ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿವಾಸ ಪ್ರಭು ಅಂಕಣ – ದೂರದರ್ಶನದಲ್ಲಿನ ನೆನಪುಗಳ ಮೆಲುಕು ಹಾಕುತ್ತಾ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

83

ದೂರದರ್ಶನ ಕೇಂದ್ರದ ಹೊಸ ಕಟ್ಟಡಕ್ಕೆ ನಾವು ವರ್ಗಾವಣೆಯಾಗುತ್ತಿದ್ದಂತೆಯೇ ಹವ್ಯಾಸಿ ಹಾಗೂ ವೃತ್ತಿರಂಗಭೂಮಿಗಳ ಪ್ರಸಿದ್ಧ ನಾಟಕಗಳನ್ನು ಕಿರುತೆರೆಗೆ ಅಳವಡಿಸಿಕೊಳ್ಳುವ ಪ್ರಯತ್ನಗಳು ಆರಂಭವಾದವು.ಆ ಸಮಯದಲ್ಲಿ ಬಿ.ಜಯಶ್ರೀ ಅವರು ನಿರ್ದೇಶಿಸಿದ್ದ ‘ಲಕ್ಷಾಪತಿರಾಜನ ಕಥೆ’, ಕನ್ನಡ ರಂಗಭೂಮಿಯಲ್ಲಿ ಒಂದು ಸಂಚಲನವನ್ನೇ ಮೂಡಿಸಿದ್ದ ನಾಟಕ.

ಬಿ ಜಯಶ್ರೀ ಅವರು ಕನ್ನಡ ರಂಗಭೂಮಿ ಕಂಡ ಪ್ರತಿಭಾವಂತ ನಿರ್ದೇಶಕಿ, ಅದ್ಭುತ ನಟಿ, ಅಪರೂಪದ ಗಾಯಕಿ. ಸ್ಪಂದನ ತಂಡಕ್ಕಾಗಿ ಅವರು ನಿರ್ದೇಶಿಸಿದ ನಾಟಕ ‘ಲಕ್ಷಾಪತಿರಾಜನ ಕಥೆ’. ನನಗೆ ನೆನಪಿರುವ ಮಟ್ಟಿಗೆ ನಮ್ಮದೂರದರ್ಶನ ಕೇಂದ್ರದ ಹೊಸ ಸ್ಟುಡಿಯೋದಲ್ಲಿ ನಾನು ಟಿ ವಿ ಮಾಧ್ಯಮಕ್ಕೆ ಅಳವಡಿಸಿಕೊಂಡ ಮೊದಲ ನಾಟಕವೂ ಸಹಾ ಇದೇ! ಈ ಕುರಿತಾಗಿ ಇತ್ತೀಚೆಗೆ ಅವರೊಂದಿಗೆ ಮಾತಾಡಿದಾಗ ತಮ್ಮ ನೆನಪಿನ ಬುತ್ತಿಯನ್ನು ತೆರೆದು ಅನೇಕ ಸ್ವಾರಸ್ಯಕರ ಸಂಗತಿಗಳನ್ನು ನನ್ನೊಂದಿಗೆ ಹಂಚಿಕೊಂಡರು ಜಯಶ್ರೀ ಅಕ್ಕಯ್ಯ:

ಜಾನಪದ ಪ್ರಕಾರವೊಂದನ್ನು ಬಳಸಿಕೊಂಡು ಹೊಚ್ಚ ಹೊಸ ನಾಟಕಗಳನ್ನು ಪ್ರದರ್ಶನಕ್ಕೆ ಸಿದ್ಧಪಡಿಸುವುದು ಸಂಗೀತ ನಾಟಕ ಅಕಾಡಮಿಯವರ ಒಂದು ಮಹತ್ವದ ಯೋಜನೆಯಾಗಿತ್ತು. ಆ ಯೋಜನೆಯ ಅಂಗವಾಗಿ ಸಿದ್ಧವಾದದ್ದು ‘ಲಕ್ಷಾಪತಿ ರಾಜನ ಕಥೆ.’ ಮುಧೇನೂರು ಸಂಗಣ್ಣ ಅವರು ಕಿಂದರ ಜೋಗೇರ ಆಟವೆಂಬ ಜಾನಪದ ಪ್ರಕಾರದ ಮೂಲದಿಂದ ಹೆಕ್ಕಿ ಸಂಗ್ರಹಿಸಿಕೊಟ್ಟ ಈ ಕಥೆಯನ್ನು ನಾಟಕ ರೂಪಕ್ಕೆ ಅಳವಡಿಸಿದವರು ಪ್ರೊ॥ಎಂ ಎಸ್ ನಾಗರಾಜ್ ಅವರು. ಕಿಂದರಿ ಎನ್ನುವುದು ಮೂರು ಬುರುಡೆಗಳ ಹಾಗೂ ಎರಡು ತಂತಿಗಳ ಒಂದು ವಾದ್ಯ; ಒಂದು ತಂತಿಯಿಂದ ಏಕತಾರಿಯಂತೆ, ಮತ್ತೊಂದು ತಂತಿಯಿಂದ ವೀಣೆಯಂತೆ ನುಡಿಸಲು ಅನುವಾಗುವಂತಿದ್ದ ವಾದ್ಯ. ಕಿಂದರ ಜೋಗೇರನ್ನು ಅರ್ಜುನನಿಗೆ ಒಕ್ಕಲುಬಿದ್ದ ಅರ್ಜುನ ಜೋಗೇರು ಎಂದೂ ಗುರುತಿಸುವುದುಂಟು. ಇವರು ತಮ್ಮ ಆಟದಲ್ಲಿ ಪ್ರಸ್ತುತಪಡಿಸುವ ‘ಲಕ್ಷಾಪತಿ ರಾಜನ ಪ್ರಸಂಗ’ ಮಹಾಭಾರತದಲ್ಲಿ ಬರುವ ಒಂದು ಪುಟ್ಟ ಉಪಕಥೆ. ಬರಗಾಲದ ಸಂದರ್ಭದಲ್ಲಿ ವಿಶೇಷವಾಗಿ ಈ ಪ್ರಸಂಗವನ್ನು ಆಡುವುದುಂಟು. ಈ ಆಟದ ಪ್ರಸ್ತುತಿಯಿಂದ ಮಳೆ ಬಂದೇ ಬರುತ್ತದೆ ಎನ್ನುವುದು ಜನಮಾನಸದಲ್ಲಿ ಬೇರುಬಿಟ್ಟಿದ್ದ ಪ್ರತೀತಿ.

ಇಂಥದೊಂದು ಪ್ರಸಂಗವನ್ನು ರಂಗಭೂಮಿಗೆ ಬಿ.ಜಯಶ್ರೀ ಅವರು ಅದ್ಭುತವಾದ ರೀತಿಯಲ್ಲಿ ಅಳವಡಿಸಿಕೊಂಡರ 500ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿರುವ ಲಕ್ಷಾಪತಿರಾಜನ ಕಥೆ ನಾಟಕ ರಷ್ಯಾ ಹಾಗೂ ಈಜಿಪ್ಟ್ ದೇಶಗಳಲ್ಲಿಯೂ ಹಲವಾರು ಯಶಸ್ವೀ ಪ್ರದರ್ಶನಗಳನ್ನು ಕಂಡ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗೆಯೇ ಅಷ್ಟೂ ಪ್ರದರ್ಶನಗಳಲ್ಲಿ ಮುಖ್ಯ ಜೋಗತಿಯಾಗಿ ಬಿ.ಜಯಶ್ರೀ ಅವರು ಅಭಿನಯಿಸಿರುವುದು ಮತ್ತೂ ಒಂದು ವಿಶೇಷ. ಮತ್ತೂ ಒಂದು ಸ್ವಾರಸ್ಯದ ಸಂಗತಿಯೆಂದರೆ ಈ ನಾಟಕ ಪ್ರದರ್ಶಿತವಾದ ಅನೇಕ ಸ್ಥಳಗಳಲ್ಲಿ ಕಥೆಯ ಪ್ರತೀತಿಗೆ ಅನುಗುಣವಾಗಿ ಮಳೆ ಸುರಿದಿರುವುದು! ಮುಧೇನೂರು ಸಂಗಣ್ಣನವರ ಊರಿನಲ್ಲಿ ನಾಟಕದ ಪ್ರಥಮ ಪ್ರದರ್ಶನವಾದಾಗ ಅಲ್ಲಿ ಧಾರಾಕಾರ ಮಳೆ! ಬಾಂಬೆಯಲ್ಲಿ ರಂಗದ ಮೇಲೆ ಲಕ್ಷಾಪತಿ ನಾಟಕ ಪ್ರದರ್ಶನ ನಡೆಯುತ್ತಿದ್ದರೆ ಹೊರಗಡೆ ಧೋಧೊ ಮಳೆ—ಅದೂ ಅಕಾಲದಲ್ಲಿ! ಕಲಕತ್ತಾ—ದೆಹಲಿಗಳಲ್ಲಿಯೂ ನಾಟಕ ಪ್ರದರ್ಶನದ ವೇಳೆಯಲ್ಲಿ ಹೀಗೇ ಮಳೆಯ ಆರ್ಭಟ!! ಇದೆಲ್ಲವೂ ಕಾಕತಾಳೀಯವೇ..ಅಥವಾ ಲಕ್ಷಾಪತಿಯನ್ನು ಕಾಲಿಟ್ಟ ಕಡೆ ಮಳೆ ತರಿಸುವ ಋಷ್ಯಶೃಂಗನ ಅವತಾರವೆನ್ನೋಣವೇ?

ಇರಲಿ..
‘ಸಂಪೂರ್ಣ ರಂಗಭೂಮಿ’ಯ ಪರಿಕಲ್ಪನೆಯಲ್ಲಿ ಜಯಶ್ರೀ ಅವರು ರಂಗಕ್ಕೆ ಅಳವಡಿಸಿದ ಈ ನಾಟಕವನ್ನು ಕಿರುತೆರೆಗೆ ಅಳವಡಿಸಿಕೊಳ್ಳುವುದು ಬಹು ದೊಡ್ಡ ಸಾಹಸವೇ ಆಗಿತ್ತು. ಸ್ಟುಡಿಯೋದಲ್ಲಿ ಮೂರು ಕ್ಯಾಮರಾಗಳನ್ನು ಅಳವಡಿಸಿ ಒಂದು ಕ್ಯಾಮರಾವನ್ನು ಪೂರ್ತಿ ರಂಗಸ್ಥಳವನ್ನು ತೋರುವ ರೀತಿಯಲ್ಲಿ ಸ್ಥಿರವಾಗಿರಿಸಿ ಉಳಿದೆರಡು ಕ್ಯಾಮರಾಗಳ ನೆರವಿನಿಂದ ಕಲಾವಿದರ ಕ್ಲೋಸಪ್ ಇತ್ಯಾದಿ ಚಿತ್ರಿಕೆಗಳನ್ನು ಮುದ್ರಿಸಿಕೊಳ್ಳಲು ನಿಯೋಜಿಸಿಕೊಂಡೆವು. ಆದರೆ ನಿಂತಲ್ಲಿ ನಿಲ್ಲದ ಕಲಾವಿದರ ಮುಖಭಾವಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವುದು ಬಲು ಕಷ್ಟದ ಸಂಗತಿಯಾಗಿತ್ತು! ಅಂದುಕೊಂಡ ಗುಣಮಟ್ಟದಲ್ಲಿ ಇಡೀ ನಾಟಕವನ್ನು ಚಿತ್ರೀಕರಿಸಲಾಗದಿದ್ದರೂ ಕನ್ನಡ ರಂಗಭೂಮಿಯಲ್ಲಿ ಇತಿಹಾಸ ಸೃಷ್ಟಿಸಿದ ಒಂದು ಮಹತ್ವದ ನಾಟಕವನ್ನು ರಂಗಭೂಮಿಯ ನಿರ್ದಿಷ್ಟ ವಲಯದಿಂದ ಹೊರತಂದು ನಾಡಿನ ಲಕ್ಷಾಂತರ ಮಂದಿಗೆ ಪರಿಚಯಿಸಿದ ಸಮಾಧಾನವಂತೂ ನಮ್ಮ ಪಾಲಿಗೆ ಸಂದಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ.

ಕನ್ನಡ ವೃತ್ತಿರಂಗಭೂಮಿಯ ಅನೇಕ ಶ್ರೇಷ್ಠ—ಪ್ರಸಿದ್ಧ ಕಲಾವಿದರನ್ನು ನಮ್ಮ ಸ್ಟುಡಿಯೋಗೆ ಆಹ್ವಾನಿಸಿ ಕಾರ್ಯಕ್ರಮಗಳನ್ನು ರೂಪಿಸಿದ್ದು ನನಗೆ ಬಹಳ ತೃಪ್ತಿಯನ್ನು ತಂದುಕೊಟ್ಟಂತಹ ಸಂಗತಿ. ಗುಬ್ಬಿ ವೀರಣ್ಣನವರ ಧರ್ಮಪತ್ನಿ ಬಿ.ಜಯಮ್ಮನವರು, ಸಾವಿರಾರು ಹಾಡುಗಳ ಸರದಾರ ಪರಮಶಿವನ್ , ಅದ್ಭುತ ನಟ—ಗಾಯಕ ಮುಸರಿ ಕೃಷ್ಣಮೂರ್ತಿ, ‘ವೃತ್ತಿರಂಗಭೂಮಿಯ ಕೋಗಿಲೆ’ ಎಂದೇ ಹೆಸರಾದ ಜು಼ಬೇದಾಬಾಯಿ ಹಾವೇರಿ, ಈಗ ಚಲನಚಿತ್ರರಂಗದಲ್ಲೂ ಖ್ಯಾತರಾಗಿರುವ ಉಮೇಶ್ , ಕಂಠದಾನ ಕಲಾವಿದೆಯಾಗಿಯೂ ಹೆಸರುಮಾಡಿದ ಸರ್ವಮಂಗಳ.. ಇವರುಗಳೇ ಮೊದಲಾಗಿ ಅನೇಕ ವೃತ್ತಿರಂಗಭೂಮಿಯ ಕಲಾವಿದರು ನಮ್ಮ ಸ್ಟುಡಿಯೋಗೆ ಬಂದು ಸುಪ್ರಸಿದ್ಧ ರಂಗಗೀತೆಗಳನ್ನು ಸೂಕ್ತ ವಿವರಣೆಗಳೊಂದಿಗೆ ಮನಮೋಹಕವಾಗಿ ಹಾಡಿದರು. ಮತ್ತೊಬ್ಬ ಹಿರಿಯ ಸಂಘಟಕ ನಾರಾಯಣದಾಸ್ ಅವರೂ ಸಹಾ ಅನೇಕ ವೃತ್ತಿರಂಗಭೂಮಿಯ ಕಲಾವಿದರನ್ನು ನಮಗೆ ಪರಿಚಯಿಸಿ ಆ ಕಲಾವಿದರ ಪ್ರಸ್ತುತಿಗಳನ್ನು ಚಿತ್ರೀಕರಿಸಿ ದಾಖಲು ಮಾಡಿಕೊಳ್ಳಲು ನಮಗೆ ನೆರವಾದರು. ಹೀಗೆ ಅನೇಕ ನಾಟಕಗಳು—ನಾಟಕಗಳ ಆಯ್ದ ದೃಶ್ಯಭಾಗಗಳು ಹಾಗೂ ರಂಗಗೀತೆಗಳನ್ನು ಚಿತ್ರೀಕರಿಸಿಕೊಂಡು ‘ಯಾವತ್ತಿಗೂ ಉಳಿಸಿಕೊಳ್ಳಬೇಕಾದಂತಹ ಚಿತ್ರಣಗಳು’ ಎಂದು ಗುರುತು ಮಾಡಿ ನಮ್ಮ ಲೈಬ್ರರಿಯಲ್ಲಿ ಜೋಡಿಸಿಟ್ಟೆವು. ಆ ಕಾಲದ ಟೇಪ್ ಗಳು.. ಈಗಲೂ ಸುಸ್ಥಿತಿಯಲ್ಲಿರುವುದು ಅನುಮಾನ..ಮತ್ತೊಂದು ಮಾಧ್ಯಮಕ್ಕೆ ವರ್ಗಾಯಿಸಿಟ್ಟಿದ್ದರೆ ಉಳಿಸಿಕೊಳ್ಳಬಹುದಿತ್ತೇನೋ.. ಆದರೆ ನಾನು ದೂರದರ್ಶನ ತೊರೆದ ಮೇಲೆ ಅದಾಗಿರುವುದೂ ಅನುಮಾನವೇ! ಇರಲಿ.

ಹೀಗೆ ನಮ್ಮ ಸ್ಟುಡಿಯೋಗೆ ನಾವು ಆಹ್ವಾನಿಸಿದ ಅನೇಕ ಕಲಾವಿದರಲ್ಲಿ ಪ್ರಮುಖವಾಗಿ ನೆನಪಿಸಿಕೊಳ್ಳಬೇಕಾದ ಹೆಸರುಗಳೆಂದರೆ ಆರ್.ನಾಗರತ್ನಮ್ಮನವರು, ಏಣಗಿ ಬಾಳಪ್ಪನವರು ಹಾಗೂ ಮಾಸ್ಟರ್ ಹಿರಣ್ಣಯ್ಯನವರು.

ಕನ್ನಡ ವೃತ್ತಿರಂಗಭೂಮಿಯಲ್ಲಿ ತಮ್ಮದೇ ಆದ ಛಾಪನ್ನೊತ್ತಿ ಕಲಾರಸಿಕರ ಹೃನ್ಮನಗಳಲ್ಲಿ ಸದಾ ಹಸಿರಾಗಿರುವ ಹೆಸರೆಂದರೆ ಆರ್.ನಾಗರತ್ನಮ್ಮ 1958 ರಲ್ಲಿ ಅವರು ಸ್ಥಾಪಿಸಿದ ಸ್ತ್ರೀ ನಾಟಕ ಮಂಡಲಿ ರಂಗಭೂಮಿಯ ಇತಿಹಾಸದಲ್ಲಿ ಒಂದು ಕ್ರಾಂತಿಯ ಪುಟವನ್ನೇ ಬರೆದ ವಿಶಿಷ್ಟ ಪರಿಕಲ್ಪನೆ. ಈ ಸ್ತ್ರೀ ನಾಟಕ ಮಂಡಳಿಯಲ್ಲಿ ಕಲಾವಿದರು, ನಿರ್ವಾಹಕರು, ತಂತ್ರಜ್ಞರು ಎಲ್ಲರೂ ಸ್ತ್ರೀಯರೇ! ಶ್ರೀಕೃಷ್ಣಲೀಲೆಯಲ್ಲಿ ಕಂಸನಾಗಿ, ಕೃಷ್ಣಗಾರುಡಿ ನಾಟಕದಲ್ಲಿ ಭೀಮನಾಗಿ, ರಾಮಾಯಣದಲ್ಲಿ ದಶರಥ ಹಾಗೂ ರಾವಣನಾಗಿ, ದಾನಶೂರ ಕರ್ಣ ನಾಟಕದಲ್ಲಿ ದುರ್ಯೋಧನನಾಗಿ ನಟಿಸುತ್ತಿದ್ದ ನಾಗರತ್ನಮ್ಮನವರ ಅದ್ಭುತ ಅಭಿನಯಕ್ಕೆ ಮಾರುಹೋಗದವರೇ ಇರಲಿಲ್ಲ. ಪುರುಷರು ಸ್ತ್ರೀಪಾತ್ರಗಳನ್ನು ನಿರ್ವಹಿಸುವುದು ಸಾಧಾರಣ ಸಂಗತಿಯೇ ಆಗಿದ್ದರೂ ಸ್ತ್ರೀಯರು ಪುರುಷ ಪಾತ್ರಗಳನ್ನು ನಿರ್ವಹಿಸುವುದು.. ಅದರಲ್ಲೂ ವೀರ-ರೌದ್ರ ರಸಪ್ರಧಾನ ಪಾತ್ರಗಳನ್ನು ನಿರ್ವಹಿಸುವುದು ಅತಿ ವಿಶೇಷ ಸಂಗತಿಯಾಗಿತ್ತು. ಈ ನಿಟ್ಟಿನಲ್ಲಿ ನಾಗರತ್ನಮ್ಮನವರ ಸಾಧನೆ—ಅವರು ಗಳಿಸಿದ ಯಶಸ್ಸು ಅನನ್ಯ. ಇಂಥ ಅಪರೂಪದ ಕಲಾವಿದೆ ನಾಗರತ್ನಮ್ಮನವರನ್ನು ನಮ್ಮ ಸ್ಟುಡಿಯೋಗೆ ಆಹ್ವಾನಿಸಿ ಅವರ ಕೃಷ್ಣಲೀಲೆ ನಾಟಕದ ಕೆಲ ದೃಶ್ಯಭಾಗಗಳನ್ನು ಚಿತ್ರೀಕರಿಸಿಕೊಂಡೆ. ಅಂದು ಅವರ ಆ ‘ಕಂಸ ಘರ್ಜನೆ’ಗೆ ನಮ್ಮ ಸಹೋದ್ಯೋಗಿಗಳು ಅಕ್ಷರಶಃ ಬೆಚ್ಚಿಬಿದ್ದಿದ್ದರು!

ಹೀಗೆ ಇನ್ನೂ ಅನೇಕ ವೃತ್ತಿ ರಂಗಭೂಮಿಯ ಶ್ರೇಷ್ಠ ಕಲಾವಿದರನ್ನು ಸ್ಟುಡಿಯೋಗೆ ಆಹ್ವಾನಿಸಿ ಅವರ ನಾಟಕಗಳನ್ನು—ಕೆಲವೊಮ್ಮೆ ಆಯ್ದ ದೃಶ್ಯಭಾಗಗಳನ್ನು ಚಿತ್ರೀಕರಿಸಿಕೊಂಡು ಒಂದು ಭವ್ಯ ಪರಂಪರೆಯನ್ನು ತುಸುಮಟ್ಟಿಗಾದರೂ ಶಾಶ್ವತವಾಗಿ ದಾಖಲಿಸುವ ಪ್ರಯತ್ನ ನಡೆಸಿದೆವು. ಈ ಕುರಿತಾದ ಮತ್ತಷ್ಟು ಸಂಗತಿಗಳನ್ನು ಮುಂದಿನ ಪುಟಗಳಲ್ಲಿ ಹಂಚಿಕೊಳ್ಳುತ್ತೇನೆ.

ರವಿಚಂದ್ರನ್ ಅವರ ಚಿತ್ರಗಳು ಸಾಲುಸಾಲಾಗಿ ನಿರ್ಮಾಣಗೊಂಡು ಸಿದ್ಧವಾಗುತ್ತಿದ್ದವೆಂದು ಹೇಳಿದೆನಲ್ಲಾ, ಅವುಗಳಲ್ಲಿ ಒಂದು ಪ್ರಮುಖ ಚಿತ್ರವೆಂದರೆ ‘ಸಂಗ್ರಾಮ’. 1985ರಲ್ಲಿ ತೆರೆಕಂಡ ಒಂದು ಸೂಪರ್ ಹಿಟ್ ಹಿಂದಿ ಚಿತ್ರ ‘ಅರ್ಜುನ್’.ಜಾವೇದ್ ಅಖ್ತರ್ ಅವರ ಕಥೆಯಿದ್ದ ಈ ಚಿತ್ರದ ನಾಯಕನಟ ಸನ್ನಿಡಿಯೊಲ್. ಈ ‘ಅರ್ಜುನ್’ ಚಿತ್ರವನ್ನು ಆಧರಿಸಿಯೇ ಕನ್ನಡದ ಅವತರಣಿಕೆ ‘ಸಂಗ್ರಾಮ’ ಸಿದ್ಧವಾಗಿತ್ತು. ಇದರ ನಿರ್ದೇಶಕರು ಕೆ.ವಿ.ರಾಜು ಕೆ.ವಿ.ಜಯರಾಂ ಹಾಗೂ ಕೆ.ವಿ.ರಾಜು—ಕನ್ನಡ ಚಿತ್ರರಂಗ ಕಂಡ ಇಬ್ಬರು ಪ್ರತಿಭಾವಂತ ನಿರ್ದೇಶಕ ಸಹೋದರರು. ಇವರಲ್ಲಿ ಜಯರಾಂ ಅವರು ವಿಶೇಷವಾಗಿ ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶಿಸುವುದರತ್ತ ಆಸಕ್ತಿ ತೋರುತ್ತಿದ್ದರೆ ರಾಜು ಅವರ ಒಲವು action ಚಿತ್ರಗಳ ಕಡೆಗಿತ್ತು. ರಾಜು ಅವರಂತೂ ಬಹಳ ಒಳ್ಳೆಯ ತಂತ್ರಜ್ಞನೆಂದೇ ಖ್ಯಾತರಾಗಿದ್ದರು. ವಿಶಿಷ್ಟ ಬಗೆಯ ಶಾಟ್ ಗಳನ್ನು ಸಂಯೋಜಿಸುವಲ್ಲಿ ಸಿದ್ಧಹಸ್ತರಾಗಿದ್ದ ರಾಜು ಅವರು ಅಷ್ಟೇ ವಿಶಿಷ್ಟವಾಗಿ ಸಂಭಾಷಣೆಗಳನ್ನು ಹೆಣೆಯುವುದರಲ್ಲೂ ಪರಿಣತರಾಗಿದ್ದರು.
1984ರಲ್ಲಿಯೇ ಇರಬೇಕು, ಅವರು ‘ಕೂಗು’ ಎಂಬ ಚಲನಚಿತ್ರವನ್ನು ರಾಜು ಕೈಗೆತ್ತಿಕೊಂಡಿದ್ದರು. ಅನಂತನಾಗ್ ಅವರದು ಪ್ರಧಾನ ನಾಯಕನ ಪಾತ್ರ. ಮತ್ತೆರಡು ಮುಖ್ಯ ಪಾತ್ರಗಳಲ್ಲಿ ಒಂದು ಪಾತ್ರಕ್ಕೆ ನನ್ನ ಹೆಸರೂ ಸೂಚಿತವಾಗಿ ರಾಜು ಅವರ ಅನುಮೋದನೆಯೂ ದೊರೆತಿತ್ತು! ಆದರೆ ಅದೇ ಸಮಯದಲ್ಲಿ ನಾನು ‘ಮಾರ್ಜಾಲ’ ಚಿತ್ರವನ್ನು ಒಪ್ಪಿಕೊಂಡದ್ದರಿಂದ ‘ಕೂಗು’ ಚಿತ್ರವನ್ನು ಒಪ್ಪಿಕೊಳ್ಳಲಾಗಲಿಲ್ಲ. ಆ ಸಮಯದಲ್ಲಿ ಒಮ್ಮೆ ರಾಜು ಅವರನ್ನು ಭೇಟಿಯಾಗಿದ್ದೆ. ನನ್ನ ಕಣ್ಣುಗಳ ಬಗ್ಗೆ ವಿಶೇಷ ಆಸಕ್ತಿಯನ್ನು ತೋರಿದ್ದ ರಾಜು ಅವರು, ‘ಒಂದು ಅದ್ಭುತವಾದ ವಿಲನ್ ಪಾತ್ರ ನಿಂಗೋಸ್ಕರಾನೇ ಬರೀತೀನಿ ಕಣಯ್ಯಾ!’ಎಂದು ಉದ್ಗರಿಸಿದ್ದರು! ಈಗ ಸಂಗ್ರಾಮ ಚಿತ್ರದ ಡಬ್ಬಿಂಗ್ ವೇಳೆಯಲ್ಲೇ ಮತ್ತೆ ರಾಜು ಅವರ ಭೇಟಿಯಾದದ್ದು. ಡಬ್ಬಿಂಗ್ ಸಮಯದಲ್ಲಿ ನಡೆದ ಒಂದು ಸ್ವಾರಸ್ಯಕರ ಪ್ರಸಂಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ:

ರಾಜು ಅವರ ಚಿತ್ರಿಕೆಗಳಂತೆಯೇ ಅವರು ಮಾತಾಡುವ ಶೈಲಿಯೂ ಬಲು ವಿಶಿಷ್ಟವಾದುದು. ಕೆಲವೊಮ್ಮೆ ತುಂಬಾ ವೇಗವಾಗಿ, ಕೆಲವೊಮ್ಮೆ ಟೆಲಿಗ್ರಾಫಿಕ್ ಭಾಷೆಯಲ್ಲಿ, ಮತ್ತೆ ಕೆಲವೊಮ್ಮೆ ಶಬ್ದಗಳ ಕಲಸುಮೇಲೋಗರದಂತೆ ಮಾತಾಡುತ್ತಿದ್ದ ರಾಜು ಅವರ ಮಾತುಗಳು ಒಂದೇ ಸಲಕ್ಕೆ ಕೇಳಿದೊಡನೆ ಅರ್ಥವಾಗುತ್ತಿದ್ದುದೇ ವಿರಳ! ನಾನು ಸಂಗ್ರಾಮ ಚಿತ್ರದ ಡಬ್ಬಿಂಗ್ ಗೆಂದು ಚಾಮುಂಡೇಶ್ವರಿ ಸ್ಟುಡಿಯೋಗೆ ಹೋದಾಗ ಬಾಗಿಲಲ್ಲೇ ಎದುರಾದ ರಾಜು ಅವರು ಎಂದಿನ ಅವರ ಶೈಲಿಯಲ್ಲಿ ಯಾವ ಪರಸ್ಪರ ಕುಶಲೋಪರಿಗಳೂ ಇಲ್ಲದೆ, “ಪ್ರಭೂ..ಚೆನ್ನಾಗಿ ಚೆನ್ನಾಗಿ ಮಾಡಬೇಕು..powerful character ಉ..forceಉ..ತುಂಬಾ force ಇರಬೇಕು..ಬುಲೆಟ್ ಥರಾ ರಪ್ ರಪ್ ಅಂತ ನಾಟಿಕೋಬೇಕು” ಎಂದು ಪಟಪಟನೆ ಒಂದಷ್ಟು ಸೂಚನೆಗಳನ್ನು ನೀಡಿದರು. ನಾನೂ ‘ಆಗಲಿ ಸರ್ ‘ ಎಂದು ತಲೆಯಾಡಿಸಿ ಸ್ಟುಡಿಯೋ ಒಳಹೋದೆ. ಸ್ಟುಡಿಯೋದಲ್ಲಿ ಎರಡು ಮೈಕ್ ಸ್ಟ್ಯಾಂಡ್ ಗಳು.. ಹಿಂದೆ ಒಂದು ಗಾಜಿನ ತೆರೆಯ ಹಿಂದೆ ನಿರ್ದೇಶಕರು ಹಾಗೂ ಸ್ಟುಡಿಯೋ ಇಂಜಿನಿಯರ್ ಕುಳಿತು ನಿರ್ದೇಶನಗಳನ್ನು ನೀಡುತ್ತಾ ಧ್ವನಿ ಮುದ್ರಣ ಮಾಡಿಕೊಳ್ಳುತ್ತಿದ್ದರು. ನಾನು ಮೈಕ್ ಮುಂದೆ ನಿಂತು ‘ರೆಡಿ ಸರ್ ‘ಎಂದೆ. ರಾಜು ಅವರು, ‘ಮಾನೀಟರ್..ಒಂದು ಮಾನೀಟರ್ ನೋಡಿಬಿಡೋಣ’ ಎಂದು ಒಂದು ದೃಶ್ಯಭಾಗವನ್ನು ತೆರೆಯ ಮೇಲೆ ಮೂಡಿಸಿದರು. ನಾನು ಎರಡು ಮೂರು ಬಾರಿ ನೋಡಿಕೊಂಡು ಟೇಕ್ ಗೆ ಸಿದ್ಧನಾದೆ. ಮೊದಲ ಟೇಕ್ ಆಯಿತು. ನನ್ನ ಮಟ್ಟಿಗೆ ಸರಿಯಾಗಿಯೇ ಆಗಿತ್ತಾದರೂ ಸ್ಟುಡಿಯೋ ಸ್ಪೀಕರ್ ನಿಂದ ರಾಜು ಅವರ ಧ್ವನಿ ತೂರಿಬಂತು. ಆ ಧ್ವನಿ ಸಮುಚ್ಚಯ ನನ್ನ ಕಿವಿಗೆ ಕೇಳಿಸಿದ್ದು ಹೀಗೆ:”ಪ್ರಭೂ..ಕ್ಲಾಲಿಬಿಲಿಜಲಿಇಲಿಬದಡಬಜಾಬಜ!” ತಲೆ ಬುಡ ಅರ್ಥವಾಗದ ನಾನು ಪ್ರಶ್ನಾರ್ಥಕವಾಗಿ ‘ಸರ್ ?’ ಎಂದೆ. ಮತ್ತದೇ ಧ್ವನಿ ಸಮುಚ್ಚಯಗಳ ಪುನರಾವರ್ತನೆ! ನಾನು ಅಸಹಾಯಕನಾಗಿ, “ಸರ್..ಗೊತ್ತಾಗಲಿಲ್ಲ” ಎಂದೆ.

ರಾಜು ಅವರು ಕೊಂಚ ಅಸಹನೆಯಿಂದ, “ಏ..ಕ್ಲಾಲಿಜಲಿಬಿಲಿ” ಎಂದಿತ್ಯಾದಿಯಾಗಿ ಮತ್ತೆ ಪುನರುಚ್ಚರಿಸಿದರು! ಬೇರೆ ದಾರಿಯೇ ಕಾಣದೆ ನಾನು ನನ್ನೊಟ್ಟಿಗೆ ಸ್ಟುಡಿಯೋದಲ್ಲಿದ್ದ ರಾಜು ಅವರ ಸಹಾಯಕರಿಗೆ, “ಸರ್ ಏನೋ ಸಲಹೆಗಳನ್ನ ಕೊಡ್ತಿದಾರೆ.. ಆದರೆ ಅವರು ಹೇಳ್ತಿರೋದು ನನಗೆ ಅರ್ಥವಾಗ್ತಿಲ್ಲ.. ನಿಮಗೆ ಅವರ ಭಾಷೆ ಚಿರಪರಿಚಿತ ಅಲ್ಲವೇ..ಅದೇನು ಸಲಹೆ ಕೊಡ್ತಿದಾರೆ ಅಂತ ಸ್ವಲ್ಪ ವಿಚಾರಿಸಿ ಹೇಳಿ” ಎಂದು ವಿನಂತಿಸಿಕೊಂಡೆ. ಆ ಸಹಾಯಕನೂ ಬಹಳ ಹೆಮ್ಮೆ—ಗರ್ವದಿಂದ ಮೈಕ್ ಮುಂದೆ ಬಂದು ನಿಂತು, “ಸರ್ ಹೇಳಿ ಸರ್ ” ಎಂದ. ಮತ್ತೆ ರಾಜು ಅವರ ಧ್ವನಿ ಗುಚ್ಛ ತೇಲಿಬಂತು: “ಯಾರು..ರುದ್ರೀನಾ? ಲೇ..ಕ್ಲಾಲಿಬಿಲಿಜಲಿ…..ಅಂತ ಹೇಳೋ”! ಅವರ ಮಾತು ಅರ್ಥವಾಗದಿದ್ದರೂ ಗದರು ಧ್ವನಿಯಲ್ಲಿ ಅಸಹನೆ ಹೊಡೆದುಕಾಣುತ್ತಿತ್ತು. ಪೆಚ್ಚುಮೋರೆ ಹಾಕಿಕೊಂಡು ನನ್ನ ಬಳಿ ಬಂದ ಆ ಸಹಾಯಕ,”ಬಾಸ್ ಏನು ಹೇಳ್ತಿದಾರೆ ಅಂತ ನಂಗೂ ಗೊತ್ತಾಗ್ತಾ ಇಲ್ಲ ಸರ್” ಎಂದ! ಅವರ ಸಲಹೆ ಸೂಚನೆಗಳೇ ಅರ್ಥವಾಗದೇ ಡಬ್ಬಿಂಗ್ ಮುಂದುವರಿಸುವುದು ಹೇಗೆ? ಕೊನೆಗೆ ನಾನೇ ಆ ಸಹಾಯಕನಿಗೆ ಸೂಚಿಸಿದೆ: ” ಒಂದು ಕೆಲಸ ಮಾಡಿ..ಸೀದಾ ಅವರ ಕ್ಯಾಬಿನ್ ಗೇ ಹೋಗಿ ಏನು ಅಂತ ವಿಚಾರಿಸಿ..ಕೆಲವು ಸಲ ಸ್ಪೀಕರ್ ನಲ್ಲಿ ಸರಿಯಾಗಿ ಕೇಳಿಸೋಲ್ಲ.. ಕೊನೇಪಕ್ಷ ಅವರ ತುಟಿಚಲನೆ ನೋಡಿಯಾದ್ರೂ ಅವರು ಏನು ಹೇಳ್ತಿದಾರೆ ಅಂತ ತಿಳಕೋಬಹುದು. ” ಸರಿ ಸರ್ ಎಂದವನೇ ಆತ ನಿರ್ದೇಶಕರ ಕ್ಯಾಬಿನ್ ನತ್ತ ಹೆಜ್ಜೆ ಹಾಕಿದ.

ಗಾಜಿನ ತೆರೆಯಾಚೆ ನಡೆಯುತ್ತಿದ್ದ ಗುರುಶಿಷ್ಯರ ಸಂವಾದ ಮೂಕಿಚಿತ್ರದಂತೆ ನನಗೆ ಕಾಣುತ್ತಿತ್ತು. ಕೆಲ ನಿಮಿಷಗಳ ನಂತರ ಸಹಾಯಕ ಮರಳಿ ಸ್ಟುಡಿಯೋಗೆ ಬಂದ. ನಾನು ಕುತೂಹಲದಿಂದ, “ಬಾಸ್ ಏನು ಹೇಳಿದ್ರು?” ಎಂದು ಅವನನ್ನು ಕೇಳಿದೆ. ಅವನು ತೀರಾ ಸಹಜವಾಗಿ,”ಏನಿಲ್ಲ ಸರ್… dialogue delivery ಲಿ CLARITY ಇಲ್ಲವಂತೆ ಅಷ್ಟೇ!” ಎಂದ. ಒಂದು ಕ್ಷಣ ತಬ್ಬಿಬ್ಬಾದ ನನಗೆ ಮರುಕ್ಷಣವೇ ತಡೆಯಲಾರದಷ್ಟು ನಗು ಉಕ್ಕಿ ಬಂದುಬಿಟ್ಟಿತು! ಯಾವ clarity ಬಗ್ಗೆ ಮಾತಾಡುತ್ತಿದ್ದೀರಾ ರಾಜು ಸರ್ ..ಎಂದು ಮನಸ್ಸಿನಲ್ಲೇ ಕೇಳಿಕೊಂಡೆ! ಒಂದಂತೂ ಪರಮ ಸತ್ಯ: ರಾಜು ಅವರ ಮಾತಿನಲ್ಲಿ clarity ಇಲ್ಲದೆ ಕಲಸುಮೇಲೋಗರದಂತೆ ಭಾಸವಾಗುತ್ತಿದ್ದರೂ ಅವರ ಯೋಚನಾ ಕ್ರಮದಲ್ಲಿ ಮಾತ್ರ ಯಾವುದೇ ಗೊಂದಲವಿರಲಿಲ್ಲ! ಅವರು ಶಾಟ್ ಗಳನ್ನು ಸಂಯೋಜಿಸುವಾಗ ಅಥವಾ ಸಂಭಾಷಣೆ ಹೆಣೆಯುವಾಗ ಅಥವಾ ಪಾತ್ರಗಳನ್ನು ಪರಿಭಾವಿಸುವಾಗ ಮಾತ್ರ clarity ಗೇ ಅಗ್ರಸ್ಥಾನ!ಇಂದು ರಾಜು ಅವರು ನಮ್ಮೊಂದಿಗಿಲ್ಲ. ಆದರೂ ಅವರ ಅನೇಕ ಯಶಸ್ವೀ ಚಿತ್ರಗಳು ಅವರ ನೆನಪನ್ನು ಹಸಿರಾಗಿಟ್ಟಿವೆ. ಅವರ ‘ಗೊಂದಲಿತ’ ಮಾತುಗಳ ನೇರ ಸರಳ ಸ್ನೇಹಶೀಲ ವಿಶಿಷ್ಟ ವ್ಯಕ್ತಿತ್ವದ ನೆನಪು ಆಗಾಗ್ಗೆ ನೆನಪಿಗೆ ನುಗ್ಗಿ ಬಂದು ಕಾಡುತ್ತಲೇ ಇರುತ್ತದೆ.

RAJU SIR, WE MISS YOU!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು avadhi

9 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading