
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.
ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
76
ಕಲಾಗಂಗೋತ್ರಿ ತಂಡಕ್ಕಾಗಿ ಆತ್ಮೀಯ ಮಿತ್ರ ಸೂರಿ ‘ಈ ಮುಖದವರು’ ನಾಟಕವನ್ನು ಮಾಡಿಸಿದ್ದರ ಬಗ್ಗೆ ಈ ಹಿಂದೆಯೇ ಬರೆದಿದ್ದೇನೆ. ಈ ನಾಟಕದಲ್ಲಿ ಒಂದು ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದ ಪ್ರತಿಭಾವಂತ ನಟ ಸತ್ಯಸಂಧ ನಮ್ಮನ್ನಗಲಿ ಹೋದ ಮೇಲೆ ಸುಮಾರು ಸಮಯ ಮತ್ತೆ ಆ ನಾಟಕದ ಮರು ಪ್ರದರ್ಶನಗಳಾಗಿರಲಿಲ್ಲ.ಸತ್ಯನಿಗೆ ಸೂಕ್ತ ಬದಲಿ ನಟ ದೊರಕದಿದ್ದುದೂ ಇದಕ್ಕೆ ಒಂದು ಪ್ರಮುಖ ಕಾರಣವಾಗಿತ್ತು. ಕೊನೆಗೆ ನಮ್ಮ ಮತ್ತೊಬ್ಬ ಪ್ರತಿಭಾವಂತ ನಟ ದತ್ತಣ್ಣ ಅವರು ಆ ಪಾತ್ರ ನಿರ್ವಹಿಸಲು ಮುಂದೆ ಬಂದದ್ದು ಆ ನಾಟಕಕ್ಕೆ ಮರುಜೀವ ಬಂದಂತಾಯಿತು.ಕಲಾಕ್ಷೇತ್ರದ ಹಿಂಬದಿಗಿರುವ ಬಯಲು ರಂಗಭೂಮಿಯಲ್ಲಿ (ಆಗಿನ್ನೂ ಆ ರಂಗಸ್ಥಳಕ್ಕೆ ಸಂಸ ಬಯಲು ರಂಗಮಂಟಪವೆಂದು ನಾಮಕರಣ ಆಗಿರಲಿಲ್ಲ) ‘ಈ ಮುಖದವರು’ ನಾಟಕದ ಎರಡು ಪ್ರದರ್ಶನಗಳನ್ನು ರಾಜಾರಾಂ ಏರ್ಪಡಿಸಿದ್ದ.ನಾಟಕದ ಮೊದಲ ಪ್ರದರ್ಶನಗಳಲ್ಲಿ ಪಾತ್ರ ನಿರ್ವಹಿಸಿದ್ದ ನಾಲ್ಕೈದು ಕಲಾವಿದರು ಆ ಬಯಲುರಂಗ ಪ್ರದರ್ಶನಗಳಿಗೆ ಲಭ್ಯರಿಲ್ಲದಿದ್ದುದು ಒಂದು ಸಮಸ್ಯೆಯಾಗಿ ಹೋಯಿತು.
ಆ ಎಲ್ಲ ಪಾತ್ರಗಳಿಗೂ ಹೊಸ ನಟರನ್ನು ಆರಿಸಿಕೊಂಡು ತಾಲೀಮು ಪ್ರಾರಂಭಿಸಲಾಯಿತು.ನಾನಾ ಕಾರಣಗಳಿಂದಾಗಿ ತಾಲೀಮು ಸರಿಯಾಗಿ ನಡೆಯದೆ ನಾಟಕ ತೃಪ್ತಿಕರ ಮಟ್ಟದಲ್ಲಿ ಪ್ರದರ್ಶನಕ್ಕೆ ಸಿದ್ಧವಾಗಲೇ ಇಲ್ಲ. ಪ್ರದರ್ಶನಕ್ಕೆ ಒಂದೆರಡು ದಿನಗಳಷ್ಟೇ ಉಳಿದಿವೆ! ಸೋಮವಾರ ನಾಟಕ..ಭಾನುವಾರ ಮಧ್ಯಾಹ್ನದಿಂದಲೇ ತಾಲೀಮು ಆರಂಭಿಸಿ ತಡರಾತ್ರಿಯವರೆಗೂ ಮುಂದುವರಿಸಿ ನಾಟಕ ಸಿದ್ಧಪಡಿಸಿಕೊಳ್ಳುವುದೆಂದು ತೀರ್ಮಾನವಾಯಿತು.ವಾರಾಂತ್ಯವಾದುದರಿಂದ ನಾನು ಶನಿವಾರ ಬೆಳಗಿನಿಂದಲೇ ಗೆಳೆಯರೊಂದಿಗೆ ಇಸ್ಪೀಟ್ ಆಟದಲ್ಲಿ ತೊಡಗಿಬಿಟ್ಟಿದ್ದೆ.
ಭಾನುವಾರ ಮಧ್ಯಾಹ್ನ ನಮ್ಮ ಇಸ್ಪೀಟ್ ಅಡ್ಡೆಯಿಂದಲೇ ರಿಹರ್ಸಲ್ ಗೆ ಹೋಗಿಬಿಡುವುದೆಂದು ಮನಸ್ಸಿನಲ್ಲೇ ತೀರ್ಮಾನಿಸಿಕೊಂಡಿದ್ದೆ. ಆಟ ಆಡುತ್ತಾ ಆಡುತ್ತಾ ಎಷ್ಟರಮಟ್ಟಿಗೆ ಅದರಲ್ಲೇ ಮುಳುಗಿಹೋದೆನೆಂದರೆ ಸಮಯದ ಪರಿವೆಯೇ ಇಲ್ಲದಾಗಿಹೋಯಿತು. ಕೊನೆಗೆ ಗೆಳೆಯರೇ ರಿಹರ್ಸಲ್ ಬಗ್ಗೆ ನೆನಪಿಸಿದರೂ ‘ಹತ್ತು ನಿಮಿಷ..ಹೊರಟುಬಿಡುತ್ತೇನೆ’ ಎನ್ನುತ್ತಾ ಸಮಯವನ್ನು ಮುಂದೂಡುತ್ತಲೇ ಹೋದೆ. ಒಳಗಿನಿಂದ ಮನಸ್ಸು ಚೀರಿ ಚೀರಿ ಹೇಳುತ್ತಿದೆ: “ಏಳು.. ಏಳು..ರಿಹರ್ಸಲ್ ಗೆ ತಡವಾಗುತ್ತಿದೆ..ಇಂದಂತೂ ರಿಹರ್ಸಲ್ ಗೆ ಹೋಗಲೇಬೇಕಾಗಿರುವುದು ಅತ್ಯಗತ್ಯ..ಎಲ್ಲರೂ ಕಾಯುತ್ತಿರುತ್ತಾರೆ..ಏಳು..ಏಳು..” ಆದರೆ ಅದೇನು ಮಾಯೆಯ ಮುಸುಕು ಕವಿದು ಕಾಡಿಸುತ್ತಿತ್ತೋ ಅರಿಯೆ..ನನಗೆ ಮೇಲೇಳಲು ಸಾಧ್ಯವಾಗಲೇ ಇಲ್ಲ.

ಈಗಿನ ಹಾಗೆ ಮೊಬೈಲ್ ಇತ್ಯಾದಿ ಸೌಕರ್ಯಗಳಿಲ್ಲದ ಕಾಲವದು. ಹೋಟಲ್ ಫೋನಿನಿಂದ ಕಲಾಕ್ಷೇತ್ರಕ್ಕೆ ಫೋನ್ ಮಾಡಿ ಅಲ್ಲಿಯ ಸಿಬ್ಬಂದಿ ವರ್ಗದವರಿಗೆ ‘ನಾನು ಶೂಟಿಂಗ್ ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಕಾರಣ ರಿಹರ್ಸಲ್ ಗೆ ಬರಲು ಸಾಧ್ಯವಿಲ್ಲ ಎಂದು ದಯವಿಟ್ಟು ರಾಜಾರಾಂ ಅವರಿಗೆ ತಿಳಿಸಿಬಿಡಿ’ ಎಂದೊಂದು ಸುಳ್ಳು ಸಂದೇಶವನ್ನು ರವಾನಿಸಿಬಿಟ್ಟು ಆಟದಲ್ಲಿ ತೊಡಗಿಬಿಟ್ಟೆ. ಆಟ ಮುಗಿಸಿ ಮನೆಗೆ ಹೋದಾಗ ನಡುರಾತ್ರಿ. ರಿಹರ್ಸಲ್ ಮುಗಿಸಿ ಬರುವುದು ಇಷ್ಟು ತಡವಾಯಿತು ಎಂದು ಮನೆಯಲ್ಲಿ ರಂಜನಿಗೊಂದು ಸುಳ್ಳು ಹೇಳಿದೆ. ಸುಳ್ಳು ಹೇಳುವುದೇನೋ ಹೇಳಿಬಿಟ್ಟೆನಾದರೂ ಮನಸ್ಸಿನಲ್ಲಿ ಅದೇ ಕೊರೆಯುತ್ತಿತ್ತು. ಮರುದಿನ ಮಧ್ಯಾಹ್ನ ಬೇಗನೇ ಕಲಾಕ್ಷೇತ್ರಕ್ಕೆ ಹೋದೆ. ರಾಜಾರಾಮನಾದರೋ ಒಂದಿಷ್ಟೂ ಬೇಸರ ತೋರದೆ, “ಶೂಟಿಂಗ್ ಗಳದ್ದು ಬಲೇ ತಾಪತ್ರಯ ಗುರುವೇ..ಹೋಗಲಿ ಬಾ..ಈಗೊಂದಿಷ್ಟು ರಿಹರ್ಸಲ್ ಮಾಡಿಕೊಂಡು ಬಿಡೋಣ” ಎಂದು ಸಮಾಧಾನದಿಂದಲೇ ಹೇಳಿದ ಮೇಲಂತೂ ಇನ್ನಷ್ಟು ಚುಚ್ಚಲು ಆರಂಭವಾಯಿತು.
ಕೊನೆಯ ಕ್ಷಣಗಳಲ್ಲಿ ಎಷ್ಟು ತಾನೇ ರಿಹರ್ಸಲ್ ಮಾಡಿಕೊಳ್ಳಲು ಸಾಧ್ಯ? ನನಗೊಬ್ಬನಿಗೆ ಮಾತುಗಳು ಬಂದುಬಿಟ್ಟರೆ ಸಾಕೇ? ಐವರು ಹೊಸಬರಿದ್ದಾರೆ..ಸರಿಯಾದ ತಾಲೀಮಿಲ್ಲದಿದ್ದರೆ ಅವರಾದರೂ ಹೇಗೆ ಪಾತ್ರಗಳಿಗೆ ನ್ಯಾಯ ಒದಗಿಸಿಯಾರು? ಅಂದಿನ ಪ್ರದರ್ಶನ ನಿರೀಕ್ಷಿತ ಮಟ್ಟಕ್ಕೆ ಬರಲಿಲ್ಲ..ಬರುವುದು ಸಾಧ್ಯವೂ ಇರಲಿಲ್ಲವೆನ್ನಿ. ಪ್ರದರ್ಶನ ಮುಗಿಯುತ್ತಿದ್ದಂತೆ ನಾನು ಯಾರ ಕಣ್ಣಿಗೂ ಬೀಳದೇ ಯಾರಿಗೂ ಮುಖಾಮುಖಿಯಾಗದೆ ಅಲ್ಲಿಂದ ಹೊರಟುಬಿಟ್ಟೆ. ಮುಂದಿನೆರಡು ದಿನಗಳು ನಾನು ಅನುಭವಿಸಿದ್ದು ಅಕ್ಷರಶಃ ನರಕಯಾತನೆ.
ಮೊದಲೇ ಮದುವೆಯಾದ ಹೊಸತರಲ್ಲಿಯೇ ಕೆಲವೊಮ್ಮೆ ಕೆಲಸಗಳ ಒತ್ತಡಗಳಿಂದಾಗಿ ಮತ್ತೂ ಕೆಲವೊಮ್ಮೆ ಆಟದ ಹುಚ್ಚಿನಿಂದಾಗಿ ಹೊತ್ತು ಹೊತ್ತಿಗೆ ಮನೆಗೆ ಬರದೆ ರಂಜನಿಗೆ ನೋವುಂಟುಮಾಡುತ್ತಿದ್ದುದರ ಬಗ್ಗೆ ಗಿಲ್ಟ್ ಕಾಡುತ್ತಿತ್ತು..ಆದರೂ ದೌರ್ಬಲ್ಯಕ್ಕೆ ಪಕ್ಕಾಗಿ ಅದರಿಂದ ಬಿಡಿಸಿಕೊಳ್ಳಲಾಗದೆ ಚಡಪಡಿಸುತ್ತಿದ್ದೆ.ಈಗಂತೂ ಇದೇ ದೌರ್ಬಲ್ಯದ ಕಾರಣವಾಗಿ ನಾಟಕದ ರಿಹರ್ಸಲ್ ಗೇ ಹೋಗದೆ ಸುಳ್ಳಾಡಿದ್ದೇನೆ! ನನ್ನ ಬದ್ಧತೆ..ಶಿಸ್ತುಗಳೆಲ್ಲಾ ಎಲ್ಲಿ ಹುಲ್ಲು ಮೇಯಲು ಹೋಗಿಬಿಟ್ಟವು?ಯಾವ ಶಿಸ್ತು—ಸಮಯಪಾಲನೆ—ಬದ್ಧತೆಗಳ ಕಾರಣಕ್ಕೆ ಹಲವರೊಂದಿಗೆ ಜಗಳವನ್ನೇ ಆಡಿ ಸಂಬಂಧವನ್ನೇ ಕೆಡಿಸಿಕೊಂಡಿದ್ದೇನೋ ಅದೇ ಶಿಸ್ತಿನ ಪಾಲನೆಯಲ್ಲಿ ನಾನು ಎಡವಿದ್ದಾದರೂ ಹೇಗೆ? ಪ್ರಶ್ನೆಗಳ ಶೂಲಗಳು ಇರಿಯುತ್ತಿದ್ದಷ್ಟೂ ನನ್ನ ಬಗ್ಗೆ ನನಗೇ ನಾಚಿಕೆಯಾಗತೊಡಗಿತು.ನನ್ನ ಪ್ರತಿಬಿಂಬವೇ ನನ್ನನ್ನ ಅಣಕಿಸತೊಡಗಿ ಕನ್ನಡಿ ನೋಡಿಕೊಳ್ಳುವುದಕ್ಕೇ ಲಜ್ಜೆಯೆನಿಸತೊಡಗಿತು.
ಬಹುಶಃ ಮತ್ತೊಂದು ಕಠೋರ ನಿರ್ಧಾರ ತೆಗೆದುಕೊಳ್ಳಲು ನನ್ನ ಮನಸ್ಸನ್ನು ಹದಗೊಳಿಸಲು ಅಂಥದೊಂದು ಪೆಟ್ಟಿನ ಅಗತ್ಯವಿತ್ತೇನೋ..ಒಂದೆರಡು ದಿನ ಒಳಗೊಳಗೇ ಬೆಂದು ನೊಂದು ಕೊನೆಗೆ ಆಟಕ್ಕೆ ಎಳ್ಳುನೀರು ಬಿಡುವ ಮೂಲಕ ನನ್ನ ದೌರ್ಬಲ್ಯವನ್ನು ಮೆಟ್ಟಿನಿಲ್ಲುವ ತೀರ್ಮಾನ ಮಾಡಿದೆ. ಚಟಗಳಿಂದ ಮುಕ್ತಿ ಪಡೆಯುವುದು ಮಹಾ ಕಷ್ಟದ ಕೆಲಸವೆಂದು ಯಾರು ಎಷ್ಟೇ ಹೇಳಿದ್ದರೂ ನಾನು ಬಹುಶಃ ನಂಬುತ್ತಿರಲಿಲ್ಲವೇನೋ..ಸ್ವಾನುಭವದ ಅಗ್ನಿ ಪರೀಕ್ಷೆಯಾಗದಿದ್ದರೆ! ಒಂದೆರಡು ವಾರಾಂತ್ಯಗಳು ದೃಢ ಮನಸ್ಸಿನಿಂದ ಆಟದ ಸೆಳೆತದಿಂದ ವಿಮುಖನಾದ ಮೇಲೆ ಕೊಂಚ ಧೈರ್ಯ ಬಂತು..ಚಟ ಗೆಲ್ಲುವ ಹಠ ಕೈಗೂಡಿತು! ರಂಜನಿಯ ಮುಖದಲ್ಲೂ ಮಂದಹಾಸ ಮೂಡಿತೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೆ!
ಅಲ್ಲಿಂದಾಚೆಗೆ ನಾನು ಆಟವನ್ನೇ ಆಡಿಲ್ಲವೆಂದಲ್ಲ..ಆದರೆ ಅದು ಮತ್ತೆ ಒಂದು ಗೀಳಿನ ಹಾಗೆ ನನಗೆ ಅಂಟಿಕೊಂಡಿಲ್ಲ…ಯಾವುದೇ ಕೆಲಸದಲ್ಲಿ ತೊಡಗಿದ್ದಾಗಲೂ ಮೊದಲು ಆಗುತ್ತಿದ್ದಂತೆ ಎಕ್ಕ ರಾಜ ರಾಣಿ ಗುಲಾಮರ ಚಿತ್ರಗಳು ಕಣ್ಮುಂದೆ ಕುಣಿದಿಲ್ಲ…ಅಂಗೈಗಳಲ್ಲಿ ಸಹಿಸಲಾಗದ ತುರಿಕೆ—ಚಡಪಡಿಕೆಗಳು ಕಾಣಿಸಿಕೊಂಡಿಲ್ಲ!
ಇಷ್ಟೆಲ್ಲಾ ರಗಳೆಗಳ ನಡುವೆಯೂ ಒಂದು ಧನಾತ್ಮಕ ಬೆಳವಣಿಗೆಯಾದುದು ಸ್ವಾರಸ್ಯಕರ ಸಂಗತಿ.ತನ್ನ ಮನದ ನೋವು ಬೇಗುದಿಗಳನ್ನು,ಕಾಡುವ ಒಂಟಿತನದ ದುಗುಡಗಳನ್ನು ಪದ್ಯರೂಪದಲ್ಲಿ ರಂಜನಿ ನನಗೆ ರವಾನಿಸುತ್ತಿದ್ದಳಲ್ಲ,ಆ ಕಾವ್ಯಾತ್ಮಕ ಅಭಿವ್ಯಕ್ತಿಯ ಮೂಲಕವೇ ಅವಳೊಳಗೆ ಸುಪ್ತವಾಗಿದ್ದ ಕಾವ್ಯ ಸೃಜನಶೀಲತೆ ನನಗೆ ಅರಿವಾದದ್ದು! ಆನಂತರ ನಾನು ಪದೇ ಪದೇ ಅವಳಿಗೆ ಗಂಭೀರವಾಗಿ ಕಾವ್ಯರಚನೆಯಲ್ಲಿ ತೊಡಗಿಕೊಳ್ಳಲು ವರಾತ ಹಚ್ಚತೊಡಗಿದೆ!
ಆ ಸಮಯದಲ್ಲೇ ದೂರದರ್ಶನ ಕೇಂದ್ರದಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಹೇಮಲತಾ ಅವರು ಬೇಲೂರು—ಹಳೇಬೀಡುಗಳ ಶಿಲ್ಪವೈಭವವನ್ನು ಪರಿಚಯಿಸುವ ಸಾಕ್ಷ್ಯಚಿತ್ರವೊಂದನ್ನು ಸಿದ್ಧಪಡಿಸಿದ್ದರು.ದೆಹಲಿಯಿಂದ ರಾಷ್ಟ್ರೀಯ ಪ್ರಸಾರಕ್ಕಾಗಿ ಈ ಕಾರ್ಯಕ್ರಮದ ಇಂಗ್ಲೀಷ್ ಅವತರಣಿಕೆ ಸಿದ್ಧವಾಗಿತ್ತು.ಕನ್ನಡದ ಅವತರಣಿಕೆಯನ್ನು ಸಿದ್ಧಪಡಿಸುವಾಗ ನಿರೂಪಣೆಗೆ ನಾನು ಧ್ವನಿ ನೀಡಬೇಕೆಂದು ನಮ್ಮ ನಿರ್ದೇಶಕರು ಅಪೇಕ್ಷೆ ಪಟ್ಟರು.