ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು.
ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
ಅಂಕಣ 163
ಕಾಲಮಾನದಲ್ಲಿ ಕೊಂಚ ಹಿಂದೆ ಸರಿದು ಹೇಳದೇ ಬಿಟ್ಟಿದ್ದ ಒಂದೆರಡು ಸಂಗತಿಗಳನ್ನು ನೆನಪಿಸಿಕೊಂಡು ಮುಂದುವರಿಯುತ್ತೇನೆ.
ಹಿಂದಿನ ಅಂಕಣಗಳಲ್ಲಿ ಎಸ್ ಎಲ್ ಎನ್ ಸ್ವಾಮಿಯವರ ಬಗ್ಗೆ , ಅವರ ಸಾಧನೆಗಳ ಬಗ್ಗೆ, ಅವರೊಟ್ಟಿಗೆ ನಾನು ಕೆಲಸ ಮಾಡಿದ ಧಾರಾವಾಹಿ—ಸಿನೆಮಾಗಳ ಬಗ್ಗೆ ಸಾಕಷ್ಟು ವಿಸ್ತೃತವಾಗಿಯೇ ಬರೆದಿದ್ದೆ. ಸ್ವಾಮಿಯವರ ನೆರವಿಲ್ಲದಿದ್ದರೆ ಬಹುಶಃ ಡಿಟೆಕ್ಟಿವ್ ಧನುಷ್ ನಂತಹ ಪತ್ತೇದಾರಿ ಧಾರಾವಾಹಿಯನ್ನು ನಾನು ಕಿರುತೆರೆಗೆ ತರಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ಸ್ವಾಮಿಯವರು ಒಂದು ದಿನ ಅನಿರೀಕ್ಷಿತವಾಗಿ ಕರೆ ಮಾಡಿ, “ನಿಮ್ಮಿಂದ ಒಂದು ವಿಷಯಕ್ಕೆ ಒಪ್ಪಿಗೆ ಕೇಳಲು ಕರೆ ಮಾಡಿದ್ದೇನೆ” ಎಂದರು. “ಸಂಕೋಚವಿಲ್ಲದೆ ಕೇಳಿ ಸ್ವಾಮಿ..ನಿಮಗೆ ಇಲ್ಲ ಅನ್ನುವಂಥದ್ದಾದರೂ ಏನಿದೆ”? ಎಂದೆ ನಾನು ನಗುತ್ತಾ. “ನಮ್ಮದೊಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಿದೆ—ರಂಗಶ್ರೀ ಕಲಾಸಂಸ್ಥೆ. ಪ್ರತಿವರ್ಷ ವಿವಿಧ ಸಾಂಸ್ಕೃತಿಕ ಕ್ಷೇತ್ರಗಳ ಸಾಧಕರಿಗೆ ನಮ್ಮ ಸಂಸ್ಥೆಯ ವತಿಯಿಂದ ಪ್ರಶಸ್ತಿಯನ್ನು ನೀಡಿ ಗೌರವಿಸುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದೇವೆ. 2014 ರ ಸಾಲಿನಲ್ಲಿ ರಂಗಸಾಧಕರಿಗೆ ನೀಡುವ ಪ್ರಶಸ್ತಿಗೆ ತಾವು ಅರ್ಹರಿದ್ದೀರೆಂದು ನಮ್ಮ ಸಮಿತಿಯಲ್ಲಿ ಸರ್ವಾನುಮತದಿಂದ ತೀರ್ಮಾನವಾಗಿದೆ. ಪ್ರಶಸ್ತಿಯನ್ನು ಸ್ವೀಕರಿಸಲು ತಾವು ಒಪ್ಪಿಗೆ ನೀಡಿದರೆ ಮುಂದಿನ ಸಿದ್ಧತೆಗಳನ್ನು ಮಾಡಿಕೊಳ್ಳುತ್ತೇವೆ” ಎಂದರು ಸ್ವಾಮಿ ಅವರು! ಅವರ ಮಾತು ಕೇಳಿ ನಾನು ಚಕಿತನಾಗಿ ಹೋದೆ! ಪ್ರಶಸ್ತಿಯನ್ನು ಸ್ವೀಕರಿಸಲು ಒಪ್ಪಿಗೆ ನೀಡಬೇಕೇ?!! ಹಾಗೆ ನೋಡಿದರೆ ಪ್ರಶಸ್ತಿಗಳಿಗಾಗಿ ಹಪಹಪಿಸುವುದನ್ನು, ವಶೀಲಿ ಹಚ್ಚುವುದನ್ನು, ಪರಿಪರಿಯ ಕಸರತ್ತು ನಡೆಸುವುದನ್ನು, ಕೊನೆಗೆ ಹಣ ನೀಡಿ ಪ್ರಶಸ್ತಿ ಕೊಳ್ಳುವುದನ್ನು ಕೇಳಿ ತಿಳಿದುಕೊಂಡಿದ್ದ ನನಗೆ ಸ್ವಾಮಿಯವರ ಮಾತಿನಿಂದ ಆಶ್ಚರ್ಯವಾಗದೇ ಇರುತ್ತದೆಯೇ? “ಸ್ವಾಮಿ ಸರ್, ನೀವು ಅಷ್ಟು ಪ್ರೀತಿ-ಅಭಿಮಾನಗಳಿಂದ ನೀಡುವ ಪ್ರಶಸ್ತಿಯನ್ನು ಒಲ್ಲೆ ಎನ್ನುವ ಧಾರ್ಷ್ಟ್ಯ ಖಂಡಿತ ನನಗಿಲ್ಲ..ನೀವು ಈ ಪ್ರಶಸ್ತಿಗೆ ನನ್ನನ್ನು ಅರ್ಹನೆಂದು ಭಾವಿಸಿರುವುದೇ ನನಗೆ ಮೊದಲು ದೊಡ್ಡ ಪ್ರಶಸ್ತಿ! ತುಂಬಾ ಸಂತೋಷದಿಂದ ಸ್ವೀಕರಿಸುತ್ತೇನೆ” ಎಂದು ಅವರಿಗೆ ಧನ್ಯವಾದಗಳನ್ನು ಅರ್ಪಿಸಿದೆ. ಮೂರು ದಶಕಗಳ ಸಾರ್ಥಕ ಕಲಾಸೇವೆಯ ‘ರಂಗಶ್ರೀ’ ಸಂಸ್ಥೆ ಹಾಗೂ ಶಿಕ್ಷಣ-ಆರೋಗ್ಯ-ಸಮಾಜ ಸೇವೆಯ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ದಯಾನಂದ್ ಸಾಗರ್ ಪ್ರತಿಷ್ಠಾನಗಳು ಸಂಯುಕ್ತವಾಗಿ ಆಯೋಜಿಸಿದ್ದ ಪ್ರತಿಷ್ಠಿತ ‘ಸಾಗರ್ ಪ್ರಶಸ್ತಿ’ ಗೆ ರಂಗಭೂಮಿ ವಿಭಾಗದಲ್ಲಿ ಆಯ್ಕೆಯಾದದ್ದು ನನಗೆ ಬಹಳ ಸಂತೋಷವನ್ನು ತಂದಿತ್ತು.

ರವೀಂದ್ರಕಲಾಕ್ಷೇತ್ರದಲ್ಲಿ ಬಹಳ ಅಚ್ಚುಕಟ್ಟಾಗಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಸ್ವಾಮಿಯವರದೇ ಸಾರಥ್ಯ! ಸ್ವಾಮಿ ಅವರನ್ನು ಸಮರ್ಥ ನಿರ್ದೇಶಕನಾಗಿ ಕಂಡಿದ್ದ ನನಗೆ ಅವರೆಂಥ ವಾಗ್ಮಿ ಹಾಗೂ ನುರಿತ ನಿರೂಪಕರು ಎನ್ನುವುದು ಆ ಕಾರ್ಯಕ್ರಮದಲ್ಲಿ ಅರಿವಿಗೆ ಬಂದಿತು! ಪ್ರಶಸ್ತಿ ಪುರಸ್ಕೃತರಿಗೆ ಹಾರ—ಶಾಲು—ಸ್ಮರಣಿಕೆಗಳ ಜೊತೆಗೆ ಚಂದದ ಬೆಳ್ಳಿಯ ಕಡಗವನ್ನು ಕೈಗೆ ತೊಡಿಸಿ ವಿಶೇಷವಾಗಿ ಗೌರವಿಸಿದರು. ಸ್ವಾಮಿಯವರು ನಿರೂಪಣೆಯ ಸಂದರ್ಭದಲ್ಲಿ ಹೇಳಿದ ಕೆಲ ಮಾತುಗಳು ಇನ್ನೂ ನನ್ನ ಮನದಲ್ಲಿ ಹಸಿರಾಗಿವೆ: ” ನಾವು ನಮ್ಮ ಸಂಸ್ಥೆಯ ವತಿಯಿಂದ ಪ್ರಸಿದ್ಧ ನಟ ವಜ್ರಮುನಿ ಅವರಿಗೆ ಕೆಲ ವರ್ಷಗಳ ಹಿಂದೆ ಪ್ರಶಸ್ತಿಯನ್ನು ನೀಡಿ ಗೌರವಿಸಿ ನಮ್ಮ ಹಿರಿಮೆಯನ್ನೂ ಹೆಚ್ಚಿಸಿಕೊಂಡಿದ್ದೆವು. ವಜ್ರಮುನಿಯವರಿಗೆ ನಾವು ತೊಡಿಸಿದ್ದ ಬೆಳ್ಳಿಯ ಕಡಗದ ಬಗ್ಗೆ ವಿಶೇಷ ಮಮಕಾರವಿತ್ತು. ನಂತರ ಒಂದೆರಡು ಸಂದರ್ಭಗಳಲ್ಲಿ ಅವರೊಡನೆ ದೂರವಾಣಿಯಲ್ಲಿ ಮಾತಾಡಿದಾಗಲೂ ಕಡಗದ ವಿಷಯ ಪ್ರಸ್ತಾಪಿಸಿ ‘ನಾನು ಯಾವಾಗಲೂ ಇದನ್ನು ಕೈಲಿ ಧರಿಸಿಯೇ ಇರುತ್ತೇನೆ..ಅದು ನನ್ನ ಕೈಲಿದ್ದರೆ ನನಗೆ ಏನೋ ಸಮಾಧಾನ, ನೆಮ್ಮದಿ’ ಎಂದಿದ್ದರು! ನನ್ನ ಸಮಾಧಾನಕ್ಕಾಗಿ ಆ ಮಾತು ಹೇಳಿದ್ದಿರಬಹುದಾದರೂ ಅದು ಸಾಧಾರಣ ಸಂಗತಿ ಏನಾಗಿರಲಿಲ್ಲ! ಆದರೆ ಅವರ ಮಾತಿನಲ್ಲಿ ಎಳ್ಳುಕಾಳಿನಷ್ಟೂ ಉತ್ಪ್ರೇಕ್ಷೆ ಇರಲಿಲ್ಲವೆಂಬುದು ನನ್ನ ಅರಿವಿಗೆ ಬಂದದ್ದು ಅವರು ತೀರಿಕೊಂಡ ಸಂದರ್ಭದಲ್ಲಿ. ವಜ್ರಮುನಿಯವರು ನಮ್ಮನ್ನು ಅಗಲಿಹೋದ ದಿನ ಶ್ರದ್ಧಾಂಜಲಿಯನ್ನು ಅರ್ಪಿಸಿ ಬರಲು ಅವರ ಮನೆಗೆ ಹೋಗಿದ್ದೆ. ಅವರು ಅಸು ನೀಗಿ ಹೆಚ್ಚು ಸಮಯವೇನೂ ಆಗಿರಲಿಲ್ಲ..ಹೋಗಿ ಅವರಿಗೆ ಅಂತಿಮ ನಮನಗಳನ್ನು ಸಲ್ಲಿಸಿ ಇನ್ನೇನು ಹೊರಳಬೇಕು, ಅಷ್ಟರಲ್ಲಿ ಅವರ ಬಲಗೈಯಲ್ಲಿ ವಿರಾಜಮಾನವಾಗಿದ್ದ ಬೆಳ್ಳಿಯ ಕಡಗ ಕಾಣಿಸಿತು! ನಾವು ಅಪಾರ ಪ್ರೀತಿ ಗೌರವಗಳಿಂದ ನೀಡಿದ್ದ ಕಡಗವನ್ನು ಅಷ್ಟೇ ಪ್ರೀತಿಯಿಂದ ಅವರಿರುವ ತನಕವೂ ಅವರು ಧರಿಸಿಯೇ ಇದ್ದರು” ಎಂದು ಭಾವಪೂರ್ಣರಾಗಿ ಸ್ವಾಮಿ ಅವರು ನುಡಿದಾಗ ಸಭಾಂಗಣದಲ್ಲಿ ಜೋರು ಕರತಾಡನ! ಜೊತೆಗೇ ಅಗಲಿದ ಮಹಾನ್ ಕಲಾವಿದನನ್ನು ನೆನಪಿಸಿಕೊಂಡ ಸಾರ್ಥಕ ಗಳಿಗೆ ಅದು!
ವಜ್ರಮುನಿಯವರಂತೆ ನನಗೆ ಸದಾಕಾಲವೂ ಈ ಪ್ರೀತಿಯ ಕೊಡುಗೆಯನ್ನು ಧರಿಸಿರುವುದು ಸಾಧ್ಯವಿಲ್ಲವಾದರೂ ವಿಶೇಷ ಸಂದರ್ಭಗಳಲ್ಲಿ ತಪ್ಪದೇ ತೊಡುತ್ತೇನೆ; ತೊಡಿಸಿದ ಗೆಳೆಯ ಸ್ವಾಮಿ ಅವರನ್ನು ಒಮ್ಮೆ ನೆನಪಿಸಿಕೊಳ್ಳುತ್ತೇನೆ; ವಜ್ರಮುನಿಯವರಿಗೆ ನಮನಗಳನ್ನು ಸಲ್ಲಿಸುತ್ತೇನೆ!
‘ಆದ್ಯ’ ಯಶಸ್ವೀ ಪ್ರಸ್ತುತಿಯ ನಂತರ ರಾಧಿಕಾ ಗೆಲುವಾಗಿದ್ದರೂ ಲಂಡನ್ ನೆನಪುಗಳು ಅವಳನ್ನು ಕಾಡುತ್ತಲೇ ಇದ್ದವು. ಲಂಡನ್ ಗೆ ಹೋಗುವ ಅವಕಾಶಕ್ಕಾಗಿ ಹಾತೊರೆಯುತ್ತಲೇ ಇದ್ದಳು ರಾಧಿಕಾ. ಅಂಥದೊಂದು ಪ್ರಸಂಗ ತಾನಾಗಿಯೇ ಅರಸಿಕೊಂಡು ಬಂದಿತು: ಛೆಲ್ಸಿ ವಿಶ್ವವಿದ್ಯಾಲಯದ ಘಟಿಕೋತ್ಸವ! ಘಟಿಕೋತ್ಸವಕ್ಕೆ ನಾವೆಲ್ಲರೂ ಹೋಗಬೇಕೆಂಬುದು ಅವಳ ಇಚ್ಛೆಯಾಗಿದ್ದರೂ, ಸಮಯದ ಹೊಂದಾಣಿಕೆಯ ಜೊತೆಗೆ ಅಷ್ಟೊಂದು ಹಣ ಹೊಂದಿಸುವುದೂ ಕಷ್ಟವೆನಿಸಿ ಅವಳೊಬ್ಬಳೇ ಹೋಗಿ ಬರುವುದೆಂದು ತೀರ್ಮಾನವಾಯಿತು. ಅವಳಿಗೋ ಈ ನೆಪದಲ್ಲಿ ಅಲ್ಲಿಗೆ ಹೋದಾಗ ಏನಾದರೂ ಕೆಲಸಕ್ಕೆ ಅಲ್ಲಿ ಪ್ರಯತ್ನಿಸಬಹುದೆನ್ನುವ ದೂರದ ಆಸೆ! ಅವಳು ಘಟಿಕೋತ್ಸವಕ್ಕೆ ಹೋಗಿ ಬರಲು ಬೇಕಾದ ಎಲ್ಲ ಪೂರ್ವತಯಾರಿಗಳನ್ನೂ ಮಾಡಿದ್ದಾಯಿತು.
ಘಟಿಕೋತ್ಸವ ನಡೆದದ್ದು ಲಂಡನ್ ನ ಸೌತ್ ಬ್ಯಾಂಕ್ ನ ರಾಯಲ್ ಫೆಸ್ಟಿವಲ್ ಹಾಲ್ ನಲ್ಲಿ. ವಿಶ್ವವಿದ್ಯಾಲಯದವರು ಏರ್ಪಡಿಸಿದ್ದ ವರ್ಣರಂಜಿತ ಸಮಾರಂಭದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಯಿತು. ನೇರ ಸಮಾರಂಭದಲ್ಲಿ ಭಾಗಿಯಾಗಲು ಸಾಧ್ಯವಾಗದ ಕೊರಗಿದ್ದ ನಾವು ಕೇವಲ ವೀಕ್ಷಕ ವಿವರಣೆ—ವರದಿಗಳಿಂದಲೇ ತೃಪ್ತಿ ಪಟ್ಟುಕೊಳ್ಳಬೇಕಾಯಿತು!
ಆ ಕಾರ್ಯಕ್ರಮವನ್ನು ಮುಗಿಸಿಕೊಂಡು ಗೆಳತಿಯೊಂದಿಗೆ ಒಂದು group exhibition ನಲ್ಲಿ ತನ್ನ ಒಂದೆರಡು ಪೇಂಟಿಂಗ್ ಗಳನ್ನು ಪ್ರದರ್ಶನಕ್ಕಿಟ್ಟು ಮೆಚ್ಚುಗೆ ಗಳಿಸಿದ್ದೇ ಅಲ್ಲದೆ ಹಮ್ಮಿಂಗ್ ಡನ್ , ವೇಲ್ಸ್ ಹಾಗೂ ಬಾತ್ ನಲ್ಲಿ ಭರತನಾಟ್ಯ ಪ್ರದರ್ಶನಗಳನ್ನು ನೀಡಿ ಕಲಾರಸಿಕರ ಮನಸೂರೆಗೊಂಡಳು ರಾಧಿಕಾ. ಸುಮಾರು ಒಂದು ತಿಂಗಳ ಕಾಲ ಲಂಡನ್ ನಲ್ಲಿ ಕಳೆದು ಮನೆಗೆ ಮರಳಿ ಬಂದ ರಾಧಿಕಾಳಿಗೆ ಮತ್ತೆ ಮರುವರ್ಷ ಅಂದರೆ 2016 ರಲ್ಲಿ ಮತ್ತೆ ಲಂಡನ್ ಗೆ ಹೋಗಿ ಬರಲು ಅವಕಾಶಗಳು ಒದಗಿಬಂದವು. ತನ್ನ ಕನಸಿನ ಊರಿಗೆ ಮತ್ತೊಮ್ಮೆ ಪ್ರಯಾಣ…ಮತ್ತೆ ಕೆಲ ಯಶಸ್ವೀ ಪ್ರದರ್ಶನಗಳು! ಲಂಡನ್ ಗೆ ಹೋಗಿಬರುವುದೊಂದು ಆಟದಂತಾಗಿಬಿಟ್ಟಿತ್ತು ಅವಳಿಗೆ! 2016 ರ ಕೊನೆಗೆ ಭೂತಾನ್ ನ ನೆಹರೂ ವಾಂಗ್ ಚಕ್ ಕಲ್ಚರಲ್ ಸೆಂಟರ್ ನವರು ಭರತನಾಟ್ಯ ಪ್ರದರ್ಶನ ನೀಡಲು ಆಹ್ವಾನಿಸಿದರು.
ಹೀಗೆ ಬಿಡುವಿಲ್ಲದಂತೆ ಕಾರ್ಯಕ್ರಮಗಳನ್ನು ಮಾಡಿಕೊಂಡೇ ಇದ್ದರೂ ಆಂತರ್ಯದಲ್ಲಿ ಅವಳಿಗೊಂದು ಕೊರಗು ಕಾಡುತ್ತಲೇ ಇತ್ತು..ಲಂಡನ್ ಕೈಬೀಸಿ ಕರೆಯುತ್ತಲೇ ಇತ್ತು!
ಈಗಿನ ಅವಳ ಲಂಡನ್ ಚಡಪಡಿಕೆಗೆ ಸ್ಪಷ್ಟ ಕಾರಣಗಳಿದ್ದವು: ಯು ಕೆ ಸರ್ಕಾರ ಪ್ರತಿವರ್ಷವೂ ಬೇರೆ ಬೇರೆ ದೇಶಗಳ ವಿವಿಧ ಕ್ಷೇತ್ರಗಳ ಪ್ರತಿಭಾನ್ವಿತರಿಗೆ ವಿಶೇಷ ವೀಸಾ ವನ್ನು ನೀಡಿ ಇಂಗ್ಲೆಂಡ್ ನಲ್ಲಿ ನೆಲೆಸಲು , ತಂತಮ್ಮ ಕ್ಷೇತ್ರದ ಕೆಲಸ ಕಾರ್ಯಗಳನ್ನು ಮಾಡಲು ಆಹ್ವಾನ ನೀಡುತ್ತಿತ್ತು. ಅಂಥದೊಂದು ಅವಕಾಶಕ್ಕಾಗಿ ರಾಧಿಕಾ ಅರ್ಜಿ ಹಾಕಿಕೊಂಡಿದ್ದಳು! ಅದೇ–EXCEPTIONAL ARTIST VISA ! ಭರತನಾಟ್ಯ ವಿದುಷಿ, ಬ್ಯಾಲೆ ನೃತ್ಯಪ್ರಕಾರದಲ್ಲಿ ವಿಶೇಷ ತರಬೇತಿ, ಲಂಡನ್ನಿನ ಛೆಲ್ಸಿ ಯೂನಿವರ್ಸಿಟಿಯಿಂದಲೇ ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ, ಇಂಗ್ಲೀಷ್ ಭಾಷೆಯಲ್ಲಿ ಹಲವಾರು ಕಥೆ ಕವನಗಳ ರಚನೆ—ಕೃತಿಯೊಂದರ ಪ್ರಕಟಣೆ…ಇಷ್ಟೆಲ್ಲಾ ವಿಶೇಷತೆಗಳಿರುವ ಕಲಾವಿದೆಗೆ ಆ ವೀಸಾ ದೊರಕುವುದು ಅಂಥ ಕಷ್ಟದ ಸಂಗತಿಯೇನಲ್ಲ ಎಂಬುದು ನಮ್ಮ ಅನಿಸಿಕೆಯಾದರೂ ಅಲ್ಲಿನ ಅಧಿಕಾರಿಗಳ ಮಾನದಂಡಗಳು ಏನಿರುತ್ತವೋ ಬಲ್ಲವರಾರು?? ಹಾಗಾಗಿ ಪ್ರತಿ ದಿನವೂ ಪ್ರತಿ ಕ್ಷಣವೂ ಲಂಡನ್ ನಿಂದ ಬರುವ ಮೇಲ್ ಗಾಗಿ ಕಾತರದಿಂದ ಕಾಯುವಂತಾಗಿಹೋಗಿತ್ತು.
ರಾಧಿಕಾಳಂತೂ ಲಂಡನ್ ಗೆ ಹೊರಡಲು ಮಾನಸಿಕವಾಗಿ ಸಂಪೂರ್ಣ ಸನ್ನದ್ಧಳಾಗಿಬಿಟ್ಟಿದ್ದಳು! “ನನಗೆ ವೀಸಾ ಸಿಗಲೆಂದು ನೀವುಗಳು ವಿಶೇಷವಾಗಿ ದೇವರನ್ನು ಪ್ರಾರ್ಥಿಸಿಕೊಳ್ಳಿ..ನನ್ನ ಭವಿಷ್ಯ ಅಲ್ಲೇ ಎಂದು ನನಗನ್ನಿಸಿಬಿಟ್ಟಿದೆ..ನನಗೆ ಬೇರೆ ಯಾವುದರ ಬಗ್ಗೆಯೂ ಯೋಚಿಸಲೂ ಇಷ್ಟವಿಲ್ಲ..” ಎಂದು ಅಲವತ್ತುಕೊಳ್ಳುತ್ತಿದ್ದಳು. ಅಷ್ಟು ಕನಸು ಕಟ್ಟಿಕೊಂಡಿರುವ ಮಗಳ ಇಚ್ಛೆಗಳ ಪೂರೈಕೆಗಾಗಿ ನಾವು ಮಾಡಲು ಸಾಧ್ಯವಿದ್ದದ್ದೂ ಬರೀ ಪ್ರಾರ್ಥನೆ ಅಷ್ಟೇ! ಮಗಳನ್ನು ದೂರ ದೇಶಕ್ಕೆ ಕಳಿಸುವುದು, ಬಹಳ ಸಮಯ ಬಿಟ್ಟಿರುವುದು ಕಷ್ಟವೇ ಆದರೂ ಬೇರೆ ಆಯ್ಕೆಗಳೇನಿವೆ ನಮಗೆ? ಮದುವೆಯಾಗುವುದಿಲ್ಲವೆಂದು ಖಡಾಖಂಡಿತವಾಗಿ ಘೋಷಿಸಿಯೇಬಿಟ್ಟಿರುವ ಮಗಳ ಕನಸುಗಳಾದರೂ ಸಾಕಾರಗೊಳ್ಳಲಿ..ಅವಳ ಬದುಕು ಸುಂದರವಾಗಿ ರೂಪುಗೊಳ್ಳಲಿ ಎಂಬುದಷ್ಟೇ ನಮ್ಮ ನಿರ್ಧಾರವಾಗಿತ್ತು. ಹಾಗಾಗಿ ನಾವು ಸಲ್ಲಿಸಿದ ಪ್ರಾರ್ಥನೆಗಳಿಗೂ ಲೆಕ್ಕವಿಲ್ಲ! ಇಂಥ ಸಂದರ್ಭಗಳಲ್ಲೆಲ್ಲಾ ನಮಗೆ ಮಾರ್ಗದರ್ಶನ ನೀಡುತ್ತಿದ್ದ ನಮ್ಮ ಗುರುಗಳೆಲ್ಲರೂ ಸಹಾ ‘ರಾಧಿಕಾಳ ಕನಸು ನನಸಾಗುತ್ತದೆ..ಅವಳಿಗೆ ವೀಸಾ ದೊರೆಯುತ್ತದೆ..ಅವಳು ವಿದೇಶಕ್ಕೆ ಹಾರುತ್ತಾಳೆ’ ಎಂದೇ ಆಶ್ವಾಸನೆ ನೀಡಿದ್ದರು. ಸಿದ್ಧರಹಳ್ಳಿಯ ಬನಶಂಕರಿ ದೇಗುಲದ ಅರ್ಚಕ ದೇವರಾಜರಂತೂ ‘ಇನ್ನೆರಡು ದಿನಗಳಲ್ಲಿ ಅವಳಿಗೆ ಪತ್ರ ಬರುತ್ತದೆ..ಅವಳ ಆಯ್ಕೆ ಆಗುತ್ತದೆ’ ಎಂದು ಖಚಿತವಾಗಿಯೇ ಹೇಳಿಬಿಟ್ಟಿದ್ದರು! ನಮ್ಮದೋ, ಯಾವುದನ್ನೂ ನಂಬಿಕೊಂಡು ಕೈಕಟ್ಟಿಕೊಂಡು ಕೂರುವ ಮನೋಧರ್ಮವೂ ಅಲ್ಲ, ಹಾಗೆಯೇ ಸಾರಾಸಗಟಾಗಿ ಎಲ್ಲವನ್ನೂ ತಿರಸ್ಕರಿಸುವ ಅಥವಾ ಧಿಕ್ಕರಿಸುವ ಉದ್ಧಟತನದ ಸ್ವಭಾವವೂ ಅಲ್ಲ. ‘ಸಾತ್ವಿಕವಾದ, ಇತರರಿಗೆ ಹಾನಿಕರ ಅಲ್ಲದ ಪ್ರಾರ್ಥನೆಗೆ ಅಪಾರ ಶಕ್ತಿಯಿದೆ’ ಎಂದು ಬಲವಾಗಿ ನಂಬಲು ಬಯಸುವವನು ನಾನು! ಅದೇನೇ ಆಗಲಿ, ಮುಂದಿನ ಎರಡು ದಿನಗಳನ್ನು ಕಳೆಯುವುದು ತುಂಬಾ ಕಷ್ಟವಾಗಿಹೋಯಿತು! ರಾಧಿಕಾಳಂತೂ ಹತ್ತುಹತ್ತು ನಿಮಿಷಗಳಿಗೊಮ್ಮೆ ಲ್ಯಾಪ್ ಟಾಪ್ ತೆರೆದು ‘ಸಂದೇಶವೇನಾದರೂ ಬಂದಿದೆಯೇ?’ ಎಂದು ಕಾತರದಿಂದ ನೋಡುತ್ತಿದ್ದಳು.
ಎರಡನೆಯ ದಿನ ಸಂಜೆಯ ಸಮಯ..ರಾಧಿಕಾ ತನ್ನ ಕೋಣೆಯಲ್ಲಿದ್ದಳು. ನಾವು ಹಾಲ್ ನಲ್ಲಿ ಕುಳಿತು ಯಾವುದೋ ಟಿ ವಿ ಕಾರ್ಯಕ್ರಮವನ್ನು ನೋಡುತ್ತಿದ್ದೆವು. ಇದ್ದಕ್ಕಿದ್ದಂತೆ ರಾಧಿಕಾ ‘ಡ್ಯಾಡೀ’ ಎಂದು ಜೋರಾಗಿಯೇ ಕೂಗಿದಳು. ನಾನೂ ರಂಜನಿಯೂ ಗಡಬಡಿಸಿಕೊಂಡು ಅವಳ ಕೋಣೆಗೆ ಓಡಿದೆವು. ತೆರೆದ ಲ್ಯಾಪ್ ಟಾಪ್ ಮುಂದೆ ಕುಳಿತಿದ್ದ ರಾಧಿಕಾ ಕಣ್ಣೆವೆ ಮುಚ್ಚದೆ ತೆರೆಯನ್ನೇ ನೋಡುತ್ತಿದ್ದಾಳೆ! “ಏನೋ ಕಂದಾ? ಏನಾಯ್ತೋ? ಮೆಸೇಜ್ ಬಂತಾ?” ಎಂದು ಒಂದೇ ಉಸಿರಿಗೆ ಇಬ್ಬರೂ ಕೇಳಿದೆವು. “ಹೂಂ..ಆಗಿದೆ ಅಂತ ಕಾಣುತ್ತೆ..ನಂಗ್ಯಾಕೋ ಒಂಥರಾ ಆಗ್ತಿದೆ…I am dazed… ” ಎಂದೇನೇನೋ ಬಡಬಡಿಸಿದಳು. ಆ ವೇಳೆಗಾಗಲೇ ಅಲ್ಲಿಗೆ ಬಂದಿದ್ದ ಮಗರಾಯ ಲ್ಯಾಪ್ ಟಾಪ್ ಅನ್ನು ನೋಡಿ ಖುಷಿಯಿಂದ, “ಕಂಗ್ರ್ಯಾಟ್ಸ್ ಕಣೇ ಅಕ್ಕಾ! ನಿಂಗೆ ವೀಸಾ ಅವಾರ್ಡ್ ಮಾಡಿದಾರೆ” ಎಂದಾಗ ನಮ್ಮ ಸಂತೋಷಕ್ಕೆ ಪಾರವೇ ಇಲ್ಲ! “ನಿಮ್ಮ ಅರ್ಜಿಯನ್ನು ಕೂಲಂಕುಷವಾಗಿ ಪರಿಶೀಲಿಸಿದ್ದೇವೆ…ನಿಮ್ಮ ಅರ್ಜಿಯನ್ನು ನಿರಾಕರಿಸಲು ನಮಗೆ ಯಾವುದೇ ಕಾರಣಗಳಿಲ್ಲ..ಯು ಕೆ ಗೆ ಸ್ವಾಗತ ” ಎಂಬರ್ಥದಲ್ಲಿ ರಾಧಿಕಾಳಿಗೆ ಸಂದೇಶ ಕಳಿಸಿದ್ದರು. ಮಗಳನ್ನು ದೂರದೇಶಕ್ಕೆ ಕಳಿಸಿಕೊಡುವುದು ನೋವಿನ ಸಂಗತಿಯೇ ಆದರೂ ಇಂಗ್ಲೆಂಡ್ ದೇಶ ‘exceptional artist visa’ ನೀಡಿ ಮಗಳನ್ನು ಆಹ್ವಾನಿಸುತ್ತಿದೆ ಎನ್ನುವುದು ಸಂತಸದ ಸಂಗತಿಯೇ ಅಲ್ಲವೇ?? ರಾಧಿಕಾಳ ಮುಖದಲ್ಲಿ ಬಹು ದಿನಗಳ ನಂತರ ಸಮಾಧಾನ ನೆಮ್ಮದಿಯ ಭಾವ ಕಾಣಿಸಿಕೊಂಡಿತು. ಮುಂದಿನ ಬದುಕಿಗೆ, ಬಯಸಿದ ಬಾಗಿಲೇ ತೆರೆಯುವಂತಾದರೆ ಅದಕ್ಕಿಂತ ಖುಷಿ ಬೇರೇನಿದೆ?
ಸರಿ..ಮತ್ತೆ ಶುರುವಾಯಿತು ಹೊಸ ಬದುಕಿಗೆ ಮಗಳನ್ನು ಕಳಿಸಿಕೊಡಲು ನಮ್ಮ ತಯಾರಿ!!






0 Comments