ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿವಾಸ ಪ್ರಭು ಅಂಕಣ- ನಾನು ಮೂಕಪ್ರೇಕ್ಷಕ!..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

53

ಅಂದು ಕಲಾಕ್ಷೇತ್ರದ ಹಿಂಬದಿಯಲ್ಲಿದ್ದ ಬಯಲು ರಂಗ ಮಂದಿರದಲ್ಲಿ ಯಕ್ಷಗಾನದ ಯಾವುದೋ ಪ್ರಸಂಗದ ಪ್ರದರ್ಶನ ಆಯೋಜನೆಗೊಂಡಿತ್ತು. ನಾವು ಇನ್ನೇನು ನಮ್ಮ ಬೆಕೆಟ್ ನಾಟಕದ ಪ್ರಥಮ ದೃಶ್ಯವನ್ನು ಪ್ರಾರಂಭಿಸಬೇಕು,ಅಷ್ಟರಲ್ಲಿ ಹಿಂಬದಿಯಲ್ಲಿ ಚಂಡೆ ವಾದ್ಯ ಢಮಢಮ ಮೊಳಗತೊಡಗಿತು! ನಡುವೆ ಇದ್ದ ದೊಡ್ಡ ಕಬ್ಬಿಣದ ಷಟರ್ ಅನ್ನು ಭೇದಿಸಿಕೊಂಡು ಬಂದು ಆ ರಣವಾದ್ಯದ ನಾದ ಈ ಬದಿಯ ವೇದಿಕೆಯ ಮೇಲಿದ್ದ ನಮ್ಮ ಕಿವಿಗಪ್ಪಳಿಸತೊಡಗಿತು.ಎಲ್ಲಿಯ ಇಂಗ್ಲೆಂಡಿನ ದೊರೆ ಹೆನ್ರಿ,ಛಾನ್ಸಲರ್ ಬೆಕೆಟ್…ಎಲ್ಲಿಯ ಚಂಡೆಯ ರಣದುಂದುಭಿ! ಆ ರಣ ಭಯಂಕರ ನಾದದಡಿಯಲ್ಲಿ ಅಬ್ಬೂರು ಜಯತೀರ್ಥ ಅವರು ಬಲು ಜತನದಿಂದ ಸಂಯೋಜಿಸಿದ್ದ ಜುಳುಜುಳು ಹರಿಯುವ ನದಿಯ ನಾದದಂತಹ ಮಧುರ ಸಂಗೀತದ ಅಲೆಗಳು ಅಡಗಿಹೋಗಿ ನಾವು ಒಮ್ಮೆಗೇ ದಿಕ್ಕು ತಪ್ಪಿದವರಂತಾಗಿಬಿಟ್ಟೆವು.

ವೇದಿಕೆಯ ಹಿಂಭಾಗದಲ್ಲಿದ್ದರಂತೂ ಚಂಡೆಯ ಅಬ್ಬರದಲ್ಲಿ ನಮ್ಮ ಮಾತು ನಮಗೇ ಕೇಳದಂತಹ ಪರಿಸ್ಥಿತಿ! ಬಲು ಕಷ್ಟಪಟ್ಟು ಏಕಾಗ್ರಚಿತ್ತತೆಯನ್ನು ಕಾಪಾಡಿಕೊಂಡು ಪಾತ್ರಗಳಲ್ಲಿ ತನ್ಮಯತೆಯನ್ಮು ಸಾಧಿಸಲು ಹರಸಾಹಸವನ್ನೇ ಪಡಬೇಕಾಯಿತು.ಪ್ರೇಕ್ಷಾಗೃಹಕ್ಕೆ ಪುಣ್ಯವಶಾತ್ ಚಂಡೆಯ ನಾದ ಅಷ್ಟಾಗಿ ತಲುಪುತ್ತಿರಲಿಲ್ಲವೆನ್ನುವುದೇ ಸಮಾಧಾನದ ಸಂಗತಿಯಾಗಿದ್ದರೂ ಇಡೀ ನಾಟಕವನ್ನು ನಾವು ಆ ರಣಘೋಷಗಳ ನಡುವೆಯೇ ದಡ ಮುಟ್ಟಿಸಬೇಕಾಯಿತು.

ಒಟ್ಟಿನಲ್ಲಿ ಮೊದಲ ಪ್ರದರ್ಶನದಷ್ಟು ಅಂದಿನ ಪ್ರದರ್ಶನ ಕಳೆಗಟ್ಟಲಿಲ್ಲ ಅನ್ನುವುದಂತೂ ಸತ್ಯ. ಆದರೆ ಹಣಕೊಟ್ಟು ನಾಟಕ ನೋಡಲು ಬಂದ ಪ್ರೇಕ್ಷಕರಿಗೆ ನಾವು ಸಮಜಾಯಿಷಿ ಕೊಡಲಾದೀತೇ? ಸಬೂಬುಗಳನ್ನು ಹೇಳಲಾದೀತೇ? ಮತ್ತೆ ಮತ್ತೆ ಕಾರಂತ ಮೇಷ್ಟ್ರ ಮಾತುಗಳು ನೆನಪಾದವು: ” ನಾಟಕದ ಪ್ರತಿ ಪ್ರಯೋಗವೂ ಮೊದಲ ಪ್ರದರ್ಶನದಂತೆ ಹೊಸದೇ! ಪ್ರತಿ ಪ್ರದರ್ಶನದಲ್ಲೂ ಅಷ್ಟೇ ಕಟ್ಟೆಚ್ಚರದಿಂದ,ಜತನದಿಂದ ರಂಗಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು!” ಏನೇ ಆಗಲಿ,ನಮ್ಮ ಹತೋಟಿ ಮೀರಿ ಆದ ಅನಾಹುತಗಳಿಗೆ ನಾವು ಬಾಧ್ಯರಲ್ಲದಿದ್ದರೂ ಆ ಕಾರಣಗಳು ಪ್ರೇಕ್ಷಕರಿಗೆ ಅಪ್ರಸ್ತುತ! ಒಟ್ಟಾರೆ ಅಂದಿನ ಪ್ರದರ್ಶನಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದವು. ಮೊದಲ ಬಾರಿಗೆ ನಾಟಕ ನೋಡಿದವರಿಗೆ ಪ್ರದರ್ಶನ ಚೆನ್ನಾಗಿಯೇ ಆಯಿತೆನಿಸಿದರೂ ಹಿಂದಿನ ದಿನದ ಪ್ರದರ್ಶನವನ್ನೂ ನೋಡಿದ್ದ ಕೆಲವರು ತುಲನೆಯಲ್ಲಿ ತಕ್ಕಮಟ್ಟಿಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಇತ್ತ ನಮ್ಮ ವಿಮರ್ಶಕ ಮಹೋದಯರು, ಮೊದಲೇ ನನ್ನ ಮೇಲಿನ ಪ್ರಚಂಡ ಸಿಟ್ಟಿನಿಂದ ಉರಿಯುತ್ತಿದ್ದರಲ್ಲಾ..ಅವರಿಗಂತೂ ತೂಕಡಿಸುವವನಿಗೆ ಹಾಸಿಗೆ ಹಾಸಿಕೊಟ್ಟಂತಾಗಿಹೋಯಿತು! ನನ್ನ ಮೇಲಿದ್ದ ಸಿಟ್ಟೆಲ್ಲವನ್ನೂ ಕಾರಿಕೊಂಡು ನಾಟಕದ ಬಗ್ಗೆ ಅತ್ಯಂತ ಕೆಟ್ಟ ವಿಮರ್ಶೆಯನ್ನು ಬರೆದೇಬಿಟ್ಟರು.

ಅಂದು ಶುಕ್ರವಾರ, ನಾಟಕ ವಿಮರ್ಶೆ ಪತ್ರಿಕೆಯಲ್ಲಿ ಪ್ರಕಟವಾಗುವ ದಿನ…ಗೆಳೆಯ ಗೋಪಾಲಿಯ ಮನೆಯಲ್ಲಿ ಮಲಗಿದ್ದ ನಾನು ನಸುಕಿನಲ್ಲೇ ಎದ್ದು ಪೇಪರ್ ಮಾರುವ ಹುಡುಗರು ಪತ್ರಿಕೆಗಳನ್ನು ಒಟ್ಟುಹಾಕಿಕೊಂಡು ಜೋಡಿಸಿಕೊಳ್ಳುತ್ತಿದ್ದ ಜಾಗಕ್ಕೆ ಹೋಗಿ,ಅವರು ಬರುವವರೆಗೂ ಕಾದಿದ್ದು ಪೇಪರ್ ಖರೀದಿಸಿ ಲಗುಬಗೆಯಿಂದ ಪುಟಗಳನ್ನು ತಿರುಗಿಸಿ ನೋಡಿದೆ. ನಡುವಿನ ಪುಟದಲ್ಲಿ ದೊಡ್ಡ ಅಕ್ಷರಗಳಲ್ಲಿ ರಾರಾಜಿಸುತ್ತಿದ್ದ ವಿಮರ್ಶೆಯ ತಲೆಬರಹ ಕಣ್ಣಿಗೆ ರಾಚಿತು:” ಬೆಕೆಟ್ ದುರ್ಬಲ ಪ್ರಯೋಗ” ! ಆಣೆ ಮಾಡಿ ಹೇಳುತ್ತೇನೆ,ನಾಟಕವನ್ನು ಮೆಚ್ಚಿ ಅವರು ಬರೆಯಬಹುದೆಂಬ ಸಾಸಿವೆ ಕಾಳಿನಷ್ಟು ನಿರೀಕ್ಷೆಯೂ ನನಗಿರಲಿಲ್ಲ.ಆದರೆ ಆ ಮಟ್ಟಿನ ತೇಜೋವಧೆಯನ್ನು ಖಂಡಿತಾ ನಾನು ನಿರೀಕ್ಷಿಸಿರಲಿಲ್ಲ. “ಮೂಲನಾಟಕದ ನೆರಳೂ ಕನ್ನಡ ಅವತರಣಿಕೆಯಲ್ಲಿ ಕಾಣಲಿಲ್ಲ” ಎಂದು ಟೀಕಿಸಿದ್ದ ವೈಕುಂಠರಾಜು ಅವರಿಗೆ ನಮ್ಮ ಪ್ರದರ್ಶನದಲ್ಲಿ ಒಂದಾದರೂ ಧನಾತ್ಮಕ ಅಂಶ ಗೋಚರವಾಗಲೇ ಇಲ್ಲ! ನಾನು ‘ಹ್ಯಾಮ್ಲೆಟ್ ಪಾತ್ರದ ಗುಂಗಿನಿಂದ ಹೊರಬರಲು ತಿಣುಕುತ್ತಿದ್ದೆ’ನೆಂದು ಬೇರೆ ವ್ಯಾಖ್ಯಾನಿಸಿದ್ದರು! ಹ್ಯಾಮ್ಲೆಟ್ ಹಾಗೂ ಬೆಕೆಟ್ —ಈ ಎರಡೂ ಅತ್ಯಂತ ಭಿನ್ನ ಮನೋಧರ್ಮದ, ಎರಡು ಬೇರೆ ಬೇರೆ ಧೃವಗಳಂತೆ ತೋರುವ ವ್ಯಕ್ತಿತ್ವಗಳು! ಪ್ರಯತ್ನ ಪಟ್ಟರೂ ಒಂದು ಪಾತ್ರ ಇನ್ನೊಂದರ ತೆಕ್ಕೆಗೆ ನಿಲುಕುವ ಅಥವಾ ನೆರಳಾಗುವ ಕಿಂಚಿತ್ ಸಾಧ್ಯತೆಯೂ ಇಲ್ಲ! ಆಂಗಿಕ—ವಾಚಿಕಗಳ ಮಾದರಿಗಳೂ ಸಂಪೂರ್ಣವಾಗಿ ಬೇರೆ ಬೇರೆಯಾದುವು! ಅಂದ ಮೇಲೆ ಹ್ಯಾಮ್ಲೆಟ್ ನ ‘ಗುಂಗು’ಗಳು ಬೆಕೆಟ್ ನನ್ನು ಕಾಡುವುದಾದರೂ ಹೇಗೆ? ಆದರೆ ಒಬ್ಬರ ತೇಜೋವಧೆಗೆ ಕಂಕಣ ತೊಟ್ಟು ನಿಂತವರಿಗೆ ಇಂಥದ್ದೆಲ್ಲಾ ಗೋಚರವಾಗುವುದಾದರೂ ಹೇಗೆ! ವಸ್ತುನಿಷ್ಠ ವಿಮರ್ಶೆಯಾಗಿ ಪ್ರದರ್ಶನದ ಲೋಪದೋಷಗಳನ್ನೂ ಉತ್ತಮ ಅಂಶಗಳನ್ನೂ ಎತ್ತಿ ತೋರಿಸುವುದಾದರೆ ಬೇರೆಯ ಮಾತು; ಪೂರ್ವಗ್ರಹ ಪೀಡಿತರಾಗಿ ಟೀಕಿಸುವುದನ್ನೇ ಗುರಿಯಾಗಿಟ್ಟುಕೊಂಡು ಪೂರ್ವನಿರ್ಧರಿತ ವಿಮರ್ಶೆಯನ್ನು ಕಾರುವುದು ಬೇರೆಯ ಮಾತು!ಆ ವಿಮರ್ಶೆ ನನ್ನನ್ನು ಕಂಗೆಡಿಸಿದ್ದಂತೂ ಸತ್ಯ.

ಆ ಮಟ್ಟಿಗೆ ಆ ವಿಮರ್ಶಕರ ಉದ್ದೇಶವೂ ಈಡೇರಿದಂತೆ ಆಯಿತು ಎನ್ನಿ! ಬಹುಶಃ ರಿಚಿ—ಗೋಪಾಲಿ ಹಾಗೂ ಇನ್ನಿತರ ಗೆಳೆಯರ ಸಂತೈಕೆ ಇಲ್ಲದಿದ್ದರೆ ಆ ಕೊರಗು ನನ್ನನ್ನು ಮತ್ತಷ್ಟು ಬಾಧಿಸುತ್ತಿತ್ತೇನೋ..ಇರಲಿ. ಅಂದಿನ ಪ್ರದರ್ಶನಕ್ಕೆ ಬಂದಿದ್ದ ಮತ್ತೂ ಕೆಲ ಗೆಳೆಯರ ಹತ್ತಿರ,ಮುಖ್ಯವಾಗಿ ಜಿ.ಎಸ್.ಸದಾಶಿವರ ಬಳಿ ಹೋಗಿ ನಾನು ಕೇಳಿದೆ:”ದಯವಿಟ್ಟು ಪ್ರಾಮಾಣಿಕವಾಗಿ ಹೇಳಿ..ನಮ್ಮ ನಾಟಕ ಇಂಥದೊಂದು ಕಟು ವಿಮರ್ಶೆ ಅಥವಾ ಟೀಕೆಗೆ ಅರ್ಹವಾದುದಾಗಿತ್ತೇ?” ಸದಾಶಿವ ಒಂದೇ ಮಾತಿನಲ್ಲಿ ಹೇಳಿದರು:”ಖಂಡಿತ ಇಲ್ಲ ಪ್ರಭೂ..ಇನ್ನಷ್ಟು ಬಿಗಿ ಇರಬಹುದಿತ್ತು ಅನ್ನುವುದನ್ನು ಬಿಟ್ಟರೆ ನಾಟಕ ಹೀಗೆ ತೆಗೆದುಹಾಕುವಂತಿರಲಿಲ್ಲ”. ನೊಂದು ಬೆಂದ ಮನಸ್ಸಿಗೆ ತಂಪೆರೆಯಲು ಅಷ್ಟು ಸಾಕಾಯಿತು. ಅದಾದ ಎರಡು ದಿನಕ್ಕೆ ಕಲಾಕ್ಷೇತ್ರದ ಬಯಲು ರಂಗ ಮಂದಿರದಲ್ಲಿ ಬೆಕೆಟ್ ನಾಟಕದ ನಾಲ್ಕಾರು ಪ್ರದರ್ಶನಗಳಾದುವು.ಒಂದು ಪ್ರದರ್ಶನಕ್ಕೆ ಬಂದಿದ್ದ ಪ್ರೀತಿಯ ಮೇಷ್ಟ್ರು ಚಂದ್ರಶೇಖರ ಕಂಬಾರರು ನಾಟಕವನ್ನು ಮೆಚ್ಚಿಕೊಂಡದ್ದಷ್ಟೇ ಅಲ್ಲ,” ಈ ನಾಟಕ ನನ್ನ ಅರಿವಿನ ಪರಿಧಿಯನ್ನು ವಿಸ್ತರಿಸಿದೆ” ಎಂಬಂತಹ ಮಾತುಗಳನ್ನಾಡಿ ಬೆನ್ನು ತಟ್ಟಿ ಹರಸಿದರು.ಅಲ್ಲಿಗೆ ಆ ಕಟುವಿಮರ್ಶೆಯ ಭೂತ ನನ್ನನ್ನು ಕಾಡುವುದು ನಿಂತು ನಾನು ಮೊದಲಿನಂತಾದೆ!

ಇದೆಲ್ಲಾ ನಡೆದು ಒಂದೆರಡು ದಿನ ಕಳೆದು ಮನೆಗೆ ಹೋದರೆ ಕಪಾಟಿನಲ್ಲಿದ್ದ ಪ್ರಜಾವಾಣಿ ವಿಮರ್ಶೆಗಾಗಿ ಬಂದಿದ್ದ ಒಂದಷ್ಟು ಪುಸ್ತಕಗಳು ನನ್ನನ್ನು ಅಣಕಿಸುವಂತೆ ನೋಡತೊಡಗಿದವು.ಯಾಕೋ ಆ ಕೆಲಸವನ್ನು ಮುಂದುವರಿಸುವುದು ನನಗಿಷ್ಟವಾಗಲಿಲ್ಲ.ಎಲ್ಲಾ ಪುಸ್ತಕಗಳನ್ನೂ ಒಂದು ಚೀಲದಲ್ಲಿ ಹಾಕಿಕೊಂಡು ಪ್ರಜಾವಾಣಿ ಕಛೇರಿಗೆ ಹೋಗಿ ಅಲ್ಲಿದ್ದ ಸಿಬ್ಬಂದಿವರ್ಗದವರ ವಶಕ್ಕೆ ಕೊಟ್ಟು,”ದಯವಿಟ್ಟು ಪ್ರಜಾವಾಣಿ ಪುರವಣಿ ವಿಭಾಗಕ್ಕೆ ಇವನ್ನು ತಲುಪಿಸಿಬಿಡಿ” ಎಂದು ಹೇಳಿ ಕೊಟ್ಟು ಬಂದುಬಿಟ್ಟೆ.”ನಾನು ಇವನಿಗೆ ಈ ಸಹಾಯ ಮಾಡುತ್ತಿದ್ದೇನೆ,ಇವನು ನನಗೆ ಋಣಿಯಾಗಿರಲಿ” ಎಂಬೊಂದು ನಿರೀಕ್ಷೆಯಾದರೂ ಅವರಲ್ಲಿ ಬಲಿಯಲು ಅವಕಾಶ ಏಕೆ ಮಾಡಿಕೊಡಬೇಕು ಎಂಬುದು ನನ್ನ ಸ್ವಾಭಿಮಾನದ ನಿರ್ಧಾರವಾಗಿತ್ತು.ಇದಾದ ಒಂದೆರಡು ದಿನಗಳಿಗೆ ಕಲಾಕ್ಷೇತ್ರದಲ್ಲಿ ಜಿ.ಎನ್.ರಂಗನಾಥರಾವ್ ಅವರ ಭೇಟಿಯಾಯಿತು.

ಪ್ರಸಿದ್ಧ ಕತೆಗಾರ—ವಿಮರ್ಶಕ—ನಾಟಕಕಾರರೂ ಆಗಿರುವ ಜಿ ಎನ್ ಆರ್ ಅವರು ಶಿಸ್ತು—ಸಂಯಮಗಳ ಸಾಕಾರವಾಗಿರುವ ಸಹೃದಯಿ. ಅವರು ನನ್ನನ್ನು ಟೌನ್ ಹಾಲ್ ಬಳಿಯ ಕಾಮತ್ ಹೋಟಲ್ ಗೆ ಕರೆದುಕೊಂಡು ಹೋಗಿ ಕಾಫಿ ಕುಡಿಯುತ್ತಾ ಹೇಳಿದ್ದ ಮಾತುಗಳು ನನಗಿನ್ನೂ ನೆನಪಿವೆ: “ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ..ಪುಸ್ತಕ ವಿಮರ್ಶೆ ಮುಂದುವರಿಸಿ..ಮೇಲಾಗಿ ಈ ವಿಭಾಗವನ್ನು ನೋಡಿಕೊಳ್ಳುತ್ತಿರುವುದು ನಾನು..ರಾಜು ಅವರೊಂದಿಗೆ ನೀವು ಸಂಪರ್ಕಕ್ಕೆ ಬರುವ ಅಗತ್ಯವೇ ಇರುವುದಿಲ್ಲ..ನಮಗೆ ನಿಮ್ಮ ಅಗತ್ಯವಿದೆಯೆಂದೇ ಭಾವಿಸಿ ವಿಮರ್ಶೆ ಬರೆದುಕೊಡಿ..ನಾನು ನಿಮ್ಮ ಜತೆಗಿದ್ದೇನೆ”. ಇಂಥದೊಂದು ಮಾತು ಸಾಲದೇ ಕುಗ್ಗಿ ಹೋಗಿದ್ದ ಆತ್ಮವಿಶ್ವಾಸವನ್ನು ಮೇಲೆತ್ತಲು?! ಆದರೂ ಯಾಕೋ ನನ್ನ ಮುರಿದ ಮನಸ್ಸಿಗೆ ಪುಸ್ತಕ ವಿಮರ್ಶೆಯ ಕೆಲಸ ಮುಂದುವರಿಸುವುದು ಇಷ್ಟವಾಗಲಿಲ್ಲ. ಜಿ ಎನ್ ಆರ್ ಅವರ ಕ್ಷಮೆ ಯಾಚಿಸಿ ಆ ಹೊರೆ ಇಳಿಸಿಕೊಂಡೆ.

ಬೆಕೆಟ್ ವಿಮರ್ಶೆ ಪ್ರಕಟವಾದ ಒಂದೆರಡು ದಿನಗಳಲ್ಲೇ ಕಲಾಕ್ಷೇತ್ರದಲ್ಲಿ ರಾಜು ಅವರ ಮುಖಾಮುಖಿಯಾಯಿತು.ನನ್ನನ್ನು ನೋಡುತ್ತಿದ್ದಂತೆ ಅವರ ಮುಖದಲ್ಲಿ ಒಂದು ಗೆಲುವಿನ ನಗೆ ಮೂಡಿ,ಸೇದುತ್ತಿದ್ದ ಸಿಗರೇಟಿನ ಹೊಗೆಯನ್ನು ಗಾಳಿಗೆ ತೂರಿಬಿಡುತ್ತಾ,”ಏನಯ್ಯಾ ಬೆಕೆಟ್, ಹೇಗಿದ್ದೀಯಾ?” ಎಂಬ ಅವರದೇ ವ್ಯಂಗ್ಯದ ಧಾಟಿಯಲ್ಲಿ ಕೇಳಿದರು. “ಬೆಕೆಟ್ ಚೆನ್ನಾಗಿದಾನೆ ಸರ್ ,ಹ್ಯಾಮ್ಲೆಟ್ ಕೂಡಾ ಚೆನ್ನಾಗಿದಾನೆ.ಶ್ರೀನಿವಾಸ ಪ್ರಭು ಎಲ್ಲರಿಗಿಂತ ಚೆನ್ನಾಗಿದಾನೆ” ಎಂದು ನಾನೂ ಅದೇ ಧಾಟಿಯಲ್ಲಿ ಉತ್ತರಿಸಿದ್ದು ಅವರನ್ನು ಕೆರಳಿಸಿಬಿಟ್ಟಿತು.”ತುಂಬಾ ಮಾತಾಡೋಕೆ ಶುರು ಮಾಡಿದೀಯಲ್ಲೋ..ಯಾರದು ಕುಮ್ಮಕ್ಕು?” ಎಂದರವರು. ಅವರು ಯಾರನ್ನು ಮನಸ್ಸಿನಲ್ಲಿಟ್ಟುಕೊಂಡು ಆ ಮಾತಾಡಿದರೋ ಕಾಣೆ.. ಬಹುಶಃ ynk ಅವರಿರಬಹುದೆಂಬುದು ಆನಂತರದ ನಮ್ಮ ವ್ಯಾಖ್ಯಾನ.

ಹೀಗೇ ಮಾತಿಗೆ ಮಾತು ಬೆಳೆದು ಕೊನೆಗೆ ಅವರು ಸಿಟ್ಟಿನಿಂದ, “ನನ್ನ ಬಗ್ಗೆ ಹಗುರವಾಗಿ ಮಾತಾಡಬೇಡಿ..ವಿಮರ್ಶೆ ಅನ್ನೋದು ನನಗೆ ಪಾತಿವ್ರತ್ಯ ಇದ್ದಹಾಗೆ” ಎಂದು ಚೀರಿದರು. ಆ ಮಾತು ಕೇಳಿ ನಾನು ಜೋರಾಗಿ ನಕ್ಕು, ” ಕೆಲವು ಮಾತುಗಳು ಆಡೋದಕ್ಕೆ ಕೇಳೋದಕ್ಕೆ ತುಂಬಾ ಚಂದ ಸರ್.. ಆದರೆ ಆಚರಣೇಗೆ ಅಷ್ಟೇ ಕಷ್ಟ” ಎಂದುಬಿಟ್ಟೆ! ಉರಿಯುವವರನ್ನು ಇನ್ನಷ್ಟು ಕೆರಳಿಸಲು ಅಷ್ಟು ಸಾಲದೇ? ಒಂದಷ್ಟು ಕೂಗಾಡಿದರು..ನಾನೂ ತಾಳ್ಮೆ ಕಳೆದುಕೊಂಡು ಒಂದಷ್ಟು ಮಾತಾಡಿದೆ..ಅಲ್ಲಿದ್ದ ಕೆಲ ಗೆಳೆಯರು ಸಮಾಧಾನ ಹೇಳಿ ಅವರನ್ನು ಶಾಂತವಾಗಿಸಿದರು. ಅದೇ ಅವರೊಂದಿಗಿನ ನನ್ನ ಕೊನೆಯ ಭೇಟಿ! ಅವರ ಜೀವಿತಾವಧಿಯಲ್ಲಿ ಮತ್ತೆಂದೂ ನಾನು ಅವರನ್ನು ಉದ್ದೇಶಪೂರ್ವಕವಾಗಿಯಾಗಲೀ ಆಕಸ್ಮಿಕವಾಗಿಯಾಗಲೀ ಭೇಟಿಯಾಗಲೇ ಇಲ್ಲ.

ಮುಂದೆ ನಾನು ದೂರದರ್ಶನ ಸೇರಿ ನಾಟಕ ವಿಭಾಗವನ್ನು ನೋಡಿಕೊಳ್ಳುತ್ತಿದ್ದಾಗ ಅವರ ಪತ್ರಿಕೆಯಲ್ಲಿ, “ಶ್ರೀನಿವಾಸ ಪ್ರಭು ಎಂಬ ನಿರ್ದೇಶಕ ದೂರದರ್ಶನವನ್ನು ತನ್ನ ಸ್ವತ್ತೆಂದು ಭಾವಿಸಿರುವಂತಿದೆ; ಎಲ್ಲಾ ನಾಟಕಗಳನ್ನೂ ತಾನೇ ನಿರ್ದೇಶಿಸಿ ನಿರ್ಮಿಸುತ್ತಾ ಏಕಸ್ವಾಮ್ಯವನ್ನು ಸ್ಥಾಪಿಸಿದ್ದಾರೆ” ಎಂಬರ್ಥದಲ್ಲಿ ನನ್ನ ಮೇಲೆ ಟೀಕೆಗಳ ಮಳೆಗರೆದರು. ನಾನೂ ಸುಮ್ಮನಾಗಲಿಲ್ಲ! “ದೂರದರ್ಶನ ಸಂಸ್ಥೆ ನನ್ನ ಮಾತೃಸಂಸ್ಥೆ; ನಾಟಕಗಳನ್ನು ಮಾಡಿಸುವುದಕ್ಕಾಗಿಯೇ ನನಗೆ ಸಂಬಳ ಕೊಟ್ಟು ನೇಮಿಸಿಕೊಂಡಿದೆ; ನನ್ನ ಕರ್ತವ್ಯವನ್ನು ನಾನು ನಿರ್ವಂಚನೆಯಿಂದ ಮಾಡುತ್ತಿದ್ದರೂ ಕೆಲ ಪತ್ರಕರ್ತರು ಇಲ್ಲದ ಹುಳುಕು ಹುಡುಕುತ್ತಾ ವಿನಾಕಾರಣ ಅರ್ಥಹೀನ ದೋಷಾರೋಪಣೆ ಮಾಡುತ್ತಿದ್ದಾರೆ” ಎಂದು ನಾನು ನಡೆಸಿಕೊಡುತ್ತಿದ್ದ ‘ಪ್ರಿಯ ವೀಕ್ಷಕರೇ’ ಕಾರ್ಯಕ್ರಮದಲ್ಲಿ ನೇರವಾಗಿಯೇ ಅವರ ವಿಮರ್ಶೆಯ ವಿಮರ್ಶೆ ಮಾಡಿ ನನ್ನ ಸಿಟ್ಟನ್ನು ತೀರಿಸಿಕೊಂಡೆ! ಅಲ್ಲಿಗೆ ಅವರೊಂದಿಗಿನ ಸಂಪರ್ಕ—ಸಂಬಂಧ ಮುಗಿದ ಅಧ್ಯಾಯವಾಯಿತು.

ಹೀಗೇ ಒಂದು ಮಾತುಕತೆಯ ಸಂದರ್ಭದಲ್ಲಿ ಜಿ ಎನ್ ಆರ್ ಅವರು ಆನ್ವಿಯ (ಅನುವಿಲ್?) ಅಂತಿಗೊನೆ ನಾಟಕವನ್ನು ಕನ್ನಡಕ್ಕೆ ತಾವು ಅನುವಾದಿಸಿರುವುದಾಗಿ ಹೇಳಿದರು. ಆ ವೇಳೆಗೆ ಆನ್ವಿಯ ನಾಟಕಗಳಿಂದ ಸಾಕಷ್ಟು ಪ್ರಭಾವಿತನಾಗಿದ್ದ ನಾನು ಕೂಡಲೇ “ನಾನು ಅಂತಿಗೊನೆ ನಾಟಕವನ್ನು ರಂಗದ ಮೇಲೆ ತರುತ್ತೇನೆ” ಎಂದು ಜಿ ಎನ್ ಆರ್ ಅವರಿಗೆ ಹೇಳಿ ಅವರಿಂದ ಹಸ್ತಪ್ರತಿಯನ್ನು ಪಡೆದುಕೊಂಡೆ. ಸಾಫೋಕ್ಲಿಸ್ ಮಹಾಕವಿಯ ನಾಟಕವನ್ನೇ ಆಧಾರವಾಗಿಟ್ಟುಕೊಂಡು ಹೊಸ ದೃಷ್ಟಿಕೋನದೊಂದಿಗೆ ಆನ್ವಿ 1920—30 ರ ಆಜುಬಾಜಿನಲ್ಲಿ ರಚಿಸಿದ್ದ ನಾಟಕ ‘ಅಂತಿಗೊನೆ’.

