳಲು ಇದೊಂದು ಸುವರ್ಣಾವಕಾಶ ಅನ್ನಿಸಿತು. ಮೇಷ್ಟ್ರೂ ಸಹಾ ಅತ್ಯಂತ ಪ್ರೀತಿಯಿಂದ ಬರಲೊಪ್ಪಿಕೊಂಡರು. ಅಂತೆಯೇ ಸುಪ್ರಸಿದ್ಧ ಕ್ಲಾರಿಯೋನೆಟ್ ವಾದಕರಾದ ನರಸಿಂಹಲು ವಡವಟ್ಟಿ ಹಾಗೂ ಪ್ರಸಿದ್ಧ ನಾಟ್ಯಗುರು ವಸಂತಲಕ್ಷ್ಮಿಯವರು ಸಹಾ ಮುಖ್ಯ ಅತಿಥಿಗಳಾಗಿ ಆಗಮಿಸಿ ಯುವ ಕಲಾವಿದೆಗೆ ಆಶೀರ್ವದಿಸಲು ಸಂತಸದಿಂದ ಒಪ್ಪಿಕೊಂಡರು. ಯಾವುದೇ ಕಾರ್ಯಕ್ರಮವನ್ನುಪ್ರಾರ್ಥನೆಯಿಂದ ಆರಂಭಿಸುವುದು ಸಂಪ್ರದಾಯ. ಆ ನಿಟ್ಟಿನಲ್ಲಿ ಆಲೋಚನೆಗೆ ತೊಡಗಿದಾಗ ಥಟ್ಟನೆ ಮಗ ಅನಿರುದ್ಧನೇ ಏಕೆ ಪ್ರಾರ್ಥನಾ ಗೀತೆಯನ್ನು ಹಾಡಬಾರದು ಎಂದಳು ರಂಜನಿ! ಸಂಗೀತಕ್ಷೇತ್ರದಲ್ಲಿ ಮಗ ಅನಿರುದ್ಧನಿಗಿದ್ದ ಅಪಾರ ಆಸಕ್ತಿ ಅದಾಗಲೇ ನಮ್ಮ ಗಮನಕ್ಕೆ ಬಂದಿತ್ತು. ಶಾಸ್ತ್ರೀಯ ಸಂಗೀತವನ್ನೂ ಅವನು ಅಭ್ಯಾಸ ಮಾಡತೊಡಗಿದ್ದ. ಅಕ್ಕನ ರಂಗಪ್ರವೇಶಕ್ಕೆ ತಮ್ಮ ಪ್ರಾರ್ಥನಾಗೀತೆಯ ಮೂಲಕ ಚಾಲನೆ ನೀಡುವುದು; ಅಮ್ಮನ ಭಾವಗೀತೆಗೆ ಮಗಳು ನರ್ತಿಸುವುದು. ಇವೂ ಒಂದು ರೀತಿಯಲ್ಲಿ ವಿಶೇಷ ಸಂಗತಿಗಳೇ ಅಲ್ಲವೇ?

