ಶ್ರೀನಿವಾಸ ಪ್ರಭು ಅಂಕಣ – ಒಂದು ಕ್ಷಣಕ್ಕೆ ನಿಂತ ನೆಲವೇ ಕುಸಿದು ಹೋದಂತೆ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

23

ಇದೇ ಸಮಯದಲ್ಲಿ ಪಬ್ಲಿಕ್ ಸರ್ವೀಸ್ ಕಮೀಷನ್ ನವರು ರಾಜ್ಯಾದ್ಯಂತ ಕಾಲೇಜ್ ಗಳಿಗೆ 75 ಅಧ್ಯಾಪಕರ ಅವಶ್ಯಕತೆ ಇದೆಯೆಂದು ಜಾಹೀರಾತು ನೀಡಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದರು. 75 ಹುದ್ದೆಗಳಿರುವಾಗ ಪ್ರಥಮ rank ಗಳಿಸಿರುವ ನನಗೆ ಒಂದು ಅವಕಾಶ ಸಿಕ್ಕೇ ಸಿಕ್ಕುತ್ತದೆ ಎಂಬ ಭರವಸೆ ಮೂಡಿ, ಕಾತರ—ನಿರೀಕ್ಷೆಗಳ ದಿನಗಳು ದೂರವಾಗುವ ಸಮಯ ಹತ್ತಿರ ಬಂತೆಂದು ನಿರಾಳದ ಭಾವ ಮೂಡಿತು.

ಸಂದರ್ಶನಕ್ಕೆ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡು ಉತ್ಸಾಹದಿಂದಲೇ ಹೋದೆ. ಅಲ್ಲಿ ಹೋಗಿ ನೋಡಿದರೆ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದವರು ನಮ್ಮ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರೇ ಆಗಿದ್ದ ಡಾ. ಜಿ. ಎಸ್. ಶಿವರುದ್ರಪ್ಪನವರು! ಅವರು ಹಾಗೂ ಆಯ್ಕೆ ಸಮಿತಿಯವರು ಕೇಳಿದ ಪ್ರಶ್ನೆಗಳಿಗೆಲ್ಲಾ ಸಮರ್ಪಕ ಉತ್ತರಗಳನ್ನು ನೀಡಿ, ‘ರಾಜ್ಯದ ಯಾವ ಮೂಲೆಗೆ ಬೇಕಾದರೂ ಹೋಗಿ ಸೇವೆ ಸಲ್ಲಿಸಲು ಸಿದ್ಧ’ ಎಂದು ಒಪ್ಪಿಗೆಯನ್ನೂ ಕೊಟ್ಟೆ.

ಹೀಗೆ ಸಂದರ್ಶನವೂ ತುಂಬಾ ಚೆನ್ನಾಗಿ ಆಗಿದ್ದರಿಂದ ಈ ಕೆಲಸ ಸಿಗದೇ ಇರಲು ಸಾಧ್ಯವೇ ಇಲ್ಲ ಎಂಬುದು ನನ್ನ ಖಚಿತ ನಂಬಿಕೆಯಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಆ ನಂಬಿಕೆಯೂ ಹುಸಿಯಾಗಿ ಹೋಯಿತು. ಆಯ್ಕೆಯಾದ 75 ಅಭ್ಯರ್ಥಿಗಳ ದೊಡ್ಡ ಪಟ್ಟಿಯಲ್ಲಿ ನನ್ನ ಹೆಸರಿರಲಿಲ್ಲ. ಈ ಪೆಟ್ಟನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟವಾಗಿ ಸಿಟ್ಟು—ನೋವು—ಸಂಕಟಗಳಿಂದ ಕುದ್ದುಹೋದೆ. ನೇರವಾಗಿ ಕನ್ನಡ ಅಧ್ಯಯನ ಕೇಂದ್ರಕ್ಕೆ ಹೋಗಿ ಜಿ. ಎಸ್. ಎಸ್. ಅವರ ಮುಂದೆ ಕುಳಿತು, ‘ನಾನು ಆಯ್ಕೆಯಾಗದಿರುವುದಕ್ಕೆ ಕಾರಣವಾದರೂ ಏನು ಸರ್? ನನ್ನನ್ನು ಸಂದರ್ಶಿಸಿದವರು ನೀವೇ ಅಲ್ಲವೇ? ನಿಮ್ಮೆಲ್ಲರ ಎಲ್ಲಾ ಪ್ರಶ್ನೆಗಳಿಗೂ ಸಮರ್ಪಕ ಉತ್ತರಗಳನ್ನು ನೀಡಿದ್ದೆನಲ್ಲವೇ? ನಿಮ್ಮ ಮಾರ್ಗದರ್ಶನದಲ್ಲೇ ಅಧ್ಯಯನ ಮಾಡಿ first rank ಗಳಿಸಿರುವ ಮೆರಿಟ್ ವಿದ್ಯಾರ್ಥಿಯಲ್ಲವೇ? ಇಷ್ಟಾಗಿಯೂ ನನಗೇಕೆ ಈ ಕೆಲಸ ಸಿಗಲಿಲ್ಲ ಸರ್? ನಾನೂ ಬಡ ಕುಟುಂಬದಿಂದಲೇ ಬಂದವನು… ನನಗೂ ತುರ್ತಾಗಿ ಕೆಲಸದ ಅಗತ್ಯವಿದೆ.. ಇನ್ನಾರನ್ನು ಕೇಳಬೇಕೆಂದು ನನಗೆ ಗೊತ್ತಿಲ್ಲವಾದ್ದರಿಂದ ನಿಮ್ಮನ್ನೇ ಕೇಳುತ್ತಿದ್ದೇನೆ… ದಯವಿಟ್ಟು ನನಗೆ ಸಹಾಯ ಮಾಡಿ’ ಎಂದು ಅಲವತ್ತುಕೊಂಡೆ.

‘ನಮ್ಮ ಕೈ ಮೀರಿದ ಅನೇಕ ಸಂಗತಿಗಳಿರುತ್ತವೆ ಶ್ರೀನಿವಾಸ ಪ್ರಭೂ.. ಅವನ್ನೆಲ್ಲಾ ನಾನು ಹೇಳಲು ಸಾಧ್ಯವಿಲ್ಲ.. ಬೇರೆ ಎಲ್ಲಾದ್ರೂ ಪ್ರಯತ್ನ ಪಡಿ’ ಎಂದು ಜಿ. ಎಸ್. ಎಸ್. ಅವರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾ ಕೈ ಚೆಲ್ಲಿಬಿಟ್ಟರು. ‘ನಮ್ಮ ಕೈಮೀರಿದ ಸಂಗತಿಗಳು’—ಈ ಮಾತನ್ನು ಮುಂದೆಯೂ ಅನೇಕ ಬಾರಿ ಅವರಿಂದ—ಇತರರಿಂದ ಕೇಳುವುದು ಒಂದು ರೂಢಿಯೇ ಆಗಿಹೋಯಿತು. ಕೆಲವೊಮ್ಮೆ ಅದು ನಿಜವಾದ ಅಸಹಾಯಕತೆಯೋ ಅಥವಾ ಅಸಹಾಯಕತೆಯ ಮರು ಪ್ರಶ್ನಾತೀತ ವಜ್ರಕವಚವೋ ಅರ್ಥವಾಗದೇ ಗೊಂದಲಗೊಂಡಿದ್ದೇನೆ. ಒಟ್ಟಿನಲ್ಲಿ ವಶೀಲಿ—ಜಾತಿ—ಲಂಚಗಳ ಮೆರೆದಾಟದಲ್ಲಿ ಮೆರಿಟ್ ಅನ್ನೂ ಅರ್ಹತೆಗಳನ್ನೂ ಗಣನೆಗೆ ತೆಗೆದುಕೊಳ್ಳುವವರೇ ಇಲ್ಲದೆ ನನ್ನಂಥವರ ಆರ್ತ ಅಹವಾಲುಗಳು ಅರಣ್ಯರೋದನವಾಗಿ, ಆತ್ಮವಿಶ್ವಾಸದ ಅಡಿಪಾಯವೇ ಕುಸಿದು ಹೋದಂತಾಗಿ ನಾನು ಮತ್ತೆ ಹತಾಶೆಯ ಕೂಪಕ್ಕೆ ಜಾರಿದೆ.

ಇದಾದ ಕೆಲವು ದಿನಗಳಿಗೇ ನನಗೆ ಮತ್ತಷ್ಟು ಆಘಾತವುಂಟುಮಾಡುವಂತಹ ಸುದ್ದಿಯೊಂದು ಬಂದೆರಗಿತು: ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರಕ್ಕೆ ಮೂವರು ಸಹಾಯಕ ಸಂಶೋಧಕರನ್ನು ಆಯ್ಕೆ ಮಾಡಿಕೊಂಡಿದ್ದಾರೆ! 1974 ರಲ್ಲಿ ಪ್ರಥಮ rank ಗಳಿಸಿದ್ದ ನಾನಾಗಲೀ 1975 ರಲ್ಲಿ ಪ್ರಥಮ rank ಗಳಿಸಿದ್ದ ನರಹಳ್ಳಿ ಬಾಲಸುಬ್ರಹ್ಮಣ್ಯನಾಗಲೀ ಆ ಪಟ್ಟಿಯಲ್ಲಿಲ್ಲ! ಒಂದು ಕ್ಷಣಕ್ಕೆ ನಿಂತ ನೆಲವೇ ಕುಸಿದು ಹೋದಂತಾಯಿತು. ಹೀಗೂ ಆಗಬಹುದೆಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ.

