ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿವಾಸ ಪ್ರಭು ಅಂಕಣ – ಎಲ್ಲರೂ ನನ್ನನ್ನೇ ನೋಡಿ ನಗುತ್ತಿರುವಂತೆ ಭ್ರಮೆ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

18

‘ಕ್ರಾಂತಿ ಬಂತು ಕ್ರಾಂತಿ’ ನಾಟಕ ಪ್ರದರ್ಶನವಾದ ಬಳಿಕ ನಾಟಕ ಕ್ಷೇತ್ರದ ಸೆಳೆತ ಹೆಚ್ಚು ತೀವ್ರವಾಯಿತು. ಕಲಾಕ್ಷೇತ್ರ-ಟೌನ್ ಹಾಲ್ ಗಳಲ್ಲಿ ನಡೆಯುತ್ತಿದ್ದ ಎಲ್ಲಾ ನಾಟಕಗಳನ್ನೂ ಬಿಡದೇ ನೋಡುತ್ತಿದ್ದೆ. ಕೈಯಲ್ಲಿ ದುಡ್ಡಿದ್ದಾಗ ಟಿಕೆಟ್ ತೆಗೆದುಕೊಳ್ಳುವುದು, ಇಲ್ಲದಿದ್ದಾಗ ಬಾಗಿಲ ಬಳಿಯೇ ಠಳಾಯಿಸಿಕೊಂಡಿದ್ದು ಯಾರೂ ಇಲ್ಲದ ಸಮಯ ನೋಡಿಕೊಂಡು ಮೆಲ್ಲನೆ ಒಳಗೆ ಸೇರಿಕೊಂಡುಬಿಡುವುದು! ನಮ್ಮ ಒಬ್ಬರು ಬಂಧುವಿನಿಂದಾಗಿ ಮಾಸ್ಟರ್ ಹಿರಣ್ಣಯ್ಯನವರ ‘ಅನಾಚಾರ’ ನಾಟಕ ಪ್ರದರ್ಶನವನ್ನು ನೋಡಿ ಬೆರಗುಪಟ್ಟು ಬಂದಿದ್ದೆನಲ್ಲಾ, ಆನಂತರ ಎಷ್ಟೋ ದಿನ ಹೀಗೆ ಗೇಟ್ ಕೀಪರ್ ಗಳ ಕಣ್ಣು ತಪ್ಪಿಸಿ ಅವರ ಎಷ್ಟೋ ನಾಟಕಗಳನ್ನು, ಕೆಲವೊಮ್ಮೆ ಒಂದೇ ನಾಟಕದ ಅನೇಕ ಪ್ರದರ್ಶನಗಳನ್ನು ಕದ್ದು ನೋಡಿರುವುದುಂಟು.

ಮಾಸ್ಟರ್ ಹಿರಣ್ಣಯ್ಯನವರು ಮಾತ್ರ ಪ್ರತಿ ನಾಟಕದಲ್ಲೂ ಪ್ರತಿ ಪ್ರದರ್ಶನದಲ್ಲೂ ನನಗೆ ಹೊಸದಾಗಿಯೇ ಕಾಣುತ್ತಿದ್ದರು. ‘ಎನಿತು ಜೀವರಿಗೆ ಎನಿತು ಜನುಮದಲಿ ಎನಿತು ನಾವು ಋಣಿಯೋ’ ಎಂದು ರಾಷ್ಟ್ರಕವಿ ಜಿ.ಎಸ್.ಎಸ್. ಅವರು ಹಾಡಿದರೆ, ‘ಎನಿತು ತಂಡಕ್ಕೆ ಎನಿತು show ಗಳಲಿ ಎನಿತು ನಾನು ಋಣಿಯೋ’ ಅನ್ನುವುದು ನನ್ನ ಪಾಡಿನ ಹಾಡಾಗಬಹುದು! ಆ ಋಣದ ಸಿಂಹಪಾಲು ಮಾಸ್ಟರ್ ಹಿರಣ್ಣಯ್ಯನವರದು. ಈ ಮೇರು ಕಲಾವಿದನ ದೈತ್ಯ ಪ್ರತಿಭೆಗೆ ಮಾರುಹೋಗಿ ಅವರನ್ನು ನನ್ನ ಮಾನಸ ಗುರುವಾಗಿ ನಾನು ಸ್ವೀಕರಿಸಿದ್ದೆನಷ್ಟೇ..

ಈ ನನ್ನ ಗುರು ಮುಂದೆ ಎಷ್ಟೋ ವರ್ಷಗಳ ನಂತರ ಒಮ್ಮೆ ನನಗೆ ಫೋನ್ ಮಾಡಿ, ‘ನಂದೊಂದು ನಾಟಕಗಳ ಸಂಕಲನ ಪ್ರಕಟ ಆಗ್ತಿದೆ ರಾಜಾ.. ಅದಕ್ಕೊಂದು ಮುನ್ನುಡಿ ಬರಕೊಟ್ಟುಬಿಡಯ್ಯಾ’ ಎಂದರು. ‘ನಿಮ್ಮ ನಾಟಕಗಳಿಗೆ ಮುನ್ನುಡಿ ಬರೆಯುವಷ್ಟು ಅರ್ಹತೆ ನನಗೆ ಪ್ರಾಪ್ತವಾಗಿದೆಯೋ ಇಲ್ಲವೋ ಗೊತ್ತಿಲ್ಲ.. ಆದರೆ ನೀವು ಕೇಳಿದ ಮೇಲೆ ಇಲ್ಲ ಅನ್ನುವುದಾದರೂ ಹೇಗೆ? ಪ್ರೀತಿಯಿಂದ, ಭಕ್ತಿಯಿಂದ ನಾಲ್ಕು ಮಾತು ಬರೆದು ಕೊಡುತ್ತೇನೆ’ ಎಂದು ಹೇಳಿ ಅವರ ನಟನಾ ಶೈಲಿಯ ಬಗ್ಗೆ, ತಮ್ಮದೇ ವಿಶಿಷ್ಟ ರೀತಿಯಲ್ಲಿ ವಿಭಿನ್ನ ನೆಲೆ-ತಂತ್ರಗಳಲ್ಲಿ ಅವರು ನಾಟಕಗಳನ್ನು ಕಟ್ಟಿ ಬೆಳೆಸುವ ಪರಿಯ ಬಗ್ಗೆ ನನ್ನ ತಿಳಿವಿಗೆ ನಿಲುಕಿದ್ದನ್ನು ಬರೆದುಕೊಟ್ಟೆ. ಅವರ ಆ ನಾಟಕಗಳ ಸಂಗ್ರಹದ ಹೆಸರು ‘ಮಾಸ್ಟರ್ ಸ್ಟ್ರೋಕ್ಸ್’.

ನಾಟಕಗಳ ಗುಂಗಿನಲ್ಲಿ ತೇಲುತ್ತಿದ್ದಂತೆಯೇ ಆನರ್ಸ್ ಕೊನೆಯ ವರ್ಷದ ಪರೀಕ್ಷೆಗಳು ಹತ್ತಿರ ಬಂದವು. ಬೇರೆಲ್ಲಾ ಚಟುವಟಿಕೆಗಳನ್ನೂ ಬದಿಗೊತ್ತಿ ಓದಿನ ಕಡೆಗೆ ಗಮನ ಹರಿಸಿದೆ. ಓದು ಒಂದು ಶಿಕ್ಷೆಯಾಗದೆ ಬಲು ಪ್ರೀತಿಯ ಸಂಗತಿಯೇ ಆಗಿ ಸುಮಾರು ದಿನಗಳೇ ಉರುಳಿದ್ದವು. ಪಟ್ಟ ಪರಿಶ್ರಮ ಫಲಕೊಟ್ಟಿತು. ಬಿ ಎ ಆನರ್ಸ್ ಕನ್ನಡ ಪದವಿಯನ್ನು ಫಸ್ಟ್ ಕ್ಲಾಸ್ ಫಸ್ಟ್ rank ನೊಂದಿಗೆ ನನ್ನದಾಗಿಸಿಕೊಂಡೆ. First rank ಬಂದಿದ್ದಕ್ಕೆ ನನಗೆ ಲಭಿಸಿದ್ದು ವರನಟ ರಾಜಕುಮಾರ್ ಪಾರಿತೋಷಕ! ನನ್ನ ಸಂತಸ ಮೇರೆ ಮೀರಿ ಹೋಯಿತು! ನನ್ನ ಮಾನಸ ಗುರುವಿನ ಹೆಸರಿನಲ್ಲೇ ಇರುವ ದತ್ತಿ ಬಹುಮಾನ ನನ್ನದಾಗಿದೆ! ಆಗ ಆ ಪದವಿಗೆ ಮೆಡಲ್ ಕೊಡುವ ಪದ್ಧತಿ ಇರಲಿಲ್ಲವಾದ್ದರಿಂದ ನನಗೆ ಕೊಟ್ಟಿದ್ದು ನಗದು ಬಹುಮಾನ. ಪ್ಯಾಲೇಸ್ ರಸ್ತೆಯಲ್ಲೇ, ನಮ್ಮ ಕಾಲೇಜ್ ಗೆ ತುಸು ದೂರದಲ್ಲೇ ಇದ್ದ ಶಿಕ್ಷಣ ಇಲಾಖೆಗೆ ಹೋಗಿ ಬಹುಮಾನವನ್ನು ಪಡೆದುಕೊಳ್ಳಬೇಕಿತ್ತು. ಅಲ್ಲಿಗೆ ಹೋದಾಗ ಅಲ್ಲಿದ್ದ ಅಧಿಕಾರಿಗಳು, ‘ಈ ಬಹುಮಾನವನ್ನು ಪುಸ್ತಕ ರೂಪದಲ್ಲಿ ನೀಡಬೇಕೆಂದು ದತ್ತಿ ನೀಡಿರುವವರು ಸಲಹೆ ನೀಡಿದ್ದಾರೆ. ಪುಸ್ತಕಗಳ ಆಯ್ಕೆ ನಿಮ್ಮದೇ ಆಗಿರಲಿ. ನಿಮಗೆ ಬೇಕಾದ ಪುಸ್ತಕಗಳನ್ನು ನೀವೇ ಆರಿಸಿಕೊಂಡು ತಂದುಕೊಡಿ.. ಪದವಿ ಪ್ರದಾನ ಸಮಾರಂಭದ ದಿನ ಅದನ್ನೇ ಬಹುಮಾನವಾಗಿ ನೀಡುತ್ತೇವೆ’ ಎಂದರು. ಆಯಿತು ಎಂದು ಹೇಳಿ ಹಣವನ್ನು ಪಡೆದುಕೊಂಡು ಬಂದೆ.

ಹಿಂದೊಮ್ಮೆ ನಳಿನಿ ಅಕ್ಕನಿಗೆ ಇಂಥದೇ ಸಂದರ್ಭ ಎದುರಾಗಿದ್ದಾಗ ಅಕ್ಕ ತನ್ನ ಬಳಿಯೇ ಇದ್ದ ಪುಸ್ತಕಗಳಿಗೆ ಬಣ್ಣದ ಕಾಗದ ಸುತ್ತಿ ಬಹುಮಾನದ ಹಣವನ್ನು ಅಣ್ಣನ ಕೈಗಿತ್ತದ್ದು ನೆನಪಿಗೆ ಬಂತು.ನಾನೂ ಹಾಗೆಯೇ ಅಣ್ಣನ ಕೈಗೆ ಹಣವನ್ನು ಕೊಟ್ಟು ನನ್ನ ಬಳಿಯೇ ಇದ್ದ ಪುಸ್ತಕಗಳಿಗೆ ಬಣ್ಣದ ಕಾಗದ ಸುತ್ತಿ,ಮೇಲೆ ದಪ್ಪಕ್ಷರಗಳಲ್ಲಿ ‘K.V. SRINIVASA PRABHU, FIRST RANK, KANNADA B.A. (HONS.)’ ಎಂದು ಬರೆದು ಶಿಕ್ಷಣ ಇಲಾಖೆಗೆ ಒಪ್ಪಿಸಿ ಬಂದೆ. ಪದವಿ ಪ್ರದಾನ ಸಮಾರಂಭದ ದಿನ ಸಮಾರಂಭಕ್ಕೆ ಬೇಕಿದ್ದ ಬಿಳಿಯ ಡ್ರೆಸ್ ಹೊಂದಿಸಿಕೊಳ್ಳಲಾಗದ್ದಕ್ಕೋ ಏನೋ ನನಗೆ ಹೋಗಲಾಗಲಿಲ್ಲ. ಎರಡು ಮೂರು ದಿನ ಬಿಟ್ಟು ನನ್ನ ಬಹುಮಾನವನ್ನು ಪಡೆದುಕೊಂಡು ಬರಲು ಶಿಕ್ಷಣ ಇಲಾಖೆಗೆ ಹೋದೆ. ಬಣ್ಣದ ಕಾಗದ ಸುತ್ತಿದ್ದ ನನ್ನ ಬಹುಮಾನದ ಕಟ್ಟು ಕಛೇರಿಯ ಕಬ್ಬಿಣದ ಬೀರುವೊಂದರ ಮೇಲ್ಭಾಗದಲ್ಲಿ ತಣ್ಣಗೆ ಕುಳಿತಿತ್ತು. ಅದರ ಮೇಲೆ ಧೂಳಿನ ಒಂದು ಸಣ್ಣ ಲೇಪ. ನಾನೇ ಆ ಬಹುಮಾನದ ಹಕ್ಕುದಾರ ಎಂಬುದನ್ನು ಖಾತ್ರಿ ಪಡಿಸಿಕೊಂಡು ನನಗದನ್ನು ಕೊಟ್ಟುಕಳಿಸಿದರು ಇಲಾಖೆಯವರು.

ಮನೆಯಲ್ಲಿ ಅಣ್ಣ, ‘ಈಗಲೇ ಕೆಲಸದ ಬಗ್ಗೆ ಚಿಂತಿಸುವುದು ಬೇಡ.. ತುಂಬಾ ಚಿಕ್ಕ ವಯಸ್ಸು ಬೇರೆ.. ಎಂ ಎ ಪದವಿಯನ್ನೂ ಮುಗಿಸಿಕೊಂಡು ಬಿಡು’ ಎಂದರು. ಅಂತೆಯೇ ಸೆಂಟ್ರಲ್ ಕಾಲೇಜ್ ನಲ್ಲಿಯೇ ಕನ್ನಡ ಎಂ ಎ ಪದವಿಗೆ ನನ್ನ ದಾಖಲಾತಿ ಆಯಿತು. ಪ್ರಥಮ ಎಂ ಎ ಓದಿನ ಪ್ರಾರಂಭದ ದಿನಗಳಲ್ಲೇ ಎಂದು ತೋರುತ್ತದೆ – ಬಿ.ವಿ.ಕಾರಂತರು ಬೆಂಗಳೂರಿನಲ್ಲಿ ಬಯಲು ರಂಗ ಪ್ರಯೋಗಗಳನ್ನು ಮಾಡಿಸಿದ್ದು. ಈ ಬಯಲು ರಂಗ ಪ್ರಯೋಗಗಳು ಪ್ರೇಕ್ಷಕರಿಗೆ ಒಂದು ವಿನೂತನ ಅನುಭವವನ್ನು ತಂದುಕೊಟ್ಟದ್ದಲ್ಲದೆ ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಒಂದು ಸಂಚಲನವನ್ನೇ ಸೃಷ್ಟಿಸಿದವು. ಪಿ. ಲಂಕೇಶರ ‘ಸಂಕ್ರಾಂತಿ’, ಚಂದ್ರಶೇಖರ ಕಂಬಾರರ ‘ಜೋಕುಮಾರಸ್ವಾಮಿ’ ಹಾಗೂ ಪಿ. ಲಂಕೇಶರೇ ಅನುವಾದಿಸಿದ ಸಾಫೋಕ್ಲಿಸ್ ನ ‘ದೊರೆ ಈಡಿಪಸ್ – ಈ ಮೂರೂ ನಾಟಕಗಳಿಗೆ ಬಿ.ವಿ.ಕಾರಂತರು ರವೀಂದ್ರ ಕಲಾಕ್ಷೇತ್ರದ ಬಲಬದಿಗಿದ್ದ ದೊಡ್ಡ ಆವರಣ-ಅದಕ್ಕೆ ಹೊಂದಿಕೊಂಡಂತಿದ್ದ ಮೆಟ್ಟಿಲುಗಳು ಹಾಗೂ ಪುಟ್ಟ ಉದ್ಯಾನ (ಸಂಕ್ರಾಂತಿ ಹಾಗೂ ಜೋಕುಮಾರಸ್ವಾಮಿ) ಮತ್ತು ಕಲಾಕ್ಷೇತ್ರದ ಹಿಂಬದಿಯಲ್ಲಿದ್ದ ದೊಡ್ಡ ದೊಡ್ಡ ಕಂಬಗಳ ನಡುವಿನ ಆವರಣ (ಈಡಿಪಸ್) ಗಳನ್ನು ಬಳಸಿಕೊಂಡು ವಿನೂತನ ರೀತಿಯಲ್ಲಿ ರಂಗ ವಿನ್ಯಾಸವನ್ನು ಅಣಿಗೊಳಿಸಿದ್ದರು.

ರಂಗವಿನ್ಯಾಸ ಹಾಗೂ ಬೆಳಕಿನ ವ್ಯವಸ್ಥೆಯ ಜವಾಬ್ದಾರಿಯನ್ನು ಹೊತ್ತಿದ್ದವರು ವಿ. ರಾಮಮೂರ್ತಿಗಳು. ಆ ಸಮಯದಲ್ಲಿ ಕಾರಂತರು, ಕಂಬಾರರು ಹಾಗೂ ಮರುಳಸಿದ್ದಪ್ಪನವರೊಂದಿಗೆ ಚರ್ಚಿಸಲು ಆಗಾಗ್ಗೆ ನಮ್ಮ ವಿಭಾಗಕ್ಕೆ ಬರುತ್ತಿದ್ದರು. ಆಗಲೇ ಕಾರಂತ ಮೇಷ್ಟ್ರೊಂದಿಗೆ ನನ್ನ ಪ್ರಥಮ ಭೇಟಿಯಾದದ್ದು. ‘ಇವರು ಶ್ರೀನಿವಾಸಪ್ರಭು ಅಂತ, ನಮ್ಮ ವಿಭಾಗದ ವಿದ್ಯಾರ್ಥಿ. ನಾಟಕದಲ್ಲಿ ತುಂಬಾ ಆಸಕ್ತಿ.. ಸೂಕ್ತ ಪಾತ್ರ ಯಾವುದಾದರೂ ಇದ್ದರೆ ಬಳಸಿಕೊಳ್ಳಬಹುದು’ ಎಂದು KMS ಮೇಷ್ಟ್ರು ನನ್ನನ್ನು ಕಾರಂತರಿಗೆ ಪರಿಚಯ ಮಾಡಿಕೊಟ್ಟರು. ‘ಸರಿ ಸರಿ.. ಕಲಾಕ್ಷೇತ್ರದಲ್ಲಿ rehearsals ನಡೀತಿದೆ.. ಅಲ್ಲಿಗೇ ಬನ್ನಿ ನೋಡೋಣ’ ಎಂದು ಹೇಳಿ ಹೊರಟುಹೋದರು ಕಾರಂತರು.

ಅಂದೇ ತುಂಬು ಉತ್ಸಾಹದಿಂದ ರಿಹರ್ಸಲ್ ಗೆ ಹೋದೆ. ರಿಹರ್ಸಲ್ ನಡೆಯುತ್ತಿದ್ದದ್ದು ಕಲಾಕ್ಷೇತ್ರದ ಮೇಲು ಮಹಡಿಯಲ್ಲಿದ್ದ ಆವರಣದಲ್ಲಿ. ಪಾತ್ರಗಳಿಗೆ ಸೂಕ್ತ ಕಲಾವಿದರನ್ನು ಆರಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದರು ಕಾರಂತರು. ಗಿರೀಶ್ ಕಾರ್ನಾಡ್, ಹೆಚ್.ಜಿ. ಸೋಮಶೇಖರರಾವ್ ಅವರನ್ನು ಒಳಗೊಂಡಂತೆ ಅಂದಿನ ರಂಗಭೂಮಿಯ ಘಟಾನುಘಟಿಗಳೆಲ್ಲಾ ಅಲ್ಲಿ ನೆರೆದಿದ್ದರು. ನಾನು ಒಂದು ಬದಿಗೆ ಕೂತು ಬೆರಗಿನಿಂದ ಎಲ್ಲವನ್ನೂ ಗಮನಿಸುತ್ತಿದ್ದೆ. ಅಕಸ್ಮಾತ್ ಒಮ್ಮೆ ಕಾರಂತರ ದೃಷ್ಟಿ ನನ್ನ ಮೇಲೆ ಹರಿಯಿತು. ನಾನು ಸಣ್ಣಗೆ ನಕ್ಕು ಅಲ್ಲಿಂದಲೇ ನಮಸ್ಕರಿಸಿದೆ.

ಕಾರಂತರು ತಮ್ಮ ಜೊತೆಯಲ್ಲಿದ್ದವರಿಗೆ ನನ್ನನ್ನು ತೋರಿಸಿ ಏನೋ ಸೂಚನೆಗಳನ್ನು ನೀಡಿದರು. ಆ ವ್ಯಕ್ತಿ ನನ್ನ ಬಳಿ ಬಂದು, ‘ನಾಳೆಯಿಂದ ಬನ್ನಿ.. ಗುಂಪಿನ ದೃಶ್ಯಗಳಿವೆ.. ನೀವೂ ಅದರಲ್ಲಿ ಭಾಗವಹಿಸಬಹುದು’ ಎಂದರು. ಸರಿ ಎಂದು ತಲೆಯಾಡಿಸಿದೆ. ಮುಖ್ಯ ಪಾತ್ರವನ್ನೇನೂ ನಾನು ಆ ನಾಟಕಗಳಲ್ಲಿ ನಿರ್ವಹಿಸದಿದ್ದರೂ ನಾಟಕದ ಆಶಯಗಳು ರಂಗದ ಮೇಲೆ ಆಕಾರ ಕಟ್ಟಿಕೊಳ್ಳುವ ಪ್ರಕ್ರಿಯೆಯನ್ನು ಆಮೂಲಾಗ್ರವಾಗಿ ಗಮನಿಸಿ ಅರಿತುಕೊಳ್ಳುವ ಸುವರ್ಣಾವಕಾಶ ನನಗೆ ಅಲ್ಲಿ ಲಭ್ಯವಾಯಿತು. ಅದರಲ್ಲಿಯೂ ಕಾರಂತರು ಗುಂಪು ದೃಶ್ಯಗಳನ್ನು ಸಂಯೋಜಿಸುತ್ತಿದ್ದ ರೀತಿ, ಸಂದರ್ಭೋಚಿತವಾಗಿ ಸಂಗೀತವನ್ನು ಬಳಸಿಕೊಳ್ಳುತ್ತಾ ತಮ್ಮ ಸೊಗಸಾದ ಸ್ವರ ಸಂಯೋಜನೆ ಮೂಲಕ ಅವರು ನೀಡುತ್ತಿದ್ದ ಮಾಂತ್ರಿಕ ಸ್ಪರ್ಶ.. ಕಲಾವಿದರನ್ನು ಪಾತ್ರಕ್ಕೆ ತಕ್ಕಂತೆ ರೂಪಿಸುತ್ತಿದ್ದ ಅವರ ಕಲೆಗಾರಿಕೆ… ಎಲ್ಲವೂ ರಂಗಭೂಮಿಯ ಅಗಾಧ ಸಾಧ್ಯತೆಗಳನ್ನು ತೋರಿಸಿಕೊಡುತ್ತಾ ಹೊಸದೊಂದು ಜಗತ್ತನ್ನೇ ನನ್ನ ಮುಂದೆ ತೆರೆದಿಟ್ಟವು.

ಈ ಸಂದರ್ಭದಲ್ಲಿಯೇ ನನ್ನ ‘ಕಿರು ಬಂಡಾಯ’ದ ಪ್ರಸಂಗವನ್ನೂ ನೆನೆಸಿಕೊಳ್ಳಬೇಕು. ಅದು ವಾಸ್ತವವಾಗಿಯೇ ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಬಂಡಾಯದ ದನಿಗಳು ಸಿಡಿಯತೊಡಗಿದ್ದ ಸಮಯ. ನವೋದಯದ ರಂಗು ಕೊಂಚ ಮಂಕಾಗಿ, ನವ್ಯದ ಬೀಸು ತುಸು ತಗ್ಗಿ , ‘ಶೋಷಿತರು ಎಚ್ಚತ್ತುಕೊಳ್ಳಬೇಕು, ಪರಂಪರಾಗತವಾಗಿ ಬಂದಿರುವ ವರ್ಗ-ವರ್ಣ ಸಂಬಂಧಿ ಶೋಷಣೆಗಳಿಗೆ ಕೊನೆ ಹಾಡಬೇಕು’ ಎಂಬ ತುಡಿತ ಜಾಗೃತಗೊಳ್ಳುತ್ತಿದ್ದ ಸಮಯ.

ಈ ಸಂದರ್ಭದಲ್ಲೇ ನನಗೂ ಬಂಡೇಳಲು ಪ್ರಚೋದಿಸಿದವನು ನಮ್ಮ ವಿಭಾಗದ ವಿದ್ಯಾರ್ಥಿಯೂ ನಟನೂ ಆಗಿದ್ದ ಸತ್ಯೇಂದ್ರ. ಪರಂಪರೆಯನ್ನು ವಿರೋಧಿಸುವುದಷ್ಟೇ ಬಂಡಾಯ ಎಂಬಂತಹ ಹಸಿ ಹಸಿ ಬಾಲಿಶ ವಿಚಾರಗಳನ್ನು ತುಂಬಿಕೊಂಡಿದ್ದ ನನಗೆ, ‘ಬಾರೋ ಗೆಳೆಯಾ ಬಾ.. ಎಲ್ಲಾ ಗೋಡೆಗಳನ್ನೂ ಕೆಡವಿದಾಗಲೇ ಕ್ರಾಂತಿಯಾಗೋದು.. ಬಾ.. ಜನಿವಾರದ ಗೋಡೆ ಕಿತ್ತೆಸೆ.. ಸಂಪ್ರದಾಯದ ಗೋಡೆ ಕಿತ್ತೆಸೆ’ ಎಂದು ವೀರಾವೇಶದಿಂದ ಭಾಷಣ ಮಾಡಿ ಕ್ರಾಂತಿಯ ಪ್ರಥಮ ಕಹಳೆ ಮೊಳಗಿಸಲು ಜೊತೆಯಲ್ಲಿ ಕರೆದುಕೊಂಡು ಹೋದ. ಹಾಗೆ ನಾವು ಹೋದದ್ದು ಮೆಜೆಸ್ಟಿಕ್ ನಲ್ಲಿ ತ್ರಿವೇಣಿ ಥಿಯೇಟರ್ ನ ಪಕ್ಕದಲ್ಲಿದ್ದ ಒಂದು ಸಣ್ಣ ಕತ್ತಲ ಓಣಿಯಲ್ಲಿದ್ದ ಸುಧಾ ಬಾರ್ ಗೆ. ಹೊರಗೂ ಕತ್ತಲು ಕತ್ತಲು.. ಒಳಗೂ ಮಂದಾತಿಮಂದ ಬೆಳಕು. ಹೆದರುತ್ತಲೇ ಬಾರ್ ಒಳಗೆ ಕಾಲಿಟ್ಟ ನಾನು ಒಮ್ಮೆ ಸುತ್ತಲೂ ಕಣ್ಣು ಹಾಯಿಸಿದೆ: ಅಣ್ಣನ ಗುರುತಿನವರು ಯಾರಾದರೂ ಅಕಸ್ಮಾತ್ ಇದ್ದಾರೆಯೇ ಎಂದು ನೋಡಲು. ಆಮೇಲೆ ನಾನೇ ಸಮಾಧಾನ ಮಾಡಿಕೊಂಡೆ.. ಅಣ್ಣನ ಗುರುತಿನವರು ಎಲ್ಲಾ ಬಿಟ್ಟು ಬಾರ್ ಗೆ ಯಾಕೆ ಬರುತ್ತಾರೆ? ಎಂದು! ಸತ್ಯೇಂದ್ರ ನುರಿತ ಗಿರಾಕಿಯಂತೆ, ‘ಒಂದು ಕೆ ಎಫ್ ಬೀರ್ – ಚಿಪ್ಸ್ ಕೊಡಿ. ಊಟಕ್ಕೆ ಚಪಾತಿ – ಮಟನ್ ಮಸಾಲ ಕೊಡಿ’ ಎಂದು ಆರ್ಡರ್ ಮಾಡಿದ. ಆ ಶಬ್ದಗಳು ಕಿವಿಗೆ ಬೀಳುತ್ತಿದ್ದಂತೆ ಎದೆ ನಗಾರಿಯಾಯಿತು.

ಸಂಧ್ಯಾವಂದನೆ, ಗಾಯತ್ರಿ ಜಪ, ಅಣ್ಣ – ಅವರ ಪೂಜೆ… ಹೀಗೇ ಏನೇನೋ ಚಿತ್ರಗಳು ಮೂಡಿಬಂದು ಮನಸ್ಸು ತಲ್ಲಣಿಸತೊಡಗಿತು. ಕ್ರಾಂತಿಕಹಳೆಯ ಮೊಳಗನ್ನು ಅದುಮಿ ಹಾಕುವಂತೆ ಭಯ-ಕಾತರ-ಅಪರಾಧಿ ಪ್ರಜ್ಞೆಗಳು ನುಗ್ಗಿ ಬಂದವು. ಸತ್ಯ ಮಾತ್ರ ಸಮಾಧಾನ ಪಡಿಸುತ್ತಲೇ ಇದ್ದ: ‘ಇವೆಲ್ಲಾ ಪ್ರಾರಂಭದ ಬಿಕ್ಕುಗಳಷ್ಟೇ ಗೆಳೆಯಾ.. ಒಂದೆರಡು ಬಾರಿ ಬಂದರೆ ಸರಿಹೋಗಿ ಬಿಡುತ್ತದೆ.. ಹೆದರಬೇಡ. ಆಹಾ! ನೋಡು, ನಮ್ಮದು ಎಂಥಾ ಬ್ರಾಹ್ಮಣ ಶೂದ್ರ ಸಂಗಮ!’ ಎಂದು ಜೋರಾಗಿ ನಕ್ಕ. ನಾನೂ ಪೆಚ್ಚುಪೆಚ್ಚಾಗಿ ನಕ್ಕೆ. ಅಷ್ಟರಲ್ಲೇ ಸರ್ವರ್ ಬೀರ್ ತಂದಿಟ್ಟು ಗ್ಲಾಸ್ ಗಳಿಗೆ ಸುರುವಿಕೊಟ್ಟ. ‘ಚಿಯರ್ಸ್’ ಹೇಳಿದ ಸತ್ಯನ ಕಡೆಗೆ ಒಂದು ಶುಷ್ಕ ನಗೆ ಬೀರಿ ಬಿಯರ್ ಗುಟುಕರಿಸಿದರೆ ಥೂ.. ಒಗಚು ಒಗಚು ರುಚಿ… ಚೂರೂ ಹಿತವಿಲ್ಲ. ‘ಮೊದಲ ಸಿಪ್ ಹಾಗೇ ಗುರುವೇ.. don’t worry’ ಎಂದ ಸತ್ಯ ಹುಸಿ ನಗುತ್ತಲೇ ಇದ್ದ.

ತುಸು ಹೊತ್ತಿಗೇ ಊಟದ ಆಗಮನ. ಚಪಾತಿಯೊಂದಿಗೆ ಒಂದು ತುಂಡು ಮಟನ್ ನೆಂಚಿಕೊಂಡು ಬಾಯಿಗೆ ಹಾಕಿಕೊಂಡು ಜಗಿಯುತ್ತಿದ್ದಂತೆ ಯಾಕೋ ವಾಕರಿಕೆ ಬಂದಂತಾಯಿತು. ಇದನ್ನು ತಿನ್ನುವುದು ನನ್ನಿಂದಾಗದು ಎಂದು ಖಾತ್ರಿಯಾಗಿಬಿಟ್ಟಿತು. ಸತ್ಯನ ಕ್ರಾಂತಿಪಾಠಗಳೆಲ್ಲಾ ಗಾಳಿಗೆ ತೂರಿಹೋಗಿ ಶರಣಾಗತನಾಗಿಬಿಟ್ಟೆ. ‘ದಮ್ಮಯ್ಯ ಸತ್ಯ, ಬಲವಂತ ಮಾಡಬೇಡ.. ಇದು ನನಗೆ ರೂಢಿಯಿಲ್ಲದ್ದು.. ನನಗಾಗೊಲ್ಲ.. ಕಷ್ಟಪಟ್ಟು ಬಿಯರ್ ಕುಡಿಯುತ್ತೇನೆ’ ಎಂದು ಕರುಣಾಜನಕ ದನಿಯಲ್ಲಿ ಹೇಳಿದೆ. ‘ಪರವಾಗಿಲ್ಲ ಬಿಡು.. ನಾನಿದೀನಲ್ಲಾ’ ಎಂದು ನಗುತ್ತಾ ಸತ್ಯ ನನ್ನ ಪಾಲಿನದನ್ನೂ ತಾನೇ ಮುಗಿಸಿದ. ನಾನು ಒಣ ಚಪಾತಿ ತಿಂದು ಒಂದು ಲೋಟ ಬೀರ್ ಕುಡಿದು ಕ್ರಾಂತಿಯ ಪ್ರಥಮ ಅಧ್ಯಾಯಕ್ಕೆ ಮಂಗಳ ಹಾಡಿದೆ.

ಸುಧಾ ಬಾರ್ ನಿಂದ ಹೊರಟವನೇ ರೈಲ್ವೇ ಸ್ಟೇಷನ್ ಬಳಿಯ ಬಸ್ ನಿಲ್ದಾಣಕ್ಕೆ ಬಂದು ಜಯನಗರದ ಬಸ್ ಹತ್ತಿದೆ. ಬಿಯರ್ ತುಂಬಾ ವಾಸನಾದ್ರವ್ಯ ಎಂದು ಕೇಳಿದ್ದೆನಾಗಿ ಕಿಟಕಿ ಪಕ್ಕದ ಜಾಗ ಹಿಡಿದು ಆ ಕಡೆಯೇ ಮುಖ ಮಾಡಿ ಕುಳಿತುಬಿಟ್ಟೆ. ತಲೆ ತಿರುಗಿದಂತೆ, ಎಲ್ಲರೂ ನನ್ನನ್ನೇ ನೋಡಿ ನಗುತ್ತಿರುವಂತೆ ಭ್ರಮೆ… ಭದ್ರವಾಗಿ ಕಣ್ಣುಮುಚ್ಚಿ ಕೂತುಬಿಟ್ಟೆ. ಮಂಪರು ನಿದ್ದೆ ಕವಿದು ಮತ್ತೆ ಎಚ್ಚರಾದಾಗ ಬಸ್ ಜಯನಗರ ನಾಲ್ಕನೇ ಬ್ಲಾಕ್ ನಿಲ್ದಾಣದಲ್ಲಿ ನಿಂತಿತ್ತು.

ಆ ಬಸ್ ನಮ್ಮ ಮನೆಯಿದ್ದ ಟಿ ಬ್ಲಾಕ್ ಗೆ ಹೋಗುತ್ತಿತ್ತಾದರೂ ನನ್ನ ಬಸ್ ಪಾಸ್ ಇದ್ದದ್ದು ನಾಲ್ಕನೇ ಬ್ಲಾಕ್ ವರೆಗೆ ಮಾತ್ರ. ಮುಂದಿನ ಪ್ರಯಾಣಕ್ಕೆ 10ಪೈಸೆಯ ಟಿಕೆಟ್ ಕೊಳ್ಳಬೇಕಿತ್ತು. ಜೇಬಿಗೆ ಕೈಹಾಕಿ ಚಿಲ್ಲರೆ ತೆಗೆಯುವಷ್ಟರಲ್ಲಿ ಹಿಂದಿನ ಬಾಗಿಲಿನಿಂದ ಅಣ್ಣ ಬಸ್ ಹತ್ತುತ್ತಿರುವುದು ಕಾಣಿಸಿತು! ಅಯ್ಯೋ ದೇವಾ! ನನ್ನ ಬಾಯಿ ವಾಸನೆ ಬಡಿದು ನಾನು ತೊದಲು ನುಡಿದು ಅವರಿಗೆ ಅನುಮಾನ ಬಂದುಬಿಟ್ಟರೆ! ದಡಬಡಾಯಿಸಿಕೊಂಡು ಮುಂದಿನ ಬಾಗಿಲಿನಿಂದ ಕೆಳಗಿಳಿಯತೊಡಗಿದೆ. ನಾನು ಇಳಿಯುವುದನ್ನು ನೋಡಿದ ಅಣ್ಣ ‘ಪ್ರಭೂ.. ಪ್ರಭೂ..’ ಎಂದು ಕೂಗುತ್ತಿದ್ದರೂ ನಾನು ಕೇಳಿಸದವನಂತೆ ಕೆಳಗಿಳಿದು ಸರಸರ ನಡೆದುಬಿಟ್ಟೆ. ನಂತರ ಎರಡು ಮೂರು ಪ್ಯಾಕೆಟ್ ಸ್ಟೂಡೆಂಟ್ಸ್ ಸುಗಂಧಿ ಅಡಿಕೆ ಪುಡಿ ತಿಂದು ಬಾಯಿವಾಸನೆ ಹೋಗಲಾಡಿಸಿಕೊಳ್ಳುವ ಯತ್ನ ಮಾಡಿ, ರಾತ್ರಿ ತಡವಾಗಿ ಮನೆ ಸೇರಿ, ‘ನೋಟ್ಸ್ ತರಲು ಫ್ರೆಂಡ್ ಮನೆಗೆ ಹೋಗಿದ್ದೆ’ ಎಂದೊಂದು ಸರಳ ಸುಳ್ಳೊಗೆದೆ. ಪುಣ್ಯಕ್ಕೆ ಯಾರೂ ಹೆಚ್ಚು ಪ್ರಶ್ನೆ ಕೇಳಲಿಲ್ಲ.. ನನಗೂ ಹೆಚ್ಚು ಮಾತಾಡುವ ಅಗತ್ಯ ಬೀಳಲಿಲ್ಲ!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

23 September, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading