
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.
ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
91
ಕಾಲಘಟ್ಟದಲ್ಲಿ ತುಸು ಹಿಂದೆ ಹೋಗಿ ಕೆಲ ಪ್ರಮುಖ ಘಟನೆಗಳನ್ನು ನೆನಪಿಸಿಕೊಳ್ಳುತ್ತೇನೆ.
1990 ಅಕ್ಟೋಬರ್ ಮಾಹೆಯ ಮೊದಲ ದಿನ.ನಾನು ಆಫೀಸಿಗೆ ಹೊರಡಲು ಸಿದ್ಧನಾಗುತ್ತಿದ್ದೆ. ಆತ್ಮೀಯ ಕಿರಿಯ ಮಿತ್ರ ಗುರು ‘ಪ್ರಭು ಸರ್..ಪ್ರಭು ಸರ್’ ಎಂದು ಕೂಗಿಕೊಳ್ಳುತ್ತಲೇ ಬಸವೇಶ್ವರ ನಗರದ ನಮ್ಮ ಮನೆಗೆ ಧಾವಿಸಿ ಬಂದ. ನಮ್ಮ ಮನೆಯಲ್ಲಿ ಫೋನ್ ಇತ್ಯಾದಿ ಸೌಕರ್ಯಗಳಿಲ್ಲದಿದ್ದ ಸಮಯವದು. ಏದುಸಿರು ಬಿಡುತ್ತಲೇ ಬಂದ ಗುರು,”ಬ್ಯಾಡ್ ನ್ಯೂಸ್ ಪ್ರಭು ಸರ್…ಶಂಕರ್ ನಾಗ್ ಸರ್ ಹೋಗಿಬಿಟ್ಟರು!”
ಗುರುವಿನ ಮಾತುಗಳು ಕಿವಿಯಿಂದ ಮನಸ್ಸಿಗಿಳಿದು ಅರ್ಥವಾಗುವುದಕ್ಕೆ ಹಲ ಕ್ಷಣಗಳೇ ಬೇಕಾದವು. “ಏನು ಹೇಳ್ತಿದೀಯಾ ಗುರು? ಏನಾಯ್ತು ಅಂತ ಸರಿಯಾಗಿ ಬಿಡಿಸಿ ಹೇಳು” ಎಂದು ಮಾತುಗಳನ್ನು ಜೋಡಿಸಿಕೊಂಡು ನಾನು ಕೇಳಿದೆ. “ನಿನ್ನೆ ರಾತ್ರಿ ಕಾರ್ ನಲ್ಲಿ ಹೋಗ್ತಿರೋವಾಗ ದಾವಣಗೆರೆ ಹತ್ರ ಭಾರೀ accident ಆಗಿ ಶಂಕರ್ ನಾಗ್ ಸ್ಥಳದಲ್ಲೇ ಮೃತಪಟ್ಟಿದಾರೆ.. ಅರುಂಧತಿ ನಾಗ್ ಹಾಗೂ ಮಗಳು ಕಾವ್ಯ ಅವರನ್ನ ಹಾಸ್ಪಿಟಲ್ ಗೆ ಅಡ್ಮಿಟ್ ಮಾಡಿದಾರೆ” ಎಂದು ವಿಷಯ ತಿಳಿಸಿದ ಗುರು.

ಆತ್ಮೀಯ ಮಿತ್ರ, ಕನ್ನಡ ರಂಗಭೂಮಿ—ಚಿತ್ರರಂಗದ ಹೊಳೆಯುವ ನಕ್ಷತ್ರ, ಸೃಜನಶೀಲ ಕನಸುಗಾರ ಶಂಕರ ಇನ್ನಿಲ್ಲ! ನಂಬುವುದಕ್ಕೇ ಸಾಧ್ಯವಾಗದೆ ಕುಸಿದು ಕೂತೆ. ಗೆಳೆಯ ಸತ್ಯಸಂಧನ ಅನಿರೀಕ್ಷಿತ ನಿರ್ಗಮನದ ಆಘಾತದಿಂದಲೇ ಸಂಪೂರ್ಣವಾಗಿ ಹೊರಬರಲು ಸಾಧ್ಯವಾಗಿರಲಿಲ್ಲ.. ಆಗಲೇ ಮತ್ತೊಂದು ಹೊಡೆತ! ಶಂಕರನ ಜತೆ ಕಳೆದ ಕ್ಷಣಗಳೆಲ್ಲಾ ಕಣ್ಮುಂದೆ ಚಿತ್ರಿಕೆಗಳ ಹಾಗೆ ಸುಳಿದುಹೋದವು. ಅನಂತನಾಗ್ ಅವರೊಟ್ಟಿಗೆ ಮೊಟ್ಟಮೊದಲ ಬಾರಿ ಶಂಕರನನ್ನು ಭೇಟಿಯಾದದ್ದು…accident ಚಿತ್ರದ ಶೂಟಿಂಗ್ ಸಂದರ್ಭ, ನಮ್ಮ ನಿಮ್ಮಂಥವರು—ಆಟ ಬೊಂಬಾಟ್ ನಾಟಕಗಳ ತಯಾರಿ…ಕಂಟ್ರಿ ಕ್ಲಬ್ ನ ಉದ್ಘಾಟನೆಯ ಸಂದರ್ಭ…ಶೂಟಿಂಗ್ ನಂತರದ ಗೋಷ್ಠಿಗಳಲ್ಲಿ ಗರಿಗೆದರಿ ತೆರೆದುಕೊಳ್ಳುತ್ತಿದ್ದ ಅವನ ಹಲವು ಹತ್ತು ಕನಸುಗಳು…ಕನಸಿನ ರಂಗಮಂದಿರ ‘ರಂಗಶಂಕರ’ದ ಶಂಕುಸ್ಥಾಪನೆ ನಡೆಸಿದ್ದು…ತೊಡೆ ತಟ್ಟಿಕೊಂಡು ತಾಳ ಹಾಕುತ್ತಾ ಕ್ಷಣಮಾತ್ರಕ್ಕೂ ಬಿಡುವಿಲ್ಲದವನಂತೆ ಸದಾ ಉತ್ಸಾಹದಿಂದ ಪುಟಿಯುತ್ತಾ ಜತೆಯವರನ್ನೂ ಕ್ರಿಯಾಶೀಲರಾಗಲು ಹುರಿದುಂಬಿಸುತ್ತಿದ್ದುದು…ಹಾಗೆ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡು ಒಂದು ಮೋಡಿಗೆ ಸಿಲುಕಿಸುತ್ತಾ ಸಂಭ್ರಮಿಸುತ್ತಾ ತನ್ನ ಸುತ್ತಲ ವಾತಾವರಣವನ್ನೇ ಬೆಳಗಿಸುತ್ತಿದ್ದ ಶಂಕರ ಇದ್ದಕ್ಕಿದ್ದ ಹಾಗೆ ಮಾಯವೇ ಆಗಿಬಿಡುವುದೆಂದರೆ ಏನರ್ಥ? ಇವೆಲ್ಲಾ ಬದುಕಿನಲ್ಲಿ ಧುತ್ತೆಂದು ಎದುರಾಗುವ ಶೂನ್ಯಗಳು.. ಭರಿಸಲಾಗದ ಖಾಲಿತನಗಳು.
19ನೇ ಶತಮಾನದ ರಷ್ಯನ್ ನಾಟಕಕಾರ ಅಲೆಕ್ಸಾಂಡರ್ ಆಸ್ಟ್ರೋವ್ ಸ್ಕಿಯ ಬಹು ಜನಪ್ರಿಯ ನಾಟಕವೆಂದರೆ ‘the diary of a scoundrel’ ಅಥವಾ ‘enough stupidity in every wise man.’ ಸ್ಟಾನ್ಸ್ಲಾವ್ ಸ್ಕಿ, ಐಸನ್ ಸ್ಟೈನ್ ಮೊದಲಾದ ದಿಗ್ಗಜರೆಲ್ಲಾ ಈ ನಾಟಕವನ್ನು ರಂಗಭೂಮಿಗೆ, ಚಿತ್ರಮಾಧ್ಯಮಕ್ಕೆ ಅಳವಡಿಸಿಕೊಂಡಿದ್ದಾರೆ.ಆಗ ಒಂದಷ್ಟು ದಿನ ಕಾಶ್ಮೀರದ ಕುಣಿಕೆಯಿಂದ ತಪ್ಪಿಸಿಕೊಳ್ಳಲು ದೀರ್ಘಾವಧಿಯ ರಜೆ ಹಾಕಿಬಿಟ್ಟೆದ್ದೆನಲ್ಲಾ, ಆಗಲೇ ಈ ನಾಟಕದ ರೂಪಾಂತರವನ್ನು ಮಾಡಿ ಮುಗಿಸಿಬಿಟ್ಟಿದ್ದೆ. ‘the diary of a scoundrel’ ನಾಟಕ ಕನ್ನಡದಲ್ಲಿ ‘ಖದೀಮನ ದಿನಚರಿ’ ಆಗಿ ರೂಪು ತಾಳಿತ್ತು. ಅದೇ ವೇಳೆಯಲ್ಲಿ ‘ಅಂತರಂಗ’ ತಂಡದ ಅಂಕಲ್ ಶ್ಯಾಮ್ ಅವರು “ನಮ್ಮ ತಂಡಕ್ಕೆ ಒಂದು ನಾಟಕ ಮಾಡಿಸುವಿರಾ?” ಎಂದು ಕೇಳಿದರು. ಅಂಕಲ್ ಶ್ಯಾಮ್ ಅವರು ತುಂಬು ಉತ್ಸಾಹದಿಂದ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಕೊಂಡವರು. ಮೃದು ಸ್ವಭಾವದ ಸರಳ ಸಜ್ಜನ ವ್ಯಕ್ತಿ ಎಂ ಎಸ್ ಶ್ಯಾಮಸುಂದರ್ ಅವರನ್ನು ರಂಗಭೂಮಿಯಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಕರೆಯುವುದು ‘ಅಂಕಲ್ ಶ್ಯಾಮ್’ ಅಂತಲೇ! “ನಮ್ಮ ತಂಡದಲ್ಲೂ ಕೆಲವು ಒಳ್ಳೆಯ ಕಲಾವಿದರಿದ್ದಾರೆ; ಅವರ ಜತೆಗೆ ನಿಮಗೆ ಬೇಕಾದ ಕಲಾವಿದರನ್ನೂ ಆರಿಸಿಕೊಂಡು ನಮಗೆ ಒಂದು ನಾಟಕ ಸಿದ್ಧಪಡಿಸಿಕೊಟ್ಟರೆ ಸಂತೋಷವಾಗುತ್ತದೆ” ಎಂದರು ಅಂಕಲ್ ಶ್ಯಾಮ್ ಅವರು. ಅಂಥ ಸಜ್ಜನ ನಿಷ್ಠಾವಂತ ರಂಗಕರ್ಮಿಯ ಪ್ರೀತಿಯ ಆಹ್ವಾನವನ್ನು ನಿರಾಕರಿಸುವುದಾದರೂ ಹೇಗೆ? ಜತೆಗೆ ‘ಖದೀಮ’ ಬೇರೆ ಸಿದ್ಧವಾಗಿದ್ದನಲ್ಲಾ, ‘ಆಗಲಿ’ ಎಂದು ಒಪ್ಪಿಕೊಂಡುಬಿಟ್ಟೆ.

‘the diary of a scoundrel’ ಒಂದು ವಿಡಂಬನಾತ್ಮಕ ನಾಟಕ. ನಾಟಕದ ಕಥೆ ನಡೆಯುವುದು 1860ರಲ್ಲಿ, ಮಾಸ್ಕೋ ನಗರದಲ್ಲಿ.ಒಬ್ಬ ಕೆಳ ಮಧ್ಯಮ ವರ್ಗದ ಯುವಕ; ಹೇಗಾದರೂ ಸಮಾಜದಲ್ಲಿ ದೊಡ್ಡ ಸ್ಥಾನಮಾನಗಳನ್ನು ಗಳಿಸಬೇಕು, ಶ್ರೀಮಂತನಾಗಬೇಕೆಂಬ ಮಹತ್ವಾಕಾಂಕ್ಷೆಯುಳ್ಳವನು. ಅಸಾಧಾರಣ ವಾಕ್ಚಾತುರ್ಯವಿದ್ದ ಆ ಯುವಕ ಅಷ್ಟೇ ಚತುರ ಚಾಣಾಕ್ಷ ಬುದ್ಧಿಯವನೂ ಆಗಿದ್ದು ತನ್ನ ಈ ಗುಣಗಳನ್ನೇ ಬಂಡವಾಳವಾಗಿಸಿಕೊಂಡು ಸಮಾಜದ ಪ್ರತಿಷ್ಠಿತ ಮೂರ್ಖರನ್ನು ತನ್ನ ವಂಚನೆಯ ಬಲೆಗೆ ಕೆಡವಿಕೊಳ್ಳುತ್ತಾ ಹಂತಹಂತವಾಗಿ ಮೇಲೇರುತ್ತಾ ಹೋಗುತ್ತಾನೆ. ತನ್ನ ಈ ಯಶೋಗಾಥೆಯನ್ನೂ ಪ್ರತಿಷ್ಠಿತರೆಂಬ ಹಣೆಪಟ್ಟಿ ಹಚ್ಚಿಕೊಂಡವರ ಸಣ್ಣತನ—ಕೊಳಕುತನಗಳನ್ನೂ ತಾನು ಅವರನ್ನು ವಂಚಿಸಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿರುವ ಪರಿಯನ್ನೂ ಏಕಾಂತದ ಹೊತ್ತಿನಲ್ಲಿ ತನ್ನ ಒಂದು ಡೈರಿಯಲ್ಲಿ ಪ್ರಾಮಾಣಿಕವಾಗಿ ಬರೆದಿಟ್ಟುಕೊಳ್ಳುವ ಅಭ್ಯಾಸ ಯುವಕನದು.ಎಲ್ಲವೂ ಅಂದುಕೊಂಡಂತೆ ಸುಗಮವಾಗಿ ಸಾಗುತ್ತಿರುವಾಗಲೇ ಅಚಾನಕ್ಕಾಗಿ ಯುವಕನ ಡೈರಿ ಆ ಪ್ರತಿಷ್ಠಿತರ ಪೈಕಿ ಒಬ್ಬಾಕೆಗೆ ಸಿಕ್ಕಿಬಿಡುತ್ತದೆ! ಎಲ್ಲರ ಅಸಲೀ ಮುಖಗಳನ್ನೂ ಬಯಲಿಗೆಳೆದಿರುವ ಆ ಡೈರಿಯ ಉಲ್ಲೇಖಗಳನ್ನೂ ತಂತಮ್ಮ ಬಗ್ಗೆ ಅದರಲ್ಲಿರುವ ಲೇವಡಿ—ಟೀಕೆಯ ಮಾತುಗಳನ್ನೂ ಓದುತ್ತಾ ಹೋದಂತೆ ಸಿಟ್ಟಿನಿಂದ ಧುಮುಗುಡತೊಡಗುವ ಆ ಪ್ರತಿಷ್ಠಿತರು ಯುವಕನನ್ನು ತಮ್ಮ ವಲಯದಿಂದ ದೂರ ಅಟ್ಟಿಬಿಡಲು ತೀರ್ಮಾನಿಸಿಬಿಡುತ್ತಾರೆ.ಆದರೆ ಆ ಮೂರ್ಖರಿಗಾಗುವ ಜ್ಞಾನೋದಯ ನಾಟಕದ ಶಿಖರವಾಗಿದ್ದು ಒಂದು ಅನಿರೀಕ್ಷಿತ ಅಂತ್ಯ ನಾಟಕಕ್ಕೆ ದೊರೆಯುತ್ತದೆ: “ಇಂಥ ಚತುರ ಯುವಕ ನಮ್ಮಿಂದ ದೂರ ಇರುವುದಕ್ಕಿಂತ ನಮ್ಮ ಜತೆಗಿದ್ದರೇ ಹೆಚ್ಚು ಅನುಕೂಲ! ಇವನನ್ನು ದೂರ ಅಟ್ಟಿದರೆ ನಮಗೇ ನಷ್ಟ! ಈಗಂತೂ ನಮ್ಮೆಲ್ಲರ ಎಲ್ಲ ದೌರ್ಬಲ್ಯ—ಹುಳುಕುಗಳೂ ಇವನಿಗೆ ಗೊತ್ತಿರುವುದೇ ಆದ್ದರಿಂದ ಏನನ್ನೂ ಮುಚ್ಚಿಡುವ ಅಗತ್ಯವೂ ಇಲ್ಲ; ಆದ್ದರಿಂದ ಇವನನ್ನು ಜತೆಗಿಟ್ಟುಕೊಳ್ಳುವುದೇ ಜಾಣತನ ಹಾಗೂ ಲಾಭಕರ!”
ಈ ನಾಟಕವನ್ನು ನಮ್ಮ ವಾತಾವರಣಕ್ಕೆ ಹೊಂದಿಸಿಕೊಂಡು ರೂಪಾಂತರಿಸುವುದು ಅಂಥ ಕಷ್ಟದ ಕೆಲಸವೇನಾಗಿರಲಿಲ್ಲ.
“ಖದೀಮನ ದಿನಚರಿ” ನಾಟಕದಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿದವರೆಂದರೆ ಶ್ರೀನಿವಾಸ ಮೇಷ್ಟ್ರು, ರವೀಂದ್ರ, ಪುರುಷೋತ್ತಮ, ಶ್ರೀನಾಥ್ ವಸಿಷ್ಠ,ವಂದ್ಯಾ ಶ್ರೀನಾಥ್, ನನ್ನ ಪತ್ನಿ ರಂಜನಿ ಹಾಗೂ ಕಲ್ಯಾಣಿ ಪ್ರೇಮ್ ಕುಮಾರ್. ಗದಾಧರ್ ಪ್ರೇಮಕುಮಾರ್ ಹಾಗೂ ಕಲ್ಯಾಣಿ ಪ್ರೇಮ್ ಕುಮಾರ್ ದಂಪತಿಗಳು ಅದಾಗಲೇ ನನ್ನ ಹಲವಾರು ದೂರದರ್ಶನದ ಕಚಗುಳಿಯೇ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಪ್ರತಿಭಾವಂತ ಕಲಾವಿದರು. ಉಳಿದ ಕಲಾವಿದರೂ ಸಹಾ ನನ್ನ ಪರಿಚಿತರೇ ಆದ್ದರಿಂದ ತಾಲೀಮಿನಲ್ಲಿ ನನಗೆ ಹೆಚ್ಚಿನ ಕಷ್ಟವಾಗಲಿಲ್ಲ. ಅಂಕಲ್ ಶ್ಯಾಮ್ ರ ಒತ್ತಾಯದ ಮೇರೆಗೆ ನಾಟಕದ ಕೇಂದ್ರ ಪಾತ್ರ ಯುವಕ ದಿನಕರನಾಗಿ ನಾನೇ ಅಭಿನಯಿಸಲು ನಿರ್ಧರಿಸಿದ್ದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಥಮ ಪ್ರದರ್ಶನಗಳನ್ನು ಕಂಡ ‘ಖದೀಮನ ದಿನಚರಿ’ ನಾಟಕ ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ವೈನೋದಿಕ ಹಾಗೂ ವಿಡಂಬನಾತ್ಮಕ ನಾಟಕಗಳಿಗೆ ಎಂದಿನಿಂದಲೂ ಪ್ರೇಕ್ಷಕರ ಪ್ರೋತ್ಸಾಹ— ಉತ್ತೇಜನ ಒಂದು ಕೈ ಮೇಲು! ಸಂಖ್ಯಾದೃಷ್ಟಿಯಿಂದ ಹೆಚ್ಚಿನ ಪ್ರದರ್ಶನಗಳನ್ನು ಕಾಣದಿದ್ದರೂ ನನಗೆ ಬಹಳ ತೃಪ್ತಿ ನೀಡಿದ ನಾಟಕಗಳಲ್ಲಿ “ಖದೀಮನ ದಿನಚರಿ”ಯೂ ಒಂದು.
ಒಂದು ದಿನ ಬೆಳಿಗ್ಗೆ ಗೆಳೆಯ ನಾಗರಾಜಮೂರ್ತಿ ನಮ್ಮ ಮನೆಗೆ ಬಂದ. ಕೆಲ ಸಮಯದ ಹಿಂದಷ್ಟೆ ‘ಬ್ರಹ್ಮಚಾರಿ ಶರಣಾದ’ ನಾಟಕವನ್ನು ಅವನ ‘ಪ್ರಯೋಗ ರಂಗ’ ತಂಡಕ್ಕಾಗಿ ಮಾಡಿಸಿದ್ದೆ. ಆ ನಾಟಕದ ಯಶಸ್ವೀ ಪ್ರದರ್ಶನಗಳು ನಾಡಿನಾದ್ಯಂತ ನಡೆಯುತ್ತಲೇ ಇದ್ದವು. ಅಂದು ನಾಗರಾಜಮೂರ್ತಿ ಹೊಸದೊಂದು ಯೋಜನೆಯೊಂದಿಗೆ ಬಂದಿದ್ದ: ಕಾಲೇಜ್ ವಿದ್ಯಾರ್ಥಿಗಳಿಗಾಗಿ ಒಂದು ತಿಂಗಳ ಕಾಲ ವಿಶೇಷ ರಂಗ ತರಬೇತಿ ಶಿಬಿರವನ್ನು ನಡೆಸಬೇಕು; ಶಿಬಿರದ ಅಂಗವಾಗಿ ಒಂದು ನಾಟಕ ಸಿದ್ಧವಾಗಬೇಕು; ಅದು ಶಂಕರ್ ನಾಗ್ ಸ್ಮರಣಾರ್ಥ ನಡೆಯಲಿರುವ ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ! ಹಿಂದೆ ಮುಂದೆ ಯೋಚಿಸದೆ ಆಗಲಿ ಎಂದು ಒಪ್ಪಿಕೊಂಡುಬಿಟ್ಟೆ. ಅದೇ ವಾರದಲ್ಲಿ ಶಿಬಿರ ಆರಂಭವೂ ಆಗಿಬಿಟ್ಟಿತು. ಶಿಬಿರಕ್ಕೆ ಬಂದಿದ್ದ ಉತ್ಸಾಹಿ ತರುಣ—ತರುಣಿಯರ ಸಂಖ್ಯೆ 75 ನ್ನು ದಾಟಿತ್ತು!
ಶಿಬಿರಾರ್ಥಿಗಳೆಲ್ಲರಿಗೂ ಅವಕಾಶ ಸಿಗುವಂತೆ ಯಾವ ನಾಟಕ ಮಾಡಿಸಬಹುದು ಎಂದು ಯೋಚಿಸುತ್ತಿದ್ದಾಗ ಥಟ್ಟನೆ ನೆನಪಿಗೆ ಬಂದದ್ದು “ರಾಜಬೇಟೆ”! ನಾಲ್ಕಾರು ವರ್ಷಗಳ ಹಿಂದೆಯೇ ಈ ನಾಟಕವನ್ನು ಬರೆದು ಮುಗಿಸಿದ್ದೆನಾದರೂ ರಂಗದ ಮೇಲೆ ತರಲು ಇನ್ನೂ ಮುಹೂರ್ತ ಒದಗಿರಲಿಲ್ಲ. ದೊಡ್ಡ ಸಂಖ್ಯೆಯ ನಟವರ್ಗದ್ದು ಒಂದು ಸಮಸ್ಯೆಯಾಗಿದ್ದರೆ ಅದ್ದೂರಿತನವನ್ನು ಬೇಡುವ ನಾಟಕವಾದ್ದರಿಂದ ಹೆಚ್ಚಿನ ಬಂಡವಾಳದ ಅಗತ್ಯವಿದ್ದದ್ದು ಮತ್ತೊಂದು ಸಮಸ್ಯೆಯಾಗಿ ಹವ್ಯಾಸೀ ರಂಗಭೂಮಿಗೆ ಸುಲಭಕ್ಕೆ ಎಟುಕದ ನಾಟಕವಾಗಿತ್ತು ‘ರಾಜಬೇಟೆ’. ಈಗ ಇಲ್ಲಿ ಶಿಬಿರ ನಡೆಯುತ್ತಿದ್ದು 70—80 ಶಿಬಿರಾರ್ಥಿಗಳಿರುವುದರಿಂದ ನಟವರ್ಗದ ಸಮಸ್ಯೆ ತಂತಾನೇ ದೂರವಾಗುತ್ತಿದೆ! ಇನ್ನು ವಸ್ತ್ರ ವಿನ್ಯಾಸ—ರಂಗವಿನ್ಯಾಸ—ವಿಶೇಷ ಬೆಳಕಿನ ವ್ಯವಸ್ಥೆಗಳಿಗಾಗಿ ಆಗುವ ಖರ್ಚಿನ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ನಾಗರಾಜಮೂರ್ತಿ ಆಶ್ವಾಸನೆ ಕೊಟ್ಟ! “ಒಂದು ಅದ್ಭುತವಾದ ನಾಟಕ ಮಾಡೋಣ ಪ್ರಭೂ.. ಹಿಂದೆ ಯಾರೂ ಮಾಡಿರಬಾರದು ಮುಂದೆ ಯಾರೂ ಮಾಡಬಾರದು ಅಂಥಾ grand production ಮಾಡೋಣ..ದುಡ್ಡಿನ ಬಗ್ಗೆ ಯೋಚನೇನೇ ಮಾಡಬೇಡ..ನಾಳೇನೇ ‘workshop production ರಾಜಬೇಟೆ’ ಅಂತ ಪೋಸ್ಟರ್ ಹಾಕಿಬಿಡ್ತೀನಿ” ಎಂದು ಅತ್ಯುತ್ಸಾಹದಿಂದ ಹೇಳಿದ ನಾಗರಾಜಮೂರ್ತಿ! ಸರಿ, ಮರುದಿನದಿಂದಲೇ ಶಿಬಿರದ ಜತೆಗೆ ನಾಟಕದ ತಾಲೀಮೂ ಆರಂಭವಾಗಿಹೋಯಿತು!
ಆ ವರ್ಷ ಶಂಕರ್ ನಾಗ್ ಸ್ಮಾರಕ ನಾಟಕೊತ್ಸವದಲ್ಲಿ ಪ್ರದರ್ಶಿತವಾದ ನಾಟಕಗಳು ಮೂರು: ಸಂಕೇತ್ ತಂಡದವರು ಅಭಿನಯಿಸಿದ ‘ಹುಲಗೂರು ಹುಲಿಯವ್ವ’ (ಬ್ರೆಖ್ಟ್ ನ ಮದರ್ ಕರೇಜ್ ನಾಟಕದ ರೂಪಾಂತರ; ರೂಪಾಂತರ & ನಿರ್ದೇಶನ:ಸೂರಿ ಅಲಿಯಾಸ್ ಎಸ್.ಸುರೇಂದ್ರನಾಥ್); ಪ್ರಯೋಗರಂಗ ತಂಡದವರು ಅಭಿನಯಿಸಿದ ನನ್ನ ‘ರಾಜಬೇಟೆ’ ನಾಟಕ; ನಟರಂಗ ತಂಡದವರು ಅಭಿನಯಿಸಿದ ಗಿರಿಶ್ ಕಾರ್ನಾಡರ ‘ತಲೆದಂಡ’ ನಾಟಕ(ನಿರ್ದೇಶನ:ಸಿ.ಆರ್.ಸಿಂಹ).
ಈಗಾಗಲೇ ಹೇಳಿರುವಂತೆ ಪೀಟರ್ ಷಫರ್ 1964ರಲ್ಲಿ ರಚಿಸಿದ “the royal hunt of the sun” ನಾಟಕವನ್ನು ನಮ್ಮ ನೆಲದ ಒಂದು ಕಾಲ್ಪನಿಕ ವಾತಾವರಣಕ್ಕೆ ಅಳವಡಿಸಿಕೊಂಡು “ರಾಜಬೇಟೆ” ಎಂಬುದಾಗಿ ರೂಪಾಂತರಿಸಿದ್ದೆ. 1530 ರಲ್ಲಿ ಸ್ಪೇನ್ ನ ದಂಡನಾಯಕ ಫ್ರಾನ್ಸಿಸ್ಕೊ ಪಿಜಾ಼ರೋ ಕೇವಲ 167 ಸೈನಿಕರೊಂದಿಗೆ ಪೆರುವಿನ ಮೇಲೆ ದಂಡೆತ್ತಿ ಹೋಗಿ ಆಕ್ರಮಿಸಿಕೊಂಡು ಲೂಟಿ ಹೊಡೆಯುವ ಪ್ರಸಂಗವನ್ನು ಆಧರಿಸಿ ಮೂಲ ನಾಟಕ ರಚಿತವಾಗಿದೆ. ಆಗ ಪೆರುವಿನ ಅಧಿಪತಿಯಾಗಿದ್ದವನು ಅಟಾಹುಅಲ್ಪ ಎಂಬಾತ. ವಿಶಾಲ ಹರಹಿನ ಮಹತ್ವಾಕಾಂಕ್ಷೆಯ ಈ ನಾಟಕ ಹಲವು ಪ್ರಮುಖ ನೆಲೆಗಟ್ಟುಗಳನ್ನು ಬಗೆಯುತ್ತಾ ಹೋಗುತ್ತದೆ. ಇದೊಂದು ವಸಾಹತುಶಾಹಿಗಳ ತೀರದ ಹಸಿವಿನ ದಾಳಿ—ಆಕ್ರಮಣಗಳ ಕಥೆ; ಮತಾಂತರ—ಧರ್ಮಪ್ರಸಾರಗಳ ಹುನ್ನಾರದ ಕಥೆ; ಜೊತೆಜೊತೆಗೇ ವೈರತ್ವವನ್ನು ಮೀರಿ ಬೆಸೆದುಕೊಳ್ಳುವ ಸ್ನೇಹದ ಕಥೆ;ನಂಬಿಕೆ—ವಿಶ್ವಾಸ—ದ್ರೋಹಗಳ ಕಥೆ. ನಾನು ಇದನ್ನು ಸಂಪೂರ್ಣವಾಗಿ ಒಂದು ಕಾಲ್ಪನಿಕ ಗುಡ್ಡಗಾಡು ಪ್ರದೇಶದ ಪಾಳೆಯಗಾರನ ಮೇಲೆ ದಂಡೆತ್ತಿ ಬರುವ, ಒಂದು ‘ಹೆಸರಿಲ್ಲದ’ ಧರ್ಮಾನುಯಾಯಿಯ ದಾಳಿಯ ಪ್ರಸಂಗವಾಗಿ ರೂಪಾಂತರಿಸಿದ್ದೆ. ವಾಸ್ತವ ಸಂಗತಿಗಳ ಲೇಪವಿಲ್ಲದಿದ್ದರೂ ಮೂಲ ಆಶಯಕ್ಕೆ ಭಂಗ ಬಾರದಂತೆ ಎಚ್ಚರಿಕೆಯಿಂದ ರೂಪಾಂತರಿಸಿದ್ದೆ.
ಪಿಜಾ಼ರೋ ಕನ್ನಡದಲ್ಲಿ ರಣಧೀರನಾಗಿದ್ದ—ನಾನೇ ಆ ಪಾತ್ರ ನಿರ್ವಹಿಸಲು ಸಿದ್ಧನಾದೆ.ಅಟಾಹುಅಲ್ಪ—ಕನ್ನಡದಲ್ಲಿ ಪೆಡುಗೊಂಡನಾಗಿದ್ದ; ಆ ಪಾತ್ರ ನಿರ್ವಹಿಸಲು ಶಿವಮಲ್ಲಯ್ಯನನ್ನು ಆರಿಸಿಕೊಂಡೆ. ಬ್ರಹ್ಮಚಾರಿ ಶರಣಾದ ನಾಟಕದಲ್ಲಿ ಪೋಲೀಸ್ ಪೇದೆ ವ್ಯಾಕುಲರಾಯನ ಪಾತ್ರವನ್ನು ಚೇತೋಹಾರಿಯಾಗಿ ನಿರ್ವಹಿಸಿದ್ದ ಶಿವಮಲ್ಲಯ್ಯ ಒಬ್ಬ ಪ್ರತಿಭಾವಂತ ನಟ; ಯಾವುದೇ ಪಾತ್ರಕ್ಕೆ ಜೀವ ತುಂಬಬಲ್ಲ ಕ್ಷಮತೆಯಿರುವ ನಟ.ಉಳಿದ ಮುಖ್ಯ ಪಾತ್ರಗಳಿಗೆ ಶ್ರೀನಿವಾಸ ಮೇಷ್ಟ್ರು, ನಂಜುಂಡಯ್ಯ,ಧನಂಜಯ, ರವಿ, ಪೂರ್ಣೇಂದ್ರ,ಮಯ ಬ್ರಹ್ಮಚಾರ್ ,ಜಿತೂರಿ,ಷಡಕ್ಷರಿ ಮುಂತಾದವರು ನಿಗದಿಯಾದರು. ಎರಡು ಸೈನ್ಯಗಳೇ ರಂಗದ ಮೇಲೆ ಬರಬೇಕಾದ್ದರಿಂದ ಶಿಬಿರಾರ್ಥಿಗಳೆಲ್ಲರಿಗೂ ಪಾತ್ರಗಳನ್ನು ನೀಡುವುದು ಕಷ್ಟವಾಗಲಿಲ್ಲ. ಜಾನಪದೀಯ ಧಾಟಿಯ ಸಂಗೀತವನ್ನು ಸಹಾ ಸ್ವಲ್ಪ ಮಟ್ಟಿಗೆ ಅಳವಡಿಸಿಕೊಳ್ಳಲು ಯೋಚಿಸಿದೆ. ಅದೇ ಸಮಯದಲ್ಲಿಯೇ ಪ್ರಸಿದ್ಧ ಗಾಯಕರಾದ ವೆಂಕಟರಾಘವನ್ ಅವರು ಶಿಬಿರಾರ್ಥಿಗಳಿಗೆ ಸಂಗೀತದ ಕುರಿತಾಗಿ ಪ್ರಾಥಮಿಕ ತಿಳುವಳಿಕೆಯನ್ನು ನೀಡಲು ಬಂದಿದ್ದರು.ಅವರಿಗೇ ನಾಟಕದ ಹಿನ್ನೆಲೆ ಸಂಗೀತ ಹಾಗೂ ಗಾಯನದ ಹೊಣೆಯನ್ನು ಹೊರಿಸಿಬಿಟ್ಟೆ. ಮತ್ತೊಂದು ದಿನ ಪ್ರಸಿದ್ಧ ಕವಿ—ನಾಟಕಕಾರ—ಆತ್ಮೀಯ ಗೆಳೆಯ ಹೆಚ್.ಎಸ್.ಶಿವಪ್ರಕಾಶ್ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತಾಡಲು ಬಂದಿದ್ದ.

‘ರಾಜಬೇಟೆ’ಯ ಮೂಲ ನಾಟಕದಲ್ಲಿ ಒಂದು ಗೀತೆಯ ಬಳಕೆಯಾಗಿದೆ.. ಅಟಾಹು ಅಲ್ಪ ಆಗಾಗ್ಗೆ ಗುನುಗಿಕೊಳ್ಳುವ ಹಾಡದು. ಅದೇಕೋ ಅದೊಂದು ಹಾಡನ್ನು ಸಮರ್ಪಕವಾಗಿ ಅನುವಾದಿಸಲು ನನಗೆ ಸಾಧ್ಯವಾಗಿರಲಿಲ್ಲ. ಈಗ ಕವಿಮಿತ್ರನನ್ನು ನೋಡಿದೊಡನೆ ಅವನಿಂದಲೇ ಆ ಅನುವಾದ ಕಾರ್ಯ ಮಾಡಿಸಿಬಿಡುವ ವಿಚಾರ ಹೊಳೆದುಬಿಟ್ಟಿತು! ಮೂಲ ನಾಟಕದ ಹಾಡನ್ನು ಒಂದೆರಡು ಬಾರಿ ಓದಿಕೊಂಡ ಗೆಳೆಯ ಶಿವ ಪ್ರಕಾಶ ಅಲ್ಲಿಯೇ ನನ್ನ ಹಸ್ತಪ್ರತಿಯ ಹಿಂಪುಟದಲ್ಲಿಯೇ ಕವಿತೆಯ ಅನುವಾದವನ್ನು ಬರೆದೇಬಿಟ್ಟ: “ಕದಿಯಬ್ಯಾಡ ಕದಿಯಬ್ಯಾಡ ಕಳ್ಳಹಕ್ಕಿಯೇ..ಸುಗ್ಗಿ ಒಳಗ ಬಂದ ಫಸಲ ಕಳ್ಳಹಕ್ಕಿಯೇ..ನಿನಗೆ ಬಲೆಯ ಬೀಸುತಾರೆ ಕಳ್ಳಹಕ್ಕಿಯೇ..ನಿನ್ನ ಹಿಡಿದು ಹಾಕುತಾರೆ ಕಳ್ಳಹಕ್ಕಿಯೇ..” ಹೀಗೆ ಸಾಗುತ್ತದೆ ಆ ಹಾಡು!
ರಂಗವಿನ್ಯಾಸಕ್ಕೆ ಶಶಿಧರ ಅಡಪ ಅವರನ್ನು ನಿಯೋಜಿಸಲಾಗಿತ್ತು. ದಟ್ಟ ಕಾಡಿನ ಗೂಢ ಅನೂಹ್ಯ ವಾತಾವರಣ ಸೃಷ್ಟಿಗಾಗಿ ವೇದಿಕೆಯ ಬದಿಯ ವಿಂಗ್ ಗಳೆಲ್ಲವನ್ನೂ ತೆಗೆದುಹಾಕಿ ಪ್ರೇಕ್ಷಕರಿಗೆ ಕಾಣುವಷ್ಟೂ ಭಾಗ ಕಪ್ಪು ಪರದೆಯಿಂದ ಆವೃತವಾಗುವಂತೆ ರಂಗಸಜ್ಜಿಕೆಯನ್ನು ರೂಪಿಸಲಾಗಿತ್ತು. ರಂಗದ ಮಧ್ಯಭಾಗದಿಂದ ಕೊಂಚ ಎಡಕ್ಕೆ ಮೇಲಿನಿಂದ ದೊಡ್ಡ ಸೂರ್ಯನ ಆಕೃತಿಯನ್ನು ತೂಗುಬಿಡಲಾಗಿತ್ತು.
ರಂಗದ ಮೇಲೆ ಒಟ್ಟಾರೆಯಾಗಿ ಬರುತ್ತಿದ್ದ ಕಲಾವಿದರ ಸಂಖ್ಯೆ ನೂರಾರು! ಉತ್ಪ್ರೇಕ್ಷೆಯಲ್ಲ, ಬರೋಬ್ಬರಿ ನೂರ ಆರು ಮಂದಿ ಕಲಾವಿದರು ರಾಜಬೇಟೆ ನಾಟಕದಲ್ಲಿ ರಂಗದ ಮೇಲಿದ್ದರು! ಹೆಚ್ಚುಕಡಿಮೆ ಎರಡು ತಿಂಗಳ ಕಾಲ ಸತತವಾಗಿ ತಾಲೀಮು ನಡೆಸಿ ನಾಟಕವನ್ನು ಸಿದ್ಧಗೊಳಿಸಿದೆ. ಇಡೀ ಉತ್ಸವಕ್ಕೇ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ದೊರೆತು ಮೂರೂ ದಿನಗಳು ಸಭಾಂಗಣ ಕಿಕ್ಕಿರಿದಿತ್ತು. ಎಲ್ಲ ಕಲಾವಿದರ ಸಮರ್ಪಕ ಅಭಿನಯ, ಸೊಗಸಾದ ಹಿನ್ನೆಲೆ ಸಂಗೀತ, ಅಚ್ಚುಕಟ್ಟಾದ ಬೆಳಕಿನ ವ್ಯವಸ್ಥೆ, ಮೈ ನವಿರೇಳಿಸುವಂತಿದ್ದ ದೃಶ್ಯವಿನ್ಯಾಸ..ಇವೆಲ್ಲದರಿಂದಾಗಿ ‘ರಾಜಬೇಟೆ’ ಒಂದು ಮಹತ್ವದ ಪ್ರಯೋಗವೆನಿಸಿಕೊಂಡಿತು. ಗಿರೀಶ್ ಕಾರ್ನಾಡರಾದಿಯಾಗಿ ರಂಗಭೂಮಿಯ ಪ್ರಮುಖರನೇಕರು ನಾಟಕವನ್ನು ನೋಡಿ ಬೆನ್ನು ತಟ್ಟಿದರು. ಖ್ಯಾತ ಶಿಕ್ಷಣತಜ್ಞ ಡಾ॥ಹೆಚ್.ನರಸಿಂಹಯ್ಯನವರು ರಾಜಬೇಟೆ ನಾಟಕವನ್ನು ಅದೆಷ್ಟು ಇಷ್ಟಪಟ್ಟರೆಂದರೆ ತಾವೇ ಸ್ವತಃ ಜಯನಗರ ನ್ಯಾಷನಲ್ ಕಾಲೇಜ್ ಸಭಾಂಗಣದಲ್ಲಿ ಎರಡು ಪ್ರದರ್ಶನಗಳನ್ನು ಏರ್ಪಡಿಸಿದರು! ಅಂತೂ ನಾನು ಮಾಡಿಸಿದ ಪ್ರಥಮ ‘ಶ್ರೀಮಂತ’ ನಾಟಕ ಭರ್ಜರಿ ಯಶಸ್ಸನ್ನು ಕಂಡಿದ್ದು ತಂಡದ ಎಲ್ಲರಿಗೂ ತುಂಬು ಸಂತಸವನ್ನೂ ತೃಪ್ತಿ ಸಮಾಧಾನಗಳನ್ನೂ ತಂದುಕೊಟ್ಟಿತು.
। ಇನ್ನು ಮುಂದಿನ ವಾರಕ್ಕೆ ।






0 Comments