ಈ ಅನಿರೀಕ್ಷಿತ ಬೆಳವಣಿಗೆಯಿಂದ ಕುದಿದು ಹೋದ ಗೆಳೆಯ ಬಾಲು, ವಿಶ್ವವಿದ್ಯಾಲಯಗಳಲ್ಲಿ ಜರುಗುವ ಇಂತಹ ಹಲವು ಹತ್ತು ಅಕ್ರಮಗಳನ್ನು ಕೇಂದ್ರವಾಗಿಟ್ಟುಕೊಂಡು ಬರೆದ ‘ಸ್ನಾತಕೋತ್ತರ ಶಿಕ್ಷಣ ಹಾಗೂ ಸರ್ವಾಧಿಕಾರತ್ವ’ ಎಂಬ ಸಾಂದರ್ಭಿಕ ಲೇಖನ ಪ್ರಜಾವಾಣಿಯಲ್ಲಿ ಪ್ರಕಟವಾಗಿ ಒಂದು ದೊಡ್ಡ-ಅರ್ಥಪೂರ್ಣ ಚರ್ಚೆಗೆ ದಾರಿ ಮಾಡಿಕೊಟ್ಟಿತು. ಪ್ರಜಾವಾಣಿಯ ವಾಚಕರ ವಾಣಿ ವಿಭಾಗದಲ್ಲಿ ಬಾಲುವಿನ ಲೇಖನದ ವಿಚಾರಗಳನ್ನು ಬೆಂಬಲಿಸಿ ಅನೇಕ ಪತ್ರಗಳು, ವಿರೋಧಿಸಿಯೂ ಒಂದೆರಡು ಪತ್ರಗಳು ಪ್ರಕಟವಾಗಿ ಬಿಸಿ ಬಿಸಿ ಚರ್ಚೆ ಆರಂಭವಾಯಿತು.

ನಾನು ಇದೇ ವೇದಿಕೆಯನ್ನು ಬಳಸಿಕೊಂಡು, ‘ಸಹಾಯಕ ಸಂಶೋಧಕರ ಆಯ್ಕೆ’ ಎಂಬ ತಲೆಬರಹದಡಿಯಲ್ಲಿ ಒಂದು ದೀರ್ಘ ಪತ್ರವನ್ನು ಬರೆದು ಪ್ರಜಾವಾಣಿ ಕಛೇರಿಗೆ ಹೋಗಿ YNK ಅವರಿಗೆ ಕೊಟ್ಟೆ. ಪತ್ರವನ್ನೋದಿದ YNK ಒಂದೆರಡು ಕ್ಷಣ ಸುಮ್ಮನಿದ್ದು ನಂತರ ಕೇಳಿದರು: ‘ಪ್ರಭು, ಈ ಪತ್ರ ಪ್ರಕಟಿಸಲು ನನ್ನದೇನೂ ಅಭ್ಯಂತರವಿಲ್ಲ.. ಆದರೆ ಒಮ್ಮೆ ಇದು ಪ್ರಕಟವಾಯಿತೆಂದರೆ ಅಧ್ಯಯನ ಕೇಂದ್ರದ ಬಾಗಿಲು ನಿಮ್ಮ ಪಾಲಿಗೆ permanent ಆಗಿ ಮುಚ್ಚಿದ ಹಾಗೆಯೇ! ಅನುಮಾನವೇ ಬೇಡ. ಯೋಚನೆ ಮಾಡಿ’. ನಾನು, ‘ತುಂಬಾ ಯೋಚನೆ ಮಾಡಿದ್ದೇನೆ ಸರ್. ಇಂದೇ ತೆರೆಯದಿರುವ ಆ ಬಾಗಿಲು ಮುಂದೊಂದು ದಿನ ತೆರೆಯಬಹುದು ಅನ್ನುವ ನಂಬಿಕೆಯಾಗಲೀ ಭ್ರಮೆಯಾಗಲೀ ನನಗಿಲ್ಲ.. ಆದದ್ದಾಗಲಿ.. ಪತ್ರ ಪ್ರಕಟಿಸಿ ಸರ್’ ಎಂದೆ. ಮರುದಿನವೇ ವಾಚಕರ ವಾಣಿ ವಿಭಾಗದಲ್ಲಿ ಪತ್ರ ಪ್ರಕಟವಾಯಿತು.

ಪತ್ರ ಪ್ರಕಟವಾದ ಮರುದಿನದಿಂದಲೇ ಪ್ರತಿಕ್ರಿಯೆಯಾಗಿ ಅನೇಕ ಪತ್ರಗಳು ಬರತೊಡಗಿ ಚರ್ಚೆಗೆ ಭಾರೀ ಕಾವೇರಿಬಿಟ್ಟಿತು. ಅಂದಿನ ದಿನಗಳಲ್ಲಿ ನಡೆದ ಆ ಚರ್ಚೆಯ ಎಲ್ಲಾ ಪತ್ರಗಳನ್ನೂ 46 ವರ್ಷಗಳ ನಂತರವೂ ನನ್ನ ಕಡತದಲ್ಲಿಟ್ಟು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದೇನೆ!ಯಾವ ಪೂರ್ವಗ್ರಹಗಳೂ ಇಲ್ಲದೆ, ಯಾವ ನಂಜೂ ಇಲ್ಲದೆ ಆ ಸಮಯದಲ್ಲಿ ನಡೆದ ವಿದ್ಯಮಾನಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಪತ್ರಿಕೆಗಳಲ್ಲಿ ಪ್ರಕಟವಾದ ಕೆಲ ಪತ್ರಗಳ ಕೆಲ ಭಾಗಗಳನ್ನು ಇಲ್ಲಿ ಉದ್ಧರಿಸುತ್ತೇನೆ. ಅವನ್ನು ನೋಡಿದರೆ ಅಂದು ನಡೆದ ನಮ್ಮ ಪುಟ್ಟ ಪ್ರತಿಭಟನೆಯ ಸ್ಪಷ್ಟ ಚಿತ್ರ ನಿಮ್ಮ ಮುಂದೆ ತೆರೆದುಕೊಳ್ಳಬಹುದು.

1. ನನ್ನ ಪತ್ರ:

1974 ರಲ್ಲಿ ಪ್ರಥಮ rank ಗಳಿಸಿರುವ ನನ್ನನ್ನೂ 1975 ರಲ್ಲಿ ಪ್ರಥಮ rank ಗಳಿಸಿರುವ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರನ್ನೂ ಕೈಬಿಟ್ಟು 1974 ರಲ್ಲಿ ಒಬ್ಬರನ್ನೂ (ಅದೂ ಬೇರೆ ವಿಶ್ವವಿದ್ಯಾಲಯದಿಂದ ಆಹ್ವಾನಿಸಿ) 1976 ರಲ್ಲಿ ಮೂವರನ್ನೂ ಸಹಾಯಕ ಸಂಶೋಧಕರಾಗಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ನೇಮಕ ಮಾಡಿಕೊಂಡಿದ್ದಾರೆ. ಈ ಸಂಬಂಧ ಯಾವ ಜಾಹೀರಾತೂ ಪ್ರಕಟಗೊಂಡಿಲ್ಲ, ಯಾವ ಸಂದರ್ಶನಗಳೂ ನಡೆದಿಲ್ಲ. ಎಂದರೆ ಈ ಆಯ್ಕೆಗಳ ಅರ್ಥ rank ವಿದ್ಯಾರ್ಥಿಗಳು ಈ ಸ್ಥಾನಕ್ಕೆ ಅರ್ಹರಲ್ಲವೆಂದೇ ಅಥವಾ ಈಗ ಆಯ್ಕೆಯಾಗಿರುವವರು rank ವಿದ್ಯಾರ್ಥಿಗಳಿಗಿಂತ ಪ್ರತಿಭಾವಂತರೆಂದೇ? ವಿಷಯ ಹೇಗೇ ಇದ್ದರೂ ವಿವರಣೆಯನ್ನು ಅಪೇಕ್ಷಿಸುತ್ತದೆ. ‘ಪರಿಶಿಷ್ಟ ವರ್ಗದವರಿಗೆ ಕೆಲಸ ಕೊಡುವಾಗ ಕೆಲ ಸಲ ಮೆರಿಟ್ ಅನ್ನು ಕಡೆಗಣಿಸಬೇಕಾಗುತ್ತದೆ’ ಎಂಬರ್ಥದ ಮಾತುಗಳನ್ನು ಕೇಂದ್ರದ ನಿರ್ದೇಶಕರು ಆಡಿದ್ದಾರೆ. ಆದರೆ ತಾವೇ ಸ್ವಯಂ ಆಯ್ಕೆ ಮಾಡಿರುವ, ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿರುವ ಒಬ್ಬ ಬ್ರಾಹ್ಮಣ ವಿದ್ಯಾರ್ಥಿ ಯಾವ ಮಾನದಂಡದ ಮೇಲೆ ಆಯ್ಕೆಯಾಗಿದ್ದಾರೆಂಬ ಪ್ರಶ್ನೆಗೆ ನಿರ್ದೇಶಕರೇ ಉತ್ತರಿಸಬೇಕು.

2. ಲಕ್ಷ್ಮಣ ಕೊಡಸೆ (ನರಹಳ್ಳಿ ಬಾಲುವಿನ ಸಹಪಾಠಿ;ಈಗ ಪ್ರಸಿದ್ಧ ಕತೆಗಾರರು ಹಾಗೂ ಪತ್ರಕರ್ತರು) ಅವರ ಪತ್ರ:
‘ಅತಿ ಹಿಂದುಳಿದ ಈಡಿಗ ಜನಾಂಗದ ಉಪಜಾತಿಯೊಂದರಿಂದ ಬಂದ ನಾನು rank ಪಡೆದವರ ಶ್ರೇಣಿಯಲ್ಲಿ ಮೂರು-ನಾಲ್ಕನೆಯವನಾಗಿಯೇ ಪ್ರತಿ ಪರೀಕ್ಷೆಯಲ್ಲೂ ಉತ್ತೀರ್ಣನಾಗಿದ್ದೇನೆ. ಶೈಕ್ಷಣಿಕ ಅರ್ಹತೆಯೊಂದಿಗೆ ನನ್ನ ಸೃಜನಾತ್ಮಕ ಕೃತಿಗಳೂ ಸಾಕಷ್ಟು ಪ್ರಕಟವಾಗಿವೆ. ‘ಸಧ್ಯಕ್ಕೆ ವಿಭಾಗದಲ್ಲಿ ಅವಕಾಶವಿಲ್ಲ’ ಎಂದು ನನಗೆ ಸಹಾಯಕ ಸಂಶೋಧಕ ಹುದ್ದೆಯನ್ನು ನಿರಾಕರಿಸಿದ ನಿರ್ದೇಶಕರು ಅದಾದ ಕೆಲವೇ ದಿನಗಳಲ್ಲಿ ಆ ಹುದ್ದೆಗೆ ಮೂವರನ್ನು ತೆಗೆದುಕೊಂಡಿದ್ದಾರೆ. ಅವರಲ್ಲಿ ಯಾರೂ ಹಿಂದುಳಿದ ವರ್ಗಕ್ಕೆ ಸೇರಿದವರಲ್ಲ. ಅಷ್ಟೇ ಅಲ್ಲ,ಮೆರಿಟ್ ನಲ್ಲಿ ನನಗಿಂತ ಕೆಳಗಿದ್ದವರು. ‘ನನಗಿಲ್ಲದ, ಆದರೆ ಇವರೆಲ್ಲರಿಗಿರುವ ಅರ್ಹತೆಗಳೇನು’ ಎಂದು ನಿರ್ದೇಶಕರನ್ನು ಪ್ರಶ್ನಿಸಿದಾಗ ಅವರು,’ಬೇರೆ ಬೇರೆ ಕಾರಣಗಳಿರುತ್ತವೆ. ಅದನ್ನು ನೀವು ಕೇಳಬಾರದು’ ಎಂದರು.

3. ‘ಕನ್ನಡ ಅಧ್ಯಯನ ಕೇಂದ್ರದ 16 ಮಂದಿ ಅಧ್ಯಾಪಕರು ಹಾಗೂ ಸಹಾಯಕ ಸಂಶೋಧಕರು ಒಂದು ಪತ್ರ ಬರೆದು ಅದರಲ್ಲಿ ನಿರ್ದೇಶಕರ ಕ್ರಮವನ್ನು ಸಮರ್ಥಿಸಿಕೊಂಡು ಎಲ್ಲಾ ಸಹಾಯಕ ಸಂಶೋಧಕರ ಪಟ್ಟಿಯನ್ನು ಅವರ ವಿದ್ಯಾರ್ಹತೆ—ಜಾತಿ ವಿವರಗಳೊಂದಿಗೆ ನೀಡಿದ್ದರು—ಯಾರೂ ಕೇಳದಿದ್ದರೂ! ಅದಕ್ಕಿಂತ ಮುಖ್ಯವಾಗಿ ನಾನು ನನ್ನ ಪತ್ರದಲ್ಲಿ ಪ್ರಸ್ತಾಪಿಸಿದ್ದ ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದ ಬ್ರಾಹ್ಮಣ ವಿದ್ಯಾರ್ಥಿಯ ವಿವರಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದರು!

4. ನರಹಳ್ಳಿ ಬಾಲಸುಬ್ರಹ್ಮಣ್ಯಅವರ ಪತ್ರ:

‘ಶ್ರೀನಿವಾಸ ಪ್ರಭು ಹಾಗೂ ಲಕ್ಷ್ಮಣ ಕೊಡಸೆ ಅವರ ಆಪಾದನೆಗಳಿಗೆ ಕೇಂದ್ರದ ನಿರ್ದೇಶಕರು ಉತ್ತರ ಕೊಡಬೇಕಾದದ್ದು ಅವರ ನೈತಿಕ ಜವಾಬ್ದಾರಿಯಾಗಿತ್ತು. ಆದರೆ ನಿರ್ದೇಶಕರು ಆಪಾದನೆಗಳಿಗೆ ಸಂಪೂರ್ಣವಾಗಿ ಹೊಣೆಗಾರರಾಗಿರುವುದರಿಂದ ‘ನಿರುತ್ತರ’ರಾಗಿದ್ದಾರೆ. ಅವರ ಪರವಾಗಿ ‘ಸ್ವಾಮಿಭೃತ್ಯ’ 16 ಮಂದಿ ಔಚಿತ್ಯವಿಲ್ಲದ ಪತ್ರ ಬರೆದಿರುವುದು ವಿಶ್ವವಿದ್ಯಾಲಯಗಳ ತಮಾಷೆಗಳಲ್ಲೊಂದಾಗಿದೆ. ಯಾರ ನೇಮಕಗಳ ಬಗ್ಗೆ ಆರೋಪಗಳಿವೆಯೋ ಅವರೇ ಒಡೆಯರನ್ನು ಸಮರ್ಥಿಸಹೊರಟು ಪತ್ರ ಬರೆದು ‘ಚೇಲಾತನ’ ವನ್ನು ಸಾಬೀತು ಮಾಡಿಕೊಂಡಿದ್ದಾರೆ.

5. ಕಿ.ರಂ.ನಾಗರಾಜ ಅವರ ಪತ್ರ:

‘ಎರಡನೆಯ ದರ್ಜೆಯಲ್ಲಿ ತೇರ್ಗಡೆಯಾದವರ ಬಗೆಗೆ ಶ್ರೀನಿವಾಸ ಪ್ರಭು ತೋರಿರುವ ಧೋರಣೆ ಅಪಾಯಕಾರಿ. ಈ ಹೊತ್ತಿನ ಕೃತಕ ಪರೀಕ್ಷಾ ಪದ್ಧತಿಯಿಂದ ಏರ್ಪಟ್ಟಿರುವ ಕೃತಕ ನಿರ್ಮಿತಿಗಳನ್ನು ಬಹು ಮುಖ್ಯ ಅಂಶವನ್ನಾಗಿ ಅವರು ಪರಿಗಣಿಸಿದ್ದಾರೆ. ಅದರ ಮೂಲಭೂತ ವಿರೋಧವನ್ನು ಗಮನಕ್ಕೆ ತಂದುಕೊಂಡಿಲ್ಲ. ಪರೀಕ್ಷೆಯ ಸಂದರ್ಭದ ಶ್ರೇಣಿಯನ್ನು ಶ್ರೀನಿವಾಸ ಪ್ರಭು ಅವರು ಬೆಂಬಲಿಸಿಕೊಂಡಿರುವುದರಿಂದ ಸಮಾಜದ ಶ್ರೇಣೀಕೃತ ಸಂದರ್ಭವನ್ನು ಬೆಂಬಲಿಸಿದಂತೆ ಆಗಿದೆ.. ಯಾವುದೇ ಆಯ್ಕೆಯನ್ನು ನಿರ್ದಿಷ್ಟ ವ್ಯಕ್ತಿಯ ಯೋಗ್ಯತೆಯನ್ನು ಗಮನದಲ್ಲಿಟ್ಟುಕೊಂಡು ನೋಡಬೇಕಲ್ಲದೇ ಬೇರೆ ಅಲ್ಲ’.

6. ನನ್ನ ಪತ್ರ:

‘ನೇರವಾಗಿ ಮಾತಾಡಲು ಉತ್ತರವಿಲ್ಲವಾದ್ದರಿಂದ ಕಿ.ರಂ.ಅವರು ಸಾಮಾನ್ಯರಿಗೆ ಅರ್ಥವಾಗದಂತಹ ‘ಕೃತಕ ಪರೀಕ್ಷಾ ಪದ್ಧತಿ’, ‘ಕೃತಕ ನಿರ್ಮಿತಿ’, ಶ್ರೇಣೀಕೃತ ಸ್ಥಿತಿ’ ಮೊದಲಾದ ಪಾಂಡಿತ್ಯಪೂರ್ಣ ಪದಗಳಡಿಯಲ್ಲಿ ವಿಷಯವನ್ನು ಗೋಜಲುಗೊಳಿಸಿದ್ದಾರೆ; ನೇರ ಸಮಸ್ಯೆಯ ಆಳ ಅಗಲಗಳನ್ನು ಮರೆಯಿಸಿ ಸಮಸ್ಯೆಯನ್ನು ತೇಲಿಸುವ ಪ್ರಯತ್ನ ನಡೆಸಿದ್ದಾರೆ. ಅತ್ಯಂತ ಎತ್ತರದಲ್ಲಿ ನಿಂತು, ‘ಯಾವುದೇ ಆಯ್ಕೆಯನ್ನು ನಿರ್ದಿಷ್ಟ ವ್ಯಕ್ತಿಯ ಯೋಗ್ಯತೆಯನ್ನು ಗಮನದಲ್ಲಿ ಇರಿಸಿಕೊಂಡು ನೋಡಬೇಕಲ್ಲದೇ ಬೇರೆ ಅಲ್ಲ’ ಎಂಬಂತಹ ಪ್ರಾಥಮಿಕ ನೀತಿಪಾಠಗಳನ್ನು ಗಂಭೀರ ಧಾಟಿಯಲ್ಲಿ ಬೋಧಿಸಿದ್ದಾರೆ. ಆದರೆ ಈಗ ಅಲ್ಲಿ ಸಹಾಯಕ ಸಂಶೋಧಕರಾಗಿ ನೇಮಕಗೊಂಡಿರುವವರೂ ಕೂಡಾ ಕಿ.ರಂ. ಅವರು ಹೇಳುವ ‘ಕೃತಕ ಪರೀಕ್ಷಾ ಪದ್ಧತಿ’ಯ ಫಲಶೃತಿಗಳೇ ಅಷ್ಟೇ! ಅಂದಮೇಲೆ ಒಂದೇ ಪರೀಕ್ಷಾ ಪದ್ಧತಿಯಲ್ಲಿ ದ್ವಿತೀಯ ದರ್ಜೆ ಪಡೆದು ಪಾಸಾದವರು ‘ನಿಸ್ಸಂಶಯ ಸಾಹಿತ್ಯ ವಿದ್ಯಾರ್ಥಿ’ಗಳೂ; Rank ಗಳನ್ನು ಗಳಿಸಿ ಸಾಹಿತ್ಯಿಕಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ವಿದ್ಯಾರ್ಥಿಗಳು ಅನರ್ಹರೂ ಆದದ್ದಾದರೂ ಹೇಗೆ? ಯಾವ ಜಾಹೀರಾತು—ಸಂದರ್ಶನಗಳೂ ಇಲ್ಲದೆ ಈ ಆಯ್ಕೆಗಳು ನಡೆಯುವಾಗ ವ್ಯಕ್ತಿಗಳ ‘ಯೋಗ್ಯತೆ’ಯನ್ನು ಗುರುತಿಸಲು ಇವರು ಬಳಸುವ ಮಾನದಂಡ ಯಾವುದು? ಎಲ್ಲಕ್ಕಿಂತ ಹೆಚ್ಚಾಗಿ ಈಗ ಸಹಾಯಕ ಸಂಶೋಧಕರಾಗಿ ಆಯ್ಕೆಯಾಗಿರುವವರ ಹೆಸರಿನಲ್ಲಿ ಯಾವುದೇ ಸಾಹಿತ್ಯಿಕ—ಸಂಶೋಧಕ ಲೇಖನಗಳ ಮಾಹಿತಿಯೂ ಸಿಗುವುದಿಲ್ಲ. ಎಂದಮೇಲೆ ನಾಡಿನ ಪ್ರಮುಖ ಸಾಹಿತ್ಯಿಕ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದು ಸಾಹಿತ್ಯಾಸಕ್ತರ ಗಮನ ಸೆಳೆದಿರುವ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಪ್ರತಿಭಾವಂತರನ್ನು ಕಡೆಗಣಿಸಿ ಇವರನ್ನು ಆಯ್ಕೆ ಮಾಡಿಕೊಳ್ಳುವಾಗ ಆಯ್ಕೆಗಾರರ ಒಳಗಣ್ಣಿಗೆ ಕಂಡ ‘ಯೋಗ್ಯತೆ’ ಯಾವುದು?… ಆವೇಶದಲ್ಲಿ ಅಕ್ರಮಗಳನ್ನು ಸಮರ್ಥಿಸಿಕೊಂಡು ‘ಸರಿ’ ಎಂದು ಸಾಬೀತು ಮಾಡಹೊರಟು ತಾತ್ತ್ವಿಕ ಪೋಸ್ ಕೊಡುವುದು ಸಾಮಾಜಿಕವಾಗಿ ಆರೋಗ್ಯಕರವಾದ ಲಕ್ಷಣವಲ್ಲ. ಅವರ ಈ ‘ಅಪಾಯಕಾರಿ’ ಧೋರಣೆ’ ಅವರೂ ಹೇಗೆ ವ್ಯವಸ್ಥೆಯ ಮುಖವಾಣಿ ಎಂಬುದಕ್ಕೆ ಕನ್ನಡಿ ಹಿಡಿಯುತ್ತದೆ’.

ಈ ಪತ್ರ ಪ್ರಕಟವಾದ ನಂತರ ಈ ಕುರಿತಾದ ಚರ್ಚೆಯನ್ನು ಪತ್ರಿಕೆಯವರು ನಿಲ್ಲಿಸಿಬಿಟ್ಟರು.

ಡಾ. ಎಂ. ಚಿದಾನಂದ ಮೂರ್ತಿಗಳು ನನಗೆ ಕೊಟ್ಟಿದ್ದ ಪ್ರಮಾಣಪತ್ರದ ಕೆಲವೊಂದು ಸಾಲುಗಳನ್ನು ಇಲ್ಲಿ ಉದ್ಧರಿಸ ಬಯಸುತ್ತೇನೆ:
‘He is one of those brilliant students who deserve real recognition and encouragement. Being a devoted student of Kannada language and literature, he has already shown talents as a very good critic with a scientific outlook. Some of the papers he presented before seminars were of a very high standard. He is equally at home in subjects like Linguistics and Sanskrit. He has an enviable style of presentation and is equally impressive as a speaker…’

ಆದರೆ ಅವರದೇ ವಿಷಯವಾದ ಭಾಷಾವಿಜ್ಞಾನ ವಿಭಾಗಕ್ಕೆ ಸಹಾಯಕ ಸಂಶೋಧಕನ ಅಗತ್ಯವಿದ್ದಾಗ ಯಾಕೋ ಚಿ.ಮೂ. ಅವರಿಗೆ ನನ್ನ ನೆನಪಾಗಲೀ ಅವರೇ ಬರೆದುಕೊಟ್ಟಿದ್ದ ಮೆಚ್ಚುಗೆಯ ಮಾತುಗಳ ನೆನಪಾಗಲೀ ಬಾರದೇ ಹೋದುದು ನನ್ನ ದುರದೃಷ್ಟವೇ ಇರಬೇಕು…..

ಹೀಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿಯೇ ನಡೆದ ಒಂದು ಅರ್ಥಪೂರ್ಣ ಚರ್ಚೆಯ ಫಲಿತಾಂಶವೇನೆಂದು ನೋಡಿದರೆ ಮಾತ್ರ ಶೂನ್ಯ. ಸ್ವತಂತ್ರ ಭಾರತದಲ್ಲಿ ನಡೆಯುವ ಅನೇಕ ಪ್ರತಿಭಟನೆಗಳ ಹಾಗೆ ನಾಲ್ಕಾರು ದಿನಗಳು ಕಳೆಯುತ್ತಿದ್ದಂತೆ ನಮ್ಮ ಈ ಒಂದು ಪುಟ್ಟ ಹೋರಾಟದ ಸೊಲ್ಲೂ ಉಡುಗಿಹೋಗಿ, ಎಲ್ಲವೂ ಯಥಾಪ್ರಕಾರವಾಗಿಯೇ ನಡೆಯುತ್ತಾ ಪ್ರತಿಭಟಿಸಿದ ಸಮಾಧಾನವಷ್ಟೇ ನಮ್ಮ ಪಾಲಿಗುಳಿಯಿತು.

ಒಂದು ವಿಷಯವನ್ನು ಇಲ್ಲಿಯೇ ಸ್ಪಷ್ಟ ಪಡಿಸಬೇಕು: ಅನ್ಯಾಯ—ಅಕ್ರಮಗಳು ಜರುಗುತ್ತಿವೆಯೆಂದು ಖಚಿತವಾದಾಗ ಒಂದು ತಾತ್ತ್ವಿಕ ನೆಲೆಯಲ್ಲಿ ನಮ್ಮ ಪ್ರತಿಭಟನೆ ನಡೆಯಿತೇ ಹೊರತು ಯಾವ ವೈಯಕ್ತಿಕ ಕಾರಣಗಳಿಗಾಗಿಯೂ ಅಲ್ಲ, ಯಾರ ಮೇಲಿನ ಸಿಟ್ಟು— ಅಗೌರವದಿಂದಲೂ ಅಲ್ಲ. ನನಗೆ ಕನ್ನಡ ಸಾಹಿತ್ಯದ ವಿರಾಟ್ ಸ್ವರೂಪದ ದರ್ಶನ ಮಾಡಿಸಿದ ಗುರು ಮಹೋದಯರು ಕನ್ನಡ ಭಾಷೆ—ಸಾಹಿತ್ಯಗಳಿಗೆ ನೀಡಿರುವ ಕೊಡುಗೆ ಅನುಪಮವಾದುದು. ಅಂದಿನ ನನ್ನ ಸಿಟ್ಟು—ಅಸಮಾಧಾನ—ಪ್ರತಿಭಟನೆ.. ಎಲ್ಲವೂ ಆ ಸಂದರ್ಭದ ಫಲಶ್ರುತಿಯಾಗಿ ಪುಟಿದದ್ದೇ ಹೊರತು ಸ್ಥಾಯಿಯಲ್ಲ. ಈ ಅರಿವು ನನ್ನಲ್ಲಿ ಜಾಗೃತವಾದ್ದರಿಂದ ಯಾವ ಕಹಿಯನ್ನೂ ಪೋಷಿಸಿಕೊಂಡು ಬರದೆ ಮುಂದಿನ ವರ್ಷಗಳಲ್ಲಿ ಆ ಗುರು ಮಹೋದಯರೊಂದಿಗೆ ಆತ್ಮೀಯ ಸಂಬಂಧ ಬೆಸೆಯುವ ಪ್ರಯತ್ನ ಮಾಡಿದ್ದೇನೆ.

ಹಾಗಾಗಿಯೇ ಚಿದಾನಂದ ಮೂರ್ತಿಗಳು ನನ್ನ ಮಗಳು ರಾಧಿಕಾಳ ಭರತನಾಟ್ಯ ರಂಗ ಪ್ರವೇಶಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಆಶೀರ್ವದಿಸಿದ್ದಾರೆ. ಜಿ.ಎಸ್.ಎಸ್. ಅವರು ನನ್ನ 50 ನೇ ಹುಟ್ಟುಹಬ್ಬದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ,ಬಾಳಗೆಳತಿ ರಂಜನಿಯ ಭಾವಗೀತೆಗಳ CD ಯನ್ನು ಬಿಡುಗಡೆ ಮಾಡಿ ಹರಸಿದ್ದಾರೆ. ಮತ್ತೂ ನನಗನ್ನಿಸುವುದೇನೆಂದರೆ, ಅಂದು ಅಂಥದೊಂದು ಸಂಕೀರ್ಣ ಸಂದರ್ಭ ಸೃಷ್ಟಿಯಾಗದೇ ಹೋಗಿದ್ದರೆ ನನ್ನ ಬದುಕಿನ ದಾರಿಯೇ ಬದಲಾಗುತ್ತಿರಲಿಲ್ಲವೇನೋ! ಇಂದು ನಾನೇನಾಗಿದ್ದೇನೋ ಅದಾಗದೆ ಮತ್ತೇನೋ ಆಗಿರುತ್ತಿದ್ದೆನೇನೋ! ಒಂದಂತೂ ಪರಮ ಸತ್ಯ: ಈಗ ನಾನೇನಾಗಿದ್ದೇನೋ ಅದರ ಬಗ್ಗೆ ನನಗೆ ಸಂಪೂರ್ಣ ಸಮಾಧಾನವಿದೆ.. ಸಂತೃಪ್ತಿಯೂ ಇದೆ… ಒಂದಿನಿತು ಹೆಮ್ಮೆಯೂ ಇದೆ!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

October 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: