
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.
ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
38
ರಜೆಯ ದಿನಗಳಲ್ಲಿ ದೆಹಲಿಯಿಂದ ಬೆಂಗಳೂರಿಗೆ ಬಂದು ಹೋಗುತ್ತಿದ್ದೆನಲ್ಲಾ, ಆ ಸಂದರ್ಭಗಳಲ್ಲೇ ಮಾಡಿಸಿದ ಮತ್ತೆರಡು ನಾಟಕಗಳೆಂದರೆ “ನೆರಳಿಲ್ಲದ ಜೀವಗಳು” ಹಾಗೂ “ತಲೆಗೊಂದು ಕೋಗಿಲೆ”.
ನಾಟಕಶಾಲೆಯಲ್ಲಿ ಓದುತ್ತಿದ್ದಾಗ ಫ್ರೆಂಚ್ ಲೇಖಕ ಜೀನ್ ಪಾಲ್ ಸಾರ್ತ್ರೆಯ ಅಸ್ತಿತ್ವವಾದ (existentialism) ಹಾಗೂ ಆತನ ಕೃತಿಗಳು ನನ್ನ ಗಮನ ಸೆಳೆದಿದ್ದವು. ಮಹಾಯುದ್ಧದ ಸಂದರ್ಭದಲ್ಲಿ ಜರ್ಮನ್ ಸೆರೆವಾಸವನ್ನು ಅನುಭವಿಸಿ ಬಂದ ಈ ಫ್ರೆಂಚ್ ಲೇಖಕ-ದಾರ್ಶನಿಕನ ಅಸ್ತಿತ್ವವಾದ ಹೀಗೆ ಹೇಳುತ್ತದೆ: “ನಮ್ಮ ಹುಟ್ಟು-ಬೆಳವಣಿಗೆಗಳು ನಮ್ಮ ಹತೋಟಿ ಮೀರಿದ್ದಾಗಿದ್ದರೂ ಒಮ್ಮೆ ಈ ಬದುಕಿಗೆ ಬಂದು ಬಿದ್ದ ಮೇಲೆ ನಮ್ಮೆಲ್ಲಾ ಕ್ರಿಯೆಗಳಿಗೆ ನಾವೇ ಜವಾಬ್ದಾರರು; ಮನುಷ್ಯ ಹೇಗೆ ಬದುಕಬೇಕೆಂಬ ಬಗ್ಗೆ ಯಾವುದೇ ಖಚಿತ ನಿರ್ದೇಶನವಿಲ್ಲ.. ಪೂರ್ವ ನಿರ್ಧರಿತ ವಿನ್ಯಾಸಗಳಿಲ್ಲ.. ನಮ್ಮನ್ನು ಅರ್ಥೈಸಿಕೊಳ್ಳುವ ಹೊಣೆ ನಮ್ಮ ಹೆಗಲ ಮೇಲೆಯೇ ಇದೆ ಮತ್ತು ಈ ಕಾರಣಕ್ಕಾಗಿಯೇ ಮನುಷ್ಯನಿಗೆ ‘ಸ್ವತಂತ್ರ’ನಾಗುವ ಶಿಕ್ಷೆ ಲಭಿಸಿದೆಯೆನ್ನಬಹುದು.ಈ ಬದುಕು ದಾರುಣವಾಗಿರುವುದಷ್ಟೇ ಅಲ್ಲ, ಈ ನಮ್ಮ ಸ್ವಾತಂತ್ರ್ಯದ ‘ಶಿಕ್ಷೆ’ಯಿಂದಾಗಿ ಮನುಷ್ಯ ಸದಾ ವೇದನೆಯಲ್ಲೇ ಇರುತ್ತಾನೆ…”
ಸಾರ್ತ್ರೆಯ ನಾಟಕ-ಕಾದಂಬರಿಗಳು ಈ ಒಂದು ತಾತ್ವಿಕ ತಳಹದಿಯ ಮೇಲೆಯೇ ರೂಪು ಕಟ್ಟಿಕೊಳ್ಳುತ್ತಾ ಹೋಗುತ್ತವೆ. ಅವರ ‘men without shadows’ ನಾಟಕ ಕೂಡಾ ಗಾಢ ಅನುಭವವನ್ನು ಕಟ್ಟಿಕೊಟ್ಟು ತಲ್ಲಣಗೊಳಿಸುವ ಅಂಥದ್ದೇ ಒಂದು ಪ್ರಭಾವಶಾಲಿ ಕೃತಿ.
1944.ಎರಡನೇ ಮಹಾಯುದ್ಧದ ಸಂದರ್ಭ. ಹಿಟ್ಲರನ ಸೇನೆ ಫ್ರಾನ್ಸ್ ಅನ್ನು ಆಕ್ರಮಿಸಿಕೊಂಡಿದೆ. ಫ್ರಾನ್ಸ್ ನ ಪ್ರತಿರೋಧ ಹೋರಾಟಗಾರರ ಪಡೆಯ ಐವರು ಒಂದು ಹಳ್ಳಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಪಟ್ಟು ವಿಫಲರಾಗಿ militiamen ಗಳಿಗೆ ಸೆರೆಯಾಳುಗಳಾಗಿದ್ದಾರೆ.ಅವರ ಮಾನಸಿಕ ತುಮುಲ-ದ್ವಂದ್ವ—ತಾಕಲಾಟ—ಯಾತನೆಗಳು,ಮಿಲಿಟರಿ ಯೋಧರ ರಕ್ತ ಹೆಪ್ಪುಗಟ್ಟಿಸುವ ಕ್ರೌರ್ಯ—ಬಂಧಿತರ ಬಾಯಿ ಬಿಡಿಸಿ ಅವರ ಗುಟ್ಟುಗಳನ್ನು ತಿಳಿದುಕೊಳ್ಳಲು ಅವರ ಮೇಲೆ ಎಸಗುವ ದೌರ್ಜನ್ಯಗಳು—ಇವುಗಳ ಸುತ್ತ ಕಟ್ಟಿಕೊಳ್ಳುತ್ತಾ ಹೋಗುವ ಈ ನಾಟಕ ಸಾರ್ತ್ರೆಯ ತತ್ವದರ್ಶನ ಮಾಡಿಸುತ್ತಲೇ ಯುದ್ಧಸಮಯದ ತಲ್ಲಣ—ಆತಂಕಗಳನ್ನೂ, ಯುದ್ಧದ ಭೀಕರ ಪರಿಣಾಮಗಳು ಬದುಕನ್ನು ಆವರಿಸಿಕೊಳ್ಳುವ ಪರಿಯನ್ನೂ ತೆರೆದಿಡುತ್ತಾ ಹೋಗುತ್ತದೆ.

‘Men without shadows’ ನಾಟಕವನ್ನು ನಾನು ‘ನೆರಳಿಲ್ಲದ ಜೀವಗಳು’ ಎಂಬ ಹೆಸರಿನಲ್ಲಿ ಅನುವಾದಿಸಿದೆ.ಹಾಗೆ ನೋಡಿದರೆ ಇದೊಂದೇ ನಾನು ರೂಪಾಂತರಿಸದೇ ನೇರ ಅನುವಾದ ಮಾಡಿರುವ ನಾಟಕ.ಆಗ ಆ ಸಂದರ್ಭಕ್ಕೆ ಸಂವಾದಿಯಾದ ಯಾವ ಘಟನೆಗಳೂ ನಮ್ಮ ಪರಿಸರದಲ್ಲಿ ಘಟಿಸಿರಲಿಲ್ಲವಾದ್ದರಿಂದ ನಾನು ರೂಪಾಂತರಿಸುವ ಗೊಡವೆಗೆ ಹೋಗಲಿಲ್ಲ. ಜೊತೆಗೆ ಎರಡನೇ ಮಹಾಯುದ್ಧದ ಹಿನ್ನೆಲೆಯಿಂದ ಬೇರ್ಪಡಿಸಿ ರೂಪಾಂತರಿಸಿದರೆ ಅದೊಂದು ಕಲ್ಪಿತ ಪ್ರಸಂಗವಾಗಿ ಬಿಡುವ ಸಾಧ್ಯತೆ ದಟ್ಟವಾಗಿದ್ದು, ನಾಟಕ ಬೀರಬೇಕಿದ್ದ ಗಾಢ ಪರಿಣಾಮ ಮುಕ್ಕಾಗಿಬಿಡುವ ಅಪಾಯವಿತ್ತು!
ನಮ್ಮ ನಾಟ್ಯದರ್ಪಣ ತಂಡಕ್ಕಾಗಿಯೇ ಈ ನಾಟಕವನ್ನು ನಾನು ಸಿದ್ಧಪಡಿಸಿದೆ.ಎಲ್.ಎಸ್.ಸುಧೀಂದ್ರ, ಹೂಗೊಪ್ಪಲು ಕೃಷ್ಣಮೂರ್ತಿ, ಬಿ.ವಿ.ರಾಜಾರಾಂ, ನಳಿನಿ ಅಕ್ಕ ಹಾಗೂ ಮಂಜುನಾಥ್ ಸೆರೆಯಾಳುಗಳಾಗಿ, ಕೃಷ್ಣೇಗೌಡ ಹಾಗೂ ರಿಚರ್ಡ್ ಲೂಯಿಸ್ ಅವರು militiamen ಗಳಾಗಿ ಅಭಿನಯಿಸಿದ್ದರು.ಸುತ್ತ ಕಪ್ಪು ಪರದೆಗಳ ಒಂದು ಕೋಟೆಯನ್ನೇ ಕಟ್ಟಿ ಎರಡು ಮಟ್ಟಗಳಲ್ಲಿ ಎರಡು ರಂಗಕ್ರಿಯಾ ಸ್ಥಳಗಳ ವೇದಿಕೆ ಸಿದ್ಧಪಡಿಸಿ ಮಂದ ಬೆಳಕಿನಲ್ಲಿ ಘಟಿಸುವಂತೆ ನಾಟಕದ ವಿನ್ಯಾಸವನ್ನು ಅಣಿಗೊಳಿಸಿದ್ದೆ.
ಈ ನಾಟಕಕ್ಕೆ ಅತ್ಯಗತ್ಯವಾಗಿ ಬೇಕಿದ್ದ ಉಸಿರುಗಟ್ಟಿಸುವ ವಾತಾವರಣ ನಿರ್ಮಿಸುವಲ್ಲಿ ಇದು ಮಹತ್ತರ ಪಾತ್ರ ನಿರ್ವಹಿಸಿತ್ತು. ಇನ್ನು ಅಭಿನಯದ ದೃಷ್ಟಿಯಿಂದ ಹೇಳುವುದಾದರೆ ಎಲ್ಲರದೂ ಅತ್ಯಂತ ಪ್ರೌಢಮಟ್ಟದ ಅಭಿನಯ. ನಾಟಕದ ಒಂದು ದೃಶ್ಯದಲ್ಲಿ ಒಬ್ಬ ಮಿಲಿಟರಿ ಯೋಧ(ರಿಚರ್ಡ್ ಜಿ ಲೂಯಿಸ್ ) ಒಬ್ಬ ಸೆರೆಯಾಳಿನ ಬಾಯಿ ಬಿಡಿಸುವ ಸಲುವಾಗಿ ಅವನನ್ನು ಹಿಂಸಿಸತೊಡಗುತ್ತಾನೆ. ನೋವು ಸಹಿಸದೆ ಚೀರಿದರೆ ಸೋಲೊಪ್ಪಿಕೊಂಡಂತೆ ಎಂದು ಭಾವಿಸುವ ಆ ಪ್ರತಿರೋಧ ಹೋರಾಟಗಾರ (ಹೂಗೊಪ್ಪಲು ಕೃಷ್ಣಮೂರ್ತಿ) ಹಲ್ಲುಕಚ್ಚಿ ನೋವು ಸಹಿಸಿಕೊಳ್ಳುತ್ತಲೇ ಇರುತ್ತಾನೆ. ಅವನ ಕೈಗಳಿಗೆ ರೂಲುದೊಣ್ಣೆ ಕಟ್ಟಿ ತಿರುಗಿಸುತ್ತಿರುವ ಯೋಧ ಅವನನ್ನು ಛೇಡಿಸುತ್ತಲೇ ಇರುತ್ತಾನೆ:
“ಎಷ್ಟು ಹೊತ್ತು ಅಂತ ನೋವು ಸಹಿಸಿಕೋತೀಯಾ? ಚೀರಿಬಿಡು..ಚೀರಿಬಿಡು…ನೀನು ಚೀರೋ ತನಕ ನಾನು ವಿರಮಿಸೋಲ್ಲ..ಚೀರಿಬಿಡು…ಇನ್ನೊಂದು ವಿಷಯ ಗೊತ್ತಾ ನಿನಗೆ? ಮೊದಲನೇ ಸಲ ಚೀರೋದೇ ಕಷ್ಟ! ಒಂದು ಸಲ ಚೀರಿಬಿಟ್ರೆ ಆಮೇಲೆ ಎಲ್ಲಾ ಸಲೀಸು! ಚೀರ್ತಾನೇ ಇರಬಹುದು..” ಎನ್ನುತ್ತಾ ದೊಣ್ಣೆ ತಿರುಗಿಸುತ್ತಲೇ ಇರುತ್ತಾನೆ. ಕೊನೆಗೊಮ್ಮೆ ನೋವು ತಡೆಯಲಾರದೆ ಕ್ರಾಂತಿಕಾರಿ ಹೃದಯ ವಿದ್ರಾವಕವಾಗಿ ಚೀರಿಯೇ ಬಿಡುತ್ತಾನೆ. ಚೀರಿನ ನಂತರ ಒಂದು ಕ್ಷಣ ರಂಗದ ಮೇಲೆ ಹೆಪ್ಪುಗಟ್ಟಿದಂಥ ಮೌನ.. ಪ್ರೇಕ್ಷಾಗೃಹದಲ್ಲಿ ಕೂಡಾ. ಬಹಳ ದಿನಗಳ ಕಾಲ ಹೂಗೊಪ್ಪಲು ಕೃಷ್ಣನ ಆ ಚೀರು ಧ್ವನಿ ಕಿವಿಗಳಲ್ಲಿ ಮೊರೆಯುತ್ತಿತ್ತು ಎಂದು ಅನೇಕ ಪ್ರೇಕ್ಷಕರು ಹೇಳಿದ್ದುಂಟು.
ಇದರ ಜತೆಗೇ ನೆನಪಿಸಿಕೊಳ್ಳಲೇ ಬೇಕಾದ ಮತ್ತೊಂದು ಪ್ರಸಂಗ ಎಂದರೆ:
ಅಂದು ನಾಟಕ ನೋಡಲು ನಮ್ಮ ಮನೆಯವರೆಲ್ಲರೂ ಬಂದಿದ್ದರು—ಅಣ್ಣನ(ನನ್ನ ತಂದೆ) ಆದಿಯಾಗಿ. ನಾಟಕದಲ್ಲಿ ಮಧ್ಯಂತರಕ್ಕೆ ಮುನ್ನ ಬರುವ ದೃಶ್ಯದಲ್ಲಿ ಒಬ್ಬ ಹೋರಾಟಗಾರನನ್ನು ಹಿಂಸಿಸಿ ಕಳಿಸಿದ ಯೋಧರು ‘ಆ ಹುಡುಗಿಯನ್ನು ಕರೆತನ್ನಿ’ ಎಂದು ಅಬ್ಬರಿಸುತ್ತಾರೆ. ಅದಾದ ಒಂದೆರಡು ನಿಮಿಷಗಳಿಗೇ ಮಧ್ಯಂತರ. ಕಲಾಕ್ಷೇತ್ರದ ಲೈಟಿಂಗ್ ಕ್ಯಾಬಿನ್ ನಲ್ಲಿ ಕುಳಿತಿದ್ದ ನನಗೆ, ಅಣ್ಣ ಇದ್ದಕ್ಕಿದ್ದಂತೆ ಎದ್ದು ಬಾಗಿಲೆಡೆಗೆ ಧಾಪುಗಾಲಿಟ್ಟುಕೊಂಡು ಹೊರ ಹೋಗುತ್ತಿರುವುದು ಕಾಣಿಸಿತು.
ರೆಸ್ಟ್ ರೂಂ ಗೆ ಹೋಗಿ ಬರುತ್ತಾರೆಂದುಕೊಂಡು ನಾನು ಸುಮ್ಮನಾದೆ. ಆದರೆ ಮಧ್ಯಂತರ ಮುಗಿದು ನಾಟಕ ಶುರುವಾದರೂ ಅಣ್ಣ ಮರಳಿ ಬರಲೇ ಇಲ್ಲ! ನಾಟಕ ಮುಗಿದ ಮೇಲೆ ಮನೆಯವರಿಂದ ವಿಷಯ ಗೊತ್ತಾಯಿತು: ಆ ಹುಡುಗಿಯ ಪಾತ್ರ ನಿರ್ವಹಿಸುತ್ತಿದ್ದವಳು ನಳಿನಿ ಅಕ್ಕ! ಒಂದು ಹಿಂಸೆಯ ದೃಶ್ಯವನ್ನು ಅದಾಗಲೇ ನೋಡಿ ಹೈರಾಣಾಗಿದ್ದ ಅಣ್ಣನಿಗೆ, “ಆ ಹುಡುಗಿಯನ್ನು ಕರೆತನ್ನಿ” ಎಂದು ಅಬ್ಬರಿಸಿದ್ದು ಕೇಳಿದೊಡನೆ ನಡುಕವೇ ಶುರುವಾಗಿ ಹೋಯಿತು.
ಮಗಳನ್ನು ಹಿಂಸಿಸುವ ದೃಶ್ಯವನ್ನು ಕೂತು ನೋಡುವುದಿರಲಿ, ಕಲ್ಪಿಸಿಕೊಳ್ಳಲೂ ಅವರಿಗೆ ಶಕ್ಯವಿರಲಿಲ್ಲ! ಅಲ್ಲಿಂದ ಎದ್ದು ಹೊರಟವರು ಬಸ್ ಹತ್ತಿಕೊಂಡು ಸೀದಾ ಮನೆಗೆ ಬಂದುಬಿಟ್ಟರಂತೆ! ಅಷ್ಟು ಮೃದುಸ್ವಭಾವ ಅಣ್ಣನದು..ಹೆಂಗರುಳು!ವಾಸ್ತವವಾಗಿ ನಾಟಕದಲ್ಲಿ ಹೆಣ್ಣುಮಗಳನ್ನು ಹಿಂಸಿಸುವ ದೃಶ್ಯವೇ ಇಲ್ಲ! ಮಧ್ಯಂತರದ ನಂತರದ ನಾಟಕ ಶುರುವಾಗುವುದೇ ಅವಳನ್ನು ಮರಳಿ ಅವರ ಕೋಣೆಗೆ ತಂದು ಬಿಡುವುದರೊಂದಿಗೆ. ಆದರೆ ಆಗ ಅಣ್ಣನಿಗೆ ಅದನ್ನು ವಿವರಿಸಿ ಹೇಳುವುದಾದರೂ ಯಾರು?! ಆತಂಕಭರಿತರಾಗಿ ಎದ್ದು ದುಡುದುಡು ಹೊರನಡೆದ ಅಣ್ಣನ ಆ ಚಿತ್ರ ಇನ್ನೂ ನನ್ನ ಕಣ್ಣ ಮುಂದೆ ಹಾಗೇ ಕೆತ್ತಿಟ್ಟಂತಿದೆ!
ಮುಂದೆ ಕೆಲ ವರ್ಷಗಳ ನಂತರ ಅಣ್ಣ ಮಹಾಭಾರತ ಧಾರಾವಾಹಿಯ ಟೇಪ್ ಹಾಕಿಕೊಂಡು ಹಲವಾರು ಬಾರಿ ವೀಕ್ಷಿಸಿರುವುದುಂಟು. ಆಗಲೂ ಹಾಗೆಯೇ:”ದ್ರೌಪದಿಯನ್ನು ರಾಜಸಭೆಗೆ ಕರೆತನ್ನಿ” ಎಂಬ ಆಜ್ಞೆ ಹೊರಡುತ್ತಿದ್ದಂತೆಯೇ ಅಣ್ಣನ ಕೈಲಿದ್ದ ರಿಮೋಟ್ ಜಾಗೃತವಾಗಿ ಬಿಡುತ್ತಿತ್ತು!ದ್ರೌಪದಿಯ ಸೀರೆ ಸೆಳೆಯುವ ದೃಶ್ಯ ಮುಗಿಯುವ ತನಕ ಟೇಪ್ ಅನ್ನು ಮುಂದೋಡಿಸಿ ನಂತರದ ಕಥಾಭಾಗವನ್ನು ನೋಡುತ್ತಿದ್ದರು! ಹೆಣ್ಣುಮಕ್ಕಳ ಕಣ್ಣಲ್ಲಿ ನೀರು ಬರುವುದಾಗಲೀ ಅವರು ಸಂಕಟ ಪಡುವುದಾಗಲೀ ಅವರಿಗೆ ಯಾವುದೇ ಕಾರಣಕ್ಕೆ ಹಿಂಸೆಯಾಗುವುದಾಗಲೀ ಅಣ್ಣನಿಗೆ ಒಂದಿಷ್ಟೂ ಸಹನೆಯಾಗುತ್ತಿರಲಿಲ್ಲ.
ಇರಲಿ.
‘ನೆರಳಿಲ್ಲದ ಜೀವಗಳು’ ನಾಟಕದಲ್ಲಿ ಮಾತ್ರ ನಳಿನಿ ಅಕ್ಕನದು ಅತ್ಯಂತ ಭಾವಪೂರ್ಣ ಅಭಿನಯ.ಸುಧಿ,ರಿಚಿ, ಕೃಷ್ಣ, ರಾಜಾರಾಂ, ಕೃಷ್ಣೇಗೌಡ,ಮಂಜು… ಇವರುಗಳಾದರೂ ಅಷ್ಟೇ..ತಂತಮ್ಮ ಪಾತ್ರಗಳಲ್ಲಿ ಅಭಿನಯಿಸಿದರೆನ್ನುವುದಕ್ಕಿಂತ ಜೀವಿಸಿದರೆಂದೇ ಹೇಳಿದರೆ ಅತಿಶಯೋಕ್ತಿಯಲ್ಲ. ನನಗೂ ಈ ನಾಟಕ ಸಾಕಷ್ಟು ತೃಪ್ತಿಯನ್ನೂ ಹೆಸರನ್ನೂ ತಂದುಕೊಟ್ಟಿತು.ಮುಂದೆ ಇದೇ ನಾಟಕವನ್ನು ‘ನಾಟಕ್’ (‘gnatak’) ಎಂದು ಅವರು ತಂಡದ ಹೆಸರು ಬರೆಯುತ್ತಿದ್ದ ನೆನಪು!) ತಂಡಕ್ಕೆ ಇಂಗ್ಲೀಷ್ ನಲ್ಲಿ ಮಾಡಿಸಿದೆ. ಪ್ರತಿಭಾವಂತ ಕಲಾವಿದರೇ ತುಂಬಿದ್ದ ಆ ತಂಡದ ಪ್ರಯೋಗಗಳೂ ಸಹಾ ಗಮನ ಸೆಳೆಯುವಲ್ಲಿ ಯಶಸ್ವಿಯಾದವು.
ನಾನು ಬಾಲ್ಯದಿಂದಲೂ ತುಂಬಾ ಸಂಕೋಚ ಹಾಗೂ ನಾಚಿಕೆಯ ಸ್ವಭಾವದವನೆಂದು ಈಗಾಗಲೇ ಹೇಳಿದ್ದೇನಲ್ಲವೇ..ರಂಗದ ಮೇಲೆ ಬಂದಾಗ ಇವು ನನ್ನನ್ನು ಬಾಧಿಸುತ್ತಿರಲಿಲ್ಲವಾದರೂ ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಗೋಳು ಹುಯ್ದುಕೊಳ್ಳುತ್ತಿದ್ದವು.ಇದರ ಜತೆಗೆ ನನ್ನ ಕೆಲ ಪೆದ್ದು ವಿಚಾರ ಹಾಗೂ ಅತಿ ಪೆದ್ದು ನಿರ್ಧಾರಗಳಿಂದಾಗಿಯೂ ಕೆಲವೊಮ್ಮೆ ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತಿದ್ದೆ! ಅಂಥದೊಂದು ಪ್ರಸಂಗವನ್ನು ಈಗ ನೆನೆಸಿಕೊಳ್ಳುತ್ತಿದ್ದೇನೆ.
ನನ್ನ ಸಹಪಾಠಿಯೇ ಆಗಿದ್ದ ರವಿ ಎಂಬಾತ ಶಾಲೆಯಲ್ಲಿ ಮೊದಲ ವರ್ಷದ ವಿದ್ಯಾರ್ಥಿನಿಯಾಗಿದ್ದ ಸುಶೀಲಳ ಪ್ರೇಮಪಾಶದಲ್ಲಿ ಸಿಲುಕಿಬಿಟ್ಟಿದ್ದ. ಆಕೆಗೂ ಇವನ ಮೇಲೆ ಪ್ರೀತಿ ಮೊಳೆತು ಇಬ್ಬರೂ ಖುಷಿಯಾಗಿ ಓಡಾಡಿಕೊಂಡಿದ್ದರು. ಒಂದು ದಿನ ರವಿ ದುಮುಗುಡುತ್ತಾ ನನ್ನ ಬಳಿ ಬಂದ. ಮುಖ ಸಿಟ್ಟಿನಿಂದ ಕೆಂಪಾಗಿತ್ತು. ತುಟಿಗಳು ಅದುರುತ್ತಿದ್ದವು. ನಾನು, “ಯಾಕೋ ಇಷ್ಟು ಪರೇಶಾನ್ ಆಗಿದೀಯಾ? ಸುಶೀಲಾ ಏನಾದ್ರೂ ಕೈಕೊಟ್ಟಳೇನೋ?” ಎಂದು ಹಗುರಾಗಿ ಛೇಡಿಸಿದೆ. ಅವನ ಉತ್ತರ ಕೇಳಿದ ಮೇಲೆ ಸಿಟ್ಟಿನಿಂದ ಕುದಿಯುವ ಪಾಳಿ ನನ್ನದಾಗಿತ್ತು! ಹಾಸ್ಟೆಲ್ ನ ನನ್ನ ಕೋಣೆಯನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದ ವಿಶಾಲ್ ಎಂಬ ನನ್ನ ಸಹಪಾಠಿ ಸುಶೀಲಳಿಗೆ ಒಂದು ಚೀಟಿ ಬರೆದು, “ನನ್ನ ವೃತ್ತಿಯಲ್ಲಿ ನನಗೆ ಸಹಚರಿಯಾಗಿ ಬರುವೆಯಾ? ಒಬ್ಬ professional partner ಆಗಿ ನೀನು ಬಂದರೆ ನಾವಿಬ್ಬರೂ ಒಟ್ಟಿಗೆ ಸೇರಿ ಅದ್ಭುತಗಳನ್ನೇ ಸೃಷ್ಟಿಸಬಹುದು” ಎಂದು ಪ್ರೇಮ ನಿವೇದನೆ ಮಾಡಿಕೊಂಡಿದ್ದನಂತೆ! ಅಸಲಿಗೆ ಆ ಪುಣ್ಯಾತ್ಮ ವಿಶಾಲನಿಗೆ ಆ ವೇಳೆಗಾಗಲೇ ಲಗ್ನವಾಗಿದ್ದಷ್ಟೇ ಅಲ್ಲದೆ ಇಬ್ಬರು ಮಕ್ಕಳೂ ಇದ್ದರು! ಆದರೂ ‘ತನ್ನ ಬದುಕಿನ ಕೊರತೆಗಳನ್ನು ನೀಗಿಸಿ ನೆರವಾಗಲು ವೃತ್ತಿ ಸಂಗಾತಿಯೊಬ್ಬಳು ಬೇಕು’ ಎಂದು ಆತ ಕನವರಿಸುತ್ತಿದ್ದ! ಯಾಕೋ ನನಗೂ ವಿಶಾಲನ ವರ್ತನೆ ಅಕ್ಷಮ್ಯ ಎನ್ನಿಸಿ ಅವನ ಮೇಲೆ ಭಯಂಕರ ಸಿಟ್ಟು ಬಂದುಬಿಟ್ಟಿತು.
ನೈತಿಕ ಜಾಗೃತಿಯ ಆವೇಶದ ಹಿಡಿತಕ್ಕೆ ಸಿಕ್ಕಿ ಬಿದ್ದಿದ್ದ ನಾನು ಹಾಗೂ ಸಂತ್ರಸ್ತ ರವಿ ಇಬ್ಬರೂ ಒಂದಷ್ಟು ಹೊತ್ತು ವಿಶಾಲನ ಜನ್ಮ ಜಾಲಾಡಿ ಒಳಗಿನ ಕುದಿಯನ್ನು ಒಂದಿಷ್ಟು ಆರಿಸಿಕೊಂಡೆವು. ಆಗಲೇ ರವಿ ಒಂದು ಅದ್ಭುತ ಸಲಹೆಯನ್ನು ನನ್ನ ಮುಂದಿಟ್ಟ: “ನನಗೇಕೋ ಈ ಹಾಸ್ಟಲ್ ನಲ್ಲಿ ವಿಶಾಲನಿರುವ ಕಡೆ ಇರಲು ಮನಸ್ಸಾಗುತ್ತಿಲ್ಲ. ಅವನನ್ನು ನೋಡಿದರೇ ಸಿಟ್ಟು ಕೆರಳಿಬಿಡುತ್ತದೆ.. ಅಸಹ್ಯವಾಗಿಬಿಡುತ್ತದೆ.. ಅದಕ್ಕೇ ಹಾಸ್ಟಲ್ ಬಿಟ್ಟು ಹೊರಗಡೆ ಒಂದು ರೂಂ ಮಾಡಿಕೊಂಡಿರೋಣ ಎಂದು ತೀರ್ಮಾನಿಸಿದ್ದೇನೆ. ಒಬ್ಬನಿಗೇ ಆದರೆ ಹೊರಗಡೆ ಬಾಡಿಗೆ ಹೆಚ್ಚಾಗಿಬಿಡುತ್ತದೆ. ನೀನೂ ನನ್ನ ಜೊತೆಗೆ ಬರುತ್ತೀಯಾ? ಶಾಲೆಗೆ ತೀರಾ ದೂರವಾಗದಂತೆ ಒಂದು ರೂಂ ಮಾಡಿಕೊಂಡು ನೆಮ್ಮದಿಯಾಗಿರೋಣ”.
ಹಿಂದೆ ಮುಂದೆ ನೋಡದೆ ಒಂದು ಕ್ಷಣವೂ ಆಲೋಚಿಸದೆ ನಾನು ಮಾತು ಕೊಟ್ಟೇಬಿಟ್ಟೆ: “ಆಯಿತು ಮಿತ್ರಾ! ನಿನ್ನ ಜತೆ ನಾನಿದ್ದೇನೆ. ಇಂದೇ ಸಂಜೆ ನನ್ನ ಆತ್ಮೀಯ ಗೆಳೆಯ ಸುಬ್ಬಣ್ಣನನ್ನು ನೋಡಿ ಲೋಧಿ ಕಾಲನಿಯಲ್ಲಿ ಒಂದು ರೂಂ ಸಿಗುತ್ತದಾ ಎಂದು ವಿಚಾರಿಸಿಕೊಂಡು ಬರುತ್ತೇನೆ”. ನನ್ನ ಆಶ್ವಾಸನೆ ಕೇಳಿ ರವಿಗೆ ಎಷ್ಟೋ ಸಮಾಧಾನವಾಗಿ ನನಗೆ ಧನ್ಯವಾದಗಳನ್ನರ್ಪಿಸಿ ಕೈಕುಲುಕಿ ಹೊರಟುಹೋದ. ನಾನೂ ಹೊಸ ಹುಮ್ಮಸ್ಸಿನಿಂದ,ಗೆಳೆಯನಿಗೆ ನೆರವಾಗುವ ಸದಾಶಯದಿಂದ ಅಂದೇ ಸಂಜೆ ಹೋಗಿ ಕಲಾವಿದ ಗೆಳೆಯ ಸುಬ್ಬಣ್ಣನನ್ನು ಭೇಟಿಯಾಗಿ ವಿಷಯ ತಿಳಿಸಿದೆ.
ನಮ್ಮ ಅದೃಷ್ಟಕ್ಕೆ ಸುಬ್ಬಣ್ಣನ ಕೋಣೆಗೆ ತುಸು ದೂರದಲ್ಲೇ ಒಂದು ರೂಂ ಬಾಡಿಗೆಗೆ ಇತ್ತು. ತಿಂಗಳಿಗೆ 150 ರೂಪಾಯಿ ಬಾಡಿಗೆ. ಹಾಸ್ಟಲ್ ನಲ್ಲಿ ನಾವು ಕೊಡುತ್ತಿದ್ದುದು ತಲಾ 70 ರೂಪಾಯಿ…ಜತೆಗೆ ಪ್ರತಿನಿತ್ಯ ಬಸ್ ನಲ್ಲಿ ಓಡಾಡಬೇಕು.. ಖರ್ಚು ಕೊಂಚ ಜಾಸ್ತಿಯೇ ಆಗುತ್ತಿತ್ತಾದರೂ ದೊರಕುತ್ತಿದ್ದ ನೆಮ್ಮದಿಯ ಮುಂದೆ ಅದೆಲ್ಲಾ ಗೌಣವಾಗಿಹೋಯಿತು. ಅಂದೇ, ಅಲ್ಲಿಯೇ ಸುಬ್ಬಣ್ಣನ ಬಳಿ ಸಾಲವಾಗಿ ತೆಗೆದುಕೊಂಡು ಮನೆಯ ಮಾಲೀಕನಿಗೆ ಒಂದು ತಿಂಗಳ ಮುಂಗಡ ಬಾಡಿಗೆಯನ್ನು ಕೊಟ್ಟು ಒಂದೆರಡು ದಿನಗಳಲ್ಲಿ ಬರುತ್ತೇವೆಂದು ಹೇಳಿ ವಿಜಯೋತ್ಸಾಹದಿಂದ ಹಾಸ್ಟಲ್ ಗೆ ಮರಳಿ ಬಂದೆ. ಬರುವ ವೇಳೆಗಾಗಲೇ ರವಿ ಮಲಗಿಬಿಟ್ಟಿದ್ದ. ಮರುದಿನ ಬೆಳಿಗ್ಗೆ ಅವನಿಗೆ ರೂಂ ಗೊತ್ತುಮಾಡಿರುವ ಸುದ್ದಿ ಹೇಳಿದಾಗ ಅವನಿಗಾಗುವ ಆನಂದವನ್ನು ಕಲ್ಪಿಸಿಕೊಂಡು ಹಿಗ್ಗುತ್ತಾ ನಾನೂ ನಿದ್ದೆಗೆ ಶರಣಾದೆ.
ಬೆಳಿಗ್ಗೆ ಬೇಗ ಎದ್ದು ಆತುರಾತುರವಾಗಿ ರವಿಯ ಕೋಣೆಗೆ ಹೋಗಿ ನಿದ್ದೆ ಮಾಡುತ್ತಿದ್ದ ಅವನನ್ನೆಬ್ಬಿಸಿ ವಿಷಯ ತಿಳಿಸಿ ಅವನ ಹರ್ಷೋದ್ಗಾರಕ್ಕೆ ನಾನು ಕಾಯುತ್ತಿದ್ದರೆ ಅವನು “ಅಯ್ಯೋ” ಎಂದು ಕರುಣಾಜನಕವಾಗಿ ಉದ್ಗರಿಸಿದ! ಅಷ್ಟಕ್ಕೇ ನಿಲ್ಲದೆ,” ಛೆ! ಎಂಥಾ ಕೆಲಸ ಮಾಡಿಬಿಟ್ಟೆ ಪ್ರಭು ಭಾಯ್! ನನಗೆ ಒಂದು ಮಾತು ಹೇಳಿ ಅಡ್ವಾನ್ಸ್ ಕೊಡೋದಲ್ಲವಾ! ಕೆಟ್ಟ ಸಿಟ್ಟಿನ ಆವೇಶದಲ್ಲಿ ಹೊರಗಡೆ ರೂಂ ಮಾಡಿಕೊಂಡಿರೋಣ ಅಂದಿದ್ದು ನಿಜ..ಆದರೆ ಹಾಗೆ ಮಾಡಿದರೆ ಸುಶೀಲಾನೂ ದೂರ ಆಗಿಬಿಡ್ತಾಳಲ್ಲಾ ಏನು ಮಾಡಲಿ? ಹಾಸ್ಟಲ್ ನಲ್ಲೇ ಇದ್ದರೆ ಆಗಾಗ್ಗೆ ನೋಡಿಕೊಂಡು ಮಾತಾಡಿಕೊಂಡಿರಬಹುದು.. ಅವಳನ್ನ ಹಾಗೆ ತುಂಬಾ ಹೊತ್ತು ಬಿಟ್ಟಿರೋಕೆ ನನಗೆ ಸಾಧ್ಯವೇ ಇಲ್ಲ!..

ಒಂದು ಕೆಲಸ ಮಾಡು.. ಏನಾದ್ರೂ ಸುಳ್ಳು ಹೇಳಿ ಅಡ್ವಾನ್ಸ್ ವಾಪಸ್ ತೊಗೊಂಡು ಬಿಡು..ಸರಿ..ಕ್ಲಾಸ್ ಗೆ ಲೇಟಾಗುತ್ತೆ.. ಸ್ನಾನ ಮಾಡಿಕೊಂಡು ಬಂದುಬಿಡ್ತೀನಿ” ಎಂದವನೇ ಕೈಲಿದ್ದ ಟವೆಲ್ ಝಾಡಿಸುತ್ತಾ ಹೊರಟೇಹೋದ ಆ ಅಮರ ಪ್ರೇಮಿ! ನಾನು ಒಂದಿಷ್ಟುಹೊತ್ತು ದಿಕ್ಕು ತೋಚದವನಂತೆ ಅಲ್ಲೇ ಕುಳಿತಿದ್ದು ನಂತರ ನಿಧಾನವಾಗಿ ಎದ್ದು ಲೋಧಿ ಕಾಲನಿ ಬಸ್ ಹತ್ತಿದೆ. ಮುಂಗಡ ಹಣ ವಾಪಸ್ ಕೊಡಲು ಮನೆ ಮಾಲಿಕ ಸುತರಾಂ ಒಪ್ಪಲಿಲ್ಲ. ಸುಬ್ಬಣ್ಣನ ಕೋಣೆಯಲ್ಲಿ ಒಂದಷ್ಟು ಹೊತ್ತು ಏನು ಮಾಡುವುದೆಂದು ಚರ್ಚೆ ಮಾಡಿದ್ದಾಯಿತು.
ಆ ವೇಳೆಗೆ ಸುಬ್ಬಣ್ಣನ ತಂಗಿ ಪ್ರಭಾ ಅಣ್ಣನ ಮನೆಯಲ್ಲಿ ಕೆಲ ದಿನ ಇದ್ದು ಹೋಗುವ ಸಲುವಾಗಿ ದಾವಣಗೆರೆಯಿಂದ ಬಂದಿದ್ದಳು. ಸುಬ್ಬಣ್ಣನಿಗಂತೂ ರವಿಯ ನಡವಳಿಕೆಯಿಂದ ವಿಪರೀತ ಬೇಸರವಾಗಿತ್ತು. “hopeless fellows..ಥೂ..ಆದರೆ ಅವರಿಗಿಂತ ಮೊದಲು ಅಂಥವರನ್ನೆಲ್ಲಾ ನಂಬೋ ನಿನಗೆ ಬುದ್ಧಿ ಇಲ್ಲ ಅನ್ನಬೇಕು! ಒಂದು ಚೂರೂ ವಿವೇಚನೆ ಇಲ್ಲದವನ ಹಾಗೆ ಅವನು ಹೇಳಿದಕ್ಕೆಲ್ಲಾ ಕೋಲೆಬಸವನ ಹಾಗೆ ತಲೆ ಆಡಿಸಿಬಿಟ್ಟು ಬಂದು ಅಡ್ವಾನ್ಸ್ ಬೇರೆ ತೆತ್ತು ಕೂತಿದೀಯಲ್ಲಾ.. ನಿನ್ನ ದಡ್ಡತನಕ್ಕೆ ಏನು ಹೇಳಲಿ?” ಎಂದು ನನಗೂ ಸಣ್ಣದಾಗಿ ಚುರುಕು ಮುಟ್ಟಿಸಿದ.
ಪೆಚ್ಚುಮೋರೆ ಹಾಕಿಕೊಂಡು ಕಣ್ಣು ತುಂಬಿಕೊಂಡು ಕುಳಿತಿದ್ದ ನನ್ನನ್ನು ನೋಡಿ ಕೊನೆಗೆ ಅವನಿಗೇ ಕರುಣೆ ಉಕ್ಕಿಬಂದು,” ಹೋಗಲಿ ಬಿಡು..ಯೋಚನೆ ಮಾಡಬೇಡ.. ಈಗ ಹಾಸ್ಟಲ್ ನಲ್ಲೇ ಇರ್ತೀನಿ ಅಂದ್ರೆ ಅಲ್ಲೂ 70 ರೂಪಾಯಿ ಬಾಡಿಗೆ ಕಟ್ಟಬೇಕಾಗುತ್ತೆ…ಅದೆಲ್ಲಾ ಏನೂ ಬೇಡ..ಇದೊಂದು ತಿಂಗಳು ಹೇಗೋ ಅನುಸರಿಸಿಕೊಂಡು ಆ ರೂಂ ನಲ್ಲಿರು…ಪ್ರಭಾ ಊರಿಗೆ ಮೇಲೆ ನನ್ನ ರೂಂಗೇ ಬಂದಿರುವಿಯಂತೆ..ನನಗೆ ಬಾಡಿಗೇನೂ ಏನೂ ಕೊಡಬೇಡ.. “ಎಂದು ಸಮಾಧಾನ ಪಡಿಸಿದ.ಸುಬ್ಬಣ್ಣನ ಮಾತು ಕೇಳಿ ದೊಡ್ಡ ಭಾರ ಇಳಿದಂತಾಗಿ ಎಷ್ಟೋ ಸಮಾಧಾನವಾಯಿತು.
ಮರುದಿನವೇ ನನ್ನ ಪುಟ್ಟ ಹಾಸಿಗೆ—ಟ್ರಂಕ್ ಸಮೇತ ಸುಬ್ಬಣ್ಣನ ನೆರವಿನಿಂದ ಲೋಧಿ ಕಾಲನಿಯ ರೂಂಗೆ ವಾಸ್ತವ್ಯ ಬದಲಿಸಿದೆ.ಒಂದು ರೀತಿಯಲ್ಲಿ ಹಾಗೆ ನಾನು ಲೋಧಿ ಕಾಲನಿಗೆ,ಸುಬ್ಬಣ್ಣನ ಸನಿಹಕ್ಕೆ ಹೋದದ್ದು ಬಹಳ ಒಳ್ಳೆಯ ನಿರ್ಧಾರವೇ ಆಗಿಹೋಯಿತು!ಅದು ಹೇಗೆಂದರೆ:
ನಮಗೆ ‘ಸಂಸ್ಕೃತ ನಾಟಕ’ ವಿಷಯವನ್ನು ಬೋಧಿಸುತ್ತಿದ್ದ ನಿಭಾ ಜೋಶಿಯವರು ‘ಅಜಂತಾ—ಎಲ್ಲೋರಾದ ವರ್ಣಚಿತ್ರ’ಗಳನ್ನು ಕುರಿತಾಗಿ ವಿಶೇಷ ಪ್ರಬಂಧ ಬರೆಯುವ ಪ್ರಾಜೆಕ್ಟ್ ಕೊಟ್ಟಿದ್ದರು. ವರ್ಣಚಿತ್ರಗಳ ಪ್ರತಿಕೃತಿಗಳನ್ನು ಅಧ್ಯಯನ ಮಾಡಿ ಒಬ್ಬ ರಂಗಕರ್ಮಿಯ ದೃಷ್ಟಿಯಿಂದ ಅವಲೋಕಿಸಿ ಪ್ರಬಂಧ ಸಿದ್ಧ ಪಡಿಸಬೇಕಿತ್ತು. ಈ ಪ್ರಬಂಧವನ್ನು ಸಿದ್ಧಪಡಿಸಲು ಸುಬ್ಬಣ್ಣ ನನಗೆ ನೀಡಿದ ನೆರವು ಅಪಾರ.ಸ್ವತಃ ಅದ್ಭುತ ಚಿತ್ರಕಲಾವಿದನಾಗಿದ್ದ ಸುಬ್ಬಣ್ಣ ಒಂದು ವರ್ಣಚಿತ್ರವನ್ನು,ಒಂದು ಕಲಾಕೃತಿಯನ್ನು ‘ನೋಡುವ ಕ್ರಮ’ವನ್ನು ನನಗೆ ಕಲಿಸಿದ. ಜಯದೇವನ ಅಷ್ಟಪದಿಗಳನ್ನೂ ಬಳಸಿಕೊಂಡು ಚಿತ್ರಗಳ ರೇಖಾ ವಿನ್ಯಾಸ—ವರ್ಣಸಂಯೋಜನೆಗಳನ್ನು ನಾನು ವಿಶ್ಲೇಷಿಸಿದ್ದ ಪರಿಯನ್ನು ನಿಭಾ ಜೋಶಿಯವರು ಅಪಾರವಾಗಿ ಮೆಚ್ಚಿಕೊಂಡಿದ್ದರು. ಮುಂದೆ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ನಡೆದ ಒಂದು ಸೆಮಿನಾರ್ ನಲ್ಲಿ ಆ ಪ್ರಬಂಧವನ್ನು ಮಂಡಿಸಲು ಅವಕಾಶ ಒದಗಿ ಬಂದು ಅನೇಕ ಹಿರಿಯ ಕಲಾವಿದರೂ ಸಹಾ ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು! ಇದಿಷ್ಟೇ ಅಲ್ಲದೆ ಅಮೃತಾ ಶೇರ್ ಗಿಲ್ ರ ವರ್ಣ ಚಿತ್ರಗಳ ವಿಶ್ಲೇಷಣೆ ಹಾಗೂ ಬೆಳಕಿನ ಸಂಯೋಜನೆಯನ್ನು ಕುರಿತಾದ ನನ್ನ ಪ್ರಾಜೆಕ್ಟ್ ನ ತಯಾರಿಯಲ್ಲೂ ಸುಬ್ಬಣ್ಣನ ನೆರವು ಒದಗಿ ಬಂದು ನನ್ನ ಕೆಲಸವನ್ನು ಹಗುರಾಗಿಸಿದ್ದಲ್ಲದೆ ನನಗೆ ಒಳ್ಳೆಯ ಹೆಸರನ್ನೂ ತಂದುಕೊಟ್ಟಿತು.
“ಆದದ್ದೆಲ್ಲಾ ಒಳ್ಳೆಯದಕ್ಕೇ ಆಗಿದೆ.ಆಗುವುದೆಲ್ಲಾ ಒಳ್ಳೆಯದೇ ಆಗುತ್ತಿದೆ.ಆಗಲಿರುವುದೂ ಒಳ್ಳೆಯದೇ ಆಗಿದೆ..ರೋದಿಸಲು ನೀನೇನು ಕಳೆದುಕೊಂಡಿರುವೆ? ಕಳೆದುಕೊಳ್ಳಲು ನೀನು ತಂದಿರುವುದಾದರೂ ಏನು?…” ಇತ್ಯಾದಿಯಾಗಿ ಗೀತೆಯ ಸಾರಸಂಗ್ರಹದ ಸೂಕ್ತಿಗಳನ್ನು ಓದಿದ ನೆನಪಾಯಿತು.’ಆದದ್ದೆಲ್ಲಾ ಒಳ್ಳೆಯದಕ್ಕೇ ಆಗಿದೆ’ ಎಂಬ ಸೂಕ್ತಿಯ ಬಗ್ಗೆ ವೈಯಕ್ತಿಕವಾಗಿ ನನಗೆ ಅಷ್ಟೇನೂ ನಂಬಿಕೆ ಇಲ್ಲದಿದ್ದರೂ,ಎಷ್ಟೋ ಸಲ ನಮ್ಮ ಮನಸ್ಸಮಾಧಾನಕ್ಕಾಗಿ ಇಂಥದೊಂದು ಆಸರೆಗೆ ಜೋತು ಬೀಳುತ್ತೇವೇನೋ ಎಂದು ಎಷ್ಟೊ ಬಾರಿ ಅನ್ನಿಸಿದ್ದರೂ ಈ ಒಂದು ಸಂದರ್ಭದಲ್ಲಿ ಮಾತ್ರ ಈ ಮಾತು ಅಕ್ಷರಶಃ ಸತ್ಯ ಅನ್ನಿಸಿಬಿಟ್ಟಿತು! ಲೋಧಿ ಕಾಲನಿಗೆ ರೂಂ ನೆಪದಲ್ಲಿ ನನ್ನನ್ನು ಅಟ್ಟಿ ಸುಬ್ಬಣ್ಣನ ಸಾಮೀಪ್ಯವನ್ನೂ ಆಶ್ರಯವನ್ನೂ ಒದಗಿಸಿಕೊಟ್ಟು ಉಪಕರಿಸಿದ ರವಿ ಎಂಬ ಪುಣ್ಯಾತ್ಮನಿಗೆ ಮನಸ್ಸಿನಲ್ಲೇ ಅನಂತ ಧನ್ಯವಾದಗಳನ್ನು ಅರ್ಪಿಸಿದೆ!
ಹೀಗೆ ಅತ್ಯಂತ ಪ್ರೀತಿಯ ಗೆಳೆಯ ಸುಬ್ಬಣ್ಣನೊಟ್ಟಿಗೆ ಕಳೆದ ದಿನಗಳನ್ನು ಮೆಲುಕುಹಾಕುತ್ತಿರುವಂತೆಯೇ,ಗಾಢ ವಿಷಾದಕ್ಕೆ ನೂಕುವ ವಾಸ್ತವದ ವರ್ತಮಾನದ ಕರಾಳತೆಯೂ ಧುತ್ತೆಂದು ಕಣ್ಣೆದುರು ಧುಮುಕಿ ಮನಸ್ಸು ಸಂಕಟದ ಮಡುವಾಗುತ್ತದೆ. ಈಗ ಹಲವಾರು ವರ್ಷಗಳಿಂದಲೇ ಸುಬ್ಬಣ್ಣನ ಆರೋಗ್ಯ ತೀರಾ ಹದಗೆಟ್ಟುಹೋಗಿದೆ.ಹಲ ವರ್ಷಗಳ ಹಿಂದೆ ಎಲ್ಲವೂ ಸರಿಯಾಗಿಯೇ ಇತ್ತು.ಪರಸ್ಪರ ಪ್ರೀತಿಸಿ ಮದುವೆಯಾದ ಬಾಳ ಗೆಳತಿ ಸೀಮಾ..ಮುದ್ದು ಮಗಳು ಅಪೂರ್ವ…ಸ್ವರ್ಗಕ್ಕೆ ಕಿಚ್ಚು ಹಚ್ಚುವಂತೆಯೇ ಇತ್ತು ಸುಬ್ಬಣ್ಣನ ಸುಂದರ ಬದುಕು. ಅವರು ಬೆಂಗಳೂರಿಗೆ ಬಂದಾಗ ನಮ್ಮಲ್ಲಿಗೆ ಬರುತ್ತಿದ್ದರು;
ನಾವು ದೆಹಲಿಗೆ ಹೋದಾಗ ಅವರಲ್ಲಿಗೆ. ಎಲ್ಲವೂ ಚಂದ ಅಂದುಕೊಳ್ಳುವಾಗಲೇ ಸುಬ್ಬಣ್ಣನ ಸಂಸಾರದಲ್ಲಿ ಬಿರುಕು ಮೂಡಿತ್ತು..ಸುಬ್ಬಣ್ಣ—ಸೀಮಾ ಬೇರೆ ಬೇರೆಯಾದರು. ಆದರೆ ಮಗಳಿಗೆ ಒಳ್ಳೆಯ ಬದುಕನ್ನು ಕಟ್ಟಿಕೊಡುವ ಸಂಕಲ್ಪ ಮಾಡಿಕೊಂಡ ಇಬ್ಬರೂ ಬೇರೆ ಮದುವೆಯಾಗದೆ ಒಂದು ತಪಸ್ಸಿನಂತೆ ಮಗಳನ್ನು ಬೆಳೆಸಿದರು. ಇದ್ದುದರಲ್ಲೇ ಎಲ್ಲವೂ ಸರಿಯಾಗಿಯೇ ನಡೆಯುತ್ತಿದೆ ಅಂದುಕೊಂಡು ಸಮಾಧಾನದ ನಿಟ್ಟುಸಿರು ಬಿಡುತ್ತಿರುವಂತೆಯೇ ಮತ್ತೊಂದು ಪೆಟ್ಟು: ಸುಬ್ಬಣ್ಣನ ಮೆದುಳಿಗೆ ಆಘಾತವಾಗಿ ಅವನ ಮಾತೇ ನಿಂತು ಹೋಯಿತು. ನಡೆಯಲೂ ಆಗದ ಸ್ಥಿತಿಯಲ್ಲಿದ್ದ ಅವನನ್ನು ವ್ಹೀಲ್ ಛೇರ್ ಮೇಲೆ ಕೂರಿಸಿಕೊಂಡು ಬೆಂಗಳೂರಿನ nimhans ಆಸ್ಪತ್ರೆಗೆ ಯಾರೋ (ಯಾರೆಂದು ನನಗೆ ತಿಳಿಯದು) ಕರೆತಂದು ಬಿಟ್ಟರಂತೆ.
ಅಲ್ಲಿದ್ದ ನಮ್ಮ ಮತ್ತೊಬ್ಬ ಆತ್ಮೀಯ ಗೆಳೆಯ ಶಿವು—ಡಾ॥ಶಿವಶಂಕರ್—ತುಂಬು ಮುತುವರ್ಜಿಯಿಂದ ಸುಬ್ಬಣ್ಣನ ಆರೈಕೆ ಮಾಡಿದನಂತೆ. ಆದರೆ ಆಸ್ಪತ್ರೆಯಿಂದ ಹತ್ತಿರದ ಸಂಬಂಧಿಕರ ಮನೆಗೆ ಸುಬ್ಬಣ್ಣನನ್ನು ಕರೆದೊಯ್ದ ಮೇಲೆ ಪರಿಸ್ಥಿತಿ ಬಿಗಡಾಯಿಸಿ ಬಿಟ್ಟಿತಂತೆ. ಸಿಗಬೇಕಾದಷ್ಟು ಕಾಳಜಿ—ಆರೈಕೆಗಳು ದೊರೆಯದೆ ಅನಾದರ—ಅಸಡ್ಡೆಗಳಿಗೆ ಗುರಿಯಾಗಿ ಜರ್ಝರಿತನಾಗಿ ಹೋದ ಸುಬ್ಬಣ್ಣ. ವಿಷಯ ತಿಳಿದೊಡನೆ ಧಾವಿಸಿ ಸುಬ್ಬಣ್ಣನ ಬಳಿಗೆ ಬಂದವಳು ಅವನ ಒಂದು ಕಾಲದ ಮಡದಿ ಸೀಮಾ! ಬೇರೆ ಬೇರೆಯಾಗಿ ಹತ್ತಾರು ವರ್ಷಗಳೇ ಉರುಳಿಹೋಗಿದ್ದರೂ, ತಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳ ಕಂದಕಗಳೇ ಸೃಷ್ಟಿಯಾಗಿದ್ದರೂ ಅದೆಲ್ಲವನ್ನೂ ಮರೆತು ಆ ಹೆಣ್ಣುಮಗಳು ಸುಬ್ಬಣ್ಣನನ್ನು ಹುಡುಕಿಕೊಂಡು ಬಂದು ತನ್ನೊಟ್ಟಿಗೇ ಅವನನ್ನು ದೆಹಲಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ನೋಡಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ಆಕೆಯ ಜತೆ ಒಂದು ತಾಸು ಮಾತಾಡಿದೆ. ಅತ್ಯಂತ ತುರ್ತಾಗಿ ನೆರವಿನ ಅಗತ್ಯವಿದ್ದ ಸಂದರ್ಭದಲ್ಲೂ ನಮ್ಮ ನಮ್ಮದೇ ಅನೇಕ ಅನಿವಾರ್ಯ ಕಾರಣಗಳಿಂದಾಗಿ ಸಮಯಕ್ಕೊದಗದ ನಮ್ಮ ಅಸಹಾಯಕತೆಯನ್ನೂ ನಿಷ್ಕ್ರಿಯತೆಯನ್ನೂ ಕ್ಷಮಿಸಿ ಎಂದು ಕೇಳಿಕೊಂಡೆ.

ಆ ಹೆಣ್ಣುಮಗಳೂ ಅಷ್ಟೇ ಸಮಾಧಾನ ಚಿತ್ತೆ. “ಇರಲಿ ಬಿಡಿ..ಆದದ್ದೆಲ್ಲಾ ಒಳ್ಳೆಯದೇ ಆಯಿತು ಬಿಡಿ…ಹಾಗೆ ಅವನು ಏಕಾಂಗಿಯಾಗದೇ ಹೋಗಿದ್ದರೆ, ಹಾಗೊಂದು ದಾರುಣ ಸ್ಥಿತಿಯನ್ನು ಮುಟ್ಟದೇ ಹೋಗಿದ್ದರೆ ನಾನು ಮತ್ತೆ ಅವನ ಸಮೀಪ ಬರುತ್ತಲೇ ಇರಲಿಲ್ಲವೇನೋ..ಬದುಕಿನ ಎಷ್ಟೋ ಸುಂದರ ಗಳಿಗೆಗಳನ್ನು ಒಟ್ಟಿಗೆ ಹಂಚಿಕೊಂಡು ಸಂತಸ ಪಟ್ಟಿದ್ದೇವೆ..ಮುದ್ದುಮಗಳ ಲಾಲನೆ ಪಾಲನೆಯಲ್ಲಿ ಕನಸಿನರಮನೆಗಳನ್ನೇ ಕಟ್ಟಿದ್ದೇವೆ..ಈಗ ಇಂಥ ಸ್ಥಿತಿಯಲ್ಲಿ ಅವನನ್ನು ಒಂಟಿಯಾಗಿ ಹೇಗೆ ತಾನೇ ಬಿಡಲಿ? ಈಗ ಅವನು ನನ್ನ ಜವಾಬ್ದಾರಿ…ನಾನು ಅವನನ್ನು ನೋಡಿಕೊಳ್ಳುತ್ತೇನೆ” ಎಂದು ದೃಢತೆಯಿಂದ,ಪೂರ್ಣ ಆತ್ಮವಿಶ್ವಾಸದಿಂದ ಆಕೆ ನುಡಿದಾಗ ಆಕೆಯ ಬಗ್ಗೆ ಅಪಾರ ಗೌರವ ಮೂಡಿತು, ಹೆಮ್ಮೆ ಅನ್ನಿಸಿತು.ಮನಸ್ಸಿನಲ್ಲೇ ಆಕೆಗೆ ಕೋಟಿ ನಮಸ್ಕಾರ ಹಾಕಿದೆ..ಸೀಮಾ ಅವರ ಆರೈಕೆಯಲ್ಲಿ ಈಗ ಸುಬ್ಬಣ್ಣ ನಿಧಾನವಾಗಿ ಇಷ್ಟಿಷ್ಟೇ ಚೇತರಿಸಿಕೊಳ್ಳುತ್ತಿದ್ದಾನೆ. ಕನ್ನಡ ಬಾರದ ಸೀಮಾಳಿಗೆ ನಾನು ಅಭಿನಯಿಸಿರುವ ‘accident’ ಚಿತ್ರವನ್ನು ಐದಾರು ಬಾರಿ ತೋರಿಸಿದ್ದಾನಂತೆ!
ನಾನು ತೆರೆಯ ಮೇಲೆ ಬಂದಾಗಲೆಲ್ಲಾ ‘see..my best friend..prabhu’ ಎಂದು ಮಗುವಿನಂತೆ ತೊದಲುತ್ತಾನಂತೆ. ಆದರೆ ಸುಬ್ಬಣ್ಣನ ಕೈ ಮತ್ತೆ ಕುಂಚ ಹಿಡಿದು ಕ್ಯಾನ್ವಾಸ್ ಮೇಲೆ ವರ್ಣರಂಜಿತ ಅದ್ಭುತಗಳನ್ನು ಸೃಷ್ಟಿಸಲು ಸಾಧ್ಯವಾಗದೇನೋ ಎಂಬುದನ್ನು ನೆನೆಸಿಕೊಂಡಾಗ ಮಾತ್ರ ಹೃದಯ ಚೂರಾಗಿಹೋಗುತ್ತದೆ. ಅಂದಹಾಗೆ ಸುಬ್ಬಣ್ಣನ ಮಗಳು ಅಪೂರ್ವ ಸಹಾ ಕಲೆಯ ಕ್ಷೇತ್ರದಲ್ಲಿ ಬೆಳಕಿಗೆ ಬರುತ್ತಿರುವ ಒಂದು ನಕ್ಷತ್ರ.ಸಧ್ಯದಲ್ಲೇ ನನ್ನ ಪ್ರೀತಿಯ ಗೆಳೆಯನ ಮುದ್ದು ಕೂಸಿಗೆ ಮದುವೆ.ಆ ಮುದ್ದುಕೂಸು ನಡೆಯುವ ಹಾದಿಯಲ್ಲೆಲ್ಲಾ ಹೂ ಹಾಸಲಿ..ಉಜ್ವಲ ಭವಿಷ್ಯ ಅವಳ ಪಾಲಿಗಿರಲೆಂಬುದು ನನ್ನ ಅಂತರಂಗದ ಹಾರೈಕೆ. ಸೀಮಾ ಅವರ ತಪಸ್ಸು ಫಲಕೊಟ್ಟು ಸುಬ್ಬಣ್ಣ ಆದಷ್ಟು ಬೇಗ ಸಾಧ್ಯವಾದಷ್ಟೂ ಚೇತರಿಸಿಕೊಳ್ಳಲಿ ಅನ್ನುವುದು ಎದೆ ಬಡಿತದೊಂದಿಗೆ ಮಿಳಿತಗೊಂಡ ಪ್ರಾರ್ಥನೆ.
ಸೀಮಾ, ಮತ್ತೊಮ್ಮೆ ನಿಮ್ಮ ಹೃದಯವಂತಿಕೆಗೆ, ಮಾನವೀಯತೆಗೆ, ನಿಷ್ಕಲ್ಮಶ ಪ್ರೀತಿಗೆ ನಮ್ರ ನಮನಗಳು ಸೋದರಿ.
“ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೇ
ಸ್ತ್ರೀ ಎಂದರೆ ಅಷ್ಟೇ ಸಾಕೆ॥
ಮನೆಮನೆಯಲಿ ದೀಪ ಉರಿಸಿ
ಹೊತ್ತುಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೇ ಸಾಕೆ”॥
(ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಕವಿತೆಯ ಸಾಲುಗಳು.)
। ಇನ್ನು ಮುಂದಿನ ವಾರಕ್ಕೆ ।






0 Comments