ಆದರೆ ಅದಾಗಲೇ ಇಂಗ್ಲೀಷ್ ನಲ್ಲಿ ಸಿದ್ಧವಾಗಿದ್ದ ನಿರೂಪಣಾ ಸಾಹಿತ್ಯದ ಕನ್ನಡ ತರ್ಜುಮೆ ಇನ್ನೂ ಆಗಿರಲಿಲ್ಲ.ಆ ಕೆಲಸವನ್ನೂ ನಾನೇ ಮಾಡಬಹುದೇ ಎಂದು ನಿರ್ದೇಶಕರು ಕೇಳಿದಾಗ ನಾನು ರಂಜನಿಯ ಹೆಸರನ್ನು ಸೂಚಿಸಿ ಅವರ ಒಪ್ಪಿಗೆ ಪಡೆದು ಆ ಅನುವಾದ ಕಾರ್ಯದ ಜವಾಬ್ದಾರಿಯನ್ನು ರಂಜನಿಗೆ ಒಪ್ಪಿಸಿದೆ. ಹೆಚ್ಚು ಸಮಯಾವಕಾಶ ಇರಲಿಲ್ಲವಾದ್ದರಿಂದ ಎರಡು ದಿನ ಕಾಲೇಜ್ ಸುತ್ತಾಟಗಳ ನಡುವೆಯೇ ಬಿಡುವು ಮಾಡಿಕೊಂಡು ಹಗಲು—ರಾತ್ರಿ ಕುಳಿತು ತನ್ಮಯತೆಯಿಂದ ಅನುವಾದ ಕಾರ್ಯವನ್ನು ಮುಗಿಸಿಕೊಟ್ಟಳು ರಂಜನಿ. ಅನುವಾದವೆಂಬ ಸಣ್ಣ ಅನುಮಾನವೂ ಬರದಂತೆ, ಮೂಲ ಕನ್ನಡದ್ದೇ ಸಾಹಿತ್ಯ ಅನ್ನಿಸುವಷ್ಟು ಸಹಜವಾಗಿ ಸೊಗಸಾಗಿ ರಂಜನಿಯ ಬರವಣಿಗೆ ಮೂಡಿಬಂದಿತ್ತು. ಅವಳ ಕೋಚು ಕೋಚು ಅಕ್ಷರಗಳ ‘ಬ್ರಹ್ಮಲಿಪಿ’ ಮಾತ್ರ ಯಾರಿಗೂ ಅರ್ಥವಾಗುವಂತೆ ಇರಲಿಲ್ಲವಾದ್ದರಿಂದ ಹಾಗೂ ಆ ಸಾಹಿತ್ಯವನ್ನು ನಾನೇ ಪ್ರಸ್ತುತ ಪಡಿಸಬೇಕಾಗಿದ್ದುದರಿಂದ ನಾನು ‘ಲಿಪಿಕಾರ’ನಾಗಿ ಮತ್ತೊಮ್ಮೆ ಇಡೀ ಬರಹವನ್ನು ಬರೆದುಕೊಂಡು ನಿರೂಪಣೆಯ ಧ್ವನಿ ಮುದ್ರಣ ಕಾರ್ಯವನ್ನು ಮುಗಿಸಿದೆ! ಪ್ರಸಾರದ ನಂತರ ಆ ದಿನಗಳಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿಕೊಂಡು ನಮ್ಮ ಕೇಂದ್ರಕ್ಕೆ ಬಹಳ ಹೆಸರನ್ನು ತಂದುಕೊಟ್ಟ ಹೆಮ್ಮೆಯ ಕಾರ್ಯಕ್ರಮ ‘ಶಿಲೆಯಲ್ಲಿ ಅರಳಿದ ಕಲೆ’ ಎಂಬ ಹೆಸರಿನ ಆ ಸಾಕ್ಷ್ಯಚಿತ್ರ.
ಮುಂದಿನ ಹಲವಾರು ವರ್ಷಗಳಲ್ಲಿ ಎಣಿಕೆಗೆ ಸಿಗದಷ್ಟು ಬಾರಿ ಆ ಕಾರ್ಯಕ್ರಮ ಪ್ರಸಾರವಾಗಿದೆ ಎಂದರೆ ಅತಿಶಯೋಕ್ತಿಯಲ್ಲ! ರಂಜನಿಯ ನಿರೂಪಣಾ ಸಾಹಿತ್ಯ ಹಾಗೂ ನನ್ನ ನಿರೂಪಣೆ—ಎರಡೂ ವಿಶೇಷ ಮೆಚ್ಚುಗೆಗೆ ಪಾತ್ರವಾದ ಅಂಶಗಳು.ರಂಜನಿಯ ಗದ್ಯ ಬರಹದಲ್ಲೂ ವಿಜೃಂಭಿಸುತ್ತಿದ್ದ ಕಾವ್ಯ ಸ್ಪರ್ಶ ಸಾಕ್ಷ್ಯಚಿತ್ರಕ್ಕೆ ಹೊಸ ಆಯಾಮವನ್ನೇ ಒದಗಿಸಿತ್ತೆಂಬುದು ಬಹುಜನರ ಅಭಿಪ್ರಾಯವಾಗಿತ್ತು.ಹೀಗೆ ರಂಜನಿಯ ಸೃಜನಶೀಲ ಶಕ್ತಿಯ ಅರಿವಾದ ಮೇಲೆ ನಾನು ಪದೇ ಪದೇ ಅವಳನ್ನು ಗಂಭೀರವಾಗಿ ಕಾವ್ಯಕೃಷಿಯಲ್ಲಿ ತೊಡಗಿಕೊಳ್ಳಲು ಒತ್ತಾಯಿಸುತ್ತಿದ್ದೆನಾದರೂ ಹಲವು ಹತ್ತು ಕಾರಣಗಳಿಂದಾಗಿ ಅವಳು ಕೃಷಿಗೆ ತೊಡಗಿದ್ದು ಸಾಕಷ್ಟು ತಡವಾಗಿಯೇ ಅನ್ನಬೇಕು. ಇರಲಿ. ಆ ಬೆಳವಣಿಗೆಗಳನ್ನು ಮುಂದಿನ ಪುಟಗಳಲ್ಲಿ ದಾಖಲಿಸುತ್ತೇನೆ.
ಈ ವೇಳೆಗೆ ಕುಮಾರಣ್ಣಯ್ಯ ಬಸವೇಶ್ವರ ನಗರದಲ್ಲಿ ನಿವೇಶನವನ್ನು ತೆಗೆದುಕೊಂಡು ಸುಂದರವಾದ ಮನೆಯನ್ನೂ ಕಟ್ಟಿಯಾಗಿತ್ತು. ಅಣ್ಣಯ್ಯನಿಗೂ ಬೆಂಗಳೂರಿಗೇ ವರ್ಗವಾಗಿ ಬಂದು ಹೊಸ ಮನೆಯಲ್ಲಿಯೇ ವಾಸ್ತವ್ಯ ಹೂಡಿದ್ದು ನಾನು ಹಾಗೂ ರಂಜನಿ ಜಯನಗರ ಟಿ ಬ್ಲಾಕ್ ನಲ್ಲಿ ಒಂದು ಪುಟ್ಟ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು ಸಂಸಾರ ಶುರು ಮಾಡಿದ್ದೆವು.ಒಂದು ಪುಟ್ಟ ಕೋಣೆ.. ಚಿಕ್ಕ ಹಾಲ್..ಅತಿ ಚಿಕ್ಕ ಅಡುಗೆ ಮನೆಯಷ್ಟೇ ಇದ್ದ ಆ ಔಟ್ ಹೌಸ್ ನಲ್ಲಿ ಹಾಲುಕ್ಕಿಸಿ ಆರಂಭಿಸಿದ ನಮ್ಮ ಹೊಸ ಸಂಸಾರದಲ್ಲಿ ಯಾವ ಅದ್ದೂರಿ—ವೈಭವ—ವಿಜೃಂಭಣೆಗಳು ಇರಲಿಲ್ಲವಾದರೂ ಕನಸುಗಳಿಗೆ ಕೊರತೆಯಿರಲಿಲ್ಲ! ಮೊದಲೇ ಭಾವಜೀವಿಯಾಗಿದ್ದ ರಂಜನಿಯ ಕನಸುಗಳ ಒರತೆಯಂತೂ ಬತ್ತುವ ಮಾತೇ ಇಲ್ಲ—ಅಂದಿನಿಂದ ಇಂದಿನವರೆಗೂ! ಆಫೀಸ್ ಕೆಲಸಗಳ ಹೊರತಾದ ಸಮಯವನ್ನೆಲ್ಲಾ ನಾನು ಹೆಚ್ಚಿನ ಮಟ್ಟಿಗೆ ರಂಜನಿಯೊಟ್ಟಿಗೇ ಕಳೆಯುತ್ತಿದ್ದುದು ನಮ್ಮಿಬ್ಬರ ನಡುವೆ ಇದ್ದ ಸಣ್ಣಪುಟ್ಟ ಮುನಿಸು—ಇರುಸು ಮುರುಸುಗಳಿಗೆಲ್ಲಾ ಪೂರ್ಣವಿರಾಮವನ್ನು ಹಾಕಿಬಿಟ್ಟಿತು.ಆಗಷ್ಟೇ ನಮ್ಮ ಬದುಕನ್ನು ಹೊಸದಾಗಿ ಆರಂಭಿಸುತ್ತಿದ್ದೇವೆ ಎಂಬ ಭಾವ ನಮ್ಮಲ್ಲಿ ಮೂಡುವಷ್ಟರ ಮಟ್ಟಿಗೆ ಸಾಮರಸ್ಯ ಕುಡಿಯೊಡೆದಿತ್ತು.

ಆ ಪುಟ್ಟಮನೆಗೆ ನಾವು ಹೋಗಿ ಒಂದು ತಿಂಗಳಷ್ಟೇ ಕಳೆದಿತ್ತು. ಆ ಸಮಯದಲ್ಲೇ ಒದಗಿ ಬಂದದ್ದು ನಮ್ಮ ತಂಡದ ಆತ್ಮೀಯ ಮಿತ್ರ ದತ್ತಾತ್ರೇಯ ಅವರ ಮದುವೆಯ ಸಂದರ್ಭ. ಮದುವೆ ಅಂದಮೇಲೆ ಕೇಳಬೇಕೇ… ಹಿಂದಿನ ದಿನ ರಾತ್ರಿಯಿಂದಲೇ ಇಸ್ಪೀಟ್ ಗೋಷ್ಠಿ ಶುರು ಮಾಡಿಬಿಡುವುದೆಂದು ಗೆಳೆಯರೆಲ್ಲಾ ತೀರ್ಮಾನಿಸಿಬಿಟ್ಟಿದ್ದರು.ನಾನು ಆಟ ಬಿಟ್ಟಿದ್ದೇನೆಂದು ಗೊತ್ತಿದ್ದರೂ ಗೋಷ್ಠಿಗೆ ಆಹ್ವಾನ ಬಂತು.ಜೊತೆಗೆ ಗೆಳೆಯರ ಪ್ರೀತಿಯ ಒತ್ತಾಯ ಬೇರೆ: ‘ಆಡದಿದ್ದರೆ ಅಡ್ಡಿಯಿಲ್ಲ..ಬನ್ನಿ..ಒಂದಷ್ಟು ಹರಟೆಯನ್ನಾದರೂ ಹೊಡೆಯಬಹುದು’ ಎಂದು ಪರಿಪರಿಯಾಗಿ ಕೇಳಿಕೊಂಡರು.ಬೇಡವೆಂದು ಕಠೋರ ನಿರ್ಧಾರ ಕೈಗೊಂಡಿದ್ದ ಮನಸ್ಸು ಗೆಳೆಯರ ಒತ್ತಾಯಕ್ಕೆ ಬಿದ್ದು ಕೊಂಚ ಡೋಲಾಯಮಾನವಾಯಿತು! ‘ಆಯಿತು..ನನ್ನ ಮನೋಬಲವನ್ನು ಪರೀಕ್ಷಿಸಲು ಇದು ಒಂದು ವೇದಿಕೆಯೇ ಆಯಿತು’ ಎಂದುಕೊಂಡು ಅಲ್ಲಿಗೆ ರಾತ್ರಿ ಹೋಗುವುದೆಂದು ನಿರ್ಧರಿಸಿದೆ.
ರಂಜನಿ ಒಬ್ಬಳೇ ಮನೆಯಲ್ಲಿ ಇಡೀ ರಾತ್ರಿ ಕಳೆಯಲು ಅಂಜಿದ್ದರಿಂದ ಅವಳನ್ನು ರಾಜಾಜಿನಗರದ ಅವರ ಅಮ್ಮನ ಮನೆಗೆ ಬಿಟ್ಟು ನಾನು ಬುಲ್ ಟೆಂಪಲ್ ರಸ್ತೆಯಲ್ಲಿರುವ ಗುರುನರಸಿಂಹ ಕಲ್ಯಾಣ ಮಂಟಪಕ್ಕೆ ಹೋದೆ. ಗೆಳೆಯರೆಲ್ಲಾ ಆಗಲೇ ಅಲ್ಲಿ ಸೇರಿ ಗೋಷ್ಠಿ ಆರಂಭಿಸಿದ್ದರು. ನಾನು ಹೋಗುತ್ತಿದ್ದಂತೆ ಹರ್ಷೋದ್ಗಾರಗಳೊಂದಿಗೆ ಸ್ವಾಗತಿಸಿದರು: ‘ಬನ್ನಿ ಸರ್..ನೀವಿಲ್ಲದಿದ್ರೆ ಗೋಷ್ಠಿಗೆ ರಂಗೇ ಇರೋಲ್ಲ..ಆದ್ರೆ ಇವತ್ತು ನೀವು non playing captain ಥರಾ! active spectator” ಎನ್ನುತ್ತಾ ಸ್ವಾಗತಿಸಿದ ಗೆಳೆಯರು ಉಪಚಾರಕ್ಕಾಗಿಯಾದರೂ ‘ಒಂದು ಕೈ ನೋಡಿ’ ಎಂದು ಆಟಕ್ಕೆ ಆಹ್ವಾನಿಸಲಿಲ್ಲ! ನಾನೂ ಹಾಗೇ ಪಕ್ಕದಲ್ಲೇ ಕುರ್ಚಿ ಹಾಕಿಕೊಂಡು ಕುಳಿತು ಶೂಟಿಂಗ್ ಕಥೆಗಳನ್ನು ಹೇಳುತ್ತಾ ಆಟಗಾರರನ್ನು ರಂಜಿಸುತ್ತಾ ಹುರಿದುಂಬಿಸುತ್ತಿದ್ದೆ. ಆದರೆ ಎಷ್ಟು ಹೊತ್ತು ಹಾಗೇ ಸುಮ್ಮನೆ ಕೂರುವುದು?! ಅದೂ ಆಟ ಬಲ್ಲವನಾಗಿ! “ಸರಿ..ಒಂದೇ ಒಂದು ರೌಂಡ್ ಆಡಿಬಿಡ್ತೀನಿ..ನನಗೂ ಒಂದು ಕೈ ಹಾಕಿ” ಎಂದು ರಣರಂಗಕ್ಕೆ ಧುಮುಕಿಯೇ ಬಿಟ್ಟೆ. ಹಾಗೆ ಆಟಕ್ಕೆ ಇಳಿದು ಒಂದರ್ಧ ತಾಸು ಕಳೆದಿರಬಹುದು..ಯಾಕೋ ಒಂದು ನಮೂನೆಯ ಸಂಕಟ ಶುರುವಾಯಿತು. ಹೊಟ್ಟೆಯೆಲ್ಲಾ ಕಲಸಿಕೊಂಡ ಹಾಗೆ…ಏನೋ ತಳಮಳ..ಏನೋ ತಲ್ಲಣ..ಎದೆ ಒಂದೇ ಸಮನೆ ಢವಗುಟ್ಟುತ್ತಿದೆ..ಕಾರಣ ಸ್ಪಷ್ಟವಾಗುತ್ತಿಲ್ಲ..ಆ ಟದಲ್ಲೂ ಮನಸ್ಸು ಏಕಾಗ್ರತೆಯಿಂದ ತೊಡಗಿಕೊಳ್ಳುತ್ತಿಲ್ಲ. ಅಂತಹ ವಿಚಿತ್ರ ವೇದನೆಯನ್ನು ಆವರೆಗೆ ನಾನು ಅನುಭವಿಸಿದ್ದೇ ಇಲ್ಲ! ನನ್ನ ದುಗುಡ—ತಳಮಳಗಳನ್ನು ನೋಡಿ ಗೆಳೆಯರಿಗೂ ಆಶ್ಚರ್ಯ! ನೀರು ಕಾಫಿ ಕುಡಿದು ಸುಧಾರಿಸಿಕೊಂಡರೂ ಮನಸ್ಸು ತಹಬಂದಿಗೆ ಬರಲಿಲ್ಲ.ಆಟದಿಂದ ಹಿಂದೆ ಸರಿದು ಒಂದು ಮೂಲೆಯಲ್ಲಿ ಮೌನವಾಗಿ ಕುಳಿತುಬಿಟ್ಟೆ.
ಮನೆಗಾದರೂ ಹೋಗಿಬಿಡಲೇ ಎಂಬ ಆಲೋಚನೆ ಬಂದಿತಾದರೂ ನಡುರಾತ್ರಿ ಎರಡು ಗಂಟೆ ದಾಟಿದ್ದರಿಂದ ಬೇಡವೆಂದು ತೀರ್ಮಾನಿಸಿದೆ. ಮುಂದಿನ ಮೂರು ನಾಲ್ಕು ತಾಸುಗಳನ್ನು ಅದೇ ವಿವರಿಸಲಾಗದ ಒತ್ತಡ—ದುಗುಡಗಳಲ್ಲೇ ಕಳೆದು ಬೆಳಕು ಹರಿಯುತ್ತಿದ್ದಂತೆ ಬೈಕ್ ಹತ್ತಿ ಜಯನಗರದ ಮನೆಯತ್ತ ಹೊರಟೆ. ಇನ್ನೇನು ಮನೆ ಎರಡು ಫರ್ಲಾಂಗ್ ದೂರವಿದೆ ಎನ್ನುವಾಗ ನಮ್ಮ ಮನೆಯ ದಿಕ್ಕಿನಿಂದ ವಿಜಯಕ್ಕ ಹಾಗೂ ನಮಗೆ ಆ ಮನೆ ಕೊಡಿಸಿದ್ದ ಹತ್ತಿರದ ಸಂಬಂಧಿ ಕೇಶವ ಬರುತ್ತಿದ್ದರು. ಆಗ ಅಕ್ಕಂದಿರು ವಾಸವಾಗಿದ್ದುದು 16 ನೇ ಮುಖ್ಯರಸ್ತೆಯಲ್ಲಿ ಭಾವ ಕಟ್ಟಿಸಿದ್ದ ಸೊಗಸಾದ ಕಲ್ಲುಮನೆಯಲ್ಲಿ. ನಮ್ಮ ಪುಟ್ಟಗೂಡಿನಿಂದ ಅವರ ಮನೆಗಿದ್ದದ್ದು ಕೇವಲ ನೂರಿನ್ನೂರು ಮೀಟರ್ ಗಳ ಅಂತರ ಮಾತ್ರ.ಇಷ್ಟು ಬೆಳಿಗ್ಗೆ ಇವರೇಕೆ ನಮ್ಮ ಮನೆಯ ಕಡೆಯಿಂದ ಬರುತ್ತಿದ್ದಾರೆಂದು ಚಿಂತಿಸುತ್ತಾ ಅವರ ಬಳಿ ಸಾರಿ, ‘ಏನಕ್ಕಾ ಈ ಕಡೆ?’ ಎಂದು ವಿಚಾರಿಸಿದೆ. ನನ್ನೆದುರು ನಿಂತಿದ್ದ ವಿಜಯಕ್ಕನ ಕಣ್ಣಲ್ಲಿ ನೀರು ಧುಮುಕುತ್ತಿತ್ತು. “ಸದಾ ಸರ್ವಕಾಲ ಫ್ರೆಂಡ್ಸು ಫ್ರೆಂಡ್ಸು ಅಂತ ರಾತ್ರಿಯೆಲ್ಲಾ ಹೊರಗೇ ಅಲೀತಿರಿ.. ಕಳ್ಳರು ಬಂದು ಮನೇನೆಲ್ಲಾ ಗುಡಿಸಿ ಗುಂಡಾಂತರ ಮಾಡಿ ಹೋಗಿದಾರೆ” ಎಂದು ಅಕ್ಕ ಅತೀವ ಸಂಕಟ—ನೋವಿನಿಂದ ಬಿಕ್ಕಿದಾಗ ನಾನು ದಂಗುಬಡಿದು ಹೋದೆ. ಅಂದರೆ ಹಿಂದಿನ ರಾತ್ರಿ ನಮ್ಮ ಮನೆಯಲ್ಲಿ ಕಳ್ಳತನವಾಗಿದೆ!!
| ಇನ್ನು ಮುಂದಿನ ವಾರಕ್ಕೆ |






0 Comments