
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.
ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
63
ಒಂದು ಬೆಳಿಗ್ಗೆ ಉಪಾಹಾರ ಮುಗಿಸಿ ಮೈಸೂರು ಅಸೋಸಿಯೇಷನ್ ನ ಮೂರನೇ ಮಹಡಿಯ ನನ್ನ ಕೋಣೆಯಲ್ಲಿ ಪುಸ್ತಕ ಓದುತ್ತಾ ಕುಳಿತಿದ್ದೆ. ನಚ್ಚಿ ಯಾರೋ ಗೆಳೆಯರನ್ನು ಭೇಟಿಯಾಗಲೆಂದು ಹೊರಗಡೆ ಹೋಗಿದ್ದ. ಬಾಗಿಲ ಬಳಿ ಯಾರೋ ಬಂದಂತಾಗಿ ತಲೆ ಎತ್ತಿ ನೋಡಿದೆ. ಸಹಾಯಕ ರತ್ನಾಕರ ಹಿರಿಯರೊಬ್ಬರೊಂದಿಗೆ ಬಾಗಿಲಲ್ಲಿ ನಿಂತಿದ್ದ. ‘ನಿಮ್ಮನ್ನ ಕೇಳಿಕೊಂಡು ಬಂದಿದಾರೆ ನೋಡಿ’ ಎಂದು ನುಡಿದು ರತ್ನಾಕರ ಹೊರಟುಹೋದ. ಆ ಹಿರಿಯರು ಮುಗುಳ್ನಗುತ್ತಾ ಬಾಗಿಲಲ್ಲೇ ನಿಂತಿದ್ದರು.’ಬನ್ನಿ ಸರ್ , ಒಳಗೆ ಬನ್ನಿ’ ಎಂದು ಅವರನ್ನು ಒಳಗೆ ಆಹ್ವಾನಿಸಿದೆ. ಒಳಬಂದ ಹಿರಿಯರು ಕರವಸ್ತ್ರದಿಂದ ಮುಖ ಒರೆಸಿಕೊಳ್ಳುತ್ತಾ ಕುರ್ಚಿಯ ಮೇಲೆ ಕುಳಿತರು.ಮೂರು ಮಹಡಿ ಹತ್ತಿ ಬಂದ ಆಯಾಸ ಅವರ ಮುಖದ ಮೇಲೆ ಢಾಳಾಗಿ ಕಾಣುತ್ತಿತ್ತು. ‘ನೀವು ಯಾಕೆ ಸರ್ ಮಹಡಿ ಹತ್ತಿ ಬರೋ ತೊಂದರೆ ತೆಗೆದುಕೊಂಡಿರಿ? ಹೇಳಿ ಕಳಿಸಿದ್ದರೆ ನಾನೇ ಬರುತ್ತಿದ್ದೆನಲ್ಲಾ’ ಎಂದೆ ನಾನು. ‘ಪರವಾಗಿಲ್ಲ ಬಿಡಿ..ಇನ್ನೂ ಅಷ್ಟು ವಯಸ್ಸಾಗಿಲ್ಲ ನನಗೆ!’ ಎಂದು ನಗುತ್ತಾ ಆ ಹಿರಿಯರು ಕೊಂಚ ನೀರು ಕುಡಿದು ಸುಧಾರಿಸಿಕೊಂಡು ಮೆಲ್ಲಗೆ ಮಾತಾಡತೊಡಗಿದರು:”ನಾವು ಈ ಹಿಂದೆ ಮುಖತಃ ಭೇಟಿಯಾದದ್ದಿಲ್ಲ.ನಾನು ಕು.ಶಿ.ಹರಿದಾಸ ಭಟ್ಟ ಅಂತ..ಉಡುಪಿಯ ಎಂ ಜಿ ಎಂ ಕಾಲೇಜಿನ ಪ್ರಾಂಶುಪಾಲ” —ಇಷ್ಟು ಹೇಳಿ ಮಾತು ನಿಲ್ಲಿಸಿದರು. ಅರೆ! ಕು.ಶಿ.ಹರಿದಾಸಭಟ್ಟರು! ಸಾಹಿತ್ಯದ ವಿದ್ಯಾರ್ಥಿಗಳಿಗೆ ಖಂಡಿತವಾಗಲೂ ಪರಿಚಿತ ಹೆಸರು! ತಕ್ಷಣವೇ ನಾನು ನುಡಿದೆ: “ಸರ್! ನಾವು ಪರಸ್ಪರ ಭೇಟಿಯಾಗಿಲ್ಲದಿರಬಹುದು..ಆದರೂ ನಿಮ್ಮ ಕೃತಿಗಳ ಮೂಲಕ, ನಿಮ್ಮ ಅಂಕಣಗಳ ಮೂಲಕ ನಿಮ್ಮನ್ನು ನಾನು ಚೆನ್ನಾಗಿ ಬಲ್ಲೆ! ಉಡುಪಿಯಲ್ಲಿ,ನಿಮ್ಮ ಕಾಲೇಜಿನಲ್ಲಿಯೇ ನಮ್ಮ ‘ಉದ್ಭವ’ ನಾಟಕದ ಪ್ರದರ್ಶನವಾಗಿತ್ತು.”
“ಗೊತ್ತು ಪ್ರಭುಗಳೇ.. ಉದ್ಭವ ನಾಟಕ ಆದಾಗ ನಾನು ಊರಿನಲ್ಲಿರಲಿಲ್ಲ..ಆಮೇಲೆ ನೀವು ಮಾಡಿದ ಹ್ಯಾಮ್ಲೆಟ್ ನಾಟಕ ಪ್ರದರ್ಶನವನ್ನು ನಾನು ನೋಡಿದ್ದೇನೆ.ತುಂಬಾ ಸೊಗಸಾಗಿ ಅಭಿನಯಿಸಿದ್ದಿರಿ.ಈಗ ನೇರ ವಿಷಯಕ್ಕೆ ಬರ್ತೇನೆ: ಒಂದು ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಸಾಧ್ಯವೇ ಎಂದು ನಿಮ್ಮನ್ನು ಕೇಳಲು ಬಂದಿದ್ದೇನೆ” ಎಂದರು ಕು.ಶಿ.ಯವರು. ನಾನು ಪ್ರಶ್ನಾರ್ಥಕವಾಗಿ ಅವರನ್ನೇ ದಿಟ್ಟಿಸಿದೆ.
“ನಾವು ನಮ್ಮಕಾಲೇಜಿನಲ್ಲಿ ಪ್ರಾದೇಶಿಕ ರಂಗಕಲೆಗಳ ಒಂದು ಅಧ್ಯಯನ—ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸುತ್ತಿದ್ದೇವೆ. ಆಕಾಶವಾಣಿ ಕೇಂದ್ರದ ನಿರ್ದೇಶಕರಾಗಿ ಕೆಲಸ ಮಾಡಿರುವ ಶಂಕರ್ ಅವರು ನಮ್ಮ ಕೇಂದ್ರದ ನಿರ್ದೇಶಕರಾಗಿ ಬರುವುದಕ್ಕೆ ಒಪ್ಪಿದ್ದಾರೆ. ಸಾಹಿತ್ಯ—ರಂಗಭೂಮಿಗಳೆರಡರಲ್ಲೂ ಪರಿಶ್ರಮ—ಪರಿಣತಿ ಇರುವಂಥವರನ್ನು research director ಆಗಿ ನೇಮಿಸಿಕೊಳ್ಳುವ ವಿಚಾರವಿದೆ ನಮಗೆ.ರಂಗನಿರ್ದೇಶಕ ಪ್ರಸನ್ನ ಅವರು ಈ ಹುದ್ದೆಗೆ ನಿಮ್ಮ ಹೆಸರನ್ನು ಸೂಚಿಸಿದರು.ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಪಟ್ಟಾಗ ನೀವು ಇಲ್ಲಿರುವ ವಿಷಯ ತಿಳಿಯಿತು.ನಾನೂ ಕಾರ್ಯನಿಮಿತ್ತವಾಗಿ ಇಲ್ಲಿಗೆ ಬಂದಿದ್ದೆ..ಮುಖತಃ ಭೇಟಿಯಾಗಿ ನಿಮ್ಮ ಅಭಿಪ್ರಾಯ ತಿಳಿದುಕೊಂಡು ಹೋಗೋಣವೆಂದು ಬಂದುಬಿಟ್ಟೆ” ಎಂದರು ಕು.ಶಿ.ಯವರು.
ಒಂದು ಕ್ಷಣ ನನಗೇನೂ ಹೇಳಲು ತೋಚದೆ ಸುಮ್ಮನಿದ್ದೆ. ನನ್ನ ಗೊಂದಲ ಅರ್ಥವಾದವರಂತೆ ಕು.ಶಿ.ಅವರೇ ಮಾತು ಮುಂದುವರಿಸಿದರು: “ನೀವು ಈ ಕೂಡಲೇ ನಿಮ್ಮ ಅಭಿಪ್ರಾಯ ತಿಳಿಸಬೇಕೆಂದೇನೂ ಇಲ್ಲ.ನಿಧಾನವಾಗಿ ಆಲೋಚನೆ ಮಾಡಿ…ಒಂದು ವಾರ ಸಮಯಾವಕಾಶ ತೆಗೆದುಕೊಳ್ಳಿ, ಅಡ್ಡಿಯಿಲ್ಲ. ನೀವು ಬರಲು ಒಪ್ಪಿಕೊಂಡರೆ ನನಗೆ ಬಹಳ ಸಂತೋಷವಾಗುತ್ತದೆ ಅಷ್ಟೇ ಅಲ್ಲ, ಒಂದು ದೊಡ್ಡ ಹೊರೆಯೂ ಇಳಿದಂತಾಗುತ್ತದೆ.. ಹಾಂ.. ಮರೆತಿದ್ದೆ.. ಇದು ಪೂರ್ಣಾವಧಿಯ ಕೆಲಸ.. ಇಷ್ಟು ವರ್ಷಕ್ಕೆ ಎಂಬ ಕಾಲಮಿತಿ ಇಲ್ಲ.. ತಿಂಗಳಿಗೆ ಪ್ರಾರಂಭದಲ್ಲಿ ನಿಮಗೆ ತಿಂಗಳಿಗೆ 1500 ರೂಪಾಯಿಗಳ ಸಂಬಳ.ಮುಂದಿನದೆಲ್ಲಾ ನಿಮ್ಮ ಒಪ್ಪಿಗೆಯ ನಂತರ ಮಾತಾಡಬಹುದು” ಎಂದು ನುಡಿದು ಕು.ಶಿ.ಯವರು ತಮ್ಮ ಫೋನ್ ನಂಬರ್ ಗಳನ್ನು ಕೊಟ್ಟು ‘ಆದಷ್ಟು ಬೇಗ ನಿಮ್ಮ ಅಭಿಪ್ರಾಯ ತಿಳಿಸಿ’ ಎಂದು ನುಡಿದು ಹೊರಟರು. ‘ಆಗಲಿ ಸರ್.. ಒಂದೆರಡು ದಿನಗಳಲ್ಲೇ ಫೋನ್ ಮಾಡುತ್ತೇನೆ’ ಎಂದು ಭರವಸೆ ಕೊಟ್ಟು ಕೆಳತನಕ ಹೋಗಿ ಅವರನ್ನು ಕಳಿಸಿಕೊಟ್ಟು ಕೋಣೆಗೆ ಮರಳಿ ಬಂದೆ.
ಇದೇನಿದು ಈ ಆಶ್ಚರ್ಯಕರ ಬೆಳವಣಿಗೆಗಳು! ಒಂದೆಡೆ ಕಟ್ಟಿದ್ದ ತಂಡ ಒಡೆದು ಸುಂದರ ಕನಸಿನಂತಹ ಅಧ್ಯಾಯವೊಂದು ಅನಿರೀಕ್ಷಿತವಾಗಿ ತಟಕ್ಕನೆ ಗೋಣು ಮುರಿದುಕೊಂಡು ಮಣ್ಣಾಗುತ್ತಿದೆ;ಅದರ ಬೆನ್ನಿಗೇ ಅಷ್ಟೇ ಅನಿರೀಕ್ಷಿತವಾಗಿ ಮತ್ತೊಂದು ಅಪೂರ್ವ ಅವಕಾಶದ ಹೆಬ್ಬಾಗಿಲು ತೆರೆದು ಪ್ರೀತಿಯಿಂದ ಆಹ್ವಾನಿಸುತ್ತಿದೆ..ಆಳದ ಗಾಯಕ್ಕೆ ಹಚ್ಚಲು ದೊರೆತಿರುವ ಮುಲಾಮಿನಂತೆ!! ಏನು ಮಾಡುವುದು ಎಂದು ಯೋಚಿಸಿದಷ್ಟೂ ಮನಸ್ಸು ಯಾಕೋ ಉಡುಪಿಯ ಕಡೆಗೇ ವಾಲತೊಡಗಿತು.
ಮೊದಲನೆಯದಾಗಿ ಪ್ರಾದೇಶಿಕ ರಂಗಕಲೆಗಳ ಅಧ್ಯಯನ ನನಗೂ ಪ್ರಿಯವಾದ ವಿಷಯವೇ! ಜತೆಗೆ ಕುಂಬಳಗೋಡಿನ ನನ್ನ ಶಿಬಿರದಲ್ಲಿ ಭಾಗಿಯಾಗಿದ್ದ ಆನಂದ ಗಾಣಿಗರು ಉಡುಪಿಯವರು; ಹಾಗೂ ಅವರದ್ದೇ ಆದ ರಂಗಭೂಮಿ ಎಂಬ ಹೆಸರಿನ ಹವ್ಯಾಸೀ ರಂಗತಂಡವನ್ನು ಉಡುಪಿಯಲ್ಲಿ ಹಲ ಹತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವವರು..ಆಗಾಗ್ಗೆ ಆ ತಂಡಕ್ಕೆ ನಾಟಕ ಮಾಡಿಸಲು ನನಗೆ ಅವಕಾಶವಿದ್ದೇ ಇರುತ್ತದೆ. ಅಷ್ಟೇ ಅಲ್ಲ, ಮಂಗಳೂರಿನಲ್ಲಿ ಶ್ರೀಧರನ ‘ಅಭಿವ್ಯಕ್ತ’ ತಂಡವಿದೆ..

ಕಾಸರಗೋಡಿನಲ್ಲಿ ಚಿನ್ನನ ‘ಯವನಿಕಾ’ ತಂಡವಿದೆ…ನಾ. ದಾಮೋದರ ಶೆಟ್ಟಿ, ವೇಣುಗೋಪಾಲ ಕಾಸರಗೋಡು ಮೊದಲಾದ ಸಾಹಿತಿ—ರಂಗಕರ್ಮಿ ಮಿತ್ರರಿದ್ದಾರೆ…ನನಗಿನ್ನೇನು ಬೇಕು? ಬಹುಶಃ ಇದು ನನ್ನ ಬದುಕು ಪಡೆಯುತ್ತಿರುವ ಬಹು ದೊಡ್ಡ ತಿರುವು…ಊರಿನಿಂದ ಹಾಗೂ ಮನೆಯವರಿಂದ ದೂರ ಇರಬೇಕಾಗುತ್ತದೆ ಎನ್ನುವುದೂ ಈಗ ಸಮಸ್ಯೆಯಲ್ಲವೇ ಅಲ್ಲ..ಯಾಕೆಂದರೆ ಕೆಲ ವರ್ಷಗಳಿಂದ ನಾಟಕ—ಶಿಬಿರಗಳ ಸಲುವಾಗಿ ಊರೂರು ಸುತ್ತಾಡಿಕೊಂಡಿದ್ದು ಅದೂ ರೂಢಿಯೇ ಆಗಿಹೋಗಿದೆ! ಇದೆಲ್ಲಕ್ಕಿಂತ ಮುಖ್ಯವಾಗಿ 1500 ರೂಪಾಯಿಗಳ ಸಂಬಳ..ಆರ್ಥಿಕ ಸ್ವಾವಲಂಬನೆ!! ಹೀಗೆ ಎಲ್ಲಾ ದೃಷ್ಟಿಯಿಂದ ಎಲ್ಲಾ ಸಾಧಕ ಬಾಧಕಗಳನ್ನೂ ಮಥಿಸಿ ಚಿಂತಿಸಿದ ಮೇಲೆ ಉಡುಪಿಗೆ ಹೋಗಿಬಿಡುವುದೇ ಸರಿ ಎಂಬ ತೀರ್ಮಾನಕ್ಕೆ ಮನಸ್ಸು ಧುಮುಕಿಬಿಟ್ಟಿತು. ಮತ್ತೆ ದ್ವಂದ್ವಗಳಿಗೆ ಮನಸ್ಸು ಪಕ್ಕಾಗಿ ಡೋಲಾಯಮಾನವಾಗುವ ಅಪಾಯದಿಂದ ಪಾರಾಗಲು ಅಂದು ಸಂಜೆಯೇ ಕು.ಶಿ.ಹರಿದಾಸ ಭಟ್ಟರಿಗೆ ಕರೆಮಾಡಿ ‘ನಾನು ಉಡುಪಿಗೆ ಬರಲು ಸಿದ್ಧನಿದ್ದೇನೆ’ ಎಂದು ಹೇಳಿಯೇ ಬಿಟ್ಟೆ. ನನ್ನ ಒಪ್ಪಿಗೆಯಿಂದ ಅವರಿಗಂತೂ ಪರಮ ಸಂತೋಷವಾಗಿಹೋಯಿತು.
“ಆದಷ್ಟು ಬೇಗ ನಿಮ್ಮ ಈ commitment ಗಳನ್ನೆಲ್ಲಾ ಮುಗಿಸಿಕೊಂಡು ಉಡುಪಿಗೆ ಬಂದುಬಿಡಿ. ಶಂಕರ್ ಅವರೂ ಇನ್ನು 15 ದಿನಗಳಲ್ಲಿ ಬರ್ತೀನಿ ಅಂತ ಹೇಳಿದಾರೆ.ಆದಷ್ಟು ಶೀಘ್ರವಾಗಿ ಕೆಲಸ ಶುರು ಮಾಡಿಬಿಡೋಣ” ಎಂದು ತುಂಬು ಉತ್ಸಾಹದಿಂದ ಕು.ಶಿ. ನುಡಿದರು.
ಇದಾದ ಒಂದು ವಾರಕ್ಕೇ ‘ಬೇಲಿ ಮತ್ತು ಹೊಲ’ ನಾಟಕದ ಪ್ರದರ್ಶನ ಎಂದು ತೀರ್ಮಾನವಾಗಿತ್ತು.ನಚ್ಚಿಯ ನಾಟಕ ಇನ್ನೂ ಸಿದ್ಧವಾಗಿರಲಿಲ್ಲವಾದ್ದರಿಂದ ಅದರ ಪ್ರದರ್ಶನವನ್ನು ಮುಂದೂಡಲಾಗಿತ್ತು.
ನಮ್ಮ ನಾಟಕ ಪ್ರದರ್ಶನಕ್ಕೆ ಭರದಿಂದ ಸಿದ್ಧತೆಗಳು ಪ್ರಾರಂಭವಾದುವು. ಸಾಕಷ್ಟು ರಿಹರ್ಸಲ್ಸ್ ಆಗಿದ್ದರಿಂದ ಕಲಾವಿದರೆಲ್ಲರೂ ಸಂಪೂರ್ಣವಾಗಿ ತಯಾರಾಗಿ ಪ್ರದರ್ಶನ ನೀಡಲು ಮಹಾ ಉತ್ಸಾಹದಿಂದ ಕಾಯುತ್ತಿದ್ದರು. ಸರಿತಾ ಅವರು ರಂಗಸಜ್ಜಿಕೆಯ ಹಾಗೂ ರಂಗಪರಿಕರಗಳ ಜವಾಬ್ದಾರಿಯನ್ನು ಹೊತ್ತಿದ್ದರು. ಅದನ್ನು ಅವರು ನಿರ್ವಹಿಸಿದ ರೀತಿಯಂತೂ ಅನನ್ಯವಾದುದು. ಕಲಾವಿದರೆಲ್ಲರಲ್ಲೂ ಆತ್ಮವಿಶ್ವಾಸ ತುಂಬಿಕೊಂಡಿದ್ದರಿಂದ ಯಾವ ಅಡಚಣೆಗಳೂ ಇಲ್ಲದೆ ರಂಗದ ಮೇಲೆ ‘ಬೇಲಿ ಮತ್ತು ಹೊಲ’ ನಾಟಕ ಸೊಗಸಾಗಿ ಮುಡಿಬಂತು. ರಂಗನಾಥ ರಾವ್ ಪೋತರಾಜುವಾಗಿ ಪ್ರೇಕ್ಷಕರಲ್ಲಿ ನಡುಕ ಹುಟ್ಟಿಸಿದರೆ ಇಟೋಬನಾಗಿ ಮಂಜುನಾಥಯ್ಯ ಪ್ರೇಕ್ಷಕರಿಂದ ‘ಚೆನ್ನಾಗಿ ಬೈಸಿಕೊಳ್ಳುವಷ್ಟು’ ಸಮರ್ಥವಾಗಿ ತಮ್ಮ ಖಳ ಪಾತ್ರವನ್ನು ನಿರ್ವಹಿಸಿದರು. ಆತ್ಮೀಯ ಗೆಳೆಯ ಗುರು ಚಿನ್ನಪ್ಪನ ಪಾತ್ರಕ್ಕೆ ಪೂರ್ಣ ನ್ಯಾಯ ಒದಗಿಸಿಕೊಡುವುದರಲ್ಲಿ ಯಶಸ್ವಿಯಾದ. ಉಳಿದೆಲ್ಲ ಕಲಾವಿದರದೂ ಪಾತ್ರೋಚಿತ ಸಂಯಮದ ಅಭಿನಯ..ಮೇಳದವರದೂ ಸಹಾ ಸೊಗಸಾದ ಗಾಯನ.ಒಟ್ಟಾರೆ ನಾಟಕ ಪ್ರೇಕ್ಷಕರ ಮನ ಗೆಲ್ಲುವುದರಲ್ಲಿ ಯಶಸ್ವಿಯಾಯಿತು.
ನಾಟಕ ಮುಗಿಸಿ ಹೊರಡುವ ವೇಳೆಗೆ ತಂಡದೊಂದಿಗೆ ಎಂಥಾ ಮಧುರ ಬಾಂಧವ್ಯ ಬೆಸೆದಿತ್ತೆಂದರೆ ಬಿಟ್ಟು ಹೊರಡುವುದೇ ಕಷ್ಟವಾಯಿತು! ಎಲ್ಲರಿಗೂ ಧನ್ಯವಾದಗಳನ್ನರ್ಪಿಸಿ ಭಾರವಾದ ಹೃದಯದೊಂದಿಗೆ ಬೆಂಗಳೂರಿಗೆ ರೈಲು ಹತ್ತಿದೆ. ಉಡುಪಿಯ ಸಂಶೋಧನಾ ಕೇಂದ್ರ ಬೇರೆ ಕೈಬೀಸಿ ಕರೆಯುತ್ತಿತ್ತು!
ಮನೆಗೆ ಬಂದವನೇ ಬಾಂಬೆಯಲ್ಲಿ ನಡೆದದ್ದೆಲ್ಲವನ್ನೂ ಎಲ್ಲರಿಗೂ ಸವಿಸ್ತಾರವಾಗಿ ವಿವರಿಸಿ ಹೇಳಿದೆ.ಉಡುಪಿಯಲ್ಲಿ ಕೆಲಸಕ್ಕೆ ಹೋಗುತ್ತಿರುವ ವಿಷಯ ಹೇಳಿದಾಗಲಂತೂ ಅಣ್ಣ—ಅಮ್ಮನಿಗೆ ಹಿಡಿಸಲಾರದಷ್ಟು ಹಿಗ್ಗಾಗಿಹೋಯಿತು! ಕೊನೆಗೂ ಮಗ ಕೆಲಸಕ್ಕೆ ಸೇರಿ ತನ್ನ ಕಾಲ ಮೇಲೆ ತಾನು ನಿಂತು ಬದುಕು ಕಟ್ಟಿಕೊಳ್ಳಲು ಸಿದ್ಧನಾಗಿದ್ದಾನೆ ಎಂದು ಅಣ್ಣನಂತೂ ತುಂಬಾ ಸಂತಸ ಪಟ್ಟರು. ‘ಅಬ್ಬಾ! ನನ್ನ ಹರಕೆಗಳು ಫಲ ಕೊಟ್ಟವು’ ಎಂದು ಅಮ್ಮ ಖುಷಿಯಿಂದ ಕಣ್ತುಂಬಿಕೊಂಡರು. ನಮ್ಮ ತಂಡದಲ್ಲಾದ ಅವಾಂತರಗಳ ಅರಿವಿದ್ದ ಅಣ್ಣಯ್ಯ—ಅಕ್ಕಂದಿರು—ಭಾವಂದಿರೂ ಸಹಾ ಬೆನ್ನು ತಟ್ಟಿ, ‘ಒಳ್ಳೆಯದೇ ಆಯಿತು.ಅಲ್ಲಿಯೂ ನಿನ್ನ ಸೃಜನಶೀಲ ಅಭಿವ್ಯಕ್ತಿಗಳಿಗೆ ನಿಸ್ಸಂಶಯವಾಗಿ ಅವಕಾಶಗಳು ದೊರೆಯುತ್ತವೆ’ ಎಂದು ಸ್ಫೂರ್ತಿ ತುಂಬಿದರು.ಒಂದೆರಡು ದಿನಗಳು ಮನೆಯವರೊಂದಿಗೆ ಸುಖವಾಗಿ ಕಳೆದು ನಂತರ ಉಡುಪಿಗೆ ಹೊರಟೆ. ಗೋಪಿ—ಫಣಿ—ದತ್ತ..ಈ ಕೆಲ ಗೆಳೆಯರಿಗೆ ನಾನು ಉಡುಪಿಗೆ ಹೊರಟಿದ್ದರಿಂದ ಕೊಂಚ ಬೇಸರವಾಗಿದ್ದರೂ ‘ನಾನು ಬದುಕಿನಲ್ಲಿ ಒಂದು ನೆಲೆ ಕಂಡುಕೊಳ್ಳುತ್ತಿದ್ದೇನೆ’ ಎಂಬ ವಿಚಾರ ಅವರಿಗೆ ಸಂತಸವನ್ನೇ ತಂದಿತ್ತು.ಅಷ್ಟೇ ಅಲ್ಲ,’ ಯಾವಾಗಲಾದರೂ ಒಂದಷ್ಟು ದಿನ ರಜೆ ಹಾಕಿ ಬನ್ನಿ.. ಹೊಸ ತಂಡ ಕಟ್ಟಿ ಹೊಸ ನಾಟಕ ಮಾಡೋಣ’ ಎಂಬ ಭರವಸೆಯನ್ನೂ ಅವರು ನನಗೆ ನೀಡಿದರು.
ಮನೆಯಲ್ಲಿ ಅಣ್ಣ ಮಾತ್ರ, “ಯಾವುದೇ ಕಾರಣಕ್ಕೂ ಕೆಲಸ ಬಿಟ್ಟುಬರುವ ಯೋಚನೆ ಮಾಡಬಾರದು..ಹೊಸ ಊರಿನಲ್ಲಿ ಕೊಂಚ ಕಷ್ಟ ತಾಪತ್ರಯಗಳು ಎದುರಾದರೂ ಧೃತಿಗೆಡದೆ ಹೊಂದಿಕೊಂಡು ಹೋಗಬೇಕು’ ಎಂದು ಕಿವಿಮಾತು ಹೇಳುವುದು ಮಾತ್ರ ಮರೆಯಲಿಲ್ಲ!
R R C.: Regional resources centre for folk performing arts. ಇದು ನಾನು ಉಡುಪಿಯಲ್ಲಿ ಸಂಶೋಧನಾ ನಿರ್ದೇಶಕನಾಗಿ ಕೆಲಸಕ್ಕೆ ಸೇರಿದ ಸಂಸ್ಥೆಯ ಹೆಸರು; ಫೋರ್ಡ್ ಫೌಂಡೇಷನ್ ಅನುದಾನದಿಂದ ಸ್ಥಾಪಿತವಾದದ್ದು. ಅಲ್ಲಿದ್ದವರು ನಾವು ಮೂವರು: ನಿರ್ದೇಶಕ ಶಂಕರ್, ನಾನು ಹಾಗೂ ಒಬ್ಬ ಸಂಶೋಧನಾ ಸಹಾಯಕ— ಕೃಷ್ಣಯ್ಯ ಎಂಬುವವರು.
ಎಂ ಜಿ ಎಂ ಕಾಲೇಜಿನ ಒಂದು ಕೊಠಡಿಯಲ್ಲಿಯೇ ನಮ್ಮ ಕೇಂದ್ರದ ಕಛೇರಿ. ಕಾಲೇಜಿನ ಆವರಣದಲ್ಲಿಯೇ ಅನೇಕ ಪುಟ್ಟ ಪುಟ್ಟ ಮನೆಗಳಿದ್ದವು. ಅವುಗಳಲ್ಲಿ ಒಂದು ಮನೆಯನ್ನು ನನ್ನ ವಸತಿಗಾಗಿ ಬಿಟ್ಟುಕೊಟ್ಟಿದ್ದರು. ಅಲ್ಲಿಯೇ ಸನಿಹದಲ್ಲಿಯೇ ಒಂದು ಪುಟ್ಟ ಮೆಸ್ ನಲ್ಲಿ ನಮ್ಮ ತಿಂಡಿ—ಊಟಗಳ ವ್ಯವಸ್ಥೆಯಾಗಿತ್ತು.
ನಾನು ಹೋದ ಒಂದೆರಡು ದಿನಗಳಲ್ಲೇ ಕು.ಶಿ.ಯವರ ಮಾರ್ಗದರ್ಶನದಲ್ಲಿ ನಮ್ಮ ಕೇಂದ್ರದ ಕೆಲಸ ಆರಂಭವಾಗಿಯೇ ಬಿಟ್ಟಿತು. ಒಂದೆರಡು ತಿಂಗಳು ಕಳೆಯುತ್ತಿದ್ದಂತೆ ಕು.ಶಿ.ಯವರು ಒಂದು ದೊಡ್ಡ ಮಟ್ಟದ ಸಮಾವೇಶವನ್ನು ಹಗರಿಬೊಮ್ಮನ ಹಳ್ಳಿಯಲ್ಲಿ ಆಯೋಜಿಸಿದರು. ನಾಡಿನ ಮೂಲೆ ಮೂಲೆಗಳಿಂದ ಜನಪದ ಕಲಾ ತಂಡಗಳಿಂದ ಪ್ರದರ್ಶನ, ಆ ಕಲಾ ಪ್ರಕಾರಗಳ ಕುರಿತಾದ ವಿಚಾರ ಸಂಕಿರಣ, ಕಲಾವಿದರ ಸಂದರ್ಶನ, ಪ್ರದರ್ಶನಗಳನ್ನು ವಿಡಿಯೋ ಚಿತ್ರೀಕರಣದ ಮೂಲಕ ದಾಖಲಿಸುವುದು… ಇದೆಲ್ಲವೂ ಈ ಬೃಹತ್ ಸಮಾವೇಶದ ಅಂಗಗಳಾಗಿದ್ದವು. ದೇವೇಂದ್ರಕುಮಾರ ಹಕಾರಿ, ಬಸವರಾಜ ಮಲ್ಲಶೆಟ್ಟಿ ಮೊದಲಾದ ಅನೇಕ ಜನಪದ ತಜ್ಞರನ್ನು ಸಮಾವೇಶಕ್ಕೆ ಆಹ್ವಾನಿಸಲಾಗಿತ್ತು.
ಬಡಗುತಿಟ್ಟು—ತೆಂಕುತಿಟ್ಟು ಯಕ್ಷಗಾನಗಳು,ಬಯಲಾಟ,ಕರಡಿ ಕುಣಿತ,ಡೊಳ್ಳುಕುಣಿತ, ಕಂಸಾಳೆ, ವೀರಗಾಸೆ.. ಮೊದಲಾದ ಹಲವಾರು ಜನಪದ ಪ್ರಕಾರಗಳ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. ಅಂಥದೊಂದು ಅಭೂತಪೂರ್ವ ಸಮಾವೇಶವನ್ನು ಅಚ್ಚುಕಟ್ಟಾಗಿ ಆಯೋಜಿಸಿ ನಿರ್ವಹಿಸಿದ್ದು ನಮ್ಮ ಕೇಂದ್ರದ ಮೊಟ್ಟಮೊದಲ ಬಹು ದೊಡ್ಡ ಸಾಧನೆಯಾಯಿತು.ಅನೇಕ ತಾಸುಗಳಷ್ಟು ವಿಡಿಯೋ—ಆಡಿಯೋ ಮುದ್ರಣದ ಅತ್ಯಮೂಲ್ಯ ದಾಖಲೆಗಳು ನಮ್ಮ ಕೇಂದ್ರದ ಭಂಡಾರ ಸೇರಿದವು. ನನ್ನ ಪಾಲಿಗಂತೂ ಇದೊಂದು ಅವಿಸ್ಮರಣೀಯ ಅನುಭವ.
ಈ ಸಮಾವೇಶವನ್ನು ಮುಗಿಸಿಕೊಂಡು ಉಡುಪಿಗೆ ಮರಳಿದ ಬಳಿಕ ಸಂಗ್ರಹಿಸಿ ತಂದಿದ್ದ ಎಲ್ಲ ದಾಖಲೆಗಳನ್ನೂ ಕ್ರಮಬದ್ಧವಾಗಿ ಜೋಡಿಸಿಡುವ ಕೆಲಸ ಆರಂಭವಾಯಿತು. ಏತನ್ಮಧ್ಯೆ ಬಿಡುವಿನ ಸಮಯದಲ್ಲಿ ನಾಟಕಗಳ ಸ್ಕ್ರಿಪ್ಟ್ ಸಿದ್ಧಪಡಿಸಿಕೊಳ್ಳುತ್ತಿದ್ದೆ. ವೈಎನ್ಕೆ ಅವರ ಸಲಹೆಯ ಮೇರೆಗೆ ಕಾನನ್ ಡೈಲ್ ಹಾಗೂ ವುಡ್ ಹೌಸ್ ರ ಕಥೆಗಳನ್ನು ಓದಲು ಆರಂಭಿಸಿದ್ದೆನಲ್ಲಾ.. ಅವುಗಳಲ್ಲಿ ವುಡ್ ಹೌಸ್ ರ small bachelor ಕಾದಂಬರಿ ನನಗೆ ತುಂಬಾ ಇಷ್ಟವಾಗಿತ್ತು. ಸುಲಭವಾಗಿ ನಮ್ಮ ವಾತಾವರಣಕ್ಕೆ ಕಥೆಯನ್ನು ಅಳವಡಿಸಿಕೊಳ್ಳುವುದು ಸಾಧ್ಯವಿತ್ತು. ವಾಸ್ತವವಾಗಿ ಬೆಂಗಳೂರಿನಲ್ಲಿಯೇ ಈ ರೂಪಾಂತರದ ಕೆಲಸ ಆರಂಭಿಸಿಯಾಗಿತ್ತು. ಉಡುಪಿಯಲ್ಲಿ ಪೂರ್ಣ ನಾಟಕವನ್ನು ಬರೆದು ಮುಗಿಸಿ ‘ಪರಮೇಶಿ ಪ್ರೇಮ ಪ್ರಸಂಗ’ ಎಂದು ನಾಮಕರಣ ಮಾಡಿದೆ.ಮೊದಲಿನಿಂದ ಕೊನೆಯವರೆಗೆ ಪ್ರೇಕ್ಷಕರನ್ನು ಬಿಡುವಿಲ್ಲದಂತೆ ನಗಿಸುತ್ತಾ ಶುದ್ಧ ಮನರಂಜನೆಯನ್ನು ನೀಡುವುದು ಈ ಹಾಸ್ಯ ನಾಟಕದ ಪರಮೋದ್ದೇಶವಾಗಿತ್ತು.ಈ ಕುರಿತು ಮುಂದೆ ವಿವರವಾಗಿ ಬರೆಯುತ್ತೇನೆ.
ದೆಹಲಿಯಲ್ಲಿದ್ದಾಗಲೇ ರೂಪಾಂತರದ ರೂಪುರೇಷೆಗಳನ್ನು ಸಿದ್ಧ ಪಡಿಸಿಕೊಂಡು ಬಂದಿದ್ದರೂ ಕಾರಣಾಂತರಗಳಿಂದ ಕಪಾಟು ಸೇರಿ ಉಡುಪಿಯಲ್ಲಿ ಧೂಳು ಕೊಡವಿಕೊಂಡು ಹೊರಬಂದು ಪೂರ್ಣಗೊಂಡ ನಾಟಕ—’ಒಬ್ಬ ಖದೀಮನ ದಿನಚರಿ’. ಇದು ಪ್ರಸಿದ್ಧ ರಷ್ಯನ್ ನಾಟಕಕಾರ ಅಲೆಕ್ಸಾ಼ಂಡರ್ ಆಸ್ಟ್ರೋವ್ಸ್ಕಿಯ ‘the diary of a scoundrel’ ನಾಟಕದ ರೂಪಾಂತರ. ಈ ನಾಟಕ ಹಾಗೂ ಇದರ ಪ್ರದರ್ಶನಗಳ ಕುರಿತಾಗಿಯೂ ಮುಂದೆ ಬರೆಯುತ್ತೇನೆ. ಅಲ್ಲಿಗೆ ‘ರಾಜಬೇಟೆ’ಯೂ ಸೇರಿ ಮೂರು ನಾಟಕಗಳು ಸಿದ್ಧವಾಗಿವೆ; ಯಾವಾಗ ಬೇಕಾದರೂ ಯಾವ ತಂಡಕ್ಕಾದರೂ ನಾಟಕ ಮಾಡಿಸಬಹುದು ಎಂದು ನಾನು ಖುಷಿಯಿಂದ ಬೀಗುತ್ತಿದ್ದೆ.
ಹೀಗೆ ಉಡುಪಿಯಲ್ಲಿ ದಿನಗಳು ಸಾರ್ಥಕವಾಗಿ ಉರುಳುತ್ತಿದ್ದಂತೆಯೇ ಹೊಸದೊಂದು ಸಮಸ್ಯೆ ಎದುರಾಯಿತು: ಇದ್ದಕ್ಕಿದ್ದಂತೆ ತಲೆನೋವು—ಜ್ವರಗಳು ಅಮರಿಕೊಂಡು ಭಯಂಕರವಾಗಿ ಪೀಡಿಸತೊಡಗಿದವು.
ಯಾವ ಮಟ್ಟಿಗೆ ಜ್ವರದ ಬಾಧೆಯಿತ್ತೆಂದರೆ ಹಾಸಿಗೆಯಿಂದ ಮೇಲೇಳಲೂ ನನಗೆ ಸಾಧ್ಯವಾಗುತ್ತಿರಲಿಲ್ಲ. ಒಂದಷ್ಟು ಮಾತ್ರೆ—ಔಷಧಿಗಳನ್ನು ತೆಗೆದುಕೊಂಡರೂ ಜ್ವರ ಮೈಬಿಟ್ಟು ಕದಲಲಿಲ್ಲ. ನನ್ನ ಶೋಚನೀಯ ಪರಿಸ್ಥಿತಿಯನ್ನು ನೋಡಿ ಕು.ಶಿ.ಯವರಿಗೂ ಚಿಂತೆಗಿಟ್ಟುಕೊಂಡಿತು. ಅಂಥ ಪರಿಸ್ಥಿತಿಯಲ್ಲಿ ನನ್ನನ್ನು ನೋಡಿಕೊಳ್ಳುವವರಾದರೂ ಯಾರು? ಊಟ ತಿಂಡಿ ಔಷಧೋಪಚಾರಗಳನ್ನು ಒದಗಿಸುವವರಾದರೂ ಯಾರು? ಎರಡು ದಿನಕ್ಕೇ ಹೆಜ್ಜೆ ಎತ್ತಿಡಲೂ ಆಗದಷ್ಟು ನಿತ್ರಾಣನಾಗಿಬಿಟ್ಟಿದ್ದೆ. ಕೊನೆಗೆ ಬೇರಾವ ದಾರಿಯೂ ತೋಚದೆ ಕು.ಶಿ.ಯವರು ನನ್ನನ್ನು ಸಮೀಪದ ಆಸ್ಪತ್ರೆಗೆ ಸೇರಿಸಿದರು.
ಕೊನೆಯ ಪಕ್ಷ ಅಲ್ಲಿ ನೋಡಿಕೊಳ್ಳಲಾದರೂ ಜನ ಇರುತ್ತಾರಲ್ಲಾ! ಮರುದಿನದಿಂದ ಆಸ್ಪತ್ರೆಯಲ್ಲಿ ನನ್ನ ಮೇಲೆ ಪ್ರಯೋಗಗಳು ಆರಂಭವಾದವು! ಬಿಟ್ಟೂಬಿಡದಂತೆ ಜ್ವರ ಕಾಡುತ್ತಿದೆಯಾದ್ದರಿಂದ ಇದು ಟೈಫಾಯಿಡ್ ಇರಬಹುದೆಂದು ಆ ಸಂಬಂಧವಾದ ಎಲ್ಲಾ ಪರೀಕ್ಷೆಗಳನ್ನೂ ನಡೆಸಿದರು.ಮರುದಿನ ಫಲಿತಾಂಶ ನೋಡಿದರೆ ಅದು ಟೈಫಾಯಿಡ್ ಅಲ್ಲ. ಹಾಗಾದರೆ ಮಲೇರಿಯಾ ಇರಬಹುದೇ? ಸರಿ..ಆ ಸಂಬಂಧಿ ಪರೀಕ್ಷೆಗಳು ಶುರು! ಮತ್ತೆ ಮರುದಿನ ಮಲೇರಿಯಾ ಅಲ್ಲವೆಂಬ ಫಲಿತಾಂಶ! ಓಹೋ! ಶೀತಬಾಧೆಯೂ ಇವನಿಗೆ ವಿಪರೀತವಾಗಿದೆ..ಎದೆಯಲ್ಲಿ ಕಫ ಕಟ್ಟಿಕೊಂಡಿದೆ.. ಹಾಗಾಗಿ ಇದು ನ್ಯುಮೋನಿಯಾ ಆಗಿಯೇ ತೀರಬೇಕು.. ಬೇರೆ ಪ್ರಶ್ನೆಯೇ ಇಲ್ಲ ಎಂದವರೇ ವೈದ್ಯರು ಆ ಸಂಬಂಧಿ ಪರೀಕ್ಷೆಗಳಿಗೆ ಶುರುವಿಟ್ಟುಕೊಂಡರು.

ಮರುದಿನ ಮತ್ತದೇ ಫಲಿತಾಂಶ: ನ್ಯುಮೋನಿಯಾ ಕೂಡಾ ಅಲ್ಲ! ನನಗಂತೂ ರೋಸಿಹೋಗಿತ್ತು..ಇದೆಂಥಾ ದರಿದ್ರ ಅದೃಷ್ಟ ನನ್ನದು! ವೈದ್ಯರು ಸಂದೇಹಿಸಿದ್ದರಲ್ಲಿ ಯಾವುದಾದರೊಂದು ರೋಗ ತಗುಲಿದ್ದರೆ ಚಿಕಿತ್ಸೆಯಾದರೂ ದೊರೆಯುತ್ತಿತ್ತು. ಗುರುತಿಸಲಾಗದ ವ್ಯಾಧಿ ಮೆಟ್ಟಿಕೊಳ್ಳುವುದೆಂದರೆ ಏನರ್ಥ? ಒಂದಂತೂ ನಿಜ: ಆ ಆಸ್ಪತ್ರೆಯ ಆ ಜನರಲ್ ವಾರ್ಡ್ ನಲ್ಲಿ ನಾನು ಕಳೆದ ನಾಲ್ಕಾರು ದಿನಗಳು ಸಾಕಷ್ಟು ಯಾತನಾಮಯವೇ ಆಗಿದ್ದರೂ ಒಂದು ವಿಶಿಷ್ಟ ಅನುಭವವನ್ನು ನನಗೊದಗಿಸಿಕೊಟ್ಟವು. ಇಡೀ ದಿನ ವಾರ್ಡ್ ನಲ್ಲಿ ನಿಧಾನಕ್ಕೆ ಅಡ್ಡಾಡುತ್ತಾ ಅಲ್ಲಿದ್ದ ಇತರ ಅನಾರೋಗ್ಯ ಪೀಡಿತರೊಂದಿಗೆ ಮಾತುಕತೆಯಾಡುತ್ತಾ ಹೊತ್ತು ಕಳೆಯುತ್ತಿದ್ದೆ. ಒಬ್ಬೊಬ್ಬರದು ಒಂದೊಂದು ವ್ಯಥೆಯ ಕಥೆ.. ಆ ಕಥೆಗಳಲ್ಲೋ ಮೈನಡುಗಿಸುವ ಪಾತ್ರಗಳು—ಘಟನೆಗಳು.. ಹೃದಯ ದ್ರವಿಸುವಂತೆ ಮಾಡುವ ಕರುಣಾಜನಕ ಆಕ್ರಂದನಗಳು..ಕೇಳುತ್ತಾ ನೋಡುತ್ತಾ ಬೇನೆ—ಬವಣೆಗಳ ಜಗತ್ತೇ ಕಣ್ಣ ಮುಂದೆ ತೆರೆದುಕೊಂಡಂತಾಗಿ, ‘ಅವುಗಳ ಮುಂದೆ ನನ್ನ ಸಮಸ್ಯೆ ಒಂದು ಸಮಸ್ಯೆಯೇ ಅಲ್ಲ, ನನ್ನ ದುಃಖ ಒಂದು ದುಃಖವೇ ಅಲ್ಲ’ ಅನ್ನಿಸಿಬಿಟ್ಟಿತು.
ಮರುದಿನ ನನ್ನ ಬಳಿ ಬಂದ ವೈದ್ಯರು, “ಅಭಿನಂದನೆಗಳು! ನಾವು ಊಹಿಸಿದಂತಹ ಯಾವ ವ್ಯಾಧಿಯ ಕುರುಹುಗಳೂ ನಿಮ್ಮ ಶರೀರದಲ್ಲಿ ಇಲ್ಲವಾದ್ದರಿಂದ ಇದು ವೈರಲ್ ಜ್ವರವೇ ಇರಬೇಕೆಂದು ತೀರ್ಮಾನಕ್ಕೆ ಬಂದಿದ್ದೇವೆ..ಈ ಕ್ಷಣದಿಂದಲೇ ಚಿಕಿತ್ಸೆ ಪ್ರಾರಂಭಿಸಿ ಬಿಡುತ್ತೇವೆ.. you will be allright in no time!” ಎಂದು ಸಂಭ್ರಮದಿಂದ ಹೇಳಿದರು. ‘much time is already lost doctor’ಎಂದು ಮನಸ್ಸಿನಲ್ಲೇ ಗೊಣಗಿಕೊಂಡೆ.
ಆ ವೈದ್ಯರು ಹೇಳಿದಂತೆ ಎರಡೇ ದಿನಕ್ಕೆ ಜ್ವರ ಹತೋಟಿಗೆ ಬಂದರೂ ವಿಪರೀತ ನಿಶ್ಶಕ್ತಿ ಕಾಡುತ್ತಿತ್ತು. ಈ ವೇಳೆಗೆ ನಾನು ಆಸ್ಪತ್ರೆ ಸೇರಿರುವ ವಿಷಯವನ್ನು ನನ್ನ ಸಹಾಯಕ ಕೃಷ್ಣಯ್ಯನಿಂದ ಕೇಳಿ ತಿಳಿದಿದ್ದ ಎಸ್.ಕೆ. ಶ್ರೀಧರ ಆಸ್ಪತ್ರೆಗೆ ಧಾವಿಸಿ ಬಂದ.
ಅವನು ಬರುವ ವೇಳೆಗೇ ವೈದ್ಯರೂ ಬಂದು “ನೀವು ಗುಣಮುಖರಾಗಿದ್ದೀರಿ..ಹೂಂ ಎಂದರೆ ಈಗಲೇ discharge ಮಾಡಿ ಕಳಿಸಿಕೊಡುತ್ತೇವೆ” ಎಂದರು. ಶ್ರೀಧರ ಆ ಮಾತನ್ನು ಕೇಳಿದವನೇ ಹೊರಗೋಡಿ ಒಂದು ಟ್ಯಾಕ್ಸಿಯನ್ನು ಗೊತ್ತುಮಾಡಿಕೊಂಡು ಬಂದುಬಿಟ್ಟ. “ಸೀದಾ ನನ್ನ ಜೊತೆ ಮಂಗಳೂರಿಗೆ ಬಾ..ಒಂದೆರಡು ದಿನ ರೆಸ್ಟ್ ತೊಗೊಂಡು ಬರುವಿಯಂತೆ” ಎಂದು ಅಪ್ಪಣೆ ಮಾಡಿದ.ನಾನು ಆಗಲೆಂದು ತಲೆಯಾಡಿಸಿ, ಕು.ಶಿ. ಅವರಿಗೆ ವಿಷಯ ತಿಳಿಸಿ ಅನುಮತಿ ಪಡೆದುಕೊಂಡು ಅಲ್ಲಿಂದ ಶ್ರೀಧರನೊಟ್ಟಿಗೆ ಮಂಗಳೂರಿಗೆ ಹೊರಟೆ.
ಮಂಗಳೂರಿನಲ್ಲಿ ಶ್ರೀಧರ ಹಾಗೂ ಲೂಸಿಯರ ಆರೈಕೆಯಲ್ಲಿ ಎರಡೇ ದಿನದಲ್ಲಿ ಮತ್ತಷ್ಟು ಚೇತರಿಸಿಕೊಂಡೆ. ಯಾಕೋ ಒಮ್ಮೆ ಮನೆಗೆ ಹೋಗಿ ಎಲ್ಲರನ್ನೂ ನೋಡಿಕೊಂಡು ಬರಬೇಕೆಂಬ ಹಂಬಲ ತೀವ್ರವಾಗಿ ಕಾಡತೊಡಗಿತು. ಶ್ರೀಧರನೇ ಕರೆದುಕೊಂಡು ಹೋಗಿ ಬೆಂಗಳೂರು ಬಸ್ ಹತ್ತಿಸಿದ.
ಬೆಂಗಳೂರಿನ ದಾರಿಯುದ್ದಕ್ಕೂ ನನ್ನ ಮುಂದಿನ ನಾಟಕಗಳ ಚಿಂತನೆಯಲ್ಲೇ ಮುಳುಗಿದ್ದ ನನಗೆ, ‘ಈ ನನ್ನ ಬೆಂಗಳೂರಿನ ಪ್ರವಾಸ ಶರವೇಗದಲ್ಲಿ ಮತ್ತೊಂದು ಕವಲುದಾರಿಯತ್ತ ನನ್ನನ್ನು ಕರೆದೊಯ್ಯುತ್ತಿದೆ’ ಎಂಬುದರ ಕುರಿತಾದ ಲೇಶಮಾತ್ರ ಸುಳಿವೂ ಇರಲಿಲ್ಲ!!
| ಇನ್ನು ಮುಂದಿನ ವಾರಕ್ಕೆ ।






0 Comments