ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿವಾಸ ಪ್ರಭು ಅಂಕಣ- ಪ್ರೇಕ್ಷಕನೇ ನನ್ನ ಕೈಹಿಡಿದು ರಂಗಸ್ಥಳವನ್ನೇರಿಸಿದ!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

39

ಜಿ. ಎಸ್. ಸದಾಶಿವ ಅವರ ‘ಸಿಕ್ಕು’ ನೀಳ್ಗತೆಯನ್ನು ರಂಗಕ್ಕೆ ಅಳವಡಿಸಿಕೊಂಡು ಮಾಡಿದ್ದ ನಮ್ಮ ಪ್ರಯೋಗ ಅದಾಗಲೇ ಯಶಸ್ವಿಯಾಗಿತ್ತು ಎಂದು ಈಗಾಗಲೇ ಹೇಳಿದ್ದೇನಲ್ಲವೇ? ‘ಹೀಗೆ ಕತೆ—ಕಾದಂಬರಿಗಳನ್ನು ನಾಟಕವಾಗಿಸುವ ಅಗತ್ಯವೇನಿದೆ? ಕನ್ನಡದಲ್ಲಿ ಈಗಾಗಲೇ ಇರುವ ವಿಪುಲ ನಾಟಕ ಸಾಹಿತ್ಯದತ್ತ ನಿರ್ದೇಶಕರು ಯಾಕೆ ಗಮನ ಹರಿಸಬಾರದು?’ ಎಂದು ಅನೇಕರು ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದೂ ಉಂಟು. ಆ ಕುರಿತ ಚರ್ಚೆ ಅದೇನೇ ಇರಲಿ, ಹೀಗೆ ರಂಗ ರೂಪಗಳನ್ನು ಸಿದ್ಧ ಪಡಿಸುವುದು ನನಗೆ ಅತ್ಯಂತ ಪ್ರಿಯವಾದ ಸಂಗತಿ.

ಉತ್ತಮ ನಾಟಕಗಳು ಕಾವ್ಯಾತ್ಮಕತೆಯನ್ನು ಮೈಗೂಡಿಸಿಕೊಂಡಿರುವಂತೆಯೇ ಒಳ್ಳೆಯ ಕತೆ—ಕಾದಂಬರಿಗಳು ನಾಟಕೀಯ ಅಂಶಗಳನ್ನು ಒಳಗೊಂಡಿರುತ್ತವೆ. ಹೆಚ್ಚು ನಾಟಕೀಯ ಅಂಶಗಳನ್ನು ಒಳಗೊಂಡಿರುವಂತಹ ಕತೆ—ಕಾದಂಬರಿಗಳನ್ನು ದೃಶ್ಯ ಮಾಧ್ಯಮಕ್ಕೆ ಒಗ್ಗಿಸುವುದೂ ಸುಲಭವಷ್ಟೇ ಅಲ್ಲ, ಪ್ರಭಾವಿಯೂ ಆಗಿರುತ್ತದೆ. ಈ ಕುರಿತಾಗಿ ಒಮ್ಮೆ ಕಾರಂತ ಮೇಷ್ಟ್ರೊಂದಿಗೆ ಚರ್ಚಿಸಿದಾಗ ಅವರು ಹೀಗಂದಿದ್ದರು: “ಸಾಹಿತ್ಯ ಕೃತಿಯಲ್ಲಿ ನಾಟಕದ ಅಂಶ ಮೇಲ್ನೋಟಕ್ಕೆ ಗೋಚರಿಸದಂತೆ ವಿವರಗಳೊಟ್ಟಿಗೆ ಹರಡಿಕೊಂಡಿರುತ್ತದೆ;ಅದನ್ನೆಲ್ಲಾ ಹೆಕ್ಕಿ ರಂಗರೂಪ ಕಟ್ಟಿಕೊಡುವುದು ಒಂದು ಸವಾಲು. ‘ಅಭಿವ್ಯಕ್ತಿ ಒತ್ತಡ’ವನ್ನು ಬಯಸುವ ಯಾವುದೇ ಕೃತಿಯನ್ನು ಇನ್ನೊಂದು ಮಾಧ್ಯಮಕ್ಕೆ ಅಳವಡಿಸಿದರೆ ತಪ್ಪೇನಿಲ್ಲ.ರಸಭಂಗವಾಗದೆ ಅದೊಂದು ಒಳ್ಳೆಯ ರೂಪಾಂತರವಾಗಬೇಕು ಅಷ್ಟೇ.”

ಹಾಗೆ ನೋಡಿದರೆ ಆ ವೇಳೆಗಾಗಲೇ ಅನೇಕ ಕನ್ನಡದ ಕತೆ ಕಾದಂಬರಿಗಳು ರೂಪಾಂತರಗೊಂಡು ರಂಗದ ಮೇಲೆ ಯಶಸ್ವಿಯಾಗಿ ಮೂಡಿಬಂದಿದ್ದವು. ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಬಹಳ ದೊಡ್ಡ ಹೆಸರಾದ ಆರ್.ನಾಗೇಶ್ ಅವರು ಶಿವರಾಮ ಕಾರಂತರ ‘ಚೋಮನ ದುಡಿ’, ಯು.ಆರ್. ಅನಂತಮೂರ್ತಿಯವರ ‘ಭಾರತೀಪುರ’,ತೇಜಸ್ವಿಯವರ ‘ತಬರನ ಕಥೆ’ ಮೊದಲಾದ ಅನೇಕ ಶ್ರೇಷ್ಠ ಕೃತಿಗಳನ್ನು ಅತ್ಯಂತ ಪ್ರಭಾವಿಯಾಗಿ ದೃಶ್ಯಮಾಧ್ಯಮಕ್ಕೆ ಅಳವಡಿಸಿ ನನ್ನಂಥವರಿಗೆ ಮೇಲ್ಪಂಕ್ತಿ ಹಾಕಿಕೊಟ್ಟವರು. ಹಾಗಾಗಿ ನಾನು ದೃಶ್ಯಮಾಧ್ಯಮಕ್ಕೆ ಒಗ್ಗಿಸಬಹುದಾದ ಕನ್ನಡದ ಕತೆ—ಕಾದಂಬರಿಗಳನ್ನು ಹುಡುಕತೊಡಗಿದೆ.

ಆ ಸಂದರ್ಭದಲ್ಲೇ ನನ್ನ ಗಮನ ಸೆಳೆದ ಒಂದು ಕತೆಯೆಂದರೆ ಪ್ರಜಾವಾಣಿಯ ಯಾವುದೋ ವಿಶೇಷಾಂಕದಲ್ಲಿ ಪ್ರಕಟವಾಗಿದ್ದ ಡಾ॥ಹೆಚ್.ಎಸ್.ವೆಂಕಟೇಶ ಮೂರ್ತಿಯವರ “ತಲೆಗೊಂದು ಕೋಗಿಲೆ”. ಹೆಚ್ ಎಸ್ ವಿ ಅವರು ಅದಾಗಲೇ ಕನ್ನಡ ಕಾವ್ಯಕ್ಷೇತ್ರದಲ್ಲಿ ದೊಡ್ಡ ಹೆಸರಾಗಿದ್ದವರು; ಅನೇಕ ಅರ್ಥಪೂರ್ಣ ಕವಿತೆಗಳನ್ನೂ ಲಾಲಿತ್ಯಪೂರ್ಣ—ಮನಮೋಹಕ ಭಾವಗೀತೆಗಳನ್ನೂ ರಚಿಸಿ ವಿಮರ್ಶಕರ—ಸಹೃದಯರ ಅಪಾರ ಮೆಚ್ಚುಗೆ—ಪ್ರಶಂಸೆಗಳನ್ನು ಗಳಿಸಿಕೊಂಡಿದ್ದವರು. ಅವರ ‘ತಲೆಗೊಂದು ಕೋಗಿಲೆ’ ಸಣ್ಣಕತೆ ಕಾವ್ಯಾತ್ಮಕತೆಯನ್ನು ಮೈಗೂಡಿಸಿಕೊಂಡಂಥ ಒಂದು ಅತ್ಯಂತ ಧ್ವನಿಪೂರ್ಣ ಕತೆ.

ಒಂದು ಗುರುಕುಲ.ಅಲ್ಲಿ ಕಲಿಯುತ್ತಿರುವ ಹಲವಾರು ಮಕ್ಕಳು.ಶಿಸ್ತು—ಕಟ್ಟುನಿಟ್ಟಿನ ವಾತಾವರಣದಲ್ಲಿ ಗುರೂಜಿಯವರು ತಮ್ಮ ಕನಸಿನ ಕೂಸಾದ ಆಶ್ರಮವನ್ನು ಮುನ್ನಡೆಸುತ್ತಿದ್ದಾರೆ.ಒಂದು ರಾತ್ರಿ ತಮ್ಮ ಆಶ್ರಮದ ಮೇಲಿಂದ ಸಹಸ್ರಾರು ಕೋಗಿಲೆಗಳು ಹಾರಿಹೋದಂಥ ಕನಸು ಬೀಳುತ್ತದೆ ಗುರೂಜೀ ಅವರಿಗೆ. ಅಂದಿನಿಂದ ಅವರ ಕನವರಿಕೆ ಆರಂಭವಾಗಿಬಿಡುತ್ತದೆ:”ನಮ್ಮ ಆಶ್ರಮಕ್ಕೆ ಕೋಗಿಲೆಗಳು ಬೇಕು!” ತಮ್ಮ ಆಶ್ರಮದ ಅಧ್ಯಾಪಕ ವೃಂದಕ್ಕೆ ಕೋಗಿಲೆಗಳನ್ನು ತರುವ ಕೆಲಸವನ್ನು ನಿಯೋಜಿಸುತ್ತಾರೆ ಗುರೂಜೀ.ಬರುವ ಕೋಗಿಲೆಗಳಿಗಾಗಿ ಅದ್ಭುತ ಪಂಜರ ಸಿದ್ಧವಾಗುತ್ತದೆ;ಆದರೆ ಕೋಗಿಲೆಗಳ ಸುಳಿವಿಲ್ಲ. ಗುರೂಜೀಯವರ ಕಟ್ಟಾಜ್ಞೆ ಹೊರಡುತ್ತದೆ:’ಆಶ್ರಮಕ್ಕೆ,ಸಿದ್ಧವಾಗಿರುವ ಪಂಜರಕ್ಕೆ ಕೋಗಿಲೆಗಳನ್ನು ತರಲೇಬೇಕು;ಇಲ್ಲದಿದ್ದರೆ ಪರಿಣಾಮ ನೆಟ್ಟಗಾಗಲಿಕ್ಕಿಲ್ಲ!”

ಕೊನೆಗೆ ಅಧ್ಯಾಪಕರ ಆದೇಶದ ಮೇರೆಗೆ ಒಂದು ದಿನ ಕೋಗಿಲೆಗಳನ್ನು ಹಿಡಿದು ತರಲು ಮಕ್ಕಳೇ ತಂಡ ತಂಡವಾಗಿ ಹೊರಡುತ್ತಾರೆ. ಅಚಾನಕ್ಕಾಗಿ ಮೋಡ ಆವರಿಸಿ ಧೋ ಧೋ ಮಳೆ ಸುರಿಯತೊಡಗುತ್ತದೆ…ಆದರೆ ಮಕ್ಕಳ ಸುಳಿವಿಲ್ಲ. ಆತಂಕದಿಂದ ಅಧ್ಯಾಪಕರು ಕಾಯುತ್ತಿದ್ದಾರೆ…ಕೊನೆಗೊಮ್ಮೆ ನಿಧಾನವಾಗಿ ಮಕ್ಕಳು ಆಶ್ರಮಕ್ಕೆ ಮರಳುತ್ತಾರೆ…ಒಬ್ಬೊಬ್ಬರೇ ಬಂದು ಎದೆಯಲ್ಲಿ ಕೈಹಾಕಿ ಏನನ್ನೋ ಕಿತ್ತು,’ಕೋಗಿಲೆ ತಂದಿರಾ?’ ಎಂದು ಕೇಳಿದ ಅಧ್ಯಾಪಕರಿಗೆ ಕೊಡುತ್ತಾರೆ.ಮಕ್ಕಳು ಕೊಟ್ಟ ‘ಕೋಗಿಲೆ’ಗಳನ್ನು ಬದಿಗಿಟ್ಟ ಅಧ್ಯಾಪಕ ಅವನ್ನೂ ಮಕ್ಕಳನ್ನೂ ನೋಡುತ್ತಾ ವಿಹ್ವಲನಾಗಿ,ಆರ್ತನಾಗಿ ಚೀರುತ್ತಾನೆ: “ಈ ಕೋಗಿಲೆಗಳು..ಧ್ವನಿಯಾಗಿ ಕಾಡುವ ಈ ಕೋಗಿಲೆಗಳು ಸತ್ತಿವೆಯೋ ಬದುಕಿವೆಯೋ ಒಂದೂ ತಿಳಿಯುತ್ತಿಲ್ಲ!”

ಕೋಗಿಲೆಯ ಪ್ರತೀಕದ ಮೂಲಕ ಕತೆಯಲ್ಲಿ ಮಿಳಿತಗೊಂಡಿರುವ ಈ ಧ್ವನಿಪೂರ್ಣತೆ ಬೆರಗು ಹುಟ್ಟಿಸುವಂಥದ್ದು. ನನಗೆ ಈ ಕತೆಯ ದೃಶ್ಯರೂಪಕ್ಕೆ ವಾಸ್ತವ ಶೈಲಿಯ ಪ್ರಸ್ತುತಿಗಿಂತ ಶೈಲೀಕೃತ ಪ್ರಸ್ತುತಿ ಸೂಕ್ತವೆನಿಸಿತು. ಹಾಗಾಗಿ ,ಕತೆಯ ಅಂತರಾಳದ ಧ್ವನಿಯನ್ನು ಸಂವಹಿಸಲು ಹಲವಾರು ಗುಂಪಿನ ದೃಶ್ಯಗಳನ್ನು ಸಂಯೋಜಿಸಿಕೊಂಡು, ಗದ್ಯಪದ್ಯ ಮಿಶ್ರಿತ ಸಂಭಾಷಣೆಯ ಧಾಟಿಯನ್ನು ಅಳವಡಿಸಿಕೊಂಡೆ. ನಿರೂಪಕ “ಇದು ಕೋಗಿಲೆಗಳ ಕತೆ” ಎಂದಾಗಲೆಲ್ಲಾ ಹಿನ್ನೆಲೆಯಲ್ಲಿ ಕ್ರಾ ಕ್ರಾ ಎಂದು ಕೂಗುವ ಕಾಗೆಯ ಧ್ವನಿಯನ್ನು ಬಳಸಿದ್ದೂ ನೆರವಿಗೆ ಬಂತು.ನಮ್ಮ ನಾಟ್ಯದರ್ಪಣ ತಂಡದಿಂದಲೇ ಈ ನಾಟಕದ ಪ್ರದರ್ಶನ ನಡೆದು ವಿಮರ್ಶಕರ ಹಾಗೂ ಸಹೃದಯರ ಮೆಚ್ಚುಗೆಗೆ ಪಾತ್ರವಾಯಿತು.

ಪ್ರಯೋಗದ ಬಗ್ಗೆ ಪ್ರಜಾವಾಣಿಯಲ್ಲಿ ಖ್ಯಾತ ಪತ್ರಕರ್ತ—ಸಾಹಿತಿ ಬಿ.ವಿ ವೈಕುಂಠರಾಜು ಹೀಗೆ ಬರೆದರು: “ಕಥೆ—ಕಾದಂಬರಿಗಳು ರಂಗಕ್ಕೆ ಅಳವಡುತ್ತಿರುವ ಈ ಕಾಲದಲ್ಲಿ ಶ್ರೀನಿವಾಸ ಪ್ರಭು ಒಂದು ಚಿಕ್ಕ ಕತೆಯನ್ನು ಅಚ್ಚುಕಟ್ಟಾಗಿ ನಾಟಕ ರೂಪಕ್ಕೆ ಪರಿವರ್ತಿಸಿದ್ದಾರೆ.ಹೆಚ್ ಎಸ್ ವೆಂಕಟೇಶ ಮೂರ್ತಿ ಅವರ’ತಲೆಗೊಂದು ಕೋಗಿಲೆ’ ಕತೆಯನ್ನು ಆಧರಿಸಿದ ನಾಟಕ ವಸ್ತು—ಪ್ರಯೋಗಗಳೆರಡರ ಸರಳತೆಯಿಂದಾಗಿ ಯಶಸ್ವಿಯಾಯಿತು.

ರವೀಂದ್ರರ ಕತೆಯ ಆಧಾರದ ಮೇಲೆ ಬಿ.ವಿ.ಕಾರಂತರು ನಾಟಕ ರೂಪಕ್ಕೆ ಅಳವಡಿಸಿರುವ ‘ಪಂಜರಶಾಲೆ’ಯನ್ನು ನೆನಪಿಗೆ ತರುವ ವಸ್ತುವಾದರೂ ಅದನ್ನು ಹೇಳುವ ರೀತಿ ಸಮಕಾಲೀನವೂ ಸಾಂಕೇತಿಕವೂ ಆಗಿರುವುದರಿಂದ ವಿಭಿನ್ನವೆನಿಸುತ್ತದೆ. ಪ್ರಭು ಅವರು ಯಾವ ಗದ್ದಲ—ಆಡಂಬರಗಳಿಲ್ಲದೆ ನೇರವಾಗಿ ನಾಟಕದ ಆಶಯವನ್ನು ಪ್ರೇಕ್ಷಕರಿಗೆ ಮುಟ್ಟಿಸಿದರು.ವಿದ್ಯಾರ್ಥಿಗಳ ಯಾಂತ್ರಿಕ ರೀತಿಯ ಚಲನವಲನ, ಹಾಡಿನ ಎರಡೆರಡು ಸಾಲುಗಳನ್ನು ಗದ್ಯದ ರೂಪದಲ್ಲಿ ಮೇಳದಂತೆ ಹೇಳಿಸುತ್ತಿದ್ದುದು, ಗುರೂಜಿಯ ಗತ್ತು ನಾಟಕವನ್ನು ಯಶಸ್ವಿಯಾಗುವಂತೆ ಮಾಡಿದವು “.

ಹೆಚ್.ಎಸ್.ವಿ.ಅವರೇ ‘ತಲೆಗೊಂದು ಕೋಗಿಲೆ’ ನಾಟಕದ ವಸ್ತು ಹಾಗೂ ಪ್ರಯೋಗಗಳ ಬಗ್ಗೆ ಹೀಗೆ ಹೇಳುತ್ತಾರೆ: “ಹಲ ದಶಕಗಳ ಹಿಂದೆ ನಾನು ಬರೆದ ಕಥೆ ಇದು.ಆಗ ನಾನು ಮಲ್ಲಾಡಿಹಳ್ಳಿ ಆಶ್ರಮದಲ್ಲಿ(ಪ್ರೌಢಶಾಲೆ) ಟೀಚರ್ ಆಗಿ ಕೆಲಸ ಮಾಡುತ್ತಿದ್ದೆ. ಆ ಕಾಲದಲ್ಲೇ ಆಶ್ರಮ ಅತಿ ಶಿಸ್ತಿಗೆ ಹೆಸರಾಗಿತ್ತು. ಸ್ವಾಮೀಜೀ ಅವರ ಆಶ್ರಯದಲ್ಲಿ ನೂರಾರು ಮಕ್ಕಳು ಅಲ್ಲಿ ಕಲಿಯುತ್ತಿದ್ದರು.ಆಶ್ರಮದಲ್ಲಿ ಭಾರತದ ಪುನರ್ ಸೃಷ್ಟಿಯಾಗಬೇಕು ಅನ್ನೋದು ಸ್ವಾಮೀಜೀ ಅವರ ಕನಸಾಗಿತ್ತು.

ಒಂದು ಮುಗ್ಧ ಆಶಯದ ನೆಲೆಯಲ್ಲಿ ಅವರ ಮನಸ್ಸು ಕೆಲಸ ಮಾಡ್ತಿತ್ತು. ಆದರೆ ಕೋಗಿಲೆಯಿಂದ ಹಾಡು ಕೇಳಬಹುದೇ ವಿನಾ ಅದನ್ನು ತಂದು ಹಾಡಿಸುವುದು ಕಷ್ಟ ಅನ್ನೋದು ಅವರಿಗೆ ಗೊತ್ತಿರಲಿಲ್ಲ. ನಾನು ಸ್ವಾಮೀಜೀ ಅವರ ಕನಸು ಮತ್ತು ವಾಸ್ತವದ ಕ್ರೌರ್ಯ—ಇವೆರಡನ್ನೂ ಮುಖಾಮುಖಿಯಾಗಿಸಬೇಕೆಂದು ಈ ಕಥೆ ಬರೆದೆ…ಪ್ರಭು ಅದನ್ನು ನಾಟಕವಾಗಿಸಿದ್ದಾರೆ. ಕವಿತೆಯನ್ನು ಹೃದಯದಲ್ಲಿಟ್ಟುಕೊಂಡಿರುವ ನಾಟಕ ಇದು…ರಂಗದ ಮೇಲೆ ಪ್ರದರ್ಶಿತವಾದ ನನ್ನ ಮೊದಲ ನಾಟಕವನ್ನು ಮನೆಯವರೊಟ್ಟಿಗೆ ಕುಳಿತು ನೋಡಿದ ಅನುಭವವನ್ನು ನಾನು ಮರೆಯುವ ಹಾಗೇ ಇಲ್ಲ!”

ಈ ನಾಟಕದಲ್ಲಿ ಕನ್ನಡ ರಂಗಭೂಮಿಯ ಶ್ರೇಷ್ಠ ನಟ—ನಿರ್ದೇಶಕ—ಸಂಘಟಕ ಡಾ॥ಬಿ.ವಿ.ರಾಜಾರಾಂ ಅವರು ಗುರೂಜೀ ಅವರ ಪಾತ್ರದಲ್ಲಿ ಸೊಗಸಾಗಿ ಅಭಿನಯಿಸಿದ್ದರು.ನಾಟಕದ ಬಗ್ಗೆ ಅವರದ್ದೇ ಕೆಲವು ಮಾತುಗಳು: ” ಕವಿ ಖಲೀಲ್ ಗಿಬ್ರಾನ್ ನ ಕವನದ—’ ಮಕ್ಕಳು ನಿಮ್ಮಿಂದ ಬಂದಿರಬಹುದು;ಆದರೆ ಅವು ನಿಮ್ಮ ಹಾಗೆಯೇ ಆಗಬೇಕೆಂಬ ಪಂಜರದ ಕಟ್ಟುಪಾಡುಗಳೇಕೆ? ಅವು ನಿಮ್ಮಿಂದ ಸ್ವಚ್ಛಂದ ಆಗಸಕ್ಕೆ ಚಿಮ್ಮಿರುವ ಬಾಣಗಳು; ಬೆಳಗಲು ಬಿಡಿ ಅವರಂತೆ’ ಎನ್ನುವ ನುಡಿಗಳ ಹಾಗೆ, ಶಾಲೆ—ಗುರುಕುಲ—ಮನೆ—ವ್ಯವಸ್ಥೆ ಎಲ್ಲವೂ ಪಂಜರಗಳೇ!”

ಮತ್ತೊಂದು ವಿಮರ್ಶೆಯ ಸಾಲುಗಳು: “ತಲೆಗೊಂದು ಕೋಗಿಲೆ ನಾಟಕದಲ್ಲಿ ಸನ್ನಿವೇಶ ನಿರ್ಮಾಣಕ್ಕೆ ನಟರನ್ನೇ ಬಳಸಿಕೊಂಡ ತಂತ್ರ ಬಾದಲ್ ಸರ್ಕಾರ್ ಅವರ ನಾಟಕಗಳನ್ನು ನೆನಪಿಗೆ ತರುತ್ತಿದ್ದು ಪ್ರಯೋಗ ತಂತ್ರದಲ್ಲಿನ ಹೊಸತನದಿಂದಾಗಿ ಆಕರ್ಷಿಸಿತು.”
ಹೀಗೆ ‘ತಲೆಗೊಂದು ಕೋಗಿಲೆ’ ರಂಗ ರೂಪಾಂತರ ಯಶಸ್ವಿಯಾಗಿದ್ದು ಸಮಾಧಾನ—ಖುಷಿಯನ್ನು ತಂದಿದ್ದಷ್ಟೇ ಅಲ್ಲದೆ ಹೆಚ್ ಎಸ್ ವಿ ಅವರ ಒಳ ಅಡಗಿದ್ದ ಅಪೂರ್ವ ನಾಟಕಕಾರ ಪ್ರಕಾಶಕ್ಕೆ ಬರಲು ಒಂದು ಚಿಮ್ಮುಹಲಗೆಯೂ ಆಯಿತು! ಈ ಬಗ್ಗೆ ಮತ್ತೆ ಮುಂದೆ ಬರೆಯುತ್ತೇನೆ.

ಈಗಷ್ಟೇ ಬಾದಲ್ ಸರ್ಕಾರ್ ಅವರ ಪ್ರಸ್ತಾಪವಾಗಿರುವುದರಿಂದ ಇಲ್ಲಿಯೇ ಅವರ ಬಗ್ಗೆ ಮತ್ತಷ್ಟು ವಿಷಯಗಳನ್ನು ಹಂಚಿಕೊಂಡು ಬಿಡುತ್ತೇನೆ. ಬಾದಲ್ ದಾ ಅವರ ಮಾರ್ಗದರ್ಶನದಲ್ಲಿ ನಮ್ಮ ತರಗತಿಯ ವಿದ್ಯಾರ್ಥಿಗಳಿಗೆಂದೇ ಒಂದು ಶಿಬಿರ ನಡೆಯಿತು. ನಿಜಕ್ಕೂ ನನ್ನ ಪಾಲಿಗೆ ಇದೊಂದು ಅಪೂರ್ವ ಅನುಭವ. ಒಟ್ಟಾರೆಯಾಗಿ ಬಾದಲ್ ದಾ ಅವರ ವಿಚಾರಗಳನ್ನು ಸಂಗ್ರಹಿಸಿಕೊಂಡು ಹೇಳುವುದಾದರೆ: “ಭಾರತೀಯ ಸಾಂಪ್ರದಾಯಿಕ ರಂಗಭೂಮಿಯ ಬಗ್ಗೆಯಾಗಲೀ ಪಾಶ್ಚಾತ್ಯ ಪ್ರಭಾವದಿಂದ ರೂಪುಗೊಂಡ ಪ್ರೊಸೀನಿಯಂ ರಂಗಭೂಮಿಯ ಬಗ್ಗೆಯಾಗಲೀ ಸಮಾಧಾನವಿರದಿದ್ದ ಬಾದಲ್ ಸರ್ಕಾರ್ ಅವರು ಪ್ರಾರಂಭಿಸಿದ್ದೇ ‘ಮೂರನೆಯ ರಂಗಭೂಮಿ’ ಅಥವಾ ‘ಬಡ ರಂಗಭೂಮಿ’.

ತಮ್ಮ ನಾಟಕಗಳನ್ನು ಜನಗಳ ಬಳಿಗೇ ಒಯ್ಯಲು ಬಯಸಿದ ಬಾದಲ್ ದಾ ಅವರು ‘ಬಡ ರಂಗಭೂಮಿ’ಯನ್ನು ಅದರ ನಿಜವಾದ ಅರ್ಥದಲ್ಲಿ,ಅಂದರೆ ವಿಶೇಷವಾದ ಖರ್ಚುವೆಚ್ಚಗಳಿಲ್ಲದ ರಂಗಭೂಮಿ ಎಂದೇ ಅಳವಡಿಸಿಕೊಂಡರು.ಅವರೇ ಹೇಳಿಕೊಂಡಂತೆ ಅವರ ಯಾವ ಪ್ರಯೋಗಗಳಿಗೂ ರಂಗಸಜ್ಜಿಕೆ—ರಂಗ ಪರಿಕರ—ಉಡುಪು ಎಲ್ಲವೂ ಸೇರಿ ನೂರು ರೂಪಾಯಿಗಳಿಗಿಂತ(ಆ ಕಾಲದಲ್ಲಿ) ಜಾಸ್ತಿ ಖರ್ಚಾಗಿಲ್ಲವಂತೆ! ಅವರ ನಾಟಕಗಳು ಪ್ರಮುಖವಾಗಿ ಜನಸಾಮಾನ್ಯನ ಬದುಕಿನ ಅರ್ಥಹೀನತೆ—ಉಳಿವಿಗಾಗಿ ಅವರ ಹೋರಾಟ—ಮಸುಕಾಗುತ್ತಿರುವ ಮಾನವೀಯ ಮೌಲ್ಯಗಳು—ಮೇಲ್ವರ್ಗದವರು ನಡೆಸುವ ಶೋಷಣೆಗಳು…ಈ ವಿಚಾರಗಳನ್ನೇ ಕುರಿತಾದಂಥವು.

ಹೀಗೆ ಬಾದಲ್ ದಾ ಬಹಳ ಖಚಿತವಾಗಿ—ಸ್ವಾರಸ್ಯಪೂರ್ಣವಾಗಿ—ಅರ್ಥಪೂರ್ಣವಾಗಿ ತಮ್ಮ ವಿಚಾರಧಾರೆಯನ್ನು ನಮ್ಮೊಂದಿಗೆ ಹಂಚಿಕೊಂಡರು. ಅಂತೆಯೇ ಅವರ ಬಡ ರಂಗಭೂಮಿಯ ವ್ಯಾಖ್ಯಾನಗಳು ನನ್ನ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿದ್ದೂ ಸಹಾ ನಾನು ನೆನಪಿಸಿಕೊಳ್ಳಬೇಕಾದ ಸಂಗತಿಯೇ. ಬಾದಲ್ ದಾ ಅವರು ನಮಗಾಗಿ ಶಿಬಿರವನ್ನು ನಡೆಸಿಕೊಟ್ಟರೂ ಸಮಯಾಭಾವದಿಂದಾಗಿ ಅವರ ಯಾವುದೇ ನಾಟಕವನ್ನು ಮಾಡಿಸಲಾಗಲಿಲ್ಲ. ಆ ಕೊರತೆಯನ್ನು ತುಂಬಿಕೊಡುವಂತೆ ಕಾರಂತ ಮೇಷ್ಟ್ರು ನಮಗೆ ಬಾದಲ್ ದಾ ಅವರ ಪ್ರಸಿದ್ಧ ‘ಏವಂ ಇಂದ್ರಜಿತ್’ ನಾಟಕವನ್ನು ಮಾಡಿಸಿದರು. ಜೆ.ಎನ್.ಕೌಶಲ್ ಅವರು ಹಿಂದಿಗೆ ಸೊಗಸಾಗಿ ಅನುವಾದಿಸಿದ್ದ ಈ ನಾಟಕವನ್ನು ಒಂದು ಸಂಗೀತ ಪ್ರಧಾನ ನಾಟಕವಾಗಿ ರೂಪಾಂತರಿಸಿದ್ದು ಕಾರಂತರ ಸೃಜನಶೀಲತೆಗೆ ಸಾಕ್ಷಿಯಾಯಿತು.ಅಷ್ಟೇ ಅಲ್ಲದೆ ಇಡೀ ಒಂದು ತಂಡವೇ ಒಂದು ಪಾತ್ರವಾಗಿ ಅಭಿನಯಿಸುವ ವಿನೂತನ ಅನುಭವವೊಂದನ್ನು ನಮಗೆ ಒದಗಿಸಿಕೊಟ್ಟಿತು.

ನಾಟಕಶಾಲೆಯಲ್ಲಿ ನಾನು ಪಾಲ್ಗೊಂಡ ಮತ್ತೊಂದು ಮಹತ್ವದ ನಾಟಕ ಪ್ರಯೋಗವೆಂದರೆ ಸಾಫೋಕ್ಲಿಸ್ ಮಹಾಕವಿಯ ‘ದೊರೆ ಈಡಿಪಸ್’. ಈ ನಾಟಕವನ್ನು ನಿರ್ದೇಶಿಸಿದ್ದವರು ನಮ್ಮ ಶಿಕ್ಷಕರೂ ಆಗಿದ್ದ ಬ್ಯಾರಿ ಜಾನ್ ಅವರು.’ದೊರೆ ಈಡಿಪಸ್’ ಎಲ್ಲ ದೃಷ್ಟಿಯಿಂದಲೂ ಒಂದು ಅತ್ಯುತ್ತಮ ನಾಟಕ ಎಂದು ಗ್ರೀಕ್ ತತ್ವಶಾಸ್ತ್ರಜ್ಞ ಅರಿಸ್ಟಾಟಲನೇ ಮುಕ್ತಕಂಠದಿಂದ ಪ್ರಶಂಸಿಸಿದ್ದಾನೆ. ಈ ನಾಟಕ ಪ್ರಥಮವಾಗಿ ಪ್ರದರ್ಶನಗೊಂಡದ್ದು ಕ್ರಿ ಪೂ 429 ರಲ್ಲೆಂದು ಹೇಳುತ್ತಾರೆ.

ಗ್ರೀಕ್ ಪುರಾಣ ಪಾತ್ರವಾದ ಈಡಿಪಸ್ ಥೀಬ್ಸ್ ನ ದೊರೆ. ‘ತಂದೆಯನ್ನು ಕೊಂದು ತಾಯಿಯನ್ನೇ ಮದುವೆಯಾಗುತ್ತಾನೆ’ ಎಂದು ಈಡಿಪಸ್ ನ ಕುರಿತಾಗಿ ದೈವವಾಣಿ ನುಡಿದಿರುತ್ತದೆ.ಈ ದೈವವಾಣಿಯನ್ನು ಸುಳ್ಳಾಗಿಸಿಯೇ ತೀರುತ್ತೇನೆಂದು ಹೊರಟ ಈಡಿಪಸ್, ತನಗೇ ಅರಿವಿಲ್ಲದಂತೆ,ತನ್ನದೇ ಕ್ರಿಯೆಗಳ ಫಲಶೃತಿಯಾಗಿ ತಂದೆಯನ್ನು ಕೊಂದು ತಾಯಿಯನ್ನು ವಿವಾಹವಾಗುತ್ತಾನೆ; ತನ್ಮೂಲಕ ತನಗೂ ತನ್ನ ಕುಟುಂಬಕ್ಕೂ ತನ್ನ ರಾಜ್ಯಕ್ಕೂ ವಿಪತ್ತನ್ನು ತಂದೊಡ್ಡುವ ದುರಂತ ನಾಯಕನಾಗುತ್ತಾನೆ.ಹೀಗೆ ಈಡಿಪಸ್ ನಾಟಕದಲ್ಲಿ ‘ಮನುಷ್ಯ ಕ್ರಿಯೆಯ ದೈವೀಶಕ್ತಿಗಳು ಹಾಗೂ ಬದುಕಿನ ವಿರೋಧಾಭಾಸಗಳನ್ನೆಲ್ಲಾ ಅದ್ಭುತವಾಗಿ ಮಂಡಿಸಿದ್ದಾನೆ ಸಾಫೋಕ್ಲಿಸ್ ಮಹಾಕವಿ.’

ಬ್ಯಾರಿ ಜಾನ್ ಅವರು ಈಡಿಪಸ್ ನಾಟಕದ ವಿನ್ಯಾಸವನ್ನು ಗ್ರೀಕ್ ನಾಟಕಗಳ ವರ್ತುಲ ರಂಗಭೂಮಿಯ ಮಾದರಿಯಲ್ಲೇ ಸಿದ್ಧಗೊಳಿಸಿದರು. ಶಾಲೆಯ ಒಂದು ವಿಶಾಲ ಆವರಣದಲ್ಲಿ ಒಂದು ವರ್ತುಲ ರಂಗಭೂಮಿಯನ್ನೇ ವಿಶೇಷವಾಗಿ ನಿರ್ಮಿಸಲಾಯಿತು.ಶಾಲೆಯ ಹಿರಿಯ ವಿದ್ಯಾರ್ಥಿಗಳು ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದರು; ನಾನು ಮೇಳದವರಲ್ಲಿ ಒಬ್ಬನಾಗಿದ್ದೆ. ಗ್ರೀಕ್ ರುದ್ರನಾಟಕಗಳಲ್ಲಿ ಮೇಳದವರು ನಾಟಕದ ಮುಖ್ಯ ಕ್ರಿಯೆಯ ಬಗ್ಗೆ ಹಾಡು—ನೃತ್ಯಗಳನ್ನೂ ಬಳಸಿಕೊಂಡು ವಿವರಣೆಗಳನ್ನು ನೀಡುತ್ತಾ ವಿಶ್ಲೇಷಿಸುತ್ತಿದ್ದರು. ಹತ್ತಾರು ಮಂದಿಯ ಒಂದು ತಂಡ ಒಬ್ಬ ವ್ಯಕ್ತಿಯಂತೆ ಪಾತ್ರ ನಿರ್ವಹಿಸಬೇಕಾಗಿದ್ದದ್ದು ನಮ್ಮೆದುರಿಗಿದ್ದ ದೊಡ್ಡ ಸವಾಲು. ಇದರ ಜತೆಗೆ ಗ್ರೀಕ್ ನಾಟಕದ ಮತ್ತೊಂದು ಅವಿಭಾಜ್ಯ ಅಂಗವಾಗಿದ್ದ ಮುಖವಾಡಗಳನ್ನು ಧರಿಸಿ ಅಭಿನಯಿಸಬೇಕಿತ್ತು.

ಒಟ್ಟಾರೆಯಾಗಿ ಒಂದು ಗ್ರೀಕ್ ರುದ್ರನಾಟಕವನ್ನು ಅದರ ಮೂಲ ಸ್ವರೂಪದಲ್ಲೇ ರಂಗದ ಮೇಲೆ ತರುವುದು ನಿರ್ದೇಶಕರ ವಿಚಾರವಾಗಿತ್ತು. ಹಲವಾರು ದಿನಗಳ ಸತತ ಅಭ್ಯಾಸದ ನಂತರ ಪ್ರದರ್ಶನಕ್ಕೆ ಸಿದ್ಧತೆಗಳು ಆರಂಭವಾದವು. ರಂಗಸಜ್ಜಿಕೆ ಹಾಗೂ ಹೊಸ ಪ್ರೇಕ್ಷಾಗೃಹಗಳು ನಮ್ಮ ಶಾಲೆಯ ಮರಗೆಲಸ ನಿಷ್ಣಾತ ಕಲಾವಿದ ತಸ್ರೀಮ್ ಲಾಲ್ ಅವರ ನೇತೃತ್ವದಲ್ಲಿ ಅಭೂತಪೂರ್ವವಾಗಿ ಸಿದ್ಧಗೊಂಡಿದ್ದವು. ಉಡುಗೆ ತೊಡುಗೆ ಆಯುಧಗಳಾದರೂ ಅಷ್ಟೇ—ಆ ಕಾಲಕ್ಕೆ ತಕ್ಕಂತೆ ವಿನ್ಯಾಸಗೊಂಡಿದ್ದವು. ಈಡಿಪಸ್ ಪಾತ್ರದಲ್ಲಿ ನೀಳಕಾಯದ ಪ್ರದೀಪ್ ವರ್ಣೀಕರ್ ಎಂಬ ಹಿರಿಯ ವಿದ್ಯಾರ್ಥಿ ಅದ್ಧುತವಾಗಿ ಅಭಿನಯಿಸುತ್ತಿದ್ದ.ಹೀಗೆ ಎಲ್ಲಾ ಪೂರ್ವಸಿದ್ಧತೆಗಳನ್ನೂ ಮಾಡಿಕೊಂಡು ಪ್ರಯೋಗಕ್ಕೆ ಸಜ್ಜಾದರೂ ಒಂದು ಎಡವಟ್ಟಾಗಿಯೇ ಹೋಯಿತು! ಅದೇನೆಂದರೆ:

ಪಾತ್ರಧಾರಿಗಳೆಲ್ಲರೂ ಮುಖವಾಡಗಳನ್ನು ಧರಿಸಬೇಕಿತ್ತಲ್ಲಾ, ಎಷ್ಟೇ ಮುಂಚಿತವಾಗಿ ಹೇಳಿದ್ದರೂ ಮುಖವಾಡಗಳು ತಯಾರಾಗಿ ಬಂದದ್ದು ಎರಡು ದಿನದ ಮುಂಚೆ. ನೋಡಿದರೆ ಅವು ಮುಖದ ಮೇಲೆ ಸರಿಯಾಗಿ ನಿಲ್ಲುತ್ತಿಲ್ಲ! ಮತ್ತಷ್ಟು ರಿಪೇರಿ ಮಾಡಿಸಿದರೂ ಸಹಾ ಅವುಗಳ ಸ್ವರೂಪದಲ್ಲಿ ಸುಧಾರಣೆಯೇನೂ ಆಗಲಿಲ್ಲ. ನೇರವಾಗಿ ಮಾತ್ರ ನಮಗೆ ನೋಡಲು ಸಾಧ್ಯವಾಗುತ್ತಿತ್ತೇ ಹೊರತು ಅಕ್ಕಪಕ್ಕದಲ್ಲಿ ಏನಿದೆಯೆಂಬುದು ತೃಣಮಾತ್ರವೂ ಗೊತ್ತಾಗುತ್ತಿರಲಿಲ್ಲ! ರಂಗದ ಮೇಲಿನ ಚಲನವಲನಗಳಿಗೆ ಇದರಿಂದ ಸಾಕಷ್ಟು ಅನಾನುಕೂಲವಾಗುತ್ತಿದ್ದುದನ್ನು ನಾವು ನಿರ್ದೇಶಕರ ಗಮನಕ್ಕೆ ತಂದೆವು. “ಈಗ ನಾಟಕದ ವಿನ್ಯಾಸವನ್ನು ಬದಲಿಸಲಾಗದು; ಕೊಂಚ ಕಷ್ಟವಾದರೂ ಮುಖವಾಡಗಳನ್ನು ಧರಿಸಿಯೇ ಅಭಿನಯಿಸಬೇಕು” ಎಂದು ಬ್ಯಾರಿ ಜಾನ್ ಖಡಾಖಂಡಿತವಾಗಿ ಹೇಳಿಬಿಟ್ಟರು. ಮಾಡುವುದೇನು?! ಏನೇನು ಆಭಾಸವಾಗುವುದೋ ಎಂದು ಕಳವಳಗೊಳ್ಳುತ್ತಲೇ ಪ್ರದರ್ಶನಕ್ಕೆ ಸಜ್ಜಾದೆವು.

ಮುಖವಾಡಗಳನ್ನು ಧರಿಸಿ ಕತ್ತಲಲ್ಲಿ ರಂಗದ ಮೇಲೆ ಪ್ರವೇಶಿಸಿದಾಗಲೇ ಖಚಿತವಾಗಿ ಹೋಯಿತು—ಇನ್ನೆರಡು ತಾಸು ನಮಗೆ ಯಮಗಂಡ ಕಾಲವೆಂದು! ಪ್ರವೇಶ—ನಿಷ್ಕ್ರಮಣಗಳ ಸಮಯದಲ್ಲಂತೂ ಎತ್ತ ಹೆಜ್ಜೆಯಿಡಬೇಕೆಂಬುದೇ ಗೊತ್ತಾಗುತ್ತಿಲ್ಲ! ಅಕ್ಕಪಕ್ಕ ಏನಿದೆಯೆಂದು ಮೆಲ್ಲಗೆ ಕೊಂಚ ಹೊರಳಿ ನೋಡಿದರೂ ಮಾಸ್ಕ್ ಧರಿಸಿದ್ದರಿಂದ ಅದು ಅತಿ ದೊಡ್ಡ ಚಲನೆಯಂತೆ ಭಾಸವಾಗಿ ತಮಾಷೆಯಾಗಿ ಕಾಣುತ್ತಿತ್ತು! ನಮ್ಮ ಜತೆಯ ಮೇಳದವರ ಚಲನ ವಲನಗಳು ನಮಗೇ ನಗು ಉಕ್ಕಿಸುತ್ತಿದ್ದುದು ಒಂದುಕಡೆಯಾದರೆ ನಿರ್ದಿಷ್ಟ ಜಾಗಗಳಿಗೆ ಹೋಗಿ ನಿಲ್ಲುವುದು ಮತ್ತೂ ದೊಡ್ಡ ಸಮಸ್ಯೆಯಾಗಿ ಕಾಡುತ್ತಿತ್ತು. ನಾನಂತೂ ಒಮ್ಮೆ ಹೀಗೇ ತಡಬಡಾಯಿಸಿಕೊಂಡು ಮಬ್ಬುಗತ್ತಲಲ್ಲಿ ತಡಕುತ್ತಾ ಹೋಗಿ ಒಂದು ಆಸನ ಕಂಡಂತಾಗಿ ‘ಅಬ್ಬಾ’ ಎಂದು ಸಮಾಧಾನದ ನಿಟ್ಟುಸಿರು ಬಿಟ್ಟು ಅಲ್ಲಿ ಕುಳಿತೆ.

ಮೆಲ್ಲಗೊಮ್ಮೆ ಹೊರಳಿ ನೋಡಿದರೆ ನಾನು ರಂಗಸ್ಥಳಕ್ಕೆ ಹೊಂದಿಕೊಂಡಂತೆಯೇ ಇದ್ದ ಪ್ರೇಕ್ಷಾಗೃಹದಲ್ಲಿ ಪ್ರೇಕ್ಷಕರೊಂದಿಗೆ ಆಸೀನನಾಗಿಬಿಟ್ಟಿದ್ದೇನೆಂಬುದು ಅರಿವಿಗೆ ಬಂತು! ಏನು ಮಾಡುವುದೆಂದು ಚಿಂತಿಸುತ್ತಿರುವಂತೆಯೇ ಒಬ್ಬ ಪ್ರೇಕ್ಷಕನೇ ನನ್ನ ಕೈಹಿಡಿದು ನಿಧಾನವಾಗಿ ಕರೆದುಕೊಂಡು ಹೋಗಿ ರಂಗಸ್ಥಳವನ್ನೇರಿಸಿ ಬಿಟ್ಟುಬಂದ! ಹೀಗೆ ಹಲವಾರು ಸಣ್ಣಪುಟ್ಟ ಅವಾಂತರಗಳ ಹೊರತಾಗಿಯೂ ನಾಟಕ ತುಂಬಾ ಪರಿಣಾಮಕಾರಿಯಾಗಿ ಮೂಡಿ ಬಂದಿತು. ನಾಟಕ ಮುಗಿದು ಪ್ರೇಕ್ಷಕರೆಲ್ಲಾ ತೆರಳಿದ ಮೇಲೆ ನಿರ್ದೇಶಕರ ಜೊತೆ ಅಂದಿನ ಪ್ರದರ್ಶನದ ಬಗ್ಗೆ ವಿಚಾರ ವಿಮರ್ಶೆ ಆರಂಭವಾಯಿತು.

ನಮಗೋ ಒಳಗೊಳಗೇ ಅಳುಕು..ಗಂಭೀರ ಸ್ವಭಾವದ ಬ್ಯಾರಿ ಜಾನ್ ರಿಂದ ಏನೇನು ಮಾತು ಕೇಳಬೇಕೋ ಎಂಬ ದಿಗಿಲು..ಎಲ್ಲರೂ ಬಂದು ಕುಳಿತ ಮೇಲೂ ನಿರ್ದೇಶಕರು ಮೌನವಾಗಿಯೇ ಇದ್ದರು. ಸ್ಫೋಟಿಸಲು ಸಿದ್ಧರಾಗುತ್ತಿದ್ದಾರೆಂದು ನಾವೂ ಮಾನಸಿಕವಾಗಿ ಸನ್ನದ್ಧರಾಗತೊಡಗಿದೆವು! ನಮ್ಮೆಲ್ಲಾ ನಿರೀಕ್ಷೆಗಳನ್ನೂ ಹುಸಿಗೊಳಿಸುವಂತೆ ಬ್ಯಾರಿ ಜಾನ್ ನಕ್ಕುಬಿಟ್ಟರು! ಬಹುಶಃ ರಂಗದ ಮೇಲಿನ ನಮ್ಮ ಅವಾಂತರಗಳ ನೆನಪಾಯಿತೇನೋ! ಕ್ಷಣ ತಡೆದು ಗಂಭೀರವಾಗಿ ನುಡಿದರು: “Yes…I know it is difficult to put on a mask and act….(pause) its all right… tomorrow THE MASKS WILL BE OUT! Instead put on mask like make up and perform like greek characters!”

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

24 February, 2022

1 Comment

  1. T S SHRAVANA KUMARI

    ಲವಲವಿಕೆಯ ನಿರೂಪಣೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading