ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು.
ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
ಅಂಕಣ 164
2016-17 ರ ಸಂಧಿಕಾಲದಲ್ಲೇ ನಾನು ಮುಖ್ಯಪಾತ್ರವೊಂದರಲ್ಲಿ ಅಭಿನಯಿಸಿದ ಚಿತ್ರವೆಂದರೆ “ವೈಷ್ಣವಿ”. ಹೆಸರಾಂತ ಕಲಾನಿರ್ದೇಶಕ—ನಿರ್ದೇಶಕ ಜಿ.ಮೂರ್ತಿ ಅವರು ಈ ಕಲಾತ್ಮಕ ಚಿತ್ರದ ನಿರ್ದೇಶಕರು. ಮೂರ್ತಿಯವರು ಹಿಂದೆ ಜಿ.ವಿ.ಅಯ್ಯರ್ ಅವರ ಚಿತ್ರಗಳಲ್ಲಿ ಕಲಾವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ನನಗೆ ಪರಿಚಿತರಾಗಿದ್ದವರು. ನಾಗರಾಜ್ ಸಂಗಾಪುರ ಅವರ ನಿರ್ಮಾಣದ ಈ ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದವರು ಅಮೇರಿಕಾ ನಿವಾಸಿ ಕಲಾವಿದೆ ಯಾನಾ ರಾಜ್ ಅವರು(ಯಮುನಾ). ಅವರ ತಂದೆಯ ಪಾತ್ರವನ್ನು ನಾನು ನಿರ್ವಹಿಸಿದ್ದೆ. ತಾಯಿಯ ಪಾತ್ರದಲ್ಲಿ ವಿನಯಾ ಪ್ರಸಾದ್ ಹಾಗೂ ಇತರ ಮುಖ್ಯ ಪಾತ್ರಗಳಲ್ಲಿ ಶ್ರೀನಗರ ಕಿಟ್ಟಿ,ರಮೇಶ್ ಭಟ್ , ರಾಮೇಶ್ವರಿ ವರ್ಮ ಮುಂತಾದವರಿದ್ದರು. ಉಡುಪಿಯ ಸಮೀಪದ ಹಳ್ಳಿಯೊಂದರಲ್ಲಿ ನಮ್ಮ ಭಾಗದ ಚಿತ್ರೀಕರಣ ನಡೆದದ್ದು. ವೃದ್ಧರ ಸಮಸ್ಯೆಗಳು, ಹೆಣ್ಣು ಸಂತಾನವನ್ನು ತಿರಸ್ಕಾರದಿಂದ ನೋಡುವ ರೋಗಗ್ರಸ್ತ ಮನಸ್ಸುಗಳು, ಇಂಥ ಅವಜ್ಞೆಗೆ ತುತ್ತಾದ ಹೆಣ್ಣುಮಗಳು ಅನುಭವಿಸುವ ಮಾನಸಿಕ ತಲ್ಲಣಗಳು…ಇವೆಲ್ಲವೂ ಚಿತ್ರದ ಕಥಾಸಂವಿಧಾನದಲ್ಲಿ ಚರ್ಚಿತವಾಗಿದ್ದ ಸಂಗತಿಗಳು. ನನ್ನದು ‘ಒಬ್ಬ ಕೆಟ್ಟ ತಂದೆಯ ಒಳ್ಳೆಯ ಪಾತ್ರ’! ಕಥಾನಾಯಕಿಯನ್ನು ಬಾಲ್ಯದಲ್ಲಿ ಹಿಂಸಿಸಿ ನಿಂದಿಸಿ ಅವಳ ಮನೋಸ್ಥೈರ್ಯವೇ ಕುಸಿಯುವಂತೆ ಮಾಡುವ ದುಷ್ಟ ಅಪ್ಪನಾದ ನನ್ನ ಪಾತ್ರವನ್ನು ಸಾಕಷ್ಟು ವಿಜೃಂಭಣೆಯಿಂದಲೇ ಮೂರ್ತಿಯವರು ಕಟ್ಟಿಕೊಟ್ಟಿದ್ದರು! ವಿನಯಾ ಪ್ರಸಾದ್ , ರಮೇಶ್ ಭಟ್ ಅವರಂತಹ ನುರಿತ ಕಲಾವಿದರೊಂದಿಗೆ ಅಭಿನಯಿಸುವುದೇ ಒಂದು ಖುಷಿಯ ಸಂಗತಿ. ದುಷ್ಟ ಅಪ್ಪನ ಪಾತ್ರದಲ್ಲಿ ವಿಜೃಂಭಿಸಿ ಪ್ರೇಕ್ಷಕರಿಂದ ಚೆನ್ನಾಗಿ ‘ಬೈಸಿ’ಕೊಂಡು ಖುಷಿಪಡುವ ಸರದಿ ನನ್ನದಾಗಿತ್ತು! ಪಿ ಕೆ ಎಚ್ ದಾಸ್ ಅವರ ಸೊಗಸಾದ ಛಾಯಾಗ್ರಹಣ, ಪ್ರವೀಣ್ ಗೋಡಖಿಂಡಿಯವರ ಹಿತವಾದ ಸಂಗೀತ ಚಿತ್ರದ ಮತ್ತೆರಡು ಧನಾತ್ಮಕ ಅಂಶಗಳಾಗಿದ್ದವು. ಒಟ್ಟಾರೆ ಒಂದು ಅರ್ಥಪೂರ್ಣ ಚಿತ್ರವನ್ನು ಜಿ.ಮೂರ್ತಿಯವರು ಅಚ್ಚುಕಟ್ಟಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದರು. ಬಹುತೇಕ ಯಶಸ್ವಿಯಾಗಿದ್ದರು ಕೂಡಾ. ಕೆಲವೆಡೆಗಳಲ್ಲಿ ಸಾಕ್ಷ್ಯಚಿತ್ರದಂತೆ ಭಾಸವಾಗಿಬಿಡುವ ಅಪಾಯದಿಂದ ಚಿತ್ರವನ್ನು ಪಾರುಗಾಣಿಸಿದ್ದರೆ ಚಿತ್ರ ಇನ್ನಷ್ಟು ಪ್ರಭಾವಿಯಾಗಿರುತ್ತಿತ್ತೇನೋ.ಯಾನಾ ರಾಜ್ ಅವರ ಪಾತ್ರನಿರ್ವಹಣೆಯಲ್ಲೂ ಪ್ರಬುದ್ಧತೆ ಎದ್ದುಕಾಣುತ್ತಿತ್ತು. ಆ ವರ್ಷದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿಯೂ ಚಿತ್ರ ಪ್ರದರ್ಶನಗೊಂಡಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಮುಂದಿನ ಒಂದೆರಡು ಅನಿರೀಕ್ಷಿತ ಬೆಳವಣಿಗೆಗಳಿಗೆ ನಾಂದಿಯಾಗುವಂತೆ ಈ ಚಿತ್ರ ನನ್ನನ್ನೂ ಮೂರ್ತಿಯವರನ್ನೂ ಹತ್ತಿರ ತಂದಿತೆನ್ನುವುದಂತೂ ಸತ್ಯ!
ಈ ವೇಳೆಯಲ್ಲಿಯೇ ಪ್ರಸಿದ್ಧ ರಂಗನಿರ್ದೇಶಕ ಬಸವಲಿಂಗಯ್ಯ ಅವರು ಕರೆ ಮಾಡಿ ” ಬೆಂಗಳೂರು nsd ಕೇಂದ್ರದ ವಿದ್ಯಾರ್ಥಿಗಳಿಗೆ ಒಂದು ಅಭಿನಯ ತರಬೇತಿ ಶಿಬಿರ ನಡೆಸಿಕೊಡುವಿರಾ?” ಎಂದು ಕೇಳಿದರು. ಆಗ ಬಸವಲಿಂಗಯ್ಯನವರೇ ಬೆಂಗಳೂರು nsd ಕೇಂದ್ರದ ನಿರ್ದೇಶಕರಾಗಿದ್ದರು. ಬೆಂಗಳೂರಿನಲ್ಲಿ nsd ಯ ಪ್ರಾದೇಶಿಕ ಸಂಪನ್ಮೂಲ ಕೇಂದ್ರ 1994 ರಲ್ಲಿ ಆರಂಭವಾಗಿದ್ದರೂ ರಂಗಶಿಕ್ಷಣ ವ್ಯವಸ್ಥಿತವಾಗಿ ಆರಂಭವಾದದ್ದು 2014 ರಲ್ಲಿ. ಪ್ರಾರಂಭದ ದಿನಗಳಲ್ಲಿ ಮತ್ತೋರ್ವ ಸೃಜನಶೀಲ ನಿರ್ದೇಶಕ ಸುರೇಶ ಆನಗಳ್ಳಿಯವರು ಒಂದೆರಡು ಕಾರ್ಯಕ್ರಮಗಳ ನಿರೂಪಣೆಗೆ ನನ್ನನ್ನು ಆಹ್ವಾನಿಸಿದ್ದು ಬಿಟ್ಟರೆ nsd ಕೇಂದ್ರಕ್ಕಾಗಲೀ ನಾಟಕ ಅಕ್ಯಾಡಮಿಗಾಗಲೀ ನನ್ನ ಸೇವೆಯನ್ನು ಬಳಸಿಕೊಳ್ಳಬಹುದೆಂಬ ಯೋಚನೆಯೇ ಬಂದಿಲ್ಲದಿದ್ದುದಕ್ಕೆ ಕಾರಣಗಳು ನನಗಂತೂ ತಿಳಿದಿಲ್ಲ..ಈಗಲೂ ಅಂಥದೇ ಪರಿಸ್ಥಿತಿ ಮುಂದುವರಿದಿದ್ದರೂ ಆ ‘ಕಾರಣ’ಗಳನ್ನು ಕೆದಕುವ ಆಸಕ್ತಿಯಾಗಲೀ ಉತ್ಸಾಹವಾಗಲೀ ನನ್ನಲ್ಲಿಯೂ ಉಳಿದಿಲ್ಲವೆನ್ನಿ. ಬಂದ ಕೆಲಸವನ್ನು ನಿರ್ವಂಚನೆಯಿಂದ, ಪರಮೋತ್ಸಾಹದಿಂದ ನಿರ್ವಹಿಸಲು ಬಲ್ಲೆನೇ ಹೊರತು ಯಾವುದಕ್ಕಾಗಿಯೂ ಹಪಹಪಿಸುವ ಮನೋಧರ್ಮ ನನ್ನದಲ್ಲ. ಹಾಗಾಗಿಯೇ ಬಸವಲಿಂಗಯ್ಯನವರು ಶಿಬಿರ ನಡೆಸಿಕೊಡಲು ಕೇಳಿದಾಗ ನನಗೆ ಖುಷಿಯಷ್ಟೇ—ಅಥವಾ ಕೊಂಚ ಹೆಚ್ಚೇ ಆಶ್ಚರ್ಯವಾಯಿತು.
ಬಸವಲಿಂಗಯ್ಯನವರು ಹಿಂದೆ ‘ಕಾನೂರು ಹೆಗ್ಗಡಿತಿ’ ಚಿತ್ರಕ್ಕೆ ಕೊರಿಯೋಗ್ರಾಫ್ ಮಾಡಲು ಬಂದ ಸಮಯದಲ್ಲಿ ಹೆಚ್ಚು ಹತ್ತಿರವಾಗಿದ್ದರು. ಅದಕ್ಕೂ ಹಿಂದೊಮ್ಮೆ nmkrv ಕಾಲೇಜ್ ನಲ್ಲಿ ನಾಟಕೋತ್ಸವ ನಡೆದಾಗ ನಾನೂ ಬಸವಲಿಂಗಯ್ಯನವರೂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದೆವು. ಆ ಸಂದರ್ಭದಲ್ಲಿ ಅವರು ಮಾತನಾಡುತ್ತಾ ಹೇಳಿದ ಕೆಲ ಮಾತುಗಳು ಯಾವಾಗಲೂ ನನ್ನ ಕಿವಿಗಳಲ್ಲಿ ಅನುರಣಿಸುತ್ತಿರುತ್ತವೆ! ಹೀಗೆ ಹೇಳಿದ್ದರು ಬಸವಲಿಂಗಯ್ಯ: “ನಾನು nsd ಗೆ ಹೋಗಲು ಪ್ರೇರಕವಾದಂತಹ ಸಂದರ್ಭವನ್ನು ನೆನಪಿಸಿಕೊಳ್ಳಲೇ ಬೇಕು. ಒಮ್ಮೆ ಊರಿನಿಂದ ಬೆಂಗಳೂರಿಗೆ ಬಂದಿದ್ದೆ. ಅವತ್ತು ರವೀಂದ್ರಕಲಾಕ್ಷೇತ್ರದಲ್ಲಿ ಅಶೋಕ ಬಾದರದಿನ್ನಿ ನಿರ್ದೇಶನದ, ಶ್ರೀನಿವಾಸ ಪ್ರಭು ಅಭಿನಯದ ಹ್ಯಾಮ್ಲೆಟ್ ನಾಟಕ ಪ್ರದರ್ಶನವಿತ್ತು. ಆ ನಾಟಕದ ಬಗ್ಗೆ ತುಂಬಾ ಕೇಳಿದ್ದೆನಾದ್ದರಿಂದ ತಪ್ಪಿಸಿಕೊಳ್ಳಲೇಬಾರದೆಂದು ತೀರ್ಮಾನಿಸಿ ನಾಟಕ ನೋಡಲು ಹೋದೆ. ಅಬ್ಬಾ! ಅದೇನು ನಾಟಕ ಅದು! ನಾಟಕ ನೋಡಿದವನೇ ತೀರ್ಮಾನ ಮಾಡಿಬಿಟ್ಟೆ—ನಾನು ದೆಹಲಿಗೆ ಹೋಗಲೇಬೇಕು nsd ಸೇರಲೇಬೇಕು ಎಂದು! ಅದಾದ ಕೆಲ ದಿನಗಳಲ್ಲಿಯೇ ನಾನು ದೆಹಲಿಗೆ ರೈಲು ಹತ್ತಿಯೇಬಿಟ್ಟೆ!”
ಯಾವ ಹಮ್ಮು ಬಿಮ್ಮುಗಳಿಲ್ಲದೆ ಮುಕ್ತವಾಗಿ ಪ್ರಾಂಜಲ ಮನಸ್ಸಿನಿಂದ ಬಸವಲಿಂಗಯ್ಯನವರು ಹಾಗೆ ನುಡಿಯುತ್ತಿದ್ದರೆ ನಾನು ಕೊಂಚ ಹೆಮ್ಮೆಯ ಜತೆಗೆ ಒಂದು ಬಗೆಯ ಧನ್ಯತಾಭಾವವನ್ನು ಅನುಭವಿಸುತ್ತಿದ್ದೆ. ಇಂಥ ಮಾತುಗಳೇ ಅಲ್ಲವೇ ನಮ್ಮ ಬದುಕಿಗೊಂದು ಅರ್ಥವನ್ನೂ ಘನತೆಯನ್ನೂ ನೀಡುವಂಥವು! ಅದೇ ಅಭಿಮಾನದಿಂದ ಈಗ ಬಸವಲಿಂಗಯ್ಯನವರು ಶಿಬಿರ ನಡೆಸಿಕೊಡಲು ಕೇಳುತ್ತಿದ್ದಾರೆ. ಸಂತೋಷವಾಗಿ ಒಪ್ಪಿಕೊಂಡೆ. ಜೊತೆಗೇ ಒಂದು ಸಲಹೆಯನ್ನೂ ನೀಡಿದೆ: “ಮಗಳು ರಾಧಿಕಾ ಭರತನಾಟ್ಯ ವಿದುಷಿ. ನಾವಿಬ್ಬರೂ ಸೇರಿ ಭರತನ ನಾಟ್ಯಶಾಸ್ತ್ರ ಆಧಾರಿತ ಕೆಲ ಅಭಿನಯ ಶಿಬಿರಗಳನ್ನು ಈಗಾಗಲೇ ಯಶಸ್ವಿಯಾಗಿ ನಡೆಸಿದ್ದೇವೆ. ನಿಮ್ಮ ಅಭ್ಯಂತರವಿಲ್ಲದಿದ್ದರೆ ಇಲ್ಲಿಯೂ ವಿದ್ಯಾರ್ಥಿಗಳಿಗೆ ಅದೇ ಮಾದರಿಯ ಶಿಬಿರವನ್ನು ನಡೆಸುತ್ತೇವೆ”.
ನನ್ನ ಸಲಹೆಯನ್ನು ಬಸವಲಿಂಗಯ್ಯನವರು ಸಂತೋಷದಿಂದ ಸ್ವಾಗತಿಸಿದರು. ರಾಧಿಕಾ ಕೂಡಾ,’ಲಂಡನ್ ನ ಹೊಸ ಬದುಕಿಗೆ ಈ ಶಿಬಿರ ಮುಗಿಸಿಕೊಂಡು ಹೊರಡುತ್ತೇನೆ’ ಎಂದು ಸಂಭ್ರಮಿಸಿದಳು.ಒಂದೆರಡು ದಿನಗಳಲ್ಲೇ ನಮ್ಮ ಅಭಿನಯ ತರಬೇತಿ ಶಿಬಿರ ಆರಂಭವಾಯಿತು. ಸುಮಾರು ಇಪ್ಪತ್ತೈದು ವಿದ್ಯಾರ್ಥಿಗಳಿದ್ದ ತರಗತಿ ಅದು. ತುಂಬು ಉತ್ಸಾಹ-ತನ್ಮಯತೆಗಳಿಂದ ಶಿಬಿರದ ಚಟುವಟಿಕೆಗಳಲ್ಲಿ ಎಲ್ಲರೂ ಭಾಗವಹಿಸುತ್ತಿದ್ದರು. ಭರತನಾಟ್ಯದ ಭಾವ ಭಂಗಿಗಳನ್ನು ನಾಟ್ಯಶಾಸ್ರ್ತ ಪ್ರಣೀತ ಅಭಿನಯ ಸಿದ್ಧಾಂತಗಳೊಂದಿಗೆ ಸಮೀಕರಿಸಿಕೊಂಡು ಆಧುನಿಕ ಕಾಲಮಾನಕ್ಕೆ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಒಂದಷ್ಟು ಪ್ರಯೋಗಗಳನ್ನು ನಾವು ಸಿದ್ಧಪಡಿಸಿಟ್ಟುಕೊಂಡಿದ್ದೆವು. ಶಿಬಿರ ಸುಗಮವಾಗಿ ಸಾಗುತ್ತಿರುವಾಗಲೇ ಬಸವಲಿಂಗಯ್ಯನವರು ಮತ್ತೊಂದು ಸಲಹೆಯನ್ನು ಮುಂದಿಟ್ಟರು: ” ಪ್ರಭುಗಳೇ, ಈಗಾಗಲೇ ಸಂಸರನ್ನು ಕುರಿತ ನಿಮ್ಮ ಏಕವ್ಯಕ್ತಿ ರಂಗಪ್ರಯೋಗ ಸಾಕಷ್ಟು ಸಲ ಪ್ರದರ್ಶನಗೊಂಡಿದೆ. ನಮ್ಮಲ್ಲಿಯೂ ಯಾಕೆ ಎರಡು ಪ್ರದರ್ಶನ ನೀಡಬಾರದು? ಒಂದು ಪ್ರದರ್ಶನ ಕೇವಲ ಶಾಲೆಯ ವಿದ್ಯಾರ್ಥಿಗಳಿಗೆ ಆಗಲಿ; ಮತ್ತೊಂದು ಪ್ರದರ್ಶನ ಸಾರ್ವಜನಿಕರಿಗೆ ಆಗಲಿ…ಏನನ್ನುತ್ತೀರಿ?”.
“ಅನ್ನುವುದೇನಿದೆ ಸರ್? ಸಂತೋಷದಿಂದ ಮಾಡುತ್ತೇನೆ” ಎಂದೆ ನಾನು. ಶಿಬಿರದ ತಯಾರಿಯ ಜೊತೆಗೆ ನನ್ನ ನಾಟಕದ ತಾಲೀಮೂ ಆರಂಭವಾಯಿತು.
15 ದಿನಗಳ ಅವಧಿಯ ತರಬೇತಿ ಶಿಬಿರ ಯಶಸ್ವಿಯಾಗಿ ಮುಕ್ತಾಯವಾಯಿತು. ಅದರ ಬೆನ್ನಿಗೇ ‘ಸಾಮಿಯ ಸ್ವಗತ’ ನಾಟಕದ ಎರಡು ಪ್ರದರ್ಶನಗಳು. ಸಾರ್ವಜನಿಕರಿಗಾಗಿ ಇದ್ದ ಪ್ರದರ್ಶನಕ್ಕೆ ನಾನು ನನ್ನ ಹಲವಾರು ಮಿತ್ರರಿಗೆ whatsapp ನಲ್ಲಿ ಆಹ್ವಾನವನ್ನು ಕಳಿಸಿದ್ದೆ. ಕಲಾಗ್ರಾಮದ ಆವರಣದಲ್ಲಿರುವ nsd ಕೇಂದ್ರದ ರಂಗಮಂದಿರ ನನ್ನ ‘ಏಕವ್ಯಕ್ತಿ ಪ್ರದರ್ಶನ’ಕ್ಕೆ ಹೇಳಿ ಮಾಡಿಸಿದಂತಿತ್ತು. ಕಪ್ಪು ಪರದೆಗಳಿಂದ ಸುತ್ತುವರಿಯಲ್ಪಟ್ಟಿದ್ದ ಇಡಿಯ ವಾತಾವರಣವೇ ಸಂಸರ ವಿಕ್ಷಿಪ್ತ ಮನಸ್ಥಿತಿಗೆ ಕನ್ನಡಿ ಹಿಡಿಯುವಂತಿತ್ತು. ಎರಡೂ ಪ್ರದರ್ಶನಗಳು ತುಂಬಾ ಚೆನ್ನಾಗಿ ಆಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದುದಲ್ಲದೆ ನನಗೂ ತೃಪ್ತಿಯನ್ನು ನೀಡಿದವು. ಎರಡನೇ ಪ್ರದರ್ಶನದ ನಂತರ ಒಂದು ಚಿಕ್ಕ ಸಂವಾದವೂ ನಡೆದು ಪ್ರೇಕ್ಷಕರು ಹಲವಾರು ಪ್ರಶ್ನೆಗಳನ್ನು ಕೇಳಿ ಅರ್ಥಪೂರ್ಣ ಚರ್ಚೆಯಾಗುವಂತೆ ಮಾಡಿದರು. ಒಬ್ಬ ವ್ಯಕ್ತಿ ಮೇಲುಗಡೆಯ ಸಾಲಿನಲ್ಲಿ ಕುಳಿತು ತದೇಕಚಿತ್ತರಾಗಿ ಗಮನಿಸುತ್ತಿದ್ದುದು ನಾಟಕದ ಆರಂಭದಿಂದಲೇ ನನ್ನ ಅರಿವಿಗೆ ಬಂದು, ‘ಯಾವುದೋ ಪರಿಚಯದ ಮುಖದಂತಿದೆಯೇ’ ಅನ್ನಿಸಿದರೂ ಮಂದಬೆಳಕಿನಲ್ಲಿ ಖಚಿತವಾಗಿರಲಿಲ್ಲ. ಈಗ ನೋಡುತ್ತೇನೆ—ಅದು ಬೇರೆ ಯಾರೂ ಅಲ್ಲ, ನಮ್ಮ ವೈಷ್ಣವಿ ಚಿತ್ರ ನಿರ್ದೇಶಕ ಜಿ.ಮೂರ್ತಿಯವರು! ಸಪತ್ನೀಕರಾಗಿ ಬಂದು ನಾಟಕ ನೋಡಿ ಸಂವಾದವನ್ನೂ ಗಮನಿಸುತ್ತಾ ಕುಳಿತಿದ್ದಾರೆ! ಎಲ್ಲರೂ ಹೊರಡುವ ತನಕ ಹಾಗೇ ಕುಳಿತಿದ್ದ ಮೂರ್ತಿಯವರು ನಂತರ ಎದ್ದು ಬಂದು ನನ್ನನ್ನು ಅಪ್ಪಿಕೊಂಡು ಅಭಿನಂದಿಸಿದರು. ‘ಈಗ ಹೆಚ್ಚು ಮಾತಾಡುವ ಸ್ಥಿತಿಯಲ್ಲಿಲ್ಲ ನಾನು..ತಲೆಯ ತುಂಬಾ ಸಂಸರೇ ತುಂಬಿಕೊಂಡಿದ್ದಾರೆ..ನಾಳೆ ಫೋನ್ ಮಾಡುತ್ತೇನೆ’ ಎಂದಷ್ಟೇ ಹೇಳಿ ಹೊರಟುಹೋದರು. ನಾಟಕ ಪರಿಣಾಮಕಾರಿಯಾಗಿ ಮೂಡಿ ಬಂದಿತ್ತೆನ್ನುವುದಕ್ಕೆ ಮತ್ತೊಂದು ಸಾಕ್ಷಿ ದೊರೆತಂತಾಯಿತು!
ಮರುದಿನವೇ ಕರೆ ಮಾಡಿದ ಮೂರ್ತಿಯವರು “ತುಂಬಾ ಮುಖ್ಯವಾದ ವಿಚಾರದ ಬಗ್ಗೆ ಚರ್ಚೆ ಮಾಡಬೇಕಿದೆ, ಈಗ ಕೊಂಚ ಬಿಸಿ಼ಯಾಗಿದ್ದೇನೆ..ಮುಂದಿನ ವಾರ ಬರುತ್ತೇನೆ” ಎಂದರು. ಇನ್ನು ನಾಲ್ಕು ದಿನಗಳಿಗೆ ರಾಧಿಕೆ ಲಂಡನ್ ಗೆ ಹೊರಡುತ್ತಿದ್ದುದರಿಂದ ನನಗೂ ಅವರು ಹಾಗೆ ಹೇಳಿದ್ದು ಅನುಕೂಲಕರವಾಗಿಯೇ ಇತ್ತು. ‘ಆಗಲಿ ಮೂರ್ತಿ ಸರ್’ ಎಂದೆ.
ರಾಧಿಕಾ ಬಲು ಹುರುಪಿನಿಂದ ಲಂಡನ್ ಗೆ ಹೊರಡಲು ಸಿದ್ಧತೆ ಮಾಡಿಕೊಳ್ಳತೊಡಗಿದಳು. ಅಲ್ಲಿ ಯಾರದೋ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿ ಉಳಿದುಕೊಳ್ಳಲು ಆನ್ ಲೈನ್ ನಲ್ಲೇ ಒಪ್ಪಂದ ಮಾಡಿಕೊಂಡಳು! ಹೊಸ ದೇಶ, ಹೊಸ ಜನ, ಕೈಯಲ್ಲಿ ನಿಗದಿತ ಸಂಬಳದ ಕೆಲಸವಿಲ್ಲ…ಹೇಗೆ ಪೂರೈಸುತ್ತಾಳೋ ಎಂದು ನಾನೂ ರಂಜನಿಯೂ ಆತಂಕ ಪಟ್ಟುಕೊಳ್ಳುತ್ತಿದ್ದರೆ ಅವಳು ಮಾತ್ರ ಯಾವ ಚಿಂತೆಯೂ ಇಲ್ಲದೆ ಹೊರಡುವ ದಿನಕ್ಕಾಗಿ ಕಾತರಿಸುತ್ತಾ ಸಂಭ್ರಮಿಸುತ್ತಿದ್ದಳು! ತಲೆ ತಲೆಮಾರುಗಳ ನಡುವೆ ಆಗಿರುವ ವ್ಯತ್ಯಾಸಗಳನ್ನೂ ಬೆಳವಣಿಗೆಗಳನ್ನೂ ಅಗಾಧ ಮಾರ್ಪಾಟುಗಳನ್ನೂ ಗಮನಿಸುತ್ತಲೇ ಬಂದಿದ್ದ ನಾವು ಒಂದು ರೀತಿಯಲ್ಲಿ ಮೂಕ ಪ್ರೇಕ್ಷಕರಾಗಿದ್ದೆವು! ಈ ಮಟ್ಟಿನ ಧೈರ್ಯ, ಸವಾಲುಗಳಿಗೆ ಎದೆಯೊಡ್ಡುವ ತಾಕತ್ತು, ಬದುಕನ್ನು ಬೇರೆ ರೀತಿಯಾಗಿಯೇ—ಕೊಂಚ ನಿರ್ಭಾವುಕವಾಗಿ ಅಥವಾ ಹೆಚ್ಚು ತಾರ್ಕಿಕವಾಗಿ ಪರಿಭಾವಿಸುವ ಒಂದು ಸಮಚಿತ್ತ…ಇತ್ತೀಚಿನ ಪೀಳಿಗೆಗಳಿಗೆ ಬಂದಿರುವ ಬಳುವಳಿ!
ಅಂತೂ ಇಂತೂ ಮಗಳನ್ನು ದೂರದೇಶಕ್ಕೆ ಕಳಿಸಿಕೊಡುವ ದಿನ ಬಂದೇ ಬಿಟ್ಟಿತು. ಈ ಬಾರಿಯೋ ಹೆಚ್ಚುಕಡಿಮೆ ಶಾಶ್ವತವೆನ್ನುವಂಥ ವೀಸಾ ಅಡಿಯಲ್ಲಿ ಹೊರಡುತ್ತಿದ್ದಾಳೆ! ಮತ್ತೆ ನೋಡುವುದು ಎಷ್ಟು ಸಮಯವಾಗುತ್ತದೋ ಏನು ಕಥೆಯೋ! ಏನೇ ಹೇಳಿ, ಹೀಗೆ ಮಕ್ಕಳನ್ನು ದೂರದೇಶಕ್ಕೆ ಕಳಿಸಿ ಅವರಿಂದ ದೂರವಿರುವುದು ಮಾತ್ರ ಬಲು ಕಷ್ಟದ ಕೆಲಸ! ರಾಧಿಕಾ ಕೂಡಾ ಭಾವಜೀವಿಯೇ ಆದರೂ ಹೊಸ ಬದುಕನ್ನು ಕಟ್ಟಿಕೊಳ್ಳುವ ಹಂಬಲದಲ್ಲಿ ಹೊರಟಿರುವುದರಿಂದ ಉತ್ಸಾಹದಿಂದ ಪುಟಿಯುತ್ತಿದ್ದಾಳೆ! ಸರಿ..ಅವಳಿಗೆ ನೀಡಬೇಕಾದ ಸಲಹೆಗಳೆಲ್ಲವನ್ನೂ ನಾಲ್ಕು ನಾಲ್ಕು ಬಾರಿ ಹೇಳಿ “ಕಷ್ಟವೆನಿಸಿದ ಮರುಕ್ಷಣ ವಿಮಾನ ಹತ್ತಿಕೊಂಡು ಮರಳಿ ಬಾ, ಹಠಕ್ಕೋಸ್ಕರ ಉಳಿದುಕೊಂಡು ಸಂಕಟಪಡಬೇಡ’ ಎಂದೆಲ್ಲಾ ಉಪದೇಶ ಮಾಡಿ ಲಂಡನ್ ವಿಮಾನ ಹತ್ತಿಸಿ ಭಾರವಾದ ಹೃದಯದೊಂದಿಗೆ ಮನೆಗೆ ಮರಳಿದೆವು.
ಮರುದಿನ ಅವಳು ಸುರಕ್ಷಿತವಾಗಿ ತಲುಪಿ ಉಳಿದುಕೊಳ್ಳಬೇಕಿದ್ದ ಮನೆಯನ್ನೂ ಸೇರಿಕೊಂಡು ಆ ಮನೆಯ ಮಾಲೀಕರ ಜತೆ ಮಾತಾಡಿದ ಮೇಲೇ ನಾವು ಕೊಂಚ ನೆಮ್ಮದಿಯಿಂದ ಉಸಿರಾಡಿದ್ದು! ಅಂತೂ ರಾಧಿಕಾಳ ಬದುಕಿನ ಮತ್ತೊಂದು ಮಹತ್ವದ ಘಟ್ಟ ಲಂಡನ್ ನಲ್ಲಿ ಹೀಗೆ ಆರಂಭವಾಯಿತು.
ಮಗಳನ್ನು ಕಳಿಸಿಕೊಟ್ಟ ಎರಡು ದಿನಕ್ಕೆ ಜಿ. ಮೂರ್ತಿಯವರು ಮೊದಲೇ ತಿಳಿಸಿದ್ದಂತೆ ಮುಖ್ಯ ವಿಷಯವೊಂದರ ಚರ್ಚೆಗಾಗಿ ಮನೆಗೆ ಬಂದರು. ಉಭಯ ಕುಶಲೋಪರಿಯ ನಂತರ ಮೂರ್ತಿಯವರು, “ಅಣ್ಣಾ, ನಿಮ್ಮ ನಾಟಕ ಅದ್ಭುತವಾಗಿತ್ತು. ಅದರ ಗುಂಗಿನಿಂದ ಹೊರಗೆ ಬರೋದಕ್ಕೇ ತುಂಬಾ ಸಮಯ ಬೇಕಾಯ್ತು ನನಗೆ. ಈಗ ನೇರ ವಿಷಯಕ್ಕೆ ಬರ್ತೀನಿ: ನಿಮ್ಮ ನಾಟಕಾನಾ ಹಾಗೇ ಅಂದರೆ ಅದಿರೋ ರೂಪದಲ್ಲೇ ಸಿನೆಮಾ ಮಾಡಿಬಿಡೋಣ! ನಾನೇ ಪ್ರೊಡ್ಯೂಸ್ ಮಾಡ್ತೀನಿ!” ಎಂದರು!
ಒ೦ದು ಕ್ಷಣ ಹೇಗೆ ಪ್ರತಿಕ್ರಿಯಿಸಬೇಕೆಂದೇ ನನಗೆ ತೋಚಲಿಲ್ಲ.
‘ಸಾಮಿಯ ಸ್ವಗತ’ ನಾಟಕವನ್ನು ಸಿನೆಮಾ ಮಾಡುವುದೇ?!!






0 Comments