
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.
ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
44
ಹ್ಯಾಮ್ಲೆಟ್ ನಾಟಕಕ್ಕೆ ಸಂಬಂಧ ಪಟ್ಟಂತಹ ಒಂದೆರಡು ಸ್ವಾರಸ್ಯಕರ ಪ್ರಸಂಗಗಳನ್ನು ಈಗ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ಹ್ಯಾಮ್ಲೆಟ್ ನಾಟಕದಲ್ಲಿ ಹ್ಯಾಮ್ಲೆಟ್ ತನ್ನ ತಾಯಿಯನ್ನು ಕೂರಲಗಿನಂತಹ ಮಾತುಗಳಿಂದ ಚುಚ್ಚಿ ಚುಚ್ಚಿ ಅವಳ ಅಕೃತ್ಯಗಳನ್ನೆಲ್ಲಾ ಬಯಲಿಗೆಳೆಯುತ್ತಾ ಅವಳನ್ನು ಜರ್ಜರಿತಳನ್ನಾಗಿಸುವ ಒಂದು ಅದ್ಭುತ ದೃಶ್ಯವಿದೆ.ರಾಮಚಂದ್ರದೇವರ ಅನುವಾದವೂ ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿದ್ದು ಹೃದಯಕ್ಕೆ ನಾಟುವಂತಿದೆ.
ರಂಗದ ಮೇಲೆ ಆ ದೃಶ್ಯವನ್ನು ಅಭಿನಯಿಸುವುದು ನನಗೆ ಎಷ್ಟು ಸವಾಲನ್ನು ಒಡ್ಡುತ್ತಿತ್ತೋ ಅಷ್ಟೇ ತೃಪ್ತಿಯನ್ನೂ ನೀಡುತ್ತಿತ್ತು. ತಾಯಿಯ ಬಗೆಗಿನ ಪ್ರೀತಿ,ಸಿಟ್ಟು,ತಿರಸ್ಕಾರ,ಕರುಣೆ..ಇವೆಲ್ಲವುಗಳ ಜತೆಗೆ ಸೇಡು, ರೊಚ್ಚುಗಳೆಲ್ಲವೂ ಮಿಳಿತವಾಗಿ ಹೊಮ್ಮುವ ಒಂದು ಸಂಮಿಶ್ರ ಭಾವ ಸಂಚಯನದ ಸ್ಥಿತಿಯನ್ನು ಆವಾಹಿಸಿಕೊಂಡು ಹ್ಯಾಮ್ಲೆಟ್ ಆರ್ಭಟಿಸುವ ಆ ದೃಶ್ಯಕ್ಕೆ ಪ್ರೇಕ್ಷಕರೂ ಅನನ್ಯವಾದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಪ್ರಾಸಂಗಿಕವಾಗಿ ನೆನೆಸಿಕೊಳ್ಳುವುದಾದರೆ, ಈ ದೃಶ್ಯ ನಮ್ಮ ಒಬ್ಬ ಶ್ರೇಷ್ಠ ನಿರ್ದೇಶಕ-ನಾಟಕಕಾರ-ನಟರೂ ನನಗೆ ಗುರು ಸಮಾನ ಮಿತ್ರರೂ ಆದ ಟಿ.ಎನ್.ಸೀತಾರಾಂ ಅವರಿಗೂ ಅಚ್ಚುಮೆಚ್ಚಿನ ದೃಶ್ಯ. “ಹ್ಯಾಮ್ಲೆಟ್ ,ನೀನು ನನ್ನ ಹೃದಯವನ್ನು ಎರಡು ಭಾಗಗಳಾಗಿ ಒಡೆದಿದ್ದೀ” ಎಂದು ತಾಯಿ ಗರ್ಟ್ರೂಡ್ ಹಳಹಳಿಸಿದಾಗ ಹ್ಯಾಮ್ಲೆಟ್, “ಶಪಿತ ಭಾಗವನ್ನು ಕಿತ್ತೆಸೆ..ಪರಿಶುದ್ಧ ಭಾಗದ ಜತೆಗೆ ಚೆನ್ನಾಗಿ ಬಾಳು” ಎಂದು ಹೇಳುವ ಸಂಭಾಷಣೆಯ ಭಾಗಗಳು ಅವರಿಗೆ ಬಾಯಿಪಾಠವೇ ಆಗಿಹೋಗಿದ್ದು ಈಗಲೂ ಭೇಟಿಯಾದಾಗಲೆಲ್ಲಾ ನೆನಪಿಸಿಕೊಳ್ಳುತ್ತಾರೆ! ಇರಲಿ… ಈ ದೃಶ್ಯದಲ್ಲಿ ಹ್ಯಾಮ್ಲೆಟ್ ತನ್ನ ತಾಯಿಯ ತೇಜೋವಧೆ ಮಾಡುತ್ತಿರುವ ಸಮಯದಲ್ಲಿ ಪೊಲೋನಿಯಸ್ ಮರೆಯಲ್ಲಿ ನಿಂತು ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿರುತ್ತಾನೆ. ಮರೆ ಎಂದರೆ ವಾಸ್ತವವಾದ ಪರದೆಯ ಮರೆಯಲ್ಲ…ತನ್ನ ಒಂದು ಕೈಯನ್ನು ಕಣ್ಣುಗಳ ಮುಂದೆಯೂ ಇನ್ನೊಂದು ಕೈಯನ್ನು ಎದೆಯ ಭಾಗದ ಮುಂದೆಯೂ ಅಡ್ಡಲಾಗಿ ಹಿಡಿದು ‘ಮರೆ’ಯನ್ನು ಸೂಚ್ಯವಾಗಿ ತೋರುವ ರೀತಿಯಲ್ಲಿ ಅಶೋಕ ಆ ದೃಶ್ಯವನ್ನು ಸಂಯೋಜಿಸಿದ್ದ. ಮಾತುಕತೆಯ ನಡುವೆ ಹ್ಯಾಮ್ಲೆಟ್ ಗೆ ಮರೆಯಲ್ಲಿ ಏನೋ ಸದ್ದು ಕೇಳಿಸಿದಂತಾಗಿ, “ಏನದು? ಇಲಿ ಏನು?” ಎಂದು ತಾಯಿಯನ್ನು ಕೇಳುತ್ತಾ ಒರೆಯಿಂದ ಕಠಾರಿಯನ್ನು ತೆಗೆದು ಸದ್ದುಬಂದ ಜಾಗಕ್ಕೆ ಹೋಗಿ ತಿವಿದೇ ಬಿಡುತ್ತಾನೆ..ಪೊಲೋನಿಯಸ್ ನ ಹೊಟ್ಟೆಗೇ ಆ ಕಠಾರಿ ಬಲವಾಗಿ ನಾಟಿ ‘ಹಾ’ಎಂಬ ಚೀತ್ಕಾರದೊಂದಿಗೆ ಆತ ನೆಲಕ್ಕೆ ಕುಸಿದು ಗತಪ್ರಾಣನಾಗುತ್ತಾನೆ. ಪೊಲೋನಿಯಸ್ ಪಾತ್ರ ನಿರ್ವಹಿಸುತ್ತಿದ್ದವರು ಹಿರಿಯ ನಟ ರಾಮಚಂದ್ರಾಚಾರ್.
ಅವರಿಗೆ ಒಂದೇ ಭಯ—ಕಠಾರಿಯಿಂದ ಇರಿಯುವಾಗ ಏನಾದರೂ ಹೆಚ್ಚು ಕಡಿಮೆ ಆಗಿಬಿಟ್ಟರೆ!ಅದು ನಿಜವಾದ ಕಬ್ಬಿಣದ ಕಠಾರಿ ಬೇರೆ! ಆಟಿಕೆಯದ್ದಲ್ಲ! “ಹುಷಾರು ಕಣಪ್ಪಾ ಪ್ರಭೂ…ತುಂಬಾ emotional ಆಗಿ,ತುಂಬಾ involve ಆಗಿ ಅಭಿನಯಿಸ್ತಿರ್ತೀಯಾ…ತುಂಬಾ ಜೋರಾಗಿ ಇರೀಬೇಡ..ಕೈ ಮೇಲೆ ಕೊಂಚ ಹತೋಟಿ ಇರಲಿ…ಸಂಸಾರಸ್ಥ, ಮಕ್ಕಳೊಂದಿಗ ಕಣಪ್ಪಾ ನಾನು..ತುಂಬಾ ಜೋಪಾನ” ಎಂದು ಪ್ರತಿ ಪ್ರದರ್ಶನದ ಮೊದಲೂ ಅಲವತ್ತುಕೊಳ್ಳುತ್ತಿದ್ದರು. “ಚಿಂತೆ ಮಾಡಬೇಡಿ ಆಚಾರ್ರೇ..ಎಷ್ಟು ಜೋರಾಗಿ ತಿವೀಬೇಕು,ಕಠಾರಿಯನ್ನು ಎಲ್ಲಿ ನಿಲ್ಲಿಸಬೇಕು ಅನ್ನೋದನ್ನೆಲ್ಲಾ ನೂರಾರು ಸಲ ಅಭ್ಯಾಸ ಮಾಡಿಕೊಂಡಿದೀನಿ..ಕಠಾರಿ ನಿಮ್ಮ ಹೊಟ್ಟೆಯನ್ನು ಸೋಕಲೂ ಬಾರದು-ಹಾಗೆ ತಿವೀತೀನಿ” ಎಂದು ನಾನೂ ಪ್ರತಿಸಲವೂ ಅವರಿಗೆ ಧೈರ್ಯ ತುಂಬುತ್ತಿದ್ದೆ.
ಒಂದು ದಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹ್ಯಾಮ್ಲೆಟ್ ಪ್ರದರ್ಶನ ಇತ್ತು.ಅಂದೇಕೋ ಅವರು ಹೆಚ್ಚು ಉದ್ವಿಗ್ನರಾಗಿದ್ದಂತೆ..ಹೆಚ್ಚು ಭಯಗೊಂಡವರಂತೆ ನನಗೆ ಭಾಸವಾಗುತ್ತಿತ್ತು. ಪ್ರದರ್ಶನಕ್ಕೆ ಮುನ್ನ ಮಾತ್ರವಲ್ಲದೆ ಮಧ್ಯಂತರದಲ್ಲಿಯೂ ಒಮ್ಮೆ ನನಗೆ ಕೈಮುಗಿದು ಕರುಣಾಜನಕವಾಗಿ ನೋಡುತ್ತಾ ‘ಹುಷಾರು ಕಣಪ್ಪಾ’ ಎಂದು ಎಚ್ಚರಿಸಿದ್ದರು. ಅಂದಂತೂ ಪ್ರೇಕ್ಷಕರು ಕಿಕ್ಕಿರಿದು ನೆರೆದಿದ್ದು ಚಪ್ಪಾಳೆ—ಶಿಳ್ಳೆಗಳಿಂದ ನಮ್ಮನ್ನು ಪ್ರೋತ್ಸಾಹಿಸುತ್ತಾ ಅದ್ಭುತವಾಗಿ ಪ್ರತಿಕ್ರಿಯಿಸುತ್ತಿದ್ದರು. ಮಧ್ಯಂತರದ ನಂತರ ತಾಯಿಯನ್ನು ಮಾತುಗಳಿಂದ ಇರಿಯುವ ದೃಶ್ಯ ಆರಂಭವಾಯಿತು. ರಾಮಚಂದ್ರಾಚಾರ್ ಅವರು ಕೈಗಳನ್ನು ಅಡ್ಡವಾಗಿ ಹಿಡಿದು ಮರೆಯಲ್ಲಿರುವವರಂತೆ ನಿಂತಿದ್ದಾರೆ; “ನಿನ್ನ ವ್ಯಕ್ತಿತ್ವದ ಒಳಪದರಗಳನ್ನು ನಾನು ಹಿಡಿಯುವ ಕನ್ನಡಿಯಲ್ಲಿ ಕಾಣುವವರೆಗೆ ನೀನೆಲ್ಲಿಗೂ ಹೋಗಲಾರೆ” ಎಂಬ ಸಂಭಾಷಣೆಯನ್ನು ನಾನು ಹೇಳುತ್ತಿದ್ದಂತೆ ಮರೆಯಲ್ಲಿ ಸದ್ದು ಕೇಳಿಸಿ,ನಾನು—”ಏನದು? ಇಲಿ ಏನು?”ಎನ್ನುತ್ತಾ ಅತ್ತ ಹೋಗಿ ಎಂದಿನಂತೆ ಕಠಾರಿಯನ್ನು ಹೊರತೆಗೆದು ಇರಿದೆ.ಎಂದಿನಂತೆ “ಹಾ” ಎಂಬ ಚೀತ್ಕಾರದೊಂದಿಗೆ ಆಚಾರ್ ಅವರು ಧೊಪ್ಪೆಂದು ನೆಲಕ್ಕುರುಳಿದರು.ಆದರೆ ಅಂದೇಕೋ ಅವರ ಚೀತ್ಕಾರ ಮಾತ್ರ ಎಂದಿನಂತಿರದೆ ಕೊಂಚ ಹೆಚ್ಚೇ ಹೃದಯ ವಿದ್ರಾವಕವಾಗಿದ್ದಂತೆ ನನಗೆ ಭಾಸವಾಗಿ ತಳಮಳವಾಗತೊಡಗಿತು. ಅಯ್ಯೋ ದೇವರೇ! ಅವರು ಹೆದರಿದ್ದಂತೆ ನಿಜವಾಗಿಯೂ ನಾನು ಅವರಿಗೆ ತಿವಿದೇ ಬಿಟ್ಟಿದ್ದೇನೆಯೇ? ಅಂದರೆ ಅನಾಹುತ ಆಗಿಯೇ ಬಿಟ್ಟಿದೆಯೇ? ಹಾಗಾಗಿ ಬಿಟ್ಟಿದ್ದರೆ ಗತಿ ಏನು? ಈ ಭಯ—ಗೊಂದಲ—ತಳಮಳಗಳ ನಡುವೆಯೇ ಹೇಗೋ ದೃಶ್ಯ ಮುಗಿಸಿದೆ.

ಅವರ ಶರೀರವನ್ನು ನಾನೇ ರಂಗದಿಂದ ಆಚೆಗೆ ಎಳೆದುಕೊಂಡು ಹೋಗಬೇಕಾಗಿದ್ದುದರಿಂದ ಅವರು ಎಚ್ಚರವಾಗಿದ್ದಾರೆ; ಉಸಿರಾಡುತ್ತಿದ್ದಾರೆ; ಒಂದು ವೇಳೆ ಪೆಟ್ಟು ಬಿದ್ದಿದ್ದರೂ ಅದು ಮಾರಣಾಂತಿಕವಾದುದಲ್ಲ ಎಂಬುದೇನೋ ನನಗೆ ಖಾತ್ರಿಯಾಗಿ ಎಷ್ಟೋ ಸಮಾಧಾನವಾಗಿತ್ತು.ಆದರೂ ಪ್ರದರ್ಶನದ ಉಳಿದ ಮುಂದಿನ ಭಾಗದುದ್ದಕ್ಕೂ ಒಂದು ನಮೂನೆಯ ಅಳುಕು..ತಳಮಳ ಬಾಧಿಸುತ್ತಿತ್ತು. ಪ್ರದರ್ಶನ ಮುಗಿದ ಮೇಲೆ ಗ್ರೀನ್ ರೂಂಗೆ ಹೋಗಿ ನೋಡುತ್ತೇನೆ: ರಾಮಚಂದ್ರಾಚಾರ್ ಅವರ ಕೈಗೆ ಬ್ಯಾಂಡೇಜ್ ಕಟ್ಟಿ ಕೂರಿಸಿದ್ದಾರೆ! ನನ್ನನ್ನು ನೋಡಿದವರೇ ಒಂದೇ ಸಮ ಬಡಬಡಿಸತೊಡಗಿದರು ಆಚಾರ್ರು: “ಏನು ಮಾರಾಯ ನೀನು! ಕೊನೆಗೂ ತಿವಿದೇ ಬಿಟ್ಟೆಯಲ್ಲಾ! ಅಷ್ಟು ಬೇಡಿಕೊಂಡಿದ್ದರೂ ನಿನಗೆ ಲೆಕ್ಕವೇ ಇಲ್ಲದ ಹಾಗಾಗೋಯ್ತು…”
ನನಗೆ ಮೊದಲು ಕೊಂಚ ತಬ್ಬಿಬ್ಬಾದರೂ, ನಾನು ತಪ್ಪು ಮಾಡಿಬಿಟ್ಟಿದ್ದೇನೆಂಬ ಭಾವ ಕಾಡತೊಡಗಿದರೂ ‘ಹಾಗಾಗಲು ಸಾಧ್ಯವಿಲ್ಲ..ಅಷ್ಟು ದಿನದ ಅಭ್ಯಾಸದ ಗುರಿ ವ್ಯತ್ಯಾಸವಾಗುವ ಸಾಧ್ಯತೆಯೇ ಇಲ್ಲ’ ಎಂದು ನನ್ನ ಒಳಮನಸ್ಸು ಚೀರಿ ಹೇಳುತ್ತಿತ್ತು. ನಿಧಾನವಾಗಿ ಯೋಚಿಸುತ್ತಿದ್ದಂತೆ ಪ್ರಸಂಗ ಏನಾಗಿರಬಹುದೆಂದು ನಿಚ್ಚಳವಾಗಿ ಕಾಣತೊಡಗಿತು! ಆಚಾರ್ರ ಮುಂಗೈಗೆ ಕಠಾರಿ ಚುಚ್ಚಿ ಪೆಟ್ಟಾಗಿರುವುದೇ ಹೊರತು ಹೊಟ್ಟೆಗಲ್ಲ! ಅಂದು ನಾನು ತಿವಿಯುವ ಸಮಯಕ್ಕೆ ಸರಿಯಾಗಿ ಆಚಾರ್ರು ಮುಂಜಾಗ್ರತೆಯ ಕ್ರಮವಾಗಿ ತಮ್ಮ ಕೈಯನ್ನು ಹೊಟ್ಟೆಯ ಭಾಗಕ್ಕೆ ಇಳಿಸಿಬಿಟ್ಟಿದ್ದಾರೆ.. ಅಕಸ್ಮಾತ್ ಪೆಟ್ಟು ಬೀಳುವುದೇ ಆದರೆ ಕೈಗೆ ಬೀಳಲಿ,ಹೊಟ್ಟೆಗೆ ಬೇಡ ಎಂದು ಹೊಟ್ಟೆಯಿಂದ 10—12 ಅಂಗುಲ ಮುಂದೆ ಕೈ ಅಡ್ಡ ಇಟ್ಟುಬಿಟ್ಟಿದ್ದಾರೆ! ನಾನು ಅಭ್ಯಸಿಸಿದ ರೀತಿಯಲ್ಲೇ,ಅಷ್ಟೇ ರಭಸದಿಂದ, ಕಠಾರಿ ಹೊಟ್ಟೆ ಮುಟ್ಟುವ ಮೊದಲೇ ನಿಲ್ಲುವಂತೆಯೇ ಇರಿದಿದ್ದರೂ ಅಡ್ಡವಾಗಿ ಬಂದ ಕೈಗೆ ಏಟು ಬಿದ್ದಿದೆ! ಬೇಸರದಿಂದಲೇ ಆಚಾರ್ ಅವರಿಗೆ ನಾನು ಹೇಳಿದೆ: “ಪೆಟ್ಟಾಗದಿರಲು ನೀವು ಯಾವ ಮುಂಜಾಗ್ರತೆಯನ್ನೂ ತೆಗೆದುಕೊಳ್ಳುವ ಅಗತ್ಯವಿರಲಿಲ್ಲ ಸ್ವಾಮೀ..ನನ್ನ ಬಗ್ಗೆ ಒಂದಿಷ್ಟು ನಂಬಿಕೆ—ವಿಶ್ವಾಸ ಇಟ್ಟುಕೊಂಡಿದ್ದರೆ ಸಾಕಿತ್ತು..ನಿಮ್ಮ ಒಂದು ಕೂದಲೂ ಕೊಂಕುತ್ತಿರಲಿಲ್ಲ..ನಿಮಗೆ ಪೆಟ್ಟು ಮಾಡಿರುವುದು ನಾನಲ್ಲ..ನಿಮ್ಮ ಅಪನಂಬಿಕೆ”.
ಆಚಾರ್ ಅವರಿಗೂ ಅವರ ತಪ್ಪಿನ ಅರಿವಾಯಿತೆಂದು ತೋರುತ್ತದೆ…ಏನೂ ಮಾತಾಡಲಿಲ್ಲ.ಅದೃಷ್ಟವಶಾತ್ ಕೈಗೆ ಆದ ಗಾಯವೂ ತುಂಬಾ ದೊಡ್ಡದಿರಲಿಲ್ಲ. ಒಂದಂತೂ ನಿಜ: ಮುಂದೆಂದೂ ಪ್ರದರ್ಶನಕ್ಕೆ ಮೊದಲು ಆಚಾರ್ ಅವರು ಹುಷಾರಾಗಿರುವಂತೆ ನನ್ನನ್ನು ಅಂಗಲಾಚಲಿಲ್ಲ!
ಈ ಒಂದು ಘಟನೆ, ‘ನಂಬಿಕೆ—ವಿಶ್ವಾಸಗಳಷ್ಟೇ ರಂಗಭೂಮಿಯ ಭದ್ರ ಬುನಾದಿ’ ಎಂಬೊಂದು ಪರಮ ಸತ್ಯವನ್ನು ಪ್ರಾತ್ಯಕ್ಷಿಕವಾಗಿ ನನಗೆ ತೋರಿಸಿಕೊಟ್ಟಿತೆಂದರೆ ಅತಿಶಯೋಕ್ತಿಯಲ್ಲ.ಹೇಳಿ ಕೇಳಿ ನಾಟಕವೆಂದರೆ ಪ್ರೇಕ್ಷಕರ ಕಣ್ಣೆದುರಿಗೆ ತೆರೆದುಕೊಳ್ಳುವ ಒಂದು ಜೀವಂತ ಪ್ರಕ್ರಿಯೆ. ಸಾಕಷ್ಟು ದಿನಗಳ ಅಭ್ಯಾಸದ ನಂತರ ನಿರ್ದೇಶಕ ತುಂಬು ವಿಶ್ವಾಸದಿಂದ ತನ್ನ ಕಲಾವಿದರನ್ನು ರಂಗದ ಮೇಲೆ ಕಳಿಸಿಕೊಡುತ್ತಾನೆ; ನಟರಾದರೋ ಅದೇ ವಿಶ್ವಾಸ—ನಂಬಿಕೆಗಳನ್ನು ತಮ್ಮ ಸಹ ನಟರ ಹಾಗೂ ತಂತ್ರಜ್ಞರ ಮೇಲಿರಿಸಿಕೊಂಡು ರಂಗಕ್ರಿಯೆಯಲ್ಲಿ ತೊಡಗುತ್ತಾರೆ.
ಎರಡು ಮೂರು ತಾಸುಗಳ ಈ ಸರಪಳಿಯ ಯಾವೊಂದು ಕೊಂಡಿಯೂ ಸಡಿಲಾಗದಂತೆ,ತುಂಡಾಗದಂತೆ ಕಾಪಿಡುವುದೂ ಸಹಾ ಇದೇ ವಿಶ್ವಾಸ..ಇದೇ ಅವಲಂಬನೆ..ಇದೇ ಅಚಲ ನಂಬಿಕೆ! ಯೋಚಿಸುತ್ತಾ ಹೋದಂತೆ ರಂಗಭೂಮಿಯಲ್ಲಿನ ತೊಡಗುವಿಕೆ ಒಂದು ನೆಲೆಯಲ್ಲಿ ಬದುಕಿನ ಪಾಠಗಳನ್ನು, ಸಹಾನುಭೂತಿಯ—ಹೊಂದಾಣಿಕೆಯ—ಸಮನ್ವಯದ ಅಮೂಲ್ಯ ಪಾಠಗಳನ್ನು ಕಲಿಸುತ್ತಾ ಹೋಗುವ ಸೋಜಿಗದ ಅರಿವಾಗಿ, ‘ಇಂಥದೊಂದು ಅಪೂರ್ವ ರಂಗದಲ್ಲಿ ತೊಡಗಿಕೊಂಡಿದ್ದೇನಲ್ಲಾ’ ಎಂಬ ಕೃತಕೃತ್ಯತೆಯ,ಧನ್ಯತೆಯ ಭಾವವೂ ಮನಸ್ಸಿನಲ್ಲಿ ತುಂಬಿ ಬಂದು ಹೆಮ್ಮೆಯೆನಿಸಿತು.
ಆ ದಿನಗಳಲ್ಲಿ ನಾನು ಸ್ವಲ್ಪ ಹೆಚ್ಚು ಅನ್ನುವಂತೆಯೇ ಸಿಗರೇಟ್ ಸೇದುತ್ತಿದ್ದೆ. ಆ ಕಾರಣವಾಗಿಯೇ ಅನೇಕ ಬಾರಿ ಗಂಟಲ ಸಮಸ್ಯೆಯನ್ನು ಎದುರಿಸಬೇಕಾಗಿ ಬಂದದ್ದೂ ಉಂಟು. ಒಮ್ಮೆ ಹೀಗಾಯಿತು:
ಮಂಗಳೂರು ಹಾಗೂ ಉಡುಪಿಯಲ್ಲಿ ಹ್ಯಾಮ್ಲೆಟ್ ನಾಟಕದ ಪ್ರದರ್ಶನಗಳು ಏರ್ಪಾಡಾಗಿದ್ದವು. ಮೊದಲ ದಿನ ಮಂಗಳೂರಿನಲ್ಲಿ ಪ್ರದರ್ಶನ. ಎಂದಿನ ಹಾಗೆ ಪ್ರೇಕ್ಷಾಗೃಹ ತುಂಬಿಹೋಗಿತ್ತು. ಗಂಭೀರ ನಾಟಕವನ್ನು ಮಂಗಳೂರಿನ ಗಂಭೀರ ಪ್ರೇಕ್ಷಕರು ತನ್ಮಯತೆಯಿಂದ ವೀಕ್ಷಿಸುತ್ತಿದ್ದರು.ಮೊದಲಿನಿಂದ ಕೊನೆಯವರೆಗೆ ಸೊಗಸಾಗಿ ಮೂಡಿಬಂದ ಪ್ರದರ್ಶನದ ಕಟ್ಟಕಡೆಯ ದೃಶ್ಯದಲ್ಲಿ ಒಂದು ಎಡವಟ್ಟಾಗಿ ಹೋಯಿತು. ಇದ್ದಕ್ಕಿದ್ದ ಹಾಗೆ ನನ್ನ ಗಂಟಲು ಹೂತುಹೋಗಿ ಸ್ವರವೇ ಹೊರಡದಂತಾಗಿ ಹೋಯಿತು! ನಾನು ಎಷ್ಟೇ ಗಟ್ಟಿಯಾಗಿ ಮಾತಾಡಲು ಪ್ರಯತ್ನಿಸುತ್ತಿದ್ದರೂ ಹೊರ ಹೊರಡುತ್ತಿದ್ದುದು ಒಂದು ಜೋರು ಪಿಸುದನಿ ಅಷ್ಟೇ!
ನನಗೆ ಜಂಘಾಬಲವೇ ಉಡುಗಿಹೋದಂತಾಯಿತು. ಪುಣ್ಯವಶಾತ್ ಅದು ನಾಟಕದ ಕಟ್ಟಕಡೆಯ ದೃಶ್ಯವಾದ್ದರಿಂದ ಹೇಗೋ ಕಷ್ಟಪಟ್ಟು ಆ ಪಿಸುದನಿಯಲ್ಲೇ ಸಂಭಾಷಣೆ ಒಪ್ಪಿಸಿ ನಾಟಕ ಮುಗಿಸಿದೆ. ಅಂದೇನೋ ಸರಿ..ಮರುದಿನ ಉಡುಪಿ ಪ್ರದರ್ಶನದ ಕಥೆ ಏನು?! ಈ ಧ್ವನಿ ಇಟ್ಟುಕೊಂಡು ಮೂರು ತಾಸಿನ , ಮಾತೇ ಬಂಡವಾಳವಾಗಿರುವ ನಾಟಕದ ಮುಖ್ಯ ಭೂಮಿಕೆಯನ್ನು ಸಮರ್ಥವಾಗಿ ನಿರ್ವಹಿಸುವುದಾದರೂ ಹೇಗೆ? ತಲೆಯಲ್ಲಿ ಯೋಚನೆ-ಚಿಂತೆಗಳ ಹುತ್ತ ಕಟ್ಟಿಕೊಂಡು ನಿದ್ರೆ ಕಣ್ಣುರೆಪ್ಪೆಯ ಸನಿಹಕ್ಕೂ ಸುಳಿಯದಾಯಿತು. ಬೆಳಗಿನ ಜಾವದ ಮಂಪರು ನಿದ್ರೆಯ ನಂತರ ಎದ್ದು ನೋಡಿದರೆ ಗಂಟಲು ಅದೇ ಹೂತ ಸ್ಥಿತಿಯಲ್ಲೇ ಇದೆ! ಅಂದು ರಾತ್ರಿ ಎಂಟು ಗಂಟೆಗೆ ಪ್ರದರ್ಶನ ನಿಗದಿಯಾಗಿತ್ತು. ಆ ವೇಳೆಗೂ ಗಂಟಲು ಸರಿ ಹೋಗದಿದ್ದರೆ ಏನು ಮಾಡುವುದು? ಅದಾವುದೋ ಸಹಾಯಾರ್ಥ ಪ್ರದರ್ಶನ ಬೇರೆ ಆಗಿದ್ದು ಹಣ ಕೊಟ್ಟು ನಾಟಕ ನೋಡಲು ಬರುವ ಪ್ರೇಕ್ಷಕರಿಗೆ ಏನು ಉತ್ತರ ಕೊಡುವುದು? ಅನಿವಾರ್ಯ ಕಾರಣಕ್ಕೆ ನಾಟಕ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕ್ಷಮೆ ಕೇಳಬಿಡಬಹುದಾದರೂ ಆನಂತರದ ಹತ್ತಾರು ಸಮಸ್ಯೆಗಳನ್ನು ನಿವಾರಿಸುವುದಾದರೂ ಹೇಗೆ?…ಯಾವ ಪ್ರಶ್ನೆಗೂ ಉತ್ತರ ಸಿಗದೆ ತಲೆಯ ಮೇಲೆ ಕೈ ಹೊತ್ತು ಕುಳಿತುಬಿಟ್ಟೆ.
ಬೆಳಿಗ್ಗೆ ಸುಮಾರು ಹನ್ನೊಂದರ ಸುಮಾರಿಗೆ ಮಂಗಳೂರಿನಿಂದ S K ಶ್ರೀಧರ ಬಂದ. ನನ್ನ ಗಂಟಲ ಸ್ಥಿತಿ ಹಾಗೇ ಇರುವುದನ್ನು ನೋಡಿ ಅವನಿಗೂ ಬೇಸರವಾಯಿತು. ಯಾರಾದರೂ ಒಳ್ಳೆಯ ಡಾಕ್ಟರ್ ರ ಸಲಹೆ ಪಡೆಯೋಣವೇ ಎಂಬ ಆಲೋಚನೆಯೂ ಬಂತು. ಆದರೆ ಏನೇ ಔಷಧಿ ತೆಗೆದುಕೊಂಡರೂ ಸಂಜೆಯ ವೇಳೆಗೆ ಗಂಟಲು ಸರಿ ಹೋಗುವುದು ಅನುಮಾನವಾಗಿತ್ತು.
ಏನೋ ಯೋಚಿಸುತ್ತಾ ಕುಳಿತಿದ್ದ ಎಸ್ ಕೆ ತಟಕ್ಕನೆ ಮೇಲೆದ್ದು ‘ಬಾ ನನ್ನ ಜತೆ’ ಎಂದ. ಮಾತಾಡದೆ ಅವನೊಟ್ಟಿಗೆ ಹೊರಟೆ. ಅವನು ನನ್ನನ್ನು ಕರೆದುಕೊಂಡು ಹೋದದ್ದು ಒಂದು ಬಾರ್ ಎಂಡ್ ರೆಸ್ಟೂರೆಂಟ್ ಗೆ. “ಈಗ ನಿನಗೊಂದು ಔಷಧಿ ಮಾಡಿಕೊಡ್ತೀನಿ…ಕಣ್ಣು ಮುಚ್ಚಿಕೊಂಡು ಒಂದೇ ಗುಟುಕಿಗೆ ಕುಡಿದುಬಿಡು..ಆಮೇಲೆ ಹೋಗಿ ಒಂದು ಮೂರು ತಾಸು ಮಲಗಿಬಿಡು..ರಾತ್ರಿ show ವೇಳೆಗೆ ಗಂಟಲು ಬಿಟ್ಟಿರುತ್ತೆ” ಎಂದ ಎಸ್ ಕೆ.
ನನಗೆ ಅವನ ಮಾತು ಕೇಳಿ ಷಾಕ್ ಹೊಡೆದಂತಾಯಿತು! ನಾಟಕದ ಪ್ರದರ್ಶನಕ್ಕೆ ಮುನ್ನ ಗುಂಡು ಹಾಕುವುದೇ! ಅದು ಈ ಜನ್ಮದಲ್ಲಿ ಸಿಧ್ಯವಿಲ್ಲ ಎಂದು ಖಡಾಖಂಡಿತವಾಗಿ ನಿರಾಕರಿಸಿಬಿಟ್ಟೆ. “ನಿನಗೆ ಗುಂಡು ಹಾಕಲು ಯಾರು ಹೇಳುತ್ತಿದ್ದಾರೋ ಮಾರಾಯ? ನಾನು ಕೊಡುವುದು ಔಷಧ ಅಷ್ಟೇ. ನಿನ್ನ ಗಂಟಲು ಸರಿಯಾಗುವುದು ಬೇಡವಾ? ಮೇಲಾಗಿ ಈಗಿನ್ನೂ ಹನ್ನೆರಡು ಗಂಟೆ. Show ಪ್ರಾರಂಭವಾಗಲು ಇನ್ನೂ 8 ತಾಸು ಉಂಟು…ಸುಮ್ಮನೆ ಹೇಳಿದಷ್ಟು ಕೇಳು..ಗಲಾಟೆ ಮಾಡಬೇಡ” ಎಂದವನೇ ಒಂದು ಪೆಗ್ ರಮ್ ತರಿಸಿಕೊಂಡ.

ಒಂದು ಕೋಳಿಮೊಟ್ಟೆಯನ್ನು ತರಿಸಿ ಅದನ್ನು ಒಡೆದು ಒಳಗಿನ ದ್ರವವನ್ನು ರಮ್ ಗೆ ಸೇರಿಸಿದ. ಅದಕ್ಕೊಂದಿಷ್ಟು ಬಿಸಿ ನೀರು..ಮೆಣಸುಪುಡಿ.. ಇನ್ನೂ ಏನೇನೋ ಸೇರಿಸಿ ಚೆನ್ನಾಗಿ ಕೂಡಿಸಿ ನನ್ನ ಕೈಗೆ ಕೊಟ್ಟು,”ಒಂದೇ ಗುಟುಕಿಗೆ ಕುಡಿದು ಬಿಡು” ಎಂದ ಎಸ್ ಕೆ. ‘ಇದಾವ ರಣವೈದ್ಯವಯ್ಯಾ ಎಂದು ಗೊಣಗಿಕೊಳ್ಳುತ್ತಲೇ ಆ ಕಚ್ಚು ವಿಷದಂತಹ ವಿಚಿತ್ರ ಔಷಧವನ್ನು ಕಣ್ಣುಮುಚ್ಚಿಕೊಂಡು ಒಂದೇ ಗುಕ್ಕಿಗೆ ಕುಡಿದುಬಿಟ್ಟೆ! ವ್ರತಭ್ರಷ್ಠನಾದ ನೋವು ಒಂದೆಡೆ ಕಾಡುತ್ತಿದ್ದರೂ ಅಕಸ್ಮಾತ್ ಗಂಟಲು ಸರಿಯೇ ಹೋಗಿಬಿಟ್ಟರೆ ಅದೂ ಸಾರ್ಥಕ ವ್ರತಭಂಗವೇ ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡು ಕೊಂಚ ಊಟದ ಶಾಸ್ತ್ರವನ್ನೂ ಮುಗಿಸಿಕೊಂಡು ನಮ್ಮ ವಿಶ್ರಾಂತಿ ಗೃಹಕ್ಕೆ ಮರಳಿಬಂದು ಮಲಗಿಬಿಟ್ಟೆ.
ಸುಮಾರು ಆರು ಗಂಟೆಯ ಸುಮಾರಿಗೆ ಎಚ್ಚರವಾಯಿತು. ಕಣ್ಣುಜ್ಜಿಕೊಂಡು ಎದ್ದು ಕುಳಿತವನಿಗೆ ಅಲ್ಲೇ ಠಳಾಯಿಸುತ್ತಿದ್ದ ಎಸ್ ಕೆ ಕಾಣಿಸಿದ. ನನಗೆ ಎಚ್ಚರವಾದದ್ದು ಕಂಡೊಡನೆ ನನ್ನ ಬಳಿ ಓಡಿ ಬಂದ. ಅಳುಕುತ್ತಳುಕುತ್ತಲೇ ಮಾತಾಡಲು ಬಾಯಿ ತೆರೆದೆ. ಪರಮಾಶ್ಚರ್ಯ! ಹಿಂದಿನ ದಿನದಿಂದ ಹೂತುಹೋಗಿದ್ದ ಗಂಟಲು ಸರಿಹೋಗಿ ಸ್ವರ ಹೊರಬರುತ್ತಿದೆ! ಎಸ್ ಕೆ ನನಗೆ ಒಬ್ಬ ಪವಾಡ ಪುರುಷನಂತೆ ಗೋಚರಿಸಿಬಿಟ್ಟ. ಗಂಟಲು ಹಿಂದಿನ ದಿನದಿಂದ ಹೂತುಹೋಗಿತ್ತೆಂಬ ಸಣ್ಣ ಸೂಚನೆಯೂ ಸಿಗದಷ್ಟರ ಮಟ್ಟಿಗೆ ರಿಪೇರಿ ಆಗಿಹೋಗಿತ್ತು! ಅಷ್ಟೇ ಅಲ್ಲ, ಸಾಕಷ್ಟು ಸಮಯ ಕಳೆದಿದ್ದರಿಂದ ಗುಂಡಿನ ಇದ್ದ ಚೂರುಪಾರು ಪ್ರಭಾವವೂ ಕಡಿಮೆಯಾಗಿ ಹೋಗಿತ್ತು. ಎಸ್ ಕೆ ಗೆ ತುಂಬು ಹೃದಯದ ಧನ್ಯವಾದಗಳನ್ನರ್ಪಿಸಿ ನಿರಾಳ ಮನಸ್ಸಿನಿಂದ ಪ್ರದರ್ಶನಕ್ಕೆ ಸಿದ್ಧನಾಗತೊಡಗಿದೆ. ಅಂದು ಉಡುಪಿಯಲ್ಲಿ ಆದ ಹ್ಯಾಮ್ಲೆಟ್ ಷೋ ನನಗೇ ತೃಪ್ತಿ-ಸಮಾಧಾನ ತಂದುಕೊಟ್ಟ ಪ್ರದರ್ಶನ.
ಬೆಂಗಳೂರಿಗೆ ಮರಳಿ ಬಂದಮೇಲೆ ನಮ್ಮ ಭಾವನವರ ತಮ್ಮನಾದ ಡಾ॥ಬಿ.ಆರ್.ರಾಮಕೃಷ್ಣನನ್ನು ಕಂಡು ನನ್ನ ಗಂಟಲ ಸಮಸ್ಯೆಯನ್ನು ವಿವರಿಸಿ ಉಡುಪಿಯ ಪ್ರಸಂಗವನ್ನೂ ಹೇಳಿದೆ. “ಸುಮಾರು ದಿನಗಳಿಂದ ಧೂಮಪಾನ ಮಾಡಿಮಾಡಿ ಗಂಟಲನ್ನು ಸಾಕಷ್ಟು ಗೋಳು ಹುಯ್ದುಕೊಂಡಿದ್ದೀಯಾ. ಈಗ ಅದು ಮುಷ್ಕರ ಹೂಡಿ ಸೇಡು ತೀರಿಸಿಕೊಳ್ಳುತ್ತಿದೆ ಅಷ್ಟೇ..ಇನ್ನು ಕೊಂಚ ಹುಷಾರಾಗಿರು” ಎಂದು ಕಿವಿ ಮಾತು ಹೇಳಿದ ನಮ್ಮ ಧನ್ವಂತರಿ ರಾಮಕೃಷ್ಣ ಗಂಟಲ ಬಲವರ್ಧನೆಗೆ ಒಂದಷ್ಟು ಗುಳಿಗೆ ಕೊಟ್ಟು ಕಳಿಸಿದ. ಮನೆಗೆ ಬಂದು ಕುಳಿತು ಯೋಚಿಸತೊಡಗಿದ ನನಗೆ ನಟನ ಜವಾಬ್ದಾರಿಗಳ, ಅವನ ಸಿದ್ಧತೆ-ತ್ಯಾಗ-ಹೊಂದಾಣಿಕೆಗಳ ಅರಿವಾಗತೊಡಗಿತು.
ನೂರಾರು..ಸಹಸ್ರಾರು ಪ್ರೇಕ್ಷಕರ ಎದುರು ಮುಖಾಮುಖಿಯಾಗಿ ಅವರನ್ನು ರಂಜಿಸುವ-ತಿದ್ದುವ ಹೊಣೆ ಹೊತ್ತು ನಿಲ್ಲುವ ನಟ ತನ್ನ ಬದುಕಿನಲ್ಲಿ ಅಳವಡಿಸಿಕೊಳ್ಳಲೇ ಬೇಕಾದ ಕಠೋರ ಶಿಸ್ತು-ಸಂಯಮಗಳ ಅಗತ್ಯತೆಯ ಅರಿವೂ ಮೂಡತೊಡಗಿತು. ಅಂದಿನಿಂದಲೇ ಸಿಗರೇಟಿಗೆ ಎಳ್ಳುನೀರು ಬಿಟ್ಟುಬಿಟ್ಟೆ. ಅಂದರೆ ಆಮೇಲೆ ಸಿಗರೇಟ್ ಸೇದಿಯೇ ಇಲ್ಲವೆಂದಲ್ಲ..ನನ್ನ ಪಾತ್ರಗಳಿಗೆ ಅಗತ್ಯವಾದ ಸಂದರ್ಭಗಳಲ್ಲಿ ಸೇದಿರುವುದುಂಟು. ಆದರೆ ಅದೆಂದೂ ನನ್ನನ್ನು ಮತ್ತೆ ಚಟವಾಗಿ ಬಾಧಿಸಿಲ್ಲ. ಅಂತೆಯೇ ಮತ್ತೆ ನಾಟಕಕ್ಕೆ ಮೊದಲು ಔಷಧಿಯ ಹೆಸರಲ್ಲಾದರೂ ಸರಿ-ಗುಂಡು ಹಾಕುವ ಪ್ರಸಂಗ ತಂದುಕೊಂಡಿಲ್ಲ!
। ಇನ್ನು ಮುಂದಿನ ವಾರಕ್ಕೆ ।






0 Comments