ಪ್ಯಾರಿಸ್ ಅನ್ನು ನಾಜಿ಼ಗಳು ಆಕ್ರಮಿಸಿಕೊಂಡ ಸಂದರ್ಭದಲ್ಲಿ ಸಂಘಟನೆಗೊಂಡ ಪ್ರತಿರೋಧದ ಹಿನ್ನೆಲೆಯಲ್ಲಿ ಆನ್ವಿ ರಚಿಸಿದ್ದ ಈ ನಾಟಕ, ವ್ಯವಸ್ಥೆಯ ವಿರುದ್ಧ ಹೆಣ್ಣುಮಗಳೊಬ್ಬಳು ಸಿಡಿದೇಳುವ,ಏಕಾಂಗಿಯಾಗಿ ಹೋರಾಡುವ ಮನೋಜ್ಞ ಚಿತ್ರಣವನ್ನೊಳಗೊಂಡಿತ್ತು. ನಾಟಕದ ಅಂತರ್ಗತ ಹೋರಾಟದ ಧ್ವನಿಯ ಅರಿವಾದ ಆಗಿನ ನಾಜಿ಼ ಸರ್ಕಾರ ನಾಟಕದ ಮೇಲೆ ನಿರ್ಬಂಧ ಹೇರಿ ಪರಿಷ್ಕರಣೆಗೆ ಒಳಪಡಿಸಿತ್ತಂತೆ! ಜಿ ಎನ್ ಆರ್ ಅವರು ಅತ್ಯಂತ ಸಮರ್ಥವಾಗಿ ಈ ನಾಟಕವನ್ನು ಕನ್ನಡಕ್ಕೆ ಅಳವಡಿಸಿದ್ದರು.ಅಂತಿಗೊನೆಯ ಪಾತ್ರದಲ್ಲಿ ನಳಿನಿ ಮೂರ್ತಿ (ನನ್ನ ಅಕ್ಕ) ಹಾಗೂ ಕ್ರೆಯಾನನ ಪಾತ್ರದಲ್ಲಿ ಸೇತುಮಾಧವ ಬಲ್ಲರವಾಡ ಅವರು ಅಮೋಘವಾಗಿ ಅಭಿನಯಿಸಿ ನಾಟಕದ ಯಶಸ್ಸಿಗೆ ಕಾರಣರಾಗಿದ್ದರು.

ಅಂತಿಗೊನೆ ನಾಟಕದ ನಂತರ ನಾನು ನಮ್ಮ ನಾಟ್ಯದರ್ಪಣ ತಂಡಕ್ಕಾಗಿ ಕೈಗೆತ್ತಿಕೊಂಡ ನಾಟಕ ‘ಮಂಡೂಕರಾಜ್ಯ’. ಆಗ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿದ್ದು ಆರ್.ಗುಂಡೂರಾವ್ ಅವರು ಮುಖ್ಯಮಂತ್ರಿಗಳಾಗಿದ್ದರು. ಆ ಸಂದರ್ಭದ ಒಂದಷ್ಟು ರಾಜಕೀಯ ದೊಂಬರಾಟಗಳನ್ನು ವಿಡಂಬನಾತ್ಮಕವಾಗಿ ಪ್ರಸ್ತುತ ಪಡಿಸುವ ಪ್ರಯತ್ನವನ್ನು ಮಂಡೂಕರಾಜ್ಯದಲ್ಲಿ ಮಾಡಿದ್ದೆ. ಸುಧೀಂದ್ರ ಮಂಡೂಕರಾಯನಾಗಿ, ಸಾಯಿ ಪ್ರಕಾಶ್ ಹೋರಾಟಗಾರನಾಗಿ ಅಭಿನಯಿಸುತ್ತಿದ್ದರು. ನಾನು ನಿರೂಪಕನಾಗಿ ಮೇಳದೊಂದಿಗೆ ಸೇರಿಕೊಂಡಿದ್ದೆ. ಇದ್ದ ನಾಲ್ಕಾರು ಹಾಡುಗಳಿಗೆ ನಮ್ಮ ತಂಡದ ಅಬ್ಬೂರು ವೆಂಕಟರಾಮ್, ಮಂಜು ಮುಂತಾದವರು ಸೇರಿಕೊಂಡು ರಾಗ ಸಂಯೋಜನೆ ಮಾಡಿ ಸಿದ್ಧಪಡಿಸಿದ್ದರು. ಸಮಕಾಲೀನವೂ ವಿಡಂಬನಾತ್ಮಕವೂ ಆಗಿದ್ದರಿಂದ ನಾಟಕ ಜನಪ್ರಿಯವಾಗುವುದರಲ್ಲಿ ನಮಗೆ ಸಂಶಯವಿರಲಿಲ್ಲ.

ನಾಟಕ ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ರಂಗದ ಮೇಲೆ ಒಮ್ಮೆ ರಿಹರ್ಸಲ್ ಮಾಡಿಕೊಳ್ಳುವ ಉದ್ದೇಶದಿಂದ ಅಂದು ಬೆಳಿಗ್ಗೆ ಕಲಾಕ್ಷೇತ್ರವನ್ನು ಕಾದಿರಿಸಿಕೊಂಡಿದ್ದೆವು. ಇನ್ನೇನು ನಾವು ರಿಹರ್ಸಲ್ ಆರಂಭಿಸಬೇಕು, ಆ ವೇಳೆಗೆ ಸರಿಯಾಗಿ ಕಲಾಕ್ಷೇತ್ರದ ಮುಂಬಾಗಿಲಿನಿಂದ ವ್ಯಕ್ತಿಯೊಬ್ಬರ ಆಗಮನವಾಯಿತು. ಜತೆಗಿದ್ದ ಗೆಳೆಯರೊಂದಿಗೆ ಸರಸರ ದಾಪುಗಾಲಿಟ್ಟುಕೊಂಡು ಮುಗುಳ್ನಗೆ ಸೂಸುತ್ತಾ ರಂಗದ ಮುಂಭಾಗಕ್ಕೆ ಬಂದ ಕಟ್ಟುಮಸ್ತಾದ ವ್ಯಕ್ತಿಯನ್ನು ನೋಡಿದೊಡನೆ, ‘ಅರೆ! ಪರಿಚಿತ ಚಹರೆಯಂತೆಯೇ ತೋರುತ್ತಿದೆಯಲ್ಲಾ, ಯಾರಿದು?’ ಎಂದು ಯೋಚಿಸುತ್ತಾ ಕಣ್ಣರಳಿಸಿ ನೋಡಿದೆ. ಹಾಗೆ ಬಂದ ವ್ಯಕ್ತಿ ಬೇರಾರೂ ಅಲ್ಲ, ‘ಒಂದಾನೊಂದು ಕಾಲದಲ್ಲಿ’ ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರಶಸ್ತಿ ಗಳಿಸಿದ್ದ, ‘ಕರಾಟೆ ಕಿಂಗ್’ ಎಂಬ ಬಿರುದಾಂಕಿತನಾಗಿ ಕನ್ನಡದ ಹೊಸ ನಾಯಕ ನಟನಾಗಿ ಭರವಸೆ ಮೂಡಿಸಿದ್ದ ಶಂಕರ್ ನಾಗ್ ! ವಾಸ್ತವವಾಗಿ ಅದು ಶಂಕರ ನಾಗ್ ಅವರೊಂದಿಗೆ ನನ್ನ ಎರಡನೆಯ ಭೇಟಿ. ಒಂದೆರಡು ವರ್ಷಗಳ ಹಿಂದೆ, ‘ಬೆಳ್ಳಿಗುಂಡು’ ನಾಟಕದ ನಂತರ ಅನಂತ ನಾಗ್ ರನ್ನು ಆಗಾಗ್ಗೆ ನಾನು ಭೇಟಿಯಾಗುತ್ತಿದ್ದೆನಲ್ಲಾ, ಅಂಥದೊಂದು ಸಂದರ್ಭದಲ್ಲಿ ಒಮ್ಮೆ ಶಂಕರ್ ಬಂದಿದ್ದರು.

ಬಹುಶಃ ಆಗಿನ್ನೂ ‘ಒಂದಾನೊಂದು ಕಾಲದಲ್ಲಿ’ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ನಾನು ಅನಂತ್ ಅವರೊಂದಿಗೆ ಹೋಗಿ ಶಂಕರ್ ಅವರನ್ನು ಏರ್ ಪೋರ್ಟ್ ಗೆ ಬಿಟ್ಟುಬಂದಿದ್ದೆ.ದಾರಿಯುದ್ದಕ್ಕೂ ಅಣ್ಣತಮ್ಮಂದಿರು ನಾಟಕ—ಸಿನೆಮಾಗಳ ಬಗ್ಗೆ ಒಂದೇ ಸಮ ಒಮ್ಮೆ ಕೊಂಕಣಿ—ಒಮ್ಮೆ ಮರಾಠಿ—ಮತ್ತೊಮ್ಮೆ ಇಂಗ್ಲೀಷ್ ಯಾ ಹಿಂದಿಯಲ್ಲಿ ಮಾತಾಡುತ್ತಲೇ ಇದ್ದರು. ನಾನು ಮೂಕಪ್ರೇಕ್ಷಕ! ನಡುವೆ ರೆಸಿಡೆನ್ಸಿ ರಸ್ತೆಯ ಬ್ಲೂ ಪೀಕಾಕ್ ಹೋಟಲ್ ನಲ್ಲಿ ಬೀರ್ ಸೇವನೆ ಹಾಗೂ ರೋಟಿ ಊಟ! ಇಡೀ ಒಂದೂವರೆ ಎರಡು ತಾಸು ಅವರೊಟ್ಟಿಗಿದ್ದರೂ ನಾನು ಬಾಯಿ ತೆರೆದಿದ್ದು ತೀರಾ ಕಡಿಮೆ. ಆ ಅಲ್ಪ ಸಮಯದಲ್ಲೇ ಶಂಕರ್ ಅವರ ಜೀವನೋತ್ಸಾಹ.. ಅವರ ವೇಗ..ಅವರ ಕನಸು—ಯೋಜನೆಗಳನ್ನುಕಂಡು ಕೇಳಿ ನಾನು ಚಕಿತನಾಗಿದ್ದೆ. ಈಗ ಕಲಾಕ್ಷೇತ್ರದಲ್ಲಿ ಮತ್ತೆ ಭೇಟಿಯಾಗುತ್ತಿದ್ದೇನೆ.. ಎರಡು ವರ್ಷಗಳ ಅಂತರದಲ್ಲಿ ಶಂಕರ್ ಊಹೆಗೂ ನಿಲುಕದಷ್ಟು ಬೆಳೆದುಬಿಟ್ಟಿದ್ದಾರೆ! ಅವರಿಗೆ ನನ್ನ ನೆನಪಾದರೂ ಹೇಗಿರಲು ಸಾಧ್ಯ ಎಂದುಕೊಂಡು ನಾನೇ ನನ್ನ ಪರಿಚಯ ಮಾಡಿಕೊಳ್ಳಲು ಮುಂದಾಗುವಷ್ಟರಲ್ಲಿ “we have met before srinivas.. ನೀವು ನನ್ನನ್ನ ಏರ್ ಪೋರ್ಟ್ ಗೆ ಡ್ರಾಪ್ ಮಾಡೋದಕ್ಕೆ ಬಂದಿದ್ರಿ” ಎಂದರು ಶಂಕರ್! ಆ ವೇಳೆಗಾಗಲೇ ಅವರು ತಮ್ಮದೇ ಸಂಕೇತ್ ತಂಡವನ್ನು ಕಟ್ಟಿಕೊಂಡು ಜತೆಗಾತಿ ಅರುಂಧತಿ ರಾವ್ , ಟಿ.ಎನ್.ನರಸಿಂಹನ್, ಕಾಶಿ, ಜಗ್ಗ, ರಂಗಣ್ಣಿ ಮುಂತಾದವರೊಂದಿಗೆ ಕನ್ನಡ ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿ ತೊಡಗಿಕೊಂಡು ಬಿಟ್ಟಿದ್ದರು. ಅವರ ನಾಟಕ ಪ್ರದರ್ಶನದ (ಬಹುಶಃ ‘ನೋಡಿ ಸ್ವಾಮಿ ನಾವಿರೋದು ಹೀಗೆ’ ನಾಟಕ ಇರಬೇಕು) ಪೂರ್ವಸಿದ್ಧತೆಗಳಿಗಾಗಿಯೇ ಅವರು ಅಂದು ಕಲಾಕ್ಷೇತ್ರಕ್ಕೆ ಬಂದಿದ್ದು.ಕೆಲ ನಿಮಿಷಗಳ ಮಾತುಕತೆಯ ನಂತರ ಅವರಾಡಿದ ಒಂದು ಮಾತು ನನ್ನನ್ನು ಮತ್ತಷ್ಟು ಚಕಿತನನ್ನಾಗಿ ಮಾಡಿಬಿಟ್ಟಿತು: “ನಾನು, ಅರು, ನಚ್ಚಿ ನಿಮ್ಮ ಹ್ಯಾಮ್ಲೆಟ್ performance ನೋಡಿದೆವು.you were simply brilliant! ಒಟ್ಟಿಗೆ ಕೆಲಸ ಮಾಡೋಣ. ತುಂಬಾ plans ಇದೆ ನಂದು”! ‘thank you’ ಎಂದಷ್ಟೇ ಹೇಳಿ ಮುಂದೇನೂ ತೋಚದೆ ಸುಮ್ಮನೆ ನಿಂತುಬಿಟ್ಟೆ. ಅವರೇ ನನ್ನ ಬೆನ್ನುತಟ್ಟಿ ನಾಟಕಕ್ಕೆ ಶುಭಕೋರಿ ಬಂದಷ್ಟೇ ವೇಗವಾಗಿ ತಮ್ಮ ಕೆಲಸಕ್ಕೆ ಹೊರಟುಬಿಟ್ಟರು. ನಾವೂ ನಮ್ಮ ರಿಹರ್ಸಲ್ ಮುಂದುವರೆಸಿ ಸಂಜೆಯ ಪ್ರದರ್ಶನದ ಸಿದ್ಧತೆಗೆ ತೊಡಗಿಕೊಂಡೆವು.

ನಿರೀಕ್ಷೆಯಂತೆಯೇ ‘ಮಂಡೂಕರಾಜ್ಯ’ ಪ್ರೇಕ್ಷಕರಿಗೆ ಇಷ್ಟವಾಗಿ ಯಶಸ್ವಿಯಾಯಿತು.” Srinivasa prabhu’s ‘mandukarajya’ was a good attempt at political satire and some of the sequences were brilliantly conceived.Sudhindra as Manduka was a class by himself” ಎಂಬ ಪ್ರಶಂಸೆಯ ಮಾತುಗಳು ಪತ್ರಿಕೆಗಳಲ್ಲಿ ಪ್ರಕಟವಾಗಿ ನಮ್ಮ ಉತ್ಸಾಹವನ್ನು ಇಮ್ಮಡಿಸಿದವು. ಅಂತೆಯೇ ನಿರೂಪಣೆ—ಹಾಡುಗಳ ಮೇಲಿನ ಅವಲಂಬನೆ ಕೊಂಚ ಜಾಸ್ತಿಯಾದಂತೆನಿಸಿತು ಎಂಬಂತಹ ಕಿವಿಮಾತುಗಳೂ ಸಹಾ ನಮ್ಮ ಮುಂದಿನ ಪ್ರದರ್ಶನಗಳನ್ನು ಸುಧಾರಿಸಿಕೊಳ್ಳಲು ನೆರವಾದವು.

ಮುದೆ ನಾನು ನಮ್ಮ ತಂಡಕ್ಕಾಗಿ ಆರಿಸಿಕೊಂಡ ನಾಟಕ “ಗುಳ್ಳೆನರಿ”.ಮಂಗಳೂರಿನಲ್ಲಿ ಶಿಬಿರ ನಡೆಸುತ್ತಿದ್ದ ಹೊತ್ತಿನಲ್ಲೇ ಬಿಡುವಿನ ಸಮಯದಲ್ಲಿ ಗುಳ್ಳೆನರಿ ನಾಟಕವನ್ನು ಬರೆದು ಮುಗಿಸಿಬಿಟ್ಟಿದ್ದೆ. ಇದು ಬೆನ್ ಜಾನ್ಸನ್ ನ volpone ನಾಟಕದ ಮುಕ್ತ ರೂಪಾಂತರ. ಈ ನಾಟಕಕ್ಕಾಗಿ ನಾನೇ 11 ಹಾಡುಗಳನ್ನೂ ಬರೆದಿದ್ದು ಆ ಹಾಡುಗಳಿಗೆ ಸಂಗೀತ ಸಂಯೋಜನೆಯನ್ನು ಯಾರಿಂದ ಮಾಡಿಸುವುದೆಂಬ ಪ್ರಶ್ನೆ ಎದುರಾಯಿತು. ಕಾರಂತ ಮೇಷ್ಟ್ರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತುತ್ತಿದ್ದುದರಿಂದ ಅವರನ್ನು ಹಿಡಿಯುವುದೇ ಕಷ್ಟಸಾಧ್ಯವಾದ ಮಾತಾಗಿತ್ತು. ರಂಗಸಂಗೀತ ಒಂದು ಭಿನ್ನ ಪ್ರಕಾರವೇ ಆದುದರಿಂದ ಅದರಲ್ಲಿ ಪರಿಶ್ರಮವಿರುವವರೇ ಸಂಯೋಜನೆ ಮಾಡಿದರೆ ಹೆಚ್ಚು ಸೂಕ್ತ; ಹಾಡು—ಸಂಗೀತಗಳ ಮೂಲಕವೂ ನಾಟಕೀಯತೆ ಹೊಮ್ಮುವುದಾದರೆ ಚೆನ್ನಾಗಿರುತ್ತದೆನ್ನುವುದು ತಂಡದ ಎಲ್ಲರ ಅಭಿಪ್ರಾಯವೇ ಆಗಿದ್ದರೂ ಅಂಥ ಸಾಮರ್ಥ್ಯ ಇರುವವರು ಯಾರು’ ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕಿರಲಿಲ್ಲ. ಒಂದು ಅನಿರೀಕ್ಷಿತ ಘಟನೆಯಿಂದ ಈ ಸಮಸ್ಯೆ ಕೂಡಾ ಪರಿಹಾರವಾಗಿ ನಾವು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು!!

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

9 June, 2022

2 Comments

  1. G.N.Ranganatha Rao

    Dear Srinivasaporabhu,
    Thanks for remembering me.
    Regards
    G N R

    • G.N.Ranganatha Rao

      Dear Prabhu
      Again Thanks for your good words.
      Regards
      G N R

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading