
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.
ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
93
ಅಂದು ಸಂಜೆ ಆಫೀಸಿನ ಕೆಲಸಗಳನ್ನು ಮುಗಿಸಿ ಮನೆಗೆ ಹೊರಡುವವನಿದ್ದೆ. ಅಷ್ಟರಲ್ಲೇ ನಮ್ಮ ನಿರ್ದೇಶಕರ ಆಪ್ತ ಸಹಾಯಕ ಪರಶುರಾಮ್ ಅವರು ನನ್ನ ಬಳಿ ಬಂದು, “ಒಂದು ಮುಖ್ಯವಾದ ವಿಷಯ ಹೇಳಬೇಕು. ಬನ್ನಿ” ಎಂದು ಬದಿಗೆ ಕರೆದುಕೊಂಡು ಹೋದರು. ಅವರ ಧ್ವನಿಯಲ್ಲೇ ವಿಷಯ ಸಂತೋಷದಾಯಕವಾದದ್ದಲ್ಲ ಎಂಬುದು ಸ್ಪಷ್ಟವಾಗಿತ್ತು! “sorry ಪ್ರಭು.. ನಿಮಗೊಂದು ಬೇಸರದ ವಿಷಯ ತಿಳಿಸಬೇಕು.. ನಿಮಗೆ ಗುಲ್ಬರ್ಗಾಗೆ transfer ಆಗಿದೆ” ಎಂದರು ಪರಶುರಾಮ್. ಇದು ಮಾತ್ರ ಅತ್ಯಂತ ಅನಿರೀಕ್ಷಿತ ಸಂಗತಿಯಾಗಿತ್ತು. ಗುಲ್ಬರ್ಗಾ ಅದುವರೆಗೆ ಮರು ಪ್ರಸಾರ ಕೇಂದ್ರವೇ ಆಗಿದ್ದು ಅದನ್ನು ಸ್ವತಂತ್ರ ದೂರದರ್ಶನ ಕೇಂದ್ರವಾಗಿ ರೂಪಿಸಲು ಸಾಕಷ್ಟು ಒತ್ತಡವಿದ್ದರೂ ಆ ನಿಟ್ಟಿನಲ್ಲಿ ಹೆಚ್ಚಿನ ಬೆಳವಣಿಗೆಯೇನೂ ಆಗಿರಲಿಲ್ಲ. ಈಗ ನೋಡಿದರೆ ಇದ್ದಕ್ಕಿದ್ದಂತೆ ಈ ವರ್ಗಾವಣೆಯ ಸಂದೇಶ! ನಾಲ್ಕು ಮಂದಿ ಕಾರ್ಯಕ್ರಮ ನಿರ್ಮಾಪಕರನ್ನು ಹೆಸರಿಸಿ ಅವರಲ್ಲಿ ಇಬ್ಬರನ್ನು ಕೂಡಲೇ ಗುಲ್ಬರ್ಗಾ ಕೇಂದ್ರಕ್ಕೆ ವರ್ಗಾಯಿಸಬೇಕೆಂಬ ಆದೇಶ ದೆಹಲಿಯಿಂದ ಬಂದಿತ್ತು. ಪಟ್ಟಿಯಲ್ಲಿ ನನ್ನದು ಕೊನೆಯ ಹೆಸರು. ಆದರೂ ಎಂದೂ ಯಾವ ಶಿಫಾರಸು—ವಶೀಲಿಗಳನ್ನು ಬಳಸಿಕೊಳ್ಳುವ ಪ್ರಯತ್ನವನ್ನೇ ಮಾಡದ ನಾನು ಈ ವರ್ಗಾವಣೆಯ ಗುಮ್ಮನಿಂದ ಪಾರಾಗುವುದು ಶಕ್ಯವೇ ಇರಲಿಲ್ಲ. ಹಕ್ ಸಾಹೇಬರ ಅಪಾರ ‘ಕೃಪಾಕಟಾಕ್ಷ’ಕ್ಕೆ ಬೇರೆ ಪಾತ್ರನಾದವನಾದ್ದರಿಂದ ವರ್ಗಾವಣೆಯನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂಬುದು ನನಗೆ ಖಚಿತವಾಗಿ ಹೋಗಿತ್ತು.
ನಾನು ನಿರೀಕ್ಷಿಸಿದ್ದಂತೆಯೇ ನನ್ನನ್ನು ಹಾಗೂ ನಳಿನಿ ರಾಮಣ್ಣ ಎಂಬ ಹಿರಿಯ ನಿರ್ಮಾಪಕಿಯನ್ನು ‘ತಕ್ಷಣವೇ ಗುಲ್ಬರ್ಗಾಗೆ ವರ್ಗಾಯಿಸಲಾಗಿದೆ’ ಎಂಬ ಹಕ್ ಸಾಹೇಬರ ಆದೇಶ ಬಂದೇಬಿಟ್ಟಿತು. ಅಣ್ಣ ಸನ್ಯಾಸತ್ವವನ್ನು ಸ್ವೀಕರಿಸಿ ಹೊರಟುಹೋದ ಬೆನ್ನಿಗೇ ಈ ಸಂದಿಗ್ಧದ ಸನ್ನಿವೇಶ! ಏನಾದರೂ ಆಗಲಿ ಎಂದು ಹಕ್ ಅವರನ್ನು ಭೇಟಿಯಾಗಿ, ‘ಮನೆಯ ಪರಿಸ್ಥಿತಿ ಅಷ್ಟು ಅನುಕೂಲಕರವಾಗಿಲ್ಲ; ನನ್ನ ಪತ್ನಿಯೂ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾಳೆ.. ಮಗಳಿನ್ನೂ ಚಿಕ್ಕವಳು.. ಈಗ ವರ್ಗಾವಣೆ ಎಂದರೆ ಕಷ್ಟವಾಗುತ್ತದೆ.. ಜೊತೆಗೆ ಗುಲ್ಬರ್ಗಾದಲ್ಲಿ ಕೇಂದ್ರ ಪ್ರಾರಂಭಿಸಲು ಇನ್ನೂ ಯಾವ ಪೂರ್ವಸಿದ್ಧತೆಗಳೂ ನಡೆದಿಲ್ಲ ಎಂದೂ ನನಗೆ ತಿಳಿದು ಬಂದಿದೆ.. ನನಗೆ ಕೊಂಚ ಸಮಯಾವಕಾಶ ಕೊಡಬಹುದೇ?’ ಎಂದು ಒಲ್ಲದ ಮನಸ್ಸಿನಿಂದಲೇ ಕೇಳಿಕೊಂಡೆ. ಹಕ್ ಸಾಹೇಬರು ತಮ್ಮ ಹರಕು ಮುರುಕು ಕನ್ನಡದಲ್ಲಿ ಫರಮಾನ್ ಹೊರಡಿಸಿಯೇ ಬಿಟ್ಟರು: “ದೆಹಲಿ orders ಉ ಶ್ರೀನಿವಾಸ್! ignore ಮಾಡಕ್ಕಾಗಲ್ಲ. ಜೊತೆಗೆ you are young and efficient! ನೀವು ಹೋಗಿ ಅಲ್ಲಿ centre start ಮಾಡಿಬಿಟ್ರೆ success ಆಗಿಬಿಡುತ್ತೆ! ನೀವು ಈ ಥರಾ challenges ನೆಲ್ಲಾ accept ಮಾಡ್ಕೋಬೇಕು ಇಲ್ಲಾs! ನಿಮ್ದು mrs ಗೆ ಅಲ್ಲೇ ಲೆಕ್ಚರರ್ ನೌಕರೀಗೆ try ಮಾಡಬಹುದು ಇಲ್ಲಾs! +ಒಂದೆರಡು ಮೂರು ವರ್ಷ ಹೋಗ್ಬಿಟ್ಟು ಬನ್ನಿ.. good experience ಆಗುತ್ತೆ”. ಅಲ್ಲಿಗೆ ಗುಲ್ಬರ್ಗಾ ವರ್ಗಾವಣೆಯ ಗುಮ್ಮನಿಂದ ಪಾರಾಗುವ ಎಲ್ಲ ಸಾಧ್ಯತೆಗಳೂ ಮುಚ್ಚಿಹೋದಂತಾಯಿತು. ಮುಂದೇನು ಮಾಡುವುದೆಂದು ರಂಜನಿಯೊಂದಿಗೆ ಚರ್ಚಿಸಿದೆ. ಆ ವೇಳೆಗೆ ನನ್ನ ಮಾವನವರು ರಾಜಾಜಿನಗರದ ಮನೆಯನ್ನು ಮಾರಿ ಬಸವೇಶ್ವರ ನಗರದ beml ಲೇಔಟ್ ನಲ್ಲಿ ನಿವೇಶನ ತೆಗೆದುಕೊಂಡು ಮನೆ ಕಟ್ಟಿಸಲು ಆರಂಭಿಸಿ ಹಿರಿಯ ಮಗ ಜಗದೀಶ್ ಬಾಬು ಅವರೊಂದಿಗೆ ರಾಜಾಜಿನಗರದಲ್ಲೇ ಇದ್ದ ಪದ್ಮಿನಿ—ರಮೇಶ್ ಅವರ ಮನೆಗೆ ಹತ್ತಿರವಾಗಿ ಒಂದು ಬಾಡಿಗೆ ಮನೆಯಲ್ಲಿದ್ದರು. ನಾವು ಬಸವೇಶ್ವರ ನಗರದಲ್ಲಿದ್ದ ಅಣ್ಣಯ್ಯನ ದೊಡ್ಡ ಮನೆಯಲ್ಲಿಯೇ ಇದ್ದೆವು.

ವಾಸ್ತವವಾಗಿ ನಮ್ಮೆದುರು ಹೆಚ್ಚಿನ ಆಯ್ಕೆಗಳೇನೂ ಇರಲಿಲ್ಲ. ಗುಲ್ಬರ್ಗಾಗೆ ಹೋಗಿ ಕೆಲಸಕ್ಕೆ ರಿಪೋರ್ಟ್ ಮಾಡಿಕೊಂಡು ರಜೆ ಹಾಕಿ ಬರುವುದು; ಇರುವಷ್ಟು ರಜೆ ಮುಗಿದ ಮೇಲೆ ಪರಿಸ್ಥಿತಿ ನೋಡಿಕೊಂಡು ಒಂದಷ್ಟು ದಿನ ಸಂಬಳ ರಹಿತ ರಜೆ ಹಾಕಿ ಬೆಂಗಳೂರಿನಲ್ಲೇ ಬೇರೆ ಕೆಲಸಗಳು ಸಿಕ್ಕರೆ ಮಾಡಿಕೊಂಡಿರುವುದು; ಆಮೇಲೆ ಮುಂದಿನದನ್ನು ನೋಡಿಕೊಂಡರಾಯಿತು ಎಂಬ ತೀರ್ಮಾನಕ್ಕೆ ಬಂದೆವು.
ಅದೇ ಪ್ರಕಾರವಾಗಿ ಬೆಂಗಳೂರು ದೂರದರ್ಶನ ಕೇಂದ್ರದಿಂದ ಬಿಡುಗಡೆ ಪಡೆದುಕೊಂಡು ಗುಲ್ಬರ್ಗಾ ಕೇಂದ್ರಕ್ಕೆ ಹೋಗಿ ರಿಪೋರ್ಟ್ ಮಾಡಿಕೊಂಡೆ. ಅಲ್ಲಿ ನಿರ್ದೇಶಕರಿನ್ನೂ ಬಂದಿರಲಿಲ್ಲವಾದ್ದರಿಂದ ಸ್ಟೇಷನ್ ಇಂಜಿನಿಯರ್ ಆಗಿದ್ದ ಪ್ರಸಾದ ರಾವ್ ಅವರೇ ಕೇಂದ್ರದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಮಜುಂದಾರ್ ಎಂಬ ಸಹಾಯಕರೊಬ್ಬರು ಅದಾಗಲೇ ಅಲ್ಲಿ ನಿಯೋಜನೆಗೊಂಡಿದ್ದರು. ಯಾರಿಗೂ ಯಾವ ಕೆಲಸವೂ ಇಲ್ಲದೆ ಸುಮ್ಮನೆ ಹಾಜರಾತಿ ಹಾಕಿ ಒಂದಷ್ಟು ಹೊತ್ತು ಕಾಲ ಕಳೆದು ಮಾಸಾಂತ್ಯದಲ್ಲಿ ಸಂಬಳ ಎಣಿಸಿಕೊಳ್ಳುವುದಷ್ಟೇ ಆಗಿತ್ತು ಗುಲ್ಬರ್ಗಾ ಕೇಂದ್ರದಲ್ಲಿ. ನಾನು ಆಗಾಗ್ಗೆ ಹೋಗಿ ನಾಲ್ಕಾರು ದಿನ ಇದ್ದು ರಜೆ ಹಾಕಿ ಬಂದುಬಿಡುತ್ತಿದ್ದೆ.
ಹೀಗೇ ಸಾಕಷ್ಟು ದಿನಗಳುರುಳಿದ ಮೇಲೆ ಒಂದು ದಿನ ಪ್ರಸಾದ್ ರಾವ್ ಅವರು ಬಾಂಬ್ ಸಿಡಿಸಿದರು: ನಮ್ಮ ಕೇಂದ್ರಕ್ಕೆ ಖಾನ್ ಎಂಬ ನಿರ್ದೇಶಕರು ಬರುತ್ತಿದ್ದಾರೆ! ಸಧ್ಯದಲ್ಲೇ ಅಧಿಕಾರ ಸ್ವೀಕರಿಸಲಿದ್ದಾರೆ! ಹಾಗಾಗಿ ಇನ್ನು ಮುಂದೆ ರಜೆ ಹಾಕಿ ಊರಿಗೆ ಹೋಗುವುದು ಕನಸಿನ ಮಾತು! ಗುಲ್ಬರ್ಗಾ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ಮಾಣ ಕಾರ್ಯ ಆರಂಭವಾಗಿ ಬಿಟ್ಟರೆ ನಾನು ಹೆಚ್ಚಿನಂಶ ಅಲ್ಲಿಯೇ ಇರುವುದು ಅನಿವಾರ್ಯ. ಈ ವಿಷಯ ತಿಳಿದ ಮೇಲೆ ನನಗಿಂತ ಹೆಚ್ಚು ಆತಂಕವಾದುದು ರಂಜನಿಗೆ. ‘ಈ ದೊಡ್ಡ ಮನೆಯಲ್ಲಿ ಚಿಕ್ಕ ಮಗಳೊಬ್ಬಳ ಜೊತೆಗೆ ನಾನೊಬ್ಬಳೇ ಇರಲಾರೆ; ನಾನು ಕೆಲಸಕ್ಕೆ ರಾಜೀನಾಮೆ ಕೊಟ್ಟು ನಿಮ್ಮೊಂದಿಗೇ ಗುಲ್ಬರ್ಗಾಗೆ ಬಂದುಬಿಡುತ್ತೇನೆ” ಎಂದು ಖಡಾಖಂಡಿತವಾಗಿ ಹೇಳಿಬಿಟ್ಟಳು. ನನಗೂ ಅದೇ ಸೂಕ್ತ ನಿರ್ಧಾರ ಎನ್ನಿಸಿತು. ಆದರೆ ರಂಜನಿಯ ಅಣ್ಣ ಜಗದೀಶ ಬಾಬು ಅವರಿಗೆ ನಮ್ಮ ಈ ತೀರ್ಮಾನ ಎಳ್ಳುಕಾಳಿನಷ್ಟೂ ಇಷ್ಟವಾಗಲಿಲ್ಲ. “ಈ ಕಾಲದಲ್ಲಿ ಒಂದು ಕೆಲಸ ಸಿಕ್ಕಬೇಕಾದರೆ ಎಷ್ಟು ಕಷ್ಟ ಪಡಬೇಕು ಗೊತ್ತಾ? ಅಂಥಾದ್ದರಲ್ಲಿ ಸಿಕ್ಕಿರೋ ಇಷ್ಟು ಒಳ್ಳೇ ಕೆಲಸಾನ ಯಾರಾದ್ರೂ ಬಿಡ್ತಾರಾ? ಈಗ ಸಂಬಳ ತುಂಬಾ ಕಡಿಮೆ ಇರಬಹುದು… ಇವತ್ತಲ್ಲ ನಾಳೆ ಸರ್ಕಾರದಿಂದ grants ಬಂದೇ ಬರುತ್ತೆ. ಆಗ ಕೈತುಂಬಾ ಸಂಬಳಾನೂ ಬರುತ್ತೆ ಪೆನ್ಶನ್ನೂ ಬರುತ್ತೆ.. ಕೆಲಸ ಬಿಡೋದು ಮಾತ್ರ ಒಳ್ಳೇ ನಿರ್ಧಾರ ಅಲ್ಲ” ಎಂದು ನಮ್ಮನ್ನು ಕೂರಿಸಿಕೊಂಡು ಬುದ್ಧಿ ಹೇಳಿದರು.ಅವರ ಮಾತಿನಲ್ಲಿ ಹುರುಳಿಲ್ಲದಿರಲಿಲ್ಲ. ನನ್ನ ಮಾವನವರೂ ಸಹಾ ರಂಜನಿಗೆ, “ಹೌದು ಮಗಳೇ..ಬಾಬು ಹೇಳ್ತಿರೋದು ಸರಿಯಾಗಿದೆ..ಒಂದು ಕೆಲಸ ಮಾಡು.. ನೀನೂ ಮಗಳನ್ನು ಕರಕೊಂಡು ಬಂದು ನಮ್ಮ ಜತೇಗೇ ಇದ್ದುಬಿಡು.. ನನಗೂ ಈ ಇಳಿಗಾಲದಲ್ಲಿ ಸ್ವಲ್ಪ ಅನುಕೂಲವಾಗುತ್ತೆ.. ನಿನಗೂ ಜೊತೆಯಾಗುತ್ತೆ” ಎಂದು ರಂಜನಿಯ ಮನ ಒಲಿಸಲು ಯತ್ನಿಸಿದರು. ಆದರೆ ರಂಜನಿಯದು ಒಂದೇ ನಿಲುವು: “ನನಗೆ ಅಷ್ಟಷ್ಟು ದಿನ ಪ್ರಭೂನ ಬಿಟ್ಟಿರೋಕಾಗಲ್ಲ.. ಒಂದ್ಸಲ transfer ಆಗಿ ಹೋದಮೇಲೆ ಮತ್ತೆ ಇಲ್ಲಿಗೆ ಬರ್ತಾರೆ ಅಂತ ಏನು ಗ್ಯಾರಂಟಿ? ಅವರು ಊರೂರು ಸುತ್ತಿಕೊಂಡಿರೋದು.. ನಾನು ಇಲ್ಲಿ ಒಬ್ಬಳೇ ಮಗಳ ಜತೆ ಒದ್ದಾಡಿಕೊಂಡಿರೋದು.. ಇದೆಲ್ಲಾ ನನಗೆ ಕಲ್ಪಿಸಿಕೊಳ್ಳೋಕೂ ಆಗಲ್ಲ. ನಾನು ಕೆಲಸಕ್ಕೆ ರಿಜ಼ೈನ್ ಮಾಡಿ ಪ್ರಭು ಜೊತೆ ಗುಲ್ಬರ್ಗಾಗೆ ಹೋಗೋದೇ ನಿಶ್ಚಯ!” ಎಂದು ಖಡಾಖಂಡಿತವಾಗಿ ನುಡಿದುಬಿಟ್ಟಳು ರಂಜನಿ. ತುಸು ಹೊತ್ತು ಯೋಚಿಸಿದ ಬಾಬು ಮತ್ತೊಂದು ಯೋಜನೆಯನ್ನು ಮುಂದಿಟ್ಟರು: “ಗುಲ್ಬರ್ಗಾಗೆ ಹೋಗುವುದೇನೋ ಸರಿ.. ಆದರೆ ರಾಜೀನಾಮೆ ಯಾಕೆ ಕೊಡಬೇಕು? ಒಂದು ವರ್ಷ ನಿನ್ನ ಜಾಗದಲ್ಲಿ ಬೇರೆ ಯಾರನ್ನಾದರೂ ಪಾಠ ಮಾಡೋಕೆ ಒಪ್ಪಿಸಿಬಿಟ್ಟು ನೀನು ಹೋಗಿ ಬಾ. ಕಾಲೇಜಿನವರು ಆ ಹೊಸಬರಿಗೇ ಸಂಬಳ ಕೊಟ್ಟುಕೊಳ್ಳಲಿ. ಒಂದು ವರ್ಷ ಆದಮೇಲೆ. ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಮಾಡಿದರಾಯ್ತು” ಎಂದರು ಬಾಬು. ಅರೆ! ಇದು ಇನ್ನೂ ಸೂಕ್ತವಾದ ಸಲಹೆ! ಮುಖ್ಯ ಕಾಲೇಜ್ ಅಧಿಕಾರಿ ವರ್ಗದವರು ಇದಕ್ಕೆ ಒಪ್ಪಿಗೆ ಕೊಡಬೇಕು; ಅವರು ಒಪ್ಪಿದರೆ ಒಂದು ವರ್ಷದ ಮಟ್ಟಿಗೆ ಬದಲಿ ಉಪನ್ಯಾಸಕರನ್ನು ಹುಡುಕಬೇಕು! ಸರಿ, ಮರುದಿನವೇ ನಾನು—ರಂಜನಿ ಇಬ್ಬರೂ ಹೋಗಿ ಪ್ರಾಂಶುಪಾಲರಾಗಿದ್ದ ಸಿಸ್ಟರ್ ವಿಯಾನಿ ಅವರನ್ನು ಭೇಟಿಯಾಗಿ ಪರಿಸ್ಥಿತಿಯನ್ನೆಲ್ಲಾ ವಿವರಿಸಿ, ನಮ್ಮ ಯೋಚನೆಯನ್ನೂ ತಿಳಿಸಿ ಅವರ ಸಹಾಯ ಹಸ್ತ ಯಾಚಿಸಿದೆವು. ಸಾಕಷ್ಟು ಸಮಯ ಯೋಚಿಸಿದ ಬಳಿಕ ಸಿಸ್ಟರ್ ವಿಯಾನಿಯವರು ಹೀಗೆಂದರು: “ರಂಜನಿಯಂತಹ ಒಳ್ಳೆಯ ಉಪನ್ಯಾಸಕಿಯನ್ನು ನಾವು ಕಳೆದುಕೊಳ್ಳಲು ಸಿದ್ಧರಿಲ್ಲ. ಆದರೆ ನಾವು ಅಧಿಕೃತವಾಗಿ ನಿಮ್ಮನ್ನು ಕಳಿಸಲಾಗಲೀ ಇನ್ನೊಬ್ಬರನ್ನು ನೇಮಿಸಿಕೊಳ್ಳಲಾಗಲೀ ಬರುವುದಿಲ್ಲ.. ಇದು ನಮ್ಮ—ನಿಮ್ಮ ನಡುವಿನ ಒಂದು ಒಪ್ಪಂದ ಅಷ್ಟೇ. ಒಬ್ಬ ಒಳ್ಳೆಯ ಉಪನ್ಯಾಸಕರನ್ನು ನೀವೇ ಸೂಚಿಸಿ. ಅವರಿಗೆ ನಾವು ಸಂಬಳ ಕೊಡುತ್ತೇವೆ. ನೀವು ತಿಂಗಳಿಗೊಮ್ಮೆ ಬಂದು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ ಹೋಗಬೇಕು. ಒಂದು ವರ್ಷ ನಿಮಗೆ ಸಂಬಳವಿಲ್ಲದ ರಜೆ.”
ಅಲ್ಲಿಗೆ ಒಂದು ಸಮಸ್ಯೆ ಪರಿಹಾರವಾದಂತಾಯಿತು. ಇನ್ನು ಬದಲಿ ಉಪನ್ಯಾಸಕರನ್ನು ಹುಡುಕಿ ನೇಮಿಸಬೇಕು! ಆ ತಕ್ಷಣಕ್ಕೆ ನನಗೆ ನೆನಪಾದ ಹೆಸರು ಆತ್ಮೀಯ ಗೆಳೆಯ ನರಹಳ್ಳಿ ಬಾಲಸುಬ್ರಹ್ಮಣ್ಯ.ನಮ್ಮ ಸಮಸ್ಯೆಯನ್ನು ಅರಿತು ಕೊಂಡ ಮರುಗಳಿಗೆ ಗೆಳೆಯ ಬಾಲು ಹೇಳಿದ್ದು ಇಷ್ಟು: “ಈ ವಿಚಾರ ನೀವೇನೂ ಚಿಂತಿಸಬೇಡಿ. ನೀವು ಆರಾಮಾಗಿ ಗುಲ್ಬರ್ಗಾಗೆ ಹೊರಡೋ ಸಿದ್ಧತೆ ಮಾಡಿಕೊಳ್ಳಿ. ಇಲ್ಲಿಯ ವ್ಯವಸ್ಥೆ ನಾನು ನೋಡಿಕೋತೀನಿ. ನಾನೇ ಟೈಮ್ ಟೇಬಲ್ ಹೊಂದಿಸಿಕೊಂಡು ಹೋಗಿ ಪಾಠ ಮಾಡಿ ಬರ್ತೀನಿ ಆಯ್ತೇ?”. ಗೆಳೆಯನಿಂದ ಇಂಥ ಆಶ್ವಾಸನೆ ದೊರೆತ ಮೇಲೆ ಮನಸ್ಸಿಗೆ ನಿರಾಳವಾಗಿಹೋಯಿತು. ಪತ್ನಿ ಪುತ್ರಿಯರ ಸಮೇತ ನಾನು ಗುಲ್ಬರ್ಗಾಗೆ ಹೋಗುವುದು ಖಚಿತವಾಗಿ ಹೋಯಿತು. ಅದುವರೆಗೆ ನಾನೊಬ್ಬನೇ ಗುಲ್ಬರ್ಗಾಗೆ ಹೋಗಿಬರುತ್ತಿದ್ದಾಗಲೆಲ್ಲಾ ಕೆಲವೊಮ್ಮೆ ಹೋಟಲಿನಲ್ಲಿ, ಕೆಲವೊಮ್ಮೆ ಗೆಳೆಯರ ಜತೆ ಉಳಿದುಕೊಳ್ಳುತ್ತಿದ್ದೆ. ಗುಲ್ಬರ್ಗಾ ಆಕಾಶವಾಣಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಉಮೇಶ್ ಹಾಗೂ ಶಿವಲಿಂಗಯ್ಯನವರು ಅದಾಗಲೇ ನನ್ನ ಆತ್ಮೀಯ ವಲಯಕ್ಕೆ ಸೇರಿಬಿಟ್ಟಿದ್ದರು. ಆಕಾಶವಾಣಿ ಕೇಂದ್ರಕ್ಕೆ ಸಮೀಪದಲ್ಲೇ ಇದ್ದ ಅವರ ಮನೆಯಲ್ಲಿ ಅನೇಕ ಬಾರಿ ನಾನು ತಂಗಿದ್ದುಂಟು. ಆದರೆ ಈಗ ಕುಟುಂಬ ಸಮೇತ ಹೋಗುವಾಗ ನಮ್ಮದು ಎಂದು ಒಂದು ಮನೆ ಮಾಡಿಕೊಳ್ಳಬೇಕಲ್ಲಾ! ಸರಿ,.. ನಾನು ಮೊದಲು ಹೋಗಿ ಒಂದು ಮನೆ ಬಾಡಿಗೆಗೆ ಹಿಡಿದು ನಂತರ ರಂಜನಿ—ರಾಧಿಕಾರನ್ನು ಕರೆದುಕೊಂಡು ಹೋಗುವುದೆಂದು ನಿಶ್ಚಯಿಸಿದೆ. ಗುಲ್ಬರ್ಗಾ ಕೇಂದ್ರದಲ್ಲಿ ನನಗೆ ಸಹಾಯಕರಾಗಿದ್ದ ಮಜುಂದಾರ್ ಅವರೊಂದಿಗೆ ಗುಲ್ಬರ್ಗಾದ ಕಾಲನಿಗಳಲ್ಲೆಲ್ಲಾ ಮನೆ ಹುಡುಕಿ ಸುಸ್ತಾಗಿ ಕೊನೆಗೆ ಯಾವುದೋ ಒಂದು ಸುಮಾರಾಗಿದ್ದ ಮನೆಯನ್ನೇ ಗೊತ್ತು ಮಾಡಿಕೊಂಡು ಮುಂಗಡ ಹಣವನ್ನೂ ನೀಡಿ ಬಂದುಬಿಟ್ಟೆ. ಲಾರಿಯಲ್ಲಿ ಮನೆಯ ಸಾಮಾನು ಸರಂಜಾಮುಗಳೆಲ್ಲವನ್ನೂ ಆ ಮನೆಗೆ ಸಾಗಿಸಿದ್ದೂ ಆಯಿತು. ಅದೇ ವೇಳೆಗೆ ಕಾರ್ಯನಿಮಿತ್ತ ಗುಲ್ಬರ್ಗಾಗೆ ಬಂದಿದ್ದ ನನ್ನ ಷಡ್ಡಕ—ಪದ್ಮಿನಿಯ ಪತಿ ರಮೇಶ್, ನಾನು ಬಾಡಿಗೆಗೆ ಹಿಡಿದಿದ್ದ ಮನೆಯನ್ನು ನೋಡಿ ದಂಗಾಗಿಬಿಟ್ಟರು! ‘ಪ್ರಭೂ, ಈ ಮನೇಗೆ ರಂಜನಿ—ರಾಧಿಕಾರನ್ನ ಕರಕೊಂಡು ಬರ್ತೀರಾ? No no no… not at all advisable.. ಈ ಮನೆ ವಾಸ ಮಾಡೋಕೆ ಯೋಗ್ಯವಾದ ಸ್ಥಿತೀಲಿಲ್ಲ’ ಎಂದುಬಿಟ್ಟರು ರಮೇಶ್. ‘ನೀವು ಆದಷ್ಟು ಬೇಗ ಬೇರೆ ಮನೆ ಹುಡುಕೋದು ಒಳ್ಳೇದು’ ಎಂದು ಸಲಹೆ ನೀಡಿ ಅಂದು ರಾತ್ರಿ ರಮೇಶ್ ಬಾಂಬೆಗೆ ಹೊರಟರು. ನಿಜವೇ!ಅವಸರದಲ್ಲಿ ತೀರ್ಮಾನಿಸಿ ಹಿಡಿದ ಮನೆ! ಚಿತ್ರ ವಿಚಿತ್ರವಾಗಿದ್ದ ವಿನ್ಯಾಸ.. ಮನೆಯ ಹಿಂಭಾಗದಲ್ಲಿ ಹೊರಭಾಗದಲ್ಲಿ ಪ್ರತ್ಯೇಕವಾಗಿದ್ದ ಅಡುಗೆ ಮನೆ.. ಮನೆಯ ತುಂಬಾ ಪುಟ್ಟ ಮೊಸಳೆಗಳಂತಹ ಹಲ್ಲಿಗಳು.. ಛೇ! ಈ ಮನೆ ಖಂಡಿತಾ ವಾಸಯೋಗ್ಯವಲ್ಲ! ಆದರೆ ಈಗೇನು ಮಾಡುವುದು? ಇದರ ಜತೆಗೆ ರಂಜನಿ—ರಾಧಿಕಾ ಮರುದಿನ ಟ್ರೈನ್ ನಲ್ಲಿ ಬಂದಿಳಿಯುವವರಿದ್ದಾರೆ! ಏನಾದರೂ ನಿರ್ಧಾರ ಮಾಡಲೇಬೇಕು! ಕೂಡಲೇ ಕಾರ್ಯೋನ್ಮುಖನಾದೆ. ಮರುದಿನಕ್ಕೆ, ನಾನು ಬಂದಾಗ ಉಳಿದುಕೊಳ್ಳುತ್ತಿದ್ದ ಹೋಟಲ್ ನಲ್ಲೇ ಒಂದು ರೂಂ ಕಾದಿರಿಸಿದೆ.
ಮರುದಿನವೇ ಸಂಜೆ ಮರಳಿ ಹೊರಡಲು ರಂಜನಿ—ರಾಧಿಕಾರಿಗೆ ಟ್ರೈನ್ ಟಿಕೆಟ್ ಕಾದಿರಿಸಿದೆ. ಮರುದಿನ ಮುಂಜಾನೆ ಸಂಭ್ರಮದಿಂದ ಬಂದಿಳಿದ ಪತ್ನಿ—ಪುತ್ರಿಯರನ್ನು ಸೀದಾ ಹೋಟೆಲಿಗೆ ಕರೆದುಕೊಂಡು ಹೋಗಿ ಆದದ್ದೆಲ್ಲವನ್ನೂ ವಿವರಿಸಿದೆ. ಸಂಸಾರ ಹೂಡಲು ಸಿದ್ಧಳಾಗಿ ಬಂದಿದ್ದ ರಂಜನಿಗಂತೂ ಅತೀವ ನಿರಾಸೆಯಾಗಿ ಹೋಯಿತು. “ಆದಷ್ಟು ಬೇಗ ಒಳ್ಳೆಯ ಮನೆ ಹಿಡಿದು ಕರೆಸಿಕೊಳ್ಳುತ್ತೇನೆ.. ಬೇಸರ ಪಟ್ಟುಕೊಳ್ಳಬೇಡ” ಎಂದು ಸಮಾಧಾನ ಹೇಳಿ ಕಳಿಸಿದೆ. ಈಗ ಗುಲ್ಬರ್ಗಾದಲ್ಲಿ ವಿಪರೀತ ನೀರಿನ ತೊಂದರೆಯಾಗಿದೆ.. ಅದಕ್ಕಾಗಿಯೇ ಮರಳಿ ಬಂದಿದ್ದೇವೆ.. ಪರಿಸ್ಥಿತಿ ಸುಧಾರಿಸಿದ ತಕ್ಷಣ ಮರಳಿ ಹೋಗುತ್ತೇವೆ” ಎಂದು ಬೆಂಗಳೂರಿನಲ್ಲಿ ಎಲ್ಲರಿಗೂ ಹೇಳುವಂತೆ ಸೂಚನೆ ಕೊಡುವುದನ್ನು ಮರೆಯಲಿಲ್ಲ!
ಅವರನ್ನು ಕಳಿಸಿದ ತಕ್ಷಣ ಮತ್ತೆ ಶುರುವಾಯಿತು ಮನೆಬೇಟೆ. ಅದೃಷ್ಟವೆಂಬಂತೆ ಮಜುಂದಾರರ ಪರಿಚಯದವರೊಬ್ಬರ ಮನೆಯಲ್ಲಿ ಬಾಡಿಗೆಗೆ ಇದ್ದವರು ವರ್ಗವಾಗಿ ಹೋಗುವವರಿದ್ದರು. ಕೂಡಲೇ ಹೋಗಿ ಸ್ಟೇಟ್ ಬ್ಯಾಂಕ್ ಉದ್ಯೋಗಿಯಾಗಿದ್ದ ಮನೆ ಮಾಲೀಕ ರಾಘವೇಂದ್ರ ಕಲ್ಲೂರ್ ಕರ್ ಅವರನ್ನು ಭೇಟಿಯಾದೆವು. ಮಾತುಕತೆ ಮುಗಿದು ಬರುವ ಮೊದಲ ತೇದಿಗೆ ಮನೆ ನಮ್ಮ ಸುಪರ್ದಿಗೆ ನೀಡುವುದೆಂದು ತೀರ್ಮಾನವಾಯಿತು.
ಒಂದು ರೂಂ, ವರಾಂಡಾ ಹಾಗೂ ಹಾಲ್ ಗಳಿದ್ದ ಆ ಮನೆ ಸೊಗಸಾಗಿತ್ತು.. ಅನುಕೂಲಕರವಾಗಿತ್ತು. ಎದುರಿಗೆ ರಾಯರ ಮಠ ಬೇರೆ. ಸಜ್ಜನಿಕೆಯೇ ಮೈವೆತ್ತಿ ಬಂದವರಂತಿದ್ದ ರಾಘವೇಂದ್ರ ಕಲ್ಲೂರ್ ಕರ್ ಅವರು ಕೆಳಗಡೆ ಮನೆಯಲ್ಲಿ ಪತ್ನಿ ಹಾಗೂ ತಮ್ಮ ಮೂರು ಮಕ್ಕಳೊಂದಿಗಿದ್ದರು. ಮೇಲೆ ಮೊದಲ ಮಹಡಿಯಲ್ಲಿ ನಮ್ಮ ಮನೆ. ಅಲ್ಲಿ ವಾಸವಾಗಿದ್ದವರು ಮನೆ ಖಾಲಿ ಮಾಡಿ ಹೊರಡುತ್ತಿದ್ದಂತೆಯೇ ಒಂದು ಬೆಳಿಗ್ಗೆ ಪುಟ್ಟ ಲಾರಿಯೊಂದನ್ನು ಬಾಡಿಗೆಗೆ ಹಿಡಿದು ಮನೆಯ ಸಾಮಾನು ಸರಂಜಾಮುಗಳೆಲ್ಲವನ್ನೂ ಹೊಸ ಮನೆಗೆ ಸಾಗಿಸಿದೆ. ಮನೆ ಸಿಕ್ಕ ಸಂಭ್ರಮ—ಉಮೇದಿನಲ್ಲಿ ಇಡೀ ದಿನ ಏಕಾಂಗವೀರನಾಗಿ ಶ್ರಮಪಟ್ಟು ಮನೆಯನ್ನೆಲ್ಲಾ ಸಜ್ಜುಗೊಳಿಸಿಬಿಟ್ಟೆ. ಹೊಸ ಮನೆಗೆ ಪತ್ನಿ ಪುತ್ರಿಯರನ್ನು ಕರೆತರಲು ಅಂದೇ ರಾತ್ರಿ ಎರಡೂವರೆ ಸುಮಾರಿಗೆ ಗುಲ್ಬರ್ಗಾ ಸ್ಟೇಷನ್ ಗೆ ಬರುತ್ತಿದ್ದ ಕೆ ಕೆ ಎಕ್ಸ್ ಪ್ರೆಸ್ ಹತ್ತಿ ಬೆಂಗಳೂರಿಗೆ ಹೊರಟುಬಿಟ್ಟೆ. ರೈಲಿನಲ್ಲಿ ಬೆಳಿಗ್ಗೆ ಏಳುತ್ತಿದ್ದಂತೆ ಸಿಡಿದು ಹೋಗುವಷ್ಟು ತಲೆಯ ನೋವು.. ಕೆಂಡದಂಥ ಜ್ವರ! ಏಳಲೂ ಆಗುತ್ತಿಲ್ಲ.. ಕೂರಲೂ ಆಗುತ್ತಿಲ್ಲ. ಹಾಗೇ ಸಂಕಟದಲ್ಲೇ ನರಳಿಕೊಂಡು ಮಲಗಿದ್ದೆ. ರೈಲು ಬೆಂಗಳೂರು ತಲುಪಿದ್ದು ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ. ಆ ಜ್ವರದ ತಾಪದಲ್ಲಿ ಅದು ಹೇಗೆ ಆಟೋ ಹಿಡಿದು ಮಾವನವರ ಮನೆ ತಲುಪಿದೆನೋ ಕಾಣೆ.. ಮನೆಗೆ ಹೋಗಿ ಹಾಸಿಗೆಯ ಮೇಲೆ ಬಿದ್ದದ್ದಷ್ಟೇ ಗೊತ್ತು ನನಗೆ..ನಂತರದ್ದು ಹೆಚ್ಚು ಕಡಿಮೆ ಪ್ರಜ್ಞಾಹೀನ ಸ್ಥಿತಿ. ಅದೇ ಸಮಯಕ್ಕೆ ಸರಿಯಾಗಿ ರಂಜನಿ ರಾಧಿಕಾಳನ್ನೂ ಕರೆದುಕೊಂಡು ‘ಎರಡು ದಿನ ರಾಜಿಯ ಮನೆಗೆ ಹೋಗಿಬರುತ್ತೇನೆ’ ಎಂದು ಮೈಸೂರಿಗೆ ಹೊರಟು ಹೋಗಿದ್ದಳು!
ಅಪ್ಪ—ಅಣ್ಣನಿಗೆ ಊಟ ಕೊಡಲೆಂದು ಬಂದಿದ್ದ ನನ್ನ ನಾದಿನಿ ಪದ್ಮಿನಿ ನನ್ನ ಸ್ಥಿತಿಯನ್ನು ನೋಡಿ ಗಾಬರಿಯಾಗಿಬಿಟ್ಟಳು. ಒಂದೆಡೆ ಜ್ವರ ಜಾಸ್ತಿಯಾಗುತ್ತಿದೆ.. ತಲೆನೋವಿನ ಬಾಧೆಗೆ ಕಣ್ಣು ತೆರೆಯಲೂ ಆಗುತ್ತಿಲ್ಲ! ‘ಇಲ್ಲಿ ನಿಮಗೆ ಭಾವನ್ನ ನೋಡಿಕೊಳ್ಳೋದಕ್ಕೆ ಆಗಲ್ಲ.. ನಾನು ನಮ್ಮನೇಗೆ ಕರಕೊಂಡು ಹೋಗ್ತೀನಿ.. ರಮೇಶ್ ಬರ್ತಿದ್ದ ಹಾಗೇ ಡಾಕ್ಟರಿಗೆ ತೋರಿಸಿಕೊಂಡು ಬರ್ತೀವಿ” ಎಂದವಳೇ ಆ ತಕ್ಷಣವೇ ಒಂದು ಆಟೋ ಹಿಡಿದು ಸನಿಹದಲ್ಲೇ ಇದ್ದ ಅವರ ಮನೆಗೆ ನನ್ನನ್ನು ಕರೆದುಕೊಂಡು ಹೊರಟುಬಿಟ್ಟಳು. ಬೆರಳಿನಿಂದ ನೂಕಿದರೆ ಬಿದ್ದುಹೋಗುವಷ್ಟು ನಿತ್ರಾಣನಾಗಿದ್ದ ನನಗಂತೂ ಏನೂ ಬೋಧವೇ ಇಲ್ಲದಂಥ ಸ್ಥಿತಿ. ವಿಷಯ ತಿಳಿದ ಕೂಡಲೇ ಆಫೀಸಿನಿಂದ ಹೊರಟು ಬಂದ ನನ್ನ ಷಡ್ಡಕ ರಮೇಶ್, ಹತ್ತಿರದಲ್ಲೇ ಇದ್ದ ಡಾ॥ ಪ್ರಭುಸ್ವಾಮಿಯವರ ಮನೆಗೇ ನನ್ನನ್ನು ಕರೆದುಕೊಂಡು ಹೋಗಿ ಇಂಜಕ್ಷನ್ ಕೊಡಿಸಿಕೊಂಡು ಬಂದರು. ವಿಷಯ ತಿಳಿದ ಮರುದಿನವೇ ರಂಜನಿಯೂ ಪುಟಾಣಿಯೊಂದಿಗೆ ಧಾವಿಸಿ ಬಂದಳು. ಅದು ತನಕ ಪದ್ಮಿನಿಯಂತೂ ಅದಾವ ಪರಿಯಲ್ಲಿ ಉಪಚರಿಸಿ ನನ್ನನ್ನು ನೋಡಿಕೊಂಡಳೆಂದರೆ ಅದಾವ ಜನ್ಮದ ತಾಯಿಯೋ ಈ ಹೆಣ್ಣು ಮಗಳು ಅನ್ನಿಸಿಬಿಟ್ಟಿತು. ಮೂರು ನಾಲ್ಕು ದಿನಗಳು ಪದ್ಮಿನಿಯ ಮನೆಯಲ್ಲೇ ಇದ್ದು ವಿಶ್ರಾಂತಿ ಪಡೆದು ಚೇತರಿಸಿಕೊಂಡ ಮೇಲೆ ಗುಲಬರ್ಗಾಗೆ ಹೊರಡಲು ಸಿದ್ಧರಾದೆವು. ಹೊಸ ಊರಿನಲ್ಲಿ ಹೊಸ ಬದುಕಿನ ಹೊಚ್ಚಹೊಸ ಅಧ್ಯಾಯ ಆರಂಭಗೊಳ್ಳಲಿತ್ತು. ಈ ಹೊಸ ಅಧ್ಯಾಯದ ಪುಟಗಳಲ್ಲಿ ಅದೇನೇನು ಅಚ್ಚರಿಗಳು ತುಂಬಿವೆಯೋ.. ಅದಾವ ಆತಂಕಗಳು ಎದುರಾಗಲಿವೆಯೋ.. ಅದಾವ ಅನೂಹ್ಯ ಅನುಭವ ಲೋಕ ತೆರೆದುಕೊಳ್ಳಲಿದೆಯೋ.. ಎಂಬ ನೂರೆಂಟು ಪ್ರಶ್ನೆಗಳೊಂದಿಗೆ ಆರಂಭವಾಯಿತು ನಮ್ಮ ಗುಲ್ಬರ್ಗಾ ಯಾತ್ರೆ!
। ಇನ್ನು ಮುಂದಿನ ವಾರಕ್ಕೆ ।






0 Comments