‘ನಿಂತಾನ ವಿಠಲ ನಿಂತಾನ’ ಎಂದು ಆರಂಭವಾಗುವ ದಾಸರ ಪದವೊಂದನ್ನು ಪ್ರಾರ್ಥನಾಗೀತೆಯಾಗಿ ಹಾಡಲು ಅನಿರುದ್ಧ ಸಿದ್ಧತೆ ಮಾಡಿಕೊಳ್ಳತೊಡಗಿದ. ರಾಧಿಕೆಯೇ ಆಹ್ವಾನ ಪತ್ರಿಕೆಯ ಕರಡನ್ನು ಸಿದ್ಧಪಡಿಸಿದ್ದಳು. ಅದನ್ನು ತಿದ್ದಿ ಪರಿಷ್ಕರಿಸಿ ಅತ್ಯಂತ ಸುಂದರವಾಗಿ ರೂಪಿಸಿದವರು ಆತ್ಮೀಯ ಮಿತ್ರ ಪ್ರಸಿದ್ಧ ಗಾಯಕ, ಸಂಗೀತ ನಿರ್ದೇಶಕ ಉಪಾಸನಾ ಮೋಹನ್. ಕಿರು ಹೊತ್ತಿಗೆಯಂತಿದ್ದ ಆಹ್ವಾನ ಪತ್ರಿಕೆ ಅದೆಷ್ಟು ಆಕರ್ಷಕವಾಗಿ ಮೂಡಿ ಬಂದಿತ್ತೆಂದರೆ, “ಇನ್ನೂ ನಮ್ಮ ಮನೆಯ ಕಪಾಟಿನಲ್ಲಿ ಜೋಪಾನವಾಗಿರಿಸಿಕೊಂಡಿದ್ದೇವೆ. ಅಷ್ಟು ಅದ್ಭುತವಾಗಿದೆ ನಿಮ್ಮ ಮಗಳ ರಂಗಪ್ರವೇಶದ ಆಹ್ವಾನ ಪತ್ರಿಕೆ” ಎಂದು ಕೆಲ ಆತ್ಮೀಯರು ಈಗಲೂ ಉದ್ಗರಿಸುತ್ತಾರೆ. ರಾಧಿಕಾಳ ಹಲವಾರು ಚಿತ್ತಾಕರ್ಷಕ ಭಂಗಿಗಳ ಛಾಯಾಚಿತ್ರಗಳನ್ನು ಅಪೂರ್ವವಾದ ರೀತಿಯಲ್ಲಿ ಸೆರೆ ಹಿಡಿದು ಕೊಟ್ಟವರು ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ, ಆತ್ಮೀಯ ಗೆಳೆಯ ಶಂಕರ್. (ಪ್ರಸಿದ್ಧ ಕವಿ ಬಿ.ಆರ್. ಲಕ್ಷ್ಮಣರಾವ್ ಅವರ ಕಿರಿಯ ಸೋದರ.)

ಇನ್ನು ನಮ್ಮ ಕಡೆಯಿಂದ ಆಗಬೇಕಾಗಿದ್ದ ಒಂದೇ ಒಂದು ಕೆಲಸವೆಂದರೆ ಕಾರ್ಯಕ್ರಮಕ್ಕೆ ಸೂಕ್ತ ಸಮರ್ಥ ನಿರೂಪಕರನ್ನು ಆರಿಸುವುದು. ಈ ನಿಟ್ಟಿನಲ್ಲಿ ಆಲೋಚಿಸತೊಡಗಿದಾಗ ಮುನ್ನೆಲೆಗೆ ಬಂದದ್ದು ನಳಿನಿ ಅಕ್ಕನ ಹೆಸರು! ನಳಿನಿ ಅಕ್ಕ ಶ್ರೇಷ್ಠ ನಟಿ ಅಷ್ಟೇ ಅಲ್ಲ, ಸ್ವತಃ ಭರತನಾಟ್ಯ ಪ್ರವೀಣೆ! ಅಂದಮೇಲೆ ರಂಗಪ್ರವೇಶ ಕಾರ್ಯಕ್ರಮದ ನಿರೂಪಣೆಗೆ ರಾಧಿಕಾಳ ಈ ಸೋದರತ್ತೆ ಅತ್ಯಂತ ಸೂಕ್ತ ಆಯ್ಕೆ ಅನ್ನಿಸಿತು. ಈ ಜವಾಬ್ದಾರಿ ಹೊರಲು ಪ್ರಾರಂಭದಲ್ಲಿ ಅಕ್ಕ ಕೊಂಚ ಹಿಂಜರಿದರೂ ನಮ್ಮ ಪ್ರೀತಿಯ ಒತ್ತಾಯಕ್ಕೆ ಮಣಿಯಲೇಬೇಕಾಯಿತು ಅನ್ನಿ. ಇನ್ನುಳಿದದ್ದು ಬಂಧು ಮಿತ್ರರನ್ನು, ಸಹೃದಯರನ್ನು ಆಹ್ವಾನಿಸುವುದು. ಆ ಸಂಬಂಧವಾಗಿಯೂ ಯಾವ ಕೊರೆಯನ್ನೂ ಉಳಿಸದೆ ಅನೇಕ ಆಪ್ತೇಷ್ಟರ ಮನೆಗೇ ಹೋಗಿ ಆಹ್ವಾನ ಪತ್ರಿಕೆಯನ್ನು ನೀಡಿ ಬಂದೆವು. ಪತ್ರಿಕಾ ಮಾಧ್ಯಮದ ಮೂಲಕವೂ ಒಳ್ಳೆಯ ಪ್ರಚಾರ ಸಿಕ್ಕಿತು. ರಾಧಿಕಾಳೂ ಸಹಾ ತುಂಬು ಉತ್ಸಾಹ ಹುರುಪಿನಿಂದ ರಂಗಪ್ರವೇಶಕ್ಕೆ ತಯಾರಿ ನಡೆಸಿದ್ದಳು. ಈ ತಯಾರಿಯ ನಡುವೆಯೇ ಒಂದು ದಿನ ಬಿಡುವು ಮಾಡಿಕೊಂಡು ಚೆನ್ನೈಗೆ ಹೋಗಿ ರಂಗಪ್ರವೇಶಕ್ಕೆ ಅಗತ್ಯವಾಗಿದ್ದ ಆಭರಣಗಳು, ಸೀರೆಗಳನ್ನು ಖರೀದಿ ಮಾಡಿಕೊಂಡು ಬಂದೆವು. ಭರತನಾಟ್ಯ ರಂಗಪ್ರವೇಶಕ್ಕೆ ಅಣಿಮಾಡಿಕೊಳ್ಳುವುದು ಯಾವ ಮದುವೆಯ ತಯಾರಿಗಿಂತೇನೂ ಕಡಿಮೆಯಲ್ಲ!

ನಾನಂತೂ ಹದಿನೈದು ದಿನಗಳ ಕಾಲ ಯಾರಿಗೂ ಚಿತ್ರೀಕರಣಕ್ಕೆಂದು ಸಮಯ ಕೊಡಲೇ ಇಲ್ಲ. ನನಗೆ ನೆನಪಿದೆ: ಆ ಸಮಯದಲ್ಲಿಯೇ ಪ್ರಸಿದ್ಧ ನಿರ್ದೇಶಕ ಪಿ.ರಾಮದಾಸ ನಾಯ್ಡು ಅವರು ‘ಬೇಲಿ ಮತ್ತು ಹೊಲ’ ಚಿತ್ರದ ಚಿತ್ರೀಕರಣ ಆರಂಭಿಸಿದ್ದು ಮುಖ್ಯ ಪಾತ್ರದಲ್ಲಿ ಅಭಿನಯಿಸಲು ಆಹ್ವಾನಿಸಿದ್ದರು. ಕುಂ.ವೀ. ಅವರ ‘ಬೇಲಿ ಮತ್ತು ಹೊಲ’ ನೀಳ್ಗತೆಯನ್ನು ಮೊಟ್ಟಮೊದಲು ನಾನೇ ರಂಗಕ್ಕೆ ಅಳವಡಿಸಿದ್ದ ಸಂಗತಿಯನ್ನು ನಿಮ್ಮೊಂದಿಗೆ ಈಗಾಗಲೇ ಹಂಚಿಕೊಂಡಿದ್ದೇನೆ. ಈಗ ಅದೇ ಕಥೆಯ ಸಿನೆಮಾ ಅವತರಣಿಕೆಯಲ್ಲಿ ಅಭಿನಯಿಸಲು ಆಹ್ವಾನ ಬಂದಿದೆ! ಆದರೆ ಮಗಳ ರಂಗಪ್ರವೇಶದ ಸಂಭ್ರಮದ ಸಿದ್ಧತೆಗಳ ನಡುವೆ ಶೂಟಿಂಗ್ ಗೆ ಸಮಯ ಹೊಂದಿಸಿಕೊಳ್ಳುವುದು ಕಷ್ಟವೆನ್ನಿಸಿ ನಾಯ್ಡು ಅವರಿಗೆ ಇದ್ದ ವಿಷಯವನ್ನು ತಿಳಿಸಿ ಬಂದಿದ್ದ ಅವಕಾಶವನ್ನು ಬಿಟ್ಟುಬಿಟ್ಟೆ. ಕೆಲವೊಮ್ಮೆ ಆದ್ಯತೆಗಳನ್ನು ಗಮನಿಸಿ ತೀರ್ಮಾನ ಮಾಡಬೇಕಾಗುತ್ತದೆ ಅಲ್ಲವೇ! ರಂಜನಿಯೂ ಕಾಲೇಜಿಗೆ 10 ದಿನಗಳ ಕಾಲ ರಜೆ ಹಾಕಿಬಿಟ್ಟಿದ್ದಳು. ಮನೆಯಲ್ಲಿ ಆ ಒಂದಷ್ಟು ದಿನಗಳು ಹಬ್ಬದ ವಾತಾವರಣ! ರಂಜನಿಗಂತೂ ಕನಸುಗಳು ಸಾಕಾರವಾಗುತ್ತಿದ್ದ ಸಂಭ್ರಮದಲ್ಲಿ ಹೆಜ್ಜೆಗಳು ನೆಲದ ಮೇಲೇ ನಿಲ್ಲುತ್ತಿರಲಿಲ್ಲ!

2008, ಅಕ್ಟೋಬರ್ 30 ಬಲು ಕಾತರದಿಂದ ನಿರೀಕ್ಷಿಸುತ್ತಿದ್ದ ದಿನ ಬಂದೇ ಬಿಟ್ಟಿತು! ಎಲ್ಲ ಪೂರ್ವಸಿದ್ಧತೆಗಳನ್ನೂ ಅಚ್ಚುಕಟ್ಟಾಗಿ ಮಾಡಿಕೊಂಡಿದ್ದರಿಂದ ಹೆಚ್ಚಿನ ಆತಂಕಕ್ಕೆ ಕಾರಣವಿರಲಿಲ್ಲ. ಅಂದು ಸಂಜೆ ರವೀಂದ್ರ ಕಲಾಕ್ಷೇತ್ರ ಬಂಧುಮಿತ್ರರಿಂದ, ಸಹೃದಯರಿಂದ ಕಿಕ್ಕಿರಿದು ತುಂಬಿಹೋಗಿತ್ತು! ನೃತ್ಯ, ಸಾಹಿತ್ಯ, ಸಂಗೀತ, ನಾಟಕ, ಕಿರುತೆರೆ, ಸಿನೆಮಾ ಎಲ್ಲ ಕ್ಷೇತ್ರಗಳ ಅನೇಕ ಶ್ರೇಷ್ಠರು ರಾಧಿಕಾಳ ರಂಗಪ್ರವೇಶಕ್ಕೆ ಸಾಕ್ಷಿಯಾಗಲು, ಅವಳಿಗೆ ಶುಭ ಹಾರೈಸಲು ಪ್ರೀತಿಯಿಂದ ಆಗಮಿಸಿದ್ದರು. ಪಟ್ಟಿ ತೀರಾ ದೊಡ್ಡದಾಗಿಬಿಡುವ ಅಪಾಯ ಇರುವುದರಿಂದ ಎಲ್ಲರ ಹೆಸರುಗಳನ್ನೂ ದಾಖಲಿಸುವ ಸಾಹಸಕ್ಕೆ ಕೈಹಾಕುವುದಿಲ್ಲ! ಯಾವ ಉತ್ಪ್ರೇಕ್ಷೆಯೂ ಇಲ್ಲದೆ ಹೇಳುತ್ತೇನೆ. ಅಂದು ಕಲಾಕ್ಷೇತ್ರದಲ್ಲಿ ಮೂಡಿದ್ದು ಅಕ್ಷರಶಃ ಹಬ್ಬದ ವಾತಾವರಣ. ನಿಜಕ್ಕೂ ಹೃದಯ ತುಂಬಿ ಬಂದುಬಿಟ್ಟಿತು. ನಮ್ಮ ಕರೆಗೆ ಓಗೊಟ್ಟು ಬಂದವರು ಅದೆಷ್ಟು ಮಂದಿ! ಈ ಪ್ರೀತಿ ವಿಶ್ವಾಸ ಅಭಿಮಾನಗಳೇ ಅಲ್ಲವೇ ನಾವು ಬದುಕಿನಲ್ಲಿ ಗಳಿಸಿಕೊಳ್ಳುವ ದೊಡ್ಡ ಸಂಪತ್ತು!? ಅಂದು ಬಾಧಿಸಿದ ಒಂದೇ ನೋವಿನ ಸಂಗತಿಯೆಂದರೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅಣ್ಣ (ನನ್ನ ತಂದೆಯವರು) ತಮ್ಮ ಮೊಮ್ಮಗಳ ರಂಗಪ್ರವೇಶ ಕಾರ್ಯಕ್ರಮಕ್ಕೆ ಬರಲಾಗದೇ ಹೋದದ್ದು.

ಬಂದ ಅತಿಥಿಗಳೆಲ್ಲರಿಗೂ ಪ್ರವೇಶ ದ್ವಾರದಲ್ಲಿಯೇ ಸಿಹಿಯನ್ನು ನೀಡಿ ಸ್ವಾಗತಿಸುವ ವ್ಯವಸ್ಥೆಯಾಗಿತ್ತು. ಮುಖ್ಯ ಅತಿಥಿಗಳೆಲ್ಲರೂ ಸಮಯಕ್ಕೆ ಸರಿಯಾಗಿ ಆಗಮಿಸಿದರು. ಸಹೃದಯರ ಪ್ರಚಂಡ ಕರತಾಡನ ಹರ್ಷೋದ್ಗಾರಗಳ ನಡುವೆ ನಾನು ಹಾಗೂ ರಂಜನಿ ಎಲ್ಲರನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸಿ ಮುಂದಿನ ಕಾರ್ಯಕ್ರಮವನ್ನು ನಿರೂಪಿಸಿ ನಿರ್ವಹಿಸಲು ನಳಿನಿ ಅಕ್ಕನನ್ನು ಆಹ್ವಾನಿಸಿದೆವು. ಅನಿರುದ್ಧ ಪ್ರಾರ್ಥನಾಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ಶುಭಾರಂಭವನ್ನು ನೀಡಿದ. ಮಗನ ಹಾಡು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಒಂದು ರೀತಿಯಲ್ಲಿ ಅದು ಅವನಿಗೂ ಒಂದು ಕಿರು ರಂಗಪ್ರವೇಶವೇ ಅನ್ನಬಹುದು! ಗಣ್ಯರೆಲ್ಲರೂ ದೀಪ ಬೆಳಗಿ ಸಾಂಪ್ರದಾಯಿಕ ಉದ್ಘಾಟನೆಯನ್ನು ನೆರವೇರಿಸಿದ ಮೇಲೆ ನಳಿನಿ ಅಕ್ಕ ನಾಟ್ಯವನ್ನು ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿ ಪ್ರಥಮ ಪ್ರಸ್ತುತಿಯ ಪರಿಚಯ ಮಾಡಿಕೊಟ್ಟು ಕಲಾವಿದೆಯನ್ನು ರಂಗಕ್ಕೆ ಆಹ್ವಾನಿಸಿದಳು. ಗುರು ಶುಭಾ ಧನಂಜಯ, ಗಾಯಕ ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮ ಹಾಗೂ ಪಕ್ಕವಾದ್ಯದಲ್ಲಿ ಸಹಕರಿಸುವವರಿದ್ದ ಎಲ್ಲಾ ವಿದ್ವನ್ಮಣಿಗಳೂ ತಮ್ಮ ಸ್ಥಾನಗಳನ್ನಲಂಕರಿಸಿ ಸನ್ನದ್ಧರಾಗಿ ಕುಳಿತಿದ್ದರು. ಸಹೃದಯರ ಹರ್ಷೋದ್ಗಾರಗಳೊಂದಿಗೆ ರಾಧಿಕಾ ರಂಗಪ್ರವೇಶದ ಪ್ರಥಮ ಪ್ರಸ್ತುತಿಯನ್ನು ಆರಂಭಿಸಿದಳು. ನಂತರದ ಎರಡು ಎರಡೂವರೆ ತಾಸು ಕಲಾಕ್ಷೇತ್ರದ ವೇದಿಕೆಯ ಮೇಲೆ ಸೃಷ್ಟಿಯಾದದ್ದೊಂದು ಕಿನ್ನರಲೋಕ!

‍ಲೇಖಕರು Admin MM

28 June, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading